ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ನಾನು ಕೃಷಿ ಸಂಶೋಧಕಿಯಾಗಿ ಮೊದಲು ಮಣಿಪುರ ರಾಜ್ಯದ ಇಂಫಾಲದಲ್ಲಿ ಕೆಲ ವರ್ಷಗಳ ಕಾಲ ಕಾರ್ಯನಿರ್ವಹಿಸಬೇಕಾಯಿತು. ಆಗ ಅಲ್ಲಿನ ಮಾರುಕಟ್ಟೆಯಲ್ಲಿ ಕೆಲವು ವಿಶೇಷವಾದ ಸೊಪ್ಪು, ತರಕಾರಿ, ಹಣ್ಣುಗಳನ್ನು ಮೊದಲ ಬಾರಿಗೆ ನೋಡಿದ್ದೆ. ಅವುಗಳಲ್ಲಿ ʼಖಾಮೆನ್ ಅಖಾಬಿʼ ಎಂದರೆ ʼಕಹಿ ಬದನೆʼ ಎಂದು ಕರೆಯುವ ವಿಶಿಷ್ಟವಾದ ಬದನೆಯು ನನ್ನನ್ನು ಅಚ್ಚರಿಗೊಳಿಸಿತ್ತು. ಇವು ದುಂಡಗೆ, ಹಚ್ಚ ಹಸಿರಾಗಿದ್ದು, ನನಗೆ ಪರಿಚಯವಿದ್ದ ಬದನೆಗಿಂತ ವಿಭಿನ್ನವಾದ್ದರಿಂದ ಅನುಮಾನಿಸಿ ತಿನ್ನುವ ಪ್ರಯತ್ನವನ್ನೇ ಮಾಡಿರಲಿಲ್ಲ. ಭಾರತದ ವಿವಿಧ ಪ್ರದೇಶಗಳಲ್ಲಿ ನಮಗೆ ವಿವಿಧ ಬಗೆಯ ಬದನೆಯ ಪ್ರಬೇಧಗಳು ಕಾಣಸಿಗುತ್ತವೆ. ಹಿತ್ತಲಿನಲ್ಲಿ ತಮಗೆ ಇಷ್ಟವಾದ ಆಕಾರದ, ಬಣ್ಣದ ಒಂದೆರಡು ಬದನೆ ಗಿಡಗಳನ್ನು ಬೆಳೆಸುವ ಹವ್ಯಾಸ ನಮ್ಮ ಗ್ರಾಮಗಳಲ್ಲಿ ಈಗಲೂ ಕಾಣಬಹುದು. ತನ್ನ ವೈವಿದ್ಯಮಯ ಹಾಗು ವ್ಯಾಪಕ ಬಳಕೆಯಿಂದಾಗಿ, ಭಾರತದಲ್ಲಿ ʼತರಕಾರಿಗಳ ರಾಜʼನ ಪಟ್ಟವನ್ನು ಪಡೆದಿರುವ ಬದನೆಯ ವಿಕಾಸ, ವೈವಿದ್ಯತೆಯಲ್ಲಿ ತನ್ನದೇ ಆದ ವಿಶೇಷತೆಯನ್ನು ಪಡೆದಿದೆ.
ಬದನೆಕಾಯಿ ಅಥವಾ ಕರ್ನಾಟಕದ ಕೆಲವು ಭಾಗಗಳಲ್ಲಿ ಮುಳುಗಾಯಿ ಎಂದೂ ಕರೆಯುವ ಇದರ ವೈಜ್ಞಾನಿಕ ಹೆಸರು Solanum melongena L. ಅತೀ ಉಷ್ಣ ಅಥವಾ ಅತೀ ಶೀತ ವಲಯ, ಕಾಲದಲ್ಲಿ ಹೊರತುಪಡಿಸಿ, ಪ್ರಪಂಚದ ಎಲ್ಲಾ ಪ್ರದೇಶಗಳಲ್ಲಿ ಬೆಳೆಯುವಂತಹ ಬಹುಬೇಡಿಕೆಯ ಬೆಳೆ. ಇದನ್ನು ಏಷ್ಯಾ, ಆಫ್ರಿಕಾ ಭಾಗದಲ್ಲಿ ʼBrinjalʼ ಎಂದೂ, ಐರೋಪ್ಯ ದೇಶಗಳಲ್ಲಿ ಫ್ರೆಂಚ್‌ಭಾಷೆಯ ʼAubergineʼ ಎಂದೂ, ಅಮೆರಿಕ ಮತ್ತು ಕೆನಡಾ ದೇಶಗಳಲ್ಲಿ ಮೊಟ್ಟೆಯ ಆಕಾರದ ಕಾಯಿಗಳನ್ನು ಹೊಂದಿದ ಕೆಲವು ತಳಿಗಳಿಂದಾಗಿ “Eggplant” ಎಂದೂ ಕರೆಯುತ್ತಾರೆ. ಇದು ಸುಮಾರು 2700 ವಿವಿಧ ಪ್ರಬೇಧ (species)ಗಳೊಳಗೊಂಡ Solanaceae ಕುಟುಂಬಕ್ಕೆ ಸೇರಿದೆ. ಇದೇ ಕುಟುಂಬಕ್ಕೆ ಟೊಮ್ಯಾಟೊ, ಆಲೂಗಡ್ಡೆ, ಮೆಣಸಿನಕಾಯಿ ಮುಂತಾದ ಪ್ರಮುಖ ತರಕಾರಿ ಬೆಳೆಗಳು ಸೇರಿರುವುದು ವಿಶಿಷ್ಟ.
ಈ ವಿವಿಧ ಪ್ರಬೇಧಗಳು ನೋಡಲು ವಿಭಿನ್ನವಾಗಿದ್ದರೂ,ಇವುಗಳ ಗುಣಗಳನ್ನು ನಿರ್ಧರಿಸುವ ಆನುವಂಶಿಕ ಮೂಲ ವರ್ಣತಂತುವಿನ ಸಂಖ್ಯೆ (Basic Chromosome Number, x= 12) ಇದ್ದು, ಒಂದೇ ಬಗೆಯ ಸಾಮಾನ್ಯವಾದ ಪೂರ್ವಜರಿಂದಲೇ ವಿಕಾಸಗೊಂಡಿವೆ. ಮುಖ್ಯವಾಗಿ ವರ್ಣತಂತುವಿನ ಮರುಜೋಡಣೆಯಿಂದಾಗಿ, ಗುಣಗಳ ಬದಲಾವಣೆಗಳಾಗಿವೆ. ಹಾಗಾಗಿ ವಿವಿಧ ಕಾಲಘಟ್ಟದಲ್ಲಿ ಹಲವು ಪ್ರಬೇಧಗಳು ಹೊರಹೊಮ್ಮಿರುವುದನ್ನು ಈ ವರ್ಣತಂತುಗಳಲ್ಲಿ ಅಡಗಿರುವ ಸಂರಕ್ಷಿತ ಗುರುತು ಚಿಹ್ನೆಗಳ (Conserved Ortholog Markers) ಮೂಲಕ ತಿಳಿಯಲಾಗಿದೆ. ಈ ಮೂಲಕ ಬದನೆಯು ಟೊಮ್ಯಾಟೊ, ಆಲುಗಡ್ಡೆಗೆ ಆನುವಂಶಿಕವಾಗಿ ಹತ್ತಿರವಾಗಿದ್ದು, ಸರಿಸುಮಾರು 15.5 ದಶಲಕ್ಷ ವರ್ಷಗಳ ಹಿಂದೆ ಸಾಮಾನ್ಯ ಪೂರ್ವಜರಿಂದ ಮಾರ್ಪಟ್ಟು, ವಿಶಿಷ್ಟ ಪ್ರಭೇದವಾಗಿದೆ. ಈ Solanaceae ಕುಟುಂಬದಲ್ಲಿ, ಬದನೆಯು ಮುಳ್ಳುಹೊಂದಿದ ಇತರೆ ಸುಮಾರು 550 ಪ್ರಭೇದಗಳೊಂದಿಗೆ Leptostemonium ಎಂದು ಕರೆಯಲಾಗುವ ವಿಕಾಸದ ಅನುಸರಣೆಯ ಗುಂಪನ್ನು (Clade) ಸೇರಿದೆ. ಬದನೆಯ ಹತ್ತಿರದ ಕಾಡು ಸಂಬಂಧಿ Solanum insanum L. ದಕ್ಷಿಣ ಹಾಗು ಆಗ್ನೇಯ ಏಶಿಯಾದಲ್ಲಿ ಕಂಡು ಬರುತ್ತದೆ. ಇದರ ಗಿಡಗಳು ಮುಳ್ಳಿನಿಂದ ಕೂಡಿದ್ದು, ಕಾಯಿಗಳು ದುಂಡಗೆ, ಚಿಕ್ಕಾದಾಗಿದ್ದು, ಬೀಜಗಳು ಹೆಚ್ಚಿದ್ದು, ಕಹಿ ಹೆಚ್ಚಿರುತ್ತದೆ. ಇದು ಸಾಮಾನ್ಯವಾಗಿ ಹಳ್ಳಿಗಳಲ್ಲಿ ತೆರೆದ ಭೂಮಿಗಳಲ್ಲಿ (open fields ) ಕಳೆಯಂತೆ ಬೆಳೆದಿರುತ್ತದೆ. ಇದರ ಬೀಜಗಳನ್ನು ಚೀನ, ಫಿಲಿಫೈನ್ಸ್, ಶ್ರೀಲಂಕಾ, ಭಾರತದಲ್ಲಿ ಸಾಂಪ್ರದಾಯಿಕ ಚಿಕಿತ್ಸೆಯಲ್ಲಿ ಹಲ್ಲುನೋವಿಗೆ, ಯಕೃತ್(liver) ತೊಂದರೆಗಳಿಗೆ ಉಪಯೋಗಿಸಲಾಗುತ್ತದೆ.
ಮತ್ತೊಂದು ಉಪಯುಕ್ತ ಬದನೆ ಕಾಡು ಸಂಬಂಧಿ ಪ್ರಭೇದ Solanum torvum Swartz. ಇದನ್ನು ರಸ್ತೆ ಬದಿಗಳಲ್ಲಿ, ಖಾಲಿ ಬೀಡುಬಿಟ್ಟಿರುವ ಜಾಗಗಳಲ್ಲಿ ಕಂಡಿರಬಹುದು.ಇದರ ಗಿಡಗಳು ಸುಮಾರು 3 ಮೀಟರುಗಳಷ್ಟು ಎತ್ತರ ಬೆಳೆಯುತ್ತವೆ. ಕಾಯಿಗಳು ಹಸಿರು ಗೋಲಿಗಳಂತಿದ್ದು, ಗೊಂಚಲುನಲ್ಲಿ ಬಿಡುತ್ತದೆ. ವಿಸ್ತಾರವಾಗಿ ಹರಡಿರುವ ಈ ಪ್ರಭೇದವನ್ನು ಹೆಚ್ಚಾಗಿ ಏಷ್ಯಾ, ದಕ್ಷಿಣ ಅಮೆರಿಕ, ಆಫ್ರಿಕ ಖಂಡಗಳಲ್ಲಿ ಕಾಣಬಹುದು. ಭಾರತದಲ್ಲಿ ವಿವಿಧ ಪ್ರದೇಶಗಳಲ್ಲಿ ಕಾಣಸಿಗುವ ಈ ಗಿಡಗಳು, ತಮಿಳುನಾಡಿನಲ್ಲಿ ಇದರ (ʼಸುಂಡಕಾಯಿʼ) ಖಾದ್ಯಗಳು ಹೆಚ್ಚು ಪ್ರಚಲಿತ. ಇದರ ಕಾಯಿ ಹಾಗು ಸೊಪ್ಪಿನಲ್ಲಿ ಹೆಚ್ಚು ಅಂಟಿಆಕ್ಸಿಡೆಂಟ್‌ಗಳು ಇರುವ ಕಾರಣ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಸಹಾಯಕವಾಗಿದೆ.
ಮಧ್ಯ ಹಾಗು ದಕ್ಷಿಣ ಅಮೆರಿಕವನ್ನು ಬಹುಪಾಲು Solanaceae ವಾಣಿಜ್ಯ ತರಕಾರಿಗಳ ವೈವಿಧ್ಯತೆಯ ಕಾರಣದಿಂದ ಮೂಲ ಪ್ರದೇಶ ಎಂದು ಗುರುತಿಸಲಾಗಿದೆ. ಆದರೆ ಇದೇ ಕುಟುಂಬದ ಬದನೆಯು ಮಾತ್ರ ಆಗ್ನೇಯ ಏಶಿಯಾ ಅದರಲ್ಲೂ ಭಾರತದಲ್ಲಿ ಹೆಚ್ಚು ವೈವಿದ್ಯತೆಯನ್ನು ಹೊಂದಿರುವುದರಿಂದ ಭಾರತವನ್ನೇ ಮೂಲಪ್ರದೇಶವೆಂದು ಗುರುತಿಸಲಾಗಿದೆ. ಅಲ್ಲದೆ, ಬದನೆಯ ಹೆಚ್ಚಿನ ಕಾಡು ಪ್ರಭೇದಗಳು ಮಾತ್ರ ಆಫ್ರಿಕಾ ಖಂಡದಲ್ಲಿ ಕಂಡುಬಂದಿರುವುದು ವಿಶೇಷ. ಕಾಲಾನಂತರದಲ್ಲಿ, ಇವುಗಳು ಐರೊಪ್ಯ ದೇಶಗಳಿಗೆ ಅರಬ್ಬರ ವ್ಯಾಪಾರದ ಮೂಲಕ ಪರಿಚಯವಾಗಿವೆ.
ಬದನೆಯು ವಿವಿಧ ಆಕಾರ, ಗಾತ್ರ, ಬಣ್ಣಗಳಿಂದ ಪ್ರಪಂಚಾಂದ್ಯಂತ ಹರಡಿದೆ. ತೈವಾನ್ ದೇಶದಲ್ಲಿರುವ “ವಿಶ್ವ ತರಕಾರಿ ಕೇಂದ್ರ” ದಲ್ಲಿ ಮೂರು ಸಾವಿರಕ್ಕೂ ಹೆಚ್ಚು ವಿವಿಧ ಬದನೆಯ ತಳಿಗಳನ್ನು ಸಂರಕ್ಷಿಸಲಾಗಿದ್ದು, ಭಾರತದ ನವ ದೆಹಲಿಯಲ್ಲಿರುವ National bureau of plant genetic resources (NBPGR) gene bankನಲ್ಲಿ ಸುಮಾರು ಸಾವಿರದ ಒಂಭೈನೂರು ತಳಿಗಳನ್ನು ಸಂರಕ್ಷಿಸಲಾಗಿದೆ.
ಬದನೆಯ ಇನ್ನು ಎರಡು ವಿಶಿಷ್ಟ ಪ್ರಭೇದಗಳು ಕೆಲ ನಿಗಧಿತ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ಅವುಗಳಲ್ಲಿ scarlet eggplant ಎಂದು ಕರೆಲ್ಪಡುವ Solanum aethiopicum ಪ್ರಭೇಧವನ್ನು ಹೆಚ್ಚಾಗಿ ಉಷ್ಣವಲಯದ sub ̲saharan ಆಫ್ರಿಕಾ ಹಾಗು ಮಡಗಾಸ್ಕರ್‌ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ಇದರ ವಿಶಿಷ್ಟವೆಂದರೆ, ಕಾಯಿಗಳು ದುಂಡಾಗಿ, ಹಸಿರು ಬಣ್ಣದ್ದಾಗಿದ್ದು, ಕಾಯಿ ಬಲಿತಂತೆ ಕಿತ್ತಳೆ ಅಥವಾ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಕಾಯಿಯ ಮೇಲ್ಭಾಗ ವಿಭಜನೆಗೊಂಡಿದ್ದು, ಮಿಡಿ ಕುಂಬಳಕಾಯಿಯಂತಿರುತ್ತದೆ. ಗಿಡದ ಹಸಿರು ಎಲೆಗಳನ್ನು ಸೊಪ್ಪಿನಂತೆಯೂ ಉಪಯೋಗಿಸುತ್ತಾರೆ. ಆಫ್ರಿಕಾ ದೇಶಗಳಲ್ಲಿ ಈ ಪ್ರಭೇದದಲ್ಲಿಯೂ ವೈವಿಧ್ಯತೆಯಿದ್ದು ಹಸಿರು, ಬಿಳಿ, ಹಳದಿ ಹೀಗೆ ಹಲವು ಬಣ್ಣಗಳಲ್ಲಿ ವಿವಿಧ ಆಕಾರ (ದುಂಡು, ಉದ್ದ)ಗಳಲ್ಲಿ ಕಾಯಿಗಳು ಲಭ್ಯವಿದೆ. ನಾನು ಮೊದಲು ತಿಳಿಸಿದ ಮಣಿಪುರದಲ್ಲಿ ಕಂಡ ಬದನೆಯೂ ಇದೆ ಪ್ರಭೇದಕ್ಕೆ ಸೇರುತ್ತದೆ. ಬದನೆಯ ಮತ್ತೊಂದು ಪ್ರಭೇದ Solanum macrocarpon. ಇದರ ಕಾಯಿಗಳು ಸಾಮಾನ್ಯವಾಗಿ ದಪ್ಪ, ದುಂಡಾಗಿದ್ದು, ಹಸಿರು, ನೇರಳೆ, ಬಿಳಿ,ದಂತದ ಬಣ್ಣಗಳಲ್ಲಿ ಕಾಣಸಿಗುತ್ತವೆ. ಈ ಪ್ರಭೇದದಲ್ಲಿ ಬೀಜಗಳು ಹಾಗು ಕಹಿ ಹೆಚ್ಚಾಗಿದ್ದು, ಕಾಯಿಯ ಭಾಗಶಃ ತೊಟ್ಟು ಆವರಿಸಿರುತ್ತದೆ. ಇದು ಹೆಚ್ಚು ಮಳೆ ಬೀಳುವ ಪಶ್ಚಿಮ ಹಾಗು ಮಧ್ಯಮ ಆಫ್ರಿಕ, ಆಗ್ನೇಯ ಏಶಿಯಾ ಹಾಗು ದಕ್ಷಿಣ ಅಮೇರಿಕ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ.
ಭೌಗೋಳಿಕವಾಗಿ ವಿಶಿಷ್ಟ ಬದನೆಯ ತಳಿಗಳನ್ನು ಭಾರತದ ವಿವಿಧ ಪ್ರದೇಶಗಳಲ್ಲಿ ಕಾಣಬಹುದು. ಅವುಗಳಲ್ಲಿ “ರಾಮನಗರ Giant” ತಳಿಯನ್ನು ವಾರಣಾಸಿಯ ಆಸುಪಾಸಿನಲ್ಲಿ ಬೆಳೆಯಲಾಗುತ್ತದೆ. ಕಾಯಿಗಳು ತಿಳಿ ಹಸಿರು ಬಣ್ಣದ್ದಾಗಿದ್ದು, ಪ್ರತೀ ಕಾಯಿಯು ಸುಮಾರು 750 ರಿಂದ 1500 ಗ್ರಾಂ ದೊಡ್ಡದಾಗಿದ್ದು, ತಿರುಳು ಮೃದು ಹಾಗು ಕಡಿಮೆ ಬೀಜ ಹೊಂದಿರುವ ಕಾರಣ ಉತ್ತರ ಭಾರತದ ಪ್ರಸಿದ್ಧ ಬದನೆಯ ಖಾದ್ಯ ʼBarthá ಗೆ ಹೇಳಿಮಾಡಿಸಿದಂತಿದೆ. ಹಾಗೆ, ನಮ್ಮ ಉಡುಪಿಯ ʼಮಟ್ಟು ಗುಳ್ಳʼ ತಳಿಗಳಲ್ಲಿ ಕಾಯಿಗಳು ದುಂಡಾಗಿ, ಹಸಿರಾಗಿದ್ದು ಉಡುಪಿಯ ಸುತ್ತಮುತ್ತ ಪ್ರದೇಶಗಳಲ್ಲಿ ಸಾಂಬಾರಿನಲ್ಲಿ ಉಪಯೋಗಿಸಲು ಅಚ್ಚುಮೆಚ್ಚು.
ಸಾಮಾನ್ಯವಾಗಿ ವಾರ್ಷಿಕ ಗಿಡಗಳಲ್ಲಿ ಹೂ ಬಿಟ್ಟು, ಕಾಯಿ ಕಟ್ಟಿ ಹಣ್ಣಾದ ನಂತರ ಗಿಡ ಒಣಗುವುದು ಸಾಮಾನ್ಯ.ಆದರೆ, ಬದನೆಯು ದೀರ್ಘಕಾಲಿಕ, ಅವ್ಯಾಹತ ಗಿಡವಾಗಿದ್ದು, ಹೂವಿನ ಕೆಳಗೆ ಕಂಕುಳಿನ ಮೊಗ್ಗು (Axillary bud) ಮತ್ತೆ ಹೊಸ ಕೊಂಬೆ, ಎಲೆಗಳು ಬರಲು ಪೂರಕವಾಗಿದ್ದು, ಗಿಡ ನಿರಂತರವಾಗಿ ಹೂಗಳೊಂದಿಗೆ ಬೆಳವಣಿಗೆಯನ್ನೂ ಮುಂದುವರೆಸುತ್ತದೆ.ಇದರ ಹೂಗಳು ಸಾಮಾನ್ಯವಾಗಿ ನೇರಳೆ ಬಣ್ಣದಾಗಿದ್ದು, ಕೆಲ ಬಿಳಿ, ಹಸಿರು ಕಾಯಿಯ ಪ್ರಬೇದಗಳಲ್ಲಿ ಬಿಳಿ ಹೂಗಳನ್ನು ಕಾಣಬಹುದು. ಹೂ ಒಂದು ಅಥವಾ ಗೊಂಚಲು (2-5 ಹೂಗಳು) ನಾಟಿ ಮಾಡಿದ ಸುಮಾರು 60-70 ದಿನಗಳಲ್ಲಿ ಬಿಡಲು ಪ್ರಾರಂಬಿಸುತ್ತವೆ. ಹೂ ತ್ರಿಜ್ಯೀಯ ಸಮ್ಮತಿ (Radial Symmetry) ಹೊಂದಿದ್ದು, ಐದು ದಳಗಳು ಕೂಡಿಕೊಂಡಿರುತ್ತದೆ, ಅಲ್ಲದೆ, ಐದು ಪುಷ್ಪಪತ್ರಗಳು ಕೂಡಿಕೊಂಡಂತಿದ್ದು, ಕಾಯಿಯ ಜೊತೆ ಅಂಟಿಕೊಂಡಿರುತ್ತದೆ. ಹೂವಿನ ಕುತ್ತಿಗೆಯ ಭಾಗದಲ್ಲಿ ಐದು ಉದ್ದನೆಯ ಹಳದಿ ಕೇಸರಗಳು ದಳಗಳಿಗೆ ಅಂಟಿಕೊಂಡಿರುತ್ತವೆ. ಈ ಕೇಸರುಗಳ ಮಧ್ಯೆ ಹೆಣ್ಣು ಅಂಗ(Pistil) ಕಾಣಬಹುದು. ಬದನೆಯ ವಿಶೇಷವೆಂದರೆ ಶಲಾಕಾಗ್ರವು ವಿವಿಧ ಉದ್ದಳತೆ ಹೊಂದಿದ್ದು ಮೂಲತಃ ಸ್ವಕೀಯಪರಾಗಸ್ಪರ್ಶದ ಪ್ರಭೇದವೇ ಆದರೂ ಪರಕೀಯ ಪರಾಗಸ್ಪರ್ಶಕ್ಕೆ ಸಹಾಯಕವಾಗಿದೆ. ಕಾಯಿಯ ಒಳಾಂಗಣ ಮೃದುವಾಗಿದ್ದು, ಮಧ್ಯಭಾಗದಲ್ಲಿ ಅಂಡಧಾರಕ(placenta) ಬೀಜಗಳನ್ನು ಹೊಂದಿರುತ್ತದೆ. ಪ್ರತಿ ಕಾಯಿಯಲ್ಲಿ ನೂರಾರು ಬೀಜಗಳಿದ್ದು, ವಿವಿಧ ತಳಿಗಳಲ್ಲಿ ಬೀಜದ ಗಾತ್ರ, ಸಂಖ್ಯೆ ವ್ಯತ್ಯಾಸವಿರುತ್ತದೆ. ಬೀಜರಹಿತ ದ್ರಾಕ್ಷಿ, ಕಲ್ಲಂಗಡಿಯಂತೆ, ಬೀಜರಹಿತ ಬದನೆ ಮಾರುಕಟ್ಟೆಯಲ್ಲಿ ಸಿಗುವಂತಾದರೆ ಚೆನ್ನಾಗಿರುತ್ತದೆ ಅನ್ನಿಸಿದರೂ ಅಚ್ಚರಿಯೇನಲ್ಲ!
ಬದನೆ ಕಾಯಿಯಲ್ಲಿ ಕಹಿಯ ರುಚಿಯೂ ಸೇರಿದ್ದು, ಇದಕ್ಕೆ Steroidal Glyco-Alkaloid ಎಂಬ ರಸಾಯನಿಕ ಕಾರಣವಾಗಿದ್ದು, ಸಾಮಾನ್ಯವಾಗಿ Solanaceae ಕುಟುಂಬದ ಇತರೆ ಪ್ರಭೇದಗಳಲ್ಲೂ ಕಾಣಬಹುದು. ಈಗ ಮಾರುಕಟ್ಟೆಯಲ್ಲಿ ಸಿಗುವ ಬದನೆಯಲ್ಲಿ ಇದರ ಪ್ರಮಾಣ ಪ್ರತೀ 100 ಗ್ರಾಂ ತಾಜಾ ಹಣ್ಣಿನಲ್ಲಿ 0.37 – 4.83 ಮಿಲಿ ಗ್ರಾಂ ಇದ್ದು, ಈ ಪ್ರಮಾಣ ಸುಮಾರು 20ಮಿಲಿ ಗ್ರಾಂರಷ್ಟು ಹೆಚ್ಚಿದ್ದಾಗ, ಕಾಯಿಗಳು ಅತೀ ಕಹಿಯಿಂದ ಕೂಡಿದ್ದು, ತಿನ್ನಲು ಯೋಗ್ಯವಾಗಿರುವುದಿಲ್ಲ. ಹಾಗೆಯೆ ಬದನೆಯನ್ನು ಕತ್ತರಿಸಿದ ಸ್ವಲ್ಪ ಹೊತ್ತಿಗೆ ಕಂದು ಬಣ್ಣಕ್ಕೆ ತಿರುಗಲು ಅದರಲ್ಲಿರುವ Polyphenol Oxidase ಕಿಣ್ವದ ಚಟುವಟಿಕೆ ಕಾರಣವಾಗಿದ್ದು, ಇದನ್ನು ತಪ್ಪಿಸಲು, ಕತ್ತರಿಸಿದ ಹೋಳುಗಳನ್ನು ನೀರಿಗೆ ಹಾಕುವುದು ಸಾಮಾನ್ಯ ವಾಡಿಕೆ.
ಇನ್ನು ಬದನೆ ಕಾಯಿಯಿಂದ ಮಾಡಿದ ಪದಾರ್ಥಗಳು ನಮ್ಮ ನಾಲಿಗೆ ರುಚಿಯನ್ನು ಹಿಡಿದಿಟ್ಟದೆ. ಅನ್ನದ ವಾಂಗಿಬಾತ್, ರಾಗಿಮುದ್ದೆಯ ಜೊತೆ ಸುಟ್ಟ ಬದನೆಕಾಯಿಯ ಹಸೀ ಗೊಜ್ಜು, ಜೋಳದ ರೊಟ್ಟಿಯ ಜೊತೆ ಎಣ್ಣೆಗಾಯಿ.. ಹೀಗೆ.. ಕಡೆಗೂ ನಾನು ಮಣಿಪುರದಲ್ಲಿ ಇದ್ದಾಗ ತಿನ್ನದೆ ಬಿಟ್ಟು ಬಂದ ಬದನೆಯು ಸದಾ ಕಾಡುತ್ತಲೇ ಇದೆ. ಅದರ ನೆನಪಿನಿಂದಲೇ ಇಷ್ಟೆಲ್ಲಾ ಪ್ರವರಗಳನ್ನು ಓರ್ವ ವಿಜ್ಞಾನಿಯಾಗಿ ಹುಡುಕಿ ಅರಿತುಕೊಂಡದನ್ನು ನಿಮಗಾದರೂ ಹೇಳಿ, ಸಾವಿರಾರು ವರ್ಷಗಳ ಇತಿಹಾಸವಿರುವ ನಮ್ಮ ಹಿತ್ತಲ ಗಿಡ, ತರಕಾರಿಗಳ ರಾಜ.. ನಿಜ ಎಂದು ಸಮಾಧಾನ ಮಾಡಿಕೊಂಡೆ.
(ಈ ಲೇಖನದ ತಯಾರಿ ಮತ್ತು ಅಂತಿಮ ರೂಪುಗೊಳಿಸುವಲ್ಲಿ ಡಾ. ಟಿ.ಎಸ್. ಚನ್ನೇಶ್ ಅವರ ಸಲಹೆಗಳಿಗೆ ನಾನು ಅಭಾರಿ)
ಡಾ. ಭುವನೇಶ್ವರಿ, ಎಸ್. ವಿಜ್ಞಾನಿ, ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ವೆಜಿಟಬಲ್ ರೀಸರ್ಚ್ ವಾರಣಾಸಿ.
Very nicely interpreted….. Best wishes
Informative..