You are currently viewing ಅಭಿವೃದ್ಧಿಯ ಹೆಸರಿನಲ್ಲಿ ನೆಲದ ಹೊರಪದರ (ಕ್ರಸ್ಟ್‌-Crust) ವನ್ನು ಸಡಿಲ ಮಾಡುತ್ತಿದ್ದೇವೆಯೇ?

ಅಭಿವೃದ್ಧಿಯ ಹೆಸರಿನಲ್ಲಿ ನೆಲದ ಹೊರಪದರ (ಕ್ರಸ್ಟ್‌-Crust) ವನ್ನು ಸಡಿಲ ಮಾಡುತ್ತಿದ್ದೇವೆಯೇ?

ಮಣ್ಣು ವಿಜ್ಞಾನದ ವಿದ್ಯಾರ್ಥಿಯಾದ ನನಗೆ, ನಿಸರ್ಗದ ಅತ್ಯಂದ ಕ್ರಿಯಾಶೀಲ ಉತ್ಪನ್ನವಾದ ಮಣ್ಣಿನ್ನು ಕುರಿತಂತೆ ಕೇವಲ ಅದರ ಪರೀಕ್ಷೆಯ ಆಚೆಗಿನ ವಿಷಯಗಳ ಬಗೆಗೆ ಸದಾ ಕುತೂಹಲ. ಇದೇ ಕಾರಣದಿಂದಲೇ ಮಣ್ಣು ಪರೀಕ್ಷೆಯ ಆಚೀಚೆಗೆ ಅಷ್ಟೇ ಸುಳಿದಾಡುವ, ಚರ್ಚಿಸುವ ಬಹುಪಾಲು ಮಣ್ಣು ವಿಜ್ಞಾನಿಗಳ ನಡುವೆ ನಾನು ಅನಾಥ ಅಂತೆಯೇ ಹೇಳಿಕೊಳ್ಳುತ್ತಿದ್ದೆ (I am an Orphan in Soil Science). ಕಳೆದ ವಾರದ ಅತಿವೃಷ್ಟಿಯ ಹಿನ್ನೆಲೆಯಲ್ಲಿ ಲೆಕ್ಕ ತಪ್ಪುತ್ತಿರುವ ಮಳೆಯ ಬಗೆಗೆ ನೆಲದ ಜವಾಬ್ದಾರಿಯ ಬಗೆಗೆ ಪರೋಕ್ಷವಾಗಿ ಪ್ರಸ್ತಾಪಿಸಿದ್ದೆ. ಇದರ ಮತ್ತೊಂದು ಮುಖವಾದ ಭೂಮಿಯ ಹೊರಪದರ/ಮೇಲ್ಪದರವು ಸಡಿಲವಾಗುತ್ತಿರುವ ವಿಷಯಗಳ ಕುರಿತು ಹೆಚ್ಚಿನ ವಿಚಾರಗಳಿಂದ ಮತ್ತದೇ ಲೆಕ್ಕ ತಪ್ಪಿದ ಮಳೆಯ ಹಿನ್ನೆಲೆಯ ಬೇರೆಯದೇ ರೀತಿಯಿಂದ ನಿಮ್ಮ ಮುಂದಿಡುತ್ತಿದ್ದೇನೆ.

ಭೂಮಿಯ ಹೊರಪದರವನ್ನು ಕ್ರಸ್ಟ್‌ (Crust) ಎಂದು ಕರೆಯುತ್ತಾರೆ. ಮಧ್ಯದ ಮ್ಯಾಂಟಲ್‌ (Mantle) ಒಳಗಿನ ಕೋರ್‌ (Core) ಅದರ ಮುಖ್ಯವಾದ ಮತ್ತರೆಡು ಒಳ ಪದರಗಳು. ಹೊರಪದರವು ಗಟ್ಟಿಯಾದ ಭಾಗ. ಅದಕ್ಕೆ ಅದನ್ನು ಗಟ್ಟಿಯಾದ ಎಂಬ ಅರ್ಥದ ಪದವಾದ “ಕ್ರಸ್ಟ್‌- Crust“ ಎಂದೇ ಕರೆಯಲಾಗಿದೆ. ಭೂಮಿಯ ಮೇಲಿನ ಗಟ್ಟಿ ಪದರವಾದ ಈ ಕ್ರಸ್ಟ್‌ ಇಡೀ ಭೂಮಿಯ ಒಟ್ಟಾರೆಯ ಗಾತ್ರದಲ್ಲಿ ಪ್ರತಿಶತ 1ಕ್ಕಿಂತಲೂ ಕಡಿಮೆ. ಸರಾಸರಿ ಒಟ್ಟು 6378 ಕಿ.ಮೀ ತ್ರಿಜ್ಯದ ಗೋಳವಾದ ಭೂಮಿಯ ಮೇಲಿನ  ಸರಾಸರಿ ಸುಮಾರು 40 ಕಿ.ಮೀ ಪದರ ಮಾತ್ರವೇ ಕ್ರಸ್ಟ್‌. ಕೆಲವೆಡೆ 100 ಕಿ.ಮೀ ಇದ್ದರೂ ಕೆಲವೆಡೆ ಕೇವಲ 5ಕಿ.ಮೀ ಕೂಡ ಇದೆ. ಮಾನವರ ಆಳದ ಚಟುವಟಿಕೆಗಳೇನಿದ್ದರೂ ಆಳದ ಗಣಿಗಳಲ್ಲಿಯೂ 3-4 ಕಿ.ಮೀ ವರೆಗಷ್ಟೇ! (ಅಧ್ಯಯನಕ್ಕೆಂದು ಕೊರೆದ ಅತ್ಯಂತ ಆಳದ ಕೊಳವೆ ಬಾವಿ ರಷಿಯಾದ ಕೋಲಾ ಸೂಪರ್‌ ಡೀಪ್‌ ಬಾವಿಯು 1970ರಿಂದ ಆರಂಭಿಸಿ 1990ರ ವರೆಗೂ ಕೊರೆದರೂ ತಲುಪಿದ್ದು 12.26 ಕಿಮೀ ಮಾತ್ರ. ಇದೇ ಅತ್ಯಂತ ಆಳದ ಬಾವಿ. ಕಳೆದ 2007ರ ವರೆಗೂ ಇದೇ ಅತ್ಯಂತ ಆಳದ್ದಾಗಿದ್ದರೂ ನಂತರದಲ್ಲಿ ಕತಾರ್‌ ದೇಶದ ಒಂದು ತೈಲ ಬಾವಿಯು ಅದನ್ನು ದಾಟಿ ಇನ್ನೂ 0.27 ಕಿಮೀ. (27 ಮೀಟರ್‌) ಆಳಕ್ಕೆ ಹೋಗಿದೆ.).

ಈ ಕ್ರಸ್ಟ್‌ ಮತ್ತದರ ಒಂದಷ್ಟು ಕೆಳಭಾಗದ ಮ್ಯಾಂಟಲ್‌ನ ಮೇಲಿನ ಗಟ್ಟಿಯಾದ ಪದರವೂ ಸೇರಿ ಒಟ್ಟಾರೆಯ ಭೂಮಿಯ ಶಿಲಾಪದರ (Lithospehere) ಎಂದು ಕರೆಯಲಾಗುತ್ತದೆ. ಈ ಲಿಥೊಸ್ಪಿಯರ್‌ ಮತ್ತದರ ಕೆಳಗಿನ ಭಾಗದ ಮ್ಯಾಂಟಲ್‌ (ಮಧ್ಯಪದರ) ನಡುವೆ ಎಸ್ತೆನೊಸ್ಪಿಯರ್‌ (Asthenosphere) ಎಂಬ ಒಂದು ಜಾರುವ -ಒಂದು ರೀತಿಯ ಪ್ಲಾಸ್ಟಿಕ್‌- ಪದರವಿದ್ದು, ಅದರ ಮೇಲೆ ಶಿಲಾಪದರವು ತೇಲುತ್ತಿದೆ. ಈ ತೇಲುವ ಪದರವು ನೆಲ-ಜಲ (ಖಂಡ ಹಾಗೂ ಸಾಗರ)ಗಳನ್ನು ನಿರಂತರವಾಗಿ ಚಲನೆಯಲ್ಲಟ್ಟಿದೆ. ಈ ಚಲನೆಯು ಜಾರುವ ನೆಲದ ಮೇಲಿನ ಕಲ್ಲು ಕುಳಿತ ಹಾಗೆ! ನಿಧಾನವಾಗಿ ಒಂದಷ್ಟೇ ಚಲಿಸುವಂತೆ, ಆದರೆ ಚಲನೆಯೇನು ಅರಿವಿಗೆ ಬರುವುದಿಲ್ಲ, ಆದರೆ ಸಾಗರಗಳ ಏರಿಳಿತದಲ್ಲಿ, ನೆಲದ ಮೇಲಿನ ಚಟುವಟಿಕೆಗಳಲ್ಲಿ, ಗುಡ್ಡ-ಬೆಟ್ಟಗಳ ಬೆಳವಣಿಗೆಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಇದನ್ನು ಪ್ಲೇಟ್‌ ಟೆಕ್ಟಾನಿಕ್‌ (Plate Tectonic) ಚಲನೆಯಿಂದ ಗುರುತಿಸಲಾಗುತ್ತದೆ. ಇದೆಲ್ಲಾ ಸಹಜವಾದ ಚಲನೆ ಎಂಬುದು ನಿಜ.

ಜೊತೆಗೆ ಇವೆಲ್ಲದರ ಮೇಲೂ ಭೂಮಿಯ ಮೇಲೆ ನಡೆಸಲಾಗುವ ಮಾನವ ನಿರ್ಮಿತ ಚಟುವಟಿಕೆಗಳು -ಸಣ್ಣ-ಪುಟ್ಟವೇ ಆಗಿರಬಹುದು- ನಿರಂತರವಾಗಿ ನಡೆಯುವ ಅವುಗಳು ತುಸುವಾದರೂ ಪ್ರಭಾವಿಸಬೇಕಲ್ಲವೇ? ಈ ಪ್ರಶ್ನೆಯು ಸರಿಯಾದದ್ದೇ, ಏಕೆಂದರೆ ಇಡೀ ಭೂಮಿಯ ಕೇವಲ 1% ಮಾತ್ರವೇ ಇರುವ ಮೇಲ್ಪದರದಲ್ಲಿ ಸುಮಾರು 3-5% ಆಳಕ್ಕೆ ಒಂದಲ್ಲಾ ಒಂದು ಬಗೆಯಲ್ಲಿ ಮಾನವ ಚಟುವಟಿಕೆಗಳು ಇಳಿದಿವೆ. ಆಧುನಿಕತೆಯ ದೌಡಿನಲ್ಲಿ ಇವು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಇದರಿಂದ ಭೂಮಿಯ ಮೇಲಿನ ಸಹಜವಾದ ಮಣ್ಣಿನ ಪದರವಂತೂ ಅತ್ಯಂತ ವೇಗದಲ್ಲಿ ವಿನಾಶದತ್ತ ಹೊರಳಿದ್ದರೆ, ಇದೀಗ ಅದರ ಆಳದ ಒತ್ತೂವರಿಯ ಬಗ್ಗೆ ಹೊಸ ಭಯಗಳು ಆರಂಭವಾಗಲಿವೆ. ಹೆದರಿಸಲು ಈ ಮಾತುಗಳನ್ನಿಲ್ಲಿ ಎತ್ತುತ್ತಿಲ್ಲ. ಈ ಮುಂದೆ ಕೊಡುವ ವಿವರಗಳು ಎಚ್ಚರಿಸುತ್ತಿರುವುದನ್ನು ಗಮನಿಸಲು ಬಯಸುತ್ತೇನೆ.

ಜಾಗತಿಕವಾಗಿ ಗಣಿಗಾರಿಕೆ ಮತ್ತು ಕಟ್ಟಡಗಳ ನಿರ್ಮಾಣದಿಂದ ಪ್ರತೀ ವರ್ಷ ಭೂಮಿಯ ಮೇಲಿನ ಒಟ್ಟು 35 ಶತ ಕೋಟಿ ಟನ್ನುಗಳ ಕಲ್ಲು-ಮಣ್ಣು ಇತ್ಯಾದಿಗಳ ಆಚೀಚೆಯ ಸಾಗಾಟದ ತೊಂದರೆಯನ್ನು ಅನುಭವಿಸುತ್ತದೆ. ಮಾನವ ನಿರ್ಮಾಣದಿಂದಾಗಿ ಭೂಮಿಯ ಮೇಲ್ಪದರದ ಮೂಲವಸ್ತುಗಳಲ್ಲಿ ಗಮನಾರ್ಹವಾದ ಏರು-ಪೇರು ಉಂಟಾಗಿರುವುದನ್ನು ವಿಖ್ಯಾತ ತಾಂತ್ರಿಕ ಸಂಸ್ಥೆಯ ವಿಜ್ಞಾನಿಗಳು ವರದಿ ಮಾಡಿದ್ದಾರೆ. ಇದರ ತೀವ್ರತೆಯು ಅದೆಷ್ಟು ಎಂದರೆ ಮಾನವ ನಿರ್ಮಾಣವು ಇಡೀ ಭೂಮಿಯನ್ನು ಪುನರ್‌ ರೂಪಿಸುವಂತೆ ಆಗುತ್ತಿದೆಯಂತೆ! 19-20ನೆಯ ಶತಮಾನದ ಬದಲಾವಣೆಗಳು ಭೂಮಿಯನ್ನು ಹೊಸತೊಂದು ಭೌಗೋಳಿಕ ವಯೋಮಾನಕ್ಕೆ ತಳ್ಳಿವೆ ಎಂಬ ಆತಂಕವನ್ನು ತರುತ್ತಿವೆ. ಭೂಮಿಯ ಮೇಲ್ಪದರಲ್ಲಿ ತೀರಾ ಅಪರೂಪದ ಮೂಲವಸ್ತುಗಳು ಅತ್ಯಂತ ಹೆಚ್ಚಿನ ಬದಲಾವಣೆಯ ಏರು-ಪೇರನ್ನು ದಾಖಲಿಸಿವೆ. ಸರಿ ಸುಮಾರು 77 ಮೂಲವಸ್ತುಗಳು ಇಂತಹ ಸಾಮೂಹಿಕ ವರ್ಗಾವಣೆಯ ಆತಂಕಕ್ಕೆ ಒಳಗಾಗಲು ಮಾನವರ ಚಟುವಟಿಕೆಗಳಾದ ಗಣಿಗಾರಿಕೆ, ಕಟ್ಟಡಗಳ ನಿರ್ಮಾಣ, ಹೆದ್ದಾರಿ-ರಸ್ತೆಗಳ ನಿರ್ಮಾಣ, ಪೆಟ್ರೋಲಿಯಂ ಇಂದನಗಳ (Fossil Fuels) ಬಳಕೆಯೇ ಮುಂತಾದವುಗಳಿಂದ ಉಂಟಾಗಿದೆ ಎಂದು ಮೆಸಾಚೇಸೇಟ್ಸ್‌ನ ಉಡ್ಸ್‌-ಹೋಲ್‌ ಸಾಗರವಿಜ್ಞಾನ ಸಂಸ್ಥೆಯ ರಸಾಯನ ವಿಜ್ಞಾನಿಗಳಾದ ಇಂದ್ರಸೇನ್‌ ಮತ್ತು ಬರ್ನ್‌ಹಾರ್ಡ್‌ (Indra Sen and Bernhard P.E) ವರದಿ ಮಾಡಿದ್ದಾರೆ. ಇವುಗಳಲ್ಲಿ ಅಪರೂಪದ ಮೂಲವಸ್ತುಗಳಾದ ಇರೆಡಿಯಂ, ಆಸ್ಮಿಯಂ, ಹೀಲಿಯಂ, ಚಿನ್ನ, ರುಥೇನಿಯಂ, ಆಂಟಿಮೊನಿ, ಪ್ಲಾಟಿನಂ, ಪಲ್ಲಾಡಿಯಂ, ರ‍್ಹೇನಿಯಂ, ರೋಡಿಯಂ ಮತ್ತು ಕ್ರೋಮಿಯಂ (Iridium, Osmium, Helium, Gold, Ruthenium, Antimony, Platinum, Palladium, Rhenium, Rhodium and Chromium) ಗಳು ನೈಸರ್ಗಿಕ ಏರುಪೇರುಗಳಿಗಿಂತಲೂ ಹೆಚ್ಚಾಗಿ ಒತ್ತಡದ ಬದಲಾವಣೆಗಳನ್ನು ದಾಖಲಿಸಿವೆ. ಈ ಮೂಲವಸ್ತುಗಳಿಗೆ ಒತ್ತಡವನ್ನು ಉಂಟುಮಾಡುತ್ತಿರುವ ಒಟ್ಟಾರೆ ಚಟುವಟಿಕಗಳ ಚಿತ್ರಣವನ್ನು ಈ ಕೆಳಗಿನ ಚಿತ್ರವು ವಿವರಿಸುತ್ತದೆ.  

ಮಾನವ ನಿರ್ಮಿತ ಮೈಲ್ಮೈಯ ಚಟುವಟಿಕೆಗಳಿಂದ ನೈಸರ್ಗಿಕವಾಗಿ ಇರಬೇಕಾದ ಗುರುತ್ವಕ್ಕಿಂತಾ ಭಿನ್ನವಾದ ಗುರುತ್ವವನ್ನು ಗುರುತ್ವದ ಅಸಂಗತತೆ (Gravity Anomaly) ಎನ್ನುತ್ತಾರೆ. ಯುಕ್ರೇನಿನಲ್ಲಿ ನಿರಂತರವಾಗಿ ನೆಲದ ಮೇಲ್ಮೈಯನ್ನು ಸಮತಟ್ಟಾಗಿಸುವ ಸಾಮೂಹಿಕ ಚಟುವಟಿಕೆಗಳಿಂದ ಸುತ್ತಲಿನ ನೆಲದ ಗುರುತ್ವದಲ್ಲಿ ಬದಲಾವಣೆಗಳ ದಾಖಲಾತಿಯನ್ನು ಜಿಯೊ ಫಿಸಿಕಲ್‌ ವಿಜ್ಞಾನ ಪತ್ರಿಕೆಯು ವರದಿ ಮಾಡಿದೆ. ದೂರದ ಯುಕ್ರೇನಿನಲ್ಲಿ ಅಷ್ಟೇ ಅಲ್ಲ! ಎಂತಹದೇ ಗುರುತ್ವದ ಬದಲಾವಣೆಯನ್ನು ನಮ್ಮ ದಕ್ಷಿಣ ಭಾರತದ ಕಾವೇರಿ-ಪಾಲಾರ್‌ ನದಿ ಮುಖಜ ಭೂಮಿಯ ನೆಲದಲ್ಲೂ ಪೆಟ್ರೋಲಿಯಂ ವಿಜ್ಞಾನದ ಅಧ್ಯಯನಗಳಲ್ಲಿ ಕಂಡುಕೊಳ್ಳಲಾಗಿದೆ. ಇದು ತೀರ ಪ್ರದೇಶದಲ್ಲೂ ಮತ್ತು ತೀರದಾಚೆಗಿನ ನೆಲದಲ್ಲೂ ಕಂಡು ಬಂದ ಲಕ್ಷಣಗಳಾಗಿವೆ. ರಾಮೇಶ್ವರಂನಿಂದ ಮದ್ರಾಸ್‌ ವರೆಗಿನ ವಿವಿಧ ನೆಲದ ಅಧ್ಯಯನಗಳಲ್ಲಿ ಕಂಡಬಂದ ಗುರುತ್ವದ ಅಳತೆಗಳು, ನೈಸರ್ಗಿಕವಾಗಿ ಇರಬೇಕಾದ ಮಾಪನಗಳಿಗಿಂತ ಭಿನ್ನವಾದ್ದನ್ನು ದಾಖಲಿಸಿವೆ. ಇವೇನು ತತ್‌ಕ್ಷಣಕ್ಕೆ ಕಾಣದ ಬದಲಾವಣೆಗಳನ್ನು ತಂದರೂ, ಈ ವರ್ಷವೇ ಅನುಭವಕ್ಕೆ ಬಂದಿರುವ ಅಕಾಲದ ಮಳೆ, ಅಂದಾಜಿಲ್ಲದ ಮಳೆಯ ಸಾಂದ್ರತೆ ಮುಂತಾದವುಗಳನ್ನು ಮುಂದೆಯೂ ತರುತ್ತವೆಯಾ ಎಂಬ ಆತಂಕವಂತೂ ಇದ್ದೇ ಇದೆ.  

ಕಾರಣವೇನೆಂದರೆ ಇದೆಲ್ಲಕ್ಕಿಂತಾ ಹೆಚ್ಚಿನ ಆತಂಕ ಇರುವುದು ಇತ್ತಿಚೆಗಿನ ರಸ್ತೆಗಳ – ಹೆದ್ದಾರಿಗಳ ನಿರ್ಮಾಣದಲ್ಲಿ! ಇದನ್ನು ಬಹು ದೊಡ್ಡ ಆಧುನಿಕ ಅಭಿವೃದ್ಧಿ ಎಂದು ಸರ್ಕಾರಗಳು ದೊಡ್ಡದಾಗಿ ಜಾಹಿರಾತು ಕೊಡುತ್ತವೆ. ಆದರೆ ನಿಜಕ್ಕೂ ಸಾಮಾನ್ಯ ಸಾರ್ವಜನಿಕ ರಸ್ತೆಗಳು ಅಭಿವೃದ್ಧಿ ಹೊಂದಿವೆಯಾ? ಉತ್ತರಗಳು ಜನಸ್ನೇಹಿಯಲ್ಲ! ಹೆದ್ದಾರಿಗಳು ಲಕ್ಷಾಂತರ ಕಿ.ಮೀ ಹೆಚ್ಚಾಗಿವೆ ನಿಜ. ಬೇರೆಲ್ಲೂ ಬೇಡ ನಮ್ಮ ರಾಜಧಾನಿ ಬೆಂಗಳೂರಿನ ಅನೇಕ ಪ್ರಮುಖ ಬಡಾವಣೆಗಳ ಸಂಪರ್ಕಿಸುವ ರಸ್ತೆಗಳು ಹೇಗಿವೆ? ಇನ್ನು ಉಳಿದ ನಗರ-ಪಟ್ಟಣಗಳ ಮಾತು ಇಲ್ಲಿ ಪ್ರಸ್ತಾಪಿಸುವುದೇ ಬೇಡ. ಹಳ್ಳಿಗಳನ್ನು ತಲುಪುವ ರಸ್ತೆಗಳನ್ನು ಕೇಳುವವರೇ ಇಲ್ಲ. ನಮ್ಮ ದೇಶವು ಜಗತ್ತಿನಲ್ಲೇ ಅತ್ಯಂತ ಹೆಚ್ಚು ರಸ್ತೆಗಳ ಸಾಂದ್ರತೆಯನ್ನು ಹೊಂದಿದ ದೇಶ! ಪ್ರತೀ ಚದರ ಕಿಮೀ ಗೆ 1.66 ಕಿ.ಮೀ ಉದ್ದದ ರಸ್ತೆಗಳನ್ನು ನಮ್ಮ ದೇಶ ಹೊಂದಿದೆ. ಅವೆಲ್ಲವೂ ಅಭಿವೃದ್ಧಿಗಳೆಲ್ಲಾ ಸಾಮಾನು-ಸರಂಜಾಮು ಸಾಗಿಸುವ ಹೆದ್ದಾರಿಗಳಲ್ಲಿ ಮಾತ್ರವೇ ಆಗಿದ್ದು, ಅವೆಲ್ಲವೂ ವಹಿವಾಟು ಸಂಸ್ಥೆಗಳಿಗೆ ಲಾಭದ ಹಿತದಲ್ಲಿ ಪ್ರಯೋಜನಕಾರಿ. ಜನವಸತಿಗಳ ನಿರಂತರ ಬಳಕೆಯ ರಸ್ತೆಗಳಲ್ಲಿ ಗಮನಾರ್ಹ ಬದಲಾವಣೆಗಳು ಆಗುತ್ತಿಲ್ಲ.

ಸುಮಾರು 14 ಸಾವಿರ ಕಿ.ಮೀ ಉದ್ದದ ರಸ್ತೆಗಳು ಕಳೆದ ದಶಕದಲ್ಲಿ ಹೆದ್ದಾರಿಗಳಲ್ಲಿ ಮಾತ್ರವೇ ನಡೆದಿದ್ದು ಇದಕ್ಕೆಂದೆ ವಶಪಡಿಸಿಕೊಂಡ ಕೃಷಿ ಭೂಮಿಯು ಲಕ್ಷಾಂತರ ಎಕರೆಗಳು! ಇಷ್ಟೂ ನೆಲದ ಹಸಿರು ಚಾವಣೆಯು ಶಾಶ್ವತವಾಗಿ ಇನ್ನಿಲ್ಲವಾಗಿದೆ. ಪ್ರತೀ ರಸ್ತೆಗಳ ನಿರ್ಮಾಣದಲ್ಲೂ ಕನಿಷ್ಟ 2ರಿಂದ 10 ಮೀಟರ್‌ಗಳಷ್ಟು ಆಳದ ಕ್ರಸ್ಟ್‌ ತೊಂದರೆಗೆ ಒಳಗಾಗಿದೆ. ಒಂದು ಲೆಕ್ಕದಲ್ಲಿ ಜಗತ್ತಿನಲ್ಲಿ ರಸ್ತೆಗಳ ನಿರ್ಮಾಣದಲ್ಲಿ ನಮ್ಮ ದೇಶದ ಮೇಲ್ಪದರದ ನೆಲ ಅಲುಗಾಡಿದ್ದೇ ಹೆಚ್ಚು. ಇದರ ಜೊತೆಗೆ ಅನೇಕ ನಗರಗಳಲ್ಲಿ ಮತ್ತು ನಗರಗಳನ್ನು ಹೊರ ರಸ್ತೆಗಳಲ್ಲಿ ದಾಟಿಸುವ ಬೈ ಪಾಸ್‌ ಗಳಿಗೆ ಕಂಬಗಳ (Pillars) ಕಟ್ಟಲು ತಗೆಯುವ ಆಳದ ಸಡಿಲತೆಯು ಸೇರಿಕೊಳ್ಳುತ್ತದೆ. ರೈಲು ಹೋಗುವಷ್ಟು ಭದ್ರವಾದ ಕಂಬಗಳನ್ನು ನಿರ್ಮಿಸಲು ಅದೆಷ್ಟು ಆಳದ ಗುಂಡಿ ತೆಗೆಯಬೇಕು. ಇದಕ್ಕೆ ಪರಿಹಾರದ ಮಾರ್ಗಗಳೇ ಇಲ್ಲ. ಎನ್ನುವಷ್ಟು ಒಗ್ಗಿಹೋಗಿದ್ದೇವೆ. ಜಾಗತಿಕವಾಗಿ ಈ ಹೆದ್ದಾರಿಗಳನ್ನು, ಫ್ಲೈ ಓವರ್‌ ಗಳ ಮಾರ್ಗಗಳನ್ನು, ಬೈಪಾಸ್‌ ದಾರಿಗಳನ್ನು, ಬಹು ದೊಡ್ಡ ಅಭಿವೃದ್ಧಿಯ ಮಾನದಂಡಗಳು ಎಂಬಂತೆ ನೋಡಲಾಗುತ್ತದೆ. ಈ ಅಭಿವೃದ್ಧಿಯ ಕೆಳಗಿನ ನೆಲದ ಸಡಿಲಿಕೆಯನ್ನು ಅರಿಯುವುದೇ ಇಲ್ಲ. ಜೊತೆಗೆ ಆ ನೆಲದ ಮಣ್ಣಿನ ಸವಕಳಿ, ನಷ್ಟ ಇವೆಲ್ಲವೂ ಗಣನೆಗೆ ಬರುವುದೇ ಇಲ್ಲ.

ಇಂತಹಾ ಸಾಮೂಹಿಕ ಭೂ ಮೇಲ್ಮೈಯ ಚಲನೆಗಳ ಕಾರಣದಿಂದ ಉಂಟಾಗುತ್ತಿರುವ ಮೂಲವಸ್ತುಗಳ ರಸಾಯನಿಕತೆಯ ಅಧ್ಯಯನಗಳಲ್ಲಿ ಗಮನಾರ್ಹವಾದ ಹೆಗ್ಗುರುತುಗಳನ್ನು ಕಾಣುತ್ತಿದ್ದೇವೆ. ಜೀವಿಗಳಲ್ಲಿ ಬೇಕಾದ ಮೂಲವಸ್ತುಗಳಲ್ಲಿ ಒಂದಾದ ಮ್ಯಾಂಗನೀಸ್‌ ಏರು-ಪೇರನ್ನು ಸಂಶೋಧನಾ ಅಧ್ಯಯನಗಳನ್ನು ಅಮೂಲಾಗ್ರವಾಗಿ ಪರಾಮರ್ಶಿಸಿ ವರದಿ ಮಾಡಿರುವ ವೆಸ್ಟರನ್‌ ಒಂಟೊರಿಯೋ ವಿಶ್ವವಿದ್ಯಾಲಯದ (The University of Western Ontario, Ontario, Canada) ದಿನಕರ್‌ ಕುಲಶ್ರೇಷ್ಟ ಮತ್ತು ಸಂಗಡಿಗರು ಆತಂಕದ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಜಾಗತಿವಾಗಿ ಹೆಚ್ಚಾಗುತ್ತಿರುವ ವಯೋಮಾನದ ಕಾಯಿಲೆಗಳಲ್ಲಿ ಪ್ರಮುಖವಾದ ಪಾರ್ಕಿನ್‌ಸನ್‌ ಅಂತಹಾ ನರ-ಸಂಬಧಿತ ಸಮಸ್ಯೆಗಳ ಬಗ್ಗೆ ಪರಾಮರ್ಶಿಸಿದ್ದಾರೆ. ಇದು ಒಂದು ಉದಾಹರಣೆಯಷ್ಟೇ! ಇದಲ್ಲದೆ ಅನೇಕ ಭಾರದ ಲೋಹಗಳ ಮಾಲಿನ್ಯವು ನಮ್ಮ ಗಣಿಗಳಲ್ಲೂ ಕಾಣಬರುತ್ತಿದೆ. ಬಳ್ಳಾರಿ-ವಿಜಯ ನಗರ ಜಿಲ್ಲೆಗಳ ಆಸ್ತಮ, ಉಸಿರಾಟದ ಸಮಸ್ಯೆಗಳ ಅಧ್ಯಯನಗಳು ಇವುಗಳನ್ನು ಮತ್ತಷ್ಟು ಆತಂಕಕಾರಿ ಅಂಶಗಳನ್ನು ಹೊರ ಹಾಕಬಹುದು. ದಶಕಗಳ ಹಿಂದೆಯೂ ನನ್ನ ಸ್ನಾತಕೋತ್ತರ ಪದವಿ ಅಧ್ಯಯನದಲ್ಲಿ ಸಂಡೂರು – ದೋಣಿಮಲೈ ಸುತ್ತ ಮುತ್ತಲಿನ ಸ್ಥಳಗಳಲ್ಲಿ ಪುಟ್ಟ ಮಕ್ಕಳೂ ಆಸ್ತಮದಿಂದ ತೊಂದರೆಗೆ ಒಳಗಾದ್ದನ್ನು ಗಮನಿಸಿದ್ದೆ.

ಮತ್ತೇ ಹಿಂದರುಗಿ ಮೊದಲು ಪ್ರಸ್ತಾಪಿಸಿದ್ದ ವಿಷಯಕ್ಕೆ ಬರೋಣ. ಭೂಮಿಯ ಹೊರಪದರ ಅಥವಾ ಮೇಲ್ಪದರವು ಸಡಿಲವಾಗುತ್ತಿರುವ ವಿಷಯ! ದುರಾದೃಷ್ಟಕ್ಕೆ ನಮ್ಮದೇಶವನ್ನು ಬಿಟ್ಟು ಬಿಡಿ ಜಾಗತಿಕವಾಗಿಯೂ ಇದೊಂದು ಆತಂತದ ವಿಷಯವಾಗಿಲ್ಲ. ಕೇವಲ ಮಣ್ಣು ರಕ್ಷಣೆಯ ಹಿನ್ನೆಲೆಯಲ್ಲಿ ಸಾಧು ಸದ್ಗುರುಗಳ ನರ್ತನವನ್ನೇ ಜಾಹಿರಾತಾಗಿಸಿ ಸಮ್ಮೋಹನಗೊಳಿಸುವುದನ್ನು ಬಿಟ್ಟರೆ, ಒಟ್ಟಾರೆಯ ಕ್ರಸ್ಟ್‌ ಸಡಿಲವಾಗುವ ಆತಂಕದ ಪ್ರಶ್ನೆಗಳನ್ನು ಕೇಳುತ್ತಿಲ್ಲ. ಅಲ್ಲಲ್ಲಿ ಕೆಲವು ಸಣ್ಣ-ಪುಟ್ಟ ಅಧ್ಯಯನಗಳನ್ನು ಹೊರತು ಪಡಿಸಿದರೆ, ಅದನ್ನೇ ಗುರಿಯಾಗಿಸಿದ ಅಧ್ಯಯನಗಳು ನಡೆಯುತ್ತಿಲ್ಲ. ಆರಂಭದಲ್ಲಿ 1931ರ ಸೆಪ್ಟೆಂಬರ್‌ 28 ರಂದು ಸರಿ ಸುಮಾರು 90 ವರ್ಷಗಳ ಹಿಂದೆ  ಲಂಡನ್ನಿನ ರಾಯಲ್‌ ವಿಜ್ಞಾನ ಸಂಸ್ಥೆಯು ಭೂಗೋಳದ ಸ್ವತಂತ್ರ ಅಧ್ಯಯನಕ್ಕೆ ಕಾರಣರಾದ ಸರ್‌ ಹಾಲ್‌ಫೊರ್ಡ್‌ ಮೆಕಿಂಡರ್‌ (Sir Halford Meckinder) ಅವರ ಅಧ್ಯಕ್ಷತೆಯಲ್ಲಿ ಭೂಮಿಯ ಹೊರ ಪದರದ ಸಮಸ್ಯೆಗಳ ಬಗ್ಗೆ ಮೊಟ್ಟ ಮೊದಲ ಚರ್ಚೆಯನ್ನು ಹುಟ್ಟು ಹಾಕಿತ್ತು. ಆಗಿನ್ನೂ ಆರಂಭಿಕ ವೈಜ್ಞಾನಿಕ ದಿನಗಳಾದ್ದರಿಂದ ಹೆಚ್ಚಿನ ಚರ್ಚೆಯು ಕೇವಲ ಆಧ್ಯಯನದ ಸಮಸ್ಯೆಗಳ ಬಗೆಗೆ ಬೆಳಕು ಚೆಲ್ಲಿದ್ದವು. ಆದರೀಗ ಅಧ್ಯಯನದ ಸಮಸ್ಯೆಗೆ ಪರಿಹಾರಗಳ ಹಲವಾರು ಉಪಕರಣಗಳು (Tools) ದೊರಕಿವೆ ಎಂಬುದೇನೋ ನಿಜ. ಆದರೆ ಇವೆಲ್ಲವೂ ತಂದಿಟ್ಟ ಆಸೆ-ಲಾಲಸೆಗಳು ಜಾಣತನವನ್ನೂ ಒಳಗೊಳ್ಳಲಿಲ್ಲ.

ನಂತರದ ದಿನಗಳಲ್ಲಿ ಅದರಲ್ಲಿ ಭಾರತದಲ್ಲಿ ಅಂತೂ ಈವರೆವಿಗೂ ಭೂಗೋಳ ವಿಜ್ಞಾನ ಮತ್ತು ಭೂ ವಿಜ್ಞಾನ (Geography and Geology) ಎರಡರಲ್ಲೂ ಕೇವಲ ಹುಡುಕಾಟದ- ಪತ್ತೆ ಹಚ್ಚುವ  (Prospecting) ವೈಜ್ಞಾನಿಕ ಅಧ್ಯಯನಗಳು ಅಲ್ಲದೆ ಗಣಿಗಾರಿಕೆಯ ಮಾಲಿನ್ಯತೆಯನ್ನು ವೈಜ್ಞಾನಿಕ ವರದಿಗಳಿಂದ ಕೇವಲ ಸಮಾಧಾನ ಪಡಿಸುವ ವಿಷಯಗಳೇ ಹೆಚ್ಚು. ಆದ್ದರಿಂದ ಹೊರ ಪದರವು ಸಡಿಲವಾಗುವಂತಹಾ ಮತ್ತು ಅದರ ದೂರದ ಅಪಾಯಗಳ ಬಗೆಗಿನ ಅಧ್ಯಯನಗಳು ನಡೆಯುತ್ತಿಲ್ಲ. ಇವೆಲ್ಲವನ್ನೂ ಸಾರಾಸಗಟಾಗಿ ಒಂದಾಗಿಸಿ ಅಧ್ಯಯನಿಸುವ ಹವಾಮಾನ ಬದಲಾವಣೆಯ -ಕೈಮೇಟ್‌ ಚೇಂಜ್‌ – ಅಧ್ಯಯನಗಳ ಹೆಸರಲ್ಲಿ ಕೈತೊಳೆದುಕೊಳ್ಳುವ ಹುನ್ನಾರಗಳಿವೆ. ಅಂದರೆ ಇದರಲ್ಲಿ ನಮ್ಮದೇನಿಲ್ಲ ಏನಿದ್ದರೂ ಎಲ್ಲವೂ ನಿಸರ್ಗದ ಕೈವಾಡ ಎಂಬಂತೆ ತಿಪ್ಪೆ ಸಾರಿಸುವ ಜಾಣತನ. ಇದಕ್ಕೆ ತಲೆದೂಗುವ ಸರ್ಕಾರಗಳು.

ಸರಿ ನಮ್ಮ ಪಾರಂಪರಿಕ ತಿಳಿವಳಿಕೆ ದಾಖಲೆಗಳು -ಪುರಾಣಗಳಾದರೂ ಸರಿ_ ನೋಡೋಣ ಅವುಗಳಾದರು ಎಚ್ಚೆತ್ತು ಕೊಳ್ಳಲು ಅನುಕೂಲ ಕಲ್ಪಸಿಬಹುದೆಂದು ಹುಡುಕಾಡಿದರೆ ದಶಾವವತಾರದಲ್ಲಿ ಭೂಮಿಯನ್ನೆತ್ತಿದ ವರಾಹ ಮೂರ್ತಿ, ಮಣ್ಣು ತಿಂದನೆಂದು ಪ್ರಶ್ನಿಸಿದ ಅಮ್ಮ ಯಶೋಧೆಗೆ ಬಾಯಲ್ಲಿ ಭೂಮಿಯ ತೋರಿದ ಕೃಷ್ಣನ ಸಮಾಧಾನಗಳು ಮಾತ್ರವೇ ಸಿಗುತ್ತಿವೆ. ಇದಕ್ಕೆ ಸದ್ಗುರುಗಳು ಅಪ್ಪಟ ಇಂಗ್ಲೀಷಿನಲ್ಲಿ ವೈಜ್ಞಾನಿಕ ಸೂತ್ರಗಳನ್ನು ಯಾರಿಗೂ (ಅವರಿಗೂ) ಅರ್ಥವಾಗದ ಕ್ವಾಂಟಂ ವಿಜ್ಞಾನ ಬಳಸಿ ವಿವರಿಸಿಯಾರು. ಅದಕ್ಕೆ ತಲೆಯ ಮೇಲೆ ಹೊಡೆದಂತೆ ದಕ್ಷಿಣ ಕನ್ನಡದ  ಡಾಕ್ಟರರು ಅದನ್ನೇ ಕ್ವಾಂಟಂ ವೈದ್ಯೋಜ್ಞಾನವಾಗಿಸಿ ಅಪ್ಪಟ ಕನ್ನಡದಲ್ಲಿ ಮತ್ತಷ್ಟು ಮತ್ತಷ್ಟು ಸಮಾಧಾನ ಹೇಳಿ ವಿಜ್ಞಾನದ ಬಾಯಿ ಮುಚ್ಚಿಸುತ್ತಾರೆ. ಇದಕ್ಕೆಲ್ಲಾ ಉತ್ತರವೇ ಇಲ್ಲವೆಂಬಂತೆ ಕೊಚ್ಚಿ ಹೋದ ಕೇರಳ-ಕೊಡಗುಗಳು ಸುಮ್ಮನಾಗಿಸುತ್ತವೆ. ಎಸ್ಟೇಟ್‌ ಏಜೆನ್ಸಿಯು ನವವಸಾಹತುಶಾಹಿ ಆಡಳಿತದಲ್ಲಿ ಬಲುದೊಡ್ಡ ಅಭಿವೃದ್ಧಿಯ ಸಂಕೇತ. ನನಗಂತೂ ಮತ್ತೇ ನಾನು ನನ್ನ ಬಗ್ಗೆ ಪರಿಚಯಿಸಿಕೊಳ್ಳುತ್ತಿದ್ದ “I am an Orphan in Soil Science” ನೆನಪಾಗುತ್ತಿದೆ.  

ಸೂಚನೆ: ಶೀರ್ಷಿಕೆಯಲ್ಲಿ ಭೂಮಿಗೆ ಬದಲಾಗಿ ನೆಲ ಪದವನ್ನು ಬಳಸಿದ್ದೇನೆ. ಕ್ರಸ್ಟ್‌ ಭೂಮಿಯ ಹೊರ ಪದರ ನಿಜ. ಭೂಮಿ ಪದಕ್ಕಿಂತಾ ನೆಲ ಹೆಚ್ಚು ಆಪ್ತ. ನೆಲ ನಮ್ಮದೇ ಕಾಲ ಕೆಳಗಿನದು ಆದರೆ ಭೂಮಿ ಮತ್ತೆಲ್ಲಿಯದೋ ಎಂಬ ಅರ್ಥಕೊಡುತ್ತದೆ.  

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್

ಹೆಚ್ಚಿನ ಓದಿಗೆ:

 •  Dinkar Kulshreshtha, Jacky Ganguly, Mandar Jog Manganese and Movement Disorders: A Review. Journal of Movement Disorder. 2021;14(2):93-102 https://doi.org/10.14802/jmd.20123
 •  Mackinder, H., Hinks, A. R., Simpson, G. C., Poole, J. H. J., Gregory, J. W., Holmes, A., … de Graaff Hunter, J. (1931). Problems of the Earth’s Crust: A Discussion in Section E (Geography) of the British Association on 28 September 1931 in the Hall of the Society. The Geographical Journal, 78(5), 433. doi:10.2307/1784853 
 • The Earth’s Crust. (1959). Physics of the Earth’s Interior, 21–73. doi:10.1016/s0074-6142(08)62729-1

This Post Has 7 Comments

 1. ಮಹಾದೇವ ಹಡಪದ

  ಕಾಳಜಿಯ ಈ ಸಂಗತಿಗಳು ಹೆಚ್ಚು ಜನರನ್ನ ತಲುಪಬೇಕು. ವಿಜ್ಞಾನದ ಬಾಯಿ ಮುಚ್ಚಿಸುವ, ಆತಂಕದ ವಾತಾವರಣವನ್ನು ತಿಳಿಗೊಳಿಸುವ ಹುಸಿ ಆದರ್ಶಗಳು ಇಂದು ಹೆಚ್ಚಾಗುತ್ತಿವೆ. ನನ್ನ ವಿವೇಕವನ್ನು ಎಚ್ಚರಿಸಿದ ನಿಮಗೆ ಧನ್ಯವಾದಗಳು

  1. CPUS

   ಧನ್ಯವಾದಗಳು

   ನಮ್ಮ ವೆಬ್‌ ಪುಟವನ್ನು ಗಮನಿಸುತ್ತಿರಿ. ಇಂತಹಾ ಅನೇಕ ವೈಜ್ಞಾನಿಕ ಸಂಗತಿಗಳು ಅದರಲ್ಲಿವೆ.
   ವಂದನೆಗಳು

 2. ಡಾ.ಶಂಕರ ರಾಮಚಂದ್ರ ಕಂದಗಲ್ಲ

  ಮಣ್ಣನ್ನು ಕಡೆಗಣಿಸಿದರೆ ಮಣ್ಣು ತಿನ್ನಬೇಕಾಗುತ್ತದೆ ಎನ್ನುವುದು ನೂರಕ್ಕೆ ನೂರರಷ್ಟು ಸತ್ಯ.ಆದರೆ ವಾಸ್ತವದಲ್ಲಿ ಕಲ್ಲು,ಮಣ್ಣುತಿಂದು ನೆಲ ನುಂಗಿ ಕುಬೇರರಾದವರ ತಲೆ ಮೇಲೆ ಕಲ್ಲು ಹಾಕಿ ಮಣ್ಣು ಮಾಡುವವರು ಯಾರು? ಕಾಲವೇ ಉತ್ತರಿಸಬೇಕು.

  1. Giriprasad VK

   ಆದರೆ ತಿನ್ನಲು ಮಣ್ಣು ಕೂಡ ಸಿಗಲಿಕ್ಕಿಲ್ಲ ಸರ್…😊😢

 3. Gururaj

  ಅತ್ಯಂತ ಪ್ರಸ್ತುತ ವಿಷಯ. ನಾವು ಮಕ್ಕಳಿಗೆ ಪಾಠ ಮಾಡುತ್ತೇವೆ ಅಷ್ಟೇ. ಆದರೇ ಹೇಳುವ ವಿಚಾರವನ್ನೇ ಹೇಳುವುದಿಲ್ಲ. ಕಾರಣ ನಮಗೆ ತಿಳಿದಿಲ್ಲ. ಅಲ್ಲಾ ತಿಳಿಯುವ ಪ್ರಯತ್ನವನ್ನೇ ಮಾಡುವುದಿಲ್ಲ. ನಮ್ಮ ನೆಲದ ಬಗ್ಗೆ ಅರಿಯಬೇಕು ಅರಿತು ಜಾಗೃತಿ ಮೂಡಿಸುವ ಜವಾಬ್ದಾರಿಯುತ ಕಾರ್ಯ ನಮ್ಮದಾದರೂ ಈ ನುಂಗು ಬಾಕುವವರ ಮುಂದೆ ಇರುವೆ ಯ ಕಾರ್ಯವಾದರೂ ಘಟಿಸಬೇಕಾಗಿದೆ ನಾವು‌. ಧನ್ಯವಾದಗಳು. ನಾನು ನಿಮ್ಮನ್ನು ಸಂಪರ್ಕಿಸಬಹುದೇ..

  ಗುರುರಾಜ ನಾಟಕ ಶಿಕ್ಷಕರು
  ಸರಕಾರಿ ಪ್ರೌಢಶಾಲೆ, ಜಹಗೀರಗುಡದೂರ
  ಕುಷ್ಟಗಿ
  9480607153

  1. CPUS

   ಧನ್ಯವಾದಗಳು
   ಸಂಪರ್ಕಿಸಿ
   94482 68548
   ಡಾ. ಚನ್ನೇಶ್‌

 4. Giriprasad VK

  👌❤️🙏
  ಅರಿವು ಮೂಡಿಸಿ ಎಚ್ಚರಿಸಲು ಈ ರೀತಿಯ ಪ್ರಯತ್ನಗಳು ಬಲು ಮುಖ್ಯ, ಡಾ ಚನ್ನೇಶ್…

  ಆದರೆ Sadhguru ಜಗ್ಗಿ ವಾಸುದೇವ್ ಹೇಳುವ ವಿಚಾರಗಳು ಸಹ ಮನ ನಾಟುತ್ತವೆ…😊

Leave a Reply