You are currently viewing ತಾಟಿಗೆ ಬರುವ ತಿನಿಸುಗಳನ್ನೆಲ್ಲಾ ಆವರಿಸಿರುವ “ಕಡಲೆ” – Cicer arietinum

ತಾಟಿಗೆ ಬರುವ ತಿನಿಸುಗಳನ್ನೆಲ್ಲಾ ಆವರಿಸಿರುವ “ಕಡಲೆ” – Cicer arietinum

ಮುಂಗಾರು ಆರಂಭವಾಗುತ್ತಿರುವ ಈ ದಿನಗಳಲ್ಲಿ, ಆಗಾಗ್ಗೆ ಸಣ್ಣ ಮಳೆ, ತಂಪೆನಿಸುವ ಮೋಡ ಮುಸುಕಿದ ವಾತಾವರಣವೂ ಸಹಜ. ತಂಪು ತರುವ ಮಳೆಯ ಹನಿಗಳಿರುವ ಸಂಜೆಗಳಲ್ಲಿ ಕುರುಕಲು ತಿಂಡಿಗಳಿದ್ದರೆ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ! ಅಷ್ಟೇ ಏಕೆ, ಬಿಸಿ, ಬಿಸಿ ಬಜ್ಜಿಗಳು, ವಡೆ, ಬೋಂಡಾ, ಖಾರಾ ಬೂಂದಿ, ಈರುಳ್ಳಿ ಪಕೋಡ! ಬಾಯಲ್ಲಿ ನೀರೂರಿಸುತ್ತವಲ್ಲವೇ? ಮೈಸೂರ್ ಪಾಕ್, ಸಿಹಿ ಬೂಂದಿ, ಬಗೆ ಬಗೆಯ ಭರ್ಫಿಗಳು, ಇವೆಲ್ಲವುಗಳ ಜೊತೆಗೆ ಇಡ್ಲಿ ತರಹದ ಡೋಕ್ಲಾ! ಈ ಎಲ್ಲಾ ತಿನಿಸುಗಳಲ್ಲೂ ಕಡಲೆಯಕಾಳಿನ ಪಾತ್ರ ಬಹಳ ಮುಖ್ಯ. ಇವುಗಳ ಜೊತೆಗೆನೇ ಹೋಳಿಗೆಯನ್ನೂ ಸೇರಿಸಿ ಬಿಡಿ…. ಅದರ ತಯಾರಿಯಲ್ಲಿ ಇದೇ ಕಾಳು ಖಾಯಂ. ಹೌದು! ಈ ಕಡಲೆಕಾಳನ್ನು ಹಸಿಯಾಗಿದ್ದರೂ, ಬೇಯಿಸಿದರೂ, ಕರಿದರೂ, ಹುರಿದರೂ, ಏನೇ ಆಗಲಿ…… ಸಿಹಿ, ಖಾರ, ಒಗ್ಗರಣೆ ಏನಾದ್ರೂ ಮಾಡಿ ಇದಲ್ಲಕ್ಕೂ ಸೈ ಎನಿಸಿರುವ ಸಸ್ಯದ ಉತ್ಪನ್ನ. ಇಷ್ಟೊಂದು ಬಗೆಯ ಆಹಾರದ ತಿನಿಸುಗಳನ್ನು ಒಂದೇ ಸಸ್ಯದಿಂದ ಮಾಡುವುದೆಂದರೆ ಅಚ್ಚರಿಯೇ ಸರಿ. ಅಯ್ಯೋ ಅದು ಬಿಡಿ, ಕಾಫಿಗೂ ಪರ್ಯಾಯವಾಗಿ ಹುರಿದು ಮಾಡುವ ಪೇಯವೂ ಕೂಡ ಕಡಲೆಯಿಂದಾಗುತ್ತದೆ. ಇವುಗಳನ್ನೆಲ್ಲಾ ನಿಧಾನವಾಗಿ ನೋಡೊಣ. ಮಾನವಕುಲಕ್ಕೆ ಅಚ್ಚರಿ ಏನೆಂದರೆ ಇಷ್ಟೊಂದು ವಿವಿಧ ಖಾದ್ಯಗಳಿಗೂ ಒಗ್ಗುವ ಹದವಾದ ಪ್ರೊಟೀನನ್ನು ತನ್ನ ಒಡಲೊಳಗೆ ವಿಕಾಸಗೊಳಿಸಿಕೊಂಡ ದ್ವಿದಳ ಧಾನ್ಯ ಕಡಲೆ, ಬೆಂಗಾಲ್ ಗ್ರಾಂ, ಜನಪ್ರಿಯ ಭಾಷೆಯಲ್ಲಿ “ಚನಾ”. ಇಂಗ್ಲೀಷಿನಲ್ಲಿ ಚಿಕ್‍ ಪೀ (Chikpea)

                ನಮ್ಮ ಆಹಾರದಲ್ಲಿ ದ್ವಿದಳ ಧಾನ್ಯಗಳಿಗೆ ವಿಶೇಷ ಮಹತ್ವವಿದೆ. ಎಲ್ಲಾ ದ್ವಿದಳ ಧಾನ್ಯಗಳೂ ನಮ್ಮ ಆಹಾರದ ಪ್ರೊಟೀನಿನ ಮೂಲವಾಗಿದ್ದು ನಮ್ಮ ದೇಹದ ಅವಶ್ಯಕತೆಯನ್ನು ಪೂರೈಸುತ್ತವೆ. ನಮ್ಮ ಪ್ರತಿನಿತ್ಯದ ಊಟದಲ್ಲಿ ಕಾಳು-ಬೇಳೆಗಳಿಲ್ಲದ ಸಂದರ್ಭವೇ ಇರುವುದಿಲ್ಲ. ಇಂತಹ ದ್ವಿದಳ ಧಾನ್ಯಗಳಲ್ಲಿ ಕಡಲೆಯು ಬಹು ಮುಖ್ಯವಾದ ಪಾತ್ರವನ್ನು ವಹಿಸಿದೆ. ಭಾರತೀಯ ಕೃಷಿಯು ಜಗತ್ತಿನ ಕಡಲೆಯ ಉತ್ಪಾದನೆಯಲ್ಲಿ ಪ್ರತಿಶತ 65ರಷ್ಟನ್ನು ಪೂರೈಸುತ್ತಿದೆ. ಇಂದಿಗೂ ಕಡಲೆಯು ಅತಿ ಮುಖ್ಯವಾದ ಒಣಬೇಸಾಯದ ಬೆಳೆಯಾಗಿದ್ದು, ನಮ್ಮ ಪ್ರೊಟೀನ್ ಅವಶ್ಯಕತೆಯನ್ನು ಬಹುಮಟ್ಟಿಗೆ ಪೂರೈಸುತ್ತದೆ. ಅದರಲ್ಲೂ ಸಸ್ಯಾಹಾರಿಗಳ ಪ್ರೊಟೀನಿನ ಮೂಲವೇ ಬೇಳೆಕಾಳುಗಳಾಗಿದ್ದು ಇವುಗಳ ಮಹತ್ವ ಇನ್ನೂ ಹೆಚ್ಚು. ಜಗತ್ತಿನಲ್ಲೀಗ ಸಸ್ಯಹಾರದ ಅಲೆಯಲ್ಲಿ ಪ್ರಾಣಿ ಜನ್ಯ ಪ್ರೊಟೀನಿಗೆ ಪರ್ಯಾಯವಾಗಿ ಜನಪ್ರಿಯವಾಗುತ್ತಿರುವ ಮೂಲಗಳಲ್ಲಿ ಕಡಲೆಯೂ ಪ್ರಮುಖವಾದುದು!

          ದ್ವಿದಳ ಧಾನ್ಯಗಳ (ಲೆಗ್ಯೂಮ್) ಗುಂಪಿಗೆ ಸೇರಿದ ಮತ್ತು ಫ್ಯಾಬೇಸಿಯೇ ಕುಟುಂಬದ ಕಡಲೆಯ ವೈಜ್ಞಾನಿಕ ಹೆಸರು ಸಿಸರ್ ಏರಿಯಾಟಿನಂ (Cicer arietinum).  ಸಿಸರ್ ಪದ ಲ್ಯಾಟಿನ್ ಮೂಲದ್ದು, ಚಿಕ್ ಪೀ ಗೆ ಸಮಾನ ಅರ್ಥವುಳ್ಳದ್ದು. arietinum ಪದವು ಪುಟ್ಟ ಪುಟ್ಟ ಕಾಯಿಗಳನ್ನುಳ್ಳ ಗಿಡ ಎಂಬರ್ಥವನ್ನು ಹೊಂದಿದೆ.  Cicer ಸಂಕುಲದಲ್ಲಿ 43 ಪ್ರಭೇದಗಳಿದ್ದು ಅವುಗಳಲ್ಲಿ ಒಂದು Cicer arietinum. ಹಾಗೆಯೇ Cicer ಪದವು  ರೊಮನ್ನರ ದಾರ್ಶನಿಕ ಹಾಗೂ ರಾಜನೀತಿಜ್ಞ ಮಾರ್ಕಸ್ ಸಿಸಿರೊನ ಕುಟುಂಬದ ಹೆಸರಿನ ವಿಕಾಸಕ್ಕೂ ಕಾರಣವಾಗಿದೆ, ಎಂಬ ವಿವರಗಳಿವೆ. ಅವರ ಮನೆತನಕ್ಕೆ ಹಾಗೆ ಹೆಸರು ಬರಲು ಆತನ ಹಿರಿಯರಲ್ಲೊಬ್ಬರ ಮೂಗಿನ ಮೇಲೆ ಕಡಲೆಕಾಳಿನಂತಹ ಸೀಳು-ಗುಳ್ಳೆಯ ಗುರುತೊಂದು ಇತ್ತಂತೆ. ಅದರ ಜೊತೆಯಲ್ಲಿ ಆತನ ಹಿರಿಯರು ಕಡಲೆಯ ಬೆಳೆಗಾರರೂ ಅಥವಾ ಮಾರಾಟಗಾರರೂ ಆಗಿದ್ದಿರಬಹುದೆಂದೂ ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ರೊಮನ್ನರ ನೆಲೆ ಇಟಲಿಯೂ ಕೂಡ ಕಡಲೆಗೆ ವಿಶಿಷ್ಟ ಸ್ಥಾನ ಪಡೆದ ದೇಶ. 

           ಶೇ 20ಕ್ಕೂ ಹೆಚ್ಚು ಪ್ರೊಟೀನನ್ನು ಹೊಂದಿರುವ ಕಡಲೆಯು  ಸಾಂಸ್ಕೃತಿಕವಾಗಿಯೂ, ಧಾರ್ಮಿಕವಾಗಿಯೂ ಹಾಗೂ ಪೋಷಕಾಂಶಗಳ ಪೂರೈಕೆಯ ದೃಷ್ಟಿಯಿಂದಲೂ ಭಾರತೀಯರ ಜೀವನದಲ್ಲಿ ಹಾಸುಹೊಕ್ಕಾಗಿರುವ ಬೆಳೆ. ನಮ್ಮ ಆಹಾರ, ಆರೋಗ್ಯ ಹಾಗೂ ಜೀವನದಲ್ಲಿ ಕಡಲೆಯ ಪಾತ್ರಕ್ಕೆ ವಿಶೇಷ ಸ್ಥಾನವಿದೆ. ಕಡಲೆ ಬೆಲ್ಲ-ಮೋದಕಗಳು ಗಣಪತಿಗೆ ಪ್ರಿಯವಾದ ಆಹಾರವೆಂದು, ಪ್ರಸಾದವಾಗಿ, ನವಧಾನ್ಯಗಳಲ್ಲಿ ಒಂದಾಗಿ, ಅನೇಕ ವ್ರತ ಹಾಗೂ ಪೂಜೆಗಳಲ್ಲಿಯೂ ಬಳಸಲಾಗುತ್ತದೆ. ದಿನನಿತ್ಯದ ಆಹಾರದಲ್ಲಿ ಹುರಿಗಡಲೆಯಾಗಿ, ನೆನೆಗಡಲೆಯಾಗಿ, ಉಸಳಿಯಾಗಿ, ಉಂಡೆಯಾಗಿದ್ದಲ್ಲದೇ, ಹೋಳಿಗೆಯಾಗಿಯೂ ಕಡಲೆ ಪಾತ್ರವಹಿಸುತ್ತದೆ. ಅಯ್ಯೋ ಅಷ್ಟೇ ಏಕೆ ಒಗ್ಗರಣೆಗೂ ಇದರ ಬಳಕೆಯು ಸೈ! ಕೋಸಂಬರಿಗೂ ಇದರ ಸಾಹಚರ್ಯ ಇದ್ದದ್ದೇ. ಹೀಗೆ ಕಡಲೆಯ ವಿಸ್ಮಯಗಳು ಹತ್ತು ಹಲವು.  ಸಾಂಪ್ರಾಯಿಕ ಅಡುಗೆಗಳಿಂದ ಮೊದಲಾಗಿ ಆಧುನಿಕ ಭಕ್ಷ್ಯಗಳ ತಯಾರಿಯಲ್ಲಿಯೂ ಇದರ ಹಿರಿಮೆಯನ್ನು ಕಾಣಬಹುದು. ಸಿಹಿ-ಖಾರ, ಕರಿದ-ಹುರಿದ, ನೆನೆಸಿದ-ಬೇಯಿಸಿದ, ಹೀಗೆ ಬಗೆ ಬಗೆಯ ಉತ್ಪನ್ನಗಳಲ್ಲಿ ಇದು ಬಳಕೆಯಲ್ಲಿದೆ.  

          ಇವೆಲ್ಲದರ ಜೊತೆಯಲ್ಲಿ ಹಸಿಯಾದ ಕಡಲೆಯ ಗಿಡಗಳನ್ನು ಕಿತ್ತು, ಹಾಗೆಯೇ ಸಣ್ಣ-ಸಣ್ಣ ಸಿವುಡುಗಳಾಗಿಸಿ ಮಾರುವುದನ್ನು ನಮ್ಮ ರಾಜ್ಯದ ಮಧ್ಯ ಭಾಗದಿಂದ ಉತ್ತರಕ್ಕೆ ಹೋದಂತೆ ಕಾಣುತ್ತೇವೆ. ನಮ್ಮ ಕೈಯ ಹಿಡಿಯಲ್ಲಿ ಕಡಲೆಯ ಗಿಡಗಳ ಕಟ್ಟನ್ನು ಹಿಡಿದು, ಗಿಡದಿಂದಲೇ ಒಂದೊಂದೇ ಕಾಯಿಯನ್ನು ಕಿತ್ತು, ಸಿಪ್ಪೆ ಸುಲಿದು ಹಸಿಯಾದ ಹಸಿರು ಕಾಳನ್ನು ತಿನ್ನುವುದರಲ್ಲಿ ಒಂದು ಮೋಜು ಇದೆ. ಗಿಡದಲ್ಲಿನ ಕಾಯಿಗಳೇನು ಇನ್ನೇನು ಬಲಿಯಲು ಆರಂಭಿಸಿದಾಗ ಹೀಗೆ ಕಿತ್ತು ಮಾರುವ ಪರಿಪಾಟವಿದೆ.  ಇದೊಂದು ಲಾಭದಾಯಿಕವಾದ ವಿಕಾಸ ಕೂಡ.  ನನ್ನೂರಿನಲ್ಲಿ ನನ್ನ ಹಿರಿಯ ಮಿತ್ರರೊಬ್ಬರು 80ರ ದಶಕದ ಮಧ್ಯಬಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಅರ್ಥವಿಜ್ಞಾನದಲ್ಲಿ ಪಡೆದೂ ಕೆಲಸ ಸಿಗದೆ, ಪುಟ್ಟ ಹೊಲದಿಂದ ಕಡಲೆ ಬೆಳೆದು, ನನ್ನೂರಿನಲ್ಲೇ ರಸ್ತೆಗಳಲ್ಲಿ ಅಡ್ಡಾಡುತ್ತಾ ತಲೆಯ ಮೇಲೆ ಕಡಲೆಗಿಡಗಳ ಕಟ್ಟುಗಳ ಬುಟ್ಟಿ ಹೊತ್ತು ಮಾರುತ್ತಿದ್ದುದು, ಊರಿಗೆಲ್ಲಾ ಬದುಕನ್ನು ಕಟ್ಟಿಕೊಳ್ಳಲು ಮುಜುಗರದ ಪರಿಧಿಯನ್ನು ದಾಟುವ ಬಲು ದೊಡ್ಡ ಪಾಠವಾಗಿತ್ತು. ಅವರಿಗೆ ಕೆಲಸವೂ ಸಿಗದೆ, ಅಂತಹಾ ಅಲೋಚನೆಯನ್ನೇ ಬಿಟ್ಟು, ರೈತನಾಗಿ ಸ್ವಂತ ಮನೆ ಕಟ್ಟಿ, ಮಕ್ಕಳನ್ನೂ ನೆಲೆಯಾಗಿಸಿ ಆಕರ್ಷಕ ಜೀವನ ನಡೆಸುತ್ತಿದ್ದಾರೆ.

          ಬದುಕನ್ನು ಕಟ್ಟಿಕೊಡುವುದರಲ್ಲಿ “ಕಡಲೆ”ಯದು ನಿಜಕ್ಕೂ ದೊಡ್ಡ ಪಾತ್ರ! “ಅಯ್ಯೋ, ಏನಿಲ್ಲವೆಂದರೂ ರಸ್ತೆ ಬದಿಯಲ್ಲಿ “ವಡೆ” ಕರಿದು ಮಾರಿ ಜೀವನ ಮಾಡ್ತೀನಿ” ಎನ್ನುವವರನ್ನು ಕೇಳಿರುತ್ತೀರಿ. ಅಂತಹವರನ್ನು ಈಗಲೂ ಒಂದೂವರೆ ಕೋಟಿ ಜನರಿರುವ ಬೆಂಗಳೂರಿನ ದಟ್ಟ ಬಡವಾಣೆಯಲ್ಲಿ ದಿನವೂ ನೋಡುತ್ತಿದ್ದೇನೆ. ಕರಿಯಲು ಒಂದು ಬಾಣಲಿ, ಕರಿದ ಬಜ್ಜಿ, ವಡೆಗಳನ್ನು ತೆಗೆಯಲು ಒಂದು ಜಾಲರಿ ಚಮಚ , ಸೀಮೆ ಎಣ್ಣೆಯ ಒಲೆ  -ಈ ಮೂರರಿಂದಲೇ ಬದುಕನ್ನೇ ಕಟ್ಟಿಕೊಂಡ, ಅದರಿಂದಲೇ ಜೀವನವನ್ನೂ ಬೆಳೆಸಿಕೊಂಡ  ಸಹಸ್ರಾರು ಕುಟುಂಬಗಳಿವೆ. ಇವು ಮೂರೂ ಇಲ್ಲದ  ಅನಾಥನೊಬ್ಬ ಇವನ್ನೆಲ್ಲಾ ಬಾಡಿಗೆ ಪಡೆದು, ಅಲ್ಲಲ್ಲಿ ಬಿದ್ದ ಕಟ್ಟಿಗೆ, ಇತ್ಯಾದಿ ಉರುವಲುಗಳನ್ನು ಮುಂಜಾನೆಯಲ್ಲಿ ಸಂಗ್ರಹಿಸಿ, ಮಧ್ಯಾಹ್ನದಿಂದ ಸೌದೆ ಒಲೆಯಿಂದ ಸಾಲದಲ್ಲಿ ತಂದ ಎಣ್ಣೆ, ಕಡಲೆಯ ಹಿಟ್ಟಿನಿಂದ ಬದುಕು ಕಟ್ಟಿಕೊಂಡ ಚಿತ್ರಣ ಶಾಶ್ವತವಾಗಿದೆ. ವರ್ಷಗಟ್ಟಲೆ ಒಂದು ಗೊತ್ತಾದ ಸಮಯದಲ್ಲಿ ಆತನ ಚಟುವಟಿಕೆಗಳು “ಗಂಟೆ ಹೊಡೆದಂತೆ” ಅನ್ನುತ್ತಾರಲ್ಲಾ ಹಾಗೆ, ಸಮಯಕ್ಕೆ ಸರಿಯಾಗಿ ಆತನ ನಡವಳಿಕೆ ಇರುತ್ತಿತ್ತು. ದಿನ ರಾತ್ರಿ ವರೆಗೂ ಆತನು ಕರಿದ ಮೆಣಸಿನಕಾಯಿ ಬಜ್ಜಿ, ಕಡಲೆಬೇಳೆ ವಡೆಗಳು ಕಂಪನ್ನು ಬೀರುತ್ತಿದ್ದವು. ಜೀವನ ಪೂರ್ತಿ ಹಾಗೆಯೇ ಕಳೆದ  ಆತ, ಮದುವೆ ಮಕ್ಕಳು, ಸಂಸಾರವನ್ನೂ ನಿಭಾಯಿಸಿದ್ದಲ್ಲದೆ, ಸ್ವಾಭಿಮಾನಿಯಾಗಿಯೇ ಕಡೆಗಾಲವನ್ನೂ ಕಂಡ. ಹೀಗೆ ಸ್ವಾಭಿಮಾನವನ್ನು ಬೆಳೆಸುವಲ್ಲಿ ಬೆರಗಿನ ಕಡಲೆಯಾಗಿದೆ.

          ಲೆಗ್ಯೂಮ್ ಗುಂಪಿನ ಸಸ್ಯಗಳನ್ನು ಅವುಗಳ ಪರಕೀಯ ಪರಾಗಸ್ಪರ್ಶದಿಂದ ಗುರುತಿಸುವುದು ಸಹಜ. ಹಾಗಾಗಿ ಅವುಗಳಲ್ಲಿ ವೈವಿಧ್ಯಮಯ ತಳಿಗಳನ್ನು ಕಾಣುತ್ತೇವೆ. ಅಚ್ಚರಿ ಎಂಬಂತೆ ಕಡಲೆಯು ಸ್ವಕೀಯ ಪರಾಗಸ್ಪರ್ಶವನ್ನು ವಿಕಾಸಗೊಳಿಸಿಕೊಂಡಿದೆ. ಇದರಲ್ಲಿ ಗಂಡು ಪರಾಗವು  ಹೂವಿನ್ನೂ ಮೊಗ್ಗಾಗಿದ್ದಾಗಲೇ  ಹೊರಬಂದು ಹೂವಿನ ಹೆಣ್ಣುಭಾಗವನ್ನು ತಲುಪುತ್ತದೆ. ಹಾಗಾಗಿ ಹೂವರಳುವುದರೊಳಗೇ ಪರಾಗಸ್ಪರ್ಶ ಕ್ರಿಯೆ ಮುಗಿದೇ ಹೋಗಿರುತ್ತದೆ. ಅಂದಂತೆ ನಮ್ಮ ಬಹು ಪಾಲು ರೈತರ ಬಳಿಯಲ್ಲಿ ತಳಿಗಳು ತಮ್ಮ ಸ್ವಂತಿಕೆಯ ಗುಣವನ್ನು ಉಳಿಸಿಕೊಂಡೇ ಇರುತ್ತವೆ. ಅಂದರೆ ಇವುಗಳಲ್ಲಿ ವೈವಿಧ್ಯತೆಯು ಕಡಿಮೆ ಎಂದೇನೂ ಅಲ್ಲ! ನಮ್ಮ ಪರಿಸರ, ಹವಾಮಾನ ಮಣ್ಣು ಇತ್ಯಾದಿಗಳಿಂದಲೂ ತಳಿಗುಣಗಳಲ್ಲಿ ವೈವಿಧ್ಯತೆಯು ವಿಕಾಸವಾಗುತ್ತಲೇ ಇರುತ್ತದೆ.   ಜಗತ್ತಿನ ಎರಡು ಮುಖ್ಯವಾದ ವಿಧಗಳಾದ ನಮ್ಮದೇ ಆದ ದೇಸಿ ಹಾಗೂ ಬಿಳಿಯ ಸಿಪ್ಪೆಯ ಕಾಬೂಲ್ ಮುಖ್ಯವಾಗಿವೆ. ದೇಸಿ ತಳಿಗಳ ಬಗೆಗಳು ಸಾಕಷ್ಟು ಇದ್ದು, ಹೆಚ್ಚಿನ ರೈತರ ಹೊಲವನ್ನು ಆಕ್ರಮಿಸಿಕೊಂಡಿವೆ. ಕರಿಯ ಸಿಪ್ಪೆ, ಕಂದು ಬಣ್ಣದ ಸಿಪ್ಪೆಯವು ಹಾಗೂ ಹಸಿರು ಬಣ್ಣದ ಸಿಪ್ಪೆಯನ್ನು ಹೊಂದಿರುವ ಕಡಲೆಯು ಜನಪ್ರಿಯವಾದವು. ಇವುಗಳಲ್ಲೇ ಪರಿಸರವು ಸಾಕಷ್ಟು ವೈವಿಧ್ಯತೆಯನ್ನು ತನ್ನ ಮಡಿಲಿಂದ ತಳಿಗಳಿಗೆ ಎರೆದು ಪೋಷಿಸಿ ವಿವಿಧ ಪೋಷಕಾಂಶಗಳ ತಳಿಗಳನ್ನು ವಿಕಸಿಸಿದೆ. ಮಾನವ ಕುಲವಂತೂ ಈಗಾಗಲೇ ಹೇಳಿರುವಂತೆ ನಾವು ತಿನ್ನ ಬಹುದಾದ ಎಲ್ಲಾ ರುಚಿಗಳಲ್ಲೂ ಕಡೆಲೆಯನ್ನು ಪಾತ್ರವಾಗಿಸಿದೆ. ಒಟ್ಟಿನಲ್ಲಿ ಕಡಲೆಯು ಬಗೆ ಬಗೆಯ ಆಹಾರದ ತಯಾರಿಯಲ್ಲಿ ಅತ್ಯಂತ ಜನಪ್ರಿಯವಾದ ದ್ವಿದಳಧಾನ್ಯ. ಇದರ ವೈವಿಧ್ಯ ಅಪಾರವಾಗಿದೆ. ಇನ್ನು ಕಾಬೂಲ್ ಕಡಲೆಯು ಮಧ್ಯ ಏಶಿಯಾದ ಕಾಬೂಲ್‍ ನಿಂದ ಪರಿಚಯವಾಗಿದೆ. ಇದರ ಬಣ್ಣ ತಿಳಿಗಿದ್ದು, ಗಾಢವಾಗಿರುವುದಿಲ್ಲ. ಕಾಳಿನ ಗಾತ್ರವೂ ತುಸು ಹೆಚ್ಚು. ದೊಡ್ಡದಾಗಿಯೂ ಇದು ದೇಸಿ ಕಡಲೆಗಳಿಗೆ ಹೋಲಿಸಿದರೆ ಮೃದು.

                ನಮ್ಮ ಆಹಾರವು ಪ್ರೊಟೀನಿನ ಬಳಕೆಯಿಲ್ಲದೆ ಪರಿಪೂರ್ಣವಾಗದು. ಹಾಗೆಯೇ ಶಕ್ತಿಮೂಲವಾದ ಸಕ್ಕರೆ-ಪಿಷ್ಟವೂ ಬೇಕು. ಈ ಎರಡರ ಜೊತೆಯಲ್ಲಿ ಒಂದಷ್ಟು ಕೊಬ್ಬೂ ಸೇರಿದರೆ ಅದರ ಹೆಚ್ಚುಗಾರಿಕೆಯೇ ಬೇರೆ. ಇದಕ್ಕೆಲ್ಲಾ ಸದಾ ತಯಾರಿರುವ ಕಾಳುಗಳಲ್ಲಿ ಕಡಲೆಯನ್ನು ಬಿಟ್ಟರೆ ಮತ್ತೊಂದಿಲ್ಲ. ಒಗ್ಗರಣೆಯಿಂದ-ಭರ್ಫಿಯವರೆಗೂ ಒಗ್ಗಿರುವ ಒಂದೇ ಒಂದು ಕಾಳು ಕಡಲೆ. ಹಸಿಯದಾಗಿ, ಒಣಗಿದನ್ನು ನೆನೆಸಿ, ಹುರಿದು ಬೇಯಿಸಿ, ಕರಿದು, ಹೇಗೆ ಬಯಸುತ್ತಿರೋ ಹಾಗೆ ಒಗ್ಗುವ ಜಾಯಮಾನ ಈ ಕಾಳಿನದು. ನಮ್ಮೆಲ್ಲಾ ಮಾರ್ಪಾಡಿಗೂ ಶ್ರೇಷ್ಠ ಕಾಳಾಗಿ ಸಹಕರಿಸುವ ಕಡಲೆಯು ನಮ್ಮ ದೇಶದ ಹೆಮ್ಮೆ. ಜಗತ್ತಿನಲ್ಲೇ ಅತೀ ಹೆಚ್ಚು ಬೆಳೆಯುವ, ಬಳಸುವ ದೇಶ ನಮ್ಮದು.  ಇದರಲ್ಲಿ ಬಹು ಮುಖ್ಯವಾದ ಪೋಷಕಾಂಶಗಳೂ ಸಾಕಷ್ಟು ಇವೆ. 

          ಕಡಲೆಯು ಪ್ರೊಟೀನ್ ಮತ್ತು ಪಿಷ್ಟವನ್ನು ಒಳಗೊಂಡ ಕಾಳು. ಈ ಎರಡೂ ಪೋಷಕಾಂಶಗಳು ಸೇರಿ ಕಾಳಿನ ಶೇ 80ರಷ್ಟು ದ್ರವ್ಯರಾಶಿಯನ್ನು ಹೊಂದಿವೆ. ಕಾಳಿದ ಅರ್ಧಭಾಗ ಪ್ರಮುಖವಾಗಿ ಪಿಷ್ಟವೇ ಆಗಿದೆ. ಅದರಲ್ಲೂ ಕಾಬೂಲ್ ಪ್ರಕಾರದವು ಹೆಚ್ಚು ಕರಗುವ ಸಕ್ಕರೆಯನ್ನು ಹೊಂದಿವೆ. ಸಾಮಾನ್ಯವಾಗಿ ಬಳಸಲಾಗದ ಪಿಷ್ಟವನ್ನು ಹೆಚ್ಚು ಹೊಂದಿರುವ ಲೆಗ್ಯೂಮ್ ಗಳಲ್ಲಿ ಕಡಲೆಯದು ಪ್ರಮುಖ ಸ್ಥಾನ. ಹಾಗಾಗಿ ಕಡಲೆಯನ್ನು ಬಳಸಿಯೂ ಅದರಲ್ಲಿ ಪಿಷ್ಟವನ್ನು ನಾವು ಸಂಪೂರ್ಣವಾಗಿ ಅರಗಿಸಲಾರೆವು. ಇದರಲ್ಲಿ ಸಾಕಷ್ಟು ನಾರಿನ ಅಂಶವಿದ್ದು ವಿವಿಧ ತಳಿಗನುಗುಣವಾಗಿ 12.4% ನಿಂದ 31.5% ವರೆಗೂ ಇರುವುದನ್ನು ಅಧ್ಯಯನಗಳು ತಿಳಿಸಿವೆ. ಕಡಲೆಯಲ್ಲಿ ಪ್ರತಿಶತ 6ರಷ್ಟು ಕೊಬ್ಬಿನ ಅಂಶವಿದ್ದು ಸಸ್ಯಾಹಾರಿಗಳಿಗೆ ವರವಾಗಿದೆ. ನಮ್ಮ ದೇಹಕ್ಕೆ ಅಗತ್ಯವಾದ ಅಮೈನೋ ಆಮ್ಲಗಳು ಕಡಲೆಯಲ್ಲಿ ಸಾಕಷ್ಟು ಇದ್ದು, ಅದರ ಪ್ರೊಟೀನ್ ಗುಣಮಟ್ಟವನ್ನು ಹೆಚ್ಚಿಸಿವೆ.  ಹಾಗಾಗಿ ನಮ್ಮ ಸಹಜವಾದ ಏಕದಳ ಧಾನ್ಯದ ಪ್ರಧಾನವಾದ ಊಟಕ್ಕೆ ಇದು ಸೇರಿಕೊಂಡು ಉತ್ತಮವಾದ ಆಹಾರಾಂಶವನ್ನು ಕೊಡುತ್ತದೆ. ಒಟ್ಟಾರೆಯ ಕೊಬ್ಬು ಕಡಿಮೆ ಇದ್ದರೂ ಸಹಾ ಅಸಂತೃಪ್ತ ಕೊಬ್ಬಿನಾಮ್ಲಗಳಾದ ಲಿನೋಲೆನಿಕ್ ಆಮ್ಲ ಮತ್ತು ಓಲಿಯಿಕ್ ಆಮ್ಲಗಳಿಂದ ಶ್ರೀಮಂತವಾಗಿದೆ. ಸಿಸ್ಟೋಸ್ಟಿರಾಲ್ ಕಾಂಪೋಸ್ಟಿರಾಲ್ ಮುಂತಾದ ಸಾಕಷ್ಟು ಸ್ಟಿರಾಲ್‍ ಗಳನ್ನೂ ಒಳಗೊಂಡ ಕಡಲೆಯು ಕ್ಯಾಲ್ಸಿಯಂ, ಮ್ಯಾಗ್ನಿಸಿಯಂ, ಕಬ್ಬಿಣ, ರಂಜಕ ಮತ್ತು ಪೊಟ್ಯಾಶ್‍ ಗಳಿಂದ ಖನಿಜಭರಿತವಾಗಿದೆ. ರೈಬೋಫ್ಲೆವಿನ್, ನಯಾಸಿನ್, ಥಯಾಮಿನ್, ಫೋಲಿಕ್ಆಮ್ಲ ಮತ್ತು ಬೀಟಾ ಕೆರೋಟಿನ್ ಮುಂತಾದ ವಿಟಮಿನ್‍ ಗಳು ಇದರ ಮಹತ್ವವನ್ನು ಹೆಚ್ಚಿಸಿವೆ.

          ಇವೆಲ್ಲವುಗಳಿಂದಾಗಿ ನಮ್ಮ ಆರೋಗ್ಯ ನಿರ್ವಹಣೆಯಲ್ಲಿ ಕಡಲೆಯು ಮುಖ್ಯ ಪಾತ್ರವನ್ನು ವಹಿಸಿದೆ. ಟೈಪ್-2 ಸಕ್ಕರೆ ಕಾಯಿಲೆ, ವಿವಿಧ ಜೀರ್ಣಾಂಗ ಸಮಸ್ಯೆಗಳು ಅಲ್ಲದೆ ಕ್ಯಾನ್ಸರ್ ಪರಿಹಾರಕ್ಕೂ ಯೋಗ್ಯ ಉತ್ತರಗಳನ್ನು ಕಡಲೆಯು ನೀಡಿದೆ. ಹಾಗೆಯೇ ಯಾವುದೇ ಬೇಳೆ-ಕಾಳಿನಂತೆ ಕೆಲವು ಆ್ಯಂಟೀನ್ಯೂಟ್ರಿಶನಲ್ (ಪೋಷಕಾಂಶಗಳ ಕಹಿಸಮಸ್ಯೆಗಳನ್ನು) ಕಡಲೆಯಲ್ಲೂ ಕಾಣಬಹುದು. ಆದರೆ ಇವನ್ನೆಲ್ಲಾ ನೆನೆಸುವುದರಿಂದ, ಹುರಿಯುವುದರಿಂದ ಮತ್ತು ಬೇಯಿಸುವುದರಿಂದ ತಪ್ಪಿಸಬಹುದು. ಕಡಲೆಗೆ ಗ್ಯಾಸ್ಟ್ರಿಕ್‍ -ವಾಯು ಉಂಟುಮಾಡುವ ಆರೋಪವಿದೆ. ನಿಜಕ್ಕೂ ಬಟಾಣೆಗೆ ಹೋಲಿಸಿದರೆ ಇದರಿಂದ ಗ್ಯಾಸ್ಟ್ರಿಕ್‍ ಕಡಿಮೆ, ಆದರೆ ಬಟಾಣಿಗಿಂತ ಹೆಚ್ಚು ಪಟ್ಟು ಕಡಲೆಯನ್ನು ತಿನ್ನುತ್ತೇವೆ, ತಿನ್ನಬಹುದು, ಹಾಗಾಗಿ ಗ್ಯಾಸ್‍ ಅನುಭವಕ್ಕೆ ಬರುತ್ತದೆ. ಜೊತೆಗೆ ಸಿಪ್ಪೆಯ ಸಮೇತ ಕಾಳುಗಳ ಬಳಕೆಯಿಂದ ಇದರ ಪರಿಹಾರವೂ ಸಾಧ್ಯ.  ಇವೆಲ್ಲದರ ಜೊತೆಯಲ್ಲಿ ಇದರ ಆ್ಯಂಟಾಕ್ಸಿಡೆಂಟ್ ಸಾಮರ್ಥ್ಯ, ಮುಂತಾದ ಕೆಲವು ವೈವಿಧ್ಯಮಯ ಆಹಾರದ ಗುಣಗಳಿಂದಾಗಿ ಕಡಲೆಗೆ ಭಾರತೀಯ ಬೇಳೆಕಾಳು ಬಳಕೆಯಲ್ಲಿ  ಬಹು ದೊಡ್ಡ ಹೆಸರು.

ಕಡಲೆಯ ವೈವಿಧ್ಯಮಯ ತಿನಿಸುಗಳು

ಇದರಿಂದ ತಯಾರಿಸಲಾಗುವ ವಿವಿಧ ಪದಾರ್ಥಗಳ ಪಟ್ಟಿಯಂತೂ ತುಂಬಾ ದೊಡ್ಡದು. ಬಹುಶಃ ಯಾವುದೇ ಸಸ್ಯದ ಉತ್ಪನ್ನಕ್ಕೆ ಹೋಲಿಸಿದರೆ ಇದರಿಂದ ತಯಾರಿಸಲಾಗುವ ಪದಾರ್ಥಗಳ ಸಂಖ್ಯೆ ಹೆಚ್ಚು. ಬಜ್ಜಿ, ಬೊಂಡಾಗಳಲ್ಲಿರುವಂತೆ  -ಕಡಲೆಹಿಟ್ಟಿನಿಂದ ತಯಾರಿಸಲಾದ ಪದಾರ್ಥದ ಹೊರಗೋಡೆಯಾಗಿಯೂ, ಮೈಸೂರ್ ಪಾಕ್, ಭರ್ಫಿಗಳಲ್ಲಿರುವಂತೆ ಸಿಹಿಯಲ್ಲಿ ಹದವಾಗಿ ಬೆರತರೂ, ಇನ್ನು ಹೋಳಿಗೆಯಲ್ಲಿ ಹೂರಣವಾಗಿಯಾದರೂ ಒಗ್ಗಬಲ್ಲ ದಕ್ಷತೆ ಇದಕ್ಕಿದೆ.ಊಟದ ಆರಂಭಿಕ ತಿನಿಸಿನಿಂದ ಪ್ರಾರಂಭಿಸಿ ಮುಕ್ತಾಯದ ಪೇಯದವರೆಗೂ ಇದರ ಬಳಕೆ ಮಾಡಬಹುದಾಗಿದೆ. ಸಾಂಪ್ರದಾಯಿಕ ಹೋಳಿಗೆಯಂತಹ ತಿನಿಸುಗಳನ್ನೂ, ಆಧುನಿಕ ಬರ್ಫಿಗಳನ್ನೂ ಮಕ್ಕಳಿಗೆ ಇಷ್ಟವಾಗುವ ಬಿಸ್ಕತ್ತುಗಳನ್ನೂ ಜತೆಗೆ ಕುರುಕಲು ತಿಂಡಿಗಳನ್ನೂ ಮಾಡಬಹುದು. ಅಷ್ಟೇ ಅಲ್ಲದೆ ಕಡಲೆಯ ಬೆಳೆಯಿನ್ನೂ ಎಳೆಯದಾಗಿರುವಾಗ ಅದರ ಚಿಗುರನ್ನು ಚುವುಟುವುದರಿಂದ ಹೆಚ್ಚಿನ  ಕವಲೊಡೆಯಲು ಸಾಧ್ಯವಾಗುತ್ತದೆ. ಇದರಿಂದ ಹೆಚ್ಚಿನ ಹಸಿರೆಲೆಗಳು ಬೆಳೆದು, ಹೆಚ್ಚು ದ್ಯುತಿಸಂಶ್ಲೇಷಣೆ ನಡೆದು ಇಳುವರಿಯು ಹೆಚ್ಚುತ್ತದೆ. ಹೀಗೆ ಚಿಗುರನ್ನು ಚಿವುಟುವುದರಿಂದ ಸಂಗ್ರಹವಾದ ಹಸಿರು ಎಲೆಯು ಉತ್ತಮವಾದ ತರಕಾರಿ. ಇದನ್ನು ಸಾರು, ಚಟ್ನಿ ಮಾಡಲು ಬಳಸಿ ನಮ್ಮ ಆರೋಗ್ಯಕ್ಕೆ ವೈವಿವಿಧ್ಯದ ರುಚಿಯ ಮೆರಗನ್ನು ಕೊಡಬಹುದು.

ಸಿಹಿ ತಿನಿಸುಗಳು : ಪಾಯಸ, ಹೋಳಿಗೆ, ಮೈಸೂರು ಪಾಕ್, ಬೇಸನ್ ಲಾಡು, ಬೂಂದಿ ಲಾಡು, ಬರ್ಫಿ ಮುಂತಾದವು

ಖಾರದ ತಿನಿಸುಗಳು : ಖಾರಾ-ಸೇವು, ಖಾರಾ ಬೂಂದಿ, ವಡೆ, ವಿವಿಧ ಬಜ್ಜಿಗಳು, ಬೊಂಡಾಗಳು. ಅಲ್ಲದೆ ದಿನನಿತ್ಯದ ಸಾಂಬಾರ್, ಪಲ್ಯ ತಯಾರಿ. ಕಡಲೆಯ ಹಿಟ್ಟಿನ ಜುಣಕ ಎನ್ನುವ ವಿಶೇಷ ಬಗೆಯ ಪಲ್ಯ.  ಮಧ್ಯಪ್ರಾಚ್ಯ ಹಾಗೂ ಇಟಲಿಯಲ್ಲಿ ವೈವಿಧ್ಯಮಯ ತಿನಿಸುಗಳಿದ್ದು, ಮಾಂಸಾಹಾರದ ಜೊತೆಗೂ ಒಗ್ಗಿರುವ ಹತ್ತಾರು ಬಗೆಗಳಿವೆ.

ಹಸಿ ತಿನಿಸುಗಳು : ಉಸಳಿ, ಕೋಸಂಬರಿ, ನೆನೆಗಡಲೆಯ ಖಾದ್ಯ

ಹುದುಗುಗೊಳಿಸಿದ (ಹುಳಿ ಬರಿಸಿದ) ತಿನಿಸುಗಳು -ಢೋಕ್ಲಾ ಇದೊಂದು ಗುಜರಾತ್ ರಾಜ್ಯದ ತಿನಿಸು.  ಇಡ್ಲಿಯಂತೆ ಹುದುಗು ಬರಿಸಿದ ಹಿಟ್ಟಿನಿಂದ ಹಬೆಯಲ್ಲಿ ಬೇಯಿಸಿ ಮಾಡುತ್ತಾರೆ.

ಬೇಕರಿ ಉತ್ಪನ್ನಗಳು -ಕೇಕ್‍, ಬ್ರೆಡ್‍, ವಿಶಿಷ್ಠವಾದ ಬರ್ಗರ್‍ಗಳು, ಪಫ್‍ ಗಳು

ಬಿಸ್ಕತ್‍, ಚಾಕೊಲೆಟ್ಗಳು – ವಿವಿಧ ಚಾಕೊಲೆಟ್‍ ಹಾಗೂ ಬಿಸ್ಕತ್ತುಗಳು

ಕಡಲೆಯ ಕಾಫಿ – ಜರ್ಮನಿಯಲ್ಲಿ ಕಡಲೆಯ ಹುರಿದ ಪುಡಿಯಿಂದ ಕಾಫಿಗೆ ಪಯರ್ಾಯವಾದ ಪೇಯ ತಯಾರಿಸುತ್ತಿದ್ದರು. ಈಗಲೂ ಕೆಲವು ಭಾಗಗಳಲ್ಲಿ ಅದರ ಬಳಕೆ ಇರುವುದೆಂಬ ದಾಖಲೆಗಳಿವೆ. ಇವುಗಳಿಗೆಲ್ಲಾ ಒಂದೊಂದಕ್ಕೂ ಉದ್ದವಾದ ಕಥೆಗಳೇ ಇವೆ.

          ಹಲ್ಲಿಗೂ ಕಡಲೆಗೂ ತುಂಬಾ ನಂಟು. ಇವುಗಳಲ್ಲಿ ಯಾವುದು ಗಟ್ಟಿ ಎನ್ನುವ ಮಾತುಗಳು ತುಂಬಾನೆ ಜನಪ್ರಿಯ. ನಿಜಕ್ಕೂ ಇದಕ್ಕೆ ಬೆಂಬಲವಾಗಿರುವ ಸಂಗತಿ ಕಡಲೆಯ ಸಂಬಂಧಿಯ ಕಾಳಿನ ಜೊತೆಗಿದೆ. ಇಟಲಿಯ ದಕ್ಷಿಣ ಪ್ರಾಂತ್ಯದಲ್ಲಿ ಕಡಲೆಯ ತಳಿಯೊಂದು ತುಂಬಾ ಗಟ್ಟಿ ಹಾಗೂ ದಟ್ಟವಾದ ಕಪ್ಪು ಬಣ್ಣ಻ದ ಸಿಪ್ಪೆಯನ್ನು ಹೊಂದಿದೆ. ಹಲ್ಲಿಗೆ ಅಗೆಯಲು ಅಷ್ಟೇ ಕಷ್ಟವಲ್ಲ! ಬೇಯಿಸಲೂ ಕಷ್ಟ. ನಮ್ಮಲ್ಲೂ ಕೆಲವು ದೇಸಿ ಪ್ರಕಾರದವು ಸಣ್ಣ ಗಟ್ಟಿ ಕಾಳಿನವುಗಳಾಗಿವೆ, ಇವೂ ಕೂಡ ಗಟ್ಟಿ ಗುಣವನ್ನು ಹೊಂದಿವೆ. ಆದರೆ ಇಟಲಿಯ ಕಪ್ಪು ಕಡಲೆಯಂತಲ್ಲ! ಇನ್ನೂ ನಮ್ಮಲ್ಲಂತೂ ವಿವಿಧ ಬಣ್ಣದ ಸಿಪ್ಪೆಯನ್ನೂ ಹೊಂದಿರುವ ತಳಿಗಳಿವೆ. ಕೆಲವು ಮಾಸಲು ಕೆಂಪು, ಕೆಲವು ಕಪ್ಪು, ದಟ್ಟ ಕಪ್ಪು, ಹಸಿರು, ಹಸಿರು-ಕೆಂಪು, ಹೀಗೆ! ನಮ್ಮೆಲ್ಲಾ ಆಹಾರದ ರುಚಿಯ ಬಯಕೆಗಳನ್ನು ವೈವಿಧ್ಯಮಯವಾಗಿ ತೀರಿಸುವ ಕಡಲೆಯಂತಹ ಬೆಳೆ ಮತ್ತೊಂದಿಲ್ಲ. ನಮ್ಮ ಒಟ್ಟಾರೆ ಆರೋಗ್ಯಕರ ಜೀವನದ ಅಗತ್ಯಗಳಾದ ಪಿಷ್ಟ, ಪ್ರೊಟೀನು, ಕೊಬ್ಬು, ಖನಿಜಗಳು ಹಾಗೂ ವಿಟಮಿನ್ನುಗಳು ಇವೆಲ್ಲವನ್ನೂ ಕಡಲೆಯು ಹೊಂದಿದೆ. ಸಾಲದಕ್ಕೆ ನಮ್ಮ ನಾಲಿಗೆಗೆ ರುಚಿಯ ವೈಶಿಷ್ಟ್ಯವನ್ನು ಸಿಹಿ-ಖಾರ-ಹುಳಿ-ಉಪ್ಪು, ಮುಂತಾದ  ಎಲ್ಲಾ ಸಾಧ್ಯತೆಗಳಿಂದ ಪೋಷಿಸುತ್ತಿರುವ ಕಡಲೆಯು ನಿಜವಾಗಿ ಭಾರತೀಯರ ಹೆಮ್ಮೆ.

ಕೊನೆಯ ಮಾತು.–  ಕಡಲೆಗೂ ಗಣೇಶನಿಗೂ ನೋಟದಲ್ಲಿ ಸಾಮ್ಯತೆಯಿದೆ. ಹಂಪಿಯಲ್ಲಿ ಕಡಲೆಕಾಳು ಗಣಪ ಎಂಬ ಸುಮಾರು 15 ಅಡಿ ಎತ್ತರದ ಏಕಶಿಲಾ ಮೂರ್ತಿ ಇದೆ. ಹಂಪಿಯ ವಿರೂಪಾಕ್ಷ ದೇವಾಲಯಕ್ಕೆ ಹೋಗುವ ಮುನ್ನ ಹೇಮಕೂಟ ಪರ್ವತದ ಇಳಿಜಾರಿನಲ್ಲಿ ಇದನ್ನು ಕಾಣಬಹುದು. ಇದರ ಹೊಟ್ಟೆಯನ್ನು ಕಡಲೆಕಾಳನ್ನು ಹೋಲುವಂತೆ ಕೆತ್ತಲಾಗಿದೆ. ಮೊಳೆತ ಕಡಲೆಯ ಕಾಳು ಕುಳಿತ ಗಣಪನನ್ನೇ ಹೋಲುತ್ತದೆ. ಮೊಳಕೆಯು ಸೊಂಡಿಲಿಂತೆ, ಕಾಳಿನ ಬುಡವು ಕುಳಿತ ಭಂಗಿಯನ್ನು ನೆನಪಿಸುತ್ತದೆ. ನಾವೂ ಅಷ್ಟೆ ತಾನೆ ಗಣಪನನ್ನು ಕುಳ್ಳಿರಿಸಿ ಕಡಲೆಯನ್ನೇ ಗುಗ್ಗರಿ, ಉಸಳಿ, ಉಂಡೆ, ಮಾಡಿ ಪ್ರಸಾದ ಎಂದೂ ಹಂಚುತ್ತೇವಲ್ಲವೇ? ಕಡಲೆಯು ಆಹಾರವಾಗಿ ವಿವಿಧ ಭಕ್ಷ್ಯಗಳನ್ನಲ್ಲದೆ, ದೈವವನ್ನೂ ಆವರಿಸಿಕೊಂಡಿದೆ. ಕಡಲೆಯ ಕಾಳೂ ಚಿಕ್ಕವು, ಗಿಡವೂ ಚಿಕ್ಕದೇ, ಕಾಯಿಗಳೂ ಅಷ್ಟೇ! ಅದರ ಹರಹು ಮಾತ್ರ ನಮ್ಮ ಬಾಯಿಯ ಎಲ್ಲಾ ರುಚಿಗಳಿಗೂ ಹೊಂದಿಕೊಂಡು, ನಾವು ಊಹಿಸುವುದಕ್ಕಿಂತಲೂ ದೊಡ್ಡದಾಗಿದ್ದು,  ಬಾಯಿಯೊಳಗಿನ ರುಚಿಯ ಬ್ರಹ್ಮಾಂಡವೇ ಆಗಿದೆ.

ನಮಸ್ಕಾರ, ಚನ್ನೇಶ್.

Leave a Reply