You are currently viewing ಬಡವ-ಬಲ್ಲಿದರನು ಒಂದು ಮಾಡಿದ ರಾಗಿ : Eleusine coracana

ಬಡವ-ಬಲ್ಲಿದರನು ಒಂದು ಮಾಡಿದ ರಾಗಿ : Eleusine coracana

ಹಿಂದೆಲ್ಲಾ ರಾಗಿಯಿಂದ ಮುದ್ದೆ, ಅಂಬಲಿ, ರೊಟ್ಟಿ ಹೊರತಾಗಿ ಅದರಿಂದ ಇತರೆ ತಿನಿಸುಗಳನ್ನು ತಯಾರಿಸುತ್ತಿರಲಿಲ್ಲ. ಕಳೆದ ಕೆಲವು ವರ್ಷಗಳಿಂದ ಹೋಟೆಲುಗಳಲ್ಲಿ ರಾಗಿಯ ಇಡ್ಲಿ-ದೋಸೆ, ಬೇಕರಿಗಳಲ್ಲಿ ರಾಗಿ ಬಿಸ್ಕತ್ತು-ಬ್ರೆಡ್ ದೊರೆಯುತ್ತಿದೆ. ಆರೊಗ್ಯದ ಹಿತದಲ್ಲಿ ರಾಗಿಯು ಆಧುನಿಕ ಖಾದ್ಯಗಳಲ್ಲೂ ಬಳಕೆಯಾಗುತ್ತಿದ್ದರೂ, ಒಂದು ರೀತಿಯಲ್ಲಿ ರಾಗಿಗೆ ಒಂದು ಹೊಸ ಮೌಲ್ಯ ಸಿಕ್ಕಂತಾಗಿದೆ. ರಾಗಿ ಮತ್ತು ಅಕ್ಕಿ ಅಥವಾ ಗೋಧಿಯ ನಡುವಿರುವ ಬಣ್ಣದ ವ್ಯತ್ಯಾಸಗಳಿಂದಾದ ಬಳಕೆಯ ಕಾರಣದ ಜೊತೆಗೆ ಕೆಲವು ತಿನಿಸುಗಳ ತಯಾರಿಯಲ್ಲಿ ಒಗ್ಗುವ ಬಗೆ ಕೂಡ ಮೌಲ್ಯಮಾಪನದಲ್ಲಿ ಸೇರಿದೆ ಇದೇ ಪ್ರಮುಖ ಕಾರಣವಾಗಿ ಹಿಂದೆಲ್ಲಾ ರಾಗಿಗೂ ಅಕ್ಕಿ ಅಥವಾ ಗೋಧಿಗೂ ಮಾರುಕಟ್ಟೆಯ ದರದಲ್ಲೂ ಸಾಕಷ್ಟು ವ್ಯತ್ಯಾಸವಿದ್ದು ರಾಗಿಯು ಬಡವರ, ಅಕ್ಕಿ/ಗೋಧಿಯು ಬಲ್ಲಿದರ ಆಹಾರ ಧಾನ್ಯವಾಗಿತ್ತು. ಇದೀಗ ಆರೋಗ್ಯದ ಲಾಭಗಳಿಂದ ರಾಗಿಯೂ ಬಲ್ಲಿದರ ಆಕರ್ಷಣೆಗೆ ಒಳಗಾಗಿದ್ದು ಒಂದು ಬಗೆಯಲ್ಲಿ ಇಬ್ಬರನ್ನೂ ಒಂದು ಮಾಡಿದೆ. 

          ಹದಿನಾರನೆಯ ಶತಮಾನದ ಸಂತ ಕವಿ ಕನಕದಾಸರ “ರಾಮ ಧಾನ್ಯ ಚರಿತೆ” ಎಂಬ ಕಾವ್ಯವು ರಾಗಿಯನ್ನು ರಾಮಧಾನ್ಯ ಎಂಬುದಾಗಿ ಅದರ ಶ್ರೇಷ್ಠತೆಯನ್ನು ಎತ್ತಿಹಿಡಿದ ಸಾಂಕೇತಿಕ ಕಥನ.  ಅಕ್ಕಿ ಮತ್ತು ರಾಗಿಯ ನಡುವೆ ಹೆಚ್ಚುಗಾರಿಕೆಯ ಪಂದ್ಯದಲ್ಲಿ, ಅಕ್ಕಿಗಿಂತಲೂ ಹೆಚ್ಚುಕಾಲ ಕೆಡದಂತೆ ಉಳಿಯಬಲ್ಲ ಮಾನದಂಡದಿಂದ ರಾಗಿಯನ್ನು ಶ್ರೇಷ್ಠವೆಂಬ ತೀರ್ಮಾನವನ್ನು ಶ್ರೀರಾಮನ ಮೂಲಕ ಕನಕದಾಸರು ಮಾಡಿಸುತ್ತಾರೆ. ಇದೊಂದು ವರ್ಗ ಸಂಘರ್ಷದ ಸಾಂಕೇತಿಕ ನಿರೂಪವೂ ಹೌದು. ರಾಗಿಯು ಬಡವ ಅಥವಾ ಕೆಳಸ್ತರದ ಜನರನ್ನೂ ಮತ್ತು ಅಕ್ಕಿಯು ಬಲ್ಲಿದ ಅಥವಾ ಮೇಲಿಸ್ತರದ ಜನರನ್ನೂ ಸಂಕೇತಿಸುವಂತೆ ಕನಕದಾಸರು ಕಾವ್ಯ ರಚನೆಯನ್ನು ಮಾಡಿದ್ದಾರೆ. ಕೆಳಸ್ತರದ ಜನಾಂಗದ ಕನಕದಾಸರು ರಾಗಿಯ ಶ್ರೇಷ್ಠತೆಗೆ ಸಾಂಸ್ಕೃತಿಕವಾಗಿ ಹೆಚ್ಚುಗಾರಿಕೆಯನ್ನು ಕೊಡಿಸಿದರೆ, ವೈಜ್ಞಾನಿಕವಾಗಿ ಪ್ರಾಮುಖ್ಯತೆಯನ್ನು ಕೊಡಿಸಿದ ವಿಜ್ಞಾನಿ ರಾಗಿ ಲಕ್ಷಣಯ್ಯನವರು ಕೂಡ ಕೆಳಸ್ತರದವರೇ! ಇವರ ವೈಜ್ಞಾನಿಕ ಕೊಡುಗೆಯನ್ನು ರಾಗಿಯ ಅಭಿವೃದ್ಧಿಯ ಕುರಿತಂತೆ ವಿವರವಾಗಿ ನಂತರ ನೋಡೋಣ.

                ಇದೀಗ ಇತ್ತೀಚೆಗಿನ ದಿನಗಳಲ್ಲಿ ರಾಗಿಯು ತನ್ನ ಪೋಷಕಾಂಶಗಳ ಮೌಲ್ಯದಿಂದ ಉತ್ತಮ ಆರೋಗ್ಯಕ್ಕಾಗಿ ಬಲ್ಲಿದರನ್ನೂ, ಮೇಲುಸ್ತರದ ಮಂದಿಯನ್ನೂ ಆಕರ್ಷಿಸಿ ಒಂದು ರೀತಿಯಲ್ಲಿ ಇಬ್ಬರನ್ನೂ ಒಂದು ಮಾಡಿದೆ. ರಾಗಿಯು ವಾರ್ಷಿಕ ಬೆಳೆ. ದಕ್ಷಿಣ ಭಾರತದ ಆಂಧ್ರ ಮತ್ತು ತಮಿಳುನಾಡಿನ ಕೆಲವು ಜಿಲ್ಲೆಗಳಲ್ಲಿ, ಜೊತೆಗೆ ದಕ್ಷಿಣ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಜನಪ್ರಿಯ ಆಹಾರ ಧಾನ್ಯ. ರಾಗಿಯು, ಒಂದು ಆಹಾರದ ಬೆಳೆಯಾಗಿ ಅಕ್ಕಿ, ಗೋಧಿ ಅಥವಾ ಜೋಳಗಳಿಗಿರುವಷ್ಟು ಮಾನ್ಯತೆಯನ್ನು ಬಹುಕಾಲ ಗಳಿಸದ ಬೆಳೆಯಾಗಿತ್ತು. ಮುಖ್ಯವಾಗಿ ರಾಗಿಯನ್ನು ಬೆಳೆವ ನೆಲದ ಹರಹು ತುಂಬಾ ಚಿಕ್ಕದು ಮತ್ತು ಇಳುವರಿಯೂ ಕಡಿಮೆ. ಆದರೆ ಅಕ್ಕಿ ಅಥವಾ ಗೋಧಿಯದು ಹಾಗಲ್ಲ! ಹೆಚ್ಚಿನ ಇಳುವರಿಯಿಂದ ಮತ್ತು ಜಾಗತಿಕವಾದ ಹರಹಿನಿಂದ ಹಿರಿದಾದವು. ಈ ಎಲ್ಲವೂ ಹುಲ್ಲಿನ ಜಾತಿಯ ಬೆಳೆಗಳೇ ಆದರೂ ತನ್ನ ಬಣ್ಣದಿಂದಾಗಿ, ಜೊತೆಗೆ ಅದರಿಂದ ತಯಾರಿಸಲಾಗುವ ಸಂಪ್ರದಾಯಿಕ ತಿನಿಸುಗಳಿಂದಾಗಿ ರಾಗಿಯ ಮೌಲ್ಯ ಅಷ್ಟಕಷ್ಟೇ! ಇದೀಗ ಅಕ್ಕಿ-ಗೋಧಿಗಳ ಆಧುನಿಕ ತಿನಿಸುಗಳಾದ ದೋಸೆ, ಬ್ರೆಡ್ಡು ಬಿಸ್ಕತ್ತುಗಳಲ್ಲೂ ರಾಗಿಯು ತನ್ನ ಚಮತ್ಕಾರವನ್ನು ತೋರಿಸುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿ.

                ರಾಗಿಯ ತೆನೆಯು ಕೈಬೆರಳುಗಳನ್ನು ಹೋಲುವುದರಿಂದ, ರಾಗಿಯನ್ನು ಇಂಗ್ಲೀಷಿನಲ್ಲಿ ಫಿಂಗರ್ ಮಿಲೆಟ್ ಎನ್ನುತ್ತಾರೆ.  ಹುಲ್ಲಿನ ಜಾತಿಯ ಸಸ್ಯಕುಟುಂಬವಾದ ಪೊಯೇಸಿಯೆ(Poaceae)ಕ್ಕೆ ಸೇರಿದ ರಾಗಿಯ ವೈಜ್ಞಾನಿಕ ಹೆಸರು ಎಲ್ಯುಸಿನೆ ಕೊರೆಕಾನ (Eleusine coracana). ಇದರ ಮೂಲ ತವರು ಪೂರ್ವ ಆಫ್ರಿಕಾದ ಇಥಿಯೊಪಿಯಾ ಮತ್ತು ಉಗಾಂಡಾದ ಎತ್ತರದ ಪ್ರದೇಶಗಳು. ಇದೇ ಕಾರಣದಿಂದ ರಾಗಿಯನ್ನು  ಆಫ್ರಿಕನ್ ಮಿಲೆಟ್ ಎಂದೂ ಕರೆಯಲಾಗುತ್ತದೆ. ಈ ಪ್ರಭೇದವು ಎಲ್ಯುಸಿನೆ ಆಫ್ರಿಕಾನ (Eleusine africana) ದಿಂದ ವಿಕಾಸವಾಗಿದೆ. ಮೂಲ ತವರು ಆಫ್ರಿಕಾದ ಕಾರಣವನ್ನು ಆಫ್ರಿಕಾನವು ಪ್ರತಿನಿಧಿಸುತ್ತಿದೆ.

                ಎಲ್ಯುಸಿನೆ ಇಂಡಿಕಾ (Eleusine indica) ಎಂಬ ರಾಗಿಯ ಸಂಬಂಧಿಯೊಂದು ಇಂಡಿಯಾ ಮತ್ತು ಆಫ್ರಿಕಾದಲ್ಲಿ ಮಾತ್ರವಲ್ಲದೆ ಇಡೀ ಜಗತ್ತಿನಾದ್ಯಂತ ಹಬ್ಬಿದ್ದು, ಒಂದು ಕಳೆಯಾಗಿ ಪ್ರಚಲಿತವಾಗಿದೆ.  ವಿಶೇಷವೆಂದರೆ ಈ ಇಂಡಿಕಾವು ಸಹಾ ಆಹಾರವಾಗಿ ಬಳಸಬಲ್ಲ ಪ್ರಭೇದವಾಗಿದೆ. ಇದು ಅತ್ಯಂತ ಒಣ ಪ್ರದೇಶದಲ್ಲೂ ತೀವ್ರ ಬಿಸಿಲನ್ನೂ ತಡೆದುಕೊಂಡು ಬೆಳೆಯಬಲ್ಲದು. ಅನೇಕ ಒಣ ಪ್ರದೇಶಗಳಲ್ಲಿ ಅತ್ಯಂತ ಬರಗಾಲದ ಸಂದರ್ಭಗಳಲ್ಲಿ ಹಲವು ಜನಾಂಗಗಳು ಇಂಡಿಕಾದ ಕಾಳುಗಳನ್ನು ಒಕ್ಕಲು ಮಾಡಿ ಬಳಸಿದ ಉದಾಹರಣೆಗಳಿವೆ.  ಜಗತ್ತಿನಾದ್ಯಂತ ಇದೊಂದು ಉಪದ್ರವದ ಕಳೆಯಾಗಿ ಪರಿಚಿತವಾಗಿದೆ. ಎಂತಹಾ ಒಣ ವಾತಾವರಣವನ್ನೂ ತಡೆದುಕೊಂಡು ಹಬ್ಬುವ ಪ್ರವೃತ್ತಿಯಿಂದ ಹೀಗೆ ಜನಪ್ರಿಯವಾಗಿದೆ.

                ರಾಗಿಯು ಕ್ರಿಸ್ತ ಪೂರ್ವ 2000 ದಲ್ಲೇ ವಿಕಾಸಗೊಂಡಿರುವ ಬಗೆಗೆ ಕುರುಹುಗಳು ಸಿಕ್ಕಿವೆ. ಹಾಗೆಯೇ ಭಾರತದಲ್ಲೂ ಕ್ರಿ.ಪೂ. 1800ರಷ್ಟು ಹಿಂದಿನ ಪಳೆಯುಳಿಕೆಗಳ ದಾಖಲೆಗಳೂ ಸಹಾ ಸಿಕ್ಕಿವೆ.  ಹಾಗಾಗಿ ಮೂಲ ತವರನ್ನು ದಾಟಿ ಕೆಲವೇ ಶತಮಾನಗಳಲ್ಲಿ ಭಾರತವನ್ನು ರಾಗಿಯು ತಲುಪಿದೆ.  ಜಗತ್ತಿನ ಒಟ್ಟು ರಾಗಿಯ ಉತ್ಪಾದನೆಯ ಪ್ರತಿಶತ 35ಕ್ಕೂ ಹೆಚ್ಚು ಪಾಲನ್ನು ನಮ್ಮ ದೇಶವು ಮಾಡುತ್ತದೆ. ಅದರಲ್ಲಿ ಪ್ರತಿಶತ 60ರಷ್ಟು ಪಾಲು ನಮ್ಮ ರಾಜ್ಯ ಒಂದೇ ನಿರ್ವಹಿಸುತ್ತಿದೆ. ಸ್ವಾತಂತ್ರ್ಯದ ಪೂರ್ವದಲ್ಲಿ ಹಾಗೂ ಹಸಿರು ಕ್ರಾಂತಿಯ ದಿನಗಳಲ್ಲಿ ರಾಗಿಯ ಸ್ಥಾನ ಮಾನವು ಹೆಚ್ಚೇನೂ ಪ್ರಾಮುಖ್ಯತೆಯನ್ನು ಪಡೆದಿರಲಿಲ್ಲ. ರಾಗಿಯ ಇಳುವರಿಯು ಎಕರೆಗೆ 3-4 ಕ್ವಿಂಟಾಲ್ ದಾಟುತ್ತಿರಲಿಲ್ಲ. ಅಕ್ಕಿ-ಗೋಧಿಗಳು ಹತ್ತಾರು ಕ್ವಿಂಟಾಲ್ ಇಳುವರಿಯಿಂದ ಅವುಗಳ ಹೆಚ್ಚಿನ ಆಹಾರೋತ್ಪಾದನೆಯ ಶಕ್ತಿಯಲ್ಲಿ ಹೆಸರು ಪಡೆದಿವೆ.   

                ಸಣ್ಣ ಕಾಳಿನ ರಾಗಿಯ ಹೊರ ಮೈಯ ಹರಹು ಅಷ್ಟೇ ತೂಕದ ಇತರೆ ಯಾವುದೇ ಕಾಳುಗಳಿಗಿಂತಾ ಹೆಚ್ಚಾಗಿರುತ್ತದೆ. ಆದ್ದರಿಂದ ರಾಗಿಯು ಹೆಚ್ಚು ನಾರಿನಂಶವನ್ನು ಹೊಂದಿರುತ್ತದೆ. ಜೊತೆಗೆ ನಮ್ಮ ಮೂಳೆಗಳು ಬಲಗೊಳ್ಳಲು ಬೇಕಾದ ಕ್ಯಾಲ್ಸಿಯಂಅನ್ನೂ ಸಾಕಷ್ಟು ಪ್ರಮಾಣದಲ್ಲಿ ಹೊಂದಿದೆ. ಇವುಗಳ ಜೊತೆಗೆ ಹಲವು ವಿಟಮಿನ್ನುಗಳಿಂದ ಆಹಾರದಲ್ಲಿ ಅದರ ಹೊಸ ಹೊಳಹುಗಳು ಸೇರಿಕೊಂಡು ಆಧುನಿಕ ಮೌಲ್ಯಗಳಿಂದ ಕಳೆದ ಒಂದು ದಶಕದಲ್ಲಿ ಎರಡರಿಂದ ಎರಡೂವರೆ ಪಟ್ಟು ಬೆಲೆಯೂ ಹೆಚ್ಚಿದೆ. ಅಲ್ಲದೆ ಹತ್ತು ಹಲವು ತಿನಿಸುಗಳಲ್ಲಿ ಒಂದಾಗಿ ಬಹು ಪಾಲು ಜನರ ನಾಲಿಗೆಯನ್ನೂ ತಣಿಸಿದೆ.

                ನಮ್ಮ ದೇಶದಲ್ಲಿ ರಾಗಿಯ ಸ್ಥಿತಿ-ಗತಿಯು ತೀರಾ ಕೆಳಮಟ್ಟದಲ್ಲಿದ್ದ ಕಾರಣದಿಂದ ಹಾಗೂ ಅದರ ಆಹಾರೋತ್ಪಾದನೆಯ ಅಭಿವೃದ್ಧಿಯಲ್ಲಿ ಬಳಸಬೇಕಿದ್ದ ವನ್ಯ ತಳಿಗಳೂ ನಮ್ಮಲ್ಲಿ ಇರದಿದ್ದ ಕೊರತೆಯಿಂದಾಗಿ ಆಧುನಿಕ ವಿಜ್ಞಾನದ ಅಭಿವೃದ್ಧಿಯಲ್ಲೂ ಮೊದ ಮೊದಲು ಹಿಂದೆಯೇ ಉಳಿದದ್ದಲ್ಲದೆ ಯಾರಿಗೂ ಆ ಕುರಿತು ಆಸಕ್ತಿಯೂ ಇರಲಿಲ್ಲ. ಇಂತಹ ಸಂದರ್ಭದಲ್ಲಿ ಕರ್ನಾಟಕದ ಮೈಸೂರು-ಮಂಡ್ಯ ಜಿಲ್ಲೆಯಲ್ಲಿ ಅಚ್ಚರಿಯ ಬೆಳವಣಿಗೆಯೊಂದು ಕೃಷಿ ವಿಶ್ವವಿದ್ಯಾಲಯದಲ್ಲಿ ಆಗಷ್ಟೆ ಸೇವೆಯನ್ನು ಆರಂಭಿಸಿದ್ದ -ಮುಂದೆ ರಾಗಿ ಲಕ್ಷಣಯ್ಯ ಎಂದೇ ಹೆಸರಾದ- ಲಕ್ಷಣಯ್ಯನವರಿಂದ ಸಾಧ್ಯವಾಯಿತು. ಹಾಗಾಗಿ ಪ್ರಸ್ತುತ ರಾಗಿಯನ್ನು ಲಕ್ಷಣಯ್ಯನವರಿಂದ ಬೇರ್ಪಡಿಸಿ ತಿಳಿಯಲು ಆಗದು. ಆರಂಭದ ದಿನಗಳಲ್ಲಿ ಆಫ್ರಿಕಾದ ತಳಿಗಳನ್ನು ತರಿಸುವುದರಿಂದಲ್ಲದೆ ಮುಂದೆ ಪರಕೀಯ ಪರಾಗಸ್ಪರ್ಶಕ್ಕೆ ಒಗ್ಗಿಸಿದ ಕೀರ್ತಿಯಿಂದ ಲಕ್ಷಣಯ್ಯನವರು ಸಣ್ಣ ಕಾಳಿನ ರಾಗಿಗೆ ದೊಡ್ಡದಾದ ಸ್ಥಾನವನ್ನೇ ಕೊಡಿಸಿದರು. ಸುಮಾರು 40ವರ್ಷಗಳಿಗೂ ದೀರ್ಘಾವಧಿಯ ಅವರ ವಿವರಗಳಿಂದ ರಾಗಿಯ ಕಥನವನ್ನು ಮುಂದುವರೆಸೋಣ.

ರಾಗಿಯ ಬೆನ್ನು ಹತ್ತಿದ್ದ ಸಂತ

                ವಿಜ್ಞಾನದಲ್ಲಿ ಸಾಧನೆಯ ಬೆನ್ನು ಹತ್ತುವವರಿಗೆ ಗುರಿಯು ಕಾಣದ ಆಗಸದ ಅಂಚು ಒಂದು ತುದಿಯಲ್ಲಿದ್ದರೆ, ಮತ್ತೊಂದು ತುದಿ ಇಲ್ಲೇ ಇದ್ದೂ ಕಾಣದಷ್ಟು ಸಣ್ಣ ನ್ಯಾನೋ ಕಣಗಳತ್ತಲೋ ಅಥವಾ ಜೀವಿಕೋಶಗಳ ಒಳಹೊಕ್ಕು ನ್ಯೂಕ್ಲಿಯಸ್ಸಿನಲ್ಲಿರುತ್ತದೆ. ಉಪಗ್ರಹವನ್ನು ರಾಕೇಟಿನಲ್ಲಿ ನಭಕ್ಕೆ ಚಿಮ್ಮಿಸುವ ಅಥವಾ ಜೀವಿಕೋಶದ ಡಿ.ಎನ್.ಎ.ಯನ್ನೇ ಏಣಿಯಾಗಿಸಿ ತಮ್ಮ ಛಾಪು ಮೂಡಿಸುವ ಪೀಠವನ್ನು ಅಲಂಕರಿಸುವ  ಕಾತರತೆಯಲ್ಲಿ ಸಾಧನೆಯು ಅಡಗಿರುತ್ತದೆ. ಇಷ್ಟೆಲ್ಲಾ ಆಗಸದಾಚೆಗಿನ ದೂರ ಹಾಗೂ ಒಳಗಿನ ಬ್ರಹ್ಮಾಂಡದ ಊಹೆಗೆ ನಿಲುಕದ ದೂರವನ್ನೂ ಸಾಗದೆ, ಹೆಚ್ಚೆಂದರೆ ರಾಜ್ಯದಲ್ಲೇ ಮೈಸೂರು, ಮಂಡ್ಯ, ಕೋಲಾರ ಚಿತ್ರದುರ್ಗಗಳ ದೂರದಲ್ಲಿ ಹರಡಿರುವ ರಾಗಿಯನ್ನು ಬೆನ್ನು ಹತ್ತಿದ ಲಕ್ಷಣಯ್ಯನವರು   ಸದ್ದಿಲ್ಲದೆ ಸಾಧಿಸಿ ರಾಗಿ ಬೆಳೆವ ರೈತರಲ್ಲೂ ಹುರುಪನ್ನು ತುಂಬಿದರು. ಬೆಳೆಗೂ ವಿಶೇಷತೆಯನ್ನು ತಂದುಕೊಟ್ಟರು.  

                ಬಿಳಿಯ ಬಣ್ಣದ ಅಕ್ಕಿಯನ್ನೋ, ಕಂದು-ಬಿಳಿ ಛಾಯೆಯ ಗೋಧಿಯನ್ನೋ ಅಥವಾ ಬಣ್ಣ-ಬಣ್ಣದ ತರಕಾರಿಗಳನ್ನೋ ಬೆನ್ನು ಹತ್ತಿದ್ದರೆ ಮಂಡ್ಯ -ಮೈಸೂರಿರಲಿ, ಬಾಗಲಕೋಟೆಯನ್ನೂ ದಾಟಿ ಮಹಾರಾಷ್ಟ್ರ ತಲುಪಿ ಮುಂಬೈಗುಂಟ ಒಂದಷ್ಟು ದೇಶಗಳನ್ನಾದರೂ ಸುತ್ತಿ ಬರಬಹುದಿತ್ತು. ಹೇಳಿ ಕೇಳಿ ರಾಗಿ! ತುಂಗಾ-ಭದ್ರಾ ನದಿಯ ದಾಟಿ ಹೋಗುವಷ್ಟೂ ಆಗಲಿಲ್ಲ. ಚಿತ್ರದುರ್ಗದ ಕೋಟೆಯೇ ಕೊನೆಯಾಯಿತು. ಇತ್ತ ಕಾವೇರಿಯ ಬಳಸಿಯೂ ಸಾಗಲಿಲ್ಲ. ಅಂತಹದ್ದರಲ್ಲಿ, ಇಲ್ಲೇ ಕಾವೇರಿ ವಂಚಿತ ಬಂಜರು ನೆಲದಿಂದಲೇ ಹೊಟ್ಟೆ ತುಂಬಿಸುವಂತೆ ಮಾಡಲು ತಪ್ಪಸ್ಸಿಗೆ ಕುಳಿತು ಬರೋಬ್ಬರಿ ತಮ್ಮ ಇಡೀ ಸೇವೆಯನ್ನು ಒಂದೇ ಬೆಳೆಗೆ ಮುಡುಪಾಗಿಟ್ಟು, ರಾಗಿಯ ಜೊತೆಗೆ ನನ್ನ ಸಂಸಾರ ಎಂದೇ ಕರೆದುಕೊಳ್ಳುತ್ತಿದ್ದವರು ರಾಗಿ ಲಕ್ಷಣಯ್ಯ!. ಇವರನ್ನು ಬರಿ ಲಕ್ಷ್ಮಣಯ್ಯನವರು ಎಂದರೆ ಸಾಕಾಗುವುದಿಲ್ಲ. ಅದು ರಾಗಿಗೂ ಗೌರವಸಲ್ಲಿಸಿದಂತೆ ಆಗುವುದಿಲ್ಲ. ಅದು ಲಕ್ಷ್ಮಣಯ್ಯನವರ ತಳುಕು ಹಾಕಿಕೊಂಡರೇನೇ ನಿಜವಾದ ಅರ್ಥದ ವಿಜ್ಞಾನಲೋಕದ ಸಂತಸವನ್ನು ನೆನಪಿಸಿಕೊಳ್ಳಲು ಸಾಧ್ಯ.

                ತಮ್ಮ ಜೀವಿತಾವಧಿಯಲ್ಲಿ ಯಾವುದೇ ಪದವಿ, ಪೀಠಗಳ ಅಲಂಕರಿಸದೇ ಜೀವಮಾನವಿಡೀ ಒಂದೇ ಬೆಳೆಯ ಸಂಶೋಧನೆಯಲ್ಲಿ ತೊಡಗಿದ್ದರು. ಅಷ್ಟಕ್ಕೂ ಯಾರಿಗೂ ಬೇಡವಾದ ಬೆಳೆ ಅದಾಗಿದ್ದುದರಿಂದ ಮತ್ತಾರೂ ಸ್ಪರ್ಧೆಯಲ್ಲಿರಲಿಲ್ಲ. ರಾಗಿ ಯಾವುದೇ ಪರಕೀಯ ಪರಾಗಸ್ಪರ್ಶವನ್ನೂ ಒಗ್ಗಿಸಿಕೊಳ್ಳದ ಮಹಾಹಟಮಾರಿ ಬೆಳೆ. ಲಕ್ಷ್ಮಣಯ್ಯನವರು ಮೈಸೂರು ಜಿಲ್ಲೆಯಲ್ಲಿ ಕೆಳವರ್ಗದ ಮನೆತನದಲ್ಲಿ ಹುಟ್ಟಿ, ಕಡುಬಡತನವನ್ನೆದುರಿಸಿ- ಅಂತಹದ್ದೇ ಅತೀ ಬಡವರ ಹೊಟ್ಟೆ ಹೊರೆವ, ಎಲ್ಲಾ ವೈಜ್ಞಾನಿಕ ಚಿಂತಕರಿಂದ ವಂಚಿತವಾದ ರಾಗಿ ಬೆಳೆಗೆ ಕೊಡುಗೆ ಇತ್ತವರು ಎಂಬುದಷ್ಟೇ ಅಲ್ಲದೆ, ಸ್ವಕೀಯ ಪರಾಗಸ್ಪರ್ಶದಿಂದ ಮಾತ್ರ ಕಾಳು ಕಟ್ಟುವ ಬಹು ಸಂಪ್ರದಾಯವಾದಿ ಬೆಳೆಯಲ್ಲಿ ಪರಕೀಯ ಪರಾಗ ‘ಸ್ಪರ್ಶ’ ದಿಂದ ಕಾಳುಕಟ್ಟಿಸಿದ, ವಿಜ್ಞಾನಿ. ಇಂತಹ ಸಂಪ್ರದಾಯಿ ಬೆಳೆಗೆ ಹಟತೊಟ್ಟು ಸತತ ಛಲಪಟ್ಟು ಸಹನೆಯಿಂದ ಅಸಾಧ್ಯವಾದ್ದನ್ನು ಸಾಧಿಸಿದವರು. ಸರಿ ಸುಮಾರು 40 ವರ್ಷಗಳಿಗೂ ಹೆಚ್ಚು ಕಾಲ ರಾಗಿಯ ಬೆನ್ನು ಹತ್ತಿದ್ದ ಅವರನ್ನು ಒಮ್ಮೆ ಭೇಟಿಯಾಗಿ ಅವರ ಮನೆಯಲ್ಲೇ ರಾಗಿ ಮುದ್ದೆಯನ್ನು ಊಟ ಮಾಡಿದ ಖುಷಿ ನನ್ನ ಜೊತೆಗಿದೆ.

ರಾಗಿ ಸಂಸ್ಕೃತಿಯ ಬೆನ್ನು ಹತ್ತಿ 

ರಾಗಿ ಒಂದು ವಿಶಿಷ್ಟ ಆಹಾರದ ಬೆಳೆ. ಇದಕ್ಕೆ ಮನಸೋಲುವಂತಹ ಬಣ್ಣ, ಆಕರ್ಷಣೆಗಳ್ಯಾವುವೂ ಇಲ್ಲ. ಇದಕ್ಕೆ ಅಂತರ ರಾಷ್ಟ್ರೀಯ ಜನಪ್ರಿಯತೆಯೂ ಇಲ್ಲ. ಅಂದಮೇಲೆ ಇದಕ್ಕೆ ವಿಶೇಷ ಮಮಕಾರ ವಿಜ್ಞಾನಿಗಳಿಗೆಲ್ಲಿ ಬರಬೇಕು. ಮಂಡ್ಯಾದ ವಿ.ಸಿ. ಫಾರಂನಲ್ಲಿ ಕೆಲಸಕ್ಕೆ ಸೇರಿಕೊಂಡ ಲಕ್ಷಣಯ್ಯನವರಿಗೆ ಅದೇನೋ ಇದರ ಬಗೆಗೆ ವಿಶೇಷ ಒಲವು. ಈ ಬೆಳೆಗೆ ಅಭಿವೃದ್ಧಿಯನ್ನು  ರುಚಿ ತೋರಿಸಬೇಕು, ಇದರ ಬಡ ಪಟ್ಟಿಯ ಖ್ಯಾತಿಯಿಂದ ಹೊಸತೊಂದು ಬಾಗಿಲನ್ನು ಕಾಣಿಸಿಬೇಕೆಂಬ ಆಲೋಚನೆ ಹೊಳೆಯಿತು. ಹೇಗೂ ಅದಕ್ಕೆಂದೇ ಸಂಯೋಜಿತ ಬೆಳೆ ಸಂಶೋಧನಾ ವ್ಯವಸ್ಥೆಗಳಿರಲಿಲ್ಲ. ಈ ವ್ಯಕ್ತಿ ವಿ.ಸಿ. ಫಾರಂನಲ್ಲಿ ಸಂಶೋಧನೆಗೆ ಜಮೀನನ್ನು ಅಣಿಮಾಡಿಸಿಕೊಂಡು, ಅದರ ಬೆನ್ನು ಹತ್ತಿದರು, ರಾಗಿಯ ಹಿಂದೆ ಹೋಗಲು ಅವರಿಗಿದ್ದ ಆಸಕ್ತಿ ಕರ್ನಾಟಕದ ಜನತೆಗೆ ಅದರಲ್ಲೂ ದಕ್ಷಿಣ ಭಾಗದವರಿಗೆ ಅದಕ್ಕಿರುವ ಸಾಂಸ್ಕೃತಿಕ ಸಂಬಂಧ.

          ಕಾವೇರಿಯಿಂದ ಗೋದಾವರಿಯವರೆಗೆ ಕವಿರಾಜ ಮಾರ್ಗವು ತೋರಿಸಿಕೊಟ್ಟ ಕರ್ನಾಟಕದ ಭೂಗೋಳದಿಂದ ಬೇರೆಯಾದ ರಾಗಿಯ ನೆಲೆಯ ಸಾಂಸ್ಕೃತಿಕ ಪಾಕಗಳು, ಕೇವಲ ಕಾವೇರಿಯನ್ನಷ್ಟೇ ನಚ್ಚಿಕೊಂಡು ಸಾಗಿತ್ತು. ಕರ್ನಾಟಕದ ವೇದಾವತಿ ಮತ್ತು ತುಂಗೆಭದ್ರೆಯರ ದಾಟಿದರೆ ರಾಗಿಯ ವಾಸನೆಯೂ ತಿಳಿಯುವುದಿಲ್ಲ. ಇನ್ನು ಮುದ್ದೆಯ ರುಚಿ ಎಲ್ಲಿ? ಮೈಸೂರಿಂದ, ಹಾಸನ ಮಂಡ್ಯ ಮಾರ್ಗವಾಗಿ ಒಂದು ಹಾದಿ, ಚಿತ್ರದುರ್ಗದಿಂದ ತುಮಕೂರು ಮಾರ್ಗವಾಗಿ ಮತ್ತೊಂದು ದಾರಿ ಬೆಂಗಳೂರಲ್ಲಿ ಕೂಡಿ ಕೋಲಾರಕ್ಕೆ ಬರುವಷ್ಟರಲ್ಲಿ ಮುದ್ದೆಯ ಹದ, ಒಲೆಯ ಮೇಲಿಟ್ಟ ಕ್ಷಣಗಳ ಮತ್ತು ಹಿಟ್ಟು ಹಾಕುವ ಕೈಗಳ ಮತ್ಯಾವುದೋ ಮಾಯೆಯ ಮೇಲೋಗರ ಸೇರಿ ವೈಭವದ ರಾಜಾಹಾರ ಸಿದ್ದವಾಗುತ್ತದೆ. ಇಂತಹ ಹದವಾದ ಸಾಂಸ್ಕೃತಿಕ ರುಚಿಕರ ಹಾಗೂ ಅರೋಗ್ಯಪೂರ್ಣ ಬೆಳೆಯ ಹಿಂದೆ ಇವರ ಮನಸ್ಸು ಮಿಡಿದದ್ದು ಸಹಜವೇ ಆಗಿತ್ತು.

          ರಾಗಿಯು ಪರಕೀಯ ಸ್ಪರ್ಶಕ್ಕೆ ಒಗ್ಗದ ಸಸ್ಯ. ಇದನ್ನು ಪರಕೀಯ ಪರಾಗಸ್ಪರ್ಶದಿಂದ ತಳಿ ಅಭಿವೃದ್ಧಿಗೊಳಿಸುವುದು ಒಂದು ಚಾಲೆಂಜ್ ಆಗಿತ್ತು. ಏಕೆಂದರೆ ಇದೊಂದು ಪರಿಪೂರ್ಣ ಸ್ವಕೀಯ ಪರಾಗಸ್ಪರ್ಶದ ಸಸ್ಯ. ಇದರ ಬೀಜಾಂಕುರಕ್ಕೆ ಅದರದ್ದೇ ಆದ ಪರಾಗ ಬೇಕು. ಇದಕ್ಕಾಗಿ ಲಕ್ಷಣಯ್ಯನವರು ಹೊಸ ಆಲೋಚನೆಯನ್ನು ಬೆರೆಸಿ ಸಸ್ಯಕ್ಕೆ ಒಗ್ಗಿಸಲು ಪ್ರಯತ್ನಿಸಿದರು. ರಾಗಿಯ ತೆನೆಯು ಹೆಚ್ಚು ಕಡಿಮೆ ನಮ್ಮ ಕೈಬೆರಳನ್ನೇ ಹೋಲುವುದು. ಇದನ್ನು ಇಂಗ್ಲೀಷಿನಲ್ಲಿ ಫಿಂಗರ್ ಮಿಲೆಟ್ (Finger millet) ಎಂದೇ ಹೆಸರಿಸಲಾಗಿದೆ. ಕೈಬೆರಳುಗಳನ್ನೆ ಹೋಲುವ ಈ ತೆನೆಗಳನ್ನು ಹೂವಾಡುವಾಗಲೇ ಅನ್ಯ ತಳಿಯ ತೆನೆಯನ್ನು ಕಟ್ಟಿ ಸಂಪರ್ಕ ಪದ್ದತಿಯಿಂದ (Contact Method)ಬೀಜಾಂಕುರವಾಗುವಂತೆ ಮಾಡಿದ್ದು ಡಾ. ಲಕ್ಷಣಯ್ಯನವರ ಸಾಧನೆ. ಮಾತ್ರವಲ್ಲ, ಈ ಬೆಳೆಗೆ ಪರಕೀಯ ಪರಾಗ ಸ್ಪರ್ಶ ಸಾಧ್ಯವೇ ಇಲ್ಲ, ಎಂದೇ ನಂಬಲಾಗಿತ್ತು. ಆ ಕಾಲದ ಹಿರಿಯ ಸಂಶೋಧಕರಾದ ಡಾ. ಕೋಲ್ಮನ್ ಅವರೂ ಸಹ ಇದೇ ಅಭಿಪ್ರಾಯವುಳ್ಳರಾಗಿದ್ದು, ತಳಿ ಅಭಿವೃದ್ಧಿಯ ವಿಚಾರವನ್ನೇ ಹೆಚ್ಚೂ ಕಡಿಮೆ ಕೈ ಬಿಡಲಾಗಿತ್ತು. ಅಂತಹ ಸನ್ನಿವೇಶದಲ್ಲಿ ಇದು ಸಾಧ್ಯ ಎನ್ನುವಂತೆ ಇದನ್ನು ಸಾಧಿಸಿದವರು ಲಕ್ಷಣಯ್ಯನವರು. ಇದರ ಫಲವಾಗಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ತಳಿಗಳನ್ನು ಒಬ್ಬರೇ ವ್ಯಕ್ತಿ ಬಿಡುಗಡೆಯಾಗುವಂತೆ ಮಾಡಿದರಲ್ಲದೆ, ಇಡೀ ರಾಗಿ ಬೆಳೆಯನ್ನೇ ಜೀವಮಾನದುದ್ದಕ್ಕೂ ಸತತ ಅಧ್ಯಯನ ಸಂಶೋಧನೆಯಿಂದ ಅಭಿವೃದ್ಧಿಗೊಳಿಸಿದರು.

          ಅರುಣ, ಅನ್ನಪೂರ್ಣ, ಉದಯ, ಪೂರ್ಣ, ಕಾವೇರಿ, ಶಕ್ತಿ, ಇಂಡಾಫ್ ತಳಿಗಳು (ಇಂಡಾಫ್-1, 2, 3, 5, 7, 8, 9, 11 ಮತ್ತು ಇಂಡಾಫ್-15) ಅಲ್ಲದೆ L-5.  ಹೀಗೆ ಮಹತ್ತರವಾದ ಅನೇಕ ತಳಿಗಳನ್ನು ರೈತರಿಗೆ ನೀಡಿದ ಲಕ್ಷಣಯ್ಯನವರು ಹೆಚ್ಚಿನ ಸಂಶೋಧನಾ ಪ್ರಕಟಣೆಗಳನ್ನು ಮಾಡಿದವರಲ್ಲ. ರೈತರಿಗೆ ತಳಿಗಳನ್ನು ತಲುಪಿಸಿ ಅವರ ನೇರ ಸಂಪರ್ಕವಿಟ್ಟುಕೊಂಡ ಇವರಿಗೆ ಸಂಶೋಧನಾ ಪ್ರಕಟಣೆಗಳ ಸಹಾಯ ಬೇಕಿರಲಿಲ್ಲ.   “ಪುಸ್ತಕಗಳು ತಿನ್ನಲು ಬರುವುದಿಲ್ಲ, ಅದರ ಗೊಡವೆ ಏಕೆ?” ಎನ್ನುತ್ತಿದ್ದರು. ನಿಜ ಅವರನ್ನು ಅವರ ಸಂಶೋಧನಾ ಪ್ರಕಟಣೆಗಳಿಂದ, ಪುಸ್ತಕಗಳಿಂದ ಯಾರೂ ಗುರುತಿಸುವುದೇನೂ ಬೇಕಿರಲಿಲ್ಲ. ಅವರ ತಳಿಗಳೇ ಅವರ ಹೆಸರನ್ನು ರೈತರಲ್ಲಿ ಶಾಶ್ವತವಾಗಿಸಿದವು. ನಾನು ಅವರನ್ನು ನಾಗೇನಹಳ್ಳಿ ಫಾರಂನಲ್ಲಿ ಭೇಟಿಯಾದಾಗ   L-5 ತಳಿಯು ಅಭಿವೃದ್ಧಿಯ ಹಂತದಲ್ಲಿತ್ತು. ಅಭಿವೃದ್ಧಿಯ ಹಂತದಲ್ಲಿ ತಳಿಗಳನ್ನು ಹಲವಾರು ಸಾಲುಗಳಾಗಿ (Line) ಬೆಳೆಸಿ Line-1, Line-2, Line-3, ಇತ್ಯಾದಿ ಎಂದು ಗುರುತಿಸಿಕೊಂಡಿರುತ್ತಾರೆ. ಅಂತಹ ಸಂಧರ್ಭದಲ್ಲಿ  L for  Line-5  (L-5)  ಆದ ತಳಿಯು ಉತ್ತಮ ಪ್ರತಿಕ್ರಿಯ ನೀಡಿದ್ದು ಮುಂದೆ ಅದೇ  L -5 ಆಗಿ ತಳಿಯಾಗಿ ಬಿಡುಗಡೆ ಯಾಗುವ ಹಂತಕ್ಕೆ ಬಂತು. ಆಗ ಸಹ ಸಂಶೋಧಕರು L for Line  ಅಲ್ಲ ಲಕ್ಷಣಯ್ಯ ಎಂದು ತಮಾಷೆಗೆ ಅಂದದ್ದೇ ಲಕ್ಷಣಯ್ಯ-5  (L -5) ಎಂಬ ತಳಿಯಾಯಿತು. ಪೂರ್ಣ ತಳಿ ನೆನಪು ಕೂಡ ಒಂದು ವಿಶೇಷಣವನ್ನು ಹೊತ್ತೆ ಬಂದಿದೆ. ಈ ತಳಿ ಬಿಡುಗಡೆಯಾಗುವ ಹೊತ್ತಿಗೆ ಅವರು ವಿಶ್ವವಿದ್ಯಾನಿಲಯದಲ್ಲಿ ಪೂರ್ಣಾವಧಿ ಸಂಶೋಧಕರಾಗಿ, ಸ್ಥಾನಗಳಿಸಿದ್ದರು. ಅದೂವರೆವಿಗೂ ಅವರಿಗೊಂದು ಗೊತ್ತಾದ ಸ್ಥಾನ ಮಾನವಿರದ ಸಹಾಯಕ ಸಂಶೋಧಕರಾಗಿದ್ದರು. ಏಕೆಂದರೆ ಕೇವಲ ಬಿ.ಎಸ್ಸಿ., ಪದವಿಯನ್ನು ಮಾತ್ರ ಪಡೆದು ಸಂಶೋಧನಾ ಸಹಾಯಕರಾಗಿ ಕೆಲಸಕ್ಕೆ ಸೇರಿದ್ದ ಲಕ್ಷಣಯ್ಯನವರಿಗೆ ಇದು ಅನಿವಾರ್ಯವಾದ ಸಂಗತಿ. ಈ ಪೂರ್ಣಗೊಂಡ ನೆಮ್ಮದಿಗಾಗಿ ಅಹೊತ್ತಿನಲ್ಲಿ ಬಿಡುಗಡೆಗೊಂಡ ತಳಿಗೆ ಪೂರ್ಣ ಎಂದೇ ಕರೆದರು. ತಮ್ಮ ಕೆಲಸದಲ್ಲಿ ಒಂದು ರೀತಿಯ ಪೂರ್ಣತೆಯನ್ನು ಸಾಧಿಸಿದ್ದ ನೆನಪು. ಇದನ್ನು ನೆನೆದು ಅವರ ಮಗ ಈ ಸಂಗತಿಯನ್ನು ಹೇಳಿದ್ದರು.  

ಎದೆಯ ಮೇಲೆ ಹಿಡಿ ರಾಗಿ ಹಾಕಿ ಸಂಸ್ಕಾರ

                ಕಾಯಕವೇ ಕೈಲಾಸ ಎಂಬ ತತ್ವವನ್ನು ಅಕ್ಷರ ಸಹ ಪಾಲಿಸಿದವರು ಡಾ. ಲಕ್ಷಣಯ್ಯನವರು. I am wedded to this crop ಎಂದೇ ಕರೆದುಕೊಳ್ಳುತ್ತಿದ್ದರು ರಾಗಿ ಲಕ್ಷಣಯ್ಯನವರು!. ಅವರ ಭೇಟಿಯ ಸಂದರ್ಭದಲ್ಲಿ ಒಂದು ಮಾತು ಸದಾ ನನ್ನನ್ನು ತಿನ್ನುವ ಕಾಳಿನ ಬೆಲೆಯ ಬಗೆಗೆ ಎಚ್ಚರಸುತ್ತಲೇ ಇದೆ. ಮನೆಯಲ್ಲಿ ಓಡಾಡುವ ಸಂದರ್ಭದಲ್ಲಿ ಬರಿಗಾಲಿಗೆ ಒಂದು ರಾಗಿ ಕಾಳು ಸಿಕ್ಕರೂ, ಅದನ್ನೆತ್ತಿ ಅದಕ್ಕೆ ನಮಸ್ಕರಿಸಿ ತೆಗೆದಿಡುತ್ತಿದ್ದರು. ಆಗಂದ ಮಾತು, ಈ ಒಂದು ಕಾಳೇ ನೋಡಿ, ಇಡೀ ಜನರ ಹಸಿವನ್ನೇ ನಿವಾರಿಸಬಲ್ಲ, ಆಶಯ ಹೊಂದಿದೆ, ಈ ಒಂದು ಕಾಳನ್ನು ಕಟ್ಟಿಸಲೆಂದೇ ಈ ರಾಗಿ ಬೆಳೆಯಲ್ಲಿ ಅಷ್ಟೆಲ್ಲಾ ಕಷ್ಟ ಪಡಬೇಕಾಯ್ತು. ನಿಜ ಇಂದು ಕಾಳು ಕಟ್ಟಿ, ಅದರಿಂದ ಬೀಜೋತ್ಪಾದನೆಯ ಕ್ರಿಯೆಯು ಅಭಿವೃದ್ಧಿಗೊಂಡು, ಕಾಳಿನ ಅನಂತತೆಯ ಇಳುವರಿಯಲ್ಲಿ ಸಾಕಾರವಾಗಲಿದೆ. ಹಾಗೆಂದೇ ಅವರಿಗೆ ಈ ಒಂಟಿ ಕಾಳಿನ ಬೆಲೆಯ ಬಗೆಗೆ ಅಪಾರ ಗೌರವ ಮತ್ತು ಪ್ರೀತಿ. ರಾಗಿಯನ್ನೇ ದೈವವೆಂದು ನಂಬಿದವರು ಡಾ. ಲಕ್ಷಣಯ್ಯನವರು. ಅದಕ್ಕೆಂದೇ ಅವರ ನಮನಗಳು ಕಾಳಿಗೇ ಸಲ್ಲುತ್ತಿದ್ದವು. ತಮ್ಮ ಅಂತಿಮ ಸಂಸ್ಕಾರದಲ್ಲೂ ಸಹ ಕೇವಲ ದೇಹದ ಮೇಲೆ ಹಿಡಿ ರಾಗಿ ಹಾಕಿ ಅಷ್ಟೇ ಎಂದೂ ಹೇಳಿದ್ದರಂತೆ. ಬೇರೆ ಯಾವ ಸಂಸ್ಕಾರವೂ ಬೇಕಿಲ್ಲ, ಎನ್ನುವುದು ಅವರ ವಚನವಾಗಿತ್ತು. ಇದನ್ನು ತಮ್ಮ ಶ್ರೀಮತಿಯವರಲ್ಲಿ ಅವರು ಹೇಳಿದ್ದರಂತೆ! ಆದರೆ ಆ ಕ್ಷಣದ ದುಃಖದಲ್ಲಿ ಅದನ್ನೆ ಮರೆತ ಬಗೆಗೆ ಅವರ ಮಗ ನೆನಪಿಸಿಕೊಳ್ಳುತ್ತಿದ್ದರು.

                ಎರಡನೆಯ ಬಾರಿ ಹೋದಾಗ ಅವರ ಮನೆಯಲ್ಲಿ ಕುಳಿತು ಈ ಮಾತನ್ನು ಅವರಿಂದ ಕೇಳಿಸಿಕೊಳ್ಳುತ್ತಿದ ನನಗೆ ಅದೇ ಕ್ಷಣದಲ್ಲಿ ನಮ್ಮೂರಿನ ಮನೆಯಿಂದ ನನ್ನ ತಂದೆ ತೀರಿ ಹೋದ ಸುದ್ದಿ ಬಂತು. ಶಿವಮೊಗ್ಗೆಯ ಹತ್ತಿರದ ನ್ಯಾಮತಿಯಲ್ಲಿ ನನ್ನ ತಂದೆ ನಿಧನರಾಗಿದ್ದರು. ಸ್ವಂತ ಜಮೀನನ್ನು ನೋಡುತ್ತಿದ್ದ ಅವರ ನಂತರ ಜಮೀನು ನಿರ್ವಹಿಸಬೇಕಾಗಿ ಬಂದ ನನಗೆ, ತಂದೆಯವರ ಸಂಸ್ಕಾರ ಮಾಡಿದ ನೆಲಕ್ಕೆ ರಾಗಿ ಬಿತ್ತನೆ ಮಾಡಿ ನಾನು ಲಕ್ಷಣಯ್ಯನವರಿಗೆ ಗೌರವ ತೋರಿಸಿದ್ದನ್ನು ನೆನೆಯಲು ನನಗೆ ಹೆಮ್ಮೆಯಾಗುತ್ತದೆ. ಕಾರಣ ಮಲೆನಾಡಿನಂಚಿನ ನಮ್ಮೂರಿನ ಜಮೀನು ರಾಗಿಯ ಬಿತ್ತನೆಯನ್ನೇ ಕಾಣದ್ದು. ಮೊದಲ ಬಾರಿಗೆ ರಾಗಿಯ ಕಂಡ ಭತ್ತ ಬೆಳೆವ ಗದ್ದೆಯ ನೆಲ ಬಹಳ ಅದ್ಭುತವಾದ ಇಳುವರಿಯನ್ನು ಕೊಟ್ಟಿತ್ತು. ಆ ನೆಲದಲ್ಲಿ ಒಂದಲ್ಲ ನಾಲ್ಕಾರು ತಳಿಗಳ ರಾಗಿಯನ್ನು ಬೆಳೆದು, ಆ ಬೆಳೆಯ ಅನುಭವವನ್ನು ಪಡೆದ ಖುಷಿ ಸದಾ ನನೊಟ್ಟಿಗಿದೆ.

ನಮಸ್ಕಾರ

– ಚನ್ನೇಶ್

This Post Has 7 Comments

  1. Rudresh Adarangi

    very nice story and very informative about ragi. hats of to ragi laxmanaiah and chennesh sir.
    Dr Rudresh

  2. Dr shivappa Arivu

    Very Useful

  3. Venkatesh KN

    ತುಂಬಾ ಚೆನ್ನಾಗಿ ಮೂಡಿ ಬಂದಿದೆ.

    1. ಶಶಿರಾಜ ಆಚಾರ್ಯ

      ಚಂದದ ಬರಹ

  4. ಶ್ರೀಹರಿ ಕೊಚ್ಚಿನ್

    ರಾಗಿಯ ಬಗೆಗಿನ ಲಕ್ಷ್ಮಣಯ್ಯನವರ ಅಪರಿಮಿತ ಪ್ರೀತಿಯೇ ಆ ಬೆಳೆ ತನ್ನ ಅಷ್ಟೆಲ್ಲಾ ಗುಟ್ಟುಗಳನ್ನು ಅವರಿಗೋಸ್ಕರ ಬಿಟ್ಟುಕೊಟ್ಟಿತೇ .. ಆ ಬೆಳೆಗಾಗಿನ ಅವರ ತುಡಿತ ನೆನೆದೇ ಬೆರಗಾಗುತ್ತದೆ ..ಈ ಲೇಖನ ತುಂಬಾ ಚೆನ್ನಾಗಿದೆ ..ನಾನು ಹೆಚ್ಚುಕಾಲ ಕೆಲಸ ನಿರ್ವಹಿಸಿದ ಹಾಸನದಲ್ಲಿ ರಾಗಿಯ ಆಹಾರದ ಪ್ರೀತಿಯನ್ನು ಕಂಡಿದ್ದೇನೆ..ಉಂಡಿದ್ದೇನೆ .

  5. Ramesh

    ನಿಜವಾಗಿಯೂ ರಾಗಿ ಬಗ್ಗೆ ಇಷ್ಟೊಂದು ಕಾಳಜಿ ಪ್ರೀತಿ ಅವರಿಗೆ ಇರುವುದು ಓದಿ ತುಂಬಾ ಖುಷಿಯಾಯಿತು.. ವಸ್ತುಗಳ ಬಣ್ಣ ಚಂದ ಮುಖ್ಯವಲ್ಲ ಅದರಿಂದ ನಮ್ಮ ದೇಹಕ್ಕೆ ಪೋಷಕಾಂಶ ಮುಖ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಧನ್ಯವಾದಗಳು

  6. Shanthakumari

    ನಿಮ್ಮ ತಂದೆಯವರಿಗೆ ಮಾಡಿದ ಸಂಸ್ಕಾರ ಅಭಿನಂದನಾರ್ಹ ಸರ್ & ಸಕ್ಕರೆ ಕಾಯಿಲೆಯವರ ದಿವ್ಯ ಔಷಧ ರಾಗಿ ಬಗೆಗಿನ ಮಾಹಿತಿ ಉಪಯುಕ್ತವಾಗಿದೆ ಸರ್

Leave a Reply