You are currently viewing ಬೇಸಿಗೆಯ ತಂಪಿಗೆ ಬೇಲದ ಹಣ್ಣಿನ ಸವಿ

ಬೇಸಿಗೆಯ ತಂಪಿಗೆ ಬೇಲದ ಹಣ್ಣಿನ ಸವಿ

ಬೇಲದ ಹಣ್ಣುಗಳು ಈ ದಿನಗಳಲ್ಲಿ ಮರದಿಂದ ಬೀಳುತ್ತಾ ಬೇಸಿಗೆಯ ಆರಂಭಕ್ಕೆ ಮತ್ತೊಂದು ಬಗೆಯ ರಸಭರಿತ ಸೋಜಿಗವನ್ನು ನಾಲಿಗೆಯ ತಲುಪಿಸಲಿವೆ. ಈಗ ಈ ಹಣ್ಣಿನ ಕಾಲ. ಜೊತೆಯಲ್ಲಿ ಇದು ತುಂಬಾ ಅಪರೂಪದ ಹಣ್ಣೂ ಕೂಡ. ಸಾಮಾನ್ಯವಾಗಿ ಇತರೇ ಸಾಮಾನ್ಯ ಹಣ್ಣುಗಳಂತೆ ಎಲ್ಲೆಡೆ ಕಾಣುವುದೂ ಇಲ್ಲ. ಹಾಗಾಗಿ ಫಲಬಿಟ್ಟ ಕಾಲದಲ್ಲೇ ಇದನ್ನೂ ಸಸ್ಯಯಾನದಲ್ಲಿ ಪರಿಚಯಿಸಿ ನಮ್ಮ ತಿಳಿವಳಿಕೆಗೆ ಒಂದಷ್ಟು ಹೊಸ ಸರಕನ್ನು ಸೇರಿಸೋಣ. ಈ ಹಣ್ಣಿನ ಸುತ್ತಲೂ ಅನೇಕ ಸಂಗತಿಗಳಿವೆ. ಹಲವು ಮಿಥ್ ಗಳೂ ಸೇರಿಕೊಂಡು ಇದನ್ನು ಮತ್ತೂ ವಿಶೇಷವಾಗಿಸಿವೆ.

      ಬೇಲದ ಹಣ್ಣು. ಬೆಳುವಲದ ಹಣ್ಣು, ಕಪಿತ್ತ ಫಲ ಎಂದೆಲ್ಲಾ ಕರೆಯುವ ಇದು ಅಪ್ಪಟ ಭಾರತೀಯ. ಇದರ ತವರೂರು ಭಾರತ. ಶ್ರೀಲಂಕಾದಲ್ಲಿ ಕೂಡ ಕಂಡುಬರುತ್ತದೆ. ಇವೆರಡೂ ದೇಶಗಳ ಹೊರತಾಗಿ ಕೇವಲ ಪರಿಚಯಿಸಿದ ಕಾರಣಕ್ಕಾಗಿ ಮಾತ್ರವೇ ಇತರೆಡೆಯಲ್ಲಿ ಕಾಣುತ್ತೇವೆ. ಆದಾಗ್ಯೂ ಕೇವಲ ಚೀನಾ, ದಕ್ಷಿಣ ಏಶಿಯಾಗಳಲ್ಲಿ ಮಾತ್ರವೇ ಹೆಚ್ಚಾಗಿ ಕಂಡುಬರುತ್ತದೆ. ಈ ಹಣ್ಣಿನ ವಿಶೇಷಣಗಳು ಜನಪದರಲ್ಲಿ ಹೆಚ್ಚಾಗಿದ್ದು, ವೈಜ್ಞಾನಿಕ ಚರ್ಚೆಗಳಲ್ಲಿ ಅಪರೂಪ. ತುಂಬಾ ಒಣ ಪ್ರದೇಶದಲ್ಲೂ ಒಗ್ಗಿಕೊಂಡು ಬೆಳೆಯುವ ಈ ಸಸ್ಯವು ಹಣ್ಣಿನ ಔಷಧೀಯ ಗುಣಗಳಿಂದಾಗಿ, ಜತೆಗೆ ಧಾರ್ಮಿಕ ವಿಚಾರಗಳಿಂದಲೂ ಪರಿಚಿತ. ಇಷ್ಟೆಲ್ಲದರ ಜೊತೆಗೆ ವೈಜ್ಞಾನಿಕ ನಾಮಕರಣದಿಂದಾಗಿ ಸಾಕಷ್ಟು ಮಹತ್ವವನ್ನು ಪಡೆದ ಸಸ್ಯ. ಏಕೆಂದರೆ ಇದರ ದ್ವಿನಾಮವನ್ನು ಹಲವು ಬಾರಿ ಬದಲಿಸಲಾಗಿದ್ದು, ಅದಲ್ಲದೆ ಅನೇಕ ವೈಜ್ಞಾನಿಕ ವರದಿಗಳಲ್ಲೂ ನಮ್ಮ ವಿಜ್ಞಾನಿಗಳೂ ತಪ್ಪಾಗಿ ಪರಿಚಯಿಸಿರುವ ಮಾಹಿತಿಗಳೂ ಇವೆ.

      ಇದನ್ನು ಇಂಗ್ಲೀಶಿನಲ್ಲಿ Beal ಅಥವಾ Bel tree ಎಂದೇ ಬರೆಯುವುದರಿಂದ ಹಾಗೇನೇ ಬಿಲ್ವ ಪತ್ರೆಯ ಮರಕ್ಕೂ Beal ಅಥವಾ Bel tree ಎಂದೇ ಕರೆಯುತ್ತಿದ್ದು ವಿಶ್ವವಿದ್ಯಾಲಯದ ಪ್ರೊಫೆಸರ್‍ಗಳೂ ಸಹಾ ಬಿಲ್ವ ಮರದ ವೈಜ್ಞಾನಿಕ ಹೆಸರಾದ Aegle marmelos ನಿಂದಲೇ ಬೇಲವನ್ನೂ ಗುರುತಿಸಿದ್ದಲ್ಲದೇ ವರದಿಗಳನ್ನೂ ಪ್ರಕಟಿಸಿದ್ದಾರೆ. ಆದರೆ ಈ ಬೇಲದ ಮರದ ವೈಜ್ಞಾನಿಕ ಹೆಸರು Limonia acidissima ಎಂಬುದಾಗಿದೆ. ಇದಕ್ಕೂ ಮೊದಲು ಈ ಸಸ್ಯಕ್ಕೆ Feronia elephantum ಎಂದೂ ಕರೆಯುತ್ತಿದ್ದರು. ಇದರ ಜೊತೆಗೆ ಸುಮಾರು 12ಕ್ಕೂ ಹೆಚ್ಚು ಇತರೇ ಹೆಸರುಗಳೂ ಇದ್ದವು.  Feronia elephantum ಎಂದು ಕರೆದಿರುವ ಒಂದು ಕಾರಣವೆಂದರೆ ಈ ಹಣ್ಣು ಒಂದು ವೇಳೆ ಆನೆಗೆ ಸಿಕ್ಕಲ್ಲಿ ಅದು ಹಣ್ಣನ್ನು ಇಡಿಯಾಗಿ ಹಾಗೇ ನುಂಗುತ್ತದೆ ಎಂದೂ, ಜೊತೆಗೆ ಆನೆಗೆ ತುಂಬಾ ಇಷ್ಟ ಎಂಬ ವಿಚಾರಗಳಿವೆ. ಧಾರ್ಮಿಕ ನಂಬಿಕೆಗಳಲ್ಲಿರುವ ಈ ಸಂಗತಿಯನ್ನು ಮುಂದೆ ನೋಡೋಣ.

      ಬೇಲ, ಬೆಳುವಲ, ಆನೆ ಸೇಬು(ಎಲಿಫೆಂಟ್ ಆ್ಯಪಲ್), ವುಡ್ ಆ್ಯಪಲ್, ಮಂಕೀ ಆ್ಯಪಲ್, ಎಂದೆಲ್ಲಾ ಹೆಸರುಗಳನ್ನು ಹೊತ್ತ ಈ ಸಸ್ಯವು ಕಿತ್ತಳೆಯ ಕುಟುಂಬಕ್ಕೇ ಸೇರಿದೆ. ಇದರ ಸಿಪ್ಪೆಯು ಮೋಸಂಬಿ ಹಣ್ಣಿನಂತೆ ಸಾಕಷ್ಟು ದಪ್ಪವಾಗಿದ್ದೂ ತುಂಬಾ ಗಟ್ಟಿಯಾಗಿರುತ್ತದೆ. ಅದರೊಳಗೆ ಕಿತ್ತಳೆಯಂತೆ ತೊಳೆಗಳಿಲ್ಲದೆ, ಇಡಿಯಾಗಿ ತಿರುಳು ತುಂಬಿಕೊಂಡು ಸಾಧಾರಣವಾಗಿ ಗಟ್ಟಿಯಾಗಿತ್ತದೆ. ಬಲಿತ ಕಾಯಿಗಳು ನೆಲಕ್ಕೆ ಬೀಳುತ್ತವೆ. ಆದರೂ ಸಾಮಾನ್ಯವಾಗಿ ದಪ್ಪ ಸಿಪ್ಪೆಯ ಕಾರಣದಿಂದ ಒಡೆಯುವುದಿಲ್ಲ. ಬಲಿತ ಕಾಯಿಗಳು ನಿಧಾನವಾಗಿ 3-4 ದಿನಗಳಲ್ಲಿ ಮಾಗಿ ಸುವಾಸನೆಯು ಬರತೊಡಗುತ್ತದೆ. ಮರದಲ್ಲಿದ್ದಾಗ, ಅಥವಾ ಬೀಳುವ ಹಂತದವರೆಗೂ ಹಸಿರುಮಿಶ್ರಿತ ಬಿಳುಪಿನ ಬಣ್ಣದ ಸಿಪ್ಪೆಯು, ಮಾಗುವ ವೇಳೆಗೆ ಕಂದು ಮಿಶ್ರಿತ ಬಿಳಿಯ ಕಡೆಗೆ ತಿರುಗತೊಡಗುತ್ತದೆ. ಪರಿಮಳವೂ ಮೂಗಿಗೆ ಸುಳಿದಾಡಲು ಆರಂಭಿಸುತ್ತದೆ. ಹುಳಿಮಿಶ್ರಿತ ಸಿಹಿಯ ಸುವಾಸನೆಯು ಇದಕ್ಕೆ acidissima    ಎಂಬ ಪ್ರಭೇದದ ಹೆಸರು ಬರಲು ಕಾರಣವಾಗಿದ್ದರೆ ಸಂಕುಲದ ಹೆಸರಾದ Limonia ಪದವು Lime ಅಥವಾ ನಿಂಬೆ/ಕಿತ್ತಳೆ ಜಾತಿಗೆ ಸೇರಿದ್ದರಿಂದ ಬಂದಿದೆ.   acidissima ವು ಈ ಸಂಕುಲದಲ್ಲಿ ಇರುವ ಒಂದೇ ಪ್ರಭೇದವು ಇದಾಗಿದೆ. ಈ ಹಿಂದಿನ ವರ್ಗೀಕರಣಗಳಲ್ಲೆಲ್ಲಾ ಇದನ್ನು ಕಿತ್ತಳೆ/ನಿಂಬೆಯಿಂದ ಬೇರೆಯಾಗಿಸುತ್ತಾ, ಹಾಗೂ ಅದರ ಸಂಬಂಧವನ್ನೂ ಉಳಿಸಿಕೊಳ್ಳುತ್ತಾ ಇದೀಗ Limonia acidissima ಎಂಬ ಹೆಸರಿನಲ್ಲಿ ಕರೆಯಲಾಗುತ್ತಿದೆ. ಇದರ ಹೆಸರಿಡುವ ಕುರಿತ ವಿಜ್ಞಾನವಲಯದ ಪ್ರಬುದ್ಧ ಚರ್ಚೆಗಳು ಸಾಕಷ್ಟು ಹೆಸರುವಾಸಿಯಾಗಿವೆ.

      ಧಾಮಿಕ ನಂಬಿಕೆಗಳು ಈ ಮರದ ಸುತ್ತಾ ಜೊತೆಗೆ ಹಣ್ಣಿನ ಕುರಿತೂ ಸಾಕಷ್ಟು ಹಬ್ಬಿಕೊಂಡಿವೆ. ಅದರಲ್ಲಿ “ಗಜಾನನಂ ಭೂತಗಣಾಧಿ ಸೇವಿತಂ…” ಎಂದು ಆರಂಭವಾಗುವ ವಿನಾಯಕ ಸ್ತೋತ್ರದಲ್ಲಿ “ಕಪಿತ್ಥ ಜಂಭೂಫಲಸಾರ ಭಕ್ಷಿತಂ” ಎಂಬ ಸಾಲು ಪ್ರಮುಖವಾದದ್ದು. ಇದರಲ್ಲಿ ಮಹತ್ವವಾದದ್ದೇನೂ ಇಲ್ಲ. ಆನೆಮುಖದ ಗಣೇಶ ಆನೆಯಂತೆಯೇ ಈ ಹಣ್ಣನ್ನು ಇಡಿಯಾಗಿ ತಿಂದೂ ಒಳಗಿನ ತಿರುಳನ್ನು ಸಿಪ್ಪೆಯನ್ನು ಒಡೆಯದೇ ಹೀರಿಕೊಳ್ಳುತ್ತಾನೆ ಎಂಬುದಾಗಿದೆ. ಇದೊಂದು ನಂಬಿಕೆಯಷ್ಟೆ! ಬಾಲ್ಯದಲ್ಲಿ ನಾನು ನಿಜವೆಂದೇ ನಂಬಿ ನಮ್ಮೂರಿಗೆ ಒಂದು ಆನೆ ಬಂದಾಗ, ದಿನವಿಡಿ ಅದರ ಹಿಂದೆ ಓಡಾಡಿದ್ದೆ! ಅದರ ಸಗಣಿಯ ವಾಸನೆಯಷ್ಟೇ ನನಗಾಗ ಸಿಕ್ಕದ್ದು! ಇನ್ನಿತರೇ ಪೌರಾಣಿಕ ಕಥನಗಳಲ್ಲಿ ಈ ಹಣ್ಣು ಶಿವನಿಗೆ, ಗಂಗೆಗೆ ಹಾಗೂ ಗಣೇಶನಿಗೆ ಇದು ತುಂಬಾ ಇಷ್ಟವಾದ ಹಣ್ಣು ಎಂಬೆಲ್ಲಾ ವಿವರಗಳು ಸಿಗುತ್ತವೆ. ಅನೇಕ ಕಡೆ ದಕ್ಷಿಣ ಏಶಿಯಾದ ಹಲವು ಭಾಗಗಳಲ್ಲಿ ದೇವಾಲಯಗಳ ಹತ್ತಿರ ಇದನ್ನು ಬೆಳೆಸಿರುವುದೂ ಉಂಟು. ಇದೆಲ್ಲವು ಕೇವಲ ನಂಬಿಕೆ ಹೊರತೂ ಯಾವ ವೈಜ್ಞಾನಿಕ ಸಾಬೀತುಗಳಲ್ಲ.

      ಕಿತ್ತಳೆ/ನಿಂಬೆ ಜಾತಿಯ ಮರವಾದರೂ ತುಂಬಾ ಗಟ್ಟಿಯಾದ, ಸಾಕಷ್ಟು ಎತ್ತರಕ್ಕೆ (ಸುಮಾರು 30 ಅಡಿಗಳು) ಬೆಳೆಯುವ ದೊಡ್ಡ ಮರವೇ! ಅದರ ಚಾವಣಿಯ ತುಂಬೆಲ್ಲಾ ಸುಮಾರು ರೆಂಬೆ-ಕೊಂಬೆಗಳು ತುಂಬಿಕೊಂಡು ದಟ್ಟವಾಗಿ ಕಾಣುವ ಮರವನ್ನು ಹತ್ತಿ ಕೊಂಬೆಗಳೊಳಗೆ ಅಡ್ಡಾಡಲು ಕಷ್ಟವಾಗುತ್ತದೆ. ಜೊತೆಗೆ ರೆಂಬೆ-ಕೊಂಬೆಗಳಲ್ಲಿ ದಪ್ಪನಾದ ಮುಳ್ಳುಗಳೂ ಇರುತ್ತವೆ. ಎಲೆಗಳು ದಟ್ಟವಾದ ಹಸಿರಾಗಿದ್ದು, ಎಳೆಯದರಲ್ಲಿ ಮರದ ನೋಟ ಹಾಗೂ ಎಲೆಗಳ ಹರಹು, ಬಿಲ್ವ-ಪತ್ರೆ ಮರದ ಆಕೃತಿಯನ್ನು ಹೋಲುವುದುಂಟು. ಆದರೆ ಬಿಲ್ವ ಮರಗಳು ಬೇಲದಷ್ಟು ದಟ್ಟವಾಗಿ ಇರುವುದಿಲ್ಲ. ಅಲ್ಲದೆ ಬಿಲ್ವ ಮರಗಳು ನೇರವಾಗಿ ಬೆಳೆದು ಹೆಚ್ಚು ಕೊಂಬೆಗಳನ್ನು ಹರಡಿಕೊಂಡಿರಲಾರವು. ಬೇಲ ಮರ ಮಾತ್ರ ಸಾಕಷ್ಟು ಹರವಾದ ಎಲೆ-ರೆಂಬೆ-ಕೊಂಬೆಗಳ ತಾರಸಿಯನ್ನು ಹೊಂದಿರುತ್ತದೆ. ಬೇಲದ ಹೂವುಗಳೂ ಆಕರ್ಷಕವಾಗಿದ್ದು ಮಕರಂದವನ್ನೂ ಹೊಂದಿದ್ದು, ಸಾಕಷ್ಟು ಜೇನು-ದುಂಬಿಗಳನ್ನು ಆಕರ್ಷಿಸುತ್ತವೆ.  ಬೇಲ ಹಾಗೂ ಬಿಲ್ಲ ಎರಡೂ ಮರಗಳನ್ನು ಕಿತ್ತಳೆ ಕುಟುಂಬದಲ್ಲೇ ಇರಿಸಿಕೊಂಡೂ ಸಂಕುಲಗಳಲ್ಲಿ ಭಿನ್ನವಾಗಿ ವರ್ಗೀಕರಣ ಮಾಡಲಾಗಿದೆ.

      ಗಟ್ಟಿ ಸಿಪ್ಪೆಯ ಒಳಗಿರುವ ಸಾದಿಷ್ಟವಾದ ತಿರುಳು ಅಗಿಯಬಹುದಾದ ನಾರಿನಂತಹ ಎಳೆಗಳನ್ನು ಹೊಂದಿರುತ್ತದೆ. ಅದರ ಜೊತೆಗೆ ಕಂದು ಮಿಶ್ರಿತ ಬಿಳಿ ಬಣ್ಣದ ಬೀಜಗಳೊಂದಿಗೆ ತಿರುಳು ತುಂಬಿಕೊಂಡಿರುತ್ತದೆ. ಬೀಜಗಳನ್ನೂ ತಿರುಳಿನ ಸಮೇತ ತಿನ್ನಬಹುದು. ಸಾಮಾನ್ಯವಾಗಿ ಹುಳಿ ಮಿಶ್ರಿತ ಸಿಹಿಯಾಗಿರುವುದರಿಂದ ಇಡೀ ಹಣ್ಣಿನ ತಿರುಳನ್ನು ಬೆಲ್ಲದೊಂದಿಗೆ ಬೆರೆಸಿ ಪೇಸ್ಟ್ ರೂಪದಲ್ಲಿ ಅಥವಾ ಪಾನಕವಾಗಿಯೂ ಸೇವಿಸುವುದುಂಟು. ತಿರುಳು ಜಾಮ್ ಮಾಡಲೂ ಯೋಗ್ಯವಾಗಿರುತ್ತದೆ. ಹಣ್ಣು ಹಲವಾರು ಔಷಧೀಯ ಗುಣಗಳನ್ನು ಹೊಂದದ್ದು ಆಯುರ್ವೇದ, ಜನಪದೀಯ ಪದ್ದತಿಗಳಲ್ಲಿ ತುಂಬ ಹೆಸರನ್ನು ಮಾಡಿರುವ ಸಸ್ಯ. ಸಿಹಿಯ ಜೊತೆಗೆ ಹುಳಿಯೂ ಇರುವುದರಿಂದ ಹಾಗೂ ಬೇಸಿಗೆಯ ದಿನಗಳಲ್ಲಿ ಸಿಗುವುದರಿಂದ ಹೆಚ್ಚಾಗಿ ಪಾನಕ ಮಾಡಲು ಬಳಸುತ್ತಾರೆ.

      ಬೇಲದ ಹಣ್ಣಿನಲ್ಲಿ ಸಾಕಷ್ಟು ಪ್ರೊಟೀನು, ಪಿಷ್ಠ, ನಾರಿನಂಶ, ಕ್ಯಾಲ್ಸಿಯಂ, ಕಬ್ಬಿಣ, ವಿಟಮಿನ್ “ಸಿ” ಹಾಗೂ “ಬಿ” ಇವೆ. ಪ್ರಮುಖ ಔಷಧಿಯ ಗುಣವೆಂದರೆ ಪಚನಕಾರಿ ಗುಣ. ಹಾಗಾಗಿ ಜೀರ್ಣತೆಯ ಸಮಸ್ಯೆಗಳಲ್ಲಿ ಸಹಜವಾಗಿ ಬಳಸುತ್ತಾರೆ. ರೆಂಬೆ-ಕೊಂಬೆಗಳಲ್ಲಿ ಒಂದು ಬಗೆಯ “ಅಂಟು” ದೊರಕುತ್ತಿದ್ದು ಅದನ್ನು ಅತೀ ಬೇಧಿಯ ನಿಯಂತ್ರಣದಲ್ಲಿ ಬಳಸಲಾಗುತ್ತದೆ. ಈ ಹಣ್ಣಿನಲ್ಲರುವ ಪೆಕ್ಟಿನ್ ಹಾಗೂ ಟ್ಯಾನಿನ್‍ಗಳು ಅಲ್ಸರ್ ಉಪಶಮನದಲ್ಲಿ ಸಹಕಾರಿ. ಸರಳವಾಗಿ ತಿರುಳನ್ನು ಈ ಬೇಸಿಗೆಯ ಕಾಲದಲ್ಲಿ ಪಾನಕ ಮಾಡಿಕೊಂಡು ಸೇವಿಸುವುದು ದೇಹಕ್ಕೆ ಸಾಕಷ್ಟು ವಿಟಮಿನ್ “ಸಿ” ದೊರಕಿಸಿ ಪಚನಕ್ರಿಯೆಯನ್ನು ವೃದ್ಧಿಸಿಕೊಂಡು ರಕ್ತಚಲನೆಯನ್ನೂ ಅನುಕೂಲಕರವಾಗಿಸಿಕೊಳ್ಳಬಹುದು. ಈಗ ಹೇಗೂ ಕೆಲವು ರಾಜ್ಯದ ಕೆಲವು ಕಡೆಗಳಲ್ಲಿ ಬೇಲದ ಹಣ್ಣುಗಳು ಸಿಗುತ್ತಿದ್ದು ಬೇಸಿಗೆಯನ್ನು ತಂಪು ಮಾಡಿಕೊಳ್ಳಲು ಸಕಾಲ. ಹಣ್ಣಿನಲ್ಲಿರುವ  “ಸಿ” ವಿಟಮಿನ್ನು ಪರೀಕ್ಷೆಗಳನ್ನು ಎದುರು ನೊಡುತ್ತಿರುವ ಮಕ್ಕಳ ಓದಿನ ತಯಾರಿಯ ಒತ್ತಡವನ್ನು ಕಡಿಮೆ ಮಾಡಲು ಸಹಕಾರಿಯಾಗುವುದು ಖಚಿತ.  

ನಮಸ್ಕಾರ

ಚನ್ನೇಶ್

This Post Has 6 Comments

 1. Dr BK

  Very Informative 👍👍👍👍

 2. ಡಾ ರುದ್ರೇಶ್ ಅದರಂಗಿ

  ತುಂಬಾ ಚೆನ್ನಾಗಿದೆ ಸರ್. ಬೇಲದ ವೈಜ್ಞಾನಿಕ ವಿವರ ಹಾಗೂ ಮಾಹಿತಿ ಉಪಯುಕ್ತವಾಗಿದೆ. ಸಾಂದರ್ಭಿಕವಾಗಿದೆ. ಧನ್ಯವಾದಗಳು ಸರ್

 3. ವೆಂಕಟೇಶ್ ಕೆ. ಎನ್

  ನಮಸ್ಕಾರ. ಉಪಯುಕ್ತ ಮಾಹಿತಿ. ಬೇಲದ ಹಣ್ಣನ್ನು ಬಳಸುವ ಬಗೆ ತುಂಬ ಜನಕ್ಕೆ ತಿಳಿದಿಲ್ಲ. ಧನ್ಯವಾದಗಳು

 4. ಸಿ ಬಸವರಾಜಪ್ಪ

  ಸಿ ಬಸವರಾಜಪ್ಪ
  ಬೇಲದ ಮರದ ಬಗ್ಗೆ ವಿವರವಾದ ವೈಜ್ಞಾನಿಕ ಮಾಹಿತಿ ಹಾಗೂ ಬೇಲದ ಹಣ್ಣಿನ ಮಹತ್ವದ ಉಪಯುಕ್ತ ಮಾಹಿತಿ ನೀಡಿದ್ದಕ್ಕೆ ತುಂಬಾ ಧನ್ಯವಾದಗಳು ಸರ್.

 5. Ansar Pasha G

  ಒಳ್ಳೆಯ ಮಾಹಿತಿ ಸರ್

 6. Shanthakumari

  ಉತ್ತಮವಾದ ಮಾಹಿತಿ ಸರ್ ಧನ್ಯವಾದಗಳು

Leave a Reply