You are currently viewing ಬಂಗಾರದ ಬಣ್ಣದ ನೋಟದಿಂದ ಕಣ್ಸೆಳೆಯುವ ಗಿಂಕ್ಗೊ ಮರ : Ginkgo biloba

ಬಂಗಾರದ ಬಣ್ಣದ ನೋಟದಿಂದ ಕಣ್ಸೆಳೆಯುವ ಗಿಂಕ್ಗೊ ಮರ : Ginkgo biloba

ಸಸ್ಯಯಾನ ಈವರೆವಿಗೂ 52 ವಾರಗಳನ್ನು ಪೂರೈಸಿ ಎರಡನೆಯ ವರ್ಷಕ್ಕೆ ಆರಂಭವಾಗಿದೆ. ನೂರಮರದ ಕಥನಗಳನ್ನು ಹಂಚಿಕೊಳ್ಳುವ ಆಶಯದಲ್ಲಿ ಆರಂಭಿಸಿದ ಸಸ್ಯಯಾನ ಈಗಾಗಲೇ 50 ಗಿಡ-ಮರಗಳನ್ನು ಸುತ್ತಿ ಬಂದಿದೆ. ವರ್ಷ ತುಂಬಿದ ಸಂತಸಕ್ಕೆ ಇಂದು ವಿಶೇಷ ಮರವೊಂದನ್ನು ಪರಿಚಯಿಸುತ್ತಿದ್ದೇನೆ. ಇದು ಅಂತಿಂತಹಾ ಮರವಲ್ಲ! ಜಪಾನಿನ ಹಿರೋಷಿಮಾದಲ್ಲಿ 1945ರಲ್ಲಿ ನ್ಯೂಕ್ಲಿಯಾರ್‌ ಬಾಂಬು ಸ್ಪೋಟವಾದಾಗ ಅಲ್ಲಿದ್ದೂ ಬದುಕುಳಿದಿರುವ ವಿಶೇಷ ಜಾತಿಯ ಮರ. ಅದರ ಹೆಸರು ಗಿಂಕ್ಗೊ. ಇದರ ತವರೂರು ಚೀನಾ. ಚೀನಾದಲ್ಲಿ 1500ವರ್ಷಕ್ಕೂ ಹಳೆಯ ಮರವೊಂದಿದೆ. ಆ ಮರವನ್ನು ನೋಡಲೇಂದೇ ಸಾವಿರಾರು ಜನ ಹೋಗುತ್ತಾರೆ. ನೋಡುವುದೆಂದರೆ ಕಣ್ತುಂಬಿಕೊಳ್ಳುವಷ್ಟು ಸೌಂದರ್ಯವುಳ್ಳದ್ದು ತಾನೆ. ಹಾಗಾಗಿ ಇಂದಿನ ಸಸ್ಯಯಾನದಲ್ಲಿ ಉದ್ದವಾದ ಕಥನದ ಓದಿನಿಂದ ಮುಕ್ತವಾಗಿ, ಪುಟ್ಟ ವಿವರಗಳ ಓದಿನ ಜೊತೆಗೆ ನೋಡಿ ಕಣ್ತುಂಬಿಕೊಳ್ಳುವ ಚಿತ್ರಗಳಿಂದ ಆನಂದಿಸೋಣ.

ಚೀನಾದ ಜ್ಹೊಂಗಾನ್‌ ಪರ್ವತದಲ್ಲಿರುವ ಗ್ವಾನ್ಯಿನ್‌ ಬೌದ್ಧ ದೇವಾಲಯದ ಆವರಣದ ಒಳಗಿನ ಮರ

       ಚೀನಾದ ಜ್ಹೊಂಗಾನ್‌ ಪರ್ವತದಲ್ಲಿರುವ ಗ್ವಾನ್ಯಿನ್‌ ಬೌದ್ಧ ದೇವಾಲಯದ ಆವರಣದ ಒಳಗೆ ಒಂದು ಮರವಿದೆ. ಅದನ್ನು ಜೀವಂತ ಪಳೆಯುಳಿಕೆ ಎಂದೇ ಕರೆಯುತ್ತಾರೆ. ಈ ಮರಕ್ಕೆ ಈಗಾಗಲೇ ಹೇಳಿದಂತೆ 1500 ವರ್ಷಗಳಿಗೂ ಹೆಚ್ಚು ವಯಸ್ಸಾಗಿದೆ. ಈ ಮರದ ವಿಶೇಷತೆಯೆಂದರೆ ದಟ್ಟ ಹಸಿರಾದ ಎಲೆಗಳು ಚಳಿಗಾಲವನ್ನು ದಾಟುವಾಗ, ಹಳದಿ ಮಿಶ್ರಿತ ಹಸಿರಾಗಿ ನಂತರ ಬಂಗಾರದ ಬಣ್ಣವನ್ನು ಪಡೆಯುತ್ತವೆ. ಆ ಬಂಗಾರದ ಬಣ್ಣದ ಎಲೆಗಳು ಹೆಮ್ಮರವೊಂದರಿಂದ ಬೀಳುವ ದೃಶ್ಯವೇ ರೋಮಾಂಚನವಾಗಿರುತ್ತದೆ.

       ಮರದ ಕೆಳಗಿನ ನೆಲದ ಹಾಸು ಬಂಗಾರದ ಎಲೆಗಳಿಂದ ತುಂಬಿ ಬಂಗಾರದ ಚಾಪೆಯನ್ನು ಹಾಸಿದಂತೆ ಕಾಣುತ್ತದೆ.

ಬಂಗಾರದ ಬಣ್ಣದ ಎಲೆಗಳ ನೆಲಹಾಸು

       ಮರದ ಕೆಳಗೆ  ಬಿದ್ದ ಎಲೆಗಳು ಎರಡು ಪುಟ್ಟ ಮಡಿಕೆಯಲ್ಲಿ ಸಣ್ಣ ಬೀಸಣಿಕೆಯ ರೂಪದವು. ನೆಲವೆಲ್ಲಾ ದಟ್ಟ ಹಾಸಿನಿಂದ ಚೆಲುವನ್ನು ನೀಡುತ್ತವೆ.

ಶರತ್ಕಾಲಕ್ಕೂ ಮುನ್ನ ಹಸಿರಿನಿಂದ ಬಂಗಾರದ ಬಣ್ಣಕ್ಕೆ ತಿರುಗುವ ಎಲೆಗಳು

       ಮರದ ಕೆಳಗೆ ಕುಳಿತ ಬುದ್ಧನ ಯೋಗ ನಿದ್ರೆಯೂ ವಿಶೇಷ ಚಿತ್ರಣವನ್ನು ಕೊಡುತ್ತದೆ.

       ಸಸ್ಯಯಾನದ ಭಾಗವಾದ ಮೇಲೆ ಕೆಲವೊಂದು ಸಸ್ಯವೈಜ್ಞಾನಿಕ ವಿವರಗಳನ್ನಾದರೂ ನೋಡೋಣ. ಈ ಮರವು ಮೊಟ್ಟ ಮೊದಲು ಪಾಶ್ಚಿಮಾತ್ಯರ ಹಾಗೂ ಅವರ ಮೂಲಕ ಇತರೆಡಯವರ ಗಮನಕ್ಕೆ ಬಂದದ್ದು ೧೬೯೦ರಲ್ಲಿ. ಜರ್ಮನಿಯ ಸಸ್ಯವಿಜ್ಞಾನಿ ಎಂಗಲ್‌ ಬರ್ಟ್‌ ಕೇಂಫ್‌ (Engelbert Kaempfe) ಎಂಬಾತನಿಂದ ಮೊಟ್ಟ ಮೊದಲ ಬಾರಿಗೆ ಜಪಾನಿನ ದೇವಾಲಯವೊಂದರಲ್ಲಿ ಪರಿಚಯಿಸಿಕೊಂಡರು. ಜಪಾನಿಯರಿಂದ ಕೇಳಿ ಆತನಿಂದ ದಾಖಲೆಗೊಂಡ ಪರಿಣಾಮವಾಗಿ ಅದರ ಹೆಸರಿನ ಕಾಗುಣಿತವು ಗಿಂಕ್ಗೊ Ginkgo  ಎಂದೇ ದಾಖಲಾಗಿದೆ. ಜಪಾನಿನ ಪದಗಳಾದ gin kyo, ಎಂಬುದರಿಂದ ತಪ್ಪಾದ ದಾಖಲಾದ ಅದೇ ಹೆಸರಿನ ಸಂಕುಲವಾಗಿ ವಿವರಣೆಯಾಗಿದೆ. ಈ ಸಸ್ಯಕ್ಕೆ ಹೆಸರಿಡುವಾಗಲೂ ಕಾರ್ಲ್‌ ಲಿನೆಯಾಸ್‌ ಕೂಡ ಎಂಗಲ್‌ ಬರ್ಟ್‌ ಅವರ ದಾಖಲೆಯನ್ನೇ ಆಧಾರವಾಗಿಟ್ಟುಕೊಂಡರು.

       ಈ ಗಿಂಕ್ಗೊ ಹೂಬಿಡುವ ಸಸ್ಯಗಳಿಗಿಂತಲೂ ಹಳೆಯದು. ಹಾಗಾಗಿ ಅದರಲ್ಲಿ ಹೂವುಗಳಿಲ್ಲ. ಗಂಡು ಮರ ಹೆಣ್ಣು ಮರ ಬೇರೆ ಬೇರೆಯಾಗಿರುತ್ತವೆ. ಗಂಡು ಮರವು ಪರಾಗಗಳನ್ನು ಹೊಂದಿರುವ ಕೋನ್‌ ಗಳನ್ನು ಬಿಡುತ್ತದೆ. ಹೆಣ್ಣು ಮರವು ಸಾಮಾನ್ಯವಾಗಿ ಎರಡು ಅಂಡಾಣುಗಳನ್ನು ಬಿಡುತ್ತದೆ. ಪರಾಗಸ್ಪರ್ಶದ ನಂತರ ಈ ಎರಡೂ ಅಂಡಾಣುಗಳು ಬೀಜಗಟ್ಟುತ್ತವೆ. 

       ಗಿಂಕ್ಗೊಯೇಸಿಯೆ (Ginkgoaceae)  ಸಸ್ಯಕುಟುಂಬದ ಈ ಗಿಂಕ್ಗೊ ಸಸ್ಯವನ್ನು ವೈಜ್ಞಾನಿಕವಾಗಿ ಗಿಂಕ್ಗೊ ಬೈಲೊಬಾ (Ginkgo biloba) ಎಂದು ಕರೆಯಲಾಗುತ್ತದೆ. ಎಲೆಗಳು ಎರಡು ಎಸಳುಗಳ ರೆಕ್ಕೆಯಂತೆ ಇರುವುದರಿಂದ  ಬೈಲೊಬಾ ಹೆಸರು. ಜಪಾನಿನ ಹಿರೋಷಿಮಾದಲ್ಲಿ ಬಾಂಬು ಬಿದ್ದಾಗ ಸುತ್ತ ಮುತ್ತಲಿನ ಎಲ್ಲಾ ಗಿಡ-ಮರಗಳು, ಜೀವಿ- ಜಂತುಗಳೂ ನಿರ್ನಾಮವಾದವು. ಆದರೆ ಅಲ್ಲಿದ್ದ ಆರು ಗಿಂಕ್ಗೊ ಮರಗಳು ಆ ಕ್ಷಣಕ್ಕೆ ಸ್ವಲ್ಪ ಸುಟ್ಟು ಕರಕಲಾದರೂ ಮತ್ತೆ ಚಿಗುರಿವೆ. ಹೀಗೆ ಈ ಮರಗಳಿಗೆ ಅತಿ ಹೆಚ್ಚಿನ ಆಯಸ್ಸು ಇರುವುದರಿಂದಲೂ ಇದರ ಎಲೆಗಳನ್ನು  ದೀರ್ಘಾಯುಷ್ಯದ ಫಲಕ್ಕೆ ಔಷಧವಾಗಿ ಬಳಸುತ್ತಾರೆ. ಅಂತಹಾ ಮಾತ್ರೆಗಳೂ, ಕ್ಯಾಪ್ಸೂಲ್‌ಗಳೂ ಮಾರುಕಟ್ಟೆಯಲ್ಲಿ ದೊರಕುತ್ತವೆ. ಆದರೂ ಕೆಲವರಲ್ಲಿ  ಕೆಲವೊಂದು ಅಡ್ಡ ಪರಿಣಾಮಗಳನ್ನು ಗುರುತಿಸಲಾಗಿದೆ. ಆದರೂ ಆಲ್ಜೈಮರ್ಸ್‌ -ವಯಸ್ಸಿನ ಮರೆಗುಳಿ ಕಾಯಿಲೆಯ ಚಿಕಿತ್ಸೆಯಲ್ಲೂ, ಹಾಗೂ ಚೀನಾದ ಪಾರಂಪರಿಕ ಔಷಧ ಪದ್ಧತಿಯಲ್ಲೂ ಇದರ ಧಾರಾಳವಾದ ಬಳಕೆಗಳಿವೆ.

ಬೆಲ್ಜಿಯಮ್‌ ನಲ್ಲಿರುವ ಗಿಂಕ್ಗೊ ಮರ

       ಗಿಂಕ್ಗೊ ಮರಗಳು ಹೆಮ್ಮರಗಳು ನೂರಾರು ಅಡಿಗಳಷ್ಟು ಎತ್ತರಕ್ಕೆ ಬೆಳೆಯುತ್ತವೆ. ಎಲೆಗಳ ಆಕಾರ ವಿಶೇಷತೆಯನ್ನು ಹೊಂದಿರುತ್ತವೆ. ಪುಟ್ಟ ಬೀಸಣಿಕೆಯಂತೆ ಕಾಣುತ್ತವೆ. ಈ ಮರದ ಚೆಲುವಿನಿಂದಾಗಿ ಬೋನ್ಸಾಯ್‌ಗಳು ಪ್ರಚಲಿತವಾಗಿ ಮಾರುಕಟ್ಟೆಯಲ್ಲಿ ದೊರಕುತ್ತವೆ.

       ಗಿಂಕ್ಗೊ ಮರವು ಸಾಂಸ್ಕೃತಿಕವಾಗಿ ಬೌದ್ಧ ಧರ್ಮಕ್ಕೆ ಹೊಂದಿಕೊಂಡಿದೆ. ಹಾಗಾಗಿ ಜಪಾನ್‌, ಕೊರಿಯಾ ಚೀನಾದಲ್ಲಿ ಬೌದ್ಧ ದೇವಾಲಯಗಳ ಆವರಣಗಳಲ್ಲಿ ಇರುವುದುಂಟು. ಅದರ ಆಯಸ್ಸು, ಚೆಲವು, ಔಷಧಿಯ ಗುಣಗಳಿಂದಾಗಿ ಹೂವು ಬಿಡುವ ಸಸ್ಯಗಳ ಹಿಂದಿನ ತಲೆಮಾರಿನದಾಗಿ ಇಂದಿಗೂ ತನ್ನ ಇರುವನ್ನು ಬಂಗಾರದ ಎಲೆಗಳ ಅನನ್ಯ ನೋಟದಿಂದ ಕಣ್ತುಂಬಿಸುತ್ತದೆ. ಬಹುಷಃ ಕೇವಲ ಹಿಮಾಲಯದ ಆಸುಪಾಸು ಉತ್ತರ ಭಾರತದ ಕೆಲವೆಡೆ, ಜಮ್ಮು ಕಾಶ್ಮೀರದಲ್ಲಿ ಮಾತ್ರವೇ ಕಾಣಬರುವ ಮರದ ಹೆಚ್ಚಿನ ವಿವರಗಳಿಂದ ಅಲ್ಲದಿದ್ದರೂ ಅದರ ಚೆಲುವಿನ ಕಾರಣದಿಂದ ಸಸ್ಯಯಾನವು ವರ್ಷ ತುಂಬಿದ ನೆನಪಿಗೆ ಸಾಕ್ಷಿಯಾಗಿದೆ.

ನಮಸ್ಕಾರ

ಡಾ. ಟಿ.‌ ಎಸ್.‌ ಚನ್ನೇಶ್

Leave a Reply