ರೋಗನಿರೋಧಕ (ಇಮ್ಯೂನ್) ವ್ಯವಸ್ಥೆಯು ಜೀವಿವಿಕಾಸದಲ್ಲಿ ನಾವು ಪಡೆದಕೊಂಡ ಅತ್ಯಂತ ಪ್ರಭಾವಶಾಲಿ ಹಾಗೂ ಮಹತ್ವವಾದ ಗುಣವಾಗಿದೆ. ಅದು ಪ್ರತಿದಿನವೂ ನಮ್ಮ ದೇಹವನ್ನು ಆಕ್ರಮಿಸುವ ಸಾವಿರಾರು ವಿಭಿನ್ನ ವೈರಸ್ಗಳು, ಬ್ಯಾಕ್ಟೀರಿಯಾಗಳು ಮತ್ತು ಇತರ ಸೂಕ್ಷ್ಮಜೀವಿಗಳಿಂದ ನಮ್ಮನ್ನು ರಕ್ಷಿಸುವ ಕಾರ್ಯವನ್ನು ನಿರ್ವಹಿಸುತ್ತದೆ. ನಮ್ಮೊಳಗೆ ಕಾರ್ಯನಿರ್ವಹಿಸುವಂತಹಾ ಸಮರ್ಪಕವಾದ ರೋಗನಿರೋಧಕ ವ್ಯವಸ್ಥೆಯಿಲ್ಲದೆ, ನಾವು ಬದುಕುಳಿಯಲು ಸಾಧ್ಯವೇ ಇಲ್ಲ. ಅಷ್ಟೇ ಅಲ್ಲ ಅದು ಕಾರ್ಯ ನಿರ್ವಹಿಸುವ ರೀತಿಯಲ್ಲಿ ಸಮರ್ಪಕವಾಗಿ ಇಲ್ಲದೆ ನ್ಯೂನ್ಯತೆಯಿದ್ದರೂ ಸಹಾ ಸಾಮಾನ್ಯವಾಗಿ ದೇಹವನ್ನು ಕಾಡುವ ಬಗೆ ಬಗೆಯ ರೋಗಗಳಿಗೆ ಪರಿಹಾರವೂ ಕಷ್ಟಕರ.
ಅದೂ ಅಲ್ಲದೆ ಈ ರೋಗ ನಿರೋಧಕ ವ್ಯವಸ್ಥೆಯೂ ಸಹಾ ನಿಯಂತ್ರಣದಲ್ಲಿ ಇರಬೇಕಾಗುತ್ತದೆ. ಇಲ್ಲದಿದ್ದರೆ ಅದು ನಮ್ಮದೇ ಆದ ಅಂಗಗಳನ್ನೂ ಸಹಾ ನಾಶಪಡಿಸಬಹುದು. ಏಕೆಂದರೆ ಅವುಗಳನ್ನು ಗುರುತಿಸಿ ಬೇರ್ಪಡಿಸುವುದಾದರೂ ತಿಳಿಯಬೇಕಲ್ಲ! ಅದೂ ಅಲ್ಲದೆ ಅದರ ಕೆಲಸವೇ ಜೀವಿಕೋಶಗಳನ್ನು ರೋಗಕಾರಕ ಜೀವಿಕೋಶಗಳಿಂದ ರಕ್ಷಿಸುವುದು. ಇದೊಂದು ಸಮರ್ಪಕವಲ್ಲದ ವ್ಯವಸ್ಥೆಯಾದರೆ ಅದು ನಮ್ಮದೇ ಜೀವಿಕೋಶಗಳನ್ನು ಕೊಲ್ಲುತ್ತದೆ. ಹಾಗಾಗಿ ಇಡಿ ವ್ಯವಸ್ಥೆಯು ಆಯಾ ಜೀವಿಯ ದೇಹದೊಳಗೇ ನಿಯಂತ್ರಣದಲ್ಲಿ ಇರಲೇಬೇಕು.
ಈ ವರ್ಷದ ನೊಬೆಲ್ ಪುರಸ್ಕಾರವು ರೋಗನಿರೋಧಕ ವ್ಯವಸ್ಥೆಯು ದೇಹಕ್ಕೆ ಹಾನಿಯಾಗದಂತೆ ತಡೆಯುವ ರೋಗನಿರೋಧಕ ಸಹಿಷ್ಣುತೆಗೆ ಸಂಬಂಧಿಸಿದ ಕ್ರಾಂತಿಕಾರಿ ಸಂಶೋಧನೆಗಳಿಗಾಗಿ, ಮೇರಿ ಇ. ಬ್ರಂಕೋವ್ (Mary E. Brunkow), (ಫ್ರೆಡ್ ರಾಮ್ಸ್ಡೆಲ್ (Fred Ramsdell) ಮತ್ತು ಶಿಮೊನ್ ಸಕಾಗುಚಿ Shimon Sakaguchi) ಅವರಿಗೆ ಲಭಿಸಿದೆ. ಇವರ ಸಂಶೋಧನೆಗಳು ರೋಗನಿರೋಧಕ ವಿಧಾನಗಳ ಅರ್ಥೈಸಿಕೊಳ್ಳುವಲ್ಲಿ ಹೊಸ ಸಂಶೋಧನಾ ಕ್ಷೇತ್ರಕ್ಕೆ ಅಡಿಪಾಯ ಹಾಕಿವೆ. ಇದರಿಂದಾಗಿ ಮುಖ್ಯವಾಗಿ ಕ್ಯಾನ್ಸರ್ ಮತ್ತು ಸ್ವಯಂ ನಿರೋಧಕ (Autoimmune) ಕಾಯಿಲೆಗಳ ಹೊಸ ಚಿಕಿತ್ಸೆಗಳ ಅಭಿವೃದ್ಧಿಗೆ ಉತ್ತೇಜನ ನೀಡಿವೆ.
ಈ ಸಂಶೋಧನೆಯ ವಿವರಗಳು ಈ ಮುಂದಿನಂತಿವೆ. ರೋಗನಿರೋಧಕ ವ್ಯವಸ್ಥೆಯಲ್ಲಿ ಸೋಂಕು ಉಂಟುಮಾಡಿದ ಸೂಕ್ಷ್ಮಜೀವಿಗಳನ್ನು ನಮ್ಮ ಜೀವಿಕೋಶಗಳಿಂದ ಬೇರ್ಪಡಿಸಿ ಗುರುತಿಸಬೇಕಾಗುತ್ತದೆ. ನಮ್ಮ ದೇಹದ ರೋಗನಿರೋಧಕ ವ್ಯವಸ್ಥೆಯಲ್ಲಿ T- ಜೀವಿಕೋಶಗಳೆಂಬ ಕೆಲವು ವಿಶೇಷವಾದ ಜೀವಿಕೋಶಗಳಿವೆ. ಅವುಗಳಲ್ಲಿ ಸೋಂಕು ತಂದ ರೋಗಾಣುವಿನ ಪ್ರೋಟೀನಿನ ತುಣುಕನ್ನು ಗುರುತಿಸಬಲ್ಲ ಗ್ರಾಹಕಗಳಿರುತ್ತವೆ. ಈ ಗ್ರಾಹಕಗಳು ಲಕ್ಷಾಂತರ ಸಂಖ್ಯೆಯಲ್ಲಿದ್ದು, ಬಗೆ ಬಗೆಯ ಆಕಾರದಲ್ಲಿಯೂ ಇರುತ್ತವೆ. ಇವು ವಿಭಿನ್ನವಾದ ರೋಗಾಣುಗಳ ಪ್ರೋಟೀನನ್ನು ಗುರುತಿಸಿ ಎದುರಿಸಿ ರಕ್ಷಣೆಯನ್ನು ಕೊಡುತ್ತವೆ. ಇವಿಲ್ಲದಿದ್ದರೆ ರಕ್ಷಣೆಯು ಸಾಧ್ಯವೇ ಇರಲಿಲ್ಲ. ಆದರೂ ಕೆಲವೊಮ್ಮೆ ಇದೇ T- ಜೀವಿಕೋಶಗಳಲ್ಲಿ ನಮ್ಮದೇ ದೇಹದ ಜೀವಿಕೋಶಗಳ ಪ್ರೋಟೀನನ್ನು ಅನ್ಯಕೋಶದವೆಂದು ಬಗೆದು ಅವುಗಳನ್ನು ನಾಶಪಡಿಸುತ್ತಾ ನಮ್ಮೊಳಗೇ ವೈರುಧ್ಯವನ್ನು ತರುತ್ತವೆ. ಇದನ್ನು ಸ್ವಯಂ ಪ್ರಕ್ರಿಯೆಯ ಸಮಸ್ಯೆಯೆಂದು (Self-reactivity Problem) ಕರೆಯುತ್ತಾರೆ. ಇದು ನಮಗೆ ತೊಂದರೆಯನ್ನು ತರುತ್ತದೆ. ಇದನ್ನು ಸ್ವಯಂ ನಿರೋಧಕ (Autoimmune) ಕಾಯಿಲೆಗಳಾದ ಟೈಪ್-1 ಡಯಾಬೀಟೀಸ್, ಕೀಲುನೋವು ಮುಂತಾದ ಕಾಯಿಲೆಗಳಿಗೆ ಕಾರಣವಾಗಬಲ್ಲದು. ಹಾಗಾದರೆ ಇದನ್ನೆಲ್ಲಾ ನಮ್ಮ ದೇಹವು ನಿಭಾಯಿಸಿದ್ದಾರೂ ಹೇಗೆ?

T- ಜೀವಿಕೋಶಗಳು ಅಸ್ತಿ ಮಜ್ಜೆ (Bone Marrow)ಯಲ್ಲಿ ಹುಟ್ಟಿ ತೈಮಸ್ (Thymus) ಎಂಬಲ್ಲಿಗೆ ವರ್ಗಾವಣೆಗೊಂಡು ಅಲ್ಲಿ ಒಂದು ಬಗೆಯ ಪರೀಕ್ಷೆಗೆ ಒಳಪಡುತ್ತವೆ. ಈ ಪರೀಕ್ಷೆಯಲ್ಲಿ ಹಾನಿಕಾರಕ ಸ್ವಯಂ ಪ್ರಕ್ರಿಯೆಯ (Self-reactive) T-ಜೀವಿಕೋಶಗಳನ್ನು ನಾಶಪಡಿಸಲಾಗುತ್ತದೆ. ಇದನ್ನು ಕೇಂದ್ರೀಯ ರೋಗನಿರೋಧಕ ಸಹಿಷ್ಣುತೆ (Central Immune Tolerance) ವ್ಯವಸ್ಥೆಯೆಂದು ಕರೆಯಲಾಗುತ್ತದೆ. ಬಹುಕಾಲದಿಂದ ಇದೊಂದೇ ಬಗೆಯಲ್ಲಿ ಸ್ವಂತ ಜೀವಿಕೋಶಗಳ ನಿಯಂತ್ರಿಸುವ ಬಗೆಯನ್ನು ತಡೆಯುವ ಏಕೈಕ ವಿಧಾನವೆಂದು ನಂಬಲಾಗಿತ್ತು. ಅದೂ ಅಲ್ಲದೆ ಕೆಲವೊಂದು ಅಂತಹಾ ಹಾನಿಕಾರಕ ಜೀವಿಕೋಶಗಳು ತಪ್ಪಿಸಿಕೊಂಡು ರಕ್ತಪರಿಚಲನೆಯಲ್ಲಿ ಹರಿದಾಡಿ ವಿವಿಧ ಸಮಸ್ಯೆಗಳನ್ನು ತರುತ್ತಿದ್ದವು. ಈ ವರ್ಷದ ಪುರಸ್ಕಾರದ ಸಂಶೋಧನೆಯು ಇಂತಹಾ ತಪ್ಪಿಸಿಕೊಳ್ಳುವ ಜೀವಿಕೋಶಗಳನ್ನು ಗುರುತಿಸುವ ಮಾಲೆಕ್ಯುಲಾರ್ ಸಂಗತಿಗಳನ್ನು ಕೊಟ್ಟಿದ್ದು ಅದರಿಂದ ಪರಿಹಾರ ಸಾಧ್ಯವಾಗಿದೆ.

ಇದರ ಮೂಲವನ್ನು ಶಿಮೊನ್ ಸಕಾಗುಚಿ ಅವರ ಸಂಶೋಧನೆಯ ಅಧ್ಯಯನಗಳಿಂದ ಜೀವಿಕೋಶವು ಇಮ್ಯೂನ್ ವ್ಯವಸ್ಥೆಯನ್ನು ನಿರ್ವಹಿಸುವ ಬಗೆಯನ್ನು ನವಜಾತ ಇಲಿಯಲ್ಲಿ ತೈಮಸ್ ಅನ್ನು ತೆಗೆದು ಮಾಡಿದ ಅಧ್ಯಯನದಿಂದ ಅರ್ಥಮಾಡಿಕೊಳ್ಳಲಾಗಿದೆ. ತೈಮಸ್ ತೆಗೆದಿದ್ದರಿಂದ ಆ ಇಲಿಯಲ್ಲಿ ಹೆಚ್ಚಿನ ಪ್ರಕ್ರಿಯೆಯು ಉಂಟಾಗಿ ಅದು ಕಾಯಿಲೆಗೆ ಒಳಪಟ್ಟಿತು. ನಂತರ ಕಾಯಿಲೆಗೊಂಡ ಇಲಿಗೆ ಆರೋಗ್ಯವಂತ ಇಲಿಯಿಂದ T – ಜೀವಿಕೋಶಗಳನ್ನು ಕೊಟ್ಟಾಗ ಅದು ಆರೋಗ್ಯವನ್ನು ಮರು ಪಡೆಯಿತು. ಸಕಾಗುಚಿಯು ತಮ್ಮ ಸಂಶೋಧನೆಯಿಂದ ಗುರುತಿಸಿದ್ದೇನೆಂದರೆ ಯಾವುದೇ ಒಂದು ಬಗೆಯಲ್ಲಿ ಸಹಜವಾಗಿಯೇ ಇಂತಹ ಕಾರ್ಯವು ನಡೆದು ಆರೋಗ್ಯವನ್ನು ಕಾಪಾಡುವ ಬಗೆಯು ಇರಲೇಬೇಕು ಎಂದು ಕಂಡುಕೊಂಡದ್ದು! ಹಲವಾರು ಸಂಶೋಧನೆಗಳ ನಿರಂತರ ಪರಿಶ್ರಮದಿಂದ ಜೀವಿಕೋಶದೊಳಗೆ ಇರುವ ಅಂತಹದೊಂದ್ದು ಸಾಧ್ಯತೆಯನ್ನು ಕೊಡುವ ಪ್ರೋಟೀನನ್ನು ಅವರು ಗುರುತಿಸಿದರು. ಹಾಗೂ ಅದು ಇರುವಂತಹಾ ಜೀವಿಕೋಶಗಳನ್ನು CD25 ಜೀವಿಕೋಶಗಳೆಂದು ಕರೆದರು.

ಆದಾಗ್ಯೂ ಅನೇಕ ಸಂಶೋಧಕರು ಇದನ್ನು ಅನುಮಾನದಿಂದಲೇ ನಂಬಿದ್ದರು. ಇದಕ್ಕೆ ಉತ್ತರವಾದ ವಿವರಗಳು ಮೇರಿ ಬ್ರಂಕೋವ್ ಮತ್ತು ಫ್ರೆಡ್ ರಾಮ್ಸ್ಡೆಲ್ ಅವರ ಸಂಶೋಧನೆಗಳಿಂದ ತಿಳಿದು ಬಂದವು. ಅವರು ಮ್ಯೂಟೇಶನ್ಗೆ ಒಳಗಾದ ಒಂದು ಹುರುಪು ಹುರುಪಾದ ಹೆಕ್ಕಳಗಟ್ಟಿದ ಮೈಯುಳ್ಳ ಇಲಿಯೊಂದರ ಆನುವಂಶಿಕ ವಿವರಗಳಿಂದ ಅರಿಯಲು ಮುಂದಾದರು. ಈ ಹೆಕ್ಕಳು ಗಟ್ಟಿದ ಇಲಿಯು ಆಟೊಇಮ್ಯೂನ್ಗೆ ಒಳಪಟ್ಟು ಹಾಗಾಗಿರುತ್ತದೆ. ಈಗೇನೋ ಇಲಿಯ ಜೀನುಗಳ ನಕ್ಷೆಯು ದಾಖಲಾಗಿ ಸುಲಭವಾಗಿ ಹುಡುಕಬಹುದೇನೋ ಆದರೆ 1990 ರ ದಶಕದಲ್ಲಿ ಇದೊಂದು ಅತ್ಯಂತ ಕ್ಲಿಷ್ಟಕರವಾದ ಕೆಲಸವಾಗಿತ್ತು. ಗಂಡು ಇಲಿಯಲ್ಲಿ ಅಂತಹ ಆಟೊಇಮ್ಯೂನ್ ಇದ್ದುದರಿಂದ ಅದು X-ಕ್ರೋಮೊಸೋಮ್ನಿಂದಲೇ ಬಂದಿರುವ ಊಹೆಯಿಂದ ಸಾಧ್ಯವಾಯಿತು. ಏಕೆಂದರೆ ಅದೇ X-ಕ್ರೋಮೊಸೋಮ್ ಇರುವ ಹೆಣ್ಣು ಇಲಿಯಲ್ಲಿ ಮತ್ತೊಂದು X-ಕ್ರೋಮೊಸೋಮ್ ರಕ್ಷಣೆ ಕೊಡುವುದರಿಂದ ಗಂಡಿಗೆ ಅದು ಸಾಧ್ಯವಿಲ್ಲದೆ ಕಾಯಿಲೆಗೆ ಒಳಗಾಗಿತ್ತು. ಈ X-ಕ್ರೋಮೊಸೋಮ್ನಲ್ಲಿ ಇದನ್ನು ಸುಮಾರು 5,00,000 ನ್ಯುಕ್ಲಿಯೋಟೈಡ್ ಬೇಸ್ ಜೋಡಿಗಳನ್ನು ಸುಮಾರು 20 ಜೀನುಗಳಿರುವ ಸ್ಥಳದಲ್ಲಿ ಎಂದು ಅರಿತರು. ಆದರೆ ಈಗ ಪ್ರತೀ ಜೀನನ್ನೂ ಒಂದೊಂದಾಗಿ ಅರಿತು ತಿಳಿಯುವುದು ಅಂದರೆ ಅದೊಂದು ಬಗೆಯಲ್ಲಿ ದೊಡ್ಡ ಹುಲ್ಲಿನ ಬಣವೆಯಲ್ಲಿ ಸೂಜಿಯನ್ನು ಹುಡುಕುವಂತೆ ಆದ ಶ್ರಮವಾಗಿತ್ತು. ಇದನ್ನು ಅಂತೂ ಸಾಧಿಸಿ ಆ ಮ್ಯಟೇಶನ್ ಜೀನ್ ಅನ್ನು ಗುರುತಿಸಿ Foxp3 ಎಂದು ಹೆಸರಿಸಿದರು.

ಇಲಿಯಲ್ಲಿಯಂತೆಯೇ ಮಾನವರಲ್ಲಿ ಐಪೆಕ್ಸ್ (IPEX) ಸಿಂಡ್ರೋಮ್ ಎನ್ನುವ ಆಟೊಇಮ್ಯೂನ್ ಕಾಯಿಲೆಯು X-ಕ್ರೋಮೊಸೋಮ್ಗೆ ಸಂಬಂಧಿಸಿದ್ದು ಅದನ್ನೂ ಸಂಶೋಧಿನೆಗೆ ಒಳಪಡಿಸಿದರು. ಈ ಕಾಯಿಲೆಯಿಂದ ನರಳುವ ಮಗುವಿನಲ್ಲಿ Foxp3 ಜೀನ್ ಅನ್ನು ಮ್ಯಟೇಶನ್ ಆದ ಜೀನ್ ಎಂದು ಗುರುತಿಸಿ ತಮ್ಮ ಸಂಶೋಧನೆಗೆ ಸಮರ್ಥನೆಯನ್ನು ಕಂಡುಕೊಂಡರು.
ಈ ಎರಡೂ ವಿಶೇಷವಾದ ಸಂಶೋಧನೆಗಳು, ಅಂದರೆ ಸಕಾಗುಚಿ ಅವರ ಆಟೋಇಮ್ಯೂನ್ ಅನ್ನು ನಿಯಂತ್ರಿಸುವ T-ಜೀವಿಕೋಶಗಳನ್ನು ಗುರುತಿಸಿದ್ದು ಮತ್ತು ಮೇರಿ ಬ್ರಂಕೋವ್ ಮತ್ತು ಫ್ರೆಡ್ ರಾಮ್ಸ್ಡೆಲ್ ಅವರ ಮ್ಯುಟೇಶನ್ ಜೀನ್ ಆದ Foxp3 ಅನ್ನು ಗುರುತಿಸಿದ್ದು ಈ ಕಾಯಿಲೆಯ ಚಿಕಿತ್ಸೆಯಲ್ಲಿ ಮಹತ್ತರವಾದ ಬದಲಾವಣೆಗಳನ್ನು ತಂದವು. ಇದು ಇಡೀ ರೋಗನಿರೋಧಕ ವಿಜ್ಞಾನದಲ್ಲಿ ಮಹತ್ತರವಾದ ಬೆಳಕನ್ನು ತಂದವು. ಇದರಿಂದಾಗಿ ನಮ್ಮೊಳಗಿನ ವೈರುಧ್ಯದ ಕ್ರಿಯೆಯ ವ್ಯವಸ್ಥೆಯ ವಿವರಣೆಗಳು ತಿಳಿದು ಅವನ್ನು ನಿಯಂತ್ರಿಸುವ ಬಗೆಯು ಅನಾವರಣವಾಯಿತು. ಇದರಿಂದ T-ಜೀವಿಕೋಶಗಳನ್ನು ಕೊಡುವ ಮೂಲಕ ಅಥವಾ ನಿಯಂತ್ರಿಸುವ ಮೂಲಕ ಚಿಕಿತ್ಸೆಯು ಜಾರಿಗೆ ಬಂದು ನ್ಯೂನ್ಯತೆಯುಳ್ಳವರಿಗೆ ವರದಾನವಾಯಿತು.
ಇದನ್ನು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಹಿಮ್ಮರಿಕೆಯ ವಿಧಾನವಾಗಿ ಅಳವಡಿಸಿ ಅನಗತ್ಯ ಕ್ಯಾನ್ಸರ್ ಜೀವಿಕೋಶಗಳನ್ನು ನಿಯಂತ್ರಿಸಲು ಬಳಸುವಂತಾಯಿತು. ಅಂದರೆ ಇಲ್ಲಿ ಕ್ಯಾನ್ಸರ್ಕಾರಕ ಜೀವಿಕೋಶಗಳ ಜೊತೆಗಿರುವ ನಿಯಂತ್ರಿಸುವ T-ಜೀವಿಕೋಶಗಳನ್ನು ಬಿಡಿಸಿ, ನಮ್ಮೊಳಗಿನ ರೋಗನಿರೋಧಕ ವ್ಯವಸ್ಥೆ ಕ್ಯಾನ್ಸರ್ಕಾರಕ ಜೀವಿಕೋಶಗಳನ್ನು ಕೊಲ್ಲಬಹುದಾಗಿದೆ.
ಈ ಮೂವರ ಸಂಶೋಧನೆಗಳಿಂದ ನಮ್ಮೊಳಗಿನ ಇಮ್ಯೂನ್ ವ್ಯವಸ್ಥೆಯು ಹೇಗೆ ನಿಯಂತ್ರಣದಲ್ಲಿ ಒಳಪಟ್ಟಿದೆ ಎನ್ನುವ ಮೂಲ ವಿವರಗಳು ದೊರತಿವೆ. ಇವು ಬಾಹ್ಯ ಅಥವಾ ಕೋಶದ ಆಚೆಗಿನ/ಹೊರಗಿನ ವ್ಯವಸ್ಥೆಯ ವಿವರಗಳಿಂದ ಚಿಕಿತ್ಸೆಯಲ್ಲಿ ನಾವೀನ್ಯತೆಯನ್ನು ತಂದಿರುವುದು ಸಾಧ್ಯವಾಗಿದೆ.

ಮೇರಿ ಬ್ರಂಕೋವ್ ಅವರು ಪ್ರಿನ್ಸ್ ಟನ್ ವಿಶ್ವ ವಿದ್ಯಾಲಯದಲ್ಲಿ ಪಿಎಚ್. ಡಿ. ಪದವಿಯನ್ನು ಪಡೆದು ಇದೀಗ ವಾಷಿಂಗ್ಟನ್ ರಾಜ್ಯದ ಸಿಯಾಟಲ್ನ Institute for Systems Biology ನಲ್ಲಿ ಹಿರಿಯ Program Manager ಆಗಿದ್ದಾರೆ.
ಫ್ರೆಡ್ ರಾಮ್ಸ್ಡೆಲ್, ಅವರು ಸ್ಯಾನ್ಫ್ರಾನ್ಸಿಸ್ನ Sonoma Biotherapeutics, ನಲ್ಲಿ ವೈಜ್ಞಾನಿಕ ಸಲಹೆಗಾರರಾಗಿದ್ದಾರೆ. ಅವರು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಲಾಸ್ ಎಂಜಲೀಸ್ ನಲ್ಲಿ ಪಿಎಚ್. ಡಿ. ಪದವಿಯನ್ನು ಪಡೆದಿದ್ದಾರೆ.
ಶಿಮೊನ್ ಸಕಾಗುಚಿ ಅವರು ಜಪಾನ್ನ ಕ್ಯಾಟೊ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಪದವಿಯನ್ನು ಪಡೆದು ಒಸಾಕಾ ವಿಶ್ವವಿದ್ಯಾಲಯದ ಇಮ್ಯೂನಾಲಜಿ ವಿಭಾಗದಲ್ಲಿ ಪ್ರೊಫೆಸರ್ ಆಗಿದ್ದಾರೆ.
ಮೇರಿ ಬ್ರಂಕೋವ್, ಫ್ರೆಡ್ ರಾಮ್ಸ್ಡೆಲ್ ಮತ್ತು ಶಿಮೊನ್ ಸಕಾಗುಚಿ ಅವರಿಗೆ CPUS ತನ್ನ ಓದುಗರೆಲ್ಲರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತದೆ.
ನಮಸ್ಕಾರ.
ಡಾ. ಟಿ.ಎಸ್. ಚನ್ನೇಶ್.

ಉತ್ತಮ ಲೇಖನ. ಅಭಿನಂದನೆಗಳು ಸರ್.
ತುಂಬಾ ಉಪಯುಕ್ತ ಮಾಹಿತಿಯ ಲೇಖನ.
ಸರ್, ವಿಷಯವನ್ನು ತುಂಬಾ ಸರಳ ರೀತಿಯಲ್ಲಿ ವಿವರಣೆ ಮಾಡಿದ್ದೀರಾ. ಸಂಶೋಧನೆ ಮಾಡಿರುವ ವಿಜ್ಞಾನಿಗಳಿಗೆ ವಂದನೆ ಕೊಡ್ತೀನಿ. ಮಾನವ ಅರೋಗ್ಯ ವಿಷಯದಲ್ಲಿ ಹೆಚ್ಚು ಪ್ರಯೋಜನವಾಗಬಲ್ಲದು. ನಿಮ್ಮ ವಿವರಣೆಗೆ ತುಂಬಾ ಅಭಿನಂದನೆಗಳು. ನಮಸ್ತೆ
ಬಹಳ ಸರಳವಾಗಿ ಅರ್ಥವಾಗುವಂತೆ ಸಂಕೀರ್ಣ ವಿಷಯವನ್ನು ಬರೆದಿದ್ದೀರ. ನಿಮಗೆ ಅಭಿನಂದನೆಗಳು.