You are currently viewing ನಮ್ಮ DNA ಯನ್ನೇ ರೂಪಿಸುವ ವೈರಸ್ಸುಗಳ ಸಂಬಂಧದ ಆಳ-ಅಗಲಗಳ ಸಂಕೀರ್ಣತೆ

ನಮ್ಮ DNA ಯನ್ನೇ ರೂಪಿಸುವ ವೈರಸ್ಸುಗಳ ಸಂಬಂಧದ ಆಳ-ಅಗಲಗಳ ಸಂಕೀರ್ಣತೆ

Half of your genome started out as an infection; if left unchecked, some parts of it can turn deadly all over again.

ವೈರಸ್ಸುಗಳು ಮಾನವ ಕುಲಕ್ಕೆ ಸೋಂಕನ್ನು ಉಂಟುಮಾಡುತ್ತಲೇ ಕೌತುಕಮಯ ಸಂಗತಿಗಳನ್ನು ವಿಕಾಸದಲ್ಲಿ ಪಾಲಿಸುತ್ತಾ ಸಂಕೀರ್ಣತೆಯನ್ನು ದಾಖಲಿಸಿವೆ. ಸೋಂಕು ಉಂಟುಮಾಡಿದ ಅತಿಥೇಯರಲ್ಲಿ ತಮ್ಮದೇ ಆದ ಒಂದು ಛಾಪನ್ನು ಉಳಿಕೆಯಾಗಿಸುವಿಕೆಯನ್ನು ಜತನದಿಂದ ಲಕ್ಷಾಂತರ ವರ್ಷಗಳಿಂದ ಮಾಡಿಕೊಂಡೇ ಬಂದಿವೆ. ಹಾಗಾಗಿಯೇ ನಮ್ಮ ಜೀನೋಮಿನ ಮಹತ್ತರವಾದ ಭಾಗವಾಗಿ ಇಂದಿಗೂ ವೈರಸ್ಸಿನ ಜೀನೋಮು ತುಂಬಿಕೊಂಡಿದೆ. ಈ ವೈರಸ್ಸುಗಳು ಮಾನವರಿಗೆ ಭಯ ಹಾಗೂ ಕೌತುಕವನ್ನು ಒಟ್ಟೊಟ್ಟಾಗಿ ರೂಪಿಸುತ್ತಾ ಭೂಮಂಡಲವನ್ನು ವ್ಯಾಪಿಸಿವೆ. ವಾಸ್ತವವಾಗಿ ವೈರಸ್ಸಿನ ಉಳಿಕೆಯಾದ ಈ ಜೀನೋಮಿನ ತುಣುಕುಗಳು ಕೆಲವೊಂದು ರೋಗಗಳ ವಿರುದ್ಧ ಪ್ರತಿರೋಧ ಉಂಟುಮಾಡುವ ಜವಾಬ್ದಾರಿಯಲ್ಲೂ ಮತ್ತು ಕೆಲವು ಹೊಸತೊಂದು ಕಾಯಿಲೆಯನ್ನು ಮುಂದೊಂದು ದಿನಕ್ಕೆ ಕಾಯ್ದಿರಿಸುವ ಕೆಲಸವನ್ನೂ ನಿರ್ವಹಿಸಿವೆ. ಇಂತಹಾ ಅಚ್ಚರಿಯ ತಿಳಿವಿನ ಹಾದಿಯಲ್ಲಿ ನಡೆದ ವೈರುಧ್ಯಗಳ ತರ್ಕಗಳೂ ಜೊತೆಯಾಗಿ ಭಯವನ್ನು ತಾರಕಕ್ಕೇರಿಸುವ ಸಾಂಕ್ರಾಮಿಕ ಸನ್ನಿವೇಶವನ್ನು ನಾವೀಗ ಕಾಣುತ್ತಿದ್ದೇವೆ.

       ಗಮನವನ್ನೇ ಕೊಡದಿದ್ದ ಸಾಧಾರಣವಾದ ಶೀತ, ನೆಗಡಿ, ಕೆಮ್ಮುಗಳಿಂದ SARS, MERS, Flue, Ebola, HIV ಎಂಬ ಭಯಂಕರ ಹೆಸರುಗಳಿಂದ ಭಯದ ಶಿಖರವನ್ನು ತಲುಪಿಸಿವೆ. ವೈರಸ್ಸುಗಳು ಆತ್ಯಂತಿಕ ಪರಾವಲಂಬಿಗಳು. ಜೀವಿಯ ಹೊರಗಿದ್ದರೆ ಸಾಧಾರಣ ವಸ್ತುವಾದ ವೈರಸ್ಸು ಜೀವಿಕೋಶದ ಒಳಗೆ ತನ್ನನ್ನು ತಾನೇ ಪ್ರತಿರೂಪಿಸುವ ಜೀವಿಯಂತೆ! ಶೀತ, ನೆಗಡಿಯ ರೋಗಕಾರಕ ವೈರಸ್ಸುಗಳಂತೂ ರೋಗದಿಂದ ವಿಮುಕ್ತಿಪಡೆದರೂ ನಮ್ಮೊಳಗೊಂದಾಗಿ, ಡಿಎನ್‌ಎಯಲ್ಲಿ ಉಳಿಕೆಯಾಗಿ ಕುಳಿತುಕೊಳ್ಳುತ್ತದೆ. ಹೀಗೆ ಎಲ್ಲಾ ಜೀವಿ ಸಂಕುಲವನ್ನೂ ವ್ಯಾಪಿಸಿರುವ ವೈರಸ್ಸಿನ ತಾಣವು ಅಕ್ಷರಶಃ ಭೂಮಂಡಲದಲ್ಲಿ ಏನನ್ನೂ ಬಿಟ್ಟಿಲ್ಲ. ಹಾಗಾಗಿ ಅವುಗಳ ವಿವಿಧತೆಯಂತೂ ಅಪಾರ. ಒಂದು ಅಂದಾಜಿನಂತೆ ವಿಶ್ವದ ಒಟ್ಟೂ ನಕ್ಷತ್ರಗಳ ಸಂಖ್ಯೆಯನ್ನೂ ಮೀರುವಷ್ಟು ವೈರಸ್ಸುಗಳಿವೆಯಂತೆ. ಜೆನೆಟಿಕ್‌ ಮಾಲೆಕ್ಯೂಲ್‌ ಆದ ನ್ಯುಕ್ಲಿಯೆಕ್‌ ಆಮ್ಲದ ಮೂಲ ಸಂರಚನೆಯಲ್ಲಿ ಪ್ರೊಟೀನನ್ನು ಹೊದಿಕೆಯಾಗಿಸಿದ ವೈರಸ್ಸು, ಜೀವಿ ಹಾಗೂ ನಿರ್ಜೀವಿ ಎರಡೂ ಬಗೆಯಲ್ಲೂ ವರ್ತಿಸುತ್ತದೆ. ಹಲವು ವಿಜ್ಞಾನಿಗಳು ಜೀವಿಗಳೆಂದೂ ಒಪ್ಪದಿದ್ದರೂ, ಅನೇಕರು ಜೀವಿಗಳೇ ಎಂಬಂತೆ ವಾದಿಸುತ್ತಾರೆ. ಒಂದಂತೂ ಸ್ಪಷ್ಟವಾಗಿದೆ. ಜೀವಿವಿಕಾಸದ ಮೂಲದ್ರವ್ಯ ನ್ಯುಕ್ಲಿಯೆಕ್‌ ಆಮ್ಲದ ಮೂಲವನ್ನೇ ಹೊಂದಿರುವ ವೈರಸ್ಸುಗಳು ಜೀವಿಗಳ ಮೂಲ ಪರಮಾಣುಗಳೋ ಎಂಬಂತೆ ತರ್ಕಿಸಲೂ ಸಾಧ್ಯವಿದೆ. ಹೀಗಿದ್ದೇ ವೈರಸ್ಸುಗಳು ಇಲ್ಲದಿದ್ದರೆ ಮಾನವ ಜೀವಿಯಂತೂ ಇರುತ್ತಿರಲಿಲ್ಲವೇನೋ ಎಂಬಂತಹಾ ಅಚ್ಚರಿಯ ನೈಸರ್ಗಿಕ ಹಾಗೂ ಅತ್ಯಂತ ಸಂಕೀರ್ಣ ಶರೀರಕ್ರಿಯೆಗಳನ್ನು ನಿರ್ವಹಿಸುವ ನೆನಪುಗಳ ವಾರಸುದಾರ ಜೀನ್‌ಗಳಾಗಿ ರೂಪಾಂತರಗೊಂಡಿವೆ. ಹೌದು ಹಲವು ಜೀನುಗಳು ರೂಪಾಂತರಗೊಂಡ ವೈರಸ್ಸುಗಳೇ ಆಗಿವೆ.    

       ಈ ಪ್ರಬಂಧದ ಆರಂಭದ ಸಾಲುಗಳಲ್ಲಿ ಪ್ರಸ್ತಾಪಿಸಿದ ಎಚ್ಚರಿಕೆಯಂತೆ ನಮ್ಮ ಇಡೀ ಜೀನೋಮಿನ ಕಟ್ಟುವಿಕೆಯೇ ಸೋಂಕುಗಳಿಂದ ಆರಂಭವಾಗಿದೆ. (Half of your genome started out as an infection; if left unchecked, some parts of it can turn deadly all over again) ಅದನ್ನೇನಾದರು ಅರಿತು ನಿಭಾಯಿಸದೆ ಹೋದರೆ, ಎಲ್ಲವೂ ವಿನಾಶದ ಹಾದಿಯಾದೀತು! ನಮ್ಮ ಜೀನೋಮು ಕೋಟ್ಯಾಂತರ ಮಾಹಿತಿಗಳನ್ನು ಬಿಡಿ ಬಿಡಿಯಾಗಿ ಕಟ್ಟಿಕೊಂಡ ಸಂಕೀರ್ಣವಾದ ಸಮೂಹ. ಸರಿ ಸುಮಾರು 22,000 ಜೀನುಗಳು ಎಲ್ಲವನ್ನೂ ಒಳಗೊಂಡು ನಿರ್ವಹಿಸುತ್ತಿವೆ. ಆದರೆ ಇವೆಲ್ಲವೂ ಮಾನವ ಮೂಲದವಲ್ಲ ಎಂದರೆ ಅಚ್ಚರಿಯಾದೀತು. ಆದರೆ ಅದೇ ನಿಜ. ನಮ್ಮ ಡಿ.ಎನ್‌.ಎ.ಯ ಸುಮಾರು ಪ್ರತಿಶತ 8ರಷ್ಟು ಹಿಂದೆಂದೋ ಉಂಟಾಗಿದ್ದ ಪ್ರಾಚೀನ ವೈರಸ್ಸಿನಿಂದ ಉಳಿಕೆಯಾಗಿ ನಮ್ಮೊಳಗೆ ಬೆಸೆದುಕೊಂಡಿವೆ. ಅಷ್ಟಕ್ಕೂ ಸಾಲದೆಂಬಂತೆ ಉಳಿದದ್ದರಲ್ಲಿ ಪ್ರತಿಶತ 40ರಷ್ಟು ಕೂಡ ಮತ್ತಾವುದೋ ವೈರಸ್ಸುಗಳಿಂದ ಮಾಹಿತಿಯ ಪುನರಾವರ್ತಿತ ಗುರುತುಗಳ ತುಣುಕುಗಳಾಗಿವೆ. ಇವೆಲ್ಲವೂ ನಮ್ಮೊಳಗೆ ಸೇರಿಕೊಳ್ಳುವ ರಾಚನಿಕ ಸನ್ನಿವೇಶಗಳು ವಿಕಾಸದ ಹಾದಿಯಲ್ಲಿ ನಡೆದಿವೆ. ಹಾಗೆ ಸೋಂಕುಗಳಿಂದ ಹಾರಿದ ಜೀನಿನ ತುಣುಕುಗಳು ಅಲ್ಲಲ್ಲಿ ನಮ್ಮ ಜೀನೋಮಿನಲ್ಲಿ ಶಾಶ್ವತ ಸ್ಥಾನ ಪಡೆದಿವೆ. ಈ ತುಣುಕುಗಳ ಆಳದಲ್ಲಿ ನಮ್ಮೊಳಗೂ ಕ್ಯಾನ್ಸರ್‌, ಹಿಮೋಫಿಲಿಯಾ (Hemophilia), ಮಲ್ಟಿಪಲ್‌ ಸ್ಕ್ಲಿರೊಸಿಸ್‌ (Multiple sclerosis) ಅಂತಹಾ ಮಾರಣಾಂತಿಕ ರೋಗ ತರುವ ಸೂಕ್ಷ್ಮಗಳಿವೆ. 

       ಹೀಗೆ ಹಿಂದೊಮ್ಮೆ ಸಾಧಾರಣ, ಶೀತ, ನೆಗಡಿ, ಕೆಮ್ಮು ತರುವ ವೈರಸ್ಸುಗಳು ಮುಂದೊಮ್ಮೆ ಭಯಂಕರ ರೋಗಗಳ ತರುವ ಬಗೆಗಿನ ತಿಳಿವಳಿಕೆಯ ಎಚ್ಚರಿಕೆಯು ಇನ್ನೂ ಹೊಸತು. ಆದರೆ ಹಾಗೆ ಹಾರಿ ಬಂದು ಕುಳಿತುಕೊಳ್ಳುವ ಜೀನುಗಳ ಅಚ್ಚರಿಯ ಸಂಶೋಧನೆಯು 1940ರ ದಶಕದಷ್ಟು ಹಳೆಯದು. ಬಾರ್ಬರಾ ಮೆಕ್ಲಿಂಕ್‌ಟಾಕ್‌ ಎಂಬ ಮಹಿಳೆಯ ಕ್ರಾಂತಿಕಾರಿ ಶೋಧ ಅದು. ಮೆಕ್ಕೆಜೋಳದ ಒಂದೇ ತೆನೆಯಲ್ಲಿ ಹಲವು ಬಣ್ಣಗಳ ಕಾಳುಗಳ ಆನುವಂಶಿಕ ಕುತೂಹಲದಿಂದ ಅಧ್ಯಯನಗೊಂಡು ದಶಕಗಳ ಕಾಲದ ಅವರ ಶ್ರಮದ ಫಲ. ಡಿ.ಎನ್‌.ಎ.ಯ ರಚನೆಯೇ ತಿಳಿದಿರದ ಆ ಕಾಲದಲ್ಲಿ ಈ ಬಗೆಯ “ಜಂಪಿಂಗ್‌ ಜೀನು”ಗಳ ಜೀನು ಹಾರಾಟದ ವಿಚಾರ ನಂಬಲೇ ಸಾಧ್ಯವಿರದ್ದು. ಮುಂದೆ ಸರಿ ಸುಮಾರು ನಾಲ್ಕು ದಶಕಗಳ ನಂತರ 1983ರಲ್ಲಿ ಬಾರ್ಬರಾ ಅವರಿಗೆ ಆ ಶೋಧಕ್ಕೆ ನೊಬೆಲ್‌ ಪುರಸ್ಕಾರ ಬಂದಿತ್ತು. ಬಾರ್ಬರಾ ಏನೋ ಜೀನುಗಳ ಹಾರಾಟದ ಸುಳುಹು ನೀಡಿ, ಕುರುಹು ಕೊಟ್ಟಿದ್ದರೂ ಹೀಗೆ ನಮ್ಮೊಳಗೂ ವೈರಸ್ಸುಗಳು ಒಮ್ಮೆ ಸೋಂಕು ತಗುಲಿ ಉಳಿಕೆಯಾದವೆಂಬ ಸಂಗತಿಯು ಇತ್ತೀಚೆಗಿನದು. ಮಾನವ ಜೀನೋಮಿನ ವಿವರಗಳ ಹಿಂದೆ ಹೋಗಿದ್ದರ ಫಲ ಒಂದಷ್ಟು ಅನುಮಾನ, ಕುತೂಹಲ ಹಾಗೂ ಬೆರಗನ್ನೂ ವೈರಸ್ಸುಗಳ ಅಧ್ಯಯನಗಳಲ್ಲಿ ತೆರೆಯುತ್ತಿದೆ.

       ನಮ್ಮ ಡಿ.ಎನ್‌.ಎ.ಯು ಸರಿ ಸುಮಾರು ಏನಿಲ್ಲವೆಂದರೂ 1,00,000 ವೈರಸ್ಸಿನ ತುಣುಕಗಳನ್ನು ಒಳಗೊಂಡಿದೆಯಂತೆ. ಇಡೀ ಮಾನವ ಕುಲದ ಪೂರ್ವಿಕರ ಸಾವು-ಬದುಕಿನ ವಿಕಾಸವು ಸೇರಿಸಿ ಕೊಟ್ಟ ಈ ತುಣುಕುಗಳನ್ನು ನಮ್ಮೊಳಗಿಟ್ಟುಕೊಂಡು ಲಕ್ಷಾಂತರ ವರ್ಷಗಳೇ ಸಂದಿವೆ. ಆದರೆ ಅವೆಲ್ಲವು ಇದೀಗ ಹೊರ ಜಗತ್ತಿನ ವೈಜ್ಞಾನಿಕತೆಗೆ ಪಾತ್ರಗಳಾಗಿವೆ. ಈ ಎಲ್ಲಾ ವೈರಸ್ಸುಗಳು ಒಂದೇ ಸಾಮಾನ್ಯ ಗುಂಪಿಗೆ ಸೇರಿದವುಗಳಾಗಿವೆ. ಆ ಗುಂಪಿನಲ್ಲಿ ಏಡ್ಸ್‌ ತರುವ ಎಚ್‌.ಐವಿ.(HIV) ವೈರಸ್ಸೂ ಕೂಡ ಇದೆ. ಈ ಸಾಮಾನ್ಯ ಗುಂಪು ರೆಟ್ರೊವೈರಸ್ಸುಗಳ ಗುಂಪೇ ಆಗಿದೆ. ಸಂತತಿಗಳಿಂದ ಸಂತತಿಗೆ ಹಾಯ್ದು ಬರುವುದಲ್ಲದೇ, ಇಡೀ ಮಾನವ ಹರಹನ್ನೂ ಒಳಗೊಂಡಿದೆ. ಅಚ್ಚರಿ ಎಂದರೆ ಒಂದೇ ಒಂದು ಸಾಮಾನ್ಯ ಸೋಂಕೂ ಸಹಾ ಉಳಿಕೆಯಾಗಿ ನೂರಾರು ನೆನಪುಗಳನ್ನು ನಮ್ಮ ಡಿ.ಎನ್.ಎ. ಗೆ ತನ್ನಂತಹ ಜೀನುಗಳಲ್ಲಿ ಉಳಿಸುತ್ತದೆಯಂತೆ. ಹಾಗಾಗಿ ವೈರಸ್ಸಿನ ಪ್ರತೀ ಸೋಂಕೂ ಈಗಿನ ಕೊರೊನಾವೂ ಸೇರಿದಂತೆ ನಮ್ಮೊಳಗೇ ಶಾಶ್ವತ ನೆನಪಾಗಿ ಉಳಿದು ಮುಂದಿನ ಸಂತತಿಗೆ ಹೋಗಲಿದೆ. ಇದು ಬರಿ ಮಾನವ ಜನಾಂಗದು ಬಿಡಿ. ಇಂತಹದೇ ರೆಟ್ರೊವೈರಸ್ಸುಗಳ ಕೊಟ್ಯಾಂತರ ಸಂತತಿಗಳು ಇನ್ನಿತರೇ ಜೀವಿಗಳಲ್ಲೂ ಉಳಿಕೆಯಾಗುತ್ತಲೇ ಬಂದಿದ್ದರೂ ಆಶ್ಚರ್ಯವಿಲ್ಲ.

ಈ ವೈರಸ್ಸುಗಳು ಕೇವಲ ನ್ಯುಕ್ಲಿಯಕ್‌ ಆಮ್ಲದ ತುಣುಕಲ್ಲದೆ, ತಮ್ಮೊಂದಿಗಿನ ಪ್ರೊಟೀನ್‌ ಅನ್ನೂ ಉಳಿಕೆಯಾಗಿಸುವ ಬಗೆಗಿನ ವಿಶಿಷ್ಟವಾದ ಅಧ್ಯಯನವನ್ನು ಫ್ರೆಂಚ್‌ ವಿಜ್ಞಾನಿಗಳು ಮಾಡಿದ್ದಾರೆ. ಗಸ್ಟೆವ್‌ ರಸ್ಸಿ (Gustave Roussy) ಮೆಮೊರಿಯಲ್‌ ಕ್ಯಾನ್ಸರ್‌ ಸಂಸ್ಥೆಯ ಡಾ. ಒದಿಲ್‌ ಹೈಡ್‌ಮನ್‌ ಎಂಬಾ ಮಹಿಳಾ ವೈದ್ಯವಿಜ್ಞಾನಿಯ ತಂಡದವರು ಗರ್ಭವತಿಯಾದ ಹೆಣ್ಣುಮಕ್ಕಳ ರಕ್ತದಲ್ಲಿ ವಿಶಿಷ್ಟವಾದ ವೈರಸ್‌ ಪ್ರೊಟೀನ್‌ ತುಣುಕನ್ನು ೨೦೧೭ ರಲ್ಲಿಯೇ ಪತ್ತೆಹಚ್ಚಿದ್ದರು. ಅದು ಪುರಾತನ ವೈರಸ್ಸಿನ ಕವಚದ ಪ್ರೊಟೀನಿನ ತುಣುಕೆಂದು ಅಂದಾಜಿಸಿ ಅದಕ್ಕೆ ಹಿಮೊ(HEMO-Human Endogenous MER34)ಎಂದು ಹೆಸರಿಟ್ಟು ಅದರ ಜೈವಿಕ ಪಾಲುದಾರಿಕೆಯ ವಿವರಗಳನ್ನು ಪತ್ತೆ ಹಚ್ಚಿದ್ದಾರೆ. ರಕ್ತದಲ್ಲಿರುವುದೇ ಅಲ್ಲದೆ ಅದು ಸ್ಟೆಮ್‌ ಜೀವಿಕೋಶದೊಳಗೂ ಇರುವ ಬಗ್ಗೆ ವಿವರಗಳನ್ನು ನೀಡಿದ್ದಾರೆ.  ಹೀಗೆ ಪತ್ತೆ ಹಚ್ಚಿರುವ ಈ ಪ್ರೊಟೀನಿನ ತುಣುಕು ನಮ್ಮ ಭ್ರೂಣವು ತಾಯಿಗೆ ಹೊಂದಿರುವ ಸಂಬಂಧದ ಹೊಕ್ಕಳು ಬಳ್ಳಿಯಲ್ಲಿ ವಿಕಾಸಗೊಂಡು ನೆಲೆಯಾಗಿ ಸಹಕರಿಸುತ್ತಿದೆಯಂತೆ. ಕೊರೊನಾ ವೈರಸ್ಸಿನ ದಾಳಿಗೆ ಬೆಚ್ಚಿರುವ ಓದುಗರಿಗೆ ಈ ಸಂಗತಿಯನ್ನು ಕೇಳಿ ಬೆಚ್ಚಿ ಬೆವರಿಳಿದಂತಾದರೆ ಅಚ್ಚರಿಯಲ್ಲ.

ಅದರ ಮುಂದುವರಿಕೆಯ ಅಧ್ಯಯನಗಳಲ್ಲಿ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ವೈರಾಲಜಿಸ್ಟ್‌ ಎರಿಸ್‌ ಕಟ್ಜೊರಕಿಸ್‌ (Aris Katzourakis) ಮತ್ತವರ ಸಹವರ್ತಿಗಳು ಇದೇ ಹಿಮೊ ಪ್ರೊಟೀನ್‌ ಮುಂದೆ ಕಂಡರಿಯದ ಸಮಸ್ಯೆಗಳಿಗೂ ಕಾರಣವಾಗುವ ಬಗೆಗೆ ಎಚ್ಚರಿಕೆಯ ಮಾತುಗಳನ್ನಾಡಿದ್ದಾರೆ. ನಮ್ಮನ್ನು ಕಾಯುವ ಕಾಯಗಳೇ ಮುಂದೆ ಕೊಲ್ಲವ ಅಸ್ತ್ರಗಳು ಆದಾವೆಂಬ ಅನುಮಾನವನ್ನು ಮುಂದೆ ಅವೇ ವೈರಾಣುಗಳ ನೆನಪುಗಳು ಕ್ಯಾನ್ಸರಿನ ವಿಕಾಸಕ್ಕೆ ಎಡೆಮಾಡಬಲ್ಲವೆಂಬ ವಿವರಗಳನ್ನು ಪ್ರಕಟಿಸಿದ್ದಾರೆ. ಅದರ ಜೊತೆಗೇ ಇದೇ ರೆಟ್ರೊವೈರಸ್ಸುಗಳು ಮೊದಲ ಬಾರಿಯ ಸೋಂಕಿನಲ್ಲಿ ಭಾರಿ ಕೋಲಾಹಲವೆಬ್ಬಿಸಿದರೂ ಮತ್ತವುಗಳ ಮ್ಯೂಟೇಷನ್ನುಗಳಲ್ಲಿ ಅಬ್ಬರ ಅಡಗುವ ಬಗೆಗೂ ಸಮಾಧಾನದ ವಿಷಯಗಳನ್ನೂ ಹೊರಹಾಕಿದ್ದಾರೆ.

ಅಂದರೆ ಸಹಜವಾಗಿ ಈವರೆಗೂ ಸಮಾಧಾನಿಸುತ್ತಿದ್ದ ವಿಷಯ ಎದುರಾಗುತ್ತದೆ. ಅಂದರೆ ಸೋಂಕು ಬಂದವರಲ್ಲಿ ಉಂಟಾದ ಪ್ರತಿರೋಧವನ್ನು ತಡೆದುಕೊಂಡೂ ಮತ್ತೆಯೂ ಸೋಂಕು ತರುತ್ತಾ ಬಾಧಿಸಲು ತಮ್ಮೊಳಗೇ ಬೇಕಾದ ಮಾರ್ಪಾಡುಗಳನ್ನೂ ವೈರಸ್ಸುಗಳು ಅಷ್ಟು ಸುಲಭವಾಗಿ ಮಾಡಿಕೊಳ್ಳಲಾರವೇನೋ! ಇದನ್ನೇ ಪ್ರಸ್ತುತ ಸೋಂಕು ಬಂದವರಲ್ಲೂ ಗಮನಿಸಿದ ವಿಚಾರಗಳನ್ನು ಬೆಂಬಲಿಸುವ ಪ್ರಕ್ರಿಯೆಗಳೂ ಕೆಲವೆಡೆ ಜಾರಿಯಲ್ಲಿವೆ. ಅದರಂತೆಯೇ ಒಮ್ಮೆ ಸೋಂಕು ಉಂಟಾದರೆ ಕೆಲವು ಕಾಲದವರೆಗೂ ವ್ಯಾಕ್ಸೀನು ಬಳಕೆಯನ್ನು ನಿಷೇಧಿಸಲಾಗುತ್ತದೆ. ಈ ಸಮಯದಲ್ಲಿ ಅವರಲ್ಲಾಗುವ ಪ್ರತಿರೋಧವನ್ನೂ ದೇಹವು ಬಳಕೆಗೆ ಅಣಿಗೊಳಿಸುವುದನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಇಂತಹಾ ನಿರ್ದೇಶನ. ಇವೆಲ್ಲವೂ ಸುಲಭವಾಗಿ ವಿವರಿಸಲಾಗದ ಸಂಕೀರ್ಣ ಸಂಗತಿಗಳು. ಇವುಗಳನ್ನೆಲ್ಲಾ ನಿಭಾಯಿಸುವ ಮಾಹಿತಿಯ ಸಂಗ್ರಾಹಕವಾದ ಡಿ.ಎನ್.ಎ.ಯು ಒಟ್ಟಾರೆಯಾಗಿ ವೈರಸ್ಸುಗಳ ಉಳಿಕೆಗಳಿಂದಲೇ ಸಂರಚನೆಯನ್ನು ಹೊಂದಿದ್ದು ಹುಟ್ಟಿನಿಂದ ಸಾವಿನವರೆಗೂ ನಿಭಾಯಿಸುವ ವಿವಿಧ ರೋಗ, ಸ್ವಾಸ್ಥ, ಮುಂತಾದ ಎಲ್ಲವನ್ನೂ ಸಾಂದ್ರವಾಗಿಸಿವೆ.

             

       ಅಷ್ಟೇ ಅಲ್ಲ. ಹಲವಾರು ರೆಟ್ರೊವೈರಸ್ಸುಗಳು ಇತರೆ ವೈರಸ್ಸುಗಳಿಂದಾಗ ಸಮಸ್ಯೆಗಳಿಗೆ ಪರಿಹಾರದ ಕೆಲಸಗಳನ್ನೂ ನಿಭಾಯಿಸುತ್ತಿವೆಯಂತೆ. ನಮ್ಮದೇ ಭ್ರೂಣ ಹಾಗೂ ಹೊಕ್ಕುಳು ಬಳ್ಳಿಯ ವಿಕಾಸದ ಸಾಹಚರ್ಯದ ಜೊತೆಗೆ ಇರುವ ಹಿಮೊ ಸಹಾ ಇತರೇ ಮಾನವ ಸಂಬಂಧಿ ಸಸ್ತನಿಗಳಲ್ಲಿಯೂ ಕಂಡುಬಂದಿರುವ ಬಗೆಗೆ  ಒದಿಲ್‌ ಹೈಡ್‌ಮನ್‌ ವಿವರಿಸಿದ್ದಾರೆ. ಹೀಗೆ ಈ ವೈರಸ್ಸುಗಳ ಜೈವಿಕ-ಜಾಲದ ಆಳ-ಅಗಲವು ತಿಳಿಯುತ್ತಲೇ ಹೋದಂತೆ ವಿಸ್ತರಿಸುತ್ತಲೇ ಇರುತ್ತದೆ. ಹಾಗಾಗಿ ಇವೇನೂ ಕೇವಲ ಮಾನವ ಜೈವಿಕ ಸಂಗತಿಗಳಿಗಷ್ಟೇ ಸೀಮಿತವಾಗಿಲ್ಲ. ಬಹುಪಾಲು ಜೀವಿಗಳನ್ನೂ ಆವರಿಸಿದೆ. ಒಂದು ಚಿಕ್ಕ ಉದಾಹರಣೆ ಎಂದರೆ ಸಾಮಾನ್ಯವಾಗಿ ಸಸ್ತನಿಗಳಲ್ಲಿ ಕಂಡುಬರುವ ಕೆಲವು ರೆಟ್ರೊವೈರಸ್ಸುಗಳು ಮೀನುಗಳಲ್ಲೂ ಕಂಡು ಬಂದಿರುವ ಬಗ್ಗೆ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ವೈರಾಲಜಿಸ್ಟ್‌ ಎರಿಸ್‌ ಕಟ್ಜೊರಕಿಸ್‌ (Aris Katzourakis) ತಮ್ಮ ಅಧ್ಯಯನಗಳಲ್ಲಿ ದಾಖಲಿಸಿದ್ದಾರೆ. ಅದಕ್ಕೆ ಯಾವುದೋ ಸಮುದ್ರ ವಾತಾವರಣದ ವೈರಸ್ಸಿನ ಕಾರಣವಿದ್ದಿರುವ ಬಗೆಗೆ ಅವರ ವಿವರಣೆಗಳಿವೆ. ಹೀಗೆ ವೈರಸ್ಸುಗಳ ಜಾಲದ ಆದಿ-ಅಂತ್ಯಗಳಿಲ್ಲದ ಸಂಕೀರ್ಣ ಸಂಕಟವನ್ನು ಇಡಿಯಾಗಿ ತೆರೆದಿಟ್ಟಿವೆ.

       ಸದ್ಯಕ್ಕೆ ನಮ್ಮೊಳಗಂತೂ ವೈರಸುಗಳ ಜಾಲದಲ್ಲಿ ನಿರ್ವಹಣೆಗೆ ಒಳಗಾಗಿರುವ ಜೀನುಗಳು ಹಾಗೂ ಪ್ರೊಟೀನುಗಳ ಮಹಾಪೂರವೇ ಇದೆ. ಅವುಗಳ ಜೈವಿಕ ವ್ಯವಹಾರಗಳಲ್ಲಿ ತುಸುವೇ ಬದಲಾವಣೆಗಳೂ ಅಗಾಧ ವೈಪರೀತ್ಯವನ್ನೂ ತರುತ್ತಿವೆ. ಹಾಗಾಗಿಯೇ ಜೈವಿಕ ವಿಚಿತ್ರಗಳು ಜರುಗುತ್ತಿವೆ. ಆದಿಯ ಜೈವಿಕ ಕುರುಹುಗಳಂತಿರುವ ವೈರಸ್ಸುಗಳ ಜಾಣತನ ಎಷ್ಟಿದೆ ಎಂದರೆ, ತಮ್ಮನ್ನು ತಾವು ಕಳೆದುಕೊಳ್ಳದಂತೆ ಸ್ಟೆಮ್‌ ಜೀವಿಕೋಶಗಳಲ್ಲೇ ತಮ್ಮ ಛಾಫನ್ನು ಉಳಿಸಿಕೊಂಡು ನಿಭಾಯಿಸುವಷ್ಟಿದೆ. ಆದ್ದರಿಂದ ಎಳೆಯ ಭ್ರೂಣವು ಈ ವೈರಸ್ಸುಗಳ ಚಾಲಾಕಿತನವನ್ನು ಅನುಭವಿಸುತ್ತಲೇ ಅವುಗಳ ಲಾಭವನ್ನೂ ಮೀರಿ ಜಯಿಸುತ್ತವೆ. ಬೆಳೆದು ವಯಸ್ಸಾದಂತೆ ಇವುಗಳ ಬೇರೊಂದು ಮುಖವೂ ತೆರೆದುಕೊಳ್ಳುತ್ತದೆ. ಹಾಗಾಗಿಯೇ ಕ್ಯಾನ್ಸರ್‌ ಅಂತಹಾ ಮಾರಣಾಂತಿಕ ಜೀವಿಕೋಶಗಳಲ್ಲಿ ಜೀವಿಗೊಂದು ಅಂತಿಮ ರೂಪವನ್ನು ತಂದಿಟ್ಟಿವೆಯೇನೋ!

       ಹಾಗಾಗಿ ಕೊರೊನಾ.., ನೀ ಮಾಡಿದ್ದು ಸರಿನಾ.. ಎಂಬ ಸೋಗಿನ ಪ್ರಶ್ನೆಯಲ್ಲಾಗಲಿ ಗೊ ಕೊರೊನಾ, ಗೊ ಕೊರೊನಾ ಕೊರೋನಾ ಗೊ..ಗೊ.. ಎಂದು ಗಂಟೆ ಜಾಗಟೆಗಳಿಂದ ಹೊಡೆದಟ್ಟುವ ಮಾಯಾ-ಎಡವಟ್ಟುಗಳಲ್ಲಿ ವೈರಸ್ಸುಗಳ ಚತುರತೆಯನ್ನು ನಿಭಾಯಿಸುವ ತಂತ್ರಗಳಿಲ್ಲ. ಇಡೀ ಜೀವ-ಜಾಲವನ್ನು ಆವರಿಸಿ ಸಂಕೀರ್ಣವಾದರೂ ಸಮಸ್ಥಿತಿಯನ್ನೂ ನಿಭಾಯಿಸುವಷ್ಟು ಜೈವಿಕ ಮಾಹಿತಿಯ ಆಳ-ಅಗಲಗಳ ಅಳತೆಗೋಲು ಅಷ್ಟು ಸುಲಭವಾದ್ದಲ್ಲ. ಕಡೆಯಲ್ಲಿ ಮತ್ತೋರ್ವ ವಿಶ್ವಾಸಾರ್ಹವಾದ ವಿಷಯವನ್ನು ಪ್ರಸ್ತಾಪಿಸಿ ಮುಗಿಸುತ್ತೇನೆ.

       ಕಳೆದ ವರ್ಷವಷ್ಟೇ (2020) ಪ್ರಕಟಗೊಂಡ Some Assembly Required: Decoding four billions years of life from ancient fossils to DNA  ಎಂಬ ಪುಸ್ತಕದ ಬಗೆಗೆ ಎರಡು ಮಾತು. ಅದರ ಕರ್ತೃ ಅಮೆರಿಕದ ಷಿಕಾಗೊ ವಿಶ್ವವಿದ್ಯಾಲಯದ ನೀಲ್‌ ಶುಬಿನ್‌ (Neil Shubin) ಎಂಬ ಪಳೆಯುಳಿಕೆ ವಿಜ್ಞಾನ ಹಾಗೂ ಜೀವಿವಿಕಾಸ ವಿಜ್ಞಾನದ ಪ್ರೊಫೆಸರ್‌. ಜಲಚರಿಗಳು ಭೂಚರಿಗಳಾದ ವಾಸ್ತವ ಪಳೆಯುಳಿಕೆಯ ಮೂಲಕ ಜೀವಿಜಗತ್ತಿನಲ್ಲಿ ಪರಿಚಿತರು. ಅವರ ಈ ಪುಸ್ತಕವೇ ಇಡೀ ಜೀವಜಾಲದ ಆನುವಂಶಿಕ ಕೋಡ್‌ಗಳ ಸಂಚಾರವನ್ನು ಈಗಿನ ಡಿ.ಎನ್‌.ಎ.ಯ ವರೆಗೂ ಹುಡುಕಾಟದ ಕಥಾನಕವನ್ನು ಅತ್ಯಂತ ಜೈವಿಕ ದಾರ್ಶನಿಕವಾಗಿ ಬಣ್ಣಿಸಿದ್ದಾರೆ. ಅವೆಲ್ಲವುಗಳ ಸಂಕೀರ್ಣತೆಯೊಳಗಿನ ಬೆರಗನ್ನೂ ಸಹಾ. ಅವರೆನ್ನುತ್ತಾರೆ, “ಜೀವಿಗಳಷ್ಟೇ ಆಯುಸ್ಸನ್ನೂ ಸವೆಸಿರುವ ವೈರಸ್ಸುಗಳಿಗೆ, ಸೋಂಕು ಮಾಡುವುದಕ್ಕಿಂತಾ ಸುಲಭವಾದ ಸಂಗತಿಯು ಮತ್ತೊಂದಿಲ್ಲ, ವೈರಸ್ಸುಗಳು ನಮ್ಮ ವಿಶ್ವದಲ್ಲಿನ ಎಲ್ಲಾ ನಕ್ಷತ್ರಗಳು, ಗ್ರಹ-ಉಪಗ್ರಹಗಳ ಒಟ್ಟಾರೆಯ ಸಂಖ್ಯೆಯನ್ನೂ ಮೀರುತ್ತವೆ”. ಈ ಅಗಣಿತ ಲೆಕ್ಕಾಚಾರದ ಅಗೋಚರ ಬಿಂದುವೇ ಬದುಕಿನ ಆಶಾಕಿರಣ.    

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್.

ಹೆಚ್ಚಿನ ಓದಿಗೆ:

1. Aris Katzourakis, Andrew Rambaut and Oliver G. Pybus., 2005. The evolutionary dynamics of endogenous retroviruses.  TRENDS in Microbiology. Vol.13 No.10 October 2005. doi:10.1016/j.tim.2005.08.004.

2. Odile Heidmanna, Anthony Béguina, Janio Paterninaa, Raphaël Berthiera, Marc Delogerc, Olivia Bawad and Thierry Heidmann., 2017. HEMO, an ancestral endogenous retroviral envelope protein shed in the blood of pregnant women and expressed in pluripotent stem cells and tumors.   https://www.pnas.org/content/114/32/E6642

3. Neil Shibun., 2020. Some assembly required: Decoding four billion years of life, from ancient fossils to DNA. Pantheon Books, New York.

This Post Has 2 Comments

  1. Krishnamurthy B S

    ಇಷ್ಟವಾಯಿತು.. ಮತ್ತೆ ಮತ್ತೆ ಓದಬೇಕು.. ಎಷ್ಟೋಂದು ಮಾಹಿತಗಳು..ಸಂಶೋಧನಾ ವಿವಲಗಳು…ವೈಜ್ಞಾನಿಕ ವಿಚಾರಗಳು.. ಮೋಹಕವೇನಿಸುವ ಬರವಣಿಗೆಯ ಶೈಲಿಯ ವೈವಿಧ್ಯತೆಯೂ…ಅಗಣಿತ ನಮನಗಳು..

  2. ವ್ಯೋಮಕೇಶ

    ವಿಸ್ಮಯಕಾರಿ ಎನ್ನಬಹುದಾದ ವೈರಸ್ಸುಗಳು ಮತ್ತು ಮನುಷ್ಯನ ಅನ್ಯೋನ್ಯ! ಸಂಬಂಧದ ಬಗ್ಗೆ ಹಲವಾರು ವೈಜ್ಞಾನಿಕ ಮತ್ತು ವೈದ್ಯಕೀಯ ಸಂಗತಿಗಳನ್ನು ಒಳಗೊಂಡ ವಿಶಿಷ್ಟ ಲೇಖನ. ಧನ್ಯವಾದಗಳು ಸರ್.

Leave a Reply