You are currently viewing “ಕಪ್ಪುಕುಳಿಗಳು(Black holes) ಮತ್ತು ಹಾಲು ಹಾದಿಯ(Milky Way’s) ಕತ್ತಲಿನ ಗುಟ್ಟು” ಕುರಿತ ಅಧ್ಯಯನಗಳಿಗೆ ನೊಬೆಲ್‌ -2020 ರ ಭೌತವಿಜ್ಞಾನದ ಪುರಸ್ಕಾರ

“ಕಪ್ಪುಕುಳಿಗಳು(Black holes) ಮತ್ತು ಹಾಲು ಹಾದಿಯ(Milky Way’s) ಕತ್ತಲಿನ ಗುಟ್ಟು” ಕುರಿತ ಅಧ್ಯಯನಗಳಿಗೆ ನೊಬೆಲ್‌ -2020 ರ ಭೌತವಿಜ್ಞಾನದ ಪುರಸ್ಕಾರ

ನಮ್ಮ ನಿಮ್ಮೆಲ್ಲರ ಕಣ್ಣಿಗೆ ಕಾಣುವುದೇ ಜಗತ್ತು ಎಂಬುದೇನೋ ಸಾಮಾನ್ಯ ಅನಿಸಿಕೆ. ಆದರೆ ಇಡೀ ವಿಶ್ವದಲ್ಲಿ ಕಾಣದ ಹಾಗೂ ಊಹೆಗೂ ಮೀರಿದ ಬಲು ದೊಡ್ಡ ಜಗತ್ತು ಕತ್ತಲಿನೊಳಗಾವರಿಸಿದೆ. ಅಷ್ಟು ಮಾತ್ರ ಅಲ್ಲ, ಆ ಕತ್ತಲು ಬೆಳಕಿನಲ್ಲಿ ಕಾಣುವ ಎಲ್ಲಾ ವಸ್ತುಗಳ ಚಲನೆಯ ಹಾಗೂ ಇರುವಿಕೆಯ ಮೇಲೂ ಇನ್ನೂ ಅರಿಯಬೇಕಿರುವ ತಿಳಿವನ್ನೂ ತನ್ನ ಮಡಿಲಲ್ಲಿಟ್ಟುಕೊಂಡಿದೆ. ಆ ಗಾಢ ಕತ್ತಲಿನ ಬೆಳಕನ್ನು ಹುಡುಕುವ ಪ್ರಕ್ರಿಯೆ ಭೌತವಿಜ್ಞಾನದ ಬಹು ದೊಡ್ಡ ಗುರಿ. ಅದಕ್ಕಾಗಿ ನಿರಂತರವಾದ ಶತಮಾನಗಳ ಸಾಹಸವನ್ನು ಹಲವು ವಿಜ್ಞಾನಿಗಳು ಮಾಡುತ್ತಲೇ ಇದ್ದಾರೆ. ಅಂತಹಾ ಜಗತ್ತಿನ ತಿಳಿವನ್ನು ಗಣೀತೀಯ ನಿದರ್ಶನಗಳಿಂದ ಸಾಬೀತು ಮಾಡಿದ ಕಪ್ಪುಕುಳಿಗಳ ಕುರಿತ ಶೋಧ ಹಾಗೂ ಹೌದು, ಅವು ಇರುವುದು ನಿಜವೇ ಸರಿ, ನಮ್ಮ ಗೆಲಾಕ್ಸಿಯ ಕೇಂದ್ರದಲ್ಲೊಂದು ಇದೆ ಎಂಬ ಬಹುದೊಡ್ಡ ಗುಟ್ಟನ್ನು ದಶಕಗಳ ಕಾಲ ಪಟ್ಟು ಬಿಡದೆ ಹುಡುಕಿ ಅನಾವರಣಗೊಳಿಸಿದ ಶೋಧಕ್ಕೆ ಈ ಬಾರಿಯ ಭೌತವಿಜ್ಞಾನದ ನೊಬೆಲ್‌ ಬಹುಮಾನವನ್ನು ಇಂದು ಪ್ರಕಟಿಸಲಾಗಿದೆ. ಆಲ್ಬರ್ಟ್‌ ಐನ್‌ಸ್ಟೈನ್‌ ಅವರ ಸಾಮಾನ್ಯ ಸಾಪೇಕ್ಷ ಸಿದ್ಧಾಂತವನ್ನು ಅನುಸರಿಸಿದ ಗಣೀತೀಯ ವಿವರಗಳನ್ನು ಕೊಟ್ಟು ಅದು ಹೇಗೆ ಕಪ್ಪುಕುಳಿಗಳ ನಿರ್ಮಿತಿಯನ್ನು ಕೊಡುತ್ತದೆ ಎಂಬ ಸಂಶೋಧನೆಗೆ ಪ್ರೊ. ರೊಜರ್‌ ಪೆನ್‌ರೋಜ್‌ ಅವರಿಗೆ ಈ ವರ್ಷದ ಅರ್ಧ ಮೊತ್ತದ ನೊಬೆಲ್‌ ಬಹುಮಾನ ನೀಡಲಾಗಿದೆ. ಉಳಿದರ್ಧ ಮೊತ್ತದ ಬಹುಮಾನವನ್ನು ಅದರ ಮುಂದುವರಿಕೆಯ ಶೋಧವೆಂಬತೆ ಇರುವ ಅಧ್ಯಯನವನ್ನು ದಶಕಗಳ ಕಾಲ ನಿರ್ವಹಿಸಿ ನಮ್ಮ ಗೆಲಾಕ್ಸಿಯಾದ ಹಾಲು ಹಾದಿ ಅಥವಾ ಆಕಾಶ ಗಂಗೆ (Milky Way) ಕೇಂದ್ರದಲ್ಲಿರುವ ಸೂಪರ್‌ ಮ್ಯಾಸಿವ್‌-ಊಹೆಗೂ ಮೀರಿದ ಗಾತ್ರದ- ಕಪ್ಪುಕುಳಿಯ ಕತ್ತಲಿನ ವಿಶೇಷಣಗಳನ್ನು ಕೊಟ್ಟು ಹೌದು ಕಪ್ಪುಕುಳಿಗಳು ಇರುವುದೆ ನಿಜವೇ ಎಂದು ಸಾಬೀತು ನೀಡಿದ ಪ್ರೊ. ರೈನ್‌ಹಾರ್ಡ್‌ ಗೆಂಜಲ್‌ ಹಾಗೂ ಪ್ರೊ. ಆಂಡ್ರಿಯಾ ಗೆಜ್‌ ಅವರಿಗೂ ನೀಡಲಾಗಿದೆ.

      ಕಣ್ಣಿಗ ಕಾಣುವುದನ್ನೇ ಅರ್ಥ ಮಾಡಿಕೊಳ್ಳಲು ಬೃಹತ್‌ ಬೆಳಕಿನಲ್ಲೂ ಕಷ್ಟ ಇರುವಾಗ, ಮಹಾ ಕತ್ತಲಿನ ಜಗತ್ತಿನ ಬೆಳಕನ್ನು ಊಹೆಗಳ ಲೆಕ್ಕಾಚಾರದಲ್ಲಿ ಹೇಳುವುದಾದರೂ ಹೇಗೆ? ಇಂತಹ ಸಂಕಟ ಕೇವಲ ಅದರ ಸುದ್ಧಿಯನ್ನು ಹಂಚುವ ಮತ್ತು ತಿಳಿಯುವರಿಗೇ ಇರುವಾಗ ಅದನ್ನು ಹುಡುಕಿದವರಿಗೆ ಹೇಗಿದ್ದಿರಬೇಡ?  ಭೌತವಿಜ್ಞಾನದ ನವೀನ ಶೋಧಗಳೆಲ್ಲವೂ ಹೊಸತೊಂದು ವಿಜ್ಞಾನದ ಮಾದರಿಯನ್ನು ಕೊಡುತ್ತಲೇ ಬೆಳೆಯುತ್ತಿರುವುದು ವಿಜ್ಞಾನದ ತೀವ್ರ ಓದುಗರಿಗೆ ಪರಿಚಯವಿರುತ್ತದೆ.  ವಿಶ್ವದ ಆದಿಯನ್ನು ಅಪಾರ ಹರಹಿನ ಮಹಾನ್‌ ಸ್ಪೋಟದ ಬೆಳಕಿನಿಂದ ಆರಂಭವೆಂದುಕೊಂಡರೆ ಕೊನೆಯ ತುದಿಯಲ್ಲಿ ಮಹಾನ್‌ ಕತ್ತಲಿನ ಕುಬ್ಜತೆಯಿದೆ. ಎಷ್ಟೆಂದರೆ ಅಗಾಧ ಬೆಳಕಿನ ಬೃಹತ್‌ ನಕ್ಷತ್ರ ಅಥವಾ ವಸ್ತುವೊಂದು ತನ್ನೆಲ್ಲಾ ಗುರುತ್ವವನ್ನು ತನ್ನೊಳಗೇ ನುಂಗಿಕೊಂಡು ಗಾತ್ರದಲ್ಲೂ ಕಿರಿದಾಗುವುದು. ಎಷ್ಟೆಂದರೆ “ಭೂಮಿಯು ಒಂದು ಬಟಾಣಿ ಕಾಳಿ”ನ ಗಾತ್ರಕ್ಕೆ ಕುಸಿದಂತೆ. ಹಾಗೆ ಬೃಹತ್‌ ನಕ್ಷತ್ರಗಳೂ ಬೆಳಕೆಲ್ಲವನ್ನೂ ತನ್ನೊಳಗೇ ನುಂಗಿ ಕುಬ್ಜವಾಗಿ ಕಪ್ಪುಕುಳಿಗಳಾಗುತ್ತವೆ. ಇದೆಲ್ಲವೂ ಹೀಗೆ ಅಕ್ಷರಗಳಿಂದ ಬರೆದಷ್ಟು ಸುಲಭದ ಮಾತಂತೂ ಅಲ್ಲ! ಗುರುತ್ವವೂ ನಾವಂದುಕೊಂಡಂತೆ ಭೂಮಿಗಿರುವ ತನ್ನೆಡೆಗೆ ಎಳೆದುಕೊಳ್ಳುವ ಶಕ್ತಿ ಅಲ್ಲ! ಅದೊಂದು ಅಪಾರ ಸಾಂದ್ರ ಬೆಳಕಿನ ಮಧ್ಯದ ಹರಹಿನಲ್ಲಾಗುವ ಬಗೆಯಷ್ಟೇ. ಗುರುತ್ವವನ್ನೂ ಸಾಮಾನ್ಯ ಸಾಪೇಕ್ಷ ಸೈದ್ಧಾಂತಿಕ ವಿವರಗಳಿಂದ ನೀಡಿದ ಐನ್‌ಸ್ಟೈನ್,‌ ಅದೇ ಮುಂದುವರಿದು ವಿವರವಾಗಿ ಕಪ್ಪುಕುಳಿಗಳ ನಿರ್ಮಿತಿಯಲ್ಲಿ ಕೊನೆಯಾಗುವುದು ಎಂದು ಊಹಿಸಿ ಶೋಧಿಸಿದಾಗ, ಸ್ವತಃ ಐನ್‌ಸ್ಟೈನ್‌ ಅವರಿಗೂ ಅದು ಇರುವುದು ನಿಜವೇ ಹೌದಾ ಎನ್ನಿಸಿತ್ತಂತೆ! ಅಷ್ಟಕ್ಕೂ ಅವರಿಗಿಂತಾ ಮೊದಲಿನ ಭೌತವಿಜ್ಞಾನಿಗಳೇ ಅಪಾರ ದ್ರವ್ಯರಾಶಿಯ ವಿಶಿಷ್ಟ ಬಗೆಯ ವಸ್ತುವೊಂದು ಇರಬಹುದಾದ ಸಾಧ್ಯತೆಯನ್ನು ಊಹಿಸಿದ್ದರು. 18ನೆಯ ಶತಮಾನದ ಕಡೆಯಲ್ಲಿ ಬ್ರಿಟೀಶ್‌ ಗಣಿತಜ್ಞ ಹಾಗೂ ದಾರ್ಶನಿಕ ಜಾನ್‌ ಮಿಶೆಲ್‌ (John Michell) ಮತ್ತು ವಿಖ್ಯಾತ ಫ್ರೆಂಚ್‌ ವಿಜ್ಞಾನಿ ಪೈರಿ ಲ್ಯಾಪ್ಲೇಸ್‌(Pierre Simon de Laplace) ಬೆಳಕೂ ತಪ್ಪಿಸಿಕೊಳ್ಳಲಾಗದ ಕಾಣದ “ಕತ್ತಲಿನ ನಕ್ಷತ್ರ”ಗಳ ಬಗ್ಗೆ ಊಹಿಸಿದ್ದರು. ಆಲ್ಬರ್ಟ್‌ ಐನ್‌ಸ್ಟೈನ್‌ ಸಿದ್ಧಾಂತವು ಸಾಪೇಕ್ಷ ವಿವರಗಳಿಂದ ಊಹಿಸಿತ್ತು. ಆದರೂ ಅದಕ್ಕೆ ಗಣಿತೀಯ ವಿವರಗಳಿಂದ ಇರುವ ಸಾಧ್ಯತೆಯು ತಿಳಿದದ್ದು ಐನ್‌ಸ್ಟೈನ್‌ ತೀರಿಕೊಂಡು ದಶಕವು ಕಳೆದ ಮೇಲೆ. ರೊಜರ್‌ ಪೆನ್‌ರೋಜ್‌ ಅವರು 1965ರಲ್ಲಿ ಪ್ರಕಟಿಸಿದ ಮಹತ್ವದ ಶೋಧವು ಅದನ್ನು ಗಣಿತೀಯ ನಿದರ್ಶನಗಳ ವಿವರಗಳಿಂದ ಸಾಬೀತು ಮಾಡಿತ್ತು.

      ಪೆನ್‌ರೋಜ್‌ ಮಾದರಿಯು ತೀರ ಸತ್ಯದ ಹತ್ತಿರದ ವಿವರವಾಗಿತ್ತು. ಅದೊಂದು ಬಗೆಯಲ್ಲಿ “ಕಾಲದ ಕೊನೆಗೆ ಹೋಗುವ ಏಕ ಮುಖ ಸಂಚಾರ”ವಾಗಿತ್ತು. ಹೇಗೆಂದರೆ ಕಾಲದಲ್ಲಿ ಹಿಂದೆ ಹೋಗುತ್ತಾ ಕಾಲ ಇಲ್ಲದ ಸ್ಥಿತಿಗೆ ತಲುಪುವ ಬಗೆ! ವಿಚಿತ್ರ ಎನ್ನಿಸುವುದೇ? ನಿಜ. ಇದನ್ನು ನಮ್ಮವರೇ ಆದ ನೊಬೆಲ್‌ ವಿಜ್ಞಾನಿ ಸುಬ್ರಮಣ್ಯ ಚಂದ್ರಶೇಖರ್‌ ಅವರು ಹೇಳುತ್ತಿದ್ದ ತಮ್ಮ ಬಾಲ್ಯದ ವಿಚಿತ್ರ ಅನುಭವದ ಕಥೆಯ ರೂಪಕದ ಮೂಲಕ ನೋಡಬಹುದು. ಅದು ನೀರೊಳಗಿರುವ ಡ್ರಾಗನ್‌ ಫ್ಲೈ ಮತ್ತು ಅದರ ಲಾರ್ವದ ಕಥೆ. ಅದು ಲಾರ್ವಾ ಆಗಿದ್ದು ಇನ್ನೇನು ರೆಕ್ಕೆಬಿಚ್ಚುವಾಗ, ನೀರೊಳಗಿದ್ದಾಗ ತನ್ನ ಸ್ನೇಹಿತರಿಗೆ ಹೇಳುತ್ತಿತ್ತಂತೆ, ಏನೆಂದರೆ  ರೆಕ್ಕೆ ಬಿಚ್ಚಿ ಹಾರಿ ಹೊರಗೆ ಹೋಗಿ ಬಂದು ಅಲ್ಲೆಲ್ಲಾ ಏನಿದೆ ಎಂದು ಹೇಳುವೆ ಎಂಬ ಪ್ರಮಾಣ ಮಾಡುವ ಬಗೆ. ಆದರೆ ಹೊರೆಗೆ ಹಾರಿ ಹೋದ ಮೇಲೆ ಮತ್ತೆಂದೂ ವಾಪಸ್ಸು ಬರದ ಲೋಕ. ಲಾರ್ವಗಳಿಗೆ ತಿರುಗಿ ಬಂದು ಹೇಳುವ ಮಾತೇ ಇಲ್ಲ. ಹೀಗೆ ಹಿಂದಿರುಗಿ ಬರಲಾದ ಜಗತ್ತು ಅದು ಕಪ್ಪುಕುಳಿಗಳ ಲೋಕ.  ಹೀಗೆ ಕಪ್ಪುಕುಳಿಗಳಿಂದ ಹೊರ ಜಗತ್ತಿನಲ್ಲಿರುವ “ಆಕಾಶ- Space“ನಲ್ಲಿ ಮಾತ್ರವೇ ಹೋಗಬಹುದಾದ ಸ್ಥಿತಿ. ಮುಂದೆ  ವಸ್ತುವಿನ ಸ್ಪೇಸ್‌ ಅನ್ನು ಕಾಲವು ಆವರಿಸಿಕೊಂಡು ಏಕ ಮುಖವಾಗಿ ಹಿಂದಿರುಗಿ ಬರಲಾದ ಸ್ಥಿತಿಗೆ ಹೋಗುವುದು. ಇದೆಲ್ಲವೂ ಸದ್ಯದ ಕಪ್ಪುಕುಳಿಯ ವಿವರಣೆ. ಮುಂದೆಲ್ಲವೂ ಇನ್ನೂ ವಿವರಗಳಿಂದ ಬಲಗೊಂಡು ಹೊಸತೊಂದು ವಿಜ್ಞಾನವೇ ವಿಕಾಸಗೊಂಡರೂ ಅಚ್ಚರಿ ಇಲ್ಲ.  

      ಇಷ್ಟಾದ ಮೇಲೇ ಉಳಿಯುವುದೇನು? ನಮ್ಮ ಮೇಲೂ ಅದರ ಪರಿಣಾಮಗಳೆಂಬಂತೆ ಸಾಕ್ಷಿಗಳ ಒದಗಿಸಿದ ನಮ್ಮದೇ ಗೆಲಾಕ್ಸಿಯ ಮಧ್ಯದಲ್ಲಿರುವ ಸೂಪರ್‌ ಮ್ಯಾಸಿವ್‌ ಕತ್ತಲ ಜಗತ್ತಿನ ಶೋಧ. ಇದನ್ನು ಪತ್ತೆ ಹಚ್ಚಿದ್ದೇ ಅದು ತನ್ನು ಸುತ್ತಲಿನ ನಕ್ಷತ್ರಗಳನ್ನು ಪ್ರಭಾವಿಸುವ ವಿವರಗಳನ್ನು ಅರಿಯುವ ಮೂಲಕ. ಹಾಗಾಗಿ ಒಂದು ಬಗೆಯಲ್ಲಿ ಈ ಬೃಹತ್‌ ಕತ್ತಲ ಜಗತ್ತು ನಮ್ಮ ಆಕಾಶಗಂಗೆಯ ಕೇಂದ್ರದಲ್ಲೂ ಇದ್ದು ಅದು ತನ್ನು ಸುತ್ತಲೂ ಸುತ್ತುತ್ತಿರುವ ನಕ್ಷತ್ರಗಳನ್ನು ನಿಯಂತ್ರಿಸುತ್ತಿದೆ. ಇಷ್ಟು ಸಾಕಲ್ಲವೇ ನಮ್ಮ ಭೌತವಿಜ್ಞಾನ ಜಗತ್ತು ಅದೇಕೆ ವಿಶ್ವದ ಅರಿವಿನ ವಿವರವಾದ ಹುಡುಕಾಟ ನಡೆಸುತ್ತಿದೆ ಎಂದು ತುಸುವಾದರೂ ತಿಳಿಯಲು. ಹೌದು, ಇದೊಂದು ಪ್ರಖರ ಸತ್ಯವಾಗಿ ತಿಳಿವಾಗಿಸಿದ್ದು ಪ್ರೊ. ರೈನ್‌ ಹಾರ್ಡ್‌ ಮತ್ತು ಪ್ರೊ. ಆಂಡ್ರಿಯಾ ಗೆಜ್‌ ತಂಡದವರು.

      ಅವರು ಗಮನಿಸಿ ದಾಖಲಿಸಿದ್ದು S-2 ಎಂದು ಗುರುತಿಸಲಾದ ನಕ್ಷತ್ರವೊಂದರ ಚಲನೆಯ ಹಾದಿಯ ನಕ್ಷೆ! ಅದು ಒಂದೆರಡು ವರ್ಷವಲ್ಲ. ಸತತವಾಗಿ ಹದಿನಾರು ವರ್ಷಗಳ ಕಾಲ ಅದನ್ನು ನಿರಂತರವಾಗಿ ಅದು ಹಾಯ್ದು ಹೋಗುವ ಮಾರ್ಗವನ್ನು ನಕ್ಷೆಯಗಾಗಿಸಿ ಅದು ಅದೇ ಪಥವನ್ನು ಅನುಸರಿಸುತ್ತಿರುವ ವಿವರಗಳಿಂದ ಮಧ್ಯದಲ್ಲಿರುವ “ಕತ್ತಲಿನ ಜಗತ್ತ”ನ್ನು ಗುರುತಿಸಿದ್ದಾರೆ.

      ಅವು ಕಂಡುಹಿಡಿದ ನಮ್ಮ ಗೆಲಾಕ್ಸಿಯ ಕೇಂದ್ರ ಈ ಬೃಹತ್‌ ಕಪ್ಪು ಜಗತ್ತು, ಅದೆಷ್ಟು ದೊಡ್ಡದು ಎಂದರೆ ನಾಲ್ಕು ದಶಲಕ್ಷ ಸೌರ ದ್ರವ್ಯರಾಶಿಯದು. ಅದು ಕುಬ್ಜವಾಗಿಯೂ-ಅಂದರೆ ಭೂಮಿಯು ಬಟಾಣಿಯಾದಂತೆ- ನಮ್ಮ ಸೌರವೂಹದಷ್ಟು ಗಾತ್ರವಾಗಿದೆ. ಅಂದರೆ ಅದರ ನಿಜ ಸ್ವರೂಪವನ್ನು ಊಹಿಸಬಹುದು. ಅದರ ಅಪಾರ ದ್ರವ್ಯರಾಶಿಯು ಕೋಟ್ಯಾಂತರ ನಕ್ಷತ್ರಗಳ ಲೋಕವಾದ ಆಕಾಶ ಗಂಗೆ(Milky Way)ಯನ್ನು ನಿಯಂತ್ರಿಸುತ್ತಿರಬಹುದೇ? ಸೈದ್ಧಾಂತಿಕವಾಗಿ ಹೌದು. ಹಾಗಾದರೆ ಕಾಣುವ ಜಗತ್ತಿಗಿಂತಾ ಕಾಣದ ಕತ್ತಲ ಜಗತ್ತು ಶಕ್ತಿ ಮತ್ತು ಗಾತ್ರದಲ್ಲೂ ಊಹೆಗೆ ಮೀರಿದೆಯೇ? ಹೌದು. ಹಾಗಾದರೆ ನಮ್ಮೆಲ್ಲಾ ಅರಿವಿನ ನಿಜದ ಹುಡುಕಾಟ ಕತ್ತಲಿನ ಬೆಳಕನ್ನು ಅರಸುವುದೇ? ಹೌದು….ಹೌದು.. ಅಲ್ಲಿಗೆ ಕಾಲದ ಕೊನೆ. ಎಣಿಸಲಾಗದ ಗಣಿಸಲಾಗದ, ಹಿಂದಕ್ಕೂ ಬಾರದ ಲೋಕವೇ? ಸದ್ಯಕ್ಕಂತೂ ಇಷ್ಟು ತಿಳಿದಿದೆ. ಅದೆಂತ ಭಯಂಕರ ಎಂದರೆ ಅದರ ಮಧ್ಯದ ದೈತ್ಯಶಕ್ತಿ ರೌದ್ರತೆಯ ಪರಮಾವಧಿ. ಹಾಗಾದರೆ ಎಂದಾದರೂ ನಮ್ಮ ಭೂಮಂಡಲ ಕಪ್ಪುಕುಳಕ್ಕೆ ತಾಕಬಹುದೇ? ಸಣ್ಣಗೆ ಬೆವರುವ ಸ್ಥಿತಿಯದು. ಇಲ್ಲ ಎಣಿಕೆ ಸಿಗಲಾದಷ್ಟು ಕಪ್ಪುಕುಳಿಗಳು ಇದ್ದಿರಬಹುದಾದರೂ ಸೌರವ್ಯೂಹದೊಳಗೇ ಅಂತಹದೊದ್ದು ಸಂಭವನೀಯತೆಯಂತೂ ಇಲ್ಲ. ಇದ್ದರೂ ಏನಂತೆ ಕಾಲನ ಕರೆಯಲ್ಲಿ ಕೊನೆಯೆಂಬುದಿದೆಯಲ್ಲವೇ?

      ಇಲ್ಲೊಂದು ಕೌತುಕವಿದೆ. ಮರದ ಕೆಳಗೆ ಕುಳಿತ ನ್ಯೂಟನ್‌ ತಲೆಯ ಮೇಲೆ ಸೇಬು ಬಿದ್ದ ನೆಪದ ಉದಾಹರಣೆಯಿನ್ನೂ ಮಾಸದಿರುವಾಗಲೇ ಆಕಾಶದ ಉದ್ದಕ್ಕೂ ಹಾಸಿದ ಕಾಣದ ದಿಗಂತಗಳ ಸಂಧಿಸುವ ಹರಹಿನಲ್ಲಿ ಗ್ರಾವಿಟಿಯನ್ನು ಹಂಚಿದ್ದಾಗಿದೆ. ಅದೆಲ್ಲವೂ ಕಾಣದ ಕತ್ತಲಿನ ಬೆಳಕಿನ ಮಾಯೆಯಲ್ಲಿ ಅಡಗಿದೆ ಎಂಬ ಊಹಾತ್ಮಕ ನೈಜತೆಗೆ ಅಥವಾ ನಿಜ ಊಹೆಗೆ ವಿಜ್ಞಾನದ ಬೃಹತ್‌ ಹುಡುಕಾಟ ನಡೆಯುತ್ತಿದೆ. ನಾನೇನೋ ಸರಳವಾಗಿ ಹೇಳಲು ಹೀಗೆಲ್ಲಾ ಕಥೆ ಕಟ್ಟಿ ಹೇಳುತ್ತಿದ್ದೇನೆ. ಆದರೆ ಸಮೀಕರಣ ಸಿದ್ಧಾಂತಗಳ ಗಣಿತಗಳನ್ನು ದಶಕಗಟ್ಟಲೇ ಕಟ್ಟಿಕೊಂಡು ಲೆಕ್ಕಾಚಾರ ಹಾಕುತ್ತಿದ್ದಾರಲ್ಲ ಅವರ ಕಥೆ ಕೇಳೋದೇ ಬೇಡ… ಅಂತೀರಲ್ಲವಾ. ಅದಕ್ಕೆ ಅವರಿಗೀಗ ವಿಜ್ಞಾನದ ಶ್ರೇಷ್ಟ ಬಹುಮಾನ ನೊಬೆಲ್‌ ಪುರಸ್ಕಾರ. ಅತ್ಯಂತ ಸಂತಸದ ಸಂಗತಿ ಎಂದರೆ ಈ ಮೂವರಲ್ಲಿ ಒಬ್ಬ ಹೆಣ್ಣು ಮಗಳಿದ್ದಾರೆ. ಈಕೆ ಭೌತವಿಜ್ಞಾನದ ನೊಬೆಲ್‌ ಗಳಿಸಿದ ಹೆಣ್ಣು ಮಕ್ಕಳಲ್ಲಿ ನಾಲ್ಕನೆಯವರು. ನೂರಾ ಇಪ್ಪತ್ತು ವರ್ಷಗಳ ಇತಿಹಾಸ ವಿರುವ ಶ್ರೇಷ್ಟತೆಯ ಪರಂಪರೆಯಲ್ಲಿ ಈ ವಿಭಾಗದಲ್ಲಿ ಕೇವಲ ನಾಲ್ಕೇ ಜನ ಹೆಣ್ಣುಮಕ್ಕಳು. ಹಾಗಾಗಿ ಪ್ರೊ. ಆಂಡ್ರಿಯಾ ಗೆಜ್‌ ಅವರಿಗೆ ವಿಶೇಷ ಅಭಿನಂದನೆಗಳನ್ನು ಹೇಳೋಣ. ಹಾಗೆ ಅವರ ಜೊತೆಯ ರೊಜರ್‌ ಪೆನ್‌ರೋಜ್‌ ಹಾಗೂ ರೈನ್‌ ಹಾರ್ಡ್‌ ಅವರಿಗೂ…      

      ರೊಜರ್‌ ಪೆನ್‌ ರೋಜ್‌ ಅವರು ಬ್ರಿಟನ್ನಿನವರು. ಈಗವರು ೮೯ವರ್ಷದ ಹಿರಿಯರು. ಆಕ್ಸಫರ್ಡ್‌ ವಿಶ್ವ ವಿದ್ಯಾಲಯದ ಎಮರಿಟಸ್‌ ಪ್ರೊಫೆಸರ್. ಕಪ್ಪುಕುಳಿಗಳಂತಹಾ ಅಗಾಧ ನಿರ್ಮಿತಿಯನ್ನು ಲೆಕ್ಕಾಚಾರ ಹಾಕಿದ ಗಣಿತಜ್ಞ. 2003 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಭಾರತೀಯ ವಿಜ್ಞಾನ ಕಾಂಗ್ರೆಸ್‌ ನಡೆದಾಗ‌  ಬೆಂಗಳೂರಿಗೂ ಬಂದಿದ್ದರು. ಅನೇಕ ಬಾರಿ ಭಾರತಕ್ಕೆ ಭೇಟಿಕೊಟ್ಟಿರುವ ಪೆನ್‌ ರೋಜ್‌ ಭಾರತೀಯ ವಿದ್ಯಾರ್ಥಿಗಳಿಗೂ ಕಲಿಸಿದ್ದಾರೆ. ನನ್ನ ಗೆಳೆಯ ಡಾ. ಜೆ. ಬಾಲಕೃಷ್ಣ (ಕೃಷಿ ವಿ.ವಿ. ಬೆಂಗಳೂರಿನಲ್ಲಿ ಪ್ರೊಫೆಸರ್)ರ ಮಗಳು ಆಕ್ಸ್‌ಪರ್ಡ್‌ ವಿದ್ಯಾರ್ಥಿನಿ ಡಾ. ಅನನ್ಯ ಪಡೆದ ಅಮೆರಿಕದ ಪೊಸ್ಟ್‌ ಡಾಕ್ಟೊರಲ್‌ ಫೆಲೋಷಿಪ್‌ ಆಯ್ಕೆ ಸಮಿತಿಯಲ್ಲಿ ಪೆನ್‌ ರೋಜ ಇದ್ದರು. ನನ್ನ ಪ್ರೀತಿಯ ಗೆಳೆಯನ ಮಗಳು ಪೆನ್‌ರೋಜ್‌ ಅವರಿಂದ ಸೈಎನಿಸಿಕೊಂಡ “ಅನನ್ಯ” ವಿದ್ಯಾರ್ಥಿನಿ.

      ರೈನ್‌ ಹಾರ್ಡ್‌ ಮೂಲತಃ ಜರ್ಮನಿಯವರು. ಅಲ್ಲಿನ ವಿಖ್ಯಾತ ಮ್ಯಾಕ್ಸ್‌ ಪ್ಲಾಂಕ್‌ ವಿಜ್ಞಾನ ಸಂಸ್ಥೆಯಲ್ಲಿ ಪ್ರೊಫೆಸರ್‌ ಆಗಿದ್ದ ಖಭೌತ ವಿಜ್ಞಾನಿ. ಅಮೆರಿಕೆಯ ಕ್ಯಾಲಿಫೋರ್ನಿನಿಯಾ ಯುನಿವರ್ಸಿಟಿಯಲ್ಲೂ ಕಲಿಸುತ್ತಿದ್ದಾರೆ. 1952ರಲ್ಲಿ ಜನಿಸಿದ ರೈನ್‌ ಹಾರ್ಡ್‌ ಇನ್ನೂ 68 ವರ್ಷದ ವಯೋಮಾನ.

      ಪ್ರೊ. ಆಂಡ್ರಿಯಾ ಗೆಜ್‌ ಈ ಬಾರಿಯ ವಿಶೇಷ ವ್ಯಕ್ತಿ. ನಾಲ್ಕನೆಯ ಭೌತವಿಜ್ಞಾನದಲ್ಲಿ ನೊಬೆಲ್‌ ಪಡೆದ ಮಹಿಳೆ. ನ್ಯೂಯಾರ್ಕ್‌ನಲ್ಲಿ 1965ರಲ್ಲಿ ಜನಿಸಿದ ಆಂಡ್ರಿಯಾ ಅಮೆರಿಕೆಯ ಪ್ರತಿಷ್ಟಿತ MIT ಹಾಗೂ CAL TECH ಗಳಲ್ಲಿ ಕಲಿತವರು. ಇದೀಗ ಕ್ಯಾಲಿಫೋರ್ನಿಯಾ ವಿಶ್ವ ವಿದ್ಯಾಲಯದಲ್ಲಿ ಪ್ರೊಫೆಸರ್.

ಈ ಮೂವರು ವಿಜ್ಞಾನಿಗಳಿಗೆ ನಮ್ಮ ಸೆಂಟರ್‌ ಫಾರ್‌ ಪಬ್ಲಿಕ್‌ ಅಂಡರ್‌ಸ್ಟ್ಯಾಂಡಿಂಗ್‌ ಆಫ್‌ ಸೈನ್ಸ್‌ (CPUS) ಸಂಸ್ಥೆಯು ತನ್ನೆಲ್ಲಾ ಓದುಗ/ಹಿತೈಷಿ ಬಳಗದ ಜೊತೆಯಾಗಿ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತದೆ.    

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್.‌

This Post Has 4 Comments

  1. SHIVASHARANAPPA BIRADAR

    Sir nice explanation, ಅದೂ ಕನ್ನಡದಲ್ಲಿ. ಕಪ್ಪು ರಂಧ್ರಗಳನ್ನು ಕುರಿತು ತುಂಬಾ ಮಾಹಿತಿಯನ್ನು ನೀಡಿದ್ದೀರಿ. ಧನ್ಯವಾದಗಳು.

  2. Kusum Ramesh Salian

    ಬಹಳ ಸರಳವಾಗಿ ಕಪ್ಪು ರಂಧ್ರಗಳ ಬಗ್ಗೆ ವಿವರಿಸಿದ್ದೀರಿ. ಆಂಡ್ರಿಯಾ ಗೆಜ್ ಬಗ್ಗೆ ಬಹಳ ಹೆಮ್ಮೆ ಎನಿಸುತ್ತದೆ.
    ಕಪ್ಪು ಕುಳಿಯ ಆಚೆಗೇನಿದೆ..?ಎನಿರಬಹುದೆಂಬ..? ಕುತೂಹಲ ಸಹಜವಾಗಿದೆ. ಈ ಮೂವರಿಗೂ ಅಭಿನಂದನೆಗಳು. ಜೊತೆಗೆ CPUS ಸಂಸ್ಥೆಗೆ ಧನ್ಯವಾದಗಳು.

  3. ಶ್ರೀಹರಿ ಸಾಗರ ಕೊಚ್ಚಿ..

    ಅಬ್ಬಬ್ಬಾ ಎನ್ನುವಂತಿದೆ ಈ ಗೆಲಾಕ್ಸಿ.. ಕಪ್ಪುಕುಳಿ.. ಕ್ಷೀರಪಥ ದ ಬಗೆಗಿನ ಲೇಖನ.. ಊಹೆಗೂ ಮೀರಿದ ಕಲ್ಪನೆ ಮತ್ತು ಅದಕ್ಕೆ ಬೇಕಾದ ವೈಜ್ಞಾನಿಕ ಸಂಶೋಧನೆಗಳು.. ವರ್ಷಗಳ ಸಂಶೋಧನೆ.. ವಿಜ್ಞಾನಿಗಳ ಅವಿರತ ಹುಡುಕಾಟ.. ನೋಬಲ್ ಪ್ರಶಸ್ತಿ ಎಷ್ಟೊಂದು ಅಮೂಲ್ಯ ಅನ್ನಿಸುವ ಹಾಗೆ.. ?

  4. Shivanand

    A qualitative article in Kannada about black hole. Thank you sir.

Leave a Reply