You are currently viewing ಜೀವಮಾನವನ್ನೇ ಭಾರತೀಯ “ಸಸ್ಯ”ಯಾನದಲ್ಲಿ ಕಳೆದ ಅಪ್ರತಿಮ ಸಸ್ಯವಿಜ್ಞಾನಿ  “ವಿಲಿಯಂ ರಾಕ್ಸ್‌ಬರ್ರಾ”

ಜೀವಮಾನವನ್ನೇ ಭಾರತೀಯ “ಸಸ್ಯ”ಯಾನದಲ್ಲಿ ಕಳೆದ ಅಪ್ರತಿಮ ಸಸ್ಯವಿಜ್ಞಾನಿ “ವಿಲಿಯಂ ರಾಕ್ಸ್‌ಬರ್ರಾ”

ಭಾರತೀಯ ಸಸ್ಯವಿಜ್ಞಾನ ಹಾಗೂ ಸಸ್ಯವರ್ಗೀಕರಣದ ಹಿನ್ನೆಲೆಯನ್ನು ವಿವರಿಸುವಾಗ ವಾನ್‌ ರೀಡ್‌, ರಾಕ್ಸ್‌ ಬರ್ರಾ ಮತ್ತು ಬುಕನನ್ ಎಂಬ ಮೂವರು ವಿಜ್ಞಾನಿಗಳನ್ನು ಕುರಿತು ಪ್ರಸ್ತಾಪಿಸದೆ ಮುಂದುವರೆಯಲಾಗದು. ಅವರಲ್ಲಿ ಒಬ್ಬರಾದ “ವಿಲಿಯಂ ರಾಕ್ಸ್‌ ಬರ್ರಾ” ತಮ್ಮ ಇಡೀ ಜೀವಮಾನವನ್ನು ನಮ್ಮ ದೇಶದ ಬಹುಪಾಲು ಸಸ್ಯಗಳ ವಿವಿಧತೆ ಹಾಗೂ ಬಳಕೆಗಳ ವಿವರಿಸುವ ಅಧ್ಯಯನದಲ್ಲಿ ಕಳೆದರು. ಸರಿ ಸುಮಾರು 37ವರ್ಷ ನಮ್ಮ ನೆಲದಲ್ಲಿದ್ದು ಭಾರತೀಯ ಸಸ್ಯವಿಜ್ಞಾನಕ್ಕೆ ಭದ್ರವಾದ ಬುನಾದಿಯನ್ನು ಹಾಕಿ ಸಸ್ಯವಿಜ್ಞಾನದ ಪಿತಾಮಹರೆನಿಸಿಕೊಂಡರು. ನಮ್ಮ ನೆಲದ ಸಸ್ಯಗಳ ಮತ್ತು ಇತರೆ ಪರಿಸರದ ಸಂಗತಿಗಳನ್ನು ಸಮೀಕರಿಸುವಲ್ಲಿ ಅವರ ಕೊಡುಗೆಯನ್ನು ಸಸ್ಯಯಾನದಲ್ಲಿ ಹಂಚಿಕೊಳ್ಳುವುದು ಅತ್ಯಂತ ಅವಶ್ಯಕತೆಯೂ ಹಾಗೂ ಗೌರವಯುತವಾದ ಸಂಗತಿಯೂ ಆಗಿದೆ. ಅವರೇ ಹೆಸರಸಿ ದಾಖಲಿಸಿದ ನೂರಾರು ಸಸ್ಯಗಳು ನಮ್ಮ ನೆಲದವೇ ಆಗಿವೆ. ಅಷ್ಟೇ ಅಲ್ಲದೆ, ಇಲ್ಲಿನ ಅನೇಕ ಸಸ್ಯಗಳ ಆರ್ಥಿಕ ಲಾಭಗಳ ಹಿನ್ನೆಲೆಯ ಉತ್ಪಾದನಾ ಮೂಲ ವಿವರಗಳ ರೂವಾರಿಯೂ ಆಗಿದ್ದಾರೆ.

ವಿಲಿಯಂ ರಾಕ್ಸ್‌ ಬರ್ರಾ ಅವರು ಸ್ಕಾಟ್‌ ಲ್ಯಾಂಡಿನ ಸಾಕಷ್ಟು ಹೆಸರು ಮಾಡಿದ್ದ ಕುಟುಂಬವೊಂದರಲ್ಲಿ ಅನೈತಿಕ ಗರ್ಭದ ಮಗುವಾಗಿ ಜನಿಸಿದವರು. ಹಾಗಾಗಿ ಅವರ ತಂದೆ-ತಾಯಿಯರ ಹೆಸರುಗಳು ಅವರ ವೈಯಕ್ತಿಕ ವಿವರಗಳ ದಾಖಲೆಗಳಲ್ಲಿ ಎಲ್ಲೂ ಇಲ್ಲ. ಇಂತಹ ಜನನದ ಮಗುವೊಂದು ಭಾರತದಂತಹಾ ದೊಡ್ಡ ದೇಶವೊಂದರ ಸಸ್ಯಸಂಪತ್ತಿನ ಆತ್ಯಂತಿಕ ವಿವರಗಳ ದಾಖಲೆಯನ್ನು ಮಾಡಿದ್ದು ಅಚ್ಚರಿಯ ಸಂಗತಿ. ಅವರ ಸೂಕ್ಷ್ಮಮತಿಯ ಕಣ್ಗಾವಲಿನಲ್ಲಿ ಸಸ್ಯವೈಜ್ಞಾನಿಕ ಅಧ್ಯಯನಕ್ಕೆ ಒಳಪಟ್ಟ ವಿವರಗಳನ್ನು ಸಸ್ಯಗಳ ಹಿನ್ನೆಲೆಯಲ್ಲಿ ಅರಿಯುವುದು, ಅವರಿಗೆ ಕೊಡುವ ಗೌರವ ಮಾತ್ರವಲ್ಲ, ಅಂತಹದೊಂದು ಅಪೂರ್ವ ಸಾಧ್ಯತೆಯ ನಿರೂಪಗಳ ಕೆಲವು ವಿವರಗಳು ನಮ್ಮ ತಿಳಿವಳಿಕೆಯ ಭಾಗವಾಗಿ ಸಸ್ಯಯಾನದ ಆನಂದವನ್ನು ಹೆಚ್ಚಿಸಬಲ್ಲವು. ಹದಿನೆಂಟನೆಯ ಶತಮಾನದ ಕಡೆಯ ವರ್ಷಗಳು ಮತ್ತು ಹತ್ತೊಂಭತ್ತನೆಯ ಶತಮಾನದ ಆರಂಭದ ವರ್ಷಗಳಲ್ಲಿದ್ದ ಇದ್ದಿರಬಹುದಾದ ಸಂಶೋದನಾ ಸವಲತ್ತುಗಳನ್ನು ಆಲೋಚಿಸಿ ಅವರ ಕಾರ್ಯಗಳನ್ನು ಗಮನಿಸಿದರೆ ಮಹದಚ್ಚರಿಯಾಗುವುದು ಖಂಡಿತಾ. ಅವರ ಒಟ್ಟಾರೆಯ ಸಸ್ಯ ಅಧ್ಯಯನದ ಕಾರ್ಯಗಳು ದಕ್ಷಿಣ ಭಾರತದಿಂದ ಆರಂಭಿಗೊಂಡು ಪೂರ್ವ ಕರಾವಳಿಯಗುಂಟಾ ಚಲಿಸುತ್ತಾ ಸಸ್ಯಸಂಗ್ರಹಗಳೊಡನೆ ಮುಂದುವರೆದು, ಕೊಲ್ಕತ್ತಾ ಸಸ್ಯೋದ್ಯಾನದಲ್ಲಿ ಕೇಂದ್ರೀಕೃತವಾದವು. ಈ ಎಲ್ಲವನ್ನೂ ತುಸುವಾದರೂ ವಿವರಗಳಿಂದ ನೋಡೋಣ.

ಡಾ. ವಿಲಿಯಂ ರಾಕ್ಸ್‌ಬರ್ರಾ (Dr. William Roxburgh) ಅವರನ್ನು ರಾಕ್ಸ್‌ ಬರ್ಗ್‌ ಎಂದು ತಪ್ಪಾಗಿ ಉಚ್ಛರಿಸುವುದುಂಟು. ಇವರು ಸ್ಕಾಟ್‌ ಲ್ಯಾಂಡಿನ ಐರ್‌ಶೈರ್‌ನ ಕಿಲ್ಮನಾಕ್‌ ಎಂಬ ಪಟ್ಟಣದ ಬಳಿಯ “ಕ್ರೇಗಿ” ಎಂಬಲ್ಲಿ 1751ರ ಜೂನ್‌ 29ನೆಯ ದಿನದಂದು ಜನಿಸಿದರು. ಅಲ್ಲಿನ ಎಸ್ಟೇಟಿಗೆ ಸಂಬಂಧಿಸಿದ ಪ್ರದೇಶದಲ್ಲಿ ಅವರು ಹೆಚ್ಚೂ-ಕಡಿಮೆ ಅನಾಥರಾಗಿ ಹುಟ್ಟಿದ್ದವರು. ಅಂತಹ ಮಗುವಾದವರು ಅಪಾರ ಪ್ರತಿಭೆಯಿಂದ ಬೆಳೆದುದಲ್ಲದೆ ಎಡಿನ್‌ ಬರ್ರಾ ವಿಶ್ವವಿದ್ಯಾಲಯದ ವೈದ್ಯಕೀಯ ಪದವಿಯನ್ನು ಗಳಿಸಿದರು. ಅಲ್ಲಿ ವೈದ್ಯ ವಿಜ್ಞಾನವನ್ನು ಕಲಿಯುತ್ತಿದ್ದಾಗ ಅಲ್ಲಿದ್ದ ಡಾ. ಜಾನ್‌ ಹೋಪ್‌ ಎಂಬ ಸಸ್ಯ ವಿಜ್ಞಾನಿಯಿಂದ ಆಕರ್ಷಣೆಗೆ ಒಳಗಾದರು. ಜಾನ್‌ ಹೋಪ್‌ ಅಪ್ರತಿಮ ಪ್ರಾಯೋಗಿಕ ಶರೀರಕ್ರಿಯಾವಿಜ್ಞಾನಿ ಆಗಿದ್ದರು, ಜೊತೆಗೆ ಎಡಿನ್‌ ಬರ್ರಾ ಸಸ್ಯೋದ್ಯಾನದ ಕ್ಯುರೇಟರ್‌ ಕೂಡ ಆಗಿದ್ದರು. ಡಾ. ಹೋಪ್‌ ಅವರಿಂದ ಸಸ್ಯವಿಜ್ಞಾನದ ಮೂಲ ಸಂಗತಿಗಳನ್ನು ಕಲಿತ ರಾಕ್ಸ್‌ ಬರ್ರಾ ಅವರನ್ನು ಹೋಪ್‌ ಅವರೇ ಈಸ್ಟ್‌ ಇಂಡಿಯಾ ಕಂಪನಿಯ ಹಡಗಿನ ಶಸ್ತ್ರವೈದ್ಯರ ಸಹಾಯಕರಾಗಲು ಸಹಾಯ ಮಾಡಿದರು. ಇದರಿಂದಾಗಿ ವಿಲಿಯಂ ರಾಕ್ಸ್‌ ಬರ್ರಾ ಅವರು ಹಡಗುಗಳಲ್ಲಿ ಸಂಚರಿಸಿ ಪೂರ್ವ ದೇಶಗಳ ಸುತ್ತಾಡಲು ಸಾಧ್ಯವಾಯಿತು. ಕ್ರಿಸ್ತಶಕ 1772 ಮತ್ತು 75ರ ನಡುವೆ ಎರಡು ಬಾರಿ ಪೂರ್ವ ದೇಶಗಳ ಸಮುದ್ರಯಾನಗಳಲ್ಲಿ ಭಾಗವಹಿಸಿ, ಅಲ್ಲಿನ ಸಂಪರ್ಕಕ್ಕೆ ಹೋಗಿ ಬರುವ ಅವಕಾಶಗಳಲ್ಲಿ ಈಸ್ಟ್‌ ಇಂಡಿಯಾ ಕಂಪನಿಯಲ್ಲಿ ಸೇವೆ ಸಲ್ಲಿಸಿದರು. ಹಡಗುಯಾನದ ನಡುವಿನ ಬಿಡುವಿನಲ್ಲಿ ವೈದ್ಯಕೀಯವನ್ನೂ ಅಧ್ಯಯನ ಮಾಡಿ ವಿಶ್ವವಿದ್ಯಾಲಯದಿಂದ 1776ರಲ್ಲಿ ಪದವಿ ಪಡೆದು ಶಸ್ತ್ರವೈದ್ಯರಾಗಿ ಹೊರಬಂದರು. ತಕ್ಷಣವೇ 1776ರಲ್ಲಿಯೇ ಈಸ್ಟ್‌ ಇಂಡಿಯಾ ಕಂಪನಿಯ ಮದ್ರಾಸ್‌ನ ಆಸ್ಪತ್ರೆಯಲ್ಲಿ ಸಹಾಯಕ ಶಸ್ತ್ರವೈದ್ಯರಾಗುವ ಅವಕಾಶ ದೊರೆಯಿತು. ಅದು ಭಾರತೀಯ ಸಸ್ಯವೈಜ್ಞಾನಕ್ಕೊಂದು ಅತಿ ದೊಡ್ಡ ವರವಾಗಿ ಪರಿಣಮಿಸಿತು.

ಸಹಾಯಕ ಶಸ್ತ್ರವೈದ್ಯರಾಗಿ ಮದ್ರಾಸ್‌ನಲ್ಲಿದ್ದಾಗ ದಿನಕ್ಕೆ ಮೂರು ಬಾರಿ ವಾತಾವರಣದ ತಾಪಮಾನ, ಒತ್ತಡ ಮುಂತಾದವುಗಳನ್ನು ಹವ್ಯಾಸಕ್ಕೆಂದು ಸ್ವತಃ ಅಳೆದು ದಾಖಲಿಸತೊಡಗಿದರು. ರಾಕ್ಸ್‌ ಬರ್ರಾ ಅವರಿಗೆ ಅದೊಂದು ದಿನಚರಿಯ ಭಾಗವೇ ಆಗಿತ್ತು ವರ್ಷಗಳ ಕಾಲ ಸಂಗ್ರಹಿಸಿದ ಅವರ ಈ ವಾತಾವರಣ ಕುರಿತ ದಾಖಲೆಯು ಆಗಿನ ಬ್ರಿಟೀಶ್‌ ಇಂಡಿಯಾದ ವೈವಿಧ್ಯಮಯ ವಾತಾವರಣ ಹಾಗೂ ಬರಗಾಲಗಳ ಸಮೀಕರಣದ ವಿವರಗಳು ದೊರಕುವಂತಾದವು. ಅವುಗಳನ್ನೆಲ್ಲಾ ವಿಶ್ಲೇಷಿಸಿ ವಿವಿಧ ಸಂಶೋಧನಾ ಪ್ರಬಂಧಗಳಾಗಿ ಪ್ರಕಟಿಸಿದರು. ಇವೆಲ್ಲವೂ ಇಂದು ನಾವೆಲ್ಲರೂ ಕರೆಯುತ್ತಿರುವ ಹವಾಮಾನ ಬದಲಾವಣೆ (Climate Change) ಎನ್ನುವ ವಿಚಾರಗಳ ಆರಂಭಿಕ ಸಂಗತಿಗಳಾದವು. ಇದರಿಂದ ಕಂಪನಿ ಸರಕಾರವು ಇವರ ಸೇವೆಯನ್ನು ಇನ್ನೂ ಹೆಚ್ಚಾಗಿ ಬಯಸುವಂತೆ ಆಯಿತು. ಆ ವೇಳೆಯಲ್ಲಿ ಕರ್ನಾಟಕವೂ ಸೇರಿದಂತೆ ಆಂದ್ರಪ್ರದೇಶ ರಾಜ್ಯಗಳಲ್ಲೆಲ್ಲಾ ಸಂಚರಿಸಿದರು. ಪಶ್ಚಿಮ ಘಟ್ಟಗಳೂ ಮತ್ತಿತರ ಪ್ರದೇಶಗಳ ವೈವಿಧ್ಯಮಯ ಸಸ್ಯಗಳ ಅರಿವು ಅವರ ಆಸಕ್ತಿಯ ಭಾಗವಾಯಿತು.

ಮದ್ರಾಸಿನಲ್ಲಿ ಸಹಾಯಕ ಶಸ್ತ್ರವೈದ್ಯರಾಗಿದ್ದಾಗ ಇವರಿಗೆ ಪರಿಚಯಗೊಂಡ‌ ಡಾ. ಯೋಹಾನ್‌ ಕೆನಿಂಗ್‌ ಅವರಿಂದ ಸಸ್ಯವಿಜ್ಞಾನದ ಆಸಕ್ತಿಯು ಮತ್ತಷ್ಟು ಹೆಚ್ಚಿತು. ಡಾ. ಯೋಹಾನ್‌ ಅವರು ಜೀವಿ ವರ್ಗೀಕರಣ ಪಿತಾಮಹಾ ಕಾರ್ಲ್‌ ಲಿನೆಯಾಸ್‌ ಅವರ ವಿದ್ಯಾರ್ಥಿ ಮತ್ತು ಭಾರತದಲ್ಲಿ ದ್ವಿನಾಮ ಪದ್ದತಿಯನ್ನು ಪರಿಚಯಿಸಿದ ಹರಿಕಾರರು. ಯೋಹಾನ್‌ ಈಸ್ಟ್‌ ಇಂಡಿಯಾ ಕಂಪನಿಯಲ್ಲಿ ನಿಸರ್ಗ ತಜ್ಞರಾಗಿದ್ದಷ್ಟೂ ಕಾಲ ಅವರ ಜೊತೆಯಲ್ಲಿ ಹೆಚ್ಚಿನ ಆಸಕ್ತಿಯಿಂದ ರಾಕ್ಸ್‌ ಬರ್ರಾ ದುಡಿದವರು. ಮುಂದೆ ಈಸ್ಟ್‌ ಇಂಡಿಯಾ ಕಂಪನಿಯ ಪೂರ್ಣ ಪ್ರಮಾಣದ ಶಸ್ತ್ರ ವೈದ್ಯರಾಗಿ ಆಂದ್ರಪ್ರದೇಶದ ಸಮಾಲ್‌ ಕೋಟಾದಲ್ಲಿ 1780ರಲ್ಲಿ ನೆಲೆಯಾದರು. ಅದರ ಜೊತೆಯಲ್ಲಿ ಅಲ್ಲಿನ ಸಸ್ಯೋದ್ಯಾನದ ಪ್ರಮುಖರಾಗುವ ಅವಕಾಶ ಕೂಡ ಅವರದ್ದಾಯಿತು. ಇದು ಅವರ ಜೀವನದಲ್ಲಿ ಹಾಗೂ ಭಾರತೀಯ ಸಸ್ಯವೈಜ್ಞಾನಿಕ ಇತಿಹಾಸದಲ್ಲಿ ಅತ್ಯಂತ ಪ್ರಮುಖವಾದ ಘಟ್ಟ.

ಸಮಾಲ್‌ ಕೋಟದಲ್ಲಿ ವೈದ್ಯವೃತ್ತಿಯ ಜೊತೆಗೆ, ಅಲ್ಲಿನ ಸಸ್ಯೋದ್ಯಾನದ ಮುಖ್ಯಸ್ಥರಾಗಿದ್ದು, ಅಲ್ಲಿ ಅವರಿಗಿದ್ದ ಸ್ವಾತಂತ್ರ್ಯವನ್ನು ಬಳಸಿ ದಕ್ಷಿಣ ಭಾರತದ ಸಸ್ಯಗಳ ಆರ್ಥಿಕ ಅಧ್ಯಯನವನ್ನು ಆರಂಭಿಸಿದರು. ಆಗ ಅವರ ಆಸಕ್ತಿಯಿಂದ ಅಧ್ಯಯನಕ್ಕೆ ಒಳಗಾದ ಹೊಸ ಬೆಳೆಗಳಲ್ಲಿ ಕಾಫಿ, ಚಕ್ಕೆ, ಜಾಯಿಕಾಯಿ, ಇಂಡಿಗೊ ಹಾಗೂ ಕಾಳು ಮೆಣಸು ಪ್ರಮುಖವಾದವು. ಪ್ರಮುಖವಾಗಿ ಚಕ್ಕೆ ಹಾಗೂ ಜಾಯಿಕಾಯಿಗಳ ವಿವಿಧ ಬಗೆಗಳನ್ನು ಮಲೇಷಿಯಾದಿಂದಲೂ ಮತ್ತು ಇಲ್ಲಿಂದ ಮಲೇಷಿಯಾಕ್ಕೂ ಪರಿಚಯಿಸಲು ಕಾರಣರಾದರು. ಹಾಗೆಯೇ ಇಲ್ಲಿನ ಸ್ಥಳಿಯ ನಕ್ಷೆಗಳ ರೂಪಿಸುವುದಕ್ಕೂ ಹಾಗೂ ಆ ಮೂಲಕ ಸಸ್ಯಗಳ ಹಂಚಿಕೆ, ಉತ್ಪಾದನೆ ಮತ್ತಿತರ ವಿವರಗಳನ್ನು ದಾಖಲಿಸಲೂ ರೂಪರೇಷೆಗಳನ್ನು ಸಿದ್ದಪಡಿಸಿದರು. ಸ್ವತಃ ತಾವೂ ಹಾಗೂ ಜೊತೆಗೆ ಸ್ಥಳೀಯ ಕಲಾಕಾರರಿಂದ ಸಸ್ಯಗಳ ಚಿತ್ರಗಳನ್ನು ಬಿಡಿಸಿಟ್ಟು ಸಂಗ್ರಹಿಸುವದನ್ನೂ ಆರಂಭಿಸಿದರು. ಚಿತ್ರಗಳಿಗೆ ವಿವರಗಳನ್ನು ಸ್ವತಃ ಕೈಬರಹದಿಂದ ಬರೆದಿಟ್ಟು ದಾಖಲಾತಿ ಮಾಡಿದ್ದಾರೆ. ಇವೆಲ್ಲವುಗಳಲ್ಲೂ ಸ್ಥಳಿಯ ಬೆಳೆಗಳ ಇಳುವರಿ ಮುಂತಾದ ಸಸ್ಯವೈಜ್ಞಾನಿಕ ಸಂಗತಿಗಳ ಸೇರಿಸಿ ಬೆಳೆಗಾರರ ತಲುಪಿಸುವಲ್ಲಿ ಮಹತ್ವದ ಅವಕಾಶಗಳನ್ನು ಆರಂಭಿಸಿದರು. ತಾವೂ ಅನೇಕ ಸಸ್ಯಗಳ ವಿವರಗಳನ್ನು ಒದಗಿಸುವ ಚಿತ್ರಗಳ ಬಿಡಿಸುವುದರಿಂದ ಹಿಡಿದು, ಸ್ಥಳಿಯ ಕಲಾಕಾರರ ನೆರವಿನಿಂದ ಬಿಡಿಸಿದ ಒಟ್ಟು ವಿವರಣಾತ್ಮಕ ಚಿತ್ರಗಳ ಒಟ್ಟು ಸಂಖ್ಯೆಯು 1790ರ ವೇಳೆಗೆ ಸುಮಾರು 700 ಆಗಿತ್ತು. ಹತ್ತು ವರ್ಷಗಳಲ್ಲಿ 700 ಗಿಡ-ಮರಗಳ ವಿವರಣೆಗಳ ದಾಖಲೆಯು ಅವರ ಸಂಗ್ರಹದಲ್ಲಿತ್ತು.

ಇದು ಭಾರತೀಯ ಸಸ್ಯವೈಜ್ಞಾನಿಕ ಇತಿಹಾಸದಲ್ಲಿಯೇ ಅತ್ಯಂತ ಮಹತ್ವದ ದಾಖಲೆ. ನಮ್ಮ ದೇಶದಲ್ಲಿ ಮೊಟ್ಟ ಮೊದಲಬಾರಿಗೆ ಹೀಗೆ ಗಿಡ-ಮರಗಳ ಚಿತ್ರಸಹಿತವಾದ ವಿವರಣಾತ್ಮಕ ದಾಖಲೆಗಳ (Herbarium) ಸಂಗ್ರಹಕ್ಕೆ ಇದು ನಾಂದಿಯಾಯಿತು. ಸಸ್ಯಗಳನ್ನು ಅವುಗಳ ಎಲೆ, ಹೂವು, ಹೂವಿನ ದಳ, ಗಂಡು-ಹೆಣ್ಣು ಭಾಗಗಳು ಮುಂತಾದ ಸಚಿತ್ರ ವಿವರಣೆಗಳ ಮಾಹಿತಿಯ ಸಂಗ್ರಹ ಭಾರತೀಯ ಸಸ್ಯಗಳ ಅಧ್ಯಯನಕ್ಕೆ ಸೇರ್ಪಡೆಯಾಯಿತು. ಪ್ರತಿಯೊಂದೂ ಚಿತ್ರಕ್ಕೂ ಸಮರ್ಪಕವಾದ ವೈಜ್ಞಾನಿಕ ವಿವರಗಳನ್ನು ಸ್ವತಃ ವಿಲಿಯಂ ರಾಕ್ಸ್‌ ಬರ್ರಾ ಅವರೇ ಬರೆದಿಟ್ಟು ಅಚ್ಚುಕಟ್ಟಾಗಿ ನಿರ್ವಹಿಸುವ ವಿಧಾನವನ್ನೂ ರೂಪಿಸಿದ್ದು ಅವರ ಹೆಗ್ಗಳಿಕೆ. ಹೀಗೆ ಸಾವಿರಾರು ಸಸ್ಯಗಳ ಸಚಿತ್ರ ವಿವರಗಳು, ಭಾರತೀಯ ಸಸ್ಯ ಸರ್ವೇಕ್ಷಣಾ ವಿಭಾಗದ ಕೊಲ್ಕತ್ತಾ-ಹೌರಾದ ಸಸ್ಯ ಸಚಿತ್ರ ಕೇಂದ್ರದ ಭಾಗವಾಗಿವೆ. ಮೂಲತಃ ವಿಲಿಯಂ ರಾಕ್ಸ್‌ ಬರ್ರಾ ಅವರಿಂದ ಸರಿ ಸುಮಾರು 2595 ಸಂಗ್ರಹಗಳಿಂದ ಆರಂಭವಾದ ಈ ಸಂಗ್ರಾಹಕವು ಇಂದು 20ಲಕ್ಷಕ್ಕೂ ಹೆಚ್ಚು ಸಚಿತ್ರ ದಾಖಲೆಗಳನ್ನು ಒಳಗೊಂಡಿದೆ. ಇತ್ತೀಚೆಗೆ ಅವುಗಳನ್ನು ಭಾರತೀಯ ಸಸ್ಯ ಸರ್ವೇಕ್ಷಣಾ ವಿಭಾಗದಿಂದ ಡಿಜಟಲೀಕರಣವೂ ಆರಂಭವಾಗಿದ್ದು ಅವುಗಳು ಸಾರ್ವಜನಿಕ ತಿಳಿವಳಿಕೆಗೆ ಲಭ್ಯವಾಗಲಿವೆ.

ರಾಕ್ಸ್‌ ಬರ್ರಾ ಅವರೇ ಖುದ್ದಾಗಿ ಬಿಡಿಸಿದ್ದ ಹೊಳೆ ದಾಸವಾಳದ ಚಿತ್ರವು ಈ ಕೆಳಗಿದೆ. ಹೊಳೆ ದಾಸವಾಳವನ್ನು ಚೆನ್ನಂಗಿ ಮರ, ಚಲ್ಲ, ಹೊಳೆದ ಚಲ್ಲ, ಹೊಳೆ ಮತ್ತಿ ಎಂಬ ಹೆಸರುಗಳಿದಲೂ ಕರೆಯುತ್ತಾರೆ. ಇದನ್ನು ಹೆಸರಿಸಿ ಸಸ್ಯವೈಜ್ಞಾನಿಕ ವಿವರಗಳಿಂದ ದಾಖಲಿಸಿದ್ದು ಸ್ವತಃ ರಾಕ್ಸ್‌ ಬರ್ರಾ ಅವರು. ನಂದಿ ಮರ ಕೂಡ ಇದರ ಸಂಬಂಧಿಯೇ ಇದನ್ನು ಭಾರತದ ಹೆಮ್ಮೆ(Pride of India) ಎಂದೂ ಕರೆಯುತ್ತಾರೆ. ಇದರ ಸಸ್ಯ ವೈಜ್ಞಾನಿಕ ಹೆಸರು Lagerstroemia reginae. Roxb. ದ್ವಿನಾಮದ ಹೆಸರಿನ ಕೊನೆಯಲ್ಲಿ ಇರುವ Roxb ರಾಕ್ಸ್‌ ಬರ್ರಾ ಅವರ ಹೆಸರನ್ನೇ ಸೂಚಿಸುತ್ತದೆ. ನಂತರದಲ್ಲಿ ಇದಕ್ಕೆ Lagerstroemia speciosa ಎಂದೂ ಕರೆಯಲಾಗಿದೆ. ಸದ್ಯಕ್ಕೆ ಈ ಎರಡೂ ಹೆಸರುಗಳು ಬಳಕೆಯಲ್ಲಿವೆ. Lythraceae ಎಂಬುದು ಇದರ ಕುಟುಂಬದ ಹೆಸರು. Lagerstroemia reginae. ಎಂಬ ಮೂಲ ಹೆಸರನ್ನು Lagerstroemia speciosa ಎಂಬುದಾಗಿ ಬದಲಿಸಿದವರು Hendrik Persoon ಎಂಬ ದಕ್ಷಿಣ ಆಫ್ರಿಕಾದಲ್ಲಿದ್ದ ಡಚ್‌ ವಿಜ್ಞಾನಿ. ಇದೊಂದು ಹೂವಿನ ಮರವಾಗಿ ಜನಪ್ರಿಯವಾಗಿದ್ದು, ಇತ್ತೀಚೆಗೆ ನಗರ ಪ್ರದೇಶಗಳ ಅಲಂಕಾರಿಕ ಹೂವಿನ ಮರವಾಗಿಯೂ ಸೇರ್ಪಡೆಗೊಂಡಿದೆ. ಇದೊಂದು ಉದಾಹರಣೆಯಷ್ಟೇ. ಸಾವಿರಾರು ಗಿಡ-ಮರಗಳು ರಾಕ್ಸ್‌ ಬರ್ರಾ ಅವರಿಂದ ನಾಮಕರಣಗೊಂಡು ವಿವರಿಸಲ್ಪಟ್ಟಿವೆ. ಮುಂದೆ ಅವರ ಇನ್ನೂ ಹೆಚ್ಚಿನ ಕೆಲಸ ಕಾರ್ಯಗಳ ವಿವರಗಳನ್ನು ಅರಿಯೋಣ.

ವಿಲಿಯಂ ರಾಕ್ಸ್‌ ಬರ್ರಾ ಅವರು 1793ರಲ್ಲಿ ಬ್ರಿಟೀಶ್‌ ಇಂಡಿಯಾದ ಕರೆಯೆ ಮೇರೆಗೆ ಕೊಲ್ಕತ್ತಾದ ಸಸ್ಯ ಉದ್ಯಾನದ ಸೂಪರಿಟೆಂಡೆಂಟ್‌ ಆಗಿ ವೇತನದೊಂದಿಗೆ ನೇಮಕಗೊಂಡ ಪ್ರಪ್ರಥಮ ವಿಜ್ಞಾನಿ. ಅಲ್ಲಿಯೇ ಸುಮಾರು 20 ವರ್ಷಗಳನ್ನು ಕಳೆದ ರಾಕ್ಸ್‌ ಬರ್ರಾ ಅತ್ಯಂತ ಮಹತ್ವದ ಕೆಲಸವನ್ನು ಮಾಡಿದರು. ಅಷ್ಟೇ ಅಲ್ಲದೆ ಆವರೆಗೂ ಅಂದರೆ 1776ರಲ್ಲಿ ಭಾರತಕ್ಕೆ ಬಂದಾಗಿನಿಂದಲೂ 1793ರ ವರೆಗಿನ ಹದಿನೇಳು ವರ್ಷದ ಕೆಲಸವನ್ನೂ ಜೊತೆಗೆ ಮುಂದಿನ 20 ವರ್ಷಗಳ ಅಧ್ಯಯನವನ್ನೂ ದಾಖಲೆಯಾಗಿಸಿದ್ದು ಕೊಲ್ಕತ್ತಾದಲ್ಲಿದ್ದಾಗಲೇ. ಮೊಟ್ಟ ಮೊದಲು ಕೊರಮಂಡಲ ತೀರದ ಸಸ್ಯಗಳ ದಾಖಲೆಯು (Plants of Coast of Coromandel) ಮೂರು ಸಂಪುಟಗಳಲ್ಲಿ ಸಚಿತ್ರವಾಗಿ ಅನುಕ್ರಮವಾಗಿ 1795, 1802 ಮತ್ತು 1819 ರಲ್ಲಿ ಪ್ರಕಟವಾಗುತ್ತವೆ. ನಂತರ 1510 ಗಿಡ-ಮರಗಳ ವಿವರಗಳ ಕೊಲ್ಕತ್ತಾ ತೋಟದ ಸಸ್ಯ ಸಂಗ್ರಹವು(Hortus Bengalensis)1824ರಲ್ಲಿ ಪ್ರಕಟವಾಗುತ್ತದೆ. ಕೊನೆಗೆ ಭಾರತದ ಸಸ್ಯಸಂಗ್ರಹವೂ (Flora Indica) ಮೂರು ಸಂಪುಟಗಳಲ್ಲಿ ಪ್ರಕಟವಾಗುತ್ತದೆ. ಈ ಫ್ಲೊರಾ ಇಂಡಿಕಾದ ಮೂರೂ ಸಂಪುಟಗಳೂ ವಿಲಿಯಂ ರಾಕ್ಸ್‌ ಬರ್ರಾ ಅವರ ಮರಣಾನಂತರ 1820 ಮತ್ತು 1828ರಲ್ಲಿ ಮೊದಲೆರಡು ಸಂಪುಟಗಳು ಮತ್ತು 1832ರಲ್ಲಿ ಮೊದಲಿನ ಎರಡೂ ಮತ್ತೊಮ್ಮೆ ಜೊತೆಗೆ ಮೂರನೆಯ ಸಂಪುಟ, ಒಟ್ಟು ಮೂರೂ ಪ್ರಕಟವಾಗುತ್ತವೆ. ಮುಂದೆ ಮತ್ತೊಮ್ಮೆ ಪರಿಷ್ಕೃತಗೊಂಡು 1874 ರಲ್ಲಿ ಫ್ರೋರಾ ಇಂಡಿಕಾದ ಮೂರೂ ಸಂಪುಟಗಳೂ ಪ್ರಕಟವಾಗುತ್ತವೆ. ಇವುಗಳನ್ನು ರಾಕ್ಸ್‌ ಬರ್ರಾ ಅವರೇ ಸ್ವತಃ ಕೈಬರಹದಲ್ಲಿ ಎರಡು ಪ್ರತಿಗಳಾಗಿಸಿ ಅಣಿಗೊಳಿಸಿದ್ದು ಅವರ ಕಾರ್ಯವೈಖರಿಯನ್ನು ತಿಳಿಸುತ್ತದೆ. ಒಂದು ಪ್ರತಿಯನ್ನು ಕೊಲ್ಕತ್ತಾದ ತೋಟದಲ್ಲಿ ಹಸ್ತಾಂತರಿಸಿ ಮತ್ತೊಂದನ್ನು ಇಂಗ್ಲೆಂಡಿಗೂ ತೆಗೆದುಕೊಂಡು ಹೋಗುತ್ತಾರೆ. ಇದು ಸ್ಥಳಿಯತೆಯನ್ನು ಗೌರವಿಸುವ ಜೊತೆಗೆ ಸ್ವಾಮಿನಿಷ್ಠೆಯನ್ನೂ ಸಮದೂಗಿಸುವ ಸಮರ್ಥ ಕೆಲಸ.

ಕೊಲ್ಕತ್ತಾದ ಸಸ್ಯೋದ್ಯಾನದ ಮುಖ್ಯಸ್ಥರಾಗಿ ಸೇರಿದ ರಾಕ್ಸ್‌ ಬರ್ರಾ ಅವರು ಮೊಟ್ಟ ಮೊದಲು ಮಾಡಿದ ಕೆಲಸವೆಂದರೆ, ತೋಟವೊಂದನ್ನು ಸಂಶೋಧನಾ ಸಂಸ್ಥೆಯಾಗಿ ಪರಿವರ್ತಿಸಿದ್ದು. ಬ್ರಿಟೀಶ್‌ ರಾಜ್‌ಗೆ ತೋಟವು ಮತ್ತು ಅದರ ಅಧ್ಯಯನ ವಿವರಗಳು ಭಾರತೀಯ ಸಸ್ಯಗಳನ್ನು ಲಾಭವಾಗಿ ಪಡೆಯುವ ಉದ್ದೇಶ ಮಾತ್ರ ಇತ್ತು. ಅದನ್ನು ವಿಸ್ತರಿಸಿ ಅದನ್ನು ಸಂಶೋಧನಾ ಸಂಸ್ಥೆಯಾಗಿಸಿ ಇಡೀ ಭಾರತೀಯ ಸಸ್ಯವೈಜ್ಞಾನಿಕ ಇತಿಹಾಸದ ಸೃಷ್ಟಿಗೆ ಅನುಕೂಲವಾಗುವಂತೆ ಕಾರ್ಯ ನಿರ್ವಹಿಸಿವಂತೆ ಮಾಡಿದವರು ರಾಕ್ಸ್‌ ಬರ್ರಾ. ಕೊಲ್ಕತ್ತಾದ ಸಸ್ಯೋದ್ಯಾನದಲ್ಲಿ ಅವರಿದ್ದ ಮನೆ ಹಾಗೂ ಅವರ ಸ್ಮಾರಕ ಜೊತೆಗೆ ಅವರ ಜೀವಮಾನದ ಅಗಣಿತ ಕಾರ್ಯದ ಸಾಕಷ್ಟು ಕುರುಹುಗಳು ಇವೆ.

ರಾಕ್ಸ್‌ ಬರ್ರಾ ಅವರು ಕೊಲ್ಕತ್ತಾ ತೋಟವನ್ನು 1793 ರಲ್ಲಿ ಹೊಕ್ಕವರು 1813ರವರೆಗೂ 20 ವರ್ಷಗಳ ಕಾಲ ಅಲ್ಲೇ ಇದ್ದವರು. ರಾಕ್ಸ್‌ ಬರ್ರಾ ಅವರು ಅನಾಥ ಮಗುವಾಗಿ ಹುಟ್ಟಿ ಬೆಳೆದಿದ್ದರೂ, ಅವರು ಮಾತ್ರ ಭಾರತದಲ್ಲಿ 37 ವರ್ಷವಿದ್ದು ತುಂಬು ಸಂಸಾರದ ಜೀವನವನ್ನು ನಡೆಸಿದವರು. ಅವರಿಗೆ ಮೂವರು ಹೆಂಡತಿಯರು ಹಾಗೂ 12 ಜನ ಮಕ್ಕಳು. ಅವರೆಲ್ಲರ ಜೊತೆ ಮೂರು ಅಂತಸ್ಥಿನ ರಾಕ್ಸ್‌ ಬರ್ರಾ ಹೌಸ್‌ ಎಂದೇ ಕರೆಯಲಾಗುವ ತೋಟದ ಮನೆಯಲ್ಲಿ ಇದ್ದರು. (ಅದರ ಚಿತ್ರ ನೋಡಬಹುದು). ಅವರು ಕೊಲ್ಕತ್ತಾ ಸಸ್ಯೋದ್ಯಾನಕ್ಕೆ ಬಂದಾಗ ಅಲ್ಲಿದ್ದವು ಕೇವಲ 300 ಬಗೆಯ ಗಿಡ-ಮರಗಳು ಅವರು 20 ವರ್ಷಗಳ ಕಾಲವಿದ್ದು ವಾಪಸ್ಸು ಬ್ರಿಟನ್ನಿಗೆ ಹಿಂದುರುಗಿ ಹೊರಟಾಗ 3500 ಬಗೆಯ ಗಿಡಮರಗಳಾಗಿದ್ದವು. 20 ವರ್ಷಗಳಲ್ಲಿ ಹತ್ತು ಪಟ್ಟು ಸಂಖ್ಯೆಯ ವಿವಿಧತೆಯ ಗಿಡ-ಮರಗಳನ್ನು ಬೆಳೆಸಿದ್ದು ರಾಕ್ಸ್‌ ಬರ್ರಾ ಅವರ ಸಸ್ಯ ಪ್ರೀತಿಯಿಂದ. ಅಷ್ಟೇ ಸಂಖ್ಯೆಯ ಗಿಡ ಮರಗಳ ವಿವರಗಳನ್ನು ತಮ್ಮ ಕೈಬರಹದಿಂದ ದಾಖಲಾತಿ ಮಾಡಿ ನಮ್ಮ ದೇಶಕ್ಕೆ ಕಾಣಿಕೆಯಾಗಿ ಕೊಟ್ಟಿದ್ದಾರೆ. ಅದರ ಜೊತೆಗೆ ಭಾರತಕ್ಕೆ ಹೊರದೇಶಗಳಿಂದ ಪರಿಚಯಗೊಂಡಿರುವ ಸಾವಿರಾರು ಗಿಡಮರಗಳು ಕೇವಲ ವಿಲಿಯಂ ರಾಕ್ಸ್‌ ಬರ್ರಾ ಅವರ ಆಸಕ್ತಿಯಿಂದಲೇ ಬಂದಿವೆ ಎಂಬುದು ಅತ್ಯದ್ಭುತವಾದ ಸಂಗತಿ. ನಮ್ಮಲ್ಲಿರುವ ಬಗೆ ಬಗೆಯ ಜಾಲಿಮರಗಳನ್ನು ಹೆಸರಿಸಿ, ವಿವರಿಸಿದರು. ಅಮೆರಿಕಾ ಖಂಡದಿಂದಲೂ ಜಾಲಿಯ ಮರದ ಬಗೆಯೊಂದನ್ನು ತರಿಸಿ ಪರಿಚಯಿಸಿದರು. ವೆಸ್ಟ್‌ ಇಂಡಿಸ್‌ ನಿಂದ ಹತ್ತಾರು ಗಿಡ-ಮರಗಳನ್ನು ತರಿಸಿ ಇಲ್ಲಿ ನೆಲೆಗೊಳಿಸಿದರು. ಮಹಾಗನಿ, ಮುಂತಾದ ಅನೇಕ ಸಸ್ಯಗಳು ಅವರ ಕೊಡುಗೆಗಳು.

ಎಲ್ಲಕ್ಕಿಂತಾ ಹೆಚ್ಚಾಗಿ ಸಾವಿರಾರು ಗಿಡ-ಮರಗಳ ಆರ್ಥಿಕ ಹಿತಗಳ ಸಂಗತಿಗಳನ್ನು ಅವರು ವಿವರಿಸಿದ್ದಾರೆ. ಜೊತೆಗೆ ಅನ್ಯದೇಶಗಳಿಂದ ಪರಿಚಿತಗೊಂಡಿದ್ದರೆ, ಅವುಗಳಿಗೆ ಸ್ಥಳೀಯ ಸಸ್ಯಗಳ ಜೊತೆ ಸಮೀಕರಿಸಿ ಅವುಗಳಿಗೆ ಹೊಂದಿಕೆಯಾಗಬಲ್ಲವನ್ನೂ ಗುರುತಿಸಿದ್ದಾರೆ. ಈ ದೃಷ್ಟಿಯಲ್ಲಿ ಅದೊಂದು ಅತ್ಯದ್ಭುತವಾದ ಭಾರತೀಯತೆಯ ಕೆಲಸ. ಪರಕೀಯನೊಬ್ಬ, ಅದೂ ಅನಾಥವಾಗಿ ಹುಟ್ಟಿ ಬೆಳೆದ ವ್ಯಕ್ತಿಯೊಬ್ಬರು ಮತ್ತೊಂದು ಯಾವುದೋ ದೇಶಕ್ಕೆ, ದೇಸೀ ಹಿತದಲ್ಲಿ ಸಸ್ಯ ಪ್ರೀತಿಯನ್ನು ಬೆಳೆಸಿದ್ದು ಪವಾಡದಂತೆ ಅನ್ನಿಸಿದರೂ ಅಚ್ಚರಿಯಲ್ಲ. ಇದೇ ವಿಲಿಯಂ ರಾಕ್ಸ್‌ ಬರ್ರಾ ಅವರನ್ನು ಭಾರತೀಯ ಸಸ್ಯವಿಜ್ಞಾನದ ಪಿತಾಮಹಾ ಅಂದು ಕರೆಯುವಂತೆ ಪ್ರೇರೇಪಿಸಿದೆ. ಸಸ್ಯವರ್ಗೀಕರಣದಲ್ಲಿ ರಾಕ್ಸ್‌ಬರ್ರಾ ಅವರದ್ದು ಅತಿದೊಡ್ಡ ಸಾಧನೆ. ಅದಕ್ಕೆಂದು ಅವರನ್ನು ಭಾರತದ ಲಿನೆಯಾಸ್‌ ಎಂದೂ ಕರೆಯಲಾಗುತ್ತದೆ. ರಾಕ್ಸ್‌ ಬರ್ರಾ ಅವರು ಬಹುಶಃ ಭಾರತವನ್ನು ಬಿಟ್ಟು ಹೋಗುವ ಮನಸ್ಸಿಲ್ಲದೇ ಇದ್ದಿರಬಹುದು. ಆದರೆ ಕಡೆಗಾಲದ ಆರೋಗ್ಯ ಅವರನ್ನು ಬ್ರಿಟನ್ನಿಗೆ ಹೋಗಲು ಪ್ರೇರೇಪಿಸಿದೆ. 1813ರಲ್ಲಿ ವಾಪಸ್ಸು ಹೋದ ಒಂದುವರ್ಷ ಕೆಲವೇ ತಿಂಗಳಲ್ಲಿ 1815ರ ಫೆಬ್ರವರಿ 18ರಂದು ಜೀವನ ಪಯಣವನ್ನು ಮುಗಿಸಿದರು. ಅವರ ಇಬ್ಬರು ಮಕ್ಕಳೂ ಸಹಾ ಸಸ್ಯ ದಾಖಲಾತಿ ಸಂಗ್ರಹ, ಬೆಳೆಸುವುದು ಇತ್ಯಾದಿ ತೊಡಗಿಕೊಂಡಿದ್ದು ನಮ್ಮ ದೇಶಕ್ಕೆ ಅಪ್ಪನ ಜೊತೆ ದುಡಿದಿದ್ದಾರೆ.

ಸಸ್ಯವರ್ಗೀಕರಣದಲ್ಲಿ ಮಹಾನ್‌ ಸೇವೆಯನ್ನು ಮಾಡಿರುವ ವಿಲಿಯಂ ರಾಕ್ಸ್‌ ಬರ್ರಾ ಹೆಸರಿನಲ್ಲಿ ಅವರ ಶಿಷ್ಯರು ಕೆಲವು ಪ್ರಭೇದಗಳನ್ನು ಕರೆದಿದ್ದಾರೆ. ಉದಾಹರಣೆಗೆ ಪುತ್ರಂಜೀವ(Putranjiva roxburghii) ಮತ್ತು ಪೈನ್‌ ಮರ (Pinus roxburghii) ಪ್ರಭೇದಗಳಾಗಿಯೂ, ಹಾಗೂ ರಾಕ್ಸ್‌ಬರ್ಗಿಯಾ (Roxburghia) ಎಂಬ ಒಂದು ಕುಲವೆಂಬುದಾಗಿಯೂ ಹೆಸರಿಸಿದ್ದಾರೆ.

ಒಬ್ಬನೇ ವ್ಯಕ್ತಿ 3000ಕ್ಕೂ ಹೆಚ್ಚು ಗಿಡ-ಮರಗಳ ಜೊತೆಗೆ ಜೀವನಯಾನವನ್ನು ನಿಸರ್ಗದಲ್ಲಿ ಅವುಗಳ ನೆಲೆಯಲ್ಲಿಯೇ ಮಾಡಿ, ಅವುಗಳ ಪುಟ್ಟ-ಪುಟ್ಟ ವಿವರಗಳನ್ನೂ ಸ್ವಂತ ಕೈಬರಹದಿಂದ ದಾಖಲು ಮಾಡಿ, ತಿದ್ದಿ, ಪ್ರತಿಗಳನ್ನು ಮಾಡಿ, ಮಾನವಕುಲಕ್ಕೆ ಬಿಟ್ಟು ಹೋಗಿರುವುದು ಅಚ್ಚರಿಯ ಸಂಗತಿ. ಜೊತೆಗೆ ಒಂದು ದೊಡ್ಡ ದೇಶದ ಆರ್ಥಿಕತೆಯನ್ನು ನಿರ್ಮಿಸಬಲ್ಲ ಸಸ್ಯಗಳ ಜಗತ್ತನ್ನು ವಿವರಿಸಿದ್ದಂತೂ ಕೋಟ್ಯಾಂತರ ಮಾನವರ ಹಸಿವನ್ನು ನೀಗಿಸುವ ಕೆಲಸ. ಇಷ್ಟಕ್ಕೆಲ್ಲಾ ವಿಲಿಯಂ ರಾಕ್ಸ್‌ಬರ್ರಾ ಕಾರಣರಾಗಿದ್ದು ಅವರ ಬಗ್ಗೆ ಸ್ವಲ್ಪವಾದರೂ ನಮಗೆ ತಿಳಿಯಲು ಸಾಧ್ಯವಾಗಿದೆ ಎಂಬ ಸಂತಸದೊಂದಿಗೆ ವಿರಮಿಸುತ್ತೇನೆ.

ನಮಸ್ಕಾರ.

ಡಾ.ಟಿ.ಎಸ್‌. ಚನ್ನೇಶ್

This Post Has 2 Comments

  1. Kusum Salian

    ವಿಲಿಯಂ ರಾಕ್ಸ್ ಬರ್ರಾ ಬಗ್ಗೆ ತಿಳಿದು ನಿಜವಾಗಿಯೂ ಅಚ್ಚರಿಯಾಯಿತು. ಆದರೆ ಸಮಯದಲ್ಲಿ ಭಾರದಲ್ಲಿ ಇಂತಹ ಅನ್ವೇಷಣೆಗಳನ್ನು ಮಾಡಿದ್ದಲ್ಲದೆ ರೆಕಾರ್ಡ್.. ಚಿತ್ರಗಳೊಂದಿಗೆ ವಿವರಣೆ ಮಾಡಿದ್ದು ನಿಜವಾಗಿಯೂ ಶ್ಲಾಘನೀಯ. ಸೂಪರ್ ಸಸ್ಯಯಾನ. ತುಂಬಾ ಉಪಯುಕ್ತ ಮಾಹಿತಿ. ಧನ್ಯವಾದಗಳು

  2. Kotresh T A M

    ಉಪಯುಕ್ತ ಮಾಹಿತಿ

Leave a Reply