ಪ್ರಸ್ತುತ 21ನೆಯ ಶತಮಾನದಲ್ಲಿ ಮಾನವ ಸಂಕುಲ ತತ್ತರಿಸಿದ್ದು ಪುಟ್ಟ SARS-CoV-2 ಎಂಬ ಕರೋನಾ ವೈರಾಣುವಿಗೆ. ಈಗ ಕೃತಕ ಬುದ್ಧಿಮತ್ತೆಯ (AI) ದಾಪುಗಾಲಿನ ಸಂದರ್ಭದಲ್ಲಿ ಕರೋನಾಕ್ಕೂ ಮೊದಲು ಮತ್ತು ಕರೋನಾ ನಂತರ (Before Covid and After Covid) ಎನ್ನುವ ಕಾಲದ ವಿಭಜನೆಗಳ ಮಾತಿನಲ್ಲಿ ಸಾಮಾನ್ಯವಾಗಿವೆ. ಅಂದರೆ ಅದೊಂದು ಬಂತು, ಕೆಲವರು ಜೀವ ಕಳೆದುಕೊಂಡರು! ಕೆಲವರು ಕಷ್ಟ ಪಟ್ಟು ಬದುಕಿದ್ದೇ ಹೆಚ್ಚು ಎನ್ನುವಂತಾದರು. ಮತ್ತೆ ಕೆಲವರಂತೂ ಹೇಗೋ ಒಬ್ಬರನೊಬ್ಬರು ತಿಂಗಳುಗಟ್ಟಲೆ ಬಿಟ್ಟು ಇದ್ದು ಒಂದಷ್ಟು ಸಂಕಟಗಳ ಅನುಭವಿಸಿ ಪಾರಾದವೆಲ್ಲಾ ಎಂಬ ನಿಟ್ಟಿಸಿರು ಬಿಟ್ಟರು. ದಿನಗಳು ಕಳೆದಂತೆ ಕರೋನಾ ನಂತರದ ಈ ಕಾಲದಲ್ಲಿ Artificial Intelligenceನ ವರದಿ ವದಂತಿಗಳಲ್ಲಿ ಓಹ್ ಹಾಗಾ? ಹೀಗಾ.. ಎನ್ನುವುದರಲ್ಲಿದ್ದೇವೆ.
ಕರೋನಾ ಬಂದದ್ದಾದರೂ ಹೇಗೆ? ಗೊತ್ತಾಗಿದ್ದೆಷ್ಟು, ಆಗದಿರುವುದೆಷ್ಟು ಎಂಬುದು ವೈಜ್ಞಾನಿಕ ಜಗತ್ತಿನಲ್ಲಿ ಸಾಕಷ್ಟು ದೊಡ್ಡ ಕೋಲಾಹಲವನ್ನು ಎಬ್ಬಿಸಿತ್ತು. ಸಾಂಕ್ರಾಮಿಕತೆಯ ಸವಾಲನ್ನು ಎದುರಿಸಲು ಜಾಗತಿಕ ಆರೋಗ್ಯ ಸಂಸ್ಥೆಯು (WHO) ಬಹು ಮುಖ್ಯ ರೋಗಕಾರಕಗಳ ಮೂಲದ ಅಧ್ಯಯನದ ವೈಜ್ಞಾನಿಕ ಸಲಹಾ ಸಮಿತಿ Scientific Advisory Group for the Origins of Novel Pathogens (SAGO) ಯನ್ನು ಹೊಂದಿರುತ್ತದೆ. ಇದು ಇಂತಹಾ ಅಥವಾ ಯಾವುದೇ ರೋಗವನ್ನೂ ಆರೋಗ್ಯದ ಹಿತದಲ್ಲಿ ಹದ್ದುಬಸ್ತಿನಲ್ಲಿಡಲು ನಿರಂತರವಾಗಿ ಅಧ್ಯಯನಶೀಲವಾಗಿ ಕಣ್ಗಾವಲಾಗಿರುತ್ತದೆ.

ಕಳೆದ 2021ರಲ್ಲಿ ಕೋವಿಡ್ ಉಗಮದ ಅರ್ಥೈಸಲು ಈ ಸಮಿತಿಯು ಜವಾಬ್ದಾರಿಯನ್ನು ತೆಗೆದುಕೊಂಡು ಅಧ್ಯಯನವನ್ನು ಆರಂಭಿಸಿತ್ತು. ಸುಮಾರು ಮೂರೂವರೆ ವರ್ಷಗಳ ಕಾಲ 27 ಜನ ವಿಜ್ಞಾನಿಗಳು/ವಿದ್ವಾಂಸರು ಜಾಗತಿಕ ಸಂಶೋಧನಾ ವರದಿಗಳನ್ನು ಆಧರಿಸಿ, ತಮ್ಮ ಪರಿಣಿತಿಯಿಂದ ಸಿದ್ದ ಪಡಿಸಿದ ವರದಿಯನ್ನು ಕಳೆದ ಜೂನ್ 2025ರಲ್ಲಿ ಅಂತಿಮಗೊಳಿಸಿ WHOಗೆ ವರದಿಯನ್ನು ಒಪ್ಪಿಸಿತ್ತು. SAGO (WHO) -2025 ಎಂಬ ಆ ವರದಿಯನ್ನು ಆಧರಿಸಿ ಅದೇ ಸಮಿತಿಯ ಸದಸ್ಯರು ಸಿದ್ದಪಡಿಸಿದ ಒಟ್ಟಾರೆಯ ಸಾರಾಂಶ ರೂಪದ ಕಮೆಂಟರಿಯೊಂದು ಎರಡು ದಿನಗಳ ಹಿಂದೆಯಷ್ಟೇ ವಿಖ್ಯಾತ ವಿಜ್ಞಾನ ಪತ್ರಿಕೆ “ನೇಚರ್” ಪ್ರಕಟಿಸಿದೆ. ಅದರ ಓದಿನ ಸಾರದ ಮುಖ್ಯ ವಿಚಾರಗಳನ್ನು ತಮ್ಮ ಮುಂದಿಡಲು ಈ ಟಿಪ್ಪಣಿ.
ಕಳೆದ 2021ರ ನವೆಂಬರ್ನಲ್ಲಿ, ಭಾರತವನ್ನೂ ಒಳಗೊಂಡಂತೆ ಒಟ್ಟು 27 ರಾಷ್ಟ್ರಗಳ 27 ವಿದ್ವಾಂಸ/ವಿಜ್ಞಾನಿಗಳನ್ನು ಒಳಗೊಂಡ SAGO ಸಮಿತಿಯು ಕರೋನದ ಮೂಲ ಕಾರಣದ ಹುಡುಕಾಟದ ಆಶಯದಲ್ಲಿ ಅಧ್ಯಯನವನ್ನು ಆರಂಭಿಸಿತ್ತು. ಅದು ಯಾವುದೇ ರಾಷ್ಟ್ರವನ್ನು ಗುರಿಯಾಗಿಟ್ಟು ನೋಡದೆ, ಕೇವಲ ಕರೋನಾ ಕುರಿತಾದ ಸಂಶೋಧನಾ ಅಧ್ಯಯನಗಳನ್ನು ಸೂಕ್ಷ್ಮವಾಗಿ ಪರಾಮರ್ಶಿಸಿ, ರೋಗ ಬಂದಿರಬಹುದಾದ ಎಲ್ಲಾ ಸಾಧ್ಯತೆಗಳನ್ನು ಹುಡುಕಾಡುವ ಉದ್ದೇಶವನ್ನು ಹೊಂದಿತ್ತು. ಸತ್ಯದ ಅವಲೋಕನದಲ್ಲಿ ಯಾವುದೇ ಭಾವಾವಶೇಷವಿಲ್ಲದೆ, ಕೇವಲ ವೈಜ್ಞಾನಿಕ ಮನಸ್ಥಿತಿಯಿಂದ SARS-CoV-2 ವೈರಾಣುವಿನ ಮೂಲವನ್ನು ಪತ್ತೆ ಹಚ್ಚಿ, ಆ ಮೂಲಕ ಭವಿಷ್ಯದಲ್ಲಿ ರೋಗಗಳ ತಡೆಗಟ್ಟಲು ಸಾಂಕ್ರಾಮಿಕತೆಯ ತಿಳಿವಳಿಕೆಯನ್ನು ಹೆಚ್ಚಿಸುವ ನಿಲುವು ಸಮಿತಿಯದಾಗಿತ್ತು.
ಸಮಿತಿಯ ಸದಸ್ಯರು ಮೊಟ್ಟ ಮೊದಲು ಕಾಣಿಸಿಕೊಂಡ ಚೀನಾದ ವುಹಾನ್ ಭೇಟಿಯನ್ನೂ ಮಾಡಿದ್ದಲ್ಲದೆ, ಅವರವರ ದೇಶಗಳ ಸ್ಥಿತಿ-ಗತಿಗಳ ಅಧ್ಯಯನಗಳನ್ನೂ ಸಮೀಕ್ಷಿಸಿ, ಜಗತ್ತಿನಾದ್ಯಂತ ಪರಾಮರ್ಶಿತ ಹಾಗೂ ಪ್ರಕಟಿತವಾದ ವೈಜ್ಞಾನಿಕ ಅಧ್ಯಯನಗಳನ್ನು ಆಧರಿಸಿ ವರದಿಯನ್ನು ರಚಿಸಿದ್ದಾರೆ. ಜೊತೆಗೆ SAGO ಸಮಿತಿಯು 2021 ಮತ್ತು 2025ರ ನಡುವೆ ಹಲವಾರು ಬಾರಿ ಚರ್ಚೆಗಳನ್ನು ನಡೆಸಿದ್ದಾರೆ. ಅಲ್ಲದೆ ಕರೋನಾ ಅಧ್ಯಯನ ಕುರಿತಂತೆ ವಿಶ್ವವಿಖ್ಯಾತ ವೈದ್ಯಕೀಯ ವಿಜ್ಞಾನ ಪತ್ರಿಕೆ “ಲ್ಯಾನ್ಸೆಟ್- (Lancet) ಪ್ರಾಯೋಜಿತವಾದ ಲ್ಯಾನ್ಸೆಟ್ ಕಮೀಷನ್ (Lancet Commission – 2022) ವರದಿಯನ್ನೂ ಪರಾಮರ್ಶಿಸಿ ಅಧ್ಯಯನದಲ್ಲಿ ಬಳಸಿಕೊಂಡಿದ್ದಾರೆ. ಹೀಗೆ ವೈಜ್ಞಾನಿಕ ಹರಹನ್ನು ಸಾಕಷ್ಟು ವಿಸ್ತಾರವಾದ ನಿಲುವಿನಿಂದ ಗಮನಿಸಿ ಪ್ರಸ್ತುತ ನಿರ್ಧಾರಗಳನ್ನು ಜಗತ್ತಿಗೆ ತೆರೆದಿಟ್ಟಿದ್ದಾರೆ. ಕರೋನಾ ಆರಂಭದಿಂದ ಜಾಗತಿಕವಾಗಿ ಹರಿದಾಡಿದ ಮತ್ತು ಗಮನಾರ್ಹವಾದ ಸಂಗತಿಗಳನ್ನು ಒಟ್ಟು ಮಾಡಿ ಸುಮಾರು ನಾಲ್ಕು ಕಲ್ಪನೆ (Hypotheses) ಗಳಾಗಿ ವಿಭಾಗಿಸಿ ಅವುಗಳ ಒಪ್ಪಿತವಾದ ವಿವರಗಳನ್ನು ಚರ್ಚಿಸಿ ಪ್ರಕಟಿಸಿದ್ದಾರೆ. ಅದರ ವಿವರಗಳು ಹೀಗಿವೆ
ಮೊದಲನೆಯ ಹೈಪಾತಿಸಿಸ್ (Hypothesis One): SARS-CoV-2 ವೈರಸ್ಸಿನ ಸೋಂಕಿತ ಪ್ರಾಣಿಯು ಮಾನವರಿಗೆ ರೋಗ ತಂದಿದೆ (Animals infected with SARS-CoV-2 passed the virus to humans)

ಈ ಹೈಪಾತಿಸಿಸ್ ಅನ್ನು ಕೋವಿಡ್ ಕುರಿತಂತೆ ಜಗತ್ತಿನಾದ್ಯಂತ ನಡೆಸಲಾದ ಅನೇಕ ರಾಷ್ಟ್ರಗಳ ವೈಜ್ಞಾನಿಕ ವರದಿಗಳು ಒಪ್ಪಿ ಬೆಂಬಲಿಸಿವೆ. ಮೂಲತಃ ಇಂತಹಾ ವೈರಾಣುಗಳ ನೈಸರ್ಗಿಕ ಮೂಲಗಳಾದ ಬಗೆ ಬಗೆಯ ಬಾವಲಿಗಳು ಅದರಲ್ಲೂ ಹಾರ್ಸ್ಶೂ ಬಾವಲಿ (Horseshoe bats- Rhinolophus spp.) ಗಳಲ್ಲಿನ ವೈರಸ್ಸಿನ ಜೀನೋಮಿನ ಹೋಲಿಕೆಯಲ್ಲಿ ಪ್ರತಿಶತ 96.1 ರಷ್ಟು ಕರೋನಾ ವೈರಸ್ಸನ್ನು ಹೋಲುತ್ತಿದ್ದುದನ್ನು ಅಧ್ಯಯನಗಳು ಸಾಕ್ಷೀಕರಿಸಿವೆ. ಇದನ್ನು 2013ರಲ್ಲೇ ನಡೆಸಲಾದ ಚೀನಾ ಮೂಲದ ಅಧ್ಯಯನವೂ ಸಮರ್ಥಿಸಿದೆ. ಲಾವೋಸ್ನಲ್ಲಿ 2020 ರಲ್ಲಿ ಪತ್ತೆ ಹಚ್ಚಲಾದ ಮತ್ತೊಂದು ವೈರಸ್ಸಿನ ತಳಿಯು ಪ್ರತಿಶತ 96.8ರಷ್ಟರ ಹೋಲಿಕೆಯನ್ನು ಕರೋನಾ ವೈರಸ್ಸಿಗೆ ಸಮೀಕರಿಸಲಾಗಿದೆ. ಇದು ಸಮೀಕರಿಸಿದ್ದೇನೆಂದರೆ ಚೀನಾದ ಸುತ್ತ ಮುತ್ತ ಹಾಗೂ ದಕ್ಷಿಣ-ಪೂರ್ವ ಏಶಿಯಾದ ಬಾವಲಿಗಳಲ್ಲಿದ್ದ ವೈರಸ್ಸುಗಳು ನೇರವಾಗಿ ಅಥವಾ ಬೇರಾವುದೋ ಮಧ್ಯಂತರ ಪ್ರಾಣಿ-ಪಕ್ಷಿಗಳ ಮೂಲಕ ಮಾನವರನ್ನು ಸೋಂಕಿಸಿದೆ. 2019ರ ಡಿಸೆಂಬರ್ಗೂ ಮೊದಲು ಸೋಂಕಿತರಾದ ಸುಮಾರು ೬೦% ಸೋಂಕಿತ ಜನರು ಆ ವುಹಾನ್ನ ಹನಾನ್ (Huanan) ನ ಮೀನು-ಮಾಂಸದ ಮಾರುಕಟ್ಟೆಯ ಆಸುಪಾಸಿನವರೇ ಆಗಿದ್ದಾರೆ. ಆ ಮಾರುಕಟ್ಟೆಯ ಸುತ್ತ ಮುತ್ತ ಸಂಗ್ರಹಿಸಲಾದ ವೈರಾಣುಗಳು ನೇರವಾಗಿ ಕರೋನಾ ಜೀನೋಮಿಗೆ ಹೋಲಿಕೆಯನ್ನು ಧೃಡ ಪಡಿಸಿವೆ. ಹಾಗಾಗಿ ಬಾವುಲಿಗಳಿಂದ ವೈರಸ್ಸುಗಳು ಮಾನವರು ಸೇವಿಸುವ ಇತರೆ ಯಾವುದೇ ಪ್ರಾಣಿ-ಪಕ್ಷಿಯ ಮೂಲಕ ಸೋಂಕನ್ನು ತಂದಿವೆ. ಇದಕ್ಕಿಂತಾ ಮೊದಲು ಅಂದರೆ 2019ಕ್ಕೂ ಹಿಂದೆ ಯಾವುದೇ ಮಾನವ ಸೋಂಕಿನಲ್ಲಿ ಈ ವೈರಸ್ಸು ಕಂಡು ಬಂದಿಲ್ಲ.
ಎರಡನೆಯ ಹೈಪಾತಿಸಿಸ್ (Hypothesis Two): ಚೀನಾದ ಪ್ರಾಣಿಗಳ ಮಾರುಕಟ್ಟೆಗೆ ಸೋಂಕು ಹೊರಗಿನಿಂದ ಆಮದುಗೊಂಡ ಸಾಮಗ್ರಿಯ ಮೂಲಕ ಬಂದಿದೆ. (SARS-CoV-2 was introduced into China’s animal markets from overseas through imported goods).

ಅಂದರೆ ಚೀನಾದಲ್ಲೂ ಇತರೇ ಯಾವುದೇ ದೇಶದಿಂದ ಅಮದಾದ ಸೋಂಕು ಇದಾಗಿದೆ, ಎನ್ನುವುದನ್ನು ಒಪ್ಪಲು ಸರಿಯಾದ ಸಾಕ್ಷಿಗಳನ್ನು ಅಧ್ಯಯನಗಳು ಕೊಡಲು ಆಗಿಲ್ಲ. 2021ರಲ್ಲಿ WHO ಮತ್ತು ಚೀನಾ ಒಟ್ಟಾಗಿ ನಡೆಸಿದ ಅಧ್ಯಯನದ ವರದಿ ಹಾಗೂ SAGO-2022ರ ವರದಿಗಳೆರಡೂ ಈ ವಾದವನ್ನು ಒಪ್ಪಲು ಸರಿಯಾದ ಸಾಕ್ಷಿಗಳಿಲ್ಲ ಎಂದು ಹೇಳಿವೆ. ಹಾಗಾಗಿ ಚೀನಾದ ಹನಾನ್ನ ಸಾಗರ ಮೂಲದ ಆಹಾರ ಮಾರುಕಟ್ಟೆಯು ಕರೋನಾದ ಮೊದಲ ಸಾಂಕ್ರಾಮಿಕತೆಯಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸಿದೆ ಎಂಬುದು ಗಮನಾರ್ಹ.
ಮೂರನೆಯ ಹೈಪಾತಿಸಿಸ್ (Hypothesis Three): ಕೋವಿಡ್ ವೈರಸ್ಸು ಪ್ರಯೋಗಾಲಯಕ್ಕೆ ಸಂಬಂಧಿಸಿದ ಆಕಸ್ಮಿಕ ಕಾರಣದಿಂದ ಹುಟ್ಟಿದೆ (SARS-CoV-2 originated from an accidental lab-related event).
ಕೋವಿಡ್ ಲ್ಯಾಬ್ನಿಂದ ನುಣುಚಿಕೊಂಡು ಅಥವಾ ಯಾವುದೇ ಅಹಿತಕರವಾದ ಘಟನೆ/ಕಾರಣದಿಂದ ಮಾನವರಲ್ಲಿ ಸೋಂಕನ್ನು ತಂದಿದೆ ಎಂಬುದು ಒಂದು ಬಲವಾದ ಅನುಮಾನ. ಏಕೆಂದರೆ ಮೊಟ್ಟ ಮೊದಲು ಕೋವಿಡ್ ಕಾಣಿಸಿಕೊಂಡ ನಗರ ವುಹಾನ್ನಲ್ಲಿಯೇ ವೈರಸ್ಸುಗಳ ಅಧ್ಯಯನ ಸಂಸ್ಥೆಯೂ ಇದೆ. ಅಲ್ಲಿ ಬಾವಲಿಗಳ ವೈರಸ್ಸು ಮೂಲದ ಅಧ್ಯಯನಗಳು ಮೊದಲೇ ನಡೆದಿದ್ದವು. ಆದರೂ WHO ಅಥವಾ SAGO ಗೆ ಚೀನಾದ ವುಹಾನ್ನ ವೈರಸ್ಸು ಸಂಸ್ಥೆಯಾಗಲಿ ಮತ್ತು ವುಹಾನ್ನಲ್ಲೇ ಇರುವ ಚೀನಾದ ರೋಗನಿಯಂತ್ರಣ ಮತ್ತು ಹತೋಟಿಯ ಕೇಂದ್ರವಾಗಲಿ ಈ ಅನುಮಾನವನ್ನು ಬಗೆಹರಿಸಲು ಸಹಕರಿಸಲಿಲ್ಲ. ಅಲ್ಲದೆ ಒಟ್ಟಾರೆಯ ಯಾವುದೇ ಅಧ್ಯಯನಗಳಾಗಲಿ, ಅಥವಾ WHO-SAGO ಪ್ರಯತ್ನಗಳಾಗಲಿ ಈ ಅನುಮಾನವನ್ನು ಬಗೆಹರಿಸಲು ಸಾಧ್ಯವಾಗಲಿಲ್ಲ.

ಸಂಕ್ಷಿಪ್ತವಾಗಿ ಹೇಳುವುದಾದರೆ, ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ಜೈವಿಕ ಸುರಕ್ಷತೆ ಮತ್ತು ಜೈವಿಕ ಸುರಕ್ಷತಾ ನೀತಿಗಳು ಮತ್ತು ಅಭ್ಯಾಸಗಳ ಮೇಲೆ ಮುಖ್ಯವಾಗಿ ಕೇಂದ್ರೀಕರಿಸಲಾಗಿರುವ ಪ್ರಕಟಿತವಾದ ಗುಪ್ತಚರ ವರದಿಗಳೂ ಕೂಡ ಊಹಾತ್ಮಕವಾಗಿವೆ. ಹಾಗಾಗಿ ಅವುಗಳು ಯಾವುದೇ ಉಲ್ಲಂಘನೆಯ ದೃಢವಾದ ಪುರಾವೆಗಳನ್ನು ಒದಗಿಸುವುದಿಲ್ಲ.
ನಾಲ್ಕನೆಯ ಹೈಪಾತಿಸಿಸ್ (Hypothesis Four) : ವೈರಸ್ಸು ಒಂದು ಪ್ರಯೋಗಾಲಯವು ಬೇಕೆಂದೇ ಸೃಷ್ಟಿಸಿದ್ದು (SARS-CoV-2 originated from the deliberate manipulation of a virus in a lab)
ವೈರಸ್ಸಿನ ಜೀನೋಮಿನ ಅಧ್ಯಯನಗಳು ಪ್ರಮುಖವಾಗಿ ಜೀನುಗಳ ಮಾರ್ಪಾಡಿನಿಂದ ಸೃಜಿಸುವ ಸಾಧ್ಯತೆಯ ಬಗ್ಗೆ ಸಾಕಷ್ಟು ಗಮನಹರಿಸಿ ಪರಾಮರ್ಶಿಸಿವೆ. ಹೀಗೇ ಬೇಕೆಂದು ಗುರಿಯಾಗಿಟ್ಟುಕೊಂಡು ಜೀನುಗಳನ್ನು ವೈರಾಣುಗಳಲ್ಲಿ ಸೃಜಿಸಿ ಮಾಡುವಂತೆ ಯಾವುದೇ ಅಧ್ಯಯನಗಳು ಸಾಬೀತು ಪಡಿಸಲಿಲ್ಲ. ಹಾಗಾಗಿ ವೈರಸ್ಸೇನು ಪ್ರಯೋಗಾಲಯದಲ್ಲಿ ಬೇಕೆಂದು ಸೃಷ್ಟಿಸಿದ್ದು ಎನ್ನುವುದರಲ್ಲಿ ಯಾವುದೇ ಹುರುಳಿಲ್ಲ. ಇದಕ್ಕೆಲ್ಲಾ ತೀರಾ ಹತ್ತಿರವಾದ ಒಂದು ನೈಸರ್ಗಿಕವಾದ ಸಂಬಂಧಿ ವೈರಸ್ಸು ಬೇಕೇ ಬೇಕು. ಆದರೆ ಅಂತಹದ್ದೇನೂ ಇಲ್ಲದ ಕಾರಣ ಇದೊಂದು ನಂಬಲಾಗದ ಕಲ್ಪನೆಯಷ್ಟೇ! ಅದಕ್ಕೆ ಬದಲಾಗಿ ಲಾವೋಸ್ನಲ್ಲಿ ಹಾಗೂ ಚೀನಾದಲ್ಲಿಯೂ ದೊರೆತ ಬಾವುಲಿಗಳ ವೈರಸ್ಸುಗಳು ಇಂತಹಾ ವೈರಾಣುಗಳ ವಿಕಾಸಕ್ಕೆ ಸಾಧ್ಯ ಮಾಡಿಕೊಟ್ಟಿರುವ ಬಗ್ಗೆ ಸಾಕಷ್ಟು ಪುರಾವೆಗಳನ್ನು ಒದಗಿಸಿವೆ.
ವ್ಯಾಪಕವಾಗಿ ಪ್ರಚಾರದಲ್ಲಿರುವ ಸೈದ್ಧಾಂತಿಕ ಸವಾಲುಗಳನ್ನು ಎದುರಿಸುವುದು.
WHO ನ ಈ ಸಮಿತಿಗೆ ಅದರಲ್ಲೂ ವರದಿಯ ತಯಾರಿಸುವ ಕಳೆದ ಮೂರೂ ವರ್ಷಗಳೂ ಅನೇಕ ನಾಗರಿಕ ಚಳುವಳಿಗಾರರ ಹಾಗೂ ಕೆಲವೊಂದು ವಿಜ್ಞಾನಿಗಳ ಕೇವಲ ಪ್ರಚಾರದ ಸಿದ್ಧಾಂತಗಳನ್ನು ಮುರಿಯುವುದು ಅಷ್ಟು ಸುಲಭವಾಗಿರಲಿಲ್ಲ. ಏಕೆಂದರೆ ಈ ಪ್ರಚಾರ ಅಥವಾ ಅನುಮಾನ ಪೂರಿತ ಸಿದ್ಧಾಂತಗಳಿಗೆ ಯಾವುದೇ ಸೂಕ್ಷ್ಮವಾದ ಅಧ್ಯಯನಗಳ ಬೆಂಬಲವೇನೂ ಬೇಕಿರಲಿಲ್ಲ. ಹಾಗಾಗಿ ಅವೆಲ್ಲವನ್ನೂ ನಿಭಾಯಿಸವುದು WHOನ SAGO ಗೆ ತುಸು ಸವಾಲೇ ಆಗಿತ್ತು. ಈಗಂತೂ ಸಾಮಾಜಿಕ ಮಾಧ್ಯಮಗಳು ಹಾಗೂ ವೃತ್ತಿ ನಿರತ ಮಾಧ್ಯಮಗಳೂ ಕೂಡ ಶೈಕ್ಷಣಿಕ ಅಥವಾ ಬೌದ್ಧಿಕ ಹಿನ್ನೆಲೆಯವೇ ಆಗಿರುವುದಿಲ್ಲ. ಅಂತಹಾ ಹಿನ್ನೆಲೆಯ ಒಂದು ಸಿದ್ಧಾಂತವೆಂದರೆ, ವೈರಸ್ಸುಗಳಿಗೆ ವ್ಯಾಕ್ಸೀನುಗಳ ಕಂಡುಹಿಡಿಯಲೆಂದೇ ವೈರಸ್ಸುಗಳನ್ನು ಸೃಷ್ಟಿಸಲಾಗಿತ್ತು, ಆ ವೈರಸ್ಸುಗಳು ಚೀನಾದ ಪ್ರಯೋಗಾಲಯದಿಂದ ನುಣುಚಿಕೊಂಡಿವೆ ಎಂಬುದಾಗಿತ್ತು. ಮತ್ತೊಂದು ಸಿದ್ಧಾಂತವು ಇಂತಹದೇ ಬಗೆಯ ಪ್ರಾಣಿಗಳನ್ನು ಒಳಗೊಂಡ ಅಧ್ಯಯನ ಒಂದರಲ್ಲಿ ಇದು ಅಮೆರಿಕದ ಪ್ರಯೋಗಾಲಯದಿಂದ ತಪ್ಪಿಸಿಕೊಂಡ ವೈರಸ್ಸು ಎಂದಾಗಿತ್ತು.
ಈ ಎರಡೂ ಸಾಧ್ಯವಾಗಲು ಮಾನವರಲ್ಲಿ ವೈರಸ್ಸು ಪ್ರತಿಷ್ಠಾಪನೆಯಾಗಿ ಸೋಂಕು ತರಲು ಉಂಟಾಗಬೇಕಾದ ಜೆನೆಟಿಕ್ ಸಾಮರಸ್ಯಗಳು ಅಷ್ಟು ಸುಲಭವಾದವಲ್ಲ. ಅಧ್ಯಯನಗಳು ನಡೆದದ್ದೇ ಬೇರೆ ಹೊರತು ಇದಕ್ಕೆ ಸಂಬಂದಿತವಾದವಲ್ಲ ಎಂಬುದು ಈ ಸಮಿತಿಯ ಅಧ್ಯಯನಕ್ಕೆ ದೊರೆತ ಸಂಗತಿಗಳು.
ಒಟ್ಟಾರೆಯಾಗಿ, ಜಾಗತಿಕ ಆರೋಗ್ಯ ಸಂಸ್ಥೆಯ ಸಮಿತಿ SAGOನ ವರಧಿಯಿಂದ ಹೊರಹೊಮ್ಮುವ ಪ್ರಮುಖ ಸಂದೇಶವೆಂದರೆ, ಊಹೆ ಅಥವಾ ರಾಜಕೀಯ ಪ್ರೇರಿತ ಅಭಿಪ್ರಾಯಗಳು ಮುಖ್ಯವಲ್ಲ, ಬದಲಾಗಿ ಕಠಿಣವಾದ ವೈಜ್ಞಾನಿಕ ಸಂಶೋಧನೆ ಮಾತ್ರವೇ 2022ರ ಕೊನೆಯ ವೇಳೆಗೆ 20 ಮಿಲಿಯನ್ಗಿಂತಲೂ ಹೆಚ್ಚು ಜನರನ್ನು ಕೊಂದ ವೈರಸ್ನ ರಹಸ್ಯವನ್ನು ಪರಿಹರಿಸಲು ಸಹಾಯ ಮಾಡಬಲ್ಲುದು. ಇದರಿಂದ ಒಂದಂತೂ ಸ್ಪಷ್ಟವಾಗಿದೆ. ವೈಜ್ಞಾನಿಕ ಸಮುದಾಯವೂ ಕೂಡ ವ್ಯವಸ್ಥಿತವಾಗಿ ವೈರಾಣುಗಳ ಜಾಗತಿಕ ಚರಿತ್ರೆಯನ್ನು ಜಾಲಾಡಿ ಮಾನವ ಕುಲಕ್ಕೆ ಬೆಂಬಲವಾಗಿದೆ ಎಂಬುದು ಸಾರ್ವಜನಿಕವಾದ ತಿಳಿವಳಿಕೆಯಾಗಬೇಕಿದೆ. ಇದಕ್ಕೆ 27ರಾಷ್ಟ್ರಗಳ ವಿವಿಧ ವಿಜ್ಞಾನಿಗಳು ಮೂರೂವರೆ ವರ್ಷಗಳ ಕಾಲ ನಿರಂತರವಾಗಿ ಶ್ರಮಿಸಿದ್ದೇ ಉದಾಹರಣೆಯಾಗಿದೆ. ಇಂತಹಾ ಸಾಂಕ್ರಾಮಿಕ ಸನ್ನಿವೇಶಗಳನ್ನಿ ಈ ಹಿಂದೆಲ್ಲಾ ರಾಜಕೀಯ ಶಕ್ತಿಗಳು ಹೇಗೆಲ್ಲಾ ಬಳಸಿಕೊಂಡಿವೆ ಎಂಬುದನ್ನು ಸಮಾಜ ನೋಡಿದೆ, ಅನುಭವಿಸಿದೆ. ಹಾಗಾಗಿ ವಿಜ್ಙಾನ ಸದಾ ಮನುಕುಲದ ಏಳಿಗೆಗೆ ಸತ್ಯದ ಹುಡುಕಾಟವನ್ನು ನಡೆಸುತ್ತದೆ. ಸಾಧ್ಯವಾದಷ್ಟೂ ತನ್ನನ್ನೂ ತಾನೇ ತಿದ್ದಿಕೊಳ್ಳುತ್ತಲೂ ಬೆಳೆಯುತ್ತದೆ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಇದಕ್ಕೆ ಕರೋನಾ ಸಾಂಕ್ರಾಮಿಕತೆಯ ಅರಿವಿನ ಹುಡುಕಾಟ ಕೂಡ ಹೊರತಲ್ಲ.
(ಇದೇ ಸರಣಿಯ ಇನ್ನುಳಿದ ಸುಮಾರು 20 ಲೇಖನಗಳನ್ನು https://bit.ly/3ZX1Vdd ಈ ಲಿಂಕ್ ಬಳಸಿ ಓದಬಹುದು, ಕರೋನಾದ ವೈವಿಧ್ಯಮಯ ವೈಜ್ಞಾನಿಕ ಸಂಗತಿಗಳನ್ನು ಬಿಡಿ ಬಿಡಿಯಾಗಿ ಆಸ್ವಾಧಿಸಬಹುದು)
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್
ಹೆಚ್ಚಿನ ಓದಿಗೆ:
Marietjie Venter et.al. 2026. COVID’s origins: what we do and don’t know. Nature Vol 650, 26 February 2026.
The Lancet Citizens’ Commission on Reimagining India’s Health System Report (www.citizenshealth.in) https://doi.org/10.1016/S0140-6736(21)01202-2 The Lancet Vol 397 June 12, 2021
