ದಿನವೂ ಯಾವುದಕ್ಕಾದರೂ ಟೈಮ್ ಎಷ್ಟು? … ಎಂದು ಕೇಳುತ್ತಲೇ ಇರುತ್ತೇವೆ. ಮಕ್ಕಳನ್ನು ಶಾಲೆಗೆ ಕಳಿಸಲು, ಹಾಲು ಬಂತೋ ಇಲ್ಲವೊ ಅಂತಲೋ, ರೈಲಿಗೆ, ಬಸ್ಸಿಗೆ ಎಲ್ಲಿಗಾದರೂ ಹೋಗಬೇಕಾದರೂ, ಅಯ್ಯೋ ಬಿಡಿ ಆಫೀಸಿಗೆ ಹೊರಟರೂ ಅಷ್ಟೇ! ಮನೆಯಲ್ಲಿ ಗೊತ್ತಾಗುವ ಹಾಗೆ ಮುಖ್ಯ ಗೋಡೆಯನ್ನು ಅಲಂಕರಿಸುವ ವಸ್ತು ಎಂದರೆ ಗಡಿಯಾರ. ಸಮಯವನ್ನು ಆಗಾಗ್ಗೆ ಸಮೀಕರಿಸಿಕೊಂಡು ಕೆಲಸಗಳನ್ನು ಮಾಡುತ್ತಲೇ ಧಾವಂತದಿಂದ ಪರಿತಪಿಸುವುವ ಕ್ಷಣಗಳೂ ಹಲವಾರು. ಎಲ್ಲದಕ್ಕೂ ಸಮಯಕ್ಕೆ ಸರಿಯಾಗಿ ಹುಡುಕಾಡುವ ನಾವು ಎಲ್ಲ ಕೆಲಸಗಳಿಗೂ ಗಂಟೆಯ ನಂಟನ್ನು ಇಟ್ಟುಕೊಂಡೇ ಮುನ್ನಡೆಸುತ್ತಿರುತ್ತೇವೆ.
ಎಲ್ಲದಕ್ಕೂ ಗಡಿಯಾರದ ಸಮಯಕ್ಕೆ ಹೊಂದಿಕೊಂಡು ಕೆಲಸಗಳನ್ನು ಮಾಡುವ ನಮಗೆ, ನಮ್ಮ ದೇಹದ ಅನೇಕ ಚಟುವಟಿಕೆಗಳು ಈ ಕಾಲದ ಅನುಸರಣೆಯನ್ನು ಮಾಡುತ್ತಲೇ ನಮ್ಮೆಲ್ಲಾ ಚಟುವಟಿಕೆಗಳನ್ನು ಮಾಡುವ ಬಗ್ಗೆ ಅಚ್ಚರಿ ಮೂಡಿಸಬಹುದು. ಹೌದು, ನಮ್ಮ ನಿದ್ದೆ, ಎಚ್ಚರವಾಗುವ ಸ್ಥಿತಿ, ದೇಹದ ಉಷ್ಣತೆ, ರಕ್ತದ ಒತ್ತಡ ಹೀಗೆ ಹತ್ತು ಹಲವಾರು ದೇಹದ ಕೆಲಸಗಳು ಭೂಮಿಯ ಚಲನೆಯನ್ನು ಅನುಸರಿಸಿ ಹಗಲು-ರಾತ್ರಿಗಳಾಗುವ ಸಮಯದ ಸಮೀಕರಣದಲ್ಲಿ ನಡೆಯುವ ಬಗ್ಗೆ ಶತಮಾನಗಳಿಂದ ತಿಳಿವಳಿಕೆಯು ಹೆಚ್ಚುತ್ತಲೇ ಇದೆ.
ನಾವೇನೋ ಸರಿ ಗಡಿಯಾರವನ್ನು ನೋಡುತ್ತಾ ಕಾಲವನ್ನು ತಿಳಿಯುತ್ತೇವೆ. ಆದರೆ ಬೆಳಗಾಗುತ್ತಲೇ ಕೋಳಿಯ ಕೂಗು ಕೇಳುತ್ತೆ. ಹಕ್ಕಿಗಳ ಚಿಲಿ-ಪಿಲಿ ನಿನಾದವು ಸಹಾ ಮುಂಜಾವನ್ನು ಸುಂದರವಾಗಿಸುತ್ತೆ. ಹಾಗೇಯೆ ಸಂಜೆಯ ಸಮಯವೂ ಕೂಡ ಹಕ್ಕಿಗಳೆಲ್ಲಾ ಗೂಡು ಸೇರುವ ಗಿಜಿ ಗಿಜಿ ಸದ್ದೂ ಸಹಾ ಅಷ್ಟೇ ನಿರಂತರವಾಗಿ ಅಪ್ಯಾಯಮಾನವಾಗಿಸುತ್ತವೆ. ನಾವುಗಳೂ ಸಹಾ ಮುಂಜಾವಿನಲ್ಲಿ ಎಚ್ಚರವಾಗುವ- ರಾತ್ರಿಯಾಗುತ್ತಿದ್ದಂತೆ ನಿದ್ದೆಗೆ ಜಾರುವ ವರ್ತನೆಯಂತೂ ಪ್ರತೀದಿನದಲ್ಲೂ ಅಷ್ಟೇ ಸಹಜವಾಗಿದೆ. ಹಾಗೆನೇ ಅದೆಷ್ಟೋ ಜೀವರಾಶಿಯು ಚಲನೆಯನ್ನು ಪಡೆಯುತ್ತಾ ಜೊತೆ ನಿಯಂತ್ರಣಕ್ಕೂ ತರುತ್ತಾ, ವಿಶ್ರಾಂತಿಯತ್ತ ಸಾಗುವುದೂ ಕೂಡ ದಿನದ ಸಹಜಕ್ರಿಯೆ. ನಮ್ಮ ಅದೆಷ್ಟೋ ಚಟುವಟಿಕೆಗಳು, ನಮಗೆ ತಿಳಿಯದಂತೆಯೆ ಹಗಲಿನ ಬೆಳಕಿನ ಮತ್ತು ರಾತ್ರಿಯ ಕತ್ತಲಿನ ಪ್ರಬಾವಕ್ಕೆ ಒಳಗಾಗಿ ನಡೆಯುತ್ತಿವೆ. ಜೀವಿಗಳ ಬದುಕಿನ ಪ್ರಕ್ರಿಯೆಗಳು ಮತ್ತು ಅವುಗಳಿಗೆ ಸಮೀಕರಣಗೊಂಡ ವರ್ತನೆಗಳು, ಅವುಗಳ ದೈಹಿಕ ನಿರ್ದೇಶನಕ್ಕೆ ಒಳಪಟ್ಟಿರುತ್ತವೆ. ಎಲ್ಲವೂ ಗೊತ್ತಾದ ಕಾಲಬದ್ಧ ಪ್ರತಿಕ್ರಿಯೆಯನ್ನು ನಿಭಾಯಿಸುತ್ತಲೆ ಇರುತ್ತವೆ. ತೀವ್ರಗೊಂಡ ಚಟುವಟಿಕೆಗಳಾಗಲಿ, ಚಲನರಹಿತ ಸ್ಥಿತಿಯ ವರ್ತನೆಗಳಾಗಲಿ, ಹಗಲು-ರಾತ್ರಿಗಳ ವರ್ತುಲವನ್ನು ಪ್ರತಿನಿಧಿಸುತ್ತಾ ಬದುಕಿನ ಬಂಡಿ ನಡೆಯುತ್ತಲೇ ಇದೆ.

ಈ ಭೂಮಿಯ ಮೇಲಿನ ಎಲ್ಲಾ ಜೀವರಾಶಿಗಳಲ್ಲೂ ಕಾಣಬರುವ ಸಾಮಾನ್ಯ ಸಂಗತಿ ಎಂದರೆ, ಅವುಗಳ ದೈನಂದಿನ ಚಕ್ರ! ಅಂದರೆ ಭೂಮಿಯ ತನ್ನ ಸುತ್ತಲೂ ತಾನೇ ತಿರುಗುವ ಪರಿಭ್ರಮಣಕ್ಕೆ ತಕ್ಕಂತೆ ಹಗಲು-ರಾತ್ರಿಗಳನ್ನು ಅನುಸರಿಸಿ ಅವುಗಳ ವರ್ತನೆ. ಇದನ್ನೇನೂ ಯಾವ ಜೀವಿಯೂ ತನ್ನ ಸಂತತಿಗೆ ಹೇಳಿಕೊಡದಿದ್ದರೂ ನಿರಂತರವಾಗಿ ನಡೆದುಕೊಂಡು ಬಂದಿದೆ. ಹಾಗಾಗಿಯೇ ಭೂಮಿಯ ಮೇಲೆ ಎಲ್ಲ ಕಡೆ ಹಗಲು ರಾತ್ರಿಗಳು ಒಂದೇ ಬಗೆಯಲ್ಲಿ ಇರದಿದ್ದರೂ ಆಯಾ ಸಮಯವನ್ನು ಹೊಂದಿಕೊಂಡು ಆಯಾ ಸ್ಥಳಗಳಲ್ಲಿ ಜೀವಿಗಳು ಬದುಕು ನೀಗುತ್ತವೆ. ಇದು ಕೇವಲ ಕೆಲವೇ ಜೀವಿಗಳ ಗುಂಪಿಗೆ ಮಾತ್ರ ಸೇರಿದ ವಿಚಾರವಲ್ಲ. ಆದಿಜೀವಿಗಳು ಹಾಗೂ ಏಕಾಣುಜೀವಿಗಳಿಂದ ಮೊದಲ್ಗೊಂಡು ಸಂಕೀರ್ಣ ಜೀವಿಗಳಾದ ಮಾನವರವರೆಗೂ ಹಗಲು ರಾತ್ರಿಗಳಿಗೆ ಸ್ಪಂದಿಸುವ ವರ್ತನೆಗಳು ಮಾತ್ರ ಸಾಮಾನ್ಯವಾಗಿರುವುದು ಸೋಜಿಗದ ಸಂಗತಿ. ಹೀಗೆ ಜೀವಿಗಳು ಹಗಲು-ರಾತ್ರಿಗಳಿಗೆ ಲಯಬದ್ದವಾಗಿ ಸ್ಪಂದಿಸುತ್ತಾ ಬೆಳೆದು ಬಂದಿರುವುದು ವಿಕಾಸದ ಹಾದಿಯಲ್ಲಿ ರೂಪಗೊಂಡ ವರ್ತನೆ. ಇಂತಹ ವರ್ತನೆಗಳಿಗೆ ಕಾರಣಗಳ ಹುಡುಕಾಟವೂ ವಿಜ್ಞಾನದ ಕುತೂಹಲದ ಸಂಗತಿಯಾಗಿ ನೂರಾರು ವರ್ಷಗಳ ಇತಿಹಾಸವನ್ನು ನಿರ್ಮಿಸಿದೆ. ಜೊತೆಗೆ ಈ ಜೀವಿಗಳ ಅನೇಕ ವರ್ತನೆಗಳು ಹಗಲಿನ ಉತ್ಸಾಹಭರಿತ ಚಟುವಟಿಕೆಗಳಾಗಿ ರಾತ್ರಿಯ ವಿಶ್ರಾಂತ ನಿದ್ದೆಯ ಬಯಕೆಯಲ್ಲಿ ವ್ಯಕ್ತವಾಗುತ್ತಿವೆ. ಇವೆಲ್ಲವೂ ಬೇರೆ ಬೇರೆ ರೀತಿಯಲ್ಲಿ ಜೀವಿಗಳಲ್ಲಿ ಕಾಣಬರುತ್ತಿದ್ದು, ಅವುಗಳೆಲ್ಲವೂ ಬಹು ದೊಡ್ಡ ಕಥನವನ್ನೇ ನಿರ್ಮಿಸಿವೆ. ಜೀವಿಗಳಲ್ಲಿನ ಈ ನಡವಳಿಕೆಗೆ ಗೊತ್ತಾದ ಜೈವಿಕ ಕಾರಣದ ಮೂಲವನ್ನು ಸಂಪೂರ್ಣವಾಗಿ ವೈಜ್ಞಾನಿಕ ತಿಳಿವಾಗಿಸಿದ್ದಕ್ಕಾಗಿ ೨೦೧೭ನೇ ಇಸವಿಯಲ್ಲಿ ವೈದ್ಯಕೀಯ ವಿಜ್ಞಾನದ ನೊಬೆಲ್ ಪುರಸ್ಕಾರವನ್ನು ಕೊಡಲಾಗಿದೆ. ಅಷ್ಟಕ್ಕೂ ಇದರ ಗುಟ್ಟು ಸುಲಭವಾಗಿ ರಾತ್ರೋ ರಾತ್ರಿ ಹೊಳೆದು ಬೆಳಗ್ಗೆ ತಿಳಿವಾಗಿ ಹೊರ ಬಂದಿಲ್ಲ. ಶತಮಾನಗಳ ಕಾಲದ ಹುಡುಕಾಟದ ಶ್ರಮ ಇದರ ಹಿಂದೆ ಇದೆ.
ಪ್ರತಿ ಜೀವಿಯ ಜೀವಿಕೋಶದೊಳಗಿನ ವರ್ತನೆಗಳಿಂದ ಉಂಟಾಗುವ ಪ್ರಭಾವದಿಂದ ಜೀವಿಗಳಲ್ಲಾಗುವ ದೈನಂದಿನ ಸಮಯಪಾಲನೆಯ ಕುತೂಹಲದ ವೈಜ್ಞಾನಿಕ ವಿವರಗಳ ಶೋಧಕ್ಕಾಗಿ 2017ರ ನೊಬೆಲ್ ಬಹುಮಾನವನ್ನು ಅಮೆರಿಕಾದ ಜೆಫ್ರಿ ಸಿ. ಹಾಲ್, ಮೈಕೆಲ್ ರಾಸ್ಬ್ಯಾಶ್ ಮತ್ತು ಮೈಕೆಲ್ ಯಂಗ್ ಅವರುಗಳು ಹಂಚಿಕೊಂಡಿದ್ದಾರೆ.

ಈ ಭೂಮಿಯ ಮೇಲೆ ಜೀವಿಗಳು ಹುಟ್ಟುವಾಗಲೇ ಭೂಮಿಗೆ ಅದರ ಪರಿಭ್ರಮಣಕ್ಕೆ ತಕ್ಕಂತೆ ಹಗಲು ರಾತ್ರಿಗಳಾಗುವ ಸಂಗತಿ ಹಳೆಯದಾಗಿತ್ತು. ಹಾಗಾಗಿ ಜೀವಿಗಳು ವಿಕಾಸದಿಂದಲೇ ಈ ಪರಿಭ್ರಮಣಕ್ಕೆ ಅರ್ಥಾತ್ ಹಗಲು-ರಾತ್ರಿಗಳ ಆ ಮೂಲಕ ಬೆಳಕಿನ ವೈವಿಧ್ಯಮಯ ಹೊಳಪಿಗೆ ಪ್ರತಿಕ್ರಿಯಿಸುತ್ತಲೇ ನಿಭಾಯಿಸುತ್ತಿವೆ. ಜೊತೆಗೆ ಜೀವಿಗಳಲ್ಲಿ ಇದು ಉಂಟು ಮಾಡಿರುವ ಚಟುವಟಿಕೆಗಳು ಮಾತ್ರ ಅಗಾಧವಾದವು ಮಾತ್ರವಲ್ಲ ಜೀವಿಗಳನ್ನು ನಿಭಾಯಿಸುವ ಸಂಪೂರ್ಣ ಜವಾಬ್ದಾರಿಯ ಕಾರಣ ಕೂಡ. ಜೀವಿಗಳು ಕತ್ತಲು-ಬೆಳಕಿನ ವಾತಾವರಣಕ್ಕೆ ಪ್ರತಿಕ್ರಿಯೆಯಾಗಿ ವರ್ತಿಸುವ ಕುತೂಹಲದ ವೈಜ್ಞಾನಿಕತೆಯು ಶತಮಾನಗಳ ಕಾಲ ಬೆಳೆದು ಬಂದ ವಿಚಾರವಾಗಿದೆ.

ಇಂತಹದ್ದೊಂದು ಕುತೂಹಲದ ಹಿನ್ನೆಲೆಯನ್ನು ಜೈವಿಕ ಗಡಿಯಾರವಾಗಿಸಿ, ದೈನಂದಿನ ಚಕ್ರವೆಂದು ಸಾಬೀತುಗೊಳಿಸಿ ಜ್ಞಾನವಾಗಿಸಿದ್ದು 20ನೇ ಶತಮಾನದ ಹೆಗ್ಗಳಿಕೆಯಾದರೂ, ಇದರ ಕುತೂಹಲಕ್ಕೆ ಸಾಕಷ್ಟು ಹಳೆಯ ನೆನಪುಗಳಿವೆ. ಸುಮಾರು ಮೂರು ಶತಮಾನಗಳ ಹಿಂದೆಯೇ ಅಂದರೆ 1729ರಲ್ಲಿ ಫ್ರೆಂಚ್ ಖಗೋಳ ವಿಜ್ಞಾನಿಯಾಗಿದ್ದ ಜೀನ್ ಜಾಕಸ್ ಡಿ’ಓರ್ಟಸ್ (Jean-Jacques d’Ortous) ಎಂಬಾತನ ಪ್ರಯೋಗಗಳಿಂದ ಇದು ಆರಂಭವಾಯಿತು. ಆತನ ಕುತೂಹಲದ ಹುಡುಕಾಟದಲ್ಲಿ ಸಸ್ಯಗಳ ಎಲೆ ಮತ್ತು ಹೂಗಳು ದೈನಂದಿನ ಕಾಲಕ್ಕೆ ತಕ್ಕಂತೆ ತೆರೆಯುವ ಹಾಗೂ ಮುಚ್ಚುವ ಪ್ರಕ್ರಿಯೆಯಿಂದ ಸ್ಪಂದಿಸುವ ಸಂಗತಿಗಳು ಮೊಟ್ಟ ಮೊದಲು ತಿಳಿದಿದ್ದವು. ಮುಟ್ಟಿದರೆ ಮುನಿ ಸಸ್ಯವನ್ನು ಕತ್ತಲಲ್ಲಿಟ್ಟರೂ ಹಗಲಿನಲ್ಲಿ ತೆರೆದಿರುವ ಮತ್ತು ರಾತ್ರಿಯಾದೊಡನೆ ಮುಚ್ಚುವ ವರ್ತನೆಯ ಕುರಿತ ಆತನ ದಾಖಲೆಗಳು ಈ ಬಗೆಯ ಜೈವಿಕ ಗಡಿಯಾರ ಎನ್ನಬಹುದಾದ ಮೊಟ್ಟ ಮೊದಲ ವೈಜ್ಞಾನಿಕ ಸಂಗತಿಗಳು. ಮುಂದೆ 200 ವರ್ಷಗಳ ನಂತರ ಜರ್ಮನಿಯ ಸಸ್ಯಶರೀರವಿಜ್ಞಾನಗಳ ಸಂಶೋಧಕ ಇರ್ವಿನ್ ಬನ್ನಿಂಗ್ (Erwin Bünning) ಅವರನ್ನು, ಸಸ್ಯಗಳ ಹಗಲು ಬೆಳಕಿನ ವರ್ತನೆಗಳ ದಾಖಲೆಗಳಿಂದ ದೈನಂದಿನ ವರ್ತನೆಗಳ ಅಧ್ಯಯನದ ತಳಪಾಯ ಹಾಕಿದ ವಿಜ್ಞಾನಿ ಎಂಬುದಾಗಿ ಗುರುತಿಸಲಾಗುತ್ತದೆ. ಈತನ ಪ್ರಯೋಗಗಳ ಫಲಿತಗಳು ಹಾಗೂ ೨೦ನೇ ಶತಮಾನದ ಇತರೆ ಕೆಲವು ತಿಳಿವುಗಳು ಜೀವಿಗಳ ಹಗಲು-ರಾತ್ರಿಯ ದೈನಂದಿನ ವರ್ತನೆಗಳ ಮೂಲ ವಿವರಗಳನ್ನು ಒದಗಿಸಿದ್ದವು. ಹಾಗಾಗಿ ಅದೊಂದು ಜೈವಿಕ ಗಡಿಯಾರ ಎಂಬಂತೆಯೂ ತೀರ್ಮಾನಕ್ಕೆ ಬರಲು ಪುರಾವೆಗಳನ್ನು ಒದಗಿಸಿದ್ದವು.
ಜಾನ್ ಹಾಪ್ಕಿನ್ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿದ್ದ ಕರ್ಟ್ ರಿಕ್ಟರ್ (Curt Richter) ಎಂಬುವರು “ಜೈವಿಕ ಗಡಿಯಾರ” ಎಂಬ ಪರಿಕಲ್ಪನೆಯ ಹರಿಕಾರರು. ಅವರು ೧೯೨೭ರಲ್ಲಿ ಮೊಟ್ಟ ಮೊದಲಬಾರಿಗೆ ದೈನಂದಿನ ವರ್ತುಲ ಹಾಗೂ ಜೈವಿಕ ಪ್ರಕ್ರಿಯೆಗಳ ಸಂಬಂಧಗಳ ಕುರಿತಾಗಿ ಕಾಣುವ ವರ್ತನೆಗಳ ನಿಯಂತ್ರಿಸುವ ದೇಹದ ಕಾರಣಗಳಿಗೆ “ಜೈವಿಕ ಗಡಿಯಾರ” ಎಂಬುದಾಗಿ ಕರೆದರು. ತಮ್ಮ ಸಂಶೋಧನೆಯಲ್ಲಿ ದೇಹದ ಒಳಗಣ ಚಕ್ರಗಳು ಆಯಾ ಜೀವಿಯಲ್ಲಿ ತಿನ್ನುವ, ಕುಡಿಯುವ, ಆಡುವ, ಓಡುವ, ಜೊತೆಗೆ ಲೈಂಗಿಕ ಕ್ರಿಯೆಗಳನ್ನೂ ನಿಯಂತ್ರಿಸುವ ಕುರಿತಾಗಿ ಪ್ರಕಟಿಸಿದ ಫಲಿತಗಳನ್ನು “ಜೈವಿಕ ಗಡಿಯಾರದ” ಹಿನ್ನೆಲೆಯಲ್ಲಿ ವಿವರಿಸಿದ್ದರು. ರಿಕ್ಟರ್ ಅವರೇ ಮನಸ್ಸು ಮತ್ತು ಜೈವಿಕ ವಿಜ್ಞಾನದ ಸಂದಂಧಗಳ ಅಧ್ಯಯನ ಶಾಖೆಯ ಆರಂಭಕ್ಕೂ ಕಾರಣರಾದರು.

ರಿಕ್ಟರ್ ಅವರ ಪ್ರಕಾರ ಆದಿಮಾನವನು ಬೆಂಕಿಯನ್ನು ಕಂಡುಹಿಡಿದದ್ದು ಆತನ ಮನಸ್ಸು ಮತ್ತು ಇತರೇ ವರ್ತನೆಗಳ ಮೇಲೆ ಬಹು ದೊಡ್ಡ ಪ್ರಬಾವವನ್ನು ಬೀರಿತು. ಬೆಂಕಿಯನ್ನು ಕಂಡುಹಿಡಿದ ಕಾರಣದಿಂದಾಗಿ ಮಾನವನ ಜೀವನದಲ್ಲಿ ಬೆಳಕು ಹೊಸ ಬಗೆಯ ಪ್ರವೇಶವನ್ನು ಪಡೆದುಕೊಂಡಿತು. ಅಂದರೆ ಹಗಲಿನ ಬೆಳಕಿನ ಜೊತೆಗೆ ರಾತ್ರಿಯ ಕತ್ತಲಿನಲ್ಲೂ ಬೆಳಕಿನ ಬಳಕೆಗೆ ಬೆಂಕಿಯು ಮೂಲ ಕಾರಣವಾಯಿತು. ಇದರಿಂದಾಗಿ ಮೆದುಳಿನ ಬೆಳವಣಿಗೆಯು ಮಹತ್ತರವಾದ ಬದಲಾವಣೆಯನ್ನು ಕಂಡಿತು. ಮೆದುಳಿನ ಸಂರಚನೆಯೇ ಬದಲಾಗಿ ಸಂಪೂರ್ಣ ರೂಪಾಂತರವಾಯಿತು. ಹಾಗಾಗಿ ಇದು ಮೂಲತಃ ಬೆಳಕಿಗೆ ಸ್ಪಂದಿಸುವ ವರ್ತನೆಯಲ್ಲಿಯೇ ಹೊಸತೊಂದು ಬಗೆಯ ಹುಟ್ಟಿಗೆ ಕಾರಣವಾಯಿತು. ಬೆಳಕಿನ ಪ್ರತಿಸ್ಪಂದನೆಯು ಹೊಸತೊಂದು ರೂಪ ಪಡೆದ ಕಾರಣದಿಂದಾಗಿ ಮಾನವನ ಕಲಿಕೆ ಹಾಗೂ ಸಂವಹನಕ್ರಿಯೆಯು ಬದಲಾವಣೆಗೊಂಡಿತು. ಈ ಹಿನ್ನೆಲೆಯಲ್ಲಿ ಕರ್ಟ್ ರಿಕ್ಟರ್ ಅವರು ವರ್ತನೆ ಮತ್ತು ಜೀವಿರಸಾಯನಿಕ ಸಂಬಂಧಗಳ ನಡುವಣ ಪ್ರಚೋದನೆಗಳನ್ನು ನಿದ್ದೆ, ಒತ್ತಡಗಳು, ಕಾಯಿಲೆಗಳು ಮುಂತಾದ ದೈಹಿಕ ಅನುಭವಗಳ ಮೇಲೆ ಬೀರುವ ಪರಿಣಾಮಗಳ ಬಗೆಗೆ ಜೀವಮಾನವಿಡಿ ಅಧ್ಯಯನ ನಡೆಸಿದರು. ರಿಕ್ಟರ್ ಅವರು ಸರಿ ಸುಮಾರು ೨೫೦ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಜೈವಿಕ ಗಡಿಯಾರದ ಹಿನ್ನೆಯಲ್ಲಿಯೇ ಪ್ರಕಟಿಸಿದ್ದಾರೆ. ನಿವೃತ್ತಿಯ ನಂತರವೂ ತಮ್ಮ ಜೀವಿತದ ಕೊನೆಯವರೆಗೂ ಅವರು ಅಧ್ಯಯನ ನಿರತರಾಗಿದ್ದರು.
ಅಮೆರಿಕಾದವರಾದ ರಿಕ್ಟರ್ ಮೂಲತಃ ಇಂಜನಿಯರಿಂಗ್ ವಿದ್ಯಾರ್ಥಿಯಾಗಿ ಜರ್ಮನಿಯಲ್ಲಿ ಅಧ್ಯಯನವನ್ನು ಆರಂಭಿಸಿದವರು. ಇಂಜನಿಯರಿಂಗ್ ತಮಗೆ ಒಗ್ಗದ ವಿಷಯವೆಂದು ಅರಿತು, ವಾಪಸ್ಸು ಅಮೆರಿಕೆಗೆ ಮರಳಿ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಜೀವಿವಿಜ್ಞಾನದಲ್ಲಿ ಪದವಿಯನ್ನು ಪಡೆದು, ಮುಂದೆ ಹಾಪ್ಕಿನ್ಸ್ ವಿಶ್ವದ್ಯಾಲಯವನ್ನು ಸೇರಿ ಪಿಎಚ್.ಡಿ.ಯನ್ನು ಗಳಿಸಿ, ಅಲ್ಲಿಯೇ ಅಧ್ಯಾಪನವನ್ನೂ, ಸಂಶೋಧನೆಯನ್ನೂ ಆರಂಭಿಸಿದರು. ಆ ಸಮಯದಲ್ಲೆ ರಿಕ್ಟರ್ ಜೈವಿಕ ವರ್ತನೆಗಳ ದೈನಂದಿನ ಮುಖಾಮುಖಿಯನ್ನು ತೀವ್ರವಾಗಿ ಸಂಶೋಧಿಸಲು ಆರಂಭಿಸಿದರು. ಜೈವಿಕ ಗಡಿಯಾರದ ಅರಿವನ್ನು ವೈದ್ಯಕೀಯ ಮತ್ತು ಮನೋವೈದ್ಯಕೀಯ ಹಿನ್ನೆಲೆಯಲ್ಲಿ ಬಹು ದೀರ್ಘಕಾಲದ ಸಂಶೋಧನೆ ಮತ್ತು ಅಧ್ಯಯನಗಳನ್ನು ನಡೆಸಿದರು. ಜೀವಮಾನವಿಡಿ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ವೈದ್ಯಕೀಯ ಸಂಸ್ಥೆಯಲ್ಲಿ ಕಳೆದ ರಿಕ್ಟರ್ ಜೈವಿಕ ಗಡಿಯಾರದ ಮೂಲ ವೈಜ್ಞಾನಿಕ ಅಡಿಪಾಯವನ್ನು ರೂಪಿಸಿದವರು. ನಮ್ಮ ಮೆದುಳಿನ ಒಂದು ಭಾಗವಾದ ಹೈಪತ್ಯಾಲಮಸ್ ಅನ್ನು ಜೈವಿಕ ನಿಯಂತ್ರಕ (ಪೇಸ್ಮೆಕರ್) ಎಂಬುದಾಗಿ ಗುರುತಿಸಿದ ವಿಜ್ಞಾನಿ ರಿಕ್ಟರ್.
ಹಾಗಾಗಿ ಪೇಸ್ಮೇಕರ್ ಅಥವಾ ನಿಯಂತ್ರಕ ಎನ್ನುವುದು ಇಡಿ ಜೈವಿಕ ವರ್ತನೆಗಳನ್ನು ಕುರಿತದ್ದಾಗಿದೆ. ಅದಕ್ಕಾಗಿ ರಿಕ್ಟರ್ ಅವರು ಹಲವಾರು ಪ್ರಾಣಿಗಳ ವರ್ತನೆಗಳ ಅಧ್ಯಯನವನ್ನು ಅವುಗಳ ಮೂಲಭೂತ ಅವಶ್ಯಕತೆಗೆಳ ಏರುಪೇರುಗಳಲ್ಲಿ, ಹಾರ್ಮೋನುಗಳ ಬದಲಾವಣೆಗಳಲ್ಲಿ ಮುಂತಾದ ಅಧ್ಯಯನಗಳನ್ನು ಮಾಡಿ, ಹಸಿವು, ನಿದ್ರೆ, ಎಚ್ಚರದ ಸ್ಥಿತಿ ಮುಂತಾದ ಸಹಜ ಸ್ವಭಾವಗಳ ಸಂಬಂಧಗಳು ಜೈವಿಕವಾಗಿ ರೂಪುಗೊಳ್ಳುವ ಕುರಿತು ಪ್ರಾತ್ಯಕ್ಷಿಕೆಗಳನ್ನು ನಿರೂಪಿಸಿದರು. ಉದಾಹರಣೆಗೆ ಹಕ್ಕಿಗಳಲ್ಲಿ ಗೂಡು ಕಟ್ಟುವ ಕ್ರಿಯೆಯನ್ನು ಅವುಗಳ ಹಾರ್ಮೋನುಗಳ ಬದಲಾವಣೆಯ ಮೂಲಕ ಪ್ರತಿಕ್ರಿಯಿಸುವ ಸಂಗತಿಯನ್ನೂ ಅನುಶೋಧಿಸಿದರು. ಹೀಗೆ ಬೆಳಕು ಮಾಡುವ ಒಂದು ರೀತಿಯ ಮಾಂತ್ರಿಕ ಪರಿಣಾಮಗಳನ್ನು ದೇಹದೊಳಗಣ ಸಂಗತಿಗಳು ನಿರ್ಧರಿಸುವುದನ್ನು ಸಾಬೀತು ಮಾಡಿದರು. ಆದರೂ ಅಂತಹಾ ಜಾಗ ಯಾವುದು, ಆ ಜೈವಿಕ ಗಡಿಯಾರ ಎಲ್ಲಿದೆ, ದೇಹದೊಳಗೆ ಅದೆಲ್ಲಿ ಕುಳಿತಿದೆ ಇತ್ಯಾದಿಯ ಮೂಲಭೂತ ಹುಡುಕಾಟವು ನಡೆದೇ ಇತ್ತು. ಅವೆಲ್ಲಕ್ಕೂ ಅನುವಂಶಿಕ ಪ್ರೋಗ್ರಾಮ್ ತರಹದ ಕುರುಹುಗಳನ್ನು ಸ್ಥಾಪಿಸಿದ್ದೇ ಕರ್ಟ್ ರಿಕ್ಟರ್.
ಮುಂದೆ ರಿಕ್ಟರ್ ಅವರು 1960ರಲ್ಲಿ “ವೈದ್ಯಕೀಯ ಮತ್ತು ಮನೋವೈದ್ಯಕೀಯ ಸಂಬಂಧಗಳಲ್ಲಿ ಜೈವಿಕ ಗಡಿಯಾರ” ಎಂಬ ಮಹತ್ವದ ಸಂಶೋಧನಾ ಲೇಖನವನ್ನು ಪ್ರಕಟಿಸಿದರು. ಅನೇಕ ದೈಹಿಕ ಚಟುವಟಿಕೆಗಳು, ಕಾಯಿಲೆಗಳು, ತೀರಾ ಸಹಜವಾದ ಹಸಿವು ನಿದ್ರೆಗಳು ಇವೆಲ್ಲವೂ ಒಂದಕ್ಕೊಂದು ಪ್ರತಿಕ್ರಿಯಿಸುತ್ತಾ ನಿಭಾಯಿಸುವ ಜೈವಿಕ ಕುರುಹುಗಳನ್ನು ರಿಕ್ಟರ್ ವಿವರಿಸಿದ್ದಾರೆ. ಪುಟ್ಟ ಉದಾಹರಣೆಯನ್ನು ನೋಡುವುದಾದರೆ, ಸ್ತ್ರೀಯರ ಋತುಚಕ್ರ. ಇದು 28 ದಿನಗಳ ಅಂತರದಲ್ಲಿ ನಡೆಯುತ್ತಿರುತ್ತದೆ. ಹೆಣ್ಣು ಜೀವಿಕೋಶಗಳೂ ಹೊಸತಾಗಿ ಹುಟ್ಟಿ ಗರ್ಭಧರಿಸಲು ಅಣಿಯಾಗುವ ಈ ಚಕ್ರದ ವರ್ತುಲವು 28ದಿನಗಳ ಅಂತರವನ್ನು ಕಾಪಾಡಿಕೊಂಡಿರುತ್ತದೆ. ಪ್ರತಿದಿನವೂ ಹಗಲು-ರಾತ್ರಿಗಳ ಅರ್ಥಾತ್ ಭೂಮಿಯ ದೈನಂದಿನ ಪರಿಭ್ರಮಣದ ಪರಿಣಾಮ. ಇದೊಂದು ಬಗೆಯ ಋತುಚಕ್ರದ ಗಡಿಯಾರ ಎಂಬುದಾಗಿ ತಿಳಿಸಿದ್ದರು. ಇದು ಮಹಿಳೆಯರ ಅದರಲ್ಲೂ ಯೌವನಕ್ಕೆ ಬಂದವರ ಪರಿಸ್ಥಿತಿ ಎಂಬುದು ನಿಜ. ಎಲ್ಲ ಮಾನವರ ದೇಹದ ಉಷ್ಣತೆಯೂ ಸಹಾ ಪ್ರತೀ ದಿನದಲ್ಲೂ ಎರಡು ಬಾರಿ ಗೊತ್ತಾದ ಕಾಲದಲ್ಲಿ ಕಡಿಮೆ ಮತ್ತು ಹೆಚ್ಚು ತಾಪಮಾನವನ್ನು ದಾಖಲಿಸುವ ಬಗ್ಗೆಯೂ ಅವರು ಸಂಶೋಧಿಸಿದ್ದರು. ಈ ಸಹಜ ಪ್ರತಿಕ್ರಿಯೆಗಳು ವಿವಿಧ ಕಾಯಿಲೆಗಳಲ್ಲಿ ವೈಪರೀತ್ಯಗೊಳ್ಳುವ ಬಗೆಗೂ ರಿಕ್ಟರ್ ಅಧ್ಯಯನವನ್ನು ನಡೆಸಿದ್ದಾರೆ.
ಹಾಗಾಗಿ ದೇಹದ ಒಳಗಣ ಈ ಗಡಿಯಾರಗಳು ಎಲ್ಲೇ ಇರಲಿ, ರೋಗ-ರುಜಿನಗಳಿಂದ ನರಳುವಾಗ ಬಹು ಮುಖ್ಯವಾದ ಪಾತ್ರವನ್ನು ವಹಿಸುತ್ತವೆ ಎಂಬ ತಿಳಿವನ್ನು ಶೋಧಿಸಿದರು. ದೈಹಿಕ ಚಟುವಟಿಕೆಗಳು ಭೌತಿಕ ಸಂಜ್ಞೆಗಳಾಗಿ ಅಥವಾ ಚಿನ್ಹೆಗಳಾಗಿ ಗೋಚರವಾಗುವ ಬಗೆಗೂ ತಿಳಿಸಿದ್ದರು. ಹಾಗಾಗಿ ನಮ್ಮ ವರ್ತನೆಗಳು, ಆಲೋಚನೆಗಳು ಇತ್ಯಾದಿಗಳ ಮೇಲೆ ಪ್ರಭಾವಿಸುವ ವಿವರಗಳನ್ನು ಅವರು ಕೊಟ್ಟಿದ್ದಾರೆ. ಇವೇ ಹಲವು ದಶಕಗಳ ಕಾಲ ನಿರಂತರವಾಗಿ ಅಧ್ಯಯನಕ್ಕೆ ಒಳಪಟ್ಟು ದೇಹದ ಒಳಗಣ ಗಡಿಯಾರ ಮೂಲ ನಿಯಂತ್ರಕ ಅಥವಾ ಜೈವಿಕ ಕಣದ ಪತ್ತೆಗೆ ದೀರ್ಘವಾದ ಪ್ರಯತ್ನ ನಡೆದಿತ್ತು. ಏಕೆಂದರೆ ಇಡೀ ದೇಹದ ವೈವಿಧ್ಯಮಯ ಚಟುವಟಿಕೆಗಳು ಈ ಗಡಿಯಾರದ ಕಾರ್ಯವ್ಯಾಪ್ತಿಯಲ್ಲಿ ಬರುವುದರಿಂದ ಅದೆಷ್ಟು ಬಗೆಯ ಗಡಿಯಾರಗಳು ಇರಬಹುದೆಂಬ ಅನುಮಾನ ಸಹಜವಾಗಿದ್ದು, ಅದರ ವ್ಯಾಪ್ತಿಯ ಕುತೂಹಲವು ಕಾರಣವಾಗಿತ್ತು. ಆದರೆ ನಮ್ಮ ಬಹುತೇಕ ಗುಣಗಳು ವರ್ತನೆಗಳು ನಿಯಮ ಬದ್ಧವಾಗಿ, ಲಯ ಬದ್ಧವಾಗಿ ನಡೆಯುವುದಲ್ಲದೆ, ಸಂತತಿಯಿಂದ ಸಂತತಿಗೆ ಸಾಗುತ್ತಲೇ ಬರುತ್ತಿರುವ ವಿಸ್ಮಯವು ಕೂಡ ಜೀವಿವಿಜ್ಞಾನದೊಳಗೆ ಬಹು ದೊಡ್ಡ ಕುತೂಹಲವಾಗಿ ಬೆಳೆದಿತ್ತು. ಹಾಗಾಗಿ ಅದರ ಹುಡುಕಾಟವು ಜೀವಿವಿಜ್ಞಾನದಲ್ಲಿ ಅದರಲ್ಲೂ ವೈದ್ಯಕೀಯ ಹಾಗೂ ದೇಹಕ್ರಿಯೆಗಳ ಸಂಶೋಧಕರಲ್ಲಿ ಮಹತ್ತರವಾಗಿತ್ತು. ಅದು ಮತ್ತೂ ಮುಂದುವರೆದು ಹೊಸ ಹೊಸ ತಿಳಿವಿಗೆ ಕಾರಣವಾಯಿತು.
ಮುಂದೆ 1971ರಲ್ಲಿ ಸೈಮೊರ್ ಬೆಂಜೀರ್ ಮತ್ತು ರೊನಾಲ್ಡ್ ಕೊನಾಪ್ಕಾ ಎಂಬ ವಿಜ್ಞಾನಿಗಳಿಬ್ಬರು ಆನುವಂಶಿಕ ವಿಕೃತಿಗಳನ್ನು ಹೊಂದಿರುವ ಹಣ್ಣಿನ ನೊಣ- ಡ್ರಾಸೋಫಿಲಾಗಳಲ್ಲಿ ಸಮಯಪಾಲನಾ ವರ್ತನೆಯ ವಿವಿಧತೆಯನ್ನು ದಾಖಲಿಸಿದ್ದರು. ಅಂದರೆ ಸಮಯ ಪಾಲನೆಗೂ ಆನುವಂಶೀಕತೆಗೂ ಕಾರಣವಿರುವ ಕುರುಹುಗಳನ್ನು ಆ ಸಂಗತಿಗಳು ಕೊಟ್ಟಿದ್ದವು. ಅಲ್ಲಿಂದ ಇಂತಹ ವರ್ತನೆಗೆ ಜೈವಿಕ ಗಡಿಯಾರದಾಚೆಗಿನ ಕುತೂಹಲದ ಅನುಮಾನಗಳ ಕಾರಣಗಳು ಹುಟ್ಟಿಕೊಂಡಿದ್ದವು. ಅದರ ಫಲವಾಗಿಯೇ 1984ರ ನಂತರದ ಅಧ್ಯಯನಗಳು ಇಂತಹ ಅನುಮಾನವನ್ನು ವೈಜ್ಞಾನಿಕ ತಿಳಿವಾಗಿಸಿದ್ದೇ ಅಲ್ಲದೆ ಅದರ ಮೂಲಭೂತ ಜೈವಿಕ ಗುಣನಿಯಂತ್ರಕವಾದ ವಂಶವಾಹಿಗಳ ವಿವರಗಳನ್ನು ಪತ್ತೆ ಹಚ್ಚಿದ “ಸಮಯ ಪಾಲನ ಕಥನ”ವು ೨೦೧೭ ನೇ ವರ್ಷದ ಶ್ರೇಷ್ಠ ವೈದ್ಯಕೀಯ ಪುರಸ್ಕಾರಕ್ಕೆ ಪಾತ್ರವಾಯಿತು. ಇದು ಇಷ್ಟೇ ಆಗಿದ್ದರೆ ಮಹತ್ವವಿರುತ್ತಿರಲಿಲ್ಲ. ಇಡೀ ಜೀವಿಗಳ ಬಹುಪಾಲು ವರ್ತನೆಗಳನ್ನು ಈ ದೈನಂದಿನ ಬೆಳಕಿನ ಆಟದ ತಿಳಿವು ವೈದ್ಯಕೀಯ ಕ್ಷೇತ್ರದಲ್ಲಿ, ಚಿಕಿತ್ಸೆಗೆ ಔಷಧಗಳ ವರ್ತನೆಗಳ ವಿಚಾರಗಳಲ್ಲೂ ಮಹತ್ವದ ಪರಿಣಾಮವನ್ನು ಬೀರುತ್ತಿದೆ. ಈ ವಿವರಗಳನ್ನು ಮುಂದೆ ನೋಡೋಣ.
ದೈನಂದಿನ ಚಕ್ರವು ಯಾವುದೇ ಜೀವಿಯನ್ನೂ ಹೊರತು ಪಡಿಸಿದ್ದಲ್ಲ. ದಿನದ ಬೆಳಕು ಮತ್ತು ಕತ್ತಲಿನ ಪ್ರತಿಕ್ರಿಯೆಯಾಗಿ ಎಲ್ಲಾ ಜೀವಿಗಳ ವರ್ತನೆಗಳನ್ನು ಹೊರನೋಟದಲ್ಲಿಯೇ ಕಾಣಬಹುದು. ಇವುಗಳಿಗೆ ಮೂಲವೆಂಬಂತೆ ದೇಹದೊಳಗಣ ಶರೀರಕ್ರಿಯೆಗಳೂ ಸಹ ಸ್ಪಂದಿಸುತ್ತವೆ. ಜೀವಿಗಳ ದೇಹದ ಎಲ್ಲಾ ಚಟುವಟಿಕೆಗಳೂ ಹಗಲು (ಬೆಳಕು) ಮತ್ತು ರಾತ್ರಿಯ (ಕತ್ತಲಿನ) ಅನುಕ್ರಮವಾದ ಇರುವಿಕೆಗಳ ಆಧಾರದಿಂದ ಪ್ರತಿಕ್ರಿಯೆಗೊಳ್ಳುತ್ತವೆ. ಹಾಗಾಗಿ ಹಗಲು ರಾತ್ರಿಯ ಪುನಾರಾವರ್ತನೆಗೆ ಅನುಗುಣವಾಗಿ ದೈಹಿಕ ಕ್ರಿಯೆಗಳು ಕೂಡ ನಡೆಯುತ್ತವೆ. ಈ ಹಗಲು-ರಾತ್ರಿಗಳು ಭೂಮಿಯ ಪರಿಭ್ರಮಣವನ್ನು ಅವಲಂಬಿಸಿರುವುದರಿಂದ, ಭೂಮಿಯ ಚಲನೆಯನ್ನು ಅನುಸರಿಸಿ ದೈಹಿಕ ವರ್ತನೆಗಳು ನಡೆಯುವಂತೆ ಜೀವಿಗಳು ಆಂತರಿಕ ಮಾರ್ಪಾಡನ್ನು ಮಾಡಿಕೊಂಡಿರುತ್ತವೆ. ಇದೇ ದೈನಂದಿನ ಲಯ. ಇದನ್ನು ನಿರ್ವಹಿಸುವ -ಜೀನ್- ಗುಣಾಣುಗಳಿದ್ದು ಅವುಗಳು ಜೀವಿಯ ಸಂಚಾರದಿಂದಾಗುವ ಸ್ಥಳ ಬದಲಾವಣೆಯನ್ನೂ ಗ್ರಹಿಸಿ, ಮತ್ತದೇ ಹಗಲು-ರಾತ್ರಿಯ ಲಯವನ್ನು ಅನುಸರಿಸಿ ದೇಹವನ್ನು ಹೊಂದಿಸುತ್ತವೆ. ಇದು ಒಂದು ಬಗೆಯಲ್ಲಿ ಜೈವಿಕ ಗಡಿಯಾರ. ವರ್ತನೆಯ ಲಯವನ್ನು ಸಮಯಪಾಲನೆಯಾಗಿಸಿ ವಿಶೇಷವಾಗಿಸಿರುವ ಸಾಧನ. ಹೀಗೆ ಹಗಲು-ರಾತ್ರಿಯನ್ನು ಅನುಸರಿಸಿ ವರ್ತಿಸುವ ಬಗೆಯನ್ನು ತುಂಬಾ ಹಿಂದಿನಿಂದಲೂ ವಿಜ್ಞಾನ ಗುರುತಿಸಿತ್ತು, ಆದರೆ ಅದರ ಅಣುಜೈವಿಕ -ಮಾಲೆಕ್ಯುಲಾರ್- ವಿವರಗಳು ದೊರತದ್ದು ಮಾತ್ರ ಇತ್ತೀಚೆಗಷ್ಟೇ.
ಹೀಗೆ ಜೀವಿಗಳನ್ನು ಹಗಲು-ರಾತ್ರಿಗಳ ಸಮೀಕರಿಸಿ ನಡವಳಿಕೆಗಳನ್ನು ನಿಯಂತ್ರಿಸುವ ಗುಣಾಣು (ಜೀನ್) ಇರುವುದನ್ನು ಪ್ರಯೋಗಗಳು ಸಾಬೀತು ಮಾಡಿದ್ದವು. ಕಾಲಾಂತರದಲ್ಲಿ ಆ ಜೀನನ್ನು “ಪೀರಿಯಡ್” ಜೀನು ಎಂದು ಹೆಸರಿಸಲಾಯಿತು. ಮುಂದೆ ದಶಕಗಳು ಕಳೆದ ಮೇಲೆ ಜೆಫ್ರಿ ಹಾಲ್ ಮತ್ತು ರಾಸ್ ಬಾಶ್ ಒಟ್ಟಾಗಿ ಬ್ರಾಂಡಿಸ್ ವಿಶ್ವವಿದ್ಯಾಲಯದಲ್ಲೂ ಹಾಗೂ ಮೈಕೆಲ್ ಯಂಗ್ ರಾಕ್ಫೆಲ್ಲರ್ ವಿಶ್ವವಿದ್ಯಾಲಯದಲ್ಲೂ ಆ ಪೀರಿಯಡ್ ಜೀನನ್ನು ಪ್ರತ್ಯೇಕಿಸಿ ಅದರ ಪರಮಾಣು ರಚನೆಯ ವಿನ್ಯಾಸವನ್ನು ಕಂಡುಹಿಡಿದರು. ಅದರ ರಾಚನಿಕ ಸಂಗತಿಗಳು ಹಾಗೂ ಅದರ ಅನುಕ್ರಮಣಿಕೆಯ ವಿಚಾರಗಳು ಜೈವಿಕ ಗಡಿಯಾರವಾಗಿಸುವ ಗುಟ್ಟನ್ನೇನು ತಕ್ಷಣವೇ ಬಿಟ್ಟುಕೊಡಲಿಲ್ಲ. ಹಲವಾರು ಹೊಸತಿರುವುಗಳ ಅನುಶೋಧಗಳು, ಹಾಗೂ ಪೀರಿಯಡ್ ಜೀನಿನ ಸಾಹಚರ್ಯದ ಜೀನುಗಳ ಒಡನಾಟ ಮುಂತಾದವುಗಳ ತಿಳಿವಿನಿಂದ ಸಮಯ ಪಾಲನೆಯ ಗುಟ್ಟನ್ನು ಅರಿಯಲಾಯಿತು. ಇದನ್ನು ನೊಬೆಲ್ ಬಹುಮಾನಿತರಾದ ಮೂವರು ವಿಜ್ಞಾನಿಗಳು “ಟ್ರಾನ್ಸ್ಸ್ಕ್ರಿಪ್ಶನ್ ಟ್ರಾನ್ಸ್ಲೇಶನ್ ಫೀಡ್ಬ್ಯಾಕ್ ಲೂಪ್ (Transcription Translation Feedback Loop -TTFL) ಎಂದು ಹೆಸರಿದ್ದಾರೆ. ಈ ವಿಧಾನದಿಂದ ಪೀರಿಯಡ್ ಜೀನ್ ಮತ್ತು ಅದರ ಒಡನಾಡಿ ಜೀನ್ಗಳು ಉಂಟುಮಾಡುವ ಪ್ರೋಟೀನುಗಳನ್ನು ತಿಳಿದು ಜೀನನ್ನು ಅರ್ಥೈಸುವಲ್ಲಿ ಸಹಕಾರಿಯಾಗಿವೆ. ಅದನ್ನೇ ಒಂದು ಫೀಡ್ಬ್ಯಾಕ್ ಲೂಪ್ -ಪ್ರತಿಕ್ರಿಯಿಸುವ ಕೊಂಡಿ- ಎಂದು ಗುರುತಿಸುವಲ್ಲಿ ಈ ಮೂರು ವಿಜ್ಞಾನಿಗಳ ಸಂಶೋಧನೆಗಳು ನೆರವಾಗಿವೆ. ಅದಕ್ಕಾಗಿ ಅವರು ಸಾಕಷ್ಟು ಕಾಲ ತಿಳಿವನ್ನು ಪಡೆಯುವ ಶೋಧದಲ್ಲಿ ತೊಡಗಿದ್ದರು. ಅಲ್ಲದೆ ಈ ಬಗೆಯ ತಿಳಿವು ಜೈವಿಕ ಅನುಶೋಧದಲ್ಲಿ ಹೊಸ ತಿರುವಾಗಿದ್ದು ಬಹಳಷ್ಟು ಅನ್ವಯವನ್ನು ಒದಗಿಸುವ ಮಹತ್ವವನ್ನು ಪಡೆದಿವೆ.
ಮುಂದಿನ ಅಧ್ಯಯನಗಳು ಈ TTFL ಉತ್ಪನ್ನಗಳು ನಿರ್ವಹಿಸುವ ವಿಧಿವಿಧಾನಗಳನ್ನು ಅರಿಯುವಲ್ಲಿ ಸಹಕಾರಿಯಾದವು. ಇವುಗಳು ಮುಖ್ಯವಾಗಿ ಆಯಾ ಪ್ರೋಟೀನುಗಳ ಉತ್ಪಾದನೆ ಹಾಗೂ ವಿಘಟನೆಯ ಏರಿಳಿತಗಳನ್ನು ಒಳಗೊಂಡಿದ್ದವು. ಜೊತೆಗೆ ಈ ವಿವರಗಳು ೨೪ ತಾಸಿನ ಕಾಲದೊಂದಿಗೆ ಲಯ ಬದ್ಧವಾಗಿ ವರ್ತಿಸುತ್ತಿದ್ದ ಸಂಗತಿಗಳನ್ನು ಹೊರಹಾಕಿದವು. ಹೀಗೆ ದಿನದ ಸಮಯದ ಜೊತೆಗಿನ ವರ್ತನೆಗಳು ತಾಳೆಯಾಗಿ ಜೀವಿಗಳ ಆಂತರಿಕ ಗಡಿಯಾರದ ಕುರಿತ ತಿಳಿವಳಿಕೆಯು ವಿಜ್ಞಾನ ಲೋಕದಲ್ಲಿ ಅನಾವರಣವಾಯಿತು. ಇವೆಲ್ಲವು ದೇಹದ ವೈವಿಧ್ಯಮಯ ಚಟುವಟಿಕೆಗಳಾದ ವಿವಿಧ ಶಾರೀರಕ ಹೊರಸೂಸುಗಳು, ನಿದ್ದೆಯ ವಿಧಾನ, ದೇಹದ ಉಷ್ಣತೆ, ಹಾರ್ಮೋನುಗಳ ಬಿಡುಗಡೆ, ರಕ್ತದ ಒತ್ತಡ ಹಾಗೂ ಪಚನಕ್ರಿಯೆ ಇವೇ ಮೊದಲಾದವುಗಳ ಹೊಂದಾಣಿಕೆಯ ಮೂಲಕ ಬದುಕನ್ನು ನಿರ್ವಹಿಸಲು ವಿಕಾಸಗೊಂಡಿವೆ. ಆದ್ದರಿಂದಲೇ ನಾವು ಹಗಲು-ರಾತ್ರಿಗಳಲ್ಲಿ ತೀವ್ರ ಬದಲಾವಣೆ ಆಗುವಂತಹಾ ಸ್ಥಳಗಳಿಗೆ ಪಯಣಿಸಿದಾಗ ನಿದ್ದೆಯ ಏರುಪೇರನ್ನು ಅನುಭವಿಸುತ್ತೇವೆ. ಜೊತೆಗೆ ಹಾಗೆಯೇ ಕಾಲದೊಂಡನೆ ಅನುಸಂಧಾನಿಸಿ ಹೊಂದಾಣಿಕೆಯನ್ನೂ ಸಾಧಿಸುತ್ತೇವೆ. ಹಾಗಾಗಿ ಬದುಕಿನ ಬಂಡಿ ನಿರಂತರವಾಗಿ ಸಾಗುತ್ತಿದೆ. ಹೀಗೆ ಈ ತಿಳಿವು-ನಮ್ಮ ದೇಹದ ಕ್ರಿಯೆಗಳ ಉತ್ಪಾದನೆ-ವಿಘಟನೆಗಳ ಮೂಲಕ ಹೊಸ ತಿಳಿವನ್ನು ಸಾಧಿಸಿದ್ದು ಜೀವಿವಿಜ್ಞಾನದ ಮಹತ್ವದ ಶೋಧವಾಗಿದೆ. ಇದರಿಂದಾಗಿ ದೈನಂದಿನ ವರ್ತನೆಗೆ ಅರ್ಥಗಳು ದೊರಕುತ್ತಿವೆ. ಇವೆಲ್ಲವು ದೇಹದ ಉತ್ಪಾದನೆಗಳಾದ ಪ್ರೋಟೀನ್ಗಳ ಮೂಲಕವಾದ್ದರಿಂದ ನಮ್ಮ ದೇಹದ ಆರೋಗ್ಯ-ಅನಾರೋಗ್ಯದ ಮಾಹಿತಿಗಳನ್ನೂ ಪಡೆಯಬಹುದಾಗಿದೆ.
ಈ ಜೀವಿವರ್ತನೆಗೆ ವಂಶವಾಹಿ ಕಾರಣದ ನೆಪದಿಂದ ಉತ್ತೇಜಿತರಾದ ಸಂಶೋಧಕರು ಅದರ ಹಿಂದೆಯೇ ಸತತ ಪರಿಶ್ರಮದಿಂದ ನಡೆಸಿದ ನಿರಂತರವಾದ ಅಧ್ಯಯನ ಇದಾಗಿದೆ. ಹಣ್ಣಿನ ನೊಣವಾದ ಡ್ರಾಸೋಫಿಲಾದಲ್ಲಿ ದೈನಂದಿನ ವರ್ತನೆಗೆ ಕಾರಣವಾದ ಗುಣಾಣುವಿನ ಪತ್ತೆ ಹಚ್ಚಿ ಅದರ ವಂಶವಾಹಿ ನಕ್ಷೆಯನ್ನು ಹಾಲ್ ಮತ್ತು ರಾಸ್ಬ್ಯಾಶ್ ಮತ್ತು ಮೈಕೆಲ್ ಯಂಗ್ ಅವರುಗಳು ರೂಪಿಸಿದರು. ಇದರಲ್ಲಿ ವಂಶವಾಹಿ ವರ್ತನೆಗೆ ಕಾರಣವಾದ ಪ್ರೋಟೀನ್ನ್ನು ದೈನಂದಿನ ಏರುಪೇರುಗಳ ಹಿನ್ನೆಲೆಯಿಂದ ವಂಶವಾಹಿ ನಕ್ಷೆಗೆ ಪುರಾವೆಯನ್ನು ಒದಗಿಸಿದ್ದರು. ಪ್ರೋಟೀನ್ಗೆ “ಪೀರಿಯಡ್ ಪ್ರೊಟೀನ್” ಎಂದೂ ವಂಶವಾಹಿಗೆ “ಪೀರಿಯಡ್ ಜೀನ್” ಎಂದೂ ಅವರು ಕರೆದಿದ್ದಾರೆ. ಇವು ಎಲ್ಲಾ ಜೀವಿಗಳಲ್ಲೂ ದಿನದ ಕಾಲಕ್ಕೆ ತಕ್ಕ ಪ್ರತಿಕ್ರಿಯೆಯನ್ನು ಉಂಟುಮಾಡುವಲ್ಲಿ ಪಾತ್ರ ವಹಿಸುತ್ತವೆ.
ಜೀವಿಯ ದೈನಂದಿನ ಪ್ರತಿಕ್ರಿಯೆಯು ಲಯಬದ್ದವಾಗಿ ನಡೆಯಲು, ಆಯಾ ಜೀವಿಯ ವಂಶವಾಹಿಯೂ ಮತ್ತು ಅದಕ್ಕೆ ಕಾರಣವಾದ ಪ್ರೊಟೀನಿನ ಅಂಶವೂ ಸೇರಿದೆ. ಈ ಲಯಬದ್ಧ ಕ್ರಿಯೆಯನ್ನು ಎಲ್ಲಾ ಜೀವಿಗಳು ಭೂಮಿಯ ಚಲನೆಯನ್ನು ಅನುಸರಿಸಿಯೇ 24 ಗಂಟೆಯ ವರ್ತುಲದಲ್ಲಿ ವಿನ್ಯಾಸಗೊಳಿಸಿಕೊಂಡಿವೆ. ಈ ಒಟ್ಟಾರೆ ಪ್ರಕ್ರಿಯೆಯನ್ನು ಕಟ್ಟಿರುವ ಅಂಶಗಳು ದೇಹದ ಒಳಗಣ ಶಾರೀರ ರಸಾಯನಿಕಕ್ಕೂ ಹಾಗೂ ಹೊರಗಣ ವರ್ತನೆಗಳಿಗೂ ಸಂಬಂಧ ಕಲ್ಪಿಸಿ ಎರಡೂ ಒಂದನ್ನೊಂದು ಅವಲಂಬಿಸಿರುವಂತೆ ವಿಕಾಸವಾಗಿದೆ. ಇದು ಬೆಳಕನ್ನು ಅನುಸರಿಸಿ ಶರೀರದ ಒಳಗಿನ ರಸಾಯನಿಕದ ಏರುಪೇರನ್ನು ನಿರ್ವಹಿಸುತ್ತದೆ. ಈ ಜೈವಿಕ ಲಯಬದ್ಧ ಕ್ರಿಯೆಯು ಅನೇಕ ವರ್ತನೆಗಳಲ್ಲಿ ಪ್ರಭಾವ ಬೀರುವುದನ್ನು ಕಾಣಬಹುದು. ಮಾನವರಲ್ಲಂತೂ ನಿದ್ದೆ, ಆಹಾರದ ಬಯಕೆಯ ಕ್ರಮ, ರಕ್ತದ ಒತ್ತಡ, ದೇಹದ ಉಷ್ಣತೆ ಇವೆ ಮೊದಲಾದ ಗುಣಗಳ ಮೇಲೆ ಇದು ನೇರ ಪರಿಣಾಮವನ್ನು ಹೊಂದಿದೆ. ರಕ್ತದಲ್ಲಿನ ಸಕ್ಕರೆಯ ಅಂಶವೂ ದೈನಂದಿನ ಚಕ್ರಕ್ಕೆ ಪ್ರತಿಕ್ರಿಯೆಯಾಗಿ ವರ್ತಿಸುತ್ತದೆ. ಇದರಿಂದ ದೇಹದ ಪಚನಕ್ರಿಯೆಯೂ ಅದರ ಪರಿಣಾಮ ಎಂಬುದು ತಿಳಿಯುತ್ತದೆ. ಹಾಗಾಗಿ ಜೀವಿಗಳು ಈ ಹಗಲು ರಾತ್ರಿಯ ನೆರಳು-ಬೆಳಕಿನಾಟದ ಸಮಯದ ಗುಲಾಮರಂತೆ ಕಂಡರೆ ಆಶ್ಚರ್ಯವೇನೂ ಇಲ್ಲ!
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್