You are currently viewing ಡಾ.ವೆಂಕಟರಾಮನ್ ರಾಮಕೃಷ್ಣನ್ ಅವರ ಕೃತಿ “Gene Machine- ಜೀನ್ ಮಷೀನ್”

ಡಾ.ವೆಂಕಟರಾಮನ್ ರಾಮಕೃಷ್ಣನ್ ಅವರ ಕೃತಿ “Gene Machine- ಜೀನ್ ಮಷೀನ್”

ನಮಸ್ಕಾರ. ಕಳೆದೊಂದು ವಾರದಿಂದಲೂ ನಮ್ಮ“CPUS- Centre for Public Understanding of Science” ನ ಮೂಲಕ ಈ ಸಾಲಿನ ನೊಬೆಲ್‌ ಬಹುಮಾನಗಳ ಕುರಿತಾದ ವಿಷಯಗಳನ್ನು ಓದಿರುತ್ತೀರಿ ಹಾಗೂ ಮತ್ತೆ ಅರ್ಥವಿಜ್ಞಾನಕ್ಕೆ ಸಂಬಂಧಿಸಿದ ನೊಬೆಲ್‌ ಬಹುಮಾನ ಸೋಮವಾರ ಪ್ರಕಟಗೊಳ್ಳುವುದರಿಂದ ಮುಂದಿನ ವಾರವೂ ಓದುವಿರಿ. ಇದರ ಜೊತೆಗೆ ನಿಮ್ಮ ಭಾನುವಾರದ ಬಿಡುವಿನ ಓದಿಗೆ, ಸಿಪಿಯುಎಸ್‌ ನ ಪುಸ್ತಕಯಾನದಲ್ಲಿ ನೊಬೆಲ್‌ ಬಹುಮಾನ ಪಡೆದ ಭಾರತೀಯ ಸಂಜಾತ ವಿಜ್ಞಾನಿ ಮತ್ತು ಅವರ ಸಾಧನೆಯನ್ನು ಪರಿಚಯಿಸುವ ಪುಸ್ತಕವನ್ನು ನೋಡೋಣ. ನಾನು ಪರಿಚಯಿಸುತ್ತಿರುವ ಪುಸ್ತಕ 2009 ರಲ್ಲಿ ರಸಾಯನವಿಜ್ಞಾನ ವಿಭಾಗದಲ್ಲಿ ನೊಬೆಲ್ ಬಹುಮಾನ ಪಡೆದ ವಿಜ್ಞಾನಿ ಹಾಗೂ ಪ್ರತಿಷ್ಠಿತ ರಾಯಲ್ ಸೊಸೈಟಿ ಅಫ್ ಲಂಡನ್ ನ ಅಧ್ಯಕ್ಷರಾಗಿದ್ದ ಡಾ.ವೆಂಕಟರಾಮನ್ ರಾಮಕೃಷ್ಣನ್ ಅವರ ಕೃತಿ “Gene Machine- ಜೀನ್ ಮಷೀನ್”.

ವೆಂಕಿ ಎಂದೇ ಪರಿಚಿತರಾದ ರಾಚನಿಕ ಜೀವಿವಿಜ್ಞಾನಿ(Structural Biologist) ಡಾ.ವೆಂಕಿ ರಾಮಕೃಷ್ಣನ್ ಅವರು ಹುಟ್ಟಿದ್ದು ೧೯೫೨ ರಲ್ಲಿ. ತಮಿಳುನಾಡಿನ ಚಿದಂಬರಂ ಅವರು ಹುಟ್ಟಿದ ಸ್ಥಳ. ಅವರ ಪೋಷಕರಿಬ್ಬರೂ ವಿಜ್ಞಾನಿಗಳು. ಅವರ ತಂದೆ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯ, ಬರೋಡದಲ್ಲಿ ಜೀವಿ-ರಸಾಯನವಿಜ್ಞಾನ ವಿಭಾಗದ ಮುಖ್ಯಸ್ಥರಾಗಿದ್ದರು. ತಾಯಿ ಕೂಡ ಮನೋವಿಜ್ಞಾನದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದಿದ್ದರು. ವೆಂಕಿ ಅವರು ಬಾಲ್ಯದಿಂದ ಪದವಿ ಕಾಲೇಜು ದಿನಗಳವರೆಗೂ ಬೆಳೆದದ್ದು ಕಲಿತದ್ದು ಎಲ್ಲಾ ಬರೋಡದಲ್ಲಿ. ಬಾಲ್ಯದಲ್ಲಿ ಗಣಿತ ಅವರ ಆಸಕ್ತಿಯ ವಿಷಯವಾಗಿದ್ದರೂ. ತಂದೆಗೆ ಮಗನನ್ನು ವೈದ್ಯನನ್ನಾಗಿ ಮಾಡಬೇಕೆಂದು ಆಸೆ ಇದ್ದರೂ, ವೆಂಕಿಯವರು ಎನ್.ಟಿ.ಎಸ್.ಇ. ಸ್ಕಾಲರ್ಶಿಪ್ ಪಡೆದು ಬರೋಡ ವಿವಿಯಿಂದ 1971ರಲ್ಲಿ ಭೌತವಿಜ್ಞಾನದಲ್ಲಿ ಪದವಿ ಪಡೆದರು. ರಿಚಡ್೯ ಫೈನ್ ಮನ್ ಪ್ರಭಾವಿಸಿದ ಹಲವಾರು ವಿಜ್ಞಾನ ವಿದ್ಯಾರ್ಥಿಗಳಲ್ಲಿ ವೆಂಕಿ ಕೂಡ ಒಬ್ಬರು. ಈ ಪ್ರಭಾವದ ಹಿನ್ನೆಲೆಯಲ್ಲೇ ನಂತರ ಅವರು ಅಮೆರಿಕಾದ ಓಹಿಯೋ ವಿವಿಯಿಂದ ಡಾಕ್ಟರೇಟ್ ಪದವಿಯನ್ನು ಪಡೆದರು.

ಡಾ. ವೆಂಕಿ ರಾಮಕೃಷ್ಣನ್

ಆ ಹೊತ್ತಿಗಾಗಲೇ ಜೀವಿವಿಜ್ಞಾನದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರ ಪರಿಣಾಮ, ಭೌತವಿಜ್ಞಾನದಲ್ಲಿ ಡಾಕ್ಡರೇಟ್ ಪದವಿ ಪಡೆದಿದ್ದರೂ, ಪುನಃ ಜೀವಿವಿಜ್ಞಾನದಲ್ಲಿ ಪದವಿ ಪಡೆಯಲೆಂದು ಅಮೆರಿಕಾದ ಕ್ಯಾಲಿಫೋನಿ೯ಯಾ ವಿಶ್ವವಿದ್ಯಾಲಯ, ಸ್ಯಾನ್ ಡಿಯಾಗೋ ಗೆ ಸೇರುತ್ತಾರೆ. ಮುಂದೆ ಕೆಲ ಕಾಲ ಯೇಲ್ ವಿವಿಯಲ್ಲಿ ಪೋಸ್ಟ್-ಡಾಕ್ಟರಲ್ ಅಧ್ಯಯನ ಮಾಡಿ, ರೈಬೋಸೋಮ್(Ribosomes) ಅಣುವಿನ ರಚನೆ ಬಗ್ಗೆ ಸಂಶೋಧಿಸುತ್ತಾ ಬ್ರೂಕ್ ಹೇವನ್ ರಾಷ್ಟ್ರೀಯ ಪ್ರಯೋಗಾಲಯದಲ್ಲಿ 12 ವಷ೯ ಇದ್ದು, ಮೂರು ವಷ೯ ಯೂಟಾ(Utah) ವಿವಿಯಲ್ಲಿ ಕೆಲಸ ಮಾಡಿ ಕೊನೆಗೆ ಇಂಗ್ಲೆಂಡ್ ನ ಕೇಂಬ್ರಿಡ್ಜ್ ಅಲ್ಲಿರುವ ಲ್ಯಾಬೋರೇಟರಿ ಆಫ್ ಮಾಲಿಕ್ಯುಲಾರ್ ಬಯಾಲಜಿ(LMB) ಯನ್ನು ಸೇರುತ್ತಾರೆ. ಡಿ.ಎನ್.ಎ. ರಚನೆಯನ್ನು ಜಗತ್ತಿಗೆ ತಿಳಿಸಿದ ಸಂಶೋಧನೆಗಳು ಸೇರಿದಂತೆ ಹಲವಾರು ನೊಬೆಲ್ ಬಹುಮಾನ ವಿಜೇತರನ್ನು ಪಡೆದ ಸಂಸ್ಥೆ LMB. ಅಲ್ಲದೇ ಮೆಕ್ಕಾ ಅಫ್ ಮಾಲಿಕ್ಯುಲರ್ ಬಯಾಲಜಿ ಎಂದೇ ಪ್ರಸಿದ್ಧವಾಗಿರುವ ಸಂಸ್ಥೆ. ಈ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾ, ಕ್ರಿಸ್ಟಲ್ಲಾಗ್ರಫಿ(Crystallography) ಮತ್ತು ಇಲೆಕ್ಟ್ರಾನ್ ಮೈಕ್ರಾಸ್ಕೋಪಿ (Electron Microscopy) ಕ್ಷೇತ್ರಗಳ ಅಧ್ಯಯನ ಮತ್ತು ಹೊಸ ಬೆಳವಣಿಗೆಗಳ ಸಹಾಯದಿಂದ ರೈಬೋಸೋಮ್ ಅಣುವಿನ ರಚನೆಯನ್ನು ಪರಮಾಣುವಿವರ ಸಮೇತ ಸಂಶೋಧಿಸಿ ಪ್ರಕಟಿಸುತ್ತಾರೆ ಶ್ರೀ ವೆಂಕಿ ರಾಮಕೃಷ್ಣನ್. ಮುಂದೆ 2009 ರಲ್ಲಿ ತಮ್ಮ ಈ ಸಂಶೋಧನೆಗೆ ರಸಾಯನವಿಜ್ಞಾನದ ನೊಬೆಲ್ ಬಹುಮಾನ ಕೂಡ ಪಡೆಯುತ್ತಾರೆ. ಅದೂ ತಮ್ಮ ಗುರು ಸಮಾನರಾದ ಆದರೆ ನಂತರದ ದಿನಗಳಲ್ಲಿ ಸ್ಪಧಿ೯ಗಳಂತಾದ ಯೇಲ್ ವಿವಿಯ ಥಾಮಸ್ ಸ್ಟೀಟ್ಜ್(Thomas Steitz) ಹಾಗೂ ಇಸ್ರೇಲಿನ ಅಡಾ ಯೋನಾ(Ada Yonath) ಅವರ ಒಟ್ಟಿಗೆ.

“Gene Machine” ಪುಸ್ತಕ ಮುಖ್ಯವಾಗಿ ಜೀವಿಕೋಶಗಳಲ್ಲಿ ಕಂಡುಬರುವ, ಅತ್ಯಂತ ಸಂಕೀಣ೯ವಾದ ದೊಡ್ಡಗಾತ್ರದ ಅಣುಗಳಾದ ರೈಬೋಸೋಮ್ ಗಳ ಸೂಕ್ಷ್ಮ ರಚನೆ ಹಾಗೂ ಕೆಲಸಗಳನ್ನು ಸಂಶೋಧಿಸಿದ ವಿಜ್ಞಾನಿಯೊಬ್ಬರ ಬದುಕಿನ ಕಥನವೂ ಹೌದು ಮತ್ತು ಜೀವಿವಿಜ್ಞಾನದ ಇತಿಹಾಸವೂ ಹೌದು. ಯಾವ ಐತಿಹಾಸಿಕ ಕೃತಿಗೂ ಕಡಿಮೆ ಇಲ್ಲದಂತೆ, ಜೀವಿವಿಜ್ಞಾನದ ಪಯಣವನ್ನು ವಿಜ್ಞಾನ, ವಿಜ್ಞಾನಿಗಳ ಜೀವನ, ಮಹತ್ವಾಕಾಂಕ್ಷೆ, ಸೋಲು-ಗೆಲುವುಗಳು, ಸ್ಪಧೆ೯ ಮುಂತಾದ ಎಲ್ಲ ವಿವರಗಳೊಂದಿಗೆ ಅತ್ಯಂತ ಪ್ರಾಮಾಣಿಕವಾಗಿ ದಾಖಲಿಸಿರುವ ಕೃತಿ. ರಿಚಡ್೯ ಫೈನ್ ಮನ್ ನಿಂದ ಹಲವು ಬಗೆಯಲ್ಲಿ ಪ್ರಭಾವಿತರಾಗಿದ್ದ ವೆಂಕಿ, ಬರವಣಿಗೆ ಪ್ರಾರಂಭಿಸುವುದೇ ಅವರನ್ನು ನೆನೆಯುತ್ತಾ – “When I left India, I had my heart set on becoming a theoretical physicist. I was nineteen years old and had just graduated from Baroda university. It was customary to stay on to get a master’s degree in India before going abroad for a PhD, but I was eager to go to America as soon as I could. To me, it was not only the land of Opportunities but also of rational heroes like Richard Feynman, whose famous Lectures on Physics had been part of my UG curriculum”. ಇದು ಪುಸ್ತಕದ ಮೊದಲ ಅಧ್ಯಾಯದ ಮೊದಲ ಪ್ಯಾರಾದ ಮಾತುಗಳು.

ಜೈವಿಕ ಅಣುಗಳಾದ ಪ್ರೋಟೀನ್ ಗಳನ್ನು ಕಾಯಕ-ಕುದುರೆ(Work Horse) ಎನ್ನುತ್ತಾರೆ. ಹಾಗೇಯೇ ಮತ್ತೊಂದು ಜೈವಿಕ ಅಣುಗಳಾದ ನ್ಯೂಕ್ಲಿಕ್ ಆಮ್ಲಗಳು ಡಿ.ಎನ್.ಎ. ಅಥವಾ ಆರ್.ಎನ್.ಎ. ರೂಪದಲ್ಲಿ ಜೀವಿಗಳ ಆನುವಂಶೀಯ ಮಾಹಿತಿಯನ್ನು ವಂಶವಾಹಿಗಳಾಗಿ ಹೊಂದಿರುತ್ತದೆ. ಈ ವಂಶವಾಹಿಗಳ ಮಾಹಿತಿ, ಜೀವಿಗಳ ಎಲ್ಲಾ ಜೈವಿಕ ಕ್ರಿಯೆಗಳನ್ನು ಮುಂಚೂಣಿಯಲ್ಲಿದ್ದುಕೊಂಡು ನಡೆಸುವ ಪ್ರೊಟೀನುಗಳನ್ನು ಉತ್ಪಾದಿಸಿಬೇಕಾದರೆ ಎರಡು ಪ್ರಮುಖ ಪ್ರಕ್ರಿಯೆಗಳು ಜೀವಿಕೋಶದೊಳಗೆ ಜರುಗಬೇಕು. ಅವುಗಳೆಂದರೆ

1. ಜೀವಿಕೋಶಗಳಲ್ಲಿ ಡಿ.ಎನ್.ಎ.(DNA) ಅಣುಗಳು ಎಂ-ಆರ್.ಎನ್.ಎ.(mRNA) ಅಣುಗಳ ರೂಪದಲ್ಲಿರುವ ಕೋಡಾನ್(Codons) ಗಳಾಗಿ ಸಂಕೇತಗೊಳ್ಳುವ ಕ್ರಿಯೆ Transcription – ಟ್ರಾನ್ಸ್ಕ್ರಿಪ್ಷನ್

2. ಆ ಎಂ-ಆರ್.ಎನ್.ಎ. ಅಣುಗಳು ಜೈವಿಕ ಕ್ರಿಯೆಗಳನ್ನು ನಿವ೯ಹಿಸುವ ಪ್ರೊಟೀನ್ ಗಳನ್ನು ಉತ್ಪಾದಿಸುವ ಪ್ರಕ್ರಿಯೆ Translation-ಟ್ರಾನ್ಸ್ಲೇಷನ್.

ಇವೆರೆಡನ್ನೂ ಜೀವಿವಿಜ್ಞಾನದ ಕೇಂದ್ರ ತತ್ವವೆಂದು(Central Dogma of Biology) ಕರೆಯಲಾಗುತ್ತದೆ. ಇದರಲ್ಲಿ ಎರಡನೆಯ ಪ್ರಕ್ರಿಯೆಯನ್ನು ಅಂದರೆ ಆ ಎಂ-ಆರ್.ಎನ್.ಎ. ಅಣುಗಳು ಜೈವಿಕ ಕ್ರಿಯೆಗಳನ್ನು ನಿವ೯ಹಿಸುವ ಪ್ರೊಟೀನ್ ಗಳನ್ನು ಉತ್ಪಾದಿಸುವ ಕೆಲಸವನ್ನು ಸಾಧ್ಯ ಮಾಡುವುದು ಜೀವಿಕೋಶಗಳಲ್ಲಿರುವ ರೈಬೋಸೋಮ್ ಎಂಬ ಬೃಹತ್ ಗಾತ್ರದ ಅಣುಗಳು(Macro-Molecules).

ರೈಬೋಸೋಮ್, ಆರ್-ಆರ್.ಎನ್.ಎ.(rRNA) ಅಣುಗಳು ಹಾಗೂ ಪ್ರೊಟೀನ್ ಗಳಿಂದ ತುಂಬಿದೆ. ರೈಬೋಸೋಮ್ ವಿನಲ್ಲಿ ಎರಡು ವಿಭಾಗಗಳಿದ್ದು ಅವನ್ನು ದೊಡ್ಡ ಉಪ-ಘಟಕ(Large Sub-Unit) ಮತ್ತು ಸಣ್ಣ ಉಪ-ಘಟಕ(Small Sub-Unit) ಎಂದು ಕರೆಯುತ್ತಾರೆ. ಈ ದೊಡ್ಡ ಉಪ-ಘಟಕ(Large Sub-Unit) ಮತ್ತು ಸಣ್ಣ ಉಪ-ಘಟಕ(Small Sub-Unit) ಎರಡೂ ಸೇರಿ, ಜೊತೆಗೆ ಟಿ-ಆರ್.ಎನ್.ಎ.(tRNA) ಗಳ ಸಹಾಯದೊಂದಿಗೆ ಎಂ-ಆರ್.ಎನ್.ಎ. ಅಣುಗಳು ಹೊಂದಿರುವ ಕೋಡಾನ್ ಗಳಿಗೆ ಪ್ರತಿಕೋಡಾನ್ ಗಳನ್ನು ಹೊಂದಿಸಿ, ಅವು ಪ್ರತಿನಿಧಿಸುವ ಅಮೈನೋ ಅಮ್ಲಗಳನ್ನು ನೀಡುತ್ತವೆ. ಈ ತರಹ ಎಂ-ಆರ್.ಎನ್.ಎ. ಅಣುಗಳ ಕೊನೆ ಮುಟ್ಟುವ ಕೋಡಾನ್ ಗಳು ಸಿಗುವವರೆಗೂ, ಪ್ರತಿ ಕೋಡಾನ್ ಗಳನ್ನು ಹೊಂದಿಸಿಕೊಂಡು, ಅವುಗಳು ಪ್ರತಿನಿಧಿಸುವ ಅಮೈನೋ ಆಮ್ಲಗಳನ್ನು ಹಿಂದಿನ ಅಮೈನೋ ಆಮ್ಲಗಳ ಜೊತೆ ಸರಣಿಯಾಗಿಸಿಕೊಳ್ಳುತ್ತವೆ. ನಂತರ ಕೊನೆಗೆ ಈ ಅಮೈನೋ ಆಮ್ಲಗಳ ಸರಣಿಗಳಿಂದಾಗುವ ಪ್ರೊಟೀನ್ ಅನ್ನು ಬಿಡುಗಡೆಗೊಳಿಸುತ್ತವೆ.‌

ರೈಬೋಸೋಮ್‌ ನ ಕಾರ್ಯವಿಧಾನ

ವೆಂಕಿ ಹಾಗೂ ಅವರ ತಂಡ ನ್ಯೂಕ್ಲಿಯಸ್ ಇಲ್ಲದ ಜೀವಿಗಳಲ್ಲಿ ಕಂಡುಬರುವ(Prokaryotic) 30S ಎಂದು ಕರೆಯಲಾಗುವ ರೈಬೋಸೋಮಿನ ಈ ಸಣ್ಣ ಉಪ-ಘಟಕದ(Small Sub-Unit) ರಚನೆಯನ್ನು ಪರಮಾಣುವಿನ ವಿವರ ಸಮೇತ ನಿರೂಪಿಸಿ ಮತ್ತು ಅದು ಹೊಂದಿರುವ ಪ್ರೊಟೀನುಗಳನ್ನು ಗುರುತಿಸಿ, ಒಟ್ಟಾರೆ ಇಡೀ ಸಣ್ಣ ಉಪ-ಘಟಕದ(Small Sub-Unit) ರಚನೆ ಹಾಗೂ ಕಾಯ೯ವನ್ನು ಕಂಡುಹಿಡಿಯುವಲ್ಲಿ ಸಫಲರಾಗಿದ್ದರು. ಜೊತೆಗೆ ಅವರೊಟ್ಟಿಗೆ ಸ್ಪಧೆ೯ಯಲ್ಲಿದ್ದ ಇನ್ನು ಎರಡು ಸಂಶೋಧನಾ ಗುಂಪುಗಳು(ಯೇಲ್ ವಿವಿಯ ಥಾಮಸ್ ಸ್ಟೀಟ್ಜ್(Thomas Steitz) ಅವರ ಬಳಗ ಹಾಗೂ ಇಸ್ರೇಲಿನವರಾಗಿದ್ದು ಜಮ೯ನಿಯಲ್ಲಿದ್ದ ಅಡಾ ಯೋನಾ(Ada Yonath) ಅವರ ಬಳಗ, 50S ಎಂದು ಕರೆಯಲಾಗುವ ರೈಬೋಸೋಮಿನ ಈ ದೊಡ್ಡ ಉಪ-ಘಟಕದ (Large Sub-Unit) ರಚನೆಯ ಕುರಿತು ಸಂಶೋಧನೆ ನಡೆಸುತ್ತಿದ್ದರು. ಸುಮಾರು ಒಂದೇ ಕಾಲಕ್ಕೆ ಈ ಎರಡು ಬಳಗ 50S ದೊಡ್ಡ ಉಪ-ಘಟಕದ ರಚನೆಯನ್ನು ಕಂಡುಹಿಡಿದು ಪ್ರಕಟಿಸಿದರು. ಅಡಾ ಯೋನಾ(Ada Yonath) ಅವರ ಬಳಗ 30S ಸಣ್ಣ ಉಪ-ಘಟಕದ(Small Sub-Unit) ಬಗೆಯೂ ಕೆಲಸ ಮಾಡುತ್ತಿತ್ತು. ಹೀಗೆ ರೈಬೋಸೋಮಿನ ರಚನೆಯನ್ನು ಕಂಡು ಹಿಡಿಯುವ ಈ ಸ್ಪಧಾ೯ ಪಯಣದಲ್ಲಿ ಜರುಗಿದ ಸೆಮಿನಾರುಗಳು, ಚಚೆ೯ಗಳು, ತೊಳಲಾಟ, ಖುಷಿ, ಕ್ರಿಸ್ಟಲ್ಲಾಗ್ರಫಿ(Crystallography) ಮತ್ತು ಇಲೆಕ್ಟ್ರಾನ್ ಮೈಕ್ರಾಸ್ಕೋಪಿ (Electron Microscopy) ಕ್ಷೇತ್ರದ ಬೆಳವಣಿಗೆಗಳು ಇನ್ನೂ ಮುಂತಾದ ವಿಷಯಗಳು ಪುಸ್ತಕದಲ್ಲಿ ವಿವರವಾಗಿ ಮೂಡಿಬಂದಿದೆ. ಜೊತೆಗೆ ಪ್ರಶಸ್ತಿಗಳ ಬಗ್ಗೆಯೂ ಬಹಳ ಆಳವಾದ ಚಿಂತನೆಯನ್ನು ನಡೆಸಿ, ಅದರ ಸಾಧಕ-ಭಾದಕಗಳ ಬಗ್ಗೆಯೂ ಬೆಳಕು ಚೆಲ್ಲಿದ್ದಾರೆ ಶ್ರೀ ವೆಂಕಿ. ವಿಜ್ಞಾನ ಏಕ ವ್ಯಕ್ತಿಯ ಸಂಶೋಧನೆ ರೂಪದಿಂದ ವಿಜ್ಞಾನ-ಸಮುದಾಯಗಳ ಸಾಧನೆಯಾಗಿರುವ ಈ ಸಮಯದಲ್ಲಿ ನೊಬೆಲ್ ಬಹುಮಾನಗಳು ತಮ್ಮ ಬಹುಮಾನ ಪುರಸ್ಕೃತರ ಸಂಖ್ಯೆಯನ್ನು ಮೂರಕ್ಕೆ ಸೀಮಿತಗೊಳಿಸಿರುವ ಬಗ್ಗೆಯೂ ಪ್ರಶ್ನೆಯನ್ನು ಎತ್ತಿದ್ದಾರೆ.

ಹೀಗೆ ಭೌತವಿಜ್ಞಾನಿಯಾಗಿ, ನಂತರ ಜೀವಿವಿಜ್ಞಾನವನ್ನು ಅಭ್ಯಾಸ ಮಾಡಿ ಮುಂದೆ ರಸಾಯನವಿಜ್ಞಾನದಲ್ಲಿ ನೊಬೆಲ್ ಬಹುಮಾನ ಪಡೆದ ವೆಂಕಿ ಅವರ ಬದುಕೇ ರೋಚಕ ಹಾಗೂ ಸ್ಪೂತಿ೯ದಾಯಕ. ತನ್ನ ಆಸಕ್ತಿಯ ಕ್ತೇತ್ರದಲ್ಲಿ ಕೆಲಸ ಮಾಡಲು ಅವರು ಎದುರಿಸಿದ ಸವಾಲುಗಳೇನು ಕಡಿಮೆಯದಲ್ಲ. ಆದರೂ ತಮ್ಮ ಮಡದಿ ವಿರಾ ರೋಸೆನ್ ಬೆರ್ರಿ(Vera Rosenberry) ಮತ್ತು ಇಬ್ಬರು ಮಕ್ಕಳ ಸಹಕಾರದೊಂದಿಗೆ, ಹಲವು ವಿದ್ಯಾಥಿ೯ ಮತ್ತು ವಿಜ್ಞಾನಿ ಮಿತ್ರರ ಸಹಾಯದೊಂದಿಗೆ ಅವೆಲ್ಲವನ್ನೂ ಮೀರಿ ಸಾಧನೆ ಮಾಡಿದ್ದಾರೆ. ಅವರ ವೈಯಕ್ತಿಕ ಬದುಕಿನ ವಿವರಗಳು ಹಾಗೂ ವೈಜ್ಞಾನಿಕ ಆಶಯಗಳ ಬಗ್ಗೆ ಅವರು ಆಕ್ಸಫಡ್೯ ವಿದ್ಯಾಥಿ೯ ಬಳಗದಲ್ಲಿ ನೀಡಿದ ಉಪನ್ಯಾಸ ಮತ್ತು ಸಂವಾದ ಕೇಳಬಹುದು. ವೆಂಕಿ ಹಲವಾರು ಬಾರಿ ಭಾರತಕ್ಕೆ ಬಂದು ಉಪನ್ಯಾಸ ನೀಡಿದ್ದಾರೆ ಕೂಡ. ತಾವೊಬ್ಬ ಭಾರತೀಯ ಎಂದು ಅಷ್ಟೇನೂ ಹೆಚ್ಚುಗಾರಿಕೆಯಿಂದ ಗುರುತಿಸಿಕೊಳ್ಳದ ಅವರು, ಇಂತಹ ಗುರುತಿಸುವಿಕೆಯ ಅಪಾಯಗಳ ಬಗ್ಗೆ ನಮ್ಮನ್ನು ಎಚ್ಚರಿಸುತ್ತಾರೆ ಕೂಡ – “I am not a fan of identity politics in general. When I grew up, some of my heroes were Indians, like the mathematician Srinivasa Ramanujan or the astrophysicist Subramanya Chandrasekhar, but most of them were as varied as Richard Feynman, a Jewish boy from Queens, New York, and Marie Curie, a Polish woman who worked in France. It also did not matter that I had not met any of them personally; I could gain inspiration simply from reading about their lives and work”. ಹೀಗೆ ಪುಸ್ತಕದ ಉಪಸಂಹಾರದಲ್ಲಿ ಕೂಡ ಫೈನಮನ್ ಅವರನ್ನು ನೆನಪಿಸಿಕೊಂಡೇ ವೆಂಕಿ ತಮ್ಮ ಬರವಣಿಗೆ ಮುಗಿಸುತ್ತಾರೆ. ಒಟ್ಟಿನಲ್ಲಿ ನಿಮ್ಮ ಓದಿನ ಪಟ್ಟಿಗೆ ಸೇರಲೇಬೇಕಾದ ಪುಸ್ತಕ ““Gene Machine”.

ನಮಸ್ಕಾರ

ಆಕಾಶ್‌ ಬಾಲಕೃಷ್ಣ

ಹೆಚ್ಚಿನ ವಿಷಯಕ್ಕಾಗಿ ಈ ಕೊಂಡಿಗಳನ್ನು ನೋಡಿ:

1. https://www2.mrc-lmb.cam.ac.uk/group-leaders/n-to-s/venki-ramakrishnan/

2. https://www.youtube.com/watch?v=d6i6N0J7gLo – ಆಕ್ಸಫಡ್೯ ವಿದ್ಯಾಥಿ೯ ಬಳಗದಲ್ಲಿ ನೀಡಿದ ಉಪನ್ಯಾಸ ಮತ್ತು ಸಂವಾದ .

3. https://www.youtube.com/watch?v=Wt0cQK2n1NY – ಇನ್ಫೋಸಿಸ್ ಬಹುಮಾನ ವಿತರಣೆ -2017 ರಲ್ಲಿ ಮುಖ್ಯ ಅತಿಥಿಯಾಗಿ ನೀಡಿದ ಉಪನ್ಯಾಸ

4. https://www.youtube.com/watch?v=bXZ7iQ7pd20 – ರಾಜ್ಯಸಭಾ ವಾಹಿನಿಗೆ ನೀಡಿರುವ ಸಂದಶ೯ನ

ಚಿತ್ರಕೃಪೆ:Gene Machine: The Race to Decipher the Secrets of the Ribosome, Harper-Collins India Publications.

This Post Has 3 Comments

  1. Bhuvaneswari Shivashankar

    Thank You for introducing an interesting book in biology .

  2. Bhuvaneswari

    I am writing this comment after reading the book as encouraged in this post. The book is indeed a treat to read especially for scientists in biology like me. The author Sir venki has enormous experience working in different labs in different continents, persistence on tackling ribosome structure for years. The progress in the structural details of 30s submit,he and his team could make as we understand from the book is very progressive not accidental victories. one of the important aspect is the importance of the very coherent conferences which actually discuss about ribosomes gives him lot edge in recognition, the actual progress in the field from peers and the gap to be filled up.

    1. CPUS

      Really our purpose is served, as you have read it fully with great appreciation. So wonderful to hear from you. Best wishes.

Leave a Reply