You are currently viewing ಪ್ರೀತಿ ಮತ್ತು ಸೌಂದರ್ಯದ ಅನನ್ಯ ರೂಪಕ ಗುಲಾಬಿ : Rosa spp.

ಪ್ರೀತಿ ಮತ್ತು ಸೌಂದರ್ಯದ ಅನನ್ಯ ರೂಪಕ ಗುಲಾಬಿ : Rosa spp.

“A Rose by any other name would smell as sweet”

                                      – William Shakespeare

“ಗುಲಾಬಿಯು ಯಾವುದೇ ಹೆಸರಲ್ಲಿರಲಿ ಅದು ಸಿಹಿಯೇ ಆಗಿರುತ್ತದೆ” ಎನ್ನುವ ಈ ಜನಪ್ರಿಯ ಸಾಲು, ಜಗದ್ವಿಖ್ಯಾತ ಕವಿ, ನಾಟಕಕಾರ ಲೇಖಕ ವಿಲಿಯಂ ಶೇಕ್ಸ್‌ಪೀಯರ್‌ನ “ರೋಮಿಯೋ ಜೂಲಿಯಟ್‌” ನಾಟಕದ್ದು. ಜೂಲಿಯಟ್‌ಳು ಪ್ರಿಯಕರ ರೋಮಿಯೋನ ಮನೆಯನ್ನು ಕುರಿತು ಅದೇ ಹೇಗೆ ಇರಲಿ, ಚೆನ್ನಾಗಿಯೇ ಇರುತ್ತದೆ ಎಂಬುದಕ್ಕೆ ರೂಪಕವಾಗಿ ಹೇಳುವ ಮಾತು ಅದು. ಕೆಲವು ಗುಲಾಬಿಗಳು ಸಿಹಿಯೂ ಪರಿಮಳಭರಿತವೂ ಎನ್ನುವುದೇನೋ ನಿಜವೇ! ಆದರೆ ಮುನ್ನೂರಕ್ಕೂ ಹೆಚ್ಚು ಪ್ರಭೇದಗಳಿರುವ ಗುಲಾಬಿ ಸಂಕುಲದಲ್ಲಿ ಸಾವಿರಾರು ಸ್ಥಳೀಯ ತಳಿಗಳಿವೆ (Landraces). ಅವುಗಳಲ್ಲಿ ಅನೇಕ ಗುಲಾಬಿಗಳಿಗೆ ಪರಿಮಳವಿಲ್ಲ! ಹಾಗಾಗಿ ಎಲ್ಲಾ ಗುಲಾಬಿಗಳೂ ಸಿಹಿಯಲ್ಲ ಎಂಬುದೂ ವಾಸ್ತವವೇ! ಪರಿಮಳಭರಿತವಾದ ಗುಲಾಬಿಗಳಿಗೆ ಕಾರಣಗಳನ್ನೂ, ಪರಿಮಳವಿಲ್ಲದ ಗುಲಾಬಿಯ ಸಂಗತಿಗಳನ್ನೂ ವಿವರವಾಗಿಯೇ ನೋಡೋಣ. ಗುಲಾಬಿಯು ಸಾಂಸ್ಕೃತಿಕವಾಗಿ  ಪ್ರೀತಿ ಮತ್ತು ಸೌಂದರ್ಯದ ಬಹು ದೊಡ್ಡ ರೂಪಕವೆಂಬುದಂತೂ ನಿಜ. ಪಶ್ಚಿಮದ ಸಾಂಸ್ಕೃತಿಕ ಇತಿಹಾಸದಲ್ಲಿ ಗುಲಾಬಿಗೆ ವಿಶೇಷ ಸ್ಥಾನವಿದೆ. ಇಂದು ಆಧುನಿಕ ಜಗತ್ತನ್ನು ಆವರಿಸಿರುವ ಪ್ರೀತಿ ಮತ್ತು ಸೌಂದರ್ಯದ ಅನನ್ಯ ರೂಪಕವಾಗಿ ಆಧುನಿಕ ಮಾನವ ಕುಲವನ್ನು ಉತ್ತೇಜಿಸುತ್ತಿದೆ.

        ಸಸ್ಯಯಾನದ ಆರಂಭದಲ್ಲಿ ಪ್ರಸ್ತಾಪಿಸಿದಂತೆ ಒಂದು ನೂರು ಪ್ರಭೇದಗಳ ಕಥನವನ್ನು ಕೇವಲ ಗುಲಾಬಿಗಳ ಬಗ್ಗೆಯೇ ಬರೆಯಲು ಸಾಧ್ಯವಿತ್ತು. ಕಾರಣ ಅಷ್ಟೊಂದು ವೈವಿಧ್ಯತೆಯು ಗುಲಾಬಿಯಲ್ಲಿದೆ. ಇಂಗ್ಲಂಡಿನ ಸುಪ್ರಸಿದ್ಧ ಕ್ಯೂ ಗಾರ್ಡನ್‌ ಮತ್ತು ಅಮೆರಿಕಾದ ನ್ಯೂಯಾರ್ಕ್‌ ಹಾಗೂ ಮಿಸ್ಸೌರಿ ಸಸ್ಯೋದ್ಯಾನಗಳು ವಿಶ್ವಸಂಸ್ಥೆಯ ನೆರವಿನಿಂದ ನಿರ್ವಹಿಸುತ್ತಿರುವ ಜಗತ್ತಿನ ಸಸ್ಯಗಳ ಸಂಪೂರ್ಣ (www.theplantlist.org) ಪಟ್ಟಿಯ ಪ್ರಕಾರ ಗುಲಾಬಿಯ ಸಂಕುಲವಾದ ರೋಸಾ (Rosa) ದಲ್ಲಿ ಸರಿ ಸಮಾರು  4,389 ಪ್ರಭೇದಗಳ ವೈಜ್ಞಾನಿಕ ಹೆಸರುಗಳು ದಾಖಲುಗೊಂಡಿವೆ. ಇವುಗಳಲ್ಲಿ ಸುಮಾರು 366 ಪ್ರಭೇದಗಳು ಮಾತ್ರವೇ ಒಪ್ಪಿಗೆಯಾಗಿವೆ. ಸುಮಾರು 852 ಪ್ರಭೇದಗಳನ್ನು ಪರ್ಯಾಯ ಹೆಸರುಗಳಾಗಿ ಒಪ್ಪಲಾಗಿದೆ. ಒಪ್ಪಿಗೆಯಾಗದೇ ಇನ್ನೂ ಚರ್ಚೆಯಲ್ಲೇ ಇದ್ದು ತೀರ್ಮಾನವಾಗಬೇಕಿರುವ ಇನ್ನೂ ಸುಮಾರು 3,152 ಪ್ರಭೇದಗಳ ಹೆಸರುಗಳೂ ಪಟ್ಟಿಯಲ್ಲಿವೆ. ಅಷ್ಟರಲ್ಲೂ ಸುಮಾರು 328 ಪ್ರಭೇದಗಳನ್ನು ಮಾತ್ರವೇ ಹೆಚ್ಚು ನಿಖರವಾಗಿ ಗುಲಾಬಿಯ ಪ್ರಭೇದಗಳೆಂದು ವರ್ಗೀಕರಿಸಲಾಗಿದೆ. ಕೇವಲ ಇವುಗಳ ಬಗ್ಗೆಯೇ ಬರೆದಿದ್ದರೂ ಸಹಾ ಸಸ್ಯಯಾನದ ಗುರಿಯ ಮೂರು ಪಟ್ಟು ಪ್ರಭೇದಗಳ ಕುರಿತ ಪ್ರಬಂಧಗಳಾಗುತ್ತಿದ್ದವು. ರೋಸಾ ಸಂಕುಲವು ಸುಮಾರು 35 ದಶಲಕ್ಷ ವರ್ಷಗಳಷ್ಟು ಹಿಂದಿನದೆಂದು ಪಳೆಯುಳಿಕೆಗಳ ಆಧಾರದಿಂದ ನಂಬಲಾಗಿದೆ. ಹೆಚ್ಚೂ ಕಡಿಮೆ ಉತ್ತರ ಗೋಳದ ತಂಪಾದ ಪ್ರದೇಶವು ಇದರ ಮೂಲ ತವರು. ಆದರೂ ತೋಟಗಾರಿಕೆಗೆ ಒಳಗಾಗಿದ್ದು ಚೀನಿಯರಿಂದ ಎನ್ನಲಾಗುತ್ತದೆ. ಆದಾಗ್ಯೂ ರೋಮನ್ನರು ಗುಲಾಬಿಗೆ ರಾಜ ಮರ್ಯಾದೆಯನ್ನು ತಂದುಕೊಟ್ಟರೆಂದು ಧೃಡವಾಗಿ ಹೇಳಬಹುದು.    

       ನಮಗೆಲ್ಲರಿಗೂ ತುಂಬು ಪರಿಚಯದ ಸಾಮಾನ್ಯ ಗುಲಾಬಿಯು ಸುಂದರವೂ, ಸುವಾಸನೆಗೆ ಹೆಸರು ಮಾಡಿದ್ದೂ ಅಲ್ಲದೆ, ವಿವಿಧ ಬಗೆಯ ಪರಿಮಳವನ್ನೂ ಒಂದೇ ಹೂವು ಕೊಡುತ್ತಿದೆ. ನಮಗೆ ಸೌಂದರ್ಯವರ್ಧಕಗಳಿಂದ, ಸುಗಂಧದ್ರವ್ಯಗಳಿಂದ, ಆಹಾರದ ರುಚಿಗಳಲ್ಲಿ, ಗುಲಾಬಿಯ ತೈಲ ಮುಂತಾದವುಗಳಿಂದ ನಮ್ಮ ಆಹ್ಲಾದಕತೆಯನ್ನು ತರುವ ಹೂವಿನೊಳಗಿನ ಪರಿಮಳಗಳ ಸಂಗತಿಗಳನ್ನು ವಿವರವಾಗಿಯೇ ನೋಡೋಣ. ಇಷ್ಟೆಲ್ಲದರ ಜೊತೆಗೆ ಶೇಕ್ಸ್‌ಪೀಯರ್‌ ತನ್ನ ಸಾಹಿತ್ಯಲೋಕದಲ್ಲಿ ಗುಲಾಬಿಯನ್ನು ಬಹುದೊಡ್ಡ ರೂಪಕವಾಗಿಸಿ ವಿಶಿಷ್ಟ ಸ್ಥಾನವನ್ನು ಕೊಟ್ಟಿರುವ ಹತ್ತಾರು ಸಂಗತಿಗಳಿಂದ ಗುಲಾಬಿಯನ್ನು ಆಸ್ವಾದಿಸೋಣ. ಜೊತೆಗೆ ಕಲೆ, ಸಾಹಿತ್ಯದ ಮತ್ತಾವುದೇ ಮಹತ್ವಗಳ ಕಥನಗಳನ್ನೂ ಸಹಾ ಗುಲಾಬಿಯ ಹಿನ್ನಲೆಯಿಂದಲೂ ತಿಳಿಯೋಣ. ಇದೆಲ್ಲದರ ಜೊತೆಗೆ ಗುಲಾಬಿ ವೈಜ್ಞಾನಿಕ ನಿರೂಪಗಳಂತೂ ಸಸ್ಯಯಾನದ ಪ್ರಮುಖ ಸಂಗತಿಗಳೇ ತಾನೇ!

       ಗುಲಾಬಿಯು ರೋಸೇಸಿಯೆ(Rosaceae) ಎಂಬ ಸಸ್ಯ ಕುಟುಂಬದ ಗಿಡ. ಸಾಮಾನ್ಯವಾಗಿ ಕಾಂಡದಿಂದ ನೇರವಾಗಿ ನಿರ್ಲಿಂಗ ರೀತಿಯ ವಂಶಾಭಿವೃದ್ಧಿಯಿಂದ ಕೃಷಿಗೆ ಒಳಪಡಿಸಲಾಗುತ್ತದೆ. ಗುಲಾಬಿಯ ಎಲೆಗಳು ಸಂಯುಕ್ತವಾದವು. ಎದುರು-ಬದುರಾದ ಬೆಸ ಸಂಖ್ಯೆಯ ಉಪ-ಎಲೆಗಳ ಗುಂಪು ಗುಲಾಬಿಯದ್ದು. ಸಾಮಾನ್ಯವಾಗಿ ೯ಕ್ಕಿಂತ ಹೆಚ್ಚು ಉಪಎಲೆಗಳನ್ನು ಹೊಂದಿರದೇ ಅದಕ್ಕಿಂತಾ ಕಡಿಮೆಯ ಬೆಸ ಸಂಖ್ಯೆಯ ಸಂಯುಕ್ತ ಎಲೆಗಳನ್ನು ವಿವಿಧ ಗುಲಾಬಿ ಪ್ರಭೇದಗಳು ಹೊಂದಿರುತ್ತವೆ. ಹೂವಿನ ಜೊತೆಗೇ ಮುಳ್ಳೂ ಇರುವುದೂ ಸಹಾ ಸಾಕಷ್ಟು ಸಾಂಕೇತಿಕವಾಗಿ ಚರ್ಚೆಯಲ್ಲಿ ಒಳಗೊಂಡಿದೆ. ಕಾಂಡಗಳ ಹೊರ ಮೈಯ ಕವಚದಿಂದ ರೂಪಾಂತರಗೊಂಡ ಹೊರಚಾಚುಗಳು ಸಾಕಷ್ಟು ಮೊನಚಾಗಿದ್ದು ಮುಳ್ಳುಗಳಾಗಿರುತ್ತವೆ. ಸುಂದರವಾದ ಹೂವಿನ ಜೊತೆಗೆ ಮೊನಚಾದ ಮುಳ್ಳೂ ಇರುವುದು ಅದರ ಬಗೆಗಿನ ಚರ್ಚೆಗಳನ್ನು ಮತ್ತಷ್ಟು ಮೊನಚಾಗಿಸಿದೆ.

        ಗುಲಾಬಿಯ ಕುಟುಂಬದ ಸುಂದರವಾದ ಹಣ್ಣು ಸೇಬನ್ನು ಕುರಿತು ಹಿಂದಿನ ವಾರ ಚರ್ಚಿಸಲಾಗಿತ್ತು. ಸುಂದರವಾದ ಹೂವಿನಿಂದ ಮಾತ್ರವೇ ಹೆಚ್ಚು ಪರಿಚಯವಿರುವ ಗುಲಾಬಿಯ ಹಣ್ಣು ಇದ್ದರೆ ಅದು ಹೇಗಿದ್ದೀತು? ಎನ್ನುವ ಕುತೂಹಲವಿದ್ದರೆ ಉತ್ತರವೂ ಸಹಾ ಅಷ್ಟೇ ಆಸಕ್ತಿದಾಯಕವಾಗಿದೆ. ನಮಗೆ ಗುಲಾಬಿಯ ಹೂವಿನ ಪರಿಚಯವಿದ್ದ ಹಾಗೆ ಅದರ ಹಣ್ಣಿನದು ಇಲ್ಲ. ಗುಲಾಬಿಯು ಸಹಾ ಸಾಮಾನ್ಯವಾಗಿ ಕೀಟಗಳಿಂದಲೇ ಪರಾಗಸ್ಪರ್ಶಗೊಂಡು ಕಾಯಿ ಕಟ್ಟುತ್ತದೆ. ಹಣ್ಣೂ ಸಹಾ ಗುಲಾಬಿಯಂತಯೇ ರಂಗಾಗಿದ್ದು, ಪರಿಮಳಭರಿತವೂ ಆಗಿರುತ್ತವೆ. ಹಣ್ಣುಗಳನ್ನು ಹಾಗೆಯೇ ತಿನ್ನಬಹುದು. ಹಣ್ಣಿನ ಜಾಮ್‌, ಜ್ಯೂಸ್‌ ಮುಂತಾಗಿ ತಯಾರಿಸಬಹುದು.   ಸಾಕಷ್ಟು ವಿಟಮಿನ್‌ “ಸಿ”ಯಿಂದ ಸಮೃದ್ಧವಾಗಿರುವ ಗುಲಾಬಿಯ ಹಣ್ಣು ವೈನ್‌ ತಯಾರಿಕೆಯಲ್ಲೂ ಬಳಕೆಯಾಗುತ್ತವೆ. ಅದರೊಳಗಿನ ಬೀಜದಿಂದ ಗುಲಾಬಿಯ ತೈಲವೂ ಸಿಗುತ್ತದೆ. ಗುಲಾಬಿಯ ಹಣ್ಣಿನಿಂದ ಸಂಸ್ಕರಿಸಲಾದ ಪದಾರ್ಥಗಳಿಂದ ಅನೇಕ ಆರೋಗ್ಯಭರಿತ ಔಷಧಗಳನ್ನು ತಯಾರಿಸಲಾಗುತ್ತದೆ. ಪ್ರಮುಖವಾಗಿ ಕೀಲುನೋವಿಗೆ ಪರಿಹಾರವನ್ನು ಹಣ್ಣು ಮತ್ತದರ ಬೀಜಗಳು ಒದಗಿಸುತ್ತವೆ.

       ಇದೆಲ್ಲಾ ಏನೇ ಇದ್ದರೂ ಗುಲಾಬಿಯ ಸಸ್ಯದಲ್ಲಿ ಅದರ ಹೂವಿನ ಸಂಗತಿಗಳಿಗೇ ಮೆಲುಗೈ. ಇನ್ನೂ ಅರಳದ ಮೊಗ್ಗಿನಿಂದ ಆರಂಭಿಸಿ, ಅರಳಿದ ಹೂಗಳ ಬಣ್ಣ, ಪಕಳೆಗಳ ಜೋಡಣೆ, ಅರಳಿದಾಗಿನ ನೋಟ, ಹೊರಸೂಸುವ ಪರಿಮಳ ಇವೆಲ್ಲವುಗಳಿಂದ ಹೂವಿನ ಚೆಲುವು ಆವರಿಸಿಕೊಳ್ಳುತ್ತದೆ. ಅದರ ಬಣ್ಣಗಳು, ಜೋಡಿಸಿಡುವ ಕಲೆಗಾರಿಕೆ, ದಳಗಳ ಮೃದುತ್ವ ಮತ್ತು ಸ್ಪರ್ಶ ಎಲ್ಲವೂ ಮಾರ್ಮಿಕವೇ! ಆಂಗ್ಲ ಕವಿಗಳಂತೂ ಗುಲಾಬಿಯ ಚೆಲುವಿಗೆ ಅದೆಷ್ಟು ಮಾರುಹೋಗಿದ್ದಾರೆಂದರೆ ಅದೇ ದೊಡ್ಡ ಅಚ್ಚರಿಯಾಗುವುದು.

ಗುಲಾಬಿಯ ಪರಿಮಳ, ಸ್ವಾದ ಮತ್ತು ಅದರ ಚೆಲವು

ಒಂದು ಸಂಕುಲದ ಕೆಲವು ಪ್ರಭೇದಗಳು ಪರಿಮಳ, ಸ್ವಾದ ಮತ್ತು ಚೆಲುವನ್ನು ತುಂಬಿಕೊಂಡು ಮಾನವಕುಲಕ್ಕೆ ವರವಾಗಿವೆ. ಹೂವುಗಳ ವಿಚಾರದಲ್ಲಿ ಅಗ್ರಸ್ಥಾನದ ಗುಲಾಬಿಯ ಚೆಲುವಿಗೆ ಸಾಟಿಯಾದುದಿಲ್ಲ. ಅದು ರೂಪಕವಾಗಿಸುವ ಪ್ರೀತಿಯ ಆಳಕ್ಕೆ ಪರ್ಯಾಯವಿಲ್ಲ. ಗುಲಾಬಿಯ ಕಥನಗಳೇನಿದ್ದರೂ ನಿಜವಾಗಿಯೂ ಹೂವು ಅದರ ಚೆಲುವು, ಬಣ್ಣ, ಪರಿಮಳ ಮತ್ತು ಅದರ ಸಂಸ್ಕರಣೆಯ ಉತ್ಪನ್ನಗಳ ಹೆಚ್ಚುಗಾರಿಕೆಯಿಂದಲೇ ಜನಪ್ರಿಯವಾದವು. ಹೂವಿನ ಪರಿಮಳವು ಅದರಲ್ಲೂ ಅತ್ಯಂತ ಹೆಚ್ಚು ಪರಿಮಳಭರಿತವಾದ ಡೆಮಸ್ಕ್‌ ಗುಲಾಬಿಯಲ್ಲಿ ಒಂದಲ್ಲಾ ನಾಲ್ಕು ಬಗೆಯ ಪರಿಮಳಗಳು ಹೊಮ್ಮುತ್ತವೆ. ಇದರಲ್ಲಿ ಸಿಹಿ, ಹಣ್ಣು, ಮಿಂಟ್‌ ಹಾಗೂ ಕಿತ್ತಳೆಯ ಪರಿಮಳಗಳು ಒಂದೇ ಹೂವಿನಲ್ಲಿರುವುದುಂಟು. ಒಂದೇ ಬಗೆಯ ರಾಸಾಯನಿಕವು ನಾಲ್ಕು ಬಗೆಯ ಪರಿಮಳವನ್ನು ಕೊಡುವುದೆಂದರೆ! ನಿಜ, ಒಂದಲ್ಲ ನಾಲ್ಕು ಬಗೆಯ ಪರಿಮಳಗಳ ರಾಸಾಯನಿಕಗಳ ಹದವರಿತ ಮಿಶ್ರಣ ಗುಲಾಬಿಯಲ್ಲಿದೆ.

       ಇಷ್ಟೆಲ್ಲವನ್ನೂ ತನ್ನೊಳಗಿಟ್ಟ ರಾಸಾಯನಿಕತೆಯ ತೆರೆದಿಡಲು ಒಂದೇ ರಾಸಾಯನಿಕದಿಂದ ಸಾಧ್ಯವಿರದು. ನಿಜ‌ ಆದರೆ ಒಂದೇ ರಾಸಾಯನಿಕವು ನಾಲ್ಕು ಬಗೆಯ ರಾಸಾಯನಿಕಗಳಂತೆ ವರ್ತಿಸುವ ವಿಶೇಷತೆ ಮಾತ್ರ ಗುಲಾಬಿಯಲ್ಲಿ ತುಂಬಿಕೊಂಡಿರುವ ಸಂಗತಿಯಾಗಿದೆ. ರೋಸ್‌ ಆಕ್ಸೈಡ್‌ (Rose Oxide)ಅಥವಾ ಗುಲಾಬಿಯ ಆಕ್ಸೈಡು ಗುಲಾಬಿ ಹೂವುಗಳಿಗೆ ಪರಿಮಳವನ್ನು ಕೊಡುವ ರಾಸಾಯನಿಕ ಸಂಯುಕ್ತ ವಸ್ತು. ಈ ಸಂಯುಕ್ತವು ಒಂದೇ ಬಗೆಯ ರಾಸಾಯನಿಕ ಮಿಶ್ರಣವನ್ನು ಹೊಂದಿದ್ದರೂ, ಆ ರಾಸಾಯನಿಕ ವಸ್ತುಗಳ ಸಂರಚನೆಯಲ್ಲಿ ವಿವಿಧತೆಯನ್ನು ಹೊಂದಿರುತ್ತವೆ. ಹೇಗೆಂದರೆ ನಮ್ಮ ಎರಡೂ ಕೈಗಳೂ ಒಂದೇ ತೆರನಾಗಿದ್ದೂ ಭಿನ್ನವಾಗಿಲ್ಲವೇ? ಒಂದಕ್ಕೊಂದು ಕನ್ನಡಿಯ ಪ್ರತಿಬಿಂಬದಂತೆ! ಇಲ್ಲೂ ಹಾಗೆಯೇ ರಾಸಾಯನಿಕ ಸಂಯುಕ್ತಗಳು ಸಿಸ್‌ ಮತ್ತು ಟ್ರಾನ್ಸ್‌  ಎಂಬೆರಡು ಪ್ರತಿಬಿಂಬಗಳ ಸಂಯುಕ್ತಗಳಾಗಿರುತ್ತವೆ. ಆ ಕಾರಣದಿಂದಲೇ ಭಿನ್ನವಾಗಿ ವರ್ತಿಸುತ್ತವೆ. ಆ ವರ್ತನೆಯು ಪರಿಮಳ ಮತ್ತು ಸ್ವಾದಗಳಲ್ಲಿ ವ್ಯಕ್ತವಾಗುತ್ತದೆ.  ಎಲ್ಲಾ ನಾಲ್ಕೂ ರಾಸಾಯನಿಕಗಳೂ ಒಂದೆ ಬಗೆಯ ಸಂಯುಕ್ತವಾಗಿದ್ದು 10 ಇಂಗಾಲ, 18 ಜಲಜನಕ ಮತ್ತು  1 ಆಮ್ಲಜನಕಗಳನ್ನು ಮಾತ್ರವೇ ಹೊಂದಿರುತ್ತದೆ. ಅವುಗಳ ಸಂರಚನೆಯ ವಿವಿಧತೆಯಿಂದಾಗಿ ಭಿನ್ನ ಭಿನ್ನ ಪರಿಮಳ ಮತ್ತು ಸ್ವಾದವನ್ನು ಗುಲಾಬಿಯಲ್ಲಿರಿಸಿವೆ. 

       ಚೆಲುವಿಗೆ ಹೂವನ್ನೂ ಅದರಲ್ಲೂ ಗುಲಾಬಿಯನ್ನೂ ಬಳಸಿ ರೂಪಕವಾಗಿಸುವ ಸಾಕಷ್ಟು ಉದಾಹರಣೆಗಳಿವೆ. ರೆಡ್‌ ರೋಸ್‌- ಕೆಂಗುಲಾಬಿಯು ಪ್ರೀತಿಯ ಸಂಕೇತ, ಚೆಲುವೂ ಅಷ್ಟೇ ಸೊಗಸು. ಬರೀ ಬಣ್ಣ ಮಾತ್ರವಲ್ಲ. ಅದು ಪಕಳೆಗಳಲ್ಲಿ ತುಂಬಿಕೊಂಡ ಸೊಬಗೂ ಹೌದು. ಅಷ್ಟೇ ಅಲ್ಲ, ಬಿಳಿ, ಹಳದಿ, ಕೆಂಪು, ಪಿಂಕ್‌ ಹಸಿರು, ನೀಲಿ ಹೀಗೆ ವಿವಿಧ ಬಣ್ಣಗಳ ಗುಲಾಬಿಗಳೂ ಜಗತ್ತಿನಾದ್ಯಂತ ಪರಿಚಿತ. ಈ ಬಗೆ ಬಗೆಯ ಬಣ್ಣಗಳೂ ಒಂದೊಂದು ಸಂಕೇತಗಳ ಕಾರಣವನ್ನು ಹೊಂದಿವೆ. ಶೇಕ್ಸ್‌ಪೀಯರ್‌ ಸಾನೆಟ್ಟುಗಳ ಮೊಟ್ಟ ಮೊದಲ ಕವನವು ಸಹಾ ಆರಂಭವಾಗುವುದೇ “ಗುಲಾಬಿಯು ಎಂದಿಗೂ ಸಾಯುವುದಿಲ್ಲ” ಎನ್ನುವ ಸಾಲಿನಿಂದ. ನಾವೆಲ್ಲರೂ ಸುಂದರವಾದುದನ್ನು ಬಹಳ ಕಾಲ ಬಯಸುವಂತಹ ಆಶಯವನ್ನು ಮೊದಲ ಸಾನೆಟ್ಟಿನಲ್ಲೇ ತಂದಿರಿಸುವ ಶೇಕ್ಸ್‌ಪಿಯರ್‌ನ ಆ ಸಾಲು ಹೀಗಿದೆ. ಸುಂದರ ಯುವಕನ ಯೌನವು ಚಿರನೂತನವಾಗಿ ಇರಬೇಕೆನ್ನುವ ಮಾತನ್ನು ಗುಲಾಬಿಗೆ ಹೋಲಿಸಿ ಹೇಳುವ ಮಾತು ಅದು.   

            “From fairest creatures we desire increase,

That thereby beauty’s rose might never die”

       “ಆಂಟೊನಿ ಮತ್ತು ಕ್ಲಿಯೋಪಾತ್ರ”ದಲ್ಲಿ “ಜೂಲಿಯಸ್‌ ಸೀಸರ್‌”ನಲ್ಲಿ ಜೊತೆಗೆ ಅನೇಕ ಸಾನೆಟ್ಟುಗಳಲ್ಲಿ ಗುಲಾಬಿಯು ಪ್ರೀತಿ, ಸೌಂದರ್ಯ, ವಿಶ್ವಾಸ, ಯೌವನ ಮತ್ತು ಆಹ್ಲಾದಕತೆಯ ರೂಪಕವಾಗಿ ಹಲವು ಬಾರಿ ಕಾಣಿಸಿಕೊಂಡಿದೆ. ದುರಂತದ ಸನ್ನಿವೇಷಗಳ ರಕ್ತದೋಕುಳಿಯ ಭಯಾನಕ ಸನ್ನಿವೇಶವನ್ನೂ ಗುಲಾಬಿಯ ಬಣ್ಣ ಮತ್ತು ಅದರ ಪರಿಮಳವು ತಡೆಯದಾಗದ್ದನ್ನೂ ಶೇಕ್ಸಪಿಯರ್‌ ಅದ್ಭುತವಾಗಿ ಚಿತ್ರಿಸಿದ್ದಾನೆ. ಶೇಕ್ಸ್‌ಪಿಯರ್‌ ಮತ್ತು ಗುಲಾಬಿಯನ್ನು ಕುರಿತೇ ಬರೆದರೂ ಅದೊಂದು ಸುಧೀರ್ಘ ಪ್ರಬಂಧವಾದೀತು. ಅಷ್ಟೊಂದು ಪರಿಣಾಮಕಾರಿಯಾಗಿ ಗುಲಾಬಿಯು ಶೇಕ್ಸ್‌ಪಿಯರ್‌ನ ಅಕ್ಷರಗಳಲ್ಲಿ ಅರಳಿದೆ. ಅದನ್ನು ಕೇವಲ ಪ್ರಸ್ತಾಪಿಸುವ ಧೈರ್ಯ ಮಾತ್ರವೇ ನನಗಿದೆಯೋ ಹೊರತು ಅದನ್ನು ಕುರಿತು ಬರೆಯುವಷ್ಟು ಖಂಡಿತಾ ಇಲ್ಲ. 

ಕಲೆ ಮತ್ತು ಸಂಸ್ಕೃತಿಯಲ್ಲಿ ಗುಲಾಬಿ  

ಗುಲಾಬಿ ಹೂವಿಗೆ ಅತ್ಯಂತ ಹಿಂದಿನಿಂದಲೂ ಬಹಳ ದೊಡ್ಡ ಸಾಂಸ್ಕೃತಿಕ ಇತಿಹಾಸವಿದೆ. ಅದರ ಉದ್ದಕ್ಕೂ ಗುಲಾಬಿಯನ್ನು ಪ್ರೀತಿ, ಸೌಂದರ್ಯ, ಸಂತೋಷ ಉತ್ಸಾಹ ಮತ್ತು ಉನ್ಮಾದಗಳ  ಸಂಕೇತವಾಗಿ ಬಳಸಲಾಗಿದೆ. ಪುರಾತನ ಗ್ರೀಕರಲ್ಲಿ ಗುಲಾಬಿಯು ಪ್ರೀತಿ ಮತ್ತು ಸೌಂದರ್ಯ ದೇವತೆ ಅಫ್ರೊಡೈಟ್‌ಳ ಜೊತೆ ನಿಕಟ ಸಂಬಂಧವನ್ನು ಹೊಂದಿದೆ. (ಅಫ್ರೊಡೈಟ್‌ ದೇವತೆಯು ನಮ್ಮ ಪುರಾಣಗಳ ಮನ್ಮಥನ ಸಂಗಾತಿ ರತಿಯ ಹಾಗೆ) ಖ್ಯಾತ ಗ್ರೀಕ್‌ ಕವಿ “ಹೋಮರಇಲಿಯಡ್‌” ಮಹಾಕಾವ್ಯದಲ್ಲಿ ಟ್ರೋಜನ್‌ ರಾಜಕುಮಾರ ಹಾಗೂ ಯುದ್ಧದ ಅಪ್ರತಿಮ ಶೂರ ನಾಯಕ ಹೆಕ್ಟರ್‌ ನನ್ನು ಅಫ್ರೊಡೈಟ್‌ ಗುಲಾಬಿಯ ತೈಲವನ್ನು ಬಳಸಿ ಸಂರಕ್ಷಿಸುತ್ತಿದ್ದಳಂತೆ. ಗ್ರೀಕ್‌ ಕವಿ ಐಬಕಸ್‌ ಕೂಡ ಅಫ್ರೊಡೈಟ್‌ ದೇವತೆಯು ಯೌವನವನ್ನು ದಯಪಾಲಿಸಲು “ಗುಲಾಬಿಯ ಪಕಳೆ”ಗಳನ್ನು ಬಳಸುತ್ತಿದ್ದಳು ಎಂದು ವರ್ಣಿಸಿದ್ದಾನೆ. ತೀರಾ ಇತ್ತೀಚೆಗಿನ ಅಂದರೆ ಎರಡನೆಯ ಶತಮಾನದ ಗ್ರೀಕ್‌ ಪ್ರವಾಸಿಯಾದ ಪೌಸನಿಯಸ್‌ ಕೂಡ ಅಫ್ರೊಡೈಟ್‌ ದೇವತೆಯ ಪ್ರಿಯಕರ ಅಡಿನಿಸ್‌ ಕಥನದಲ್ಲಿ ಗುಲಾಬಿಯನ್ನು ಪ್ರಸ್ತಾಪಿಸುತ್ತಾನೆ. ಅಪ್ರೊಡೈಟ್‌ಗೆ ಆಕಸ್ಮಿಕವಾಗಿ ತಾಗಿದ ಮುಳ್ಳಿನಿಂದಾಗಿ ಹೊರ ಬಂದ ದೇವತೆಯ ರಕ್ತವು ಹೂವಿಗೆ ರಂಗು ಕೊಟ್ಟಿದೆ ಎನ್ನುವಂತಹಾ ಪುರಾಣಗಳು ಕೂಡ ಜನಪ್ರಿಯವಾಗಿವೆ.

       ಅದೆಲ್ಲಕ್ಕಿಂತಲೂ ಹೆಚ್ಚಾಗಿ “ಸರ್‌ ಲಾರೆನ್ಸ್‌ ಅಲ್ಮ ಟಡೆಮಾ” ಎಂಬ ಆಂಗ್ಲೊ-ಡಚ್‌ ಕಲಾವಿದರ ದಿ ರೋಸಸ್ ಆಫ್ ಹೆಲಿಯೊಗಾಬಲಸ್ (The Roses of Heliogabalus)” ಎಂಬ ‌1888ರ ಕಲಾಕೃತಿಯೊಂದು ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ. ಯುವ ರೋಮನ್‌ ಚಕ್ರವರ್ತಿ ಎಲಾಗಬಲಸ್‌ ಕೊಡುತ್ತಿರುವ ಔತಣಕೂಟದ ಚಿತ್ರ ಅದು. ಕಲಾಕೃತಿಯಲ್ಲಿ ಗುಲಾಬಿಯ ದಳಗಳು ಔತಣದ ಆಹ್ವಾನಿತರ ಮೇಲೆ ಬೀಳುತ್ತಿರುವ ದೃಶ್ಯವನ್ನು  ಕಿರೀಟಧಾರಿ ದೊರೆ ಹಿಂದೆ ಪ್ಲಾಟಫಾರಮ್ಮಿನ ಮೇಲೆ ನಿಂತು ನೋಡುವ ಚಿತ್ರ ಅದು. ಆ ಕಾಲಕ್ಕೇ ಆ ಗುಲಾಬಿಯ ಕಲಾಕೃತಿ ಸುಮಾರು 4000 ಪೌಂಡುಗಳಿಗೆ ಮಾರಾಟವಾಗಿತ್ತು. ಕೃತಿಯ ಕಲಾವಿದ ಅಲ್ಮ ಟಡೆಮಾ 1912ರಲ್ಲಿ ತೀರಿಕೊಂಡ ನಂತರ 1913ರಲ್ಲಿ ಅದು ಪ್ರದರ್ಶನಗೊಂಡಿತ್ತು. ನಂತರ 1934ರಲ್ಲಿ ಮೂಲ ಒಡೆಯರ ಮನೆತನದಿಂದ ಮಾರಾಟ ಮಾಡುವವರೆಗೂ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ.  ನಂತರ ಒಬ್ಬರಿಂದೊಬ್ಬರಿಗೆ ಮಾರಾಟವಾಗುತ್ತಲೇ 1993ರಲ್ಲಿ ಲಂಡನ್ನಿನಲ್ಲಿ 15 ಲಕ್ಷ ಪೌಂಡ್‌ಗೆ ಮಾರಾಟವಾಗಿತ್ತು. ಪ್ರಸ್ತುತ ಆ ಕೃತಿಯು ಆಂಟೊನಿ ಸೈಮನ್‌ ಎಂಬ ಸ್ಪಾನಿಶ್‌-ಮೆಕ್ಸಿಕನ್‌ ಕೋಟ್ಯಾದೀಶ ಕಲಾಪ್ರೇಮಿಯ ಬಳಿ ಇದೆ. ಖಾಸಗಿಯಾಗಿ ಜಗತ್ತಿನಲ್ಲೇ ಅತ್ಯಂತ ಹೆಚ್ಚು ಕಲಾಕೃತಿಗಳನ್ನು ಹೊಂದಿರುವ ಸೈಮನ್‌ ಬಳಿ ಇಂತಹ 3000ಕ್ಕೂ ಹೆಚ್ಚು ಕಲಾಕೃತಿಗಳಿವೆ. ಹೀಗೆ ಗುಲಾಬಿಯು ಕಲಾ ಪ್ರಪಂಚದಲ್ಲೂ ಅದ್ವಿತೀಯವಾಗಿ ಮೆರೆಯುತ್ತಿದೆ.

ಭಾರತದ ಜಗದ್ವಿಖ್ಯಾತ ಗುಲಾಬಿ ತೋಟಗಳು

ನಮ್ಮ ದೇಶದ ಎರಡು ಗುಲಾಬಿ ತೋಟಗಳು ಜಗದ್ವಿಖ್ಯಾತವಾಗಿವೆ. ಚಂಡಿಗಢದಲ್ಲಿರುವ ಝಾಕೀರ್‌ ಹುಸೇನ್‌ ಗುಲಾಬಿ ತೋಟ ಮತ್ತು ತಮಿಳುನಾಡಿನ ಊಟಿಯಲ್ಲಿರುವ ಸರ್ಕಾರಿ ಗುಲಾಬಿ ತೋಟ. ಝಾಕೀರ್‌ ಹುಸೇನ್‌ ಗುಲಾಬಿ ತೋಟವು ಸುಮಾರು 30 ಎಕರೆಗಳಷ್ಟು ವಿಸ್ತಾರವಾಗಿದ್ದು ಸಹಸ್ರಾರು ತಳಿಗಳ 50,000 ಗುಲಾಬಿ ಪೊದೆಗಳನ್ನು ಹೊಂದಿದೆ. ಊಟಿಯ ಗುಲಾಬಿ ತೋಟವು ಭಾರತದಲ್ಲೇ ಅತೀ ಹೆಚ್ಚು ಗುಲಾಬಿಯ ಸಂಗ್ರಹವನ್ನು ಹೊಂದಿದೆ. ಇಲ್ಲಿ ಸುಮಾರು 2,800 ಕ್ಕೂ ಹೆಚ್ಚು ತಳಿಗಳನ್ನು ಒಳಗೊಂಡಿದೆ. World federation of Rose Societies ನಿಂದ ಬಹುಮಾನಿತವಾದ ಜಗತ್ತಿನ 35 ತೋಟಗಳಲ್ಲಿ ಇದೂ ಒಂದು.  

ರೋಸ್‌ ವಾಟರ್‌ -ಗುಲಾಬಿಯ ನೀರು ಸಾಮಾನ್ಯವಾಗಿ ಪರಿಚಿತವಿರುತ್ತದೆ. ಗುಲಾಬಿಯ ಪಕಳೆಗಳನ್ನು ಬಟ್ಟಿ ಇಳಿಸಿ ಶುದ್ಧೀಕರಿಸುವ ಕ್ರಿಯೆಯಿಂದ ಗುಲಾಬಿ ನೀರನ್ನು ಪಡೆಯಲಾಗುತ್ತದೆ. ಗುಲಾಬಿಯ ತೈಲವನ್ನು ಪಕಳೆಗಳಿಂದ ಪಡೆಯುವಾಗಲೂ ಗುಲಾಬಿ ನೀರು ಉಪ-ಉತ್ಪನ್ನವಾಗಿ ದೊರೆಯುತ್ತದೆ. ಮದುವೆಯ ಸಮಾರಂಭಗಳಲ್ಲಿ ಪರಿಮಳದ ನೀರನ್ನೆರಚಲೂ ರೋಸ್‌ ವಾಟರ್‌ ಬಹು ಜನಪ್ರಿಯ. ಅತ್ಯುತ್ತಮ ಆಹ್ಲಾದಕ ಗುಣವನ್ನು ಗುಲಾಬಿ ನೀರು ಹೊಂದಿದೆ. ಇದು ಒಂದು ರೀತಿಯಲ್ಲಿ ಮನಸ್ಸುಗಳ ನಡುವೆ ಹೊಂದಾಣಿಕೆ ಮತ್ತು ಪ್ರೀತಿಯನ್ನು ಹುಟ್ಟಿಹಾಕುವ ಗುಣವನ್ನೂ ಹೊಂದಿದೆ.  

       ಬಹು ಪಾಲು ಜನರಿಗೆ ಪರಿಚಯವಿರುವ ಎರಡು ಪ್ರಮುಖ ತಿನಿಸುಗಳನ್ನು ನೆನಪಿಸಲೇ ಬೇಕು. ಅದು ಗುಲಾಬ್‌ ಜಾಮೂನ್‌ ಮತ್ತು ಗುಲ್ಕಂದ್‌. ಗುಲಾಬಿಯ ಹೂವಿನ ದಳಗಳನ್ನೇ ಬಳಸಿ ತಯಾರಿಸಿದ ರೋಸ್‌ ವಾಟರ್‌ ಅನ್ನು ಉಪಯೋಗಿಸಿ ಗುಲಾಬ್‌ ಜಾಮೂನ್‌ ತಯಾರು ಮಾಡುತ್ತಾರೆ. ಗುಲ್ಕಂದ್‌ ಅನ್ನು ಪಕಳೆಗಳಿಗೆ ಸಕ್ಕರೆಯನ್ನು ಬೆರೆಸಿ ನೆನೆಸಿಟ್ಟು ಹದಮಾಡಿ ತಯಾರು ಮಾಡಲಾಗುತ್ತದೆ.  

ಒಂದೆರಡು ಪ್ರಭೇದಗಳ ಸಂಕಥನ 

ರೋಸಾ ಇಂಡಿಕಾ (Rosa indica )ಎಂಬ ಒಂದು ಪ್ರಭೇದವು ಏಷಿಯಾ ಮೂಲದ್ದು. ಭಾರತ ಮತ್ತು ಪಾಕಿಸ್ಥಾನಗಳಲ್ಲಿ ಅತ್ಯಂತ ಜನಪ್ರಿಯ ಮತ್ತು ಹೆಚ್ಚಾಗಿ ಬೆಳೆಸಲಾಗುತ್ತದೆ. ಇದರ ಹೂವುಗಳು ಹಳದಿ, ಬಿಳಿ ಮತ್ತು ಕೆಂಪು ಬಣ್ಣದವು. ಈ ಪ್ರಭೇದದ ಹೂವನ್ನು ಹೆಚ್ಚಾಗಿ ಹೆಣ್ಣು ಮಕ್ಕಳ ಆರೋಗ್ಯದ ಹಿತದ ಬಳಕೆಯಿಂದ ಉತ್ತೇಜಿಸಲಾಗುತ್ತಿದೆ. ಇದರ ಹಣ್ಣುಗಳು ಹೆಣ್ಣು ಮಕ್ಕಳ ಋತುಸ್ರಾವದ ಸಮಯದ ನೋವು ನಿವಾರಕವಾಗಿ ಮನ್ನಣೆಯನ್ನು ಗಳಿಸಿವೆ. ಮೂತ್ರಕೋಶದಲ್ಲಿ ಸಂಗ್ರಹವಾಗುವ ಕಲ್ಲುಗಳ ಪರಿಹಾರದಲ್ಲೂ ಇದು ಸ್ಥಾನವನ್ನು ಗಳಿಸಿಕೊಂಡಿದೆ. ಇದರ ಪಕಳೆಗಳನ್ನು ಅಸ್ತಮಾ, ಭೇದಿ, ರಕ್ತಸ್ರಾವದಂತಹ ಸಮಸ್ಯೆಗಳಿಗೆ ಉತ್ತರವಾಗಿಯೂ ಬಳಸುತ್ತಾರೆ.

ರೈನ್‌ಬೋ ರೋಸ್‌-ಮಳೆಬಿಲ್ಲಿನ ಗುಲಾಬಿ : ಮಳೆಬಿಲ್ಲು ಅಥವಾ ಕಾಮನಬಿಲ್ಲು ಏಳು ಬಣ್ಣಗಳ ಒಳಗೊಂಡಂತೆ ಗುಲಾಬಿಯನ್ನೂ ಕೃತಕವಾಗಿ ಬಗೆ ಬಗೆಯ ಬಣ್ಣಗಳ ಪಕಳೆಗಳನ್ನಾಗಿಸುವ ತಂತ್ರದಿಂದ ಪಡೆಯವ ಪ್ರಯತ್ನವು ತುಂಬಾ ಹಿಂದಿನಿಂದಲೂ ನಡೆದಿದೆ. ನೀರನ್ನು ಹೀರಿಕೊಂಡು ಹೂವಿಗೆ ತಲುಪಿಸುವ ಸಹಜ ಕ್ರಿಯೆಯನ್ನೇ ಇದಕ್ಕೂ ಬಳಸಿ ಇಂತಹ ಪ್ರಯತ್ನವನ್ನು ನೂರಾರು ವರ್ಷಗಳಿಂದಲೂ ಮಾಡುತ್ತಾ ಬಂದಿದ್ದಾರೆ. ಕಾಂಡವನ್ನು ಸೀಳಿ ಬಣ್ಣದ ನೀರನ್ನು ಹೀರಿಕೊಳ್ಳುವಂತೆ ಮಾಡಿ ಆ ಮೂಲಕ ಹೂವಿನ ದಳಗಳು ವಿವಿಧ ಬಣ್ಣಗಳಾಗುವಂತೆ ಪ್ರೇರೇಪಿಸಲಾಗುತ್ತದೆ. ನಮ್ಮಲ್ಲಿ ಇವು ಅಪರೂಪ ಆದರೂ ಮಾರುಕಟ್ಟೆಯಲ್ಲಿ ಇದಕ್ಕೂ ಬೇಡಿಕೆಯಂತೂ ಇದೆ. ಸಂಶೋಧನೆಗಳ ಪ್ರಕಾರ “ವೆಂಡೆಲ” ಎನ್ನುವ ನೆದರ್‌ಲ್ಯಾಂಡ್‌ನ ತಳಿಯು ಇಂತಹ ಪ್ರಯತ್ನಗಳಿಗೆ ಸ್ಪಂದಿಸುತ್ತದೆಯಂತೆ. ಇದನ್ನು ಕೊಲಂಬಿಯಾ, ಈಕ್ವೆಡಾರ್‌ ಗಳಲ್ಲೂ ಬೆಳೆಯುತ್ತಾರೆ. ಇದು ವಿವಿಧ ಬಣ್ಣದ ನೀರನ್ನು ಹೀರಿಕೊಂಡು ವಿವಿಧ ಬಣ್ಣದ ಪಕಳೆಗಳ ಹೂವನ್ನು ಬಿಡುತ್ತದೆ. ಬಣ್ಣಗಳ ಮಿಶ್ರಣದಲ್ಲಿ ಕೆಂಪು ಮತ್ತು ಹಳದಿಯವು ಹೆಚ್ಚು. ನೀಲಿ ಮತ್ತು ಹಸಿರಿನ ಮಿಶ್ರಣಗಳೂ ಸಿಕ್ಕಾವು. ಆದರೆ ಕಪ್ಪು-ಬಿಳುಪಿನ ಮಿಶ್ರಣಗಳನ್ನು ಸಾಧ್ಯಮಾಡಲಾಗದು.

       ಗುಲಾಬಿಯ ಬಣ್ಣ, ಪರಿಮಳ ಸ್ವಾದ ಇವುಗಳ ಬಗೆಗೆ ವಿವಿಧ ಪ್ರಭೇದಗಳನ್ನು ಪರಿಗಣಿಸಿ ಒಟ್ಟಾರೆ ಆನುವಂಶಿಕ ಅಧ್ಯಯನವನ್ನು ಸುಮಾರು 40 ಅಂತರರಾಷ್ಟ್ರೀಯ ವಿಜ್ಞಾನಿಗಳ ತಂಡವು 8ವರ್ಷಗಳ ಕಾಲ ನಡೆಸಿ ಅದರ ಸುಧೀರ್ಘ ವರದಿಯನ್ನು “ನೇಚರ್‌” ವಿಜ್ಞಾನ ಪತ್ರಿಕೆಯಲ್ಲಿ ವಿಜ್ಞಾನ ಪ್ರಬಂಧವಾಗಿ ಪ್ರಕಟಿಸಿದೆ. ಸಂಶೋಧನೆಯ ಪ್ರಕಾರ ಗುಲಾಬಿಯ ಬೆಳೆಗಾರರು, ತಳಿವಿಜ್ಞಾನಿಗಳೂ ನಿರಂತರವಾಗಿ ಅದರ ಬಣ್ಣಕ್ಕೆ ಹೆಚ್ಚು ಮೋಹಿತರಾಗುತ್ತಾ, ಪರಿಮಳವನ್ನು ಕಡೆಗಾಣಿಸುತ್ತಾ ಬಂದ ಬಗ್ಗೆ ದಾಖಲಿಸಿದ್ದಾರೆ. ಆದರೆ ಪರಿಮಳದ ಉತ್ಪತ್ತಿಯು ಗುಲಾಬಿಯೊಳಗೆ ಸರಿ ಸುಮಾರು 22 ಜೀವಿವೈಜ್ಞಾನಿಕ ಹಂತಗಳನ್ನು ದಾಟಿ ಹೊರಹೊಮ್ಮುವ ಅತ್ಯಾಕರ್ಷಕ ಸಂಗತಿಯನ್ನು ಶೋಧವು ಪ್ರಕಟಿಸಿದೆ. ಇಂತಹ ಸಂಕೀರ್ಣವಾದ ಸುವಾಸನೆಯ ಉತ್ಪಾದನೆಯನ್ನು  ವಿವಿಧ ತಳಿಗಳು ಕಳೆದುಕೊಳ್ಳುತ್ತಿರುವ ಆತಂಕವನ್ನೂ ಸಂಶೋಧಕರು ವ್ಯಕ್ತಪಡಿಸಿದ್ದಾರೆ. ದಳ ಅಥವಾ ಪಕಳೆಗಳ ಸೌಂದರ್ಯವೇ ಮಾನವಕುಲಕ್ಕೆ ಹೆಚ್ಚು ಆಕರ್ಷಕವಾಗುತ್ತಾ ಸಾಗಿರುವುದನ್ನೂ ನಾವೂ ನೋಡುತ್ತಿದ್ದೇವೆ. ಹಾಗಾಗಿ ಅನೇಕ ಪ್ರಭೇದಗಳು ಆಸಕ್ತಿಯನ್ನು ಕುಂದಿಸಿಕೊಂಡಿರುವ ಬಗ್ಗೆಯೂ ವರದಿ ತಿಳಿಸುತ್ತದೆ. ಇದು ಶೇಕ್ಸ್‌ಪಿಯರ್‌ನ ಸಾನೆಟ್‌ ಒಂದರ ಸಾಲನ್ನು ನೆನಪಿಸುತ್ತದೆ. ಅದು ಹೀಗಿದೆ.

                   “The rose looks fair, but fairer it we deem

For that sweet odour which doth in it live.”

       ಕಡೆಯದಾಗಿ ನನಗೂ ಗುಲಾಬಿಯ ಗೊಂಚಲು ಕೊಟ್ಟು ತುಂಬು ಪ್ರೀತಿಯಲ್ಲಿ ಹಾರೈಸಿದ ಘಟನೆಯೊಂದು ನನ್ನ ಆಲ್ಬಂನಲ್ಲಿ ಉಳಿದಿದೆ. ತೀರಾ ಅನಿರೀಕ್ಷಿತವಾಗಿ ನನಗೆ ಕೊಟ್ಟ ಅದರ ನೆನಪಿನ ಚಿತ್ರವು ಇಲ್ಲಿದೆ. ಅದರ ನೆನಪುಗಳಲ್ಲಿ ಗುಲಾಬಿಯ ಪ್ರಬಂಧವನ್ನು ಮುಗಿಸುತ್ತೇನೆ.

ನಮಸ್ಕಾರ.

ಡಾ. ಟಿ.ಎಸ್.‌ ಚನ್ನೇಶ್

This Post Has 6 Comments

  1. Shashidhar K C

    Definitely we got the sweet taste of you article

  2. Rudresh Adarangi

    ಗುಲಾಬಿ ಕುರಿತು ವೈಜ್ಞಾನಿಕವಾಗಿ ಬರೆದಿರುವುದರ ಜೊತೆಗೆ ಸಾಹಿತ್ಯ ಸಾಂಸ್ಕೃತಿಕ ಸಂಗತಿ ವಿಚಾರಪೂರ್ಣ. ಸಾಂದರ್ಭಿಕವಾಗಿದೆ ಅಭಿನಂದನೆಗಳು ಸರ್

  3. Rudresh Adarangi

    ಗುಲಾಬಿ ಕುರಿತು ವೈಜ್ಞಾನಿಕವಾಗಿ ಬರೆದಿರುವುದರ ಜೊತೆಗೆ ಸಾಹಿತ್ಯ ಸಾಂಸ್ಕೃತಿಕ ಸಂಗತಿ ವಿಚಾರಪೂರ್ಣ. ಸಾಂದರ್ಭಿಕವಾಗಿದೆ ಅಭಿನಂದನೆಗಳು ಸರ್ ಧನ್ಯವಾದಗಳು ಸರ್

  4. Shanthakumari

    Very very very interesting subject& know the information

  5. ಡಾ.ಶಂಕರ ರಾಮಚಂದ್ರ ಕಂದಗಲ್ಲ

    ಗುಲಾಬಿಯಷ್ಟೇ ಸುಂದರ ಲೇಖನ.ಪರಿಮಳಭರಿತ ಪದಗಳು.ಸುವಾಸನೆ ಸೂಸುವ ಸಾಲುಗಳು.ಗುಲಕಂದವನ್ನು ತಿಂದು ಗುಲಾಬಿ ಜಲವನ್ನು ಆಸ್ವಾದಿಸಿದ ಆನಂದ.
    ಹೃದಯಪೂರ್ವಕ ಅಭಿನಂದನೆಗಳು.
    ಡಾ.ಶಂಕರ ರಾಮಚಂದ್ರ ಕಂದಗಲ್ಲ
    ಬಾಗಲಕೋಟೆ.

  6. ಡಾ.ಶಂಕರ ರಾಮಚಂದ್ರ ಕಂದಗಲ್ಲ

    ರುದ್ರಾಕ್ಷಿ ಕುರಿತ ಸೊಗಸಾದ ಲೇಖನ ಸಕಾಲಿಕ ಮತ್ತು ಸಾಂದರ್ಭಿಕವಾಗಿ ಮೂಡಿಬಂದಿದೆ.
    ವಿಜ್ಞಾನದ ನೆಲೆಯಲ್ಲಿ ರುದ್ರಾಕ್ಷಿಯ ವರ್ಣಲೀಲೆಯನ್ನು ವಿವರಿಸಿದ್ದೀರಿ.ನಾನು ಭೌತವಿಜ್ಞಾನ ಪ್ರಾಧ್ಯಾಪಕ ನಾಗಿರುವುದರಿಂದ ನನ್ನ ತಿಳಿವಳಿಕೆಯನ್ನು ಇಲ್ಲಿ ಹಂಚಿಕೊಳ್ಳಬಯಸುತ್ತೇನೆ.
    ಅತ್ಯಂತ ಸೂಕ್ಷ್ಮರಚನೆಯ ತೆಳುಪೊರೆ ಅಥವಾ ನುಣುಪಾದ ಮೇಲ್ಮೈ ಮೇಲೆ ಬೆಳಕು ಬಿದ್ದಾಗ ಅದು ಬೇರೆ ಬೇರೆ ಕೋನಗಳಲ್ಲಿ ಬೇರೆ ಬೇರೆ ಬಣ್ಣಗಳಲ್ಲಿ ತೋರುತ್ತದೆ.ಇದನ್ನು Iridiscence or goniochroism ಎನ್ನಲಾಗುವದು.(gonia-angle,chroma-colour) ಇದಕ್ಕೆ ನವಿಲು, ಸಾಬೂನಿನ ಗುಳ್ಳೆ ಉತ್ತಮ ಉದಾಹರಣೆಗಳು.ಇಂಥ ರಚನೆಗಳ ಮೇಲೆ ಬೆಳಕು ಬಿದ್ದು ಬೆಳಕಿನ ಅಲೆಗಳು interference ಮತ್ತು diffraction ಪ್ರಕ್ರಿಯೆಗಳಿಗೊಳಗಾಗಿ ಬೆಳಕಿನ ವರ್ಣಲೀಲೆ
    ಗೋಚರಿಸುತ್ತದೆ.ಇಂಥ ವಿದ್ಯಮಾನಗಳು ಬೆಳಕಿನ ಅಲೆರೂಪಕ್ಕೆ ಸಾಕ್ಷಿ.
    ಆದರೆ ಆಕಾಶ ನೀಲಿಯಾಗಿರುವದು,ಸೂರ್ಯೋದಯ-ಸೂರ್ಯಾಸ್ತಗಳು ಕೆಂಪಾಗಿರುವದು ಬೆಳಕಿನ ಚದುರುವಿಕೆಯ ಪರಿಣಾಮವಾಗಿವೆ.ಇವು ಬೆಳಕಿನ ಕಣರೂಪಕ್ಕೆ ಸಾಕ್ಷಿ.ವಾತಾವರಣದ ಅನಿಲಕಣಗಳೊಂದಿಗಿನ ಬೆಳಕಿನ ಕಣಗಳ ಅಂತರ್ವರ್ತನೆಯಿಂದ ಉಂಟಾಗುವ ವಿದ್ಯಮಾನ.ರಾಮನ್ ಪರಿಣಾಮವೂ ಕೂಡಾ ಇದೇ ವರ್ಗಕ್ಕೆ ಸೇರುತ್ತದೆ.
    ಆದ್ದರಿಂದ ರುದ್ರಾಕ್ಷಿಯ ನೀಲಿಗೆ ಆಕಾಶದ ನೀಲಿಯನ್ನು ಸಮೀಕರಿಸಲಾಗದು ಎಂಬುದು ನನ್ನ ನಿಲುವು.
    ಡಾ.ಶಂಕರ ರಾಮಚಂದ್ರ ಕಂದಗಲ್ಲ
    ಬಾಗಲಕೋಟೆ

Leave a Reply