You are currently viewing ಜಗತ್ತಿಗೆಲ್ಲಾ ಮಸಾಲೆಯ ರುಚಿ ತೋರಿಸಿದ ಜೀರಿಗೆ : Cuminum cyminum

ಜಗತ್ತಿಗೆಲ್ಲಾ ಮಸಾಲೆಯ ರುಚಿ ತೋರಿಸಿದ ಜೀರಿಗೆ : Cuminum cyminum

“ಭಾರತೀಯರು ಅಡುಗೆಯನ್ನು ಆರಂಭಿಸಿದ ಕ್ಷಣದಿಂದಲೇ ಜೀರಿಗೆಯು ಬಳಕೆಯಲ್ಲಿ ಇದೆ” ಎನ್ನುವ ಜನಪ್ರಿಯ ಮಾತು ಯೂರೋಪಿನ್ನರಲ್ಲಿ ಇದೆ. ಅದರಲ್ಲೂ ದಕ್ಷಿಣ ಭಾರತೀಯ ಪರಂಪರೆಯಲ್ಲಿ ಸಾಂಬಾರಿನ ಮಸಾಲೆಯನ್ನು ಜೀರಿಗೆ ಇಲ್ಲದೆ ಊಹಿಸಿಕೊಳ್ಳುವುದೂ ಕಷ್ಟ. ಮನೆಯ ಮಸಾಲೆಯ ಡಬ್ಬಿಗಳಲ್ಲಿ ಜೀರಿಗೆಗೆ ಒಂದು ಗುರುತರವಾದ ಸ್ಥಾನ. ಜೀರಿಗೆಯು ಒಂದು ಬಗೆಯ ಸಿಗ್ನೇಚರ್‌ ಮಸಾಲೆ (Signature Spice). ಜಾಗತಿಕವಾಗಿ ಪ್ರತಿಶತ 70ರಷ್ಟನ್ನು ಉತ್ಪಾದಿಸುವ ಭಾರತ ಅದರಲ್ಲಿ 90%ಅನ್ನು ಬಳಸುತ್ತದೆ. ಹಾಗಿದ್ದೂ ರಫ್ತಿನಲ್ಲಿ ಮುಂಚೂಣಿಯಲ್ಲಿದೆ. ಅನ್ಯದೇಶಗಳಿಗೆ ಪರಿಚಯಗೊಂಡ ಮಸಾಲಾ ಪದಾರ್ಥಗಳಲ್ಲಿ ಜೀರಿಗೆಯು ಒಗ್ಗಿದಷ್ಟು ಮತ್ತಾವುದೂ ಒಗ್ಗಿಲ್ಲ. ಇದಕ್ಕೆ ಬಹು ಮುಖ್ಯವಾದ ಕಾರಣ ಮಸಾಲೆಯ ಘಾಟಿನ ಜೊತೆಗಿರುವ ಸಿಹಿಯಾದ ಪರಿಮಳ!   

       ಭಾರತದ ರಾಜಸ್ತಾನ್‌ ಹಾಗೂ ಗುಜರಾತ್‌ ನೆಲವು ಜೀರಿಗೆಗೆ ಹೇಳಿ ಮಾಡಿಸಿದಂತಿದೆ. ತೀರಾ ಬಿಸಿಯಾದ 30 ಡಿಗ್ರಿ ಸೆಂಟಿಗ್ರೇಡ್‌ ಹವಾಗುಣದ ವಾತಾವರಣವನ್ನು ಬೆಳೆಯ ಬಹು ಪಾಲು ಜೀವನಚಕ್ರವು ಬಯಸುತ್ತದೆ. ಹಾಗಾಗಿ ರಾಜಾಸ್ತಾನದ ಬಿಸಿಲಿನಲ್ಲಿ ಜೀರಿಗೆಗೆ ಪರಿಮಳದ ಘಾಟು ತುಂಬಿಕೊಳ್ಳಲು ಅನುಕೂಲವಾಗಿದೆ. ನಮಗೆಲ್ಲಾ ಜೀರಿಗೆಯ ಬೆಳೆಯ ನೋಡಿದ ಪರಿಚಯ ಇರಲಿಕ್ಕಿಲ್ಲ. ಕಾರಣ ಸಾಮಾನ್ಯವಾಗಿ ದಕ್ಷಿಣದಲ್ಲೆಲ್ಲೂ ಬೆಳೆಯುವುದಿಲ್ಲ. ಬೆಳೆಯಲು ಪ್ರಯತ್ನಿಸಿ ಸೋತ ಹಲವು ರೈತರನ್ನು ನಾನು ಮಾತನಾಡಿಸಿದ್ದೇನೆ. ಇದರ ಸೋದರ ಸಂಬಂಧಿಗಳಾದ ಕೊತ್ತಂಬರಿ, ಸಬ್ಬಸಿಗೆ, ಹಾಗೂ ಕ್ಯಾರೇಟ್‌ಗಳೆಲ್ಲಾ ಏಪಿಯೇಸಿಯೆ (Apiaceae) ಎಂಬ ಒಂದೇ ಕುಟುಂಬಕ್ಕೆ ಸೇರಿದವು.  ಜೀರಾ.. ಎಂದೂ ಕರೆಯುವ ಜೀರಿಗೆಯನ್ನು ಕ್ಯುಮಿನಂ ಸೈಮಿನಮ್‌ (Cuminum cyminum) ಎಂಬ ವೈಜ್ಞಾನಿಕ ಹೆಸರಿನಿಂದ ಕರೆಯಲಾಗುತ್ತದೆ. ಇಂಗ್ಲೀಷಿಗೆ ಕ್ಯಮಿನ್‌ (Cumin) ಎಂಬುದಾಗಿ ಹಿಬ್ರೂ ಮತ್ತು ಅರಾಬಿಕ್‌ ಮೂಲದಿಂದ ಲ್ಯಾಟೀನಿಕರಣಗೊಂಡು ಫ್ರೆಂಚ್‌ ಅಥವಾ ಸ್ಪಾನಿಶ್‌ ಮಾರ್ಗದಿಂದ ಪಡೆಯಲಾಗಿದೆ.

       ಜೀರಿಗೆ, ಜೀರಾ ಅಥವಾ ಕ್ಯುಮಿನ್‌ ತುಂಬಾ ಎತ್ತರವಾದ ಸಸ್ಯವಲ್ಲ. ಹೆಚ್ಚೆಂದರೆ ಒಂದು ಅಡಿ ಮಾತ್ರ! ಹೆಚ್ಚಿನ ಪಾಲು ಮುಕ್ಕಾಲು ಅಡಿಯ ಗಿಡಗಳೇ ಅಧಿಕ. ಎಲೆಗಳು ಕೊತ್ತಂಬರಿ ಹಾಗೂ ಸಬ್ಬಸಿಗೆಯ ನಡುವಿನ ನೋಟವುಳ್ಳವು. ಕೊತ್ತಂಬರಿಯಂತೆ ಅಗಲವೂ ಅಲ್ಲ ಅಥವಾ ಸಬ್ಬಸಿಗೆಯಂತೆ ಪೂರ್ಣ ಚಿಲಿಕು ಹೊಡೆದವೂ ಅಲ್ಲ, ಒಂದು ರೀತಿಯಲ್ಲಿ ಬಾಚಣಿಕೆಯಂತೆ ಸೀಳಿದ ನೋಟದವು. ನಯವಾಗಿದ್ದು ಮೃದುವಾಗಿ ಹಚ್ಚ ಹಸಿರಿನ ಬಣ್ಣದ ಸಸ್ಯ. ಗಿಡದ ತುದಿಯಲ್ಲಿ ಅಗಲಿದ ಕೊಡೆಯಂತೆ ಬಿಟ್ಟ ಹೂವಿನ ಗೊಂಚಲಿದ್ದು ಬಿಳಿಯ ಬಣ್ಣದವಾಗಿರುತ್ತವೆ. ಕೆಲವೊಂದು ತಳಿಗಳು ನೀಲಿ ಹಾಗೂ ಹಳದಿಯ ಛಾಯೆಯನ್ನೂ ಹೊಂದಿರುವುದುಂಟು.

       ಜೀರಿಗೆಯು ಮೆಡಿಟರೆನಿಯನ್‌ ಪ್ರದೇಶದಿಂದ ರಾಜಸ್ತಾನದವರೆಗಿನ ಹರಹಿನ ವಿಕಾಸವನ್ನು ಹೊಂದಿದೆ ಎಂದು ನಂಬಲಾಗಿದೆ. ಹೆಚ್ಚಿನ ಪಾಲು ಅರಬ್ಬರು ಪರಿಚಯಿಸಿರುವ ಸಾಧ್ಯತೆಯೇ ಹೆಚ್ಚು. ಬಳಕೆಯಲ್ಲಿ ಭಾರತೀಯ ಮೂಲದ ಇತಿಹಾಸವನ್ನು ದಟ್ಟವಾಗಿ ಹೊಂದಿರುವ ಜೀರಾ, ಇಲ್ಲಿ ಸುಮಾರು 3000ದಿಂದ 5000 ವರ್ಷಗಳ ಹಿಂದಿನಿಂದಲೂ ಬೆಳೆದು ಬಳಸಲಾಗುತ್ತಿದೆ ಎಂದೇ ದಾಖಲೆಗಳು ತಿಳಿಸುತ್ತವೆ. ಭಾರತೀಯ ಪರಂಪರೆಯ ವೈದ್ಯ ಶ್ರೇಷ್ಠರಾದ ಚರಕ ಮತ್ತು ಸುಶ್ರುತರು ತಮ್ಮ ಬರಹಗಳಲ್ಲಿ ಜೀರಿಗೆಯ ಔಷಧೋಪಚಾರವನ್ನು ವಿವರಿಸಿದ್ದಾರೆ. ಗ್ರೀಕ್‌ ಮೂಲದ ವೈದ್ಯ ಪದ್ಧತಿಯ ಬರಹಗಳಲ್ಲೂ ಜೀರಿಗೆಗೆ ಸ್ಥಾನವಿದೆ. ಇತ್ತೀಚೆಗೆ ಕೊಲಂಬಸ್ಸನಿಂದಾಗಿ ಅಮೆರಿಕದ ನೆಲವನ್ನು ಹೊಕ್ಕು ಲ್ಯಾಟಿನ್‌ ಅಮೆರಿಕಾದಲ್ಲೂ ಇದು ಪರಿಚಯಗೊಂಡಿದೆ. ಒಂದು ಮಸಾಲೆಯ ಪದಾರ್ಥವಾಗಿ ಜೀರಿಗೆಯು ಜನಪ್ರಿಯವಾದಷ್ಟು ಮತ್ತಾವ ಸಂಬಾರು ಬೆಳೆಯೂ ಆಗಿಲ್ಲ. ಮಸಾಲೆಯ ರುಚಿಯ ಜೊತೆಗಿರುವ, ಆಹ್ಲಾದಕರ ಪರಿಮಳ ಹಾಗೂ ಔಷಧೀಯ ಲಾಭಗಳಿಂದಾಗಿ ಜಗತ್ತಿಗೆಲ್ಲಾ ಹಿತವಾದ ಮಸಾಲಾ ಪದಾರ್ಥವಾಗಿದೆ. ನಾವು ಕಾಳು-ಬೀಜ ಎನ್ನುವುದು ನಿಜಕ್ಕೂ ಜೀರಿಗೆಯ ಕಾಯಿಗೆ! ಒಂದು ಕಾಯಿಯಲ್ಲಿ ಒಂದೇ ಬೀಜ ಇರುವಂತಹ ಸಸ್ಯ ಇದು. ಕೊತ್ತಂಬರಿಯೂ ಹಾಗೆಯೇ, ಆದರೆ ಅದರಲ್ಲಿ ಎರಡು ಬೀಜಗಳಿರುತ್ತವೆ. 

       ಜೀರಿಗೆಯಲ್ಲಿ ಕಪ್ಪು ಜೀರಿಗೆ (Negilla sativa) ಎಂಬ ಬೇರೆಯದೇ ಆದ ಪ್ರಭೇದ ಒಂದಿದೆ. ಅದಕ್ಕೂ ಸಾಮಾನ್ಯ ಜೀರಿಗೆ-ಕ್ಯುಮಿನ್‌ಗೂ ಯಾವುದೇ ಸಂಬಂಧಗಳಿಲ್ಲ. ಹಾಗೆಯೇ ಕಹಿ ಜೀರಿಗೆ (Cuminum nigram) ಎಂಬ ಸಾಮಾನ್ಯ ಜೀರಿಗೆಯ ಕುಲದ ಬೇರೆಯದೇ ಆದ ಪ್ರಭೇದವೂ ಇದೆ. ಇವುಗಳೂ ಸಹಾ ಹೆಚ್ಚೂ ಕಡಿಮೆ ಒಂದೇ ಬಗೆಯ ರಾಸಾಯನಿಕ ಗುಣಗಳಿಂದ ಸಂಬಂಧಿಗಳೋ ಎಂಬಂತೆ ನಂಬುವಂತೆ ಮಾಡಿವೆ. ಆದರೆ ಸಸ್ಯ ವೈಜ್ಞಾನಿಕವಾಗಿ ಮೂರೂ ಬೇರೆ ಬೇರೇ ಪ್ರಭೇದಗಳು. ಕಪ್ಪು ಮತ್ತು ಕಹಿ ಜೀರಿಗೆಗಳು ಮಾಮೂಲಿ ಜೀರಿಗೆಯಂತೆ ಬಳಸುವುದೂ ಇಲ್ಲ, ಜಗದ್ವ್ಯಾಪಿಯೂ ಅಲ್ಲ! ಆದರೆ ಇವೆರಡನ್ನೂ ಔಷಧಗಳಲ್ಲಿ ಬಳಸುವ ರೂಢಿಯು ಇದೆ. ಅಲ್ಲದೆ ಔಷಧ ಗುಣಗಳೂ ಕೂಡ ಇವೆರಡರಲ್ಲಿ ಮುಖ್ಯವಾಗಿವೆ.

       ಜೀರಿಗೆಯ ಕಷಾಯ ಅಥವಾ ಜೀರಾ ಟೀ ಬಹಳ ಜನಪ್ರಿಯ. ತಂಪಾದ ಜೀರಾ ಪಾನಕ ಕೂಡ. ಅಷ್ಟೆಲ್ಲಾ ಮಾಡದೆ, ನೀರಿಗೆ ಕೇವಲ ಜೀರಿಗೆಯನ್ನು ಬೆರೆಸಿ ಪರಿಮಳ ಕೊಟ್ಟು ಬಳಸುವುದೂ ಜನಪ್ರಿಯವೇ! ಜೀರಾ ವಾಟರ್‌ ಎಂಬ ಪರಿಮಳ-ಭರಿತ ನೀರು ಅನೇಕ ಸಂಸ್ಕೃತಿಗಳ ಬಳಕೆಯಲ್ಲಿ ಇದೆ. ಕೇರಳದ ಹೊಟೆಲ್ಲುಗಳಲ್ಲಿ ನೀರು ಕುಡಿದವರಿಗೆ ನೆನಪಾಗಬಹುದು! ಕುದಿಯುವ ನೀರಿಗೆ ಒಂದಷ್ಟು ಜೀರಿಗೆ ಸೇರಿಸಿ ಕುದಿಸಿ, ಜೇನು ತುಪ್ಪದೊಂದಿಗೆ ಸಿಹಿಯಾಗಿಸಿ ಹೀರುವ ಸಂಪ್ರದಾಯ ಅರಬ್ಬರಲ್ಲಿ ತುಂಬಾ ಜನಪ್ರಿಯ. ಅದರ ಆಹ್ಲಾದಕತೆಯು ಪ್ರೀತಿಯ ಮತ್ತನೇರಿಸಿ ತುಂಟ ಬಯಕೆಗಳನ್ನು ವೃದ್ಧಿಸುವುದೆಂಬ ಬಲವಾದ ನಂಬಿಕೆ ಅವರದ್ದು. ಲೈಂಗಿಕ ಆಸಕ್ತಿಯನ್ನು ದೀರ್ಘಕಾಲ ಉಳಿಸಿಕೊಳ್ಳುವ ಆಸೆಗೆ ಜೀರಿಗೆಯನ್ನು ಮೊರೆಹೊಕ್ಕ ಸಂಸ್ಕೃತಿ ಅದು. ಇದರ ಔಷಧೀಯ ಗುಣಗಳ ಉದ್ದವಾದ ಪಟ್ಟಿಯೇ ಇದ್ದು ಹಲವಾರು ವೈದ್ಯಕೀಯ ಸಂಶೋಧನೆಗಳು ಇದರ ಹಿನ್ನೆಲೆಯಲ್ಲಿ ಹಂಚಿವೆ. ಅದಕ್ಕಿಂತಲೂ ಪಾರಂಪರಿಕ ಹಂಚಿಕೆಯ ಹಿತವಾದ ಸ್ವಾರಸ್ಯವನ್ನು ತಿಳಿದು ಅನಂತರದಲ್ಲಿ ವೈದ್ಯಕೀಯ ವಿಚಾರಗಳನ್ನು ಗಮನಿಸೋಣ.

       ಅನೇಕರು ಗಮನಿಸಿರಬಹುದು. ಈಗಲೂ ಸಂತೆಗಳಲ್ಲಿ ಸಂಬಾರು ಪದಾರ್ಥಗಳನ್ನು ಮಾರುವವರು ಒಂದು ಗೊತ್ತಾದ ಕುಟುಂಬದ ಹಿನ್ನೆಲೆಯವರು ಆಗಿರುವುದುಂಟು. ಅಲ್ಲದೆ ಹಳ್ಳಿಗಳಲ್ಲಿ, ಚಿಕ್ಕ ಪುಟ್ಟ ಪಟ್ಟಣಗಳಲ್ಲಿ ಈಗಲೂ ಜೀರಿಗೆ, ಯಾಲಕ್ಕಿ, ಲವಂಗ ದಾಲ್ಚಿನ್ನಿ ಅಂತಾ ಕೂಗಿಕೊಂಡು ಬರುವವರು ಇದ್ದೇ ಇರುತ್ತಾರೆ. ಇಷ್ಟು ಆತ್ಮ ವಿಶ್ವಾಸದಿಂದ ಹೇಳಲು ಕಾರಣವೆಂದರೆ ಈಗಲೂ ಬೆಂಗಳೂರಿನಲ್ಲೂ ಹೊತ್ತು ಮಾರುವವರು ಬರುತ್ತಾರೆ. ಅದರಲ್ಲೂ ಮಸಾಲಾ ಪದಾರ್ಥಗಳನ್ನು ನಿರಂತರವಾಗಿ ಅವರೇ ವರ್ಷಕ್ಕೆ ಎರಡೋ ಮೂರು ಬಾರಿ ಮನೆಗೆ ಬಂದು, ಹೆಚ್ಚೂ ಕಡಿಮೆ ಮಾರಾಟ ಮಾಡಿಯೇ ಹೋಗುತ್ತಾರೆ. ಬಾಲ್ಯದಿಂದಲೂ ನಾನು ಗಮನಿಸಿದ್ದೇನೆ. ನನ್ನೂರಿನಲ್ಲೂ (ಶಿವಮೊಗ್ಗಾ ಸಮೀಪದ ನ್ಯಾಮತಿಯಲ್ಲಿ) ಹಾಗೆ ಬರುತ್ತಿದ್ದರು. ಕಳೆದ ವರ್ಷದವರೆಗೂ ಬೆಂಗಳೂರಿನಲ್ಲೂ ಬರುತ್ತಿದ್ದರು. ಈಗಲೂ ಒಬ್ಬನೇ ವ್ಯಕ್ತಿ ಬೆಂಗಳೂರಿನ ಮನೆಗೂ ಹತ್ತಾರು ವರ್ಷ ನಿರಂತರವಾಗಿ ಬಂದಿದ್ದಾರೆ. ಅಲ್ಲದೆ ನನ್ನ ಪರಿಚಯದವರಲ್ಲಿ ನಿರಂತರವಾಗಿ ಜೀರಿಗೆ ಮಾರುವ ಕುಟುಂಬದವರಿದ್ದು, ಅವರ ಮನೆತನವು ಜೀರಿಗೆಯರ ಮನೆ ಎಂದೇ ಹೆಸರಾಗಿದೆ. ಅವರ ಹೆಸರಲ್ಲಿ ಜೀರಿಗೆ ಎಂದೇ ಕೊನೆಯಾಗುತ್ತದೆ. ಹಾಗೆ ಯಾಲಕ್ಕಿ ದಾಲ್ಚಿನ್ನಿ ಇತ್ಯಾದಿಯೂ ಇದ್ದಾವು. ಏಕೆ ಹೇಳುತ್ತಿದ್ದೇನೆ ಎಂದರೆ ಇದನ್ನು ಅರಬ್ಬರು ಕಲಿಸಿರಬೇಕು!  ಅಂತಹದ್ದೊಂದು ಸ್ವಾರಸ್ಯಕರ ಚರಿತ್ರೆಯು ಜಗದ್ವಿಖ್ಯಾತ ದಾಖಲೆಯಾಗಿದೆ.

       ಕ್ಯುಮಿನ್‌, ಕ್ಯಾಮಲ್ಸ್ ಅಂಡ್‌ ಕ್ಯಾರವಾ‌ನ್ಸ್ -ಅ ಸ್ಪೈಸ್‌ ಓಡೆಸಿ- (Cumin, Camels, and Caravans : A Spice Odyssey) ಎಂಬ ಚಾರಿತ್ರಿಕ ಸಂಶೋಧನಾ ಕೃತಿಯೊಂದನ್ನು ಕಳೆದ 2014ರಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯವು ಪ್ರಕಟಿಸಿದೆ. ಅದರ ಲೇಖಕರೂ ಹಾಗೂ ಸಂಶೋಧಕರೂ ಆದ ಗ್ಯಾರಿ ಪಾಲ್‌ ನಭಾನ್‌ (Gary Paul Nabhan) ಅರಿಜೊನಾ ವಿಶ್ವವಿದ್ಯಾಲಯದಿಂದ “ಒಣ ನೆಲದ ಮಾನವಿಕ ಸಸ್ಯವಿಜ್ಞಾನ (ಎತ್ನೋಬಾಟನಿ) ಹಾಗೂ ಕೃಷಿ ಪರಿಸರವಿಜ್ಞಾನ (ಅಗ್ರೊಇಕಾಲಜಿ)ದಲ್ಲಿ ಡಾಕ್ಟೊರೇಟ್‌ಗಳಿಸಿ, ಅಲ್ಲಿಂದಲೇ ಪಾರಂಪರಿಕ ಬೀಜ ಸಂಘಟನೆಯೊಂದನ್ನು ಸ್ಥಾಪಿಸಿ ಮನ್ನಡೆಸುತ್ತಿದ್ದಾರೆ. ಮೂಲತಃ ಸಂಬಾರು ಪದಾರ್ಥಗಳ ಮಾರಾಟದ ಕುಟುಂಬದ ಹಿನ್ನೆಲೆಯಿಂದ ಬಂದ ನಭಾನ್‌ ಅರಬ್‌ ಹಾಗೂ ಯಹೂದಿ ಹಿನ್ನೆಲೆಯ ವಹಿವಾಟನ್ನು ಆಮೂಲಾಗ್ರವಾಗಿ ಬಲ್ಲವರಾಗಿದ್ದಾರೆ. ಸ್ವಂತ ಕೌಟುಂಬಿಕ ಅನುಭವಗಳನ್ನು ಜಾಗತಿಕ ಇತಿಹಾಸದ ಆಗುಹೋಗುಗಳನ್ನು ಸಂಶೋಧಿಸಿ ಸಮೀಕರಿಸಿ ಚಾರಿತ್ರಿಕ ದಾಖಲೆಯಾಗಿ ಪ್ರಕಟಸಿದ ಈ ಪುಸ್ತಕವು ತೆರೆದುಕೊಳ್ಳುವುದೇ ಆಕರ್ಷಕ ಶೀರ್ಷಿಕೆಯಿಂದ. ಹಿನ್ನೆಲೆಯ ಪ್ರಸ್ತಾವನೆಯು ಟ್ರೇಡಿಂಗ್‌ ಸ್ಪೈಸಸ್‌ ಟು ದ ಎಂಡ್ಸ್‌ ಆಫ್‌ ದ ಅರ್ಥ್‌-Trading Spices to the Ends of the Earth) ಎಂದೇ ಆರಂಭವಾಗುತ್ತದೆ. ಇದು ನಾಗರಿಕ ವಹಿವಾಟುಗಳು ಆರಂಭವಾದ ಸನ್ನಿವೇಶವು ಹೀಗೆ ನೆಲದ ಅಂಚಿನ ಕೊನೆಯವರೆಗೂ ಹುಡುಕಿಕೊಂಡು ಹೋದ ಮಾನವನ ಅಲೆದಾಟದ ವಿವರಗಳ ಸರಮಾಲೆಯಾಗಿದೆ. ಇದರಲ್ಲಿ ಗ್ಯಾರಿ ಪಾಲ್ ನಭಾನ್ ಅವರು ಮಸಾಲೆ ವ್ಯಾಪಾರ ಮತ್ತು ಪಾಕಶಾಲೆಯ ಸಾಮ್ರಾಜ್ಯಶಾಹಿಯ(Culinary Imperialism) ನಡುವಿನ ಸಂಬಂಧವನ್ನು ಈ ಆಕರ್ಷಕ ವಿವರಣೆಗಳೊಂದಿಗೆ ಕಾಲ (Time) ಮತ್ತು ದೇಶ(Space)ದಾದ್ಯಂತ ಪರಿಮಳಯುತವಾಗಿ ದೂರ- ದೂರದ ಪ್ರಯಾಣದಲ್ಲಿ ಓದುಗರನ್ನು ಕರೆದೊಯ್ಯುತ್ತಾರೆ. ಇದರಲ್ಲಿ ಜೀರಿಗೆಯೂ ಸೇರಿದಂತೆ ಇಂತಹಾ ಇತರೇ ಪರಮಳ ಭರಿತ ಮಸಾಲೆಯ ವಸ್ತುಗಳನ್ನು ಅಲೆದಾಡಿ ಮಾರುತ್ತಾ ಸಂಸ್ಕೃತಿಗಳನ್ನು ಬೆಸೆದ ಸಂಗತಿಗಳ ಕಥನಗಳನ್ನೂ ವಿವರಿಸಿದ್ದಾರೆ. ಜಾಗತೀಕರಣಗೊಳ್ಳುವಂತೆ ಮಸಾಲೆ ವ್ಯಾಪಾರಕ್ಕೆ ವೇದಿಕೆಗಳನ್ನು ಸಿದ್ಧಪಡಿಸುವಲ್ಲಿ ಸೆಮಿಟಿಕ್ ಜನರು(ಯಹೂದಿ ಜನಾಂಗದ ಒಂದು ಗುಂಪು) ಮತ್ತು ಮರುಭೂಮಿ ಸಸ್ಯವರ್ಗಗಳು ಹೊಂದಿದ್ದ ಸಂಬಂಧಗಳನ್ನು ವಿಮರ್ಶಾತ್ಮಕವಾಗಿ ನಭಾನ್ ವಿವರಿಸುತ್ತಾರೆ. ಲೇಖಕರು ಕ್ಯುಮಿನ್‌ (Cumin) ಪದವನ್ನು ಬಳಸಿರುವುದೇ ಪಾಕಶಾಲೆಯ ಜಾಗತೀಕರಣದ ಹಿನ್ನೆಲೆಯಲ್ಲಿ ಎಂದು ಭಾರತದ ಹುಡುಕಾಟದ ವಾಸ್ಕೊಡಿಗಾಮ ಚರಿತ್ರೆಯ ವಿವರಣೆ ಜೊತೆಯಲ್ಲಿ ಜೀರಿಗೆಯ ಮಹತ್ವವನ್ನು ದಾಖಲಿಸಿದ್ದಾರೆ. ಈ ಪುಸ್ತಕವು 320ಕ್ಕೂ ಹೆಚ್ಚು ಪುಟಗಳ ವಿವರಗಳ ಅದ್ಭುತ ಕಥನಗಳನ್ನು ಹೊಂದಿದೆ.

ಗ್ಯಾರಿ ಪಾಲ್‌ ನಭಾನ್‌

ಜೀರಿಗೆಯ ಇತಿಹಾಸ ಮತ್ತು ಪರಂಪರೆಯಲ್ಲಿ ಭಾರತೀಯ ಸಂಗತಿಗಳು ಸಾಕಷ್ಟು ಇವೆ. ಇಂದಿಗೂ ಜೀರಿಗೆಯನ್ನು ಜಗತ್ತು ಗುರುತಿಸುವುದೇ ಭಾರತ, ಇರಾನ್‌ ಮತ್ತು ಟರ್ಕಿಗಳಿಂದ.  ಆದರೂ ವಿವಿಧ ಸಂಸ್ಕೃತಿಗಳಲ್ಲಿ ಜೀರಿಗೆಯು ಬಹು ಹಿಂದೆಯೇ ಬೆರೆತಿದೆ. ಬೈಬಲ್ಲಿನಲ್ಲಿ ಜೀರಿಗೆಯನ್ನು ಒಂದು ರೀತಿಯಲ್ಲಿ -ಕರೆನ್ಸಿ (Currency)- ಚಲಾವಣೆಯ ನಾಣ್ಯದಂತೆ ಬಳಸಿದ ವಿವರಗಳಿವೆ. ಸ್ವತಃ ಏಸುವೇ ವಹಿವಾಟುದಾರರ ತೀರ್ಮಾನ ಕುರಿತಂತೆ ಹೇಳಿದ್ದ ಮಾತುಗಳಲ್ಲಿ ಅದು ವ್ಯಕ್ತವಾದಂತಹ ವಿವರಗಳು ಸಿಗುತ್ತವೆ. ಈಜಿಪ್ಷಿಯನ್ನರು ಮಮ್ಮಿಗಳಾಗಿಸುವ ಕ್ರಿಯೆಗಳಲ್ಲಿಯೂ ಜೀರಿಗೆಯನ್ನು ಬಳಸುತ್ತಿದ್ದರಂತೆ. ಪ್ರಾಚೀನ ರೋಮನ್ನರಿಗೆ ಜೀರಿಗೆಯು ಜಿಪುಣತನ ಹಾಗೂ ಅತಿ ಆಸೆಯ ಸಂಕೇತವಾಗಿತ್ತು. ಮುಂದೆ ಮಧ್ಯ ಕಾಲೀನ ಐರೋಪ್ಯರಿಗೆ ಜೀರಿಗೆಯು ಪ್ರೀತಿ ಮತ್ತು ನಿಷ್ಠೆಯ ಸಂಕೇತವಾಗಿತ್ತು. ಅರಬ್‌ ಹಾಗೂ ಯಹೂದಿ ಸಂಸ್ಕೃತಿಗಳಂತೂ ಜೀರಿಗೆಯ ಪರಿಮಳದಿಂದ ಮುಳುಗೆದ್ದಿವೆ. ಜೀರಿಗೆಯ ಪುಡಿಗೆ ಹೇಗೆ ಅನೇಕ ಬಗೆಯ ಸಾಂಬಾರು ಹಾಗೂ ಇತರೇ ಸಸ್ಯ ಜನ್ಯ ವಸ್ತುಗಳ ಜೊತೆಗೆ ಬೆರೆಯುವ ಗುಣವಿದೆಯೋ, ಹಾಗೆಯೇ ವಿವಿಧ ಸಂಸ್ಕೃತಿಗಳ ಪಾಕಶಾಲೆಯಲ್ಲೂ ಸ್ಥಳ ಪಡೆದ ಹೆಚ್ಚುಗಾರಿಕೆಯು ಜೀರಿಗೆಗೆ ಇದೆ. ಆದ್ದರಿಂದಲೇ ಅದು ಜಾಗತೀಕರಣಗೊಂಡ ಮಸಾಲೆ. ಎಲ್ಲರ ನಾಲಿಗೆಯಲ್ಲೂ ರುಚಿಯ ಪರಿಮಳವನ್ನು ಶಾಶ್ವತಗೊಳಿಸಿದ ಸಸ್ಯ.

       ಇಷ್ಟೆಲ್ಲಾ ಕಾಲ (Time) ಮತ್ತು ದೇಶ (Space)ವ್ಯಾಪಿಯಾದ ಜೀರಿಗೆಯನ್ನು ಕೇವಲ ಪರಿಮಳದ ಮಸಾಲೆ ಎನ್ನುವುದೋ ಅಥವಾ ಔಷಧಗಳ ಹೊತ್ತಿರುವ ಸಂಜೀವಿನಿ ಎನ್ನುವುದೋ ಎಂಬಂತಹಾ ಸಂಶೋಧನಾ ಪರಾಮರ್ಶಕ ಲೇಖನಗಳೂ, ಚರ್ಚೆಗಳೂ ಜೀರಿಗೆಯನ್ನು ಸುತ್ತುವರೆದಿವೆ. ಔಷಧೀಯ ಪರಂಪರೆಗಳೂ ಸಹಾ ಸಹಸ್ರಾರು ವರ್ಷಗಳ ಇತಿಹಾಸವನ್ನು ಒಳಗೊಂಡಿವೆ. ಸಾಲದಕ್ಕೆ ಸಮಕಾಲೀನ ಚರ್ಚೆಗಳಲ್ಲೂ ಕಷಾಯವಾಗಿ, ಟಾನಿಕ್ಕುಗಳಾಗಿ, ಮಾತ್ರೆಗಳಾಗಿ ಮಾನವ ಕುಲವನ್ನು ಅದೇ ಪ್ರೀತಿ ಮತ್ತು ನಿಷ್ಠೆಯಿಂದ ಸಲಹುತ್ತಿವೆ.  

       ಜೀರಿಗೆಯಲ್ಲಿ ಸುಮಾರು ಪ್ರತಿಶತ 2-4.5 ((ಸರಾಸರಿ 3%) ರಷ್ಟು ಎಣ್ಣೆಯ ಅಂಶವಿದೆ. ಅದರ ಜೊತೆಗೆ ಟ್ಯಾನಿನ್, ಒಲಿಯೊರೆಸಿನ್‌ಗಳಂತಹಾ ರಾಸಾಯನಿಕಗಳೂ ಇವೆ. ಒಂದಷ್ಟು ಅಂಟು, ಪ್ರೊಟೀನ್‌ ಅನ್ನೂ ಹೊಂದಿದೆ. ಜೀರಿಗೆಯಲ್ಲಿರುವ “ಜೀರಿಗೆಯ ವಾಸನೆ” ಎಂದೇ ಕರೆಯುವ ವಿಶೇಷವಾದ ಪರಿಮಳಕ್ಕೆ ಕಾರಣ ಅದರಲ್ಲಿರುವ ತಿಳಿ ಹಳದಿಯಿಂದ ಕಂದು ಬಣ್ಣವಿರುವ ತೈಲ. ಇದು ಒಂದು ಅಲ್ಡಿಹೈಡ್‌. ಕ್ಯುಮಿನ್‌ ಅಲ್ಡಿಹೈಡ್‌- ಕ್ಯುಮಿನಾಲ್‌ (Cumin Aldehyde or Cuminol). ಈ ತೈಲವು ಅನೇಕ ದೇಹಕ್ಕೆ ಅಗತ್ಯವಾದ ವಿವಿಧ ರಾಸಾಯನಿಕಗಳನ್ನು ಹೊಂದಿದೆ. ಇವುಗಳನ್ನು ಅವುಗಳ ವೈವಿಧ್ಯಮಯ ಔಷಧ ಗುಣಗಳಿಗೆ ಪರೀಕ್ಷಿಸುವ ಹಲವಾರು ಅಧ್ಯಯನಗಳು ನಡೆದಿವೆ. ಅವುಗಳ ಪರಾಮರ್ಶನದ ಅಧ್ಯಯನದಿಂದ ಒದಗಿದ ಲಾಭಗಳ ವಿವರಗಳು ಹೀಗಿವೆ.    

       ಮೂಲತಃ ಜೀರಿಗೆಯ ಔಷಧಗಳ ಲಾಭಗಳು ಪಚನಕ್ರಿಯೆ, ರೋಗ-ಪ್ರತಿರೋದ (ಇಮ್ಯುನ್‌) ವಿವರಗಳು ಹಾಗೂ ರಕ್ತ ಪರಿಚಲನೆಯ ಅಧ್ಯಯನಗಳಾಗಿವೆ. ಇವುಗಳನ್ನು ಆಧುನಿಕ ವಿವರಗಳಿಂದ ಹೀಗೆಯೇ ಎಂದು ವಿವರಿಸಲು ಅಸಾಧ್ಯವಾದರೂ ಲಾಭಗಳ ಬಗೆಗೆ ಅನುಭವದ ದಾಖಲೆಗಳನ್ನು ಒದಗಿಸಿವೆ.

       ಜೀರಿಗೆಯಲ್ಲಿ ಅಂಟಿ-ಆಕ್ಸಿಡೆಂಟುಗಳು, ಕ್ಯಾನ್ಸರ್‌ ಪ್ರತಿ ರಕ್ಷಣಾ ರಾಸಾಯನಿಕಗಳು, ಅತಿ ಭೇದಿಯನ್ನು ತಡೆಯುವಂತಹಾ ವಸ್ತುಗಳು ಜೊತೆಗೆ ರಕ್ತದ ಸಕ್ಕರೆಯ ಅಂಶವನ್ನು ಕಾಪಾಡುವಂತಹಾ ಅಧ್ಯಯನಗಳ ವಿವರಣೆಗಳು ಸಿಗುತ್ತವೆ. ಜೀರಿಗೆಗೆ ಉರಿಯೂತದಿಂದ (Anti-inflammatory) ರಕ್ಷಿಸುವ ಗುಣವೂ ಇದೆ. ಕೊಲೆಸ್ಟರಾಲ್‌ ಅನ್ನು ಕಡಿಮೆಗೊಳಿಸುವ ಶಕ್ತಿಯನ್ನು ಹಾಗೂ ದೇಹ ತೂಕವನ್ನು ನಿಯಂತ್ರಣದಲ್ಲಿರುವ ಶಕ್ತಿಯನ್ನೂ ಜೀರಿಗೆಯು ಹೊಂದಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಕೇಂದ್ರ ನರಮಂಡಲ ವ್ಯೂಹವನ್ನು (Central Nervous System) ಉತ್ತೇಜಿಸುವ ಮೂಲಕ ದೇಹಕ್ಕೆ ಕೆಲವು ಅನುಕೂಲಗಳನ್ನು ನೀಡುತ್ತದೆ. ಇದರಿಂದಾಗಿಯೇ ಪಾರ್ಕಿನ್‌ಸನ್‌ ಕಾಯಿಲೆಯ ಚಿಕಿತ್ಸೆಯಲ್ಲಿ ಇದನ್ನು ಬಳಸಲಾಗುತ್ತದೆ. ಒಟ್ಟಾರೆಯಾಗಿ ಸಾಮಾನ್ಯ ಪಚನಕ್ರಿಯೆಯಿಂದ ಮನಸ್ಸಿನ ಚಿಕೆತ್ಸೆಯಲ್ಲಿ ನೆನಪನ್ನು ವೃದ್ಧಿಸುವವರೆಗೂ ಜೀರಿಗೆಯು ಉಪಕಾರಿಯಾಗಿದೆ.

       ಅನೇಕ ವಿಧಗಳಿಂದ ಜೀರಿಗೆಯು ತುಂಬಾ ಸೇಫ್‌ ಯಾವುದೇ ರೀತಿಯ ವಿಷಕಾರಿ ಗುಣಗಳನ್ನೇನೂ ಹೊಂದಿಲ್ಲ. ಹಾಗಾಗಿ ಬಳಸುವಾಗ ತುಸು ಹೆಚ್ಚಾದರೂ ಅಂತಹಾ ಹೇಳಿಕೊಳ್ಳುವಂತಹಾ ಸಮಸ್ಯೆಗಳು ಉದ್ಭವಿಸುವುದಿಲ್ಲ. ಆದರೂ ಗಂಡಸರಲ್ಲಿ ಹೆಚ್ಚು ಬಳಕೆಯು ಸಲ್ಲ. ಗಂಡಸುತನದ ಹಾರ್ಮೋನು ಟೆಸ್ಟೊಸ್ಟೆರಾನ್‌ ಅನ್ನು ಮಿತಿಗೊಳಿಸಿ ಅವರಲ್ಲಿ ಫಲವಂತಿಕೆಯನ್ನು ಕಡಿಮೆಗೊಳಿಸಬಲ್ಲದು. ಹಾಗೆಯೇ ಹೆಂಗಸರಲ್ಲಿ ಅವರ ಮಾಸಿಕ ಋತು ಚಕ್ರದ ಕಿಬ್ಬೊಟ್ಟೆಯ ಹಿಂಡುವಿಕೆಯನ್ನು ಕಡಿಮೆಗೊಳಿಸುತ್ತದೆ, ಆದರೂ ಗರ್ಭವತಿಯರಲ್ಲಿ ಹೆಚ್ಚಿನ ಬಳಕೆಯು ಕೂಡದು. ಗರ್ಭಿಣಿಯರಲ್ಲಿ ಗರ್ಭಪಾತ ಅಥವಾ ಅಕಾಲ ಪ್ರಸವವನ್ನೂ ಉಂಟು ಮಾಡುವಂತಹಾ ಸಾಧ್ಯತೆಗಳಿವೆ.

       ಜೀರಿಗೆಯನ್ನು ನೇರ ಔಷಧಕ್ಕಿಂತಲೂ ವಿವಿಧ ತಿನಿಸುಗಳಲ್ಲಿ ಬಳಸುವುದರಿಂದ ನಿರಂತರವಾದ ಲಾಭಗಳನ್ನು ಪಡೆಯಬಹುದು. ಹುರಿದು, ಕರಿದು ಬೇಯಿಸಿ ಮಾಡುವಂತಹಾ ಅನೇಕ ಖಾದ್ಯಗಳಲ್ಲಿ ಜೀರಿಗೆಯು ಸಹಸ್ರಾರು ವರ್ಷಗಳಿಂದ ಸ್ಥಾನವನ್ನು ಪಡೆದು ಅಡುಗೆ ಮನೆಯ ಸಂಗಾತಿಯಾಗಿದೆ. ಬಾಣಂತಿಯರಿಗೆ, ಋತುಸ್ರಾವ ಆರಂಭದ ಮೊದಲ ವರ್ಷಗಳಲ್ಲಿ, ಅವಶ್ಯವಿದ್ದರೆ ನಂತರವೂ ಜೀರಿಗೆಯು ಮಹತ್ವದ ಬಳಕೆಯನ್ನು ನಿಭಾಯಿಸಿದೆ. ಹೊಟೆಲ್ಲುಗಳ ಮೆನುವಿನಲ್ಲಿ ಕಾಯಮ್ಮಾದ ಜೀರಾ ರೈಸ್‌, ಆರ್ಡರ್‌ ಮಾಡುವುದೆಲ್ಲಾ ಮುಗಿದ ಮೇಲೂ ಮತ್ತೆ ಮತ್ತೆ ಕಣ್ಣು ಹಾಯಿಸಿ ಹೇಳುವ ಕಡೆಯ ಮೊಸರನ್ನದ ಜೊತೆಗೆ ನೆನಪಾಗದೆ ಇರುವುದಿಲ್ಲ. ಅನೇಕರು ಮೊಸರನ್ನದ ಬದಲು ಜೀರಾ ರೈಸ್ ‌ನಿಂದಲೇ ಊಟ ಮುಗಿಸುವುದುಂಟು. 

ನಮಸ್ಕಾರ

ಡಾ. ಟಿ.ಎಸ್‌. ಚನ್ನೇಶ್

This Post Has One Comment

  1. ShashikalaRavishankar

    ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿ ಜನಜೀವನದಲ್ಲಿ ಬೆರೆತು ಹೋಗಿರುವ ಜೀರಿಗೆಯ ಬಗ್ಗೆ ಅಧ್ಯಯನ ಪೂರ್ಣ ಲೇಖನ ತಮ್ಮದು..
    ಅದೆಷ್ಟೋ ವಿಷಯಗಳನ್ನು ಕ್ರೋಢೀಕರಿಸಿ ಅಪರೂಪದ ವಿಷಯಗಳ ಬಗ್ಗೆ ಪ್ರಸ್ತುತ ಪಡಿಸುವ ನ್ಯಾಮತಿಯವರು ಶ್ಲಾಘನೀಯರು… ಧನ್ಯವಾದಗಳು ಸರ್.

Leave a Reply