ಕನ್ನಡನಾಡನ್ನು ಶ್ರೀಗಂಧದ ಬೀಡು ಎಂದೆಲ್ಲಾ ಹಾಡಿ ಹೊಗಳಿರುವ ಉದಾಹರಣೆಗಳು ಸಾಕಷ್ಟಿರುವಾಗ ಸಸ್ಯಯಾನದಲ್ಲಿ ಶ್ರೀಗಂಧದ ಕಂಪು ಬರದಿದ್ದರೆ ಹೇಗೆ? ಶಿವಮೊಗ್ಗಾ ಜಿಲ್ಲೆಯವನಾದ ನನಗೆ ಬಾಲ್ಯದಲ್ಲಿನ ಕೆಲವು ಘಟನೆಗಳು ಶ್ರೀಗಂಧದ ಪರಿಮಳವನ್ನು ಶಾಶ್ವತವಾಗಿರಿಸಿವೆ. ಪ್ರಾಥಮಿಕ ಶಾಲೆಯ ಸಮಾಜವಿಜ್ಞಾನ ಪುಸ್ತಕದಲ್ಲಿ ಶಿವಮೊಗ್ಗಾ ಜಿಲ್ಲೆಯ ಭೂಗೋಳವು ಪಾಠವಾಗಿತ್ತು. ಶಿವಮೊಗ್ಗ ಜಿಲ್ಲೆಯ ಶ್ರೀಗಂಧವು ಹೆಸರುವಾಸಿಯೆಂದೂ, ಶಿವಮೊಗ್ಗದಲ್ಲಿರುವ ಶ್ರೀಗಂಧದೆಣ್ಣೆಯ ಕಾರ್ಖಾನೆಯು ಪ್ರಸಿದ್ಧವಾದದೆಂದೂ ಪಾಠದಲ್ಲಿತ್ತು. ಅದರ ಜೊತೆಯಲ್ಲಿ ಆಗ ಶಾಲಾ ಶೈಕ್ಷಣಿಕ ಪ್ರವಾಸಕ್ಕೆಂದು ಶಿವಮೊಗ್ಗಾಕ್ಕೆ ನಮ್ಮ ಹಳ್ಳಿಯಿಂದ ಹೋದಾಗ ಶ್ರೀಗಂಧದ ಎಣ್ಣೆಯ ಕಾರ್ಖಾನೆಗೂ ಹೋಗಿದ್ದು ಸಹಾ ಬಹಳ ಮುಖ್ಯವಾದುದು. ಅಲ್ಲಿನ ಸಿಬ್ಬಂದಿಯೊಬ್ಬರು ಹೇಳಿದ “ಒಳ್ಳೆಯ ಎಣ್ಣೆಯು ಇಳುವರಿಯು ಬರಬೇಕಾದರೆ ಅದು ಚೆನ್ನಾಗಿ ಬಲಿತ ಮರದಿಂದ ಮಾತ್ರವೇ ಸಾಧ್ಯ” ಎಂಬ ಮಾತು ಮರೆಯದಂತೆ ನೆನಪಿನಲ್ಲಿ ಉಳಿದಿದೆ. ಆ ದಿನಗಳಲ್ಲಿಯೇ ಅಮ್ಮನಿಗೆ ಸಹಾಯ ಮಾಡಲು ಮನೆಯಲ್ಲಿ ದೇವರ ಪೂಜೆಗೆ ದಿನವೂ ಗಂಧವನ್ನು ತೇಯ್ದು ಅಣಿ ಮಾಡಬೇಕಿತ್ತು. ಆಗಿನ ಪುಟ್ಟ ಶ್ರೀಗಂಧದ ಮರದ ಕೊರಡಿನಿಂದ ಗಂಧ ತೇಯುವಾಗ ಹೊಮ್ಮುತ್ತಿದ್ದ ಪರಿಮಳ ಈಗ ನೆನಪು ಮಾತ್ರ! ಶ್ರೀಗಂಧ ನಿಜಕ್ಕೂ ಕನ್ನಡನೆಲದ ಹಿರಿಮೆ. ಅದರಲ್ಲೂ ನನ್ನ ಜಿಲ್ಲೆಯ ಶ್ರೀಗಂಧಕ್ಕೆ ಒಂದು ತೂಕ ಹೆಚ್ಚೇ ಹಿರಿಮೆಯಿತ್ತು. ಬಾಲ್ಯದ ಅದರ ಮಧುರ ನೆನಪುಗಳು, ಆ ಗಿಡವನ್ನು ಸ್ವತಃ ಕೃಷಿಕಾಲೇಜಿನ ಅರಣ್ಯತೋಪಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕಾಣುವಾಗ ಮತ್ತು ಅದರ ಸಸ್ಯಜೀವನದ ಕುರಿತು ಈಗ ಬರೆಯುತ್ತಿರುವಾಗಲೂ ಅಮೋಘ ಎನಿಸುತ್ತಿವೆ.
ನಮ್ಮಲ್ಲಿ ಬೆಳೆಯುವ ಶ್ರೀಗಂಧದ ಸಸ್ಯವನ್ನು ವೈಜ್ಞಾನಿಕವಾಗಿ ಸ್ಯಂಟಲಮ್ ಆಲ್ಬಮ್ (Santalum album) ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಸ್ಯಂಟಲಮ್ ಪದವು ಪರಿಮಳ ಎಂಬ ಅರ್ಥವುಳ್ಳ ಸಂಸ್ಕೃತದ “ಚಂದನ” ಅಥವಾ ಅರಬ್ಬಿ ಹಾಗೂ ಪರ್ಷಿಯನ್ ಪದವಾದ “ಶಾಂಡಲ್” ನಿಂದ ಸೃಷ್ಟಿಯಾಗಿದೆ. ಪ್ರಭೇದದ ಹೆಸರಾದ “ಆಲ್ಬಮ್ Album” -ಲ್ಯಾಟಿನ್ ಮೂಲದ “albus -white-coloured”.-ಬಿಳಿಯ ಬಣ್ಣದ ಎಂಬ ಪದದಿಂದ ಉತ್ಪನ್ನವಾಗಿದೆ. ಇದು ಸಂಟಾಲೇಸಿಯೆ (Santalaceae) ಸಸ್ಯ ಕುಟುಂಬಕ್ಕೆ ಸೇರಿದೆ. ಸರಿ ಸುಮಾರು 4ರಿಂದ 9 ಮೀಟರ್ ಎತ್ತರಕ್ಕೆ ಬೆಳೆಯುವ ಈ ಸಸ್ಯವು ಮರವಾಗಿ ಬೆಳೆಯಲು ಮತ್ತೊಂದು ಗಿಡವನ್ನು ಆಶ್ರಯಿಸುವ ಪರೋಪಜೀವಿ. ಮತ್ತೊಂದು ಶ್ರೀಗಂಧದ ಗಿಡ ಅಥವಾ ಇತರೆ ಸುಮಾರು 300 ಪ್ರಭೇದಗಳನ್ನು ಆಶ್ರಯಿಸಿ ಬೆಳೆಯುತ್ತದೆ. ಒಂದೊಂದು ಗಿಡವೂ ಮತ್ತಾವುದಾದರೂ ಸಸ್ಯದ ಬೇರನ್ನು ಆಶ್ರಯಿಸುತ್ತದೆ. ಶ್ರೀಗಂಧದ ಬೇರುಗಳು ಆಶ್ರಯಕೊಟ್ಟ ಸಸ್ಯದ ಬೇರಿನ ಜೊತೆಗೆ ಸೇರಿಕೊಂಡು ಆ ಸಸ್ಯದಿಂದ ನೀರು ಪೋಷಕಾಂಶಗಳನ್ನು ಪಡೆಯುತ್ತಾ ಬೆಳೆಯುತ್ತವೆ. ಅದರಲ್ಲೂ ಗಿಡವಾಗಿದ್ದಾಗ ನೆರಳಿಗೂ ಪಕ್ಕದ ಗಿಡದ ಸಹಾಯವನ್ನು ಬೇಡುತ್ತದೆ. ಶ್ರೀಗಂಧವು ನೂರಾರು ವರ್ಷಗಳವರೆಗೂ ಜೀವಿಸಬಲ್ಲ ಸಸ್ಯ. ಅದರ ಮರದಿಂದ ಪರಿಮಳವು ಬರಲು ಮರದ ಒಳಭಾಗವು(ಹಾರ್ಟ್ ವುಡ್) ಸಾಕಷ್ಟು ಬಲಿಯಬೇಕಾಗುತ್ತದೆ. ಮರದ ತೊಗಟೆಯು ಕೆಂಬಣ್ಣದಿಂದ-ಕಂದು ಬಣ್ಣದ ಮಿಶ್ರಣವಾಗಿರುತ್ತದೆ, ಒಳ ಮರದ ಬಣ್ಣವು ಹಸಿರು ಮಿಶ್ರಿತವಾದ ಮಾಸಲು ಬಿಳಿಯನ್ನು ಹೋಲುತ್ತದೆ. ಅದನ್ನೇ “ಚಂದನ” ಎಂದೂ ಹೆಸರಿಸಲೂ ಕಾರಣವಾಗಿದೆ. ಶ್ರೀಗಂಧವು ಅಪ್ಪಟ ಕರುನಾಡಿನ ಸಸ್ಯವಾದ್ದರಿಂದ ನಮ್ಮ ನಾಡಿನ ಕನ್ನಡ ದೂರದರ್ಶನ ಚಾನಲ್ ಕೂಡ “ಚಂದನ ವಾಹಿನಿ”ಯಾಗಿದೆ.
ಇದೇ ಸಂಕುಲದ ಇತರೇ ಕೆಲವು ಪ್ರಭೇದಗಳು ಮುಖ್ಯವಾಗಿ ಆಸ್ಟ್ರೇಲಿಯಾದ ಸ್ಯಂಟಲಮ್ ಸ್ಪಿಕೆಟಮ್ (Santalum spicatum) ಮುಂತಾದವು ಪರಿಮಳಯುಕ್ತವಾದವು. ಆದರೆ ಅವುಗಳಿಗೆ ನಮ್ಮ ಶ್ರೀಗಂಧದ ಹಿರಿಮೆ ಇಲ್ಲ. ಇಲ್ಲಿನ ಸ್ಯಂಟಲಮ್ ಆಲ್ಬಮ್ ಮರದ ಪರಿಮಳ ಹಾಗೂ ತೈಲದ ಇಳುವರಿ ಎರಡರಲ್ಲೂ ಹೆಗ್ಗಳಿಕೆಯು ಹೆಚ್ಚು. ಕೆಲವು ಕಾರಣದಿಂದ ಆಸ್ಟ್ರೇಲಿಯಾದಿಂದ ಗಂಧವನ್ನು ಆಮದು ಮಾಡಿಕೊಂಡು ಬಳಸುವಾಗ ಅದರ ತೈಲದ ಇಳುವರಿಯು ನಮ್ಮ ಶ್ರೀಗಂಧಕ್ಕಿಂತ ಸುಮಾರು ಅರ್ಧದಷ್ಟಾದ ಅನುಭವ ನಮ್ಮ ಕೈಗಾರಿಕೆಗಳಿಗಿದೆ. ಮೈಸೂರಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಮೈಸೂರಿನಲ್ಲಿ ಶ್ರೀಗಂಧದ ಎಣ್ಣೆಯ ವಿಭಾಗವು 1916ರಲ್ಲೇ ಆರಂಭವಾಗಿತ್ತು. ಮುಂದೆ ಮೈಸೂರು ಸ್ಯಾಂಡಲ್ ಸೋಪ್ ಕೂಡ ತಯಾರಾಯಿತು. ಅದರ ವಿವರ ಮುಂದೆ ನೋಡೋಣ.
ಈ ಸ್ಯಂಟಲಮ್ ಸಂಕುಲದ ಬಹುಪಾಲು ಸದಸ್ಯರು ತಾವೇ ದ್ಯುತಿಸಂಶ್ಲೇಷಣೆಯಿಂದ ಆಹಾರ ತಯಾರಿಸಿಕೊಂಡರೂ, ತಮ್ಮ ಜೀವನಕ್ಕೆ ಬೇಕಾದ ನೀರು ಮತ್ತು ಮಣ್ಣಿನಿಂದ ಪಡೆಯುವ ಖನಿಜಾಂಶಗಳಿಗೆ ಬೇರೊಂದು ಸಸ್ಯವನ್ನು ಆಶ್ರಯಿಸುತ್ತವೆ. ಶ್ರೀಗಂಧ ಸಸ್ಯದ ಬೇರುಗಳನ್ನು ಹ್ಯುಸ್ಟೊರಿಯಮ್ ಬೇರುಗಳೆಂದು ಕರೆಯುತ್ತಾರೆ. ಈ ಹ್ಯುಸ್ಟೊರಿಯಮ್ ಬೇರಗಳು ಆಶ್ರಯದಾತ ಸಸ್ಯದ ಬೇರಗಳ ಒಳಹೊಕ್ಕು ಆ ಬೇರುಗಳಿಂದ ನೀರು-ಆಹಾರವನ್ನು ಪಡೆಯುತ್ತವೆ. ನೇರವಾಗಿ ಮಣ್ಣಿನಿಂದ ಹೀರುವುದಿಲ್ಲ. ಆದರೆ ಇತ್ತೀಚೆಗಿನ ಕೆಲವು ಅಧ್ಯಯನಗಳು ಶ್ರೀಗಂಧವೂ ಸಹಾ ಬೇರೊಂದು ಗಿಡಕ್ಕೆ ಅದೇ ಸಹಾಯವನ್ನು ಮಾಡುವುದು ಎಂದೂ ತಿಳಿಸಿದ್ದರೂ, ಇದೊಂದು ಪರೋಪಜೀವಿ ಎಂಬ ತಿಳಿವು ಸಸ್ಯವಿಜ್ಞಾನದಲ್ಲಿ ಜನಜನಿತ. ಇದೇ ಕಾರಣದಿಂದ ಬೇರುಗಳಲ್ಲಿಯೂ ಸಾಕಷ್ಟು ಹೆಚ್ಚೇ ತೈಲವಿದ್ದರೂ ಬೇರ್ಪಡಿಸಿ ಪಡೆಯುವುದು ಕಷ್ಟ. ಸಾಮಾನ್ಯವಾಗಿ ನಿತ್ಯಹಸಿರಾದ ಶ್ರೀಗಂಧವು ಹುಟ್ಟಿದ ಏಳನೆಯ ವರ್ಷಕ್ಕೆ ಮೊದಲ ಹೂವನ್ನು ಬಿಡುತ್ತದೆ. ಎಳೆಯ ಮರದ ಹೂವುಗಳು ಬಿಳಿಯ ಬಣ್ಣದವಾಗಿರುತ್ತವೆ. ಸಸ್ಯಕ್ಕೆ ವಯಸ್ಸಾದಂತೆ ಹೂವುಗಳ ಬಣ್ಣವೂ ಕೆಂಪು ಅಥವಾ ಕಿತ್ತಿಳೆ ಬಣ್ಣದ ಹೂವುಗಳನ್ನು ಬಿಡುತ್ತದೆ. ಮುಖ್ಯ ಕಾಂಡವು ಸಸ್ಯಕ್ಕೆ ಹತ್ತು ವರ್ಷವಾಗುವವರೆಗೂ ಸುವಾಸನೆಯನ್ನು ಪಡೆದಿರುವುದಿಲ್ಲ. ಹತ್ತು ವರ್ಷದ ನಂತರವೇ ಗಿಡದ ಪರಿಮಳವು ಏರುತ್ತಾ ಸಾಗುತ್ತದೆ. ಹಾಗಾಗಿ ಹೆಚ್ಚು ವಯಸ್ಸಾದ ಮರಗಳಿಂದ ಮಾತ್ರವೇ ಉತ್ತಮ ತೈಲವನ್ನು ಪಡೆಯಲು ಸಾಧ್ಯ.
ಕಳೆದ 2002 ರಿಂದ ನಂತರವೇ ಯಾರಾದರೂ ಶ್ರೀಗಂಧವನ್ನು ಬೆಳೆಯಲು ಅನುಮತಿಸಲಾಗಿದೆ. ಅದಕ್ಕೂ ಮೊದಲು ಮೈಸೂರಿನ ಟಿಪ್ಪು ಸುಲ್ತಾನ್ ವಿಧಿಸಿದ್ದ ಕಾಯಿದೆಯಂತೆಯೇ ಮುಂದುವರೆದು ಕೇವಲ ಸರ್ಕಾರ ಮಾತ್ರವೇ ಬೆಳೆಯಬಹುದಾಗಿತ್ತು. ಹಾಗಾಗಿ ಈಗ ಕಳೆದ ಸುಮಾರು 15-16 ವರ್ಷದಿಂದ ಮಾತ್ರವೇ ರೈತರಿಗೆ ಶ್ರೀಗಂಧದ ಅನುಭವವಿರಲು ಸಾಧ್ಯವಿದೆ. ಆದ್ದರಿಂದ ಶ್ರೀಗಂಧದ ಕೃಷಿಯಲ್ಲಿನ್ನೂ ಸಾಮಾನ್ಯ ಅರಿವು ಸಾಕಷ್ಟಿಲ್ಲ. ಹಾಗಿದ್ದೂ ನೂರಾರು ಸುದ್ಧಿಗಳು ಪ್ರಚಾರದಲ್ಲಿವೆ. ಕಾನೂನು, ರೈತರ ಅನುಭವಗಳು, ಕೊಯಿಲು, ಲಾಭ-ನಷ್ಟಗಳು, ಮಾರಾಟ ಇತ್ಯಾದಿಗಳ ಬಗೆಗಿನ್ನೂ ತೀರ್ಮಾನ ಕೊಡುವುದು ಇನ್ನೂ ಕಷ್ಟಕರ. ಕೇವಲ 3-4 ವರ್ಷಗಳ ರೈತರ ಅನುಭವವನ್ನು ಸಾರ್ವಜನಿಕ ತಿಳಿವನ್ನಾಗಿ ರೂಪಿಸುವುದು ಕೃಷಿ ಪರಂಪರೆಗೆ ಅವಮಾನ! ಹಾಗಾಗಿ ಒಂದೆರಡು ವರ್ಷಗಳ, ಒಂದೆರಡು ಉದಾಹರಣೆಗಳಿಂದ ಇಡೀ ಕೃಷಿಯ ತಿಳಿವನ್ನು ಸಾರಾಸಗಟಾಗಿ ಹೀಗೆ ಎಂದು ಹೇಳುವುದು ತಪ್ಪಾದೀತು. ಪ್ರಾಸಂಗಿಕವಾಗಿ ಉದಾಹರಿಸಲು ಯೋಗ್ಯವಷ್ಟೇ!
ಶ್ರೀಗಂಧವನ್ನು ಬೆಳೆಯಲು ಅನುಮತಿಸಿದ್ದರೂ ಇನ್ನೂ ಜನಪ್ರಿಯ ಬೆಳೆಯಾಗಿಸಲು ಸಾಧ್ಯವಾಗಿಲ್ಲ. ಇನ್ನೂ ರೈತರಿಗೆ ಮುಕ್ತವಾದ ವಾತಾವರಣ ಸೃಷ್ಟಿಯಾಗಿಲ್ಲ. ಕೆಲವೇ ವರ್ಷಗಳಿಂದ ಜನರಿಗೆ ತಿಳಿವಳಿಕೆಯು ದೊರೆಯುತ್ತಿದೆ. ಬೀಜಗಳಿಂದಲೇ ಶ್ರೀಗಂಧದ ಸಸಿಗಳನ್ನು ಪಡೆಯಬಹುದಾಗಿದ್ದು, ನಾಟಿ ಮಾಡಲು ಬೇರೆ ಕೆಲವು ಗಿಡ-ಮರಗಳ ಜೊತೆಯಲ್ಲಿ ಮಾಡಬೇಕಾಗುತ್ತದೆ. ಪ್ರತೀ ಮರವೂ 16 ವರ್ಷದಿಂದ 20 ವರ್ಷದಲ್ಲಿ ಕಟಾವು ಮಾಡಲು ಯೋಗ್ಯವಾಗಿರುತ್ತವೆ. ಸಾಮಾನ್ಯ ಇಳುವರಿಯಲ್ಲಿ ಶ್ರೀಗಂಧದ ಒಳ-ಮರ ಅಥವಾ ಚೇಗು (ಹಾರ್ಟ್ ವುಡ್) ಹೆಚ್ಚು ಪರಿಮಳವನ್ನು ಪಡೆದಿರವುದು ಮುಖ್ಯವಾದುದು. ಪ್ರತಿಶತ 10-12 ರಷ್ಟು ತೇವಾಂಶ ಮಾತ್ರವೇ ಇರುವ ಒಣಮರದ ಒಳಮೈಯಲ್ಲಿ ಸುಮಾರು ೪ರಿಂದ೫ ಪ್ರತಿಶತ ಪರಿಮಳಯುಕ್ತ ಎಣ್ಣೆಯನ್ನು ಪಡೆಯಬಹುದು. ಬೇರಿನಿಂದ ಹೆಚ್ಚು ಪಡೆಯಬಹುದೆಂಬ ಉದಾಹರಣೆಗಳಿದ್ದರೂ ಒಟ್ಟು ಬೇರಿನ ದ್ರವ್ಯರಾಶಿ ಕಡಿಮೆ. 16-20 ವರ್ಷ ವಯಸ್ಸಾದ ಮರಗಳು ಪ್ರತಿಯೊಂದೂ 4ರಿಂದ 6 ಕಿಲೊಗ್ರಾಂ ನಷ್ಟು ಒಳಮರದ ಮೈ (ಹಾರ್ಟ್ ವುಡ್) ಹಾಗೂ 40-60 ಕಿಲೋ ಹೊರ-ಮರ (ಸಾಫ್ಟ್ ವುಡ್) ಇಳುವರಿಯನ್ನು ಕೊಡಬಲ್ಲವು. ಉದ್ಯಮಗಳಲ್ಲಿ ಮುಖ್ಯವಾಗಿ ಹಾರ್ಟ್‌ವುಡ್ ಬಳಕೆಯೇ ಹೆಚ್ಚು ಪ್ರಚಲಿತವಾದುದು. ಪ್ರತೀ ಮರವೂ 150ರಿಂದ 280ಮಿ.ಲೀ ತೈಲವನ್ನು ಕೊಡಬಲ್ಲವು. ಪ್ರತೀ ಕಿಲೋ ಹಾರ್ಟ್‌ವುಡ್ 8000 ರುಪಾಯಿಗಳವರೆಗೂ ಮಾರಾಟವಾಗುತ್ತದೆ. ಪ್ರತೀ ಎಕರೆಗೆ ಅರ್ಧಟನ್ ಯಿಂದ ಒಂದು ಟನ್ ಇಳುವರಿ 20 ವರ್ಷದಲ್ಲಿ ಬರುವ ಸಾಧ್ಯತೆ ಇದೆ. ಪ್ರತೀ ವರ್ಷಕ್ಕೆ ಪ್ರತೀ ಎಕರೆಗೆ 50 ಕಿಲೋ ಹಾರ್ಟ್ ವುಡ್ ಉತ್ಪಾದನೆ ಸಾಧ್ಯವಿದೆ. ಪ್ರತೀ ಎಕರೆಗೆ 3ರಿಂದ 4ಲಕ್ಷ ಸರಾಸರಿ ವರ್ಷಕ್ಕೆ ಪಡೆಯಬಹುದು. ಇದು ಲೆಕ್ಕಾಚಾರ ಅಷ್ಟೆ. ಆಸ್ಟ್ರೇಲಿಯಾದಲ್ಲಿ ಇದೊಂದು ದೊಡ್ಡ ಉದ್ಯಮ. ಅಲ್ಲಿನ ಸಂಶೋಧನೆಗಳ ಪ್ರಕಾರ 16 ವರ್ಷಗಳು ತುಂಬಿದ ನಂತರದ ಶ್ರೀಗಂಧವನ್ನು ಕೊಯಿಲು ಮಾಡಬಹುದಾಗಿದೆ. ಅಲ್ಲಿ ನಮ್ಮ ಬಿಳಿಯ ಶ್ರೀಗಂಧವನ್ನೂ ಬೆಳೆಯುವ ಬೆಳೆಗಾರರಿದ್ದಾರೆ. ಅಲ್ಲಿನ ಆಸ್ಟ್ರೇಲಿಯನ್ ಶ್ರೀಗಂಧ ಸ್ವಲ್ಪ ಕೆಂಪು ಮಿಶ್ರಿತ ಬಣ್ಣವನ್ನು ಹೊಂದಿರುತ್ತದೆ. ಆದರೆ ರಕ್ತ ಚಂದನವಲ್ಲ. ರಕ್ತ ಚಂದನವು ಶ್ರೀಗಂಧದ ಸಂಬಂಧಿಯಲ್ಲ. ಅದರ ಕುಟುಂಬವನ್ನೂ ಸೇರಿಲ್ಲ. ರಕ್ತ ಚಂದನದಲ್ಲಿ ಪರಿಮಳವೇ ಇರುವುದಿಲ್ಲ. ಕೇವಲ ಕೆಂಪಾದ ಅದ್ಭುತ ಬಣ್ಣದ ಮರವಾಗಿದ್ದು ಒಳಮೈ ಚೆಲುವಾಗಿರುತ್ತದೆ.
ಇತ್ತೀಚೆಗೆ ಬೆಳೆಯಲು ಅನುವು ಮಾಡಿಕೊಟ್ಟ ಮೇಲೆ ಖಾಸಗಿ ಜಮೀನಿನಲ್ಲಿ ಶ್ರೀಗಂಧವನ್ನು ಬೆಳೆಯಲಾಗುತ್ತಿದೆ. ಇದಕ್ಕೆ ಬಹು ಮುಖ್ಯವಾದ ಕಾರಣ ಹಿಂದೆಲ್ಲಾ ಸಾಕಷ್ಟು ಶ್ರೀಗಂಧವನ್ನು ಬೇಕಾ ಬಿಟ್ಟಿಯಾಗಿ ಕೊಯಿಲು ಮಾಡಿದ್ದಲ್ಲದೆ, ಅದರ ಮುಂದುವರಿಕೆಯ ಕೃಷಿಯ ತಿಳಿವೂ ಸಹಾ ಕಡಿಮೆ ಇತ್ತು. ಇದೀಗ ಹಲವಾರು ರೈತರು ಶ್ರೀಗಂಧವನ್ನು ನಾಟಿ ಮಾಡಿದ್ದರೂ ಕೊಯಿಲಿಗೆ ಇನ್ನೂ ಬರಬೇಕಿದೆ. 2005ರ ನಂತರದ ನಾಟಿಗಳಾದ್ದರಿಂದ ಇನ್ನೂ ಪರಿಮಳಯುಕ್ತ ಮರದ ಕೊಯಿಲು ಸಾಧ್ಯವಾಗಿಲ್ಲ. ಇತ್ತೀಚೆಗೆ ವರ್ಷದಿಂದ ವರ್ಷಕ್ಕೆ ಶ್ರೀಗಂಧದ ಕೃಷಿಯು ಹೆಚ್ಚುತ್ತಿದೆ. ಸಾಕಷ್ಟು ಮರದ ಕೊರತೆಯ ಕಾರಣದಿಂದ ಶ್ರೀಗಂಧದ ಮರವನ್ನು ಬೆಳೆಯಲು ಪ್ರೋತ್ಸಾಹಿಸಲಾಗುತ್ತಿದೆ.
ಶ್ರೀಗಂಧದ ಬೀಡು ಕರ್ನಾಟಕ:
ಒಂದು ಕಾಲಕ್ಕೆ ಅಂದರೆ 1950ಕ್ಕೂ ಮೊದಲ ದಿನಗಳಲ್ಲಿ ಭಾರತದಲ್ಲಿ ಸ್ಯಂಟಲಮ್ ಆಲ್ಬಮ್ ಪ್ರಭೇದದ ಒಟ್ಟು ಕೊಯಿಲು ಸುಮಾರು 4000-5000ಟನ್ನುಗಳಷ್ಟುತ್ತು. ಅದರಲ್ಲಿ ಪ್ರತಿಶತ 90-95ರಷ್ಟು ಕರ್ನಾಟಕವೇ ಮಾಡುತ್ತಿತ್ತು. ಬರು-ಬರುತ್ತಾ ಅದರ ಬೆಳೆಯುವ ಅರಿವು, ಸಂರಕ್ಷಣೆ, ಜೀವಿವೈವಿಧ್ಯದಲ್ಲಿ ಅದರ ಸ್ಥಾನ ಮುಂತಾದವುಗಳ ಅಧ್ಯಯನಗಳ ಕೊರತೆಯಿಂದ ಜೊತೆಗೆ ಬೇಕಾ-ಬಿಟ್ಟಿಯಾದ ಕೊಯಿಲಿನಿಂದ ಈಗ ಸರಾಸರಿ 500ಟನ್ನು ಮಾತ್ರವೇ ಉತ್ಪಾದನೆಯಾಗುತ್ತಿದೆ. ಜಾಗತಿಕ ಬೇಡಿಕೆಯ ಮುಕ್ಕಾಲು ಭಾಗವನ್ನು ಕರ್ನಾಟಕ ಒಂದೇ ಉತ್ಪಾದಿಸುತ್ತಿತ್ತು. ಆದರೀಗ ಪರಿಸ್ಥಿತಿ ಬದಲಾಗಿದೆ. ಎಷ್ಟರ ಮಟ್ಟಿಗೆ ಎಂದರೆ 1944ರಲ್ಲಿ ಆರಂಭಿಸಿದ ಶಿವಮೊಗ್ಗಾದ ಶ್ರೀಗಂಧದ ಎಣ್ಣೆಯ ಕಾರ್ಖಾನೆಯನ್ನು ಸ್ಥಗಿತಗೊಳಿಸಿ ದಶಕಗಳೇ ಆಗಿವೆ.
ಮೈಸೂರು ಸ್ಯಾಂಡಲ್ ಸೋಪ್ ಜಗತ್ತಿನಲ್ಲಿ ಅಪ್ಪಟ (100%) ಶ್ರೀಗಂಧದ ಎಣ್ಣೆಯನ್ನು ಬಳಸಿ ಮಾಡಿದ ಮೊಟ್ಟ ಮೊದಲ ಸ್ನಾನದ ಸೋಪು. ಕರ್ನಾಟಕದ ಅತ್ಯಂತ ಜನಪ್ರಿಯವಾದ ಸೋಪ್ ಸ್ಯಾಂಡಲ್ ಸೋಪ್. ಶ್ರೀಗಂಧದೆಣ್ಣೆಯ ಘಟಕವನ್ನು ನಾಲ್ವಡಿ ಶ್ರೀಕೃಷ್ಣರಾಜರ ಕಾಲದಲ್ಲಿ ಸರ್. ಎಂ. ವಿಶ್ವೇಶ್ವರಾಯನವರ ದೂರದೃಷ್ಟಿಯಿಂದ ಸ್ಥಾಪಿಸಲಾಯಿತು. ಸೋಪ್ ತಯಾರಿಯನ್ನು ಇಂಗ್ಲೇಂಡಿನಿಂದ ಕಲಿತು ಬರಲೆಂದೇ ಇಂಡಿಯನ್ ಇನ್ಸ್‌ಸ್ಟಿಟ್ಯೂಟ್ ನ ಎಸ್. ಜಿ. ಶಾಸ್ತ್ರಿ (ಸೋಸಲೆ ಶಾಸ್ತ್ರಿ) ಎಂಬ ವಿಜ್ಞಾನಿಯೊಬ್ಬರನ್ನು ಕಳಿಸಲಾಗಿತ್ತು. ಮುಂದೆ ಅವರು ಸೋಪ್ ಶಾಸ್ತ್ರಿ ಎಂದೇ ಖ್ಯಾತರಾದರು. ಅವರ ಜೊತೆ ಎಂ.ಎಸ್. ಕೃಷ್ಣರಾವ್ ಎಂಬ ರಸಾಯನತಜ್ಞರೂ ಜೊತೆಗೂಡಿ ಶ್ರೀಗಂಧದ ಸೋಪನ್ನು ರೂಪಿಸಿದರು. ಶಾಸ್ತ್ರಿಯವರು ಆಗೆಲ್ಲಾ ದೊರಕುತ್ತಿದ್ದ ಚಚ್ಚೌಕಾಕಾರದ ಸೋಪಿಗೆ ಬದಲಾಗಿ “ಓವಲ್” (ಮೊಟ್ಟೆ)ಯ ರೂಪುಕೊಟ್ಟು, “ಸಿಂಹದ ದೇಹಕ್ಕೆ ಆನೆ“ಯ ಮುಖದ “ಶರಭ” ಎಂಬ ಊಹಾತ್ಮಕವಾದ ಪ್ರಾಣಿಯನ್ನು “ಬ್ರಾಂಡ್ ಲೋಗೊ” ಮಾಡಿ ಬಿಡುಗಡೆಮಾಡಿದರು. (ಕೃಷ್ಣರಾವ್ ಅವರ ಮಕ್ಕಳು ನನ್ನ ಹಿರಿಯ ಮಿತ್ರರು ಎನ್ನುವುದು ವೈಯಕ್ತಿವಾಗಿ ನನಗೆ ಖುಷಿಯ ಸಂಗತಿ). ಮೈಸೂರ್ ಸ್ಯಾಂಡಲ್ ಸೋಪ್ ಶತಮಾನೋತ್ಸವವನ್ನು 2016 ರಲ್ಲಿಯೇ ಆಚರಿಸಿದೆ.
ಶ್ರೀಗಂಧವು ಮುಖ್ಯವಾಗಿ ಪರಿಮಳಯುಕ್ತವಾದ ಎಣ್ಣೆಯನ್ನು ಉತ್ಪಾದನೆಗೆ ಬಳಸುವುದರಿಂದ ಅದರ ಉತ್ಪನ್ನಗಳು ಹಲವಾರು ಇವೆ. ಊದಬತ್ತಿ, ಪರಿಮಳ ಕೊಡುವ ಶಂಕಾಕಾರದ ಗಂಧದ ಬತ್ತಿ, ಜೊತೆಗೆ ವಿವಿಧ ಮೈಕಾಂತಿಯ ಕ್ರೀಮ್‌ಗಳೂ ಪ್ರಮುಖವಾದವು. ಜೊತೆಗೆ ಶ್ರೀಗಂಧವು ಆಯುರ್ವೇದ ಮುಂತಾದ ಪಾರಂಪರಿಕ ಔಷಧಿಯ ಪದ್ಧತಿಗಳಲ್ಲಿ ನಂಜುನಿರೋಧಕ ಮತ್ತು ಸಂಕೋಚಕವಾಗಿ ಮತ್ತು ತಲೆನೋವು, ಹೊಟ್ಟೆನೋವು ಮತ್ತು ಮೂತ್ರ ಮತ್ತು ಜನನಾಂಗದ ಕಾಯಿಲೆಗಳ ಚಿಕಿತ್ಸೆಗಾಗಿ ಬಳಸಲಾಗುತ್ತದೆ. ತೈಲವನ್ನು ಸಾಂಪ್ರದಾಯಿಕ ಔಷಧೀಯ ವ್ಯವಸ್ಥೆಯಲ್ಲಿ ಮೂತ್ರವರ್ಧಕ ಮತ್ತು ಸೌಮ್ಯ ಉತ್ತೇಜಕವಾಗಿ, ಜೊತೆಗೆ ಚರ್ಮವನ್ನು ಕಾಂತಿಯುತವಾಗಿ ಸುಗಮಗೊಳಿಸಲು ಬಳಸಲಾಗುತ್ತದೆ.
ಶಿವಮೊಗ್ಗಾ ಜಿಲ್ಲೆಯ ಸಾಗರ ಮತ್ತು ಸೊರಬ ತಾಲ್ಲೂಕುಗಳು ಶ್ರೀಗಂಧದ ಗುಡಿಗಾರಿಕೆಯಲ್ಲಿ ಹೆಸರು ವಾಸಿ. ಶ್ರೀಗಂಧದ ವಿವಿಧ ಕಲೆಗಾರಿಕೆಯ ಉತ್ಪನ್ನಗಳು ರಾಜ್ಯದ ಹೆಮ್ಮೆಯೂ ಹೌದು. ಅದರಲ್ಲೂ ಆನೆಯ ಮೇಲೆ ಅಂಬಾರಿಯ ಹೊತ್ತ ಶ್ರೀಗಂಧದ ಪ್ರತಿಮೆಯು ಅದೆಷ್ಟೋ ಸಂದರ್ಭಗಳಲ್ಲಿ ರಾಜ್ಯದಿಂದ ನೆನಪಾಗಿ ವಿತರಣೆಯಾಗಿದೆ. ಈಗಲೂ ಈ ಪ್ರತಿಮೆಯು ಅನೇಕ ಪ್ರವಾಸಿಗಳಿಗೆ ಕೊಡುಗೆಯಾಗಿ ನೀಡುವುದುಂಟು. ಇದು ಮೈಸೂರಿನ ಹಾಗೂ ಶ್ರೀಗಂಧದ ನೆನಪನ್ನು ಹೊತ್ತು ಒಯ್ಯುವ ಕ್ಷಣಗಳಿಗೆ ಸಾಕ್ಷಿಯಾಗುತ್ತಿದೆ. ಅದಲ್ಲದೆ ಶ್ರೀಗಂಧದ ಹಾರವಂತೂ ಅತ್ಯಂತ ಜನಪ್ರಿಯವಾದುದು. ಉಳಿದಂತೆ ಅನೇಕ ಬಗೆಯ ಕಳೆಯ ಉತ್ಪನ್ನಗಳು ಶ್ರೀಗಂಧವನ್ನು ಬಳಸಿ ತಯಾರಿಸಲಾಗುತ್ತದೆ. ಗುಡಿ ಕೈಗಾರಿಕೋಧ್ಯಮದಲ್ಲಿ ಶಿವಮೊಗ್ಗಾದ ಶ್ರೀಗಂಧದ ಉತ್ಪನ್ನಗಳು ಜಗದ್ವ್ಯಾಪಿ ಹೆಸರನ್ನು ಪಡೆದಿವೆ.
ಕನ್ನಡ ಚಿತ್ರರಂಗ -ಸ್ಯಾಂಡಲ್ ವುಡ್
ಇಂಗ್ಲೀಶ್ ಚಿತ್ರರಂಗವನ್ನು “ಹಾಲಿವುಡ್” ಎಂದು ಕರೆದರೆ ಹಿಂದಿಯು ಬಾಲಿವುಡ್ ಆಗಿದೆ. ನಮ್ಮ ಕನ್ನಡ ಚಿತ್ರರಂಗವು ಶ್ರೀಗಂಧದ ಕಂಪನ್ನು ಇರಿಸಿಕೊಳ್ಳಲು “ಸ್ಯಾಂಡಲ್ ವುಡ್” ಆಗಿದೆ. “ನಾವಾಡುವ ನುಡಿಯೇ ಕನ್ನಡ ನುಡಿ… ಹಾಡನ್ನು” ಪಿ.ಬಿ.ಶ್ರೀನಿವಾಸ್ ರವರ ದ್ವನಿಯನ್ನು ಮತ್ತು ಡಾ. ರಾಜಕುಮಾರ್ ಅವರ ಅಭಿನಯವನ್ನು “ಗಂಧದ ಗುಡಿ” ಚಿತ್ರದಲ್ಲಿ ಆನಂದಿಸದ ಕನ್ನಡಗರು ಇಲ್ಲ. ನಿಜಕ್ಕೂ “ನಾವಿರುವ ತಾಣವೇ.. ಗಂಧದ ಗುಡಿ… ಶ್ರೀಗಂಧದ ಗುಡಿ”.
ನವೆಂಬರ್ ತಿಂಗಳ ಸಸ್ಯಯಾನದಲ್ಲಿ ಸಹಚರರಾಗಿರುವ ಎಲ್ಲಾ ಓದುಗರಿಗೂ ಶ್ರೀಗಂಧದ ಪರಿಮಳಯುಕ್ತವಾದ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು…
ನಮಸ್ಕಾರ.
ಡಾ. ಟಿ.ಎಸ್. ಚನ್ನೇಶ್.
ಸರಳವಾಗಿ, ನಮ್ಮದೇ ವಿಶೇಷ ಮರವೊಂದನ್ನು ಪರಿಚಯಿಸಿದ್ದೀರಿ!! ನವಂಬರ ತಿಂಗಳಿಗೆ ಸೂಕ್ತ ಕೂಡ!! ಧನ್ಯವಾದಗಳು ಚನ್ನೇಶ್ ಸರ್!!
ಲೇಖನ ಚೆನ್ನಾಗಿದೆ ಸರ್ 🌸
ಶ್ರೀಗಂಧದ ಸುಗಂಧದಿಂದಾಗಿಯೇ ಆ ಮರ ಅವನತಿಯ ಅಂಚಿಗೆ ತಲುಪಿದೆ.ಅದನ್ನ ಅವಲಂಬಿಸಿದ ಗುಡಿ ಕೈಗಾರಿಕೆಗಳು ಅವನತಿಯ ಅಂಚಿಗೆ ಸರಿದಿವೆ . ಮರ ಬೆಳೆಸಿದರೂ ಬೆಳೆಸಿದವನ ಕೈಗೆಟುಗದೆಯೇ ಕಳ್ಳಕಾಕರ ಜಾಲದಿಂದ ಮಾಯವಾಗುವ ಸ್ಥಿತಿ ಮಲೆನಾಡಿನ ಅಥವಾ ನಾಡಿನ ಇತರೇ ಭಾಗದಲ್ಲುಂಟು. ಇದರ ಸುಗಂಧದ ಮೋಹದಿಂದಾಗಿ ಬೆಳೆಸುವುದಕ್ಕಿಂತಾ ಕಾಯುವುದೇ ಕಷ್ಟ ಎಂಬ ಪರಿಸ್ಥಿತಿ . ನಿಮ್ಮ ಲೇಖನ ಅತ್ಯಂತ ಸೂಕ್ತ . ಲೇಖನದ ಹರಿವು ಆಪ್ತತೆಯನ್ನುಂಟು ಮಾಡುತ್ತದೆ .ಸೊಗಸಾಗಿ ಬರೆದಿದ್ದೀರ .
Hi Dr. Channesh
A very nice article at the right time. Simple explanation of the species and it really takes us back to our childhood days in the villages . Well done 👍👍👍👍👍👍
Dr. B K Kumaraswamy
You write exactly what a lay person needs to know to increase his/her curiosity about plant world. Very nicely written and as usual apt for times. Thank you