You are currently viewing ನೀರು-ನೆಲ ಕೂಡುವ ಅಳಿವೆಗಳಲ್ಲಿ ಅರಳುವ ಅರಣ್ಯ! ಕಾಂಡ್ಲ ವನ Mangrove Forests

ನೀರು-ನೆಲ ಕೂಡುವ ಅಳಿವೆಗಳಲ್ಲಿ ಅರಳುವ ಅರಣ್ಯ! ಕಾಂಡ್ಲ ವನ Mangrove Forests

ಒಂದೇ ಒಂದು ಸಸಿ ಅಗಾಧವಾದ ನೀರಿನ ಅಲೆಗಳಲ್ಲಿ ಮುಳುಗುತ್ತಾ ತೇಲುತ್ತಾ ಬದುಕಿನ ಆಸೆಯನ್ನು ಭದ್ರವಾಗಿಟ್ಟು ನೆಲದ ಕಡೆಗೆ ಬರಲು ನದಿಗಳು-ಹಳ್ಳಗಳು ಸಮುದ್ರಗಳ ಸೇರುವ ಅಳಿವೆಗಳ ದಾಟುವಲ್ಲಿ, ನೆಲವನ್ನು ಕಂಡು ಅಲ್ಲೇ ನೆಲೆಯಾಗುವ ಅಚ್ಚರಿಯೇ ಮ್ಯಾಂಗ್ರೊವ್‌ ಅರಣ್ಯ ಅಥವಾ ಕಾಂಡ್ಲ ವನಗಳು. ಹೌದು, ಒಂದೇ ಸಸಿ, ಅದೂ ತಾಯಿಯ ಒಡಲಲ್ಲೇ ಬೀಜವೂ ಮೊಳೆತು, ಗಿಡವಾಗಿಯೇ ತಾಯಿಯಿಂದ ಬೇರ್ಪಡುವ ಸಸ್ಯಲೋಕದ ಸೋಜಿಗ. ಸಾಲದಕ್ಕೆ ನೆಲೆಯಾಗಲು, ನೆಲ ಹುಡುಕಿ, ನೀರ ಬಳಿಯೇ ನೆಲವನ್ನು ತಲುಪಿ, ಅಲ್ಲಿನ ನೀರೂ-ನೆಲ ಮಿಳಿತದ ವಿಪರೀತ ಸಂಘರ್ಷದ ವಾತಾವರಣದಲ್ಲಿ ಬದುಕಿನ ಆಶಯವನ್ನು ವಿಕಾಸಗೊಳಿಸಿಕೊಂಡ ವಿಶಿಷ್ಟ ಸಸ್ಯ ಸಂಕುಲ, ಕಾಂಡ್ಲ ವನ ಅಥವಾ ಮ್ಯಾಂಗ್ರೊವ್‌ ಕಾಡುಗಳು. ಇದು ಕಾಡೇ ಹೌದು, ಏಕೆಂದರೆ, ಒಂಟಿಯಾಗಿ ಬಂದ ಒಂದು ಸಸಿಯು ನೆಲೆಯಾಗಿ, ಅರಳಿ, ಸಂಕುಲವನ್ನು ಸುತ್ತಲೂ ದಟ್ಟವಾಗಿ ಬೆಳೆಸಿಕೊಳ್ಳುವ ಸೋಜಿಗವೇ ಮ್ಯಾಂಗ್ರೊವ್‌ ಕಾಡು -ಕಾಂಡ್ಲವನ.  

       ಉಡುಪಿ ಮತ್ತು ಕುಂದಾಪುರದ ಹೆದ್ದಾರಿಯ ಒಂದೆಡೆ ಅರಬ್ಬೀ ಸಮುದ್ರದ ದಂಡೆ ಮತ್ತೊಂದೆಡೆ ನೆಲದ ಹರಹು. ಅಲ್ಲಿನ ಸಾಲಿಗ್ರಾಮ ಸಮೀಪದ ಪಾಂಡೇಶ್ವರ ಸಮುದ್ರದ ದಡದಿಂದ ನಾಲ್ಕಾರು ಕಿ.ಮೀ. ದೂರದಲ್ಲಿ ಹಿರಿಯ ಮಿತ್ರರಾದ ಸುರೇಶ್‌ ತುಂಗ ಅವರ ಮನೆ. ಜನ ಜಂಗುಳಿ ಇರದ ಸಮುದ್ರ ದಂಡೆಯಲ್ಲಿ ಒಂದು ಸಂಜೆಯನ್ನು ಕಳೆಯಲೆಂದು ಅವರ ಪ್ರೀತಿಯ ಕರೆಯ ಮೇರೆಗೆ ಹೋದಾಗ, ಸಂಜೆಯಷ್ಟೇ ಮುದಗೊಂಡದ್ದು ಮಾತ್ರವಲ್ಲಾ ಮರುದಿನ ಮುಂಜಾವಿನಲ್ಲೂ ಧ್ಯಾನಸ್ಥವಾಗಿ ನಿಂತ ಕಾಂಡ್ಲವನಗಳ ನಡುವೆ ದೋಣಿ ವಿಹಾರದಲ್ಲಿ ಖುಷಿಗೊಂಡು ಕಂಡ ಸಸ್ಯಸಂಕುಲದ ಕುತೂಹಲದ ಕಥೆಯಿದು.

ಸಾಲಿಗ್ರಾಮದ ಕಡಲಿನ ದಂಡೆಯಲ್ಲಿ ಜನರೇನು ಹೆಚ್ಚಿರಲಿಲ್ಲ. ಅಲೆಗಳೂ ಉಬ್ಬರವಿಲ್ಲದೆ ಪ್ರಶಾಂತವಾಗಿಯೇ ಇದ್ದವು. ಸಂಜೆಯಲ್ಲಿ ಅಳಿವೆಯ ನೀರು ಇಳಿದು ಮುಂಜಾವಿನಲ್ಲಿ ಮತ್ತೆ ಏರಿದಾಗ ದೋಣಿ ಏರಿ ವಿಹರಿಸಲು ಸೂಕ್ತವೆಂದು ಬೆಳಿಗ್ಗೆ ಕಾಫಿಯಾದೊಡನೆಯೇ ಕಡಲಂಚನ್ನು ಸೇರುವ ಕಾತುರದ ಪುಟ್ಟ ಹಳ್ಳದ ಅಳಿವೆಯನ್ನು ತಲುಪಿದ್ದಾಯ್ತು. ದೋಣಿಯನ್ನು ನಡೆಸುವ ಹುಡುಗ ಗೆಳೆಯ ಸುರೇಶ್‌ ಅವರಿಗೆ ಪರಿಚಯದ ಮಂಜು ಪ್ರಸಾದ್‌. ಆತನಿಂದ ಒಂದಷ್ಟು ಅಲ್ಲಿನ ಕಾಂಡ್ಲ ಗಿಡಗಳ ಪರಿಚಯಗೊಂಡು ಮುಂದೆ, ವಿವರವಾದ ಹುಡುಕಾಟಕ್ಕೆ ತೊಡಗಿ ಸಸ್ಯಯಾನದ ಭಾಗವಾಗಲು ಸಹಾಯಕವಾಗಿದೆ.   

ಮ್ಯಾಂಗ್ರೊವ್‌ ಸಸ್ಯಗಳು ನಮ್ಮ ನೆಲದ ಮೇಲಿನ ಸಸ್ಯಗಳಿಗಿಂತಾ ವಿಶಿಷ್ಟವಾದವು. ನೆಲದ ಮೇಲಿನ ನಮಗೆ ಹೆಚ್ಚು ಪರಿಚಯದವು. ಇವು ಹಾಗಲ್ಲ. ಸಮುದ್ರದಿಂದ ಹೊರ ಚಾಚಿ ನೆಲವಿನ್ನೇನು ಆರಂಭವಾಗಬೇಕು ಎನ್ನುವೆಡೆ ಇವುಗಳ ಸಾಮ್ರಾಜ್ಯ. ಹೀಗೆ ವಿಕಾಸಗೊಂಡಿರುವ ಅವುಗಳ ಜೀವನವೂ ವಿಶಿಷ್ಟ. ವಿಕಾಸ ಎನ್ನುವುದೇನು ಒಂದೆರಡು ದಿನಗಳಲ್ಲಿ ಆದುದಲ್ಲ. ಅದೊಂದು ನಿರಂತರವಾದ ಬದಲಾಗುವ ಊಹೆಗೂ ಮೀರಿದ ವಾಸ್ತವ. ಅದರೊಳಗೆ ಹೊಸ ಸನ್ನಿವೇಶಗಳಿಗೆ ಹೊಂದಿಕೊಳ್ಳುತ್ತಾ ತಮ್ಮ ಜೀವನವನ್ನು ಪ್ರತಿಷ್ಠಾಪಿಸುತ್ತಾ ಬೆಳೆವ ಸ್ಥಿತಿ. ಹೀಗೆ ಬಹುಶಃ ಅತ್ತ ನೆಲವೂ ಅಲ್ಲದ ಇತ್ತ ನೀರೂ ಅಲ್ಲದ, ಅಲ್ಲದೆ ಏರಿಳಿತಗಳ ಭಯಾನಕ ವಾತಾವರಣದಲ್ಲಿ ಜೀವನವನ್ನು ಕಟ್ಟಿಕೊಂಡ ಸಸ್ಯಗಳು ಮ್ಯಾಂಗ್ರೊವ್‌ ಸಸ್ಯಗಳು. 

ಪೀಟರ್‌ ಜಾನ್‌ ಹಾಗರ್ತ್‌ (Peter J. Hogarth) ಎಂಬ ಯಾರ್ಕ್‌ ವಿಶ್ವವಿದ್ಯಾಲಯದ ಜೀವಿ ವಿಜ್ಞಾನಿ ಅವರ 2015ರಲ್ಲಿ ಪ್ರಕಟವಾದ ಕೃತಿ (The biology of mangroves and seagrasses) ಯ ಪ್ರಕಾರ ಜಗತ್ತಿನಲ್ಲಿ ಸುಮಾರು 16 ಕುಟುಂಬಗಳಿಗೆ ಸೇರಿದ 20 ಸಂಕುಲಗಳ 70 ಪ್ರಭೇದಗಳಾಗಿ ಮ್ಯಾಂಗ್ರೊವ್‌ ಸಸ್ಯಗಳು ಹರಡಿಕೊಂಡಿವೆ. ಇವೆಲ್ಲವೂ ವಿವಿಧ ಉಪ್ಪಿನ ಸಾಂದ್ರತೆ, ಆಮ್ಲ ಜನಕದ ಕೊರತೆ, ನೀರು ಮತ್ತು ಅಲೆಗಳ ಏರಿಳಿತ, ಮಣ್ಣೆಲ್ಲವೂ ಕೆಸರಿನ ವಾತಾವರಣ ಜೊತೆಗೆ ದಟ್ಟ ಬಿಸಿಲಿನ ಪ್ರತಿಫಲನ, ಹೀಗೆ ವಿಶಿಷ್ಟ ಸನ್ನಿವೇಶಕ್ಕೆ ಹೊಂದಿಕೊಳ್ಳುವ ಜೀವಿಗಳಾಗಿ ಶರೀರದ ಕ್ರಿಯೆಗಳನ್ನು ಒಗ್ಗಿಸಿಕೊಂಡು ವಿಕಾಸವಾಗಿವೆ. ಅತ್ಯಂತ ಹಳೆಯ ಮ್ಯಾಂಗ್ರೊವ್‌ ತಾಳೆ ಅಥವಾ ತೆಂಗಿನ ಸಂಕುಲದವಾಗಿದ್ದು ಅವುಗಳು ಸುಮಾರು 75ದಶಲಕ್ಷ ವರ್ಷಗಳ ಹಿಂದಿನಿಂದಲೂ ಇರುವ ಬಗ್ಗೆ ಪಳೆಯುಳಿಕೆಗಳು ದೊರೆತಿವೆ. ಹೆಚ್ಚಿನ ಹಾಗೂ ತುಂಬಾ ಸಾಮಾನ್ಯವಾದ ಸಂಕುಲವೆಂದರೆ ರೈಜೊಫೊರಾ (Rhizophora) ಸಂಕುಲವಾಗಿದೆ. ಈ ಸಂಕುಲವು ಸುಮಾರು 50 ದಶಲಕ್ಷ ವರ್ಷಗಳ ಹಿಂದೆ ವಿಕಾಸವಾಗಿರಬಹುದೆಂದು ಅಂದಾಜಿಸಲಾಗಿದೆ.

ಮ್ಯಾಂಗ್ರೋವ್ ಕಾಡುಗಳ ವಿಶೇಷ ಗುಣಲಕ್ಷಣಗಳೆಂದರೆ ಕಡಿಮೆ ಮಟ್ಟದ ಆಮ್ಲಜನಕಕ್ಕೆ ಹೊಂದಿಕೊಳ್ಳುವುದು, ವಾತಾವರಣದಿಂದ ಪೋಷಕಾಂಶಗಳನ್ನು ಹೀರಿಕೊಳ್ಳುವುದು, ಉಪ್ಪಿನ ಸೇವನೆಯನ್ನು ಸೀಮಿತಗೊಳಿಸುವುದು ಅದರ ಜೊತೆಗೆ ತನ್ನ ಸಂತತಿಯು ಬದುಕಿ ಉಳಿಯುವಿಕೆಯನ್ನು ಹೆಚ್ಚಿಸುವುದು. ಇದಕ್ಕೆಲ್ಲಾ ಅಗತ್ಯವಾದ ವಿಕಾಸವನ್ನು ಮಾಡಿಕೊಂಡ ಮ್ಯಾಂಗ್ರೋವ್ ಕಾಡುಗಳು ಸಮುದ್ರ ಪರಿಸರ ವ್ಯವಸ್ಥೆಯ ರಚನೆಯ ನಿರ್ವಹಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ.

ಮ್ಯಾಂಗ್ರೋವ್‌ಗಳು ಸಣ್ಣ ಮರಗಳು, ಪೊದೆಗಳು ಮತ್ತು ಕೆಲವು ಜರೀಗಿಡಗಳೂ ಇವೆ, ಉಪ್ಪನ್ನು ಸಹಿಸಿಕೊಳ್ಳುವ ಇವುಗಳನ್ನು ಉಪ್ಪು ಸಹಿಷ್ಣ ಸಸ್ಯಗಳು ಅಥವಾ ಹ್ಯಾಲೋಫೈಟ್ಸ್ ಎಂದೂ ಕರೆಯುತ್ತಾರೆ. ಕಠಿಣವಾದ ಕರಾವಳಿಯ ವಾತಾವರಣದ ಪರಿಸ್ಥಿತಿಗಳಲ್ಲಿ ವಾಸಿಸಲು ಇವು ಹೊಂದಿಕೊಳ್ಳುತ್ತವೆ. ಸದಾ ಉಪ್ಪಿನ ನೀರಿನಲ್ಲಿ ಮುಳುಗಿರುವ ಇವುಗಳು ತಮ್ಮೊಳಗೆ ಉಪ್ಪಿನ ಶೋಧನಾ ವ್ಯವಸ್ಥೆಯನ್ನು ಮತ್ತು ಮುಳುಗಿಯೂ ಉಪ್ಪನ್ನು ತಡೆದುಕೊಳ್ಳುವ ಪರಿಸ್ಥಿತಿಯನ್ನು ನಿಭಾಯಿಸಲು ಸಂಕೀರ್ಣವಾದ ಬೇರಿನ ವ್ಯವಸ್ಥೆಯನ್ನು ಹೊಂದಿರುತ್ತವೆ. ತಳದ ಮಣ್ಣೆಂದರೆ ನೀರಿನಲ್ಲಿ ಮುಳುಗಿದ ಕೆಸರು ತಾನೇ? ಅವುಗಳ ವಾತಾವರಣದ ಗಾಳಿಯಲ್ಲಿರುವ ಕಡಿಮೆ-ಆಮ್ಲಜನಕದ ಪರಿಸ್ಥಿತಿ ಇರುತ್ತದೆ. ಅದರ ಜೊತೆಗೆ ಸಮುದ್ರದ ಅಲೆಗಳ ಉಬ್ಬರವಿಳಿತವನ್ನೂ ತಡೆದುಕೊಳ್ಳುವ ಶಕ್ತಿಯನ್ನು ಬೇರುಗಳು ಹೊಂದಿದ್ದು ಅದಕ್ಕೆಂದೇ ನೀರಿನ ಮೇಲಿನ ಭಾಗವನ್ನು ದಟ್ಟವಾಗಿಯೂ ಗಟ್ಟಿಯಾಗಿಯೂ ಇರುವಂತೆ ಆ ಅರ್ಧಭಾಗದಲ್ಲಿ ಬೆಳೆಯುತ್ತವೆ.

ಆದ್ದರಿಂದ ಇವುಗಳು ತಮ್ಮ ಸಂತತಿಯ ರಕ್ಷಣೆಗೆಂದೇ ವಿಶೇಷ ವ್ಯವಸ್ಥೆಯನ್ನು ವಿಕಾಸಗೊಳಿಸಿಕೊಂಡಿವೆ. ತುಂಬಾ ಕಠಿಣವಾದ ವಾತಾವರಣದಲ್ಲಿ ಸಸಿಯು ಬೆಳೆಯಬೇಕಾಗಿದ್ದು, ಬೀಜಗಳು ತೇಲುವುದಕ್ಕೆ ಹೊಂದಿಕೊಂಡೇ ಇರುತ್ತವೆ. ಬಹುಪಾಲು ಸಸ್ಯಗಳಂತೆ ಈ ಬೀಜಗಳು ಮಣ್ಣಿನಲ್ಲಿ ಬಿದ್ದು ಮೊಳಕೆಯೊಡೆಯದೆ, ಗಿಡದಲ್ಲಿನ ಹಣ್ಣಿನಲ್ಲೇ ಮೊಳಕೆಯೊಡೆದು, ಅಲ್ಲಿಯೇ ಅಂದರೆ ಗಿಡಕ್ಕೆ ಅಂಟಿಕೊಂಡೇ ಸಸಿಗಳಾಗುತ್ತದೆ. ಹಣ್ಣಿನಲ್ಲಿ ಇರುವಾಗಲೇ ದ್ಯುತಿಸಂಶ್ಲೇಷಣೆಯನ್ನು ನಡೆಸುವಷ್ಟು ಅಂದರೆ ತನ್ನ ಆಹಾರವನ್ನು ತಾನೇ ತಯಾರುವಷ್ಟು ಕಲಿತು ನಂತರ ತಾಯಿಯಿಂದ ಹೊರಬಿದ್ದು ನೀರಿನಲ್ಲಿ ತೇಲುತ್ತಾ ಹೋಗಿ ನೆಲಕ್ಕೆ ಆತುಕೊಂಡು ಬದುಕು ಕಟ್ಟಿಕೊಳ್ಳುತ್ತವೆ. ನೆಲವೆಂದರೆ ದಟ್ಟ ಕೆಸರು, ಹೂತು ಹೋಗುವಂತಾ ನೆಲ! ಸದಾ ನೀರಿನ ತಳವಾಗಿದ್ದು, ಮಣ್ಣೆಲ್ಲಾ ಅದರೊಳಗಿರುವ ಸಾವಯವ ವಸ್ತು ಮತ್ತಿತರ ಜಲಚರಿಗಳ ಅರೆಕೊಳೆತ ಸ್ಥಿತಿಯಲ್ಲಿ ಇರುವುದುಂಟು. ಇಂತಹಾ ಜೀವಿಪರಿಸ್ಥಿತಿಯಲ್ಲಿ ಮ್ಯಾಂಗ್ರೊವ್‌ ಸಸ್ಯಗಳು ಹರಡಿ ಜೀವನವನ್ನು ಕಟ್ಟಿಕೊಂಡಿವೆ.

ಸುಮಾರು 16 ಕುಟುಂಬಗಳನ್ನು ಮ್ಯಾಂಗ್ರೊವ್‌ಗಳೆಂದು ಕರೆದರೂ ಮುಖ್ಯವಾಗಿ, 5 ಕುಟುಂಬ (Arecaceae, Avicenniaceae,Combretaceae, Rhozophoraceae ಹಾಗೂ Lythraceae )ಗಳನ್ನು ನಿಜವಾದ ಮ್ಯಾಂಗ್ರೊವ್‌ಗಳೆಂದು ವಿಭಾಗಿಸಲಾಗುತ್ತದೆ. ಉಳಿದ 11 ಕುಟುಂಬಗಳನ್ನು ಮೈನರ್‌ ಮ್ಯಾಂಗ್ರೊವ್‌ ಎನ್ನಲಾಗುತ್ತದೆ. ಈ ಮ್ಯಾಂಗ್ರೊವ್‌ಗಳ ಬಗ್ಗೆ ಅಧ್ಯಯನಗಳು, ತಿಳಿವಳಿಕೆಗಳು ತೀರಾ ಇತ್ತೀಚೆಗಿನವು. ಇವುಗಳದ್ದು ಏನಿದ್ದರೂ ಸಮುದ್ರದ ದಂಡೆಯ ಸಂರಕ್ಷಣೆಯ ಹಿತ ಹಾಗೂ ಅಳಿವೆಯ ಮೀನುಗಾರಿಕೆಯ ಆಸಕ್ತಿಗೆ ಸಂಬಂಧಿಸಿದವಾಗಿದ್ದು ಹೆಚ್ಚಿನ ಅಧ್ಯಯನಗಳು ನಡೆಯುತ್ತಿವೆ. ಮುಖ್ಯವಾಗಿ ಸಮುದ್ರ ದಂಡೆಯ ವಾತಾವರಣದ ರಕ್ಷಣೆಗೆ ಇವುಗಳ ಪಾತ್ರವನ್ನು ಹೆಚ್ಚು ಗಮನಕೊಡಲಾಗುತ್ತಿದೆ.   

ಕಳೆದ 2018ರಲ್ಲಿ ಜಾಗತಿಕವಾಗಿ ಮ್ಯಾಂಗ್ರೊವ್‌ಗಳ (Global Mangrove Watch Initiative) ನಿಗಾವಣೆಯ ಉಪಕ್ರಮವೊಂದನ್ನು ಆರಂಭಿಸಲಾಯಿತು. ಅದರ ಪ್ರಕಾರ 2010ರ ವೇಳೆಗೆ ಸುಮಾರು 118 ದೇಶಗಳಲ್ಲಿದ್ದ ಒಟ್ಟೂ ಕಾಂಡ್ಲವನಗಳು 1,37,600 ಚ.ಕಿ.ಮೀ. ಮುಂದೆ 2022ರಲ್ಲಿ ಕಳೆದುಹೋದ ಮ್ಯಾಂಗ್ರೊವ್‌ಗಳ ಸಮೀಕ್ಷೆಯಂತೆ 1999 ಮತ್ತು 2019ರ ನಡುವೆ ಸುಮಾರು 3,700 ಚ.ಕಿ.ಮೀ ಮ್ಯಾಂಗ್ರೊವ್‌ ಅರಣ್ಯವು ಮಾನವರ ಚಟುವಟಿಕೆಗಳಿಂದಲೇ ಹಾಳಾಗಿದೆ. ಮುಖ್ಯವಾಗಿ ನಗರೀಕರಣ, ಕೃಷಿ, ಮೀನುಗಾರಿಕೆ, ಸೀಗಡಿ ಕೃಷಿ ಮುಂತಾದವುಗಳಿಂದ ಕಾಂಡ್ಲ ವನಗಳು ತೊಂದರೆಗೆ ಒಳಗಾಗಿವೆ. ಒಟ್ಟಾರೆಯ ಹರಹು ಮತ್ತು ವಿವಿಧತೆಯು ಸಾಕಷ್ಟೇ ಇದ್ದು, ಪಶ್ಚಿಮಕ್ಕಿಂತಾ ಪೂರ್ವದ ಪ್ರದೇಶಗಳು ಹೆಚ್ಚು ಹರಹನ್ನು ಹೊಂದಿವೆ. ಭಾರತದಲ್ಲೂ ಸಹಾ ಪಶ್ಚಿಮ ಬಂಗಾಳದ ಪ್ರದೇಶ ಹಾಗೂ ಗುಜರಾತ್‌ ತೀರಗಳು ಹೆಚ್ಚು ದಟ್ಟವಾದ ಕಾಂಡ್ಲವನಗಳನ್ನು ಹೊಂದಿವೆ.    

ಮ್ಯಾಂಗ್ರೊವ್‌ಗಳನ್ನು ಉಳಿಸಿಕೊಳ್ಳುವುದು ಅನೇಕ ಹಿತವಾದ ಉದ್ದೇಶಗಳನ್ನು ಹೊಂದಿದೆ. ಪ್ರಮುಖವಾಗಿ ಸುಸ್ಥಿರವಾದ ಕರಾವಳಿಯ ಹಾಗೂ ಸಮುದ್ರದ ಜೀವಿಪರಿಸರದ ಸಂರಕ್ಷಣೆ, ಸುನಾಮಿಯಂತಹಾ ನೈಸರ್ಗಿಕ ಹಾವಳಿಯಿಂದ ರಕ್ಷಣೆ ಮುಂತಾದ ವೈಪರೀತ್ಯಗಳು ಸೇರಿವೆ. ಮ್ಯಾಂಗ್ರೊವ್‌ಗಳು ವಾತಾವರಣದ ಇಂಗಾಲವನ್ನೂ ಹೀರಿಕೊಳ್ಳುವಲ್ಲಿಯೂ ಸಹಾಯಕವಾಗಿವೆ. ಇವೆಲ್ಲವೂ ಆಯಾ ಸ್ಥಳಿಯ ಬಳಕೆದಾರರನ್ನೂ ಹಾಗೂ ಸಾಗರದಂಚಿನ ಚಟುವಟಿಕೆಗಳನ್ನೂ ಅವಲಂಬಿಸಿವೆ. ಇದಕ್ಕೆಂದೇ ಅಂತರರಾಷ್ಟ್ರೀಯ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಪ್ರತೀ ವರ್ಷದ ಜುಲೈ 26ರಂದು ಮ್ಯಾಂಗ್ರೊವ್‌ ಜೀವಿ ಪರಿಸ್ಥಿಯ ಸಂರಕ್ಷಣೆಯ ಅಂತರಾಷ್ಟ್ರೀಯ ದಿನವೆಂದು ಗುರುತಿಸಲಾಗಿದೆ.

ಕರ್ನಾಟಕದ ಕರಾವಳಿಯ ಮ್ಯಾಂಗ್ರೊವ್‌ಗಳು

ರಾಜ್ಯದ ಕರಾವಳಿಯು ಉತ್ರರ ಕನ್ನಡ (160 ಕಿ.ಮೀ), ದಕ್ಷಿಣ ಕನ್ನಡ (62 ಕಿ.ಮೀ) ಹಾಗೂ ಉಡುಪಿ (98 ಕಿ.ಮೀ) ಜಿಲ್ಲೆಗಳಲ್ಲಿ ಹಂಚಿದೆ. ಜೊತೆಗೆ ಇದು ಹೆಚ್ಚೂ ಕಡಿಮೆ ಜಾಗತಿಕ ಜೀವಿವೈವಿಧ್ಯತೆಯ ಹಾಟ್‌ ಸ್ಪಾಟ್‌ ಪಶ್ಚಿಮ ಘಟ್ಟಗಳ ಜೊತೆಯಲ್ಲಿಯೇ ಇದೆ. ಈ ಮೂರೂ ಜಿಲ್ಲೆಗಳು ವಿವಿಧ ಯಾತ್ರಾ ಸ್ಥಳಗಳನ್ನೂ ಹೊಂದಿದ್ದು ಸುಮಾರು ಪ್ರವಾಸಿಗರನ್ನೂ ಆಕರ್ಷಿಸುತ್ತಾ ಸಾಕಷ್ಟು ಭಯವನ್ನೂ ಜೊತೆಗಿಟ್ಟುಕೊಂಡಿವೆ.  

ತುಂಬಾ ಸಾಮಾನ್ಯವಾದ ಮ್ಯಾಂಗ್ರೊವ್‌ ಪ್ರಭೇದಗಳಲ್ಲಿ ಅವಿಸೀನಿಯಾ ಮರಿನಾ ಮತ್ತು ಅವಿಸೀನಿಯಾ ಆಲ್ಬ (Avicennia marina and Avicennia alba) ಮುಖ್ಯವಾದವು.  ಉಳಿದಂತೆ ಮಿಶ್ರ ಅರಣ್ಯಗಳು ಹೆಚ್ಚಿವೆ. ಕೆಲವೆಡೆಗಳಲ್ಲಿ ತಾಳೆಯ ಗುಂಪಿನ ಮ್ಯಾಂಗ್ರೋವ್‌ಗಳೂ ಇದ್ದು ಅವುಗಳು ಅಲ್ಪ ಪ್ರಮಾಣದವು. ಕರ್ನಾಟಕ ರಾಜ್ಯವು ಸುಮಾರು 700 ಹೆಕ್ಟೇರ್‌ ಮ್ಯಾಂಗ್ರೋವ್‌ ಅರಣ್ಯವನ್ನು ಹೊಂದಿದ್ದು, ಹೆಚ್ಚಿನವು ಮಿಶ್ರ ಕಾಡುಗಳಾಗಿವೆ. ಇಲ್ಲಿನವು ಹೆಚ್ಚಿನವು ಸಾಧಾರಣವಾದ ದಟ್ಟ ಕಾಡುಗಳಾಗಿದ್ದು, ಮಿಶ್ರ ಜಾತಿಯ ಸಂಕುಲದವು. ಸೊನೆರೇಸಿಯಾ ಆಲ್ಬ (Sonneratia alba) ಎಂಬ ಪ್ರಭೇದವೂ ಕೂಡ ಇದ್ದು ಅದು ಹೆಚ್ಚು ದಟ್ಟವಾದ ಕಾಂಡ್ಲವನ್ನು ಕೊಟ್ಟಿಲ್ಲ.

ಮ್ಯಾಂಗ್ರೋವ್‌ಗಳು ಕಡಲತೀರವನ್ನು ಸ್ಥಿರಗೊಳಿಸುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತವೆ ಮತ್ತು ಚಂಡಮಾರುತದಿಂದ ಆದ ಉಲ್ಬಣಗಳು ಮತ್ತು ಭಾರೀ ಉಬ್ಬರವಿಳಿತಗಳ ವಿರುದ್ಧ ಕರಾವಳಿಯನ್ನು ರಕ್ಷಿಸುತ್ತವೆ. ಉಪಗ್ರಹದ ದತ್ತಾಂಶವನ್ನು ಬಳಸಿಕೊಂಡು ಭಾರತದಲ್ಲಿ ಮ್ಯಾಂಗ್ರೋವ್ ಸಂಪನ್ಮೂಲಗಳ ದಾಖಲೆಯನ್ನು ಮೊದಲೇ ಮಾಡಲಾಗಿದ್ದರೂ, ಇಡೀ ದೇಶಕ್ಕೆ ಸಮುದಾಯ ಮಟ್ಟದಲ್ಲಿ ಮ್ಯಾಂಗ್ರೋವ್‌ಗಳ ನಕ್ಷೆ ಮಾಡಲು ಯಾವುದೇ ವ್ಯವಸ್ಥಿತ ಪ್ರಯತ್ನಗಳನ್ನು ಮಾಡಲಾಗಿಲ್ಲ. ಆದರೂ ಈ ಶತಮಾನದ ಮೊದಲ ದಶಕದಲ್ಲಿ ಒಂದಷ್ಟು ಪ್ರಯತ್ನಗಳ ಫಲವಾಗಿ ಒಂದು ದಾಖಲೆಯು ನಡೆದಿತ್ತು. ಇತ್ತೀಚೆಗೆ ಮ್ಯಾಂಗ್ರೊವ್‌ ಗಳ ಬೆಳೆಸುವ ಕಡೆಗೂ ಕೆಲವು ಪ್ರಯತ್ನಗಳು ನಡೆದಿವೆ.

ರಾಜ್ಯದ ಸಾಲಿಗ್ರಾಮದ ಅರಬ್ಬೀಸಮುದ್ರದ ತೀರದ ಅಳಿವೆಯಲ್ಲಿ ಮ್ಯಾಂಗ್ರೊವ್‌ಗಳ ನಡುವೆ ವಿಹರಿಸುತ್ತಾ ಅವುಗಳ ಪರಿಚಯದ ಕುತೂಹಲಕ್ಕೆ ಕಾರಣರಾದವರು ಪಾಂಡೇಶ್ವರದ ಶ್ರೀ ಸುರೇಶ್‌ ತುಂಗ ಅವರು, ಪಿಯು. ಬೋರ್ಡ್‌ನ ಸಹಾಯಕ ನಿರ್ದೇಶಕರಾಗಿ ನಿವೃತ್ತರಾದ ಅವರು ಮೂಲತಃ ಕಾಮರ್ಸ್‌ ಉಪನ್ಯಾಸಕರಾಗಿದ್ದು, ಕಾಲೇಜಿನ ಪ್ರಾಂಶುಪಾಲರೂ ಆಗಿದ್ದರು. ಅವರ ಪರಿಚಿತ ಯುವಕ ಮಂಜು ಪ್ರಸಾದ್‌ ಮ್ಯಾಂಗ್ರೊವ್‌ಗಳ ನಡುವೆ ವಿಹರಿಸಲು ದೋಣಿಯ ಹುಟ್ಟು ಹಾಕಿ ನಾವಿಕನಾಗಿದ್ದವರು.  ಸಸ್ಯಯಾನಕ್ಕೆ ಈ ಪುಟ್ಟ ಪ್ರಬಂಧ ಬರೆಯಲು ಕಾರಣರಾದ ಅವರಿಗೆ ಓದುಗರೆಲ್ಲರ ಪರವಾಗಿ ಮತ್ತು CPUS ನ ಧನ್ಯವಾದಗಳು. 

  ಹೆಚ್ಚಿನ ಓದಿಗೆ

Ajay, et al. 2012. Mangrove Inventory of India at Community Level. Natl. Acad. Sci. Lett.                         DOI 10.1007/s40009-012-0087-x

Daniel A. Friess  et. al.  The State of the World’s Mangrove Forests: Past, Present, and Future . Annu. Rev. Environ. Resour. 2019. 44:89–115    https://doi.org/10.1146/annurev-environ-101718- 033302

Hogarth, Peter J. (2015). The biology of mangroves and seagrasses. Oxford: Oxford university press.

Pete Bunting, et al. The Global Mangrove Watch—A New 2010 Global Baseline of Mangrove Extent. Remote Sens. 201810(10), 1669. https://doi.org/10.3390/rs10101669

Leave a Reply