You are currently viewing ಆಧುನಿಕ ಜಗತ್ತಿಗೆ ರಹದಾರಿ ನಿರ್ಮಿಸಿದ : ನಿಕೊಲ ಟೆಸ್ಲಾ

ಆಧುನಿಕ ಜಗತ್ತಿಗೆ ರಹದಾರಿ ನಿರ್ಮಿಸಿದ : ನಿಕೊಲ ಟೆಸ್ಲಾ

ನಿಕೊಲ ಟೆಸ್ಲಾ, ಕೇಳಿದಾಕ್ಷಣ ಅನೇಕರಿಗೆ ಯಾವುದೋ ಕಂಪನಿಯ ಅಥವಾ ಒಂದು ಪ್ರಕ್ರಿಯೆಯ ಅಥವಾ ಮತ್ತಾವುದೋ ಕೇಳರಿಯದ ಹೆಸರಿರಬೇಕು ಅನ್ನಿಸಬಹುದು. ಇಂದು ನೂರಾರು ಕಿ.ಮೀಗಳಿಂದ ನಿಮ್ಮ ಮನೆಗೆ ಕರೆಂಟು ಪ್ರವಹಿಸುತ್ತಿದ್ದರೆ, ನಿಮ್ಮ ಮನೆಗಳ ಮೋಟಾರು ಪಂಪು ನೀರೆತ್ತುತ್ತಿದ್ದರೆ, ಫ್ಯಾನು ತಿರುಗುತ್ತಿದ್ದರೆ,‌ “ಎಕ್ಸ್‌ರೇ” ಯನ್ನು ಚಿತ್ರವಾಗಿ ಪಡೆಯಲು ಸಾಧ್ಯವಾಗಿದ್ದರೆ ಅದಕ್ಕೆ ಕಾರಣರಾದ ವ್ಯಕ್ತಿಯ ಹೆಸರು “ನಿಕೊಲ ಟೆಸ್ಲಾ” ಎಂದು ಅನ್ನಿಸುವುದು ಅಪರೂಪ. ಶಾಲಾ ಬಾಲಕನಾಗಿದ್ದಾಗ ನಯಾಗಾರ ಜಲಪಾತದೊಳಗೆ ದೊಡ್ಡದೊಂದು ಚಕ್ರ ತಿರುಗುವಂತೆ ಕಲ್ಪಿಸಿಕೊಂಡು, ಮುಂದೆ 30 ವರ್ಷಗಳ ನಂತರ ಅದನ್ನು ಸಾಧ್ಯಮಾಡಿ ಆಲ್ಟರ್‌ನೇಟ್‌ ವಿದ್ಯುತ್ತನ್ನು ಉತ್ಪಾದಿಸಿದ ಮಾಂತ್ರಿಕ ಅನ್ವೇಷಕ ನಿಕೊಲ ಟೆಸ್ಲಾ. ಇಂದಿನ ಕ್ರೊವೇಶಿಯಾದ ಸ್ಮಿಯಾನ್‌ ಎಂಬ ಪುಟ್ಟ ಹಳ್ಳಿಯಲ್ಲಿ 1856ನೆಯ ಜುಲೈ 10ರಂದು ಜನಿಸಿದರು.

ನಿಕೊಲ ಟೆಸ್ಲಾ ವಿದ್ಯುತ್ತನ್ನು ದೂರ ಸಾಗಿಸಲು ಕಾರಣವಾಗಿರುವ ಆಲ್ಟರ್‌ನೇಟ್‌ ಕರೆಂಟಿನ ಮೂಲ ಅನ್ವೇಷಕ ಹಾಗೂ ಅಂತಹಾ ಸಾಧ್ಯತೆಯನ್ನು ಪ್ರಮಾಣೀಕರಿಸಲು ಥಾಮಸ್‌ ಎಡಿಸನ್‌ ಅವರಂತಹಾ ಅನ್ವೇಷಕರಿಂದಲೂ ಅವಮಾನಿಸಿಕೊಂಡವರು. ಯೂರೋಪಿನ ಕ್ರೊವೇಶಿಯಾದಿಂದ ಅಮೆರಿಕಾಕ್ಕೆ ಕೇವಲ ಕನಸುಗಳನ್ನು ಹೊತ್ತೊಯ್ದು, ಇಂದಿನ ಆಧುನಿಕ ತಂತ್ರಜ್ಞಾನದ ಅಮೆರಿಕವನ್ನು ರೂಪಿಸುವುದರಲ್ಲಿ ಮಹತ್ತರ ಪಾತ್ರವನ್ನು ವಹಿಸಿದ ವ್ಯಕ್ತಿ. ಥಾಮಸ್‌ ಎಡಿಸನ್‌ ವಿದ್ಯುತ್‌ ಕಂಡಿಹಿಡಿದರು ನಿಜ. ಅದು ಡೈರೆಕ್ಟ್‌ ಕರೆಂಟ್‌. ಅದನ್ನು ಹೆಚ್ಚು ದೂರ ಸಾಗಿಸಲಾಗದು. ಅದಕ್ಕೆ ಪರ್ಯಾಯವಾದ ವಿದ್ಯುತ್‌ ನೂರಾರು ಕಿ.ಮೀ ದೂರಕ್ಕೂ ಸಾಗಿಸಬಲ್ಲ ವಿದ್ಯುತ್‌ ಆಲ್ಟರ್‌ನೇಟ್‌ ಅಥವಾ ಪರ್ಯಾಯ ವಿದ್ಯುತ್‌ ಅನ್ನು ಕಂಡುಹಿಡಿದು, ಅದನ್ನು ಜಲವಿದ್ಯುತ್‌ ಟರ್ಬೈನ್‌ಗಳಿಂದ ಪಡೆಯುವ ಪೇಟೆಂಟ್‌ ಅನ್ನೂ ಗಳಿಸಿದ ಅನ್ವೇಷಕ ನಿಕೊಲಾ ಟೆಸ್ಲಾ. ಆತ ಗಳಿಸಿದ ಪೇಟೆಂಟುಗಳ ಸಂಖ್ಯೆ ಒಂದೆರಡಲ್ಲ ಮುನ್ನೂರಕ್ಕೂ ಹೆಚ್ಚು! ವೈರ್‌ಲೆಸ್‌ ಪರಿಕಲ್ಪನೆಯನ್ನು ಮೊಟ್ಟ ಮೊದಲು ಆಲೋಚಿಸಿದಾತ ಟೆಸ್ಲಾ. ಇಂಡಕ್ಷನ್‌ ಮೋಟಾರು, ಟೆಸ್ಲಾ ಕಾಯ್ಲ್‌, ಆಧುನಿಕ ನಿಯಾನ್‌ ಲೈಟಿಂಗ್‌, ಗುರಿಹೊಂದಿದ ಮಿಸೈಲ್‌ಗಳು, ಯುದ್ಧೋಪಾಯದ ಗುರಿಯ ಸಾಧ್ಯತೆಯನ್ನೂ ಅಷ್ಟೇಕೆ, ನೇರವಾಗಿ ಸೂರ್ಯನನ್ನೂ ಹಿಡಿದು ಜಗತ್ತಿಗೆಲ್ಲಾ ಉಚಿತ ಹಾಗೂ ನಿರಂತರವಾದ ಶಕ್ತಿಯನ್ನು ಕೊಡುವ ಕನಸನ್ನು ಹೊಂದಿದಾತ ನಿಕೊಲ ಟೆಸ್ಲಾ.

ನಿಕೊಲ ಟೆಸ್ಲಾ ವಿಚಿತ್ರವಾದ ಕನಸುಗಾರ. ಯಾವುದೂ… ಅಸಾಧ್ಯ! ಮಾಡಲು ಆಗುವುದೇ ಇಲ್ಲ, ಎನ್ನುವ ಸ್ವಬಾವಕ್ಕೆ ವಿರುದ್ಧವಾದ ಆಲೋಚನೆಯುಳ್ಳ ವ್ಯಕ್ತಿ. ಇಂಜನಿಯರಿಂಗ್‌ ಹಾಗೂ ಭೌತವಿಜ್ಞಾನವನ್ನು ಕಲಿಯಲು ಕಾಲೇಜು ಸೇರಿಯೂ ಪದವಿಯನ್ನು ಗಳಿಸಲಿಲ್ಲ. ಆತನ ತಂದೆ ಮೆಲ್ಯೂಟಿನ್‌ ಟೆಸ್ಲಾ ಓರ್ವ ಸಂಪ್ರದಾಯಸ್ಥ ಕ್ರಿಶ್ಚಿಯನ್‌ ಪೂಜಾರಿ. ಮಗನೂ ತನ್ನಂತೆ ಧಾರ್ಮಿಕ ವೃತ್ತಿಗೆ ಬರಲಿ ಎನ್ನುವಾಸೆಯನ್ನು ಹೊಂದಿದ್ದರು. ಆತನ ಅಮ್ಮ ಅನ್ವೇಷಕ ಮನಸ್ಸಿನ ಹೆಣ್ಣು ಮಗಳು, ವಿಜ್ಞಾನದ ಕಲಿಕೆಯನ್ನು ಪ್ರೋತ್ಸಾಹಿಸುವ ಮನಸ್ಸಿನವರು. ಆದರೇನಂತೆ ಆಗಿರುವ ಶಿಕ್ಷಣ ವ್ಯವಸ್ಥೆಯಲ್ಲಿ ಕೇವಲ ಧಾರ್ಮಿಕ ಅಥವಾ ಸೈನ್ಯದ ಅವಶ್ಯಕತೆಯ ಪೂರೈಸುವ ಕಲಿಕೆಗಳಷ್ಟೇ! ಅವುಗಳ ಹಿಂದೆ ಹೋಗುವ ಯಾವುದೇ ಆಸಕ್ತಿಯನ್ನೂ ಹೊಂದಿರದ ಟೆಸ್ಲಾ ಸಹಜವಾಗಿ ಸಾಂಪ್ರದಾಯಿಕ ಕಲಿಕೆಯಲ್ಲಿ ನಿರಾಸಕ್ತರಾಗಿದ್ದರು. ಆತ ಕಾಲೇಜಿನಲ್ಲಿ ಕೇಳುತ್ತಿದ್ದ ವಿಚಿತ್ರವಾದ ಪ್ರಶ್ನೆಗಳಿಂದ ಅಧ್ಯಾಪಕರೂ ಸಿಟ್ಟಿಗೇಳುತ್ತಿದ್ದರು. ಇಸ್ಪೀಟು ಆಟದಲ್ಲಿ ಮಹಾನ್‌ ಚಾಣಾಕ್ಷನಾದ ಟೆಸ್ಲಾನನ್ನು ಉಪಾಧ್ಯಾಯರೂ ಸೇರಿಕೊಂಡು ಇತರರೂ ದೊಡ್ಡ ಗ್ಯಾಂಬ್ಲರ್‌ ಎಂದೇ ಪರಿಗಣಿಸಿದ್ದರು. ಅಧ್ಯಾಪಕರು ತರಗತಿಗಳಿಂದ ಹೊರಹಾಕಲು ಹವಣಿಸುತಿದ್ದರು. ಹಾಗಾಗಿ ಮೊದಲ ವರ್ಷದ ತರಗತಿಯಲ್ಲಿ ಉತ್ತಮ ಅಂಕಗಳನ್ನು ಪಡೆದರೂ, ಎರಡನೆಯ ವರ್ಷವೇ ಹಿಂದೆ ಸ್ಕಾಲರ್‌ಷಿಪ್‌ ಕಳೆದುಕೊಳ್ಳಬೇಕಾಯಿತು. ಜೊತೆಯಲ್ಲಿ ಕಲಿಸುವ ವಿಷಯ, ಹಾಗೂ ವಿಧಾನ ಎರಡರಿಂದಲೂ ಬೇಸರಗೊಂಡಿದ್ದ ಟೆಸ್ಲಾಗೆ ಕಾಲೇಜಿನಿಂದ ಹೊರ ಬೀಳಲು ಇಷ್ಟು ಸಾಕಾಯಿತು. ಮನೆ ಬಿಟ್ಟು ಅಡ್ಡಾಡುತ್ತಿದ್ದ ಯುವಕ ಟೆಸ್ಲಾ ಬದುಕಿರಲು ಸಾದ್ಯವೇ ಇಲ್ಲ ತಂದೆ-ತಾಯಿಗಳು ನಂಬಿದ್ದರು. ಆದರೆ ತಂದೆ ಸತ್ತ ನಂತರ ತಿರುಗಿ ಮನೆಗೆ ಬಂದ ನಿಕೊಲ ಟೆಸ್ಲಾನಲ್ಲಿ ಕನಸುಗಳಿದ್ದವು, ಅಪಾರ ಸಾಧ್ಯತೆಗಳ ಸಾಹಸಗಳ ನಕ್ಷೆಗಳೂ ತುಂಬಿದ್ದವು. ಮುಂದೆ ಕೆಲವು ಕಾಲ ಬುಡಾಪೆಸ್ಟ್‌ ನಲ್ಲಿ ನಂತರ ಫ್ರಾನ್ಸಿನಲ್ಲಿ ಕೆಲಸ ಮಾಡಿ ಕಡೆಗೆ ತಲುಪಿದ್ದು ಅಮೆರಿಕ. ಟೆಸ್ಲಾ 1884ರ ಜೂನ್‌ ತಿಂಗಳಲ್ಲಿ ಅಮೆರಿಕ ತಲುಪಿ ಥಾಮಸ್‌ ಎಡಿಸನ್‌ ಪ್ರಯೋಗಾಲಯದಲ್ಲಿ ಸೇರಿಕೊಂಡರು.

ಕನಸುಗಳನ್ನು ಸಾಕಾರವಾಗಿಸುವ ನೆಲವೆಂದೇ ಬಿಂಬಿತವಾದ ಅಮೆರಿಕ ಆಗಿನ್ನೂ ತಂತ್ರಜ್ಞಾನಗಳಿಗೆ ತೆರೆದುಕೊಳ್ಳುತ್ತಿದ್ದ ಕಾಲ. ಅಲೆಗ್ಸಾಂಡರ್‌ ಗ್ರಹಾಂ ಬೆಲ್‌, ಥಾಮಸ್‌ ಎಡಿಸನ್‌, ಮುಂತಾದವರು ಯಾಂತ್ರಿಕ ಯುಗವನ್ನು ಪ್ರತಿಷ್ಠಾಪಿಸುತ್ತಿದ್ದ ಸಮಯ. ಟೆಸ್ಲಾ 1882 ಮತ್ತು 84ರ ಮಧ್ಯೆ ಎಡಿಸನ್‌ನ ಕಂಪನಿಯು ಪ್ಯಾರಿಸ್ಸಿನಲ್ಲಿ ನೂತನವಾಗಿ ಸ್ಥಾಪಿಸಿದ್ದ ಪ್ರಯೋಗಾಲಯದಲ್ಲಿ ಇಲೆಕ್ಟ್ರೀಶಿಯನ್‌ ಆಗಿ ಕೆಲಸಕ್ಕೆ ಸೇರಿ ತನ್ನ ಚತುರತೆಯಿಂದ ಮುಖ್ಯಸ್ಥನಾಗಿ ಅಮೆರಿಕದ ಮುಖ್ಯ ನೆಲೆಗೆ ಶಿಫಾರಸ್ಸು ಪಡೆದಿದ್ದರು. ಆಗ ಅವರನ್ನು ಶಿಫಾರಸ್ಸು ಮಾಡಿದ್ದ ಎಡಿಸನ್‌ ಅವರ ಗೆಳೆಯ ತನ್ನ ಶಿಫಾರಸ್ಸು ಪತ್ರದಲ್ಲಿ ಹೀಗೆ ಬರೆದಿದ್ದರು. “ನಾನು ಇಬ್ಬರು ಅತ್ಯಂತ ಪ್ರತಿಭಾವಂತ ಅನ್ವೇಷಕರನ್ನು ಕಂಡಿದ್ದೇನೆ, ಒಬ್ಬ ನೀನು ಮತ್ತೊಬ್ಬ ಈ ಪತ್ರ ತಂದಿರುವ ಯುವಕ”. ಹೀಗೆ ಎಡಿಸನ್ನರ ಆಪ್ತ ಗೆಳೆಯನೇ ಎಡಿಸನ್‌ಗೆ ಅವರಿಗೆ ಸಮದೂಗಿಸಿ ನಿಕೊಲಾ ಟೆಸ್ಲಾರನ್ನು ಪರಿಚಯಿಸಿದ್ದರು. ಆದರೆ ದುರಾದೃಷ್ಠವೆಂದರೆ ಎಡಿಸನ್‌ಗೆ ಟೆಸ್ಲಾ ಜಾಣತನವು ಸೇರಿಕೆಯಾಗಲಿಲ್ಲ. ಅಷ್ಟೇ ಅಲ್ಲ ಮುಂದೆ ಟೆಸ್ಲಾ ಎಡಿಸನ್‌ನ ಸಹವಾಸವನ್ನು ತೊರೆದು ತನ್ನದೇ ಟೆಸ್ಲಾ ಇಲೆಕ್ಟ್ರಿಕ್‌ ಕಂಪನಿಯನ್ನು ಆರಂಭಿಸಿ ಆಲ್ಟರ್‌ನೇಟಿವ್‌ ಕರೆಂಟನ್ನು ಪರಿಚಯಿಸಿದಾಗಲೂ ಅದನ್ನು ವಿರೋಧಿಸಿದ ಎಡಿಸನ್‌, ಅದರ ವಿರುದ್ಧ ವಿಚಿತ್ರವಾದ ಅಪಪ್ರಚಾರಕ್ಕೂ ಕೂಡ ತೊಡಗಿದರು. ದೊಡ್ಡ ದೊಡ್ಡ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಿ ಅದರಲ್ಲಿ ಪರ್ಯಾಯ ಕರೆಂಟು ಹೊಡೆದು ಕುದುರೆ, ನಾಯಿಗಳು ಸಾಯುವ ದೃಶ್ಯಗಳಿಂದ ಸಾಬೀತು ಮಾಡತೊಡಗಿದರು. ಟೆಸ್ಲಾ ಎಂತಹಾ ದೂರ ದೃಷ್ಟಿಯವರೆಂದರೆ ತಮ್ಮನ್ನು ತಾವೇ ಪ್ರಯೋಗಕ್ಕೂ ಒಡ್ಡಿಕೊಂಡು ತಮ್ಮ ಅನ್ವೇಷಣೆಗಳನ್ನು ಸಾಬೀತು ಮಾಡತೊಡಗಿದ್ದು ಮಾನವಕುಲಕ್ಕೆ ಅಂತಹಾ ಸಾಧ್ಯತೆಗಳನ್ನು ಪರಿಚಯಿಸಿತು. ಥಾಮಸ್‌ ಎಡಿಸನ್‌ ಅದೆಷ್ಟು ವಿರೋಧಿಯಾಗಿದ್ದರೆಂದರೆ ಇಬ್ಬರಿಗೂ ನೊಬೆಲ್‌ ಬಹುಮಾನ ಬರುವ ಸಾಧ್ಯತೆಯಿದ್ದು, ಅದನ್ನು ಟಿಸ್ಲಾರೊಡನೆ ಹಂಚಿಕೊಳ್ಳಲು ಒಪ್ಪಿರಲಿಲ್ಲ ಎಂಬ ಗುಮಾನಿಯೂ ಪ್ರಸಿದ್ಧವಾಗಿದೆ. ಆದರೆ ಇದನ್ನು ನೊಬೆಲ್‌ ಸಮಿತಿಯು ತಿರಸ್ಕರಿಸಿದ್ದರೆ, ಟೆಸ್ಲಾ ಜೀವನ ಚರಿತ್ರಕಾರರು ಮಾತ್ರ ದೃಢವಾಗಿ ನಂಬಿದ್ದಾರೆ.

ಅಷ್ಟೇ ಅಲ್ಲ ಮುಂದೆ ಟೆಸ್ಲಾ ಪಡೆದ ವೈರ್‌-ಲೆಸ್‌ ಸಂವಹನದ ಪೇಟೆಂಟನ್ನು ತಮ್ಮ ರೇಡಿಯೋ ಅನ್ವೇಷಣೆಯಲ್ಲಿ ಬಳಸಿಕೊಂಡ ಮಾರ್ಕೋನಿ ಕೂಡ ಇವರನ್ನು ಮೋಸಗೊಳಿಸಿ ಹಣಗಳಿಸಿದರಂತೆ. ವ್ಯವಹಾರಿಕವಾಗಿ ತೀರಾ ಮುಗ್ಧರಾಗಿದ್ದ ಟೆಸ್ಲಾ, ವಿಚಿತ್ರ ಸ್ವಭಾವ ಹಾಗೂ ನಡವಳಿಕೆಯಿಂದ ವಿಪರೀತ ಕಳೆದುಕೊಳ್ಳುವ ವ್ಯಕ್ತಿಯಾಗಿದ್ದರು. ಹಾಗಾಗಿಯೇ ಅಮೆರಿಕಾಕ್ಕೆ ಕಾಲಿಟ್ಟಾಗ ಹಡಗಿನಲ್ಲಿಯೂ ಎಲ್ಲವನ್ನೂ ಕಳೆದುಕೊಂಡು ಅವರ ಜೇಬಿನಲ್ಲಿದ್ದ ಹಣ ಕೇವಲ 4-ಸೆಂಟುಗಳು ಮಾತ್ರ! ಇಂತಹ ವ್ಯಕ್ತಿಯೊಬ್ಬ ಅಕ್ಷರಶಃ ಅಮೆರಿಕಗೆ ಆಧುನಿಕತೆ ಹಾಗೂ ಶ್ರೀಮಂತಿಕೆಯನ್ನು ಮಾತ್ರವಲ್ಲ, ಜಗತ್ತಿಗೇ ಆಧುನಿಕತೆಯನ್ನು ತಂದುಕೊಟ್ಟವರೆಂದರೆ ಅಚ್ಚರಿಯಲ್ಲವೇ.

ಜೆ.ಪಿ. ಮೊರ್ಗನ್‌ ಹಣಕಾಸು ವಹಿವಾಟುದಾರ ಕಂಪನಿಯ ಸ್ಥಾಪಕರ ಹೆಸರನ್ನು ಕೇಳಿರುತ್ತೀರಿ. ಜಾನ್‌ ಪಿಯರ್‌ಪಾಂಟ್‌ ಮೊರ್ಗನ್‌ ಟೆಸ್ಲಾ ಅವರ ಗೆಳೆಯರಾಗಿದ್ದು, ಆರಂಭದ ವಹಿವಾಟುಗಳಲ್ಲಿ ಟೆಸ್ಲಾರಿಗೆ ಬಂಡವಾಳವನ್ನು ಕೊಟ್ಟವರು. ಮುಂದೆ ಮೊರ್ಗನ್‌ ಕೂಡ ಟೆಸ್ಲಾ ಜೊತೆ ವಹಿವಾಟಿನ ಬಾಂಧವ್ಯವನ್ನು ಕೊನೆಗೊಳಿಸಿ ದೂರವಾದರು. ನಿಕೊಲ ಟೆಸ್ಲಾ ಹಣದ ಜವಾಬ್ದಾರಿಯ ಹಿಡಿತವನ್ನು ಕಡೆಗೂ ಕಲಿಯಲಾಗದೆ ಕಡೆಯಲ್ಲಂತೂ ಕೈಯಲ್ಲಿ ಕಾಸಿಲ್ಲದೆ ಒದ್ದಾಡಿದ ವಿಚಿತ್ರ ಅನ್ವೇಷಕ. ಅಮೆರಿಕದ ಖ್ಯಾತ ಜಾರ್ಜ್‌ ವೆಸ್ಟಿಂಗ್‌ ಹೌಸ್‌ ಇಲೆಕ್ಟ್ರಿಕಲ್‌ ಕಂಪನಿಯನ್ನು ಸೇರಿದಂತೆ ಅನೇಕ ಕಂಪನಿಗಳನ್ನು ಬಿಲಿಯನ್‌ ಡಾಲರ್‌ ಕಂಪನಿಗಳಾಗಿಸಿ ಅಕ್ಷರಶಃ ಅಮೆರಿಕಾದ ಅಭಿವೃದ್ಧಿಯನ್ನು ನಿರ್ವಹಿಸಿದ್ದು ಟೆಸ್ಲಾ ಅನ್ವೇಷಣೆಗಳು. ಅಮೆರಿಕಗೆ ಬಂದು ಕೇವಲ 5-6 ವರ್ಷಗಳಲ್ಲಿ ಇಂದು ಜಗತ್ತಿನ ಅತ್ಯಂತ ಹೆಚ್ಚು ಪ್ರಮುಖ ಅನ್ವೇಷಣೆಯಾದ “ಟೆಸ್ಲಾ ಕಾಯ್ಲ್‌”ಗೂ ಪೇಟೆಂಟನ್ನು ಪಡೆದರು. ಅದೇ ವರ್ಷ 1891ರ ಜುಲೈನಲ್ಲಿ ಅಮೆರಿಕದ ನಾಗರಿಕನೂ ಆದರು. ಬಹುಪಾಲು ಟ್ರಾನ್ಸ್‌ಫಾರ್ಮರ್‌ಗಳಲ್ಲಿ ಇಂದು ಬಳಕೆಯಲ್ಲಿರುವ ಕಾಯ್ಲ್‌ ನಿಂದ ಹೆಚ್ಚಿನ ವೋಲ್ಟೇಜು, ಕಡಿಮೆ ಕರೆಂಟ್‌ ಮತ್ತು ಹೆಚ್ಚಿನ ಫ್ರೀಕ್ವೆನ್ಸಿಯ ಅಲ್ಟರ್‌ನೇಟ್‌ ವಿದ್ಯುತ್ತನ್ನು ಪಡೆಯಲಾಗುತ್ತಿದೆ. ಹಾಗೇನೇ ಇಂಡಕ್ಷನ್‌ ಮೋಟಾರ್‌ ಅನ್ವೇಷಣೆಯನ್ನು ಸಹಾ ಆತನ ಗೆಳೆಯ ಹಾಗೂ ಖ್ಯಾತ ಬರಹಗಾರ ಮಾರ್ಕ್‌ ಟ್ವೀನ್‌ ಟೆಲಿಫೋನಿನ ನಂತರದ ಮಹತ್ವದ ಅನ್ವೇಷಣೆ ಎಂದೇ ಕರೆದಿದ್ದಾರೆ. ಹೀಗೀದ್ದೂ ಸಾಕಷ್ಟು ಹಣವನ್ನು ಗಳಿಸದ ಟೆಸ್ಲಾ ಹೀಗೆ ಹೇಳುತ್ತಿದ್ದರು. “ಹಣವನ್ನು ಕುರಿತು ಬೇರೆಯವರು ಏನೆಂದುಕೊಂಡಿದ್ದಾರೋ ಹಾಗೆ ನನಗಂತೂ ಅಲ್ಲ. ನನ್ನ ಹಣವನ್ನೆಲ್ಲಾ ನಾನು ಮಾನವ ಕುಲದ ಹಿತದ ಅನ್ವೇಷಣೆಗಳಲ್ಲಿ ಬಳಸಿದ್ದೇನೆ”.(“Money does not mean to me, what it does to others. All my money is invested in inventions to make man’s life easier”)

ನಿಕೊಲ ಟೆಸ್ಲಾ ಅವರನ್ನು ಗ್ರೀಕ್‌ ಪುರಾಣದ ಪ್ರಮಿಥಿಯಸ್‌(Prometheus)ಗೆ ಹೋಲಿಸಿ, ಆಧುನಿಕ ಮುಂದಾಲೋಚಕ (Modern Prometheus) ಎಂದೇ ಕರೆಯಲಾಗುತ್ತದೆ. ಪ್ರಮಿಥಿಯಸ್‌ನು ದೇವಲೋಕದಿಂದ ಬೆಂಕಿಯನ್ನು ಕದ್ದು ಮಾನವ ಕುಲದ ಏಳಿಗೆಗಾಗಿ ಕೊಟ್ಟ ದೇವತೆ. ಹಾಗಾಗಿ ಪ್ರಮಿಥಿಯಸ್‌ ಬೆಂಕಿಯ ಕಳ್ಳ ಎನಿಸಿಕೊಂಡೂ ಮಾನವ ನಾಗರಿಕತೆಯ ಉದ್ಧಾರದಲ್ಲಿ ಪ್ರಮುಖವಾದ ಬೆಂಕಿಯನ್ನು ಕೊಟ್ಟ ಹಾಗೆ, ಆಧುನಿಕ ನಾಗರಿಕತೆಗೆ ಅಗತ್ಯವಾದ ಪ್ರಮುಖ ಅನ್ವೇಷಣೆಗಳನ್ನು ಟೆಸ್ಲಾ ಕೊಟ್ಟಿದ್ದಾರೆ. ಸುಧೀರ್ಘವಾದ ಪ್ರಯತ್ನ ಹಾಗೂ ಕೆಲಸಗಳಲ್ಲಿ ಸಮರ್ಪಣಾ ಮನೋಭಾವ ಎರಡೂ ಅಸಾಧ್ಯವಾದದ್ದನ್ನೂ ಸಾಧಿಸುವ ಛಲವನ್ನು ಹಾಗೂ ಜಾಣತನವನ್ನೂ ಕೊಡಬಲ್ಲದು ಎನ್ನುವುದಕ್ಕೆ ನಿಕೊಲ ಟೆಸ್ಲಾ ಅವರ ಜೀವನ ಅತ್ಯದ್ಭುತವಾದ ಉದಾಹರಣೆ. ತನ್ನ ಕೆಲಸಗಳಲ್ಲಿ ಆತ್ಯಂತಿಕ ಹೆಮ್ಮೆಯಿಂದ ಕೂಡಿರುತ್ತಿದ್ದ ಕೆಲವೊಮ್ಮೆ ತೀರಾ ಹಟಮಾರಿಯಾದ ನಿಕೊಲ ಸಾಧನೆಯ ಹಿಂದೆ ಬಿದ್ದರೆ ಮಾತ್ರ ಯಾವುದೂ ಅಡ್ಡಿಯಾಗುತ್ತಿರಲಿಲ್ಲ. ಏನಾದರೂ ಮಾಡಿಯೇ ಸೈ..ಎನ್ನುವ ಹಾಗೆ. ಥಾಮಸ್‌ ಎಡಿಸನ್‌ ಅವರ ಜೊತೆಯಲ್ಲಿ ಕೆಲಸ ಮಾಡುವಾಗ ಒಮ್ಮೆ ಒಂದು ಮೋಟಾರು ಕುರಿತ ಕೆಲಸದಲ್ಲಿ ಇಡೀ ರಾತ್ರಿ ನಿರತವಾಗಿದ್ದು ಎಡಿಸನ್‌ಗೆ ಅಚ್ಚರಿ ತಂದಿತ್ತಂತೆ. ಕೆಲಸಗಳ ಬಗ್ಗೆ ನಿರಂತರವಾದ ಗಮನವನ್ನು ಕೊಡುವುದು ನಿಕೊಲ ಟೆಸ್ಲಾ ಅವರ ಬಹಳ ಮುಖ್ಯವಾದ ವರ್ತನೆಯಾಗಿತ್ತು. ಜೊತೆಗೆ ಸದಾ ಛಲಗಾರ ಕೂಡ.

ನಿಕೊಲ ಟೆಸ್ಲಾ ತಾನು ಬದುಕಿದ್ದಾಗಲೇ ಅತ್ಯಂತ ಪ್ರಮುಖರೊಂದಿಗೆ ಒಡನಾಡಿ ಸಂಪರ್ಕವನ್ನು ಇರಿಸಿಕೊಂಡದ್ದವರು. ಅಷ್ಟೇ ಹೆಸರು ಮಾಡಿದ್ದರೂ ಕೂಡ ಸದಾ ಅನ್ವೇಷಕ ಮನಸ್ಸನ್ನು ಹೊಂದಿದ್ದರು. 1931ರಲ್ಲಿ ಅವರ 75ನೆಯ ವರ್ಷದಲ್ಲಿ ವಿಖ್ಯಾತ “ಟೈಮ್‌” ಪತ್ರಿಕೆಯು ಮುಖ ಪುಟದಲ್ಲಿ ಅವರ ಚಿತ್ರವನ್ನು “All the world’s his power house” ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿತ್ತು. ವಿದ್ಯುತ್‌ ಶಕ್ತಿಯ ಉತ್ಪಾದನೆಗೆ ಅವರಿತ್ತ ಕೊಡುಗೆಯನ್ನು ಗೌರವಿಸಿ ಹಾಗೆ ಪ್ರಕಟಿಸಲಾಗಿತ್ತು. ಆಗ “ಆಲ್ಬರ್ಟ್‌ ಐನ್‌ಸ್ಟೈನ್‌” ಅವರನ್ನೂ ಒಳಗೊಂಡು ಸುಮಾರು 75ಕ್ಕೂ ಹೆಚ್ಚು ವಿಜ್ಞಾನಿಗಳೂ, ಅನ್ವೇಷಕರೂ ವೈಯಕ್ತಿಕ ಪತ್ರಗಳ ಮೂಲಕ ಶುಭಹಾರೈಸಿದ್ದರು.

ತನ್ನ ಜೀವಿತ ಕಾಲದಲ್ಲಿ ತನಗೇ ಅಂತಾ ಹಣವನ್ನು ಗಳಿಸದ ಬಹು ದೊಡ್ಡ ಶ್ರೀಮಂತ ಎಂದರೆ ನಿಕೊಲ ಟೆಸ್ಲಾ. ಮದುವೆಯಾಗದ, ಕುಟುಂಬವನ್ನೂ ಕಟ್ಟಿಕೊಳ್ಳದ, ಯಾರನ್ನೂ ಮಕ್ಕಳನ್ನಾಗಿ ಒಪ್ಪಿಕೊಳ್ಳದ, ಯಾವುದೇ ಹೆಣ್ಣನ ಆಕರ್ಷಣೆಗೂ ಒಳಗೊಳ್ಳದ ವಿಚಿತ್ರ ಮನಸ್ಥಿತಿಯ ಅನ್ವೇಷಕ. ಹೆಂಗಸರ ಕೂದಲುಗಳನ್ನೇ ಇಷ್ಟಪಡದ ಸ್ವಭಾವದ ವ್ಯಕ್ತಿ. ಆದರೆ ನಿಸರ್ಗದ ಬಲವನ್ನು ಮಾನವ ಒಲವಿಗೆ ಒಪ್ಪಿಸುವ ಛಲಗಾರ. ಹಾಗಾಗಿ ಆತ ಬಿಟ್ಟು ಹೋಗಿರುವ ಬಹಳ ಮುಖ್ಯವಾದ ಆಸ್ತಿ ಎಂದರೆ, ಉತ್ಸಾಹ ಮತ್ತು ತಲೆಕೆಡಿಸಿಕೊಂಡು-ಹುಚ್ಚು ಹಚ್ಚಿಸಿಕೊಂಡು ಕೆಲಸ ಮಾಡುವ ಮನಸ್ಥಿತಿ. ಅದನ್ನು ಒಪ್ಪಿಕೊಂಡು ಅದನ್ನು ಮುಂದುವರೆಸುವವರೇ ಆತನ ಸಂತತಿ. ಅಂತವರು, ಆತನ ಮಕ್ಕಳು ಎಂದು ಹೇಳಿಕೊಂಡು ಆನಂದಿಸುವ ಕೆಲವು ಅನ್ವೇಷಕರೂ ಇದ್ದಾರೆ. ವಿಚಿತ್ರವಾದ ಕನಸುಗಳನ್ನು ಹೊತ್ತು ವಿಚಿತ್ರವಾದ ಅನ್ವೇಷಣೆಗಳ ಹಿಂದೆ ಹೋಗಿ ಒಂದಷ್ಟು ಸಾಧಿಸಿದ್ದಾರೆ. ಅವರಲ್ಲಿ ಒಂದಿಬ್ಬರನ್ನು ಪರಿಚಯಿಸುತ್ತೇನೆ.

ಮಹಾನ್‌ ಸಾಧಕರನ್ನು ಅವರ ಜನ್ಮ ದಿನ ಅಥವಾ ಸಾವಿನ ದಿನ ಮುಂತಾಗಿ ಅಷ್ಟೇ ನೆನಪಿಸದೆ ಅವರ ತೀವ್ರತೆಯನ್ನು ಮುಂದುವರೆಸಿಕೊಂಡು ಹೋಗುವ ಆಶಯ ಇರುವುದು ಬಹಳ ಮುಖ್ಯ. ಸಾಧಕರ ಜೀವನವನ್ನೇ ಮಾರ್ಗದರ್ಶಕವನ್ನಾಗಿ ಮಾಡಿಕೊಂಡು ಅವರ ಪಥದಲ್ಲೇ ನಡೆದ ಬದುಕು ಬಹಳ ಮುಖ್ಯ. ಅಂತಹದರಲ್ಲಿ ಟೆಸ್ಲಾ ಅವರ ಮಾರ್ಗದಲ್ಲಿ ಹೋದವರು ಇವರು.

ವ್ಯೋಮದ ಶಕ್ತಿಯನ್ನು ಹಿಡಿಯುವ ಸಾಹಸ

ಪಾಲ್‌ ವಿಲಿಯಂ ಮ್ಯುಲೆರ್‌ ಎಂಬ ಅನ್ವೇಷಕ ತಾನು “ಟೆಸ್ಲಾ ಮಕ್ಕಳು ನಾವು” ಎಂದೇ ಹೇಳಿಕೊಂಡ ಅನ್ವೇಷಕರಲ್ಲಿ ಪ್ರಮುಖರೆಂದೇ ಹೇಳಬಹುದು. ಆಗಸದಲ್ಲಿ ಇರುವ ಶಕ್ತಿಯನ್ನು ಕೊಯಿಲು ಮಾಡಿ ಪಡೆಯುವ ಸಾಹಸದ ಪ್ರಯೋಗವನ್ನು ಮಾಡಿ ಯಶಸ್ಸನ್ನು ಕಂಡ ಅನ್ವೇಷಕ. (https://teslaschildren.com/project/paul-william-mueller/).

ಚಂದ್ರನನ್ನು ನೆಲದಿಂದಲೇ ಹಿಡಿವ ಸಾಹಸ

ನಕ್ಷತ್ರ ಲೋಕದ (ಇಂಟರ್‌ ಸ್ಟೆಲ್ಲಾರ್‌ ಲೈಟ್)‌ ಬೆಳಕನ್ನು ಸಾಂದ್ರೀಕರಿಸಿ ಹಿಡಿಯುವ ಸಾಹಸ ಮಾಡಿದವರು ರಿಚರ್ಡ್‌ ಚಾಪಿನ್‌. ಅವರು ಮಾಡಿದ ಪ್ರಯೋಗ ಚಂದಿರನ ಬೆಳಕನ್ನು ಕನ್ನಡಿಗಳಿಂದ ಸಾಂದ್ರೀಕರಿಸಿ ಅದರ ಬೆಳಕನ ಲಾಭವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸಾಂದ್ರಗೊಂಡು ಚಂದಿರನ ಬೆಳಕು ಆರೋಗ್ಯದ ಲಾಭ ತರವ ನಂಬಿಕೆ ಅವರದ್ದು. ರಿಚರ್ಡ್‌ ತಮ್ಮ ಪತ್ನಿ ಮೊನಿಕ ಅವರ ಜೊತೆಗೂಡಿ ಚಂದ್ರ ಬೆಳಕಿನ ಚಿಕಿತ್ಸೆಯನ್ನು ಮಾಡುವ ಪ್ರಯೋಗ ಮಾಡುತ್ತಿದ್ದಾರೆ. ಸೂರ್ಯನಿಂದ ಪ್ರತಿಫಲನಗೊಂಡರೂ ಬೆಳದಿಂಗಳ ಬೆಳಕು ಭಿನ್ನವಾಗಿದ್ದು, ಅದು ಕೆಲವೊಂದು ವಿಶೇಷ ಲಾಭವನ್ನು ಕೊಡುವುದೆಂಬ ನಂಬಿಕೆ ಅವರದ್ದು. ಅಸಾಧ್ಯವಾದರೂ ಮಾಡುವ ಛಲದಲ್ಲಿ ಟೆಸ್ಲಾ ಬಗೆಯದು ಯಶಸ್ಸಿನ ಮಾರ್ಗ ಎಂಬದು ಉತ್ಸಾಹಿ ರಿಚರ್ಡ್‌ ಅವರದ್ದು. (https://www.amazingmoonlight.com/)

ಮೆದಳನ್ನು ಗ್ರಹಿಸುವ ಸಾಹಸಕ್ಕೆ ಪಟ್ಟಿ ಕಟ್ಟಿದ ಹೆಣ್ಣು ಮಗಳು

ಎರಿಯಲ್‌ ಗಾರ್ಟನ್‌ (Aerial Garten) ಕೆನಡಾದ ಕಲಾವಿದೆ ಹಾಗೂ ವಿಜ್ಞಾನಿ ಅನ್ವೇಷಕಿ. ತನ್ನ ಮೆದಳನ್ನು ಗ್ರಹಿಸುವ ಹೆಡ್‌ ಬ್ಯಾಂಡ್‌ (ತಲೆ ಪಟ್ಟಿ)ಯೊಂದನ್ನು ಅನ್ವೇಷಿಸಿರುವ ಈಕೆ ಓರ್ವ ಕಲಾವಿದರ ಮಗಳು. ನರ ವಿಜ್ಞಾನಕ್ಕೆ ಸಂಬಂಧಿಸಿದ ಅನೇಕ ವಿಚಿತ್ರ ಹಾಗೂ ನಂಬಿಕೆಯಾಗಬಲ್ಲ ಸಂಗತಿಗಳನ್ನು ಪ್ರತಿಪಾದಿಸುತ್ತಿರುವ ಹೆಣ್ಣುಮಗಳು. ಈಕೆಯ ಹೆಡ್‌ ಬ್ಯಾಂಡ್‌ ಲಕ್ಷಾಂತರ ಮಾರಾಟವಾಗಿ ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿದೆ. (https://www.arielgarten.com/)

ನಿಕೊಲ ಸಂತತಿಯು ಅವರನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಅನೇಕರಲ್ಲಿ ಮುಂದುವರೆದು ಬಂದಿದೆ. ಅದರಲ್ಲಿ ಟೆಸ್ಲಾ ಮೋಟಾರ್ಸ್‌ ಕಂಪನಿಯು ಒಂದು. ಇಲಾನ್‌ ಮಸ್ಕ್‌ ( Elon musk) CEO ಆಗಿರುವ Tesla Inc. ಹೆಸರಿನ ಟೆಸ್ಲಾ ಮೋಟಾರ್ಸ್‌ ಕಂಪನಿಯು ಇಲೆಕ್ಟ್ರಿಕ್‌ ಕಾರುಗಳನ್ನು ಉತ್ಪಾದಿಸುವ ಪ್ರಮುಖ ಅಮೆರಿಕದ ಕಂಪನಿ. ಇದೀಗ ಟೆಸ್ಲಾ ಕಾರುಗಳೂ ಅಮೆರಿಕದ ರಸ್ತೆಗಳಲ್ಲಿವೆ. ಇಲಾನ್‌ ಮಸ್ಕ್‌ ಕೂಡ ಓರ್ವ ಮಹತ್ವಾಕಾಂಕ್ಷಿ ಅನ್ವೇಷಕ ಹಾಗೂ ವಹಿವಾಟುದಾರ. ಇದಲ್ಲದೆ ನಿಕೊಲ ಟೆಸ್ಲಾ ಅವರ ಜೀವನವನ್ನು ಆಧರಿಸಿ ಹಾಗೂ ಅನ್ವೇಷಣೆಗಳ ಆಧರಿಸಿ ಹಲವಾರು ಚಲನ ಚಿತ್ರಗಳು ಬಿಡುಗಡೆಯಾಗಿವೆ. ಅವುಗಳಲ್ಲಿ ಇತ್ತೀಚೆಗಿನ The Current War, Tesla 2020 ಪ್ರಮುಖವಾದವು.

ನಿಕೊಲ ಟಿಸ್ಲಾ, ವಿಚಿತ್ರ ಪ್ರತಿಭೆ ಹಾಗೂ ಅನ್ವೇಷಕ ಪ್ರವೃತ್ತಿಯುಳ್ಳ ಮಹಾನ್‌ ಸಾಹಸಿ. ವಿಶಿಷ್ಟವಾದ ಜ್ಞಾಪಕ ಶಕ್ತಿಯನ್ನು ಹೊಂದಿದ್ದ ಟೆಸ್ಲಾ ಪೋಟೊಗ್ರಾಫಿಕ್‌ ಅಥವಾ ಚಿತ್ರಗಳ ನೆನಪಾಗಿ ಇಟ್ಟು ಹೇಳಬಲ್ಲವರಾಗಿದ್ದರು. ಉದ್ದವಾದ ಬರಹವನ್ನೂ ಯಥಾವತ್ತಾಗಿ ಪನರುಚ್ಚರಿಸಬಲ್ಲರಾಗಿದ್ದರು. ವ್ಯವಹಾರಿಕವಾಗಿ ಚತುರನಲ್ಲದಿದ್ದರೂ ತಲೆಕೆಡಿಸಿಕೊಂಡು ಸಾಧಿಸುವ ಮನಸ್ಸಿನ ವ್ಯಕ್ತಿ. ಶಕ್ತಿಯ ಹಿಂದೆ ಹೋಗಿ ವಿವಿಧ ಆಯಾಮಗಳ ಅಧ್ಯಯನ, ಸಂಶೋಧನೆ ಅನ್ವೇಷಣೆಗಳ ಹಿಂದಿದ್ದ ಟೆಸ್ಲಾ ಯುದ್ಧೋಪಾಯದ ಅನ್ವೇಷಣೆಯನ್ನೂ, ಮಿಸೈಲ್‌ಗಳ ಬಗೆಗೂ ಗಮನಹರಿಸಿದ್ದರಿಂದ, ಕಡೆಯ ದಿನಗಳಲ್ಲಿ ಆತ ಕೈಗೊಂಡ ಅಧ್ಯಯನ ಹಾಗೂ ಪ್ರಯೋಗಗಳ ಟಿಪ್ಪಣಿಗಳನ್ನು ಅಮೆರಿಕದ ರಕ್ಷಣಾ ಇಲಾಖೆಯು ವಶಪಡಿಸಿ ಇಟ್ಟುಕೊಂಡಿದೆ ಎಂದೂ ನಂಬಲಾಗಿದೆ.

ಹೆಚ್ಚುಕಾಲ ಹೋಟೆಲ್‌ ನಲ್ಲಿಯೇ ಒಂಟಿಯಾಗಿ ಉಳಿದುಕೊಳ್ಳುತ್ತಿದ್ದ ನಿಕೊಲ ಟೆಸ್ಲಾ 1943ರ ಜನವರಿ 7ರಂದು ತಮ್ಮ 86ನೆಯ ವಯಸ್ಸಿನಲ್ಲಿ ಹೋಟೆಲೊಂದರಲ್ಲಿ ತೀರಿಕೊಂಡರು. ಅದೂ ಎರಡು ದಿನಗಳ ನಂತರವಷ್ಟೇ ತಿಳಿದ ಸಂಗತಿಯಾಗಿತ್ತು. ಬಾಗಿಲಲ್ಲಿ ಆತ ಇರಿಸಿದ್ದ “Do Not Disturb” ಬೋರ್ಡನ್ನು ನಿರ್ಲಕ್ಷಿಸಿ ಒಳಗೆ ಹೋದವರಿಗೆ ನಂತರವೇ ತಿಳಿದದ್ದು. ನಿಜಕ್ಕೂ ಯಾರೂ Disturb ಮಾಡದ ಲೋಕಕ್ಕೆ ನಿಕೊಲ ತೆರಳಿದ್ದರು.

ಅಂತಹಾ ವಿಶಿಷ್ಟ ಮನಸ್ಸಿನ ಮಹಾನ್‌ ಅನ್ವೇಷಕನಿಗೆ ಅವರ ಜನ್ಮ ದಿನ ತಿಂಗಳಲ್ಲಿ ನೆನಪನ್ನು ಅನುರಣಿಸಲು CPUSನ ಓದುಗರಿಗೆ ಈ ಪುಟ್ಟ ಪ್ರಬಂಧ.

ನಮಸ್ಕಾರ

ಡಾ. ಟಿ.‌ ಎಸ್.‌ ಚನ್ನೇಶ್

Leave a Reply