ಮನೆಗೆ ತಂದ ಸೌತೆಕಾಯಿಯಲ್ಲೋ ಅಥವಾ ಹೀರೆಕಾಯಿಯಲ್ಲೂ ಇದ್ದಕ್ಕಿದ್ದಂತೆ ಯಾವುದಾದರೂ ಒಂದು ತುಸು ಕಹಿ ಇರುವುದನ್ನು ಗಮನಿಸಿರುತ್ತೀರಿ!. ಪ್ರತೀ ಸಾರಿ ಹೆಚ್ಚಿ ಅಡುಗೆಗೆ ಅಣಿಮಾಡುವಾಗ ತುದಿಯನ್ನು ಉಜ್ಜು ನೋಡಿ, ಅಥವಾ ಸ್ವಲ್ಪ ರುಚಿ ನೋಡಿಯೂ ಮುಂದೆ ಹೆಚ್ಚಲು ತೊಡಗುವುದೂ ಸಾಮಾನ್ಯವೆ! (ಉಜ್ಜಿ ರಸತೆಗೆಯುವುದರಿಂದ ಏನೂ ಕಹಿ ಹೋಗುವುದಿಲ್ಲ) ಏಕೆ ಹೀಗೆ, ಯಾವುದಾದರೂ ಕಹಿಯಾಗಿ ಇರುವುದಾದರೂ ಯಾಕೆ? ಅದು ಬಿಡಿ ಇವುಗಳ ಸಂಬಂಧಿಯೇ ಆದ ಹಾಗಲ ಕಾಯಿಯಂತೂ ಕಹಿಯೇ ಅದರ ರುಚಿ! ಇಷ್ಟಾದರೂ ಸಿಹಿಯಾಗಿಯೇ ಇರುವ ಕುಂಬಳ, ಸಕ್ಕರೆಯಂತೆ ರುಚಿಕಟ್ಟಾದ ಕಲ್ಲಂಗಡಿ, ಕರುಬೂಜ ಕೂಡ ಸೇರಿಕೊಂಡಿರುವುದು ಇದೇ ಕುಟುಂಬಕ್ಕೇನೇ! ಇದೇ ಕುಟುಂಬದ ಸೀಮೆ ಬದನೆಯೆಂದು ಕರೆಯುವ ಚೌ ಚೌನಲ್ಲಿ ಸಿಹಿ-ಕಹಿಗಳ ಗೋಜಲೇ ಇಲ್ಲ!

ಹೌದು, ಸೌತೆ, ಸಿಹಿ ಕುಂಬಳ, ಹಾಲುಗುಂಬಳ, ಬೂದುಗುಂಬಳ, ಹಾಗಲ, ಹೀರೆ, ಚೌಚೌ (ಸೀಮೆ ಬದನೆ), ಕರಬೂಜ, ಕಲ್ಲಂಗಡಿ, ತೊಂಡೆ ಕಾಯಿ, ಪಡವಲ, ಮುಂತಾದವುಗಳ ಸುಮಾರು ಮೂವತ್ತಕ್ಕೂ ಹೆಚ್ಚು ಬಗೆಯ ಹಣ್ಣು-ತರಕಾರಿಗಳೆಲ್ಲಾ ಕುಕುರ್ಬಿಟೇಸಿಯೇ (Cucurbitaceae) ಎನ್ನುವ ಒಂದೇ ಸಸ್ಯ ಕುಟುಂಬದವು. ಇವುಗಳನ್ನೂ ಒಳಗೊಂಡಂತೆ ಜಗತ್ತಿನಾದ್ಯಂತ ಹಬ್ಬಿರುವ ಈ ಕುಟುಂಬದ ಒಟ್ಟು ಸುಮಾರು 1000ಕ್ಕೂ ಹೆಚ್ಚು ಪ್ರಭೇದಗಳಿವೆ. ಇವುಗಳಲ್ಲಿ ಸುಮಾರು 50-60 ಪ್ರಭೇದಗಳನ್ನು ಆಹಾರಕ್ಕೆಂದು ಬಳಸಬಹುದಾಗಿದ್ದು, ಕೃಷಿಯಲ್ಲಿಯೂ ಒಂದಾಗಿವೆ. ಅವುಗಳಲ್ಲಿ 20-30 ಪ್ರಭೇದಗಳಂತೂ ತುಂಬಾನೇ ಜನಪ್ರಿಯವಾದ ಪ್ರಭೇದಗಳಾಗಿವೆ. ಅದಿರಲಿ ಇನ್ನುಳಿದವಲ್ಲಿ 700-800 ಪ್ರಭೇದಗಳು ವಿಷಕಾರಿಯಾಗಿಯೂ ಅಥವಾ ಅತ್ಯಂತ ಕಹಿಯಾದವೂ ಆಗಿವೆ.
ಅವುಗಳಲ್ಲಿನ ಕಹಿ/ವಿಷ ಎಷ್ಟು ಎಂದರೆ ಮಾನವರನ್ನೂ ಸೇರಿಕೊಂಡು, ಸಣ್ಣ ದೇಹದ ಪ್ರಾಣಿಗಳೂ ತಿಂದು ಬದುಕಲೂ ಸಾಧ್ಯವಿಲ್ಲದಷ್ಟು! ದೊಡ್ಡ ದೇಹದ ಆನೆ, ಜಿರಾಫ್ಗಳು ತಡೆದುಕೊಂಡಾವು. ಅಲ್ಲದೆ ಒಂದು ಕಾಲದಲ್ಲಿ ಭೂಮಿಯನ್ನಾವರಿಸಿದ್ದ ದೈತ್ಯ ಡೈನೋಸಾರ್ಗಳಂತೂ ಸುಲಭವಾಗಿ ತಿಂದುಂಡು ಅಲೆದಿದ್ದವು. ಒಂದು ಅಧ್ಯಯನದ ಪ್ರಕಾರ ೧೦೦೦ಕಿಗ್ರಾಂ ಅಥವಾ ಅದಕ್ಕೂ ಹೆಚ್ಚಿನ ತೂಕದ ಪ್ರಾಣಿಗಳಿಗೂ ಮತ್ತು ವಿಷಯುಕ್ತವಾದ ಕುಂಬಳಗಳಿಗೂ ಪರಸ್ಪರವಾದ ಸಹಜೀವನ (Symbiotic Relationship)ದ ಸಂಬಂಧವಿತ್ತು. ಇದನ್ನು ಡೈನೋಸಾರ್ಗಳ ಮಲದಲ್ಲಿ ದೊರಕಿದ ಬೀಜಗಳ ಪಳೆಯುಳಿಕೆಗಳ ಅಧ್ಯಯನವು ಸಾಬೀತು ಪಡಿಸಿದೆ. ಈ ವಿಷಯುಕ್ತವಾದ ಕುಂಬಳ/ಸೌತೆಗಳ ಬೀಜ ಪ್ರಸಾರಕ್ಕೂ ಡೈನೋಸಾರ್ಗಳು ಒಂದು ಕಾಲಕ್ಕೆ ಸಹಾಯವಾಗಿದ್ದು, ಅವುಗಳು ಅಳಿದ ಮೇಲೆ ಕುಂಬಳ/ಸೌತೆಗಳು ತಮ್ಮ ಉಳಿವಿಗಾಗಿ ಕೃಷಿಯಲ್ಲಿ ಬಳಸಿದ ಪ್ರಭೇದಗಳ ಜೊತೆಗೆ ಪರಿಸರದ ಕಾಲಕ್ಕೆ ದಕ್ಕದ ಎಣಿಕೆಯಂತೆ ಬದುಕು ನಡೆಸಿವೆ. ಹಾಗಿದ್ದೂ ಈಗ ಉಳಿದು ತಮ್ಮ ಇರುವಿಕೆಯ ಹೆಗ್ಗುರುತಾಗಿವೆ. ಒಟ್ಟಾರೆ ಕುಟುಂಬದ ಬದುಕಿನ ವಿಕಾಸಕ್ಕೆ ಕಹಿ/ವಿಷ ಒಂದು ಬಗೆಯ ಅವಿನಾಭಾವ ಸಂಬಂದವನ್ನು ಹೊಂದಿವೆ. ಹಾಗಾಗಿಯೇ ಒಮ್ಮೆಮ್ಮೊ ರುಚಿಯಾಗಿಯೇ ಇರಬಹುದಾದ ಸೌತೆ, ಹೀರೆಯಲ್ಲೂ ಕಹಿಯ ಛಾಯೆ ನುಸುಳುವುದುಂಟು!
ಹೀಗೆ ಕಹಿಯನ್ನು ತನ್ನೊಡಲಲ್ಲಿಟ್ಟುಕೊಂಡೇ ರುಚಿಕರವಾಗಿಯೂ ಇರುವ ಈ ಸಂಬಂಧದ ಗುಟ್ಟೇನು? ಕಹಿಯನ್ನು ಬಿಟ್ಟು ಕೊಡದಿರುವ ಜೊತೆಗೆ ಬಿಟ್ಟುಕೊಟ್ಟು ರುಚಿಕರವಾಗಿ, ಸಿಹಿಯಾಗಿಯೂ ಇರುವುದರ ಹಿನ್ನೆಲೆ ಏನು? ಇವೆಲ್ಲವೂ ಅವುಗಳ ವಿಕಾಸದ ಹಾದಿಯಲ್ಲಿ ಮಾಡಿಕೊಂಡ ಮಾರ್ಪಾಡುಗಳು. ಜೊತೆಗೆ ಕಹಿಯಾಗಿಯೂ ಇದ್ದೂ ಒಂದಷ್ಟು ಔಷಧೀಯ ಗುಣಗಳನ್ನೂ ಹೊತ್ತ ಇವುಗಳು ಸಾಗಿ ಬಂದ ಮಾರ್ಗವು ಸಸ್ಯವೈಜ್ಞಾನಿಕ ಮಹತ್ವದ್ದಾಗಿದೆ. ಗಾತ್ರದಲ್ಲಿ ಚಿಕ್ಕ ಚಿಕ್ಕ ತೊಂಡೆಕಾಯಿಗಳಿಂದ ಹಿಡಿದು ದೊಡ್ಡ ದೊಡ್ಡ ಕುಂಬಳಗಳವರೆಗೂ, ಬಣ್ಣಗಳಲ್ಲೂ ವೈವಿಧ್ಯಮಯವಾಗಿರುವ ಸುಂದರವೂ ಕುತೂಹಲವೂ ಆದ ಇವುಗಳ ಕೌಟುಂಬಿಕ ಕಥನವಿದು.

ಕುಕುರ್ಬಿಟೇಸಿಯೇ (Cucurbitaceae) ಕುಟುಂಬವು ತುಂಬಾ ಸುಂದರವಾದ ಹಾಗೂ ಆಕರ್ಷಕವಾದ ಬಳ್ಳಿಗಳ ಸಸ್ಯ ಸಾಮ್ರಾಜ್ಯ. ಹಲವಾರು ವಾರ್ಷಿಕ ಬಳ್ಳಿಗಳಾದರೆ, ಕೆಲವು ಬಹುವಾರ್ಷಿಕವಾಗಿ ಬೆಳೆಯುವಂತಹವು. ಎಲ್ಲವೂ ವೇಗವಾಗಿ ನೆಲದ ಮೇಲೋ ಅಥವಾ ತಮ್ಮ ಬಳ್ಳಿಯ ಎಳೆಯ ತುದಿಗಳ (Tendrils) ಸಹಾಯದಿಂದ ಎತ್ತರಕ್ಕೆ ಹಬ್ಬಿಯೋ ಬೆಳೆಯಬಲ್ಲವು. ಬಳ್ಳಿಗಳಾದ್ದರಿಂದ ಹಬ್ಬುವ-ಕಾಂಡವು ತುಂಬಾ ಮೃದು, ಸದಾ ಹಸಿರಾಗಿದ್ದು, ಹೆಚ್ಚಿನ ಪಾಲು ಟೊಳ್ಳಾಗಿರುತ್ತದೆ. ಬಳ್ಳಿಯ ಎಲೆಗಳ ಕಂಕುಳುಗಳಲ್ಲಿ (Nodes) ಇರುವ ಸುರುಳಿಯಾಕಾರದ ಎಳೆಗಳು (Tendrils) ಎಡ-ಬಲ, ಎರಡೂ ಕಡೆಯಲ್ಲಿ ಸುರುಳಿಗಳಾಗಿ ಹಬ್ಬಲು ಸಹಾಯ ಮಾಡುತ್ತವೆ. ಈ ಟೆಂಡ್ರಿಲ್ಗಳು ರೂಪಾಂತರಗೊಂಡ ಕಾಂಡ/ಬಳ್ಳಿಗಳು.
ಬಳ್ಳಿಯ ಮೈ ಹರಹು ಸಾಮಾನ್ಯವಾಗಿ ಸೂಕ್ಷ್ಮವಾದ ಕೂದಲಿನಂತಹಾ ಭಾಗಗಳನ್ನು ಹೊಂದಿರುತ್ತವೆ. ಇನ್ನು ಎಲೆಗಳೋ ಸರಳವಾದ ಹಾಗೂ ಎದುರು-ಬದುರಾದ ವಿನ್ಯಾಸದಿಂದ ಜೊಡಿಸಿದಂತೆ ಇರುತ್ತವಲ್ಲದೆ, ಸಾಕಷ್ಟು ದೊಡ್ಡದಾಗಿರುತ್ತವೆ. ಎಲೆಗಳ ತೊಟ್ಟು ಸಾಮಾನ್ಯವಾಗಿ ತುಸು ಉದ್ದವಾಗಿಯೇ ಇದ್ದು, ಎಲೆಗಳ ಮೇಲ್ಮೈಯ ಹರವು ಗಡುಸಾಗಿಯೂ, ರೋಮಪೂರಿತವೂ ಆಗಿರುತ್ತವೆ. ಹಾಗಾಗಿ ಕುಂಬಳ, ಸೌತೆ, ಕಲ್ಲಂಗಡಿ ಮುಂತಾದ ಈ ಕುಟುಂಬದ ಬಳ್ಳಿಗಳ ತೋಟದೊಳಗೆ ಹಾದು ಹೋಗುವಾಗ ಎಲೆಗಳ ನಮ್ಮ ಕೈ ಮೈಗೆ ತರಚಿದಂತೆ ಆಗುವುದು ಸಾಮಾನ್ಯವಾದ ಅನುಭವ.

ಹೂವುಗಳಂತೂ ತುಂಬಾ ಆಕರ್ಷಕವಾದ ಜ್ಯಾಮಿತಿಯ ನೋಟದವು, ತುಂಬಾ ತ್ರಿಜ್ಯೀಯ ಸಮ್ಮಿತಿ (Radially Symmetry) ಯನ್ನು ಹೊಂದಿದಂತಹವು. ಸಾಮಾನ್ಯವಾಗಿ ಹಳದಿ ಅಥವಾ ಬಿಳಿಯ ಬಣ್ಣದ ಗಂಡು ಹೂ ಮತ್ತು ಹೆಣ್ಣು ಹೂವುಗಳು ಬೇರೆ, ಬೇರೆಯಾಗಿದ್ದು, ಒಂದೇ ಬಳ್ಳಿಯಲ್ಲಿಯೇ ಇರುತ್ತವೆ. ಕೆಲವೊಂದು ಪ್ರಭೇದಗಳಲ್ಲಿ ಬೇರೆ, ಬೇರೇ ಬಳ್ಳಿಗಳಲ್ಲಿಯೂ ಇರುತ್ತವೆ. ಎಂಥಾ ಆಕರ್ಷಣೆ ಎಂದರೆ ಬಳ್ಳಗಳಲ್ಲಿ ಅರಳಿರುವ ಹೂವನ್ನು ನೋಡದಿರಲು ಸಾಧ್ಯವೇ ಇಲ್ಲ! ಜೊತೆಗೆ ಹೆಣ್ಣು ಹೂವುಗಳಲ್ಲಿ ಪರಾಗಸ್ಪರ್ಶಗೊಂಡು ಹೀಚು ಆರಂಭವಾದಾಗ ತುದಿಯಲ್ಲಿ ಹೂವನ್ನು ನುಂಗುವಂತೆ ಕಾಣುತ್ತಾ ಇರುತ್ತದೆ. ಕಾಯಿಯ ತುದಿಯಲ್ಲಿದು ತೀರಾ ಗೊತ್ತಾಗುವಂತೆಯೇ ಇರುವುದು. ಇಂತಹ ಹೂವುಗಳನ್ನು ಎಪಿಗೈನಸ್ (Epigynous) ಹೂವುಗಳು, ಅಂದರೆ ಹೂವಿನ ಭಾಗಗಳ ಕೆಳಗೆ ಅಂಡಾಶಯವನ್ನು ಹೊಂದಿರುವ ಹೂವುಗಳು ಎನ್ನಲಾಗುತ್ತದೆ. ಈ ಹೂವುಗಳೂ 5 ಹೂದಳಗಳು ಮತ್ತು 5 ಪುಷ್ಟಪಾತ್ರೆಯ ದಳಗಳಿಂದ ರಚಿತವಾಗಿರುತ್ತವೆ.

ಈ ಕುಟುಂಬದ ಹಣ್ಣುಗಳನ್ನು ಪೆಪೊ (Pepo) ಎಂದು ಕರೆಯಲಾಗುತ್ತದೆ. ಈ ಕಾಯಿಗಳ ಸಿಪ್ಪೆಯು ಚರ್ಮದಂತೆ ದಪ್ಪವಾಗಿದ್ದು, ಹಣ್ಣಿನ ತಿರುಳು ಮೃದುವಾಗಿರುತ್ತದೆ. ಸೌತೆಯಲ್ಲಿ ತುಸು ತೆಳ್ಳಗಿದ್ದರೆ, ಕುಂಬಳಗಳಲ್ಲಿ ತೀರಾ ದಪ್ಪನಾದ ಸಿಪ್ಪೆಯು ಇರುವುದು.
ಮೊದಲೇ ಹೇಳಿದಂತೆ ಇವುಗಳಲ್ಲಿ ಕಹಿ ಅಥವಾ ವಿಷ ಬಂದದ್ದಾದರೂ ಹೇಗೆ? ಜೊತೆಗೆ ಕೆಲವೊಮ್ಮೆ ತಿನ್ನಬಹುದಾದಂತಹ ಸೌತೆಗಳಲ್ಲಿ, ಕೆಲವೊಂದು ಕುಂಬಳಗಳಲ್ಲಿ ಸ್ವಲ್ಪ ಕಹಿಯನ್ನೂ ಇರಿಸಿಕೊಂಡಿರುವುದರ ಗುಟ್ಟೇನು? ಅಲ್ಲದೆ ರುಚಿಕರವೂ, ಸಿಹಿಯಗಿಯೂ ಇರುವುದನ್ನು ಕಲಿತದ್ದಾದರೂ ಹೇಗೆ? ಇದಕ್ಕೆಲ್ಲಾ ವಿಕಾಸದಲ್ಲಿ ಆಗಿರಬಹುದಾದ ಬದಲಾವಣೆಗಳು ಉತ್ತರ ಹೇಳುತ್ತವೆ.
ವಿಷಕಾರಿ ಅಥವಾ ಕಹಿ ಏಕೆ, ಎಂಬುದನ್ನು ಮೊದಲು ನೋಡೋಣ. ಇಡೀ ಕುಟುಂಬದ ಪ್ರಭೇದಗಳೆಲ್ಲವೂ ರಸಭರಿತವಾದ (Succulent) ಬಳ್ಳಿಗಳು! ಯಾವುದಕ್ಕೂ ದಟ್ಟವಾದ ಕಾಂಡಗಳು ಇಲ್ಲ. ಹಾಗಾಗಿ ಸುಲಭವಾಗಿ ಹಸಿರು ತಿನ್ನುವ ಪ್ರಾಣಿಗಳಿಗೆ ಆಹಾರವಾಗಿ ಸಂತಾನೋತ್ಪತ್ತಿಗೂ ಮೊದಲೇ ಬಲಿಯಾಗುತ್ತಿದ್ದವು. ಅದನ್ನು ತಪ್ಪಿಸಿಕೊಳ್ಳಲು, ಬಳ್ಳಿಯೂ ರೋಮಪೂರಿತ ಹಾಗೂ ಕಾಯಿಗಳ ಬೀಜಗಳು ಉಳಿಯಲಿ ಎಂಬ ಮಹತ್ವಾಕಾಂಕ್ಷೆಯಿಂದ ಕಹಿಯಾದ ತಿರುಳು ವಿಕಾಸವಾಗಿದೆ. ಕಾಯಿಗಳು ಕೀಟಗಳಿಂದ ರಕ್ಷಣೆಗೂ ಇದು ಸಹಾಯಕವಾಗಿದೆ. ಜೊತೆಗೆ ಈ ಕಹಿ ಗುಣಗಳಲ್ಲಿ ಅನೇಕ ಔಷಧೀಯ ಗುಣಗಳೂ ಇವೆ. ಅವುಗಳು ಆಯಾ ಪ್ರಭೇದಗಳಿಗೆ ವಿಶೇಷವಾಗಿಯೂ ಇವೆ.
ಇದೊಂದು ಬಗೆಯಲ್ಲಿ ರಕ್ಷಣೆಯ ತಂತ್ರ. ಸರಿ ಸುಮಾರು 50-60 ಪ್ರಭೇದಗಳು ಕಹಿಯನ್ನು ಕಳೆದುಕೊಂಡದ್ದಾದರೂ ಹೇಗೆ? ಅವುಗಳೂ ಒಂದಾನೊಂದು ಕಾಲದಲ್ಲಿ ಕಹಿಯನ್ನು ಹೊಂದಿದ್ದವೆ! ಅವುಗಳನ್ನು ಹುಡುಕಿ ಬಳಸುತ್ತಾ, ತುಸು ತುಸುವೇ ಒಗ್ಗಿಕೊಂಡು ತಿನ್ನುತ್ತಲೇ ಕೃಷಿಗೂ ಒಗ್ಗಿಸುತ್ತಾ ರಕ್ಷಣೆಯನ್ನು ಕೊಟ್ಟ ಕಾರಣದಿಂದ ಕಹಿಯನ್ನು ಕಡಿಮೆ ಮಾಡಿಕೊಳ್ಳುತ್ತಾ ಸಾಗಿವೆ. ಜೊತೆಗೆ ಅಂತಹಾ ಕಹಿ ಇಲ್ಲದ ಪ್ರಭೇದಗಳನ್ನೇ ಆಹಾರವಾಗಿ ಒಗ್ಗಿಸಿಕೊಂಡ ಪರಿಣಾಮವೂ ಆಗಿದೆ. ಅದರ ಜೊತೆಗೆ ಹೀಗೆ ಸಿಹಿಯಾಗಿ ಸಿಕ್ಕಂತಹವನ್ನೇ ಆಯ್ದು ಬೆಳೆಸಲು ಆರಂಭಿಸಿದ್ದರಿಂದಲೇ ಕಹಿಯನ್ನು ಹೊತ್ತ ಗುಣವೂ ಕಡಿಮೆಯಾಗುತ್ತಾ ಸಾಗಿವೆ. ಹೇಗೂ ಕೃಷಿಗೆ ಒಳಪಡಿಸಿ ಬೆಳೆಸುವುದಲ್ಲದೆ ಸಂತಾನೊತ್ಪತ್ತಿಯು ಮುಂದುವರಿಕೆಯನ್ನು ಈ ಮೂಲಕ ಒಪ್ಪಿಕೊಂಡಂತೆ ವಿಕಾಸಗೊಂಡಿವೆ.
ಇವುಗಳನ್ನು ಆಹಾರವಾಗಿ ಗುರುತಿಸಿದ್ದಾರೂ ಹೇಗೆ? ಮತ್ತು ಏಕೆ? ಸುಮಾರು 8000-10000 ವರ್ಷಗಳ ಹಿಂದೆಯೇ ಏಶಿಯಾ, ಆಫ್ರಿಕಾ ಮತ್ತು ಅಮೆರಿಕ ಖಂಡಗಳಲ್ಲೆಲ್ಲಾ ಕೆಲವೊಂದು ಆಯಾ ಜಾಗಗಳಿಗೆ ಸೀಮಿತವಾದ ಪ್ರಭೇದಗಳು ಇದ್ದವು. ಹೆಚ್ಚಾಗಿ ಇವುಗಳ ಕಾಯಿ/ಹಣ್ಣುಗಳು ಗಾತ್ರವು ದೊಡ್ಡದಾಗಿ ಇದ್ದುದರಿಂದ ಪೂರ್ವಜರು ಆಹಾರವಾಗಿ ಬಳಸಲು ಯೋಗ್ಯವೆಂದು ಆರಂಭದಲ್ಲೇ ಗುರುತಿಸಿಕೊಂಡಿದ್ದಾರೆ. ಮುಂದೆ ಮಾನವರ ಒಡನಾಟ ಪೂರ್ವ-ಪಶ್ಚಿಮವಾಗಿ ಹೆಚ್ಚಿದ ನಂತರ ಎರಡೂ ಕಡೆ ಹಂಚಿಕೊಂಡು ಆವರಿಸಿಕೊಂಡಿವೆ. ಸೀಮೆಬದನೆ, ಕೆಲವೊಂದು ಕುಂಬಳಗಳು, ನಮ್ಮ ದೇಶಕ್ಕೆ ಅಮೆರಿಕದಿಂದ ಬಂದಿವೆ. ಹೀರೆಕಾಯಿ ಮತ್ತು ಬೂದುಗುಂಬಳಗಳು ನಮ್ಮ ದೇಶದಿಂದ ಇತರೆಡೆಗೆ ಹಂಚಿ ಹೋಗಿವೆ. ಹಾಗಲಕಾಯಿಯು ಆಫ್ರಿಕಾದಿಂದ ವಿಕಾಸಗೊಂಡು ಇತರೆ ದೇಶಗಳಿಗೆ ಹಂಚಿಹೋಗಿದೆ.
ಸೌತೆಯನ್ನು ಹೋಲುವ ಹಲವಾರು ಸ್ವಾಭಾವಿಕ ಹಣ್ಣು-ಕಾಯಿಗಳಿದ್ದು, ಅಪರಿಚಿತವಾದ ಅವುಗಳನ್ನು ತಿಂದು ರುಚಿ ನೋಡುವ ಸಾಹಸಕ್ಕೆ ಹೋಗಬಾರದು. ಈ ಕಹಿ/ವಿಷ ಎನ್ನುವುದು ಅವುಗಳ ಒಡಲಲ್ಲಿ ಸ್ವಾಭಾವಿಕವಾಗಿಯೇ ಇರುವ ಗುಣ. ಈ ಆಧುನಿಕ ಬದುಕಿನಲ್ಲಿ ಎಲ್ಲೋ ಕಾಡು-ಮೇಡಿನಲ್ಲಿ ರುಚಿನೋಡುವಂತಹಾ ಸಾಧ್ಯತೆಗಳು ಕಡಿಮೆಯೇನೋ ನಿಜವೆ! ಆದರೂ ಜಾಗ್ರತೆಯಾಗಿರುವುದು ಉತ್ತಮ.
ನಾವು ಸಾಮಾನ್ಯವಾಗಿ ಬಳಸುವ ತರಕಾರಿಗಳಲ್ಲಿ ಈ ಕುಟುಂಬದ ಪ್ರಮುಖ ಪ್ರಭೇದಗಳೆಂದರೆ ಕುಕುಮಿಸ್ (Cucumis) ಸಂಕುಲದ ಸೌತೆ ಕಾಯಿ (Cucumber), ಕುಕುಮಿಸ್ ಸಟೈವಸ್ (Cucumis sativus), ಲಫ್ಫಾ (Luffa) ಸಂಕುಲದ ಹೀರೆ ಕಾಯಿ (Ridge Gourd) ಲಫ್ಫಾ ಅಕ್ಯುಟಾಂಗುಲಾ (Luffa acutangula L.) ಮತ್ತು ತುಪ್ಪದ ಹೀರೆ ಅಥವಾ ಸ್ಪಾಂಜ್ ಗಾರ್ಡ್ (sponge gourd) ಲಫ್ಫಾ ಸಿಲಿಂಡ್ರಿಕಾ (Luffa cylindrica), ಮಮಾರ್ಡಿಕಾ (Momordica) ಸಂಕುಲದ ಹಾಗಲ ಕಾಯಿ (Bitter Gourd) ಮಮಾರ್ಡಿಕಾ ಚರಂಸಿಯಾ (Momordica charantia), ಟ್ರೈಕೊಸಾಂತಸ್ (Trichosanthes) ಸಂಕುಲದ ಪಡವಲ ಕಾಯಿ (Snake Gourd) ಟ್ರೈಕೊಸಾಂತಸ್ ಕುಕುಮೆರಿಕಾ (Trichosanthes cucumerina), ಲಜೆನೆರಿಯಾ (Lagenaria) ಸಂಕುಲದ ಸೋರೆ ಕಾಯಿ (Bottle Gourd) ಲಜೆನೆರಿಯಾ ಸಿಸೆರರಿಯಾ (Lagenaria siceraria), ಬೆನೆಂಕಸಾ (Benincasa) ಸಂಕುಲದ ಬೂದುಗುಂಬಳಕಾಯಿ Wax/Ash Gourd (Benincasa hispida), ಕುಕುರ್ಬಿಟಾ (Cucurbita) ಸಂಕುಲದ ಕುಂಬಳ ಕಾಯಿ Pumpkin (Cucurbita pepo, Cucurbita maxima), ಸೆಸಿಯಂ (Sechium) ಸಂಕುಲದ ಚೌ ಚೌ, ಸೀಮೆ ಬದನೆ chow-chow, ಸೆಸಿಯಂ ಎಜುಲೇ (Sechium edule) ಮತ್ತು ಸಿಹಿಯಾ ಹಣ್ಣುಗಳಾದ ಸಿಹಿ ಮೆಲಾನ್ (Sweet Melons (Cucumis melo) ಸಿಟ್ರಾಲುಸ್ (Citrullus) ಸಂಕುಲದ ಕಲ್ಲಂಗಡಿ Watermelon (Citrullus lanatus).
ಈಗಾಗಲೆ ಸಸ್ಯಯಾನದಲ್ಲಿ ಹೀರೆ ಕಾಯಿ (https://cfpus.org/ಮೊನಚಾದ-ಹೊರ-ಮೈಯ-ಸೌತೆಯ-ಸಂಬಂ/ ) ಮತ್ತು ಸೀಮೆ ಬದನೆಯ (https://cfpus.org/ಭಾರತದಲ್ಲಿ-ಬದನೆಯಾದ-ಪರದೇಶದ/ ) ಕಥನಗಳನ್ನು ಓದಿರುತ್ತೀರಿ. ಅವುಗಳನ್ನು ಓದಲು ಕೊಟ್ಟಿರುವ ಲಿಂಕ್ ಬಳಸಿ ನೋಡಬಹುದು. ಮುಂದಿನ ದಿನಗಳಲ್ಲಿ ಇನ್ನುಳಿದ ಕೆಲವು ಪ್ರಮುಖ ಪ್ರಭೇದಗಳ ಕಥನಗಳನ್ನು ಇದೇ ವೆಬ್ ಪುಟದಲ್ಲಿ ಓದಬಹುದು. ಜೊತೆಗೆ ಆಯಾ ಪ್ರಭೇದಗಳ ಆಹಾರಾಂಶಗಳನ್ನು ಔಷಧಿಯ ಗುಣಗಳನ್ನೂ ನೋಡೋಣ.
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್
ಹೆಚ್ಚಿನ ಓದಿಗೆ
Chakravarty, H. L. (2019). Cucurbits of India and Their Role in the Development of Vegetable Crops. Biology and Utilization of the Cucurbitaceae, 325–334. doi:10.7591/9781501745447-028
Logan Kistler, et. al. 2015. Gourds and squashes (Cucurbita spp.) adapted to megafaunal extinction and ecological anachronism through domestication. PNAS.December 8, 2015, vol. 112 (49) 15107–15112
www.pnas.org/cgi/doi/10.1073/pnas.1516109112
Yalew Yiblet 2023. Overview of Cucurbitaceae Families in Biological and Abiotic Stress in Cucurbitaceace crops Ed. Haiping Wang.
https://www.intechopen.com/chapters/1136603 DOI: 10.5772/intechopen.1001306

Very informative article.Good luck 🤞👍🙏