ಆತ್ಮೀಯರೆ ನಮಸ್ಕಾರ. ನೀವು ಯಾರಾದರೂ ಆಕಸ್ಮಾತ್ ನನಗೆ “ನೀವೇನಾದರೂ Great Person ಒಬ್ಬರನ್ನೇನಾದರೂ ಭೇಟಿಯಾಗಿದ್ದೀರಾ?” ಎಂದು ಕೇಳಿದರೆ ನನ್ನ ಉತ್ತರ ಹೀಗಿರುತ್ತದೆ. “ನಾನು ಭೇಟಿಯಾಗಿರುವುದಷ್ಟೇ ಅಲ್ಲ, ಅವರ ಜೊತೆ ದಶಕಗಳ ಕಾಲ ಒಡನಾಡಿ, ಬೆಂಗಳೂರಲ್ಲೆಲ್ಲಾ ಅಲೆದು, ಉಂಡು-ತಿಂದು, ಗಂಟೆಗಟ್ಟಲೆ ಹರಟಿದ್ದೇನೆ” ಮುಂದುವರೆದು “ಅಷ್ಟೇ ಅಲ್ಲಾ,,, ನನ್ನ ಅನೇಕ ಲೇಖನಗಳನ್ನು ಅವರ ಎದಿರು ಓದಿದ್ದೇನೆ, ನನ್ನೆಲ್ಲಾ ಪುಸ್ತಕಗಳ ಬಿಡುಗಡೆಯಲ್ಲೂ ಅವರ ಉತ್ಸಾಹಪೂರ್ವಕವಾದ ಹಾರೈಕೆಯನ್ನೂ ಪಡೆದಿದ್ದೇನೆ”. ಹೌದು ಡಾ. ಸುಬ್ಬರಾವ್ ನಾನು ಒಡನಾಡಿದ ಅಂತಹಾ ವಿಶಿಷ್ಟ ವ್ಯಕ್ತಿ. ಇನ್ನೇನು 2021ರ ಆಗಸ್ಟ್‌ಗೆ 80 ವರ್ಷ ಪೂರೈಸಲಿದ್ದ ಡಾ.ಸುಬ್ಬರಾವ್, ಕಳೆದ ಮೇ 6 ರ ಗುರುವಾರದಂದು ಬೆಳಿಗ್ಗೆ 9ರ ಸುಮಾರಿಗೆ ಶಾಂತಿಯುತವಾಗಿ ನಮ್ಮನ್ನೆಲ್ಲಾ ಅಗಲಿದರು.
ಬೆಂಗಳೂರು ಮೆಡಿಕಲ್ ಕಾಲೇಜಿನಿಂದ ವೈದ್ಯಕೀಯ ಪದವಿ ಪಡೆದಿದದ್ದ ಡಾ. ಸುಬ್ಬರಾವ್ ಮಾನಸಿಕ ಆರೋಗ್ಯದ ವಿಶೇಷ ಪರಿಣಿತಿ ಪಡೆದು ಇಂಗ್ಲಂಡಿನ ವೇಕ್‌ಫೀಲ್ಡ್ ನಲ್ಲಿ ವೃತ್ತಿಯನ್ನು ನಿಭಾಯಿಸಿದವರು. ಜನವರಿ 1, 1995 ರಂದು ಹೊಸ ವರ್ಷವನ್ನು ಆಹ್ವಾನಿಸುವ ಸ್ನೇಹ ಕೂಟಕ್ಕೆ 31 ನೆಯ ಡಿಸೆಂಬರ್ ರಾತ್ರಿಯಲ್ಲಿ ನನ್ನ ಹಿರಿಯ ಮಿತ್ರರಾದ M.K ಶಂಕರ್ ಅವರ ಮನೆಯಲ್ಲಿ ಡಾ. ಸುಬ್ಬರಾವ್ ಮೊದಲು ಭೇಟಿಯಾಗಿದ್ದೆ. (ಶ್ರೀ M.K ಶಂಕರ್ ಅವರು ಡಾ. ಸುಬ್ಬರಾವ್ ಅವರ ಪತ್ನಿಯ ಸ್ವಂತ ತಮ್ಮ ಹಾಗೂ CPUSನ ಒಡನಾಡಿ). ನಂತರದಲ್ಲಿ, ಅದರಲ್ಲೂ ಕಳೆದ ಒಂದು ದಶಕ ಪೂರ್ತಿ ಆಗಾಗ್ಗೆ ಹೆಚ್ಚೂ ಕಡಿಮೆ ವಾರ-ವಾರವೂ ಅವರ ಮಾತಿನ, ಚರ್ಚೆಯ, ತಿಳಿವಿನ ಒಳಿತಿನ ಸಂಗತಿಗಳ ಮಹಾಪೂರವನ್ನೇ ಸವಿದ್ದೇನೆ.
ಡಾ. ಸುಬ್ಬರಾವ್ ಅವರ ತಂದೆಯವರಾದ ಶ್ರೀಯುತ ಬಿ.ಕೆ. ಸ್ವಾಮಿಯವರು, ಭದ್ರಾವತಿಯ ಕಾಗದ ಕಾರ್ಖಾನೆಯ ಮುಖ್ಯಸ್ಥರಾಗಿ ನಿವೃತ್ತರಾದರವರು. ಶ್ರೀಸ್ವಾಮಿಯವರು ಆ ಕಾಲದಲ್ಲೇ ಜರ್ಮನಿಯ ಹೈಡೆಲ್‌ಬರ್ಗ್(Heidelberg) ಕಂಪನಿಯಿಂದ ಪೇಪರ್ ಟೆಕ್ನಾಲಜಿಯಲ್ಲಿ ತರಬೇತಿ ಪಡೆದುಬಂದವರು. ಡಾ.ಸುಬ್ಬರಾವ್ ಅವರ ಮಾವನವರಾದ ಶ್ರೀಯುತ ಎಂ.ಎಸ್. ಕೃಷ್ಣರಾವ್ ಅವರು ಈಗಿನ ಕರ್ನಾಟಕ ಸೋಪ್ ಫ್ಯಾಕ್ಟರಿಯ ರಸಾಯನವಿಜ್ಞಾನಿ ಆಗಿದ್ದವರು ಅಲ್ಲದೆ ಪ್ರಸ್ತುತ ಮೈಸೂರು ಸ್ಯಾಂಡಲ್ ಸೋಪ್ ಅನ್ನು ರೂಪಿಸಿರುವ ಕಾರಣಕರ್ತರಲ್ಲಿ ಒಬ್ಬರು. ಇಂತಹಾ ಬೌದ್ಧಿಕ ಪರಂಪರೆಯ ಹಿನ್ನೆಲೆಯ ಡಾ. ಸುಬ್ಬರಾವ್ ಅಂತಹದರ ಜೊತೆಗೆ ಒಳಿತನ್ನೇ ಎಲ್ಲರಿಗೂ ಹಂಚುವಲ್ಲಿಯೂ ಜೀವನ ಸವೆಸಿದವರು. ಅದೂ ಯಾವುದೇ ಪ್ರತಿಫಲವನ್ನೂ ಅಪೇಕ್ಷಿಸದೇ!
ಇಂಗ್ಲಂಡಿನಿಂದ ಹಿಂದಿರುಗಿದವರು ಇಲ್ಲೇನೂ ಚಿಕಿತ್ಸಾಲಯ ನಡೆಸಲಿಲ್ಲ. ಬದಲಾಗಿ ನಡೆದಾಡುವ ವಿಶ್ವಾಸಾರ್ಹ ವೈದ್ಯಕೀಯ ಸಲಹೆಗಾರರಾಗಿದ್ದರು. ಸದಾಶಿವನಗರದ ಮನೆಯಿಂದ ಮಲ್ಲೇಶ್ವರಂಗೆ ನಡೆದೇ ಹೋಗುತ್ತಾ ದಾರಿಯುದ್ದಕ್ಕೂ ಸಾಮಾನ್ಯವಾಗಿ ಸಿಗುವ ತರಕಾರಿ ಅಂಗಡಿಯವರು, ಹೂ-ಮಾರುವವರು, ಅದೇ ದಾರಿಯ ವಾಕಿಂಗ್ ಬರುವವರು, ಎಲ್ಲರೂ ಅವರಿಂದ ದಶಕಗಳ ಕಾಲ ವೈದ್ಯಕೀಯ ಸಲಹೆ ಪಡೆದಿದ್ದಾರೆ. ಡಾ. ಸುಬ್ಬರಾವ್ ಅವರದು ಉಚಿತವಾದ ಸಲಹೆ ಅಷ್ಟೇ ಅಲ್ಲ, ಉಚಿತವಾದ ಔಷಧಿಯನ್ನೂ ಖರೀದಿಸಿ ಕೊಂಡೊಯ್ದು ಕೊಟ್ಟು ಉಪಕರಿಸಿದ್ದಾರೆ. ಸ್ವತಃ ನಾನೇ ಅವರಿಂದ ಔಷಧಿಯನ್ನೂ ಉಚಿತವಾಗಿ ಪಡೆದಿದ್ದೇನೆ. ಕಾಯಿಲೆಯ ವಿವರಗಳನ್ನು ಕ್ಲಿನಿಕಲ್ ಲಕ್ಷಣಗಳ ಮೇಲೆ ನಿಖರವಾಗಿ ಹೇಳುವುದಷ್ಟೇ ಅಲ್ಲ, ಅದರ ಸಂಬಂಧಿತ ಇತರೆ ದೇಹದ ಲಕ್ಷಣಗಳ ವಿವರಗಳೂ ಅವರ ನಾಲಿಗೆಯ ತುದಿಯಲ್ಲಿ ಇರುತ್ತಿತ್ತು. ಅಂತಹಾ ಅದ್ಭುತ ವೈದ್ಯರನ್ನು ನಾನು ಕಂಡಿಲ್ಲ.
ಅವರ ವೈದ್ಯಕೀಯ ಸಲಹೆ ಕುರಿತೇ ಹೇಳಬೇಕಾದ ವಿಶೇಷತೆಯಿದೆ. ಹಲವಾರು ಬಾರಿ ನಾನು ಅವರ ಜೊತೆ ವೈದ್ಯಕೀಯ ಸಂಗತಿಗಳ ಬಗೆಗೆ ಚರ್ಚಿಸಿದ್ದೇನೆ. ಪ್ರತೀ ಬಾರಿಯೂ ನಿಮಗೆ ಓದಲು ಬರುತ್ತೆ, ತಾನೆ! ಹಾಗಾದರೆ, ಇಂತಹವರು ಬರೆದಿರುವ ಇಂತಹ ವೈದ್ಯಕೀಯ ಪುಸ್ತಕ ಓದಿ ಎಂದು ಹೇಳುವುದು ಸಾಮಾನ್ಯವಾಗಿತ್ತು. ಅನೇಕ ಬಾರಿ ಮುಂದೊಮ್ಮೆ ಆ ಪುಸ್ತಕವನ್ನೂ ತಂದು ಅಥವಾ ತೋರಿಸಿ ಓದಲು ಕೊಡುತ್ತಿದ್ದರು. ಓದಿಕೊಂಡು ನಮ್ಮ ದೇಹ ಮತ್ತು ರೋಗದ ಸಂಘರ್ಷವನ್ನು ನಾವೇ ನಿಷ್ಕರ್ಷೆ ಮಾಡಿಕೊಳ್ಳಬಹುದಿತ್ತು. ವೈದ್ಯರೊಬ್ಬರು ವೈದ್ಯಕೀಯ ತಿಳಿವನ್ನು ಈ ಬಗೆಯಲ್ಲಿ ಸಮಾಜೀಕರಿಸುವ ಅಪರೂಪದ ಸಮಯವನ್ನು ಹಲವಾರು ಬಾರಿ ಅನುಭವಿಸಿದ್ದೇನೆ. ನನಗೇನೋ ಓದಲು ಬರುತ್ತದೆ, ವಿವರಗಳನ್ನು ಸಂಬಂಧಗಳನ್ನೂ ಬೆಸೆದು ತಿಳಿಯುತ್ತೇನೆ ಎಂದುಕೊಳ್ಳೋಣ! ಅವರ ಜತೆ ದಶಕಗಳ ಕಾಲ ಸಂಪರ್ಕವಿದ್ದ ಆಟೋ ಚಾಲಕರು, ತರಕಾರಿ ಮಾರಾಟದವರು ಮುಂತಾದವರೊಡನೆಯೂ ಅವರಿಗೂ ಅರ್ಥವಾಗುತ್ತದೆ ಎಂಬಂತಹಾ ಸಂದರ್ಭಗಳನ್ನು ಹಂಚಿಕೊಳ್ಳುತ್ತಿದ್ದರು. ಜ್ಞಾನವೊಂದು ನನ್ನ ಸ್ವತ್ತು. ನಾನು ನಿಮಗೆ ಸಲಹೆ/ಹೇಳಿಕೆ ಅಥವಾ ಯಾವುದೋ ಬಗೆಯಲ್ಲಿ ಹೇಳುತ್ತೇನೆ, ನೀವು ಪ್ರತೀ ಬಾರಿಯೂ ಕೇಳಿಯೇ ಪಡೆಯಬೇಕು ಎನ್ನುವ ಭಾರತೀಯ ಸಾಂಸ್ಕೃತಿಕ ಜ್ಞಾನದ ಯಜಮಾನಿಕೆಯನ್ನು ಆ ರೀತಿಯಲ್ಲಿ ಒಡೆದು ಹಂಚುತ್ತಿದ್ದ ಅಪಾರ ಮಾನವಪ್ರೇಮಿ ಡಾ. ಸುಬ್ಬರಾವ್.
ನಾನು ಅವರನ್ನು ತಿಳಿವು (Knowledge) ಮತ್ತು ಒಳಿತಿ(Public Good)ನ ಜಂಗಮ ಹಾಗೂ ದಾಸೋಹಿ ಎಂದು ಕರೆದಿದ್ದೇನೆ. ಅಕ್ಷರಶಃ ಅವರು ಅಷ್ಟೊಂದು ಚಲನಶೀಲರು, ಜೊತಗೆ ಹಂಚುವುದರಲ್ಲಿಯೂ ಪ್ರೀತಿಯನ್ನು ಹೊಂದಿದ್ದವರು. ಅವರ ಜೊತೆಗೆ ಓಡಾಟದಲ್ಲಿ ಅಥವಾ ಎದಿರು ಕುಳಿತು ಮಾತಾಡುತ್ತಿದ್ದರೆ, ಒಮ್ಮೆಲೆ ಎದ್ದು ಹತ್ತಿರ ಬಂದು ಅರಿವನ್ನು ತಿಳಿವಾಗಿಸುವ ಪ್ರಯತ್ನ ಮಾಡುತ್ತಿದ್ದರು. “ಒಂದ್ ಏನು ಗೊತ್ತಾ ಚನ್ನೇಶ್”.. ಎನ್ನುತ್ತಾ ನಮ್ಮನ್ನು ಅವರ ಕಡೆ ಗಮನ ಸೆಳೆದುಕೊಂಡು ನಮ್ಮಲ್ಲೂ ತಿಳಿವನ್ನು ಪ್ರತಿಷ್ಠಾಪಿಸುತ್ತಿದ್ದರು.
ನಮ್ಮನ್ನು ಇಷ್ಟೊಂದು ಹುರಿದುಂಬಿಸಿದರೂ ಅವರು ಎಂದೂ ಸ್ಟೇಜ್ ಮುಂದೆ ಬರಲು ಒಪ್ಪಿದವರಲ್ಲ. ಏನಿದ್ದರೂ ಹಿಂದೆಯೇ. “ಸದಾ ಬೆನ್ನು ತಟ್ಟುವ ಕೆಲಸ ಮಾತ್ರವೇ ನನ್ನದು” ಎಂದೇ ಹೇಳುತ್ತಿದ್ದರು. ಕಡೆಯವರೆಗೂ ಹಾಗೆ ನಡೆದುಕೊಂಡರು. ಫೋಟೋಗಳಿಗೂ ಎದುರಾಗಿ ನಿಂತವರಲ್ಲ! ತಮ್ಮ ಆಯ್ಕೆಯನ್ನು ಸದಾ ಸರಳವಾಗಿ ಇರಿಸಿಕೊಂಡು, ನಮ್ಮ ಆಸಕ್ತಿಗಳನ್ನು ಬೆಳೆಸಿದರು. ಪ್ರೋತ್ಸಾಹಿಸಿದರು. ಅವರ ಮಾತುಗಳು ಸದಾ ಅನುರಣಿಸುತ್ತಾ ನನ್ನೊಳಗೆ ಇರುತ್ತವೆ.
ಮೇಡಂ ಕ್ಯೂರಿ ಮತ್ತು ನೆಲ್ಸನ್ ಮಡೇಲಾ ಅವರ ಅಚ್ಚುಮೆಚ್ಚಿನ ಹೀರೊಗಳು. ಅವರ ಶ್ರದ್ಧೆ, ತ್ಯಾಗ, ಜಾಣತನ ಮತ್ತು ಉದಾರತೆಯನ್ನು ತಾನೆ ಅನುಭವಿಸಿದಂತೆ ಪ್ರಸ್ತುತ ಸಂದರ್ಭವನ್ನು ಬಳಸಿ ಹೇಳುತ್ತಿದ್ದರು. ಮಾತ್ರವಲ್ಲ, ಅಂತಹಾ ಮಹಾನ್ ಪ್ರತಿಭೆಗಳನ್ನು ಬಳಸಿಕೊಂಡು, ನಾವೇಷ್ಟರವರು ಎಂಬುದನ್ನು ನೆನಪಿಸಿಕೊಡುತ್ತಿದ್ದರು. ತಮ್ಮ 70 ಮತ್ತು 80 ರ ನಡುವಿನ ವಯೋಮಾನದಲ್ಲೂ ಉತ್ಸಾಹದ ಚಿಲುಮೆಯಾಗಿದ್ದರು. ಎಲ್ಲರಲ್ಲೂ ಒಳಿತನ್ನೇ ಬಯಸುವ ಅವರು ಕೆಟ್ಟ ಮಾನವತೆಯ ಕಟು ವಿಮರ್ಶಕರೂ ಆಗಿದ್ದರು. ಯಾರನ್ನೂ ತರಾಟೆ ತೆಗೆದುಕೊಳ್ಳುವಲ್ಲೂ ಹಿಂದೂ ಮುಂದೂ ನೋಡುತ್ತಿರಲಿಲ್ಲ. ಹೊಗಳಿಕೆ – ತೆಗಳಿಕೆ ಎರಡಕ್ಕೂ ಅವರಲ್ಲಿ ಪೌರಾಣಿಕವಾದ – ಸಾಂಸ್ಕೃತಿಕವಾದ-ವೈಜ್ಞಾನಿಕವಾದ ಅಸ್ತ್ರಗಳು ಸದಾ ಅವರ ಬತ್ತಳಿಕೆಯಲ್ಲಿ ಇರುತ್ತಿದ್ದವು.
ಅವರು ಕಲಿಸಿದ್ದು ಎಂದೆರಡಲ್ಲ, ಓದಿಸಿದ್ದೂ ಅಷ್ಟೇ! ನೂರಾರು ಪುಸ್ತಕಗಳನ್ನೂ, ಸಾಧಕರನ್ನೂ ಪರಿಚಯಿಸಿದವರು. ಸುಮಾರು ಪುಸ್ತಕಗಳನ್ನು ನಾನವರಿಂದ ಪಡೆದಿದ್ದೇನೆ. ಕೆಲವು ಸಿಗುವುದು ದುರ್ಲಭ ಅನಿಸಿದ್ದಲ್ಲಿ, ಅಥವಾ ಹೊಸತನ್ನು ಪಡೆಯಲು ಕಷ್ಟವಾದಲ್ಲಿ, ತಮ್ಮಲ್ಲಿದ್ದ ಪ್ರತಿಯಲ್ಲಿ ತಾವೇ ಸ್ವತಃ ಜೆರಾಕ್ಸ್ ಮಾಡಿಸಿ, ಬೈಂಡ್ ಮಾಡಿಸಿ ತಂದುಕೊಡುತ್ತಿದ್ದರು. ಈ ಟಿಪ್ಪಣಿಯ ಜೊತೆಗೆ ಇರುವ ಚಿತ್ರದಲ್ಲಿ ಕೆಲವು ಪುಸ್ತಕಗಳು ಮಾತ್ರ ಇವೆ. ಅವುಗಳಲ್ಲಿ ಒಂದೆರಡರ ಬಗೆಗೆ ಹೇಳಲೇಬೇಕು.
ಜಾನ್ ಮುರ್ಟಾಫ್ (John Murtagh) ಅವರ ಜನರಲ್ ಪ್ರಾಕ್ಟೀಸ್ (General Practice). ಆಸ್ಟ್ರೇಲಿಯಾದ ಜಾನ್ ಮುರ್ಟಾಫ್ B.Sc. B.Ed. ಪದವಿ ಪಡೆದು ಶಾಲಾ ಉಪಾಧ್ಯಾಯರಾಗಿದ್ದವರು ಮುಂದೆ ವೈದ್ಯಕೀಯ ಪದವಿ ಮಾಡಿ ಸಾಮಾನ್ಯ ಚಿಕಿತ್ಸೆಗಳ ವಿವರವಾದ ಶಾಖೆಯನ್ನು ಸ್ಥಾಪಿಸುವುದಲ್ಲದೆ ಅದನ್ನು ಅತ್ಯದ್ಭುತವಾಗಿ ದಾಖಲಿದ್ದಾರೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶಕವಾದ ಪುಸ್ತಕ. ಹಾಗೆಯೇ ಆರೋಗ್ಯದ ಅರಿವಿನ ಓದಿಗೂ ಸಹಾ ಅತ್ಯದ್ಭುತ ಪುಸ್ತಕ. ವೈದ್ಯನೊಬ್ಬ ರೋಗಿಯನ್ನು ಪ್ರಶ್ನಿಸಿ ಉತ್ತರ ಪಡೆದು ಚಿಕಿತ್ಸೆಯನ್ನು ಕೊಡುವ ವೈಜ್ಞಾನಿಕ ಶಿಸ್ತನ್ನು ನಿರೂಪಿಸುವ ಬಗೆಯೆ ವಿಶಿಷ್ಟವಾದದ್ದು. ಅದರ ಒಂದು ಪ್ರಮುಖ ಸಾಲು ಹೀಗಿದೆ. General practice is a traditional method of bringing primary health care to the community. It is a medical discipline in its own right, linking the vast amount of accumulated medical knowledge with the art of communication. ಸಾರ್ವಜನಿಕ ಆರೋಗ್ಯದ ಹಿತವನ್ನು ತಮ್ಮ ಸಂವಹನದ ಪ್ರೀತಿಯಿಂದಲೇ ನಿಭಾಯಿಸುತ್ತಿದ್ದ ಡಾ. ಸುಬ್ಬರಾವ್ ಪುಸ್ತಕದ ಪ್ರತಿ ಪುಟವನ್ನೂ ಪಾಲಿಸಿದ್ದರು. ಆರೋಗ್ಯ ಕುರಿತ ನಿಖರವಾದ ಅವರ ಮಾತುಗಳು ಅನುರಣಿಸುತ್ತಲೇ ಇರುತ್ತವೆ.
ನಿಮ್ಮ ಊಟದ ವೈಜ್ಞಾನಿಕತೆಯನ್ನು ನಿಮ್ಮ ಅಜ್ಜಿ-ತಾತನನ್ನು ಕೇಳಿ, ತಜ್ಞರನ್ನಲ್ಲ. ಹೀಗೆ ನಮ್ಮ ತಿಳಿವಿಗೆ ನಮ್ಮ ಆಹಾರ ವಿಜ್ಞಾನವನ್ನು ಪರಿಚಯಿಸಿದ್ದು ಮೈಕೆಲ್ ಪೊಲಾನ್ (Michael Pollan) ಅವರ ಇನ್ ಡಿಫೆನ್ಸ್ ಆಫ್ ಫುಡ್ (In Defence of Food). ಆ ಪುಸ್ತಕ ಒಂದು Simple invitation to junk the science, ditch the diet and instead rediscover the joy of eating well, ಅನ್ನುವುದನ್ನು ಮಲ್ಲೇಶ್ವರಂ ಗಾಂಧಿಬಜಾರ್, ಶಂಕರಪುರಂ, ವೈಯಾಲಿಕಾವಲ್, ವಿವಿಪುರಂ, ಎಂ.ಜಿ ರಸ್ತೆ, ಮುಂತಾದ ಕಡೆಗಳ ಯಾವ ಹೋಟೆಲಿನಲ್ಲಿ ಏನು ತಿನ್ನಬೇಕು ಎಂಬುದನ್ನು ವಿವರಿಸಿ ತಿನ್ನಿಸಿದ್ದರು ಡಾ.ಸುಬ್ಬರಾವ್. ನನಗೂ ತಿನ್ನುವುದರ ಆನಂದ, ಸಂತೃಪ್ತಿ ಬಂದದ್ದು ನಾನು ಬಿಲ್ ಪಾವತಿಸಿಲ್ಲ ಎಂದಲ್ಲ. ಬಿಲ್ ಅವರೇ ಕೊಟ್ಟೂ ಆನಂದವನ್ನು ಅನುಭವಿಸುವ ರೀತಿಯನ್ನು ಡಾ. ಸುಬ್ಬರಾವ್ ನಮಗೆ ಕಲಿಸಿದ್ದಕ್ಕೆ. ದಂರೋಟು ಎಲ್ಲಿ ತಿನ್ನಬೇಕು, ಇಡ್ಲಿ ಎಲ್ಲಿ ಸೊಗಸಾಗಿರುತ್ತೆ, ಚಟ್ಣಿ ಸಾಂಬಾರಿನ ರುಚಿ ಎಲ್ಲಿಯದು, ವಡೆಯ ಗಮ್ಮತ್ತು ಎಲ್ಲಿ, ಚಪಾತಿ ಎಲ್ಲಿ ಬೆಂದಿರುತ್ತೆ, ಪಲ್ಯಗಳು ಯಾವ ಹೋಟೆಲಿನಲ್ಲಿ ಧಾರಾಳವಾಗಿ ಕೊಡುತ್ತಾರೆ, ಹೀಗೆ ಎಲ್ಲಾ ಅವರ ಮಾತುಗಳೂ ವೈವಿಧ್ಯಮಯವಾಗಿ In Defence of Food ನ ಭಾಗಗಳಾಗಿವೆ. ಅವೆಲ್ಲವೂ ಹತ್ತಾರು ಬಾರಿ ಅವರ ಜೊತೆಯಲ್ಲಿ ಹಂಚಿಕೊಂಡ ಡೈನಿಂಗ್ ಟೇಬಲ್ಲಿನ ಪ್ರತೀ ತುತ್ತಿನಲ್ಲೂ ಪ್ರತಿಫಲಿಸಿದ ಚಿತ್ರಗಳು ನನ್ನ ಮನೋಪಟಲದಲ್ಲಿ ಶಾಶ್ವತವಾಗಿವೆ.
ಕನ್ನಡದ ವೈದ್ಯ ಬರಹಗಾರ ರಾಶಿ- ರಾ. ಶಿವರಾಂ– ಅವರ “ಮನ ಮಂಥನ” ಹಾಗೂ “ಮನೋನಂದನ” ಅವರ ಅಚ್ಚು ಮೆಚ್ಚಿನ ಪುಸ್ತಕಗಳಾಗಿದ್ದವು. ಸ್ವತಃ ಮನೋವೈದ್ಯರಾಗಿದ್ದ ಡಾ. ಸುಬ್ಬರಾವ್ ನಮ್ಮ ಆರೋಗ್ಯವನ್ನು ಕಾಪಾಡುವ ಮನಸ್ಸಿನ ಬಗ್ಗೆ ಸದಾ ಕಾಳಜಿಯುತ ಪ್ರೀತಿಯನ್ನು ಹಂಚುತ್ತಿದ್ದರು.
ಅವರ ಪುಸ್ತಕ ಪ್ರೀತಿ ಇಷ್ಟಕ್ಕೇ ಸೀಮಿತವಾಗಿರಲಿಲ್ಲ. ನನ್ನ ಎಲ್ಲಾ ಪುಸ್ತಕಗಳನ್ನೂ ಓದಿ ಮತ್ತೊಬ್ಬರಿಗೆ ಕೊಟ್ಟಿದ್ದಾರೆ. ಆಯ್ದ ಭಾಗಗಳನ್ನು ಕೊಂಡಾಡಿ – ಅವರದೇ ಮಾತಿನಲ್ಲಿ ಹೇಳುವುದಾದರೆ- ಗುಣಗಾನ ಮಾಡಿದ್ದಾರೆ. ಈ ಕೊರೊನಾ ಪೂರ್ವದಲ್ಲಿ ಹೆಚ್ಚೂ -ಕಡಿಮೆ ಪ್ರತೀ ವಾರದ ಸಸ್ಯಯಾನ ಲೇಖನವನ್ನು ಓದಿ ಹೇಳುತ್ತಿದ್ದೆ. ನಾನು ಬರೆದ 98 ರ ವಯೋಮಾನದ ವಿಜ್ಞಾನಿ ಜಾನ್ ಗುಡ್ ಎನಫ್ ಕುರಿತ ಲೇಖನ ಅವರಿಗೆ ಅಪಾರ ಮೆಚ್ಚುಗೆಯಾಗಿತ್ತು. ವಿಜ್ಞಾನವನ್ನು ಸಾರ್ವಜನಿಕ ತಿಳಿವಾಗಿಸುವ ನನ್ನ ಆಯ್ಕೆಯ ಹಾದಿಯಲ್ಲಿ ಮಾರ್ಗದರ್ಶಕರಾಗಿ ಸಿಕ್ಕ ಸಂತ ಡಾ. ಸುಬ್ಬರಾವ್. ಅವರದ್ದು ತೀವ್ರವಾದ ಸಮಾಜೀಕರಣದ ಪ್ರಾಯೋಗಿಕ ಮಾದರಿ. ವೈದ್ಯಕೀಯ ಜ್ಞಾನವನ್ನೂ ಆ ಪರಿಯಲ್ಲಿ ಸಾರ್ವತ್ರಿಕ ತಿಳಿವಾಗಿಸುವ ನಂಬಿಕೆಯಿದ್ದ ಅಪರೂಪದ ವೈದ್ಯರು ಸುಬ್ಬರಾವ್. ನಮ್ಮ ನಡೆಯ ಯಾವ ಪ್ರಕಾರ ಶ್ರೇಷ್ಠವಾಗಿದೆ ಎಂಬುದನ್ನು ನಮಗೆ ಮನವರಿಕೆ ಮಾಡಿಕೊಟ್ಟು ಶಾಶ್ವತವಾದ ನೆನಪಾಗಿದ್ದಾರೆ.
ಅವರು ಕೊನೆಯುಸಿರೆಳೆದ ಕೇವಲ 38 ಗಂಟೆಗಳ ಮೊದಲು ನಾನವರಿಗೆ ಫೋನ್ ಮಾಡಿ ಮಾತಾಡಿದ್ದೆ. ತುಸು ಬಳಲಿದಂತೆ ಮಾತಾಡಿದ್ದ ಅವರು ಅದೂ ಸ್ವಾಭಾವಿಕವೇ ಎಂಬಂತೆ ಮಾತಾಡಿದ್ದರು. 80ರ ಗಡಿಯಲ್ಲಿದ್ದ ಅವರ ಹಸಿವು ಕಡಿಮೆಯಾಗುವುದು ಸಹಜ ಎಂದೂ ಎಷ್ಟು ರುಚಿಸುತ್ತೋ ಅಷ್ಟು ತಿಂದು ಇದ್ದಷ್ಟು ಸಂತಸವಾಗಿರಬೇಕು. ಬರೋದಾ ಚನ್ನೇಶ್ ಎಂದು ಮಾತು ಮುಗಿಸಿದ್ದರು. ಬರೋದಾ…., ಎನ್ನುವುದು ಅವರ ಸಹಜವಾದ ಕಡೆಯ ನುಡಿ. ಅದೇ ಕಡೆಯದೂ ಆಗಿತ್ತು.
ಒಳ್ಳೆಯತನವನ್ನು ಸಹಜವಾಗಿ ನಂಬಿ ನಡೆದ ಸಾರ್ಥಕ ವ್ಯಕ್ತಿಯೊಬ್ಬರ ಅಂತ್ಯವೂ ಅಷ್ಟೇ ಸಹಜವಾಗಿರುವುದನ್ನು ಈ ಕೊರೊನಾ ಸಮಯವೂ ದಾಖಲಿಸಿತು. ಅವರ ಅಂತಿಮ ಆಸೆ, ಅವರ ದೇಹವನ್ನು ವೈದ್ಯಕೀಯ ಕಾಲೇಜಿಗೆ ಕೊಡುವುದಾಗಿತ್ತು. ಕೊರೊನಾ ಸಮಯದಲ್ಲಿ ನಿಭಾಯಿಸುವ ದೊಡ್ಡ ಕಷ್ಟ ನಮ್ಮೆದುರಿಗಿತ್ತು. ಅವರ ಒಳಿತಿನ ನೆರಳು ಅವರನ್ನು ಸದಾ ಹಿಂಬಾಲಿಸಿದ್ದರಿಂದ ಅದೂ ಸಸೂತ್ರವಾಯಿತು. ಅವರೇ ಓದಿದ್ದ ಬೆಂಗಳೂರು ಮೆಡಿಕಲ್ ಕಾಲೇಜಿನ ಅನಾಟಮಿ ವಿಭಾಗವು ಅತ್ಯಂತ ಪ್ರೀತಿ ಮತ್ತು ಗೌರವದಿಂದ ಅವರನ್ನು ಪಡೆಯಿತು. ಸಾಧಕನೊಬ್ಬ ತನ್ನ ಸಾಧನೆಯ ಮನೆಗೇ ಹಿಂದಿರುಗಿದಂತಾಯಿತು. ಕಾಲೇಜು ತನ್ನದೇ ಹಿರಿಯ ವಿದ್ಯಾರ್ಥಿಯ ದೇಹವನ್ನು ಪಡೆದು ಅವರದೇ ಓದಿನ ಬಯಕೆಯ ಮಕ್ಕಳಿಗೆ ಅನುವಾಗಲು ಅರ್ಪಿಸಿಕೊಂಡಿತು.
ಸದಾ ಮಾತಿನ ಚಿಲುಮೆಯಾಗಿದ್ದ ಡಾ. ಸುಬ್ಬರಾವ್ ಅವರ ಮೌನವನ್ನು ಸಹಿಸಿಕೊಳ್ಳುವ ಕಷ್ಟ ಅವರ ಕುಟುಂಬದ್ದು ಹಾಗೂ ನನ್ನದೂ ಕೂಡ.
ಸ್ನೇಹಿತರೆ, ನನ್ನ ಜೀವಮಾನವಿಡೀ ಶಾಶ್ವತ ನೆನಪಾಗಿರುವ ಡಾ. ಸುಬ್ಬರಾವ್ ಅವರ ಅಗಲಿಕೆಯ ನೋವಿಗೆ ಜೊತೆಯಾದ ಎಲ್ಲರಿಗೂ ಧನ್ಯವಾದಗಳು. ಒಳ್ಳೆಯತನ, ಸದಾಕಲಿಯುವ ಉತ್ಸಾಹ ಎರಡನ್ನೂ ಅವರ ಜೀವನದ ಪ್ರತೀ ಸೆಕೆಂಡುಗಳಲ್ಲೂ ದಾಖಲಿಸಿದ ಅವರ ನೆನಪಿಗಾಗಿ CPUS ಪ್ರತಿ ವರ್ಷಕ್ಕೆ ಒಂದಾದರೂ ಆರೋಗ್ಯ ವಿಜ್ಞಾನದ ತಿಳಿವನ್ನು ಸಾರ್ವಜನಿಕ ಚರ್ಚೆಯನ್ನು/ಮಾತುಕತೆಯನ್ನು ನಡೆಸಲು ತೀರ್ಮಾನಿಸಿದೆ. ಆರಂಭದ ಮಾತುಕತೆಯನ್ನು 20 ನೆಯ ಜೂನ್ 2021 ರಂದು ನಮ್ಮ CPUS ನ ಸಲಹೆಗಾರರೂ ನನ್ನ ಹಿರಿಯ ಮಿತ್ರರೂ ಆದ ಪ್ರೊ. ಮೋಹನ್ ಕುಮಾರ್ ನಡೆಸಿಕೊಡಲಿದ್ದಾರೆ. USAದ, ವಾಷಿಂಗ್ಟನ್ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಕನ್ನಡಿಗರೇ ಆದ ಡಾ. ಮೋಹನ್ ಆಹಾರದ ಸಂಪನ್ಮೂಲದ ರಾಸಾಯನಿಕಗಳನ್ನು ಪ್ರೊಟೀನ್, ಕಾರ್ಬೊಹೈಡ್ರೈಟ್, ಕೊಬ್ಬು, ವಿಟಮಿನ್ನುಗಳು ಮುಂತಾದವುಗಳ ಆಚೆಯ ಸಂಗತಿಗಳಿಂದ ಆಸಕ್ತರು. ಡಾ. ಸುಬ್ಬರಾವ್ ಅವರಿಗೂ ಆಪ್ತವಾಗಿದ್ದ ಆಹಾರದ ತಿಳಿವಿಂದ ಆರೋಗ್ಯದ ಕಡೆಗೆ ಆಲೋಚಿಸುವ ಅಂತಹಾ ವಿವರಗಳ ಮೂಲಕ ಡಾ. ಮೋಹನ್ ಆರಂಭಿಸಲಿದ್ದಾರೆ.
ಅದಕ್ಕೆಂದು CPUSನ ಪರವಾಗಿ ತಮ್ಮಲ್ಲರ ಸ್ಪಂದನವನ್ನು ಆಹ್ವಾನಿಸುತ್ತಿದ್ದೇನೆ. ಹೃದಯ ಭಾರವಾಗಿದೆ. ಎಲ್ಲರಿಗೂ ವಂದನೆಗಳು.
ಪ್ರೀತಿ ಮತ್ತು ಗೌರವದಿಂದ
ಡಾ. ಟಿ.ಎಸ್. ಚನ್ನೇಶ್
(ಡಾ. ಸುಬ್ಬರಾವ್ ಅವರ ಪತ್ನಿ ಶ್ರೀಮತಿ ಜಯಾ ಸುಬ್ಬರಾವ್, ಮಗ ಶ್ರೀ ಕಿಶೊರ್ ಹಾಗೂ ಸೊಸೆ ಹಾಗೂ ಶ್ರೀ. M.K ಶಂಕರ್ ಅವರ ಸಹಕಾರಕ್ಕೆ CPUS ಅಭಾರಿಯಾಗಿದೆ).