You are currently viewing “I Too Had a Dream” ಪದ್ಮವಿಭೂಷಣ ಡಾ. ವರ್ಗೀಸ್‍ ಕುರಿಯನ್‍ ಅವರ ಆತ್ಮಕಥೆ.

“I Too Had a Dream” ಪದ್ಮವಿಭೂಷಣ ಡಾ. ವರ್ಗೀಸ್‍ ಕುರಿಯನ್‍ ಅವರ ಆತ್ಮಕಥೆ.

“I Too Had a Dream” ಇದು ದೇಶದ ಕ್ಷೀರ ಕ್ರಾಂತಿಯ ಹರಿಕಾರ ಪದ್ಮವಿಭೂಷಣ ಡಾ. ವರ್ಗೀಸ್‍ ಕುರಿಯನ್‍ ಅವರ ಆತ್ಮಕಥೆ. ಈ ಪುಸ್ತಕದ ಓದಿನ ಆನಂದವನ್ನು ನಾನು ಬರೆದು ತಿಳಿಸಲು ಸಾಧ್ಯವೇ ಇಲ್ಲ. ಅದು ಕೇವಲ ಓದಿನಿಂದ ಮಾತ್ರವೇ ದಕ್ಕುವಂತಹದ್ದು. ಕುರಿಯನ್‍ ಅವರ ಕಾರ್ಯ ಚಟುವಟಿಕೆಗಳ ಬಗೆಗೆ ಆಸಕ್ತರಿಗೆ ಮಾತ್ರವಲ್ಲ, ಯಾರೊಬ್ಬರೂ ಓದಿದರೂ ಹಳ್ಳಿಯ ರೈತ ಜೀವನವನ್ನು ಬದಲಾಯಿಸಿದ ಬಗೆಗೆ ಸಂಪೂರ್ಣ ಒಳನೋಟ ಪಡೆಯಬಹುದು. ಅವರ ರೈತಪರ ಕಾಳಜಿಯ ಹೆಗ್ಗುರುತಾಗಿ ಈ ಪುಸ್ತಕದಲ್ಲಿ ದಾಖಲಾಗಿರುವ ಮುಂದಿರುವ ಮಾತುಗಳು ಅವರ ಶ್ರೇಷ್ಠತೆಯನ್ನು ಎತ್ತಿಹಿಡಿಯಬಲ್ಲವು.

 ” There is nothing wrong in building flyovers in Delhi. What is not fair is when we do not also build an approach road to villages across the nation. There is nothing wrong in having fountains with coloured lights in the capital. After all, Delhi Should be beautiful. But it is unjustified when we have not provided drinking water to our villages. There is nothing wrong in having a modern private hospital in Bombay, or AIIMS in Delhi, or other large medical institutions in our big cities, but it is not justified when we have not arranged to have two drops of a medicine put into eyes of a farmer’s new born baby, and that baby goes blind. While this would have cost us nothing, we have preferred to spend crores of rupees in five-star hospitals in cities. Why Does this happen?”

       ವಿಜ್ಞಾನದ ಅನ್ವಯ, ಸಂಶೋಧನೆ, ಅಧ್ಯಯನಗಳ ಹಿತವನ್ನು  ಜನಪರಗೊಳಿಸಿ ಬಹು ಸಂಖ್ಯೆಯ ಜನರ ಹೃದಯದಲ್ಲಿ  ಸ್ಥಾನ ಪಡೆದ ಅಪರೂಪದವರು  ಡಾ. ವರ್ಗೀಸ್  ಕುರಿಯನ್.  ದೇಶದ ರೈತ ಸಮುದಾಯವನ್ನು ವ್ಯಾವಹಾರಿಕ ಪ್ರಪಂಚದಲ್ಲಿ ಭಾಗವಹಿಸುವಂತೆ ಮಾಡುವುದಷ್ಟೇ ಅಲ್ಲದೇ ಲಾಭದಾಯಕವಾದ ಉದ್ದಿಮೆಯ ಪಾಲುದಾರರನ್ನಾಗಿ ಮಾಡಿದ ಹಿರಿಮೆ ಅವರದು. 

       ಇಡೀ ದೇಶದ ಹಾಲಿನ ಉತ್ಪಾದನೆಯು ಕ್ಷೀಣಸ್ಥಿತಿಯಲ್ಲಿದ್ದಾಗ ಅದನ್ನು ಅಭಿವೃದ್ಧಿ ಪಡಿಸುವುದಷ್ಟೇ ಅಲ್ಲ, ಜಗತ್ತಿನಲ್ಲೇ ಮೊದಲ ಸ್ಥಾನವನ್ನು ಗಳಿಸಿಕೊಟ್ಟ ವ್ಯಕ್ತಿ ಪದ್ಮವಿಭೂಷಣ ಡಾ. ಕುರಿಯನ್. ಹೆಚ್ಚೂ ಕಡಿಮೆ ಸುಮಾರು 50 ವರ್ಷ ಹೈನು ಉದ್ದಿಮೆಯ ಹರಿಕಾರರಾಗಿ ಮುಂದಾಳತ್ವ ವಹಿಸಿದ್ದ ಕುರಿಯನ್, ಭಾರತೀಯ ಸಂದರ್ಭದಲ್ಲಿ ರೈತರಿಗೆ ಹಣಗಳಿಕೆಯ ಮೂಲವನ್ನು ಹೇಳಿಕೊಟ್ಟ ಕಥಾನಕ ಇದು. ರೈತರೆಂದೂ ಮಾರಾಟದ ಬಗ್ಗೆ ತಲೆಕೆಡಿಸಿಕೊಂಡವರಲ್ಲ. ಅಂತಹ ತಂತ್ರಗಳೂ ಕೂಡ ಅವರಿಗೆ ಅಷ್ಟಾಗಿ ತಿಳಿದಿಲ್ಲ. ತಿಳಿದಿದ್ದರೆ ಲಾಭದ ಅಂಶದಲ್ಲಿ ಅವರ ಪಾಲು ದೊಡ್ಡದೇ ಇರುತ್ತಿತ್ತು. ಅಂತಹದ್ದರಲ್ಲಿ ರೈತರ ಒಂದು ಉತ್ಪನ್ನಕ್ಕೆ ಬ್ರಾಂಡ್ ಒದಗಿಸಿಕೊಟ್ಟ ವ್ಯಕ್ತಿ. ಕಳೆದ ಕೆಲವು ದಶಕಗಳಿಂದ ನಮ್ಮ ರೈತರೂ ದಿನವೂ ಹಣವನ್ನು ನೋಡಿದ್ದರೆ ಅದಕ್ಕೆ ಕಾರಣವನ್ನು ಇವರ ವಿನಾಃ ಬೇರೆಡೆ ಹುಡುಕಬೇಕಾಗಿಲ್ಲ. ರೈತರ ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆ ಮತ್ತು ವ್ಯಾಪಾರಿ ತಂತ್ರವಿದ್ದು ಜೊತೆಗೆ ರೈತರೂ ಭಾಗವಹಿಸುವಂತಾದರೆ ಲಾಭ ನಿಶ್ಚಯವಾಗಿಯೂ ರೈತರ ಮನೆತಲುಪುವುದು ಎಂಬುದಕ್ಕೆ ಅವರ ಕನಸಿನ ಹಾಲು ಉತ್ಪಾದಕ ಸಂಘಗಳೇ ಸಾಕ್ಷಿ. ದೇಶದಲ್ಲಿ ಯಾವುದೇ ಸರ್ಕಾರವಿದ್ದರೂ ಹಲವು ದಶಕಗಳ ಕಾಲ ರಾಷ್ಟ್ರೀಯ ಹೈನು ಅಭಿವೃದ್ಧಿ ನಿಗಮದ ಮುಂದಾಳತ್ವ ವಹಿಸಿ ನಿರ್ವಹಿಸಿದ ಕೀರ್ತಿ ಅವರದು.

ಡಾ. ವರ್ಗೀಸ್‌ ಕುರಿಯನ್‌ ಜೊತೆ ತ್ರಿಭುವನ್‌ ದಾಸ್‌ ಪಟೇಲ್‌

       ಮೆಕಾನಿಕಲ್‌ ಇಂಜನಿಯರಿಂಗ್‌ ಮತ್ತು ಮೆಟಲರ್ಜಿ ಇಂಜನಿಯರಿಂಗ್‌ ಓದಿ 1949ರಲ್ಲಿ ಆಕಸ್ಮಿಕವಾಗಿ ಸರ್ಕಾರಿ ಕೆಲಸಕ್ಕೆಂದು ಡೈರಿ ನಿರ್ವಹಣೆಯ ಕೆಲಸಕ್ಕೆ ಬಂದವರು ಕುರಿಯನ್‌. ಆಗಿನ್ನೂ ಹೈನೋದ್ಯಮ ಏನೂ ಅರಿಯದ ಕ್ಷೇತ್ರವಾಗಿದ್ದು, ಸರ್ಕಾರಿ ಕೆಲಸಕ್ಕೆ ಬೇಸತ್ತ ಸಮಯದಲ್ಲಿ ಅಚಾನಕ್‌ ಸಿಕ್ಕವರು ಶ್ರೀತ್ರಿಭುವನ್‌ ಪಟೇಲ್‌. ಗುಜರಾತಿನ ಕೈರಾ ಜಿಲ್ಲೆಯ ರೈತರ ಸಹಕಾರಿ ಹೈನುಗಾರಿಕೆಯ ಯಾವುದೋ ಯಂತ್ರದ ರಿಪೇರಿಯಲ್ಲಿ ಸಹಾಯ ಮಾಡಲು ಒಪ್ಪಿಕೊಂಡ ಕುರಿಯನ್‌ ಅವರು ಮುಂದೆ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ಇತ್ತು ತ್ರಿಭುವನ್‌ ಅವರ ಜೊತೆಗೂಡಿ ಕೈರಾ ಜಿಲ್ಲೆಯ ಹಾಲು ಉತ್ಪಾದಕರ ಸಂಘದ ಜೊತೆಗೆ ಕೈಗೂಡಿಸಿದರು. ಅದೇ ಇಂದಿನ ಹೆಸರಾಂತ “ಅಮೂಲ್‌” ಆಗಿ ರೂಪುಗೊಂಡು ಜಗದ್ವಿಖ್ಯಾತವಾಗಿದೆ. ಭಾರತದ ಹೈನುಗಾರಿಕೆಗೆ ಅಂತರರಾಷ್ಟ್ರೀಯ ಮನ್ನಣೆಯು ದೊರೆಯುವಂತಾಗಲು ಕಾರಣರಾದವರು. ವರ್ಗೀಸ್‌ ಕುರಿಯನ್‌.

       ರೈತ ಸಮುದಾಯದ ಶಕ್ತಿಯನ್ನು ಅರ್ಥಪೂರ್ಣವಾಗಿ ಕಟ್ಟಿಕೊಡುವ ಹಾಲು ಉತ್ಪಾದನೆ ಹಾಗೂ ಹಳ್ಳಿಗರ ಏಳಿಗೆಯ ಅವರ ಕನಸು, “ಅಮೂಲ್‌”.  ತುಂಬಾ ಜನಪ್ರಿಯವಾದ ಉದಾಹರಣೆಯಿಂದ ಹೇಳಬೇಕೆಂದರೆ ಅವರ ಕನಸು ಹಾಗೂ ಜೀವನವನ್ನು ಆಧರಿಸಿ ಶ್ಯಾಮ್‌ ಬೆನಗಲ್‌ ನಿರ್ದೇಶನದಲ್ಲಿ “ಮಂಥನ್‌” ಎಂಬ ಚಲನಚಿತ್ರವನ್ನು ಸುಮಾರು 5 ಲಕ್ಷ ರೈತರು ಪ್ರತಿಯೊಬ್ಬರೂ 2 ರುಪಾಯಿ ಹಾಕಿ ನಿರ್ಮಿಸಲಾಗಿದೆ. ದೇಶದ ಮೊಟ್ಟ ಮೊದಲ ಸಮುದಾಯ ನಿಧಿ -ಕ್ರೌಡ್‌ ಫಂಡ್‌- ನಿಂದ ಚಲನಚಿತ್ರವೊಂದು ತಯಾರಾಗಿತ್ತು. ಇಂತಹಾ ಚಿತ್ರವನ್ನು ನೋಡುವರಾರು ಎಂಬ ಪ್ರತಿಕ್ರಿಯೆಯಾಗಿ, ನಿರ್ಮಿತಿಯ ಧೈರ್ಯದ ಬಗ್ಗೆ ಕುರಿಯನ್‌ ಅವರು ಹೀಗಂದಿಂದ್ದರು. “ರೈತರೇ ನಿರ್ಮಿಸಿದ ಅವರದ್ದೇ ಕಥೆಯನ್ನು ಅವರೇ ನೋಡಲು ಬರುತ್ತಾರೆ”. ಅಕ್ಷರಶಃ ಹಾಗೇ ಆಯಿತು. ತಮ್ಮದೇ ಕಥನದ ಚಿತ್ರವನ್ನು ರೈತರು ಟ್ರಾಕ್ಟರ್‌ಗಳಲ್ಲಿ ಹತ್ತಿ ಬಂದು ನೋಡಿದರು. ಅಭಿವೃದ್ಧಿ ಹರಿಕಾರನ ಕನಸಿನ ಶಕ್ತಿಯದು. ಚಿತ್ರ ಆರಂಭವಾಗುವುದೇ “ಗುಜರಾತಿನ 5,00,000 ರೈತರು ಅರ್ಪಿಸುವ” ಎಂಬ ಶೀರ್ಷಿಕೆಯಿಂದ! ಚಿತ್ರವನ್ನು ನೋಡಲು  https://www.youtube.com/watch?v=91qliAxU1pA ಲಿಂಕ್ ಬಳಸಬಹುದು. 

ಒಂದು ದೇಶದ ಪ್ರಧಾನಿಯನ್ನು ರೈತರ ಬಳಿಗೆ ಯಾವುದೇ ಕಾವಲು ಪಡೆಯಿಲ್ಲದೇ ಕರೆದೊಯ್ಯಲು ಸಾಧ್ಯವಾಗಿದ್ದರೆ ಅದು ಕುರಿಯನ್‍ ಅಂಥಹವರಿಂದ ಮಾತ್ರ ಸಾಧ‍್ಯವೇನೋ….! ಅಂತಹದ್ದು ಜರುಗಿದ್ದು ಲಾಲ್‌ ಬಹದ್ದೂರ್‌ ಶಾಸ್ತ್ರಿಯವರು ಪ್ರಧಾನಿಯಾಗಿದ್ದಾಗ, ಕುರಿಯನ್‌ ಅವರ ಜೊತೆಗೆ ರೈತರೊಟ್ಟಿಗೆ ಹಳ್ಳಿಯಲ್ಲಿ ರಾತ್ರಿಯನ್ನು ಕಳೆದಿದ್ದರು. ಶಾಸ್ತ್ರಿಯವರಿಗೆ ಹಳ್ಳಿಗಳ ಜೀವನವೇನೂ ಹೊಸತಲ್ಲ ನಿಜ! ಆದರೆ ಅಭಿವೃದ್ಧಿಯ ಕನಸಿನಲ್ಲಿ ಹಳ್ಳಿಗಳ ಪಾಲನ್ನು ಹಾಲಿನ ಮೂಲಕ ರೈತರ ಜೀವನದೊಂದಿಗೆ ಪ್ರಸ್ತುತ ಪಡಿಸಿದವರು ವರ್ಗೀಸ್‌. ಹಾಗೇಯೇ ಜಾಗತಿಕವಾಗಿ ಮೊಟ್ಟ ಮೊದಲ ಬಾರಿಗೆ ಎಮ್ಮೆಯ ಹಾಲಿನ ಪುಡಿಯ ತಯಾರಿಕೆಯನ್ನೂ ಸಿದ್ಧಿಸಿ, ಅದರ ಯಾಂತ್ರಿಕ ಘಟಕವನ್ನೂ ಪ್ರಧಾನಿಯವರಿಂದಲೇ ಉದ್ಘಾಟಿಸಿದ್ದರು.        

     ಕುರಿಯನ್‌ ಅವರು ತ್ರಿಭುವನ್‌ದಾಸ್‌ ಪಟೇಲ್‌ ಜೊತೆ ಸೇರಿ, ಪುಟ್ಟ ಗ್ಯಾರೇಜಿನಿಂದ ಆರಂಭಿಸಿದ ಹಾಲಿನ ಹನಿಗೂಡಿಸಿ ಮಾರುವ ನಿಷ್ಠೆಯ ಪ್ರೀತಿಯು ಅಮೂಲ್‌ ಆಗಿ, ಆನಂದ್‌ ನಗರವನ್ನು ಜಾಗತಿಕ ನಕ್ಷೆಯಲ್ಲಿ ಪ್ರತಿಷ್ಠಾಪಿಸಿದ್ದೇ ಅಲ್ಲದೆ, ಅದೇ ಹನಿಗೂಡುವ ಶ್ರದ್ಧೆಯು ಇಡೀ ಇಂಡಿಯಾದ ಹಳ್ಳಿ-ಹಳ್ಳಿಗೂ ಚಾಚಿದ್ದು ಅಭಿವೃದ್ಧಿ ಚಿಂತನೆಯ ಪ್ರಾಯೋಗಿಕ ಸಿದ್ಧಿ. ಇಂದಿರಾ ಗಾಂಧಿಯಂತಹಾ ಪ್ರಧಾನಿಯನ್ನೂ ನಿರ್ದೇಶಿಸಬಲ್ಲ ಎದೆಗಾರಿಕೆ ಇದ್ದ ಇಂಜನಿಯರ್‌. ಜಾಗತಿಕವಾಗಿ ಇಂಡಿಯಾದ ಹಾಲು ಉತ್ಪಾದನಾ ಕ್ರಾಂತಿಯನ್ನು “ಶ್ವೇತ ಕ್ರಾಂತಿ” ಎಂದು ಗುರುತಿಸುವಂತೆ ಮಾಡಿದರು. ಅವರ ಜನಪ್ರಿಯತೆ ಎಷ್ಟಿತ್ತೆಂದರೆ ಪಾಕೀಸ್ಥಾನವೂ ಸಹಾ ತಮ್ಮ ದೇಶದಲ್ಲೂ ಹಾಲಿನ ಉತ್ಪಾದನೆಗೆ ಸಹಕಾರ ನೀಡಲು ಇವರನ್ನು ಕೇಳಿತ್ತು. ಅದಕ್ಕೆ ಉತ್ತರವಾಗಿ ಕುರಿಯನ್ ಹೇಳಿದ್ದು, ಸ್ವಾರಸ್ಯವಾಗಿದೆ. “ಪಾಕೀಸ್ಥಾನದ ಕೆಲಸವನ್ನೂ ಆನಂದ್‍ ನಿಂದಲೇ ನಿಭಾಯಿಸುವುದಿದ್ದರೆ ಆಗಲಿ” ಎಂದಿದ್ದರು. ಅಷ್ಟರ ಮಟ್ಟಿಗೆ ಕೇರಳಿಗರೊಬ್ಬರು ಗುಜರಾತದ ನೆಲಕ್ಕೆ ಅಂಟಿಕೊಂಡಿದ್ದರು.   

ಅಮೂಲ್ ಅವರ ಕನಸಿನ ಕೂಸು. ಆನಂದ್  ನಗರ  ಅವರ ಕರ್ಮಭೂಮಿ. 

       ನಮ್ಮ ದೇಶವು 1997ರಲ್ಲಿಯೇ ಅಮೆರಿಕೆಯಿಂದ ಹಾಲಿನ ಉತ್ಪಾದನೆಯ ಮೊದಲಸ್ಥಾನವನ್ನು ಕಸಿದುಕೊಂಡು ತೀರಾ ಇತ್ತೀಚೆಗನವರೆಗೂ ಕಾಪಾಡಿಕೊಂಡು ಬಂದಿತ್ತು. ಇದೀಗ ಭಾರತ ಎರಡನೆಯ ಸ್ಥಾನದಲ್ಲಿ ಇದ್ದರೂ ಕೇವಲ 6-8 ದಶಲಕ್ಷ ಟನ್ನುಗಳ ವ್ಯತ್ಯಯವಷ್ಟೇ! ಭಾರತದ ಮೂರನೆಯ ಒಂದು ಭಾಗದ ಉತ್ಪಾದನೆಯಿಂದ ಚೀನಾ ಮೂರನೆಯ ಸ್ಥಾನ. ಇದಕ್ಕೆಲ್ಲಾ ಕುರಿಯನ್ ಅವರ ಕನಸಿನ ಸಾಕಾರ ಶಕ್ತಿಯ ಕಾಣಿಕೆ. ರೈತರೇ ನಿರ್ವಹಿಸುವ ಸುಮಾರು 30 ಸಂಸ್ಥೆಗಳನ್ನು ಸ್ಥಾಪಿಸಿದ್ದು ಬಹು ಮುಖ್ಯವಾದ ಸಂಗತಿ. ಅವರ ಬಹಳ ಮುಖ್ಯ ಕಾಣ್ಕೆಯೆಂದರೆ ರೈತ ಉತ್ಪನ್ನಗಳ ವಹಿವಾಟಿನಲ್ಲಿ ಮಧ್ಯವರ್ತಿಗಳ ಲಾಭಿಗಳ ತಡೆಯುವಿಕೆ ಮತ್ತು ರೈತ ಸಮುದಾಯಗಳ ಪಾಲ್ಗೊಳ್ಳುವಿಕೆ. ಅಂತಹ ಒಂದು ಸಾಧ್ಯತೆಯನ್ನೇ ಅವರು ಹುಟ್ಟು ಹಾಕಿದರು. ಮಾತ್ರವಲ್ಲ, ತಿನ್ನುವ ಎಣ್ಣೆ ವಹಿವಾಟಿನಲ್ಲಿಯೂ ದೇಶಕ್ಕೆ ಸುಸ್ಥಿರತೆಯನ್ನು ತಂದುಕೊಟ್ಟರು. ಒಮ್ಮೆ ಭಾರತದ ಹಾಲಿನ ಉತ್ಪನ್ನಗಳ ವಹಿವಾಟಿನ ಮಾರುಕಟ್ಟೆಗಳಲ್ಲಿ ಕೊಂಡೊಯುವಲ್ಲಿ ಉಂಟಾದ ತೊಂದರೆಗಳ ನಿಭಾಹಿಸಿದ ರೀತಿಯು ಅವರ ಭಾರತೀಯತೆಗೆ ಸಾಕ್ಷಿ.  ವಿದೇಶಿ ಕಂಪನಿಗಳು ನಮ್ಮ ರಾಜಕೀಯ ಭ್ರಷ್ಟ ಸನ್ನಿವೇಶಗಳ ಲಾಭ ಪಡೆಯಲು ಹವಣಿಸಿದ್ದವು. ಮುಖ್ಯವಾಗಿ ಹೈನು ಉದ್ಯಮದ ಮುಂಚೂಣಿಯಲ್ಲಿದ್ದ ನ್ಯೂಜಿಲೆಂಡ್ ಕಂಪನಿಗೆ ಅವರ ಉತ್ತರಿಸಿದ್ದ ಬಗೆ ಮಾತ್ರ ಅವರ ಭಾರತೀಯ ಪ್ರಜ್ಞೆಯ ಉತ್ಕೃಷ್ಟ ಸಂಕೇತ. ಆಗ ಆ ಕಂಪನಿಗೆ ಅವರೆಂದ ಮಾತು ಹೀಗಿದೆ “ನಮ್ಮ ದೇಶದ ರೈತರ ಸಂಖ್ಯೆ ಎಷ್ಟಿದೆ ಎಂದರೆ, ನಾವೆಲ್ಲಾ ಒಟ್ಟಾಗಿ ಸೇರಿ ಒಮ್ಮೆಲೆ ಉಗಿದರೆ ಸಾಕು ನಿಮ್ಮ ದೇಶ ಮುಳುಗೀತು”. ಹೀಗೆಂದು ರೈತ ಪರವಾದ ದನಿ ಎತ್ತಿದ ಅಪಾರ ಕಾಳಜಿಯ ಕುರಿಯನ್ ನಿಜವಾದ ಅರ್ಥದಲ್ಲಿ ಅನಘ್ರ್ಯ ಭಾರತೀಯ ರತ್ನ.

       ಒಬ್ಬನೇ ವ್ಯಕ್ತಿಯ ಜೀವನದಲ್ಲಿ ಇಂತಹದೂ ಸಾಧ್ಯವೇ ಎಂಬಂತೆ ಅನೇಕ ಸಾಕಾರಗಳ ಕಥಾನಕ ಕುರಿಯನ್ ಅವರ ಜೀವನಗಾಥೆ. Indian Institute of Management ಮಾದರಿಯಂತೆ Institute of Rural Management-Anand (IRMA) ಅನ್ನು ಗುಜರಾತಿನ ಆನಂದ್‍ ಅಲ್ಲಿ ಸ್ಥಾಪಿಸಿದರು. ಅಯ್ಯೋ ಹಾಲು ಮಾರೋದಕ್ಕೆ ಮ್ಯಾನೇಜ್‌ಮೆಂಟ್‌ ಗ್ರಾಜುಯೆಟಾ? ಎಂದವರಿಗೆ “ಇಲ್ಲಾ…! ಟೂತ್‌ ಪೇಸ್ಟ್‌ ಮಾರೋದಕ್ಕೆ ಮಾತ್ರನಾ” ಎಂಬ ಉತ್ತರವಿತ್ತಿದ್ದರು ವರ್ಗೀಸ್‌. ಹಳ್ಳಿಗರ ವ್ಯವಸ್ಥೆಗೆ ಕೃಷಿಯ ಉತ್ಪನ್ನಗಳಿಗೆ ಅಚ್ಚುಕಟ್ಟಾದ ನಿರ್ವಹಣಾ ಮಾರುಕಟ್ಟೆಯ ಲೆಕ್ಕಾಚಾರಗಳಿಂದ “ಹಾಲು ಮತ್ತು ಹಾಲಿನ ಉತ್ಪಾದನೆಗಳೇ ಅಲ್ಲದೆ ಅಡುಗೆ-ಎಣ್ಣೆಯ ಸ್ಥಿರತೆಯ” ಕಡೆಗೂ ಗಮನ ಹರಿಸಿದರು. ಇಂದಿಗೂ ಕೃಷಿ ಹಾಗೂ ಗ್ರಾಮೀಣ ನಿರ್ವಹಣಾ ತಂತ್ರಜ್ಞಾನಗಳ ಶೈಕ್ಷಣಿಕ ಶಿಸ್ತನ್ನು ನಿರೂಪಿಸಿ ನಿರ್ವಹಿಸುತ್ತಿರುವ IRMA ಸಂಸ್ಥೆಯು ಕುರಿಯನ್‌ ಅವರ ಬಹು ದೊಡ್ಡ ಸಮುದಾಯವೊಂದರ ಅಭಿವೃದ್ಧಿ ನಿಲುವನ್ನು ಗಟ್ಟಿಗೊಳಿಸುದರ ಮಹತ್ವವನ್ನು ಸಾಬೀತು ಮಾಡಿದ್ದಾರೆ. IRMA ಸಂಸ್ಥೆಯು ಭಾರತೀಯ B-School ಗಳಲ್ಲಿ ಐದನೆಯ ಸ್ಥಾನದಲ್ಲಿದೆ.

       ಇಂತಹಾ ಮಹಾನ್‌ ಸಾಧಕರಾದ ಕುರಿಯನ್‌ ತಮ್ಮ ಸಾಧನೆಯ ಪ್ರೇರಕರ ಬಗ್ಗೆ ಆಡಿರುವ ಈ ಮಾತು ಅವರ ವಿನಯದ ಬಲು ದೊಡ್ಡ ಸಂಕೇತ. “ತರಬೇತಿಯಿಂದ ಕುರಿಯನ್ನರನ್ನು ರೂಪಿಸಬಹುದು, ಆದರೆ ತ್ರಿಭುವನರನ್ನು ಅಲ್ಲ”. ಹಾಗಾಗಿ ತರಬೇತಿಯಿಂದ ತಾನು ಸಾಧಿದ್ದೇನೆಯೇ ವಿನಾಃ, ತ್ರಿಭುವನರಂತೆ ಹೃದಯದೊಳಗೆ ಅರಳುವ ಅಭಿವೃದ್ಧಿಯ ಸಾಧ್ಯತೆಯನ್ನು ಹೊತ್ತಿಲ್ಲ ಎಂದಿದ್ದರು.

ಗುಜರಾತಿನ ನೆಲಕ್ಕೆ ತಮ್ಮನ್ನು ಅರ್ಪಿಸಿಕೊಂಡು ಕೊನೆಯವರೆಗೂ ಅಲ್ಲಿಯೇ ಜೀವನ ಕಳೆದ ವೈವಿಧ್ಯತೆಯ ಕನಸುಗಾರ ಕುರಿಯನ್‍ ಆತ್ಮ ಕಥಾನಕ ಭಾರತೀಯರೆಲ್ಲಾ ಓದಲೇಬೇಕಾದ ಕೃತಿ. ಆರಂಭದಲ್ಲೇ ಹೇಳಿದಂತೆ “ಆನಂದ್‌ – ನಗರವಾಗಿಸಿ, ಜಾಗತಿಕವಾಗಿ ಬೆಳಗಿಸಿದ ಮಹಾನ್‌ ವ್ಯಕ್ತಿಯ ಜೀವನಗಾಥೆಯ ಓದಿನ “ಆನಂದ”ವನ್ನು ಬರೆದು ಹೇಳಲು ಸಾಧ್ಯವೇ ಇಲ್ಲ. ಕನ್ನಡಕ್ಕೂ ಅನುವಾದವಾಗಿರುವ (ಅಮೂಲ್‌- ನಾನೂ ಒಂದು ಕನಸು ಕಂಡೆ) ವರ್ಗೀಸ್‌ ಕುರಿಯನ್‌ ಅವರ ಆತ್ಮ ಚರಿತ್ರೆಯನ್ನು ಓದಿಯೇ ಅದರ ಆನಂದವನ್ನು ಅನುಭವಿಸಬೇಕು.

ನಮಸ್ಕಾರ

ಟಿ. ಎಸ್. ಚನ್ನೇಶ್

This Post Has 2 Comments

  1. ಕೃಷ್ಣಮೂರ್ತಿ ಬಿ ಎಸ್

    ನೀವು ಬರೆಯುವ ಶೈಲಿ …ಮನಸೆಳಯುತ್ತದೆ..ಮತ್ತೆ ಮತ್ತೆ ಓದಿಗೆ ಪ್ರೇರೆಪಿಸಿ ಅರಿವಿನ ವಿಸ್ತಾರ ಹೆಚ್ಚಿಸುತ್ತಿದೆ….ಅಗಣಿತ ನಮನಗಳು

  2. Shivakumara C

    ನಿಮ್ಮ ಬರಹ ಮನಮುಟ್ಟಿತು ಸರ್.

Leave a Reply