ಯಾರು ಹಿತವರು ನಿನಗೆ ಈ ಮೂವರೊಳಗೆ – ನಾರಿಯೋ, ಧಾರುಣಿಯೋ, ಬಲು ಧನದ ಸಿರಿಯೋ… ಎಂದು ಪುರಂದರದಾಸರು ಪ್ರಶ್ನೆಯಾಗಿಸಿ ವಿಶ್ಲೇಷಿಸಿದ್ದಾರೆ. ವಿಜ್ಞಾನದ ಅಧ್ಯಯನಗಳು ಚಹಾ, ಕಾಫೀ ಹಾಗೂ ಆಲ್ಕೊಹಾಲ್ ಈ ಮೂರೂ ಸೇವನೆಯ ಹಿತವನ್ನು ಏಕೆ ಎಂದು ಪ್ರಶ್ನಿಸಿ ಸಂಶೋಧಿಸಿವೆ. ದಿನದ ಬೆಳಗು ಆರಂಭವಾಗುವ ಜೊತೆಗೆ, ಅಲ್ಲದೆ ಹಾಗೆಯೇ ಬೆಳಗು ಮುಸುಕಾಗಿ ಕಪ್ಪಾಗುವ ತನಕವೂ ಒಂದಿಲ್ಲೊಂದು ಶಿಷ್ಟಾಚಾರದ ಪೇಯವನ್ನು ಆಪ್ತವಾಗಿಸಿಕೊಂಡ ಮಾನವ ಸಂಕುಲವು ಶತಮಾನಗಳ ಇತಿಹಾಸವನ್ನು ಸವೆಸಿದೆ. ಅಷ್ಟಲ್ಲದೆ ಜೊತೆಗೆ ಒಂದೊಂದಕ್ಕೂ ಅಷ್ಟೇ ಉದ್ದವಾದ, ಭಿನ್ನವಾದ ಸಾಂಸ್ಕೃತಿಕ ಸಂಗತಿಗಳನ್ನೂ ಒಟ್ಟು ಮಾಡಿವೆ.
ಜಗತ್ತಿನ ಬಹುಪಾಲು ಜನ ಸಮುದಾಯವು ಮುಂಜಾನೆಯ ಕಾಫಿಗೋ, ಚಹಾಕ್ಕೋ ಒಗ್ಗಿಕೊಂಡುದ್ದಲ್ಲದೆ ಸಂಜೆಯವರೆಗೂ ಒಂದಿಲ್ಲೊಂದು ಬಗೆಯಲ್ಲಿ ಮತ್ತೆ ಅವೇ ಪೇಯಗಳನ್ನೂ ಹೀರುತ್ತಾ ಚರ್ಚೆಗಳನ್ನು ಆರ್ಧ್ರವಾಗಿಸುತ್ತೇವೆ. ಸಾಲದಕ್ಕೆ ಚಟವಾಗಿಸಿಕೊಂಡ ಈ ಪೇಯಗಳ ಪಾಲಿಗೆ ಆಲ್ಕೊಹಾಲೂ ಸೇರಿ ನಮ್ಮ ರಕ್ತ ನಾಳಗಳಲ್ಲಿ ಹರಿದಾಡಿ ಮತ್ತೇರಿಸುವಲ್ಲಿಯೂ ಸಫಲವಾಗಿವೆ. ಇಷ್ಟೇ ಆಗಿದ್ದಲ್ಲಿ ಅವೆಲ್ಲವನ್ನೂ ಹೀಗೆ ಒಂದಾಗಿಸಿ ಹಿತವಾದವರು ಯಾರು? ಯಾವ ಕಾರಣಕ್ಕಾಗಿ ಹಿತ ಎಂಬಲ್ಲಾ ಕುತೂಹಲಕರವಾದ ಚರ್ಚೆಗಳಿರುತ್ತಿರಲಿಲ್ಲ. ಮೂಲತಃ ಕಾಫಿಯಾಗಲಿ, ಚಹಾವಾಗಲಿ ಅಥವಾ ಆಲ್ಕೊಹಾಲೇ ಆಗಲಿ ಕಹಿಯನ್ನು ರುಚಿಯಲ್ಲೂ ಇಟ್ಟುಕೊಂಡೇ ಹಿತವಾಗಿರುವ ಬಗ್ಗೆ ವಿಜ್ಞಾನಕ್ಕೆ ಕುತೂಹಲ. ಅಷ್ಟೇ ಅಲ್ಲದೆ, ಹಿತವಾದ ಮೇಲೂ ಅಹಿತಕರವಾದ ಸಂಗತಿಗಳೂ ವಿಜ್ಞಾನದಲ್ಲಿ ಜನಜನಿತ. ಈ ಹಿನ್ನೆಲೆಯಲ್ಲಿ ಸಾಂಸ್ಕೃತಿಕವಾಗಿ, ಭೌಗೋಳಿಕವಾಗಿ, ವಿವಿಧ ಜನಾಂಗದ ಭಿನ್ನ ಭಿನ್ನವಾದ ಸಂಗತಿಗಳನ್ನು ವಿಜ್ಞಾನದ ಕುತೂಹಲದ ವಿಶ್ಲೇಷಣೆಯಲ್ಲಿ ನೋಡೋಣ.
ಕಾಫಿ ಅಥವಾ ಚಹಾ/ಟೀ.. ಯಾವುದು?
ಜಗತ್ತಿನ ಬಹುಪಾಲು ಜನರ ಮುಂಜಾವು ಆರಂಭವಾಗುದೇ ಬಿಸಿಯಾದ, ಹಬೆಯಾಡುವ ಕಾಫಿ ಅಥವಾ ಚಹಾದಿಂದ. ನಮ್ಮಲ್ಲಂತೂ ಮನೆಗೆ ಬಂದವರಿಗೆ ಕಾಫಿ ಅಥವಾ ಚಹಾ ಎಂದು ಪ್ರಶ್ನಿಸುವುದೂ ಸಹಜವೇ! ಅಂದರೆ ಯಾವುದಾದರೂ ಒಂದನ್ನಾದರೂ ಕುಡಿದೇ ಕುಡಿಯುವರು ಎಂಬ ನಂಬಿಕೆಯ ಮೇಲೆ ಹಾಗೆ ಕೇಳುತ್ತೇವೆ. ಎರಡನ್ನೂ ಬಯಸದಿರುವವರು ಅಪರೂಪದ ಲೆಕ್ಕಕ್ಕೆ ಸೇರಿಸಿ, ಸದ್ಯಕ್ಕೆ ಬಿಟ್ಟು ಬಿಡೋಣ. ಬಯಸುವವರೂ ಅದು ಏಕೆ? ಎಂಬುದರ ತನಿಖೆಗಳ ಸಂಗತಿಗಳನ್ನು ಆಸ್ವಾದಿಸುವ.
ಚಹಾ ಅಥವಾ ಟೀ ಎಂದೇ ಜನಪ್ರಿಯವಾದ ಈ ಪೇಯವು ಜಗತ್ತಿನಲ್ಲಿ ನೀರನ್ನು ಹೊರತುಪಡಿಸಿದರೆ ಅತೀ ಹೆಚ್ಚು ಬಳಕೆಯಾಗುವ ದ್ರವ. ಚಹಾ ಸರಿಯೋ ಅಥವಾ ಟೀ ಎಂದೇಕೆ ಕರೆದರು ಎಂಬುದರಿಂದ ಕುತೂಹಲಗಳ ಚರ್ಚೆಯು ಇತಿಹಾಸದ ಭಾಗವಾಗಿವೆ. ಮೂಲತಃ ಚಹಾ ಅಥವಾ ಟೀಯು ಜಾಗತಿಕವಾಗಿ ಪರಿಚಯಗೊಂಡದ್ದೇ ವ್ಯಾಪಾರಿ ಹಿನ್ನಲೆಯಿಂದ. ಚೀನಾಕ್ಕೆ ಸೀಮಿತವಾಗಿದ್ದ ಇದರ ಉತ್ಪಾದನೆಯನ್ನು ಅರಿಯಲೆಂದೇ ಈಸ್ಟ್ ಇಂಡಿಯಾ ಕಂಪನಿಯು ರಾಬರ್ಟ್ ಫಾರ್ಚೂನ್ ಎಂಬವರನ್ನು ಕಳ್ಳತನದಲ್ಲಿ ಕಳಿಸಿತ್ತು. ಆತನಿಂದ ಅದರ ತಿಳಿವು, ಸಂಸ್ಕರಣಾ ವಿಧಾನಗಳು ಕೇವಲ 20 ಚಹಾ ಸಸಿಗಳ ಮೂಲಕ ಮೊದಲು ಡಾರ್ಜಲಿಂಗಿಗೆ ಬಂದು ನಂತರದಲ್ಲಿ ಮುಂದೆ ಅಸ್ಸಾಂ ಹಾಗೂ ದಕ್ಷಿಣದ ನೀಲಗಿರಿಗೆ ಬಂದವು. ಆದರೆ ಕಾಫಿಯು ಅರಾಬಿಕ್ ನೆಲದ ಸೂಫಿ ಹಿನ್ನಲೆಯನ್ನು ಹೊತ್ತು ಆಧ್ಯಾತ್ಮಿಕ ಮೆರುಗನ್ನು ತನ್ನೊಳಗಿಟ್ಟುಕೊಂಡೂ ಅಮೆರಿಕೆಯನ್ನು ತಲುಪಿ ವಹಿವಾಟಿನಿಂದಲೂ ಜನಜನಿತವಾಗಿದೆ. ಬ್ರೆಜಿಲ್ ಅನ್ನು ಕಾಫಿಯ ಸಾಮ್ರಾಜ್ಯವಾಗಿಸುವಲ್ಲಿ ದೊಡ್ಡ ಹೋರಾಟಗಳನ್ನೇ ಹುಟ್ಟುಹಾಕಿದೆ. ಚಹಾ ಅಥವಾ ಟೀ ಎಂಬ ಪದಗಳಿಂದ ಹೆಸರಿಸುವಲ್ಲಿ ಈ ಪೇಯವು ಸಾಗಿದ ಬಗೆಯನ್ನು ಅನುಸರಿದೆ. ಟೀ (TEA) ಯು ಸಮುದ್ರ(SEA)ದ ಮೂಲಕ ಸಾಗಿದ್ದನ್ನು ಅನುಸರಿಸಿದರೆ ಚಾಯ್ ಅಥವಾ ಚಹಾ ನೆಲ (LAND)ದ ಮೂಲಕ ಸಾಗಿದ್ದನ್ನು ಅವಲಂಬಿಸಿದೆ.
ಕಾಫಿ ಅಥವಾ ಚಹಾ ಎರಡನ್ನೂ ಮೂಲತಃ ಆಸ್ವಾದಿಸುವುದು ಅವುಗಳಲ್ಲಿನ ಕಹಿ ಅಥವಾ ಹಿತವಲ್ಲದ ರುಚಿಯಿಂದಲೇ! ಸಹಜವಾಗಿ ಎರಡರಲ್ಲೂ ಲಾಭದಾಯಕವಾದ ಹಾಗೂ ಅಪಾಯಕಾರಿಯಾದ ಗುಣಗಳೆರಡನ್ನೂ ಹೊತ್ತುಕೊಂಡಿವೆ. ಕೆಲವರು ಹೆಚ್ಚು ಕುಡಿಯುವವರದಾರೆ ಕೆಲವು ಕಡಿಮೆ ಬಯಸುತ್ತಾರೆ. ಕೆಲವರಂತೂ ಹತ್ತಾರು ಬಾರಿ ಆಸ್ವಾದಿಸುತ್ತಾರೆ. ಕೆಫೀನ್ ಅನ್ನು ಚಯಾಪಚಯದಿಂದ ಜೀರ್ಣಿಸಿಕೊಳ್ಳುವಲ್ಲಿ ವೈಯಕ್ತಿಕವಾದ ವ್ಯತ್ಯಾಸಗಳನ್ನು ಕಾಣುತ್ತೇವೆ ಆದರೆ ರುಚಿಯ ಆಸ್ವಾದನೆಯ ವಿವಿಧತೆಗೆ ಕಾರಣಗಳು ಅಷ್ಟು ಸರಳವಾಗಿಲ್ಲ. ಎರಡೂ ಪೇಯಗಳೂ ತಮ್ಮೊಳಗಿನ ಕಹಿ ಅಥವಾ ಅಹಿತಕರವಾದ ಸ್ವಾದವನ್ನೇ ಒಪ್ಪಿಸುವಂತೆ ಮಾನವಕುಲವನ್ನು ಪ್ರೇರೇಪಿಸಿವೆ ಎಂದು ಇವುಗಳನ್ನು ತುಲನಾತ್ಮಕವಾಗಿ ಅಧ್ಯಯನ ಮಾಡಿರುವ ಸಂಶೋಧಕರು ಅಭಿಪ್ರಾಯ ಪಡುತ್ತಾರೆ. ಹಾಗಾಗಿ ಕಹಿಯನ್ನು ಒಪ್ಪಿರುವ ಮಾನಸಿಕ ಸಿದ್ಧತೆಯನ್ನು ನಮ್ಮೊಳಗಿನ ಜೀನುಗಳು ರೂಪಿಸುತ್ತವೆಯಂತೆ. ಹಾಗಾಗಿ ಕಾಫಿಯನ್ನಾಗಲಿ ಚಹಾವನ್ನಾಗಲಿ ಆನಂದಿಸುವ ಜೊತೆಗೆ ಹೆಚ್ಚು ಹೆಚ್ಚು ಬಯಸುವ ವಿವಿಧತೆಯನ್ನು ರೂಪಿಸಿವೆಯಂತೆ.
ಹಾಗಾಗಿ ಯಾರು ಕೆಫೀನ್ ರಾಸಾಯನಿಕಕ್ಕೆ ಹೆಚ್ಚು ಸೂಕ್ಷ್ಮಗ್ರಾಹಿಗಳಾಗಿರುತ್ತಾರೋ ಅವರು ಹೆಚ್ಚು ಕಾಫಿ ಪ್ರಿಯರಂತೆ! ಅವರಲ್ಲಿನ ಕೆಫೀನ್ ಗುರುತಿಸಿವ ಜೀನುಗಳೂ ಹೆಚ್ಚು ಚಟುವಟಿಕೆಯಿಂದಿರುವ ಬಗ್ಗೆ ಅರಿಯಲಾಗಿದೆ. ಆದರೆ ಚಹಾ ಪ್ರಿಯರು ಕೆಫೀನಿನ ಕಹಿಯಾದ ರುಚಿಗೆ ತುಸು ಕಡಿಮೆ ಸೂಕ್ಷ್ಮತೆಯನ್ನು ಹೊಂದಿರುತ್ತಾರೆ. ಅವರಲ್ಲಿನ ಜೀನುಗಳು ಕೆಫೀನ್ ಅಲ್ಲದ ಇತರೇ ರಾಸಾಯನಿಕಗಳಿಗೆ ಹೆಚ್ಚು ಸೂಕ್ಷ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತವೆಯಂತೆ. ಈ ಎಲ್ಲಾ ವಿವರಗಳೂ ಆಸ್ಟ್ರೇಲಿಯಾ, ಯೂರೋಪು, ಹಾಗೂ ಅಮೆರಿಕದ ಸುಮಾರು 4 ಲಕ್ಷಕ್ಕೂ ಹೆಚ್ಚು ಜನರನ್ನು ಒಳಗೊಂಡ ಅಧ್ಯಯನಗಳಿಂದ ವಿವಿಧ ಸಂಸ್ಕೃತಿಗಳ ಚಹಾ ಅಥವಾ ಕಾಫಿಯ ಬಯಕೆಗಳ ಮಾಹಿತಿಯನ್ನು ಕಲೆಹಾಕಲಾಗಿದೆ. ಒಟ್ಟಾರೆ ನಾವು ಕಹಿಯನ್ನು ಆಸ್ವಾದಿಸುವ ಗುಣವೇ ಕಾಫಿ ಅಥವಾ ಚಹಾದ ಬಯಕೆಯನ್ನೂ ಒಳಗೊಂಡಿದೆ. ಆದರೆ ವ್ಯಾವಹಾರಿಕ ವಹಿವಾಟು ಮಾತ್ರ ಸಿಹಿ ಬೆರೆಸಿ ಸಕ್ಕರೆಯನ್ನೂ ಜಗತ್ತಿನಾದ್ಯಂತ ಬೇರೊಂದು ಬಯಕೆಯ ಜೊತೆಗೆ ಸಂಕಟಗಳನ್ನೂ ಹರಡಿದೆ. ಹಾಗಾಗಿ ಕಾಫಿನೋ ಅಥವಾ ಚಹಾನೋ ಎಂಬುದಕ್ಕೆ ಉತ್ತರ ನಾಲಿಗೆಯ ಮೇಲಿಲ್ಲ, ನಿಮ್ಮೊಳಗಿನ ಜೀನುಗಳಲ್ಲಿದೆ.
ಹಾಗಾದರೆ ಆಲ್ಕೊಹಾಲೂ….!
ಸಾಂಸ್ಕೃತಿಕವಾಗಿ ತುಸು ಸೂಕ್ಷ್ಮವಾದ ಆಲ್ಕೊಹಾಲಿನ ಬಗ್ಗೆ ಬೇರೊಂದು ಬಗೆಯ ಪ್ರಶ್ನೆಗಳಿಂದ ಅಧ್ಯಯನಗಳನ್ನು ನೋಡೋಣ. ಸಹಜವಾಗಿ ಆಲ್ಕೊಹಾಲಿನಲ್ಲಿ ಹಾಲಿದ್ದರೂ ಅದು ಬಿಳಿಯ ಸ್ಚಚ್ಛ ಸ್ವಾಸ್ಥವನ್ನು ಹೆಗ್ಗಳಿಕೆಯಾಗಿ ಪಡೆದದ್ದಲ್ಲ. ಅದು ಆವರಿಸಿರುವ ಭಿನ್ನ ಮಾರ್ಗದಿಂದಲೂ ಅದರ ಇತಿಹಾಸವು ಭಿನ್ನವಾಗಿದೆ. ಆಲ್ಕೊಹಾಲ್ ಅಥವಾ ಎಥೆನಾಲ್ ಅನ್ನು ಆಗಾಗ್ಗೆ ಆನಂದಿಸುವ ಗುಣವನ್ನು ನಾವು ನಮ್ಮ ಪೂರ್ವಜರಿಂದ ಪಡೆದಿದ್ದೇವೆ ಎಂದು ನಂಬಲಾಗಿದೆ. ನಮ್ಮ ಪೂರ್ವಿಕರಾದ ಚಿಂಪಾಂಜಿ ಮತ್ತಿತರ ವಾನರ ಕುಲದ ಪ್ರಾಣಿಗಳು ಸಹಜವಾಗಿ ಸ್ವಾದಭರಿತ ಹಣ್ಣುಗಳನ್ನೇ ಆಯ್ಕೆ ಮಾಡಿಕೊಂಡರೂ ಆಗಾಗ್ಗೆ ಚೆನ್ನಾಗಿ ಮಾಗಿದ ಹಾಗೂ ಅರೆಕೊಳೆತ ಹಣ್ಣುಗಳನ್ನೂ ತಿನ್ನುತ್ತವೆ. ಅಂತಹಾ ಹಣ್ಣುಗಳಲ್ಲಿನ ಎಥೆನಾಲ್ ಅಂಶವು ಆಯ್ಕೆಯಲ್ಲಿ ಪ್ರಭಾವಿಸುವ ಬಗ್ಗೆ ಸಂಶೋಧಕರು ಅಭಿಪ್ರಾಯ ಪಡುತ್ತಾರೆ. ಹಾಗಾಗಿ ನಾವು ವೈನ್, ವಿಸ್ಕಿಯ ಭಟ್ಟಿ ಇಳಿಸುವಿಕೆಯಾಚೆಯೂ ಆಲ್ಕೊಹಾಲಿನ ರುಚಿಯನ್ನು ಮೂಲದಲ್ಲೆಲ್ಲೋ ಆಯ್ಕೆ ಮಾಡಿದ್ದೇವೆಯೇ ಎಂದು ಅಧ್ಯಯನ ಮಾಡಿದ್ದಾರೆ.
ಆಲ್ಕೊಹಾಲ್ ಅನ್ನು ವಿಭಜಿಸಿ ಜೀರ್ಣವಾಗಿಸಬಲ್ಲ ಎಂಜೈಮುಗಳನ್ನು ಪತ್ತೆ ಹಚ್ಚಿ ಅವುಗಳನ್ನು ADH4 ಗುಂಪುಗಳೆಂದು ವರ್ಗೀಕರಿಸಿದ್ದಾರೆ. ಈ ಎಂಜೈಮುಗಳು ನಮ್ಮ ನಾಲಿಗೆ, ಗಂಟಲು ಹಾಗೂ ಜಠರಗಳಲ್ಲಿವೆ. ನಾಲಿಗೆಯಿಂದ ಜಠರ ಸೇರುವವರೆಗೂ ಗುಟುಕರಿಸುವ ರುಚಿಯನ್ನೂ ಅವೆಲ್ಲವೂ ಸಂಧಿಸುತ್ತವೆಯೋ ಹೇಗೆ ಎಂಬುದು ಅರ್ಥವಾಗದ ಸಂಗತಿಯೇ ಬಿಡಿ. ADH4 ಎಂಜೈಮುಗಳ ಗುಂಪುಗಳನ್ನು ನಿರ್ಮಿಸುವ ಜೀನುಗಳನ್ನೂ ADH4 ಜೀನುಗಳೆಂದೇ ಕರೆಯಲಾಗಿದೆ. ಈ ADH4 ಜೀನುಗಳನ್ನು 24 ಸಸ್ತನಿಗಳಲ್ಲಿ 18 ವಾನರ ಗುಂಪುಗಳಲ್ಲಿ ಪತ್ತೆ ಹಚ್ಚಲಾಗಿದ್ದು, ಈ ಆಲ್ಕೊಹಾಲಿನ ವಿಭಜಿಸುವ ಮೂಲವನ್ನೂ ಮಾನವನ ಹಿಂದಿನ ಆಸಕ್ತಿಯ ನೆಲೆಯಾಗಿಯೂ ಗುರುತಿಸಲಾಗುತ್ತಿದೆ. ವಾನರಗಳೇನೂ ದಿನವೂ ತುಂಬಾ ಮಾಗಿ ಅರೆಕೊಳೆತ ಹಣ್ಣುನ್ನು ಆರಿಸುವುದಿಲ್ಲ!
ಆಸಕ್ತಿಯ ಆಯ್ಕೆ ಪ್ರಶ್ನೆ ಹಾಗಿರಲಿ, ಆಲ್ಕೊಹಾಲಿನ ಬಯಕೆಯ ತೀವ್ರತೆಯು ಅದೆಷ್ಟು ಹೆಚ್ಚುತ್ತಿದೆ ಎಂದರೆ, 1990 ಮತ್ತು 2016ರ ನಡುವೆ ಬಳಕೆಯು ಪ್ರತಿಶತ 70ರಷ್ಟು ಹೆಚ್ಚಿದೆ. ಮಾನವನ ಸಾವು ಮತ್ತು ರೋಗಗಳ ಕುರಿತ ಆರೋಗ್ಯದ ರಿಸ್ಕ್ ಫ್ಯಾಕ್ಟರ್‌ಗಳಲ್ಲಿ ಆಲ್ಕೊಹಾಲ್ ಏಳನೆಯ ಸ್ಥಾನವನ್ನು ಪಡೆದಿತ್ತು. ಸ್ತ್ರೀಯರಲ್ಲಿ ಪ್ರತಿಶತ 2.2ರಷ್ಟು ಸಾವು ಹಾಗೂ ಪುರುಷರಲ್ಲಿ ಪ್ರತಿಶತ 6.8ರಷ್ಟು ಸಾವುಗಳು ಆಲ್ಕೊಹಾಲ್‌ನ ಪ್ರಭಾವಕ್ಕೆ ಒಳಗಾಗಿವೆ ಎಂಬ ಸಾಬೀತುಗಳನ್ನು ಜಾಗತಿಕ ಅಧ್ಯಯನಗಳು ನೀಡಿವೆ. ಜಾಗತಿಕವಾಗಿ 1990 ಮತ್ತು 2016ರ ನಡುವೆ ಆಲ್ಕೊಹಾಲಿನ ಬಳಕೆ ಮತ್ತು ಆರೋಗ್ಯದ ಪರಿಣಾಮಗಳ ಅಧ್ಯಯನವನ್ನು (Global Burden of Diseases, Injuries, and Risk Factors Study- GBD) ಸುಮಾರು 195 ರಾಷ್ಟ್ರಗಳಲ್ಲಿ ನಡೆಸಲಾಯಿತು. ಅದರ ಪ್ರಮುಖ ಸಾರವನ್ನು ವಿವಿಧ ಸಂಶೋಧನಾ ವಿವರಗಳೊಂದಿಗೆ ವಿಖ್ಯಾತ ವೈದ್ಯಕೀಯ ಪತ್ರಿಕೆ “ದ ಲ್ಯಾನ್‌ಸೆಟ್– The Lancet” ಯಾವುದೇ ಪ್ರಮಾಣದಲ್ಲೂ ಆಲ್ಕೊಹಾಲ್ ಸೇವನೆಯು ಆರೋಗ್ಯವನ್ನು ವೃದ್ಧಿ ಮಾಡುವುದಿಲ್ಲ (No Level of Alcohol Consumption Improves Health) ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿತು. ಈಗಲೂ ಆಲ್ಕೊಹಾಲ್ ಪ್ರಮಾಣ ಹಾಗೂ ಆರೊಗ್ಯ ವೃದ್ಧಿಯ ಬಗ್ಗೆ ಅಪಾರ ಪ್ರಮಾಣದ ಮಾಹಿತಿಯು ಸಿಗುತ್ತಲೇ ಇದೆ. ಇದು ಪ್ರಕಟವಾದಾದ್ದು 2018ರ ಆಗಸ್ಟ್ ನಲ್ಲಿ! ಈಗ ಕೊರೊನಾ ವ್ಯಾಕ್ಸೀನ್ ಪಡೆಯಲೂ ಆಲ್ಕೊಹಾಲ್ ಬಳಕೆಯ ಚರ್ಚೆಯು ಜೋರಾಗಿಯೇ ನಡೆಯುತ್ತಿದೆ.
ಇದರ ಪ್ರಮುಖ ಪರಿಣಾಮಗಳನ್ನು ವಿವರವಾಗಿ ಬರೆಯುವುದು ಇಲ್ಲಿ ಸಾಧುವೂ ಅಲ್ಲ. ಯಾವ ಪ್ರಮಾನವೂ ಸಾಧುವಲ್ಲ ಎಂದು ಲ್ಯಾನ್‌ಸೆಟ್ ಪ್ರಕಟಿಸಿದ ಮೇಲೆ ಅದರ ಚರ್ಚೆಯೇ ಅಗತ್ಯವಿಲ್ಲ. ಜಾಗತಿಕವಾದ ನಕ್ಷೆಗಳಲ್ಲಿ ಗಂಡಸರು ಮತ್ತು ಮಹಿಳೆಯರಲ್ಲಿ ಆಲ್ಕೊಹಾಲ್ ಬಳಕೆಯು ಹೆಚ್ಚುತ್ತಿರುವ ವಿವರಗಳನ್ನು ನೋಡಬಹುದು.
ಅದೇನು ಮಹಿಳೆಯರ ಬಗೆಗೆ ನಿಷೇಧ ವಿಶೇಷ ಏಕೆಂದರೆ, ಮಹಿಳೆಯರ ದೇಹವು ಪುರುಷರ ದೇಹದಂತೆ ಹೆಚ್ಚು ಆಲ್ಕೊಹಾಲ್ ಅನ್ನು ಸಹಿಸುವುದಿಲ್ಲ! ಅವರ ದೇಹವು ಹೆಚ್ಚು ಕೊಬ್ಬು ಮತ್ತು ನೀರಿನ ಅನುಪಾತವನ್ನು ಹೊಂದಿರುತ್ತದೆ. ಹಾಗಾಗಿ ಅವರ ದೇಹದಲ್ಲಿ ಕಡಿಮೆ ನೀರು ಇರುವುದರಿಂದ, ಆಲ್ಕೋಹಾಲ್ ಹೆಚ್ಚು ಸಾದ್ರವಾಗಿ ಕೇಂದ್ರೀಕೃತವಾಗಿರುತ್ತದೆ. ಅದೂ ಅಲ್ಲದೆ ಅವರು ಪುರುಷರಿಗಿಂತ ಸಣ್ಣ ಯಕೃತ್ತನ್ನು ಸಹ ಹೊಂದಿದ್ದಾರೆ, ಇದರಿಂದಾಗಿ ಆಲ್ಕೊಹಾಲ್ ಅನ್ನು ಸುರಕ್ಷಿತವಾಗಿ ಸಂಸ್ಕರಿಸಲು ಅವರ ದೇಹಕ್ಕೆ ಕಷ್ಟವಾಗುತ್ತದೆ
ಇನ್ನೇನಿದ್ದರೂ ನಿಮ್ಮಿಷ್ಟ! ಇಲ್ಲಿನ ಟಿಪ್ಪಣಿಯು ಯಾವುದೇ ತೀರ್ಮಾನವನ್ನೇನೂ ಕೊಡುತ್ತಿಲ್ಲ. ಇರುವುದನ್ನು ಹೀಗೆ ಎಂದಷ್ಟೇ ಹೇಳಬಹುದು. 2018ರವರೆಗೂ ಆಲ್ಕೊಹಾಲ್ ಸಣ್ಣ ಪ್ರಮಾಣದಲ್ಲಿ ಆರೋಗ್ಯಕರ ಎಂದೇ ವರದಿಗಳೂ, ವೈದ್ಯಕೀಯ ಪುಸ್ತಕಗಳೂ ದಾಖಲಿಸುತ್ತಿದ್ದವು. ಈಗಲೂ ಹಾಗೆ ಇದ್ದರೆ ಅಚ್ಚರಿ ಏನಿಲ್ಲ. ಬೇಕೋ -ಬೇಡವೋ ಎನ್ನುವುದು ನಿಮ್ಮ ಕೈಯಲ್ಲೇ ಇದೆ.
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್
ಹೆಚ್ಚಿನ ಓದಿಗೆ:
Cornelis, M. C., Tordoff, M. G., El-Sohemy, A. & van Dam, R. M. Recalled taste intensity, liking and habitual intake of commonly consumed foods. Appetite 109, 182–189 (2017).
Jue-Sheng Ong., et al. Understanding the role of bitter taste perception in coffee, tea and alcohol consumption through Mendelian randomization. Nature Scientific Reports (2018) 8:16414 DOI:10.1038/s41598-018-34713-z
Lee, Y., Son, J., Jang, J. & Park, K. Coffee and metabolic syndrome: A systematic review and meta-analysis. Journal of Nutrition and Health 49, 213–222 (2016).
Robyn Burton, Nick Sheron. No level of alcohol consumption improves health. The Lancet August 23, 2018 http://dx.doi.org/10.1016/S0140-6736(18)31571-X
Zakhari, S. Overview: how is alcohol metabolized by the body? Alcohol Res. Health 29, 245–254 (2006)