You are currently viewing ಆಗಸಕ್ಕೆ ಹಿಡಿದ ಕೊಡೆಯ ಸೌಂದರ್ಯದ “ಮಳೆಮರ”

ಆಗಸಕ್ಕೆ ಹಿಡಿದ ಕೊಡೆಯ ಸೌಂದರ್ಯದ “ಮಳೆಮರ”

ಈ ಹಿಂದೆ ಬಾಗೆ ಮರದ (Albizia  lebbeck) ಬಗ್ಗೆ ಬರೆದಾಗ ಕೆಲವು ಗೆಳೆಯರು ತಮ್ಮ ಬಾಲ್ಯದಲ್ಲಿ ಕೆಲವು ಬಲಿತ ಕಾಯಿಗಳನ್ನು ಕುಟ್ಟಿ ಚೆಂಡು ಮಾಡುತ್ತಿದ್ದ ಕ್ಷಣಗಳ ನೆನಪುಗಳನ್ನು ಹಂಚಿಕೊಂಡು ಅದೇ ಮರ ತಾನೆ ಎಂದು ಕೇಳಿದರು. ಆದರೆ ನಾವೆಲ್ಲರೂ ಬಾಲ್ಯದಲ್ಲಿ ದಟ್ಟ-ಕಂದು ಬಣ್ಣದ ಅಂಟುಸಹಿತವಾದ ಕಾಯಿಗಳನ್ನು ಕುಟ್ಟಿ. ಅದರಲ್ಲಿ ಉಂಡೆ ಕಟ್ಟಿ ಚೆಂಡು ಮಾಡುತ್ತಿದ್ದುದು, ಬಾಗೆ ಮರ ಅಲ್ಲ. ಹಾಗಾದರೆ ನಾವು ಚೆಂಡುಮಾಡುತ್ತಿದ್ದ ಮರ ಯಾವುದು ಅಂತೀರಾ? ಅದು ಮಳೆ ಮರ, ಅಥವಾ ರೈನ್ ಟ್ರೀ. ಇದನ್ನು ವೈಜ್ಞಾನಿಕವಾಗಿ ಸಮಾನಿಯಾ ಸಮಾನ್ (Samanea saman ) ಎಂದು ಹೆಸರಿಸಲಾಗಿದೆ.  ಈ ಮಳೆ ಮರದ ಕಾಯಿಗಳು ಬಲಿತ ಮೇಲೆ ನೆಲಕ್ಕೆ ಬಿದ್ದು, ಅದರ ಮೇಲೆ ಬಸ್ಸೋ, ಕಾರೋ ಹತ್ತಿಹೋದರೆ ನೆಲಕ್ಕೆ ಅದರಲ್ಲೂ ಡಾಂಬಾರು ರಸ್ತೆಯನ್ನು ಅಂಟಿಕೊಂಡಿರುತ್ತಿವೆ. ಹಾಗೆ ಬಿದ್ದ ಕಾಯಿಗಳನ್ನು ಆರಿಸಿ ಕಲ್ಲುಗಳ ಮಧ್ಯೆ ಇರಿಸಿ ಕುಟ್ಟುತ್ತಾ ಅದರಲ್ಲಿ ಚೆಂಡು ಮಾಡಿ ಕ್ರಿಕೆಟ್ ಆಡುವುದು ಇಂದಿಗೂ ಮಕ್ಕಳಿಗೆ ತಿಳಿದ ಸಂಗತಿ. ಬಾಗೆ ಮರದ ಸಂಬಂಧಿಯೇ ಆದ ಈ ಮಳೆ ಮರಕ್ಕೆ “ಮಳೆ-ಮರ” ಎಂಬುದಾಗಿ ಹೆಸರು ಬರಲು ಕಾರಣಗಳು ಆಸಕ್ತಿದಾಯಕವಾಗಿವೆ.

          ಮಳೆ ಮರದ ಎಲೆಗಳು ಬೆಳಕಿಗೆ ತುಂಬಾ ಸೂಕ್ಷ್ಮವಾಗಿ ಪ್ರತಿಕ್ರಿಯೆ ತೋರುವ ಸಂವೇದನೆಯನ್ನು ಹೊಂದಿವೆ. ಹಾಗಾಗಿ ಸಾಮಾನ್ಯವಾಗಿ ಮೋಡ ಮುಸುಕಿದಾಗ ಹಾಗೂ ರಾತ್ರಿ ವೇಳೆಯಲ್ಲಿ ಮಡಿಚಿಕೊಂಡಿದ್ದು ಮಳೆ ಬಂದರೆ ಎಲೆಗಳ ಮಧ್ಯೆ ನೀರು ನೆಲಕ್ಕೆ ಸರಾಗವಾಗಿ ಕೆಳಗೆ ಬೀಳುವಂತೆ ಅನುಕೂಲಕಲ್ಪಿಸಿರುತ್ತವೆ. ಅದಲ್ಲದೆ ಮಳೆ ಮರದ ಕೆಳಗೆ ಬೆಳೆದ ಹುಲ್ಲು ಇತರೇ ಸುತ್ತಲಿನ ನೆಲದ ಮೇಲೆ ಬೆಳೆದ ಹುಲ್ಲಿಗಿಂತಾ ಹೆಚ್ಚು ಹಸಿರಾಗಿದ್ದು, ಮಳೆಯ ಫಲವನ್ನು ಹೆಚ್ಚು ಅನುಭವಿಸಿದೆಯೋ ಅನ್ನಿಸುತ್ತದೆ. ಹಾಗೆಯೇ ಮರದಲ್ಲಿರುವ ಕೆಲವು ರಸಹೀರುವ ಕೀಟಗಳು ರಸಸುರಿಸುವುದನ್ನು ಮಳೆ ಬಂದಂತೆ ಅನ್ನಿಸುವುದಕ್ಕೂ ಮಳೆಮರ ಎನ್ನುತ್ತಾರೆ. ಅಲ್ಲದೆ ತುಂಬು ಹೂವಾಡುವ ಸಂದರ್ಭದಲ್ಲಿ ಹೂವಿನ ಪುಂಕೇಸರಗಳು (ಸ್ಟೇಮನ್‍ ಗಳು) ಒಳ್ಳೆ ಮಳೆ ಬೀಳುವಂತೆ ಬೀಳುತ್ತಿರುತ್ತವೆ. ಮತ್ತೂ ಒಂದು ಕಾರಣವೆಂದರೆ ಎಲೆಯ ತೊಟ್ಟುಗಳಿಂದ ಸಕ್ಕರಸಹಿತವಾದ ರಸವು ಕೆಲವೊಮ್ಮೆ ಮಳೆಯಂತೆ ಹನಿ ಹನಿಯಾಗಿ ಬೀಳುವುದರಿಂದಲೂ ಈ ಮರವನ್ನು ಮಳೆ-ಮರ ಎಂದು ಕರೆಯುತ್ತಾರೆ.

          ಮಳೆಮರ ಲೆಗ್ಯೂಮ್ ಗುಂಪಿನ ಫ್ಯಾಬೇಸಿಯೇ ಕುಟುಂಬಕ್ಕೆ ಸೇರಿದ ಮರ. ಇದರ ತವರೂರು ಮೆಕ್ಸಿಕೊನಿಂದ, ಪೆರು ಹಾಗೂ ಬ್ರೆಜಿಲ್ ದೇಶದ ಕಾಡುಗಳು. ಅಲ್ಲಿಂದ ಏಶಿಯಾ, ಯೂರೋಪ್ ಮತ್ತಿತರ ಪ್ರದೇಶಗಳಿಗೆ ಪರಿಚಿತಗೊಂಡು ಇಂದು ಜಗತ್ತಿನಾದ್ಯಂತ ಅದೂ ಉಷ್ಣವಲಯದ ಪ್ರದೇಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಅದರಲ್ಲೂ ಇದರ ಬಿಸಿಲು ಪ್ರೀತಿಯನ್ನು ಕಂಡು ನೆರಳಿಗಾಗಿ ಪಾರ್ಕ್‍ ಗಳ ಅಂಚುಗಳಲ್ಲಿ, ಹೆದ್ದಾರಿಗಳ ಆಚೀಚೆ, ವಸತಿ ಪ್ರದೇಶಗಳ ಆಸು-ಪಾಸಿನಲ್ಲೂ ಬೆಳಸುವುದುಂಟು. ದಟ್ಟವಾದ ನೆರಳನ್ನು ಒಂದು ರೀತಿಯಲ್ಲಿ -ಕೊಡೆಯನ್ನು ಹಿಡಿದ ಮಾದರಿಯಲ್ಲಿ- ಸಾಕಷ್ಟು ಒದಗಿಸುತ್ತದೆ. ನೋಡಲು ಕೂಡ ಕೊಡೆಯ ಆಕಾರವನ್ನೇ ಹೊಂದಿದ್ದು, ಮುಖ್ಯ ಕಾಂಡದಿಂದ ಮರದ ಚಾವಣಿಯು ಸಾಕಷ್ಟು ಅಗಲವಾಗಿ ಹಬ್ಬಿಕೊಂಡಿರುತ್ತದೆ. ಮರವು ಸುಮಾರು 50 ರಿಂದ 80 ಅಡಿಗಳಷ್ಟು ಎತ್ತರಕ್ಕೆ ಬೆಳೆಯಬಲ್ಲುದು. ಕೆಲವೊಮ್ಮೆ 150 ಅಡಿಗಳಿಗಿಂತ ಹೆಚ್ಚೂ ಬೆಳೆದ ಉದಾಹರಣೆಗಳಿವೆ. ಹಾಗೆಯೇ ಚಾವಣೆಯ ಹಾಸು ಮರದ ಎತ್ತರವನ್ನು ಮೀರಿಸಿರುತ್ತದೆ. ಅಂದರೆ 100 ಅಡಿಗಳಷ್ಟು ಅಗಲವಾಗಿರಬಲ್ಲದು. ದಟ್ಟವಾಗಿ ಬಿಸಿಲು ಬೀಳುವ ತೆರೆದ ಪ್ರದೇಶಗಳಲ್ಲಿ ಮರ ಸಾಕಷ್ಟು ಅಗಲವಾಗಿ ಹರಡಿಕೊಂಡಿರುವುದು ಸಾಮಾನ್ಯ ದೃಶ್ಯ. ಇದರ ನಿಸರ್ಗಸ್ನೇಹಿ ಗುಣಗಳಿಂದಾಗಿ ಮರವು ಸಾಕಷ್ಟು ಜನಪ್ರಿಯವಾಗಿದೆ.

          ಲೆಗ್ಯೂಮ್ ಗುಂಪಿನ ಮರವಾಗಿರುವುದರಿಂದ ವಾತಾವರಣದಿಂದ ಸಾರಜನಕವನ್ನು ಸ್ಥಿರೀಕರಿಸಲು ಸಹಕಾರಿ. ನೆರಳಿಗಾಗಿ ಬೆಳುವದಂತೂ ಜನಪ್ರಿಯವೇ. ಇದರ ಹೂ-ಎಲೆಗಳು ಸಾಕಷ್ಟು ಬೀಳುವುದರಿಂದ ಅದರ ಕಾಂಪೋಸ್ಟ್ ಗುಣವೂ ಆಕರ್ಷಕವಾಗಿದೆ. ಅದೆಲ್ಲಕ್ಕಿಂತಾ ಹೆಚ್ಚಾಗಿ ಸಾಕಷ್ಟು ಹರವಾದ-ದಟ್ಟವಾದ ಕ್ಯಾನೊಪಿ ಅಥವಾ ಚಾವಣೆ ಇರುವುದರಿಂದ ವಾತಾವರಣದಿಂದ ಹೆಚ್ಚು ಇಂಗಾಲವನ್ನು ಹೀರಿಕೊಳ್ಳುವ ಮರವಾಗಿಯೂ ಹೆಸರುವಾಸಿ. ಇಂಡೊನೇಸಿಯಾದ ಬೊಗೊರ್ ಕೃಷಿ ಸಂಶೋಧನಾ ಸಂಸ್ಥೆಯ ಅನುಶೋಧದಂತೆ 15 ಮೀಟರ್ ವ್ಯಾಸದಷ್ಟು ಅಗಲವಾದ ಮಳೆಮರವು ಸುಮಾರು 28.5 ಟನ್ನುಗಳಷ್ಟು ಇಂಗಾಲದ ಡೈ ಆಕ್ಸೈಡನ್ನು ಹೀರಿಕೊಳ್ಳುವುದೆಂದು ಅರಿಯಲಾಗಿದೆ. ಇದರಿಂದಾಗಿಯೇ ಸಾಮಾನ್ಯವಾಗಿ ಊರ ಅಂಚಿನ ಪಾರ್ಕುಗಳಲ್ಲಿ ಸಹಜವಾಗಿ ಸ್ಥಾನಪಡೆದಿದೆ. ಅದಲ್ಲದೆ ಈ ಮರಕ್ಕೂ ವಾತಾವರಣದ ಹಿತಕ್ಕೂ ಬಹಳ ದೊಡ್ಡ ನಂಟು ಇದೆ. ಜರ್ಮನಿಯ ಅಲೆಕ್ಸಾಂಡರ್ ವಾನ್ ಹಂಬೊಲ್ಟ್ (Alexander von Humboldt)  ಎಂಬ ವಿಜ್ಞಾನಿ ಹಾಗೂ ದಾರ್ಶನಿಕ 1799-1804 ರ ನಡುವೆ ದಕ್ಷಿಣ ಅಮೆರಿಕಾದ ಕಾಡುಗಳಲ್ಲಿ ಅಲೆದಾಡುತ್ತಿದ್ದಾಗ ವೆನೆಜುವಿಲಾ ಕಾಡುಗಳಲ್ಲಿ ದಟ್ಟವಾದ ಮಳೆಮರಗಳನ್ನು ಕಂಡುದ್ದನ್ನು ದಾಖಲು ಮಾಡಿದ್ದಾರೆ.  ವೆನೆಜುವಿಲಾ ದೇಶದಲ್ಲಿ ಐದಾರು ನೂರು ವರ್ಷಗಳ ಹಿರಿದಾದ ಮಳೆ-ಮರಗಳು ಇದ್ದು ಅವುಗಳನ್ನು ರಾಷ್ಟ್ರೀಯ ಸಂಪತ್ತೆಂದು ಭಾವಿಸಲಾಗಿದೆ. ನಮ್ಮ ದೇಶದಲ್ಲೂ ಅಸ್ಸಾಮಿನ ಗೌಹಾತಿಯ ಹತ್ತಿರದಲ್ಲೊಂದು ಬೃಹತ್ ಮಳೆಮರವಿದೆ. ಬ್ರಹ್ಮಪುತ್ರ ತೀರದಲ್ಲಿರುವ ಈ ಮರವನ್ನು ಬ್ರಹ್ಮಪುತ್ರ ಮಳೆಮರೆವೆಂದೇ ಕರೆಯಲಾಗುತ್ತಿದೆ.

          ವೆನೆಜುವಿಲಾದ ಮಳೆಮರಗಳಿಗೆ ಸಾಕ್ಷಿಯಾದ ಅಲೆಕ್ಸಾಂಡರ್ ಹಂಬೊಲ್ಟ್ ತಮ್ಮ 1800 ಮತ್ತು 1831ನಡುವಣ ವಾತಾವರಣದ ಸಾದೃಶ್ಯಗಳನ್ನು ಮತ್ತು ಅವುಗಳ ಮಾನವರೊಡನಾಟವನ್ನೂ ಕಂಡು ಮೊಟ್ಟ ಮೊದಲ ಬಾರಿಗೆ ಮಾನವ ನಿರ್ಮಿತ ವಾತಾವರಣದ ಬದಲಾವಣೆಯ ಕುರಿತು ದಾಖಲಿಸಿದ ವಿಜ್ಞಾನಿಯಾಗಿದ್ದಾರೆ. ಹೀಗೆ ಮಳೆ ಮರದ ಆಸಕ್ತಿಯ ಹಿತವು ಹಂಬೋಲ್ಟ್ ಮೂಲಕ ಮಾನವರ ನಿಸರ್ಗದೊಡನಾಟದ ಸಂಗತಿಗಳೂ ಬೆಳಕಿಗೆ ಬಂದಿವೆ. ಈ ದಿನಗಳಲ್ಲಿ ಅಂತೂ ವಾತಾವರಣದ ಬದಲಾವಣೆಯ ವೈಜ್ಞಾನಿಕ ಚರ್ಚೆಗಳು ಕೊನೆ-ಮೊದಲಿರದ ವಾಸ್ತವಗಳೇ ಆಗಿರುವುದಕ್ಕೆ ನಾವೆಲ್ಲರೂ ಸಾಕ್ಷಿಗಳಾಗಿದ್ದೇವೆ.

          ಮರದ ಚಾವಣೆಯು ದಟ್ಟವಾಗಿದ್ದು ಸಾಕಷ್ಟು ಎಲೆ-ಹಾಗೂ ಹೂಗಳನ್ನು ಬಿಟ್ಟು ಆಕರ್ಷಕವಾದ ನೋಟವನ್ನು ಕೊಡುತ್ತದೆ. ಮರದ ಸಾರಜನಕ ಸ್ಥಿರೀಕರಣದಿಂದಾಗಿ ಅದರ ಅಡಿಯ ನೆಲದ ಮೇಲೆ ಬೆಳೆಯುವ ಹುಲ್ಲು ಹಚ್ಚ ಹಸಿರಾಗಿದ್ದು ಆಕರ್ಷಣಿಯವಾಗಿರುತ್ತದೆ. ಕಾಯಿಗಳ ತಿರುಳು ಹುಣಸೆಯ ಹಣ್ಣಿನಂತೆ ತೆಗೆದು ತಿನ್ನ ಬಹುದಾಗಿದ್ದು, ಲ್ಯಾಟಿನ್ ಅಮೆರಿಕಾದ ಮಕ್ಕಳು ನಾವು ಹುಣಸೆ ಹಣ್ಣಿನ ಪಾನಕ ಮಾಡುವಂತೆ ಮಾಡಿ ಸವಿಯುತ್ತಾರೆ. ದನ-ಕರುಗಳು, ಆಡು-ಕುರಿಗಳು ಎಲೆಗಳನ್ನೂ ಹಾಗೂ ಕಾಯಿಗಳನ್ನೂ ತಿನ್ನುತ್ತವೆ. ಎಲೆ ಹಾಗೂ ಕಾಯಿಗಳಲ್ಲಿ ಕ್ರಮವಾಗಿ 15-18% ಹಾಗೂ 22-27% ಪ್ರೊಟೀನ್ ಇದ್ದು ಉತ್ತಮ ಆಹಾರವಾಗಿರುತ್ತದೆ. ಇಷ್ಟೆಲ್ಲದರ ಜೊತೆಗೆ ಮರದಿಂದ ಕೆಲವು ಔಷಧೀಯ ಉಪಯೋಗಗಳನ್ನು ಜನಪದ ವೈದ್ಯಕೀಯ ತಿಳಿವಳಿಕೆಯಿಂದ ಗಮನಿಸಬಹುದಾಗಿದೆ. ಮರದ ತೊಗಟೆಯನ್ನು ನೀರಿನಲ್ಲಿ ಕುದಿಸಿ ಕಷಾಯ ತಯಾರಿಸಿ ಅತಿಬೇಧಿ ನಿವಾರಕವಾಗಿ ಬಳಸುತ್ತಾರೆ. ಇದರ ಬೀಜಗಳನ್ನು ಗಂಟಲು ಉರಿತದ ಉಪಶಮನಕ್ಕಾಗಿ ವೆಸ್ಟ್ ಇಂಡೀಸ್ ನಲ್ಲಿ ಬಳಸುತ್ತಾರೆ. 

          ಮಳೆ ಮರದ ಉಪಯೋಗಗಳಿಂದ ಮಾತ್ರವಲ್ಲದೆ ತನ್ನ ಸುಂದರವಾದ ಆಕರ್ಷಕ ನೋಟಕ್ಕೂ ಪ್ರಸಿದ್ಧವಾಗಿದ್ದು 1960ರ ಚಲನ ಚಿತ್ರವೊಂದರ ಪ್ರಮುಖ ಪಾತ್ರದಾರಿಯೂ ಆಗಿದೆ. ಅಮೆರಿಕಾದ ಅಡ್ವೆಂಚರ್ ಚಿತ್ರವಾದ ಸ್ವಿಸ್ ಫ್ಯಾಮಿಲಿ ರಾಬಿನ್ ಸನ್ (Swiss Family Robinson) ನಲ್ಲಿ ಫ್ಯಾಮಿಲಿ ಟ್ರೀ ಹೌಸ್ ಒಂದನ್ನು ನಿಜವಾದ ಬೃಹತ್ಮಳೆಮರವನ್ನು ಬಳಸಿ ನಿಮಿಸಲಾಗಿತ್ತು. ಸಿನಿಮಾ ನಿರ್ಮಾಪಕರ ವರದಿಯಂತೆ ಮರದ ಎತ್ತರವು ಸುಮಾರು 200 ಅಡಿಯಷ್ಟು ಎಂದು ಹೇಳಲಾಗುತ್ತದೆ. ಚಲನಚಿತ್ರದ ನಂತರವೂ ಮರವನ್ನು ಬಳಸಿ ನಿರ್ಮಿಸಿದ್ದ ಸೆಟ್ ಅನ್ನು ಕಾಪಾಡಲಾಗಿದ್ದರೂ ಮುಂದೊಮ್ಮೆ ಬಿರುಗಾಳಿಯ ದಾಳಿಗೆ ಬಲಿಯಾಯಿತು. ಆದರೆ ಮರವು ಇನ್ನೂ ಕೆರಬಿಯನ್ ದ್ವೀಪಗಳ ಟೊಬಾಗೊನಲ್ಲಿ ಇದೆ.

          ಆಗಸಕ್ಕೆ ಹಿಡಿದ ಕೊಡೆಯಂತಹಾ ಸೌಂದರ್ಯವುಳ್ಳ ದಟ್ಟ ನೆರಳಿನ ಮರವನ್ನು  ಸುಲಭವಾಗಿ ಗುರುತಿಸಬಹುದು. ಅದರ ನೆರಳಲ್ಲಿ ಅಡ್ಡಾಡದವರು ಅಪರೂಪ ಎನ್ನಬಹುದು. ಅಷ್ಟರ ಮಟ್ಟಿಗೆ ನಮ್ಮೆಲ್ಲಾ ಊರುಗಳಲ್ಲೂ ಮನೆ ಮಾಡಿಕೊಂಡಿರುವ ಮರ ಇದಾಗಿದೆ.

ಮತ್ತೊಂದು ಮರ/ಗಿಡ/ಬಳ್ಳಿಯ ಕತೆಯೊಂದಿಗೆ  ಭೇಟಿಯಾಗೋಣ

— ನಮಸ್ಕಾರ ಡಾ. ಟಿ.ಎಸ್. ಚನ್ನೇಶ್.

This Post Has One Comment

  1. Triveni

    very informative article

Leave a Reply