You are currently viewing ಭವ್ಯವಾದ ಜೈವಿಕ ತಾಣ

ಭವ್ಯವಾದ ಜೈವಿಕ ತಾಣ

ಇತ್ತೀಚೆಗಿನ ದಿನಗಳಲ್ಲಿ ಅತ್ಯದ್ಭುತವಾದ ಜೈವಿಕ ಇಂಜಿನಿಯರಿಂಗ್‍  ತಾಣವೊಂದು ಬ್ರೆಜಿಲ್‍ ದೇಶದ ಉಷ್ಣವಲಯದ ಕಾಡುಗಳಲ್ಲಿ ಪತ್ತೆಯಾಗಿದೆ. ಇದರ ವಿವರವಾದ ವೈಜ್ಞಾನಿಕ ಸಮೀಕ್ಷೆಯನ್ನು “ಕರೆಂಟ್‍  ಬಯಾಲಜಿ” ಪತ್ರಿಕೆಯು ಕಳೆದ 2018ರ ನವೆಂಬರ್‍   ತಿಂಗಳಲ್ಲಿ ಪ್ರಕಟಿಸಿತ್ತು.  ಸಾಮಾನ್ಯವಾಗಿ ಮಣ್ಣಿನ ರಚನೆಗಳ ಇಂತಹ ಸ್ಥಾವರಗಳಲ್ಲಿ ಜೈವಿಕ ಪುರಾವೆಗಳಿರಲು ಅಲ್ಲಿ ಯಾವುದೇ ಜೀವಿಗಳ ವಾಸಸ್ಥಾನವಾಗಿರುವುದಿಲ್ಲ. ಆದರೆ ಈ ತಾಣದ ರಚನೆಗಳು ಇನ್ನೂ  ಜೀವಿಗಳನ್ನೂ ಹೊಂದಿವೆ. ಅದೆಷ್ಟು ಅಗಾಧವಾದ ರಚನೆಗಳು ಎಂದರೆ ಅವುಗಳಿರುವ ಒಟ್ಟು ವಿಸ್ತಾರವು ಸುಮಾರು ಗ್ರೇಟ್‍  ಬ್ರಿಟನ್‍  ವಿಸ್ತಾರಕ್ಕೆ ಸಮನಾದುದು. ಪ್ರತಿಯೊಂದೂ ದಿಬ್ಬದಂತೆ ಇದ್ದು ಒಂದೊಂದು ಸುಮಾರು 2.5 ಮೀಟರ್‍ ನಷ್ಟು ಎತ್ತರ ಹಾಗೂ 9 ಮೀಟರ್‍ ನಷ್ಟು ವ್ಯಾಸದ ಶಂಕಾಕೃತಿಯಲ್ಲಿವೆ. ಇಂತಹಾ ಆಕೃತಿಗಳ  ಒಟ್ಟು ಸಂಖ್ಯೆಯೂ  ಸಣ್ಣದಲ್ಲ. ಸುಮಾರು 200 ದಶಲಕ್ಷ ದಿಬ್ಬಗಳು.

          ಸೈಂಟರ್ಮಿಸ್‍  ಡಿರಸ್‍ (Syntermes dirus) ಎನ್ನುವ ವೈಜ್ಞಾನಿಕ ನಾಮಕರಣವನ್ನು ಹೊಂದಿರುವ ಗೆದ್ದಲಿನ ನಿರ್ಮಾಣವು  ಇದಾಗಿದೆ. ಹಾಗಾಗಿ  ಒಂದೇ ಜಾತಿಯ ಜೀವಿಯಿಂದ ಕಟ್ಟಲ್ಪಟ್ಟ ಅತ್ಯದ್ಭುತ ಜೈವಿಕ ತಾಣವೂ ಕೂಡ ಇದಾಗಿದೆ.  ಬ್ರೆಜಿಲ್‍ ದೇಶದ ಈಶಾನ್ಯ ಭಾಗದಲ್ಲಿ ಕಂಡು ಬಂದಿರುವ ಈ ರಚನೆಗಳು ಸುಮಾರು 4000 ವರ್ಷಗಳಷ್ಟು ಹಳೆಯವು. ಅಂದರೆ ಈಜಿಪ್ಟಿನ  ಪಿರಮಿಡ್‍ ಗಳಷ್ಟೇ ಹಳೆಯವು.   

          ಅಂದ ಹಾಗೆ ಸಾಕಷ್ಟು ದೊಡ್ಡ ಗಾತ್ರದಲ್ಲಿರುವುದರಿಂದ  ಇವು  ಗೂಗಲ್ ಅರ್ಥ್‍ ನಲ್ಲಿಯೂ ಸುಲಭವಾಗಿ ಗೋಚರಿಸುತ್ತವೆ. ಈ ದಿಬ್ಬಗಳು ಕೇವಲ ಗೂಡುಗಳಲ್ಲ, ಬದಲಿಗೆ, ಅವುಗಳ ನಡುವೆ ಒಂದಕ್ಕೊಂದು ಅಂತರ್ಸಂಪರ್ಕಿತ ಭೂಗತ ಸುರಂಗಗಳ ಒಂದು ದೊಡ್ಡ  ಜಾಲ! ಅಷ್ಟೇ ಅಲ್ಲದ ಇವುಗಳು ಒಂದೇ ಜಾತಿಯ  ಗೆದ್ದಲಿನ ನಿಧಾನವಾದ  ಮತ್ತು ಸ್ಥಿರವಾದ  ಉತ್ಖನನದ ಪರಿಣಾಮಗಳಿಂದಾಗಿವೆ.  ಸಾವಿರಾರು ವರ್ಷಗಳಲ್ಲಿ  ಗೆದ್ದಲುಗಳು ಚಟುವಟಿಕೆಯಿಂದಿದ್ದು, ಈ, ಸುರಂಗಗಳನ್ನು ಸೃಷ್ಟಿಸಿ ಸುಮಾರು 230,000 ಚದರ ಕಿಲೋ ಮೀಟರ್‍ನಷ್ಟು ಹರಹಿನಲ್ಲಿ ಸುಮಾರು 200 ದಶಲಕ್ಷಗಳಷ್ಟು ಸಂಖ್ಯೆಯ ಕೋನ್-ಆಕಾರದ  ದಿಬ್ಬಗಳನ್ನು ನಿರ್ಮಿಸಿವೆ.

            “ಅರಣ್ಯದ ನೆಲದಲ್ಲಿ ಬಿದ್ದ ಎಲೆಗಳನ್ನು  ಸುರಕ್ಷಿತವಾಗಿ ಮತ್ತು ನೇರವಾಗಿ  ತಮ್ಮ ಗೂಡುಗಳಿಗೆ ಈ ಬೃಹತ್‍ ಸುರಂಗ ಜಾಲದ ಮೂಲಕ ತರಲೆಂದೇ ಸುರಂಗಮಾರ್ಗದ ಮೂಲಕ ಉತ್ಖನನ ಮಾಡಿದ್ದವು” ಎಂದು ಯುನೈಟೆಡ್‍  ಕಿಂಗ್‍ಡಂ ನ  ಪ್ರೊಫೆಸರ್‍ ಸ್ಯಾಲ್ಫರ್ಡ್ ವಿಶ್ವವಿದ್ಯಾನಿಲಯದ ಸ್ಟೀಫನ್ ಮಾರ್ಟಿನ್ ಹೇಳುತ್ತಾರೆ.   ಉತ್ಖನನವಾಗಿರುವ ಒಟ್ಟು ಮಣ್ಣಿನ ಪ್ರಮಾಣವು ಸರಿ ಸುಮಾರು 10  ಘನ ಕಿಲೋಮೀಟರ್‍ ಗಳಿಗಿಂತಲೂ ಹೆಚ್ಚು, ಈ ಪ್ರಮಾಣವು ಈಜಿಪ್ಟ್‍ ನ  ಗಿಜಾದ ಒಟ್ಟು   4,000 ಶ್ರೇಷ್ಠ ಪಿರಮಿಡ್ಗಳಿಗೆ ಸಮನಾಗಿದ್ದು ಕೇವಲ ಒಂದೇ ಒಂದು ಜಾತಿಯ ಕೀಟದಿಂದ ನಿರ್ಮಿಸಲಾದ  ಅತ್ಯಂತ  ದೊಡ್ಡ ರಚನೆಗಳಿಗಾಗಿ ಮಾಡಿದ ಉತ್ಖನನವಾಗಿದೆ.  

          ಬ್ರೆಜಿಲ್  ದೇಶದ  ಈಶಾನ್ಯ   ಭಾಗದ ಅನನ್ಯವಾದ ಎಲೆ ಉದುರಿಸುವ ಹಾಗೂ ಅರೆ ಒಣ ಪ್ರದೇಶದ ಮುಳ್ಳಿನ-ಗಿಡಗಂಟೆಗಳನ್ನುಳ್ಳ ಪೊದೆಗಳ  ಕಾಟಿಂಗಾ ಕಾಡುಗಳಲ್ಲಿ  ಮರೆಯಾಗಿದ್ದ  ಈ ಗೆದ್ದಲಿನ ಗೂಡುಗಳ ದಿಬ್ಬಗಳನ್ನು ಪತ್ತೆ ಹಚ್ಚಲಾಗಿದೆ.  ಇತ್ತೀಚಿನ ವರ್ಷಗಳಲ್ಲಿ   ಒಂದಷ್ಟು  ಭೂಮಿಯನ್ನು ಹುಲ್ಲುಗಾವಲುಗಾಗಿ  ಬೇಕೆಂದು ತೆರವುಗೊಳಿಸುವಾಗ “ಹೊರಗಿನ ಪ್ರಪಂಚಕ್ಕೆ” ಕಂಡು ಬಂದಿವೆ.

            “ಒಂದೇ ಒಂದು ಕೀಟದ ಜಾತಿಯ ಮೂಲಕ ನಿರ್ಮಿತವಾದ ಇದು ಪ್ರಪಂಚದ ಅತ್ಯಂತ ವ್ಯಾಪಕವಾದ ಜೈವಿಕ ಇಂಜಿನಿಯರಿಂಗ್  ಪ್ರಯತ್ನವಾಗಿದೆ  ಎನ್ನಲಾಗುತ್ತಿದೆ.  ಬಹುಶಃ ಎಲ್ಲಕ್ಕಿಂತಲೂ ಹೆಚ್ಚು ರೋಮಾಂಚನಕಾರಿ – ಎಂದರೆ  “ಈ ದಿಬ್ಬಗಳು ತುಂಬಾ ಹಳೆಯದಾದ ಪಿರಮಿಡ್‍ ಗಳಷ್ಟೇ  ಹಿಂದಿನವೂ ಕೂಡ”. 11 ದಿಬ್ಬಗಳ ಕೇಂದ್ರಗಳಿಂದ ಸಂಗ್ರಹಿಸಲಾದ ಮಣ್ಣಿನ ಮಾದರಿಗಳನ್ನು ಪರೀಕ್ಷಿಸಿದಾಗ ಇವುಗಳು ಏನಿಲ್ಲವೆಂದರೂ ಸುಮಾರು 690 ರಿಂದ 3,820 ವರ್ಷಗಳಷ್ಟು ಹಿಂದೆನವು ಎಂದು ಅರಿಯಲಾಗಿದೆ.  ತುಂಬಾ ವ್ಯವಸ್ಥಿತವಾದ ಅಂತರದಲ್ಲಿ, ಅದ್ಭುತವಾದ ಆಕಾರಗಳಲ್ಲಿ ಕಟ್ಟಿಕೊಂಡಿರುವ ಸುರಂಗಗಳ ಜಾಲಗಳನ್ನು ಅನ್ವೇಷಿಸಿದ ವಿಜ್ಞಾನಿಗಳ, ಸುತ್ತಲಿನ ಮೆಲ್ಮೈಯಲ್ಲಿರುವ ಕಾಡುಗಳಲ್ಲಿ  ಬಿದ್ದ ಎಲೆಗಳ ಸರಬರಾಜು ಮುಂತಾಧ ಮಾಹಿತಿಯ ಸಂವಹನ ಹಾಗೂ ನಿರ್ದೇಶನಕ್ಕೆ ಅನುಕೂಲಕರವಾಗಿಯೇ ನಿರ್ಮಿಸಿಕೊಂಡಿವೆ ಎಂದು ವಿವರಿಸಿದ್ದಾರೆ. ಅಂದರೆ ಗೂಡುಗಳ ನಡುವಣ ಸಮುದಾಯಗಳಲ್ಲಿ ಯಾವುದೇ ಸಂದಿಗ್ದ ವೈರುದ್ಯಕ್ಕೆ ಅಲ್ಲ ಬದಲಾಗಿ ಇದು ಒಂದು ಅಗಾಧ ಹೊಂದಾಣಿಕೆಯ ಜಾಲವೆಂದು ಕರೆದಿದ್ದಾರೆ.

          ಇಷ್ಟೊಂದು  ಅಗಾಧವಾದ ಗಾತ್ರದ ಮತ್ತು ಇನ್ನೂ ಅಸ್ತಿತ್ವದಲ್ಲಿರುವ  ‘ಅಜ್ಞಾತ’ ಜೀವವೈಜ್ಞಾನಿಕ ಅದ್ಭುತವನ್ನು  ನಾವೆಲ್ಲಾ ಕಾಣಬಹುದು. ಇನ್ನೂ ಅಚ್ಚರಿ ಎಂದರೆ ಅಲ್ಲಿ ಇನ್ನೂ ಗೆದ್ದಲಿನ ನಿವಾಸಿಗಳು ಈಗಲೂ ಇರುವುದು. ಇಷ್ಟೆಲ್ಲಾ ಬೃಹತ್ತಾದ ಜೈವಿಕ ಸೌಧಗಳ ಭೌತಿಕ ರಚನೆಗಳ ಕುರಿತು ಇನ್ನೂ ಏನೂ ತಿಳಿದಿಲ್ಲ.  ಏಕೆಂದರೆ ಸಾಮಾನ್ಯವಾಗಿ ಇಂತಹ ಸಮುದಾಯಗಳನ್ನು ನಿರ್ವಹಿಸುವ “ರಾಣಿ” ಯ  ಅಂತಃಪುರ ಇನ್ನೂ ಸಿಕ್ಕಿಲ್ಲ.  ಹಾಗಾಗಿ ಇನ್ನೂ ಹತ್ತಾರು ಪ್ರಶ್ನೆಗಳನ್ನು ಈ ಗೆದ್ದಲು ಪ್ರಪಂಚವು ಸಂಶೋಧಕರಿಗೆ ಸವಾಲಾಗಿಯೇ ಇಟ್ಟುಕೊಂಡಿದೆ.

— ಡಾ.ಟಿ.ಎಸ್.ಚನ್ನೇಶ್

Reference

Current Biology 28, R1283–R1295, November 19, 2018

Those who wish to have details, can find more with this link https://www.cell.com/…/fulltext/S0960-9822(18)31287-9…

Leave a Reply