You are currently viewing “ಅರ್ಥವಿಜ್ಞಾನದ ಹರಾಜು ಸಿದ್ಧಾಂತದ ಸುಧಾರಣೆ”ಗೆ “2020ರ ಆಲ್‌ಫ್ರೆಡ್‌ ನೊಬೆಲ್‌ ಸ್ಮರಣೆಯ ಅರ್ಥವಿಜ್ಞಾನದ ಪುರಸ್ಕಾರ”

“ಅರ್ಥವಿಜ್ಞಾನದ ಹರಾಜು ಸಿದ್ಧಾಂತದ ಸುಧಾರಣೆ”ಗೆ “2020ರ ಆಲ್‌ಫ್ರೆಡ್‌ ನೊಬೆಲ್‌ ಸ್ಮರಣೆಯ ಅರ್ಥವಿಜ್ಞಾನದ ಪುರಸ್ಕಾರ”

ಅರ್ಥವಿಜ್ಞಾನ ನನಗೆ ಅರ್ಥವಾಗದ ವಿಜ್ಞಾನ. ಅದರಲ್ಲೂ ಈ ಗೇಮ್‌ ಸಿದ್ಧಾಂತದ ಒಳಗಿನ ಹರಾಜು ಪ್ರಕ್ರಿಯೆಗಳ ವ್ಯವಹಾರಿಕ ವಿವರಗಳನ್ನು ಗಣಿತ ಹಾಗೂ ಗಣಕದ ಲೆಕ್ಕಾಚಾರಗಳಲ್ಲಿ ವಿವರಿಸುವುದನ್ನು ಸ್ವಲ್ಪವಾದರೂ ತಿಳಿವಿಗೆ ತಂದುಕೊಳ್ಳಲು ನನ್ನ ಮುಂದಿನ ಸಂತತಿಯ ಮಕ್ಕಳಿಂದ ಕಲಿಯು‌ವ ಪ್ರಯತ್ನವನ್ನಷ್ಟೇ ಮಾಡಿದ್ದೇನೆ. ನಿಜಕ್ಕೂ ಅತ್ಯಂತ ಸಂಕೀರ್ಣವೂ ಕ್ಲಿಷ್ಟವೂ ಆದ ಅವುಗಳ ವಿವರಣೆಗಳು ಅಪ್ಪಟ ವಿಜ್ಞಾನದ ಹಿತವನ್ನು ಮಾತ್ರವೇ ಬಯಸಿದ ನನಗೆ ಅರ್ಥವಾಗದ್ದು. ಈ ಬಾರಿಯ ಪ್ರಶಸ್ತಿ ವಿಜೇತರಾದ ಪ್ರೊ. ಪಾಲ್‌ ಮಿಲ್‌ಗ್ರಮ್‌ ಮತ್ತು ಪ್ರೊ. ರಾಬರ್ಟ್‌ ವಿಲ್ಸನ್‌ ಅವರಲ್ಲಿ ಕೆಲವು ಅತ್ಯಂತ ಆಪ್ತವಾದ ವಿಶೇಷ ಸಂಗತಿಗಳಿವೆ. ಅವುಗಳಿಂದಲೇ ಆರಂಭಿಸಿ ಒಂದು ಕಥೆಯ ರೂಪದಲ್ಲಿ ನನಗೆ ಅರ್ಥವಾದ ಅರ್ಥವಿಜ್ಞಾನದ ನೊಬೆಲ್‌ ಪ್ರಶಸ್ತಿಯ ವಿವರಗಳ ಸಾರವನ್ನಷ್ಟೇ ಹೇಳುತ್ತೇನೆ.

       ಈ ವರ್ಷದ ಪುರಸ್ಕೃತರಾದ ಇಬ್ಬರೂ ಗುರು ಶಿಷ್ಯರು. ಪಾಲ್‌ ಮಿಲ್‌ಗ್ರಮ್‌ ಅವರು ಪಿಎಚ್.ಡಿಯನ್ನು ಪಡೆದದ್ದೇ ರಾಬರ್ಟ್‌ ವಿಲ್ಸನ್‌ ಅವರ ಮಾರ್ಗದರ್ಶನದಲ್ಲಿ! ಪ್ರೊಫೆಸರ್‌ ರಾಬರ್ಟ್ ವಿಲ್ಸನ್‌‌ ಅವರ ಇಬ್ಬರು ವಿದ್ಯಾರ್ಥಿಗಳಿಗೆ ಈಗಾಗಲೆ ನೊಬೆಲ್‌ ಪ್ರಶಸ್ತಿ ಬಂದಿದೆ. (2012ರಲ್ಲಿ Alvin Elliot Roth ಅವರಿಗೆ ಮತ್ತು 2016ರಲ್ಲಿ  Bengt Robert Holmström ಅವರಿಗೆ). ಇಬ್ಬರು ಶಿಷ್ಯರನ್ನು ನೊಬೆಲಾಗಿಸಿದ ನಂತರ ಮತ್ತೊಬ್ಬರನ್ನೂ ಶ್ರೇಷ್ಠರಾಗಿಸಿ ಅವರ ಜೊತೆಗೆ ನೊಬೆಲ್‌ ಪಡೆದ ವಿಶೇಷ ರಾಬರ್ಟ್‌ ಅವರದ್ದು. ಅದರಲ್ಲೂ ಈ ವರ್ಷದ ಗುರು-ಶಿಷ್ಯರು ವಾಸಿಸುತ್ತಿರುವುದುದು ಒಂದೇ ರಸ್ತೆಯ ಕೇವಲ 40 ಮೀಟರ್‌ ಅಂತರದ ಎದುರು-ಬದುರು ಮನೆಗಳಲ್ಲಿ! ಪ್ರಶಸ್ತಿ ಬಂದ ಸಂಗತಿ ಮೊದಲು ತಲುಪಿದ್ದು ಗುರು ರಾಬರ್ಟ್‌ ಅವರಿಗೆ. ಪಾಲ್ ಅವರು ಹಿಂದಿನ ರಾತ್ರಿ ಮಲಗುವಾಗ ಗುರುವಿಗೂ “ಗುಡ್‌ ನೈಟ್‌” ಹೇಳಿ ಫೋನ್‌ ಆಫ್‌ ಮಾಡಿ ಮಲಗಿದ್ದರಂತೆ. ಬೆಳಗಿನಜಾವ ಮೊದಲು ವಿಷಯ ತಿಳಿದ ರಾಬರ್ಟ್‌ ವಿಲ್ಸನ್‌ ಅವರು ಶಿಷ್ಯನಿಗೆ ತಿಳಿಸಲು ಫೋನ್‌ ಸಿಗದಾಗಿತ್ತು. ತುಂಬಾ ಸಂತಸದ ಸುದ್ದಿಯನ್ನು ಹೇಳಲು ಸ್ವತಃ ಹೆಂಡತಿಯೊಂದಿಗೆ ರಸ್ತೆ ದಾಟಿ ಶಿಷ್ಯ ಪಾಲ್‌ ವಿಲ್‌ಗ್ರಮ್‌ ಮನೆಗೆ ಹೋಗಿ ಬಾಗಿಲು ಬಡಿದೆಬ್ಬಿಸಿದರು. ಶಿಷ್ಯನಿಗೆ ನೊಬೆಲ್‌ ಬಂದಿದೆಯೆಂದು ಹೇಳಿ ಮೊದಲು ಅಭಿನಂದಿಸಿದರಂತೆ. ನಿದ್ದೆಯಿಂದೆದ್ದ ಪಾಲ್‌ಗೆ ಅಚ್ಚರಿ ಜೊತೆಗೆ ಖುಷಿ. ಅದಾದ ನಂತರವೇ ಗುರು ತಮಗೂ ನಿನ್ನ ಜೊತೆಯೆ ಪ್ರಶಸ್ತಿ ಬಂದಿದೆ ಎಂದರಂತೆ. ನೊಬೆಲ್‌ ಇತಿಹಾಸದಲ್ಲಿ ಹೀಗೆ ಮುಖತಃ ವಿಷಯ ತಿಳಿಸಿದ್ದು ಇದೇ ಮೊಟ್ಟ ಮೊದಲು. ಅದರಲ್ಲೂ ಗುರು ಒಬ್ಬ ತನ್ನ ಮೂವರು ಶಿಷ್ಯರಿಗೆ ನೊಬೆಲ್‌ ಪಡೆಯುವಷ್ಟು ಮಾರ್ಗದರ್ಶನ ಮಾಡಿ ಕಡೆಗೆ ಶಿಷ್ಯನ ಜೊತೆಗೆ ತಾವೂ ಪಡೆದದ್ದೂ ಕೂಡ, ವಿಶೇಷವೇ! ಅದನ್ನು ತಮ್ಮ ಶಿಷ್ಯ ಪಾಲ್‌ಗೆ ಹೇಳಿ ಅವರಿಗೆ ಬಂದಿದೆ ಎಂದು ತಿಳಿಸಿದ ನಂತರವೇ ತಿಳಿಸಿದ್ದು! ಈಗ 83 ವರ್ಷದ ರಾಬರ್ಟ್‌ ತಮ್ಮ 72ರ ಹರೆಯದ ಪಾಲ್‌ ಜೊತೆ ನೊಬೆಲ್‌ ಕಿರೀಟ.  ಮತ್ತೂ ವಿಚಿತ್ರವೆಂದರೆ ಈ ಮೊದಲು ಪ್ರಶಸ್ತಿ ಪಡೆದ ಇಬ್ಬರೂ ಮತ್ತೂ ಕಿರಿಯರು. (ಆಲ್ವಿನ್‌ ರುತ್‌ 60ನೆಯ ವಯಸ್ಸಿನಲ್ಲಿ ಹಾಗೂ ಬೆಂಗ್ಟ್‌ ಹಾಮ್‌ಸ್ಟ್ರಾಂಗ್‌ 68ನೆಯ ವಯಸ್ಸಿನಲ್ಲಿ ನೊಬೆಲ್‌ ಪಡೆದವರು). ಮೂರೂ ಜನ ವಿದ್ಯಾರ್ಥಿಗಳೂ ರಾಬರ್ಟ್‌ ಅವರ ಮಾರ್ಗದರ್ಶದಲ್ಲಿ ಸ್ಟ್ಯಾನ್‌ಫೊರ್ಡ್‌ ವಿಶ್ವ ವಿದ್ಯಾಲಯದಿಂದಲೇ ಪಿ.ಎಚ್‌.ಡಿ ಪಡೆದಿದ್ದಾರೆ.

ಆಧುನಿಕ ಅರ್ಥವಿಜ್ಞಾನದ ಬೆಳವಣಿಗೆಗಳು ಶಾಸ್ತ್ರೀಯ ಅರ್ಥವಿಜ್ಞಾನದ ವಿದ್ಯಾರ್ಥಿಗಳಿಗೂ ಹೊಸತು ಅನ್ನಿಸುತ್ತವೆ. ಅಷ್ಟರಮಟ್ಟಿಗೆ ಅವುಗಳಲ್ಲಿ ಗಣಿತ ಹಾಗೂ ಕಂಪ್ಯೂಟರ್‌ ವಿಜ್ಞಾನಗಳು ಬೆಸೆದುಕೊಂಡಿದೆ. ಇಂದಿನ ದೈನಂದಿನ ಜೀವನದ ಬಹುಪಾಲು ನಿರ್ಧಾರಗಳು ಅವುಗಳು ನಿರ್ವಹಣೆಗೊಳ್ಳುತ್ತಿರುವ ವಿವಿಧ ಜ್ಞಾನಶಿಸ್ತುಗಳಿಂದ ವಿಕಾಸಗೊಂಡರೂ ಅವುಗಳು ಅಂತಿಮವಾಗಿ ವ್ಯವಹಾರವನ್ನು ಜೊತೆಗೆ ಬೆಸುಗೆಗೊಂಡು ಅರ್ಥವಿಜ್ಞಾನದ ಸಂಕೇತಗಳಲ್ಲೇ ಅಂತಿಮವಾಗಿ ವಿಶ್ಲೇಷಣೆಗೊಳ್ಳುತ್ತವೆ. ಸದ್ಯದ ಸಾಂಕ್ರಾಮಿಕ ಸನ್ನಿವೇಶವೇ ಇರಬಹುದು ಅಥವಾ ಒಂದು ದೇಶದ ವಿವಿಧ ಸ್ಥಳಗಳಿಗೆ ಸಂಪರ್ಕವನ್ನು ಏರ್ಪಡಿಸುವ ವ್ಯವಸ್ಥೆಗಳೇ ಇರಬಹುದು. ಎಲ್ಲವೂ ಆರ್ಥಿಕ ಚೌಕಟ್ಟಿನ ನಿರ್ಧಾರಗಳಲ್ಲೇ ಅಂತಿಮವಾಗುವುದು. ಹಾಗಾಗಿ ವ್ಯವಹಾರಗಳು ಸಂಕೀರ್ಣವಾಗುತ್ತಾ ಹೋಗುತ್ತಿವೆ. ಎಲ್ಲವೂ ವ್ಯವಹಾರಗಳೇ ಆಗಿ ಜೀವನವೇ ಸಂಕೀರ್ಣವಾಗುತ್ತಿದೆ. ಹಾಗಾಗಿ ಪ್ರತಿಯೊಂದರಲ್ಲೂ ನಿರ್ಧಾರಗಳು ಅನೇಕ ಬಗೆಗಳಿಂದ ಒಂದುಗೂಡಿ ಅಂತಿಮ ಪಾತ್ರದಲ್ಲಿ ಫಲಿತಾಂಶವಾಗಿ ಹೊರಬರಬೇಕಿರುತ್ತದೆ. ಕೊನೆಗೆ ಅದು ಗ್ರಾಹಕ ಅಥವಾ ಬಳಕೆದಾರನ ತಲುಪುವಲ್ಲಿ ಸೇವೆ/ಸಲಹೆ/ವಸ್ತು ಅಥವಾ ಒಂದು ನೆಮ್ಮದಿಯಾಗಿಯೂ ಅಥವಾ ಆನಂದವಾಗಿಯೂ ಆಗಿರಬಹುದು.

ಪ್ರತಿದಿನ ಇವೆಲ್ಲವೂ ಖರೀದಿದಾರರು ಮತ್ತು ಮಾರಾಟಗಾರರ ನಡುವೆ ಹರಾಜುಗಳಾಗಿ ಬಹುದೊಡ್ಡ ಮೌಲ್ಯಗಳನ್ನು ಒಳಗೊಂಡು ವ್ಯವಹಾರದಲ್ಲಿರುತ್ತವೆ. ಹಾಗಾಗಿ ವಿಶ್ವದಾದ್ಯಂತ ಮಾರಾಟಗಾರರು, ಖರೀದಿದಾರರು ಮತ್ತು ತೆರಿಗೆದಾರರ ಪ್ರಯೋಜನಕ್ಕಾಗಿ  ಪಾಲ್ ಮಿಲ್‌ಗ್ರಮ್‌ ಮತ್ತು ರಾಬರ್ಟ್ ವಿಲ್ಸನ್ ಹರಾಜು ಸಿದ್ಧಾಂತವನ್ನು ಸುಧಾರಿಸಿದ್ದಾರೆ ಮತ್ತು ಹೊಸ ಹರಾಜು ಸ್ವರೂಪಗಳನ್ನು ಕಂಡುಹಿಡಿದಿದ್ದಾರೆ. ಆ ಸುಧಾರಣೆಗಾಗಿ ಈ ವರ್ಷದ ಅರ್ಥವಿಜ್ಞಾನದ ನೊಬೆಲ್‌ ಪ್ರಶಸ್ತಿಯನ್ನು ಪಡೆದಿದ್ದಾರೆ. ಹಾಗಾದರೆ ಅದು ಎಂತಹದು ಮತ್ತು ಹೇಗೆ ಎನ್ನುವುದನ್ನು ಸರಳವಾಗಿ ಹೇಳುವ ಪ್ರಯತ್ನ ಮಾಡುತ್ತೇನೆ.

ಸ್ವಲ್ಪ ಹಿನ್ನೆಲೆಯ ವಿಚಾರಗಳಿಂದ ಆರಂಭಿಸುತ್ತೇನೆ. ಏನಾದರೂ ಬೆಲೆ ಕಟ್ಟಿ ಕೊಳ್ಳುವ ಅಥವಾ ಮಾರುವ ಪ್ರಕ್ರಿಯೆಯನ್ನು ಒಳಗೊಂಡ ಹರಾಜು ಎಲ್ಲರಿಗೂ ತಿಳಿದೇ ಇದೆ. ಸಂತೆಗಳಲ್ಲೂ, ಮಾರುಕಟ್ಟೆಗಳಲ್ಲೂ ಕಡೆಗೆ ನಗರಸಂಚಾರಿ ಬಸ್ಸುಗಳಲ್ಲೂ ಅಥವಾ ಬಸ್‌ ನಿಲ್ದಾಣಗಳಲ್ಲೂ ಏನಾದರೂ ಹರಾಜು‌ ಮಾಡಿ ಮಾರುವುದನ್ನು ನೋಡಿಯೇ ಇರುತ್ತೇವೆ. ಈಗಂತೂ ಅನೇಕ ಬಗೆಯ ಹರಾಜು ಬಿಡ್ಡಿಂಗ್‌ಗಳು ವಿಶ್ವಾದ್ಯಂತ ನಡೆಯುತ್ತವೆ. ಹಾಗಾಗಿಯೇ ಬ್ಯಾಂಕುಗಳೂ, ಹಣಕಾಸು ಕಂಪನಿಗಳೂ ವಿವಿಧ ವ್ಯವಹಾರದಲ್ಲಿ ತೊಡಗಿಕೊಂಡಿರುವುದು. ಇವುಗಳು ನೇರವಾಗಿಯೂ ಅಥವಾ ಇಂಟರ್‌ನೆಟ್‌ ಮೂಲಕವೂ ನಡೆಯುತ್ತವೆ. ನಮ್ಮ ವಿದ್ಯುತ್‌ ಬಿಲ್‌ ಅಥವಾ ಪೆಟ್ರೋಲ್‌ ದರ ಕೂಡ ಇಂತಹಾ ಬಿಡ್ಡಿಂಗ್‌ ಗಳಿಂದ ನಿರ್ಧಾರವಾಗುತ್ತದೆ. ಅಂತೆಯೇ ನೂರಾರು ಮಾರುಕಟ್ಟೆಯ ವಸ್ತುಗಳು ವಿಲೇವಾರಿ ಹಾಗೂ ಬಳಕೆಯಾಗುವುದು ಹರಾಜಿನಿಂದಲೇ! ಈ ಹರಾಜು ಪ್ರಕ್ರಿಯೆಗಳು ಮಾರುವ, ಕೊಳ್ಳುವ, ವಿತರಣೆಯಾಗುವ ಹೀಗೆ ಏನೇನೋ ಆಗಿದ್ದಲ್ಲದೆ, ವಿವಿಧ ಬಗೆಯ ಸಮುದಾಯಗಳ ಗ್ರಹಿಕೆ ಹಾಗೂ ಲಾಭ-ನಷ್ಟಗಳ ಹಿತಗಳನ್ನೂ ಒಳಗೊಂಡಿರುತ್ತವೆ. ಎಲ್ಲಕ್ಕಿಂತಾ ಮುಖ್ಯವಾಗಿ ಸಂಖ್ಯೆಯಲ್ಲಿಯೂ ಬಹುದೊಡ್ಡದಾಗಿಯೇ ಇರುತ್ತವೆ. ಹಾಗಾಗಿ ಜೀವನ ನಿರ್ವಹಣೆಯ ವ್ಯವಹಾರಗಳ ಹರಾಜು ಸಿದ್ಧಾಂತವಾಗಿಸುವ ಪ್ರಯತ್ನ ತುಂಬಾ ಹಿಂದಿನಿಂದಲೇ ನಡೆದಿದೆ. ಸ್ವಲ್ಪ ವಿವರಗಳ ಒಳಹೊಕ್ಕು ಪ್ರಕ್ರಿಯೆಗಳಿಂದಲೇ ತಿಳಿದು ನೋಡೋಣ.

ವಿಶ್ವದ ಅತ್ಯಂತ ಹಳೆಯ ಹರಾಜು ಮಾರುಕಟ್ಟೆ ಸ್ಟಾಕ್‌ ಹೋಮ್‌ನಲ್ಲಿ 1674ರಲ್ಲಿಯೇ ಆರಂಭವಾಗಿತ್ತು. ಹರಾಜು ಸಿದ್ಧಾಂತವು ಮೂರು ಮುಖ್ಯ ಅಂಶಗಳನ್ನು ಒಳಗೊಂಡಿದೆ. ಮೊದಲನೆಯದು ಹರಾಜಿನ ನಿಯಮಗಳು. ಇವುಗಳು ಹರಾಜಾಗುವ ವಸ್ತು ಮತ್ತು ಸಂದರ್ಭಗಳನ್ನು ಒಳಗೊಂಡಿರುತ್ತವೆ. ಎರಡನೆಯದು ಯಾವ ಬೆಲೆಗಳನ್ನು ಒಳಗೊಂಡಿವೆ ಎಂಬುದು. ಅಂದರೆ ಹರಾಜಾಗುವ ವಸ್ತುವಿನ ಮೌಲ್ಯ ಎಲ್ಲರಿಗೂ ಒಂದೆಯದೋ ಅಥವಾ ಭಿನ್ನವಾಗಿ ಇರುತ್ತದೋ ಎಂಬ ಸಂಗತಿಗಳು. ಮೂರನೆಯದು ಒಟ್ಟಾರೆಯಾಗಿ ಹರಾಜು ಒಳಗೊಂಡ ಅನಿಶ್ಚಿತತೆಗಳು. ಅಂದರೆ ಬಿಡ್ಡರ್‌ ಮೌಲ್ಯ ಕಟ್ಟುವಾಗ ಏನೇನಲ್ಲಾ ಯೋಚಿಸುತ್ತಾರಲ್ಲಾ ಅವುಗಳು. ಇದಲ್ಲದೆ ವಿವಿಧ ಬಗೆಯ ಹರಾಜುಗಳು ಜಾರಿಯಲ್ಲಿವೆ. ಅವುಗಳನ್ನು ಅವು ವಿಕಾಸಗೊಂಡ ಸ್ಥಳಗಳಿಂದ ಇಂಗ್ಲಿಶ್‌ ಬಿಡ್, ಡಚ್‌ ಬಿಡ್‌ ಎಂಬುದಾಗಿಯೂ ಅಲ್ಲದೆ ಅವುಗಳ ಓಪನ್‌ ಬಿಡ್‌ (ಎದುರಲ್ಲೇ ಕೂಗುವ ವಿಧಾನ) ಅಥವಾ ಮುಚ್ಚಿದ ಬಿಡ್‌ (ಸರ್ಕಾರಿ ಕಾಂಟ್ರಾಕ್ಟರ್‌ ಗಳಿಗೆ ಸಲ್ಲಿಸುವ ಕ್ಲೋಸಡ್‌ ಮಾದರಿಯವು).

ಇನ್ನು ಬೆಲೆ ಕಟ್ಟುವಲ್ಲಿ ಇರುವ ಮೌಲ್ಯಗಳಲ್ಲಿ ಎರಡು ಬಗೆಯವು. ಪ್ರೈವೇಟ್‌ ಅಥವಾ ಸ್ವಹಿತ ಮೌಲ್ಯ (Private values) ಹಾಗೂ ಸಾಮಾನ್ಯ(Common values) ಮೌಲ್ಯ. ಇವು ಕೆಲವೊಮ್ಮೆ ಸಂಕೀರ್ಣವಾದ ವ್ಯಾಖ್ಯೆಯನ್ನು ಹೊಂದಿರಲು ಸಾಧ್ಯವಿದೆ. ಉದಾಹರಣೆಗೆ ನೀವು ಮನೆಯನ್ನು ಕೊಳ್ಳಲು ಬಿಡ್‌ ಮಾಡುವಾಗ ಇವೆರಡನ್ನೂ ಗಮನಿಸಿರುತ್ತೀರಿ. ಅಂದರೆ ನಾವು ವಾಸಕ್ಕಿದ್ದಾಗ ಆಗುವ ಸ್ವಹಿತ ಲಾಭ ಹಾಗೂ ಮುಂದೆ ಮಾರುವ ಮೌಲ್ಯ(ಅದು ಲಾಭವೋ/ನಷ್ಟವೋ ಎಲ್ಲವನ್ನೂ ಒಳಗೊಂಡ ಹಿತಗಳು). ಕೆಲವೊಮ್ಮೆ ಉದಾಹರಣೆಗೆ ಒಂದು ಕಲಾಕೃತಿಯನ್ನು ಹರಾಜಿಗೆ ಒಳಗಾಗಿದೆ ಎಂದಿಟ್ಟುಕೊಳ್ಳೋಣ ಆಗ ಇದು ಮತ್ತಷ್ಟು ಸಂಕೀರ್ಣವಾಗುತ್ತದೆ. ಹೇಗೆಂದರೆ ಮುಂದೊಮ್ಮೆ ಮಾರುತ್ತೇನೆ ಎಂದುಕೊಡ ಕಲಾಕೃತಿಯು ಮನೆಯಲ್ಲಿ ನೇತು ಹಾಕಿದಾಗ ಆಗುವ ಆನಂದದ ಮೌಲ್ಯವು ಪ್ರತಿ ಒಬ್ಬರಲ್ಲೂ ಭಿನ್ನವಾಗುತ್ತದೆ. ಜೊತೆಗೆ ಒಬ್ಬರಲ್ಲಿಯೇ ದಿನವೂ ಭಿನ್ನವಾಗಬಹುದು. ಅದರ ಜೊತೆಗೆ ಮಾರುವಾಗ ಕೊಳ್ಳುವವ ಕಟ್ಟುವ ಸ್ವಹಿತ ಮೌಲ್ಯ ಕೂಡ ಸೇರಿಕೊಳ್ಳುತ್ತದೆ. ಇವೆಲ್ಲವೂ ಅನೇಕ ಗ್ರಾಹಕರನ್ನೂ, ಹಂಚಿಕೆದಾರರನ್ನೂ, ಮಾರಾಟಗಾರರನ್ನೂ ವಿವಿಧ ಮೌಲ್ಯಗಳ ಸಂಗತಿಗಳನ್ನೂ ಒಳಗೊಂಡಾಗ ಒಟ್ಟಾರೆ ಮಾರುಕಟ್ಟೆಯ ನಿರ್ವಹಣೆ ತೀರಾ ಸಂಕೀರ್ಣವಾಗುತ್ತದೆ.

ಇವುಗಳಲ್ಲದೇ ಗೆದ್ದವರೇ ನಷ್ಟವಾಗುವ ಪರಿಸ್ಥಿತಿಯನ್ನೂ ನೋಡೋಣ. ಹರಾಜು ಗೆದ್ದವರೇನೂ ಲಾಭದಲ್ಲೂ ಗೆಲ್ಲಬಹುದೆಂಬ ನಿರ್ಧಾರವಲ್ಲ ತಾನೇ? ಈ ಮುಂದಿನ ಉದಾಹರಣೆ ನೋಡಿ. ಏನಾದರೂ ವಸ್ತುಗಳ ರಾಶಿ ಒಮ್ಮೆಲೆ ಹರಾಜಾಗುತ್ತಿದೆ ಎಂದು ಭಾವಿಸಿ. ಬಿಡ್ಡುದಾರ ಅದನ್ನು ಕೊಂಡು ಮಾರುವಾಗ ಆಗುವ ಲಾಭವನ್ನು ಲೆಕ್ಕಾಚಾರ ಮಾಡಿ ಸಾಮಾನ್ಯವಾಗಿ ಹೆಚ್ಚಿನ ಬೆಲೆಕಟ್ಟುತ್ತಾನೆ. ಅಂದರೆ ಮಾರುಕಟ್ಟೆಯಲ್ಲಿ ಸಹಜವಾಗಿ ಹೀಗೇ ಇದೇ ಎಂಬ ಲೆಕ್ಕಾಚಾರಕ್ಕೆ ಬದಲಾಗಿ ತನ್ನದೇ ನಿರ್ಧಾರದಲ್ಲಿ “ಮಾರಿದರೆ ಆಯಿತು” ಎನ್ನುವಂತಹಾ ಸಂದರ್ಭದಲ್ಲಿ ಸಾಮಾನ್ಯವಾಗಿ ಹೆಚ್ಚು ಬೆಲೆ ಕಟ್ಟುತ್ತಾನೆ (Over Estimate). ಆಗ ಅದರ ಮೌಲ್ಯ ಅದರ ಸರಾಸರಿ ಮೌಲ್ಯಕ್ಕಿಂತಾ ಹೆಚ್ಚಾಗಿ, ಮುಂದೆ ಮಾರಾಟದಲ್ಲಿ ನಷ್ಟ ಅನುಭವಿಸುತ್ತಾನೆ. ಅದನ್ನು “ಗೆದ್ದವರ ಶಾಪ (Winners Curse)” ಎಂದು ವಿಶ್ಲೇಷಿಸಲಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಏನನ್ನಾದರೂ ಮಾರಾಟ ಮಾಡುವುದು ಅಥವಾ ಆಸ್ತಿಯನ್ನು ಖರೀದಿಸುವುದು, ತೆರಿಗೆ ಪಾವತಿಸುವುದು, ಬೆಲೆಕಟ್ಟುವುದು ಮುಂತಾದ ಅನೇಕಾನೇಕ ದೈನಂದಿನ ಕೆಲಸಕಾರ್ಯಗಳ ವ್ಯವಹಾರಗಳನ್ನು  ಹರಾಜುಗಳು ನಿರ್ಧರಿಸಲಾರಂಭಿಸಿವೆ. ಹರಾಜು ನಮ್ಮ ವಾತಾವರಣವನ್ನು ಇಂಗಾಲದ ಡೈಆಕ್ಸೈಡ್‌ ಬಿಡುಗಡೆಯಿಂದ ಬಿಸಿ ಮಾಡುವ ವೆಚ್ಚದ ಮೇಲೂ ಪ್ರಭಾವ ಬೀರುತ್ತದೆ. ನಮ್ಮ ಮೊಬೈಲ್ ಫೋನ್ ವ್ಯಾಪ್ತಿ ಯಾವುದನ್ನು ಅವಲಂಬಿಸಿರುತ್ತದೆ. ರೇಡಿಯೋ ಆವರ್ತನಗಳು, ಟೆಲಿಕಾಂ ಆಪರೇಟರ್‌ಗಳು (ಬ್ಯಾಂಡ್‌ ಸೇವೆಗಳು) ಕೂಡ ಹರಾಜಿನ ಮೂಲಕ ನಡೆಯುತ್ತವೆ.  ಆಗ ಇವು ಎಷ್ಟು ಸಂಕೀರ್ಣ ಎಂದರೆ ಮತ್ತೊಂದು ಉದಾಹರಣೆಯಿಂದ ಪ್ರೊ ಪಾಲ್‌ ಮತ್ತು ರಾಬರ್ಟ್‌ ಅವರ ಶೋಧ ಏನು ಎಂಬುದನ್ನು ತಿಳಿಯಲು ಪ್ರಯತ್ನಿಸೋಣ.

       ಒಂದು ಪ್ರದೇಶದ ಟೆಲಿಕಾಂ ಸೇವೆಯನ್ನು ನೋಡೋಣ. ಕೆಲವು ಕಂಪನಿಗಳಿಗೆ ಕೆಲವು ಪ್ರದೇಶಗಳಲ್ಲಿ ಗ್ರಾಹಕರ ಬಗ್ಗೆ ನಂಬಿಕೆ ಇಲ್ಲದೆ ಅಲ್ಲಿ ಬಂಡವಾಳ ಹೂಡಲು ಇಷ್ಟ ಇರುವುದಿಲ್ಲ. ಕೆಲವರಿಗೆ ಉತ್ತರದಲ್ಲಿ ಇಷ್ಟ ವಿದ್ದರೆ ಕೆಲವಕ್ಕೆ ದಕ್ಷಿಣದಲ್ಲಿ ಇದ್ದೀತು. ಕೆಲವಕ್ಕೆ ಮತ್ತೊಂದೆಡೆ ಹೀಗೆ ವಿಭಿನ್ನ ಸನ್ನಿವೇಶವನ್ನು ವಿವಿಧ ಕಂಪನಿಗಳನ್ನೂ ಏಕಕಾಲಕ್ಕೇ ನಿರ್ಧರಿಸಲು ವಿಶಿಷ್ಟ ಮಾದರಿಯು ಬೇಕಾಗುತ್ತದೆ. ಏಕಕಾಲಿಕವಾದ ಬಹುಸುತ್ತಿನ ಪ್ರಕ್ರಿಯೆಗಳು (Simultaneous Multiple Round Auctions)ಬೇಕಾಗುತ್ತವೆ. ಅದನ್ನೇ ಪ್ರೊ ಪಾಲ್‌ ಮತ್ತು ರಾಬರ್ಟ್‌ ಅನುಶೋಧಿಸಿದ್ದು. ಇದು ಕಳೆದ ಒಂದೆರಡು ದಶಕಗಳಿಂದ ಮುಖ್ಯವಾಗಿ ಟೆಲಿಫೋನ್‌ ಸೇವೆಗಳ ಪ್ರಾದೇಶಿಕ ನಿರ್ಧಾರಗಳಲ್ಲಿ ಬಳಕೆಯಾಗುತ್ತಿದೆ. ಇವೆಲ್ಲವನ್ನೂ ಆಲೋಚಿಸಿದರೆ ತುಂಬಾ ಸಂಕೀರ್ಣವಾದ ಅರ್ಥವನ್ನು ಅರ್ಥವಿಜ್ಞಾನದ ಸಂಗತಿಗಳು ಒಳಗೊಂಡಿರುವುದು ತಿಳಿವಿಗೆ ಬರುತ್ತದೆ.

       ಮೂಲತಃ 1960ರ ದಶಕದಲ್ಲೇ ವಿಲಿಯಂ ವಿಕ್ರಿ (William Vickrey)ನಿರೂಪಿಸಿದ್ದ ಹರಾಜು ಸಿದ್ಧಾಂತವನ್ನು ವಿವಿಧ ಆಯಾಮಗಳಿಂದ ಅಧ್ಯಯನಕ್ಕೆ ಒಳಪಡಿಸಲು ಆರಂಭಿಸಿದ್ದು ರಾಬರ್ಟ್‌ ವಿಲ್ಸನ್‌ ಅವರು. ಬಗೆ ಬಗೆಯ ಮೌಲ್ಯಗಳನ್ನು ಹರಾಜು ಪ್ರಕ್ರಿಯೆ ಹೊಂದಿರುವ ವಿಶೇಷಣಗಳನ್ನು ಹೆಕ್ಕಿ ನೋಡುತ್ತಾ ಬಹುಶಃ ಅವರು 60ರ ದಶಕದಿಂದ ಇಂದಿನವರೆಗೂ ತಮ್ಮ ವಿವಿಧ ವಿದ್ಯಾರ್ಥಿಗಳ ಮಾರ್ಗದರ್ಶನ ಮಾಡುತ್ತಲೇ ವಿದ್ಯಾರ್ಥಿಗಳ ಜಾಣತನದ ಶ್ರೇಷ್ಠತೆಯನ್ನು ಪ್ರತಿಷ್ಠಾಪಿಸುತ್ತಲೇ ನಡೆದರು. ಆ ಹಾದಿಯಲ್ಲಿ ‌2012, 2016 ಮತ್ತು ಈಗ 2020ರಲ್ಲಿ ಮೂವರು ವಿದ್ಯಾರ್ಥಿಗಳು ನೊಬೆಲ್‌ ಪುರಸ್ಕಾರಗಳನ್ನು ಪಡೆದರು. ಇದೀಗ ಮೂರನೆಯ ವಿದ್ಯಾರ್ಥಿಯ ಜೊತೆಗೆ ಅವರೂ ಪಡೆಯುತ್ತಿರುವುದು ಬಹುಶಃ ಅಧ್ಯಯನ ಹಾಗೂ ಅನುಶೋಧಗಳ ಇತಿಹಾಸದಲ್ಲಿ ಬಹು ದೊಡ್ಡ ಮ್ಯಾಜಿಕ್‌ ಆಗಿರಬಹುದು. ನೊಬೆಲ್‌ ಸಮಿತಿಯೂ ಹಾಗೇ ಅಭಿಪ್ರಾಯ ಪಟ್ಟಿದೆ.

       ರಾಬರ್ಟ್‌ ವಿಲ್ಸನ್‌ ನೆಬ್ರಸ್ಕಾ ರಾಜ್ಯದ ಜಿನೆವಾ ಎಂಬಲ್ಲಿ 1934ರಲ್ಲಿ ಜನಿಸಿದರು. ಹಾರ್ವರ್ಡ್‌ ವಿಶ್ವವಿದ್ಯಾಲಯದ ಅಧ್ಯಯನದ ನಂತರ ಸ್ಟ್ಯಾನ್‌ಫೋರ್ಡ ವಿಶ್ವವಿದ್ಯಾಲಯದಲ್ಲಿ 60ರ ದಶಕದಿಂದಲೂ ನೆಲೆಯಾಗಿದ್ದಾರೆ. ಪಾಲ್‌ ಮಿಲ್‌ಗ್ರಮ್‌  ಅವರು ಮಿಚಿಗನ್‌ ರಾಜ್ಯದವರು. ಅಲ್ಲಿನ ವಿಶ್ವವಿದ್ಯಾಲಯದಿಂದ ಸ್ಟ್ಯಾನ್‌ಫೋರ್ಡ್‌ಗೆ ಉನ್ನತ ವ್ಯಾಸಂಗಕ್ಕೆ ಬಂದವರು ಅಲ್ಲಿಯೇ ಇದೀಗ ಗುರು-ಶಿಷ್ಯರಿಬ್ಬರೂ ಒಂದೇ ಕಡೆ ಅಧ್ಯಾಪನ ಮಾಡುತ್ತಿರುವುದಲ್ಲದೆ, ಎದುರು-ಬದುರು ಮನೆಯಲ್ಲೇ ವಾಸವಾಗಿದ್ದಾರೆ.

       ಹಾಂ.. ಅಂದಂತೆ ಪ್ರೊ. ಪಾಲ್‌ ಅವರ ಹೆಂಡತಿಯ ತವರು ಮನೆ ಸ್ಟಾಕ್‌ ಹೋಂ. ಆಕೆಯೂ ಅರ್ಥವಿಜ್ಞಾನದ ತಜ್ಞೆ. ಅಲ್ಲದೆ ಆಕೆಯ ತಂದೆ ದಿವಂಗತ ಮಾರ್ಟಿನ್‌ ಮೆಯೆರ್‌ಸನ್‌ ಅವರೂ ಸ್ವೀಡನ್ನಿನ ಪ್ರಸಿದ್ಧ ಅರ್ಥವಿಜ್ಞಾನ ಪ್ರೊಫೆಸರ್ ಆಗಿದ್ದರು‌. ಇದೀಗ ತನ್ನ ತವರಿಗೆ ಗಂಡನೊಂದಿಗೆ ಹೋಗಿ ನೊಬೆಲ್‌ ಪಡೆಯುವ ಖುಷಿ ಪಾಲ್‌ ಅವರ ಪತ್ನಿ ಪ್ರೊ ಎವಾ ಮೆಯೆರ್‌ಸನ್‌ (Eva Meyersson) ಅವರ ಪಾಲಿಗೆ. ತವರಿನಲ್ಲಿ ಗಂಡನಿಗೆ ಪ್ರಶಸ್ತಿ ಕೊಡಿಸುವುದು ಯಾರಿಗೆ ಸಂತಸ ತರದು ಅಲ್ಲವೇ?

ನಮಸ್ಕಾರ

ಡಾ.ಟಿ.ಎಸ್.‌ ಚನ್ನೇಶ್

This Post Has 3 Comments

 1. Kusum Ramesh Salian

  Great.. Prof Robert Wilson & his students.
  Tuff subject..Economics not like science.
  Anyways congratulations to Prof Robert Wilson & Pfof Paul Milgrom. Really Great
  Prof Robert Wilson n this year’s Nobel laureates.
  Thank you Dr Chennesh for Nobel prize updates.

 2. Kusum Ramesh Salian

  Great.. Prof Robert Wilson & his students.
  Tuff subject..Economics not like science.
  Anyways congratulations to Prof Robert Wilson & Pfof Paul Milgrom. Really Great
  Prof Robert Wilson n this year’s Nobel laureates.
  Thank you Dr Chennesh and CPUS for Nobel prize updates.

 3. ಡಾ ರುದ್ರೇಶ್ ಅದರಂಗಿ

  ವಿಜ್ಞಾನಕ್ಕಿಂತ ಅರ್ಥಶಾಸ್ತ್ರ ತುಸು ಭಿನ್ನ. ಅವುಗಳನ್ನು ಅತ್ಯಂತ ಅರ್ಥಪೂರ್ಣ ವಾಗಿ ಪರಿಚಯ ಮಾಡಿಕೊಟ್ಟಿರುವ ನಿಮಗೆ ಧನ್ಯವಾದಗಳು ಸರ್

Leave a Reply