ಕ್ಯಾನ್ಸರ್… ಪ್ರತ್ಯಕ್ಷವಾಗಿಯೋ ಅಥವಾ ಪರೋಕ್ಷವಾಗಿಯೋ ನಮ್ಮ ಬದುಕಿನ ಅನುಭವದೊಂದಿಗೆ ನುಸುಳಿ ನಮ್ಮ ನೆನಪಿನ ಭಾಗವಾಗಿಯೇ ಇರುತ್ತದೆ. ನಮ್ಮ ಕುಟುಂಬದ ಸದಸ್ಯರೋ, ಬಂಧುಗಳೋ, ಸ್ನೇಹಿತರೋ, ಮೆಚ್ಚಿನ ಕ್ರಿಕೆಟ್-ಸಿನಿಮಾ ತಾರೆಯರೋ , ರಾಜಕೀಯ ನಾಯಕರೋ ಈ ರೋಗಕ್ಕೆ ತುತ್ತಾದಾಗ, ಆ ನೆಪವಾಗಿ ನಮ್ಮ ಭಾವ ಜಗತ್ತನ್ನು ಆವರಿಸಿರುತ್ತದೆ. ಆದರೆ ಅದನ್ನು ಎದುರಿಸಲು ಬೇಕಾದ ತಯಾರಿಗೆ ಈ ಅನುಭವಗಳಷ್ಟೇ ಸಾಕಾಗುವುದಿಲ್ಲ. ಹಾಗಾಗಿ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲು ಪ್ರತಿ ವರ್ಷ ಫೆಬ್ರವರಿ 4 ನೇ ತಾರೀಖನ್ನು ಜಾಗತಿಕ ಕ್ಯಾನ್ಸರ್ ದಿನವೆಂದು ಆಚರಿಸಲಾಗುತ್ತಿದೆ. ಕ್ಯಾನ್ಸರ್ ರೋಗವನ್ನು ತಡೆಗಟ್ಟುವ, ಪ್ರಾಥಮಿಕ ಹಂತದಲ್ಲಿ ಗುರುತಿಸುವ ಹಾಗೂ ಚಿಕಿತ್ಸೆ ಯ ಬಗ್ಗೆ ಅರಿವನ್ನು ಹೆಚ್ಚಿಸಿ, ರೋಗಿಗಳ ಮನೋ ಸ್ಥೈರ್ಯ ಹೆಚ್ಚಿಸುವ ಆಶಯಗಳನ್ನು ಈ ಆಚರಣೆ ಹೊಂದಿದೆ. ಕ್ಯಾನ್ಸರ್ ಕುರಿತ ವೈಜ್ಞಾನಿಕ ತಿಳಿವು ಕೂಡ ಈ ಆಚರಣೆಯ ಭಾಗವಾದರೆ, ಕ್ಯಾನ್ಸರ್ ಕುರಿತ ಸಂಶೋಧನೆಗೆ ಹೆಚ್ಚಿನ ಬಲವನ್ನು ಒದಗಿಸಬಲ್ಲ ಸಮೂಹವನ್ನು ತಲುಪಿ ಇದರ ಪ್ರಯೋಜನ ಇನ್ನಷ್ಟೂ ಹೆಚ್ಚಾದೀತು ಎಂಬ ಆಸಕ್ತಿಯೊಂದಿಗೆ ಸಿಪಿಯುಎಸ್ ಈ ಲೇಖನವನ್ನು ನಿಮ್ಮ ಓದಿನ ಪ್ರೀತಿಗೆ ತೆರೆದಿಡುತ್ತಿದೆ.
ಹಾಗಾದರೆ ಏನಿದು ಪೀಟೋ’ಸ್ ಪ್ಯಾರಡಾಕ್ಸ್? ಅದಕ್ಕೂ, ಕ್ಯಾನ್ಸರ್‌ಗೂ ಹಾಗೂ ವಿಕಾಸವಾದಕ್ಕೂ ಏನು ಸಂಬಂಧ ಎಂದು ಯೋಚಿಸುತ್ತಿದ್ದೀರಾ? ಅದನ್ನು ಅರಿಯಲು ಸ್ವಲ್ಪ ಕ್ಯಾನ್ಸರ್ ಮೂಲವನ್ನು ಹುಡುಕಬೇಕು. ಕ್ಯಾನ್ಸರ್ ಒಂದೇ ಒಂದು ಖಾಯಿಲೆಯಲ್ಲ. ಅದು ಜೀವಿಕೋಶಗಳ ಅನಿಯಂತ್ರಿತ ವಿಭಜನೆ, ಬೆಳವಣಿಗೆ ಮತ್ತು ಸ್ಥಳಾಂತರ ಸೃಷ್ಟಿಸುವ ಹಲವಾರು ಖಾಯಿಲೆಗಳ ಸಮೂಹವನ್ನು ಪ್ರತಿನಿಧಿಸುತ್ತದೆ. ಜೀವಿಕೋಶದೊಳಗಿನ ಡಿ.ಎನ್.ಎ. ಕಣಗಳಲ್ಲಿರುವ ಜೀನ್ (ವಂಶವಾಹಿ) ಗಳ ರೂಪಾಂತರದ (Mutation) ಮೂಲಕವೇ ಕ್ಯಾನ್ಸರ್ ಸಂಭವಿಸುವುದು., ಸಾಮಾನ್ಯ ಆರೋಗ್ಯಯುತ ಜೀವಿಕೋಶ ಕ್ಯಾನ್ಸರ್ ಜೀವಿಕೋಶಗಳಾಗಿ ಮಾರಣಾಂತಿಕ ಹಂತ ತಲುಪಲು ಹಲವು ವಂಶವಾಹಿಗಳ ರೂಪಾಂತರಗಳನ್ನು ಬಯಸುತ್ತದೆ. ಹಾಗಾಗಿ ಕ್ಯಾನ್ಸರ್, ಹಲವು ಹಂತದಲ್ಲಿ ಹಾಗೂ ಹಲವು ವಷ೯ಗಳು ತೆಗೆದುಕೊಂಡು ಅಭಿವ್ಯಕ್ತಿಗೊಳ್ಳುವ ನಿಧಾನ ಪ್ರಕ್ರಿಯೆ.
ಈ ಜೀನುಗಳ ರೂಪಾಂತರ ಧೂಮಪಾನ, ವಿಕಿರಣ, ಕ್ಯಾನ್ಸರ್-ಕಾರಕ ರಸಾಯನಿಕಗಳ ಬಳಕೆ ಮುಂತಾದ ಕಾರಣಗಳಿಂದ ಆಗಿರಬಹುದು ಅಥವಾ ಜೀವಿಕೋಶ ವಿಭಜನೆಯ ಕಾರಣದಿಂದ ತಂತಾನೆ ಆಗಿರಬಹುದು. ಜೊತೆಗೆ ಕೆಲವು ರೂಪಾಂತರಗೊಂಡ ಜೀನುಗಳು ಆನುವಂಶಿಕವಾಗಿ ತಮ್ಮ ಪೂರ್ವಜರಿಂದ ಬಂದಿರಲೂಬಹುದು. ಇಂತಹ ಕ್ಯಾನ್ಸರ್ ಕಾರಕ ಜೀನುಗಳನ್ನು “ಆಂಕೋಜೀನ್(Oncogene)” ಎಂದು ಕರೆಯಲಾಗುತ್ತದೆ. ಆದರೆ ಈ ರೂಪಾಂತರ ಹೊಂದುವ ಮುಂಚಿನ ಜೀನುಗಳನ್ನು ಪ್ರೊಟೊ-ಆಂಕೋಜೀನ್ ಎಂದು ಕರೆಯುತ್ತಾರೆ. ಇದಲ್ಲದೇ ಜೀವಿಕೋಶಗಳ ವಿಭಜನೆಯನ್ನು ನಿಯಂತ್ರಿಸುವ ಟ್ಯೂಮರ್ ಸಪ್ರೆಸರ್ ಜೀನುಗಳೂ ಕೂಡ ಇರುತ್ತವೆ. ಜೊತೆಗೆ ಜೀವಿಕೋಶಗಳು ಎಷ್ಟು ಬಾರಿ ವಿಭಜನೆ ಹೊಂದಬೇಕೆಂದು ನಿಧ೯ರಿಸುವ ಟೆಲೊಮೀರ್, ಡಿ.ಎನ್.ಎ. ಕಾಪಿಯಲ್ಲಿ ಉಂಟಾಗಬಹುದಾದ ತಪ್ಪುಗಳು ಹಾಗೂ ಅದನ್ನು ಸರಿಪಡಿಸುವ ಜೀವಿಕೋಶದ ಆಂತರಿಕ ಪ್ರಕ್ರಿಯೆ, ಜೀವಿಕೋಶ ಬೆಳವಣಿಗೆಯ ಚಕ್ರ ನಿಯಂತ್ರಿಸುವ ಗಡಿಯಾರ, ಜೀವಿಕೋಶಗಳ ಆತ್ಮಹತ್ಯೆ (Apoptosis) ಪ್ರಕ್ರಿಯೆ, ಹೀಗೆ ಕ್ಯಾನ್ಸರ್ ತಡೆಗಟ್ಟಲು ನಿಸಗ೯ ನಿಮಿ೯ಸಿರುವ ಒಂದೊಂದೇ ಅಡೆತಡೆಗಳನ್ನು ಅದೇ ನಿಸಗ೯ದ ವಿಕಾಸವಾದದ ಕೂಸಾದ “ಕ್ಯಾನ್ಸರ್ ಜೀವಿಕೋಶಗಳು” ಮೀರಿ ಬೆಳೆಯುತ್ತವೆ ಹಾಗೂ ಸ್ಥಾನಾಂತರಗೊಳ್ಳುತ್ತವೆ. ಒಟ್ಟಿನಲ್ಲಿ ಕ್ಯಾನ್ಸರ್ ಬೆಳವಣಿಗೆಗೆ ಸಂಬಂಧಿಸಿದಂತೆ, ಆಂಕೋಜೀನ್ ಅನ್ನು ಮೋಟಾರು ಕಾರಿನ ಅಕ್ಸರಲೇಟರ್ ಪೆಡಲ್ ಹಾಗೂ ಟ್ಯೂಮರ್ ಸಪ್ರೆಸರ್ ಜೀನುಗಳನ್ನು ಬ್ರೇಕಿಗೆ ಸಮನಾಗಿ ಊಹಿಸಬಹುದು. ಹೆಚ್ಚೆಚ್ಚು ಜೀವಿಕೋಶದ ವಿಭಜನೆಯನ್ನು ಪ್ರೇರೇಪಿಸುವ ಆಂಕೋಜೀನ್, ಒತ್ತಿ ಹಿಡಿದ ಅಕ್ಸರಲೇಟರ್ ಪೆಡಲ್‌ಗೆ ರೂಪಕವಾದರೆ, ಈ ಬೆಳವಣಿಗೆಯನ್ನು ನಿಯಂತ್ರಿಸಬಲ್ಲ ಸಾಧನವಾಗಿರುವ ಟ್ಯೂಮರ್ ಸಪ್ರೆಸರ್ ಜೀನುಗಳು ಬ್ರೇಕಿನ ಪ್ರತಿನಿಧಿಯಾಗುತ್ತದೆ. ಹೀಗೆ ಬದುಕೆಂಬ ಬಂಡಿಯ ಬ್ರೇಕ್ ವಿಫಲವಾದಾಗಲೇ ಕ್ಯಾನ್ಸರ್ ನ ಅಪಘಾತ.
ಈಗ ಈ ಹಿನ್ನಲೆಯೊಂದಿಗೆ “ಪೀಟೋ’ಸ್ ಪ್ಯಾರಾಡಾಕ್ಸ್ ಅಥವಾ ಪೀಟೋನ ವಿರೋಧಾಭಾಸ” ವನ್ನು ಅರಿಯೋಣ. ಈ ವಿರೋಧಾಭಾಸವನ್ನು ಬ್ರಿಟಿಷ್ ಸಾಂಕ್ರಾಮಿಕರೋಗ ತಜ್ಞ ಸರ್ ರಿಚರ್ಡ್ ಪೀಟೋ ಅವರ ಹೆಸರಿನಲ್ಲಿ ಕರೆಯಲಾಗುತ್ತದೆ. ಸರ್ ಪೀಟೋ ವಿಶ್ವ ವಿಖ್ಯಾತ ಆಕ್ಸಫರ್ಡ್ ವಿಶ್ವವಿದಾನಿಲಯದ ವೈದ್ಯಕೀಯ ಸಂಖ್ಯಾವಿಜ್ಞಾನ ಮತ್ತು ಸಾಂಕ್ರಾಮಿಕರೋಗ ವಿಜ್ಞಾನ ವಿಭಾಗದ ಗೌರವಾನ್ವಿತ ಪ್ರಾಧ್ಯಾಪಕರು. ಲಂಡನ್ನಿನ ರಾಯಲ್ ಸೊಸೈಟಿಯ ಫೆಲೋ ಆಗಿ 1989 ಅಲ್ಲಿ ಆಯ್ಕೆಯಾದವರು. ಕ್ಯಾನ್ಸರ್, ಹೃದ್ರೋಗ ಮುಂತಾದ ಆರೋಗ್ಯ ಸಮಸ್ಯೆಗಳಿಗೂ ಹಾಗೂ ಧೂಮಪಾನಕ್ಕೂ ಇರುವ ಸಂಬಂಧವನ್ನು ವೈಜ್ಞಾನಿಕವಾಗಿ ವಿಶದ ಪಡಿಸಿದ ಮತ್ತೊಬ್ಬ ವಿಜ್ಞಾನಿ ಸರ್ ರಿಚರ್ಡ್ ಡಾಲ್ ಅವರೊಟ್ಟಿಗೆ ಕೆಲಸ ಮಾಡಿದ ವಿಜ್ಞಾನಿ.
ಸರ್ ರಿಚರ್ಡ್ ಪೀಟೋ ಇಲಿಗಳಲ್ಲಿ ಕ್ಯಾನ್ಸರ್ ಗಡ್ಡೆಗಳು ರೂಪುಗೊಳ್ಳುವ ಬಗ್ಗೆ ಸಂಶೋಧನೆ ಮಾಡುತ್ತಾ, ಇಲಿಗಳ ಜೀವಿತ ಕಾಲ ಹಾಗೂ ಕ್ಯಾನ್ಸರ್ ಜೊತೆಗಿನ ಸಂಬಂಧಗಳನ್ನು ವಿಶ್ಲೇಷಿಸಿದವರು. ಇಲಿಗಳಲ್ಲಿ ಕ್ಯಾನ್ಸರ್ ಬರುವ ಸಂಭವನೀಯತೆ, ಅವುಗಳ ವಯಸ್ಸಿಗಿಂತಲೂ ಮುಖ್ಯವಾಗಿ, ಅವು ಎಷ್ಟು ಸಮಯ ಕ್ಯಾನ್ಸರ್-ಕಾರಕ ರಸಾಯನಿಕಗಳಿಗೆ ತಮ್ಮನ್ನು ತೆರೆದುಕೊಳ್ಳುತ್ತವೆ ಅಥವಾ ಒಡ್ಡಿಕೊಳ್ಳುತ್ತವೆ ಎಂಬ ಅಂಶದ ಆಧಾರದ ಮೇಲೆ ನಿರ್ಧಾರವಾಗಿರುತ್ತದೆ ಎಂದು ತಿಳಿಸುವ ತಮ್ಮ ಸಂಶೋಧನಾ ಪ್ರಬಂಧವನ್ನು 1975 ರಲ್ಲಿ ಪ್ರಕಟಿಸಿದರು. ಮುಂದೆ ಇದೇ ವಿಚಾರವನ್ನು ಮತ್ತಷ್ಟು ವಿಸ್ತರಿಸಿ, ಇಲಿಗಳ ವಯಸ್ಸಿನ ಜೊತೆ, ಅವುಗಳ ದೇಹಗಾತ್ರ ಸೂಚಿಯನ್ನು ಸೇರಿಸಿ ತಮ್ಮ ಸಂದೇಹವನ್ನು ಮುಂದಿಟ್ಟರು. ಅದೇನೆಂದರೆ, ಇಲಿಗಳಿಗಿಂತ ಒಂದು ಸಾವಿರ ಪಟ್ಟು ಹೆಚ್ಚು ಗಾತ್ರವನ್ನು ಹಾಗೂ ಮೂವತ್ತು ಪಟ್ಟು ಹೆಚ್ಚು ಆಯುಷ್ಯವನ್ನು ಮಾನವರು ಹೊಂದಿದ್ದರೂ, ಇಲಿಗಳು ಮತ್ತು ಮಾನವರು ಈ ಎರಡೂ ಜೀವಿಗಳಲ್ಲೂ ಕ್ಯಾನ್ಸರ್ ಬರುವ ಸಂಭವನೀಯತೆ ಒಂದೇ ಪ್ರಮಾಣದಲ್ಲಿ ಇದೆ. ಇದು ಹೇಗೆ ಸಾಧ್ಯ?
ಮುಂದುವರೆದು, ಹೆಚ್ಚು ಗಾತ್ರವಿರುವ ಹಾಗೂ ಹೆಚ್ಚು ಆಯಸ್ಸನ್ನು ಹೊಂದಿರುವ ಆನೆ, ತಿಮಿಂಗಲ, ಆಮೆ ಮುಂತಾದ ಜೀವಿಗಳಲ್ಲಿ, ಕ್ಯಾನ್ಸರ್ ಏನು ಮಾನವರಿಗಾದಂತೆ ಮಾರಣಾಂತಿಕ ಖಾಯಿಲೆಯಾಗಿಲ್ಲ. ಹಾಗಾದರೆ ಮೇಲೆ ವಿವರಿಸಿದ ಕ್ಯಾನ್ಸರ್ ನ ಮೂಲಭೂತ ಗುಣದಂತೆ, ಹೆಚ್ಚು ಜೀವಿಕೋಶಗಳು ಇರುವ ದೊಡ್ಡ ಪ್ರಾಣಿಗಳಲ್ಲಿ ಹಾಗೂ ಹೆಚ್ಚು ಕಾಲ ಬದುಕುವ ಪ್ರಾಣಿಗಳಲ್ಲಿ, ಜೀವಿಕೋಶಗಳ ವಿಭಜನೆ ಹೆಚ್ಚು-ಹೆಚ್ಚು ಇರುವ ಕಾರಣ, ಆ ಜೀವಿಗಳು ಕ್ಯಾನ್ಸರ್ ಗೆ ಒಳಗಾಗುವ ಸಂಭವನೀಯತೆ ಜಾಸ್ತಿಯಿರಬೇಕು. ಆದರೆ ಹಾಗಾಗದೆ ಅಂತಹ ಪ್ರಾಣಿಗಳಲ್ಲಿ ಕ್ಯಾನ್ಸರ್ ಸಂಭವನೀಯತೆ ಮಾನವರಿಗಿಂತ ಕಡಿಮೆ ಪ್ರಮಾಣದಲ್ಲಿ ಇದೆ. ಹೀಗೆ ಜೀವಿಗಳ ವಯಸ್ಸು ಹಾಗೂ ಗಾತ್ರಕ್ಕೆ ಅನುಗುಣವಾಗಿ, ಕ್ಯಾನ್ಸರ್ ಗೆ ಒಳಗಾಗುವ ಸಂಭವನೀಯತೆ ಇಲ್ಲದಿರುವ ಈ ವಿದ್ಯಮಾನವನ್ನೇ, ವಿಜ್ಞಾನಿ ಸರ್. ರಿಚರ್ಡ್ ಪೀಟೋ ಅವರ ಹೆಸರಿನಲ್ಲಿ “ಪೀಟೋ’ಸ್ ಪ್ಯಾರಡಾಕ್ಸ್” ಎಂದು ಕರೆಯಲಾಗುತ್ತದೆ. ಈ ಕೆಳಗಿನ ಚಿತ್ರದಲ್ಲಿ ತೋರಿರುವಂತೆ ಜೀವಿಗಳ ಗಾತ್ರ ಹಾಗೂ ಆಯುಷ್ಯದ ಆಧಾರದ ಮೇಲೆ, ಕ್ಯಾನ್ಸರ್ ಸಂಭವನೀಯತೆ ಲೀನಿಯರ್ ಸಂಬಂಧ ಹೊಂದಿರಬೇಕಿತ್ತು. ಆದರೆ ಹಾಗಾಗದೇ ಹೆಚ್ಚು ಕಡಿಮೆ ಕ್ಯಾನ್ಸರ್ ಸಂಭವನೀಯತೆ ಸರಳ ರೇಖಾತ್ಮಕ ಸಂಬಂಧ ಹೊಂದಿರುವಂತೆ ಪುರಾವೆಗಳು ದೊರಕಿವೆ.
ಈ ವಿರೋಧಾಭಾಸವನ್ನೇನೋ ವಿವರಿಸಿದ್ದಾಯಿತು. ಆದರೆ ಇದು ಏಕೆ ಮುಖ್ಯ? ಇದಕ್ಕೆ ಪರಿಹಾರ ಸೂಚಿಸುವುದು ಹೇಗೆ? ಈ ಎಲ್ಲಾ ಪ್ರಶ್ನೆಗೆ ವಿಜ್ಞಾನಿಗಳು ವಿಕಾಸವಾದದ ನೆರವಿನ ತಮ್ಮ ಶೋಧಗಳಿಂದ ಸಂಭವನೀಯ ಉತ್ತರ ನೀಡುತ್ತಾ ಬಂದಿದ್ದಾರೆ. ಜೀವಿಗಳ ವಿಕಾಸದಲ್ಲಿ ದೊಡ್ಡ ಗಾತ್ರದ ಜೀವಿಗಳು ಹಲವಾರು ಬಾರಿ ವಿಕಾಸಗೊಂಡು, ಹಲವು ಇನ್ನಿಲ್ಲವಾಗಿ ನಾಶವಾಗಿ, ಕೆಲವೊಂದು ಇಂದಿಗೂ ಉಳಿದುಕೊಂಡಿವೆ. ಆದರೆ ಎಲ್ಲಾ ಬಹು-ಜೀವಿಕೋಶ ಜೀವಿಗಳನ್ನು ಬಾಧಿಸುವ ಕ್ಯಾನ್ಸರ್ ಖಾಯಿಲೆಯನ್ನು ಹತೋಟಿಗೆ ತಂದುಕೊಂಡಿದ್ದರಷ್ಟೇ ಈ ಜೀವಿಗಳು ಹೆಚ್ಚಿನ ಗಾತ್ರ ಮತ್ತು ಧೀರ್ಘಾಯುಷ್ಯ ಹೊಂದಲು ಸಾಧ್ಯವಿರುವಾಗ, ಈ ವಿಕಾಸವನ್ನು ಅರಿತರೆ ಕ್ಯಾನ್ಸರ್ ಖಾಯಿಲೆಗೆ ಪರಿಹಾರ ಕಂಡುಕೊಳ್ಳಲು ಇದು ಸಹಕಾರಿ ಮತ್ತು ಅವಶ್ಯವೆಂಬುದೇ “ಪೀಟೋ ವಿರೋಧಾಭಾಸ” ಏಕೆ ಮುಖ್ಯ ಎಂಬ ಪ್ರಶ್ನೆಗೆ ಉತ್ತರ. ಪ್ರಕೃತಿಯಲ್ಲಿ ಇರುವುದನ್ನೇ ನಮ್ಮ ಅನುಕೂಲಕ್ಕೆ ತಕ್ಕಂತೆ ಉಪಯೋಗಿಸುವುದನ್ನು “ಬಯೋ ಡಿಸೈನ್ ಅಥವಾ ಜೈವಿಕ ವಿನ್ಯಾಸ” ಎನ್ನುತ್ತೇವಲ್ಲ ಹಾಗೇ ಇದೂ ಕೂಡ.
ಹಾಗಾಗಿ ಹಲವು ಸಂಶೋಧಕರು ಇಂತಹ ದೊಡ್ಡ ಗಾತ್ರದ ಜೀವಿಗಳ ಬಗ್ಗೆ ಆಧ್ಯಯನ ಮಾಡಿ ಪೀಟೋ ವಿರೋಧಾಭಾಸಕ್ಕೆ ಪರಿಹಾರ ಸೂಚಿಸಿದ್ದಾರೆ. ಅದರಲ್ಲೂ ಆನೆಗಳ ಬಗ್ಗೆ, ತಿಮಿಂಗಲಗಳ ಬಗ್ಗೆ ಹಾಗೂ ವಿಶೇಷವಾಗಿ ಪಳೆಯುಳಿಕೆಯನ್ನು ಆಧರಿಸಿ ಕೆಲವು ಡೈನೋಸಾರ್ ಗಳ ಬಗ್ಗೆ ಹೆಚ್ಚು ಕೆಲಸಗಳಾಗಿವೆ. ಆದರೆ ಈ ಎಲ್ಲಾ ಪರಿಹಾರಗಳೆಲ್ಲಾ ಒಂದೇ ತೆರೆನಾಗಿಲ್ಲ. ಆನೆಗಳ ವಿಷಯಕ್ಕೆ ಬಂದರೆ, ಆಫ್ರಿಕಾದ ಆನೆಗಳಲ್ಲಿ ಕ್ಯಾನ್ಸರ್ ಸಂಭವನೀಯತೆ ಮಾನವರಿಗಿಂತ ಕಡಿಮೆ ಏಕೆ ಎಂದರೆ ಅವುಗಳು ಈ ಮುಂಚೆ ವಿವರಿಸಿದ ಟ್ಯೂಮರ್ ಸಪ್ರೆಸರ್ ಜೀನಾದ ಟಿಪಿ-53(TP 53) ಎಂಬ ಜೀನನ್ನು ಹೆಚ್ಚು ಸಂಖ್ಯೆಯಲ್ಲಿ ಹೊಂದಿರುವುದು. ಈ ಜೀನು, ಮಾನವ ಮತ್ತು ಇಲಿಗಳಲ್ಲಿ ಕೇವಲ ಒಂದೇ ಒಂದು ಇದ್ದರೆ, ಆನೆಗಳಲ್ಲಿ ಇಂತಹ 20 ಜೀನುಗಳಿರುವುದನ್ನು ಪತ್ತೆ ಮಾಡಲಾಗಿದೆ. ಆದರೆ ಇಷ್ಟೊಂದು ಸಂಖ್ಯೆಯ ವ್ಯತ್ಯಾಸವನ್ನು ವಿಕಾಸದ ದೃಷ್ಠಿಯಿಂದ ಹೇಗೆ ವಿವರಿಸುವುದು? ಅದಕ್ಕಾಗಿ ಜೀವಿಗಳ ಸಂತಾನೋತ್ಪತ್ತಿ ಹಾಗೂ ಬೆಳವಣಿಗೆಯ ಕಾಲದ ಮಾನದಂಡಗಳ ಮೂಲಕ ಈ ವ್ಯತ್ಯಾಸವನ್ನು ವಿವರಿಸಲಾಗಿದೆ. ಅದೇನೆಂದರೆ, ವಿಕಾಸದ ದೃಷ್ಠಿಯಲ್ಲಿ, ಕಡಿಮೆ ಆಯುಷ್ಯವುಳ್ಳ ಇಲಿ, ತನ್ನ ಶಕ್ತಿಯನ್ನು ಹೆಚ್ಚೆಚ್ಚು ಸಂತಾನೋತ್ಪತ್ತಿ ಕಡೆಗೆ ವ್ಯಯಿಸುವುದು, ಹೆಚ್ಚು ಟ್ಯೂಮರ್ ಸಪ್ರೆಸರ್ ಜೀನುಗಳನ್ನು ಹೊಂದುವುದಕ್ಕಿಂತಲೂ ಸಹಕಾರಿ. ಏಕೆಂದರೆ ಎಂತಿದ್ದರೂ ತನ್ನ ಬೇಟೆಗಾರ ಪ್ರಾಣಿಗೆ ಬಲಿಯಾಗುವ ಇಲಿಗಳು, ಅವನ್ನು ತಪ್ಪಿಸಿ ಬದುಕಿ ಕ್ಯಾನ್ಸರ್ ಗೆ ಈಡಾಗುವ ಸಂಭವನೀಯತೆ ಕಡಿಮೆ. ಹಾಗಾಗಿ ಅವುಗಳ ವಿಕಾಸದ ಕ್ರಮದಲ್ಲಿ ಕೇವಲ ಒಂದು ಟ್ಯೂಮರ್ ಸಪ್ರೆಸರ್ ಜೀನನ್ನು ಪಡೆದಿರಬೇಕು ಎಂದು ವಿಜ್ಞಾನಿಗಳು ತರ್ಕಿಸಿದ್ದಾರೆ. ಇಂತಹದೇ ಒಂದು ಉದಾಹರಣೆ ಗತಿಸಿ ಹೋದ ಒಂದು ಡೈನಾಸರ್ ಪ್ರಬೇಧದ ಬಗ್ಗೆಯೂ ಇದೆ.
ಆದರೆ ತಿಮಿಂಗಲಗಳ ಕಥೆ ಬೇರೆಯೇ ಇದೆ. ಇವುಗಳೂ ಕೂಡ ಕೇವಲ ಒಂದೇ ಒಂದು ಟ್ಯೂಮರ್ ಸಪ್ರೆಸರ್ ಜೀನನ್ನು ಹೊಂದಿದ್ದಾಗ್ಯೂ ನಮ್ಮ ನಡುವೆ 200 ವರ್ಷಗಳಷ್ಟು ಕಾಲ ಬದುಕುತ್ತಿರುವ ಸೋಜಿಗದ ವಿಷಯವೂ ಇದೆ. ಇದನ್ನು ವಿವರಿಸಲು ವಿಜ್ಞಾನಿಗಳು ಹಲವು ತಿಮಿಂಗಲ ಪ್ರಬೇಧಗಳ ಜೀನೋಮ್ ಗಳನ್ನು ತುಲನಾತ್ಮಕವಾಗಿ ಅಭ್ಯಯಿಸಿ, ಈ ತಿಮಿಂಗಲಗಳು ಕ್ಯಾನ್ಸರ್ ರಹದಾರಿಗಳ(Cancer Pathways) ನಿಯಂತ್ರಿಸುವ ಜೀನುಗಳಲ್ಲಿ ಸಕಾರಾತ್ಮಕ ಆಯ್ಕೆಯನ್ನು(Positive selection) ಹೊಂದಿ ಜೀವಿಕೋಶಗಳ ವಿಭಜನೆ ಮತ್ತು ಅದರ ಬೆಳವಣಿಗೆ ಬಗ್ಗೆ ಗಟ್ಟಿಯಾದ ನಿಯಂತ್ರಣ ವ್ಯವಸ್ಥೆಯನ್ನು ವಿಕಸಿಸಿಕೊಂಡಿವೆ ಎಂದು ಪ್ರಕಟಿಸಿದ್ದಾರೆ. ಕೋವಿಡ್-19 ಕಾರಣದಿಂದ ಸುದ್ದಿಯಲ್ಲಿರುವ ಬಾವಲಿಗಳ ಸಂಶೋಧನೆಗಳಿಂದ ತಿಳಿದು ಬರುತ್ತಿರುವ ಅಂಶವೆಂದರೆ, ಬಾವಲಿಗಳಲ್ಲಿ ಉರಿಯೂತ(Inflammation) ಕಡಿಮೆ ಇರುವ ಕಾರಣದಿಂದ ಅವುಗಳಲ್ಲಿ ಕ್ಯಾನ್ಸರ್ ಸಂಭವನೀಯತೆ ಕಡಿಮೆ ಇರಬಹುದು ಎಂದು ಅಂದಾಜಿಸಲಾಗಿದೆ. ಇನ್ನೂ ಕೆಲವು ಸಂಶೋಧಕರು ಚಯಾಪಚಯ ವ್ಯವಸ್ಥೆ(Metabolism) ಅಥವಾ ಸೂಪರ್ ಟ್ಯೂಮರ್, ಧೀರ್ಘಾಯುಷಿ ದೊಡ್ಡ ಗಾತ್ರದ ಜೀವಿಗಳಲ್ಲಿ ಕ್ಯಾನ್ಸರ್ ನಿಯಂತ್ರಣಕ್ಕೆ ಸಹಕಾರಿಯಾಗಿ ಕೆಲಸ ಮಾಡುತ್ತಿವೆ ಎಂದು ಪ್ರತಿಪಾದಿಸುತ್ತಿದ್ದಾರೆ.
ಹೀಗೆ ಈ ವಿರೋಧಾಭಾಸದ ಪರಿಹಾರ ರೂಪದಲ್ಲಿ ಹಲವು ದಾರಿಗಳು ತೆರೆದುಕೊಳ್ಳುತ್ತಿವೆ. ಈ ದಾರಿಗಳ ತಿಳಿವು, ಅತ್ಯಂತ ಕಾರ್ಯಸಾಧುವಾದ ಕ್ಯಾನ್ಸರ್ ಚಿಕಿತ್ಸೆ ಅಭಿವೃದ್ಧಿ ಪಡಿಸಲು ನೆರವಾದಲ್ಲಿ ಅದೊಂದು ಮೈಲಿಗಲ್ಲೇ ಸರಿ. ಇಂದಿಗೂ ಇನ್ನೂರಕ್ಕೂ ಹೆಚ್ಚು ಬಗೆಯ ಕ್ಯಾನ್ಸರ್ ರೋಗಕ್ಕೆ ಸೂಕ್ತ ಚಿಕಿತ್ಸೆ ಸೃಜಿಸುವ ಸವಾಲು ಮನುಕುಲದ ಮೇಲಿದೆ. ಜೊತೆಗೆ ತಜ್ಞರ ಅನುಭವದ ಮಾತೇನೆಂದರೆ, ಕ್ಯಾನ್ಸರ್ ಚಿಕಿತ್ಸೆ ಗಿಂತಲೂ, ಅದು ಬರದಂತೆ ನೋಡಿಕೊಳ್ಳುವುದು ಜಾಣ ನಡೆ ಎನ್ನುವುದು. ಹಾಗಾಗಿ ಸಾಧ್ಯವಾದಷ್ಟು ಧೂಮಪಾನದಂತಹ ಹವ್ಯಾಸವನ್ನು ಬಿಡಿ ಎಂಬುದಾಗಿ ಕ್ಯಾನ್ಸರ್ ತಜ್ಞರು ಪದೇ ಪದೇ ಎಚ್ಚರಿಸುತ್ತಲೇ ಇದ್ದಾರೆ. ಆದರೂ ನಮ್ಮ ಸಮಾಜದಲ್ಲಿ, ಇನ್ನೂ ಪೌರುಷದ ಸಂಕೇತದಂತೆ ಬಿಂಬಿಸಲ್ಪಡುತ್ತಿರುವ ಧೂಮಲೀಲೆಗಳು ಪ್ರಕಟಗೊಳ್ಳುತ್ತಲೇ ಇವೆ. ಮೊನ್ನೆ ತಾನೇ ಪ್ರಸಿದ್ಧ ಕನ್ನಡ ನಟನ ಹೊಸ ಸಿನಿಮಾದ ಟೀಸರ್ ಈ ಕಾರಣಕ್ಕೆ ಸುದ್ದಿಯಾಗಿದ್ದು ನಿಮಗೆ ನೆನಪಿರಬಹುದು. ಅದೇನೆ ಇರಲಿ ಜಾಗತಿಕ ಕ್ಯಾನ್ಸರ್ ದಿನದ ಈ ಹೊತ್ತಿನಲ್ಲಿ ಅದರ ವೈಜ್ಞಾನಿಕ ಮತ್ತು ಸಾಮಾಜಿಕ ಚರ್ಚೆ ಇನ್ನಷ್ಟು ಹೆಚ್ಚಾಗಲಿ ಎಂದು ಸಿ.ಪಿ.ಯು.ಎಸ್ ಸಂಸ್ಥೆ ಆಶಿಸುತ್ತದೆ.
ನಮಸ್ಕಾರ,
ಆಕಾಶ್ ಬಾಲಕೃಷ್ಣ
ಹೆಚ್ಚಿನ ಓದಿಗೆ
- Peto R, Roe FJ, Lee PN, Levy L, Clack J. Cancer and ageing in mice and men. Br J Cancer. 1975;32:411–26.
- Aleah F. Caulin1 and Carlo C. Maley2,3, Peto’s Paradox: Evolution’s Prescription for Cancer Prevention, Trends Ecol Evol. 2011 April ; 26(4): 175–182.
- Marc Tollis, Amy M. Boddy and Carlo C. Maley, Peto’s Paradox: how has evolution solved the problem of cancer prevention? BMC Biology (2017) 15:60
- Abegglen LM, Caulin AF, Chan A, Lee K, Robinson R, Campbell MS, et al. Potential mechanisms for cancer resistance in elephants and comparative cellular response to DNA damage in humans. JAMA. 2015;314:1850–60.
- Tollis, M., Robbins, J., Webb, A.E., Kuderna, L.F.K., Caulin, A.F., Garcia, J.D., Be` rube` , M.,Pourmand, N., Marques-Bonet, T., O’Connell, M.J., et al. (2019). Return to the sea, get huge, beat cancer: an analysis of cetacean genomes including an assembly for the humpback whale(Megaptera novaeangliae). Mol. Biol. Evol. 36, 1746–1763.
Very insightful article.
Thank you .
ಕ್ಯಾನ್ಸರ್ ಕಾಯಿಲೆಯ ಮತ್ತೊಂದು ಮಗ್ಗುಲನ್ನು ಪರಿಚಯಿಸಿದ್ದೀರಿ. ಧೂಮಪಾನ ಒಂದು ಪೌರುಷದ ಸಂಕೇತ ಎಂದು ನಾನು ಕಂಡ ಹಾಗೆ ನಾಲ್ಕೈದು ದಶಕಗಳಿಂದಲೂ ಬಿಂಬಿಸುತ್ತಾ ಬರಲಾಗಿದೆ. ಈ ಮೂರ್ಖ ನಂಬಿಕೆಯನ್ನು ಸರಿಯಾಗಿ ಗುರುತಿಸಿದ್ದೀರಿ.
ಮಾಹಿತಿಪೂರ್ಣ ಲೇಖನಕ್ಕಾಗಿ ಧನ್ಯವಾದಗಳು.
ತುಂಬಾ ಚನ್ನಾಗಿ ವಿವರಿಸಿದ್ದೀರಿ
Very nice and interesting information. Thank you for this post.
ತುಂಬಾ ಸರಳವಾಗಿ ವಿಶ್ಲೇಷಣೆ ನೀಡಿ ಉತ್ತಮ ಮಾಹಿತಿ ನೀಡಿದ್ದೀರಿ. ಬದಲಾದ ಆಹಾರ ಕ್ರಮ, ತಿಂದ ಆಹಾರದ ಚಯಾಪಚಯ ಕ್ರಿಯೆಗಿಂತ ಮುನ್ನವೇ ಮತ್ತೆ ತಿನ್ನುವ ತಿನ್ನುಬಾಕತನ ಇಲ್ಲಿ ಮತ್ತು ಮಾನವರಲ್ಲಿ ಸಾಮ್ಯತೆ ಇರುವುದು ಈ ವಿರೋಧಭಾಸಕ್ಕೆ ಕಾರಣ ಗಳಲ್ಲಿ ಒಂದಿರಬಹುದೇ?!
ಉತ್ತಮ ಮಾಹಿತಿಗಾಗಿ ಧನ್ಯವಾದಗಳು 🙏