ಈಗಿರುವ ಮಾನವ ಪ್ರಭೇದ ಹೋಮೊ ಸೇಪಿಯನ್(Homo sapiens) ತನ್ನ ಪ್ರಸ್ತುತ ಇರುವಿಕೆಯ ಹಿನ್ನೆಲೆಯ ಬಗೆಗೆ, ಅದರ ವಿಕಾಸದ ಮೂಲದಿಂದಲೂ ಆಸಕ್ತಿಯನ್ನು ಹೊಂದಿದೆ. ಅಂದರೆ ನಾವು ಎಲ್ಲಿಂದ ಬಂದಿದ್ದೇವೆ ಮತ್ತು ಹೇಗೆ ನಾವು ಈಗಿರುವಂತೆ ಇದ್ದೇವೆ, ನಮಗಿಂತಲೂ ಹಿಂದಿದ್ದವರಿಗೆ ಹೇಗೆ ಸಂಬಂಧಿಸಿದ್ದೇವೆ? ನಮಗೆ ಈಗಿರುವ ವಿಕಾಸದ ಶ್ರೇಷ್ಟತೆಯು ನಿಜವೇ? ನಮ್ಮ ಅನನ್ಯತೆಗೆ ಕಾರಣಗಳು ಏನು? ಹೋಮೋ ಸೇಪಿಯನ್ ಗಳು ಹಿಂದಿದ್ದ ಇತರೇ ಆದಿಮಾನವ ಪ್ರಭೇದ (ಹೋಮಿನಿನ್‌ಗಳು) ಗಳಿಗಿಂತಾ ಅದೆಷ್ಟು ಭಿನ್ನವಾಗಿ ವಿಕಾಸಗೊಂಡಿದ್ದಾನೆ? ಇಂತಹಾ ಎಲ್ಲಾ ಕುತೂಹಲಗಳಿಗೂ ವಿಶೇಷವಾದ ವೈಜ್ಞಾನಿಕ ಸಾಬೀತುಗಳನ್ನು ಒದಗಿಸಿದ ಆದ್ಯ ಪ್ರವರ್ತಕ ಸ್ವಾಂಟೆ ಪಾಬೊ (Svante Pääbo) ಸ್ವೀಡಿಶ್ ಮೂಲದ ವಿಜ್ಞಾನಿಗೆ ಈ ವರ್ಷ 2022ರ ವೈದ್ಯಕೀಯ ವಿಜ್ಞಾನದ ನೊಬೆಲ್ ಪುರಸ್ಕಾರ ದೊರತಿದೆ.
ತಮ್ಮ ಅತ್ಯಂತ ಅನನ್ಯವಾದ ಹಾಗೂ ವಿಶಿಷ್ಟವಾದ ಸಂಶೋಧನೆಗಳ ಮೂಲಕ, ಸ್ವಾಂಟೆ ಪಾಬೊ (Svante Pääbo) ಇಂದಿನ ಮಾನವರ ಸಂಬಂಧಿಯಾದ ಅಳಿದುಹೋಗಿರುವ ನಿಯಾಂಡರ್ತಾಲ್‌ನ ಜೀನೋಮ್ ಅನ್ನು ಅನುಕ್ರಮಗೊಳಿಸುವುದರ (ಸ್ವೀಕ್ವೆನ್ಸ್ ಮಾಡುವ) (Neanderthal Genome Sequencing) ಮೂಲಕ, ಸಾಧ್ಯವೇ ಇಲ್ಲ ಎನ್ನಬಹುದಾದ ವಿಶೇಷವೊಂದನ್ನು ಸಾಧಿಸಿ ತೋರಿಸಿಕೊಟ್ಟಿದ್ದಾರೆ. ಅದೂ ಅಲ್ಲದೆ ಹಿಂದಿನಿಂದಲೂ ಅಪರಿಚಿತವಾಗಿದ್ದ, ಸಾಮಾನ್ಯ ತಿಳಿವಿನಲ್ಲಿ ಗೊತ್ತೇ ಇಲ್ಲದಿದ್ದ ಡೆನಿಸೋವಾ ಎಂಬ ಹೋಮಿನಿನ್ ಗಳಿದ್ದ ಅರಿವಿನ ಬಗೆಗೂ ಅತ್ಯಂತ ಅಚ್ಚರಿಯ ಹಾಗೂ ಸಂವೇದನಾಶೀಲವಾದ ಆವಿಷ್ಕಾರವನ್ನು ಸಹಾ ಮಾಡಿದ್ದಾರೆ. ಅಲ್ಲದೆ ಎಲ್ಲದಕ್ಕಿಂತಲೂ ಮುಖ್ಯವಾಗಿ ಸುಮಾರು 70,000 ವರ್ಷಗಳ ಹಿಂದೆ ಆಫ್ರಿಕಾದಿಂದ ವಲಸೆ ಹೊರಟ ಹೋಮೋ ಸೇಪಿಯನ್‌ಗಳಿಗೆ ಅಳಿದು ಹೋಗಿರುವ ಇಂತಹಾ ಆದಿಮಾನವ ಪ್ರಭೇದಗಳಿಂದ ಜೀನುಗಳ ವರ್ಗಾವಣೆ ಕೂಡ ಸಂಭವಿಸಿದೆ ಎಂದು ಪಾಬೊ ಕಂಡುಕೊಂಡಿದ್ದಾರೆ. ಈ ಮೂಲಕ ಪ್ರಸ್ತತ ಮಾನವ ಸಂತತಿಯ ಜೈವಿಕ ಹಿನ್ನೆಲೆಯನ್ನು ಅರಿಯುವಲ್ಲಿ ಹಾಗೂ ಈ ಮೂಲಕ ನಮ್ಮ ಜೀವನವನ್ನು ಮತ್ತಷ್ಟು ಆರೋಗ್ಯಯುತವಾಗಿ ರೂಪಿಸುವ ತಿಳಿವಳಿಕೆಯನ್ನು ಹೆಚ್ಚಿಸಲು ವೈಜ್ಞಾನಿಕ ತಳಹದಿಯನ್ನು ಒದಗಿಸಿದ್ದಾರೆ.
ಇಂದಿನ ಮಾನವರಿಗೆ ಜೀನ್‌ಗಳ ಈ ಪ್ರಾಚೀನ ಹರಿವು ಇಂದಿನ ಶಾರೀರಿಕ ಪ್ರಸ್ತುತತೆಯಲ್ಲಿ ಮಹತ್ವವೂ ಇದೆ ಎಂಬ ಅಂಶವನ್ನೂ ಅವರ ಸಂಶೋಧನೆಗಳು ಹೊರಹಾಕಿವೆ. ಉದಾಹರಣೆಗೆ ನಮ್ಮ ಪ್ರತಿರೋಧ (ಇಮ್ಯೂನ್) ವ್ಯವಸ್ಥೆಯು ಸೋಂಕುಗಳಿಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದರ ಮೇಲೆ ಪರಿಣಾಮಕಾರಿಯಾದ ವಿಚಾರಗಳನ್ನು ನಿರ್ಧರಿಸಲು ಅವರ ಶೋಧಗಳು ನೆರವಾಗಿವೆ. ಸಾಧಾರಣವಾಗಿ ಮಾನವ ಸಂಕುಲವು ಆಫ್ರಿಕಾದಿಂದ ವಲಸೆಯ ಮೂಲಕ, ವಿವಿಧ ಸೋಂಕುಗಳಿಗೆ, ಅಲರ್ಜಿಗಳಿಗೆ ಪ್ರತಿರೋಧವನ್ನು ವಿಕಾಸಗೊಳಿಸುತ್ತಲೇ ಪ್ರಸ್ತುತ ಇರುವಿಕೆಯನ್ನು ಗಳಿಸಿಕೊಂಡಿದೆ.
ಪಾಬೊ ಅವರ ಮೂಲ ಸಂಶೋಧನೆಯು ಪೇಲಿಯೊಜೆನೊಮಿಕ್ಸ್ (Paleogenomics) ಎಂಬ ಸಂಪೂರ್ಣವಾಗಿ ಹೊಸತೊಂದು ವೈಜ್ಞಾನಿಕ ಅಧ್ಯಯನ ಶಿಸ್ತಿಗೂ ಕಾರಣವಾಗಿದೆ. ಇಂದಿನಾ ಎಲ್ಲಾ ಜೀವಂತ ಮಾನವರನ್ನು ಅಳಿದು ಹೋದ ಹೋಮಿನಿನ್‌ಗಳಿಂದ ಪ್ರತ್ಯೇಕಿಸುವ ಆನುವಂಶಿಕ ವ್ಯತ್ಯಾಸಗಳನ್ನು ಬಹಿರಂಗಪಡಿಸುವ ಮೂಲಕ, ಅವರ ಆವಿಷ್ಕಾರಗಳು ನಮ್ಮನ್ನು ಅನನ್ಯವಾದ ಮಾನವ(Unique Humans)ರನ್ನಾಗಿರುವ ಬಗೆಗೆ ಆಧಾರವನ್ನು ಒದಗಿಸುತ್ತವೆ.
ಹಾಗಾದರೆ ನಾವು ಎಲ್ಲಿಂದ ಬಂದಿದ್ದೇವೆ?
ನಮ್ಮ ವಿಕಾಸದ ಮೂಲದ ಪ್ರಶ್ನೆ ಮತ್ತು ನಮ್ಮನ್ನು ಅನನ್ಯವಾಗಿಸುವ ಪ್ರಯತ್ನವು ಪ್ರಾಚೀನ ಕಾಲದಿಂದಲೂ ಮಾನವೀಯತೆಯನ್ನು ತೊಡಗಿಕೊಂಡಿದೆ. ನಾವು ವಿಕಾಸದ ಕೊನೆಯ ತುದಿಯಲ್ಲಿರುವುದನ್ನು ತೋರಿಸಿಕೊಟ್ಟು, ಇತರ ಜೀವಿಗಳಿಗಿಂತಾ, ತಮ್ಮನ್ನು ಶ್ರೇಷ್ಠ ಜೀವಿಯೆಂದು ಕರೆಯಿಸಿಕೊಳ್ಳುವ ಹಂಬಲ ಸದಾ ಇದ್ದೇ ಇದೆ. ಮಾನವ ವಿಕಾಸದ ಅಧ್ಯಯನಗಳಿಗೆ ಪಳೆಯುಳಿಕೆವಿಜ್ಞಾನ (Paleontology) ಮತ್ತು ಪುರಾತತ್ವ (Archeology) ಅಧ್ಯಯನಗಳು ಮಾನವ ವಿಕಾಸದ ಅಧ್ಯಯನಗಳಿಗೆ ಸದಾ ಮುಖ್ಯವಾಗಿವೆ. ಅಂಗರಚನೆಗಳ ರೂಪುರೇಷೆಯಲ್ಲಿ ಈಗಿರುವ ಆಧುನಿಕ ಮಾನವರಾದ ಹೋಮೋ ಸೇಪಿಯನ್‌ಗಳಂತಹಾ ಪ್ರಭೇದವು ಸುಮಾರು 300,000 ವರ್ಷಗಳ ಹಿಂದೆ ಆಫ್ರಿಕಾದಲ್ಲಿ ಮೊದಲು ಕಾಣಿಸಿಕೊಂಡವು. ಹಾಗೆಯೇ ನಮ್ಮ ಹತ್ತಿರದ ಸಂಬಂಧಿಗಳಾದ ನಿಯಾಂಡರ್ತಲ್‌ಗಳು ಸುಮಾರು 400,000 ವರ್ಷಗಳಿಂದ ಕೇವಲ 30,000 ವರ್ಷಗಳ ಹಿಂದಿನವರೆವಿಗೂ ಯುರೋಪ್ ಮತ್ತು ಪಶ್ಚಿಮ ಏಷ್ಯಾದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಆಫ್ರಿಕಾದ ಹೊರಗೆ ಅಭಿವೃದ್ಧಿ ಹೊಂದಿದವು ಎಂಬುದಕ್ಕೆ ಇವರ ಸಂಶೋಧನೆಗಳು ಪುರಾವೆಗಳನ್ನು ಒದಗಿಸಿದೆ. ನಂತರದಲ್ಲಿ ಅವು ಅಳಿದು ಹೋದವು. ಸುಮಾರು 70,000 ವರ್ಷಗಳ ಹಿಂದೆ, ಹೋಮೋ ಸೇಪಿಯನ್ನರ ಗುಂಪುಗಳು ಆಫ್ರಿಕಾದಿಂದ ಮಧ್ಯಪ್ರಾಚ್ಯಕ್ಕೆ ವಲಸೆ ಬಂದವು. ಅಲ್ಲಿಂದ ಹೋಮೋಸೇಪಿಯನ್ನರು ಪ್ರಪಂಚದ ಇತರ ಭಾಗಗಳಿಗೆ ಹರಡಿದರು. ಹೋಮೋ ಸೇಪಿಯನ್ನರು ಮತ್ತು ನಿಯಾಂಡರ್ತಲ್ ಗಳು, ಹೀಗೆ ಹತ್ತಾರು ಸಾವಿರ ವರ್ಷಗಳ ಕಾಲ ಯುರೇಷಿಯಾದ ದೊಡ್ಡಭಾಗಗಳಲ್ಲಿ ಒಟ್ಟಾಗಿಯೇ ಸಹಬಾಳ್ವೆಯನ್ನು ನಡೆಸುತ್ತಿದ್ದರು. ಆದರೆ ಈಗ ಅಳಿದುಹೋಗಿರುವ ನಿಯಾಂಡರ್ತಲ್‌ಗಳೊಂದಿಗಿನ ಸಂಬಂಧಗಳ ಬಗ್ಗೆ ನಮಗೆ ಏನೂ ತಿಳಿವಿಲ್ಲವಾಗಿತ್ತು. ಆದರೆ ಸಾಧ್ಯವಾದಲ್ಲಿ ಅವರ ಜೀನೋಮಿಕ್ ಮಾಹಿತಿಯಿಂದ ಸಂಬಂಧಗಳ ಬಗೆಗ ಸುಳಿವುಗಳನ್ನು ಪಡೆಯಬಹುದಾಗಿದೆ. 1990ರ ದಶಕದ ಅಂತ್ಯದ ವೇಳೆಗೆ, ಬಹುತೇಕ ಸಂಪೂರ್ಣ ಮಾನವ ಜೀನೋಮ್ ಅನ್ನು ಸೀಕ್ವೆನ್ಸ್ ಮಾಡಿ ಅನುಕ್ರಮಗೊಳಿಸಲಾಯಿತು. ಇದೊಂದು ಗಣನೀಯ ಸಾಧನೆಯೂ ಹೌದು., ಇದು ವಿವಿಧ ಮಾನವ ಜನಸಂಖ್ಯೆಯ ನಡುವಿನ ಆನುವಂಶಿಕ ಸಂಬಂಧದ ನಂತರದ ಅಧ್ಯಯನಗಳಿಗೆ ಅವಕಾಶ ಮಾಡಿಕೊಟ್ಟಿತು. ಆದಾಗ್ಯೂ, ಇಂದಿನ ಮಾನವರು ಮತ್ತು ಅಳಿದು ಹೋದ ನಿಯಾಂಡರ್‌ತಲ್‌ಗಳ ನಡುವಿನ ಸಂಬಂಧದ ಅಧ್ಯಯನಗಳ ಜೀನು ಅನುಕ್ರಮಣಿಕೆಗಳ ಅಗತ್ಯವಿತ್ತು. ಇದೀಗ ಅಂತಹಾ ಜೀನೋಮಿಕ್ ವಿವರಗಳು ಪುರಾತನ ಮಾದರಿಗಳಿಂದ ದೊರೆತ ಡಿಎನ್ಎ ಗಳಿಂದ ಅರಿಯಲಾಗಿದೆ. ಪಾಬೊ ಅವರ ನಿರಂತರವಾದ ಸಂಶೋಧನಾ ಹಾಗೂ ಅಧ್ಯಯನಶೀಲತೆ ಅದನ್ನು ಸಾಧ್ಯಮಾಡಿದೆ.

ಆದರೆ ಇದೇನೂ ಅಷ್ಟು ಸುಲಭವಾದ ಕೆಲಸವಾಗಿರಲಿಲ್ಲ. ಏಕೆಂದರೆ ಜೀವಿಗಳೇ ಇಲ್ಲದೆ ಕೇವಲ ಅವುಗಳ ಅವಶೇಷಗಳಿಂದ ಡಿ.ಎನ್.ಎ. ವಿವರಗಳನ್ನು ಹೆಕ್ಕಿ ತೆಗೆಯಬೇಕಿತ್ತು. ಸ್ವಾಂಟೆ ಪಾಬೊ ಅವರು ತಮ್ಮ ವೃತ್ತಿಜೀವನದ ಆರಂಭದಲ್ಲಿ, ನಿಯಾಂಡರ್ತಲ್‌ಗಳ ಡಿಎನ್‌ಎ ಯನ್ನು ಅಧ್ಯಯನ ಮಾಡಲು ಆಧುನಿಕ ಆನುವಂಶಿಕ ವಿಧಾನಗಳನ್ನು ಬಳಸಿಕೊಳ್ಳುವ ಸಾಧ್ಯತೆಯಿಂದ ಆಕರ್ಷಿತರಾದರು. ಆದಾಗ್ಯೂ, ಅವರು ಶೀಘ್ರದಲ್ಲೇ ಅದಕ್ಕೆ ಎದುರಾಗುವ ತೀವ್ರ ತಾಂತ್ರಿಕ ಸವಾಲುಗಳನ್ನು ಸಹಾ ಅರಿತುಕೊಂಡರು, ಏಕೆಂದರೆ ಕಾಲಾಂತರದಲ್ಲಿ, ಅಂದರೆ ಸಮಯವು ಕಳೆಯುತ್ತಾ ಹೋದಂತೆ DNA ರಾಸಾಯನಿಕವಾಗಿ ಮಾರ್ಪಡಿಸಲ್ಪಡುತ್ತದೆ ಮತ್ತು ಸಣ್ಣ ತುಣುಕುಗಳಾಗಿ ಕುಸಿಯುತ್ತದೆ. ಸಾವಿರಾರು ವರ್ಷಗಳ ನಂತರದಲ್ಲಿ ಡಿಎನ್‌ಎಯ ಅವಶೇಷಗಳು ಮಾತ್ರವೇ ಉಳಿದಿರುತ್ತವೆ. ಅದೂ ಕೂಡ ಬ್ಯಾಕ್ಟೀರಿಯಾ ಅಲ್ಲದೆ ಸಮಕಾಲೀನ ಮಾನವ ಪ್ರಭೇದಗಳ ಡಿಎನ್‌ಎಯಿಂದ ಬೃಹತ್ ಪ್ರಮಾಣದಲ್ಲಿ ಕಲುಷಿತಗೊಂಡಿರುತ್ತದೆ. ಜೀವಿ ವಿಕಾಸ ವಿಜ್ಞಾನದಲ್ಲಿ ಪ್ರವರ್ತಕರಾದ ಅಲನ್ ವಿಲ್ಸನ್ ಅವರ ಪೋಸ್ಟ್‌ಡಾಕ್ಟರಲ್ ವಿದ್ಯಾರ್ಥಿಯಾಗಿ, ಪಾಬೊ ನಿಯಾಂಡರ್ತಲ್‌ಗಳಿಂದ ಡಿಎನ್‌ಎ ಅಧ್ಯಯನ ಮಾಡುವ ವಿಧಾನಗಳನ್ನು ಅಭಿವೃದ್ಧಿಪಡಿಸಲು ಪ್ರಾರಂಭಿಸಿದರು, ಇಂತಹಾ ಸಾಹಸಗಳೆಲ್ಲವೂ ಹಲವಾರು ದಶಕಗಳ ಪ್ರಯತ್ನದ ಫಲವಾಗಿದ್ದವು.
ಪಾಬೊ ಅವರನ್ನು ಮ್ಯೂನಿಚ್ ವಿಶ್ವವಿದ್ಯಾನಿಲಯು 1990ರಲ್ಲಿ ಆಹ್ವಾನಿಸಿ ಪ್ರಾಧ್ಯಾಪಕರನ್ನಾಗಿಸಿತು. ಅಲ್ಲಿ ಹೊಸದಾಗಿ ನೇಮಕಗೊಂಡರೂ ಮತ್ತೇ ಅವರು ಪುರಾತನ DNA ಕುರಿತ ತಮ್ಮ ಅಧ್ಯಯನವನ್ನು ಮುಂದುವರೆಸಿದರು. ಈಗ ಅವರು ನಿಯಾಂಡರ್‌ತಲ್ ನ ಜೀವಿಕೋಶದ ಮೈಟೊಕಾಂಡ್ರಿಯಾದಿಂದ ಡಿಎನ್ಎ ವಿಶ್ಲೇಷಿಸಲು ನಿರ್ಧರಿಸಿದರು. ಮೈಟೊಕಾಂಡ್ರಿಯಾ ಕೂಡ ಜೀವಿಕೋಶದ ಭಾಗವಾಗಿದ್ದೂ ತಮ್ಮದೇ ಆದ ಡಿಎನ್ಎ ಹೊಂದಿರುತ್ತದೆ. ಆದರೆ ಮೈಟೊಕಾಂಡ್ರಿಯದ ಜೀನೋಮ್ ಚಿಕ್ಕದಾಗಿದ್ದು ಮತ್ತು ಜೀವಿಕೋಶದಲ್ಲಿನ ಆನುವಂಶಿಕ ಮಾಹಿತಿಯ ಒಂದು ಭಾಗವನ್ನು ಮಾತ್ರವೇ ಹೊಂದಿರುತ್ತದೆ, ಆದರೆ ಇದು ಸಾವಿರಾರು ಪ್ರತಿಗಳಾಗಿ ಇರುತ್ತದೆ. ಹಾಗಾಗಿ ಒಂದಷ್ಟು ಮಾಹಿತಿಯು ಸಿಗುವ ಸಾಧ್ಯತೆಯನ್ನು ದೃಢಪಡಿಸುತ್ತದೆ.

ಪಾಬೊ ತಮ್ಮ ಕೆಲವು ಸುಧಾರಿತ ವಿಧಾನಗಳೊಂದಿಗೆ, ಸುಮಾರು 40,000-ವರ್ಷ-ಹಳೆಯ ಮೂಳೆಯ ತುಂಡಿನಿಂದ ಮೈಟೊಕಾಂಡ್ರಿಯದ ಡಿಎನ್‌ಎ ವನ್ನು ಸ್ವೀಕ್ವೆನ್ಸ್ ಮಾಡಿ ಅನುಕ್ರಮಗೊಳಿಸುವಲ್ಲಿ ಯಶಸ್ವಿಯಾದರು. ಹೀಗಾಗಿ, ಮೊಟ್ಟ ಮೊದಲ ಬಾರಿಗೆ, ನಾವು ಅಳಿದು ಹೋಗಿರುವ ಓರ್ವ ಸಂಬಂಧಿಯಿಂದ ಜೀನುಗಳ ಅನುಕ್ರಮಣಿಕೆಯ ತಿಳಿವಳಿಕೆಗೆ ಪ್ರವೇಶವನ್ನು ಪಡೆದಿದ್ದೆವು. ಇದೇ ಮುಂದೆ ಸಮಕಾಲೀನ ಮಾನವರ ಜೊತೆ ಮತ್ತು ಚಿಂಪಾಂಜಿಗಳ ಜೊತೆಗಿನ ಹೋಲಿಕೆಗಳಲ್ಲಿ ನಿಯಾಂಡರ್‌ತಲ್ ಗಳು ಆನುವಂಶಿಕವಾಗಿ ವಿಭಿನ್ನವಾಗಿವೆ ಎಂದು ತೋರಿಸಲು ಇದರಿಂದ ಸಾಧ್ಯವಾಯಿತು.
ನಿಯಾಂಡರ್ತಲ್ ಜೀನೋಮ್ ಅನ್ನು ಅನುಕ್ರಮಗೊಳಿಸುವುದು (Sequencing the Neanderthal genome)
ಮೈಟೊಕಾಂಡ್ರಿಯದ ಜೀನೋಮ್‌ನ ವಿಶ್ಲೇಷಣೆಯು ಕೇವಲ ಸೀಮಿತ ಮಾಹಿತಿಯನ್ನು ಮಾತ್ರವೇ ನೀಡಿತು. ಪಾಬೊ ಅವರು ಮುಂದುವರೆದು ಈಗ ನಿಯಾಂಡರ್‌ತಲ್ ನ ನ್ಯುಕ್ಲಿಯಸ್ ಜೀನೋಮ್ ಅನ್ನು ಅನುಕ್ರಮಗೊಳಿಸುವ ಬಹು ದೊಡ್ಡ ಸವಾಲನ್ನು ತೆಗೆದುಕೊಂಡರು. ಇದೇ ಸಮಯದಲ್ಲಿ ಸರಿಯಾಗಿ ಅವರಿಗೆ ಜರ್ಮನಿಯ ಲೀಪ್‌ಜಿಗ್ ಅಲ್ಲಿ ಮ್ಯಾಕ್ಸ್ ಪ್ಲ್ಯಾಂಕ್ ಇನ್ಸ್ಟಿಟ್ಯೂಟ್ ಫಾರ್ ಎವಲ್ಯೂಶನರಿ ಆಂತ್ರಪಾಲಜಿ ಅನ್ನು ಸ್ಥಾಪಿಸುವ ಅವಕಾಶವನ್ನು ಅವರಿಗೆ ನೀಡಲಾಯಿತು. ಹೊಸ ಇನ್‌ಸ್ಟಿಟ್ಯೂಟ್‌ನಲ್ಲಿ, ಪಾಬೊ ಮತ್ತು ಅವರ ತಂಡವು ಪುರಾತನ ಮೂಳೆಯ ಅವಶೇಷಗಳಿಂದ ಡಿಎನ್‌ಎಯನ್ನು ಪ್ರತ್ಯೇಕಿಸಲು ಮತ್ತು ವಿಶ್ಲೇಷಿಸುವ ಸ್ಥಿರವಾದ ವಿಧಾನಗಳನ್ನು ಸುಧಾರಿಸಿಲು ಯಶಸ್ವಿಯಾದರು. ಸಂಶೋಧನಾ ತಂಡವು ಹೊಸ ತಾಂತ್ರಿಕ ಬೆಳವಣಿಗೆಗಳನ್ನು ಸಹಾ ಬಳಸಿಕೊಂಡಿತು, ಇದು DNA ಯ ಅನುಕ್ರಮವನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಿತು. ಪಾಬೊ ಅವರು ಜನಸಂಖ್ಯಾ ತಳಿವಿಜ್ಞಾನ ಮತ್ತು ವಿಶೇಷವಾದ ಅನುಕ್ರಮ ವಿಶ್ಲೇಷಣೆಗಳ ಮೇಲೆ ಪರಿಣತಿಹೊಂದಿರುವ ಹಲವಾರು ಸಹೋದ್ಯೋಗಿಗಳನ್ನು ಅಧ್ಯಯನಗಳಲ್ಲಿ ತೊಡಗಿಸಿಕೊಂಡರು. ಇದರಿಂದಾಗಿ ಅವರ ಪ್ರಯತ್ನಗಳು ಯಶಸ್ವಿಯಾದವು. ಸ್ವಾಂಟೆ ಪಾಬೊ ಅಸಾಧ್ಯವಾದುದನ್ನು ಸಾಧಿಸಿದರು! 2010 ರಲ್ಲಿ ಮೊದಲ ನಿಯಾಂಡರ್ತಲ್ ಜೀನೋಮ್ ಅನುಕ್ರಮವನ್ನು ಪ್ರಕಟಿಸಲು ಸಾಧ್ಯವಾಯಿತು. ನಿಯಾಂಡರ್ತಲ್ ಮತ್ತು ಹೋಮೋ ಸೇಪಿಯನ್ನರ ತೀರಾ ಇತ್ತೀಚಿನ ಸಾಮಾನ್ಯ ಪೂರ್ವಜರು ಸುಮಾರು 800,000 ವರ್ಷಗಳ ಹಿಂದೆ ವಾಸಿಸುತ್ತಿದ್ದರು ಎಂಬುದನ್ನು ತುಲನಾತ್ಮಕ ವಿಶ್ಲೇಷಣೆಗಳು ಸಾಬೀತು ಪಡಿಸಿದವು.
ಪಾಬೊ ಮತ್ತು ಅವರ ಸಹೋದ್ಯೋಗಿಗಳು ನಿಯಾಂಡರ್ತಲ್‌ಗಳು ಮತ್ತು ಪ್ರಪಂಚದ ವಿವಿಧ ಭಾಗಗಳ ಆಧುನಿಕ ಮಾನವರ ನಡುವಿನ ಸಂಬಂಧವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದರು. ತುಲನಾತ್ಮಕ ವಿಶ್ಲೇಷಣೆಗಳು ನಿಯಾಂಡರ್ತಲ್‌ಗಳ ಡಿಎನ್‌ಎ ಅನುಕ್ರಮಗಳು ಆಫ್ರಿಕಾದಿಂದ ಹುಟ್ಟಿದ ಸಮಕಾಲೀನ ಮಾನವರಿಗಿಂತ ಯುರೋಪ್ ಅಥವಾ ಏಷ್ಯಾದಿಂದ ಹುಟ್ಟಿದ ಸಮಕಾಲೀನ ಮಾನವರ ಅನುಕ್ರಮಗಳಿಗೆ ಹೆಚ್ಚು ಹೋಲುತ್ತವೆ ಎಂದು ತೋರಿಸಿದವು. ಇದರರ್ಥ ನಿಯಾಂಡರ್ತಲ್‌ಗಳು ಮತ್ತು ಹೋಮೋ ಸೇಪಿಯನ್ಸ್‌ಗಳು ಸಾವಿರಾರು ವರ್ಷಗಳ ಕಾಲದ ಸಹಬಾಳ್ವೆಯ ಸಮಯದಲ್ಲಿ ಪರಸ್ಪರ ಸಂತಾನವನ್ನು ಪಡೆದುಕೊಂಡರು, ಎಂಬುದೇ ಆಗಿದೆ. ಹಾಗಾಗಿ ಅವರುಗಳ ನಡುವೆ ಜೀನುಗಳ ವರ್ಗಾವಣೆಯು ನಡೆದಿತ್ತು! ಯುರೋಪಿಯನ್ ಅಥವಾ ಏಷ್ಯನ್ ಮೂಲದ ಆಧುನಿಕ ಮಾನವರಲ್ಲಿ, ಸರಿಸುಮಾರು 1-4% ಜಿನೋಮ್ ನಿಯಾಂಡರ್ತಲ್‌ಗಳಿಂದ ಬಂದಿರುವ ಬಗೆಗೆ ಈಗ ಅರಿಯಲಾಗಿದೆ.

ಡೆನಿಸೋವಾ ಎಂಬ ಅತ್ಯಂತ ಸಂವೇದನಾಶೀಲ ಆವಿಷ್ಕಾರ:
2008 ರಲ್ಲಿ, ಸೈಬೀರಿಯಾದ ದಕ್ಷಿಣ ಭಾಗದಲ್ಲಿರುವ ಡೆನಿಸೋವಾ ಗುಹೆಯಲ್ಲಿ ಬೆರಳಿನ ಮೂಳೆಯಿಂದ 40,000 ವರ್ಷಗಳಷ್ಟು ಹಳೆಯದಾದ ತುಣುಕು ಒಂದನ್ನು ಪತ್ತೆ ಹಚ್ಚಲಾಯಿತು. ಆ ಮೂಳೆಯು ಉತ್ತಮವಾಗಿ ಸಂರಕ್ಷಿಸಲ್ಪಟ್ಟ ಡಿಎನ್‌ಎಯನ್ನು ಹೊಂದಿತ್ತು, ಇದನ್ನು ಪಾಬೊ ತಂಡವು ಸ್ವೀಕ್ವೆನ್ಸ್ ಮಾಡಿ, ಅನುಕ್ರಮಗೊಳಿಸಿತು. ಅದರ ಫಲಿತಾಂಶಗಳು ಅಚ್ಚರಿಯ ಸುದ್ದಿಯನ್ನೇ ಉಂಟುಮಾಡಿದ್ದವು. ನಿಯಾಂಡರ್ತಲ್ಗಳು ಮತ್ತು ಇಂದಿನ ಮಾನವರಿಂದ ತಿಳಿದಿರುವ ಎಲ್ಲಾ ಅನುಕ್ರಮಗಳಿಗೆ ಹೋಲಿಸಿದರೆ ಅವುಗಳ DNAಯ ಅನುಕ್ರಮವು ವಿಶಿಷ್ಟವಾಗಿತ್ತು. ಪಾಬೊ ಅವರು ಅಪರಿಚಿತವಾದ ಹೋಮಿನಿನ್ (ಆದಿಮಾನವ ಪ್ರಭೇದ) ಅನ್ನು ಕಂಡುಹಿಡಿದಿದ್ದರು. ಅದಕ್ಕೆ ಡೆನಿಸೋವಾ ಎಂಬ ಆ ಗುಹೆಯ ಹೆಸರನ್ನೇ ನೀಡಲಾಯಿತು. ಪ್ರಪಂಚದ ವಿವಿಧ ಭಾಗಗಳ ಸಮಕಾಲೀನ ಮಾನವರ ಅನುಕ್ರಮಗಳೊಂದಿಗೆ ಹೋಲಿಕೆಗಳು ಡೆನಿಸೋವಾ ಮತ್ತು ಹೋಮೋ ಸೇಪಿಯನ್ಸ್ ನಡುವೆಯೂ ಜೀನ್ ಹರಿವು ಸಂಭವಿಸಿದೆ ಎಂದು ಮುಂದಿನ ದಿನಗಳಲ್ಲಿ ಅರ್ಥವಾಯಿತು. ಈ ಸಂಬಂಧವು ಮೊದಲು ಮಲನೇಶಿಯಾ ಮತ್ತು ಆಗ್ನೇಯ ಏಷ್ಯಾದ ಇತರ ಭಾಗಗಳಲ್ಲಿ ಜನಸಂಖ್ಯೆಯಲ್ಲಿ ಕಂಡುಬಂದಿತು, ಅಲ್ಲಿ ವ್ಯಕ್ತಿಗಳು 6% ಡೆನಿಸೋವಾ ಡಿಎನ್‌ಎಯನ್ನು ಹೊಂದಿದ್ದರು. ಪಾಬೊ ಅವರ ಆವಿಷ್ಕಾರಗಳು ನಮ್ಮ ವಿಕಾಸದ ಇತಿಹಾಸದ ಬಗ್ಗೆ ಹೊಸ ತಿಳುವಳಿಕೆಯನ್ನು ಸೃಷ್ಟಿಸಿದವು. ಹೋಮೋ ಸೇಪಿಯನ್ಸ್ ಆಫ್ರಿಕಾದಿಂದ ವಲಸೆ ಬಂದ ಸಮಯದಲ್ಲಿ, ಕನಿಷ್ಠ ಎರಡು ಈಗ ಅಳಿದು ಹೋಗಿರುವ ಹೋಮಿನಿನ್ ಗಳು ಯುರೇಷಿಯಾದಲ್ಲಿ ವಾಸಿಸುತ್ತಿದ್ದವು. ನಿಯಾಂಡರ್ತಲ್‌ಗಳು ಪಶ್ಚಿಮ ಯುರೇಷಿಯಾದಲ್ಲಿ ವಾಸಿಸುತ್ತಿದ್ದರೆ, ಡೆನಿಸೋವನ್‌ಗಳು ಖಂಡದ ಪೂರ್ವ ಭಾಗಗಳಲ್ಲಿ ವಾಸಿಸುತ್ತಿದ್ದರು. ಆಫ್ರಿಕಾದ ಹೊರಗೆ ಹೋಮೋ ಸೇಪಿಯನ್ನರ ವಿಸ್ತರಣೆ ಮತ್ತು ಪೂರ್ವಕ್ಕೆ ಅವರ ವಲಸೆಯ ಸಮಯದಲ್ಲಿ, ಅವರು ನಿಯಾಂಡರ್ತಲ್‌ಗಳೊಂದಿಗೆ ಮಾತ್ರವಲ್ಲದೆ ಡೆನಿಸೋವನ್‌ಗಳೊಂದಿಗೆ ಕೂಡ ಸಂಸಾರ ನಡೆಸಿ ಸಂತಾನೋತ್ಪತ್ತಿಯನ್ನು ನಡೆಸಿದರು. ಹಾಗಾಗಿ ಅಳಿದು ಹೋಗಿರುವ ಈ ಎರಡೂ ಪ್ರಭೇದಗಳ ಜೀನ್ ಹರಿವೂ ಕೂಡ ಸೇಪಿಯನ್ನರಲ್ಲಿ ಬಂದಿರುವ ಸಾಧ್ಯತೆ ಸ್ಪಷ್ಟತೆಯು ಹೆಚ್ಚಾಯಿತು.

ಪಳೆಯುಳಿಕೆಗಳ ಜೆನೊಮಿಕ್ಸ್ ಮತ್ತು ಅದರ ಪ್ರಸ್ತುತತೆಯ ಅದ್ಭುತ ಸಂಶೋಧನೆಯ ಮೂಲಕ, ಸ್ವಾಂಟೆ ಪಾಬೊ ಸಂಪೂರ್ಣವಾಗಿ ಹೊಸ ವೈಜ್ಞಾನಿಕ ಅಧ್ಯಯನ ಶಿಸ್ತು ಆದ ಪೇಲಿಯೊಜೆನೊಮಿಕ್ಸ್ ಅನ್ನು ಸ್ಥಾಪಿಸಿದರು. ಆರಂಭಿಕ ಸಂಶೋಧನೆಗಳ ನಂತರ, ಅವನ ಸಹಚರರ ಗುಂಪು ಅಳಿದು ಹೋಗಿರುವ ಹೋಮಿನಿನ್‌ಗಳಿಂದ ಹಲವಾರು ಹೆಚ್ಚುವರಿ ಜೀನೋಮ್ ಅನುಕ್ರಮಗಳ ವಿಶ್ಲೇಷಣೆಯನ್ನು ಪೂರ್ಣಗೊಳಿಸಿದವು. ಪಾಬೊ ಅವರ ಆವಿಷ್ಕಾರಗಳು ಒಂದು ಅನನ್ಯವಾದ ವಿಜ್ಞಾನ ಸಂಪನ್ಮೂಲವನ್ನು ಸ್ಥಾಪಿಸಿವೆ, ಇದು ಮಾನವ ವಿಕಾಸ ಮತ್ತು ವಲಸೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ವೈಜ್ಞಾನಿಕ ಸಮುದಾಯದಿಂದ ವ್ಯಾಪಕವಾಗಿ ಬಳಸಲ್ಪಡುತ್ತಿದೆ. ಅನುಕ್ರಮ ವಿಶ್ಲೇಷಣೆಗಾಗಿ ಬಳಸಿದ ಹೊಸ ಶಕ್ತಿಶಾಲಿ ವಿಧಾನಗಳು ಪುರಾತನ ಹೋಮಿನಿನ್‌ಗಳು ಆಫ್ರಿಕಾದಲ್ಲಿ ಹೋಮೋ ಸೇಪಿಯನ್ಸ್‌ನೊಂದಿಗೆ ಬೆರೆತಿರಬಹುದು ಎಂಬ ವಿಚಾರಗಳನ್ನು ಸಾಬೀತು ಪಡಿಸಿವೆ. ಎಂತಹವೇ ಅಧ್ಯಯನ ವಿಧಾನಗಳು ಅಭಿವೃದ್ಧಿಯಾದರೂ ಸಹಾ ಉಷ್ಣವಲಯದ ಹವಾಮಾನದಲ್ಲಿ ಪುರಾತನ DNA ಯ ವೇಗವಾದ ಅವನತಿಯಿಂದಾಗಿ ಆಫ್ರಿಕಾದಲ್ಲಿ ಮಾತ್ರ ಅಳಿದು ಹೋಗಿರುವ ಹೋಮಿನಿನ್‌ಗಳಿಂದ ಯಾವುದೇ ಜೀನೋಮ್‌ಗಳನ್ನು ಇನ್ನೂ ಅನುಕ್ರಮಗೊಳಿಸಲು ಸಾಧ್ಯವಾಗಿಲ್ಲ. ಆದ್ದರಿಂದ ತೀರಾ ಹಿಂದಿನ ಆಫ್ರಿಕನ್ ಮೂಲದ ಹೋಮಿನಿನ್ ಗಳ ಬಗೆಗೆ ಯಾವುದೇ ಆಧಾರ ಸಹಿತವಾದ ತಿಳಿಕೆಯನ್ನು ಅರಿಯಲು ಆಗಿಲ್ಲ.
ಸ್ವಾಂಟೆ ಪಾಬೊ ಅವರ ಸಂಶೋಧನೆಗಳಿಗೆ ಮಾನವ ಕುಲವು ಋಣಿಯಾಗಿರ ಬೇಕಿದೆ. ನಮ್ಮ ಅಳಿದು ಹೋದ ಸಂಬಂಧಿಗಳಿಂದ ಪುರಾತನ ಜೀನ್ ಅನುಕ್ರಮಣಿಕೆಗಳು ಇಂದಿನ ಮಾನವರ ಶರೀರವಿಜ್ಞಾನದ ಮೇಲೆ ಪ್ರಭಾವ ಬೀರುತ್ತವೆ ಎಂದು ನಾವು ಈಗ ಅರ್ಥಮಾಡಿಕೊಳ್ಳಲು ಸಾಧ್ಯವಾಗಿದೆ. ಅಂತಹ ಒಂದು ಉದಾಹರಣೆಯೆಂದರೆ EPAS1 ಜೀನ್ ಒಂದು ಡೆನಿಸೋವನ್ ಆವೃತ್ತಿಯಾಗಿದೆ. ಇದು ಹೆಚ್ಚಿನ ನೆಲಮಟ್ಟದ ಎತ್ತರದಲ್ಲಿ ಜೀವನವನ್ನು ನಡೆಸುವ ಅನುಕೂಲವನ್ನು ನೀಡುತ್ತದೆ. ಇದೇ ಜೀನ್ ಇಂದಿನ ಟಿಬೆಟಿಯನ್ನರಲ್ಲಿ ಸಾಮಾನ್ಯವಾಗಿದೆ. ಇತರ ಉದಾಹರಣೆಗಳೆಂದರೆ ನಿಯಾಂಡರ್ತಲ್ ಜೀನ್‌ಗಳು ವಿವಿಧ ರೀತಿಯ ಸೋಂಕುಗಳಿಗೆ ನಮ್ಮ ಪ್ರತಿರಕ್ಷಣಾ ಪ್ರತಿಕ್ರಿಯೆಯ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ ಅಂತಹಾ ಮಾನವ ಸಂಕುಲವು ಹಲವಾರು ಪ್ರತಿರೋಧಗಳನ್ನು ಎದುರಿಸಿ ವಿಕಾಸದಲ್ಲಿ ಮನ್ನಡೆಯಲು ಸಾಧ್ಯವಾಗಿದೆ (ನನ್ನ ವೈಯಕ್ತಿಕ ಊಹೆ: ಕಳೆದ ಕೊವಿಡ್ ಪ್ರತಿರೋಧವನ್ನೂ ಎದುರಿಸಲು ಇಂತಹಾ ಹೋಮಿನಿನ್ ಗಳಿಂದ ಪಡೆದ ಇಮ್ಯೂನ್ ವಿಶೇಷಣಗಳು ನಮಗೆ ಸಹಾಯ ಮಾಡಿರಬಹುದು)
ನಮ್ಮನ್ನು ಅನನ್ಯವಾದ ಮಾನವರನ್ನಾಗಿ ಮಾಡುವುದು ಯಾವುದು? ಹೋಮೋ ಸೇಪಿಯನ್ಸ್ ಸಂಕೀರ್ಣ ಸಂಸ್ಕೃತಿಗಳು, ಸುಧಾರಿತ ಆವಿಷ್ಕಾರಗಳು ಮತ್ತು ಸಾಂಕೇತಿಕ ಕಲೆಗಳನ್ನು ರಚಿಸುವ ವಿಶಿಷ್ಟ ಸಾಮರ್ಥ್ಯದಿಂದ ನಿರೂಪಿಸಲ್ಪಟ್ಟಿದ್ದಾರೆ. ಜೊತೆಗೆ ಸಾಗರಗಳ ನೀರನ್ನು ದಾಟಲು ಮತ್ತು ನಮ್ಮದೇ ನೆಲದ ಎಲ್ಲಾ ಭಾಗಗಳಿಗೂ ಹರಡುವ ಸಾಮರ್ಥ್ಯದಿಂದ ವಿಶೇಷತೆಯನ್ನು ಕೂಡ ಗಳಿಸಿಕೊಂಡಿದ್ದಾರೆ. ನಿಯಾಂಡರ್ತಲ್ಗಳು ಸಹಾ ಗುಂಪುಗಳಲ್ಲಿ ವಾಸಿಸುತ್ತಿದ್ದರು ಮತ್ತು ನಮ್ಮಂತೆಯೇ ದೊಡ್ಡ ಮಿದುಳುಗಳನ್ನು ಹೊಂದಿದ್ದರು. ಅವರು ಕೂಡ ನಮ್ಮ ಹಾಗೆ ಉಪಕರಣಗಳನ್ನು ಸಹ ಬಳಸಿಕೊಂಡರು, ಆದರೆ ನೂರಾರು ಸಾವಿರ ವರ್ಷಗಳಲ್ಲಿ ಇವುಗಳು ಬಹಳ ಕಡಿಮೆ ಅಭಿವೃದ್ಧಿ ಹೊಂದಿದ್ದವು. ನಾವುಗಳು ಅಂದರೆ ಸೇಪಿಯನ್ನರು ಅವುಗಳನ್ನು ಸುಧಾರಿಸುವಲ್ಲಿ ಯಶಸ್ವಿಯಾದರು. ಕಾಲವು ವಿಕಾಸ (Time Evolves)ವನ್ನು ಕೊಡುತ್ತದೆ ಎಂಬ ಮಾತಿದೆ. ದಿನಗಳು ಕಳೆದಂತೆ ಚುರುಕುಮತಿಯೂ, ಸುಧಾರಣೆಯೂ ಬೆಳೆಯುತ್ತಾ ಇರುವುದನ್ನು ಗಮನಿಸುತ್ತಲೇ ಇದ್ದೇವಲ್ಲವೇ?

ಹೋಮೋ ಸೇಪಿಯನ್ಸ್ ಮತ್ತು ನಮ್ಮ ಹತ್ತಿರದ ಅಳಿದು ಹೋದ ಸಂಬಂಧಿಗಳ ನಡುವಿನ ಆನುವಂಶಿಕ ವ್ಯತ್ಯಾಸಗಳು ಪಾಬೊ ಅವರ ಮೂಲ ಕೆಲಸದ ಮೂಲಕ ಗುರುತಿಸಲ್ಪಡುವವರೆಗೂ ತಿಳಿದಿರಲಿಲ್ಲ. ಅವರ ಸಂಶೋಧನೆಯು ಈ ವ್ಯತ್ಯಾಸಗಳ ಕ್ರಿಯಾತ್ಮಕ ಪರಿಣಾಮಗಳನ್ನು ವಿಶ್ಲೇಷಿಸುವುದರ ಮೇಲೆ ನಮ್ಮನ್ನು ಅನನ್ಯವಾಗಿ ಮಾನವನನ್ನಾಗಿ ಮಾಡುವ ಅಂತಿಮ ಗುರಿಯೊಂದಿಗೆ ಮತ್ತೆ ಗಮನಹರಿಸಲು ಸಹಾಯ ಮಾಡಿದೆ. ಇಂತಹದೊಂದು ವಿಶೇಷ ಅಧ್ಯಯನವನ್ನು ಕಟ್ಟಿ ಕೊಟ್ಟ ಸಾರ್ಥಕತೆಯ ಹಿನ್ನೆಲೆಯಲ್ಲಿ ಪಾಬೊ ಅವರನ್ನು ನೊಬೆಲ್ ಸಮಿತಿಯು ವೈದ್ಯಕೀಯ ವಿಜ್ಞಾನದ ಪುರಸ್ಕಾರಕ್ಕೆ ಆಯ್ಕೆ ಮಾಡಿದೆ. ಅಂದರೆ ಒಂದು ಬಗೆಯಲ್ಲಿ ಇಡೀ ಮಾನವ ಜನಾಂಗಕ್ಕೇನೇ ಅನನ್ಯತೆಯನ್ನು -ನೊಬೆಲನ್ನು- ಕೊಟ್ಟ ಕಾರಣ ಪುರಷರಾಗಿ ಪಾಬೊ ಹೊರಹೊಮ್ಮಿದ್ದಾರೆ.

ಸ್ವಾಂಟೆ ಪಾಬೊ ಅವರು 1955ರ ಏಪ್ರಿಲ್ 20ರಂದು ಸ್ವೀಡನ್ ಅಲ್ಲಿ ಜನಿಸಿದರು. ಜೀವಿ ವಿಕಾಸ ಜೆನೆಟಿಸ್ಟ್ ಆಗಿ ಪರಿಣಿತಿಯನ್ನು ಸಾಧಿಸಿ ಪ್ಯಾಲಿಯೊ ಜೆನೆಟಿಕ್ಸ್ ಎಂಬ ವಿಶಿಷ್ಟ ಅಧ್ಯಯನ ಶಿಸ್ತಿಗೂ ಕಾರಣರಾದರು. ಮಾಕ್ಸ್ ಪ್ಲಾಂಕ್ ಮಾನವಿಕ ವಿಕಾಸ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಪಾಬೊ ಅವರ ತಂದೆಯೂ ಕೂಡ ನೊಬೆಲ್ ಪುರಸ್ಕಾರಕ್ಕೆ ಪಾತ್ರರಾಗಿದ್ದರು. ಅವರ ತಂದೆ ಸುನ್ ಬೆರ್ಗೆಸ್ಟಾಮ್ ಓರ್ವ ಜೀವಿ ರಸಾಯನ ವಿಜ್ಞಾನಿ. 1982ರಲ್ಲಿ ನೊಬೆಲ್ ಇದೇ ವಿಭಾಗದಲ್ಲಿ ನೊಬೆಲ್ ಬಹುಮಾನ ಗಳಿಸಿದ್ದರು. ಪಾಬೊ ಅವರು ತಮ್ಮ ತಾಯಿ ರಸಯಾನ ತಜ್ಞೆಯಾದ ಕರಿನ್ ಪಾಬೊ ಅವರ ಆಶ್ರಯದಲ್ಲಿ ಬೆಳೆದರು. ಉಪ್ಸಲಾ ವಿಶ್ವವಿದ್ಯಾಲಯದಲ್ಲಿ ಪಿ.ಎಚ್‌ಡಿ ಪಡೆದು ಮ್ಯೂನಿಚ್ ವಿಶ್ವ ವಿದ್ಯಾಲಯದಿಂದ ವೃತ್ತಿ ಜೀವನವನ್ನು ಆರಂಭಿಸಿದ್ದರು. ಮುಂದೆ ವಿಜ್ಞಾನದಲ್ಲಿ ಬೆಳೆಯುತ್ತಲೇ ಅಂತರ ರಾಷ್ಟ್ರೀಯ ಮಾನ್ಯತೆ ಸಂಸ್ಥೆಯನ್ನು ಸ್ಫಾಪಿಸುತ್ತಾ ಅದರ ನಿರ್ದೇಶಕರಾಗಿ ಪೇಲಿಯೊಜೆನೆಟಿಕ್ಸ್ ಎಂಬ ಹೊಸತೊಂದು ವಿಜ್ಞಾನದ ಅಧ್ಯಯನ ವಿಭಾಗಕ್ಕೂ ಕಾರಣರಾದರು. ನೊಬೆಲ್ ಸಮಿತಿಗೆ ಕೊಟ್ಟ ತಮ್ಮ ಟೆಲಿಪೋನ್ ಸಂದರ್ಶನದಲ್ಲಿ ನೊಬೆಲ್ ಪಡೆದ ಅಪ್ಪನಿಗಿಂತಲೂ, ಅವರ ಚತುರತೆ ಸೂಕ್ಷ್ಮ ಮತಿಗೆ ಅಮ್ಮನೇ ಕಾರಣ ಎಂದೂ ಸೂಕ್ಷ್ಮವಾಗಿ ಹೇಳಿದ್ದಾರೆ. ಅವರ ಮಾತುಗಳಲ್ಲೇ ತಮ್ಮ ವಿಶಿಷ್ಟ ಸಂಶೋಧನೆಯ ವಿವರಗಳನ್ನು ಕೇಳಲು ಅವರು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ನೀಡಿದ ಭಾಷಣವೊಂದನ್ನು ಕೇಳಬಹುದು.
ಮಾನವ ವಿಕಾಸ ಹಿನ್ನೆಲೆಯಿಂದ ಪ್ರಸ್ತುತ ಮಾನವ ಜೀವನ ಆರೋಗ್ಯದ ಹಿತವನ್ನು ಆನುವಂಶಿಕ ಹಿನ್ನೆಲೆಯಿಂದ ಅರಿಯುವ ಸಾಧ್ಯತೆಗಳನ್ನು ಹುಟ್ಟು ಹಾಕಿದ ಕೀರ್ತಿ ಸ್ವಾಂಟೆ ಪಾಬೊ ಅವರದ್ದು. ಅವರನ್ನು CPUS ಮತ್ತು ಅದರ ಬೆಂಬಲಿಗ ಬಳಗವು ಅಭಿನಂದಿಸುತ್ತದೆ.
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್
Very interesting and challenging discoveries…’Paleogenomics’ … Thank you for an exciting and timely write up….
ಲೇಖನ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಧನ್ಯವಾದಗಳು
Wonderful article. De channesh. Keep writing. Very interesting and useful. Thanks.
ಸಮಯೋಚಿತ ಮತ್ತು ಅವರ ಕೊಡುಗೆಯನ್ನು ಅರಿಯುವ ಮಹತ್ವದ ಮಾಹಿತಿಯನ್ನು ಒಳಗೊಂಡ ಉತ್ತಮ ಲೇಖನ
ಆತ್ಮೀಯರೆ ನಾನು ಬಹಳಷ್ಟು ಪ್ರಾಚೀನ ಮಾನವನೆಲೆಗಳನ್ನು ಗುರುತಿಸಿದ್ದೇನೆ.ಗುಹೆಗಳ ಒಳಭಾಗಗಳಲ್ಲಿ ವರ್ಣಚಿತ್ರಗಳನ್ನೂ ಧಾಖಲಿಸಿದ್ದೇನೆ.ಇದರ ಬಗ್ಗೆ ಪಿ ಹೆಚ್ ಡಿ ಮಾಡಲು ನೋಡುತ್ತಿದ್ದೇನೆ.ಹದಿನಾಲ್ಕು ಅಡಿ ಉದ್ದದ ಪಳೆಯುಳಿಕೆಗಳಿವೆ.ದೊಡ್ಡ ದೊಡ್ಡ ತಲೆಬುರುಡೆಗಳಿವೆ.ನನ್ನ ಸಂಶೋಧನೆ ಹೊಸತೊಂದು ಕಥೆಯಾಗಬಹುದು.ಆದರೆ ನಾನು ಯಾರನ್ನು ಕಾಣುವುದೋ ಏನು ಮಾಡುವುದೋ ತಿಳೀತಿಲ್ಲ.ಈ ಲೇಖನ ನನಗೆ ಬಹಳ ಉಪಯುಕ್ತವಾಗಿದೆ ಎಂದು ತಿಳಿಸಲು ಹರ್ಷಿಸುತ್ತೇನೆ.ಧನ್ಯವಾದಗಳು.
ಗುಡಿಬಂಡೆ ಫಯಾಜ್ ಅಹಮದ್ ಖಾನ್.