You are currently viewing ಕೊವಿಡ್‌-19 ಮುಂದೇನು? ಒಂದಷ್ಟು ಹೊಸ ಪ್ರಶ್ನೆಗಳು…

ಕೊವಿಡ್‌-19 ಮುಂದೇನು? ಒಂದಷ್ಟು ಹೊಸ ಪ್ರಶ್ನೆಗಳು…

ಕೊರೊನಾ ವೈರಸ್ಸು ಇಸವಿ 2019ರಿಂದಾಗಿ ಕೊವಿಡ್‌-19 ಹೆಸರನ್ನು ಹೊತ್ತು 2020ರಲ್ಲಿ ಮತ್ತೀಗ 2021ರಲ್ಲೂ ಮಾನವ ಕುಲವೆಂದೂ ಕಾಣದ ಭಯಾನಕವಾದ ಸಂಚಲನವನ್ನು ಹುಟ್ಟು ಹಾಕಿತು. ಕಳೆದ ವಾರಾಂತ್ಯದಲ್ಲಿ ಬೆಂಗಳೂರಿಂದ ಉತ್ತರದ ಕಡೆಗೆ ಒಂದೇ ಸಮನೆ 15 ತಾಸಿಗೂ ಹೆಚ್ಚು ಸಮಯದ ರೈಲು, ಬಸ್ಸು, ನಗರ-ಸಾರಿಗೆ ಮುಂತಾದವುಗಳ ಪ್ರಯಾಣದಲ್ಲಿ ಅನುಭವವು ವಿಜ್ಞಾನದ ವಿದ್ಯಾರ್ಥಿಯಾಗಿ ಹಲವು ಪ್ರಶ್ನೆಗಳನ್ನೂ-ಒಂದಷ್ಟು ಉತ್ತರಗಳನ್ನೂ ಹುಡುಕಾಡುವಂತೆ ಮಾಡಿದೆ.  ಈಗಾಗಲೆ ಕೊವಿಡ್‌-19ಸರಣಿಯಲ್ಲಿ ಹಲವಾರು ವಿಚಾರಗಳನ್ನು ಪ್ರಸ್ತಾಪಿಸಿದ್ದ CPUS ಗೆ ಮತ್ತೀಗ ಮರು ಹುಡುಕಾಟದ ಜೊತೆಗೆ ಒಂದಷ್ಟು ಕೊರೊನಾ ಸಂಗತಿಗಳ ಅನುರಣನದ ಅವಶ್ಯಕತೆಯನ್ನು ಜಾಗ್ರತಗೊಳಿಸಿವೆ. ನಿಜಕ್ಕೂ ಹೊಸ ಪ್ರಶ್ನೆಗಳನ್ನೂ ಹುಟ್ಟು ಹಾಕಿ ಜಾಗತಿಕವಾಗಿಯೂ ಎಂದಿಲ್ಲ ಜೀವಿ ವೈಜ್ಞಾನಿಕ ಚರ್ಚೆಗಳನ್ನು ಆರಂಭಿಸಿವೆ. ತುಸುವಾದರೂ ಅವನ್ನು ಕ್ರೋಢಿಕರಿಸಿ CPUS-ನ ಓದುಗರೊಂದಿಗೆ, ಅನುಸರಿಸುವವರೊಂದಿಗೆ ಹಂಚುವ ಜವಾಬ್ದಾರಿಯನ್ನು ಕೈಗೆತ್ತಿಕೊಳ್ಳಲಿದೆ. ಇದೀಗ ನಮ್ಮ ಮುಂದಿರುವ ಭವಿಷ್ಯದ ಬದುಕಿನ ಆಶಯಗಳಲ್ಲಿ ಭಯ-ರಹಿತ ಆರೋಗ್ಯ ಸಂಯಮಗಳ ಅನಿವಾರ್ಯತೆಯನ್ನು ಗಮನಿಸಿ ಈ ಚರ್ಚೆಯನ್ನು ನಿಮ್ಮ ಮುಂದಿಡುವ ಪ್ರಯತ್ನ ಮಾಡುತ್ತಿದ್ದೇವೆ.

       ನಿಜಕ್ಕೂ ಪ್ರಶ್ನೆಗಳು, ಅಷ್ಟೊಂದು ಕಷ್ಟದವೇ? ಉತ್ತರಗಳ ಹುಡುಕಾಟವೂ ಸೇರಿದಂತೆ ಬದುಕಿನ ಆಶಯವು ಮೊದಲಿನಂತೆ ಇರದೆ ಹೋದಿತೇ? ಇದೆಲ್ಲವನ್ನು ನಿಭಾಯಿಸುವ ಸಾಮಾಜಿಕ ಹೊಣೆಗಾರಿಕೆಯ ತಂತ್ರಗಳಾದರೂ ಹೇಗಿದ್ದಾವು? ಎಂಬ ಸಾದಾರಣ ಪ್ರಶ್ನೆಗಳ ಜೊತೆಗೆ ವೈಜ್ಞಾನಿಕ ಜಗತ್ತನ್ನೇ ಹೊಸ ಮಾದರಿ ಚರ್ಚೆಗಳಲ್ಲಿ ತೊಡಗಿಸಿರುವ ವಿವರಗಳೂ ಇಲ್ಲಿ ಸೇರಲಿವೆ. CPUS ಈ ಹಿಂದೆ ಇದೇ ಸರಣಿಯಲ್ಲಿ ಪ್ರಸ್ತಾಪಿಸಿದ್ದ ಲೇಖನವೊಂದರಲ್ಲಿ ಪ್ರಸ್ತುತ ಜಗತ್ತು ಎದುರಿಸುತ್ತಿರುವ ಅಪಾಯಕ್ಕೆ ಒಂದೇ ಉತ್ತರದ ಆಯಾಮಗಳು ಇಲ್ಲದ ಬಗ್ಗೆ “ವೆಂಟಿಲೇಶನ್‌ ನಿಂದಾ ವ್ಯಾಕ್ಸೀನಿನವರೆಗೆ.. ಸಾಂಕ್ರಾಮಿಕತೆಯನ್ನು ತಡೆವ ಸ್ವಿಸ್‌ ಚೀಜ್‌ ಮಾಡೆಲ್‌”, ( https://bit.ly/2QBYMPF ) ಎಂಬ ಲೇಖನವನ್ನು ಇದೇ ವರ್ಷದ ಏಪ್ರಿಲ್‌ನಲ್ಲಿ ಓದಿದ್ದವರಿಗೆ ನೆನಪಿರಬಹುದು! ಇದರ ನಡುವೆಯೇ ಮೂರನೆಯ ಅಲೆಗಳ ಮಾತುಗಳೂ ಸುದ್ದಿ, ಚರ್ಚೆಗಳೂ, ಆತಂಕ-ಆಶಯಗಳ ಸುರಿಮಳೆಯನ್ನೇ ಸೃಜಿಸುತ್ತಿವೆ. ಜೊತೆಗೆ ಒಂದಷ್ಟು ಗಾಳಿ ಸುದ್ದಿಯೂ ಸೇರಿ ಒಟ್ಟಾರೆ ಸಾರ್ವಜನಿಕ ಅರಿವನ್ನು ತಿಳಿವಾಗಿಸಲು ಬಿಟ್ಟಿಲ್ಲ. ಎಲ್ಲವೂ ಸರಿಯಾಗಿದೆ ಎಂದೇನೂ ಇನ್ನೂ ಹೇಳಲಾಗಿಲ್ಲ, ಹಾಗಿದ್ದೂ ಆರಂಭದಲ್ಲಿ ಪ್ರಸ್ತಾಪಿಸಿದ ಕಳೆದ ವಾರಾಂತ್ಯದ ಪಯಣದಲ್ಲಿ ಒಂದು ತುಂಬಿದ ಬಸ್‌ನಲ್ಲಿ ಒಬ್ಬರೂ ಮಾಸ್ಕ್‌ ಧರಿಸದ್ದು ಕಂಡೆ! ರೈಲೂ ಹೊರತಲ್ಲ. ಈ ಅನುಭವ ನಿಜಕ್ಕೂ ಭಯದ ಜೊತೆಗೇ, ಧೈರ್ಯ ತುಂಬುವ ಸಾರ್ವಜನಿಕ ಬದುಕಿನ ಆಶಯದ ಸೊಗಸನ್ನೂ ಅನುಭವಿಸಿದೆ.

ಹೌದು, ಬದುಕಲು ನಮಗೆ ನಾವೇ ಧೈರ್ಯ ತಂಬಿಕೊಳ್ಳಬೇಕು ಎನ್ನುವ ಆಶಯ ಅನುಭವಿಸಿದರೂ, ಭಯ ಅಷ್ಟು ಸುಲಭವಾಗಿ ಹೋಗುವುದಿಲ್ಲ. ಧೈರ್ಯಕ್ಕೆಂದೇ ವೈರಸ್ಸಿನ ಜೀವಿ ವೈಜ್ಞಾನಿಕ ವಿವರಗಳ ಸಂಕೀರ್ಣ ವಿಷಯಗಳನ್ನೂ ಮತ್ತಷ್ಟು ಒರೆಹಚ್ಚಿ ನೋಡಿ ಅರಿತು ಹಂಚುವ ಅನಿವಾರ್ಯತೆಯನ್ನು ತಂದಿರುವ ನೆನಪಾಯಿತು. ಜೀವಿ ಜಗತ್ತಿನ ಅತ್ಯಂತ ಸರಳವಾದ ಮೂಲ ಸರಕನ್ನಷ್ಟೇ ಹೊತ್ತ ವೈರಸ್‌ ಮಾನವ ಸಂಕುಲದ ಸಮೀಕರಣದ ಬದುಕಿನಲ್ಲಿ ಒಂದಾಗಿರುವ ಹಾಗೂ ಸಮಾನಾಂತರವಾದ ಸಂಗತಿಗಳನ್ನೂ ಕೊಟ್ಟಿರುವ ವಿಚಾರಗಳ ಅನುರಣನ CPUS-ನ ಮುಂದಿದೆ. ಹಾಗಾಗಿ ಈಗ ಅಂತಹಾ ಚರ್ಚೆಗಳಲ್ಲಿ ಜಾಗತಿಕವಾಗಿ ಏನಿವೆ? ಭಾರತದ ಸಂದರ್ಭದಲ್ಲಿ ಅವುಗಳ ಪ್ರಸ್ತುತತೆ ಏನು? ಜೊತೆಗೆ ಭಾರತೀಯಯವೇ ಆದ ವಿಶಿಷ್ಟ ವಿಚಾರಗಳಿವೆಯಾ? ನಮ್ಮ ವಾತಾವರಣದ ಪ್ರತ್ಯುತ್ತರ ಹೇಗಿದ್ದೀತು? ಮುಂದೆ ಈ ವೈರಸ್ ಉಳಿಸಿಹೋಗುವ ಪ್ರಶ್ನೆಗಳು ಇವೆಯಾ? ಮತ್ತು ಅವುಗಳ ಉತ್ತರಗಳು ಭಯರಹಿತ ವಿವೇಚನೆಯನ್ನು ಚರ್ಚೆಗಳಲ್ಲಿ ಭಾಗವಾಗಿಸುವ ಆಶಯದಿಂದ CPUS ಈ ವಾರಾಂತ್ಯದಲ್ಲಿ ಇವನ್ನೆಲ್ಲಾ ವಿವರವಾಗಿ ಹೊತ್ತು ತರಲಿದೆ. ಅದಕ್ಕಾಗಿ CPUS ವೆಬ್‌ ಪುಟವನ್ನು ಅನುಸರಿಸುತ್ತಲೇ ಸಂಸ್ಥೆಯನ್ನು ಬೆಂಬಲಿಸಿ.

ವಾರಾಂತ್ಯದಲ್ಲಿ ನಿಮ್ಮೊಡನೆ ವೈರಸ್ಸುಗಳು ನೈಸರ್ಗಿಕವಾಗಿ ಕಲಿಸಿದ ಪಾಠಗಳನ್ನೂ ಅವುಗಳ ಜೀವಿ ವೈಜ್ಞಾನಿಕ ವಿವರಗಳಿಂದ ಆರಂಭಿಸಿ, ವೈರಸ್ಸುಗಳ ಉಳಿಸಿಹೋಗುವ ಕುತೂಹಲಕರವಾದ ವಿಚಾರಗಳನ್ನೂ ಚರ್ಚಿಸುತ್ತೇವೆ. ಹಾಗೆಯೇ ಹೊಸ-ಹೊಸ ವೇರಿಯೆಂಟುಗಳ ಸಂಗತಿಗಳೂ ಕೂಡ. ಎಲ್ಲದಕ್ಕಿಂತಾ ಹೆಚ್ಚಾಗಿ ನಮ್ಮೊಳಗೇ ಒಂದಾಗುವ ವೈರಸ್ಸಿನ ವಿಜ್ಞಾನದ ಹೊಸ ಚರ್ಚೆಗಳ ಸಮೀಕರಣವು ಇವೆಲ್ಲಾ ಮಾಮೂಲಿ ಮಾಹಿತಿಗಳಲ್ಲಿ ಹದವಾಗಿ ಒಂದಾಗಿರುತ್ತದೆ.    

ಸದ್ಯದಲ್ಲೇ ಸಿಗೋಣ…

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್.‌

This Post Has 2 Comments

  1. PurushothamaRao H A

    ಉತ್ತಮ ಹಾಗೂ ಅತ್ಯವಶ್ಯಕ ವಿಚಾರ. ಕುತೂಹಲದಿಂದ ಕಾಯುತ್ತೇನೆ.👍

  2. ಕೃಷ್ಣಮೂರ್ತಿ

    ನಿಮ್ಮ ಬರಹಗಳು ಓದಲು,ಓದಿ “ತಿಳಿ”ಯನ್ನು ವಿಸ್ತರಿಸಲು ಸದಾ ಪ್ರೇರಾಣತ್ಮಕ… ಅಗಣಿತ ನಮನಗಳು

Leave a Reply