You are currently viewing ಪುಟ್ಟ ಮೊಗ್ಗಿನಲಿ, ಪರಿಮಳವನ್ನಿಟ್ಟ ಹೆಮ್ಮರ ಲವಂಗ : Clove Syzygium aromaticum

ಪುಟ್ಟ ಮೊಗ್ಗಿನಲಿ, ಪರಿಮಳವನ್ನಿಟ್ಟ ಹೆಮ್ಮರ ಲವಂಗ : Clove Syzygium aromaticum

ನಾವು ತಿನ್ನುವ ಲವಂಗವು ಕೇವಲ 1 ರಿಂದ 2 ಸೆಂ.ಮೀ ಉದ್ದದ ಪುಟ್ಟ ಮೊಗ್ಗು! ಅದರಲ್ಲೂ ಮುಕ್ಕಾಲು ಭಾಗ ತೊಟ್ಟು ಮತ್ತು ಪುಷ್ಪಪಾತ್ರೆ! ಐವತ್ತು-ಅರವತ್ತು ಅಡಿಗಳಷ್ಟು ಎತ್ತರದ ಹೆಮ್ಮರದ ಹೂಗೊಂಚಲಿನ ಪುಟ್ಟ ಹೂವಿನ ದಳಗಳಿನ್ನೂ ಅರಳಿರದಾಗಲೇ ಅದನ್ನು ಕೊಯಿಲು ಮಾಡಿ ಒಣಗಿಸಿ ಬಳಸುವ ವಿಶಿಷ್ಟ ಸಾಂಬಾರು ಪದಾರ್ಥ “ಲವಂಗ”. ಇದು ನೇರಳೆ ಮರವನ್ನು ಹೋಲುವ ಹಾಗೂ ಅದೇ ಸಂಕುಲದ ಮರ. ಎರಡೂ ಸೈಜಿಜಿಯಂ (Syzygium) ಸಂಕುಲದವೇ! ನೇರಳೆಯದು ಕ್ಯುಮಿನಿ (Cumini) ಪ್ರಭೇದವಾದರೆ, ಲವಂಗದ್ದು ಅರೊಮ್ಯಾಟಿಕಾ (aromaticum) ಪ್ರಭೇದ.

       ಲವಂಗವನ್ನು ಸಸ್ಯವೈಜ್ಞಾನಿಕವಾಗಿ ಸೈಜಿಜಿಯಂ ಅರೊಮ್ಯಾಟಿಕಾ  (Syzygium aromaticum) ಎಂದು ಹೆಸರಿಸಲಾಗಿದೆ. ಇದು ಪೇರಳೆ, ನೀಲಗಿರಿ, ನೇರಳೆ, ಪನ್ನೇರಳೆ ಮುಂತಾದವುಗಳೆಲ್ಲವೂ ಸೇರಿರುವ ಮಿರ್ಟೇಸಿಯೇ (Myristicaceae) ಕುಟುಂಬಕ್ಕೇ ಸೇರಿದೆ. ಬಹುಪಾಲು ಮರವು ನೇರಳೆಯ ಮರವನ್ನೇ ಹೋಲುತ್ತಿದ್ದು ಸುಮಾರು 40ರಿಂದ 60 ಅಡಿಗಳಷ್ಟು ಎತ್ತರಕ್ಕೆ ಬೆಳೆಯುತ್ತದೆ. ಕೆಲವು ಮರಗಳು ನೂರಾರು ಅಡಿಗಳಷ್ಟು ಬೆಳೆದಿರುವ ಉದಾಹರಣೆಗಳಿವೆ. ಲವಂಗದ ಮರದ ತವರೂರಾದ “ಇಂಡೊನೇಷಿಯಾ”ದಲ್ಲಿ ಇದ್ದ ಒಂದು ಅತ್ಯಂತ ಹಳೆಯ ಮರವು 130 ಅಡಿಗಳಷ್ಟು ಎತ್ತರ. ಅದರ ಕೆಲವು ವಿವರಗಳನ್ನು ಮುಂದೆ ನೋಡೋಣ. ಲವಂಗದ ಮರವೂ ನೇರಳೆಯಂತೆಯೇ ನಿತ್ಯ ಹಸಿರಾದ ಮರ. ದಟ್ಟವಾದ ಎಲೆಗಳ ಎತ್ತರಕ್ಕೆ ಹರಡಿಕೊಂಡು, ಆಕರ್ಷಕವಾದ ನೋಟದ ಮರ.  

                ಲವಂಗದ ಸಂಕುಲವಾದ ಸೈಜಿಜಿಯಂ (Syzygium) ಹೆಸರಿನ ವಿವರದಲ್ಲಿ ಕೆಲವೊಂದು ಆಸಕ್ತಿಯ ಸಂಗತಿಗಳಿವೆ. ಸೈಜಿಜಿಯಂ (Syzygium ) ಪದದ ಹುಟ್ಟಿನಲ್ಲಿ ಅದರ ಹತ್ತಿರದ ಪದ ಸೈಜಿಜಿ (Syzygy) ಕೂಡ ಜೊತೆಯಾಗಿದೆ. ಇವೆರಡೂ ಪದಗಳು ಗ್ರೀಕ್ ಪದವಾದ “Syn” ಅಂದರೆ ಅರ್ಥ “ಜೊತೆಯಾದ” “ಒಗ್ಗೂಡಿದ” ಮತ್ತು Zygon  ಎಂದರೆ “ನೊಗ” ಎಂಬೆರಡರಿಂದ ಬಂದಿದೆ. ಆರಂಭದ ವಿವರಣೆಯಲ್ಲಿ ಹೆಸರಿಸುವಾಗ “ಜೊತೆಗೂಡಿದ ಎಲೆಗಳ” ಕಾರಣವನ್ನು ಸಸ್ಯ ವಿಜ್ಞಾನಿ ರಾಬರ್ಟ್‍ ಬ್ರೌನ್ ಕೊಟ್ಟಿದ್ದರೂ ಹಾಗೆ ಜೊತೆಯಾಗಿ ಎಲೆಗಳಿರುವ ಇತರೇ ಸಾಕಷ್ಟು ಸಸ್ಯಗಳೂ ಇದ್ದವು. ಆತ ಬಳಸಿದ್ದ ಪದದ ಸ್ಪೆಲಿಂಗ್ ಕೂಡ ಭಿನ್ನವಾಗೇ ಇತ್ತು. ಆದರೆ ಮರದ ವಿವರ ಮಾತ್ರ ಮೇಲೆ ಹೇಳಿದಂತೆ ವಿಶೇಷವಾಗಿತ್ತು. ಅದನ್ನೆಲ್ಲಾ ಸರಿಪಡಿಸಿ ಮತ್ತೆ ವಿವರವಾದ ಈಗ ಬಳಕೆಯಲ್ಲಿರುವ ಸ್ಪೆಲಿಂಗ್ ಇರುವಂತೆ ಅದರ ಅರ್ಥವನ್ನೂ ವಿವರಿಸಿದ್ದು, ಜೋಸೆಫ್ ಗಾರ್ಟನರ್ ಎಂಬಾತ. ಇದನ್ನೆಲ್ಲಾ ವಿವರಣೆಗಳಿಂದ ಹುಡುಕಾಡಿದ ವ್ಯಾಖ್ಯಾನಕಾರರು Syzygy ಪದದ ಮೂರು ಶಾಖೆಗಳ ಬಳಕೆಯನ್ನು ವಿವರಿಸಿ ಮತ್ತಷ್ಟು ಒರೆಹಚ್ಚಿದ್ದಾರೆ. Syzygy ಪದದಲ್ಲಿ ಮೂರು ಸ್ವರಗಳಿವೆ, ಎಲ್ಲವೂ “Y“ಗಳು. ಇದೇ ಪದವು ಮೂರು ಶಾಖೆಗಳಲ್ಲಿ ಅಂದರೆ ಕಾವ್ಯ, ಜೀವಿವಿಜ್ಞಾನ  ಹಾಗೂ ಖಗೋಳವಿಜ್ಞಾನ ವಿಭಿನ್ನ ಅರ್ಥವನ್ನು ಕೊಡುತ್ತದೆ. ಕಾವ್ಯದಲ್ಲಿ ವ್ಯಂಜನದ ಪುರುಚ್ಛರದಲ್ಲಿ “ಜೊಡಣೆ”ಯ ಅರ್ಥ ಕೊಟ್ಟರೆ, ಜೀವಿವಿಜ್ಞಾನದಲ್ಲಿ ಕ್ರೊಮೊಸೋಮುಗಳು “ಜೊತೆ”ಯಾಗುವುದನ್ನು ವಿವರಿಸುತ್ತದೆ. ಇನ್ನು ಖಗೋಳವಿಜ್ಞಾನದಲ್ಲಿ ಭೂಮಿ, ಸೂರ್ಯ ಮತ್ತು ಚಂದ್ರ ಈ ಮೂರೂ ಗ್ರಹಣಕಾಲದಲ್ಲಿ ಒಂದೇ ಸರಳರೇಖೆಯಲ್ಲಿ “ಜೊತೆ” ಗೂಡುವುದನ್ನು ಸೂಚಿಸುತ್ತದೆ. ಹೀಗೆ ಸೈಜಿಜಿಯಂ ಪದದ ವ್ಯಾಖ್ಯಾನವು “ಅನಾಲಜಿ”ಯಿಂದ “ಬಯಾಲಜಿ”ಗೆ ಬರುವಲ್ಲಿ ಆರಂಭದ ತಪ್ಪು ಮಾರ್ಗವು ಮುಂದೆ ಸರಿಯಾದ ವಿಮರ್ಶೆಯಲ್ಲಿ ಕೊನೆಗೊಂಡಿದೆ. ಬ್ರೌನ್ ರ ಆರಂಭದ ತಪ್ಪನ್ನು ಗಾರ್ಟನರ್ ತಿದ್ದಿ ಸರಿಪಡಿಸಿದ ಸೂಕ್ಷ್ಮವನ್ನು ಇತ್ತೀಚೆಗಿನ ವ್ಯಾಖ್ಯಾನಕಾರರರು ವಿಸ್ತಾರವಾಗಿ ಹೆಣೆದಿದ್ದಾರೆ.  

ಲವಂಗದ ಪ್ರಭೇದದ ಹೆಸರಾದ ಅರೊಮ್ಯಾಟಿಕಾ (aromaticum) ಎಂದರೆ ಪರಿಮಳವುಳ್ಳ ಎಂಬರ್ಥದಲ್ಲಿ ಕರೆಯಲಾಗಿದೆ. ಈ ಲವಂಗ (Clove) ಬಹು ಹಿಂದಿನಿಂದಲೂ ಸಂಬಾರು ಪದಾರ್ಥವಾಗಿ ಬಳಕೆಯಾಗುತ್ತಿದೆ. ಮೂಲತಃ ಇದು ಇಂಡೊನೇಷಿಯಾದ ಸ್ಪೈಸ್‌ ಐಲೆಂಡ್‌ ಎಂದೇ ಹೆಸರಾದ ಮೊಲಕಸ್‌ (Moluccas) ದ್ವೀಪವನ್ನು ತವರನ್ನಾಗಿ ಹೊಂದಿದೆ. ಇಂದಿಗೂ ಇಂಡೊನೇಷಿಯಾವೇ ಉತ್ಪಾದನೆಯಲ್ಲಿ ಜಗತ್ತಿನಲ್ಲಿ ಮೊದಲನೆಯ ದೇಶ. ನಂತರದ ಸ್ಥಾನವನ್ನು ಕ್ರಮವಾಗಿ ಮಡಗಾಸ್ಕರ್‌, ತಾಂಜೇನಿಯಾ ಮತ್ತು ಶ್ರೀಲಂಕಾ ಪಡೆದಿವೆ. ಭಾರತದಲ್ಲಿಯೂ ಉತ್ಪಾದನೆಯನ್ನು ಕೇರಳ, ತಮಿಳುನಾಡು ಮುಂತಾದವು ಮಾಡುತ್ತದೆ.

ಅದರ ತೀವ್ರವಾದ ಪರಿಮಳ, ರುಚಿಯಲ್ಲಿ ಘಾಟು ಅದನ್ನು ಅನೇಕ ಬಗೆಯ ಆಹಾರ ಮತ್ತು ಆರೋಗ್ಯದ ಚಿಕಿತ್ಸೆಗಳಲ್ಲಿ ಬಳಸಲು ವಿಕಾಸ ಮಾಡಿಕೊಟ್ಟಿದೆ. ಕ್ರಿ.ಶ. ಒಂದನೆಯ ಶತಮಾನದ ಚರಕ ಸಂಹಿತೆಯು ಬಾಯಿಯ ವಾಸನೆಯನ್ನು ಹೋಗಲಾಡಿಸಲು ಲವಂಗದ ಬಳಕೆಯನ್ನು ಪ್ರೋತ್ಸಾಹಿಸಿದೆ. ಅದಕ್ಕೂ ಹಿಂದೆಯೇ ಕ್ರಿ.ಪೂ 200ರಲ್ಲಿ ಚೀನಾದ ಹಾನ್‌ ರಾಜಪತ್ಯದಲ್ಲಿ ಆಸ್ಥಾನದಲ್ಲಿ ಮಾತನಾಡುವಾಗ ಬಾಯಿಯ ಪರಿಮಳವನ್ನು ತರಲು ಲವಂಗವನ್ನು ಬಳಸುವುದು ಕಡ್ಡಾಯವಾಗಿತ್ತು. ಮಧ್ಯಕಾಲೀನ ಸಂದರ್ಭದಲ್ಲಿ ಯೂರೋಪು ವಿವಿಧ ಆಹಾರದ ಸಂರಕ್ಷಣೆಯಲ್ಲಿ ಲವಂಗದ ಬಳಕೆಯನ್ನು ಕಂಡುಕೊಂಡಿತ್ತು. 17ನೆಯ ಶತಮಾನದಲ್ಲಿ ಡಚ್ಚರು ಇಂಡೊನೇಷಿಯಾ ದ್ವೀಪಗಳ ಹಿಡಿತದಲ್ಲಿಟ್ಟು ಲವಂಗದ ವಹಿವಾಟಿನ ಏಕಸ್ವಾಮ್ಯ ಹೊಂದಲು ಪ್ರಯತ್ನಿಸಿದ್ದರು. ಮುಂದೆ ಫ್ರೆಂಚರು ಪೂರ್ವದ ದ್ವೀಪಗಳಿಂದ ಲವಂಗವನ್ನು ಕದ್ದು ಕೊಳ್ಳೆ ಹೊಡೆದು ಡಚ್ಚರ ಏಕಾಧಿಪತ್ಯವನ್ನು ಹೊಡೆದೋಡಿಸಲು ಕಾರಣರಾದರು. ಚೀನಿಯರ, ರೋಮನ್ನರ, ಗ್ರೀಕರ ಇತಿಹಾಸದಲ್ಲೂ ಲವಂಗದ ಬಳಕೆಯ ಬಗ್ಗೆ ಸಾಕಷ್ಟು ವಿಷಯಗಳು ದಾಖಲಾಗಿವೆ.     

ಲವಂಗದ ಹೆಮ್ಮರ

ಲವಂಗದ ಮರಗಳು ಒಂದು ಬಗೆಯಲ್ಲಿ ಹೆಮ್ಮರಗಳು. ಸಸ್ಯವನ್ನು ನಾಟಿ ಮಾಡಿದ ಐದಾರು ವರ್ಷಗಳಲ್ಲಿ  ಹೂವುಗಳನ್ನು ಬಿಟ್ಟು ಕೊಯಿಲು ಮಾಡಲು ಅಣಿಯಾಗುತ್ತದೆ. ಅದರಲ್ಲಿನ ಪುಟ್ಟ -ಪುಟ್ಟ ಮೊಗ್ಗುಗಳು ಪರಿಮಳಭರಿತವಾಗಿದ್ದು, ಹೂವು ಅರಳುವ ಮುನ್ನವೇ ಪುಷ್ಪಪಾತ್ರೆಯಲ್ಲಿ ಇರುವ ಪುಟ್ಟ ಮೊಗ್ಗನ್ನು ತೊಟ್ಟಿನ ಸಮೇತ ಜಾಗರೂಕವಾಗಿ ಹೂಗೊಂಚಲಿಂದ ಬಿಡಿಸಿ ಸ್ವಚ್ಚಗೊಳಿಸಿ ಸಂಸ್ಕರಿಸಲಾಗುತ್ತದೆ. ಮಿರ್ಟೇಸಿಯೇ ಕುಟುಂಬದ ಹೂಗಳಲ್ಲಿ ಉದುರುವ ಪರಾಗಗಳು ಹೆಚ್ಚು ಅವನ್ನೆಲ್ಲಾ ಸ್ವಚ್ಛಗೊಳಿಸಿ, ಮೊಗ್ಗುಗಳನ್ನು 80 ಡಿಗ್ರಿ ಸೆಲ್ಸಿಯಸ್ ವರೆಗೂ ಕಾಯಿಸಿದ ನೀರಿನಲ್ಲಿ ಒಂದು ನಿಮಿಷ ಅದ್ದಬೇಕು. ನಂತರ ಅವುಗಳನ್ನು ಚೆನ್ನಾಗಿ ಒಣಗಿಸಬೇಕು. ಇದರಿಂದ ಒಣಗಿದಾಗಲೂ ಕೆಂಪು ಮಿಶ್ರಿತ ಕಂದು ಬಣ್ಣವನ್ನು ಉಳಿಸಿಕೊಂಡು ಒಳ್ಳೆಯ ಬೆಲೆ ಸಿಗುತ್ತದೆ. ಇಲ್ಲವಾದಲ್ಲಿ ಕಪ್ಪು ಬಣ್ಣಕ್ಕೆ ತಿರುಗಿ ಮಾರುಕಟ್ಟೆಯಲ್ಲಿ ಅಷ್ಟೊಂದು ಬೇಡಿಕೆಯು ಇರುವುದಿಲ್ಲ. ಪ್ರತೀ ಮರದಿಂದ ಸರಿ ಸುಮಾರು 30 ರಿಂದ 40 ಕಿ.ಗ್ರಾಂ. ನಷ್ಟು ಒಣಗಿನ ಮೊಗ್ಗುಗಳನ್ನು ಪಡೆಯಬಹುದು.

ನಾವು ಬಳಸುವ ಲವಂಗದ ಮೊಗ್ಗುಗಳು ಸುಮಾರು 14-20 % ಎಣ್ಣೆಯ ಅಂಶವನ್ನು ಹೊಂದಿವೆ. ಈ ಎಣ್ಣೆಯ ಅಂಶವು ಅನೇಕ ಉಪಕಾರಿ ಗುಣಗಳನ್ನು ಹೊಂದಿದೆ. ಲವಂಗದ ಘಾಟುಭರಿತ ಪರಿಮಳಕ್ಕೆ ಮೂಲ ಕಾರಣ ಅದರಲ್ಲಿರುವ ಯುಜಿನಾಲ್‌ (Eugenol) ಎಂಬ ಪರಿಮಳದ ಎಣ್ಣೆಯು ಕಾರಣ. ಹೆಚ್ಚು ಘಾಟು ಇರುವ ಲವಂಗದಲ್ಲಿ ಇದರ ಪ್ರಮಾಣವೂ ಹೆಚ್ಚು. ಮೊಗ್ಗು ಅರಳವು ತುಸು ಮುನ್ನವೇ ಕೊಯಿಲು ಮಾಡಿದ್ದು, ಸರಿಯಾದ ಹದದಲ್ಲಿ ಸಂಸ್ಕರಿಸಿದ ಲವಂಗದಲ್ಲಿ ಮಾತ್ರ ಇದರ ಪ್ರಮಾಣವು ಹೆಚ್ಚು. ಅಂತಹವೇ ಹೆಚ್ಚು ಘಾಟಿನ ಪರಿಮಳವನ್ನು ಹೊಂದಿರುರುವುದು. ಹಲ್ಲು ನೋವಿನಲ್ಲಿ ಲವಂಗ ಇಟ್ಟುಕೊಂಡು ನೋವನ್ನು ಮರೆಯುವ ಗುಣವೂ ಇದರಿಂದಲೇ! ಹಾಗಾಗಿಯೇ ತೀರಾ ಕಿರಿದಾದ, ಇನ್ನೂ ಬಲಿತರದಂತಿರದ ಲವಂಗವು ತೀವ್ರ ಉಪಶಮನಕಾರಿ ಆಗಿರದೆ  ಇರುವದನ್ನು ನಾವು ಗಮನಿಸಬಹುದು. ಅವುಗಳಿಗೆ ಘಾಟೂ ಕಡಿಮೆ, ಮಾರುಕಟ್ಟೆಯಲ್ಲಿ ರೇಟೂ ಕಡಿಮೆ.  

ಲವಂಗದ ಎಣ್ಣೆ, ಲವಂಗದ ಬಳಕೆಯ ವಿಷಯದಲ್ಲಿ ಅದೆಲ್ಲವೂ ನಮ್ಮದೆಂಬ ಐರೋಪ್ಯರು ಔಷಧವಾಗಿ ನಮಗೇ ಮಾರುತ್ತಿದ್ದಾರೆ ಎಂಬ ಮಾತುಗಳನ್ನು ದಂತವೈದ್ಯರೂ ಹೇಳುವುದನ್ನು ಕೇಳಿರಬಹುದು. ಹಲ್ಲಿನ ನೋವು, ಬಾಯಿಯ ವಾಸನೆ ಇವುಗಳ ತಿಳಿವಳಿಕೆಯಲ್ಲಿ ಇಡೀ ಭಾರತೀಯ ಉಪ ಖಂಡ (Indian Sub-Continent) ದ ಸಾಂಸ್ಕೃತಿಕ ಹಿನ್ನೆಲೆಯ ಜೊತೆಗೇ ಚೀನಿಯರ ಐತಿಹಾಸಿಕ ಸಂಬಂಧಗಳೂ ಇವೆ. ರೋಮನ್ನರ ಪ್ರಯತ್ನಗಳೂ ಇವೆ. ಇಂಡೊನೇಷಿಯಾದ ಸುತ್ತ ಮುತ್ತಲಿನ ದ್ವೀಪಗಳ ಜನಾಂಗದವರ ಆತ್ಯಂತಿಕ ಆಸಕ್ತಿಗಳೂ ಸೇರಿ ಏನೆಲ್ಲಾ ಪ್ರಯೋಗಗಳು ಸಾಂಸ್ಕೃತಿಕವಾಗಿ ನಡೆದಿವೆ. ಈಗಲೂ ಇಂಡೊನೇಷಿಯಾದಲ್ಲಿ ಲವಂಗದ ಸಿಗರೇಟು ಭಾರೀ ಜನಪ್ರಿಯ.

ಫಿಲ್ಟರ್‌ ರಹಿತವಾದ ಬಿಳಿ ಹಾಗೂ ಕಪ್ಪು ಕ್ರೆಟೆಕ್‌ ಸಿಗರೇಟ್‌ ಗಳು

ಕ್ರೆಟೆಕ್‌ (Kretek) ಅಥವಾ ಕ್ರೆಟೆಕ್‌ ಸಿಗರೇಟ್‌ಗಳು ಎಂದೇ ಕರೆಯುವ ಇವುಗಳಿಗೆ ಆ ಹೆಸರು ಬಂದದ್ದು “ಸುಡುವಾಗಲೇ ಸದ್ದು ಮಾಡುವ” ಎಂಬ ಅರ್ಥದಿಂದ. ಕ್ರೆಟೆಕ್‌ ಎಂದರೆ ಅದೇ ಅರ್ಥ. ಇಂದಿಗೂ ಅಲ್ಲಿನ ಸಿಗರೇಟು ಪ್ರಿಯರಲ್ಲಿ 80-90% ಜನರಿಗೆ ಕ್ರೆಟೆಕ್‌ ಸಿಗರೇಟುಗಳೆಂದರೆ ಪ್ರಾಣ. ಇದರ ಹುಟ್ಟಿಗೆ ಒಂದು ವಿಶೇಷ ಕಥೆಯು ಜನಪ್ರಿಯ. ಈ ಸಿಗರೇಟಿನ ಹುಟ್ಟಿಗೆ ಕಾರಣನಾದ ವ್ಯಕ್ತಿ ಹಾಜಿ ಜಮಾರಿ (Haji Djamhari). ಅದೂ ಸರಿ ಸುಮಾರು 1880ರ ಆಸುಪಾಸಿನಲ್ಲಿ! ಆತನಿಗೆ ಭಾರಿ ಎದೆಯ ನೋವಿಗೆ ಉಪಶಮನಕ್ಕೆಂದು ಲವಂಗದ ಎಣ್ಣೆಯನ್ನು ಉಜ್ಜಿಕೊಂಡದ್ದಲ್ಲದೇ ಅದರ ಘಾಟನ್ನೂ ಎದೆಯೊಳಗೆ ಸೇರಿಸಿದಾಗ ಪರಿಹಾರ ಸಿಕ್ಕತಂತೆ. ಅದೇ ಇರಲಿ ಈಗಂತೂ ಈ ಲವಂಗದ ಘಾಟಿನ ಸಿಗರೇಟು ಇಂಡೊನೇಷಿಯಾದಲ್ಲಿ ತುಂಬಾ ಜನಪ್ರಿಯ.  

ಲವಂಗದ ಎಣ್ಣೆಯ ಪರಿಮಳ ಹಾಗೂ ಅದರ ಔಷಧಿಯ ಗುಣಗಳನ್ನು ಪ್ರಮುಖವಾಗಿ ನೋವು ನಿವಾರಕವಾಗಿ, ಸುಮಾಸನೆಗಾಗಿ, ಸಿಹಿಗಳಲ್ಲಿ ಸಿಹಿಯ ಉನ್ಮಾದ ಹೆಚ್ಚಲು ಬಳಸಲಾಗುತ್ತದೆ. ಔಷಧೀಯ ಗುಣಗಳಲ್ಲಿ ಇದರ ನೋವು ನಿವಾರಕ ಅಂಶವೇ ಪ್ರಧಾನವಾದುದು. ಹಲವಾರು ಇತರೇ ಗುಣಗಳ ಬಗ್ಗೆ ಹಲವು ದಾಖಲೆಗಳ ಲಭ್ಯವಿದ್ದರೂ ಇದರ ದಂತ ವೈದ್ಯಕೀಯ ಬಳಕೆಯ ವಿನಾಃ ಮತ್ತಿತರೇ ಬಳಕೆಗಳ ಬಗೆಗೆ ವೈಜ್ಞಾನಿಕ ವಿವರಗಳು ಕಡಿಮೆ.

ಕೊನೆಯಲ್ಲಿ  ಅತ್ಯಂತ ಹಳೆಯ ಹೆಮ್ಮರದ ಬಗೆಗೆ ಹೇಳಿ ಲವಂಗದ ಪರಿಮಳದ ಕಥನವನ್ನು ಮುಗಿಸುತ್ತೇನೆ. ಇಂಡೊನೇಷಿಯಾದ ಸುತ್ತ ಮುತ್ತಲಿನ ಹಲವಾರು ಜ್ವಾಲಾಮುಖಿ ದ್ವೀಪಗಳಿವೆ. ಅವುಗಳಲ್ಲಿ ಹಲವಾರು ಇಂದಿಗೂ ಜೀವಂತ ಜ್ವಾಲಾಮುಖಿ ಪರ್ವತಗಳನ್ನು ಹೊಂದಿವೆ. ಅಂತಹಾ ದ್ವೀಪಗಳ ನೆಲವೇ ಲವಂಗದ ತವರು ಎಂದೂ ನಂಬಲಾಗಿದೆ. ಆ ದ್ವೀಪಗಳ ಸಮೂಹವನ್ನು “ಬೆಂಕಿಯ ಬಲೆ (The Ring of Fire)” ಎಂದು ಕರೆಯಲಾಗುತ್ತದೆ. ಅಲ್ಲಿನ ಒಂದು ದ್ವೀಪದ ಹೆಸರು ಟೆರ್ನಟೆ (Ternate) ಅಲ್ಲಿರುವ ಒಂದು ಮರ ಅಫೊ (Afo) ಅದನ್ನು ಹಾಗೆ ಏಕೆ ಕರೆದಿದ್ದಾರೊ ವಿವರಗಳು ದೊರಕುವುದಿಲ್ಲ. ಆದರೆ ಆ ಮರ ಏನಿಲ್ಲವೆಂದರೂ ಸುಮಾರು 350-400 ವರ್ಷಗಳೆಂದು ಒಂದು ಅಂದಾಜು. ಈ ದ್ವೀಪದ ಸುತ್ತ-ಮುತ್ತಲಿನ ನೆಲದ ಸಮೂಹವೇ ಘಾಟಿನ ಪರಿಮಳದ ಮೊಗ್ಗುಗಳ ಸಾಮ್ರಾಜ್ಯವನ್ನು ತನ್ನೊಳಗಿಟ್ಟುಕೊಂಡಿರುವುದು.‌ ಹೆಚ್ಚೂ ಕಡಿಮೆ ಜಗತ್ತು ಈ ಪರಿಮಳವನ್ನು ಪಡೆದಿರುವುದೂ ಈ ದ್ವೀಪದ ನೆಲದಿಂದಲೇ.  

 ಹೆಚ್ಚಿನ ಓದಿಗೆ

Diego Francisco Cortés-Rojas, Claudia Regina Fernandes de Souza, Wanderley Pereira Oliveira.  Clove (Syzygium aromaticum): A precious spice. Asian Pac. J. Trop. Biomed. 2014; 4(2): 90-96

https://www.worldhistory.org/article/1849/the-early-history-of-clove-nutmeg–mace/

Leave a Reply