You are currently viewing ಕೊವಿಡ್‌-19 ಮುಂದೇನು? ಕೊರೊನಾ ವೈರಸ್ಸುಗಳ ಜೀವಿವೈಜ್ಞಾನಿಕ ಸೂಕ್ಷ್ಮತೆ

ಕೊವಿಡ್‌-19 ಮುಂದೇನು? ಕೊರೊನಾ ವೈರಸ್ಸುಗಳ ಜೀವಿವೈಜ್ಞಾನಿಕ ಸೂಕ್ಷ್ಮತೆ

ಕೊವಿಡ್‌ ಹೊಸ ಪ್ರಶ್ನೆಗಳ ಕುರಿತಂತೆ ಒಂದಷ್ಟು ಜವಾಬ್ದಾರಿಯುತ ಉತ್ತರಗಳ ಹುಡುಕಾಟದಲ್ಲಿ ವೈರಸ್ಸುಗಳ ಜೀವಿವೈಜ್ಞಾನಿಕ ಸಂಗತಿಗಳ ಅನಿವಾರ್ಯ ತಿಳಿವಳಿಕೆಯ ಬಗ್ಗೆ ಗುರುತಿಸಲಾಗಿತ್ತು. ಏಕೆಂದರೆ ಮೊಟ್ಟ ಮೊದಲು Severe Acute Respiratory Syndrome Coronavirus (SARS- CoV) ಮೂಲಕ ಸಾಂಕ್ರಾಮಿಕವಾಗಿ ಸುದ್ದಿ ಮಾಡಿದ್ದು 2002ರಲ್ಲಿ! ಮುಂದೆ 2012ರಲ್ಲಿ MERS-CoV  ರೂಪದಲ್ಲಿ ಬಂದು ಸಾವಿರಾರು ಜನರನ್ನು ಸೋಂಕಿಗೆ ಒಳಪಡಿಸಿತ್ತು. ಆ ಎರಡೂ ಸಂದರ್ಭದಲ್ಲೂ ಬಾವಲಿಗಳ ನೆಲೆಯನ್ನು ಮುಂದೆ ಒಂಟೆಯನ್ನೂ ವೈರಸ್ಸುಗಳ ಸಂಗ್ರಾಹಕಗಳಾಗಿ ಗುರುತಿಸಲಾಗಿತ್ತು. ಆಗ ಪ್ರಾಣಿ ಮತ್ತು ಮಾನವರ ನಡುವಣ ಸೋಂಕು ಪರಿಣಾಮವು ಮಾನವ-ಮಾನವರ ನಡುವಣ ಸೋಂಕಿಗಿಂತಲೂ ಹೆಚ್ಚಿನ ತೀವ್ರತೆಯನ್ನು ದಾಖಲು ಮಾಡಿತ್ತು. ಆದರೆ ಕಳೆದ ಎರಡು ವರ್ಷದಲ್ಲಿ SARS-CoV-2 ಮಾನವರಿಂದ ಮಾನವರಿಗೆ ಸೋಂಕಿನ ಭಾರಿ ತೀವ್ರತೆಯಿಂದ ಸುಮಾರು 200 ರಾಷ್ಟ್ರಗಳಲ್ಲಿ 240 ದಶಲಕ್ಷ ಜನರನ್ನು ಆವರಿಸಿದ್ದಲ್ಲದೆ 48 ಲಕ್ಷ ಜನರ ಜೀವವನ್ನು ಬಲಿತೆಗೆದುಕೊಂಡಿತ್ತು. ಇದು ಕೊರೊನಾ ವೈರಸ್ಸುಗಳ ಅರಿವಿನ ಮೈಲುಗಲ್ಲುಗಳ ಪರಾಮರ್ಶನದಲ್ಲಿ ಒಟ್ಟಾರೆ ಸುಮಾರು 200ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಒಂದಡೆ ಸಮೀಕರಿಸಿ ನಡೆಸಿದ ಅಧ್ಯಯನದಿಂದ ಒಂದಷ್ಟು ಸಾರ್ವಜನಿಕವಾದ ವಿಚಾರಗಳನ್ನು CPUS ಓದುಗರಿಗೆ ಕೊಡುವ ಆಶಯ ಇಲ್ಲಿದೆ.

ಕೊವಿಡ್‌ನ ಸಾಮಾನ್ಯ ಲಕ್ಷಣಗಳಲ್ಲಿ ಶೀತ-ನೆಗಡಿ, ಜ್ವರ ತುಂಬಾ ಪ್ರಾಮುಖ್ಯವಾದವು. ಈ ಹಿಂದೆಯೂ ಶೀತ-ನೆಗಡಿ, ಜ್ವರಗಳು ಇದ್ದವು. ಆದರೆ ಕಳೆದೆರಡು ವರ್ಷದ ಶೀತ-ನೆಗಡಿ ಹಿಂದೆಂದೂ ಅರಿಯದಂತಹಾ ಭಯವನ್ನು ಇಡೀ ಮಾನವ ಸಮುದಾಯ ಅನುಭವಿಸುವಂತೆ ಮಾಡಿವೆ. ಜಾಗತ್ತಿನಾಧ್ಯಂತ ಯಾರೊಬ್ಬರೂ ಶೀತದ ನರಳಾಟವನ್ನು ಹೇಳಿಕೊಳ್ಳಲು ಅಂಜುವಂತೆ ಮಾಡಿದ್ದು ಸುಳ್ಳಲ್ಲ. ಅಂದರೆ ಹಿಂದೆಯೂ ಕೊರೊನಾ ವೈರಸ್ಸುಗಳು ಇದ್ದವು ಅಂತಲೇ ಎನ್ನುವ ನಿಮ್ಮ ಅನುಮಾನ ನಿಜವೇ ಆಗಿದೆ. ಕಾರಣ ಮೊಟ್ಟ ಮೊದಲ ಕೊರೊನಾ ವೈರಸ್ಸಿನ ತಿಳಿವಳಿಕೆಯು 1931ರಲ್ಲಿಯೇ ದಾಖಲಾಗಿತ್ತು. ಪಕ್ಷಿಗಳಲ್ಲಿ Infectious Bronchitis Virus (IBV)  ಎಂಬುದಾಗಿ ಅವುಗಳನ್ನು ಹೆಸರಿಸಲಾಗಿತ್ತು. ಕಾಲಾಂತರದಲ್ಲಿ ಮೊಟ್ಟ ಮೊದಲು ಮಾನವರಲ್ಲಿ ಕೊರೊನಾ ವೈರಸ್ಸುಗಳ ಪತ್ತೆ ಹಚ್ಚಿದ್ದು 1966 ಮತ್ತು 1967ರಲ್ಲಿ. ಮೊಟ್ಟ ಮೊದಲು ಅವುಗಳಿಗೆ ಮಾನವರ ಕೊರೊನಾ ವೈರಸ್ಸುಗಳು ಎಂದು ಕರೆದು HCoV-229E and HCoV- OC43 ಎಂಬುದಾಗಿ ಹೆಸರಿಸಲಾಗಿತ್ತು. ಆ ನಂತರದಲ್ಲಿ 80ರ ದಶಕದಿಂದಾಚೆಗಷ್ಟೇ ನಿಧಾನವಾಗಿ ವೈರಸ್ಸುಗಳ ಕುರಿತಂತೆ ಮಾಹಿತಿಯು ಶೈಕ್ಷಣಿಕವಾಗಿ ಸಂಶೋಧನೆಗಳ ಆಸಕ್ತಿ ಮತ್ತು ಅನಿವಾರ್ಯತೆಯಲ್ಲಿ ಸ್ಥಾನ ಪಡೆದಿದ್ದವು. ನಂತರದ 21ನೆಯ ಶತಮಾನದ ಕಂಪ್ಯೂಟರ್‌ ಪ್ರೊಗ್ರಾಮ್‌ ಮತ್ತಿತರ ಬೆಳವಣಿಗೆಗಳೂ, ಇಲೆಕಟ್ರಾನಿಕ್‌ ವಿಜ್ಞಾನದ ಬೆಳವಣಿಗೆಗಳೂ ವೈರಸ್ಸುಗಳ ತಿಳಿವಿನ ಅಧ್ಯಯನಕ್ಕೆ ಬೆಂಬಲಕೊಟ್ಟು ಸಂಶೋಧನೆಯ ವೇಗವನ್ನು ಹೆಚ್ಚಿಸಲು ಸಹಾಯವಾದವು. ಅಷ್ಟೊತ್ತಿಗಾಗಲೆ SARS- CoV ಮಾನವರ ಸಮೀಪಕ್ಕೆ ಬಂದಾಗಿತ್ತು. ಇಲೆಕಟ್ರಾನ್‌ ಮೈಕ್ರೋಸ್ಕೋಪ್‌ ಶೋಧನೆಯ ತಿಳಿವು, ಜೆನೆಟಿಕ್‌ ಸಂಗತಿಗಳ ಆಳ ಬೆರೆತು ಕೇವಲ ನ್ಯುಕ್ಲೆಯಿಕ್‌ ಆಮ್ಲವು ಪ್ರೊಟೀನಿನ ಹೊದಿಕೆಯಾದ ವೈರಸ್ಸಿನ, ಅದರಲ್ಲೂ ರೋಗಕಾರಕ ವೈರಸ್ಸಿನ ಪರಿಶುದ್ಧತೆಯ ಸಂಶೋಧನೆಗಳಿಗೆ ಒತ್ತು ಕೊಡುವ ಮಾದರಿಗಳು ವಿಜ್ಞಾನದ ತಿಳಿವಿಗೆ ದಕ್ಕಿದ್ದವು.  ಅವುಗಳಿಂದ ಜೀನುಗಳು, ತೀರಾ ವಿಶಿಷ್ಟವಾದ ಜೀವಿರಸಾಯನಿಕ ವರ್ತನೆಗಳು ಮುಂತಾದ ವಿವರಗಳ ಕಡೆಗೆ ಸಂಶೋಧನೆಯ ಮಹತ್ವಗಳು ಸಾಗಿದವು.

ಮೂಲತಃ ವೈರಸ್ಸಿನ ಮತ್ತು ಅವುಗಳ ಆಶ್ರಯಿಸುವ ಜೀವಿಕೋಶಗಳ ನಡುವಣ ಸಾಮರಸ್ಯ ಮತ್ತು ಸಂಘರ್ಷಗಳ ಬಗೆ ಬಗೆಯ ಸಂಕೀರ್ಣವಾದ ವಿಚಾರಗಳು ನಿಧಾನವಾಗಿ ತಿಳಿಯತೊಡಗಿದವು. ಕಳೆದ ಅರ್ಧ ದಶಕದಲ್ಲಿ ಒಟ್ಟಾರೆಯ ಸಂಶೋಧನಾ ಅಧ್ಯಯನಗಳ ವೇಗವು ಕಳೆದ ವರ್ಷದ ಸಾಂಕ್ರಾಮಿಕದ ತೀವ್ರತೆಯಿಂದ ಮತ್ತಷ್ಟು ಹೆಚ್ಚಿದವು. ಇವೆಲ್ಲವೂ ಬಗೆ ಬಗೆಯ ವೈರಾಣುಗಳ ಕಂಡುಹಿಡಿಯುವುದರಿಂದ ಮೊದಲ್ಗೊಂಡು, ಅವುಗಳಲ್ಲಿ ಪ್ರೊಟೀನ್‌ನ ಸಂಸ್ಕರಣೆ, ಆಶ್ರಯ ಕೋಶದೊಡಗಿನ ಸಂಘರ್ಷದ ರಸಾಯನಿಕ ವಿಶೇಷತೆ ಇವೇ ಮುಂತಾದ ಸಂಕೀರ್ಣವಾದ ಸಂಗತಿಗಳು ಹೊರ ಬಂದವೇ ವಿನಾ ಚಿಕಿತ್ಸೆಯ ಕ್ರಮಗಳಲ್ಲಿ ತಿಳಿವು ಇನ್ನೂ ಸಾಲದಾಗೇ ಉಳಿದಿದೆ. ಉಸಿರಾಟದ ಸಮಸ್ಯೆ, ಶ್ವಾಸಕೋಶಗಳ ಸೋಂಕು, ಪ್ರತಿರೋಧಗಳ ವರ್ತನೆಗಳು, ಮುಂತಾದ ಮಹತ್ತರವಾದ ವಿಚಾರಗಳು ತಿಳಿದವು. ಸರಿ ಸುಮಾರು 9 ದಶಕಗಳ ಕೊರೊನಾ ವೈರಸ್ಸುಗಳ ಸಂಶೋಧನೆಯ ಮೈಲುಗಲ್ಲುಗಳ ದಾಖಲಿಸುವ ಚಿತ್ರ ಈ ಕೆಳಗಿದೆ.

ತೀರಾ ಸಾಧಾರಣವಾದ ಶೀತ, ನೆಗಡಿ, ಕೆಮ್ಮುಗಳಿಂದ ಆರಂಭಿಸಿದ ವೈರಸ್ಸುಗಳು ಈಗ SARS, MERS, Flue, Ebola, HIV ಎಂಬ ಭಯಂಕರ ಹೆಸರುಗಳಿಂದ ಭಯದ ಶಿಖರವನ್ನು ತಲುಪಿಸಿವೆ. ವೈರಸ್ಸುಗಳು ಆತ್ಯಂತಿಕ ಪರಾವಲಂಬಿಗಳು. ಜೀವಿಯ ಹೊರಗಿದ್ದರೆ ಸಾಧಾರಣ ವಸ್ತುವಾದ ವೈರಸ್ಸು ಜೀವಿಕೋಶದ ಒಳಗೆ ತನ್ನನ್ನು ತಾನೇ ಪ್ರತಿರೂಪಿಸುವ ಜೀವಿಯಂತೆ! ಶೀತ, ನೆಗಡಿಯ ರೋಗಕಾರಕ ವೈರಸ್ಸುಗಳಂತೂ ರೋಗದಿಂದ ವಿಮುಕ್ತಿಪಡೆದರೂ ನಮ್ಮೊಳಗೊಂದಾಗಿ, ಡಿಎನ್‌ಎಯಲ್ಲಿ ಉಳಿಕೆಯಾಗಿ ಕುಳಿತುಕೊಳ್ಳುತ್ತವೆ. ಹೀಗೆ ಎಲ್ಲಾ ಜೀವಿ ಸಂಕುಲವನ್ನೂ ವ್ಯಾಪಿಸಿರುವ ವೈರಸ್ಸಿನ ತಾಣವು ಅಕ್ಷರಶಃ ಭೂಮಂಡಲದಲ್ಲಿ ಏನನ್ನೂ ಬಿಟ್ಟಿಲ್ಲ. ಹಾಗಾಗಿ ಅವುಗಳ ವಿವಿಧತೆಯಂತೂ ಅಪಾರ. ಒಂದು ಅಂದಾಜಿನಂತೆ ವಿಶ್ವದ ಒಟ್ಟೂ ನಕ್ಷತ್ರಗಳ ಸಂಖ್ಯೆಯನ್ನೂ ಮೀರುವಷ್ಟು ವೈರಸ್ಸುಗಳಿವೆಯಂತೆ. ಜೆನೆಟಿಕ್‌ ಮಾಲೆಕ್ಯೂಲ್‌ ಆದ ನ್ಯುಕ್ಲಿಯೆಕ್‌ ಆಮ್ಲದ ಮೂಲ ಸಂರಚನೆಯಲ್ಲಿ ಪ್ರೊಟೀನನ್ನು ಹೊದಿಕೆಯಾಗಿಸಿದ ವೈರಸ್ಸು, ಜೀವಿ ಹಾಗೂ ನಿರ್ಜೀವಿ ಎರಡೂ ಬಗೆಯಲ್ಲೂ ವರ್ತಿಸುತ್ತದೆ. ಹಲವು ವಿಜ್ಞಾನಿಗಳು ಜೀವಿಗಳೆಂದೂ ಒಪ್ಪದಿದ್ದರೂ, ಅನೇಕರು ಜೀವಿಗಳೇ ಎಂಬಂತೆ ವಾದಿಸುತ್ತಾರೆ. ಒಂದಂತೂ ಸ್ಪಷ್ಟವಾಗಿದೆ. ಜೀವಿವಿಕಾಸದ ಮೂಲದ್ರವ್ಯ ನ್ಯುಕ್ಲಿಯೆಕ್‌ ಆಮ್ಲದ ಮೂಲವನ್ನೇ ಹೊಂದಿರುವ ವೈರಸ್ಸುಗಳು ಜೀವಿಗಳ ಮೂಲ ಪರಮಾಣುಗಳೋ ಎಂಬಂತೆ ತರ್ಕಿಸಲೂ ಸಾಧ್ಯವಿದೆ. ಹೀಗಿದ್ದೇ ವೈರಸ್ಸುಗಳು ಇಲ್ಲದಿದ್ದರೆ ಮಾನವ ಜೀವಿಯಂತೂ ಇರುತ್ತಿರಲಿಲ್ಲವೇನೋ ಎಂಬಂತಹಾ ಅಚ್ಚರಿಯ ನೈಸರ್ಗಿಕ ಹಾಗೂ ಅತ್ಯಂತ ಸಂಕೀರ್ಣ ಶರೀರಕ್ರಿಯೆಗಳನ್ನು ನಿರ್ವಹಿಸುವ ನೆನಪುಗಳ ವಾರಸುಧಾರ ಜೀನ್‌ಗಳಾಗಿ ರೂಪಾಂತರಗೊಂಡಿವೆ. ಹೌದು ಹಲವು ಜೀನುಗಳು ರೂಪಾಂತರಗೊಂಡ ವೈರಸ್ಸುಗಳೇ ಆಗಿವೆ. ಕೊರೊನಾ ವೈರಾಣುವಿನ ಜೀವಿ ವೈಜ್ಞಾನಿಕ ಚಕ್ರದ ಸಂಕೀರ್ಣತೆಯನ್ನು ಈ ಕೆಳಗಿನ ಚಿತ್ರದಿಂದ ನೋಡಬಹುದು.    

ವೈರಸ್ಸು ಸೋಂಕಾದ ಕೂಡಲೆ, ಮೊಟ್ಟ ಮೊದಲು ಅದರ ವಿನ್ಯಾಸವನ್ನು ಗುರುತಿಸುವ ಕೆಲಸ ಕೋಶದೊಳಗೆ ನಡೆಯುತ್ತದೆ. ಅದರ ಸೂಚನೆಗಳಿಗೆ ಅನುಗುಣವಾಗಿ ಸೈಟೊಕೈನಿನ್‌ಗಳ ಧಾರೆಯು ಉಂಟಾಗುತ್ತದೆ. ಇದರೊಟ್ಟಿಗೆ ಇಂಟರ್ಫೆರನ್‌ಗಳೂ ಉಂಟಾಗುತ್ತವೆ. ಈ ಇಂಟರ್ಫೆರಾನ್‌ಗಳನ್ನು ವೈರಸ್ಸನ್ನು ಗ್ರಹಿಸುವ ವಸ್ತುವಿಗೆ ಬಂಧವನ್ನು ಉಂಟುಮಾಡಿ, ಇಂಟರ್ಫೆರಾನ್‌ಗಳು ಪ್ರಚೋಧಿಸುವ (ISGs) ಜೀನುಗಳ ಪ್ರತಿಗಳ ವೃದ್ಧಿಯ ಸಕ್ರಿಯಗೊಳಿಸುವಿಕೆ (Transcriptional  Activation) ಉಂಟಾಗಿ ನೂರಾರು ಜೀನುಗಳು ಉಂಟಾಗುತ್ತವೆ. ಇದನ್ನೆಲ್ಲವನ್ನೂ ಈಗಾಗಲೇ ಗುರುತಿಸಿ ಪ್ರಕಟಿಸಿದ ಒಟ್ಟಾರೆಯ ಜೀನುಗಳ (ISGs) ಸಮೀಕರಿಸಿ ಅವುಗಳ ಪ್ರಕ್ರಿಯೆಗಳನ್ನು ಶ್ವಾಸಕೋಶದ ಜೀವಿಕೋಶಗಳಿಗೆ ಸಮೀಕರಿಸಿ ಮೌಲ್ಯೀಕರಿಸಿದ್ದಾರೆ.  

ಅಧ್ಯಯನದಲ್ಲಿ ಪ್ರತಿಕಾಯಗಳನ್ನು, ಪ್ಲಾಸ್ಮಿಡ್‌ಗಳನ್ನು, ಅಧ್ಯಯನಕ್ಕೆ ಬೇಕಾದ ಪ್ರೈಮರ್‌ಗಳನ್ನು,   ಆರ್‌ಎನ್‌ಎ. ಮಾದರಿಗಳ ಪ್ರಯೋಗಿಕ ಪರೀಕ್ಷೆಗಳು, ಸೋಂಕು ಮಾದರಿಗಳ ನಕ್ಷೆಗಳು, ವೈರಸ್ಸುಗಳ ನೆಟ್‌ವರ್ಕ್‌ಗಳು, ಹೀಗೆ ಅನೇಕಾನೇಕ ಸಂಕೀರ್ಣ ಸಂಗತಿಗಳ ಮಾಹಿತಿಯ ಮಹಾಪೂರವೇ ಇದೆ. ಇವೆಲ್ಲವೂ ಅಪ್ಪಟ ಆನುವಂಶಿಕ ಮಾಹಿತಿ ಹಾಗೂ ಜೀವಿ ರಸಾಯನಿಕ ಸಂಕೀರ್ಣ ವಿಚಾರಗಳಾಗಿವೆ. ‌ಕೊವಿಡ್‌-19 ಅವುಗಳಿಂದ ನಿರ್ದೇಶಿತವಾಗಿ ಕಾರ್ಯನಿರ್ವಹಿಸುವ ಹೋರಾಟಗಾರ ಇಂಟೆರ್ಫೆರಾನ್‌ಗಳ ಹರವಾದ ವರ್ತನೆಗಳ ಬಗೆಗೆ ಮತ್ತು ಅವುಗಳನ್ನು ಪ್ರಚೋದಿಸಲು ಬೇಕಾದ ಚಿಕಿತ್ಸೆಗೆ ಹುಡುಕಾಟ ನಡೆದಿದೆ.

ಈ ಹಿನ್ನೆಲೆಯಲ್ಲಿ ವೈರಾಣುಗಳ ಜೀವಿವಿಜ್ಞಾನದ ಸಂಗತಿಗಳು ಮತ್ತು ಅವುಗಳ ಜೀವನ ಚಕ್ರದ ಮಾಹಿತಿಗಳು ಅಗಾಧವಾಗಿ ಅದರಲ್ಲೂ ಕಳೆದೆರಡು ವರ್ಷಗಳಲ್ಲಿ ಸಂಗ್ರಹವಾಗಿವೆ. ವೈರಾಣು ಮತ್ತು ಅತಿಥೇಯರ ನಡುವಣ ಪ್ರತಿರೋಧದ ಸಂಘರ್ಷದ ಬಗೆಗಂತೂ ಲೆಕ್ಕವಿಲ್ಲದ ವಿಚಾರಗಳು ಹೊರಬಿದ್ದಿವೆ. ಸದ್ಯಕ್ಕೆ ನಮ್ಮೊಳಗಂತೂ ವೈರಸುಗಳ ಜಾಲದಲ್ಲಿ ನಿರ್ವಹಣೆಗೆ ಒಳಗಾಗಿರುವ ಜೀನುಗಳು ಹಾಗೂ ಪ್ರೊಟೀನುಗಳ ಮಹಾಪೂರವೇ ಇದೆ. ಅವುಗಳ ಜೈವಿಕ ವ್ಯವಹಾರಗಳಲ್ಲಿ ತುಸುವೇ ಬದಲಾವಣೆಗಳೂ ಅಗಾಧ ವೈಪರೀತ್ಯವನ್ನೂ ತರುತ್ತಿವೆ. ಹಾಗಾಗಿಯೇ ಜೈವಿಕ ವಿಚಿತ್ರಗಳು ಜರುಗುತ್ತಿವೆ. ಆದಿಯ ಜೈವಿಕ ಕುರುಹುಗಳಂತಿರುವ ವೈರಸ್ಸುಗಳ ಜಾಣತನ ಎಷ್ಟಿದೆ ಎಂದರೆ, ತಮ್ಮನ್ನು ತಾವು ಕಳೆದುಕೊಳ್ಳದಂತೆ ಸ್ಟೆಮ್‌ ಜೀವಿಕೋಶಗಳಲ್ಲೇ ತಮ್ಮ ಛಾಫನ್ನು ಉಳಿಸಿಕೊಂಡು ನಿಭಾಯಿಸುವಷ್ಟಿದೆ. ನಿಜಕ್ಕೂ ವೈರಸ್ಸುಗಳ ಚತುರತೆಯನ್ನು ನಿಭಾಯಿಸುವ ತಂತ್ರಗಳಿಲ್ಲ. ಇಡೀ ಜೀವ-ಜಾಲವನ್ನು ಆವರಿಸಿ ಸಂಕೀರ್ಣವಾದರೂ ಸಮಸ್ಥಿತಿಯನ್ನೂ ನಿಭಾಯಿಸುವಷ್ಟು ಜೈವಿಕ ಮಾಹಿತಿಯ ಆಳ-ಅಗಲಗಳ ಅಳತೆಗೋಲು ಅಷ್ಟು ಸುಲಭವಾದ್ದಲ್ಲ.   

ಅಂತೂ ಪರಿಸ್ಥಿತಿಯು ತಿಳಿಯಾಗುತ್ತಲಿದೆ. ಸಾಂಕ್ರಾಮಿಕತೆಯ ಸಾಮಾಜಿಕ ಹಾಗೂ ರಾಜಕೀಯ ಸನ್ನಿವೇಶಗಳು ಅದರ ಜೈವಿಕ ತೀವ್ರತೆಯನ್ನೂ ಮೀರಿ ವರ್ತಿಸುವ ಹುನ್ನಾರವನ್ನೂ ಪ್ಲೇಗ್‌ ಕಾಲದಿಂದಲೂ ಗುರುತಿಸಿರುವ ಜಗತ್ತು ಕೊರೊನಾದಲ್ಲಿ ಮತ್ತಷ್ಟು ದೃಢಪಡಿಸಿದೆ. ಜೀವಿಯೊಳಗಿನ ಬದುಕುವ ಆಶಯವು ಪರಿಸ್ಥಿತಿಯನ್ನು ಮೆಟ್ಟಿ ನಿಲ್ಲಬಲ್ಲದು, ನಿಜವೆ, ಆದರೆ ಅದರೊಳಗಿನ ಜಾಣತನವೂ ಮುಖ್ಯವಾಗುತ್ತದೆ. ವಿಜ್ಞಾನವು ವೈರಸ್ಸುಗಳ ಬಗೆಗಿದ್ದ ಎಲ್ಲ ಬಗೆಯ ಅಭಿಪ್ರಾಯಗಳನ್ನೂ ಸೂಕ್ಷ್ಮವಾಗಿ ಗಮನಿಸುತ್ತಾ ಅವುಗಳಿಗಿರುವ ಹರಹನ್ನು ಮತ್ತು ಅವುಗಳ ಸಂಕೀರ್ಣ ಸ್ಟ್ರಾಟಜಿಗಳನ್ನು ಅರಿಯುವಲ್ಲಿ ಮಹತ್ತರವಾದ ಪಾತ್ರ ವಹಿಸಿದೆ. ಮುಂದೆಯೂ ಇನ್ನಷ್ಟು ಸ್ಪಷ್ಟತೆಯ ವಿವರಗಳು ಖಂಡಿತಾ ದೊರಕುತ್ತವೆ.   

ನಮಸ್ಕಾರ

ಡಾ. ಟಿ.ಎಸ್. ಚನ್ನೇಶ್

ಹೆಚ್ಚಿನ ಓದಿಗೆ:

Philip V’kovski, Annika Kratzel1, Silvio Steiner1, Hanspeter Stalder, and Volker Thiel. Coronavirus biology and replication: implications for SARS- CoV-2.  Nature Reviews   Vol 19. 2021.   https://doi.org/10.1038/s41579-020-00468-6

This Post Has 2 Comments

  1. ಶಾಂತಕುಮಾರಿ ಸಿ ಆರ್ ಪಿ ಆನಂದಪುರಂ ಸಾಗರ ತಾಲೂಕು ಶಿವಮೊಗ್ಗ ಜಿಲ್ಲೆ

    ಅತ್ಯದ್ಭುತವಾದ ಮಾಹಿತಿ

    1. CPUS

      ಧನ್ಯವಾದಗಳು

Leave a Reply