You are currently viewing ಕೊವಿಡ್‌ ಸೋಂಕು ಆಗದ ಸೂಪರ್‌ ಇಮ್ಯುನಿಟಿ! ನಿಮ್ಮಲ್ಲೊಬ್ಬರು ಇದ್ದಾರು….!

ಕೊವಿಡ್‌ ಸೋಂಕು ಆಗದ ಸೂಪರ್‌ ಇಮ್ಯುನಿಟಿ! ನಿಮ್ಮಲ್ಲೊಬ್ಬರು ಇದ್ದಾರು….!

ನಿಮ್ಮಲ್ಲಿ ಯಾರಿಗಾದ್ರೂ ಕೋವಿಡ್‌-19, ಖಂಡಿತಾ ಬಂದೇ ಇಲ್ಲ. ಸುತ್ತ-ಮುತ್ತ ಸಾಕಷ್ಟು ಹಾವಳಿಯಿದ್ದರೂ, ಅಷ್ಟೇಕೆ ಮನೆಯಲ್ಲೇ ಸೋಂಕು ಬಂದವರಿದ್ದರೂ ನನಗೇನೂ ಆಗಲೇ ಇಲ್ಲ, ಎನ್ನಿಸಿದೆಯೇ? ಹಾಗಾದರೆ ನಿಮ್ಮನ್ನು ವಿಜ್ಞಾನದ ಪ್ರಪಂಚ ಭೇಟಿ ಮಾಡಲು ಇಷ್ಟ ಪಡುತ್ತದೆ. ಏಕೆಂದರೆ ನಿಮಗೆ ಖಂಡಿತಾ ಸೂಪರ್‌ ಇಮ್ಯುನಿಟಿ ಇರುವ ಸಾಧ್ಯತೆ ಇದೆ. ಅಷ್ಟೇ ಅಲ್ಲ, ನಿಮ್ಮ ಈ ವಿಶೇಷತೆಯು ನಿಸರ್ಗ ದತ್ತವಾದ ರೋಗನಿರೋಧಕವನ್ನು ಅರಿಯುವ ಹೊಸ ಮಾರ್ಗವೊಂದರ ಪತ್ತೆಗೆ ನೆರವಾಗಲಿದೆ.

       ಇದು ಬರೀ ಸುದ್ದಿಯಲ್ಲ! ನಿಜಕ್ಕೂ ಅಂತಹದ್ದೊಂದು ಸಾಹಸಕ್ಕೆ ವಿಜ್ಞಾನಿಗಳ ಅಂತರರಾಷ್ಟ್ರೀಯ ತಂಡವೊಂದು ಅಣಿಯಾಗಿದೆ. ಬ್ರೆಜಿಲ್‌ ನಿಂದ ಗ್ರೀಸ್‌ ದೇಶದಾಟಿ ಏಶಿಯಾದ ಬಾಂಗ್ಲಾ, ಜಪಾನ್‌ ವರೆಗಿನ ಅಗಲಕ್ಕೂ ಜಾಲವೊಂದನ್ನು ಸೃಷ್ಟಿಸಿಕೊಂಡು ತಂಡಕಟ್ಟಿಕೊಂಡು ಸುಮಾರು ಐವತ್ತಕ್ಕೂ ಹೆಚ್ಚು ವಿಜ್ಞಾನಿಗಳು ಇಂತಹದ್ದೊಂದು ಸಾಹಸಕ್ಕೆ ಅನುವಾಗಿದ್ದಾರೆ. ಗ್ರೀಸ್‌, ಅಮೆರಿಕ, ಫ್ರಾನ್ಸ್‌, ಕೆನಡಾ, ಐರ್ಲೆಂಡ್‌, ಇಟಲಿ, ಸ್ಪೈನ್‌, ಬೆಲ್ಜಿಯಂ, ಬ್ರೆಜಿಲ್‌, ನೆದರ್‌ಲ್ಯಾಂಡ್‌, ಯುಕ್ರೇನ್‌, ಸ್ವಿಜರ್‌ಲ್ಯಾಂಡ್‌, ಅಸ್ಟ್ರೇಲಿಯಾ, ಜಪಾನ್‌, ಡೆನ್‌ಮಾರ್ಕ್‌, ಟರ್ಕಿ, ಸ್ವೀಡನ್‌, ಚೀನಾ, ಪೊಲೆಂಡ್‌, ರಷಿಯಾ, ಸಿಂಗಪುರ್‌, ಬಾಂಗ್ಲಾದೇಶ್‌, ಆಸ್ಟ್ರಿಯಾ, ಯು.ಎ.ಇ. ಮೊದಲಾದ ದೇಶಗಳ ವಿಜ್ಞಾನಿಗಳು ಈ ತಂಡದಲ್ಲಿದ್ದಾರೆ. ಇಡೀ ತಂಡಕ್ಕೆ ನಿಸರ್ಗದತ್ತವಾದ ಪ್ರತಿರೋಧವನ್ನು ಒಡ್ಡುವ ಜೀನನ್ನು ಪತ್ತೆ ಹಚ್ಚುವ ಬಗ್ಗೆ ಅಚಲ ವಿಶ್ವಾಸವನ್ನೂ ಸಹಾ ಹೊಂದಿದ್ದಾರೆ.      

       ಸ್ವಾಭಾವಿಕವಾಗಿ ಇವರ ಉದ್ದೇಶ ಮತ್ತು ವಿಶ್ವಾಸವನ್ನು ನೋಡಿದರೆ ಎಂತಹವರೂ ಮೆಚ್ಚಬೇಕು ತಾನೆ. ಈಗಾಗಲೇ ಅನೇಕ ವಿಜ್ಞಾನಿಗಳೂ ಸಹಾ “ಎಂತಹಾ ಸೊಗಸಾದ ಕಲ್ಪನೆ-(It’s a terrific idea)”,  ನಿಜಕ್ಕೂ, ಅತ್ಯಂತ ಬುದ್ದಿಂವತಿಕೆಯ ಕೆಲಸ (Really, a wise thing to do), ವಾವ್‌, ಇದು ಅತ್ಯದ್ಭುತ(Wow, It’s amazing), ಎಂದೆಲ್ಲಾ ಪ್ರಶಂಸೆಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

ಆದರೆ, ಅಂತಹವರನ್ನು ಹುಡುಕುವುದಾದರೂ ಹೇಗೇ? ಎಂದು ಟೆಕ್ಸಾಸ್‌ ವಿಶ್ವವಿದ್ಯಾಲಯದ ಡಾ. ಸುನಿಲ್‌ ಅಹುಜಾ ಎಂದು ಮರು ಪ್ರಶ್ನಿಸಿದ್ದಾರೆ. ಅದೇನೋ ನಿಜವೇ ಹುಡುಕಿ ಸಫಲರಾಗುವುದೂ ಸುಲಭವೇನೂ ಅಲ್ಲ ಎಂಬ ಅಭಿಪ್ರಾಯದಲ್ಲೇ ತಂಡವು ವಿಶ್ವಾಸದಿಂದ ಈಗಾಗಲೆ ಸುಮಾರು 500 ಜನರನ್ನು ಅಧ್ಯಯನದಲ್ಲಿ ತೊಡಗಿಸಿಕೊಂಡಿದೆಯಂತೆ. ಸುಮಾರು ಒಂದು ಸಾವಿರ ಜನಗಳನ್ನಾದರೂ  ಒಟ್ಟಾರೆ ಅಧ್ಯಯನದಲ್ಲಿ ಬಳಸಿಕೊಳ್ಳುವ ಉದ್ದೇಶ ಈ ಯೋಜನೆಯದು. ಹಾಗಾಗಿ ಇನ್ನು ಮುಂದಿನ 5-6 ನೂರು ಜನರನ್ನು ಭಾರತ, ರಷಿಯಾ ಮುಂತಾದ ದೇಶಗಳಿಂದ ಆರಿಸಿಕೊಳ್ಳುವ ಉದ್ದೇಶವನ್ನು ತನ್ನ ಗುರಿಯಲ್ಲಿ ಇರಿಸಿಕೊಂಡಿದೆ. ಸಾವಿರ ಜನರು ನೊಂದಾಯಿಸಿಕೊಂಡ ಮೇಲೆ ಸಿಗುವ ಗ್ಯಾರಂಟಿಯೇನೂ ಇಲ್ಲ. ಏಕೆಂದರೆ ನಿಮಗೆ ಸಾಕಷ್ಟು ಜನರೊಡನೆ ಓಡಾಡಿಕೊಂಡೂ, ಅವರಿಗೆಲ್ಲಾ ಶೀತ, ನೆಗಡಿ, ಜ್ವರ ಅಷ್ಟೇ ಅಲ್ಲಾ ಕೊರೊನಾ ಅಂತಾ ಗೊತ್ತಾಗಿಯೂ ನೀವು ಅವರ ಮನೆಯವರೇ ಆಗಿದ್ದೂ ನಿಮಗೆ ಕೊರೊನಾ ಸೋಂಕು ಬಾರದಿರುವ ವಿಶೇಷತೆಯನ್ನು ಹುಡುಕುವುದಾದರೂ ಏಕೆ? ಹೇಗೆ?  

ಗ್ರೀಸ್‌ ದೇಶದ, ಅಥೆನ್ಸ್‌ ಅಕಾಡೆಮಿಯ ಬಯೊಮೆಡಿಕಲ್‌ ಸಂಶೋಧನಾ ಪ್ರತಿಷ್ಠಾನದಲ್ಲಿ, ಇಮ್ಯನಾಲಜಿಸ್ಟ್‌. ಆಗಿದ್ದು, ಅಧ್ಯಯನ ತಂಡವನ್ನು ಮುನ್ನಡೆಸುತ್ತಿರುದ ಇವಾಂಜೆಲಸ್‌ ಆಂಡ್ರೆಕಸ್‌ (Evangelos Andreakos) ಸ್ವತಃ ಒಬ್ಬರೇ ಒಬ್ಬ ವ್ಯಕ್ತಿ ಅಂತಹಾ ಸೋಂಕನ್ನೇ ಪಡೆದಿರದೆ ಇದ್ದರೂ ಸಾಕು. ಅಂತಹವರ ಹುಡುಕಾಟ ವಿಜ್ಞಾನ ಜಗತ್ತಿಗೆ ಮಹತ್ವವಾದೊಂದನ್ನು ನೀಡಲಿದೆ ಎಂಬ ವಿಶ್ವಾಸ ಉಳ್ಳವರಾಗಿದ್ದಾರೆ. ಪ್ರಸ್ತುತ ಜಾಗತಿಕವಾಗಿ ಕರೆ ನೀಡಿರುವ ಹಿನ್ನೆಲೆಯಲ್ಲಿ ಖಂಡಿತಾ ಸಾಕಷ್ಟು ಎಕ್ಸ್‌ಪೊಸ್‌ ಆಗಿಯೂ ಸೋಂಕು ಆಗದವರು ಅಧ್ಯಯನದಲ್ಲಿ ಒಳಗೊಳ್ಳುವಂತೆ ಭಾಗವಹಿಸುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂಬ ವಿಶ್ವಾಸ ರಾಕೆಫೆಲ್ಲರ್‌ ವಿಶ್ವವಿದ್ಯಾಲಯದ ಆನುವಂಶಿಕ ವಿಜ್ಞಾನಿ ಜೀನ್‌ ಲಾರೆಂಟ್‌ ಅವರದ್ದು.  ಜೀನ್‌ ಲಾರೆಂಟ್‌ ಅವರು ಈ ಕೊರೊನಾ ಆನುವಂಶಿಕ ಸಂಗತಿಗಳು, ಮಾನವ ಪ್ರತಿರೋಧದ ಜಿನೆಟಿಕ್ಸ್‌ ಇತ್ಯಾದಿಗಳನ್ನು ನಿರ್ವಹಿಸುವ ಪ್ರಾಯೋಗಿಕ ಸಂಗತಿಗಳನ್ನು ವಿವರಿಸಿದ್ದಾರೆ. ಸುಮಾರು ನಾಲ್ಕೂವರೆ ನಿಮಿಷದ ವಿಡೀಯೊ ಅನ್ನು ಯೂಟ್ಯೂಬ್‌ ಅಲ್ಲಿ ನೋಡಬಹುದು. (https://www.youtube.com/watch?v=HAlSK4rN2pQ )

ಅಧ್ಯಯನ ತಂಡವು ಯಾರಾದರೂ ದಂಪತಿಗಳಲ್ಲಿ ಒಬ್ಬರು ಸೋಂಕಿಗೆ ಒಳಗಾಗಿ ಅವರಲ್ಲಿ ಮತ್ತೊಬ್ಬರೂ, ಸೋಂಕನ್ನೇ ಒಳಗೊಳ್ಳದೆ ಸಹಜವಾಗಿ ಇದ್ದವರು ಸಿಕ್ಕರೆ ಅತ್ಯದ್ಭುತ ಎಂದಿದೆ. ಅಥವಾ ಸೋಂಕು ಉಂಟಾದವರ ಮನೆಯಲ್ಲಿಯೇ ಇದ್ದೂ ಸಹಜವಾಗಿ ಬೆರೆತೂ ಸೋಂಕೂ ಬಾರದಿರುವ ವ್ಯಕ್ತಿ ಸಿಕ್ಕಾರೆಯೇ ಎಂದುಕೊಂಡಿದೆ. ಏಕೆಂದರೆ ಅಂತಹವರನ್ನು ಅಧ್ಯಯನ ತಂಡವು ಭಿನ್ನಾಸಾಮ್ಯತೆಯ ಜೋಡಿ (Discordant couples) ಎಂದು ಹೆಸರಿಸಿದೆ. ಹಾಗಿದ್ದಾಗ ಅಂತಹ ವ್ಯಕ್ತಿಯಲ್ಲಿನ ವಿಶೇಷತೆಗಳ ವಿವರಗಳೇನು ಮತ್ತೆ ಅದರ ಆನ್ವಯಿಕ ಸಂಗತಿಗಳೇನು ಮುಂದೆ ನೋಡೋಣ.

ಕೊರೊನಾದಿಂದಾಗಿ 2019 ರಿಂದ ಈ ವರೆವಿಗೂ ಜಾಗತಿಕವಾಗಿ ಸುಮಾರು 200 ದಶಲಕ್ಷ ಜನರು ಸೋಂಕಿಗೆ ಒಳಗಾಗಿ ಏನಿಲ್ಲವೆಂದರೂ 7-8 ದಶಲಕ್ಷ ಜನರ ಮರಣಕ್ಕೆ ಕಾರಣವಾಗಿದೆ. ಸಾಲದಕ್ಕೆ ಪ್ರತಿಶತ 90ರಷ್ಟಾದರೂ ಸ್ವಲ್ಪವಾದರೂ ಸೋಂಕಿಗೆ ಒಳಗಾಗಿಯೇ ಇದ್ದಾರೆ. ಸುಮಾರು 2 – 10 % ಜನರು ಆಸ್ಪತ್ರೆಯ ದಾಖಲಾತಿ, ವಿಶೇಷ ಚಿಕಿತ್ಸೆಯ ಅವಶ್ಯಕತೆಗೆ ಒಳಗಾಗಿದ್ದರು. ಇಂತಹದರಲ್ಲಿ ತಮ್ಮೊಳಗೆ ವೈರಸ್ಸನ್ನು ದಾಟಿಸಿಕೊಳ್ಳದವರು ಯಾರು ಎಂಬುದು ಬಲು ದೊಡ್ಡ ಪ್ರಶ್ನೆ! ಹಾಂ..! ನಿಜ ಇದೇ ಅಧ್ಯಯನದ ಗುರಿಯಲ್ಲಿಯೂ ಇರುವ ಹುಡುಕಾಟ. ದೇಹವನ್ನು ದಾಟದಂತೆ ಮಾಡಿದ ಮಾಂತ್ರಿಕ ಇಮ್ಯುನ್‌ ವ್ಯವಸ್ಥೆಯ ಹುಡುಕಾಟ.

ಅದಕ್ಕಾಗಿ ಅಧ್ಯಯನದಲ್ಲಿ ಪಾಲ್ಗೊಳ್ಳುವ ವ್ಯಕ್ತಿಯು ಸಾಕಷ್ಟು ಕೊರೊನಾ ವೈರಸ್ಸಿನ ವಾತಾವರಣಕ್ಕೆ ತೆರೆದುಕೊಂಡವರಾಗಿರಬೇಕು. ಕೊರೊನಾ ಬಂದವರ ಮನೆಯರಾಗಿದ್ದರೆ ಒಳ್ಳೆಯದು. ಅಂತಹವರ ಜೊತೆ ಸಾಕಷ್ಟು ದಿನಗಳನ್ನು ಕಳೆದವರಾಗಿರಬೇಕು. ಹಾಗಿದ್ದೂ ಅವರನ್ನು (PCR) ಟೆಸ್ಟ್‌ ಒಳಪಡಿಸಿದಾಗ ನೆಗೆಟಿವ್‌ ಬಂದಿರಬೇಕು. ಸಾಲದಕ್ಕೆ T ಜೀವಿಕೋಶಗಳ ಪ್ರತಿಕ್ರಿಯೆಯ ಟೆಸ್ಟ್‌ನಲ್ಲೂ ಪಾಸಾಗಿರಬೇಕು. ಅಂತಹವರನ್ನು ಸೇರಿಸಿಕೊಳ್ಳಲಾಗುತ್ತದೆ. ಮುಂದೆ ಅವರನ್ನು ಸಂಪೂರ್ಣ ಜೀನೋಮಿನ ಅಧ್ಯಯನಕ್ಕೂ ಸಾಲದಕ್ಕೆ ಕೊವಿಡ್‌ ಜೆನೆಟಿಕ್ಸ್‌ ಪ್ರತಿಕ್ರಿಯೆಯ ಅಧ್ಯಯನಗಳಲ್ಲೂ ಒಳಪಡಿಸಿ ಮುಂದುವರೆಸಲಾಗುತ್ತದೆ. ಕಡೆಗೂ ಅಧಿಕೃತವಾಗಿ ಅಂತಹಾ ವ್ಯಕ್ತಿಯನ್ನು ಗುರುತಿಸುವುದು ಕೊರೊನಾ ವೈರಸ್ಸು ಆತನ ಅಥವಾ ಆಕೆಯ ದೇಹವನ್ನು ಸೋಂಕು ಉಂಟುಮಾಡಿರಲೇ ಕೂಡದು. ನಿಜಕ್ಕೂ ಹುಡುಕಾಟ ಅಷ್ಟು ಸುಲಭವಲ್ಲ.. ಹೌದಾ..  ಅದನ್ನೇಲ್ಲಾ ಪ್ರತಿರೋಧದ ಕಾರ್ಯವಿಧಾನದಿಂದ ಪತ್ತೆ ಹಚ್ಚುವರು.   

ಪ್ರತಿರೋಧದ ಕಾರ್ಯವಿಧಾನ (Mechanisms of resistance)

ಪ್ರಸ್ತುತ ಅಧ್ಯಯನದಲ್ಲಿ ಸೋಂಕಿಗೆ ಒಳಗಾಗಬಹುದಾಗಿದ್ದರೂ ಸೋಂಕು ತಗಲದ ಬಗೆಗಿನ ಹುಡುಕಾಟದ ಗುರಿ ಇದ್ದು, ನಿಜಕ್ಕು ಅಂತಹಾ ವಿಶಿಷ್ಠ ಪ್ರತಿರೋಧದ ಕಾರ್ಯವಿಧಾನದ ಹಿಂದೆ ಹೋಗಲಿದ್ದಾರೆ. ಕೊರೊನಾ ವೈರಸ್ಸು (SARS-CoV-2)  ಸಾಮಾನ್ಯವಾಗಿ ಎಸಿಇ೨ ರೆಸೆಪ್ಟಾರ್‌ (ACE2 Receptor)  ಎನ್ನುವ ಗ್ರಾಹಕವೊಂದನ್ನು ಬಳಸಿ ಜೀವಿಕೋಶವನ್ನು ಸೇರುತ್ತದೆ. ಆದರೆ ವಿಜ್ಞಾನಗಳ ಊಹೆ ಏನೆಂದರೆ ಕೆಲವರಲ್ಲಾದರೂ ಈ ಜೀವಿಕೋಶದೊಳಗೆ ಪ್ರತಿಕ್ರಿಯಿಸುವ ಗ್ರಾಹಕವನ್ನು ಒಳಗೊಳ್ಳದಿರುವವರು ಇದ್ದಾರು, ಎಂಬುದಾಗಿದೆ. ಅಂತಹವರಲ್ಲಿನ ಜೀನುಗಳು ಎಸಿಇ೨ ರೆಸೆಪ್ಟಾರ್‌ (ACE2 Receptor) ಗ್ರಾಹಕವನ್ನು ಸ್ಪಂದಿಸದಂತೆ ತಡೆಯುತ್ತದೆ ಎಂಬ ತರ್ಕ. ಅಂತಹವರಲ್ಲಿ ವೈರಸ್ಸು ಜೀವಿಕೋಶವನ್ನು ದಾಟಿ ಒಳಹೋಗದಿರುವ ಸಾಧ್ಯತೆಯು ಹೆಚ್ಚು. ಇದೇ ಬಗೆಯ ಅನಮಾನವನ್ನು ಈ ಹಿಂದೆಯೂ ಏಯ್ಡ್ಸ್‌ ಕುರಿತಾಗಲೂ ಊಹಿಸಲಾಗಿತ್ತು. ಏಯ್ಡ್ಸ್‌ ವೈರಸ್ಸಿಗೆ 1990ರ ದಶಕದಲ್ಲಿ ಇಂತಹ ವಿಶಿಷ್ಠ ಪ್ರತಿರೋಧವನ್ನು ಕೆಲವರಲ್ಲಿ ಪತ್ತೆ ಹಚ್ಚಲಾಗಿತ್ತು. ಆಗ ಏಯ್ಡ್ಸ್‌ ವೈರಸ್ಸನ್ನು ಗ್ರಹಿಸುವ (CCR5 receptor) ಪ್ರತಿಕ್ರಿಯಾ ಗ್ರಾಹಕವನ್ನು ವಿಶಿಷ್ಟ ಬಗೆಯ ಮ್ಯಟೇಷನ್‌ ನಿಂದಾ ಕೆಲವರ ಜೀವಿಕೋಶದ ಜೀನುಗಳು ಏಯ್ಡ್ಸ್‌ ಬರದಂತೆ ತಡೆದಿದ್ದವು.

       ಪ್ರಸ್ತುತ ತುಂಬಾ ವ್ಯಾಪಕವಾದ ಕೊರೊನಾ ವೈರಸ್ಸಿನ ಗ್ರಾಹಕವನ್ನು ಒಳಗೊಳ್ಳದಂತೆ ಪ್ರತಿರೋಧಿಸುವ ವ್ಯಕ್ತಿಗಳು ಅಪರೂಪವಾದರೂ ಖಂಡಿತಾ ಇದ್ದಾರೆ. ಅವರಿಂದ ಪ್ರತಿರೋಧ ವ್ಯವಸ್ಥೆಯ ವಿಶಿಷ್ಠ ಸಂಗತಿಗಳು ತಿಳಿದಾವು ಎಂಬ ವಿಶ್ವಾಸ ಈ ವಿಜ್ಞಾನಿಗಳದ್ದು. ಇಡೀ ತಂಡದಲ್ಲಿ COVID Human Genetic Effort  ಎಂಬ ಜಾಗತಿಕ ನೆಟ್‌ವರ್ಕ್‌ ಕೂಡ ಇದ್ದು ಅದು ಅನೇಕ ದೇಶಗಳ ವಿಜ್ಞಾನಿಗಳನ್ನು ಒಳಗೊಂಡಿದೆ.    

       ಇದೆಲ್ಲಾ ಸೂಪರ್‌ ಇಮ್ಯುನಿಟಿಯ ಜೊತೆಗೆ ಪುಟ್ಟ ಮಕ್ಕಳಿಗೇಕೆ ಕೊವಿಡ್‌ ಅಂತಹಾ ತೊಂದರೆಯನ್ನು ಕೊಟ್ಟಿಲ್ಲ ಎಂಬ ಮತ್ತೊಂದು ಮಹತ್ತರವಾದ ಎಳೆಯ ಮಕ್ಕಳ ಇಮ್ಯುನಿಟಿಯ ಬಗೆಗೂ ಜಾಗತಿಕ ಕೂತೂಹಲವೂ ಒಂದಿದೆ. ಸಾಧ್ಯವಾದಲ್ಲಿ ಅದರ ಮಹತ್ವದೆಡೆಗೂ ಒಮ್ಮೆ ಇಣುಕಿನೋಡೋಣವಂತೆ!

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್

ಹೆಚ್ಚಿನ ಓದಿಗೆ.

Evangelos Andreako et al. 2021. A global effort to dissect the human genetic basis of resistance to SARS-CoV-2 infection. Nature Immunology. https://doi.org/10.1038/s41590-021-01030-z

Paul bastard et al. 2021. Autoantibodies neutralizing type I IFNs are present in ~4% of uninfected individuals over 70 years old and account for ~20% of COVID-19 deaths.  (ಸುಮಾರು 200 ಜನ ವಿಜ್ಞಾನಿಗಳ ಒಟ್ಟು ಕೆಲಸದ ಪ್ರತಿಫಲ ಈ ಪ್ರಬಂಧ) https://www.science.org/doi/10.1126/sciimmunol.abl4340

This Post Has One Comment

  1. ಬಿ ಎಸ್ ಕೃಷ್ಣಮೂರ್ತಿ

    ಬರಹ ಇಷ್ಟವಾಯಿತು ಸರ್..

Leave a Reply