ಅಮೆರಿಕಾದ ನೆಲದಲ್ಲಿ ಕಾಲಿಟ್ಟದ್ದೇ ಅಲಬಾಮಾ ರಾಜ್ಯದ ನೆಲದಲ್ಲಿ! ಜಾರ್ಜಿಯಾದ ಅಟ್ಲಾಂಟಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದು ಇಳಿದರೂ, ಹೆಚ್ಚೂ -ಕಡಿಮೆ ಅರ್ಧ ಗಂಟೆಯಲ್ಲಿ ಅಲ್ಲಿಂದ ಹೊರಟು ಅಲಬಾಮಾ ರಾಜ್ಯದ ರಾಜಧಾನಿ ಮಾಂಟ್ಗೊಮರಿ (Montgomery)ಗೆ ಸುಮಾರು ಎರಡೂವರೆ ಗಂಟೆಯಲ್ಲಿ ಮಗ(ಚಿಕಾಗೊನ ಇಲಿನಾಯ್ ವಿಶ್ವವಿದ್ಯಾಲಯದಲ್ಲಿ MS ಮಾಡಿ, ಈಗ ಮಾಂಟ್ಗೊಮರಿಯಲ್ಲಿ ಕೆಲಸಮಾಡುತ್ತಿದ್ದಾನೆ)ನ ಜೊತೆ ತಲುಪಿದ್ದಾಯ್ತು. ಮಾಂಟ್ಗೊಮರಿಯು, ಮಾನವ ಹಕ್ಕುಗಳ ಹೋರಾಟದಿಂದ ಮೊದಲ್ಗೊಂಡು ಹಲವಾರು ಪ್ರಮುಖ ಘಟನೆಗಳಿಂದ ವಿಶೇಷವಾದ ಸ್ಥಾನವನ್ನು ಪಡೆದಿದ್ದು ಮುಂದಿನ ಟಿಪ್ಪಣಿಗಳಲ್ಲಿ ನೋಡಬಹುದು.
ಅಲಬಾಮಾ ಅಮೆರಿಕಾದ ರಾಜ್ಯಗಳಲ್ಲೇ ವಿಶಿಷ್ಠವಾದ ರಾಜ್ಯ. ಕೃಷಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿದ್ದಾಗ ಪರಿಚಯಗೊಂಡ ಮಹಾನ್ ಮಾನವತಾವಾದಿ ವಿಜ್ಞಾನಿ ಜಾರ್ಜ್ ವಾಷಿಂಗ್ಟನ್ ಕಾರ್ವಾರ್ ಅವರ ಕರ್ಮಭೂಮಿ ಟಸ್ಕಗೀ ಕೃಷಿ ವಿದ್ಯಾಲಯ ಇರುವುದೇ ಅಲಬಾಮಾದಲ್ಲಿ. (ಮುಂದೊಮ್ಮೆ ಅವರ ಬಗ್ಗೆ ವಿವರವಾಗಿ ಬರೆಯುತ್ತೇನೆ). ಜೊತೆಗೆ ಟಸ್ಕಗೀ ವಿಶ್ವವಿದ್ಯಾಲಯದ ಆರಂಭಕ್ಕೆ ಕಾರಣರಾದ ಶಿಕ್ಷಣ ತಜ್ಞ ಬೂಕರ್ ವಾಷಿಂಗ್ಟನ್ ಅವರ ಜೀವನವೂ ತಿಳಿಯಬೇಕಾದ್ದೇ! ಅದೂ ಅಲ್ಲದೇ ಅಲಬಾಮಾ ಹೆಸರಿನ ಅರ್ಥದಲ್ಲಿಯೇ ಕೃಷಿಯ ಉಗಮದ ಹಿನ್ನಲೆಯೂ ಇದೆ. ಅಲಬಾಮಾ -ಪದವು ಸಸ್ಯಗಳು/ಗಿಡ-ಮರಗಳು ಎಂಬ ಅರ್ಥದ ಅಲ್ಬಾ (Albah) ಮತ್ತು ತೆರೆವುಗೊಳಿಸುವ ಎಂಬ ಅರ್ಥದ ಅಮಾ (Amo) ಎಂಬೆರಡು ಅಲ್ಲಿನ ಸ್ಥಳಿಯ ಬುಡಕಟ್ಟು Alibamu ದ ಭಾಷೆಯ ಪದಗಳಿಂದ ವಿಕಾಸಗೊಂಡಿದೆ. ಅಲ್ಲಿನ ಪ್ರಮುಖ ನದಿಯ ಹೆಸರೂ ಅಲಬಾಮಾ ಎಂದೂ ಜೊತೆಗೆ ಸ್ಥಳಿಯರನ್ನೂ ಕೂಡ ಅಲಬಾಮಾ ಜನರೆಂದೇ ಕರೆಯಲಾಗುತ್ತದೆ. ಅಲಬಾಮಾ ಪದದ ವಿಕಾಸವು “ಗಿಡ–ಮರಗಳನ್ನು ತೆರೆವುಗೊಳಿಸುವ” (Vegetation Clearers or Thicket Clearers) ಎಂಬ ಅರ್ಥದಿಂದಾಗಿದೆ. ಮೂಲ ಅಲಬಾಮೀಯರು ಕೃಷಿಯ ಬಳಕೆಗಾಗಿ/ಸಾಗುವಳಿಗಾಗಿ ದಟ್ಟ ಕಾಡಿನ ಗಿಡ-ಮರಗಳನ್ನು ತೆರೆವು ಗೊಳಿಸುವಲ್ಲಿ ನಿಷ್ಣಾತರಾಗಿದ್ದರಿಂದ ಅವರನ್ನು ಹಾಗೆ ಕರೆಯಲಾಗಿತ್ತು.

ಹದಿನಾರನೆಯ ಶತಮಾನದ ಸ್ಪಾನಿಷ್ ಅನ್ವೇಷಕ/ಶೋಧಕ ಎರ್ನಾಂಡೊ ಡಿ ಸೌಟೌ (Hernando de Soto) ಅವರ ದಾಖಲೆಗಳಲ್ಲಿ “ಅಲಬಾಮಾ” ಪದದ ಮೊದಲ ದಾಖಲೆಯು ಕಾಣಬರುತ್ತದೆ. ಆತ ಅಮೆರಿಕಾದಲ್ಲಿ ಮಿಸಿಸಿಪ್ಪಿ ನದಿಯನ್ನೂ ದಾಟಿ ಅನ್ವೇಷಣೆಗಳನ್ನುಮಾಡಿದ ಮೊಟ್ಟ ಮೊದಲ ಐರೋಪ್ಯ ಶೋಧಕ. ಆತ ಫ್ಲಾರಿಡಾ, ಅಲಬಾಮಾ, ಜಾರ್ಜಿಯಾ ಉತ್ತರ ಮತ್ತು ದಕ್ಷಿಣ ಕರೊಲಿನಾ ದಾಟಿ ಮುಂದೆ ಮಿಸಿಸಿಪ್ಪಿಯ ವರೆಗೂ ಹಾದುಹೋದ ಮೊದಲಿಗ. ಆತ ಬಹುಶಃ ಅಲಬಾಮಾ ನೆಲದ ಸ್ಥಳಿಯ ಜನರ “ಗಿಡ-ಮರಗಳ ತೆರೆವುಗೊಳಿಸು”ವ ಜನರಾದ “ಅಲಬಾಮಿ”ಯರನ್ನು ಎಂದು ತಿಳಿದು ದಾಖಲೆ ಮಾಡಿರಬಹುದು. ಆತ ಅಮೆರಿಕೆಯ ನೆಲವನ್ನು ತಲಿಪಿದ್ದು 16ನೆಯ ಶತಮಾನದ ಉತ್ತರಾರ್ಧದಲ್ಲಿ! ಅಲಬಾಮಾ ನದಿಯ ಉಪನದಿಗಳಾದ ಕೋಸಾ ಮತ್ತು ತಲಪೂಸಾನದಿಗಳು (Coosa and Tallapoosa Rivers) ಹಾಗೂ ಇತರೇ ಕೆಲವು ಚಿಕ್ಕ-ಪುಟ್ಟ ತೊರೆಗಳು ಅಲಬಾಮಾ ನದಿಯನ್ನು ಸಂಗಮವಾಗುವ ಆಸುಪಾಸಿನಲ್ಲಿದ್ದ ಜನರನ್ನು ಗಮನಿಸಿದ್ದ ಎರ್ನಾಂಡೊ 1540ರ ತಮ್ಮ ಟಿಪ್ಪಣಿಗಳಲ್ಲಿ ಮೂರು ಕಡೆಗಳಲ್ಲಿ ಅಲಬಾಮ ಪದವನ್ನು ಪ್ರಸ್ತಾಪಿಸಿದ ಎಂಬುದನ್ನು ದಾಖಲೆಗಳಲ್ಲಿ ಕಾಣಬಹುದಾಗಿದೆ. ಮುಂದೆ ಫ್ರೆಂಚರು 1702ರ ಅಲ್ಲಿನ ಜನರನ್ನು ಅಲಬಾಮ ಬುಡಕಟ್ಟು ಎಂದೂ, ಜೊತೆಗೆ ನದಿಯನ್ನೂ ಅಲಬಾಮಾ ಹೆಸರಿಂದಲೇ ತಮ್ಮ ಫ್ರೆಂಚ್ ನಕ್ಷೆಗಳಲ್ಲಿ ದಾಖಲಿಸಿದ್ದಾರೆ.

ಅಂದು ದಾಖಲಿಸಿದ್ದ ಅಲಬಾಮಾ ಮುಂದೆ ಸುಮಾರು 300 ವರ್ಷಗಳ ತರುವಾಯು ಒಂದು ರಾಜ್ಯವೆಂದೂ ಹೆಸರಾಯಿತು. ಅಮೆರಿಕಾ ಸಂಯುಕ್ತ ಸಂಸ್ಥಾನಗಳನ್ನು ಅಲಬಾಮಾ 22ನೆಯ ರಾಜ್ಯವಾಗಿ ಸೇರಿತು. ಅಧಿಕೃತವಾಗಿ 1819ರ ಡಿಸೆಂಬರ್ 14ರಂದು ಅಲಬಾಮಾ ಹೆಸರಿನ ರಾಜ್ಯದ ಉದಯವಾಯಿತು. ಆ ದಿನವನ್ನೇ ರಾಜ್ಯವು ಉದಯಿಸಿದ ದಿನವೆಂದು ಆಚರಿಸಲಾಗುತ್ತಿದೆ. ಯಾವುದೇ ಪ್ರದೇಶದ ಇತಿಹಾಸವನ್ನು ಅರಿಯಲು ಅಲ್ಲಿನ ನೆಲದಿಂದ ಆರಂಭಿಸಬೇಕು. ಮಾಂಟ್ಗೊಮರಿಯಲ್ಲಿರುವ ಅಲಬಾಮಾದ ಇತಿಹಾಸ ಮತ್ತು ಪ್ರಾಚ್ಯ ವಸ್ತುಸಂಗ್ರಹಾಲಯ (Montgomery Museum of Alabama)ವು ಅಕ್ಷರಶಃ ಅಲ್ಲಿನ ನೆಲದಿಂದಲೇ ಇತಿಹಾಸದ ದಾಖಲೆಗಳ ಕಥನವನ್ನು ದೃಶ್ಯವಾಗಿಸಿ ತೆರೆದಿಟ್ಟಿದೆ.

ಅಲಬಾಮಾ ಕೃಷಿಯ ಹಿನ್ನೆಲೆಯ ಕಾರಣಕ್ಕೆ ಪ್ರಮುಖವಾಗಿ ಜಾರ್ಜ್ ಕಾರ್ವಾರ್ ಅವರ ಕುರಿತ ಸಂಗತಿಗಳಿಂದ, ೮೦ರ ದಶಕದಿಂದಲೂ ವೈಯಕ್ತಿಕವಾಗಿ ನನ್ನ ಕುತೂಹಲದ ರಾಜ್ಯವಾಗಿತ್ತು. ಕೃಷಿಯಲ್ಲಿ ಇಕಾಲಜಿಯ ಪಾಠ ಕಲಿಸಿದ ಉಪಟಳ ಕೊಡುವ ಕೀಟವೊಂದಕ್ಕೆ ಅಲಬಾಮಾ ರಾಜ್ಯದ ಎಂಟರ್ಪ್ರೈಸ್ ನಗರದಲ್ಲಿ ಸ್ಮಾರಕವೊಂದನ್ನು ಕಟ್ಟಿರುವ ವಿಷಯವೂ ಕುತೂಹಲದ ಪ್ರಮುಖ ಹೀರೋ! ಹಾಗಾಗಿ ಅಲಬಾಮಾ ಅಷ್ಟೇಕೆ ಯಾವುದೇ ದೇಶ-ರಾಜ್ಯದ ಕಥನವನ್ನು ಅಲ್ಲಿನ ನೆಲ, ಜಲ, ಜನ, ಜಾನುವಾರುಗಳ ವೈಜ್ಞಾನಿಕ, ಸಾಂಸ್ಕೃತಿಕ ವಿವರಗಳ ಗ್ರಹಿಕೆಯಿಂದ ಅರಿಯುವುದು ಮಹತ್ವವಾದುದು ಎಂಬ ನಂಬಿಕೆ ನನ್ನದು. ಅಮೆರಿಕೆಯ ಅಲಬಾಮಾದ ಅನುಭವಗಳನ್ನು ಸಾದ್ಯವಾದಷ್ಟೂ ನೆಲ-ಜಲ, ಜನ-ಜಾನುವಾರುಗಳ ಸಂಗತಿಗಳನ್ನು ಬಿಡಿ-ಬಿಡಿಯಾಗಿಯೇನಲ್ಲ! ಅವುಗಳ ಸಂಕರದಿಂದಲೇ ಹೇಳುವ ಪ್ರಯತ್ನ ಇದು.

ಅಲಬಾಮಾದಲ್ಲಿ ಕಾಲಿಟ್ಟ ಕ್ಷಣವೇ ನನ್ನ ಪಾಲಿಗೆ ಅಮೆರಿಕಾ ತಲುಪಿದ ಸಮಯ! ಮಣ್ಣು ವಿಜ್ಞಾನದ ವಿದ್ಯಾರ್ಥಿಯಾದ ನನಗೆ ಅಲ್ಲಿನ ನೆಲದ ಕುರಿತು ಸಹಜವಾದ ಕುತೂಹಲ. ನನ್ನ ಕೃಷಿ ವಿಜ್ಞಾನದ ಕಲಿಕೆಯ ಸಮಯದಿಂದಲೂ ಅಲಬಾಮಾದ ಹತ್ತಿ ಬೆಳೆಯುವ ನೆಲದ ಪರಿಚಯ ಅಷ್ಟಿಟ್ಟು ಇತ್ತು. ಅಮೆರಿಕೆಯಲ್ಲಿ ಅಲಬಾಮಾವು ಹತ್ತಿಯ ರಾಜ್ಯ ಎಂದೇ ಜನಪ್ರಿಯವಾಗಿತ್ತು. ಹತ್ತಿಯ ಬೆಳೆಯ ಇಕಾಲಜಿಯು ಬಹು ದೊಡ್ಡ ಪಾಠವನ್ನೇ ಅಲ್ಲಿನ ಕೃಷಿಕರಿಗೆ ಕಲಿಸಿತು. ಇದರ ಫಲವಾಗಿ ಹತ್ತಿಯ ಪೀಡೆಯೊಂದರ ಸ್ಮಾರಕವನ್ನು ರೂಪಿಸಿದ ಮೊಟ್ಟ ಮೊದಲ ಕೀರ್ತಿಯು ಇದರ ಭಾಗವಾಗಿದೆ. ಹತ್ತಿಯ ಕೃಷಿಯು 19ನೆಯ ಶತಮಾನದಲ್ಲಿ ತುಂಬಾ ಪ್ರಭಾವಿಸಿ ಹೆಚ್ಚು ಕೃಷಿಗೆ ಒಳಗಾಗಿತ್ತು. ಹಾಗಾಗಿ ಕೀಟಗಳೂ ಪ್ರಮುಖವಾಗಿ, ಕಾಯಿ ಕೊರೆಯುವ ಜೀರುಂಡೆಯೊಂದು ಬಹು ದೊಡ್ಡ ಸಮಸ್ಯೆಯಾಗಿ, ಕೃಷಿಕರು ಹತ್ತಿಗೆ ಬದಲಾಗಿ, ನೆಲಗಡಲೆ(ಶೇಂಗಾ)ವನ್ನು ಪ್ರಮುಖ ಆರ್ಥಿಕ ಬೆಳೆಯಾಗಿಸಿ ಲಾಭವನ್ನು ಹೆಚ್ಚಿಸಿಕೊಂಡರು. ನೆಲಗಡಲೆ ಇದೀಗ ಪ್ರಮುಖ ಬೆಳೆಗಲ್ಲಿ ಒಂದಾಗಿದೆ. ನೆಲಗಡಲೆಯ ಜೊತೆಗೆ ವಿವಿಧತೆಯ ಬೆಳೆಗಳು ಹಣ್ಣು-ಹಂಪಲುಗಳ ತೋಟಗಳೂ ನಿರ್ಮಾಣಗೊಂಡವು. ಹೀಗೆ ಪಾಠ ಕಲಿಸಿದ ಹತ್ತಿಯ ಕಾಯಿ ಕೊರೆಯವ ಜೀರುಂಡೆಗೆ (Cotton Boll Weevil) ಅಲಬಾಮಾ ರಾಜ್ಯದ, ಎಂಟರ್ಪ್ರೈಜ್ ನಗರದಲ್ಲಿ ಒಂದು ಸ್ಮಾರಕವನ್ನು 1919ರಲ್ಲೇ ನಿರ್ಮಿಸಲಾಗಿದೆ. ಇಟಲಿಯ ಕಲಾವಿದರಿಂದ ತಯಾರಿಸಿ ತಂದ ಹೆಣ್ಣುಮಗಳ ಕೈಯಲ್ಲಿ ಜೀರುಂಡೆಯ ಪ್ರತಿಕೃತಿಯೂ ಅಲ್ಲಿನ ಕಾಲೇಜು ರಸ್ತೆಯು ಮುಖ್ಯ ರಸ್ತೆಯೊಂದಕ್ಕೆ ಸಂಪರ್ಕಿಸುವಲ್ಲಿ ಸ್ಥಾಪನೆಯಾಗಿತ್ತು. ಹೀಗೆ ಉಪದ್ರವ ಕೊಡುವ ಕೀಟವೂ ಸ್ಮಾರಕವಾಗಿಸಲು ಸಾಧ್ಯವಾದ ನೆಲ ಅಲಬಾಮಾದ್ದು.
ಹತ್ತಿ ಬೆಳೆಗೆ ಯೋಗ್ಯವಾದ ನೆಲದ ಮಣ್ಣು ಅಂದರೆ ಕರ್ನಾಟಕದ ಹತ್ತಿ ಬೆಳೆಯುವ ಬ್ಲಾಕ್ ಕಾಟನ್ ಸಾಯಿಲ್ ನಂತೆಯೇ ಇದ್ದೀತಾ, ಎನ್ನುವ ಕುತೂಹಲದ ಗ್ರಹಿಕೆಗೆ ಇಲ್ಲಿನ ಮಣ್ಣಿನ ಸಂಗತಿಗಳು ಹೊಸತೊಂದು ವಿಚಾರದಿಂದ ಕುತೂಹಲವನ್ನು ಹೆಚ್ಚಿಸಿದವು. ಮ್ಯೂಸಿಯಂನ ಕಟ್ಟಡದಲ್ಲಿ ಬಳಸಿರುವ ಅಮೃತಶಿಲೆಯು ಅಲಬಾಮಾ ರಾಜ್ಯದ್ದೇ ಎಂದು ತಿಳಿದ ಮೇಲಂತೂ ಕುತೂಹಲವು ಇಮ್ಮಡಿಯಾಯಿಯಿತು. ದಕ್ಷಿಣ ಭಾರತದ ಹತ್ತಿ ಬೆಳೆಯುವ ನೆಲವು ಅಗ್ನಿಶಿಲೆ (Igneous Rock) ಪ್ರಮುಖ ಪ್ರಾಕರವಾದರೆ, ಅಲಬಾಮಾದ್ದು ಅಗ್ನಿಶಿಲೆಯ ಜೊತೆಗೆ ರೂಪಾಂತರಿತ ಶಿಲೆಯನ್ನೂ (Metamorphic Rock) ಒಳಗೊಂಡಿದ್ದು ವಿಶೇಷ!
ಅಲಬಾಮಾ ರಾಜ್ಯದ ಅಧಿಕೃತ ಮಣ್ಣಿನ ಶ್ರೇಣಿ –ಬಾಮಾ ಮಣ್ಣು!
ನೆಲದ ಆಳದ ಶಿಲಾಲೋಕಕ್ಕಿಂತಾ ಮೇಲ್ಮೈಯ ಮಣ್ಣಿನ ಜಗತ್ತು ಹೆಚ್ಚು ಕ್ರಿಯಾಶೀಲವಾದುದು, ಜೊತೆಗೆ ಜೀವ ಪರವಾದುದು. ಅಲಬಾಮಾದ್ದೇ ಒಂದು ಗುರುತು ಪಡಿಸಿದ ಮಣ್ಣಿನ ಪ್ರಕಾರದ ಬಗ್ಗೆ ಮೊಟ್ಟ ಮೊದಲ ಬಾರಿಗೆ ತಿಳಿದದ್ದು ಇದೇ ನೆಲದಲ್ಲಿ ಒಂದಷ್ಟು ಅಡ್ಡಾಡಿದ ಮೇಲೆ! ಅಲಬಾಮಾದ ಬಹುಪಾಲು ನದಿಗಳ ಮುಖಜಭೂಮಿಯ ಮಣ್ಣುಗಳು, ಮುಖ್ಯ ಕೃಷಿ ನೆಲದ ಮಣ್ಣುಗಳು ಹಾಗೂ ಪ್ರಮುಖ ವಸತಿ ನೆಲೆಗಳ ಮಣ್ಣುಗಳ ಪ್ರಾಕಾರದ ಶ್ರೇಣಿಯನ್ನು ರಾಜ್ಯದ ಅಧಿಕೃತವಾದ ಮಣ್ಣಿನ ಶ್ರೇಣಿಯೆಂದು ಗುರುತಿಸಿ ಬಾಮಾ-ಮಣ್ಣು ಎಂದು ಕರೆಯಲಾಗಿದೆ. ಶ್ರೇಣಿ – Series – ಅನ್ನುವುದು ಮಣ್ಣಿನ ವರ್ಗೀಕರಣದ ಮೂಲ! ಜೀವಿಗಳಲ್ಲಿ ಪ್ರಭೇದ (Species)ಇದ್ದ ಹಾಗೆ! ಅಮೆರಿಕವು ಪ್ರತೀ ರಾಜ್ಯಕ್ಕೂ ಒಂದು ಬಗೆಯ ಮಣ್ಣನ್ನು ಆಯಾ ರಾಜ್ಯದ ಅಧಿಕೃತ ಮಣ್ಣು ಎಂದು ಹೆಸರಿಸಿ ಗೌರವಿಸಿದೆ. ಭಾರತದಲ್ಲಿ ಈ ಬಗೆಯಲ್ಲಿ ಯಾವದೇ ಮಣ್ಣಿಗೂ ಸ್ಥಳೀಯ ಗೌರವನ್ನು ಕೊಟ್ಟಿಲ್ಲ.

ಈ ಬಾಮಾ ಮಣ್ಣು ತುಸು ಹೆಚ್ಚು ಆಳದ ಮಣ್ಣುಗಳು. ನೀರು ಸಾಧಾರಣವಾಗಿ ಬಸಿದು ಹೋಗುವಂತಿದ್ದು, ನೀರಿಳಿಯುವಿಕೆಯಲ್ಲಿಯೂ ಹೆಚ್ಚು ಆತುರದ ಬಗೆಯವಲ್ಲ. ಹಾಗಾಗಿ ಕೃಷಿಗೆ ಯೋಗ್ಯವಾಗಿದ್ದು ಹತ್ತಿ, ಮೆಕ್ಕೆ ಜೋಳ, ನೆಲಗಡಲೆ ಒಂದಷ್ಟು ಹಣ್ಣು-ತರಕಾರಿಗಳ ಬೆಳೆಗಳಿಗೆ ನೆಲೆಯಾಗಿವೆ. ಇಡೀ ರಾಜ್ಯದ 26 ಕೌಂಟಿಗಳನ್ನು ಈ ಬಗೆಯ ಮಣ್ಣು ಆವರಿಸಿದ್ದು ಸುಮಾರು 1500 ಚದರ ಕಿಮೀನಷ್ಟು ಹರಹನ್ನು ಹೊಂದಿದೆ. ಈ ಮಣ್ಣುಗಳು ಮೇಲ್ಮೈಯಲ್ಲಿ ಕಪ್ಪು, ಇಲ್ಲವೇ ಕಪ್ಪು ಮಿಶ್ರಿತ ಕಂದು ಬಣ್ಣದವಾಗಿದ್ದು ಆಳದಲ್ಲಿ ಕೆಂಪು ಮಿಶ್ರಿತವಾದ ತಾಯಿ ಮಣ್ಣನ್ನು ಹೊಂದಿರುತ್ತವೆ. ಈ ಪ್ರಕಾರದ ಮಣ್ಣಗಳ ಅಡ್ಡ ಸೀಳು ನೋಟ (ಪ್ರೊಫೈಲ್) ವು ತುಸು ಭಿನ್ನವಾಗಿರುವಂತೆಯೇ ಇದೆ. (ಮೇಲಿನ ಚಿತ್ರ ನೋಡಿ). 1996ರಲ್ಲಿ ಅಲಬಾಮಾದ ಮಣ್ಣಿನ ವರ್ಗೀಕರಣಕಾರರ ಸಂಘಟನೆಯು ಬಾಮಾ ಮಣ್ಣಿನ ಪ್ರಕಾರವನ್ನು ರಾಜ್ಯದ ಅಧಿಕೃತವಾದ ಮಣ್ಣು ಎಂದು ತೀರ್ಮಾನಿಸಿದರು, ಅದನ್ನೇ ಅಮೆರಿಕಾದ ಮಣ್ಣು ವರ್ಗೀಕರಣ ವಿಭಾಗವೂ ಅನುಮೋದಿಸಿತು. ಹೀಗೆ ಪ್ರತೀ ರಾಜ್ಯಕ್ಕೆಂದೇ ವಿಶೇಷವಾದ ಮಣ್ಣನ್ನೂ ಅಮೆರಿಕವು ಗುರುತಿಸಿ ಗೌರವಿಸಿದೆ. ಬಾಮಾ ಮಣ್ಣು ನಿಜಕ್ಕೂ ಅಲಬಾಮಾದ ಸಂಸ್ಕೃತಿಯನ್ನು ಬೆಂಬಲಿಸಿದ, ಬೆಂಬಲಿಸುತ್ತಿರುವ ಆಮೂಲಕ ಇಲ್ಲಿ ಜನ ಸಮುದಾಯವನ್ನು ಸಲಹುತ್ತಿರುವ ಮಣ್ಣುಗಳಲ್ಲಿ ಪ್ರಮುಖವಾದ ಮಣ್ಣಾಗಿದೆ.
ಈ ಮಣ್ಣುಗಳು ಮೂಲ ಅಮೆರಿಕ ಸ್ಥಳಿಯರ ನೆಲೆಗಳ ನೆಲವೂ ಆಗಿದ್ದವು. ಅವು ಅಲಬಾಮಾದಲ್ಲಂತೂ ನೀರಿನ ಸಹವಾಸದ ನೆಲೆಗಳೂ ಆಗಿದ್ದು ಜನ-ಜಾನುವಾರುಗಳ ವಿವಿಧತೆಯನ್ನೂ, ಜೀವನ ಅನುಸಂಧಾನವನ್ನು ಕಾಪಾಡಿಕೊಂಡು ಬಂದಿವೆ. ಇಲ್ಲಿನ ನೆಲದ ಆಳದ, ಮೇಲ್ಮೈಯ ಹಾಗೂ ಆಮೂಲಕ ಸೃಜನಗೊಂಡು ಸಮುದಾಯಗಳ ಸಂಸ್ಕೃತಿಯ ಕಥನವನ್ನು ಮುಂದುವರೆಸೋಣ. CPUS ಆಶಯದ ನೆಲ-ಜಲ, ಜನ-ಜಾನುವಾರುಗಳ ವೈಜ್ಞಾನಿಕ ಗ್ರಹಿಕೆಯ ಒಳಗಿನ ಸಂಗತಿಗಳನ್ನು ಒರೆಹಚ್ಚಿ ನೋಡಲು, ಅಟ್ಲಾಂಟಿಕ್ನಾಚೆಯ ಮತ್ತೊಂದು ಜಗತ್ತಿಗೆ ತೆರೆದು ಕೊಳ್ಳಲು ಪುಟ್ಟ ಟಿಪ್ಪಣಿಗಳಾದಾವು ಎಂಬ ನಂಬಿಕೆಯಲ್ಲಿ ಮುಂದುವರೆಸೋಣ
ನಮಸ್ಕಾರ.
ಡಾ. ಟಿ.ಎಸ್. ಚನ್ನೇಶ್