ಮೆಂತ್ಯ ಅಥವಾ ಮೆಂತೆಯು ಹೆಸರು, ಉದ್ದು, ತೊಗರಿ ಅಥವಾ ಕಡಲೆಯ ಕುಟುಂಬವಾದ ಫ್ಯಾಬೇಸಿಯೆ (Fabaceae)ಗೆ ಸೇರಿದೆ. ಅವುಗಳಂತೆಯೇ ಇದೂ ಕೂಡ ಲೆಗ್ಯೂಮ್ ಸಸ್ಯವೇ! ಆದರೆ ಇದರ ಕಾಳು ಬೇಳೆಯಾಗದು. ಇದನ್ನು ಮೆಂತೆ ಕಾಳು, ಮೆಂತ್ಯಕಾಳು ಎಂದೇ ಕರೆಯುತ್ತೇವೆ. ಇದರ ರುಚಿಯೂ ಇತರೇ ಬೇಳೆಗಳಂತಲ್ಲ. ತುಸು ಕಹಿ, ಜೊತೆಗೆ ಕಾಳು ಗಡಸು. ಸುಲಭವಾಗಿ ತಿನ್ನಲು ಒಂದಷ್ಟು ಅಡ್ಡಿ. ಆದರೆ ಕಡಲೆ ಹುರಿದರೆ ಸಾಕು, ಅಥವಾ ನೆನೆಸಿದರೂ ಸಾಕು, ಹಸಿಯಾಗಿಯೇ ತಿನ್ನಬಹುದು. ಮೆಂತ್ಯದ ಕಾಳುಗಳನ್ನು ಹಸಿಯಾಗಿ ತಿನ್ನಬಹುದಾದರೂ ಕಡಲೆ, ಹೆಸರಿನಂತಲ್ಲ. ಇದರಲ್ಲಿರುವ ಪ್ರೊಟೀನ್ ಭಿನ್ನವಾದ ತುಸು ಕಹಿಯ ರುಚಿಯನ್ನಿಟ್ಟು, ವಿಭಿನ್ನ ಉಪಯೋಗಗಳನ್ನೂ ಮಾನವಕುಲಕ್ಕೆ ಕೊಟ್ಟಿದೆ. ಆದರೆ ಇದರ ಎಲೆಗಳು ಹಾಗಲ್ಲ! ಇತರೇ ಬೇಳೆ-ಕಾಳುಗಳಂತೆ ಒರಟಲ್ಲ, ತೀರಾ ಮೃದು. ಅದಕ್ಕೆ ಗ್ರೀಕ್ ವೈದ್ಯ ಹಿಪೊಕ್ರಾಟೆಸ್ ಅವರು ಹಿತವಾದ ಗಿಡ-ಸೂದಿಂಗ್ ಹರ್ಬ್(Soothing Herb) ಎಂದೇ ಕರೆದಿದ್ದಾರೆ. ಇದರ ಕಾಳು ಮಾತ್ರ ಗಡಸು, ಆದರೆ ಎಲೆಗಳು ಮೃದು, ಆದರೆ ಇತರೇ ನಾವು ತಿನ್ನುವ ಬೇಳೆಕಾಳುಗಳ ಎಲೆಗಳು ಒರಟು, ಕಾಳು ಮೃದು! ಬೇಳೆ-ಕಾಳುಗಳಲ್ಲಿ ಈ ಬಗೆಯ ಭಿನ್ನತೆಯು ಸಾಕಷ್ಟಿದೆ. ಕೆಲವು ಬೇಳೆ-ಕಾಳು(ಲೆಗ್ಯೂಮ್)ಗಳು ತಿನ್ನಲು ಬಾರದಷ್ಟು ಕಹಿಯುಳ್ಳವೂ ಇವೆ. ತುಸು ಹೆಚ್ಚೇನಾದರೂ ತಿಂದರೆ ಜೀವಕ್ಕೂ ಅಪಾಯವಾಗುವಷ್ಟು ವಿಷಯುಕ್ತವಾದವೂ ಇವೆ.
ಸರಿ ಸುಮಾರು 4000 ವರ್ಷಗಳಿಂದಲೂ ಮಾನವ ಕುಲಕ್ಕೆ ಪರಿಚಿತವಾಗಿರುವ ಈ ಮೆಂತ್ಯ ಸಸ್ಯವು ಪುರಾತನ ಈಜಿಪ್ಟರಲ್ಲಿ ಔಷಧೀಯ ಗಿಡಮೂಲಿಕೆಯಾಗಿತ್ತು. ಅವರು ಮೆಂತ್ಯವು ಸುಟ್ಟ ಗಾಯವನ್ನು ವಾಸಿ ಮಾಡುವುದರಲ್ಲಿ ಹಾಗೂ ಮಕ್ಕಳಾಗುವುದಕ್ಕೂ ಔಷಧವಾಗಿರುವ ಬಗ್ಗೆ ನಂಬಿಕೆಯುಳ್ಳವರಾಗಿದ್ದರು. ಯೂರೋಪಿನ ದಕ್ಷಿಣ ಭಾಗದ ನೆಲವನ್ನು ತವರನ್ನಾಗಿ ಹೊಂದಿರುವ ಮೆಂತ್ಯವು ಬಹಳ ಹಿಂದೆಯೇ ಬಹುಷಃ ಅರಬ್ಬರ ಮೂಲಕ ಭಾರತಕ್ಕೆ ಬಂದು ನೆಲೆಯಾಗಿದೆ. ಬಳಕೆಯ ಹಿತದಲ್ಲಿ ಭಾರತೀಯವೇ ಆಗಿದೆ. ಭಾರತವನ್ನು ವಾಯುವ್ಯ ದಿಕ್ಕಿನಿಂದ ಹೊಕ್ಕಿರುವ ಮೆಂತ್ಯವು, ಈಗಲೂ ಆ ಭಾಗದ ರಾಜಸ್ಥಾನದಲ್ಲಿ ಅತ್ಯಂತ ಹೆಚ್ಚು ಬೆಳೆಯಲಾಗುತ್ತಿದೆ. ಜಗತ್ತಿನಲ್ಲೇ ಅತ್ಯಂತ ಹೆಚ್ಚು ಉತ್ಪಾದನೆಯಿರುವ ಭಾರತದಲ್ಲಿನ ಮೆಂತ್ಯವನ್ನು ಮುಕ್ಕಾಲು ಭಾಗ ರಾಜಸ್ಥಾನ ಒಂದರಿಂದಲೇ ಬೆಳೆಯಲಾಗುತ್ತದೆ. ಇದೀಗ ಭಾರತವಲ್ಲದೆ ಉತ್ತರ ಆಫ್ರಿಕಾ, ದಕ್ಷಿಣದ ಯೂರೋಪ್ ದೇಶಗಳು, ದಕ್ಷಿಣ ಅಮೆರಿಕಾದ ಅರ್ಜೆಂಟೈನಾ ಹಾಗೂ ಪಶ್ಚಿಮದ ಏಶಿಯಾದ ಕೆಲವು ದೇಶಗಳಲ್ಲಿ ಬೆಳೆಯಲಾಗುತ್ತಿದೆ.
ಮೆಂತ್ಯವು ರೋಮನ್ನರ ಕಾಲದಿಂದಲೂ ಹೆಸರು ಮಾಡಿದ ಸಸ್ಯ. ರೋಮನ್ನರು ಯಹೂದ್ಯರೊಂದಿಗೆ ಯುದ್ಧದ ಸಮಯದಲ್ಲಿ ಮೆಂತ್ಯೆಯ ಕಾಳುಗಳನ್ನು ಎಣ್ಣೆಯಲ್ಲಿ ಕುದಿಸಿ, ಆ ಮಿಶ್ರಣವನ್ನು ವೈರಿಗಳು ನಗರ ಪ್ರವೇಶಕ್ಕೆ ಅಡ್ಡಿಪಡಿಸಲು ಬಳಸುತ್ತಿದ್ದರಂತೆ. ಬಹುಷಃ ಎಣ್ಣೆಯಿಂದಾದ ಕಷಾಯದ ಮಾದರಿಯ ಮಿಶ್ರಣವು ವಾಸನೆಯಿಂದ ಅಥವಾ ಇನ್ನಾವುದೋ ಅಹಿತಕರವಾದ ಸನ್ನಿವೇಷವನ್ನು ಸೃಜಿಸುತ್ತೆಂದು ಕಾಣುತ್ತದೆ. ಆದರೆ ಅವರಿಗೆ ಮಾತ್ರ ಮೆಂತ್ಯದ ಬಳಕೆಯು ಮುಂದಿನ ವರ್ಷದ ಶುಭ ಹಾರೈಕೆಯ ಕುರುಹಾಗಿತ್ತು. ಅಷ್ಟರ ಮಟ್ಟಿಗೆ ತಮ್ಮನ್ನು ಹರಸಲು ಮತ್ತು ಶತ್ರಗಳನ್ನು ಹೆದರಿಸಲೂ ಮೆಂತ್ಯವನ್ನು ರೋಮನ್ನರು ಬಳಸುತ್ತಿದ್ದರು. ನಾವೂ ಸಹಾ ಸ್ವಲ್ಪ ಹೆಚ್ಚು ಮೆಂತ್ಯವನ್ನು ಹೊಂದಿರುವ ಆಹಾರವನ್ನು ತಿನ್ನಲಾಗುವುದಿಲ್ಲ ಅಲ್ಲವೇ? ಆದೇ ಹಿತವಾದ ಮಿಶ್ರಣದಲ್ಲಿ ಅದೊಂದು ಅದ್ಭುತ ರುಚಿ, ಹಾಗೂ ಖಾದ್ಯದ ರೂಪವನ್ನೂ ಹೆಚ್ಚಿಸುತ್ತದೆ. ಹೀಗೆ ಬಯಸುವ ಮತು ಬಯಸಲಾಗದ ಗುಣಗಳೆರಡರ ಮಿಶ್ರಣವನ್ನು ಒಂದೇ ಗಿಡ ನಿಭಾಯಿಸುತ್ತಿದೆ.
ಮೆಂತ್ಯ ಕಾಳುಗಳು ಸಿಹಿ ಮಿಶ್ರಿತ ಕಹಿಯಾದ ರುಚಿಯುಳ್ಳವು. ಒಂದು ರೀತಿಯಲ್ಲಿ ಸಕ್ಕರೆಯನ್ನು ಸುಟ್ಟಂತೆ ಇರುವ ವಾಸನೆಯವು. ಕಾಳುಗಳನ್ನು ಬೇಯಿಸಿಯೂ ಅಥವಾ ಬೇಯಿಸದೆಯೂ ತಿನ್ನಬಹುದು. ಬೇಯಿಸದೆ ತಿನ್ನುವುದೇ ಹೆಚ್ಚು. ಅದರ ವಿಶೇಷ ರುಚಿಗೆ ಮೆಂತ್ಯವು ಹೆಸರುವಾಸಿ. ಅದಕ್ಕೆಂದೆ ಚಟ್ನಿ ಮತ್ತು ಕಾಳಿನ ಪುಡಿ ಎರಡೂ ಸಹಜವಾದ ಬಳಕೆಯಲ್ಲಿವೆ. ಮೆಂತ್ಯದ ಹಿಟ್ಟು ಎಂದೇ ಒಂದು ಬಗೆಯ ವಿಶೇಷ ಬಳಕೆಯಿಂದ ಅದು ಪರಿಚಿತವಾಗಿದೆ. ಬೀಜಗಳು ಬೇಳೆಯಾಗುವುದಿಲ್ಲ. ಅವುಗಳಲ್ಲಿ ಹೆಚ್ಚೂ ಕಡಿಮೆ ಚೌಕಾಕಾರದ ಅಡ್ಡ ಸೀಳಿಕೆಯ ಗುರುತಿನಿಂದ ಎರಡು ತ್ರಿಕೋನಗಳು ಅಂಟಿಕೊಂಡಂತೆ ಇರುವುದು. ಈ ತ್ರಿಕೋನಾಕೃತಿಗಳನ್ನು ಒಣಗಿದ ಕಾಳುಗಳಲ್ಲಿ ಕಾಣುವುದು ಕಷ್ಟವಾದರೂ ನೆನೆಸಿದಾಗ ಸುಲಭವಾಗಿ ಗಮನಿಸಬಹುದು. ಈ ತ್ರಿಕೋನದ ಲಕ್ಷಣವೇ ಅದರ ಸಂಕುಲದ ಹೆಸರಾದ ಟ್ರೈಗೊನೆಲ್ಲಾ (Trigonella) ದಲ್ಲಿ ಸೇರಿದೆ. ಟ್ರೈಗೊನೆಲ್ಲಾ(Trigonella) ಅಂದರೆ ಮೂರು ಕೋನಗಳುಳ್ಳ ಅಥವಾ ತ್ರಿಕೋನದಂತೆ ಎನ್ನುವುದೇ ಆಗಿದೆ. ಅದರ ಪ್ರಭೇದದ ಪದಗಳಾದ foenum-graecum ಗ್ರೀಕ್ ಪದಗಳಾಗಿದ್ದು Fenugreek ಎಂಬ ಹೆಸರನ್ನು ಕೊಟ್ಟಿವೆ ಇದರ ಅರ್ಥವು ಗ್ರೀಕ್ನ ಬಣವೆ ಎಂಬುದಾಗಿದೆ.
ಮೆಂತ್ಯ ಕಾಳುಗಳಿಗೆ ಒಂದು ವಿಶೇಷ ಗುಣವಿದೆ. ಅದೆಂದರೆ ಅದರಲ್ಲಿರುವ ಪ್ರತಿಶತ 25ರಷ್ಟು ಆಹಾರಯುತ ನಾರಿನಂಶವು ಬೇರಾವುದೇ ಆಹಾರದಲ್ಲಿ ಮಿಶ್ರಣಗೊಂಡಾಗ ಆ ಆಹಾರದ ಮೂಲ ಸ್ವರೂಪವನ್ನೇ ಬದಲಿಸಿ ಬಿಡುತ್ತದೆ. ಅದಕ್ಕೆ ಮೆಂತ್ಯವನ್ನೇನು ಹೆಚ್ಚು ಬಳಸಬೇಕಿಲ್ಲ, ಸ್ವಲ್ಪವೇ ಬೆರೆಸಿದಾಗ ಇಡೀ ಆಹಾರದ ರುಚಿಯಲ್ಲಿ ಹಾಗೂ ಅದರ ರೂಪದಲ್ಲೂ ಭಿನ್ನತೆಯನ್ನು ಕೊಡಬಲ್ಲದು. ಉದಾಹರಣೆಗೆ ಸ್ವಲ್ಪವೇ ಮೆಂತ್ಯವನ್ನು ದೋಸೆಯ ಹಿಟ್ಟನ್ನು ತಯಾರಿಸಿಕೊಳ್ಳುವಾಗ ಬಳಸುತ್ತೇವಲ್ಲವೇ? ಮೆಂತ್ಯ ರಹಿತವಾಗಿ ಮಾಡಿ ನೋಡಿ ಆಗ ಮೆಂತ್ಯ ಕಾಳು ಇರುವುದರ ವಿಶೇಷತೆ ಅರ್ಥವಾಗುತ್ತದೆ. ಹಾಗೇ ಹೆಚ್ಚು ಮೆಂತ್ಯ ಬಳಸಿ ತಿನ್ನಲೂ ಕಷ್ಟವಾಗುತ್ತದೆ. ಇದನ್ನು ವಿವಿಧ ಸಂಸ್ಕೃತಿಗಳು ಸಾಕಷ್ಟು ವೈವಿಧ್ಯಮಯವಾಗಿ ಬಳಸಿಕೊಂಡಿದ್ದಾರೆ. ತುಸುವೇ ಮೆಂತ್ಯವು ಇಡೀ ಆಹಾರದ ರೂಪ ಹಾಗೂ ರುಚಿಯನ್ನೇ ನಿರ್ಧರಿಸುವಂತೆ ಅದರ ಬಳಕೆಯಿಂದ ಮಾಡುತ್ತಾರೆ. ಇದನ್ನು ಮೆಂತ್ಯದ ಕಾಳುಗಳನ್ನು ನೀರಿಗೆ ಸೇರಿಸುವುದರಿಂದಲೂ ನೀರಿನ ಬಣ್ಣ ಅಥವಾ ರುಚಿಯ ಹಿತವನ್ನು ಭಿನ್ನವಾಗಿ ಪಡೆಯಲು ಸಾಧ್ಯವಿದೆ. ಮೆಂತ್ಯವನ್ನು ರೋಮನ್ನರು ವೈನ್‌ಗೆ ವಿವಿಧ ರುಚಿಯನ್ನು ಕೊಡಲು ಬಳಸುತ್ತಿದ್ದರಂತೆ. ಮೆಂತ್ಯ ಕಾಳುಗಳಿಗೆ ಒಂದು ರೀತಿಯಲ್ಲಿ ಅಂಟುಕೊಡುವ, ಮಿಶ್ರಣಕ್ಕೊಂದು ಭಿನ್ನತೆಯನ್ನು ಕೊಡುವ ಜೊತೆಗೆ ಅದಕ್ಕೊಂದು ಸ್ಥಿತಿಯನ್ನೇ ಕೊಡುವ ಗುಣವಿದೆ. ಇದೆಲ್ಲವೂ ಅದರಲ್ಲಿನ ಪ್ರೊಟೀನ್ ಮತ್ತಿತರ ರಾಸಾಯನಿಕಗಳು ಹೀಗೆ ಅನುವುಗೊಳಿಸುತ್ತವೆ. ಹಾಗಾಗಿಯೇ ಮೆಂತ್ಯದ ಚಟ್ನಿಯಾಗಲಿ, ಮೆಂತ್ಯದ ಹಿಟ್ಟನ್ನು ಅನ್ನಕ್ಕೆ ಬೆರೆಸಿದಾಗಾಗಲಿ, ಆ ವಿಶೇಷ ಮೆರುಗಿನ ರುಚಿಯ ಹಿತವನ್ನು ನಾವು ಚಪ್ಪರಿಸಿ ಆನಂದಿಸುತ್ತೇವೆ.
ಸಾಮಾನ್ಯವಾಗಿ ಮೆಂತ್ಯಗಿಡಗಳು ನೀಳವಾದವು, ಅವುಗಳ ರೆಂಬೆಗಳು ಚದುರಿದಂತೆ ಹರಡಿಕೊಂಡಿರುತ್ತವೆ. ಇದು ಇತರೇ ಲೆಗ್ಯೂಮ್ ಸಸ್ಯಗಳಿಗೆ ಹೋಲಿಸಿದರೆ ಭಿನ್ನವಾದುದು. ಏಕೆಂದರೆ ಇತರೇ ಲೆಗ್ಯೂಮ್‌ಗಳಲ್ಲಿ ಒತ್ತೊತ್ತಾದ ಅಥವಾ ಹಬ್ಬು ರೆಂಬೆಗಳು ಸಹಜವಾಗಿರುತ್ತವೆ. ಬೆಳವಣಿಗೆಯಲ್ಲೂ ಭಿನ್ನವೇ! ಮೆಂತ್ಯವು ತುಂಬಾ ಎತ್ತರವನ್ನೇನೂ ಬೆಳೆಯದು ಹೆಚ್ಚೆಂದರೆ ಒಂದು-ಒಂದೂವರೆ ಅಡಿ. ಅಪರೂಪಕ್ಕೆ ಎರಡರಿಂದ ಮೂರು ಅಡಿ ಎತ್ತರದವೂ ಇರುವುದುಂಟು. ಮೆಂತ್ಯದಲ್ಲಿ ಎಲೆಗಳು ವಿಶೇಷವಾದವು. ಹಾಗೆಯೇ ಎಳೆಯ ರೆಂಬೆ-ಕೊಂಬೆಗಳೂ ಸಹಾ! ತಾಜಾ ಇರುವಾಗ ಹಸಿಯಾಗಿಯೇ ರೆಂಬೆ-ಕೊಂಬೆಗಳ ಸಹಿತ ಎಲೆಗಳನ್ನು ಸವಿಯಬಹುದು. ಉತ್ತರ ಕರ್ನಾಟಕದ ಊಟದಲ್ಲಿ ಎಲೆಗಳುಳ್ಳ ರೆಂಬೆಗಳ ನೇರ ಬಳಕೆಯು ಸಾಮಾನ್ಯವಾದುದು. ಬೇಯಿಸಿಯೂ, ಹುರಿದೂ ಬಳಸುವುದಕ್ಕೆ ಎಲೆಗಳು ಒಗ್ಗಿಕೊಂಡಿವೆ. ಎಲೆಗಳು ಸಾಕಷ್ಟು ಆಹಾರಾಂಶಗಳನ್ನು ಒಳಗೊಂಡಿರುವುದನ್ನು ಮತ್ತು ಅದರ ಉಪಯೋಗಗಳನ್ನೂ ತುಂಬಾ ಹಿಂದಿನಿಂದಲೂ ನಮ್ಮಲ್ಲಿ ತಿಳಿಯಲಾಗಿದೆ. ಎಲೆಗಳಲ್ಲಿ ಪ್ರತಿಶತ 4 ರಿಂದ 5ರಷ್ಟು ಪ್ರೊಟೀನ್, ಸುಮಾರು 1% ಕೊಬ್ಬು ಜೊತೆಗೆ 1.5 % ವಿವಿಧ ಖನಿಜಗಳ ಮಿಶ್ರಣವನ್ನು ಹೊಂದಿದೆ. ಆದ್ದರಿಂದ ಹಸಿರೆಲೆಗಳೂ ಉತ್ತಮ ಆಹಾರ ಪದಾರ್ಥವಾಗಿದ್ದು, ಹಸಿರು ಸೊಪ್ಪಿನ ತರಕಾರಿ ಬಳಕೆಯಾಗಿ ಸಾಮಾನ್ಯವಾಗಿಸಿದೆ.
ಮೆಂತ್ಯದ ಹೂವುಗಳು ಸಾಮಾನ್ಯವಾಗಿ ಬಿಳಿಯ ಬಣ್ಣದವು. ಮಾಸಲು ಹಳದಿಯ ಹಾಗೂ ಕಂದು ಬಣ್ಣದವೂ ಇರುವ ತಳಿಗಳಿವೆ. ಎಳೆಯ ಹೂವುಗಳನ್ನೂ ತಿನ್ನಬಹುದು. ಹೂವುಗಳು ಪರಾಗಸ್ಪರ್ಶಗೊಂಡು ಬಿಡುವ ಕಾಯಿಗಳು ಕುಡುಗೋಲಿನಂತಾ ರೂಪದಲ್ಲಿರುತ್ತವೆ. ಬಾಗಿದಂತೆ ಕಾಣುವ ಕಾಯಿಗಳ ಒಳಗೆ ಬೀಜಗಳು ಒತ್ತೊತ್ತಾಗಿ ಸಾಲು ಜೋಡಣೆಯಲ್ಲಿ ಇರುತ್ತವೆ. ಎಳೆಯ ಕಾಯಿಗಳನ್ನು ಸುಲಭವಾಗಿ ಸುಲಿದು ಕಾಳನ್ನು ಹಾಗೇಯೆ ಸವಿಯಬಹುದು. ಕಡಲೆ, ಹೆಸರು ಕಾಳಿನಂತೆ ಹೆಚ್ಚು ತಿನ್ನಲಾಗದಿದ್ದರೂ ಒಂದಷ್ಟು ಸವಿಯಬಹುದು. ಎಲ್ಲಾ ಲೆಗ್ಯೂಮ್‌ಗಳಂತೆ ಕಾಳು ಬಿಡಿಸುವುದು ಸುಲಭ. ಎಂಟರಿಂದ ಹತ್ತಾರು ಬೀಜಗಳನ್ನು ತೆಳುವಾದ ಸಿಪ್ಪೆಯು ಹೊದ್ದುಕೊಂಡಂತೆ ಕಾಯಿಗಳ ವಿನ್ಯಾಸವಿರುತ್ತದೆ.
ಪ್ರೊಟೀನ್ (24-25%) ಮತ್ತು ನಾರಿನಂಶ(25%)ವುಳ್ಳ ಮೆಂತ್ಯದ ಕಾಳುಗಳ ಔಷಧೀಯ ಮೌಲ್ಯಗಳನ್ನು ಆಯುರ್ವೇದ, ಗ್ರೀಕ್ ಮತ್ತು ಲ್ಯಾಟಿನ್ ಪರಂಪರೆಯ ವೈದ್ಯ ಗ್ರಂಥಗಳಲ್ಲೂ ಉಲ್ಲೇಖಿಸಲಾಗಿದೆ. ಆಧುನಿಕ ವೈದ್ಯ ಪದ್ಧತಿಯೂ ಸಹಾ ಉಸಿರಾಟದ ತೊಂದರೆಗೆ ಹಾಗೂ ಜೀರ್ಣಶಕ್ತಿಯ ಸಂಬಂಧದಲ್ಲಿ ಇದರ ಬಳಕೆಯನ್ನು ಪ್ರೋತ್ಸಾಹಿಸುತ್ತದೆ. ಪ್ರಮುಖವಾಗಿ ಗಂಟಲು ಕಫದಿಂದ ಮುಕ್ತವಾಗಲು, ಹಾಗೂ ವಾಯುವಿನ ಸಮಸ್ಯೆಯ ಪರಿಹಾರಕ್ಕೆ ಇದರಿಂದ ಉಪಶಮನವನ್ನು ಕಂಡುಕೊಳ್ಳಬಹುದಾಗಿದೆ. ಪ್ರಾಚೀನ ಈಜಿಪ್ಟಿನಲ್ಲಿ ಮೆಂತ್ಯವನ್ನು ಹೆರಿಗೆಯನ್ನು ಸುಗಮವಾಗಿಸಲು ಬಳಸುತ್ತಿದ್ದರು. ಜೊತೆಗೆ ಹೆರಿಗೆಯ ನಂತರದಲ್ಲಿ ತಾಯಿಯ ಹಾಲು ವೃದ್ಧಿಗಾಗಿಯೂ ಬಳಕೆಯಾಗುತ್ತಿತ್ತು. ಇಂದಿಗೂ ಸಹಾ ಈಜಿಪ್ಟಿನ ಮಹಿಳೆಯರು ಋತುಸ್ರಾವದ ಸಂದರ್ಭದಲ್ಲಿನ ಕೆಲಹೊಟ್ಟೆಯ ಸೆಳೆತಕ್ಕೆ ಪರಿಹಾರವಾಗಿ ಬಳಸುತ್ತಿದ್ದಾರೆ. ಇದೇ ಬಗೆಯ ಬಳಕೆಯು ನಮ್ಮ ರಾಜ್ಯದ ಅನೇಕ ಕಡೆಗಳಲ್ಲಿ ಮೆಂತ್ಯದ ಮುದ್ದೆಯನ್ನು ತಯಾರಿಸಿ ತುಪ್ಪದ ಜೊತೆಗೆ ಬಳಸುವುದನ್ನು ಕಾಣುತ್ತೇವೆ. ಸಾಮಾನ್ಯವಾಗಿ ಹೆಣ್ಣು ಮಕ್ಕಳು ಋತುಮತಿಯರಾಗಿ ಯೌವನಕ್ಕೆ ಕಾಲಿಟ್ಟಾಗ ಅವರಿಗೆ ಮೆಂತ್ಯದ ಬಳಕೆಯ ಬಗೆಗೆ ಹೇಳುವುದನ್ನು ಕೇಳಿರಬಹುದು. ನಮ್ಮ ರಾಜ್ಯದಲ್ಲಿರುವ ಈ ಬಗೆಯ ಬಳಕೆಯ ಮಾದರಿಯಂತೆಯೇ ಟರ್ಕಿಯಲ್ಲಿಯೂ ಸಹಾ ಮೆಂತ್ಯದ ಹಿಟ್ಟಿನ್ನು ಮುದ್ದೆಯಂತೆ ಮಾಡಿ ಬೆಣ್ಣೆಯ ಜೊತೆಗೆ ಋತುಸ್ರಾವದ ಸಮಯದ ಕಿಬ್ಬೊಟ್ಟೆಯ ನೋವಿಗೆ ಕೊಡುತ್ತಾರೆ.
ಹೊಟ್ಟೆಯ ನೋವಿಗೆ ನಿವಾರಕವಾಗಿ ಮೆಂತ್ಯದ ಚಹಾ ಮಾದರಿಯ ಪೇಯವನ್ನು ಈಜಿಪ್ಟ್ ಹಾಗೂ ಚೀನಾದಲ್ಲಿ ಬಳಸಲಾಗುತ್ತಿದೆ. ಭಾರತೀಯ ಮೂಲದಲ್ಲೂ ವಿವಿಧ ಸಂಸ್ಕೃತಿಗಳು ಹೊಟ್ಟೆಯ ನೋವು ನಿವಾರಕವಾಗಿ ಮೆಂತ್ಯದ ಕಾಳನ್ನು ನೆನೆಯಿಸಿ ಅಥವಾ ಮೊಳಕೆ ಬರಿಸಿ ಉಪಯೋಗಿಸುವುದುಂಟು. ಭಾರತದಲ್ಲಿ ತಾಜಾ ಎಲೆಗಳನ್ನು ವಿವಿಧ ಬಗೆಗಳಲ್ಲಿ ಬಳಸುವುದನ್ನು ಈ ಅನೇಕ ಸಮಸ್ಯೆಗಳ ಪರಿಹಾರ್ಥವಾಗಿಯೂ ಜೊತೆಗೆ ಉತ್ತಮ ಆಹಾರಾಂಶದ ಪೂರೈಕೆಯ ಹಿತದಿಂದಲೂ ಬಳಸಲಾಗುತ್ತದೆ. ಯೂರೋಪು ಹಾಗೂ ಮೆಡಿಟರೇನಿಯನ್ ಪ್ರದೇಶಗಳಲ್ಲಿ ಬ್ರೆಡ್ ಹಾಗೂ ಚೀಜ್‌ಗೆ ರುಚಿಯನ್ನು ಕೊಡಲು ಬಳಸುತ್ತಾರೆ. ಸೂಪ್ ಮತ್ತಿತರ ಆಹಾರ ಪದಾರ್ಥಗಳಲ್ಲೂ ಮಸಾಲೆಯ ಮಿಶ್ರಣವಾಗಿಯೂ ಮೆಂತ್ಯದ ಬಳಕೆಯು ಜನಜನಿತ. ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಕಡಿಮೆಗೊಳಿಸಲು ಮೆಂತ್ಯದ ಬಳಕೆಯನ್ನು ಪ್ರೋತ್ಸಾಹಿಸುವ ಸಂಶೋಧನೆಗಳು ನಡೆದಿವೆ. ಇದನ್ನು ಇನ್ಸುಲಿನ್‌ಗೆ ಪರ್ಯಾವಾಗಿ ಬಳಸುವಂತಹಾ ಮಾದರಿಗಳ ವಿವರಗಳನ್ನು ದಾಖಲೆಗಳಲ್ಲಿ ಕಾಣಬಹುದು.
ಬಹಳ ಮುಖ್ಯವಾಗಿ ಹಾಲುಣಿಸುವ ತಾಯಂದಿರಲ್ಲಿ ಮೆಂತ್ಯದ ಬಳಕೆಯನ್ನು ಅನೇಕ ಸಂಸ್ಕೃತಿಗಳು ಪ್ರೋತ್ಸಾಹಿಸಿವೆ. ಇದನ್ನೇ ತೀವ್ರವಾಗಿ ಗಮನಿಸಿದ ಹಲವು ಸಂಶೋಧನಾ ಅಧ್ಯಯನಗಳು ಲಭ್ಯವಿವೆ. ಎದೆಯ ಹಾಲು ಸ್ರವಿಸುವ ಗ್ರಂಥಿಗಳು ರೂಪಾಂತರಗೊಂಡ ಬೆವರನ್ನು ಸ್ರವಿಸುವ ಗ್ರಂಥಿಗಳೇ ಆಗಿವೆ. ಮೆಂತ್ಯವನ್ನು ಬಳಸುವುದರಿಂದ ಬೆವರನ್ನು ಉತ್ಪಾದಿಸುವ ಗ್ರಂಥಿಗಳಲ್ಲಿ ಹೆಚ್ಚು ಉತ್ತೇಜಿತವಾಗುವುದನ್ನು ಅಧ್ಯಯನಗಳು ಸಾಬೀತು ಪಡಿಸಿವೆ. ಹಾಗಾಗಿ ಮೆಂತ್ಯದ ಸೇವನೆಯು ಹೆಚ್ಚು ಬೆವರಿನ್ನು ಉತ್ಪಾದಿಸುವಂತೆ ಮಾಡುತ್ತದೆ. ಇದೇ ರಾಸಾಯನಿಕವು ಹಾಲಿನ ಉತ್ಪಾದನೆಯನ್ನೂ ಉತ್ತೇಜಿಸಬಲ್ಲ ಗುಣವನ್ನೂ ಹೊಂದಿರುವುದು ತಿಳಿದು ಬಂದಿದೆ. ಮೆಂತ್ಯವನ್ನು ಸೇವಿಸಿದ ಮೂರು ದಿನಗಳ ಒಳಗಾಗಿ ಹಾಲಿನ ಸ್ರವಿಸುವಿಕೆಯು ಹೆಚ್ಚಾದ ಬಗೆಗೆ ಅಧ್ಯಯನಗಳು ತಿಳಿಸುತ್ತವೆ. ಅದೇ ಬಗೆಯಲ್ಲಿ ಆಡಿನ ಹಾಲಿನ ಉತ್ಪಾದನೆಯ ಕುರಿತಾದ ಸಂಶೋಧನೆಯೊಂದು ಸೌದಿ ಅರೇಬಿಯಾದ ವಿಶ್ವವಿದ್ಯಾಲಯದಲ್ಲಿ ನಡೆಸಲಾಗಿತ್ತು. ಸುಮಾರು ಮೂರು ವಾರಗಳ ಕಾಲ ಮೆಂತ್ಯದ ಕಾಳು ಮತ್ತು ಮೆಂತ್ಯದ ಗಿಡಗಳನ್ನು ಆಡುಗಳಿಗೆ ತಿನ್ನಿಸಿ ಆಡಿನ ಹಾಲಿನ ಉತ್ಪಾದನೆ ಮತ್ತು ಅದರಲ್ಲಿ ಕೊಬ್ಬಿನ ಪ್ರಮಾಣವನ್ನು ಅಳೆದು ಎರಡರಲ್ಲೂ ಹೆಚ್ಚಳವಾಗುವುದನ್ನು ಸಂಶೋಧನಾ ಪ್ರಬಂಧದಲ್ಲಿ ಪ್ರಕಟಿಸಲಾಗಿದೆ. ಒಟ್ಟು 9 ವಾರಗಳ ಕಾಲ ಆಡುಗಳ ಆಹಾರದಲ್ಲಿ ಪ್ರತಿಶತ 25 ರಷ್ಟು ಮೆಂತ್ಯದ ಬಳಕೆಯಿಂದ ಹಾಲಿನ ಉತ್ಪಾದನೆಯ ಮೇಲೆ ಉತ್ತಮ ಪರಿಣಾಮ ಬೀರಿರುವುದನ್ನು ಕಾಣಲಾಗಿದೆ. ಮೊಲೆಯುಣಿಸುವ ತಾಯಂದಿರಿಗೆ ಮೆಂತ್ಯದ ಸಾರು, ಮೆಂತ್ಯದ ಚಟ್ನಿ, ಮೆಂತ್ಯದ ಹಿಟ್ಟು-ತುಪ್ಪ ಬೆರೆಸಿದ ಅನ್ನ ಸಾಮಾನ್ಯವಾದ ಆಹಾರವಾಗಿರುವುದು ತಿಳಿದೇ ಇದೆ.
ದೇಹದ ಆರೋಗ್ಯ ವೃದ್ಧಿಗೆ ರೋಗ ನಿರೋಧಕ ಗುಣವನ್ನು ಹೆಚ್ಚಿಸಲು ಮೆಂತ್ಯವು ಉಪಕಾರಿಯಾದ ಕಾಳು. ಇದರ ಹಸಿರೆಲೆಯೂ ಸೇರಿದಂತೆ, ಕಾಳುಗಳನ್ನು ಹಿತ-ಮಿತವಾಗಿ ಬಳಸುವುದರಿಂದ ಪ್ರಸ್ತುತ ಸಂದರ್ಭದಲ್ಲಿ ಕರೋನ ವೈರಸ್ಸಿನ ಸೋಂಕಿಗೆ ಪ್ರತಿರೋಧವನ್ನು ಹೆಚ್ಚಿಸಿಕೊಳ್ಳಬಹುದು. ಹಲವಾರು ಅಧ್ಯಯನಕಾರರು ಮೆಂತ್ಯವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯವಾಗುವ ಸಂಶೋದನಾ ವರದಿಗಳನ್ನು ಪ್ರಕಟಿಸಿದ್ದಾರೆ. ಕೇವಲ ಮೆಂತ್ಯದ ಕಾಳನ್ನು ನೆನೆಸಿದ ನೀರನ್ನು ಬಳಸುವುದರಿಂದಲೂ ಲಾಭಗಳು ದೊರಕಲಿವೆ. ಮೆಂತ್ಯವನ್ನು ನೀರಿನಲ್ಲಿ ಬೆರೆಸಿ ತಯಾರಿಸಿದ ಕಷಾಯವೂ ಇನ್ನೂ ಲಾಭದಾಯಕ. ಸರಿ ಸುಮಾರು ಎರಡು-ಮೂರು ವಾರಗಳ ನಿರಂತರ ಸೇವನೆಯಿಂದ ಸಾಕಷ್ಟು ಪರಿಣಾಮ ಬೀರಿರುವ ಸಂಶೋಧನಾ ಅಧ್ಯಯನಗಳು ಹಲವಾರು ಕಡೆಗಳಲ್ಲಿ ನಡೆದಿವೆ.
ಮೆಂತ್ಯದ ಕಾಳುಗಳಲ್ಲಿ ಸಾಕಷ್ಟು ನಾರಿನಂಶವು ಇದೆ. ಅದರ ಜೊತೆಗೆ ಎರಡು ಬಗೆಯ ಸಕ್ಕರಯಿಂದಾದ ಅಂಟೂ ಸಹಾ ಇದರಲ್ಲಿ ಇದೆ. ಇವುಗಳಲ್ಲಿ ಒಂದು ಬಗೆಯು, ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಕಡಿಮೆಗೊಳಸಲು ಸಹಾಯ ಮಾಡುವ ಬಗ್ಗೆ ಅಧ್ಯಯನಗಳಾಗಿವೆ. ಪ್ರತೀ ೨೦ ಕಿಲೋ ದೇಹತೂಕಕ್ಕೆ ಒಂದು ಗ್ರಾಂ ಕಾಳಿನಂತೆ ದಿನವೂ ಸೇವಿಸುವುದು ಮಧುಮೇಹಿಗಳಿಗೆ ಅನುಕೂಲಕರ. ಇದು ರಕ್ತದಲ್ಲಿ ಸಕ್ಕರೆಯು ಸಂಗ್ರಹವಾಗುವ ಮಿತಿಯನ್ನು ಕಾಪಾಡುವಲ್ಲಿ ಸಹಾಯವಾಗುವುದನ್ನು ದಾಖಲಿಸಿವೆ. ಮೆಂತ್ಯವು ಸೆಪಾನಿನ್‌ಗಳೆಂಬ (Saponins) ರಾಸಾಯನಿಕ ಸಂಯುಕ್ತಗಳನ್ನು ಒಳಗೊಂಡಿದ್ದು ಇವುಗಳು ಕೊಬ್ಬನ್ನು ಕರಗಿಸುವಲ್ಲಿ ಸಹಾಯ ಮಾಡುತ್ತವೆ. ಅದರಲ್ಲೂ ಮಧುಮೇಹಿಗಳ ರಕ್ಕದಲ್ಲಿರುವ ಕೊಬ್ಬನ್ನು ಕರಗಿಸುವಲ್ಲಿ ಹೆಚ್ಚಿನ ಲಾಭಗಳನ್ನು ಒದಗಿಸುತ್ತವೆ. ಇದರಿಂದಾಗಿ ರಕ್ತದ ಕೊಲೆಸ್ಟೆರಾಲ್‌ಅನ್ನು ಮಿತವಾಗಿಸುವ ಉಪಾಯದಲ್ಲೂ ಮೆಂತ್ಯದ ಕಾಳುಗಳ ಬಳಕೆಯು ಸಹಾಯವಾಗಬಲ್ಲದು. ಮೆಂತ್ಯದ ಕಾಳುಗಳನ್ನು ನೆನೆಯಿಸಿ ಮೊಳಕೆ ಬರಿಸಿ ಬಳಸುವುದರಿಂದ ಹೆಚ್ಚಿನ ಲಾಭಗಳಿವೆ. ಆಕ್ಸೈಡು ನಿರೋಧಕತೆಯ ರಾಸಾಯನಿಕಗಳು ಮೊಳೆತ ಅಥವಾ ನೆನೆಯಿಸಿದ ಕಾಳಿನಲ್ಲಿ ಹೆಚ್ಚು ಕ್ರಿಯಾಶೀಲವಾಗಿತ್ತವೆ. ಆದರೂ ಹೆಚ್ಚು ಮೆಂತ್ಯೆಯ ಬಳಕೆಯು ಕೆಲವರಲ್ಲಿ ಅಲರ್ಜಿ ಮುಂತಾದ ಸಮಸ್ಯೆಗಳಿಗೂ ಕಾರಣವಾಗಬಹುದು. ಅಷ್ಟಕ್ಕೂ ಹೆಚ್ಚು ತಿನ್ನಲು ಸಾಧ್ಯವಾದರೇ ತಾನೆ. ಹಿತ ಮಿತವಾದ ಬಳಕೆಯು ನಿಜಕ್ಕೂ ಆರೋಗ್ಯಕಾರಿ.
ಮೆಂತ್ಯವು ಮಾನವ ಸಮುದಾಯಗಳು ಗುರುತಿಸಿರುವ ಅತ್ಯಂತ ಹಳೆಯ ಔಷಧಯುತ ಆಹಾರ ಧಾನ್ಯಗಳಲ್ಲಿ ಒಂದು. ಇದಕ್ಕೆ ಸಾಂಬಾರು ಪದಾರ್ಥದ ಗುಣವಿರುವುದರಿಂದ ವಿವಿಧ ಖಾದ್ಯಗಳಲ್ಲಿ ರುಚಿಯನ್ನು ಹೆಚ್ಚಿಸುವ, ರೂಪಾಂತರಿಸುವ ಕಾರಣದಿಂದ ಹೆಸರು ಮಾಡಿದೆ. ಕಾಳುಗಳಲ್ಲಿರುವ ಉತ್ತಮ ನಾರಿನಂಶದ ಜೊತೆಗೆ ಪಾಸ್ಪೊಲಿಪಿಡ್(Phospholipids)ಗಳು, ಗ್ಲೈಕೊಲಿಪಿಡ್ (Glycolipids)ಗಳು, ಜೊತೆಗೆ ಅಮೈನೋ ಆಮ್ಲಗಳಾದ ಒಲಿಯಿಕ್ ಆಮ್ಲ(Oleic acid), ಲಿನೊಲೆನಿಕ್ ಆಮ್ಲ(Linolenic acid), ಲಿನೊಲೆಯಿಕ್ ಆಮ್ಲ(Linoleic acid), ಹಿಸ್ಟಿಡಿನ್ (Histidine) ಹಾಗೂ ವಿಟಮಿನ್ನುಗಳಾದ A, B1, B2, C, ನಿಯಾಸಿನ್(Niacin)ಗಳು, ಧಾರಾಳವಾಗಿದ್ದು ನಮ್ಮ ನಾಲಿಗೆಯನ್ನೂ ದೇಹ ಪೋಷಣೆಯನ್ನೂ ನಿರಂತವಾಗಿ ಮಾಡುತ್ತಿವೆ. ಇವುಗಳೆಲ್ಲದೆ ಕೆಲವೊಂದು ಉಪಕಾರಿ ಮೂಲವಸ್ತುಗಳೂ ಸೇರಿಕೊಂಡು ಮೆಂತ್ಯವನ್ನು ಬೇಳೆ-ಕಾಳುಗಳಲ್ಲಿ ವಿಶೇಷವಾದ ಸಸ್ಯವನ್ನಾಗಿವೆ. ಇದನ್ನು ಬೆಳೆಯುವುದೂ ಸುಲಭ. ಹೆಚ್ಚು ನೀರನ್ನೂ ಬೇಡುವುದಿಲ್ಲ, ಸುಲಭವಾಗಿ ಮೊಳೆತು ನೆಲಕ್ಕೆ ಆತುಕೊಂಡು ಬೆಳೆಯುತ್ತದೆ. ಅತೀ ಹೆಚ್ಚು ಫಲವತ್ತತೆಯನ್ನೂ ಬೇಡದೆ, ಬಂಜರುಗಳಲ್ಲೂ ಬೆಳೆಯಬಹುದು. ಬರಿ ಮಾನವ ಉಪಯೋಗಕ್ಕೆ ಮಾತ್ರವಲ್ಲದೆ, ಮಾನವ ಸಮುದಾಯದ ಒಡನಾಡಿ ದನ-ಕರುಗಳಿಗೂ ಉತ್ತಮ ಮೇವು ಹಾಗೂ ಆಹಾರಾಂಶಗಳನ್ನು ಒದಗಿಸುವ ಮೇವು ಕೂಡ. ಈ ಎಲ್ಲಾ ಸಾಧ್ಯತೆಗಳಿಂದ ಮೆಂತ್ಯವೊಂದು ವಿಶೇಷ ಮಾನವ ಒಡನಾಡಿ ಸಸ್ಯವಾಗಿ ಸಹಸ್ರಾರು ವರ್ಷಗಳ ಸಾಹಚರ್ಯವನ್ನು ಒದಗಿಸಿದೆ.
ಮಾನವ ಒಡನಾಟವನ್ನು ಸಹಸ್ರಾರು ವರ್ಷಗಳ ಕಾಲ ಸವೆಸಿಯೂ ಅಂತಹಾ ಹೆಚ್ಚು ಆಸಕ್ತಿಯನ್ನು ಈ ಬೆಳೆಯು ಪಡೆಯದೇ ವಂಚಿತವಾಗಿದೆ. ಎಲ್ಲಾ ತಿಳಿವಳಿಕೆಗಳೂ ಅಂದಾಜುಗಳಲ್ಲಿ, ಸಾಂಸ್ಕೃತಿಕ ಕೊಡುಕೊಳ್ಳುವಿಕೆಗಳಲ್ಲಿ ಹರಿದು ಹಂಚಿವೆ. ಸಾಕಷ್ಟು ಭೌಗೋಳಿಕ ಹಂಚಿಕೆಯನ್ನು ಪಡೆದಿರುವುದರಿಂದ ಅರಿತಿರಬಹುದಾಗಿದ್ದ ವಿವಿಧತೆಗಳೂ ಈ ಸಸ್ಯದ ಬಗೆಗೆ ಅಪರೂಪ. ಇರುವ ತಳಿಗಳಲಾಗಲಿ, ನಿರ್ವಹಿಸಿಕೊಂಡು ಬಂದ ದಾಸ್ತಾನಾಗಲಿ, ಆಯಾ ಸ್ಥಳಿಯತೆಯ ಹಿತದಿಂದಷ್ಟೇ ಇದ್ದು, ವ್ಯಾಪಕವಾದ ಉಪಕಾರಗಳನ್ನು ಅರಿಯಲು ಹೆಚ್ಚಿನ ಅನಿವಾರ್ಯತೆಗಳಿವೆ.
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್
ನಮ್ಮಲ್ಲಿ ಯಾವುದೇ ಆಹಾರ ಪದಾರ್ಥಗಳು ಇರಲಿಲ್ಲವೇ ಬಿ ಜಿ ಎಲ್ ಸ್ವಾಮಿ ಮತ್ತು ಹಲವರು ಸಸ್ಯ ಮತ್ತು ಆಹಾರ ಮೂಲ ಹೇಳುವಾಗ ಬೇರೆ ದೇಶದಿಂದ ಬಂದಿದೆ ಎಂದು ಹೇಳುತ್ತಾರೆ. ಇದಕ್ಕೆ ನಿಖರವಾದ ಆಧಾರ ಇದೆಯೇ. ಅಥವಾ ಇದೆಲ್ಲ ಕೊಲೋನಿಯಲ್ ಹುನ್ನಾರವೇ.
ನಿಮ್ಮ ಲೇಖನ ಚೆನ್ನಾಗಿದೆ. ಆದರೆ ಮೂಲದ ಬಗ್ಗೆ ನನ್ನ ಆಕ್ಷೇಪ.
Nice
ನಿಮ್ಮ ಈ ಲೇಖನ ತುಂಬಾ ಚೆನ್ನಾಗಿದೆ. ಈ ಸೊಪ್ಪು ಸಲಾಡ್ ಆಗಿಯೂ ಮತ್ತಲ್ಲದೆ ಪಲಾವಿಗೆ, ಕಾಳಿನ ಜೊತೆಗೂಡಿದ ಪಲ್ಯವಾಗಿಯೂ ಹೊಟ್ಟೆಗೂ ನಾಲಿಗೆಗೂ ತಂಪೆರೆಯುವ ಸೊಪ್ಪು soothing.. ಇದರ ಕಾಳಿನ ಕಹಿಯಿಂದಾಗೇ ಆಯುರ್ವೇದೀಯ ಗುಣಗಳು ಮೇಳೈಸಿರಬೇಕು. ನೀವು ಹಾಕಿದ ತಟ್ಟೆ ಊಟದ ಚಿತ್ರ ಉತ್ತರಕರ್ನಾಟಕ ದ ಖಾನಾವಳಿಯ ನೆನಪಿಸಿದೆ. ಮೆಂತೆ ಎನ್ನುವ ಶಬ್ದವೇ ಸುಶ್ರಾವ್ಯ..
ನಮ್ಮ ಅಜ್ಜಿ ಮಾಡುತ್ತಿದ್ದ,ಅಮ್ಮ ಮಾಡುವ ಮೆಂತೆಹಿಟ್ಟಿನ ಗೊಜ್ಜು, ಜೊತೆಗೆ ಬಿಸಿ ಬಿಸಿ ರಾಗಿ ಮುದ್ದೆ…ವಾವ್ ತಿಂದು ನೋಡಬೇಕು.ಲೇಖನ ಚೆನ್ನಾಗಿದೆ. ಅಭಿನಂದನೆಗಳು
ಉಪಯುಕ್ತ ಮಾಹಿತಿಯ ಲೇಖನ. ನಮ್ಮ ಕರಾವಳಿಯಲ್ಲಿ ಉಷ್ಣ ದೇಹಕ್ಕೆ ತಂಪು ನೀಡಲು ಮೆಂತ್ಯದ ಗಂಜಿಯನ್ನು ಸೇವಿಸುವ ವಾಡಿಕೆ ಇದೆ. ಅಕ್ಕಿಯ ಜತೆ ಒಂದೆರಡು ಚಮಚ ಮೆಂತ್ಯ ಕಾಳುಗಳನ್ನು ಸೇರಿಸಿ ಮಾಡಿದ ಗಂಜಿಗೆ ತೆಂಗಿನ ಹಾಲು ಮತ್ತು ಬೆಲ್ಲ ಸೇರಿಸುತ್ತಾರೆ. ಮೆಂತ್ಯ ಸುವಾಸನೆಯೊಂದಿಗೆ ಸಿಹಿಯಾಗಿರುವ ಮೆಂತ್ಯದ ಗಂಜಿ ಸೇವನೆಗೆ ಹಿತವಾಗಿರುತ್ತದೆ.