You are currently viewing ಕರ್ನಾಟಕ – ಬಹುತ್ವದ ಆಯಾಮಗಳು

ಕರ್ನಾಟಕ – ಬಹುತ್ವದ ಆಯಾಮಗಳು

ನಮಸ್ಕಾರ. ಈಗಷ್ಟೇ ನವೆಂಬರ್‌ ತಿಂಗಳನ್ನು ಕಳೆದಿದ್ದೇವೆ. ನವೆಂಬರ್‌ ಕನ್ನಡಿಗರಾಗಷ್ಟೇ ಉಳಿಯದೆ ಕರ್ನಾಟಕದ ಸಂಸ್ಕೃತಿ ಮತ್ತು ಕನ್ನಡ ಭಾಷೆಯನ್ನು ಉಳಿಸಿಕೊಂಡು ಬೆಳೆಯಬೇಕಾದರೆ, ಈ ನಾಡಿನ ಇತಿಹಾಸ, ಕಾವ್ಯ, ಸಮಾಜದ ಓದು ಮತ್ತು ತಿಳಿವಳಿಕೆ ಬಹಳ ಮುಖ್ಯ. ಈ ನಿಟ್ಟಿನಲ್ಲಿ ಅಂತಹ ಅರಿವಿನ ದೀಪವನ್ನು ಹಚ್ಚುವಲ್ಲಿ ನಿಷ್ಠೆಯಿಂದ ತಮ್ಮ ಜೀವಿತಾವಧಿಯ ಕೊನೆಗಾಲದವರೆಗೂ ದುಡಿದವರು, ದೇಶ ಕಂಡ ಶ್ರೇಷ್ಠ ಇತಿಹಾಸಕಾರ ಪ್ರೊ. ಷಡಕ್ಷರಿ ಶೆಟ್ಟರ್.‌ ಅವರ ಮೂರು ಪ್ರಮುಖ ಭಾಷಣ ಹಾಗೂ ಒಂದು ಮುನ್ನುಡಿಯನ್ನು ಒಳಗೊಂಡಿರುವ ಕಿರು ಪುಸ್ತಕ ” ಕರ್ನಾಟಕ – ಬಹುತ್ವದ ಆಯಾಮಗಳು ” ಅನ್ನು ಇಂದು ನಾನು ಪರಿಚಯಿಸುತ್ತಿದ್ದೇನೆ. ಈ ಪುಸ್ತಕದ ಮೂಲಕ ಪ್ರೊ. ಶೆಟ್ಟರ್‌ , ಕರ್ನಾಟಕ ರಾಜ್ಯೋತ್ಸವ ಸಂಭ್ರಮಾಚರಣೆಯ ಆಚೆಗೆ ಕನ್ನಡ ಸಂಸ್ಕೃತಿಯನ್ನು ನಿರಂತರವಾಗಿ ಅರಿಯುವ, ಬೆಳೆಸಿ ಕಟ್ಟುವ ಜರೂರು ಹಾಗೂ ಮಾರ್ಗಗಳ ಬಗ್ಗೆ ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಇತಿಹಾಸವನ್ನು ನಾವು ಏಕೆ ಓದಬೇಕು ಮತ್ತು ಇತಿಹಾಸಕಾರರ ಕೆಲಸವೇನು? ಇದು ಬಹಳ ಮೂಲಭೂತ ಪ್ರಶ್ನೆ. ಇದಕ್ಕೆ ಇತಿಹಾಸಕಾರ ಮತ್ತು ಚಿಂತಕರಾದ ಶ್ರೀ ಇ.ಎಚ್.‌ ಕಾರ್‌ ಅವರು ತಮ್ಮ ಪ್ರಸಿದ್ಧ ಪುಸ್ತಕ ” What is History ” ಯಲ್ಲಿ ಹೀಗೆ ಬರೆಯುತ್ತಾರೆ – ” The function of the historian is neither to love the past nor to emancipate himself from the past, but to master and understand it as the key to the understanding of the present. Great history is written precisely when the historians vision of the past is illuminated by insight into problems of the present .  The function of history is to promote a profounder understanding of both past and present through the interrelation between them” ( What is History? by E H Carr, London, 1961, pp. 20, 31, 62.) ಅಂದರೆ ಇತಿಹಾಸದ ಓದು ಮತ್ತು ಬರವಣಿಗೆ, ನಮ್ಮ ಇಂದಿನ ಬದುಕು ಹಾಗೂ ನಿನ್ನೆಯ ಬದುಕುಗಳ  ತಿಳಿವಳಿಕೆ  ಹಾಗೂ ಇವೆರಡರ ಸಂಬಂಧಗಳನ್ನು ಅರಿಯುವ ಸಾಧನವಾಗಬೇಕೆಂದು ಅವರ ಅಭಿಪ್ರಾಯ. ಈ ಮಾತಿಗೆ ಅಪ್ಪಟ ಉದಾಹರಣೆಯಂತೆ ಬದುಕಿದವರು ಪ್ರೊ. ಶೆಟ್ಟರ್‌. ಈ ಪುಸ್ತಕ ಕೂಡ ಇದೇ ತತ್ವವನ್ನು ಸಾರುತ್ತದೆ ಕೂಡ.

” ಕರ್ನಾಟಕ – ಬಹುತ್ವದ ಆಯಾಮಗಳು” ಒಂದು ಕಿರು ಪುಸ್ತಕ. ಆದರೆ ವಿಚಾರಗಳ ದೃಷ್ಠಿಯಿಂದ ಅತ್ಯಂತ ವೈವಿಧ್ಯತೆಯನ್ನು ಹೊಂದಿರುವ, ಜನಸಾಮಾನ್ಯರು ಹಾಗೂ ವಿಚಾರತಜ್ಞರು ಇಬ್ಬರನ್ನೂ ಸಮಾನವಾಗಿ ತಲುಪುವ ಪುಸ್ತಕ. ಈ ಮೊದಲೇ ಹೇಳಿದಂತೆ ಈ ಪುಸ್ತಕದಲ್ಲಿ ಒಟ್ಟು ನಾಲ್ಕು ಅಧ್ಯಾಯಗಳಿವೆ. ಅವುಗಳ ಹಿನ್ನೆಲೆ ಮತ್ತು ಪ್ರೊ.ಶೆಟ್ಟರ್‌ ಆ ಲೇಖನಗಳಲ್ಲಿ ಚರ್ಚಿಸಿರುವ ಪ್ರಮುಖ ವಿಚಾರಗಳ ಬಗ್ಗೆ ಒಂದೊಂದಾಗಿ ಮುಂದಿನ ಪ್ಯಾರಾಗಳಲ್ಲಿ ನೋಡೋಣ.

ಅವರ ಮೊದಲ ಲೇಖನ “ಕಲ್ಲ ತಿನ್ನುವ ಪ್ರಾಣಿಗಳು ಬಂದಾವ ನೋಡಾ…”, 2014 ರಲ್ಲಿ ಕಂಪ್ಲಿಯಲ್ಲಿ ಜರುಗಿದ ಬಳ್ಳಾರಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅವರ ಅಧ್ಯಕ್ಷ ಭಾಷಣ. ಈ ಲೇಖನದ ಮೂಲಕ ಅವರು ಬಳ್ಳಾರಿ ಜಿಲ್ಲೆಯ ಹಾಗೂ ಆ ಮೂಲಕ ಕರ್ನಾಟಕದ ಇತಿಹಾಸದ ಮಜಲುಗಳನ್ನು ಶಿಲಾಯುಗದಿಂದ ಹಿಡಿದು, ಪ್ರಾಚೀನ ಇತಿಹಾಸ, ಮಧ್ಯಕಾಲೀನ ಇತಿಹಾಸ , ಆಧುನಿಕ ಇತಿಹಾಸ ಹಾಗೂ 2014 ರ ಸನ್ನಿವೇಶಗಳವರೆಗೆ ಎಲ್ಲವನ್ನೂ ವಿವರಿಸಿದ್ದಾರೆ. ಸಾಮ್ರಾಟ ಅಶೋಕನ ಮೌರ್ಯ ಸಾಮ್ರಾಜ್ಯದ ದಕ್ಷಿಣದ ಗಡಿ ಬಳ್ಳಾರಿಯ ಸುತ್ತಮುತ್ತಲ ಪ್ರದೇಶವಾಗಿತ್ತು (ಅಂದರೆ ಪರೋಕ್ಷವಾಗಿ ಕರ್ನಾಟಕ ಪ್ರದೇಶ) ಹಾಗೂ ಇಲ್ಲೇ ಅಶೋಕ ಕರ್ನಾಟಕಕ್ಕೆ ಮೊದಲ ಬಾರಿಗೆ ಅಕ್ಷರಗಳ ಸಖ್ಯದ ಲಿಪಿಯನ್ನು ಪರಿಚಯಿಸಿದ್ದು ಎಂಬ ಕುತೂಹಲಕಾರಿ ಅಂಶವನ್ನು ಹೇಳುತ್ತಾ, ಹೇಗೆ ಅಶೋಕ ತನ್ನ ಕಿರುಬಂಡೆ ಶಾಸನಗಳ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಬೇಕಾದ ತಳಹದಿಯನ್ನು ನಿರ್ಮಿಸಲು ಪ್ರಯತ್ನಪಟ್ಟಿದ್ದ ಎಂಬುದನ್ನು ವಿವರಿಸಿದ್ದಾರೆ. ಅಶೋಕ ಬರೆಸಿರಬಹುದಾದ ಕಿರುಬಂಡೆ ಶಾಸನಗಳೇ ಅವನ ಮೊದಲ ಶಾಸನ ಬರೆಸುವ ಪ್ರಯತ್ನವಾಗಿತ್ತು ಹಾಗೂ ಈ ಶಾಸನಗಳಲ್ಲಿ ಧರ್ಮ ಪ್ರಸಾರಕ್ಕಿಂತ ಹೆಚ್ಚಾಗಿ ನಾಗರಿಕ ಸಮಾಜಕ್ಕೆ ಬೇಕಾದ ಮೂಲ ಗುಣಗಳ ಬಗ್ಗೆ ತಿಳಿಸಿದ ಅವನ ಕಾರ್ಯಗಳು, ಭಾರತೀಯ ಇತಿಹಾಸದಲ್ಲಿ ವಿಶಿಷ್ಠ ನಡೆಯಾಗಿತ್ತು ಎಂದು ಹೆಮ್ಮೆ ಪಡುವಂತೆ ವಿವರಿಸಿದ್ದಾರೆ. ಶ್ರೇಷ್ಠ-ಅನಿಷ್ಟ ಗಳೆಂಬ ತಾರತಮ್ಯವಿದ್ದ  ಕರ್ಮ ಸಿದ್ಧಾಂತವನ್ನು ವಿಮರ್ಶಿಸುತ್ತಾ ಆಶೋಕ ತಿಳಿಹೇಳಿದ ” ಅತಿ ಕೆಳಮಟ್ಟದವರೆನಿಸಿಕೊಂಡವರೂ ಸದ್ಗತಿ ಹೊಂದಬಲ್ಲರು. ಆದರೆ ಅದಕ್ಕಾಗಿ ಅವರು ಸ್ವತಃ ಶ್ರಮ ಪಡಬೇಕು. ಶ್ರಮಿಸದೇ ಏನನ್ನೂ ಸಾಧಿಸಲಾಗದು. ಶ್ರಮಿಸಿದರೆ ಏನನ್ನೂ ಬೇಕಾದರೂ ಸಾಧಿಸಬಹುದು” ಎಂಬ ಆಶಾಭಾವದ ಮಾತನ್ನು ಒತ್ತು ನೀಡಿ ನೆನಪಿಸಿದ್ದಾರೆ. ಸಾಮ್ರಾಟನೊಬ್ಬ ಸ್ವಸ್ಥ ಸಮಾಜಕ್ಕೆ ನೀಡಿದ ಇಂತಹ ಸಂದೇಶ ಇಂದಿಗೂ ಪ್ರಸ್ತುತವಾಗೇ ಇದೆ. ಹೀಗೆ ಅಶೋಕನ ಕಾಲದಿಂದ ಪ್ರಸ್ತುತ ಕಾಲದವರೆಗಿನ ಬಳ್ಳಾರಿ ಪ್ರದೇಶದ ಪ್ರಕೃತಿ, ಇತಿಹಾಸ, ಕಲೆ, ವಾಸ್ತುಶಿಲ್ಪ, ಸಾಹಿತ್ಯ, ಜನಜೀವನ ಮುಂತಾದ ವಿಷಯಗಳ ಬಗ್ಗೆ ಅತ್ಯಂತ ಸೂಕ್ಷವಾಗಿ ಹಾಗೂ ಸಂಕ್ಷಿಪ್ತವಾಗಿ ದಾಖಲಿಸಿದ್ದಾರೆ. ಈ ಎಲ್ಲದರ ಜೊತೆ ಅವರ ಹುಟ್ಟೂರಾದ ಹಂಪಸಾಗರದ ಬಾಲ್ಯ, ಶಿಕ್ಷಣ, ಸ್ವಾತಂತ್ಯ ಚಳುವಳಿ, ಭಾಷಾವಾರು ಪ್ರಾಂತ್ಯ ರಚನೆ ಮುಂತಾದ ಸ್ವ-ವಿಷಯಗಳೂ ಈ ಭಾಷಣ ರೂಪದ ಲೇಖನದಲ್ಲಿದೆ. ಕಡೆಯದಾಗಿ ಈ ವಿಶಿಷ್ಟ ಬಳ್ಳಾರಿ ಜಿಲ್ಲೆಯಲ್ಲಿ ಸಮಸ್ಯೆಗಳನ್ನು ಉಂಟು ಮಾಡಿದ ಗಣಿಗಾರಿಕೆ ವಿಚಾರಗಳನ್ನು ಪ್ರಸ್ತಾಪಿಸಿ, ಕಲ್ಲ ತಿನ್ನುವ ಪ್ರಾಣಿಗಳು ಬಂದಾವ ನೋಡಾ ಎಂಬ ಕಾಲಜ್ಞಾನಿಯ ಮಾತುಗಳನ್ನು ನೆನಪಿಸುತ್ತಾ ಬಳ್ಳಾರಿಯ ಪರಿಸರ ನಾಶವಾಗುತ್ತಿರುವ ದುಗುಡದಿಂದ ಲೇಖನವನ್ನು ಮುಕ್ತಾಯ ಮಾಡಿದ್ದಾರೆ.

ಇನ್ನು ಎರಡನೆಯ ಲೇಖನ “ಹಳಗನ್ನಡ ಸಾಹಿತ್ಯದ ಪ್ರಸ್ತುತಿ”, 2018 ರಲ್ಲಿ ಶ್ರವಣಬೆಳಗೊಳದಲ್ಲಿ ನಡೆದ ಮೊದಲ ಅಖಿಲ ಭಾರತೀಯ ಹಳಗನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣ. ತಮ್ಮ ಮೊದಲ ಡಾಕ್ಟರೇಟ್‌ ಪದವಿಗಾಗಿ ಶ್ರವಣಬೆಳಗೊಳದ ಸ್ಮಾರಕಗಳ ಬಗ್ಗೆಯೇ ಸಂಶೋಧನೆ ಮಾಡಿದ್ದ ಪ್ರೊ.ಶೆಟ್ಟರ್‌, ಈ ಭಾಷಣದ ಮೂಲಕ ಹಳಗನ್ನಡ ಕುರಿತ ಅವರ ಮೆಚ್ಚುಗೆಯನ್ನು ಸೂಚಿಸುತ್ತಾ, ಈ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ಪ್ರಶ್ನೆಗಳು, ಸಮಸ್ಯೆಗಳು ಹಾಗೂ ಆಗಬೇಕಾದ ಕೆಲಸಗಳ ಬಗ್ಗೆ ಅತ್ಯಂತ ವಿಮರ್ಶಾತ್ಮಕವಾಗಿ ಮತ್ತು ಆಶಾದಾಯಕ ಮಾತುಗಳಲ್ಲಿ ಚರ್ಚಿಸಿದ್ದಾರೆ. ಹಳಗನ್ನಡ ಬರಹದ ಆರಂಭ, ಅವುಗಳನ್ನು 19 ಮತ್ತು 20 ನೆಯ ಶತಮಾನದಲ್ಲಿ ಪರಿಚಯಿಸಿದ ಹಲವು ವಿದೇಶಿ ಮತ್ತು ದೇಶಿ ಶಾಸನ ತಜ್ಞರು, ಹಳಗನ್ನಡ ಕಾವ್ಯಗಳು ಬೆಳಕಿಗೆ ಬಂದ ಹಿನ್ನೆಲೆ ಇವೆಲ್ಲವನ್ನೂ ವಿವರಿಸುತ್ತಾ ಇಂದು ಹಳಗನ್ನಡ ಸಾಹಿತ್ಯದ ಪ್ರಸ್ತುತಿಯ ಬಗ್ಗೆ ಗಮನಾರ್ಹವಾದ ವಿಚಾರಗಳನ್ನು ಬರೆದಿದ್ದಾರೆ. ಅದರ ಸಾರರೂಪವಾದ ಅವರ ಕೆಲವು ಮಾತುಗಳನ್ನು ನೋಡೋಣ:

” ಹಳಗನ್ನಡದ ಓದು ಈಗ ನಮಗೆಷ್ಟು ಪ್ರಸ್ತುತ? ಎಂಬ ಪ್ರಶ್ನೆಯನ್ನು ಕೆಲವರು ಆಗಾಗ ಎತ್ತುತ್ತಾರೆ. ಈ ಪ್ರಶ್ನೆಯ ಪ್ರಸ್ತುತಿಯನ್ನೇ ಮೊದಲು ಪ್ರಶ್ನಿಸಬೇಕಾಗಿದೆ. ಏಕೆಂದರೆ ಓದಲೊಲ್ಲದವರಿಗೆ ಯಾವ ಕಾಲದ ಸಾಹಿತ್ಯವೂ ಪ್ರಸ್ತುತವಾಗಲಾರದು. ಹಳಗನ್ನಡ ಓದು ಮಾತ್ರವಲ್ಲ, ನಡುಗನ್ನಡ ಮತ್ತು ಆಧುನಿಕ ಕನ್ನಡ ಓದಿನ ಬಗ್ಗೆಯೂ ಇಂತಹ ಪ್ರಶ್ನೆಗಳನ್ನು ಎತ್ತಬಹುದು”.

” ಹಳಗನ್ನಡದ ಓದಿನ ಬಗ್ಗೆ ಕೆಲವರಲ್ಲಿರುವ ಆತಂಕಗಳನ್ನು ನಾವು ಗಮನಿಸಬೇಕಾಗಿದೆ. ಈ ಆತಂಕವಿರುವುದು ಹಳಗನ್ನಡ ಕಾವ್ಯವಸ್ತುವಿನ ಬಗ್ಗೆಯಾಗಲಿ, ನಿರೂಪಣಾ ವಿಧಾನದ ಬಗ್ಗೆಯಾಗಲಿ ಅಲ್ಲ, ತಿಳಿವಳಿಕೆಗೆ ನಿಲುಕದ ಸಂಸ್ಕೃತಭೂಯಿಷ್ಠ ಪದಗಳ ಬಗ್ಗೆ ಮತ್ತು ಅವನ್ನು ಪೋಣಿಸಿರುವ ಬಗ್ಗೆ. ಇವು ಹಳಗನ್ನಡದ ಓದನ್ನು ಬಹುತೇಕರಿಗೆ ಜಟಿಲಗೊಳಿಸಿರುವುದಂತೂ ನಿಜ”.

“ಹಳಗನ್ನಡ ಕಾವ್ಯಗಳನ್ನು, ಶಾಸನಗಳನ್ನು ಓದುವವರಿಲ್ಲ ಎಂಬ ಆತಂಕವನ್ನು ಪುನಃ ಪುನಃ ಉಚ್ಚರಿಸುವ ಬದಲು, ಇವನ್ನು ಓದಲು ಹೇಗೆ ಆಕರ್ಷಿಸಬೇಕೆನ್ನುವುದರ ಬಗ್ಗೆ ನಾವೀಗ ಹೆಚ್ಚು ಗಮನಕೊಡಬೇಕಾಗಿದೆ”.

ಪುಸ್ತಕದ ಮೂರನೆಯ ಲೇಖನ “ಕರ್ನಾಟಕ ದರ್ಶನ – ಬಹುರೂಪಿ ಆಯಾಮಗಳು”.  ಅವರು 2018 ರ ಆಳ್ವಾಸ್‌ ನುಡಿಸಿರಿಯಲ್ಲಿ ಮಾಡಿದ ಉದ್ಘಾಟನಾ ಭಾಷಣ. ಪುಸ್ತಕದ ಶೀರ್ಷಿಕೆಯ ಹೂರಣ ಈ ಲೇಖನದಲ್ಲಿದೆ. ಇಲ್ಲಿ ಸರ್ವಜನಾಂಗದ ಶಾಂತಿಯ ತೋಟವೆಂದು ಕರೆದಿರುವ ಕರ್ನಾಟಕದ ಇತಿಹಾಸವನ್ನು ವಿವೇಚಿಸಿದ್ದಾರೆ ಪ್ರೊ ಶೆಟ್ಟರ್.  ಇಂದು ಕರ್ನಾಟಕವೆನ್ನುವ ನಮ್ಮ ನಾಡಿನಲ್ಲಿ  ಅಕ್ಷರ ಸಂಸ್ಕೃತಿ ಶುರುವಾದ ಸುಮಾರು ಎರಡು ಸಹಸ್ರಮಾನಕ್ಕಿಂತಲೂ ಹೆಚ್ಚಿನ ಅವಧಿಯನ್ನು ಮೂರು ಸ್ಥೂಲ ಹಂತವಾಗಿ ಗುರುತಿಸಿದ್ದಾರೆ. ಅವುಗಳೆಂದರೆ,

1. ಕ್ರಿ.ಫೂ. ಮೂರರಿಂದ ಕ್ರಿ.ಶ. ಮೂರನೆಯ ಶತಮಾನದವರೆಗಿನ ಆರಂಭಕಾಲ – ಇದನ್ನು ಬೌದ್ಧಯುಗವೆಂದು

2. ಕ್ರಿ.ಶ. ನಾಲ್ಕರಿಂದ ಹನ್ನೆರಡನೆಯ ಶತಮಾನದವರೆಗಿನ ಅಭಿವೃದ್ಧಿಯ ಕಾಲ – ಇದನ್ನು ಬಹುತ್ವ ಸಮಾಜದ ಯುಗವೆಂದು

3. ಕ್ರಿ.ಶ. ಹನ್ನೆರಡನೆಯ ಶತಮಾನದಿಂದ ಇಂದಿನವರೆಗಿನ ಕಾಲ – ಇದನ್ನು ಸಂಘರ್ಷಯುಗವೆಂದು ವರ್ಗೀಕರಿಸಿದ್ದಾರೆ.

ಮೊದಲ ಹಂತದ ಸುಮಾರು ಆರು ನೂರು ವರ್ಷಗಳು ಬೌದ್ಧಧರ್ಮ, ಪ್ರಾಕೃತ ಭಾಷೆ ಹಾಗೂ ಬ್ರಾಹ್ಮೀ ಲಿಪಿಯ ಏಕಸ್ವಾಮ್ಯವನ್ನು ಕಾಣುತ್ತೇವಲ್ಲದೇ, ಕರ್ನಾಟಕದ ಸನ್ನತಿ, ಕನಗನಹಳ್ಳಿ, ಕೊಪ್ಪಳ ಇಲ್ಲೆಲ್ಲಾ ಬೌದ್ಧ ಧರ್ಮದ ಕುರುಹುಗಳು ನಿಚ್ಚಳವಾಗಿ ಕಂಡಿವೆ. ಇದು ಕರ್ನಾಟಕದ ಅಕ್ಷರ ಸಂಸ್ಕೃತಿಯ ಪಯಣದ ಆರಂಭ ಕಾಲ. ಆದರೆ ಎರಡನೆಯ ಹಂತದಲ್ಲಿ ಬೌದ್ಧಯುಗದ ಏಕಸ್ವಾಮ್ಯ ಅಂತ್ಯಗೊಂಡರೂ, ಅವರು ನಿರ್ಮಿಸಿದ ಬಹುತ್ವದ ಸಮಾಜಕ್ಕೇನೂ ಧಕ್ಕೆ ಇರಲಿಲ್ಲ. ಬೌದ್ಧ, ಜೈನ,ವೈದಿಕ,ಆಜೀವಿಕ, ಲಾಕುಳೀಶ ಶೈವ ಮುಂತಾದ ಧರ್ಮ ಮತ್ತು ಮತಗಳು ಸೌಹಾರ್ದಯುತವಾಗಿ ಬದುಕಿದ್ದ ಕಾಲಘಟ್ಟ ಇದು. ಇದನ್ನೇ ಅಲ್ಲಮನ ಬಳ್ಳಿಗಾವಿ ಮತ್ತು ಹೊಯ್ಸಳ ರಾಣಿ ಶಾಂತಲೆಯ ಉದಾಹರಣೆಯನ್ನು ಮೂಲಕ ನಿರೂಪಿಸಿದ್ದಾರೆ. ಆದರೆ ಮೂರನೆಯ ಹಂತದಲ್ಲಿ, ಬೌದ್ಧ ಮತ್ತು ಜೈನ ಮತಗಳ ಬಲ ಕಡಿಮೆಯಾದಂತೆ, ಸೌಹಾರ್ದಯುತ ಕರ್ನಾಟಕ ಸಮಾಜದಲ್ಲಿ ಹಿಂಸೆ ಮತ್ತು ಸಂಘರ್ಷ ಮುನ್ನೆಲೆಗೆ ಬರುತ್ತದೆ. ಇದು ಮುಂದೆ ನಾಡನ್ನು ಆಳಿದ ಯಾವ ಆಳರಸರಿಂದಲೂ ಶಮನಗೊಳ್ಳದೇ ಮುಂದುವರಿದಿದ್ದನ್ನು ತುಂಬಾ ಬೇಸರದಿಂದಲೇ ದಾಖಲಿಸಿದ್ದಾರೆ ಪ್ರೊ.ಶೆಟ್ಟರ್.‌ ಸಂಘರ್ಷವು ಒಂದು ಮತಕ್ಕೆ ಅಥವಾ ಒಂದು ಧರ್ಮಕ್ಕೆ ಸೀಮಿತವಾಗದೆ, ಸಾರ್ವತ್ರಿಕ ಪಿಡುಗಾಗಿ ಈ ಕಾಲದಲ್ಲಿ ಹಬ್ಬಿತ್ತೆಂಬುದು ಹಾಗೂ ಆಗ ಪ್ರಾರಂಭವಾದ ಈ ಸಂಘರ್ಷವೂ ಬಗೆಬಗೆಯ ರೂಪ ಪಡೆಯುತ್ತಾ ಇಂದಿಗೂ ಒಂದಿಲ್ಲೊಂದು ಬಗೆಯಲ್ಲಿ ಕಾಣಿಸಿಕೊಳ್ಳುತ್ತಲೇ ಇರುವುದು ಎಂದು ಅವರು ಸ್ಪಷ್ಟವಾಗಿ ಉದಾಹರಣೆಯ ಮೂಲಕ ತೋರಿಸಿದ್ದಾರೆ. ಜೊತೆಗೆ ವರ್ತಮಾನದ ಬೆಳಕಿನಲ್ಲಿ ನಮ್ಮ ಮುಂದೆ ಈ ಮೂರು ಹಂತಗಳ ವಿವರಣೆಗಳನ್ನಿಟ್ಟು, ಸಮಾಜ ಆಯ್ಕೆ ಮಾಡಿಕೊಳ್ಳುವ ತತ್ವವನ್ನು ಇತಿಹಾಸಕಾರನಾಗಿ ನಿಷ್ಠೆಯಿಂದ ದಾಖಲಿಸಬಲ್ಲೆ ಎಂದು ವಿನಮ್ರತೆಯಿಂದ ಹೇಳಿದ್ದಾರೆ.

ಅವರ ಕಡೆಯ ಲೇಖನ “ಹಳಗನ್ನಡ: ಸಂಶೋಧನೆಯ ದಾರಿಗಳು”, ಇನ್ನೂ ಬಿಡುಗಡೆಯಾಗಬೇಕಾದ ಅವರ ಮೊದಲ ಸಹಸ್ರಮಾನದ ಕನ್ನಡ ಶಾಸನಗಳು ಕೃತಿಗೆ ಬರೆದ ಮುನ್ನುಡಿ. ಮೊದಲ ಸಹಸ್ರಮಾನದ ಸುಮಾರು 2200 ಕ್ಕೂ ಹೆಚ್ಚು ಕನ್ನಡ ಶಾಸನಗಳನ್ನು ಒಂದು ಸಂಪುಟದಲ್ಲಿ ಮೊದಲ ಬಾರಿಗೆ ಕಲೆ ಹಾಕಿ, ಆ ಮೂಲಕ ಕರ್ನಾಟಕ ನೆಲ, ಸಮಾಜ ಮತ್ತು ಕನ್ನಡ ಭಾಷಾ ಸಂಶೋಧನೆಗೆ ಹೊಸ ಆಕರಗಳನ್ನು ನೀಡುವ ಪ್ರಯತ್ನ ಮಾಡಿದ್ದಾರೆ. ಇವೇ ಶಾಸನಗಳ ಆಧಾರದ ಮೇಲೆ,  ಲಿಪಿ, ಲಿಪಿಕಾರ ಮತ್ತು ಲಿಪಿವ್ಯವಸಾಯದ ಕುರಿತ “ಹಳಗನ್ನಡ ಭಾಗ-1” ಹಾಗೂ ಭಾಷೆ, ಭಾಷಾ ವಿಕಾಸ ಮತ್ತು ಭಾಷಾ ಬಾಂಧವ್ಯ ಕುರಿತ “ಹಳಗನ್ನಡ ಭಾಗ-2” ಪುಸ್ತಕಗಳು ಈಗಾಗಲೇ ಪ್ರಕಟಗೊಂಡಿವೆ. ಶಾಸನ ಸಂಪಾದನೆಯ ಆರಂಭದ ದಿನಗಳು, ನಂತರದ ಹಲವು ಸಂಪಾದನೆಗಳು, ಅವುಗಳಿಗಾಗಿ ದುಡಿದ ತಜ್ಞರು, ವಿವಿಧ ಪುಸ್ತಕಗಳಲ್ಲಿ ಹಂಚಿಹೋಗಿರುವ  ಶಾಸನ ಸಂಪತ್ತು, ಅವನ್ನು ಒಟ್ಟುಗೂಡಿಸಿ ನಿಯಮಿತವಾಗಿ ಸಂಪಾದನೆ ಮಾಡುವ ಜರೂರು ಹಾಗೂ ಈ ಸಂಪಾದನಾ ಕಾರ್ಯದ ರೂಪುರೇಷೆಗಳು,  ಹೀಗೆ ಶಾಸನ ಸಂಪಾದನೆ, ಪ್ರಕಟಣೆ ಮತ್ತು  ಅಧ್ಯಯನಕ್ಕೆ ಸಂಬಂಧಿಸಿದಂತೆ ವಿವಿಧ ಮಗ್ಗಲುಗಳನ್ನು ಈ ಲೇಖನದಲ್ಲಿ ಪರಿಚಯಿಸಿದ್ದಾರೆ ಪ್ರೊ. ಶೆಟ್ಟರ್.

ಈ ನಾಲ್ಕು ಬರಹಗಳುಳ್ಳ ಈ ಪುಸ್ತಕದ ಮಹತ್ವವೆಂದರೆ, ಏಕಕಾಲದಲ್ಲಿ ತಜ್ಞರಿಗೂ ಮತ್ತು ಜನಸಾಮಾನ್ಯರಿಗೂ ಕನ್ನಡ ಸಂಸ್ಕೃತಿಯ ತಿಳಿವಳಿಕೆ ಹಾಗೂ ಬೆಳವಣಿಗೆಗೆ ಬೇಕಾದ ಮೂಲಭೂತ ಚಿಂತನೆಯನ್ನು ಒದಗಿಸಿರುವುದು. ಹಾಗಾಗಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಉಳಿವನ್ನು ಬರೀ ನವೆಂಬರ್‌ ತಿಂಗಳ ಸಂಭ್ರಮಾಚರಣೆಯಲ್ಲಿ ಕಾಣದೇ ಅವಿರತವಾಗಿ ಕೆಲಸ ಮಾಡುತ್ತಾ ಕಟ್ಟಿ ಉಳಿಸಿ ಬೆಳೆಸಬೇಕಾದ ಕಾಯಕ ಚಿಂತನೆ ಈ ಎಲ್ಲಾ ಬರಹಗಳಲ್ಲಿದೆ.

ಪ್ರೊ. ಷ. ಶೆಟ್ಟರ್‌ ಅವರ ಬಗ್ಗೆ ಕೆಲವೊಂದು ಮಾತು. ಪ್ರೊ. ಶೆಟ್ಟರ್‌ ಮೈಸೂರು ವಿವಿಯಿಂದ ಇತಿಹಾಸದಲ್ಲಿ ಎಂ.ಎ ಪದವಿಯನ್ನು ಪಡೆದವರು. ಮುಂದೆ 1967 ರಲ್ಲಿ ಪ್ರೊ. ಜಿ.ಎಸ್.‌ ದೀಕ್ಷಿತ್‌ ಅವರ ಮಾರ್ಗದರ್ಶನದಲ್ಲಿ ಶ್ರವಣಬೆಳಗೊಳದ ಸ್ಮಾರಕಗಳ ಬಗ್ಗೆ ಸಂಶೋಧನೆ ಪೂರೈಸಿ ಕರ್ನಾಟಕ ವಿವಿಯಿಂದ ಡಾಕ್ಟರೇಟ್‌ ಪದವಿಯನ್ನು ಹಾಗೂ 1970 ರಲ್ಲಿ ಪ್ರಸಿದ್ದ ಕೇಂಬ್ರಿಡ್ಜ್‌ ವಿವಿಯಿಂದ ಹೊಯ್ಸಳ ದೇವಾಲಯಗಳ ವಾಸ್ತುಶಿಲ್ಪಗಳ ವಿಷಯವಾಗಿ ಮತ್ತೊಂದು ಡಾಕ್ಟರೇಟ್‌ ಪದವಿಯನ್ನು ಪಡೆದವರು. ಎಡ-ಬಲ ಎಂದು ಗುರುತಿಸಿಕೊಳ್ಳದೇ ಇತಿಹಾಸ ಅಧ್ಯಯನದಲ್ಲಿ ಮಧ್ಯಮ ಮಾರ್ಗವನ್ನು ತುಳಿದವರು. ಈ ಬಗ್ಗೆ ಅವರು ಅಜೀಂ ಪ್ರೇಮ್‌ಜಿ ವಿವಿಯಲ್ಲಿ ಟಿಪ್ಪು ಬಗ್ಗೆ ನೀಡಿದ ಉಪನ್ಯಾಸ ಕೇಳಿದರೆ ಸಾಕು. ಕರ್ನಾಟಕ ವಿವಿ, ಧಾರವಾಡದ ತಮ್ಮ ಅಧ್ಯಾಪನ ಅವಧಿಯಲ್ಲಿ ಬಹುಪಾಲು ಇಂಗ್ಲಿಷ್‌ ನಲ್ಲಿ ಬರವಣಿಗೆ ಮಾಡಿದ ಅವರು, ಬೆಂಗಳೂರಿನ ನಿಯಾಸ್‌ ನಲ್ಲಿ ಡಾ. ಎಸ್. ರಾಧಾಕೃಷ್ಣನ್‌ ಸಂದರ್ಶಕ ಪ್ರಾಧ್ಯಾಪಕರಾದ ನಂತರ ನಿರಂತರವಾಗಿ ಕನ್ನಡದಲ್ಲಿ ಬರೆಯುತ್ತಾ ಬಂದವರು. ಯಾರೂ ಹೆಚ್ಚು ಗಮನ ನೀಡದ ಹೊಸ ಹೊಸ ವಿಚಾರ ಮತ್ತು ಸಮಸ್ಯೆಗಳನ್ನು ಕೈಗೆತ್ತಿಕೊಂಡು, ಆ ಬಗ್ಗೆ ಕೂಲಂಕುಷ ಅಧ್ಯಯನ ಮಾಡುತ್ತಿದುದು ಅವರ ಹೆಗ್ಗಳಿಕೆ. ಎಷ್ಟೋ ಸ್ಥಾಪಿತ ನಿಲುವುಗಳನ್ನು ಗಟ್ಟಿ ದನಿಯಲ್ಲಿ, ಆಧಾರಗಳ ಸಮೇತ ಪ್ರಶ್ನಿಸುತ್ತಿದ್ದ ಸಮಚಿತ್ತದ ಸಂಶೋಧಕ. ಅವರ ಶಂಗಂ ತಮಿಳಗಂ ಮತ್ತು ಕನ್ನಡ ನಾಡು-ನುಡಿ ಕೃತಿಯಾಗಿರಬಹುದು, ಷೆಲ್ಡನ್‌ ಪೊಲಾಕ್‌ ಅವರ ಸಂಸ್ಕೃತ ಜಗದ್ವಲಯಕ್ಕೆ ಪ್ರತಿಯಾಗಿ “ಪ್ರಾಕೃತ ಜಗದ್ವಲಯ” ವನ್ನು ಮನದಟ್ಟು ಮಾಡಿಸಿದ್ದು, ವೈಷ್ಣವದಿಂದ ಶ್ರೀ ವೈಷ್ಣವದೆಡೆಗೆ ಮೂಲಕ ರಾಮಾನುಜಾಚಾರ್ಯರ ಆಗಮನಕ್ಕೆ ಮುಂಚೆಯೇ ಕರ್ನಾಟಕದಲ್ಲಿ ಬೇರು ಬಿಟ್ಟಿದ್ದ ವೈಷ್ಣವ ಧರ್ಮದ ಬೇರುಗಳು, ಹೀಗೆ ಒಂದೊಂದು ಕೃತಿಯಲ್ಲೂ ಹೊಸ ದಾರಿ ತುಳಿದ ಇತಿಹಾಸಕಾರ. ಅವರ ಬಗ್ಗೆ  ಹೆಚ್ಚಿನ ವಿವರಗಳು ಇಲ್ಲಿವೆ ನೋಡಿ. https://en.wikipedia.org/wiki/Shadakshari_Settar

ಕೊನೆಯದಾಗಿ ಅವರ ಮಾತುಗಳಿಂದಲೇ ಈ ಬರಹವನ್ನು ಮುಕ್ತಾಯಗೊಳಿಸುತ್ತೇನೆ. “ಹಳಗನ್ನಡ ಕವಿಗಳೆಲ್ಲರೂ ಅರಸೊತ್ತಿಗೆಯಡಿ ಬಾಳಿದವರು, ಬಹುತೇಕರು ಒಡ್ಡೋಲಗದಲ್ಲಿ ನಿಂತು ಕಾವ್ಯವನ್ನು ಗಟ್ಟಿದನಿಯಲ್ಲಿ ಓದಿದವರು.ಇವರ ಶೋತೃಗಳಲ್ಲಿ ಸಾಮಂತರು, ಅಧಿಕಾರಿಗಳು, ಪಂಡಿತರು, ಪುರೋಹಿತರು ಮಾತ್ರವಲ್ಲ; ಅರಸ-ಅರಸಿಯರೂ ಇರುತ್ತಿದ್ದರು. ಶೀಲ-ಅಶ್ಲೀಲವೆಂಬ ಭಿನ್ನತೆ ಬಗೆಯದೆ, ರಸಸ್ವಾದ ಮಾಡುವ ಗುಣವನ್ನು ಇವರೆಲ್ಲರೂ ಸಂಪಾದಿಸಿಕೊಂಡಿದ್ದರೆನಿಸುವುದು. ತಮಗೆ ರುಚಿಸದಿದ್ದುದನ್ನು ರುಚಿಸುವವರು ರುಚಿಸಿಕೊಳ್ಳಲೆಂಬ ಔದಾರ್ಯವನ್ನು ತೋರಿಸಿದವರಾಗಿದ್ದರು. ಹೀಗಾಗಿ ನಮ್ಮ ಯಾವ ಹಳಗನ್ನಡ ಕವಿಯೂ ಕಟಕಟಗೆ ಒಳಗಾಗುವ ಭೀತಿಯಿಂದ ಬಳಲಿಲ್ಲ. ನಮ್ಮ ಅರಸರಾದರೋ ಯಾವ ಗ್ರಂಥವನ್ನು ಯಾವ ಕಾರಣಕ್ಕೂ ಬಹಿಷ್ಕರಿಸಲಿಲ್ಲ, ಖಂಡನೆಗೆ ಗುರಿಪಡಿಸಲಿಲ್ಲ. ಅಂದಿನ ಪ್ರಜೆಗಳಾದರೋ ಮತ, ಧರ್ಮ, ಸಂಸ್ಕೃತಿ ರಕ್ಷಕರೆಂಬ ಮುಖವಾಡ ತೊಟ್ಟು, ಕವಿಯ ಸ್ವಾತಂತ್ರ್ಯವನ್ನು ಅಪಹರಿಸಿ ಅವರ ಮೇಲೆ ದಬ್ಬಾಳಿಕೆ ಮಾಡಲಿಲ್ಲ; ಕೃತಿಯನ್ನು ಹಿಂಪಡೆಯಲು ಒತ್ತಾಯಿಸಲಿಲ್ಲ. ಮುಕ್ತ ವಾತಾವರಣದಲ್ಲಿ ಈ ಬಗೆಯಲ್ಲಿ ರಚಿಸಿದ ಹಳಗನ್ನಡ ಕಾವ್ಯದ ಬಗ್ಗೆ , ಇದನ್ನು ರಚಿಸಿದ ಕವಿಗಳ ಬಗ್ಗೆ, ನಮಗೆ ಆಸಕ್ತಿ ಇರಬೇಡವೇ? ನಾನಂತೂ ಇವರ ಔದಾರ್ಯದ ಮನಸ್ಸಿಗೆ ಮಾರುಹೋಗಿದ್ದೇನೆ. ʼಕಸವರವೆಂಬುದು ನೆರೆಸೈರಿಸಲಾರ್ಪೊಡೆ ಪರ ವಿಚಾರಮಂ ಪರಧರ್ಮುಮಂ (ಪರರ ವಿಚಾರಗಳನ್ನು ಧರ್ಮಗಳನ್ನು ಸಮಾಜ ಸೈರಿಸುವುದೇ ನಿಜವಾದ ಸಂಪತ್ತು: ಕವಿರಾಜಮಾರ್ಗದ ಸಾಲುಗಳು)ʼ ಎಂಬ ಉಕ್ತಿಯನ್ನು ಕೇಳಿ ಮಂತ್ರಮುಗ್ಧನಾಗಿದ್ದೇನೆ”.

ನಮಸ್ಕಾರ,

ಆಕಾಶ್‌ ಬಾಲಕೃಷ್ಣ

ಹೆಚ್ಚಿನ ಓದಿಗೆ

೧. https://www.youtube.com/watch?v=ecoCGedkLKc&list=PLANvr62YQu5RQ84UrYfmr-tuNVJWI74cE&index=19  ಡಾ. ಎಸ್.‌ ಕೆ. ಅರುಣಿ ಅವರ ಪ್ರೊ. ಶೆಟ್ಟರ್‌ ಕುರಿತಾದ ವ್ಯಕ್ತಿಚಿತ್ರ

೨. https://www.youtube.com/watch?v=i6XoPnDsu_Y – “ಉಪನ್ಯಾಸ – Reading Indian History at Azim Premji University”

೩. https://www.youtube.com/watch?v=QYaM5e0tADs – ಹಳಗನ್ನಡ ಕೃತಿಯ ಕುರಿತ ವಿಚಾರ ಸಂಕಿರಣ

೪. https://www.youtube.com/watch?v=rcYIxfglepw – ಕನ್ನಡ ಭಾಷೆ ಮತ್ತು ಲಿಪಿ ಬಗ್ಗೆ ಋತುಮಾನದಲ್ಲಿ ಮೂಡಿ ಬಂದ ಸರಣಿ

This Post Has One Comment

  1. SATHISH

    ಕರ್ನಾಟಕದ ಸಂಸ್ಕೃತಿ ಮತ್ತು ಕನ್ನಡ ಭಾಷೆಯನ್ನು ಉಳಿಸಿ –
    ಉತ್ತಮ ಬರಹ

Leave a Reply