ಒಂದೇ ಪ್ರಭೇದವಾದರೂ ಬಾಹ್ಯ ರೂಪದಲ್ಲಿ ಭಿನ್ನವಾದ ವಿಶೇಷತೆ ಕೋಸುಗಳದು. ವಿಚಿತ್ರ ಎನ್ನುವಂತೆ ಎಲ್ಲವೂ ಒಂದಲ್ಲೊಂದು ಬಗೆಯಲ್ಲಿ ಸುತ್ತುವರಿದು ಗಡ್ಡೆಯಂತಾಗುವುದನ್ನೇ ಅನುಸರಿಸಿವೆ. ಎಲೆಕೋಸಿನಲ್ಲಿ ಎಲೆಗಳು ಒತ್ತೊತ್ತಾಗಿ ಗಡ್ಡೆ ಅಥವಾ ಹೆಡ್ ರೂಪವಾಗಿಯೂ, ಹೂಕೋಸಿನಲ್ಲಿ ಎಳೆಯ ಹೂಗೊಂಚಲು, ಸುತ್ತುವರಿಯಲು ಲೆಕ್ಕಬದ್ಧ ಪ್ರಮಾಣವನ್ನು ಅನುಸರಿಸಿವೆ. ಅದೇ ಪ್ರಭೇದವು ಹೀಗೆ ಸುತ್ತುವರಿಕೆಯನ್ನೇ ಮತ್ತೊಂದು ಬಗೆಯಲ್ಲಿ ಹುಡುಕಿಕೊಂಡು ಗಡ್ಡೆಯ ರೂಪತಾಳಿ ಗಡ್ಡೆ ಕೋಸಾಗಿದೆ. ಆದರೆ ಇಲ್ಲಿ ಮೂಲ ಕಾಂಡವೇ ಅನಿರ್ದಿಷ್ಟವಾಗಿ, ಹೆಚ್ಚೂ-ಕಡಿಮೆ ದುಂಡಗೆ ಬೆಳೆದು ಕೋಸು ಗಡ್ಡೆಯಂತಾಗಿ ಅದರ ಮೈಮೇಲೂ ಎಲೆಗಳು, ಅಂದಕೊಡಲು ನವಿಲು ಗರಿಗೆದರಿಂತೆ ಜೋಡಿಸಿವೆ. ಹಾಗೆಂದೇ ನವಿಲು ಕೋಸು ಎಂದಿರಬೇಕು. ನಮಗಿನ್ನೂ ತಿಳಿಯದ ಕಾಲದಲ್ಲೇ ದುಂಡಾಗಿರುವ ಗುಣವನ್ನೇ ಬಳಸಿ, ಅದೇ ಅರ್ಥದ ಗ್ರೀಕ್ ಪದ ಹೆಸರಿಸಿ ಗಂಗಿಲೊಡ್ಸ್(Gangylodes) ಎಂದು ಈ ತಳಿಯನ್ನು ಕರೆಯಲಾಗಿದೆ. ಇಂಗ್ಲೀಶಿನ ಹೆಸರಾದ ನೊಲ್‌ಕೊಲ್(KnolKhol) ಕೂಡ ಜರ್ಮನಿ ಮೂಲದಿಂದ ಹುಟ್ಟಿದ್ದು, ಟರ್ನಿಪ್ ಬಗೆಯ ಕೋಸು ಎಂದು ಅರ್ಥವುಳ್ಳದ್ದಾಗಿದ್ದು. ಇದಕ್ಕೆ ಟರ್ನಿಪ್ ಕೋಸು ಎಂದೂ ಕರೆಯಲು ಕಾರಣವಾಗಿದೆ.
ಈಗಾಗಲೇ ಹೇಳಿದಂತೆ ನವಿಲುಕೋಸು ಅಥವಾ ಗಡ್ಡೆ ಕೋಸಿನಲ್ಲಿ ಮೂಲ ಕಾಂಡದ ಮೆರಿಸ್ಟೆಮ್ ಜೀವಿಕೋಶಗಳು ಬದಲಾಗಿ ಬೇರೆಂದು ಬಗೆಯ ಜೀವಿಕೋಶಗಳಾಗದೆ (Cell differentiation) ಅವುಗಳೇ ವಿಭಜನೆಗೊಂಡು ಒತ್ತಾಗಿ ಗಡ್ಡೆಯಾಗಿವೆ. ವಿಕಾಸದಲ್ಲಿ ಅದೇ ಪ್ರಭೇದವು ಮತ್ತೊಂದು ಹಾದಿಯನ್ನು ಹುಡುಕಿಕೊಂಡು ಗಡ್ಡೆಕೋಸನ್ನು ಆಹಾರವಾಗಿ ಒದಗಿಸಿದೆ. ಹೀಗೆ ರೂಪಿಸಿಕೊಳ್ಳುವಲ್ಲಿ ಇನ್ನುಳಿದ ಕೋಸುಗಳಿಗಿಂತಾ ರಸಾಯನಿಕವಾಗಿಯೂ ಭಿನ್ನ ಮಾರ್ಗವನ್ನು ಅನುಸರಿಸಿದೆ. ಸಾಮಾನ್ಯವಾಗಿ ಕೋಸುಗಳಲ್ಲಿ ಮಾತ್ರವೇ ಇರುವ ವಿಶಿಷ್ಟ ಪರಿಮಳವನ್ನು ಕೊಡುವ ಗ್ಲುಕೊಸಿನಾಯ್ಡ್ (Glucosinoids) ರಸಾಯನಿಕಗಳ ಸಾಂದ್ರತೆಯು ಗಡ್ಡೆ ಕೋಸಿನಲ್ಲಿ ಕಡಿಮೆ ಇದೆ. ಹಾಗಾಗಿಯೇ ಇದರ ರುಚಿ ಇತರೇ ಕೋಸುಗಳಿಗಿಂತಾ ಆಕರ್ಷಕ. ಆದ್ದರಿಂದಲೇ ಹಸಿಯಾಗಿಯೇ ತಿನ್ನಲೂ ಇದು ಇತರೇ ಕೋಸುಗಳಿಗಿಂತಾ ಅಪೇಕ್ಷಣೀಯ. ಮಾಮೂಲಿ ಕೋಸಿನ ವಾಸನೆಯು ಇದರಲ್ಲಿ ತೀರಾ ಕಡಿಮೆ ಇದ್ದು, ಸಿಹಿ ಮಿಶ್ರಿತವಾಗಿ ಹಸಿ ತರಕಾರಿಯಾಗಿ ತಿನ್ನಲು ಕುರುಕಲಾಗಿರುತ್ತದೆ. ಗಡ್ಡೆಯ ಹೊರ ಮೈ ಎರಡು ಪದರಗಳಿಂದ ಕೂಡಿದ್ದು, ದಿನ ಕಳೆದಂತೆ ಪೋಷಕಾಂಶ ಪೂರೈಸುವ ಹೊರಮೈ ಅಂಗಾಂಶವು (Vascular tissue) ಬಲಿಯುತ್ತಾ ನಾರಾಗಿ ಗಟ್ಟಿಯಾಗಿ ಗಡ್ಡೆ ತಿನ್ನಲು ಯೋಗ್ಯವಾಗುವುದಿಲ್ಲ. ಹಾಗಾಗಿ ಇದರ ಕಟಾವು ಸಮಯಕ್ಕೆ ಸರಿಯಾಗಿ ಆಗಬೇಕು, ಆಗ ಇದನ್ನು ಬಯಸಿ ತಿನ್ನುವ ಗುಣ ಹೆಚ್ಚಾಗುತ್ತದೆ.
ಗಡ್ಡೆಕೋಸು, KnolKhol ಅಥವಾ ನವಿಲುಕೋಸನ್ನು ವೈಜಾನಿಕವಾಗಿ Brassica oleraceae var gangylodes ಎಂದು ಕರೆಯಲಾಗಿದೆ. ನವಿಲುಕೋಸಿನಲ್ಲಿ ಮಾರ್ಪಟ್ಟಿರುವ ಗಿಡದ ಭಾಗವೆಂದರೆ ಎಳೆಯಾದ ಕಾಂಡವು ಉದ್ದ ಬೆಳೆಯುವ ಬದಲು ಅಗಲವಾಗಿ ಉಬ್ಬುತ್ತಾ ಗಡ್ಡೆಯಂತೆ ಬೆಳೆಯುತ್ತದೆ. ನಂತರ ಎಲೆಗಳು ಈ ಗಡ್ಡೆಯ ಮೇಲೆ ಬೆಳೆಯುತ್ತವೆ. ಸುಮಾರು 60-70 ದಿನಗಳಲ್ಲಿ ನಾಟಿ ಮಾಡಿದ ಗಿಡದಲ್ಲಿ ಗಡ್ಡೆಯು ತಿನ್ನಲು ತಯಾರಾಗುತ್ತದೆ. ಹಾಗೆಯೇ ಎಲೆಗಳನ್ನೂ ಕೂಡ ಆಹಾರವಾಗಿ ಬಳಸಬಹುದು. ಆದಾಗ್ಯೂ ಹೆಚ್ಚಿನ ಪಾಲು ಎಲೆಗಳನ್ನು ಸಾಮಾನ್ಯವಾಗಿ ಬಳಸುವುದಿಲ್ಲ. ಇತರೆಯ ಎಲ್ಲಾ ಕೋಸುಗಳಂತೆಯೇ ಇದೂ ಸಹಾ ದ್ವಿವಾರ್ಷಿಕ ಬೆಳೆ. ಗಡ್ಡೆಯನ್ನು ಕೊಯಿಲು ಮಾಡದೆ, ಎರಡನೆಯ ವರ್ಷಕ್ಕೆ ಬೆಳೆಯಲು ಬಿಟ್ಟರೆ, ಮುಂದೆ ಗಿಡವಾಗಿ ಹೂ ಬಿಡುತ್ತದೆ. ಇವುಗಳೂ ಸಹಾ ಸಾಸಿವೆಯ ಹೂವಿನ ಬಣ್ಣವನ್ನು ಹೊಂದಿರುತ್ತದೆ.
ನವಿಲುಕೋಸಿನ ಮೂಲ ಪ್ರಭೇದಗಳ ಬಗ್ಗೆ, ಇದರ ಸಾಗುವಳಿಯ ಇತಿಹಾಸದ ಉಲ್ಲೇಖಗಳು ಬಹಳ ವಿರಳ. ಕಾಡು ಗಡ್ಡೆ ಕೋಸು(wild cabbage) ಇತರ ಕೋಸಿನ ಮೂಲವಾದಂತೆ, ನವಿಲುಕೋಸಿನ ಪೂರ್ವದ ಪ್ರಭೇದವೂ ಸಹ. ಆಶ್ಚರ್ಯವೆಂದರೆ, ಮೂಲ ಕಾಡು ಪ್ರಭೇದದಿಂದ ವಿವಿಧ ಕೋಸಿನ ಪ್ರಭೇದಗಳಲ್ಲಿ ಭಿನ್ನ ಸಸ್ಯ ಭಾಗಗಳು(ಕಾಂಡ, ಎಲೆ, ಹೂ ಗೊಂಚಲಿನ ಮೊಗ್ಗು, ಅಂಗಾಂಶ) ಮಾರ್ಪಟ್ಟು, ವಿಶಿಷ್ಟ ತರಕಾರಿಗಳಾಗಿ ನಮ್ಮ ಆಹಾರದ ವೈವಿದ್ಯತೆಯನ್ನು ಹೆಚ್ಚಿಸಿವೆ. Pietro Mattioli ಎಂಬ ಇಟಲಿಯ ಸಸ್ಯಶಾಸ್ತ್ರಜ್ಞ ಹಾಗೂ ವೈದ್ಯ 16ನೆಯ ಶತಮಾನದಲ್ಲಿ ನವಿಲುಕೋಸಿನ ಬಗ್ಗೆ ಉಲ್ಲೇಖಿಸಿದ್ದೇ ಯೂರೋಪಿನಲ್ಲೂ ಇದರ ಬಗ್ಗೆ ದೊರೆತ ಹಳೆಯ ದಾಖಲೆ. ಯುರೋಪಿನ ವಿವಿಧ ದೇಶಗಳಲ್ಲಿ ಮುಖ್ಯವಾಗಿ ಉತ್ತರ ಯುರೋಪ್, ಆಸ್ಟ್ರಿಯಾ, ಜರ್ಮನಿ, ಇಂಗ್ಲೆಂಡ್, ಇಟಲಿ ಹಾಗು ಇತರ ಈಶಾನ್ಯ ಮೆಡಿಟರೇನಿಯನ್ ಭಾಗದಲ್ಲಿ ಮೊದಲು ಬೆಳೆಯಲಾಗುತ್ತಿತ್ತು. ಭಾರತಕ್ಕೆ ಬಹುಶಃ ಇತರೆ ಕೋಸಿನ ಪರಿಚಯವಾದಂತೆ ಐರೋಪ್ಯರ ವಸಾಹತು ಕಾಲದಲ್ಲಿ ಪರಿಚಯವಾಗಿದೆ. ನಮ್ಮ ದೇಶದಲ್ಲಿ ನವಿಲುಕೋಸನ್ನು ಹೆಚ್ಚಾಗಿ ತಂಪಾದ ವಾತಾವರಣ ಬೆಟ್ಟ ಪ್ರದೇಶ ಹೊಂದಿರುವ ಜಮ್ಮುಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಅಸ್ಸಾಂ, ಪಶ್ಚಿಮ ಬಂಗಾಳ, ಕರ್ನಾಟಕ ರಾಜ್ಯಗಳಲ್ಲಿ ಬೆಳೆಯಲಾಗುತ್ತದೆ. ಬಯಲು ಪ್ರದೇಶಗಳಲ್ಲಿ ತಾಪಮಾನ ಕಡಿಮೆ ಇರುವ ಸೆಪ್ಟೆಂಬರ್-ಅಕ್ಟೋಬರ್‌ತಿಂಗಳುಗಳಲ್ಲಿ, ಹಿಮ ಕಡಿಮೆಯಾದ ನಂತರ ಉತ್ತರ ಬೆಟ್ಟ ಪ್ರದೇಶಗಳಲ್ಲಿ ಮೇ-ಜೂನ್‌ತಿಂಗಳುಗಳಲ್ಲಿ ಬಿತ್ತನೆಯಾಗಿ, ಸುಮಾರು 60 ದಿನಗಳಲ್ಲಿ ಮಾರುಕಟ್ಟೆಗೆ ಬರಲು ತಯಾರಾಗುತ್ತವೆ. 15-25 ಡಿಗ್ರಿ ಸೆಲ್ಸಿಯಸ್ ಈ ಬೆಳೆಗೆ ಅತ್ಯಂತ ಸೂಕ್ತವಾದ ತಾಪಮಾನ. ಉಷ್ಣತೆ ಹೆಚ್ಚಿದಂತೆ ಗಡ್ಡೆ ಸೀಳುವಿಕೆ, ಆಕಾರದಲ್ಲಿಯೂ ವ್ಯತ್ಯಾಸವಾಗಿ ಗ್ರಾಹಕರ ಬೇಡಿಕೆ ಕಡಿಮೆಯಾಗುತ್ತದೆ.
ಕೋಸುಗಳಲ್ಲಿ ಹೆಚ್ಚಿನ ಕ್ರಿಮಿ ನಾಶಕಗಳ ಬಳಕೆಯ ಕಾರಣದಿಂದ ಕೈತೋಟಗಳಲ್ಲಿ, ಕುಂಡಗಳಲ್ಲಿಯೂ ಇದನ್ನು ಬೆಳೆಯಬಹುದು. ಹೈಡ್ರೊಫೊನಿಕ್ ನಲ್ಲೂ ಇದನ್ನು ಬೆಳಸುವ ಬಗೆಗೆ ಅಧ್ಯಯನಗಳಾಗಿವೆ.
ಪೌಷ್ಟಿಕವಾಗಿ ನವಿಲುಕೋಸಿನಲ್ಲಿ ಇತರೆ ಕೋಸಿನಂತೆ ವಿಟಮಿನ್ “ಸಿ” ಹೆಚ್ಚಾಗಿದ್ದು, ಬಿ ಗುಂಪಿನ ಜೀವಸತ್ವಗಳು ಕೂಡ ಸಾಕಷ್ಟು ಇರುವುದು ವಿಶೇಷ. ಅಲ್ಲದೆ, ಖನಿಜಗಳು ಮುಖ್ಯವಾಗಿ ಪೊಟ್ಯಾಸಿಯಂ, ರಂಜಕ, ಕ್ಯಾಲ್ಸಿಯಂ ಹೆಚ್ಚಾಗಿದ್ದು ಆರೊಗ್ಯಕರ ಸೇವನೆಗೆ ಅನುಕೂಲಕರ.
ಮಾರುಕಟ್ಟೆಗಾಗಿ ನವಿಲುಕೋಸನ್ನು ಭಾರತದ ವಿವಿಧ ಪ್ರದೇಶಗಳಲ್ಲಿ ಬೆಳೆದರೂ,ಶೀತವಲಯದಲ್ಲಷ್ಟೇ ಬೀಜೋತ್ಪಾದನೆಯನ್ನು ಮಾಡಲಾಗುತ್ತದೆ. ನಮ್ಮ ದೇಶದಲ್ಲಿ ಬೆಳೆಯುವ ತಳಿಗಳು ಹೊರದೇಶಗಳಲ್ಲಿ ಅಭಿವೃದ್ಧಿ ಹೊಂದಿದವು. ಇವುಗಳಲ್ಲಿ ಮುಖ್ಯವಾಗಿ White vienņa Early white Vienņa Early purple Vienna ತಳಿಗಳನ್ನು ಬೆಳೆಯಲಾಗುತ್ತದೆ.
ನವಿಲುಕೋಸಿನ ಆರೋಗ್ಯದ ಲಾಭಗಳೆಂದರೆ, ಇದನ್ನು ಬಳಸುವುದರಿಂದ ಇದು ಸಾಕಷ್ಟು ಪ್ರಮಾಣದ ಆಂಟಿ-ಆಕ್ಸಿಡೆಂಟುಗಳನ್ನು, ಪ್ರಮುಖವಾಗಿ, ಆಂತೊಸಯನಿನ್‌ಗಳು, ಐಸೊತಯೊಸೈನೇಟ್‌ಗಳನ್ನು ಹೊಂದಿದೆ. ಮಧುಮೇಹಿಗಳಿಗೂ, ಹೃದಯದ ಕಾಯಿಲೆ ಇರುವವರಿಗೂ ಇದರ ಬಳಕೆಯಿಂದ ಪ್ರಯೋಜನಗಳು ಅಧಿಕ. ನೇರಳೆ ಅಥವಾ ಕೆಂಪು ಮಿಶ್ರಿತ ಕಂದು ಬಣ್ಣದ ಗಡ್ಡೆಕೋಸಿನಲ್ಲಿ ಆಂತೊಸಯನಿನ್‌ಗಳು ಹೆಚ್ಚಿದ್ದು ಪ್ರಮುಖವಾಗಿ ನರಸಂಬಂಧಿ ಕಾಯಿಲೆಗಳಿಗೆ ಹೆಚ್ಚಿನ ಪರಿಹಾರ ನೀಡುತ್ತದೆ. ನವಿಲು ಕೋಸು ಹೆಚ್ಚಿನ ನಾರಿನಾಂಶವನ್ನು ಹೊಂದಿದ್ದು, ಕಡಿಮೆ ಕ್ಯಾಲೊರಿಯನ್ನು ನೀಡುವಂತಹಾ ತರಕಾರಿ. ಆದ್ದರಿಂದ ರಕ್ತದ ಒತ್ತಡದಂತಹಾ ವಿವಿಧ ದೀರ್ಘಕಾಲಿಕ ಕಾಯಿಲೆಗಳಿಗೆ ಹಾಗೂ ದೇಹ ತೂಕವನ್ನು ಇಳಿಸಲು ಸಹಕಾರಿಯಾಗಿರುತ್ತದೆ. ಇದರಲ್ಲಿ ಇರುವ ಬೀಟಾ ಕ್ಯಾರೊಟಿನ್ (Beta Carotenes) ವಿಟಮಿನ್ “ಎ” ತಯಾರಿಯಲ್ಲಿ ಸಹಕಾರಿಯಾಗಿದ್ದು, ದೃಷ್ಟಿಯ ಸುಧಾರಣೆಗೆ ಸಹಾಯವಾಗುತ್ತದೆ.
ನವಿಲು ಕೋಸು ಅಥವಾ ಗಡ್ಡೆ ಕೋಸು ಕೋಸುಗಳಲ್ಲೇ ಭಿನ್ನವಾದ ಕೋಸು. ಇದರಲ್ಲಿನ ಸಿಹಿಯಾದ ರುಚಿಯು ಕೋಸಿನ ವಾಸನೆಯನ್ನು ಕಡಿಮೆ ಮಾಡಿ ತಿನ್ನಲು ಅಪೇಕ್ಷಣಿಯವಾಗಿಸಿದೆ. ಹಸಿಯಾಗಿಯೂ, ಬೇಯಿಸಿಯೂ, ತಾಳಿಸಿಯೂ ಬಳಕೆಗೆ ಯೋಗ್ಯವಾಗಿಸಿದೆ.
ನಮಸ್ಕಾರ
ಡಾ. ಭುವನೇಶ್ವರಿ, ಎಸ್.
ವಿಜ್ಞಾನಿ, ಇಂಡಿಯನ್ ಇನ್ಸ್‌ಸ್ಟಿಟ್ಯೂಟ್ ಆಫ್ ವೆಜಿಟಬಲ್ ರೀಸರ್ಚ್, ವಾರಣಾಸಿ
ಮತ್ತು
ಡಾ. ಟಿ.ಎಸ್. ಚನ್ನೇಶ್