You are currently viewing ಕ್ರಿಸ್ಪರ್-ಕ್ಯಾಸ್ 9 (CRISPR-Cas9): ಜೀವಿ ಜಗತ್ತನ್ನು ಬದಲಿಸುವ ಜೀನೋಮ್ ಕತ್ತರಿ

ಕ್ರಿಸ್ಪರ್-ಕ್ಯಾಸ್ 9 (CRISPR-Cas9): ಜೀವಿ ಜಗತ್ತನ್ನು ಬದಲಿಸುವ ಜೀನೋಮ್ ಕತ್ತರಿ

ಈ ವರ್ಷದ ರಸಾಯನವಿಜ್ಞಾನದ ನೊಬೆಲ್‌ ಪ್ರಶಸ್ತಿ “ಜೀನೋಮ್‌ ಎಡಿಟಿಂಗ್”‌ ತಂತ್ರಜ್ಞಾನಕ್ಕೆ ಕ್ರಿಸ್ಪರ್‌-ಕ್ಯಾಸ್‌ 9  ಎಂಬ ಹೊಸ ವಿಧಾನವೊಂದನ್ನು ಪರಿಚಯಿಸಿದ ಇಬ್ಬರು ಮಹಿಳೆಯರಿಗೆ ಸಂದಿದೆ. ಮನೆಯಲ್ಲಿ ಗಂಡಸರ ಮಾತಿಗೆ ಕತ್ತರಿ ಪ್ರಯೋಗಿಸುವ ಹೆಣ್ಣುಮಕ್ಕಳು, ಜೀವಿಗಳ ಜೀನೋಮಿಗೇ ಕತ್ತರಿ ಹಾಕುವ ವಿಧಾನ ಅನ್ವೇಷಿಸಿದರೆ ಮುಂದೇನು ಗತಿ ಎಂದು ಭಯಗೊಳ್ಳಬೇಡಿ. ನೊಬೆಲ್‌ ಸಂಸ್ಥೆ ಮನುಕುಲಕ್ಕೆ ಗುರುತರವಾದ ಪ್ರಭಾವ ಬೀರಿದ ಅಥವಾ ಬೀರಬಲ್ಲ ಕೊಡುಗೆಗಳನ್ನು ಗುರುತಿಸಿ ಪ್ರಶಸ್ತಿ ಕೊಡುವುದು, ಆ ಕೊಡುಗೆಗಳ ಜವಾಬ್ದಾರಿಯುತ ಮತ್ತು ಸದ್ಬಳಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದಲೇ. ಆ ಗುರುತರ ಹೊಣೆಯನ್ನು ಮೊದಲೇ ಮನಗಂಡು ಅದಕ್ಕೆ ಶ್ರಮಿಸುತ್ತಿರುವ ಇಬ್ಬರೂ ಮಹಿಳೆಯರನ್ನು ಗುರುತಿಸಿ ಗೌರವಿಸಿರುವುದು ಈ ಬಾರಿಯ ನೊಬೆಲ್‌ ಬಹುಮಾನದ ಘನತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಜೊತೆಗೆ ಮಾನವರನ್ನೂ ಒಳಗೊಂಡಂತೆ ಸಕಲ ಜೀವಿಗಳ ಭವಿಷ್ಯವನ್ನು ಬದಲಿಸಬಲ್ಲ ಈ ತಂತ್ರಜ್ಞಾನದ ಬಗ್ಗೆ ಸಾಮಾಜಿಕ ಅರಿವು ಬೆಳೆಯಬೇಕೆಂಬ ಆಶಯವನ್ನೂ ಹಂಚಿದೆ.

Image Credit: Nobel Prize Organization

ಕ್ರಿಸ್ಪರ್‌-ಕ್ಯಾಸ್-‌9 (CRISPR-Cas9)ಎಂದು ಕರೆಯಲ್ಪಡುತ್ತಿರುವ ಈ ಜೆನೆಟಿಕ್‌ ಕತ್ತರಿ ವಿಧಾನದ ಮುಖ್ಯ ಸಂಶೋಧಕರು ಪ್ರೊ. ಎಮಾನ್ಯುಎಲ್‌ ಶೆಪೆಂತೆರ್‌ (Emmanuelle Charpentier) ಮತ್ತು ಪ್ರೊ. ಜೆನ್ನಿಫೆರ್‌ ಡೌಡ್ನ (Jennifer Doudna)‌ ಎಂಬ ಮಹಿಳೆಯರು. ಆಧುನಿಕ ಜೀವಿವಿಜ್ಞಾನದ ದಿಕ್ಕು ಬದಲಿಸುವ ತಂತ್ರಜ್ಞಾನ ಎಂದು ಕರೆಯಲ್ಪಡುತ್ತಿರುವ ಈ ವಿಧಾನಗಳನ್ನು ಬೇರೆ ಬೇರೆ ಖಂಡಗಳಲ್ಲಿರುವ ಸಂಶೋಧನಾ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದರೂ, ತಮ್ಮ ಸಂಯೋಜಿತ ಅನ್ವೇಷಣೆ ಹಾಗೂ ಕೊಡುಗೆಗಳ ಮೂಲಕ ಪ್ರಾಯೋಗಿಕವಾಗಿ ಸಾಧ್ಯವಾಗಿಸಿದ್ದು ಇವರಿಬ್ಬರ ತಂಡ. ಸದ್ಯ ಎಮಾನ್ಯುಎಲ್‌ ಶೆಪೆಂತೆರ್‌, ಮಾಕ್ಸ್‌ ಪ್ಲಾಂಕ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇನ್‌ಫೆಕ್ಷನ್‌ ಬಯಾಲಜಿ ಎಂಬ ಸಂಸ್ಥೆಯ ಸ್ಥಾಪಕ ನಿರ್ದೇಶಕಿಯಾಗಿದ್ದಾರೆ ಹಾಗೂ ಜೆನ್ನಿಫರ್‌ ಡೌಡ್ನ, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಬರ್ಕ್ಲಿ ಯಲ್ಲಿ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪರಿಚಯಗೊಂಡು ಕೇವಲ ಎಂಟೇ ವರ್ಷ ಸಂದಿರುವ ಈ ಕ್ರಿಸ್ಪರ್‌-ಕ್ಯಾಸ್‌9ವಿಧಾನ, ಲಭ್ಯವಿರುವ ಜೀನೋಮ್‌ ಎಡಿಟಿಂಗ್‌ ತಂತ್ರಗಳಲ್ಲಿ ಹೆಚ್ಚು ನಿಖರ ಮತ್ತು ಸುಲಭವಾಗಿ ಬಳಸಬಹುದಾದ ಕಾರಣಕ್ಕೆ ಅತ್ಯಂತ ಹೆಚ್ಚು ಜನಪ್ರಿಯತೆ ಪಡೆದಿದೆ.  ಹಾಗಾದರೆ ಇದೇನಿದು ಜೀನೋಮ್ ಕತ್ತರಿ ಮತ್ತು ಕ್ರಿಸ್ಪರ್ ಎಂಬ ಪದಗಳ ತಾಂತ್ರಿಕ ವಿವರಗಳನ್ನು ತುಸು ವಿವರವಾಗಿ ಮುಂದಿನ ಪ್ಯಾರಾಗಳಲ್ಲಿ ನೋಡೋಣ.

Image Credit: Nobel Prize Organization

ಸಮಸ್ತ ಜೀವಿಜಗತ್ತು ತನ್ನ ಜೀವಿಕೋಶಗಳಲ್ಲಿ, ತನ್ನ ಉಳಿವು ಮತ್ತು ಸಂತತಿಯ ಬೆಳವಣಿಗೆಗೆ ಅವಶ್ಯಕವಾದ  ಆನುವಂಶಿಕ  ವಿವರಗಳನ್ನು ಆರ್.ಎನ್.ಎ(RNA) ಅಥವಾ ಡಿ.ಎನ್.ಎ(DNA) ಎಂಬ ನ್ಯೂಕ್ಲಿಯಿಕ್ ಆಮ್ಲಗಳ ರೂಪದಲ್ಲಿ ಹೊಂದಿರುತ್ತವೆ. ಈ ಜೈವಿಕ ಅಣುಗಳಾದ ನ್ಯೂಕ್ಲಿಯಿಕ್ ಆಮ್ಲಗಳು A,T/U,C,G ಎಂಬ ನಾಲ್ಕು ಸಂಕೇತ ರೂಪದ ನ್ಯೂಕ್ಲಿಯೋಬೇಸ್ ಗಳನ್ನು ಹೊಂದಿರುವ ನ್ಯೂಕ್ಲಿಯೋಟೈಡ್ ಸರಣಿಯನ್ನು ಒಂದು ಉದ್ದವಾದ ದಾರದ(Single Strand)  ರೀತಿಯಲ್ಲಿ ಅಥವಾ  ಎರಡು ದಾರಗಳನ್ನು  ಸುರುಳಿ ಸುತ್ತಿದ  ರೀತಿಯಲ್ಲಿ (Double stranded helix) ಹೊಂದಿರುತ್ತವೆ. ಈ ಸರಣಿಯ ಪೂರ್ಣ ವಿವರವೇ ಜೀನೋಮ್ ಅಥವಾ ತಳಿನಕ್ಷೆ. ಈ ಜೀನೋಮಿನ ಭಾಗವಾಗಿರುವ ಜೀನುಗಳು, ಜೀವಿಕೋಶದ ಇತರೆ ವ್ಯವಸ್ಥೆಯ ಜೊತೆ ಸಂಯೋಜನೆಯ ಮೂಲಕ ಕೆಲಸ ಮಾಡುತ್ತಾ ಜೀವಿಗಳ ರಚನೆ, ವರ್ತನೆ ಒಟ್ಟಾರೆ ಬದುಕನ್ನು ನಿಯಂತ್ರಿಸುತ್ತವೆ. ಹೀಗೆ ಸಕಲ ಜೀವಿಗಳ ಬದುಕನ್ನು ನಿಯಂತ್ರಿಸುವ ಈ ತಳಿನಕ್ಷೆಯನ್ನು ತಿದ್ದುವುದಕ್ಕೆ ಜೀನೋಮ್ ಎಡಿಟಿಂಗ್ ಎಂದು ಕರೆಯುತ್ತಾರೆ.

ನ್ಯೂಕ್ಲಿಯಕ್‌ ಆಮ್ಲಗಳ ರಚನೆ

ಕ್ಯಾನ್ಸರ್, ಸಿಕಲ್-ಸೆಲ್ ಅನೀಮಿಯಾ ಮುಂತಾದ ಎಷ್ಟೋ ಖಾಯಿಲೆಗಳನ್ನು ಉಂಟುಮಾಡುವ ರೂಪಾಂತರಗೊಂಡ ಜೀನುಗಳನ್ನು ಮತ್ತೆ ತಿದ್ದಿ ಸರಿ ಮಾಡಿ ಖಾಯಿಲೆ ಗುಣ ಮಾಡಿದರೆ ಹೇಗೆ? ಮಾನವರ ಬಣ್ಣ, ಎತ್ತರ, ನೆನಪಿನ ಶಕ್ತಿ  ಮುಂತಾದ ಲಕ್ಷಣಗಳನ್ನು ನಿರ್ದೇಶಿಸುವ ಜೀನುಗಳನ್ನು ತಿದ್ದಿ ನಮಗೆ ಬೇಕಾದ ಮಗುವನ್ನು ಪಡೆಯುವಂತಾದರೆ ಹೇಗೆ? ನಮಗೆ ಬೇಕಾದ ತರಕಾರಿ ಹಣ್ಣುಗಳಲ್ಲಿ ಎಲ್ಲ ಕಾಲಕ್ಕೂ ಸಿಗುವಂತೆ, ಹೆಚ್ಚು ಕೀಟ ಭಾದೆಗೆ ಒಳಗಾಗದಂತೆ , ಹೆಚ್ಚು ತೂಕ ಬರುವ ತಳಿಗಳನ್ನು ಅನ್ವೇಷಿಸಿದರೆ ಹೇಗೆ?  ಇವೇ ಮೊದಲಾದ ಹಲವು ಆಲೋಚನೆಗಳು ಜೀವಿಗಳ ತಳಿನಕ್ಷೆಯನ್ನು ತಿದ್ದಿ ತೀಡಬೇಕೆಂಬ ಆಶಯದ ಹಿನ್ನೆಲೆಯಲ್ಲಿದೆ. ಆದರೆ ಈ ಕೆಲಸ ಅಷ್ಟು ಸುಲಭ ಸಾಧ್ಯವೇ? ಅದಕ್ಕೆ ಬೇಕಾದ ವಿಜ್ಞಾನ ಮತ್ತು ತಂತ್ರಜ್ಞಾನಗಳು ಇವೆಯೇ ? ಇದ್ದರೆ ಅವುಗಳ ಕಾರ್ಯಕ್ಷಮತೆ ಎಷ್ಟು? ಈ ಎಲ್ಲಾ ಪ್ರಶ್ನೆಗಳಿಗೆ ಪರಿಹಾರವಾಗಿ ರೂಪುಗೊಳ್ಳುತ್ತಿರುವ ತಂತ್ರಜ್ಞಾನವೇ  ಕ್ರಿಸ್ಪರ್‌-ಕ್ಯಾಸ್‌9.

ಜೀವಿಗಳ ತಳಿನಕ್ಷೆಯನ್ನು ತಿದ್ದುವ ಪ್ರಯತ್ನಗಳು ಹಲವು ದಶಕಗಳಿಂದ ಸಾಗುತ್ತಿದ್ದರೂ, ಅವು ಪಡೆದ ಯಶಸ್ಸು ಬಹಳ ಕಡಿಮೆ. ಜೊತೆಗೆ 1999 ರಲ್ಲಿ ಜೀನ್‌ ಥೆರಪಿಗೆ ಒಳಗಾದ “ಜೆಸ್ಸಿ ಗೆಲ್ಸಿಂಗರ್”‌ ಎಂಬ ಯುವಕನ ಸಾವು, ಆ ರಂಗವನ್ನು ಬಹಳ ಮಂದಗತಿಯಲ್ಲಿ ಸಾಗುವಂತೆ ಮಾಡಿತ್ತು. ಜೊತೆಗೆ ಇಲ್ಲಿ ಬಹುಮುಖ್ಯವಾದ ತೊಡಕೊಂದು ಅನುಭವಕ್ಕೆ ಬಂದಿತ್ತು. ಅದೇನೆಂದರೆ ಜೀನೋಮ್‌ ನಲ್ಲಿರುವ ಜೀನುಗಳನ್ನು ತಿದ್ದುವ ಮೊದಲು, ಆ ಜೀನಿಗೆ ಸಂಬಂಧಪಟ್ಟ  ಸರಣಿಯಲ್ಲಿ ಡಿ.ಎನ್.ಎ ಹೆಣಿಗೆಯ ಎರಡೂ ದಾರಗಳನ್ನು ತುಂಡರಿಸುವ ಅವಶ್ಯಕತೆಯಿತ್ತು. ಹಾಗಿದ್ದಾಗ ಮಾತ್ರ ಸರಿಯಿರುವ ಜೀನುಗಳನ್ನು ತಿದ್ದುವ ಕಾರ್ಯಕ್ಷಮತೆ ಹೆಚ್ಚಿತ್ತು. ಇದನ್ನೇ ಡಬಲ್‌ ಸ್ಟ್ರ್ಯಾಂಡೆಡ್‌ ಬ್ರೇಕ್ (Double Stranded Break-DSB)‌ ಎಂದು ಕರೆಯುತ್ತಾರೆ.  ಹಾಗೆ ಡಿ.ಎನ್.ಎ ಯನ್ನು ತುಂಡರಿಸುವ ಮೂರು ವ್ಯವಸ್ಥೆಗಳನ್ನು ಮುಂದಿನ ದಿನಗಳಲ್ಲಿ ಕಂಡು ಹಿಡಿಯಲಾಯಿತು. ಅವುಗಳೆಂದರೆ

1. ಜಿ಼ಂಕ್‌ ಫಿಂಗರ್‌ ನ್ಯೂಕ್ಲಿಯೇಸ್‌ (ZFNs)

2. ಟ್ಯಾಲೆನ್‌ (TALENs)

3. ಕ್ರಿಸ್ಪರ್-ಕ್ಯಾಸ್‌9 (CRISPR-Cas9)

ಮೊದಲೆರೆಡು ವಿಧಾನಗಳು ಡಿ.ಎನ್.ಎ ತುಂಡರಿಸುವ ಪ್ರೊಟೀನುಗಳನ್ನು ಸೃಷ್ಠಿಸುವ ಪ್ರಕ್ರಿಯೆಯನ್ನು ನೇರವಾಗಿ ಆಧರಿಸಿದ್ದವು. ಹಾಗಾಗಿ ಬಹಳ ಕಿಷ್ಟಕಾರವಾಗಿದ್ದು ಹೆಚ್ಚು ಸಮಯ ಬೇಡುತಿದ್ದವು. ಆದರೆ ಮೂರನೆಯ ತಂತ್ರಜ್ಞಾನವಾದ ಕ್ರಿಸ್ಪರ್-ಕ್ಯಾಸ್‌9, ಆರ್.ಎನ್.ಎ ಗಳ ಆಧಾರದ ಮೇಲೆ, ಕ್ಯಾಸ್-‌೯ ಎಂಬ ಪ್ರೊಟೀನಿನ ಮೂಲಕ ಡಿ.ಎನ್.ಎ ಹೆಣಿಗೆಯನ್ನು ತುಂಡರಿಸುವುದನ್ನು ಕಂಡುಕೊಳ್ಳಲಾಯಿತು. ಈ ವಿಧಾನದಿಂದ ಬಹು ಸುಲಭವಾಗಿ ಹಾಗೂ ಕಡಿಮೆ ಸಮಯದಲ್ಲಿ ಯಾವುದೇ ಜೀವಿಯ ಜೀನೋಮಿನ ಡಿ.ಎನ್.ಎ. ಗೆ ಹೊಂದುವ ಆರ್.ಎನ್.ಎ ಗಳನ್ನು ಜೋಡಿಸಿಕೊಂಡು, ಅವುಗಳನ್ನು ತುಂಡರಿಸಲು ಬಳಸಬಹುದೆಂದು ಸಾಬೀತಾಯಿತು.

ಕ್ರಿಸ್ಪರ್‌ ಎಂಬ ಪದದ ಪೂರ್ಣ ರೂಪ (Clustered Regularly InterSpaced Palindromic Repeats-CRISPR). ಇದು ಜೀನುಗಳನ್ನು ತಿದ್ದಲೆಂದೇ ಹುಟ್ಟಿದ ವಿಧಾನವಲ್ಲ. ಬದಲಿಗೆ ಮೂಲವಿಜ್ಞಾನದ ಸಂಶೋಧನೆಯ ಫಲಿತದಿಂದ ಬೆಳೆದ ವಿಧಾನ. ಅದೇನೆಂದರೆ ಬ್ಯಾಕ್ಟೀರಿಯಾಗಳ ಬಗ್ಗೆ ಸಂಶೋಧನೆ ಮಾಡುತ್ತಿದ್ದ ವಿಜ್ಞಾನಿಗಳು, ಅವುಗಳ ಜೀನೋಮಿನಲ್ಲಿ ಕೆಲವು ನಿಯಮಿತ ರೂಪದ ಹಾಗೂ ಪುನರ್‌ ಪ್ರಕಟಗೊಂಡಿರುವ ಸರಣಿಗಳನ್ನು ಗಮನಿಸಿದರು. ಇವುಗಳನ್ನೇ ಸ್ಪೇಸರ್‌(Spacers) ಮತ್ತು ರೀಪೀಟ್ಸ್‌(Repeats) ಎಂದು ಕರೆಯುತ್ತಾರೆ. ಆದರೆ ಇದು ಏನು? ಏತಕ್ಕಾಗಿ ಇದೆ ಎಂಬುದು ತಿಳಿದಿರಲಿಲ್ಲ. ಇದೇ ತರಹದ ರಚನೆಯು ಆರ್ಕೆಯಾ(Archaea) ಎಂಬ ಇನ್ನೊಂದು ಏಕಕೋಶಜೀವಿಗಳಲ್ಲೂ ಇರುವುದು ಪತ್ತೆಯಾಯಿತು. ಸಂಶೋಧನೆ ಮುಂದುವರೆದಂತೆ ಸ್ಪೇಸರ್‌ ಭಾಗದಲ್ಲಿರುವ ಸರಣಿಯು, ಕೆಲವು ವೈರಸ್‌ ಗಳ ಆನುವಂಶಿಕ ಸರಣಿಯನ್ನು ಹೋಲುತ್ತಿವೆ ಅಂಶ ಬೆಳಕಿಗೆ ಬಂತು. ಇದರ ಆಧಾರದ ಮೇಲೆ, ಇದು ಬ್ಯಾಕ್ಟೀರಿಯಾಗಳು ತಮಗೆ ದಾಳಿ ಮಾಡುವ ವೈರಸ್‌ಗಳನ್ನು ನಿಯಂತ್ರಿಸಲು ವಿಕಾಸಗೊಳಿಸಿಕೊಂಡಿರುವ ಪ್ರತಿಬಂಧಕ ವ್ಯವಸ್ಥೆ (Bacterial Immune System) ಇರಬಹುದೆಂದು ಊಹಿಸಲಾಯಿತು. ಈ ನಿಟ್ಟಿನಲ್ಲಿ ನಡೆದ ಪ್ರಯೋಗಗಳು ಇದು ವೈರಸ್ಗಳನ್ನು ನಿಯಂತ್ರಿಸಲು ಇರುವ ಪ್ರತಿಬಂಧಕ ವ್ಯವಸ್ಥೆ ಎಂಬ ವಿಚಾರವನ್ನು ಸಾಬೀತುಗೊಳಿಸಿದವು. ಆದರೆ ಹೇಗೆ ಈ ವ್ಯವಸ್ಥೆ ಕಾರ್ಯನಿರ್ವಹಿಸುತ್ತದೆ? ಇದರ ಭಾಗವಾಗಿರುವ ಅಂಶಗಳು ಏನೇನು ಎಂಬುದರ ವಿವರಗಳು ಮುಂದಿನ ದಿನಗಳಲ್ಲಿ ದಾಖಲಾಗುತ್ತ ಹೋಯಿತು. ಅದರ ಆಧಾರದ ಮೇಲೆ ಕ್ರಿಸ್ಪರ್‌ ವ್ಯವಸ್ಥೆಯನ್ನು ಎರಡು ಪ್ರಮುಖ ವರ್ಗಗಳಾಗಿ ಮತ್ತು ಅದರಲ್ಲಿ ಕೆಲವಾರು ಉಪವಿಭಾಗಗಳಾಗಿ ವಿಂಗಡಿಸಲಾಯಿತು. ಈಗ ನಾವು ಚರ್ಚಿಸುತ್ತಿರುವ ಕ್ರಿಸ್ಪರ್-ಕ್ಯಾಸ್‌9 ವಿಧಾನವು ಕ್ಲಾಸ್-‌೨ ಟೈಪ್-‌೨ ಕ್ರಿಸ್ಪರ್‌(Class2 Type) ವ್ಯವಸ್ಥೆ ಎಂದು ವರ್ಗೀಕರಿಸಲ್ಪಟ್ಟಿದೆ. ಬನ್ನಿ ಇದನ್ನು ವಿವರವಾಗಿ ಈಗ ತಿಳಿಯೋಣ.

ಬ್ಯಾಕ್ಟೀರಿಯಾಗಳಲ್ಲಿರುವ ಕ್ರಿಸ್ಪರ್‌ ಪ್ರತಿಬಂಧಕ ವ್ಯವಸ್ಥೆಯನ್ನು ನಿರ್ಧರಿಸುವ ಜೀನೋಮ್‌ ಸರಣಿಯನ್ನು ಗುರುತಿಸಿದರೆ, ಅಲ್ಲಿ ಮುಖ್ಯವಾಗಿ ಮೂರು ಅಂಶಗಳು ಕಂಡುಬರುತ್ತವೆ. ಅವುಗಳೆಂದರೆ ಕ್ರಿಸ್ಪರ್‌ ಪ್ರೊಟೀನುಗಳನ್ನು ಮತ್ತು ಕ್ರಿಸ್ಪರ್‌ ಆರ್.ಎನ್.ಎ.(crRNA) ಗಳನ್ನು ಉತ್ಪಾದಿಸಲು ಸಹಾಯ ಮಾಡುವ ಕ್ರಿಸ್ಪರ್‌ ಜೀನುಗಳು, ಈ ಮೊದಲೇ ತಿಳಿಸಿದಂತೆ ವೈರಸ್‌ ಗಳ ಆನುವಂಶಿಕ ಮಾಹಿತಿಯನ್ನು ಒಂದು ಗೊತ್ತಾದ ರೂಪದಲ್ಲಿ ಜೋಡಿಸಿರುವ ಕ್ರಿಸ್ಪರ್‌ ಲೋಕಸ್‌(Crisper Locus) ಹಾಗೂ ಟ್ರೇಸರ್‌ ಆರ್.ಎನ್.ಎ(Trans-activating crRNA – tracrRNA). ಈ ಮೂರು ಅಂಶಗಳು ಕ್ರಿಸ್ಪರ್‌ ವ್ಯವಸ್ಥೆಯ ಅವಿಭಾಜ್ಯ ಅಂಗಗಳು. ಇವುಗಳ ಸಂಯೋಜನೆಯಲ್ಲಿ ಕ್ರಿಸ್ಪರ್‌ ವಿಧಾನವು ಪ್ರಮುಖವಾಗಿ ಮೂರು ಹಂತಗಳನ್ನು ಹೊಂದಿದೆ. ಅವುಗಳೆಂದರೆ

೧.  ಹೊಂದಾಣಿಕೆಯ ಸ್ಥಿತಿ(Adaptation): ಈ ಹಂತದಲ್ಲಿ ಬ್ಯಾಕ್ಟೀರಿಯಾವು,  ಆಕ್ರಮಣ ಮಾಡಿದ ವೈರಸ್‌ ನ ಜೀನೋಮ್‌ ನ ಭಾಗವಾಗಿರುವ ಡಿ.ಎನ್.ಎ. ತುಣುಕೊಂದನ್ನು ತನ್ನ ಕ್ರಿಸ್ಪರ್‌ ಲೋಕಸ್‌ ಭಾಗದಲ್ಲಿ ಸೇರಿಸಿಕೊಳ್ಳುತ್ತದೆ.

೨. ಪ್ರಕಟಣಾ ಸ್ಥಿತಿ (Expression): ಈ ಹಂತದಲ್ಲಿ, ಕ್ರಿಸ್ಪರ್‌ ಜೀನುಗಳ ಸಹಾಯದಿಂದ ವೈರಸ್‌ ಗಳ ಆನುವಂಶಿಕ ಸರಣಿಗೆ ಹೊಂದುವ ಪಕ್ವಗೊಂಡ ಕ್ರಿಸ್ಪರ್‌ ಆರ್.ಎನ್.ಎ.(crRNA), ಕ್ಯಾಸ್-‌೯(Cas9) ಪ್ರೊಟೀನು ಹಾಗೂ ಟ್ರೇಸರ್‌ ಆರ್.ಎನ್.ಎ(tracrRNA) ಈ ಮೂರನ್ನು ಒಳಗೊಂಡ “ಕ್ರಿಸ್ಪರ್‌ ಕಾಂಪ್ಲೆಕ್ಸ್(Crispr Complex)” ಸಿದ್ಧಗೊಳ್ಳುತ್ತದೆ.

೩. ಮಧ್ಯಪ್ರವೇಶ ಸ್ಥಿತಿ(Intereference): ಇದು ಕೊನೆಯ ಹಂತ. ಹಿಂದೆ ಸೋಂಕು ಉಂಟುಮಾಡಿದ್ದ ವೈರಸ್‌ ಮತ್ತೆ ದಾಳಿ ಮಾಡಿದರೆ, ಮೇಲೆ ಹೇಳಿದ  ಕ್ರಿಸ್ಪರ್‌ ಆರ್.ಎನ್.ಎ, ಪ್ಯಾಮ್(PAM)‌ ಎಂದು ಕರೆಯಲ್ಪಡುವ ಚಿಕ್ಕ ಸಂಕೇತ ಸರಣಿಯನ್ನು ಮೊದಲು ಗುರುತಿಸಿ ನಂತರ ದಾಳಿಕೋರ ವೈರಸ್‌ ನ ಆನುವಂಶಿಕ ಸರಣಿಗೆ ಹೊಂದಿಕೊಂಡು, ಅವುಗಳ ಆನುವಂಶಿಕ ಸರಣಿಯನ್ನು ಕ್ಯಾಸ್-‌೯ ಪ್ರೊಟೀನಿನ ಸಹಾಯದಿಂದ ಎರಡೂ ಕಡೆ ತುಂಡರಿಸುತ್ತದೆ. ಹೀಗೆ ಆ ವೈರಸ್‌ ನ ಬಲ ಅಡಗಿಸಿ ತನ್ನನ್ನು ತಾನು ಸಂರಕ್ಷಿಸಿಕೊಳ್ಳುತ್ತದೆ.

ಈಗಾಗಲೇ ವಿವರಿಸಿದ ಕ್ರಿಸ್ಪರ್‌ ನ ಪ್ರತಿ ಹಂತವನ್ನು ಮೇಲಿನ ಚಿತ್ರ ಹಂತಹಂತವಾಗಿ ವಿವರಿಸುತ್ತದೆ. ಸೂಕ್ಷವಾಗಿ ಗಮನಿಸಿ. ಇವಿಷ್ಟು ಕ್ರಿಸ್ಪರ್‌ ಎಂಬ ಬ್ಯಾಕ್ಟೀರಿಯಾ ಪ್ರತಿಬಂಧಕ ವ್ಯವಸ್ಥೆಯ ಬಗ್ಗೆ ತಿಳಿದಿದ್ದಾಯಿತು. ಆದರೆ ಇದಕ್ಕೂ, ಜೀನೋಮ್‌ ಎಡಿಟಿಂಗ್‌ ಗೂ ಹಾಗೂ ಈ ವರ್ಷದ ರಸಾಯನವಿಜ್ಞಾನ ನೊಬೆಲ್ ವಿಜೇತರಿಗೆ ಸಂಬಂಧ ಏನು ಎಂದು ಯೋಚಿಸುತ್ತಿದ್ದೀರಾ? ಹೌದು ಈವೆಲ್ಲವನ್ನು ಒಂದು ಸೂತ್ರದಲ್ಲಿ ವಿವರಿಸಿ ಹೇಳಬೇಕಾದರೆ ಮೇಲಿನ ಹಿನ್ನೆಲೆಯೆಲ್ಲಾ ಬೇಕಾಯಿತು. ಪ್ರೊ. ಎಮಾನ್ಯುಎಲ್ಶೆಪೆಂತೆರ್‌ (Emmanuelle Charpentier) ಮತ್ತು ಪ್ರೊ. ಜೆನ್ನಿಫೆರ್ಡೌಡ್ನ (Jennifer Doudna)‌, ಈ ಹಿಂದೆ ವಿವರಿಸಿದ  ಕ್ರಿಸ್ಪರ್‌ ಆರ್.ಎನ್.ಎ. ಹಾಗೂ ಟ್ರೇಸರ್‌ ಆರ್.ಎನ್.ಎ ಇವೆರೆಡನ್ನೂ ಒಂದುಗೂಡಿಸಿ ಅದನ್ನು ಎಸ್‌ ಜಿ ಆರ್.ಎನ್.ಎ(Single Guided RNA – sgRNA) ಎಂದು ಕರೆದರು. ಆ ಮೂಲಕ ಪ್ರೋಕೇರಿಯೇಟ್ಸ್‌(Prokaryotes) ಎಂದು ಕರೆಯುವ ನ್ಯೂಕ್ಲಿಯಸ್‌ ಇಲ್ಲದ ಜೀವಿಕೋಶಗಳಲ್ಲಿ ಈ ಕ್ರಿಸ್ಪರ್‌ ವ್ಯವಸ್ಥೆ ನಿರ್ದಿಷ್ಟವಾಗಿ ಡಿ.ಎನ್.ಎ. ಸರಣಿಯನ್ನು ಕತ್ತರಿಸುತ್ತದೆ ಎಂದು ಪ್ರಯೋಗ ಸಮೇತ ನಿರೂಪಿಸಿ ತಮ್ಮ ಸಂಶೋಧನಾ ಪ್ರಬಂಧವನ್ನು 2012 ರಲ್ಲಿ ಪ್ರಕಟಿಸಿದರು. ಆ ಪ್ರಬಂಧದಲ್ಲೇ ಈ ವಿಧಾನ ಜೀನೋಮ್‌ ತಿದ್ದುವಿಕೆಗೆ ಸಹಕಾರಿಯಾಗಲಿದೆ ಎಂಬ ಭವಿಷ್ಯವನ್ನೂ ನುಡಿದಿದ್ದರು.

ನಂತರ ನಡೆದದ್ದು ಜೀವಿವಿಜ್ಞಾನ ಸಂಶೋಧನೆಯಲ್ಲಿ ಒಂದು ಇತಿಹಾಸ. ಅತ್ಯಂತ ಸುಲಭ ಹಾಗೂ ಕರಾರುವಕ್ಕಾದ ಈ ವಿಧಾನ ಬಳಸಿ ಹಲವು ವಿಜ್ಞಾನಿಗಳು ಮೂಲವಿಜ್ಞಾನದ ಪ್ರಶ್ನೆಗಳನ್ನು ಉತ್ತರಿಸಬಲ್ಲ ಸಂಶೋಧನೆಗಳಿಗೆ, ರೋಗಗಳನ್ನು ಆಭ್ಯಾಸ ಮಾಡಲು ಬಯಸುವ ವಿವಿಧ ಪ್ರಾಣಿಗಳ ಆಧ್ಯಯನ ಮಾದರಿಗಳ ಸಂಶೋಧನೆಗೆ, ಸಸ್ಯ ಮತ್ತು ಕೃಷಿ ಅಧ್ಯಯನಗಳಲ್ಲಿ, ಶಾರೀರಿಕ ಜೀವಿಕೋಶಗಳನ್ನು(Somatic Cells) ಬಳಸುವ ಜೀನ್‌ ಥೆರಪಿಗಳಲ್ಲಿ ಹೀಗೆ ವಿವಿಧ ಪ್ರಯೋಗಗಳಿಗೆ ಇದನ್ನು ಬಳಸಲು ಶುರು ಮಾಡಿದರು. ಕೊನೆಗೆ ಮಂಗಗಳ ಜನನಕೋಶಗಳನ್ನು(Germline Cells) ತಿದ್ದುವ ಸಂಶೋಧನೆಗಳೂ ಪ್ರಕಟಗೊಂಡವು. ಮೇಲೆ ತಿಳಿಸದ ವಿವರಗಳು ಆನುವಂಶಿಕ ಸರಣಿಗಳನ್ನು ತುಂಡರಿಸುವುದಕ್ಕೆ ಆಯಿತು. ಆದರೆ ಕತ್ತರಿಸಿದ ಇವುಗಳ ಜಾಗದಲ್ಲಿ ಅವನ್ನು ಸರಿ ಮಾಡಲು ಅಥವಾ ಬೇರೆಯದೇ ಸರಣಿಯನ್ನು ಸೇರಿಸಲು ಬೇರೆ ಮಾರ್ಗಗಳಿದ್ದವು. ಜೀನ್‌ ಥೆರಪಿಗಾಗಿ ಹಿಂದೆ ಉಪಯೋಗಿಸಲ್ಪಡುತ್ತಿದ್ದಂತೆ, ಕತ್ತರಿಸಿದ ಆನುವಂಶಿಕ ಮಾದರಿಯನ್ನು ತಿದ್ದಲು Non-Homologous End Joining(NHEJ) ಮತ್ತು Homologous Directed Repair (HDR) ಎಂಬ ಎರಡು ಪ್ರಕ್ರಿಯೆಗಳ ಬಗೆಗೂ ಸಂಶೋಧನೆಗಳು ಹೆಚ್ಚಾದವು. ಮೊದಲಿನ ಪ್ರಕ್ರಿಯೆಯಲ್ಲಿ ತುಂಡರಿಸಿದ ಸರಣಿಯನ್ನು ಜೀವಿಕೋಶ ತನ್ನಂತಾನೇ ಜೋಡಿಸಿಕೊಳ್ಳುತ್ತದೆ. ಆದರೆ ಹೀಗೆ ಮಾಡುವಲ್ಲಿ ತಪ್ಪುಗಳಾಗುವ ಸಾಧ್ಯತೆ ಹೆಚ್ಚು. ಆದರೆ ಎರಡನೆಯ ಪ್ರಕ್ರಿಯೆಯಲ್ಲಿ ಜೀವಿಕೋಶದ ಕ್ರೋಮೋಸೋಮಿನಲ್ಲಿರುವ ಎರಡು ಪ್ರತಿಯಲ್ಲಿ ಒಂದು ಪ್ರತಿಯನ್ನು ಆಧರಿಸಿ, ಜೀವಿಕೋಶ ತುಂಡಾದ ಸರಣಿಯನ್ನು ಸರಿ ಮಾಡುತ್ತದೆ ಅಥವಾ ಹೊರಗಡೆಯಿಂದ ನಮಗೆ ಬೇಕಾದ ಆನುವಂಶಿಕ ಸರಣಿಯನ್ನು ನೀಡಿದರೆ ಅದನ್ನು ಬಳಸಿ ಸರಿ ಮಾಡುತ್ತದೆ ಕೂಡ. ಈ ಎರಡೂ ವಿಧಾನಗಳನ್ನು ಕೆಳಗಿನ ಚಿತ್ರ ವಿವರಿಸುತ್ತದೆ.

ಮಾನವರ ಆಲೋಚನೆಗಳನ್ನು ನಿಲ್ಲಿಸುವುದಕ್ಕಾಗುವುದಿಲ್ಲವಲ್ಲ. ಹಾಗಾಗಿ ಕ್ರಿಸ್ಪರ್-ಕ್ಯಾಸ್‌ ೯ ಇನ್ನೇನು ಮಾನವ ಜನನಕೋಶಗಳ ತಿದ್ದುವಿಕೆಗೂ ಎಡೆ ಮಾಡಿಕೊಡುತ್ತದೆ ಎಂದು ಅರಿತ ಈ ವಿಧಾನದ ಪ್ರಮುಖ ಕೊಡುಗೆದಾರರಾದ ಜೆನ್ನಿಫರ್‌ ಡೌಡ್ನ, 2015 ರಲ್ಲಿ ಅಮೆರಿಕಾದ ಪ್ರಮುಖ ಜೀವಿವಿಜ್ಞಾನಿಗಳೆನ್ನೆಲ್ಲಾ ಒಂದೆಡೆ ಸೇರಿಸಿ ಮಾನವರ ಜನನಕೋಶದ ತಿದ್ದುವಿಕೆಗೆ ಅಗತ್ಯವಾದ ಇನ್ನೂ ಹೆಚ್ಚಿನ ಸಂಶೋಧನೆ ಹಾಗೂ ರೂಪುರೇಷೆಗಳು ಸಿದ್ಧಗೊಳ್ಳಬೇಕಾಗಿರುವ ಕಾರಣ, ಈ ವಿಧಾನವನ್ನು ಆನುವಂಶಿಕ ರೋಗಗಳಿಗೆ ಕಾರಣವಾಗುವ ಜನನಕೋಶಗಳನ್ನು ತಿದ್ದುವ ಕ್ಲಿನಿಕಲ್‌ ಪ್ರಯೋಗಗಳಿಗೆ ಬಳಸುವುದಕ್ಕೆ ನಿರ್ಬಂಧ ಇರುವುದು ಒಳ್ಳೆಯದು ಎಂದು ತೀರ್ಮಾನಿಸಿ ಒಂದು ಜಂಟಿ ಪ್ರಬಂಧವನ್ನು ಪ್ರಖ್ಯಾತ “ಸೈನ್ಸ್‌(Science)” ಪತ್ರಿಕೆಯಲ್ಲಿ ಪ್ರಕಟಿಸಿದರು. ಜೆನ್ನಿಫರ್‌ ಡೌಡ್ನ  ಅವರಂತೂ ಹಲವು ಮಾಧ್ಯಮಗಳ ಮೂಲಕ ಈ ಬಗ್ಗೆ ನಿರಂತರವಾಗಿ ಮಾತನಾಡುತ್ತಲೇ ಬಂದಿದ್ದಾರೆ. ನಂತರ 2017 ರಲ್ಲಿ ಅಮೆರಿಕದ ಹಲವು ಅಕಾಡೆಮಿಗಳು ಸೇರಿ ಒಂದು ಸಮಗ್ರ ವರದಿಯನ್ನು ಜೀನೋಮ್‌ ತಿದ್ದುವಿಕೆಗೆ ಸಂಬಂಧಿಸಿದಂತೆ ಸಲ್ಲಿಸಿದವು. ಅದರಲ್ಲಿ ಮನುಷ್ಯರ ಶಾರೀರಿಕ ಹಾಗೂ ಜನನಕೋಶ ಗಳ ತಿದ್ದುವಿಕೆಗೆ ಅಗತ್ಯವಾದ ಮಾರ್ಗಸೂಚಿಗಳನ್ನು ದಾಖಲಿಸಿದವು. ಜೊತೆಗೆ ಮಾನವನ ಹಣೆಬರಹವನ್ನೇ ಬದಲಿಸಬಲ್ಲ ಈ ತಂತ್ರಜ್ಞಾನದ ಬಗ್ಗೆ ಸಾಮಾನ್ಯ ಜನತೆಯನ್ನೂ ಒಳಗೊಂಡಂತೆ ಎಲ್ಲಾ ರಂಗದ ವಿದ್ವಾಂಸರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನೀತಿಯನ್ನು ರೂಪಿಸಬೇಕೆಂದು ಕೂಡ ಪ್ರತಿಪಾದಿಸಿದರು.

ಆದಾಗ್ಯೂ 2018 ರಲ್ಲಿ ಚೀನಾದ ವಿಜ್ಞಾನಿ ಹೀ ಜೀಯಾಂಕಿ ಹೆಚ್.ಐ.ವಿ(HIV) ವೈರಸ್‌ ತಲುಗದಂತೆ ಜನನಕೋಶಗಳ ಜೀನುಗಳನ್ನು ತಿದ್ದಿ ಎರಡು ಕಂದಮ್ಮಗಳನ್ನು ಸೃಷ್ಠಿ ಮಾಡಿದ್ದೀನೆಂದು ಜಗತ್ತಿಗೆ ಸಾರಿದ. ನಂತರದ ದಿನಗಳಲ್ಲಿ ಜೈಲು ಸೇರಿದ ಕೂಡ. ಈ ಎಲ್ಲಾ ವಿಚಾರಗಳು ಕ್ರಿಸ್ಪರ್‌ ಸಂಶೋಧಕರಲ್ಲಿ ದಿಗ್ಭ್ರಮೆ ಉಂಟು ಮಾಡಿದ್ದಲ್ಲದೇ, ಈ ವಿಧಾನದ ಉಪಯುಕ್ತ ಹಾಗೂ ಸಂಯಮಯುತ ಬಳಕೆಗೆ ಒಂದು ಜಾಗತಿಕ ರೂಪುರೇಷೆಗಳು ಸಿದ್ಧಗೊಳ್ಳಬೇಕು ಎಂದು ಪ್ರತಿಪಾದಿಸುವಂತೆ ಮಾಡಿತು. ಅಲ್ಲಿಯವರೆಗೂ ಮಾನವ ಜನನಕೋಶಗಳಲ್ಲಿ ಜೀನುಗಳ ತಿದ್ದುವಿಕೆಗೆ ಅವಕಾಶ ಇರಲೇಕೂಡದು ಎಂದೂ ವಿಜ್ಞಾನಿಗಳು ಆಗ್ರಹಿಸಿದರು. ಏಕೆಂದರೆ ಐತಿಹಾಸಿಕವಾಗಿ ಹುಸಿವಿಜ್ಞಾನವನ್ನು ಆಧರಿಸಿ ನಡೆದ ಯೂಜೆನಿಕ್ಸ್‌ ‌(Eugenics) ಸಂಶೋಧನೆಗಳು, ಅದರಿಂದಾದ ಜನಾಂಗೀಯ ದ್ವೇಷ, ಹಿಂಸೆ ಮತ್ತು ಮಾರಣಹೋಮ ಮನುಕುಲದ ಚರಿತ್ರೆಯಲ್ಲಿ ಆನುವಂಶೀಕ ವಿಜ್ಞಾನ ಬೆಳೆದ ದಾರಿಯ ಜೊತೆಯಲ್ಲೇ ದಾಖಲಾಗಿದೆ.

ಜೊತೆಗೆ ಯೂಕೇರಿಯಾಟಿಕ್‌ ಜೀವಿಕೋಶಗಳು(Eukaryotic) ಎಂದು ಕರೆಯುವ ನ್ಯೂಕ್ಲಿಯಸ್‌ ಹೊಂದಿರುವ ಜೀವಿಕೋಶಗಳಲ್ಲಿ ಈ ವಿಧಾನದ ಬಳಕೆಗೆ ಪೇಟೆಂಟ್‌ ಪಡೆಯುವ  ವಿಚಾರವಾಗಿ ಎಮ್.ಐ.ಟಿಯ ಬ್ರಾಡ್‌ ಇನ್ಸ್ಟಿಟ್ಯೂಟ್(Broad Institute) ಹಾಗೂ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಬರ್ಕ್ಲಿ  ಈ ಎರಡು ಪ್ರತಿಷ್ಠಿತ ಸಂಸ್ಥೆಗಳ ಮಧ್ಯೆ ವ್ಯಾಜ್ಯ ಇನ್ನೂ ಚಾಲಿಯಲ್ಲಿದ್ದು ಸುದ್ಧಿಯಲ್ಲಿದೆ.

ಈ ಎಲ್ಲಾ ವಿದ್ಯಮಾನಗಳ ಜೊತೆಗೆ ಈ ವರ್ಷದ ನೊಬೆಲ್‌ ಬಹುಮಾನ ಪ್ರಕಟವಾಗಿದೆ. ಪ್ರತಿಸಲದಂತೆ, ಈ ತಂತ್ರಜ್ಞಾನಕ್ಕಾಗಿ ದುಡಿದ ಇನ್ನೊಬ್ಬ ವಿಜ್ಞಾನಿಗೂ ಈ ಗೌರವ ಸಲ್ಲಬೇಕಿತ್ತು ಎಂಬ ವಾದವೂ ಇದೆ. ಅದೇನೆ ಇರಲಿ, ಜೀವಿಜಗತ್ತನ್ನು ಬದಲಿಸಬಲ್ಲ ಈ ಕೊಡುಗೆಯನ್ನು ಬಳಸುವಲ್ಲಿ,  ವಿಜ್ಞಾನಿಗಳು, ನೀತಿ ನಿರೂಪಕರು, ಸಮಾಜವಿಜ್ಞಾನಿಗಳು ಮತ್ತು ಸಾಮಾನ್ಯ ಜನರು ಎಲ್ಲರಿಂದ ಇನ್ನೂ ಹೆಚ್ಚಿನ ಆಸ್ಥೆ, ಕುತೂಹಲ, ಎಚ್ಚರಿಕೆ ಹಾಗೂ ಸಂಯಮದ ನಡೆಯನ್ನು ಬಯಸುವ ನಿಟ್ಟಿನಲ್ಲಿ ಈ ವರ್ಷದ ನೊಬೆಲ್‌ ಪುರಸ್ಕಾರ ಪ್ರೇರಕ ಶಕ್ತಿಯಂತಿದೆ. ಆ ಮೂಲಕ  ಇದರ ಚರ್ಚೆಗಳು ಹೆಚ್ಚು ನಡೆಯಬೇಕೆಂಬ ಉದ್ದೇಶವೂ ಅವರಿಗಿದೆ. ಹಾಗಾಗಿ ಈ ದಿಕ್ಕಿನಲ್ಲಿ ಕಾರ್ಯಪ್ರವೃತ್ತರಾಗಿರುವ ಇಬ್ಬರು ಮಹಿಳೆಯರನ್ನು ಗುರುತಿಸಿ ಎಷ್ಟೋ ರೂಢಿಗತ ನಂಬಿಕೆಗಳನ್ನು ಹುಸಿಗೊಳಿಸಿದೆ. ಇನ್ನೇನು ಮುಂದಿನ ತಿಂಗಳ ಮೊದಲ ವಾರದಿಂದ ನೊಬೆಲ್‌ ಸಪ್ತಾಹ ಶುರುವಾಗಲಿದೆ. ನಾನಂತೂ ಪ್ರಶಸ್ತಿ ವಿಜೇತ ಈ ಮಹಿಳೆಯರ ಮಾತುಗಳನ್ನು ಕೇಳಲು ಕಾತರದಿಂದ ಇದ್ದೇನೆ. ನೀವು ಕೇಳುತ್ತೀರಲ್ಲವೇ?

ನಮಸ್ಕಾರ,

– ಆಕಾಶ್‌ ಬಾಲಕೃಷ್ಣ

References

1. Jinek, M., Chylinski, K., Fonfara, I., Hauer, M., Doudna, J.A., and Charpentier, E. (2012). A programmable dual-RNA-guided DNA endonuclease in adaptive bacterial immunity. Science 337, 816–821.

2. Makarova, K.S., Wolf, Y.I., Alkhnbashi, O.S., Costa, F., Shah, S.A., Saunders, S.J., Barrangou, R., Brouns, S.J.J., Charpentier, E., Haft, D.H., et al. (2015). An updated evolutionary classification of CRISPR-Cas systems. Nat. Rev. Microbiol. 13, 722–736.

3. https://www.youtube.com/watch?v=TdBAHexVYzc – J Doudna’s TED talk

4. Eric S. Lander(2016), The Heroes of CRISPR, Cell 164, 18-28

5. https://www.nobelprize.org/uploads/2020/10/advanced-chemistryprize2020.pdf

6. David Baltimore, Paul Berg etc.(2015), A prudent path forward for genomic engineering and germline gene modification, Science 348(6230): 36–38

7. Eric Lander, Paul Berg etc.(2019), Adopt a moratorium on heritable genome editing, Nature 567(7747):165-168

8. National Academies of Sciences, Engineering, and Medicine. Human Genome Editing: Science, Ethics, and Governance (National Academies Press, 2017).

This Post Has One Comment

  1. ಸತೀಶ್

    ಉತ್ತಮ ಮಾಹಿತಿ

Leave a Reply