You are currently viewing ಚಳಿಯ ಒಣಹವೆಯಲ್ಲಿ ಹಸಿರು ತಂಪನ್ನೀವ ಅವರೆ: Lablab purpureus

ಚಳಿಯ ಒಣಹವೆಯಲ್ಲಿ ಹಸಿರು ತಂಪನ್ನೀವ ಅವರೆ: Lablab purpureus

ಚಳಿಗಾಲದಲ್ಲಿ ವಾತಾವರಣದ ಒಣ ಹವೆಗೆ ಕೈಕಾಲುಗಳು, ಮೈ-ಮನಗಳು ನಲುಗುವುದು, ಸಹಜ. ತಂಪಾದ ಚಳಿಯಲ್ಲಿ ಹವೆಯೂ ಒಣಗಿ ಬಿಸಿ, ಬಿಸಿಯಾಗಿಯೂ ಪೌಷ್ಟಿಕವಾಗಿಯೂ ಇರುವಂತಹಾ ತಿನಿಸುಗಳು ಆರೋಗ್ಯದ ಹಿತಕ್ಕೆ ಅವಶ್ಯಕ. ಇವುಗಳನ್ನು ಒಣ ಕುರುಕಲು ತಿಂಡಿಗಳಲ್ಲಿ ಹುಡುಕದೆ ದಿನದ ಊಟದ ಭಾಗವಾಗಿಸುವುದು ಇನ್ನೂ ಹಿತ. ಮಾನವ ಕುಲವು ಇಂತಹ ಪರಿಸ್ಥಿತಿಯನ್ನು ನಿಭಾಯಸಲೆಂದೇ ಒಣವಾತಾವರಣದಲ್ಲೂ ಹಸಿರನ್ನು ತುಂಬಿರುವ ಅವರೆಯನ್ನು ಆಯ್ದುಕೊಂಡಿದೆ. ಅವರೆ ಬಳ್ಳಿಯು ನೆಲದ ನೀರು ಕಡಿಮೆಯಾದರೂ ತಡೆದುಕೊಂಡು ಮೈಯಲ್ಲಿ ತಂಪನ್ನಿಟ್ಟುಕೊಂಡು ಹಸಿರಾಗಿ ಕಂಗೊಳಿಸುತ್ತದೆ. ಇಂತಹಾ ವಾತಾವರಣವನ್ನು ಸಹಿಸಿಕೊಂಡು ಸಾಕಷ್ಟು ಕಾಲ ಹಚ್ಚನೆಯ ಮೈದುಂಬಿಕೊಂಡು, ಮಾನವಕುಲಕ್ಕೂ, ದನಕರುಗಳಿಗೂ ಪೌಷ್ಟಿಕವಾದ ಆಹಾರವನ್ನು ಒದಗಿಸಿದೆ.

       ರಾಜ್ಯದಲ್ಲಿ ಪರಿಸರದ ಭೌಗೋಳಿಕ ಹರಹು ಉತ್ತರಕ್ಕೆ ಕೃಷ್ಣೆಯ ಬಯಲನ್ನೂ ದಕ್ಷಿಣಕ್ಕೆ ಕಾವೇರಿಯ ಬಯಲನ್ನೂ ಅವಲಂಬಿಸಿದೆ. ದಕ್ಷಿಣದ ಕಾವೇರಿಯ ಹರಹಿನ ನೆಲವೆಲ್ಲಾ ಅವರೆಯ ತಂಪಿನಿಂದ ಜನರ ಚಳಿಗಾಲದ ಪೌಷ್ಟಿಕತೆಯ ಜವಾಬ್ದಾರಿಯನ್ನು ತುಂಬು ಪ್ರೀತಿಯಿಂದ ಅಪ್ಪಿಕೊಂಡಿದೆ. ಕೃಷ್ಣೆಯನ್ನೇ ಸೇರುವ ತುಂಗಭದ್ರಾದ ಬಯಲು ಮಾತ್ರ ಅವರೆಯ ಬಗೆಗೊಂದು ಮಿಶ್ರ ಸನ್ನಿವೇಶವನ್ನು ಸೃಜಿಸಿಕೊಂಡಿದೆ. ಆದರೆ ಅಚ್ಚರಿ ಎಂಬಂತೆ ತುಂಗಭದ್ರೆಯ ದಡದಲ್ಲಿಯೇ ಮೊಟ್ಟ ಮೊದಲ ಅವರೆಯ ಕೃಷಿಯು ನಡೆದಿರುವ ಬಗೆಗೆ ಉತ್ಖನನದ ಕುರುಹುಗಳು ಸಿಕ್ಕಿವೆ. ಅವರೆಯ ವಿಕಾಸದ ತವರು ಭಾರತ ಎಂದೂ ಆಫ್ರಿಕಾ ಎಂದೂ ಇರುವ ವಾದಗಳ ನಡೆವೆಯೂ, ವಿಶ್ವ ಆಹಾರ ಸಂಸ್ಥೆಯ ದಾಖಲೆಯೂ ಭಾರತವೇ ಇರಬಹುದೆಂಬ ವಿಶ್ವಾಸವನ್ನು ವ್ಯಕ್ತ ಪಡಿಸಿದೆ. ಆದರೂ ಹಲವಾರು ಸಂಶೋಧಕರು ಆಫ್ರಿಕಾ ಮೂಲ ತವರು ಎನ್ನುವ ಅಭಿಪ್ರಾಯವುಳ್ಳವರಾಗಿದ್ದಾರೆ.

       ಅವರೆಯ ತವರಿನ ಸಂಗತಿಯನ್ನು ಬದಿಗಿಟ್ಟೂ ಅಥವಾ ಅದು ನಮ್ಮದೇ ಎಂದು ಭಾವಿಸುತ್ತಲೂ ತೀರಾ ಅಚ್ಚರಿಯ ವಿಚಾರವನ್ನು ನೋಡೋಣ. ‌1965ರಲ್ಲಿ ತುಂಗಭದ್ರಾ ತೀರದ “ಹಳ್ಳೂರು” ಎಂಬ ಗ್ರಾಮದಲ್ಲಿ ನಡೆಸಲಾದ ಉತ್ಖನನದಲ್ಲಿ ಲೋಹಯುಗದ ಆದಿವಾಸಿಗಳ ಕೃಷಿಯ ಬಗೆಗೂ ಮಾಹಿತಿಗಳು ಸಿಕ್ಕಿವೆ. ಇದರಲ್ಲಿ ಅವರೆಯ ಕೃಷಿಯ ಅತ್ಯಂತ ಹಳೆಯ ದಾಖಲೆಯು ದೊರತಿದೆ. ನನ್ನೂರು ಶಿವಮೊಗ್ಗಾ ಸಮೀಪದ ನ್ಯಾಮತಿಯಿಂದ ತುಂಗಭದ್ರೆಯು ಕೇವಲ 12 ಕಿ.ಮೀ ದೂರದಲ್ಲಿ ಹರಿಯುತ್ತಾಳೆ. “ಹಳ್ಳೂರು” ನನ್ನೂರಿನಿಂದ ಕೇವಲ 27 ಕಿ.ಮೀ. ಹಳ್ಳೂರು ಹಾವೇರಿ ಜಿಲ್ಲೆಯ ಗಡಿಪ್ರದೇಶದ ಹಳ್ಳಿ. ನನ್ನನ್ನೂ ಸೇರಿಸಿ ನನ್ನೂರಿನ  ಅನೇಕರಿಗೆ ಅವರೆಯೂ ಕರ್ನಾಟಕದಲ್ಲೇ ಮೊದಲು ಕೃಷಿಯಾಗಿತ್ತೆನ್ನುವ ಈ ಸಂಗತಿಯು ಖುಷಿ ಕೊಡಬಹುದು. ಅವರೆಯನ್ನು ನಮ್ಮದೆಂದು ಕೊಂಡಾಡುವ ದಕ್ಷಿಣ ಕರ್ನಾಟಕದ ಎಲ್ಲರಿಗೂ, ನಮ್ಮದಾಗಿರುವ ಜೊತೆಗೆ ನಮ್ಮಲ್ಲಿಯೇ ಮೊದಲ ಕೃಷಿಗೆ ಒಳಗಾದ ಅತ್ಯಂತ ಮಹತ್ವದ ಬೇಳೆ-ಕಾಳು. ಆ ದೃಷ್ಟಿಯಲ್ಲಿ ಅವರೆಯು ಕರ್ನಾಟಕದಲ್ಲೇ ಮೊದಲ ಕೃಷಿಗೆ ಒಳಗಾಗಿದೆ ಎನ್ನುವ ವಿಚಾರ ತುಂಬಾ ಮಹತ್ತರವಾದುದು, ಏಕೆಂದರೆ ಇದರ ತವರೂ ಭಾರತವೇ ಎನ್ನುವುದಾದರೆ ಅದನ್ನು ಗಮನಿಸಿ ಬೆಳೆಸಿದ ನೆಲ ನಮ್ಮದೆನ್ನುವ ಹೆಮ್ಮೆ.  ಹಳ್ಳೂರಿನ ಬೂದಿ ಗುಡ್ಡದ ಉತ್ಖನನದ ತಿಳಿವಿನಂತೆ ಕ್ರಿ.ಪೂ.2000 ಮತ್ತು 1200ರ ನಡುವಿನ ಕಾಲಾವಧಿಯಲ್ಲಿ ಅಲ್ಲಿ ಮಾನವ ವಾಸ ಇದ್ದಿರಬಹುದಾಗಿದೆ. ಆ ಕಾಲದಲ್ಲಿ ಅವರೆಯು ಅಲ್ಲಿ ಬೆಳೆದಿರುವ ಕುರುಹು ಅವರೆಯ ಬೆಳೆಯನ್ನು ರಾಜ್ಯದ ಮೂಲವಾಸಿಗಳೇ ಆರಂಭಿಸಿ ಪೋಷಿಸಿದ್ದಾರೆ. ಇದರಿಂದಾಗಿ ಇಂದೂ ಕೃಷಿಯಲ್ಲಿ ಒಳಗಾಗಿದೆ.

       ಅವರೆಯನ್ನು ವೈಜ್ಞಾನಿಕವಾಗಿ ಲ್ಯಾಬ್‌ಲ್ಯಾಬ್‌ ಪರ್ಪೂರಿಯಸ್‌ (Lablab purpureus)  ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಈ ಹಿಂದೆ ಇದನ್ನು ಡಾಲಿಕಾಸ್‌ ಲ್ಯಾಬ್‌ಲ್ಯಾಬ್‌ (Dolichos lablab)ಎಂದು ಕರೆಯಲಾಗುತ್ತಿತ್ತು. ಇದೊಂದು ಲೆಗ್ಯೂಮ್‌ ಬಳ್ಳಿ. ಈಗಂತೂ ಅವರೆಯಕಾಯಿಯ ಸೀಸನ್‌! ಮೈಸೂರಿನಿಂದ ಮಂಡ್ಯ ಹಾಯ್ದು, ಹಾಸನದ ಮೂಲಕ ತುಮಕೂರು-ಬೆಂಗಳೂರು ಜಿಲ್ಲೆಗಳ ದಾಟಿ ಕೋಲಾರದಾಚೆಗೂ ಅವರೆಯ ಸೊಗಡು ಭಿನ್ನ ಭಿನ್ನವಾಗಿ ಮೂಗಿಗೆ ಅಡರುತ್ತದೆ. ಎಲ್ಲರ ಬಾಯಲ್ಲೂ ಮೊದಲಿದ್ದ ಸೊಗಡು ಈಗಿಲ್ಲ ಎಂತಲೋ, ತಮ್ಮ ತಮ್ಮ ಸೀಮೆಯ ಸೊಗಡಿನ ವರ್ಣನೆಯನ್ನೋ ಅಥವಾ ಮೈಸೂರಿನ ಕಾಯಿಯ ತೀವ್ರ ಪರಿಮಳವನ್ನೋ ನೆನೆಯುವುದನ್ನು ನವೆಂಬರ್‌ ತಿಂಗಳಿಂದ ಜನವರಿಯತನಕ ಕಾಣಬಹುದು. ಇತ್ತೀಚೆಗೆ ಅವರೆಯ ಮೇಳಗಳೂ ಬೆಂಗಳೂರು-ಮೈಸೂರುಗಳಲ್ಲಿ ನಡೆಯುವುದು ಸಾಮಾನ್ಯ. ಇಲ್ಲಿನವರಿಗೆಲ್ಲಾ ಅವರೆಕಾಯಿಯ ಕಾಲದಲ್ಲಿ ಅದನ್ನು ಬಗೆ ಬಗೆಯಾಗಿ ತಿನ್ನುವುದೇ ಮಜವಾದರೆ, ಮತ್ತೆ ಕೆಲವೆಡೆ ಅವರೆಯನ್ನು ದನಕರುಗಳಿಗೆ ಬೆಳಸುವುದೇ ತಿಳಿದ ಸಂಗತಿ. ಮಲೆನಾಡಿನ ಗಡಿಗಳಲ್ಲಿ ಅವರೆಯು ದನಕರುಗಳ ಮೇವಾಗಿ ಪರಿಚಿತ.

ಮೊದಲಿದ್ದ ಸೊಗಡು ಈಗಿಲ್ಲವೇ? ಯಾಕಿಲ್ಲ!

ಅವರೆಯನ್ನು ಹಲವು ಕಡೆಗಳಲ್ಲಿ ಜನ ತಿನ್ನಲಾಗದ ಕೇವಲ ದನಕರುಗಳ ಮೇವು ಎಂದೇ ಭಾವಿಸಲಾಗಿತ್ತು. ಈಗಲೂ ಸಹಾ ತುಂಗಭದ್ರಾ ನದಿಯ ಹರಹಿನ ಹೊನ್ನಾಳಿ, ಚನ್ನಗಿರಿ, ಶಿಕಾರಿಪುರ, ರಾಣಿಬೆನ್ನೂರು, ಸೊರಬ ಮುಂತಾದೆಡೆ ಅವರೆಯ ಮೇವು ಅತ್ಯಂತ ಜನಪ್ರಿಯ. ಅವರೆಯನ್ನು ಜೋಳದ ಜೊತೆ ಬೆಳೆದು, ಅದರಿಂದ ಬಂದ ಅಷ್ಟಿಟ್ಟು ಕಾಯಿ-ಕಾಳನ್ನು ಕಿತ್ತು ಎಳೆಯದಾದ ಕಾಯಿ ಇದ್ದಲ್ಲಿ ಜೋಳದ ಜೊತೆಗೆ ಕೊಯ್ದು ದನಕರುಗಳಿಗೆ ಮೇಯಿಸುತ್ತಾರೆ. ಇದು ಬಳ್ಳಿಯಾದ್ದರಿಂದ ಜೋಳಕ್ಕೆ ಹಬ್ಬಿಕೊಳ್ಳುತ್ತದೆ. ಜೋಳದ ತೆನೆ ಕೊಯ್ದ ಮೇಲೂ ಅವರೆ ತನ್ನ ಬೆಳವಣಿಗೆಯನ್ನು ಮುಂದುವರೆಸುವುದರಿಂದ ಇದು ಮೇವಿನ ಪೂರೈಕೆಗೆ ಸಹಕಾರಿ. ಇದೇ ಬಗೆಯ ಕೃಷಿಯಿಂದ ಅಥವಾ ಇನ್ನೂ ಮೂಲದಲ್ಲಿ ವನ್ಯರೂಪದಲ್ಲಿ ಹೆಚ್ಚೂ ಕಡಿಮೆ ಏಳೆಂಟು ತಿಂಗಳು ಬೆಳೆಯುತ್ತಲೇ ಇರುವ ಅವರೆಯನ್ನು ಕೇವಲ ಮೇವಿಗೆ ತರುತ್ತಿರಬಹುದು. (ಈ ಮೇವಿನ ಹಿತಕ್ಕೆ ಸಾಕ್ಷಿಯಾದ ಅಂತರರಾಷ್ಟ್ರೀಯ ಖ್ಯಾತವಾದ ತಳಿಯೊಂದರ ಕುರಿತು ಮುಂದೆ ನೋಡೋಣ). ಹೀಗೆ ಮೇವು ಪೂರೈಕೆಯ ಹಿತದಲ್ಲಿ ಸಿಕ್ಕ ಬೆಳೆ ಅವರೆ. ಆದಿಯಲ್ಲಿ ಅದರ ಸೊಗಡು ಹೆಚ್ಚಿದ್ದುದು ಅಂತಹಾ ತಳಿಗಳಲ್ಲಿ. ಆದ್ದರಿಂದಲೇ ನನಗೂ ಅನುಭವಕ್ಕೆ ಬಂದ ಹಾಗೆ ಅವರೆ ಮೇವು ತಿಂದ ದನಕರುಗಳ ಹಾಲುಗಳಲ್ಲಿ ಅವರೆಯ ವಾಸನೆಯು ಇರುತ್ತಿದ್ದ ಬಗ್ಗೆ ನಮ್ಮೂರ ಕಡೆ ಮಾತಾಡುತ್ತಿದ್ದರು. ಈಗ ಸಮಸ್ಯೆ ಏನು? ಇದಕ್ಕೂ ಸೊಗಡು ಕುರಿತ ದೃಷ್ಠಾಂತಗಳಿಗೂ ಸಂಬಂಧ ಏನು ಮುಂದೆ ನೋಡೋಣ.

       ನಿಜ, ಅನೇಕರು ಮಾತಾಡುವ ಹಾಗೆ ಮೊದಲಿದ್ದ ಸೊಗಡು ಈಗಿಲ್ಲ! ಬರೀ ಸೊಗಡನ್ನೇ ನಂಬಿಕೊಂಡಿದ್ದರೆ ಇಷ್ಟೊಂದು ಜನಕ್ಕೆ ಕಾಯಿ-ಕಾಳುಗಳೇ ಸಿಗುತ್ತಿರಲಿಲ್ಲ. ನಿಜಕ್ಕೂ ಸೊಗಡು ಎಂದರೇನು? ಅವರೆಕಾಯಿಗಳ ಎಣ್ಣೆಯಂತಹಾ ಮೇಲ್ಮೈ!  ಜಿಡ್ಡಿನಿಂದ ಬರುವ ವಿಶೇಷವಾದ ಪರಿಮಳ! ಸುಲಿಯುವಾಗ ಅದನ್ನು ಆಗಾಗ್ಗೆ ಹೆಚ್ಚೂ ಕಡಿಮೆ ಒರೆಸಿಕೊಳ್ಳುತ್ತಲೇ ಕಾಳುಗಳನ್ನು ಒತ್ತಟ್ಟಿಗಿರಿಸುವ ಬಗ್ಗೆ ಅನೇಕರಿಗೆ ನೆನಪಿರಬಹುದು. ಆ ಜಿಡ್ಡಿನ ಅಂಶ ಮೈ-ಕೈಗೆ ಅಂಟಿಕೊಂಡರೆ ಅದನ್ನು ಬಹುಶಃ ಯಾರೂ ಖುಷಿ ಪಟ್ಟಿರಲಾರರು. ದಟ್ಟ ತೈಲವೇನಾದರೂ ಅಂಟಿಕೊಂಡರೆ ಒಂದು ಬಗೆಯ ಕೆರೆತ-ನೆವೆಯೂ ಬಂದ ಹಾಗನ್ನಿಸಿಯೂ ಇರಬಹುದು! ಆದರೆ ಅದರ ವಿಚಿತ್ರ ಪರಿಮಳ ಮಾತ್ರ ಅವರೆ ಕಾಯಿ ಸುಲಿದವರಿಂದ ಇಡೀ ದಿನ ಹೊಮ್ಮುತ್ತಿತ್ತು. ಇದು ಬರೀ ಸುಲಿಯುವಾಗ ಮಾತ್ರವಲ್ಲ, ಅವರೆಯ ಹೊಲದಲ್ಲಿ ಅಡ್ಡಾಡುವಾಗಲೂ ಬರುತ್ತದೆ. ಇಂತಹಾ ಹೆಚ್ಚೂ ಕಡಿಮೆ ವನ್ಯ ತಳಿಗಳು ಅಥವಾ ಆಯಾ ಪ್ರಾದೇಶಿಕವಾದ ಲೋಕಲ್‌ ತಳಿಗಳು ಒಂದೊಂದು ಪ್ರದೇಶದಲ್ಲಿ ಒಂದೊಂದು ಸಾಂದ್ರತೆಯ ಪರಿಮಳವನ್ನು ಕೊಡುತ್ತಿದ್ದುದು ನಿಜ. ಆದರೆ ಆದದ್ದೇನು? ಏಕೆ ಹೀಗಾಯಿತು. ಮುಂದೆ ನೋಡೋಣ  

       ಸಾಮಾನ್ಯವಾಗಿ ಲೋಕಲ್‌ ತಳಿಗಳು ಮತ್ತು ವನ್ಯ ತಳಿಗಳು ಬೆಳಕಿಗೆ ಹೆಚ್ಚು ಸೂಕ್ಷ್ಮತೆಯನ್ನು ಹೊಂದಿರುವ ತಳಿಗಳಾಗಿದ್ದವು. ಹಾಗಾಗಿ ಸರಿಯಾದ ಬೆಳಕನ್ನು ಕಾಯುತ್ತಾ ಅಥವಾ ಆ ಬೆಳಕನ್ನು ಅನುಭವಿಸುತ್ತಲೇ ಮಾತ್ರವೇ ಕಾಯಿಕಟ್ಟುವ ಬೆಳವಣಿಗೆಯನ್ನು ಹೊಂದಿದ್ದವಾಗಿದ್ದವು. ಬೆಳಕಿನ ಸೂಕ್ಷ್ಮತೆ ಎಂದರೆ ಗೊತ್ತಾದ ಹಗಲಿನ ಕಾಲಾವಧಿಯಲ್ಲಿ ಬೆಳವಣಿಗೆಯ ಹಂತದಿಂದ ಹೂವನ್ನು ಬಿಡುವ, ಪರಾಗಸ್ಪರ್ಶವಾಗುವ, ಬೀಗಕಟ್ಟುವ ಲೈಂಗಿಕ ಹಂತಕ್ಕೆ ಒಳಗಾಗುವುದು. ಸಹಜವಾಗಿ ಬಹು ಪಾಲು ಸಸ್ಯಗಳು ಈ ಬಗೆಯ ಬೆಳಕಿನ ಒಲವನ್ನು ಹೊಂದಿದ್ದು ಅದು ಆಯಾ ಕಾಲದ ಹಗಲಿನ ಸಮಯವನ್ನು ಆಧರಿಸಿರುತ್ತದೆ. ಉದಾಹರಣೆಗೆ 10 ಗಂಟೆ- 48ನಿಮಿಷದ ಹಗಲು , 11ಗಂಟೆ 23ನಿಮಿಷದ ಹಗಲು ಇತ್ಯಾದಿ. ಇದರಿಂದಾಗಿ ಆಯಾ ಗೊತ್ತಾದ ಹಗಲಿನ ಸಮಯಕ್ಕೆ ಕಾಯುತ್ತಾ ಬೆಳೆಯುತ್ತಲೇ ಇದ್ದು ಕೇವಲ ಹೆಚ್ಚು ಹೆಚ್ಚು ಬೆಳೆಯುತ್ತವೆ. ಇವುಗಳಿಂದ ಮೇವು ಅಧಿಕವಾಗಿ ಸಿಗುತ್ತಾ, ಕಾಯಿಗಳು ಕಡಿಮೆ ಸಿಗುತ್ತವೆ. ಏಕೆಂದರೆ ಸರಿಯಾಗಿ ಹೂಬಿಡುವಂತಹಾ ಸೂಚನೆಯೆ ಸಿಗುವುದಿಲ್ಲವಲ್ಲ. ಹಾಗಾಗಿ ಹಿಂದೆಲ್ಲಾ ಇದು ಮೇವಿನ ಬೆಳೆಯಾಗಿ ಜನಪ್ರಿಯವಾಗಿ ಅದರಲ್ಲೂ ಅಲ್ಪ-ಸ್ವಲ್ಪ ಸಿಗುವ ಕಾಯಿಗಳನ್ನು ಮುಂದಿನ ಸೀಸನ್ನಿನ ಬೀಜಕ್ಕೆಂದು ಮತ್ತು ಹಸಿಯಾಗಿ ಅದರ ಹಿತವಾದ ರುಚಿಗೆ ತಿನ್ನುವ ಅಭ್ಯಾಸಕ್ಕೆಂದು ಬಳಸುವುದು ಸಹಜವಾಗಿತ್ತು. ಈ ಬೆಳಕಿನ ಸೂಕ್ಷ್ಮತೆಯಿಂದಾಗಿ ಇಳುವರಿ ಕಡಿಮೆ, ಮಾತ್ರವಲ್ಲ ಹಗಲಿನ ಕಾಲವನ್ನು ಅವಲಂಬಿಸಿದ್ದವು. ಅದನ್ನೆ ಸರಿಯಾದ ಚಳಿ ಬೇಕು, ಮೋಡ ಇದ್ದರೆ ಆಗೊಲ್ಲ ಇತ್ಯಾದಿ ಮಾತುಗಳು ಅವರೆಯ ವಿಷಯದಲ್ಲಿ ಜನಜನಿತ. ಇದರೆಲ್ಲದರ ಜೊತೆಗೂ ಆ ರುಚಿಯ ಹಿತ ಯಾರಿಗೆ ತಾನೆ ಬೇಡ. ಹಾಗಾಗಲು ಸಾಕಷ್ಟು ಹೂಬಿಟ್ಟು ಕಾಯಾಗಬೇಕು. ಹಾಗಾಗಿ ಬೆಳಕಿನ ಸೂಕ್ಷ್ಮತೆಯನ್ನು ದೂರ ಮಾಡುವಂತಹಾ ತಳಿಗಳ ಹುಡುಕಾಟ ಆರಂಭವಾಗಿದ್ದು ಈಗಾಗಲೆ ಹಳೆಯ ಮಾತು. ಇದು ಕೇವಲ ಭಾರತ ಅಥವಾ ಕರ್ನಾಟಕದಲ್ಲಿ ಮಾತ್ರವಾಗಿಲ್ಲ. ಆಫ್ರಿಕಾದಲ್ಲಿ 60ರ ದಶಕದಲ್ಲೇ ಹೊಸ ತಳಿಗಳು ಬಂದಿದ್ದವು. ಈ ತಳಿಗಳ ಹುಡುಕಾಟ, ಬಿಡುಗಡೆ ಎನ್ನುವುದೂ ಸಹಾ ಮಾನವ ಕುಲದ ಆಶೆಗಳಲ್ಲೇ ಇದೆ. ಕಾರಣ ಮೂಲತಃ ಅವರೆಯಲ್ಲಂತೂ ವೈವಿಧ್ಯತೆಯು ಹೆಚ್ಚು. ಇದೊಂದು ಪರಕೀಯ ಪರಾಗಸ್ಪರ್ಶದಿಂದ ಬೀಜಕಟ್ಟುವ ಸಸ್ಯ. ಹಾಗಾಗಿ ನಿರಂತರವಾಗಿ ವಿಭಿನ್ನ ಸಸ್ಯದ ಪರಾಗವನ್ನು ಪಡೆಯುತ್ತಲೇ ವಿವಿಧತೆಯ ನಿರಂತರತೆಯು ನಡೆದೇ ಇರುತ್ತದೆ. ಇದು ವಿಕಾಸದ ಹಾದಿಯಲ್ಲಿ ಅಂತಹಾ ಸಸ್ಯಗಳು ತಮ್ಮ ಉಳುವಿಗಾಗಿ ನಿರ್ದೇಶಿಸಿಕೊಂಡ ವಿಧಾನವೂ ಕೂಡ. ಹಾಗಾಗಿ ಬೆಳಕಿನ ಸೂಕ್ಷ್ಮತೆಯನ್ನು ಮೀರಿಯೂ ಬೆಳೆಯುವ ಹುಡುಕಾಟ ಅದರ ಇಳುವರಿ ಮತ್ತು ನಿಯಮಿತವಾದ ಹಗಲಿನ ಕಾಲವನ್ನು ಮೀರುವ ಆಶೆ. ಆ ಕಾರಣದಿಂದ ಇದೆಲ್ಲವೂ ಜರುಗಿದೆ. ಅದರ ಜೊತೆಗೆ ಈ ಸಸ್ಯವು ಅತಿಕ್ರಮಣಕಾರಿ ಸಸ್ಯಗಳ ಪಟ್ಟಿಯಲ್ಲಿದೆ. ಅಂದರೆ ತಾನಾಗಿಯೇ ಹಬ್ಬಿ ಎಲ್ಲೆಡೆ ಬೆಳೆಯುವ ಗುಣವುಳ್ಳ ಸಸ್ಯಗಳ ಪಟ್ಟಿ. ಅದರಿಂದಾಗಿ ನಮ್ಮ ಅರಿವಿಗೆ ಬರದಂತಹಾ ಎಲ್ಲೋ ಒಂದೆರಡು ಸಸ್ಯಗಳಿದ್ದಾಗಲೂ, ಅವುಗಳ ಪರಾಗ ಮಾತ್ರ ಹತ್ತಿರದ ಕೃಷಿಗೆ ಒಳಗಾದ ಬೆಳೆಗೆ ತಲುಪಬಹುದಾಗಿದೆ. ಹೀಗೆ ವ್ಯಾಪಿಸಿದ ಪರಾಗವೂ ಇದರ ವಿವಿಧತೆಯನ್ನು ಹೆಚ್ಚಿಸಿದೆ. ನಮಗಷ್ಟೇ ಅಲ್ಲ ಗಿಡಕ್ಕೂ ಹೆಚ್ಚು ಕಾಳು ಕಟ್ಟಬೇಕು ಎನ್ನುವ ಆಂತರಿಕ ಆಶೆ ಇದ್ದೇ ಇರುತ್ತದೆ. ಇಲ್ಲವಾದಲ್ಲಿ ಸಂತತಿ ಉಳಿಯುದಾದರೂ ಹೇಗೆ? ಕೆಲವು ಸಸ್ಯಗಳಿಗೆ ಅದು ಹೆಚ್ಚಿರಬಹುದು, ಕೆಲವಕ್ಕೆ ಕಡಿಮೆ ಇದ್ದಿರಬಹುದು. ಅವರೆಗಂತೂ ಹೆಚ್ಚೇ ಇದೆ. ಅದರಲ್ಲಿ ಅನುಮಾನವಿಲ್ಲ. ಹಾಗಾಗಿಯೇ ಅದು ಹಲವು ನೆಲವನ್ನು ಹಬ್ಬಿದೆ.

       ಇದಲ್ಲದೆ ಅವರೆಯು ನಮ್ಮ ರಾಜ್ಯದಲ್ಲೇ ಅಲ್ಲದೆ ದೇಶಾದ್ಯಂತ ಹಲವು ರಾಜ್ಯಗಳಿಗೆ ಪರಿಚಯವಾಗಿದೆ. ಇದರ ಹಬ್ಬುವ ಮತ್ತು ವಿವಿಧ ವಾತಾವರಣಗಳಿಗೆ ಹೊಂದಿಕೊಳ್ಳುವ ಗುಣವೇ ಇದನ್ನು ಸಾಕಷ್ಟು ಭೌಗೋಳಿಕ ಸನ್ನಿವೇಶಗಳಿಗೆ ಪರಿಚಯಿಸಿದೆ. ಅದರಲ್ಲೂ ಇದರ ಆಹಾರ ಪೌಷ್ಟಿಕತೆಯ ಗುಣ ಸರಳವಾಗಿ ತಿಳಿಯುತ್ತಲೇ ಸಾಗಿದೆ. ಮೇವಾಗಿ, ಕಾಳು-ಬೇಳೆಯಾಗಿ ಜೊತೆಗೆ ನೆಲವನ್ನು ಫಲವತ್ತತೆಯಿಂದ ಕಾಪಾಡುವಂತಹಾ ಸೂಕ್ಷ್ಮಗಳನ್ನು ಬೆಳೆಸುತ್ತ ತಾನೂ ಬೆಳೆದು ಜಗದಲಗಲ ಹಬ್ಬಿದೆ. ಈ ಹಬ್ಬುವ ಗುಣದಲ್ಲಿ ಜಿಡ್ಡಿನ ಪರಿಮಳವನ್ನು ಕಳೆದುಕೊಳ್ಳುತ್ತಾ ಸಾಗಿದೆ. ಹಾಗಾಂತ ರುಚಿಯನ್ನು ಖಂಡಿತಾ ಬಿಟ್ಟುಕೊಟ್ಟಿಲ್ಲ. ಜೊತೆಗೆ ಅದರ ಆಹಾರದ ಗುಣವನ್ನೂ ಸಹಾ. ಸೊಗಡಿಲ್ಲ ಎನ್ನುವುದು ಅದರ ವಾಸನೆ ಅಥವಾ ಪರಿಮಳದ ನೆನಪು ತಿನ್ನುವಾಗ ಬರುವದರ ಕಾಣ್ಕೆ ಅಷ್ಟೆ! ವಾಸನೆಯ ನೆನಪು ಮಾತ್ರವೇ ಎಂಬುದನ್ನು ನಾವೆಲ್ಲರೂ ಅರಿಯಬೇಕು. ಅದಿನ್ನೂ ನಮ್ಮೊಳಗೆ ಉಳಿದುಕೊಂಡಿರುವವರಲ್ಲಿ ಸೊಗಡು ನೆನಪಾಗಿ ಕಾಡುತ್ತದೆ. ಪರಕೀಯ ಪರಾಗಸ್ಪರ್ಶ ಹಾಗೂ ವಿವಿಧ ನೆಲ, ಪರಿಸರಕ್ಕೆ ಹೊಂದಿಕೊಳ್ಳುವ ಗುಣವೂ ವಿವಿಧತೆಯನ್ನು ಹೆಚ್ಚಿಸುತ್ತಲೇ ಸಾಗಿದೆ. ಆದ್ದರಿಂದ ಕಳೆದ ಕೆಲವು ದಶಕಗಳಲ್ಲಿ ಇದರ ವಿವಿಧತೆ ಮತ್ತೂ ಹೆಚ್ಚಿ ನಮ್ಮೊಳಗೊಂದು ಅನುಮಾನವನ್ನು ತಂದಿಟ್ಟಿದೆ.

       ಇಲ್ಲಿನ ಚಿತ್ರಗಳಲ್ಲಿ ಅವರೆಯ ವಿವಿಧತೆಯ ತಿಳಿವು ಮನದಟ್ಟಾಗುತ್ತದೆ. ಬರೀ ಕಾಳುಗಳಲ್ಲ ಕಾಯಿಗಳಲ್ಲೂ ವಿವಿಧತೆಯನ್ನು ಅವರೆಯಲ್ಲಿ ಕಾಣುತ್ತೇವೆ. ಈಗ ತುಸು ಹಿಂದೆ ಆಫ್ರಿಕಾ ತಳಿಯ ಬಗ್ಗೆ ಪ್ರಸ್ತಾಪಿಸಿದ್ದೆ. “ರೋಂಗಾಯ್‌” ಎನ್ನುವ ಕೀನ್ಯಾ ದೇಶದ ತಳಿಯದು. ಕೀನ್ಯಾದ ಅದೇ ಹೆಸರಿನ ಜಿಲ್ಲೆಯ ಕಾರಣದಿಂದ ಕರೆದದ್ದು. ಇದನ್ನು 1962ರಲ್ಲೇ ಆಸ್ಟ್ರೇಲಿಯಾದ ನ್ಯೂ ಸೌತ್‌ ವೇಲ್ಸ್‌ ನಲ್ಲಿ ಬಿಡುಗಡೆ ಮಾಡಲಾಗಿತ್ತು. ಇದರ ಪ್ರಮುಖ ಉದ್ದೇಶ ಇದರ ಮೇವಿನ ಗುಣ. ಹೆಚ್ಚು ಧಾರಾಳವಾಗಿ ಬೆಳೆಯುವ ಕಾರಣದಿಂದ ಇದನ್ನು ಮೇವಿಗಾಗಿ 60ರ ದಶಕದಲ್ಲಿ ಖಂಡಾಂತರವಾಗಿ ಪರಿಚಯಿಸಲಾಗಿತ್ತು.  ಹೀಗೆ ಅವರೆಯ ತಳಿ ಸಂಬಂಧವು ದೇಶ ದೇಶಗಳ ವ್ಯಾಪಿಸಿದೆ. ಇವುಗಳ ಹಲವು ಕಾರಣಗಳಿಂದ ನಮ್ಮಲ್ಲಿಗೂ ಬಂದು ನಮ್ಮ ದೇಸಿ ತಳಿಗಳೊಳಗೆ ಬೆರೆಯುವ ಸಾಹಸವನ್ನು ತಮ್ಮದೇ ವಿಶ್ವಾಸವಾದ ಪರಕೀಯ ಪರಾಗಸ್ಪರ್ಶದಲ್ಲಿ ಮಿಳಿತಗೊಳಿಸಿಕೊಂಡಿವೆ.

        ಅವರೆಯ ಇಡೀ ಬಳ್ಳಿ ಸಾಕಷ್ಟು ಆಹಾರಾಂಶಗಳನ್ನು ಒಳಗೊಂಡಿದೆ. ಇದರಿಂದಾಗಿಯೇ ಇದು ಜಗತ್ತಿನಾದ್ಯಂತ ಮೇವಾಗಿಯೂ ಪರಿಚಿತ. ಅದರಲ್ಲೂ ಕಾಳುಗಳಲ್ಲಿ ಮಾತ್ರವೇ ಕೆಲವು ಪ್ರತಿ ಆಹಾರಾಂಶವನ್ನು ಹೊಂದಿದ್ದು, ಕಾಳುಗಳಲ್ಲಿರುವ ಈ ಗುಣವನ್ನು ಕಡಿಮೆ ಮಾಡಲು, ಬೇಯಿಸುವ ಅಥವಾ ಬೀಜದ ಕವಚವನ್ನು ತೆಗೆದು ಬಳಸುವ (ಹಿಸುಕಿದ ಅವರೆ ಬೇಳೆ) ವಿಧಾನವನ್ನು ಕಂಡುಕೊಳ್ಳಲಾಗಿದೆ.  ಕಾಳುಗಳೂ ಸಹಾ ಸಾಕಷ್ಟು ಪ್ರೊಟೀನ್‌ ಹೊಂದಿದ್ದು ದಕ್ಷಿಣ ಕರ್ನಾಟಕದವರ ಪ್ರೊಟೀನ್‌ ಅಗತ್ಯವನ್ನು ಚಳಿಗಾಲ ಅವರೆಯ ಬಳಕೆಯಿಂದ ಪೂರೈಸುತ್ತದೆ. ಇತರೇ ಬೇಳೆಕಾಳುಗಳಿಗೆ ಹೋಲಿಸಿದರೆ ಅವರೆಯ ರುಚಿ ವಿಭಿನ್ನ ಹಾಗೂ ಗಡುಸು. ಇದನ್ನು ಹದವಾಗಿ ತಯಾರು ಮಾಡುವ ವಿಧಾನವನ್ನು ಮಾತ್ರ ಮಾನವ ಕುಲವು ಅನೇಕ ಸಂಸ್ಕೃತಿಗಳಲ್ಲಿ ವಿಕಸಿಸಿದೆ. ರುಚಿಯಲ್ಲಿ ವಿಭಿನ್ನ ಗಡುಸುತನವೇ ಅದರ ಪ್ರತಿ-ಆಹಾರಾಂಶಗುಣ.

       ಸಸ್ಯಭಾಗವಾದ ಎಲೆ, ಕಾಂಡ, ಕುಡಿಗಳಲ್ಲಿ ಯಾವುದೇ ಪ್ರತಿ-ಆಹಾರಾಂಶವನ್ನು ಹೊಂದಿಲ್ಲ. ಸಸ್ಯ ಭಾಗಗಳಲ್ಲಿ ಪ್ರತಿಶತ 15-22ರಷ್ಟು ಕಚ್ಚಾ ಪ್ರೊಟೀನನ್ನು ಹೊಂದಿದೆ. ಎಲೆಗಳಲ್ಲಿ ಪ್ರತಿಶತ ೩೫ರ ವರೆಗೂ ಇರುವುದುಂಟು. ಇದರಿಂದಾಗಿ ಜಗತ್ತಿನಾದ್ಯಂತ ಮೇವಾಗಿ ಹೆಚ್ಚು ಪರಿಚಿತ. ಆದರೆ ನಮ್ಮ ಹೊಟ್ಟೆಯನ್ನು ಅದರಲ್ಲೂ ಈ ಚಳಿಗಾಲದಲ್ಲಿ ವಿವಿಧ ಬಗೆಯಲ್ಲಿ ತಲುಪುವ ಬಹು ಮುಖ್ಯವಾದ ಬೇಳೆ-ಕಾಳು.

       ಅವರೆಯ ಹೂವುಗಳು ಅವುಗಳ ಬಿಳಿಯ ಬಣ್ಣಕ್ಕೆ ಹೆಸರುವಾಸಿ. ನಮ್ಮೂರಿನ ಕಡೆಗಳಲ್ಲಿ ಬಿಳಿಯ ಬಣ್ಣದ ಮಾತು ಬಂದಾಗ ಏನು ನೀನು ಬೆಳ್ಳಗೆ ಅವರೆ ಹೂವಿನಂಗಿದ್ದಿಯಲ್ಲವಾ? ಎನ್ನುವುದುಂಟು. ಹೂವುಗಳು ಎದ್ದು ಕಾಣುವ ನೋಟವನ್ನು ಅವರೆಯ ಹೊಲದಲ್ಲಿ ತೋರುವದರಿಂದ ಈ ಬಿಳಿಯ ರೂಪಕವು ಕಾರಣವಾಗಿದೆ.

       ಈ ಸಮಯದ ಅವರೆಯ ಬಳಕೆಯನ್ನು ಅವುಗಳಿಂದ ತಯಾರಿಸುವ ತಿನಿಸುಗಳ ಹೆಸರಿಸಿ ಹೇಳುವ ಅಗತ್ಯವೇನೂ ಹೆಚ್ಚಿಲ್ಲ. ಈ ಪ್ರಬಂಧವನ್ನು ಓದುತ್ತಿರುವಾಗಲೇ ಕೆಲವರಾದರೂ ಅವರೆಕಾಳಿನ ಉಪ್ಪಿಟ್ಟನ್ನು ಸವಿಯುತ್ತಿರಬಹುದು. ಇಲ್ಲವಾದರೆ ಅವರೆ ಕಾಳಿನ ರೊಟ್ಟಿಯೂ ಆದೀತು. ತಡವಾಗಿ ಓದುವವರಿಗೆ ಮಧ್ಯಾಹ್ನ ಅವರೆಕಾಳಿನ ಸಾರು ಅಥವಾ ಹಿಸುಕಿದ ಅವರೆಯ ಬಗೆ ಬಗೆಯ ಖಾದ್ಯ ರೆಡಿ ಇರಬಹುದು. ಸಾಮಾನ್ಯವಾಗಿ ಅವರೆಯು ಸಂಕ್ರಾಂತಿ ಹಬ್ಬದ ಸಮಯದಲ್ಲೂ ಇರುವುದರಿಂದ ಹಬ್ಬದಲ್ಲಿ ಅವರೆಯಕಾಯಿಯನ್ನು ಬೇಯಿಸಿ ತಿನ್ನಲಾಗುತ್ತದೆ. ಅವರೆ ಕಾಯಿಯನ್ನು ಸ್ವಲ್ಪವೇ ಉಪ್ಪನ್ನು ಬೆರಸಿ ಬೇಯಿಸಿ ತಿನ್ನುವುದು ಮಧ್ಯಕರ್ನಾಟಕದಲ್ಲಿ ಕಂಡುಬರುತ್ತದೆ. ಕೋಲಾರ ಜಿಲ್ಲೆಯ ಕೆಲವೆಡೆ ಅವರೆ ಕಾಳಿನಿಂದ ಕೆಲವು ಬಗೆಯ ಸಿಹಿಯನ್ನೂ ತಯಾರಿಸಲಾಗುತ್ತದೆ. ಉಳಿದಂತೆ ಅವರೆಯ ಉಸುಳಿ, ಪಲ್ಯ ಅವರೆಯ ಬಯಕೆಯ ಎಲ್ಲೆಡೆಗಳಲ್ಲಿ ಸಾಮಾನ್ಯವಾದುದು. ಇದನ್ನು ಓದುತ್ತಿರುವಂತೆ ಸೊಗಡಿನ ನೆನಪಿದ್ದರೂ ರುಚಿಯ ನೆನಪೇ ತಾರಕಕ್ಕೇರಿ ತಿನ್ನುವ ಬಯಕೆಯಾಗುತ್ತಿರಬಹುದು. ಮತ್ತೇಕೆ ತಡ! ಅಲ್ಲವೇ..

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್

This Post Has 4 Comments

 1. ಶ್ರೀಹರಿ ಕೊಚ್ಚಿನ್

  ಚಳಿಗಾಲಕ್ಕೆ ಸರಿಯಾದ ಬೆಳೆ .ನಿಮ್ಮ ಬರವಣಿಗೆ ಅತ್ಯಂತ ಸೂಕ್ತ . ತುಂಬಾ ಚೆನ್ನಾಗಿಯೂ ಬರೆದಿದ್ದೀರಿ .

  ಸೊಗಡವರೇ ಕಾಳಿನ ರುಚಿ ಅನುಭವಿಸಿದವರು ಒಮ್ಮೊಮ್ಮೆ ಪರರಾಜ್ಯದ ಪಾಲಾಗುವುದುಂಟು ನನ್ನ ಹಾಗೆ .ಇಲ್ಲಿ ಕೊಚ್ಚಿನಲ್ಲಿ ಅಪರೂಪಕ್ಕೂ ಕಾಣಸಿಗುವುದಿಲ್ಲ . ಆದರೆ ಬೆಂಗಳೂರಿಗೆ ಹೋದಾಗ ತಪ್ಪದೆ ಬಿಡಿಸಿದ ಕಾಳಿಗೆ ಬೆನ್ನಟ್ಟಿ ಹೋಗಿ ತರುವುದುಂಟು .

  ಆದರೆ ಕಾಯಿಕೊರಕದ ಕಾಟ ವಿಪರೀತವಾಗಿ ವಿಷದ ಬಳಕೆಯೂ ವಿಪರೀತವೆನ್ನುವಷ್ಟು ಬಳಕೆಯಾಗುತ್ತದೆ . ಆ ಎಚ್ಚರದಲ್ಲೇ ನಾಲಗೆಯೂ ಕೇಳದೆ ಕಾಳು ಸಿಕ್ಕರೆ ಬಿಡದ ಹಾಗಾಗಿದೆ .

  ಹಾಸನದಲ್ಲಿ ಕೆಲಸ ಮಾಡಿದ ನನಗೆ ಶಿವಮೊಗ್ಗದವನಾದರೂ ಅವರೇಕಾಳು ಹಿತಕವರೇ ಎಲ್ಲವೂ ಹಿತ ಅದನ್ನ ನೆನಪಿಸಿದ ನಿಮಗೆ ನಮಸ್ಕಾರ ..

 2. Dr Rudresh Adarangi

  avare sogadu eke endu vivarisi sir. We are very proud to give much information about our favourete avare. thanks for the informative article.

 3. ಲಲಿತಾ ರಾವ್ ಎಂ ಜಿ

  ಅವರೆಯ ಸೊಗಡು ಅದರಲ್ಲೂ ಕೊಟ್ಟಿಗೆ ಗೊಬ್ಬರ ಹಾಕಿದ್ದರೆ , ತುಂಬಾ ದೂರದಿಂದ ತಿಳಿಯಬಹುದು. ಸಿಪ್ಪೆ ಏನೋ ಸುರಿಸುತ್ತದೆ. ಸ್ವಲ್ಪ ತಿಳಿಸಿ.

 4. ಹಂ.ಗು. ರಾಜೇಶ್

  ಅವರೆಕಾಯಿ ಬಗೆಗೆ ಉತ್ತಮ ಮಾಹಿತಿಯನ್ನು ಸರಳವಾಗಿ ಕಟ್ಟಿಕೊಟ್ಟಿದ್ದೀರಿ ಸರ್. ಅವರೆಯಲ್ಲಿ ಇಷ್ಟೊಂದು ವೈವಿಧ್ಯತೆ ಇದೆ ಎಂಬುದರ ಅರಿವು ನನಗೆ ಇರಲಿಲ್ಲ. ಮತ್ತಷ್ಟು ಇಂತಹ ಬರಹಗಳನ್ನು ತಮ್ಮಿಂದ ನಿರೀಕ್ಷಿಸುತ್ತೇನೆ. ಓದಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್.

Leave a Reply