You are currently viewing ಬದುಕು ಬದಲಿಸಿದ ಇಲೆಕ್ಟ್ರಾನಿಕ್ಸ್‌

ಬದುಕು ಬದಲಿಸಿದ ಇಲೆಕ್ಟ್ರಾನಿಕ್ಸ್‌

ಇತ್ತೀಚೆಗೆ ಅಳುವ ಪುಟ್ಟ ಮಕ್ಕಳ ಕೈಯಲ್ಲೂ ಕೂಡ ಮೊಬೈಲನ್ನು  ಕೊಟ್ಟು ಸುಮ್ಮನಾಗಿಸುವುದನ್ನು ಕಾಣುತ್ತಿದ್ದೇವೆ.. ಅದರ ಜೊತೆಗೆ ಶಾಲಾ-ಕಾಲೇಜುಗಳಲ್ಲಿ ಓದುವ ದೊಡ್ಡ ಮಕ್ಕಳಿಗೆ, “ಅದೇನು? ಯಾವಾಗಲೂ ಕೈಯಲ್ಲಿ ಮೊಬೈಲ್‌ ಹಿಡಿದುಕೊಂಡು…ಟೈಮ್‌ ವೇಸ್ಟ್‌ ಮಾಡೋದು” ಎನ್ನುವ ಪೋಷಕರನ್ನೂ ಸಹಾ! ಈ ಎರಡೂ ವರ್ತನೆಗಳು ಕಳೆದ ಎರಡು-ಮೂರು ದಶಕಗಳಲ್ಲಿ ಆದ ಬಹು ದೊಡ್ಡ ಬದಲಾವಣೆಗಳು. ಮೊಬೈಲ್‌ ಫೋನ್‌ ಕೈಗೆ ಬಂದು ಈಗಾಗಲೇ ಹಳೆಯದಾಗಿದೆ. ಮೊಬೈಲು ಇಲ್ಲದಿರುವ ನಾಗರಿಕರೇ ಅಪರೂಪ ಎನ್ನುವಂತೆಯೂ ಆಗಿದೆ. ಅನೇಕ ದಿನನಿತ್ಯದ ಆಗು-ಹೋಗುಗಳಿಗೆ ಮೊಬೈಲಿನ ಮೇಲೆ ನಂಬಿಕೊಂಡ ಸಂಸ್ಕೃತಿಯು ಸೃಷ್ಟಿಯಾಗುತ್ತಿದೆ. ಕ್ಯಾಮೆರಾ, ರೇಡಿಯೊ, ಟಿವಿ, ಕ್ಯಾಲುಕ್ಯುಲೇಟರ್‌, ಫೋನ್‌ ನಂಬರಿನ ದಾಖಲೆಗಳು, ಅಷ್ಟೆ ಅಲ್ಲ, ಆಸ್ತಿ-ಪಾಸ್ತಿಯ ಕಾಗದ ಪತ್ರಗಳ ಇಮೇಜುಗಳು, ಹೀಗೆ.., ಏನೇ ಅಂದರೂ ಅವೆಲ್ಲವನ್ನೂ ಮೊಬೈಲ್‌ ಒಂದೇ ನಿಭಾಯಿಸುವಷ್ಟು ಮಾನವರ ಬದುಕು ಬದಲಾಗತೊಡಗಿದೆ. ಬಹುಶಃ ಮೊಬೈಲ್‌ ಫೋನ್‌ ಅತ್ಯಂತ ಜನಪ್ರಿಯವಾದ ಇಲೆಕ್ಟ್ರಾನಿಕ್‌ ಉಪಕರಣ. ಅದಿಲ್ಲದೇ ಬದುಕೇ ಇಲ್ಲವೇನೋ ಎನ್ನುವಷ್ಟು ಅದರ ಅವಶ್ಯಕತೆಯು ಅನಿವಾರ್ಯವಾಗಿದೆ.  

       ಇಲೆಕ್ಟ್ರಾನಿಕ್ಸ್‌ ಎನ್ನುವುದು ಕಳೆದ ಶತಮಾನದ ಬಹು ಮುಖ್ಯವಾದ ಆವಿಷ್ಕಾರವಾಗಿದೆ. ಅದರ ಬಾಹುಗಳು ಕೇವಲ ಮೊಬೈಲ್‌ ಅಲ್ಲ, ತೀವ್ರ ಕಾಯಿಲೆಯಲ್ಲಿ ನರಳುವ ರೋಗಿಯ ದೇಹದ ಒಳಗಿನ ಯಾವುದೋ ಅಂಗದ ಸರ್ಜರಿಯಲ್ಲೂ ಪ್ರಭಾವಿಸಿ ಸೇರಿಕೊಂಡಿದೆ. ಗೃಹ ಬಳಕೆಯ ಅನೇಕ ಉಪಕರಣಗಳ ವಿನ್ಯಾಸಗಳನ್ನೂ ಇಲೆಕ್ಟ್ರಾನಿಕ್ಸ್‌ ಆವರಿಸಿ ಅವುಗಳ ಉತ್ಪಾದನೆ, ಹಂಚಿಕೆ, ಮಾರಾಟ ಮುಂತಾದ ವಹಿವಾಟುಗಳಲ್ಲೂ ದಿನನಿತ್ಯದ ಜೀವನವನ್ನು ಪ್ರಭಾವಿಸತೊಡಗಿ ದಶಕಗಳೇ ಕಳೆದಿವೆ. ಆದ್ದರಿಂದ ಇಲೆಕ್ಟ್ರಾನಿಕ್ಸ್‌ನಿಂದ ಒದಗುವ ಸೇವೆಯನ್ನು ಬಿಟ್ಟಿರಲಾರದಷ್ಟು ಹೊಂದಿಕೊಂಡಿದ್ದೇವೆ. ಸಣ್ಣ-ಪುಟ್ಟ ರಿಪೇರಿಗಳೂ, ದೈನಂದಿನ ಅಗತ್ಯಗಳು ಒಂದಿಲ್ಲೊಂದು ಇಲೆಕ್ಟ್ರಾನಿಕ್ಸ್‌ನ ಆವಿಷ್ಕಾರದ ಹಿನ್ನೆಲೆಯಲ್ಲಿ ಉತ್ಪಾದನೆಗೊಂಡ ಅಥವಾ ಪರಿಕಲ್ಪನೆಗೊಂಡ ಸಂದರ್ಭ ಇಂದಿನದು. ಇದರಿಂದ ಅನೇಕ ಮಾರುಕಟ್ಟೆ ಆಧಾರಿತ ವಹಿವಾಟುಗಳು ತೀರಾ ಸರಳವಾಗಿ ಇಲೆಕ್ಟ್ರಾನಿಕ್ಸ್‌ನ ಭಾಷೆಯಲ್ಲಿ ವ್ಯವಹರಿಸಬೇಕಾಗಿರುವುದು ಅನಿವಾರ್ಯವಾಗಿದೆ. ಇಲೆಕ್ಟ್ರಾನಿಕ್ಸ್‌ ಭಾಷೆ ಎನ್ನುವುದೇನೂ ನಾವು ಆಡುವ ಮಾತಿನಂತಹದಲ್ಲ ನಿಜ, ಆದರೆ, ಸಿಮ್‌, ಛಾರ್ಜರ್, ಕ್ಯಾಪಿಸಿಟರ್‌, ಸ್ವಿಚ್‌, ಸಾಲ್ಡರಿಂಗ್‌, ಬೋರ್ಡ್‌, ಮುಂತಾದ ಪದಗಳ ಬಳಕೆಯಿಂದ ರಿಪೇರಿ, ವಹಿವಾಟು ಮುಂತಾದ ಕಾರ್ಯಾಚರಣೆಯಲ್ಲಿ ದಿನವೂ ಅನಿವಾರ್ಯವಾಗಿ ಮನ್ನೆಡೆಯಿಸಬೇಕಾದ ತುರ್ತು ಮಾನವ ಕುಲಕ್ಕೆ ಬಂದಾಗಿದೆ.

ಒಂದು ಕಾಲದ ಗಾಜಿನ ಬಿರಡೆಯಲ್ಲಿ ಶಾಖ ಬೀರುತ್ತಾ ಹೊಳೆಯುತ್ತಿದ್ದ ಪ್ರಖರವಾದ “ಇನ್‌ಕ್ಯಾಂಡಿಸೆಂಟ್‌” ಬಲ್ಬುಗಳ ಜಾಗದಲ್ಲಿಂದು ಅವುಗಳಿಗಿಂತಲೂ ತಂಪಾದ “ಲೇಸರ್‌” ಬಲ್ಬುಗಳು ಬಂದು, ಬೆಳಕನ್ನು ಹೆಚ್ಚಿಸಿ, ವೆಚ್ಚವನ್ನು ತಗ್ಗಿಸಿವೆ. ಇದೊಂದು ಪುಟ್ಟ ಉದಾಹರಣೆಯಷ್ಟೆ. ಅಲ್ಲಿಂದ ಮುಂದೆಯೂ ಇಲೆಕ್ಟ್ರಾನಿಕ್ಸ್‌ ತನ್ನ ಬಾಹುಗಳನ್ನು ಚಾಚಿ ಎಲ್ಲೆಲ್ಲಿ ಯಾಂತ್ರಿಕತೆಯು ಸಾಧ್ಯವೋ ಅಲ್ಲೆಲ್ಲಾ, ಇಲೆಕ್ಟ್ರಾನಿಕ್ಸ್‌ ಆವರಿಸಿ ಮೆಕಾನಿಕಲ್‌ ಎನ್ನುವುದು ಮೆಕಾಟ್ರಾನಿಕ್ಸ್‌ ಆಗಿದೆ. ಕಂಪ್ಯೂಟರಿನ ಒಳಮೈಯ ಕಸುವೆಲ್ಲವೂ ಇಲೆಕ್ಟ್ರಾನುಗಳ ಸಂವಹನದಲ್ಲಿಯೂ ಅವುಗಳ ವೇಗೋತ್ಕರ್ಷದ ಜೊತೆಗೆ ಸಮೀಕರಣಗೊಂಡು ಅಂತರ್ಜಾಲವನ್ನೆಲ್ಲಾ ಆವರಿಸಿದೆ. ಅಂತರ್ಜಾಲವು ಅಕ್ಷರಶಃ ಎಲ್ಲವನ್ನೂ ಆವರಿಸಿ ನಮ್ಮ ಇಡೀ  ಬದುಕನ್ನು ಆವರಿಸಿ ಅನೇಕಾನೇಕ ಉದ್ಯಮ-ವಹಿವಾಟುಗಳನ್ನು ಆಳುತ್ತಿರುವಲ್ಲಿ ಇಲೆಕ್ಟ್ರಾನಿಕ್ಸ್‌ ಕುರಿತು ಸಾರ್ವಜನಿಕ ಶೈಕ್ಷಣಿಕ ಹಿತಾಸಕ್ತಿಯಿಂದ ಇರುವವರು ಅವಲೋಕಿಸಬೇಕಿದೆ. ಈ ಅವಲೋಕನದಲ್ಲಿ ಇಲೆಕ್ಟ್ರಾನಿಕ್ಸ್‌ ವಿಕಾಸಗೊಂಡು ಬೆಳವಣಿಗೆಯಾಗಿ, ಮಾನವರ ಜೀವನವನ್ನು ಆವರಿಸಿರುವ ಸಂಗತಿಗಳನ್ನೂ ಮತ್ತು ಅದರ ತಂತ್ರಜ್ಞಾನಗಳಲ್ಲಿ ಮುಳುಗಿಹೋದಾಗ ಆಗಬಹುದಾದ ಸಮಸ್ಯೆಗಳನ್ನೂ ಆ ಮೂಲಕ ನಮ್ಮ ಬದುಕನ್ನು ಬದಲಿಸಿರುವ ಹಿನ್ನೆಲೆಯಿಂದ ಪರಿಚಯಿಸಲಿದೆ. ಜಗತ್ತೀಗ ಡಿಜಟಲೀಕರಣದ ದಾಪುಗಾಲಿನಲ್ಲಿ ಇರುವಾಗ ಎಲ್ಲವೂ ಬೆರಳ ತುದಿಯಲ್ಲಿ ಎನ್ನುವಂತೆ ಆಗಿ ನಮ್ಮ ಮನಸ್ಸಿನ ಆಲೋಚನೆಯ ಕಾರ್ಯಾಚರಣೆಯು ನಿಜಕ್ಕೂ ಅಂಗೈಯ ಬೆರಳು-ಡಿಜಿಟ್-ಗಳಿಂದ ಸಂಪೂರ್ಣವಾಗಿ ಆವರಿಸಿವೆ.

ಇಲೆಕ್ಟ್ರಾನಿಕ್ಸ್‌ ವಿಕಾಸದ ತಾಂತ್ರಿಕ ಹಿನ್ನೆಲೆ

ಇಲೆಕ್ಟ್ರಾನಿಕ್ಸ್‌ ಜಗತ್ತು ಭೌತವಿಜ್ಞಾನ, ರಸಾಯನ ವಿಜ್ಞಾನ, ತಂತ್ರಜ್ಞಾನ ಮತ್ತು ಇಂಜನಿಯರಿಂಗ್‌ ಗಳ ಜೊತೆಗೆ ಗಣಿತವನ್ನೂ ಒಳಗೊಂಡ ಒಂದು ಆನ್ವಯಿಕ ಜಗತ್ತು. ಈ ಎಲ್ಲಾ ತಿಳಿವುಗಳ ಆವಿಷ್ಕಾರಗಳಿಂದ ಉತ್ಪಾದನೆಗೊಂಡ ಉಪಕರಣಗಳು ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿವೆ. ವಸ್ತುವಿನ ಮೂಲಭೂತ ಕಣಗಳಲ್ಲಿ ಒಂದಾದ “ಇಲೆಕ್ಟ್ರಾನ್‌”, ಪರಮಾಣುವಿನಲ್ಲಿ ಸುತ್ತುತ್ತಲೇ ಇರುವ ಭಾಗ. ಈ ಸುತ್ತುವಿಕೆಯು ಆಯಾ ವಸ್ತುಗಳ ಸಂರಚನೆಯಂತೆ ವಿವಿಧತೆಯನ್ನು ಹೊಂದಿದ್ದು, ಆಯಾ ವಸ್ತುಗಳ ವರ್ತನೆಯನ್ನು ನಿರ್ಣಯಿಸುತ್ತದೆ. ಇಂತಹಾ ವಸ್ತುಗಳ ಹುಡುಕಾಟದಲ್ಲಿ ವಿವಿಧ ಮಿಶ್ರಣಗಳ ಉತ್ಪಾದನೆಯಿಂದ ಪಡೆದ ವಸ್ತುಗಳ ನಿರ್ಮಿತಿಯಲ್ಲಿ ಹುಟ್ಟಿದ ಜಗತ್ತು ಇದು. ಇದು ಮೂಲತಃ ವಸ್ತುಗಳ ಇಲೆಕ್ಟ್ರಾನುಗಳು ಪ್ರವಹಿಸುವುದನ್ನೇ ಮೂಲವಾಗಿಟ್ಟುಕೊಂಡು ವಿವಿಧ ವರ್ತನೆಗಳ ವಸ್ತುಗಳನ್ನು ಪಡೆದ ಆವಿಷ್ಕಾರಗಳು. ಈ ಇಲೆಕ್ಟ್ರಾನ್‌ಗಳು ಪ್ರವಹಿಸುವ ಅಂದರೆ ಹರಿಯುವ ಬಗೆಯಲ್ಲಿ ಹೆಚ್ಚಿಸುವ, ಬದಲು-ಮಾಡುವ ಪ್ರಕ್ರಿಯೆಗಳಿಂದ ಮೂಲಭೂತ ಇಲೆಕ್ಟ್ರಾನಿಕ್ಸ್‌ ತಾಂತ್ರಿಕತೆಯು ವಿಕಾಸಗೊಂಡಿದೆ. ಕರೆಂಟಿನ ಪ್ರವಹಿಸುವಿಕೆಯ ಪ್ರಭಾವಗಳಿಂದಾದ ವಿಕಾಸದ ಫಲಗಳಾದ ರೆಸಿಸ್ಟೆನ್ಸ್‌, ಕ್ಯಾಪಾಸಿಟೆನ್ಸ್‌ ಮತ್ತು ಇಂಡಕ್ಟೆನ್ಸ್‌ಗಳು  ಇಂದು ವಿವಿಧ ಉತ್ಪನ್ನಗಳಾಗಿ ದೊರಕುತ್ತಿವೆ. (ರೆಸಿಸ್ಟೆನ್ಸ್‌- ಎಂದರೆ ಕರೆಂಟು ಪ್ರಹವಿಸಲು ಒಡ್ಡುವ ಪ್ರತಿರೋಧ. ಕ್ಯಾಪಾಸಿಟೆನ್ಸ್‌ ಎಂದರೆ ಆಯಾ ವಸ್ತುವಿನಲ್ಲಿ ಪ್ರವಹಿಸುವ ಇಲೆಕ್ಟ್ರಾನುಗಳ ಒಟ್ಟಾರೆ ಛಾರ್ಜುಗಳ ಬದಲಾವಣೆ ಮತ್ತು ಆಯಾ ವಸ್ತುವಿನ ವಿದ್ಯುತ್‌ ಸಾಮರ್ಥ್ಯದ ಬದಲಾವಣೆಯ ನಡುವಿನ ಅನುಪಾತ.  ಇಂಡಕ್ಟೆನ್ಸ್‌-ಎಂದರೆವಿದ್ಯುತ್ ವಾಹಕವಾದ ಆ ವಸ್ತುವಿನ ಮೂಲಕ ಹರಿಯುವ ವಿದ್ಯುತ್ ಪ್ರವಾಹದಲ್ಲಿನ ಬದಲಾವಣೆಯನ್ನು ವಿರೋಧಿಸುವ ಪ್ರವೃತ್ತಿ)

       ಮೂಲತಃ ಇಲೆಕ್ಟ್ರಾನ್‌ ಅನ್ನು 1897 ರಲ್ಲಿ ಕಂಡುಹಿಡಿದ ನಂತರ ಈ ತಿಳಿವಳಿಕೆಗಳು ಕ್ರಮೇಣವಾಗಿ ಅನ್ವೇಷಣೆಗೊಂಡವು. ಅದರ ಆನ್ವಯಿಕತೆಯು ಇಲೆಕ್ಟ್ರಾನ್‌ಗಳ ಪ್ರವಹಿಸುವಿಕೆಯನ್ನು ನಿರ್ವಹಿಸುವ “ಡಯೋಡು” ಎಂಬ “ನಿರ್ವಾತ ಕೊಳವೆ (ವ್ಯಾಕ್ಯೂಮ್‌ ಟ್ಯೂಬ್‌)” ಅನ್ನು 1904 ರಲ್ಲಿ ಕಂಡುಹಿಡಿಯುವುದರ ಮೂಲಕ ಇಲೆಕ್ಟ್ರಾನಿಕ್ಸ್‌ ಜಗತ್ತು ತೆರೆದುಕೊಂಡಿತು ಎನ್ನಬಹುದು. ಸರಳವಾಗಿ ಹೀಗೆ ತಿಳಿಯುವುದು ಸೂಕ್ತವಾದುದು. ಅಂದರೆ ಶಾಖದಿಂದ ಇಲೆಕ್ಟ್ರಾನುಗಳು ಒಂದು ಕಡೆಯಿಂದ ಮತ್ತೊಂಡು ಕಡೆಗೆ ಪ್ರವಹಿಸುವುದನ್ನು ನಿರ್ವಹಿಸುವ ತಾಂತ್ರಿಕತೆಯ ವಿಕಾಸ! ಹಾಗೆಯೇ ಒಂದರ್ಥದಲ್ಲಿ ಅದರಲ್ಲಿಯೇ ಉನ್ನತೀಕರಣಗೊಂಡ ಅನೇಕ ಬಗೆಗಳು ಇಲೆಕ್ಟ್ರಾನಿಕ್ಸ್‌ ತಂತ್ರಜ್ಞಾನವನ್ನು ಸೃಷ್ಟಿಸಿದೆ. ಹೀಗೆ ಇಲೆಕ್ಟ್ರಾನು ಪ್ರವಹಿಸುವುದನ್ನು ಬಗೆ ಬಗೆಯಾಗಿ ನಿರ್ವಹಿಸುವ ಮೂಲಕ ವಸ್ತುಗಳ ವರ್ತನೆಯನ್ನು ನಿಭಾಯಿಸುವ ಇಲೆಕ್ಟ್ರಾನಿಕ್ಸ್‌ ಜಗತ್ತು ವಿವಿಧ ಉತ್ಪಾದನೆಗಳು ಅಥವಾ ಉಪಕರಣಗಳ ಮೂಲಕ ಮಾನವರ ಬಳಕೆಯಲ್ಲಿದೆ. ಇದೇ ವಿವಿಧ ವಸ್ತು ನಿರ್ಮಾಣದ ಹಾಗೂ ವಿಶಿಷ್ಟ ಉತ್ಪನ್ನಗಳಲ್ಲೂ ಪರಿಭಾವಿಸಿದೆ.

ದೈನಂದಿನ ಇಲೆಕ್ಟ್ರಾನಿಕ್‌ ಜಗತ್ತು 

ಈ ಲೇಖನದ ಆರಂಭದಲ್ಲೇ ಉದಾಹರಿಸಿರುವ ಮೊಬೈಲ್‌ ಇಲೆಕ್ಟ್ರಾನಿಕ್ಸ್‌ ಜಗತ್ತಿನ ಬಹು ದೊಡ್ಡ ಬದಲಾವಣೆಯನ್ನು ತಂದ ಉಪಕರಣ. ದಿನನಿತ್ಯವೂ ಬಳಸುವ ಅನೇಕ ಗೃಹ ಬಳಕೆಯ ಉಪಕರಣಗಳಲ್ಲಿ ಇಲೆಕ್ಟ್ರಾನಿಕ್ಸ್‌ ತಂತ್ರಜ್ಞಾನದ ಛಾಯೆ ಧಾರಾಳವಾಗಿ ಕಾಣುತ್ತದೆ. ಉದಾಹರಣೆಗೆ ಬಟ್ಟೆ ಒಗೆಯುವ ಯಂತ್ರದಲ್ಲಿ ಇಡೀ ಕೆಲಸವನ್ನು ನಿರ್ವಹಿಸುವ ಪ್ರಕ್ರಿಯೆಗಳನ್ನು ಸಂಕೇತಗಳಾಗಿಸಿ ತಿಳಿಸುವ ಸ್ವಿಚ್ಚುಗಳಲ್ಲೂ, ಜೊತೆಗೆ ಆಯಾ ಕೆಲಸಗಳನ್ನು ಯಂತ್ರದಲ್ಲಿ ಪ್ರಕ್ರಿಯೆಯಾಗಿಸುವ ಯಾಂತ್ರಿಕತೆಯಲ್ಲೂ ಇಲೆಕ್ಟ್ರಾನಿಕ್ಸ್‌ ಪಾತ್ರವಹಿಸುತ್ತದೆ. ಅದಕ್ಕೆ ಕೆಲವೊಮ್ಮೆ ರಿಪೇರಿಗೆ ಒಳಪಡಬೇಕಾದಾಗ ಯಂತ್ರದ “ಬೋರ್ಡು” ಹೋಗಿದೆ. ಅದನ್ನು ಹೊಸತಾಗಿ ಹಾಕಬೇಕು, ಎಂದು ರಿಪೇರಿಯವ ಹೇಳಿದ್ದರೆ, ಆ ಬೋರ್ಡು ಇಲೆಕ್ಟ್ರಾನಿಕ್ಸ್‌ನ ಉಪಕರಣವೇ ಆಗಿರುತ್ತದೆ. ಸ್ವಿಚ್ಚುಗಳಲ್ಲೂ ಸಂಕೇತಗಳ ನಿರ್ವಹಣೆ ಎಂದ ಮೇಲೆ ಸ್ವಿಚ್ಚೂ ಸಹಾ ಇಲೆಕ್ಟ್ರಾನಿಕ್ಸ್‌ ಉತ್ಪನ್ನವೆಂದು ಬೇರೆ ಹೇಳಬೇಕಿಲ್ಲ. ಹೀಗೆ ನಿರ್ವಹಣೆ, ಸಾಧ್ಯತೆ, ಪ್ರತಿಫಲ ಜೊತೆಗೆ ಅನುಭವಕ್ಕೂ ದಕ್ಕುವ ಪ್ರಕ್ರಿಯೆಯಲ್ಲೂ ಇಲೆಕ್ಟ್ರಾನಿಕ್ಸ್‌ ಒಳಗೊಂಡಿದೆ.

       ಟೆಲಿವಿಷನ್‌ ಮತ್ತೊಂದು ಅತ್ಯಂತ ಜನಪ್ರಿಯವೂ ಹಾಗೂ ಪ್ರಭಾವಶಾಲಿಯಾದ ಇಲೆಕ್ಟ್ರಾನಿಕ್ಸ್‌ ಉಪಕರಣ. ಸದ್ದು, ಚಿತ್ರಗಳು, ಜೊತೆಗೆ ಒಂದರ ಹಿಂದೊಂದು ಓಡುವ ಅವುಗಳ ಅನುಕ್ರಮಣಿಕೆ! ಎಲ್ಲವೂ ಇಲೆಕ್ಟ್ರಾನಿಕ್ಸ್‌ನ ಫಲಿತಗಳೇ. ರೇಡಿಯೊ ಮೊದಲು ಆವಿಷ್ಕಾರವಾದಾಗ ಇದ್ದ ತಂತ್ರಜ್ಞಾನವೆಲ್ಲಾ ಇಲೆಕ್ಟ್ರಾನಿಕ್ಸ್‌ಗೂ ಹಿಂದಿನದು. ಅಂದರೆ ಆಗ ರೇಡಿಯೊ ಟ್ರಾನ್ಸ್‌ಮಿಟರ್‌ -ಪ್ರಸಾರ– ಮತ್ತು  ರೇಡಿಯೊ ರಿಸೀವರ್‌ -ಗ್ರಾಹಕಗಳು ಈಗಿನಂತೆ ಸೂಕ್ಷ್ಮವಾದ ಕಾರ್ಯಚತುರತೆಯನ್ನು ಹೊಂದಿದವಾಗಿರಲಿಲ್ಲ. ಟೆಲಿಫೋನು ಕಂಡುಹಿಡಿದ ಅಲೆಗ್ಸಾಂಡರ್‌ ಗ್ರಹಾಂಬೆಲ್‌ ಸ್ಥಾಪಿಸಿದ “ಬೆಲ್‌ ಪ್ರಯೋಗಾಲಯ”ದಲ್ಲಿ 1947 ರ ಅನ್ವೇಷಣೆಯಾದ “ಟ್ರಾನ್ಸಿಸ್ಟರ್‌” ಇಲೆಕ್ಟ್ರಾನಿಕ್ಸ್‌ ಜಗತ್ತನ್ನೇ ಆಮೂಲಾಗ್ರವಾಗಿ ಬದಲಿಸಿಬಿಟ್ಟಿತು. ಅದರ ಅನ್ವೇಷಕರಾದ ಜಾನ್‌ ಬರ್ಡೀನ್‌, ವಿಲಿಯಂ ಶಾಕ್ಲಿ ಮತ್ತು ವಾಲ್ಟೆರ್‌ ಬ್ರಟೆನ್‌ ಅವರುಗಳಿಗೆ 1956 ರಲ್ಲಿ ಪ್ರತಿಷ್ಠಿತ ನೊಬೆಲ್‌ ಪುರಸ್ಕಾರವೂ ದೊರೆಯಿತು. ಈ “ಟ್ರಾನ್ಸಿಸ್ಟರ್‌” ಒಂದು ಉಪಕರಣವಾಗಿ ಇಲೆಕ್ಟ್ರಾನಿಕ್ಸ್‌ ಸಂಕೇತಗಳನ್ನು ಮತ್ತು ಶಕ್ತಿಯನ್ನೂ ಹೆಚ್ಚು ಮಾಡಬಲ್ಲ ಅಥವಾ ಸ್ವಿಚ್‌ನಂತೆ ತೆರೆಯುವ ಇಲ್ಲವೇ ಮುಚ್ಚುವ ಕೆಲಸವನ್ನು ಮಾಡುತ್ತದೆ. ಆ ದಶಕದಿಂದ ಇಂದಿನವರೆಗೂ ಈ ಟ್ರಾನ್ಸಿಸ್ಟರ್‌ನಲ್ಲಿ ಸಾಕಷ್ಟು ಬದಲಾವಣೆಗಳು ಅನ್ವೇಷಣೆಯಾಗಿವೆ. ಹಾಗಾಗಿ ಹಿಂದೆ ಬಳಕೆಯಲ್ಲಿದ್ದ ಸಂಕೇತಗಳಿಗೂ ಇಂದಿನ ಸಂಕೇತಗಳ ಸೂಕ್ಷ್ಮತೆಗೂ ಅಜ-ಗಜಾಂತರ ವ್ಯತ್ಯಾಸ. ಆದ್ದರಿಂದಲೇ ಇಂದು ಉತ್ತಮ ಮಟ್ಟದ ಸದ್ದು, ಬೆಳಕು, ಚಿತ್ರ ಎಲ್ಲವೂ ಲಭ್ಯವಾಗುತ್ತಿರುವುದು. ಈ ಕಾರಣದಿಂದ ಸಂಗೀತವೂ ಸುಲಭವಾಗಿದೆ. ವಿಡಿಯೋ ಚಿತ್ರೀಕರಣವೂ ಬದಲಾಗಿದೆ. ಅವುಗಳನ್ನು ನಿರ್ವಹಿಸುವ ಎಲ್ಲಾ ಯಾಂತ್ರಿಕತೆಯೂ ಬದಲಾಗಿದೆ. ಎಲ್ಲ ಬಗೆಯ ಸಂವಹನಗಳೂ ಸಂಕೇತಗಳೇ! ಸಂಕೇತಗಳು ಮತ್ತೆ ಸಂವಹನಿಸಬೇಕಿರುವ ರೂಪ ತಾಳುವುದು ಸಂವಹನದಲ್ಲಾಗುವ ಪ್ರಾಯೋಗಿಕ ಸಾಧ್ಯತೆ. ಸಂಕೇತಗಳು ಎಲ್ಲೆಲ್ಲಿ ಸಾಧ್ಯಯೋ ಅಲ್ಲೆಲ್ಲಾ ಇಲೆಕ್ಟ್ರಾನಿಕ್ಸ್‌ ತನ್ನ ಇರುವನ್ನು ನಿರ್ವಹಿಸಲಿದೆ. ಅದಕ್ಕಷ್ಟು ಜಾಣತನ ಬರೆಸುವುದು ಮಾನವ ಮಾಡುವ ಸಂಶೋಧನೆಯ ಫಲ.

ಇಲೆಕ್ಟ್ರಾನಿಕ್ಸ್‌ ಜಗತ್ತಿಗೆ ಬೆಲ್‌ ಪ್ರಯೋಗಾಲಯ (ಇದೀಗ ಅದು Nokia Bel Lab) “ಟ್ರಾ ನ್ಸಿಸ್ಟರ್‌” ಜೊತೆಗೆ ಅನೇಕ ಇಲೆಕ್ಟ್ರಾನಿಕ್ಸ್‌ ಸಂಶೋಧನೆಗಳಿಂದ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಅಪಾರ ಕೊಡುಗೆ ನೀಡಿದೆ. ಅದರ ಹಲವಾರು ಅನ್ವೇಷಣೆಗಳಲ್ಲಿ ಸುಮಾರು 9 ನೊಬೆಲ್‌ ಪುರಸ್ಕಾರಗಳನ್ನು ಪಡೆದ ಖ್ಯಾತಿಯನ್ನು ಹೊಂದಿದೆ.

       ಇದಷ್ಟೇ ಅಲ್ಲ. ಮೋಟಾರು ವಾಹನಗಳಲ್ಲೂ ಈಗೆಲ್ಲಾ ಮೊದಲಿನಂತೆ ಇಲ್ಲ. ಅವುಗಳೂ ಸಹಾ ಸಾಕಷ್ಟು ಸ್ವಯಂ ಚಾಲಿತ ಇಲ್ಲವೇ ಗಿಯರುಗಳೇ ಇಲ್ಲದ ವಾಹನಗಳು ಮುಂತಾದ ನಮ್ಮ ಬಳಕೆಗೆ ಸುಲಭವಾಗುವ ಬದಲಾವಣೆಗಳು ಸಾಧ್ಯವಾಗಿವೆ. ತುಂಬಾ ಶಕ್ತಿ ವಹಿಸಿ ನಿರ್ವಹಿಸಬೇಕಾದ ಅನೇಕ ಕೆಲಸಗಳ ಯಾಂತ್ರೀಕರಣಗಳು ಇಲೆಕ್ಟ್ರಾನಿಕ್ಸ್‌ನ ಆನ್ವಯಕ್ಕೆ ಒಳಗಾಗಿ ಮಾನವರ ಬದುಕನ್ನು ಊಹೆಗೂ ಮೀರಿಸುವಷ್ಟು ಸುಲಭಗೊಳಿಸಿವೆ. 

ಆರೋಗ್ಯ ನಿರ್ವಹಣೆಯಲ್ಲೂ ಇಲೆಕ್ಟ್ರಾನಿಕ್ಸ್‌ ಪಾತ್ರವಹಿಸಿದೆ. ಅನೇಕ ರೋಗ ಪರೀಕ್ಷೆಗಳು ಇದೀಗ ಇಲೆಕ್ಟ್ರಾನಿಕ್ಸ್‌ ಉಪಕರಣಗಳಿಂದಲೇ ನಡೆಯುತ್ತಿವೆ. ಅದ್ದರಿಂದಲೇ ವೈದ್ಯಕೀಯ ಇಲೆಕ್ಟ್ರಾನಿಕ್ಸ್‌ ಎಂಬ ವಿಭಾಗವೇ ಇಂಜನಿಯರಿಂಗ್‌ ಅಧ್ಯಯನದಲ್ಲಿದೆ. ನಮ್ಮ ದೇಹದ ಕೆಲವು ಅಂಗಗಳ ಶಸ್ತ್ರ ಚಿಕಿತ್ಸೆಯಲ್ಲೂ ಸಂಕೇತಗಳನ್ನು ಬಳಸಿ ನಿರ್ವಹಿಸುವುದರಿಂದ ಅಲ್ಲೂ ಇಲೆಕ್ಟ್ರಾನಿಕ್ಸ್‌ ತನ್ನ ಪ್ರಭಾವವನ್ನು ಸ್ಥಾಪಿಸಿದೆ. ಹೃದಯದ ಅನೇಕ ಚಿಕಿತ್ಸೆಗಳು, ಅದರ ಕಾರ್ಯ ನಿರ್ವಹಣೆಯ ವಿವರಗಳನ್ನು ಇಲೆಕ್ಟ್ರಾನಿಕ್ಸ್‌ ಸಂಕೇತಗಳಾಗಿಯೇ ಪಡೆದು ಆರೋಗ್ಯದ ನಿರ್ಧಾರಗಳನ್ನು ಮಾಡಲಾಗುತ್ತದೆ. ಉದಾಹರಣೆಗೆ ಇ.ಸಿ.ಜಿ. (ಇಲೆಕ್ಟ್ರೋ ಕಾರ್ಡಿಯೋಗ್ರಫಿ). ಇದರಿಂದ ಹೃದಯದ ಬಡಿತದ ಲಯವನ್ನು ಮತ್ತು ಅದರ ಇಲೆಕ್ಟ್ರಿಕಲ್‌ ಚಟುವಟಿಕೆಯನ್ನೂ ಅಳೆಯಲಾಗುತ್ತದೆ. ಮೈಮೇಲೆ ಸಂಕೇತಗಳನ್ನು ಗ್ರಹಿಸಬಲ್ಲ ಗ್ರಾಹಕಗಳನ್ನು ಹಚ್ಚಿ ಹೃದಯದ ಇಲೆಕ್ಟ್ರಾನ್‌ ಸಂಕೇತಗಳನ್ನು ಪತ್ತೆ ಹಚ್ಚಲಾಗುವುದು. ನಂತರ ಅವುಗಳನ್ನು ಆರೋಗ್ಯಕ್ಕೆ ಸಮೀಕರಿಸಿ ವಿವರಿಸಲಾಗುತ್ತದೆ.   

       ಕಂಪ್ಯೂಟರ್‌ಗಳು ಮತ್ತು ಸ್ವಯಂಚಾಲಿತ ವ್ಯವಸ್ಥೆಗಳು ಮಾನವರ ಬದುಕನ್ನು ಶಾಶ್ವತವಾಗಿ ಬದಲಾಯಿಸಿವೆ. ಕಂಪ್ಯೂಟರ್‌ನ ವ್ಯವಸ್ಥೆಯೇ ಇಲೆಕ್ಟ್ರಾನಿಕ್ಸ್‌ನ ಆನ್ವಯಿಕ ವ್ಯವಸ್ಥೆ. ಕಂಪ್ಯೂಟರ್‌ ಬಿಡಿ ಭಾಗಗಳು ಬಹುಪಾಲು ಇಲೆಕ್ಟ್ರಾನಿಕ್ಸ್‌ ಉತ್ಪನ್ನಗಳು. ಕಂಪ್ಯೂಟರ್‌ನಲ್ಲಿ ಮೂಲತಃ ಸಂಕೇತದ ಭಾಷೆಯು ಕೆಲಸಗಳಾಗಿ, ಉತ್ಪನ್ನಗಳಾಗಿ ಕಂಡುಬರುತ್ತವೆ. ಹೀಗೆ ಎಲ್ಲೆಲ್ಲಿ ಸಂಕೇತಗಳು ಮುಂದಾಳತ್ವ ವಹಿಸುತ್ತವೆಯೋ ಅಲ್ಲೆಲ್ಲಾ ಇಲೆಕ್ಟ್ರಾನುಗಳು ಕಾರ್ಯಪ್ರವೃತ್ತವಾಗಿರುತ್ತವೆ. ಅವೆಲ್ಲವೂ ವಸ್ತುಗಳ ಇಡಿಯಾದ ವರ್ತನೆಗಳನ್ನೂ ನಿಭಾಯಿಸುತ್ತವೆ. ಆದ್ದರಿಂದ ಅಲ್ಲೆಲ್ಲಾ ಇಲೆಕ್ಟ್ರಾನಿಕ್ಸ್‌ ಪ್ರಮುಖ ಪಾತ್ರಧಾರಿ. ವಿದ್ಯುತ್‌ ಉಪಕರಣಗಳು, ಯಾಂತ್ರಿಕ ಉಪಕರಣಗಳು, ಮೋಟಾರು ವಾಹನಗಳು, ಸಂಗೀತ, ಸಿನಿಮಾ ಎಲ್ಲವೂ ಇದೀಗ ಇಲೆಕ್ಟ್ರಾನಿಕ್ಸ್‌ ಜಗತ್ತಿನಿಂದಲೇ ನಿರ್ವಹಿಸಲ್ಪಡುತ್ತಿವೆ. ಅಷ್ಟೇ ಅಲ್ಲ, ನಮ್ಮ ರಸ್ತೆಗಳನ್ನೂ ಇಲೆಕ್ಟ್ರಾನಿಕ್ಸ್‌ ನಕ್ಷೆಗಳಾಗಿಸಿ ಅವನ್ನೆಲ್ಲಾ ಸಂಕೇತಗಳಾಗಿಸಿ ನಮ್ಮ ಸಂಚಾರದ ಮಾರ್ಗದರ್ಶಕರನ್ನಾಗಿಸಿದೆ. ಅಂತೂ ನಮ್ಮ ದೈನಂದಿನ ಬದುಕು ಬಹುಪಾಲು ಇಲೆಕ್ಟ್ರಾನಿಕ್ಸ್‌ಮಯವಾಗಿದೆ. 

ಇಲೆಕ್ಟ್ರಾನಿಕ್ಸ್‌ನ ಅಗಾಧತೆಯ ಸೂಕ್ಷ್ಮ ಪರಿಚಯ  

ಇಲೆಕ್ಟ್ರಾನಿಕ್ಸ್‌ ಸಾಮಾನ್ಯ ಊಹೆಗಿಂತಲೂ ಅಗಾಧವಾಗಿದೆ. ಇಂದು ಹೆಚ್ಚಿನ ಪ್ರಮಾಣದ ಮಾಹಿತಿ ಹಾಗೂ ಟೆಲಿಫೋನ್‌ ಸಂವಹನದಲ್ಲಿ ಸಂಕೇತಗಳ ಸಂಸ್ಕರಣೆಯಲ್ಲಿ ಇಲೆಕ್ಟ್ರಾನಿಕ್ಸ್‌ ಬಹುವಾಗಿ ಬಳಕೆಯಾಗುತ್ತದೆ. ಇಂದು ಇಲೆಕ್ಟ್ರಾನಿಕ್ಸ್‌ ಜಗತ್ತು ಸರ್ವಾಂತರ್ಯಾಮಿ. ಇತಿಹಾಸದ ಅಧ್ಯಯನಕಾರರೂ ಸಹಾ ತಮ್ಮ ಪ್ರಾಚ್ಯವಸ್ತುಗಳ ನಿಖರತೆಯನ್ನು, ಕಾಲಮಾನವನ್ನೂ ಅಳೆಯಲು ಇಲೆಕ್ಟ್ರಾನಿಕ್ಸ್‌ ತಿಳಿವಳಿಕೆಯನ್ನು ಬಳಸುತ್ತಾರೆ. ದೃಶ್ಯಕಲೆಯಲ್ಲೂ ಇಲೆಕ್ಟ್ರಾನಿಕ್ಸ್‌ ಬಳಕೆಯಾಗುತ್ತಿದೆ. ಕಂಪ್ಯೂಟರಿನ ಕಿಟಕಿಯನ್ನು ಚಿತ್ರಗಳಿರಲಿ, ಸಂಗೀತವಿರಲಿ, ಅಕ್ಷರಗಳಿರಲಿ, ಎಲ್ಲವನ್ನೂ ಇಲೆಕ್ಟ್ರಾನಿಕ್ಸ್‌ ಆವರಿಸಿದೆ. ಎತ್ತರದ ಆಗಸದಲ್ಲೆಲ್ಲೋ ಹಾರಿ ಸುತ್ತುತ್ತಿರುವ ಕೃತಕ ಉಪಗ್ರಹಗಳ ಕಾರ್ಯ ನಿರ್ವಹಣೆಯಲ್ಲೂ ಇಲೆಕ್ಟ್ರಾನಿಕ್ಸ್‌ ಇದೆ. ಮಾಹಿತಿಯ ನಿರ್ವಹಣೆಯು, ಸಮಾಜವಿಜ್ಞಾನದ್ದಾಗಿರಲಿ, ಮೂಲವಿಜ್ಞಾನದ್ದಾಗಿರಲಿ ಅದೆಲ್ಲಾ ಸಂಕೇತಗಳಾದರೆ ತೀರಿತು, ಹಾಗಾಗಿ ಭಾಷಾವಿಜ್ಞಾನದಲ್ಲಿಯೂ ಇದರ ಬಳಕೆಯಾಗಿತ್ತಿದೆ. ಇಂದು ಭೌಗೋಳಿಕ ತಿಳಿವಿನಿಂದ ಮಾರ್ಗದರ್ಶನ ಮಾಡುವ ಜಿ.ಪಿ.ಎಸ್‌. (ಗ್ಲೋಬಲ್‌ ಪೊಜಿಷನಿಂಗ್‌ ಸಿಸ್ಟಮ್)‌ ಮತ್ತು ಅದರ ಮಾತೂ ಸಹಾ ಹೀಗೆಯೇ ಇಲೆಕ್ಟ್ರಾನಿಕ್ಸ್‌ನಿಂದ ಸಂಸ್ಕರಣಗೊಂಡವೇ ಆಗಿವೆ. ಕಂಪ್ಯೂಟರಿನ ಭಾಷಾಂತರ ಮಾಡುವ ಪ್ರಕ್ರಿಯೆಯೂ ಕೂಡ! 

ವಹಿವಾಟುಗಳಲ್ಲಿ ಇಲೆಕ್ಟ್ರಾನಿಕ್ಸ್‌  

ಮೇಲೆ ಉದಾಹರಿಸಿದ ಪ್ರಕ್ರಿಯೆಗಳನ್ನು ನಿರ್ವಹಿಸಲೆಂದೇ ವಿವಿಧ ಉಪಕರಣಗಳನ್ನು ಉತ್ಪಾದಿಸುವ ಉದ್ಯಮಗಳು ಸೃಷ್ಟಿಯಾಗಿವೆ. ಅವುಗಳ ಆರ್ಥಿಕತೆ, ಮಾರಾಟ, ಎಲ್ಲವೂ ಬದಲಾಗುತ್ತಲೇ ಇರುವ ಸನ್ನಿವೇಶವನ್ನು ದಿನವೂ ಹುಟ್ಟಿಹಾಕುತ್ತಿವೆ. ಆದ್ದರಿಂದ ಚಲನಶೀಲವಾದ ಇಲೆಕ್ಟ್ರಾನಿಕ್ಸ್‌ ಆನೇಕ ಬಗೆಗಳಲ್ಲಿ ಮಾನವರ ಜೀವನವನ್ನು ಆಕ್ರಮಿಸಿದೆ. ಯಾವುದೇ ಮಾಹಿತಿಯನ್ನು ಇದೀಗ ಇಲೆಕ್ಟ್ರಾನಿಕ್ಸ್‌ ಅಳವಡಿಕೆಯಲ್ಲಿ ನಿರ್ವಹಿಸಬಹುದಾಗಿದ್ದು, ವ್ಯವಹಾರ ವಹಿವಾಟನ್ನು ಅದು ಆಕ್ರಮಿಸಿದೆ. ಹಾಗಾಗಿ ದಾಸ್ತಾನು, ಬಿಲ್ಲಿಂಗ್‌ ಕಡೆಯಲ್ಲಿ ವಸ್ತುಗಳ ಆಡಿಟಿಂಗ್‌ ಸಹಾ ಇದರ ಲೆಕ್ಕಾಚಾರದಲ್ಲಿಯೇ ನಡೆಯುತ್ತದೆ. ಇ-ಕಾಮರ್ಸ್‌ ಎಂದೇ ಜನಪ್ರಿಯ ಬಳಕೆಗೆ ಬಂದಿರುವ ವ್ಯವಹಾರದ ಜಗತ್ತು ಇಂದು ಇಲೆಕ್ಟ್ರಾನಿಕ್ಸ್‌ನ ತೆಕ್ಕೆಯಲ್ಲಿಯೇ ನಡೆಯುತ್ತಿದೆ. ಸಾಮಾನ್ಯ ಟೀ-ಅಂಗಡಿಯ ಫೋನ್‌-ಪೇ, ಗೂಗಲ್‌ಪೇ ಗಳಿಂದ ಆರಂಭವಾಗಿ ಬ್ಯಾಂಕಿಂಗ್‌ ವ್ಯವಹಾರಗಳು, ಅಂತರರಾಷ್ಟ್ರೀಯ ವಹಿವಾಟುಗಳು ಇದರ ಲೆಕ್ಕಾಚಾರದಲ್ಲಿಯೇ ನಡೆಯುತ್ತಿವೆ.

ನಮ್ಮ ಬಹುಪಾಲು ಚಟುವಟಿಕೆಗಳು ಇಂದು ಮೊಬೈಲಿಗೆ ವರ್ಗಾವಣೆಗೊಂಡು ಬದುಕು ಬದಲಾಗುತ್ತಾ ಹೋಗಿದೆ. ಇದೆಲ್ಲವೂ ಇಲೆಕ್ಟ್ರಾನಿಕ್ಸ್‌ ಜಗತ್ತಿನಲ್ಲಿ ಬಂದು ಅನಾವರಣೆಗೊಂಡಾಗ, ಆಪಲ್‌ ಕಂಪನಿಯ ಸ್ಥಾಪಕ ಸ್ಟೀವ್‌ ಜಾಬ್ಸ್‌ ಅವರು ಫೊನುಗಳು ಸ್ಮಾರ್ಟ್‌ ಆಗುತ್ತಾ ಎಲ್ಲವೂ ಅವುಗಳಲ್ಲಿ ಸೇರಿಕೊಂಡ ಬಗೆಯ ವಿವರವನ್ನು ತಮ್ಮ ಮೊಟ್ಟ ಮೊದಲ ಸ್ಮಾರ್ಟ್‌ ಫೋನ್‌ ಬಿಡುಗಡೆಯ ಸಂದರ್ಭದಲ್ಲಿ ಆಡಿದ ಮಾತುಗಳು ತುಂಬಾ ಜನಪ್ರಿಯವಾದವು. ಒಂದೊಂದಾಗಿ ಎಳೆ, ಎಳೆಯಾಗಿ ಎಲ್ಲವನ್ನೂ ತೆರೆದಿಟ್ಟ ಅವರ ಆಕರ್ಷಕ ಮಾತುಗಳನ್ನು ಈ ಲಿಂಕ್‌ ಅಲ್ಲಿ ಕೇಳಬಹುದು.

ಮಾನವಿಕ ಸಂಗತಿಗಳಲ್ಲಿ ಇಲೆಕ್ಟ್ರಾನಿಕ್ಸ್‌

ಇಷ್ಟೊಂದು ಮಾನವರ ಜೀವನವನ್ನು ಆವರಿಸಿರುವ ಇಲೆಕ್ಟ್ರಾನಿಕ್ಸ್‌ ಬದುಕನ್ನು ಸುಗಮಗೊಳಿಸಲು, ಸುಲಭವಾಗಿಸಲು ಸಾಕಷ್ಟು ಪರಿಣಾಮಕಾರಿಯಾಗಿ ಸಹಾಯ ಮಾಡಿವೆ. ಇಂದು ಗೃಹ ಬಳಕೆಯ ವಸ್ತುಗಳಲ್ಲೇ ಎಷ್ಟೊಂದು ಸರಳ ಸಾಧನಗಳು ದಿನನಿತ್ಯದ ಕೆಲಸಗಳಿಗೆ ಅನಿವಾರ್ಯವಾಗಿವೆ. ಪ್ರಾಯೋಗಿಕವಾಗಿ ಅತ್ಯಂತ ಸುಲಭ ಎನ್ನಿಸಿ ಮಾನವ ಶಕ್ತಿಯ ಬಳಕೆಯಲ್ಲಿ ಸರಳಗೊಳಿಸಿದರೂ, ಅನೇಕ ಖರ್ಚು-ವೆಚ್ಚಗಳನ್ನು ಬದಲಾಯಿಸಿ, ಜೊತೆಗೆ ಅವುಗಳ ಮೇಲೆ ಅನಿವಾರ್ಯತೆಯನ್ನೂ ಹೆಚ್ಚಿಸಿವೆ.  ನಮ್ಮ ಕೈಯಿಂದ ಆಗುವ ಅನೇಕ ಕೆಲಸಗಳನ್ನು ಇಂದು ಸ್ವಿಚ್‌ ಹಾಕಿ ಸಂವೇದನೆಗಳನ್ನು ಸಂಕೇತಗಳಾಗಿಸಿ, ಇಲೆಕ್ಟ್ರಾನುಗಳಿಂದ ಗುರಿಯಿತ್ತ ಸ್ಥಳಕ್ಕೆ, ಕಾರ್ಯಕ್ಕೆ ವರ್ಗಾಯಿಸಿ ನಡೆಸುತ್ತಿದ್ದೇವೆ. ಮಾನವ ಶಕ್ತಿಯನ್ನು ಯಾಂತ್ರೀಕರಿಸಿ, ಮುಂದುವರೆದು ಯಂತ್ರಗಳಿಗೂ ಸಂವೇದನೆ-ಸಂಕೇತಗಳ ಮೂಲಕ ಮುನ್ನಡೆಸುವ ಜಗತ್ತು ಸೃಷ್ಟಿಯಾಗಿದೆ.

       ಮಾನವನ ದೇಹ, ಕೈಗಳು ಮತ್ತು ಮನಸ್ಸು ಈ ಮೂರೂ ಇಲೆಕ್ಟ್ರಾನಿಕ್ಸ್‌ನ ಲಾಭ ಪಡೆದು, ತಮ್ಮ ಜಾಗದಲ್ಲಿ ಇಲೆಕ್ಟ್ರಾನಿಕ್ಸ್‌ ಉಪಕರಣಗಳನ್ನು ಪರ್ಯಾಯವಾಗಿಸುವಲ್ಲಿ ಬಹಳಷ್ಟು ಸಫಲವಾದ ಸನ್ನಿವೇಶ ಬಂದಿದೆ. ಕೃತಕ ಬುದ್ಧಿಮತ್ತೆ ಮತ್ತು ರೊಬಾಟಿಕ್ಸ್‌ ಪ್ರಪಂಚವೂ ಇಲೆಕ್ಟ್ರಾನಿಕ್ಸ್‌ನ ಆನ್ವಯಿಕ ವಿಭಾಗ. ಎಲ್ಲವೂ ಬೆರಳ ತುದಿಯಲ್ಲಿ ಎನ್ನುವ ಮಾತು ಅಕ್ಷರಶಃ ನಿಜವಾಗಿದೆ. ಅನೇಕ ಚಟುವಟಿಕೆಗಳನ್ನು ನಿಭಾಯಿಸುವಲ್ಲಂತೂ ಈ ಮಾತು ಸತ್ಯ. ಶಿಲಾಯುಗದಿಂದ ಮಾನವನು ಇಲೆಕ್ಟ್ರಾನಿಕ್ಸ್‌ ಯುಗಕ್ಕೆ ತನ್ನನ್ನು ತಾನು ನೆಲೆಗೊಳಿಸಿದ್ದು ಕಳೆದ ಒಂದೆರಡು ಶತಮಾನಗಳ ವೈಜ್ಞಾನಿಕ ದಾಪುಗಾಲು.

       ಇಷ್ಟೆಲ್ಲದರ ನಡುವೆಯೂ ಮಾನವ ವರ್ತನೆಗಳಲ್ಲಿ ಆಗುತ್ತಿರುವ ಬದಲಾವಣೆಗಳ ಮೇಲೆ ಕೆಲವು ಅಧ್ಯಯನಕಾರರು, ವಿಜ್ಞಾನಿಗಳು ಇಲೆಕ್ಟ್ರಾನಿಕ್ಸ್‌ ಮೂಲದಲ್ಲಿ ತರ್ಕಿಸಿ ವಿಮರ್ಶಿಸಲು ಪ್ರಯತ್ನಿಸಿದ್ದಾರೆ. ಶಕ್ತಿಯನ್ನು ಸರಳಗೊಳಿಸಿ ಜೀವನವನ್ನು ಸುಲಭವಾಗಿಸಿದ್ದು ನಿಜವೇ ಹೌದು! ಆದರೂ ಮನಸ್ಸಿನ ಮೂಲಭೂತ ಶಕ್ತಿಯ ಸಾಮರ್ಥ್ಯದ ಮೇಲೆ ಅದರಿಂದ ಒಟ್ಟಾರೆ ಮಾನವ ಜೀವನದ ಮೇಲಿನ ಪರಿಣಾಮಗಳ ಮೇಲೆ ಕೆಲವು ಆತಂಕಗಳನ್ನು ವ್ಯಕ್ತ ಪಡಿಸಿದ್ದಾರೆ. ಅವೆಲ್ಲವೂ ದೊಡ್ಡ ಚರ್ಚೆಯ ವಸ್ತುಗಳೇ ಆದ್ದರಿಂದ ದೀರ್ಘವಾಗಿ ವಿವರಿಸಲು ಇಲ್ಲಿ ಆಗದು. ಒಂದು ಪುಟ್ಟ ಉದಾಹರಣೆಯನ್ನು ನೋಡೋಣ. ಒಂದು ಕಾಲದಲ್ಲಿ ಹತ್ತಿಪ್ಪತ್ತು ಫೋನ್‌ ನಂಬರುಗಳಾದರೂ ನೆನಪಿನಲ್ಲಿ ಉಳಿದಿರುತ್ತಿದ್ದವು. ಇದೀಗ ಸ್ವಂತ ತಮ್ಮದೇ ನಂಬರಿಗೂ ಮೊಬೈಲ್‌ ಫೋನಿನ ನೆನಪಿನ ಪುಸ್ತಕದಲ್ಲಿ ಹುಡುಕುವಂತಾಗಿದೆ. ಅದಿರಲಿ, ವಿಳಾಸವನ್ನೂ ಬರೆದು ಜಾಗ್ರತೆಯಿಂದ ಪಡೆಯುವ ಪ್ರವೃತ್ತಿಯೂ ಇಲ್ಲವಾಗಿದೆ. “ನಿಮ್ಮ ಮನೆಯ ಹತ್ತಿರ ಬಂದು ಫೋನ್‌ ಮಾಡುತ್ತೇನೆ ಬಿಡಿ”  ಎಂತಲೋ “ಫೋನ್‌ ಇದೆಯಲ್ಲಾ, ಬರ್ತೀನಿ ಬಿಡಿ” ಎನ್ನುವ ಸಹಜವಾದ ಮಾತುಗಳನ್ನು ಕೇಳುತ್ತೇವೆ. ಕಾಲೇಜು ನೋಟೀಸ್‌ ಬೋರ್ಡಿನ ಮೇಲೆ ಅಂಟಿಸಿ ಹಂಚಿಕೊಂಡಿದ್ದ ಮಾಹಿತಿಯನ್ನೂ ಬರೆದುಕೊಳ್ಳದೆ, ಫೋನು ಇದ್ದರೆ ಫೋಟೊ ತೆಗೆದುಕೊಳ್ಳುವ ವಿದ್ಯಾರ್ಥಿಗಳೂ.. ಹೀಗೆ ಅನೇಕ ರೀತಿಯಲ್ಲಿ ನಾವು ನಮಗಿದ್ದ ಅಪೂರ್ವ ಶಕ್ತಿಯನ್ನು ಯಂತ್ರಕ್ಕೆ ವರ್ಗಾಯಿಸಿ ನಾವು ಅದನ್ನು ಕಳೆದುಕೊಳ್ಳುತ್ತಿದ್ದೇವೆ. ಹಾಗಾಗಿ ಇಂತಹಾ ಅಧ್ಯಯನಗಳನ್ನೂ ಮನೋವಿಜ್ಞಾನ ನಡೆಸುವಂತಾಗಿದೆ.

ಆದರೆ ಒಂದು ವಿಚಾರ ಏನೆಂದರೆ ಮಾನವ ಸಂಕುಲವು ಸಂಪಾದಿಸಿಕೊಂಡಿರುವ ಅಪೂರ್ವ ನೆನಪಿನ ಶಕ್ತಿಯು ಕೇವಲ ದಶಕಗಳಲ್ಲಿ ಕಳೆದುಹೋಗುವಂತಹದ್ದೇನಲ್ಲ. ಹಾಗಾಗಿ ಅಂತಹಾ ಭಯಗಳಿಗೆ ಒಳಗಾಗಬೇಕಿಲ್ಲ ಎನ್ನುವುದು ತತ್‌ ಕ್ಷಣದ ಪರಿಹಾರದ ಉತ್ತರ. ಉದಾಹರಣೆಗೆ ನಾವೀಗ ಅದೆಷ್ಟು ಪಾಸ್‌ ವರ್ಡ್‌ಗಳನ್ನು ನೆನಪಿಟ್ಟುಕೊಳ್ಳುತ್ತಿದ್ದೇವೆ ಅಲ್ಲವೇ? ಫೋನ್‌ ನಂಬರುಗಳ ಜಾಗದಲ್ಲಿಂದು ಪಾಸ್‌ ವರ್ಡ್‌ ಗಳು ಬಂದಿವೆ! ಆದರೂ ನೆನಪು ಎನ್ನುವುದು ನಾವೇ ಉದ್ದೇಶ ಪೂರ್ಕವಾಗಿ ಮತ್ತೆ ಮತ್ತೆ ಅನುರಣಿಸುವುದರ ಮೂಲಕ ಹೆಚ್ಚಿಸಿಕೊಳ್ಳಬಹುದಾದ ಶಕ್ತಿ. ಜೊತೆಗೆ ಒಂದಷ್ಟು ಮೂಲಭೂತವಾದ ಅವ್ಯಕ್ತವಾದ ಸಾಮರ್ಥ್ಯಯೂ ಹೌದು. ಹಾಗಾಗಿ ನಾವು ವಿಕಾಸದಲ್ಲಿ ಗಳಿಸಿಕೊಂಡ ಎಲ್ಲಾ ಶಕ್ತಿ, ಸಾಮರ್ಥ್ಯಗಳೂ ವಿಕಾಸದಲ್ಲಿಯೇ ಬದಲಾಗಬೇಕೇ ವಿನಾಃ ಸಣ್ಣ-ಪುಟ್ಟ ನಿರ್ಧಾರಗಳಲ್ಲಿ ಬದಲಾಗಲಾರವು. ವಿಕಾಸದ ಹಾದಿಯಲ್ಲಿಯೇ ನಮ್ಮ ಮನಸ್ಸಿನ-ಮೆದುಳಿನ ಕೆಲಸ ಕಾರ್ಯಗಳೂ ಕೈಗೆ, ಕೈ ಬೆರಳಿಗೆ ಬಂದೂ ಮತ್ತೊಂದು ಬಗೆಯಲ್ಲಿ ವಿಕಾಸದ ಹಾದಿಯನ್ನೂ ತರುತ್ತಿವೆ. ಹೀಗೂ ಬದಲಾಗುತ್ತಿರುವ ಮಾನವರ ಬದುಕು, ಇಲೆಕ್ಟ್ರಾನಿಕ್ಸ್‌ ಪ್ರಭಾವದೊಳಗೂ ಸಾಧ್ಯವಾಗುತ್ತಿರಬಹುದು. ಆದರೂ ಮಾನವ ನಿರ್ಮಿತಿಯ ಒಳಗೊಂದು -ಸಣ್ಣ ಕಾವಲು- ಅಗತ್ಯವೆನ್ನುದಂತೂ ಹೌದು.

ಇಲೆಕ್ಟ್ರಾನಿಕ್ಸ್‌ ಎಂಬ ಒಂದು ಅನಿವಾರ್ಯ ಜಗತ್ತು  

ಮಾನವ ಕುಲವು ಇಲೆಕ್ಟ್ರಾನಿಕ್ಸ್‌ ಜೊತೆಗೆ ಸಾಕಷ್ಟು ದೂರ ಸಾಗಿ ಬಂದಿದೆ. ಕಳೆದ ಎರಡು-ಮೂರು ದಶಕಗಳಲ್ಲಿ ಬಹು ಪಾಲು ಜೀವನ ಕಳೆದ ಯುವ ಜನತೆ ತಮಗರಿವಿಲ್ಲದೆ ಇಲೆಕ್ಟ್ರಾನಿಕ್ಸ್‌ನ ಪರಿಧಿಯೊಳಗಿದ್ದಾರೆ. ಸಂವೇದನೆ-ಸಂಕೇತಗಳು ಇಂದು ಇಲೆಕ್ಟ್ರಾನಿಕ್ಸ್‌ನ ಸಾಧ್ಯತೆಯ ಒಳಗೇ ನಡೆಯುವ ವಾತಾವರಣ ಸೃಷ್ಟಿಯಾಗಿದೆ. ಬದುಕು ಸಂಪೂರ್ಣ ಅವುಗಳ ನಡುವೆಯೇ ಮುಂದುವರೆಯುತ್ತಿದೆ. ಇಂದು ಎಂದಿಲ್ಲದ ಜಾಣತನ ಅವಶ್ಯಕವಾಗಿದೆ. ನಮ್ಮಲ್ಲಿರುವ ಉಪಕರಣಗಳೆಲ್ಲವೂ ಒಳಿತು-ಕೆಡುಕುಗಳೆರಡರ ಅಂಚುಗಳ ಕತ್ತಿಗಳಾಗಿವೆ. ಇಂದಿನ ಸಾಮಾಜಿಕ ಮಾಧ್ಯಮಗಳು, ಜಾಲತಾಣಗಳು, ಮೊಬೈಲು ಬಳಕೆ ಇವೆಲ್ಲವನ್ನೂ ಮಾನವತೆಯ ಹಿತದಲ್ಲಿ ಹಾಗೂ ಜಾಣತನದಿಂದ ನಿಭಾಯಿಸುವ ಅಗತ್ಯ ಹೆಚ್ಚಾಗಿದೆ. ನಮ್ಮ ಜಾಣತನವನ್ನು ನಮ್ಮ ಕೈಯಲ್ಲಿ, ನಮ್ಮ ಮನಸ್ಸಿನಲ್ಲೇ ಇಟ್ಟುಕೊಂಡು ನಿಭಾಯಿಸುವುದರಿಂದ ಈ ಎಲ್ಲಾ ಇಲೆಕ್ಟ್ರಾನಿಕ್ಸ್‌ ಉಪಕರಣಗಳ ಜಗತ್ತನ್ನು ನಾವೇ ಆಳಬಹುದು. ಇನ್ನೂ ಸುಂದರವಾದ ಬದುಕನ್ನು ಕಟ್ಟಿಕೊಳ್ಳಬಹುದು. 

ಇಲೆಕ್ಟ್ರಾನಿಕ್ಸ್‌ ಜಗತ್ತು ಮತ್ತು ಸಾಮಾಜಿಕ ಜವಾಬ್ದಾರಿ

ಆರಂಭದಲ್ಲಿ ಪ್ರಸ್ತಾಪಿಸಿದಂತೆ ಮೊಬೈಲು ಅದೆಷ್ಟು ಆವರಿಸಿಕೊಂಡಿದೆ ಎಂಬುದನ್ನು ಕಳೆದ ಕೆಲವು ವರ್ಷಗಳ ಅನುಭವಗಳು ಸಾಬೀತು ಮಾಡಿವೆ. ಅದರೊಟ್ಟಿಗೆ ಒಂದು ಬಗೆಯ ಭಯವನ್ನೂ ತಂದೊಡ್ಡಿವೆ. ಈ ಭಯದ ಮೂಲ ಕಾರಣ ಮಾನವರ ಮಾನಸಿಕ ದೌರ್ಬಲ್ಯದ ಚೌಕಟ್ಟಿನೊಳಗೆ ಸೃಷ್ಟಿಯಾದ ಹೊಸತೊಂದು ಸವಾಲು. ಕಾರಣ ಇಷ್ಟೇ! ಈ ಜಗತ್ತು ಸುಲಭವಾಗಿ ಸಾಧಿಸಿರುವ ನೆಟ್‌ವರ್ಕ್‌. ಅಂದರೆ ಸಂಪರ್ಕ ಸಾಧ್ಯತೆ ಹಾಗೂ ಮನಸ್ಸುಗಳ ಜಾಲ! ಎಲ್ಲಾ ಕಾಲದಲ್ಲೂ ಇದ್ದಿರುವ ಭಯಗಳೇ ಇಂದೂ ಸಿಕ್ಕಿರುವ ಸವಲತ್ತುಗಳನ್ನು ಬಳಸಿಯೇ ಹೆಚ್ಚಿಸಿವೆ. ಇಲೆಕ್ಟ್ರಾನಿಕ್ಸ್‌ ಜಗತ್ತಿನ ಅನ್ವೇಷಣೆ, ಅನ್ವಯಗಳು ಇಂದು ನಿನ್ನೆಯವಲ್ಲ. ಹಾಗೆಯೇ ಇವೇನೂ ತೀರಾ ನೈಸರ್ಗಿಕ ನಿಯಮಗಳನ್ನೂ ಮೀರಿ ವರ್ತಿಸುವ ಸಾಧ್ಯತೆಯವೂ ಅಲ್ಲ. ಆದರೆ ಇವುಗಳು ವ್ಯಾವಹಾರಿಕ ಜಗತ್ತಿನ್ನೊಳಗೆ ಆಳುವ ಸಮುದಾಯಗಳನ್ನು ಸೃಷ್ಟಿಸುವುದರಿಂದ ಸಾಮಾಜಿಕ ಜವಾಬ್ದಾರಿಯ ಮಾತುಗಳನ್ನೂ ಇಲ್ಲಿ ವಿವೇಚಿಸಬೇಕಿದೆ.

ಇದಕ್ಕಿರುವ ಪ್ರಬಲ ಕಾರಣ ಇವುಗಳು ಸೃಜಿಸುತ್ತಿರುವ ಬದಲಾವಣೆಯ ವೇಗ. ಏಕೆಂದರೆ ಸಹಜವಾಗಿ ನೈಸರ್ಗಿಕ ಬದಲಾವಣೆಗಳು ನಿಧಾನ ಗತಿಯವು. ಮಾನವ ಸಹಜವಾದ ಜೈವಿಕ ಹೊಂದಾಣಿಕೆಯು ನಿಸರ್ಗದ ಅವಲಂಬನೆಯಾಗಿದ್ದು ವೇಗವನ್ನು ತಾಳಿಕೊಳ್ಳಲೂ ಕಲಿಯುವಂತಹ ವಿಕಾಸವನ್ನು ಹೊಸ ಬದಲಾವಣೆಯ ಜಗತ್ತು ತಂದಿಟ್ಟಿದೆ. ಇದು ಆಲೋಚಿಸಿದಾಗ ಭಯವನ್ನು ತರುವ ಎಲ್ಲಾ ಸಹಜವಾದ ಕಾರಣಗಳಿವೆ. ಇದರ ಮೂಲವೂ ಸಹಾ ವ್ಯಾವಹಾರಿಕ ಲಾಭದ ಹಿಂದೆ ಹೋಗುವ ಮಾನವ ಲಕ್ಷಣವನ್ನು ಅವಲಂಬಿಸಿದೆ ಎನ್ನುವುದನ್ನೂ ಭಯದ ಮನಸ್ಸುಗಳು ತಿಳಿಯಬೇಕಾಗುತ್ತದೆ. ಏಕೆಂದರೆ ಹಿಂದಿನಿಂದಲೂ ಈ ಲಾಭದ ಚಟುವಟಿಕೆಗಳೇ ಮುಂಚೂಣಿಯಲ್ಲಿ ಇರುವುದರಿಂದ ಇದೇನೂ ಹೊಸತಲ್ಲ. ಆದರೂ ಹೊಸ ಹೊಸ “ಆಪ್‌ಗಳು” ಇದ್ದಕ್ಕಿಂದಂತೆ -ಬೇಕೋ, ಬೇಡವೋ- ಎದುರಾಗುವುದರಿಂದ “ಜವಾಬ್ದಾರಿ” ಎನ್ನುವ ತರ್ಕದಲ್ಲಿ ಇವುಗಳನ್ನು ನೋಡಬೇಕಾಗುತ್ತದೆ. ಇದರ ಪರಿಹಾರಕ್ಕೆ ಇದೇ ಇಲೆಕ್ಟ್ರಾನಿಕ್‌ ಜಗತ್ತೇ ಸೃಷ್ಟಿಸಿರುವ ತಿಳಿವಿನ ಜಾಲವನ್ನೂ ಬಳಸುವ ಜಾಣ್ಮೆಯನ್ನು ತೋರಬೇಕಾಗುತ್ತದೆ.

(ಈ ಲೇಖನದ ತಯಾರಿಯಲ್ಲಿ ವಿಷಯದ ವೈಜ್ಞಾನಿಕ ಚರ್ಚೆ ಮತ್ತು ಬರಹದ ನೆರವಿನಲ್ಲಿ ಡಾ. ಟಿ.ಎಸ್.‌ ಚನ್ನೇಶ್‌, ಅವರ ಸಹಾಯಕ್ಕಾಗಿ ಕೃತಜ್ಞತೆಗಳನ್ನು ತಿಳಿಸುತ್ತೇನೆ)

ಶ್ರೀಮತಿ ಕೃಪ ರಾಮ್‌ದೇವ್

ಇಲೆಕ್ಟ್ರಾನಿಕ್ಸ್‌ ವಿಭಾಗದ ಮುಖ್ಯಸ್ಥರು, ಸೌಂದರ್ಯ ಕಾಂಪೋಜಿಟ್‌ ಪಿ.ಯು. ಕಾಲೇಜು. ಹಾವನೂರ್‌ ಬಡಾವಣೆ, ಬೆಂಗಳೂರು – 560 073

This Post Has 3 Comments

  1. Shobha

    Welcome smt Krupa and wedone.
    Awareness towards applications of electronic science and technology in daily life is highlighted in Ur article.
    Very good, keep it up.
    Congratulations.
    Regards
    shobha29devi@gmail.com.

  2. Jyothi

    ಕೃಪ ಮೇಡಂ ನಿಮ್ಮ ಬರಹ ತುಂಬಾ ಚೆನ್ನಾಗಿದೆ ಕನ್ನಡ ಭಾಷೆಯ ಸೊಬಗೂ ತಿಳಿಯುತ್ತಿದೆ. ನೀವು ಈ ಲೇಖನದಲ್ಲಿ ಹೇಳಿರುವ ಹಾಗೆ ಶಿಕ್ಷಣ ವಿಭಾಗದ ಮುಖ್ಯಸ್ಥರು, ಮಂತ್ರಿಗಳೂ ಇದನ್ನು ಅವಲೋಕಿಸಿ ವಿದ್ಯುನ್ಮಾನ ಕ್ಷೇತ್ರದಲ್ಲಿ ಒಂದು ಒಳ್ಳೆಯ ಬದಲಾವಣೆ ಬರಲೆಂದು ಹಾರೈಸುತ್ತೇನೆ. ನಶಿಸುತ್ತಿರುವ ಈ electronics (ವಿದ್ಯುನ್ಮಾನ ) ವಿಷಯ ಇನ್ನಾದರೂ ಪಳೆಯುಳಿಕೆ ಆಗದಿರಲ್ಲಿ

  3. ಸಲಹಾ ಕೃಷ್ಣಮೂರ್ತಿ

    ನಗರ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಮೂಲಭೂತ ವಿಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಬಗ್ಗೆ ಪ್ರಾರಂಭಿಕ ತಿಳುವಳಿಕೆಯನ್ನು ಕೊಡಲು ಅತ್ಯಂತ ಉತ್ತಮ ಲೇಖನ ಇದಾಗಿದೆ. ತುಂಬಾ ಧನ್ಯವಾದಗಳು

Leave a Reply