You are currently viewing ಮಹಿಳೆಯೊಬ್ಬಳ ಕರುಣೆಯ ಕಥೆಯ ಹೊತ್ತಿರುವ ಕಾಗದದ ಹೂ ಬೊಗನ್-ವಿಲಿಯಾ  – Bougainvillea

ಮಹಿಳೆಯೊಬ್ಬಳ ಕರುಣೆಯ ಕಥೆಯ ಹೊತ್ತಿರುವ ಕಾಗದದ ಹೂ ಬೊಗನ್-ವಿಲಿಯಾ – Bougainvillea

ಬೊಗನ್-ವಿಲಿಯಾ ಅಥವಾ ಬೊಗನ್-ವಿಲ್ಲಾ ಒಂದು ಸುಂದರವಾದ ಅಲಂಕಾರಿಕ ಹೂವಿನ ಬಳ್ಳಿ. ನಮ್ಮ ನಿಮ್ಮೆಲ್ಲರ ಆಡುಮಾತಿನಲ್ಲಿ ಕರೆಯುವ ಕಾಗದದ ಹೂ. ಮಾನವ ಕುಲಕ್ಕೆ ಪರಿಚಯಗೊಂಡು ಇಂದು ಜಗತ್ತನ್ನಾವರಿಸಿರುವ ಬೊಗನ್-ವಿಲ್ಲಾ ತನ್ನ ಒಡಲೊಳಗೆ ಕರುಣಾಜನಕ ಕಥನವನ್ನು ಹೊತ್ತಿದೆ. ಉಷ್ಣವಲಯದಲ್ಲಿ ಬಿಸಿಲಿಗೆ ಹೂವರಳಿಸಿ ತೆರೆದುಕೊಂಡು ಕಣ್ಣುಗಳಿಗೆ  ಸಂಭ್ರಮವನ್ನು ತುಂಬುವ ಈ ಸಸ್ಯ ಪರಿಚಯವಾಗಿಸಿದವರ ತ್ಯಾಗ ಮತ್ತು ಸಂಕಟಗಳ ನೆನಪುಗಳನ್ನು ಬಚ್ಚಿಟ್ಟು ಬಣ್ಣ-ಬಣ್ಣದ ಚೆಲುವನ್ನು ಮಾತ್ರವೇ ಪ್ರದರ್ಶಿಸುತ್ತಿದೆ. ದಕ್ಷಿಣ ಅಮೆರಿಕಾದ ತವರಿನದಾದ ಬೊಗನ್ ವಿಲಿಯಾವು ಆ ಸಸ್ಯದ ಸಂಕುಲದ ಹೆಸರೂ ಕೂಡ. ಈ ಸಂಕುಲವನ್ನು ಮೊದಲು ವನ್ಯ ಪ್ರದೇಶದಿಂದ ಸಂಗ್ರಹಿಸಿದ್ದು ಜಿಯಾನ್ ಬರೇ ಎಂಬ ಮಹಿಳಾ ಸಸ್ಯ ಪ್ರೇಮಿ ಹಾಗೂ  ಸಸ್ಯವಿಜ್ಞಾನಿಯ ಸಹಾಯಕಿ.  ಹಾಗೆಯೇ ದಾಖಲೆಗಳ ಪ್ರಕಾರ ಅದನ್ನು ವಿವರಿಸಿದ್ದು ಆಕೆಯ ಗುರು ಮತ್ತು ಸಂಗಾತಿಯಾದ ಫ್ರಾನ್ಸಿನ ಸಸ್ಯವಿಜ್ಞಾನಿ ಫಿಲಿಬರ್ಟ್‍ ಕಾಮರ್ ಸನ್.    

          ಜಿಯಾನ್ ಬರೇ ಹಲವು ಗಂಡಸರ ಮಧ್ಯೆ  -ತಾನು ಸ್ತ್ರೀ ಎಂಬುದನ್ನು ಬಚ್ಚಿಟ್ಟು ಒಂಟಿಯಾಗಿ ಹಡಗಿನಲ್ಲಿ ಜಗತ್ತನ್ನು ಸುತ್ತಿ ಬಂದ ಮೊಟ್ಟ ಮೊದಲ ಮಹಿಳೆ. ಸುಮಾರು ಎಂಟು ವರ್ಷದ ಅಲೆದಾಟದ ಸಂಕಟಗಳ ಅನುಭವವನ್ನೂ ಪಡೆದು ಜಯಿಸಿ ಸ್ವದೇಶಕ್ಕೆ ಮರಳಿದ ಹೆಣ್ಣುಮಗಳು.  ಜಿಯಾನ್‍ ಬರೇಯು  ಕಾಮರ್‍ ಸನ್‍ ಜೊತೆಯ ನೌಕಾಯಾನದಲ್ಲಿ ಬ್ರೆಜಿಲ್‍ ನಲ್ಲಿ ತಂಗಿದ್ದಾಗ ಅಲ್ಲಿನ ವನ್ಯ ಮೂಲದಿಂದ ಬೊಗನ್ ವಿಲ್ಲಾ ಬಳ್ಳಿಯನ್ನು ಸಂಗ್ರಹಿಸಿ ತಂದು ಮಾನವಕುಲಕ್ಕೆ  ಸುಂದರ ಪುಷ್ಪದ ಬಳ್ಳಿಯಾಗಿ ಉಡುಗರೆಯಾಗಿತ್ತವಳು. ಆಕೆಯ ಬದುಕೊಂದು ಕರುಣಾಜನಕ ಸಂಗತಿ. ಹಾಗೆಯೇ ಬೊಗೆನ್‍ ವಿಲ್ಲಾ ಹೂವಿನದೂ ವಿಸ್ಮಯದ ಕಥೆ! ನಮ್ಮ ಕಣ್ಣಿಗೆ ಹೂವೆಂದು ಗೋಚರಿಸುವ ಬೊಗನ್ ವಿಲಿಯಾ ಹೂವೂ ಸಹಾ ಹೂವಲ್ಲ! ಅದು ಹೂ-ಎಲೆ! ಬಣ್ಣ ಬಣ್ಣದ ಹೂ ಎಲೆಯ ಮಧ್ಯದಲ್ಲಿರುವ ಪುಟ್ಟ ಬಿಳಿಯ ಹೂ ದೂರಕ್ಕೆ ಕಾಣುವುದಿಲ್ಲ. ಈ ಸಸ್ಯವನ್ನು ಪರಿಚಯಿಸಿದ ಜಿಯಾನ್ ಬರೇ ಕೂಡ ತನ್ನನ್ನು ಸ್ತ್ರೀಎಂದು ತೋರಿಸಿಕೊಳ್ಳದಾಕೆ. ಬೊಗನ್ ವಿಲ್ಲಾ ಕೂಡ ತನ್ನ ಹೂವನ್ನು ತೋರಿಸಿಕೊಳ್ಳದು. ಜಿಯಾನ್ ಕೂಡ ಒಂಟಿಯಾಗಿ ಹಡಗನ್ನೇರಿದ ದಿಟ್ಟೆ. ಬೊಗನ್ ವಿಲ್ಲಾ ಕೂಡ ಯಾವುದೇ ಕೀಟ-ರೋಗಗಳಿಗೂ ಜಗ್ಗದೇ ಜಗದ್ವ್ಯಾಪಿಯಾಗಿ ಬೆಳೆದು, ಬಿಸಿಲನ್ನು ಅಪಾರವಾಗಿ ಪ್ರೀತಿಸುವ ಸಸ್ಯವಾಗಿ ಉಷ್ಣವಲಯ ಮತ್ತು ಸಮಶೀತೋಷ್ಣವಲಯದ ಎಲ್ಲಾ ಕಡೆಗಳಲ್ಲಿ  ಹಬ್ಬಿದೆ. ಆಕೆಯ ಕರುಣಾಜನಕವಾದ ಕಥನವನ್ನು ತುಸು ನಂತರ ನೋಡೋಣ. ಮೊದಲು ಬೊಗನ್ ವಿಲ್ಲಾದ ವಿವರಗಳ ಸಂಭ್ರಮವನ್ನು ಅರಿಯೋಣ.

          ಬೊಗನ್ ವಿಲ್ಲಾದ ವಿವಿಧ ಬಣ್ಣದ ಹೂವುಗಳು ಕಾಗದದಲ್ಲಿ ಮಾಡಿದಂತಿದ್ದು ಹೆಚ್ಚು ಕೋಮಲವಾಗಿರದ ಒಣಗಿದಂತಾ ನೋಟದ ದಟ್ಟ ಬಣ್ಣವುಳ್ಳವುಗಳಾಗಿ ಕಾಣುತ್ತವೆ. ಈಗಾಗಲೆ ತಿಳಿದಂತೆ ಈ ಸಸ್ಯವು ಬೊಗನ್ ವಿಲಿಯಾ ಸಂಕುಲಕ್ಕೆ ಸೇರಿದ  ನಿಕ್ಟಗಿನೇಸಿಯೆ (Nyctaginaceae) ಕುಟುಂಬದ ಸಸ್ಯ. ಮೊಟ್ಟ ಮೊದಲು ಈ ಸಸ್ಯವನ್ನು ಈ ಸಂಕುಲದಲ್ಲಿ ಸೇರಿಸಿ ವಿವರಿಸಿದಾಗ ಕಾಮರ್ ಸನ್  ತಮ್ಮ  ನೌಕಾಯಾನದ ನಾಯಕರಾದ ಕ್ಯಾಪ್ಟನ್‍  ಆಂಟೊನಿ  ಬೊಗೆನ್ ವಿಲ್ಲೈ ಎಂಬಾತನ ಗೌರವಕ್ಕಾಗಿ ಬೊಗನ್ ವಿಲಿಯಾ ಎಂದು ನಾಮಕರಣ ಮಾಡಿದ್ದರು. ಆಂಟೊನಿ ಬೊಗೆನ್ ವಿಲ್ಲೈ ಅವರು ಕ್ಯಾಪ್ಟನ್‍ ಥಾಮಸ್ ಕುಕ್ ಅವರ ಸಮಕಾಲೀನ ನಾವಿಕ. ಯೂರೋಪ್‍ ನೌಕಾಯಾನದ ಹಂಬಲದಲ್ಲಿ ತೊಡಗಿ ಜಗತ್ತನ್ನು  ಅರಸುತ್ತಿದ್ದಾಗ ಫ್ರಾನ್ಸ್  ದೇಶವು ತುಸು ಕಾಲದ ನಂತರ ಸೇರಿಕೊಂಡಾಗ ಅದರ ಪ್ರಮುಖ ಜವಾಬ್ದಾರಿ ವಹಿಸಿದ್ದ ನಾವಿಕ ಆಂಟೊನಿ ಬೊಗೆನ್ ವಿಲ್ಲೈ. ಆತನ ಸಂಗಡ ಸಸ್ಯ ಸಂಗ್ರಹ ಹಾಗೂ ಜೀವಿ ಸಂಕುಲಗಳ ಅಧ್ಯಯಯನಕ್ಕಾಗಿ ಆಯ್ಕೆಯಾಗಿ  ಜೊತೆಯಾದವರು ಕಾಮರ್ ಸನ್. ಫಿಲಿಬರ್ಟ್‍ ಕಾಮರ್ ಸನ್ ಸ್ವೀಡನ್ನಿನ ಖ್ಯಾತ ವರ್ಗೀಕರಣ ವಿಜ್ಞಾನಿ ಕಾರ್ಲ್ಸ್  ಲಿನೆಯಾಸ್ ಅವರ ಸಂಪರ್ಕದಲ್ಲಿದ್ದ ಸಸ್ಯ ವಿಜ್ಞಾನಿ.

          ಬೊಗನ್ ವಿಲ್ಲಾ ಸಸ್ಯವು ಸಾಮಾನ್ಯವಾಗಿ ನಿತ್ಯ ಹಸಿರಾದ ಬಳ್ಳಿ. ಆದರೂ ನೀರಿನ ಅಡಚಣೆಯ ಸ್ಥಳಗಳಲ್ಲಿ ಎಲೆಗಳ ಉದುರಿಸುವ ಜಾಯಮಾನದ್ದು. ದಟ್ಟ ಹಸಿರಾದ ಎಲೆಗಳಿಂದ ಕೂಡಿದ ಬಳ್ಳಿಯು ಕಾಂಡದ ಮೇಲೆ ಮುಳ್ಳುಗಳನ್ನು ಹೊಂದಿರುತ್ತದೆ. 1770 ಸುಮಾರಿನಲ್ಲೇ ಸಂಕುಲವನ್ನು ವಿವರಿಸಿದ್ದರೂ 1980ರವರೆಗೂ ಅದರ ಪ್ರಭೇದಗಳ ಬಗೆಗೆ ನಾಮಕರಣದ ತೊಡಕುಗಳು, ಬದಲಾವಣೆಗಳೂ ನಡದೇ ಇದ್ದವು. ಕಾಮರ್ ಸನ್ ಕೂಡ ಸಸ್ಯಸಂಗ್ರಹದ ನೌಕಾಯಾನದ ಮಧ್ಯದಲ್ಲೇ ಸಾವನ್ನಪ್ಪುವ ಕಾರಣದಿಂದಾಗಿ ಆತನ ಸಂಗ್ರಹ ಮತ್ತು ಅವುಗಳ ವಿವರಗಳೂ ಸಹಾ ಫ್ರಾನ್ಸ್ ಗೆ ತಲುಪುವ ಮತ್ತು ನಂತರದಲ್ಲಿ ವಿವರಿಸುವ ತೊಂದರೆಗಳನ್ನು ಅನುಭವಿಸಿದ್ದವು.

          ಇದೀಗ ಬೊಗನ್ ವಿಲಿಯಾದಲ್ಲಿ ಎರಡು ಪ್ರಮುಖ ಪ್ರಭೇದಗಳು ಪರಿಚಿತವಾಗಿವೆ. ಆದಾಗ್ಯೂ ನಾಲ್ಕಾರು ಪ್ರಭೇದಗಳ ಹೆಸರುಗಳಲ್ಲಿ ಕೆಲವೊಂದು ಅನುಮಾನಗಳ ವಿವರಗಳೂ ಸಿಗುತ್ತವೆ. ಆ ಎರಡು ಪ್ರಮುಖ ಪ್ರಭೇದಗಳು ಎಂದರೆ ಬೊಗನ್ವಿಲಿಯಾ ಗ್ಲಾಬ್ರಾ (Bougainvillea glabra) ಮತ್ತು ಬೊಗನ್-ವಿಲಿಯಾ ಸ್ಪೆಕ್ಟಾಬಿಲಿಸ್ (Bougainvillea spectabilis). ಅದರ ಜೊತೆಯಲ್ಲಿ ಬೊಗನ್-ವಿಲಿಯಾ ಗ್ಲಾಬ್ರಾ (Bougainvillea glabra) ಮತ್ತು ಬೊಗನ್-ವಿಲಿಯಾ ಪೆರುವಿಯಾನ (Bougainvillea peruviana ) ಎಂಬ ಎರಡು ಪ್ರಭೇದಗಳ ಸಂಕರಗಳ ಪ್ರಭೇದವೂ ಅಲಂಕಾರಿಕವಾಗಿ ಜನಪ್ರಿಯವಾಗಿದೆ.  ಮುಖ್ಯವಾಗಿರುವ ಎರಡು ಪ್ರಭೇದಗಳ ವ್ಯತ್ಯಾಸಗಳೆಂದರೆ ಗ್ಲಾಬ್ರಾ ತೆಳುವಾದ ಹೂ-ಎಲೆಗಳ ಬಳ್ಳಿ ಮತ್ತು ಸ್ಪೆಕ್ಟಾಬಿಲಿಸ್ ನ ಹೂ-ಎಲೆಗಳು ತುಸು ದಪ್ಪವಾದವು. ಉಳಿದಂತೆ ಮೇಲು ನೋಟಕ್ಕೆ ಹೆಚ್ಚು ವ್ಯತ್ಯಾಸಗಳನ್ನು ಅರಿಯಲಾಗದು. ಆದರೂ ಬಳ್ಳಿಯಾಗಿ ಸ್ಪೆಕ್ಟಾಬಿಲಿಸ್‍ ತುಂಬಾ ಹಬ್ಬುವ ಸ್ವಭಾವದದ್ದು. ಆದರೆ ಗ್ಲಾಬ್ರಾ ಹಾಗಲ್ಲ. ಅದಕ್ಕಾಗಿಯೇ ಗ್ಲಾಬ್ರಾವನ್ನು ಲೆಸ್ಸರ್‍ (ಹೆಚ್ಚು ಹರಡದ-ಕಡಿಮೆ ಹರಹಿನ ಎಂಬರ್ಥದಲ್ಲಿ)ಬೊಗನ್‍ ವಿಲಿಯಾ ಎಂದೇ ಕರೆಯಲಾಗುತ್ತದೆ.   ಅದರಿಂದಾಗಿ ಗ್ಲಾಬ್ರಾವನ್ನು ಬೋನ್ಸಾಯ್ ಮಾಡಲು ಹಾಗೇಯೆ ಕುಂಡದಲ್ಲಿ ಪುಟ್ಟ ಮರದಂತೆ ಬೆಳೆಸಲು ಹೆಚ್ಚಾಗಿ ಬಳಸಲಾಗುತ್ತದೆ. ಗ್ಲಾಬ್ರಾ  ಪ್ರಭೇದವು ಬೊಗನ್ ವಿಲ್ಲಾ ಮರಗಳಂತೆ ಕಾಣುವಂತೆ ರೂಪಿಸಿ ಕಟಾವು ಮಾಡಿ ಬೆಳೆಸಲು ಅನುಕೂಲಕರವಾಗಿದೆ. ಸ್ಪೆಕಾಬಿಲಿಸ್ ದಟ್ಟ ಬಳ್ಳಿಯ ಹರಹನ್ನು ಹೊಂದಿದೆ. ಎರಡರಲ್ಲೂ ವಿವಿಧ ಬಣ್ಣಗಳ ಹೂ-ಎಲೆಗಳಿರುವ ತಳಿಗಳಿವೆ. ಒಂದೇ ಸಸ್ಯದಲ್ಲೂ ಕಾಂಡಕಸಿಯಿಂದ ವಿವಿಧ ಬಣ್ಣಗಳ ಹೂ-ಎಲೆಗಳನ್ನೂ ಪಡೆದ ಮಾದರಿಗಳೂ ಕಾಣ ಬರುತ್ತವೆ.        

                ಬೊಗನ್ ವಿಲ್ಲಾ ಬಳ್ಳಿಯು ಅಲಂಕಾರಿಕ ಸಸ್ಯವಾಗಿ ಜಗತ್ ಪ್ರಸಿದ್ಧವಾದದ್ದು. ಅದರಲ್ಲೂ ಉಷ್ಣವಲಯದ ಒಣ ಪ್ರದೇಶಗಳಿಗೆ ಹೇಳಿ ಮಾಡಿಸಿದಂತಹಾ ಸಸ್ಯ. ಈ ಬಳ್ಳಿಗೆ ಹೆಚ್ಚು ಕೀಟ ರೋಗಗಳ ಬಾಧೆಯೂ ಕಡಿಮೆ. ಬರವನ್ನೂ ಸಹಿಸಿಕೊಂಡು, ಬಿಸಿಲನ್ನೂ ಬಯಸಿಕೊಂಡು ದಟ್ಟ ಹಸಿರಾಗಿ ಸೊಗಸಾಗಿ ಬೆಳೆಯುತ್ತದೆ. ಬಳ್ಳಿಯ ಗಿಣ್ಣುಗಳಿರುವ ಬಲಿತ ಕಾಂಡದಿಂದ ಸಣ್ಣ ಸಣ್ಣ ಐದಾರು ಅಂಗುಲದ ಕಡ್ಡಿಗಳ ಕತ್ತರಿಸಿ ಅದರಲ್ಲಿನ ಎಲೆಗಳ ತೆಗೆದು, ಬೇರು ಬರುವಂತೆ ಒಂದು ತುದಿಯನ್ನು ಬೇರು ತರಿಸಬಲ್ಲ ಹಾರ್ಮೋನು ಅಥವಾ ಗಂಜಲದಲ್ಲಿ ಅದ್ದಿ ನಾಟಿ ಮಾಡಿ ಸಸಿಗಳನ್ನು ಅಭಿವೃದ್ಧಿ ಪಡಿಸಬಹುದು. ಬೊಗನ್ ವಿಲ್ಲಾವು ಸಾಮಾನ್ಯವಾಗಿ ಆಗಸ್ಟ್ -ಸೆಪ್ಟೆಂಬರ್ ಸಮಯದಲ್ಲಿ ಪುಟ್ಟ- ಪುಟ್ಟ ಕಾಯಿಗಳನ್ನು ಬಿಡುತ್ತದೆ. ಹೂ-ಎಲೆಗಳ ಮಧ್ಯದ ಬಿಳಿಯ ಹೂವು ಕಾಯಾಗಿ ಸಣ್ಣ ಸಣ್ಣ ಬೀಜಗಳನ್ನು ಬಿಡುತ್ತದೆ. ಆ ಬೀಜಗಳಿಂದಲೂ ಸಸಿಗಳನ್ನು ಪಡೆಯಬಹುದು. ಆದರೆ ಈ ಬೀಜಗಳು ಮೊಳೆಯಲು ತಿಂಗಳುಗಟ್ಟಲೆ ಸಮಯ ತೆಗೆದುಕೊಳ್ಳುವುದರಿಂದ ಸಾಕಷ್ಟು ತಾಳ್ಮೆ ವಹಿಸಬೇಕಾಗುತ್ತದೆ.    ಬಿತ್ತಿದ ಬೀಜಗಳು ಇರುವೆ ಮತ್ತಿತರ ಕೀಟಗಳ ಪಾಲಾಗದಂತೆ ಕಾಯುವುದೇ  ಕಷ್ಟದ ಕೆಲಸವಾಗುತ್ತದೆ.

                ಬೊಗನ್‍ ವಿಲ್ಲಾ ಸಸ್ಯಗಳೇ ದಾರಿಯುದ್ದಕ್ಕೂ ಎರಡೂ ಪಕ್ಕಗಳಲ್ಲಿ ಬೆಳೆದ ಇಂಡಿಯನ್‍  ಇನ್ಸ್‍ ಸ್ಟಿಟ್ಯೂಟ್‍ ಆಫ್‍ ಸೈನ್ಸ್‍ ನ ರಸ್ತೆಯಲ್ಲೊಮ್ಮೆ ಹೂಗಳ ರೆಡ್‍ (ಕೆಂಪು) ಕಾರ್ಪೆಟ್‍ ಹಾಸಿದಂತಿತ್ತು.  ಇಂತಹ ಸುಂದರ ದೃಶ್ಯವು ಬೊಗನ್‍ ವಿಲ್ಲಾ ಬೆಳೆಸಿದ ರಸ್ತೆ ಬದಿಗಳಲ್ಲಿ ಅಥವಾ ಬಳಿಗಳು ದಟ್ಟವಾಗಿ ಹಬ್ಬಿದ ಪ್ರದೇಶಗಳಲ್ಲಿ ಅಪರೂಪವೇನಲ್ಲ. 

ಕಾಗದದ ಹೂವಿನ ಹಿಂದಿನ ಕಾಮರ್ ಸನ್ ಮತ್ತು ಜಿಯಾನ್ ಬರೇ ಅವರ ಕರುಣಾಜನಕ ಕಥೆ:

                ಫಿಲಿಬರ್ಟ್‍ ಕಾಮರ್ ಸನ್ ಫ್ರಾನ್ಸಿನ ವಿಖ್ಯಾತ ಸಸ್ಯಶಾಸ್ತ್ರಜ್ಞರಾಗಿದ್ದು, ಫ್ರಾನ್ಸಿನ ಸಾಗರಯಾನಕ್ಕೆ ಆಯ್ಕೆಯಾಗಿ ನಾವಿಕ ಆಂಟೊನ್ ಬೊಗೈನ್ ವಿಲ್ಲೈ ಯವರ ಜೊತೆ “ಇಟ್ವಾಲ್” ನೌಕೆಯಲ್ಲಿ ಪ್ರಪಂಚ ಪರ್ಯಟನೆಗೆ 1767ರಲ್ಲಿ ಹೊರಟಾಗ ಅವರ ಜೊತೆಯಾಗಿ ಸಹಾಯಕಿಯಾಗಿ, ಜಿಯಾನ್ ಬರೇ ಹೊರಡುವ ಅನಿವಾರ್ಯತೆಯಾಗುತ್ತದೆ. ಜಿಯಾನ್ ಅಪಾರ ಸಸ್ಯಜ್ಞಾನದ ಮಹಿಳೆ. ಹಾಗೆಂದೇ ಕಾಮರ್ ಸನ್ ಅವರ ಜೊತೆಯಾಗಿದ್ದ ಆಕೆ ಆತನ ಸಹಾಯಕಿಯೂ ಹೌದು. ಆದರೆ ಅವರ ಜೀವನದ ಮೊದಲ ಹೆಂಡತಿಯು ಪ್ರಸವ ಸಮಯದಲ್ಲಿ ಮರಣಹೊಂದಿದ್ದರಿಂದ ಮಗುವನ್ನು ಮನೆ ಕೆಲಸವನ್ನೂ ನಿರ್ವಹಿಸುವ ಮಹಿಳೆಯಾದಾಕೆ! ಜಿಯಾನ್ ಬರೇಯು ತನ್ನ ಸ್ಥಳೀಯ ಸಸ್ಯಗಳ ಜ್ಞಾನದ  ಆಸಕ್ತಿ ಮತ್ತು ಶ್ರದ್ಧೆಯಿಂದ ಆಕರ್ಷಿತರಾದವರು. ಸಾಗರಯಾನಕ್ಕೆ ಆ ಕಾಲದಲ್ಲಿ ಮಹಿಳೆಯರಿಗೆ ಅವಕಾಶವಿರಲಿಲ್ಲ. ಆದರೆ ಕಾಮರ್ ಸನ್ ಅವರಿಗೂ ತಮ್ಮ ಆರೋಗ್ಯವನ್ನು ನೋಡಿಕೊಳ್ಳಲೂ ಹಾಗೂ ಸಸ್ಯ ಸಂಗ್ರಹಕ್ಕೂ ಸಹಾಯಕ್ಕೆ ಜಿಯಾನ್ ಬರೇಯ ಅವಶ್ಯಕತೆಯಂತೂ ಇತ್ತು.  ಹಾಗಾಗಿ ತನ್ನ ಆಸಕ್ತಿ ಸಸ್ಯಗಳ ಅಧ್ಯಯನಕ್ಕಾಗಿ ಮಾರು ವೇಷದಲ್ಲಿ ಹೊರಟು ನಿಂತಳು.   ಜಿಯಾನ್ ಬರೇ ಕಾಮರ್ ಸನ್ ಅವರ ಜೊತೆಯಾಗಿ  ಸಮುದ್ರಯಾನದಲ್ಲಿದ್ದಾಗ ಅವರ ನೌಕೆಯು ಬ್ರೆಜಿಲ್ ನ ರಿಯೋನಲ್ಲಿದ್ದಾಗ ಬೊಗನ್ ವಿಲ್ಲಾ ಬಳ್ಳಿಯನ್ನು ಸಂಗ್ರಹಿಸಿದ್ದರು.  

          ಸಾಗರಯಾನದ ಮಧ್ಯಂತರದಲ್ಲಿ ಆಕಸ್ಮಿಕವಾಗಿ ಆಕೆ ಹೆಣ್ಣು ಎಂದು ಎಲ್ಲರಿಗೂ ತಿಳಿದಾಗ ಆಕೆಗೂ ಕಾಮರ್ ಸನ್ ಅವರಿಗೂ ಆದ ಭಯ ಅಷ್ಟಿಷ್ಟಲ್ಲ. ಆದರೂ ಸುಧಾರಿಸಿಕೊಂಡ ಅವರು, ಆ ವೇಳೆಗಾಗಲೇ ಮರೀಷಸ್ ದ್ವೀಪಕ್ಕೆ ಬಂದಿರುತ್ತಾರೆ. ಆಗ ಮರೀಷಸ್ ದ್ವೀಪದಲ್ಲಿ ಕಾಮರ್ ಸನ್ ಅವರ ಗೆಳೆಯರೊಬ್ಬರ ನೆರವು ಸಿಕ್ಕು, ಹೇಗೂ ಸಾಗರಯಾನದಲ್ಲಿ ಹೆಣ್ಣುಮಗಳನ್ನು ಕರೆತಂದುದಕ್ಕಾಗಿ ಅನುಭವಿಸಬೇಕಾದ ತೊಂದರೆಯಿಂದ ತಪ್ಪಿಸಿಕೊಳ್ಳಲು, ಮರೀಷಸ್ನಲ್ಲೇ ಉಳಿಯುತ್ತಾರೆ. ಅಲ್ಲಿದ್ದಾಗ ಕಾಮರ್ಸನ್ ಜತೆಗೂಡಿ ಮಡಗಾಸ್ಕರ್ ಮತ್ತೆಲ್ಲಾ ದ್ವೀಪಗಳಲ್ಲಿ ಸುತ್ತಾಡಿ ಸುಮಾರು 500 ಸಸ್ಯಗಳನ್ನೂ, ಹಲವಾರು ಜೀವಿ ಅವಶೇಷಗಳನ್ನೂ ಸಂಗ್ರಹಿಸುತ್ತಾಳೆ. ಆಗ ಆಕೆಯ ಸಂಗಾತಿ ಮತ್ತು ಗುರು ಕಾಮರ್ ಸನ್ ಉಸಿರಾಟಕ್ಕೆ ಸಂಬಂಧಿಸಿದಂತೆ ಶ್ವಾಸಕೋಶದ  ತೊಂದರೆಗೆ ಸಿಲುಕಿ 1773ರಲ್ಲಿ ಸಾವನ್ನಪ್ಪುತ್ತಾರೆ.  ಅಲ್ಲಿದ್ದಾಗ ಅವರಿಂದ ಜಿಯಾನ್ ಪಡೆದ ಮಗುವೂ ಕೂಡ ಸಾವನ್ನಪ್ಪುತ್ತದೆ. ಹೆಣ್ಣುಮಗಳೊಬ್ಬಳು ಅಪರಿಚಿತ ನೆಲದಲ್ಲಿ ಒಂಟಿಯಾಗಿ ಅಪಾರ ಜೀವಿಸಂಪನ್ಮೂಲವನ್ನು ಹೊತ್ತುಕೊಂಡು ತಾಯಿನಾಡನ್ನು ವಾಪಾಸ್ಸು ಸೇರುವ ಹಂಬಲವನ್ನು ಇಟ್ಟುಕೊಳ್ಳಲು ಎಂತಹಾ ಛಲವಿರಬೇಕಲ್ಲವೇ?

          ಮರೀಷಸ್‍ ನಲ್ಲಿ ಇದ್ದ ಸಮಯವಷ್ಟೇ ಈಕೆಯ ನಿಜವಾದ ದಾಂಪತ್ಯ. ಒಂಟಿಯಾದ ಜಿಯಾನ್ ನಂತರ ಎಲ್ಲವನ್ನೂ ಕಳೆದುಕೊಂಡು ಮತ್ತೇ ತಾಯಿನಾಡಿನ ಹಂಬಲಕ್ಕೆ ಪರಿತಪಿಸುತ್ತಾಳೆ. ಅಲ್ಲಿ ಆಕಸ್ಮಿಕವಾಗಿ ಸಿಕ್ಕ ಫ್ರೆಂಚ್  ಸೈನಿಕ ಜೀನ್ ದುಬೆರ್ನಾಟ್‍ ನನ್ನು ವರಿಸಿ ಆತನ ನೆರವಿನಿಂದ 1774ರ ಕೊನೆಗೆ ತಾಯಿನಾಡಿಗೆ ಬಂದು ತಲುಪುತ್ತಾಳೆ. ಅಪಾರ ಜೀವಿ ಸಾಮಗ್ರಿಯೊಂದಿಗೆ  ತಾಯಿನಾಡಿಗೆ ಬಂದ ಆಕೆಯನ್ನೇನೂ ದೇಶ ನಾಯಕಿಯಂತೆ ಸ್ವಾಗತಿಸುವುದಿಲ್ಲ. ಸಾಮಾನ್ಯಳಂತೆ ಊರು ಸೇರಿ ನಿಟ್ಟುಸಿರು ಬಿಡುತ್ತಾಳೆ. ನಂತರದ ದಿನಗಳಲ್ಲಿ ನೌಕಾ ಇಲಾಖೆಯು ಗುರುತಿಸಿ ಒಂದಷ್ಟು ಜೀವನಾಂಶಕ್ಕಾಗಿ ಪಿಂಚಿಣಿಯನ್ನು ಮಂಜೂರು ಮಾಡುತ್ತದೆ. ಕೊನೆಗೂ ಸಹಸ್ರಾರು ಸಸ್ಯಗಳನ್ನೂ, ಸಂಗ್ರಹಿಸಿಟ್ಟ ಬೀಜ ಸಾಮಗ್ರಿಯನ್ನೂ ಹಾಗೂ  ನೂರಾರು ಜೀವಿ ಅವಶೇಷಗಳನ್ನೂ ಬಿಟ್ಟು 1807ರ ಆಗಸ್ಟ್ 5ರಂದು ಇಹ ಲೋಕ ತ್ಯಜಿಸುತ್ತಾಳೆ. ಆಗ ಆಕೆಗೆ 67 ವರ್ಷ.

          ಜಿಯಾನ್ ಬರೇ ಒಬ್ಬ ಸಾಮಾನ್ಯ ಕೂಲಿ ಕಾರ್ಮಿಕ ಕುಟುಂಬದ ಮಗಳಾಗಿ ಹತ್ತಾರು ಮೈಲು ಸುತ್ತಾಟವನ್ನೂ ಮಾಡದಂತಹ ಪರಿಸ್ಥಿತಿಯಲ್ಲಿದ್ದ ಹೆಣ್ಣುಮಗಳು. ಆಕೆಯ ಅಪ್ಪ ಅನಕ್ಷರಸ್ತ. ತಾಯಿಯು ಸ್ವಂತ ಆಸಕ್ತಿಯಿಂದ ಕಲಿಯುವ ಹಂಬಲವನ್ನು ಬೆಳೆಸಿದಾಕೆ. ಇಂತಹಾ ಜಿಯಾನ್ ಅಪಾರ ಸಸ್ಯಪ್ರೀತಿಯನ್ನು ಗಳಿಸಿಕೊಂಡ ಕಾರಣದಿಂದ ಸಸ್ಯವಿಜ್ಞಾನಿ ಕಾಮರ್ ಸನ್ ಜೊತೆಯಾದವರು. ಆಕೆಯು ಒಂಟಿಯಾಗಿ ಹಡಗನ್ನೇರಿ ಹೆಣ್ತನವನ್ನೇ ಮರೆಮಾಚಿ, ಸರಿ ಸುಮಾರು 8 ವರ್ಷ ಜಗತ್ತನ್ನು ಸುತ್ತಿ ತಾಯ್ತನದ ಸಂಕಟವನ್ನು ಅನುಭವಿಸಿ, ಜತೆಗೆ ಹೆತ್ತ ಮಗು, ಸಂಗಾತಿ ಎಲ್ಲವನ್ನೂ ಕಳೆದುಕೊಂಡು ತಾಯಿನಾಡನ್ನು ತಲುಪುವ ಹಪಾಹಪಿಯಿಂದ ಕೊನೆಗೂ ಜಯಿಸಿ ಫ್ರಾನ್ಸಿಗೆ ವಾಪಾಸ್ಸು ಬಂದದ್ದೇ ದೊಡ್ಡ ಅಚ್ಚರಿ. ಹೀಗೆ ಹಡಗಿನಲ್ಲಿ ಜಗತ್ತನ್ನು ಸುತ್ತಿ ಬಂದ ಮೊಟ್ಟ ಮೊದಲ ಮಹಿಳೆಯೂ ಕೂಡ ಆಗಿದ್ದಾರೆ.  ಆಕೆಯಿಂದ ಪರಿಚಿತವಾದ ಬೊಗನ್ ವಿಲ್ಲಾ ಬಳ್ಳಿಯು ಅಕ್ಷರಶಃ ಜಗತ್ತಿನ ಬಿಸಿಲು ದಟ್ಟವಾದ ಎಲ್ಲಾ ನೆಲವನ್ನೂ ಆವರಿಸಿದೆ.

                ಸಸ್ಯ ವಿಜ್ಞಾನವೀಗ ಎರಡು ಶತಕಗಳಿಗೂ ಹೆಚ್ಚು ಕಾಲ ಕಾಣದಿದ್ದ ಜಿಯಾನ್ ಬರೇಯನ್ನು ಗುರುತಿಸಲು ಪ್ರಯತ್ನಿಸುತ್ತಿದೆ. ಕಾಮರ್ ಸನ್ ಅವರ ಹೆಸರಿನಲ್ಲಿ ಹತ್ತಾರು ಸಸ್ಯ ಪ್ರಭೇದಗಳಿವೆ. ಕಾಮರ್ ಸನ್ ಜಿಯಾನ್ ಬರೇ ಹೆಸರಿನಿಂದ ನಾಮಕರಣ ಮಾಡಿದ್ದ ಸಸ್ಯದ ಹೆಸರು ಕೂಡ ಇದೀಗ ಬದಲಾಗಿದೆ. ಆಕೆಯ ಬಗೆಗಿನ ಹೊಸ ಹುಡುಕಾಟ ಆರಂಭವಾಗಿದೆ. ಬೊಗನ್ ವಿಲ್ಲಾವನ್ನು ಆಕೆಯ ಗೌರವದಿಂದ ಹೆಸರಿಸಿ ಫ್ರಾನ್ಸ್ ನ ರಾಷ್ಟ್ರೀಯ ಪುಷ್ಟ ಎಂದು ಕರೆಯುವ ಒತ್ತಡವನ್ನೂ ಮಾಡಲಾಗುತ್ತಿದೆ. ಜಿಯನ್‍ ಕುರಿತ ಸಸ್ಯವೈಜ್ಞಾನಿಕ ಹಾಗೂ ಸಾಗರಯಾನದ ಸಾಹಸಗಳು ಕೇವಲ ಒಂದು ದಶಕದಿಂದ ಮಾತ್ರವೇ ಚರ್ಚೆಗೆ ಬರುತ್ತಿವೆ. ಬೊಗನ್‍ ವಿಲಿಯಾ ಜೊತೆ ನೂರೆಂಟು ಗಿಡ-ಮರಗಳ ಸಂಗ್ರಹ ಮತ್ತು ನಾಮಕರಣದಲ್ಲಿ ಆಕೆಯ ಪಾತ್ರವನ್ನು ಗುರುತಿಸುವ ಕಾರ್ಯ ಆರಂಭವಾಗಿದೆ. ನೀವೂ ಕೂಡ ಇನ್ನು ಮುಂದೆ ಮುಂಜಾನೆಯ ವಾಕಿಂಗ್‍ ನಲ್ಲೋ ಅಥವಾ ಸಂಜೆಯ ವಾಯು ವಿಹಾರದಲ್ಲೋ ಜಿಯಾನ್‍ ಜೀವನಕ್ಕೆ ಸಾಮ್ಯತೆಯನ್ನು ಹೊಂದಿರುವ ಬೊಗನ್‍ ವಿಲ್ಲಾ  ಕಾಣಿಸಿದರೆ, ಕಂಡ ಹೂಎಲೆಯ ಹಿಂದಿರುವ ನಿಜವಾದ ಹೂ ಹುಡುಕಿ. ಜಿಯಾನ್ ಬರೇಯನ್ನು ನೆನಪಿಸಿ.  

– ನಮಸ್ಕಾರ.  

– ಚನ್ನೇಶ್

This Post Has 3 Comments

 1. ಶ್ರೀಹರಿ ಕೊಚ್ಚಿನ್

  ಜಿಯಾನ್ ಬರೇಯ ಸಸ್ಯಗಳಿಗಾಗಿ ತುಡಿಯುವ ಜೀವನ ಕ್ರಮ ಮತ್ತು ಬೋಗನ್ವಿಲಿಯಾದ ನಿಸ್ವಾರ್ಥ ಸುಂದರತೆಯನ್ನು ಬೀರುವ ಗಿಡವಾಗಿ ಚಿತ್ರಣ ಸುಂದರ .

  ವಿವಿಧ ಬಣ್ಣದ ಎಲೆಹೂಗಳ ಸಂಭ್ರಮವನ್ನು ಕೊಡಗಿನಲ್ಲಿ ಸಂಚರಿಸುವಾಗ ಕಾಣಬೇಕು. ವರ್ಣವೈವಿದ್ಯತೆ ಅದ್ಭುತ . ಅದರ ಮುಳ್ಳು ಎಳೆಯ ಮಧ್ಯದಲ್ಲಿ ಸಿಗುವ ಸಣ್ಣ ಕಡ್ಡಿ ಉತ್ತಮ ಟೂತ್ ಪಿಕ್ ಆಗಿಯೂ ಖುಷಿ ಕೊಡುತ್ತದೆ. ನಿಮ್ಮ ವಿವರ ಲೇಖನ ಚೆನ್ನಾಗಿದೆ.

 2. Ganesh shenoy

  ಬಹಳ ಸುಂದರ ಬರೆಹ. ಸಸ್ಯಗಳ ಜತೆ ಸಾಂಗತ್ಯವಿಟ್ಟುಕೊಂಡವರ ಬದುಕೇ ವಿಶಿಷ್ಟ.

  1. CPUS

   Thank you

   Channesh

Leave a Reply