ಇಂದಿನ ಪುಸ್ತಕಯಾನವು ಸ್ವಲ್ಪ ಭಿನ್ನವಾದುದು. ಒಂದು ಪುಸ್ತಕವನ್ನು ಪರಿಚಯಿಸುವುದರ ಜೊತೆಗೆ, ಜಗತ್ತು ಕಂಡ ಮಹಾನ್ ಬರಹಗಾರ ತನ್ನನ್ನು ಕಂಡಂತೆ ಹೇಳಿಕೊಂಡ ವಿವರಗಳ ವಿಶಿಷ್ಟವಾದ ವಿಜ್ಞಾನಿಯ ಆತ್ಮಕಥನ ಇದು. ಪುಸ್ತಕ I Asimov: A memoir. ಇದರ ಶೀರ್ಷಿಕೆ ಅವರದ್ದೇ ಪುಸ್ತಕಗಳಲ್ಲಿ ಕಾಣುವ ಅವರ ಹೆಸರೂ ಹೌದು. ಜೊತೆಗೆ ಇವರ ವಿಖ್ಯಾತವಾದ ವಿಶಿಷ್ಟ ಪ್ರಕಟಣೆಗಳಲ್ಲಿ ಒಂದಾದ I. Robot ನಿಂದ ತುಸು ಪ್ರಭಾವಿಸಿರಬಹುದಾದ ಸಾಧ್ಯತೆಯೂ ಇದ್ದೀತು. ಸುಮಾರು 470 ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿರುವ ಅಸಿಮೊವ್ ಬರೆಯದ ಕ್ಷೇತ್ರವಿಲ್ಲ. ಲೈಬ್ರರಿಗಳಲ್ಲಿ ಪುಸ್ತಕಗಳನ್ನು ವರ್ಗೀಕರಿಸಿ ಜೋಡಿಸುವ ಜನಪ್ರಿಯ ಪದ್ದತಿಯಾದ ಡೆವಿ ಡೆಸಿಮಲ್ ವರ್ಗೀಕರಣ ಪದ್ದತಿ (Dewey Decimal Classification System -DDC of Library Classification)ಯ ಹತ್ತು ಪ್ರಮುಖ ವರ್ಗಗಳಲ್ಲಿ, ಫಿಲಾಸಫಿ ಮತ್ತು ಸೈಕಾಲಜಿ ಪುಸ್ತಕಗಳ 000-100 ವರ್ಗದ ಹೊರತಾಗಿ ಉಳಿದ ಎಲ್ಲಾ ಒಂಭತ್ತೂ ವರ್ಗಗಳಲ್ಲಿ ಪುಸ್ತಕವನ್ನು ಪ್ರಕಟಿಸಿರುವ ಏಕೈಕ ಬರಹಗಾರ ಐಸ್ಯಾಕ್ ಅಸಿಮೊವ್. ನೀವು ಏನಾದರೂ ಹೆಸರಿಸಿ, ಇತಿಹಾಸ, ವಿಮರ್ಶೆ, ಕಾವ್ಯ, ವಿನೋದ, ವಿಜ್ಞಾನದ ಎಲ್ಲಾ ಶಾಖೆಗಳು (ಭೌತವಿಜ್ಞಾನ, ರಸಾಯನ ವಿಜ್ಞಾನ, ಗಣಿತ, ಜೀವಿವಿಜ್ಞಾನ, ಕಂಪ್ಯೂಟರ್ ವಿಜ್ಞಾನ, ಬಾಹ್ಯಾಕಾಶ ವಿಜ್ಞಾನ, ಭೂವಿಜ್ಞಾನ, ಇಂಜನಿಯರಿಂಗ್ ಮತ್ತು ತಂತ್ರಜ್ಞಾನ, ವೈದ್ಯಕೀಯ ಹೀಗೆ…) ಕಥೆ, ಕಾದಂಬರಿ, ಕಾಲ್ಪನಿಕ ವಿಜ್ಞಾನ, ಹೀಗೆ ಪಟ್ಟಿ ಬೆಳೆದೀತು. ಸಾಲದಕ್ಕೆ ಬೈಬಲ್ ಕುರಿತೂ 7 ಪುಸ್ತಕಗಳನ್ನು, ಸಾಹಿತ್ಯವನ್ನು ಕುರಿತು 10 ಪುಸ್ತಕಗಳನ್ನು (Asimov’s Guide to Shakespear (Vol I & II), Asimov’e Guide to Paradise Lost ಸೇರಿದಂತೆ), ಆತ್ಮಚರಿತ್ರೆಯ 3 ಪುಸ್ತಕಗಳನ್ನು ಅವರ ಒಟ್ಟು ಪುಸ್ತಕಗಳ ಪಟ್ಟಿಯೇ -ಪ್ರತೀ ಪುಟಕ್ಕೆ 30-40 ರಂತೆ- ಸುಮಾರು 14 ಪುಟಗಳಷ್ಟು ಇದೆ.
ಐಸಾಕ್ ಅಸಿಮೊವ್ ಅವರು ನನ್ನ ಅತ್ಯಂತ ಪ್ರೀತಿಯ ಲೇಖಕರಲ್ಲಿ ಒಬ್ಬರು. ಆದರೂ ಈವರೆವಿಗೂ ಅವರ ಬಗ್ಗೆ ಬರೆಯುವ ಧೈರ್ಯವಿರಲಿಲ್ಲ, -ನಿಜ ಹೇಳಬೇಕೆಂದರೂ ಈಗಲೂ ಇಲ್ಲ!- ಅವರು 1992 ರಲ್ಲಿ ಎಪ್ಪತ್ತೆರಡನೆಯ ವಯಸ್ಸಿನಲ್ಲಿ ನಿಧನರಾದಾಗ ಚಿಂತನೆ ಮತ್ತು ಕಲ್ಪನೆಯಲ್ಲಿ ಸಾಟಿಯಿಲ್ಲದ ಪ್ರತಿಭೆಯನ್ನು ಕಳೆದುಕೊಂಡ ಬಗೆಗೆ ವರದಿಯಾಗಿತ್ತು. ಅವರು ಪರಿಚಯವಾಗಿದ್ದು 80ರ ದಶಕದಲ್ಲಿ ಜಿಕೆವಿಕೆಯ ಲೈಬ್ರರಿಯಲ್ಲಿ ಅವರ Asimov’s Guide to … series ಗಳನ್ನು ನೋಡಿದಾಗ! ನೋಡಿದ್ದಷ್ಟೇ ನಿಜಕ್ಕೂ ಓದಲಾಗಿರಲಿಲ್ಲ! Understanding Physics – Series ಅನ್ನು Physics ಬಗ್ಗೆ ಇದ್ದ ಪ್ರೀತಿಗಾಗಿ ಅನಿವಾರ್ಯದ ಓದು ಪಡೆದಿತ್ತು. ಮುಂದೆ 90ರದಶಕದಲ್ಲಿ ಅವರ I, Robot ಅನ್ನು ಓದುವ ಪ್ರಯತ್ನದಲ್ಲಿ ಸ್ವಲ್ಪ ಮಟ್ಟಿಗಿನ ಯಶಸ್ಸು ಸಿಕ್ಕಿತ್ತು. ಕಡೆಗೊಮ್ಮೆ 1995 ರ ಸುಮಾರಿನಲ್ಲಿ ಇಂಡಿಯನ್ ಇನ್ಸ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಬುಕ್ ಶಾಪ್ ಅಲ್ಲಿ ಪ್ರಸ್ತುತ ಪುಸ್ತಕ I. Asimov ಕಣ್ಣಿಗೆ ಬಿತ್ತು. ಅವರ ಇಡೀ ಬರಹಗಳ ಬಗೆಗೂ ಹಾಗೂ ಬರಹಗಾರರನ್ನು ಒಟ್ಟಿಗೇ ಒದುವ ಹೆಚ್ಚೂ ಕಡಿಮೆ –ದುರಾಸೆಯ(?)ಕುತೂಹಲ– ಹಾಗೂ ಒಂದು ಬಗೆಯ ತೃಪ್ತಿಗಾಗಿ ಓದಿದ್ದನ್ನು ಇದೀಗ ಮತ್ತೆ ಪುಟಗಳ ಕಣ್ಣಾಡಿಸಿ ಪುಸ್ತಕಯಾನದಲ್ಲಿ ಪರಿಚಯಿಸುತ್ತಿದ್ದೇನೆ.
ಪ್ರಸ್ತುತ ಪುಸ್ತಕ I. Asimov ಅವರ ಮರಣಾನಂತರ ಒಂದು memoir ಆಗಿ 1994ರಲ್ಲಿ ಪ್ರಕಟಣೆಯಾಯಿತು. 1992ರ ಏಪ್ರಿಲ್ ತಿಂಗಳಲ್ಲಿ ನಿಧನರಾದ ಅವರು ಮೊದಲು ಎರಡು ಆತ್ಮಚರಿತ್ರೆಯ ಪುಸ್ತಕಗಳನ್ನು 1979 ಮತ್ತು 80 ರಲ್ಲಿಯೇ ಪ್ರಕಟಿಸಿದ್ದರು (In Memory Yet Green ಮತ್ತುIn Joy Still Felt). ನಂತರ ಅವರ ಲಕ್ಷಾಂತರ ಓದುಗರ ಬಯಕೆಯಂತೆ ಕಥನವನ್ನು ಮುಂದುವರೆಸುವುದಾಗಿ ಹೇಳಿದ್ದರೂ ಅಷ್ಟೇನೂ ಉತ್ಸುಕರಾಗಿದ್ದವರಲ್ಲ. ಅವರಿಗೆ 70 ತುಂಬಿದಾಗ ಉಂಟಾದ ಅನಾರೋಗ್ಯದ ಸಂದರ್ಭದಲ್ಲಿ ಅವರ ಪ್ರೀತಿಯ ಬರಹಗಾರ್ತಿ ಪತ್ನಿ ಜಾನೆಟ್ ಅವರ ಒತ್ತಾಯದಿಂದ ಹಿಂದಿನ ಎರಡರಲ್ಲಿ ಪಾಲಿಸಿದ ಕಾಲಾನುಕ್ರಮವನ್ನು ಬಿಟ್ಟು, ವಿಷಯಾಧಾರಿತ ಜೀವನ ಸಂದರ್ಭದ -ಹೆಚ್ಚೂ -ಕಡಿಮೆ- ಮತ್ತೊಮ್ಮೆ ಇಡಿಯಾದ ವಿವರಣಾತ್ಮಕ ಕಥನವನ್ನು ರೂಪುಗೊಳಿಸಲು ಆರಂಭಿಸಿದರು. ಆಗ 90ರ ದಶಕ. ಇಡೀ ಜಗತ್ತು 21ನೆಯ ಶತಮಾನಕ್ಕೆ ಕಾಲಿಡಲು ಅಣಿಮಾಡಿಕೊಳ್ಳುತ್ತಿದ್ದ ದಶಕ. ಇಡೀ ಜಗತ್ತು ಅದರಲ್ಲೂ ಕಂಪ್ಯೂಟರ್ ಜಗತ್ತನ್ನು ವೈ-2-ಕೆ (Y2K) ಚರ್ಚೆಗಳು ಆವರಿಸಲು ಅಣಿಯಾಗಿದ್ದ ಕಾಲ. ಹಾಗಾಗಿ ಕಂಪ್ಯೂಟರ್ ವಿಜ್ಞಾನದ ವಿಶಿಷ್ಟ ಬರಹಗಾರ ಹಾಗೂ ಅತೀವ ಆಸಕ್ತಿಯ, ಐಸ್ಯಾಕ್ ಅಸಿಮೊವ್ ಅವರಿಗೆ 2000 ವರ್ಷ ಬರುವವರೆಗೂ ಬದುಕಿರಬೇಕೆಂಬ ಅಪಾರ ಬಯಕೆಯಿತ್ತು. ದುರಾದೃಷ್ಟಕ್ಕೆ 1992ರ ಏಪ್ರಿಲ್ 6ರಂದು ಅವರನ್ನು ಜಗತ್ತು ಕಳೆದುಕೊಂಡಿತು. 1990-92 ನಡುವಿನ ಅವರ ತಯಾರಿಯನ್ನು ಅವರ ನೆನಪುಗಳಾಗಿಸಿ ಹೆಂಡತಿ ಜಾನೆಟ್ ಅಸಿಮೊವ್ ಅಂತಿಮಗೊಳಿಸಿ ರೂಪುಗೊಳಿಸಿದ ಪುಸ್ತಕ ಇದು. ಈ ಪುಸ್ತಕ I. Asimov ಕಡೆಯಲ್ಲಿ ಜಾನೆಟ್ ಅಸಿಮೊವ್ ಅವರು ಬರೆದ ಉಪಸಂಹಾರದಿಂದಲೇ ಮುಕ್ತಾಯವಾಗುತ್ತದೆ.
ತಮ್ಮ ಐವತ್ತು ವರ್ಷಗಳಿಗೂ ಹೆಚ್ಚು ಕಾಲದ ವೃತ್ತಿಜೀವನದಲ್ಲಿ, ಅವರು 470ಕ್ಕೂ ಹೆಚ್ಚು ಪುಸ್ತಕಗಳು ಮತ್ತು ಅಸಂಖ್ಯಾತ ಲೇಖನಗಳು ಮತ್ತು ಸಣ್ಣ ಕಥೆಗಳನ್ನು ಬರೆದು, ಪ್ರಪಂಚದಾದ್ಯಂತ ಲಕ್ಷಾಂತರ ಓದುಗರ ಹೃದಯಗಳನ್ನು ಗೆದ್ದರು. ಜೀವಿತಾವಧಿಯಲ್ಲಿ ಸರಿ ಸುಮಾರು 90,000ಕ್ಕೂ ಹೆಚ್ಚು ಪತ್ರಗಳನ್ನು ಬರೆದಿದ್ದಾರೆ. ಸಾವಿರಾರು ಭಾಷಣಗಳನ್ನು ಮಾಡಿದ್ದಾರೆ. ಕಾಲ್ಪನಿಕ ವಿಜ್ಞಾನದ ಅಗ್ರ ಬರಹಗಾರರಲ್ಲಿ ಒಬ್ಬರು. ಅವರು ಬಹುಶಃ ವೈಜ್ಞಾನಿಕ ಕಾದಂಬರಿಯ ಸ್ಥಾಪಕ ಪಿತಾಮಹರಲ್ಲಿಯೂ ಒಬ್ಬರು. ಅವರು ವಿಜ್ಞಾನದ ಪ್ರಕಾರವನ್ನು ವ್ಯಾಖ್ಯಾನಿಸುವಂತಹಾ ಕಾದಂಬರಿಗಳನ್ನು ಬರೆದರು ಮತ್ತು ಅದರ ಸಾರ್ವಕಾಲಿಕವಾಗಿ ಹೆಚ್ಚು ಮಾರಾಟವಾದ ಧ್ವನಿಯಾದರು. ಆದರೆ ಅದಕ್ಕಿಂತ ಹೆಚ್ಚಾಗಿ, ಐಸಾಕ್ ಅಸಿಮೊವ್ ಅವರು ಈ ಶತಮಾನದ ಅತ್ಯಂತ ವಿಶಾಲವಾದ ಮನಸ್ಸಿನವರಾಗಿದ್ದರು. ಅವರು ಬ್ರಹ್ಮಾಂಡದ ಸ್ವಭಾವದಿಂದ ಹಿಡಿದು ಶೇಕ್ಸ್‌ಪಿಯರ್, ಲಾರ್ಡ್ ಬೈರನ್, ಮಿಲ್ಟನ್, ಬರಹಗಳ ವಿಷಯಗಳ ಮೇಲಿನ ಅವರ ಕೃತಿಗಳಿಂದಾಗಿ “ಗ್ರೇಟ್ ಎಕ್ಸ್‌ಪ್ಲೇನರ್” ಎಂಬ ಅಡ್ಡಹೆಸರನ್ನು ಪಡೆದರು. ಇಷ್ಟೆಲ್ಲಾ ಕಥನಗಳ ಹಿಂದಿನ ನಾಯಕ/ಬರಹಗಾರನ ಬಗೆಗೆ ಓದುಗರಿಗೆ ಅವರ ಬಗೆಗೆ ಇರಬಹುದಾದ ಇವರ ಪ್ರತಿಭೆಯನ್ನೇ ಪ್ರಶ್ನೆಗೆ ಎತ್ತಿಕೊಂಡ ವಿವರಗಳಿಂದ ಈ ಪುಸ್ತಕ ಆರಂಭವಾಗುತ್ತದೆ.
ಹುಟ್ಟಿನಿಂದ ರಷಿಯಾದವರಾದ ಅಸಿಮೊವ್, ಮೂರನೆಯ ವರ್ಷದಲ್ಲಿಯೇ ಇಡೀ ಕುಟುಂಬದ ಜೊತೆ ಅಮೆರಿಕಾಗೆ ಬಂದು ನೆಲೆಯಾದವರು. ಹಾಗಾಗಿ ರಷಿಯಾ ಭಾಷೆಯಾಗಲಿ, ಸಂಸ್ಕೃತಿಯಾಗಲಿ ಓರ್ವ ಅಮೆರಿಕ ತಿಳಿವಳಿಕಸ್ಥರ ಜ್ಞಾನದಂತೆ ನನ್ನದೂ ಎಂಬ ವಿವರಗಳಿಂದಲೇ ಆರಂಭಿಸುವ ಈ ಪುಸ್ತಕವನ್ನು ಪ್ರಮುಖ ಘಟನೆಗಳ ವಿವರಗಳಲ್ಲಿ ವಿಭಾಗಿಸಿದ್ದಾರೆ. ಹಾಗಾಗಿ ಅವರ ಜೀವನದ ಬಹುಪಾಲು ವಿವರಗಳ ಸಾರದ ತಿಳಿವಳಿಕೆಯು ಓದುಗನನ್ನು ಆಕರ್ಷಿಸುತ್ತದೆ. ಎಷ್ಟೊಂದು ಪ್ರಕಾರಗಳ ಬರಹಗಾರರಾಗಿ ಅವರು ಬಾಲ ಪ್ರತಿಭೆಯಾಗಿರಬೇಕೆಂಬ ಓದುಗರ ಸಹಜ ಪ್ರಶ್ನೆಗೆ ಉತ್ತರವೆಂಬಂತೆ, ತಾನೇನು ಬಾಲ ಪ್ರತಿಭೆಯೇ? (Infant Prodigy?) ಎಂಬ ಪ್ರಶ್ನೆಯಿಂದಲೇ ಮೊದಲ ಅಧ್ಯಾಯ ಆರಂಭವಾಗುತ್ತದೆ. ತಾನೇನು ಹಾಗಲ್ಲ ಎಂದು ಅವರು ಕೊಡುವ ವಿವರಣೆಗಳಲ್ಲಿ ಪ್ರತಿಭಾನ್ವಿತನೊಬ್ಬನ ವಿನಯ ಕಾಣುತ್ತದೆ, ತಮಾಷೆಯೂ ಕಂಡೀತು.
ತಮ್ಮ ಈ ಆತ್ಮಚರಿತ್ರೆಯಲ್ಲಿ, ಅವರು ಸುದೀರ್ಘ ಮತ್ತು ಪೂರ್ಣ ಜೀವನವನ್ನು ಮತ್ತೊಮ್ಮೆ ಹಿಂತಿರುಗಿ ನೋಡುತ್ತಾರೆ, ಜೊತೆಗೆ ಅವರು ಹಿಂದೆಂದೂ ತಿಳಿಸದ ವಿಷಯಗಳನ್ನೂ ಚರ್ಚಿಸುತ್ತಾರೆ. ಉತ್ಕೃಷ್ಟ, ಸಾಮಯಿಕವಾಗಿ ಜೋಡಿಸಲಾದ ಮತ್ತು ಸಮೃದ್ಧವಾದ ವ್ಯಾಖ್ಯಾನದ, I. ಅಸಿಮೊವ್ ಇತರೆ ಯಾವುದೇ ಲೇಖಕರ ಜೊತೆ ಹೋಲಿಸಲಾಗದ ವ್ಯಕ್ತಿತ್ವದಿಂದ ಹೊಳೆಯುವಂತೆ ಭಾಸವಾಗುತ್ತದೆ. ಐಸಾಕ್ ಅಸಿಮೊವ್ ಅವರ ಜೀವನದ ಕಥೆಯು ಇಪ್ಪತ್ತನೇ ಶತಮಾನದ ವಿಜ್ಞಾನ ಮತು ತಂತ್ರಜ್ಞಾನದ ಪ್ರಸಿದ್ಧ ಒಡಿಸ್ಸಿಯಂತೆ ಇದೆ. 21ನೆಯ ಶತಮಾನದ ವಿಜ್ಞಾನವು ಕಂಡ ಹೆಚ್ಚೂ ಕಡಿಮೆ ಎಲ್ಲವೂ ಅವರ ಬರಹದಲ್ಲಿ ಇವೆ. ಅವರ ಬರವಣಿಗೆಯ ವೃತ್ತಿಜೀವನದ ಆರಂಭವು ವೈಜ್ಞಾನಿಕ ಕಾದಂಬರಿಯಲ್ಲಿ ಆರಂಭವಾಗಿದೆ. ಆದ್ದರಿಂದ ಅವರು ಆ ಸಮಯವನ್ನು – ಪಲ್ಪ್ ಫಿಕ್ಷನ್‌ನ ಸುವರ್ಣ ಯುಗವೆಂದು – ಆಪ್ತವಾಗಿಯೂ ಮತ್ತು ಪ್ರಾಮಾಣಿಕತೆಯಿಂದಲೂ ಬರೆಯುತ್ತಾರೆ. ಅಸಿಮೊವ್ ಅವರ ಖ್ಯಾತಿಯು ಬೆಳೆದಂತೆ, ಇತರ ವೈಜ್ಞಾನಿಕ-ಕಾಲ್ಪನಿಕ ಬರಹಗಾರರೊಂದಿಗಿನ ಅವರ ಸಂಪರ್ಕಗಳು ಹೆಚ್ಚಾದವು ಮತ್ತು ಅವರ ಸ್ನೇಹಿತರ ವಲಯವು ವೈಜ್ಞಾನಿಕ-ಕಾಲ್ಪನಿಕ ಶ್ರೇಷ್ಠರಲ್ಲಿ ಅವರೂ ಒಬ್ಬರಾದರು. ಅದಕ್ಕಾಗಿ ಅವರು ತಮ್ಮ ಜೀವನದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ ಜನರ ಬಗ್ಗೆ ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ, ಅವರಲ್ಲಿ ಆರ್ಥರ್ ಸಿ. ಕ್ಲಾರ್ಕ್, ಫ್ರೆಡೆರಿಕ್ ಪೋಲ್, ಜಾನ್ ಡಬ್ಲ್ಯೂ. ಕ್ಯಾಂಪ್‌ಬೆಲ್-ಜೂನಿಯರ್, ರಾಬರ್ಟ್ ಎ. ಹೈನ್‌ಲೈನ್, ಎಲ್. ಸ್ಪ್ರಾಗ್ ಡಿ ಕ್ಯಾಂಪ್, ಕ್ಲಿಫರ್ಡ್ ಸಿಮಾಕ್, ಹರ್ಲಾನ್ ಎಲಿಸನ್, ಬೆನ್ ಬೋವಾ, ರಾಬರ್ಟ್ ಸಿಲ್ವರ್‌ಬರ್ಗ್ ಮತ್ತು ಮಾರ್ಟಿನ್ ಗ್ರೀನ್‌ಬರ್ಗ್. ಹೀಗೆ ಹಲವಾರು.. ಶ್ರೇಷ್ಠರು! ಅಸಿಮೊವ್ ಜೀವನದ ಎಲ್ಲಾ ಹಂತಗಳಲ್ಲಿಯೂ ಅನೇಕಾನೇಕ ಸ್ನೇಹಿತರನ್ನು ಮಾಡಿಕೊಂಡರು. ಅವರ ಕಾಲದ ಕೆಲವು ಮಹಾನ್ ಮನಸ್ಸುಗಳೊಂದಿಗೆ ಆಲೋಚನೆಗಳ ವಹಿವಾಟನ್ನೇ ಮಾಡಿದರು. ಇವೆಲ್ಲದರ ವಿಶಿಷ್ಟ ಅನುಭವಗಳ ದಾಖಲೆಯು ಇಲ್ಲಿದೆ.
ಇಂತಹಾ ಮಾಹಾನ್ ಬರಹಗಾರ ಓದಿದ್ದು “ಜೀವಿ ರಸಾಯನಿಕ ವಿಜ್ಞಾನ-ಬಯೊಕೆಮಿಸ್ಟ್ರಿ-(Bio-Chemistry) ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಓದು ಮುಗಿಸಿ (Ph.D. ವರೆಗೂ) ಮುಂದೆ ಬೊಸ್ಟನ್ ವಿಶ್ವವಿದ್ಯಾಲಯದ ಮೆಡಿಕಲ್ ಸ್ಕೂಲಿನಲ್ಲಿ ಬಯೊಕೆಮಿಸ್ಟ್ರಿಯ ಪ್ರಾಧ್ಯಾಪಕರಾಗಿದ್ದರು. ಆಡು ಮುಟ್ಟದ ಸೊಪ್ಪಿಲ್ಲ – ಎಂಬ ಕನ್ನಡದ ಗಾದೆಯಂತೆ, ಇವರು ಬರೆಯದ ವಿಷಯವಿಲ್ಲ ಎಂಬುದಕ್ಕೆ ಸಂಪೂರ್ಣವಾಗಿ ಇವರೊಬ್ಬರೇ ಇರಬಹುದೇನೋ. ಈಗಾಗಲೇ ಹೇಳಿದಂತೆ ದರ್ಶನವಿಜ್ಞಾನ ಮತ್ತು ಮನೋವಿಜ್ಞಾನ ಅನ್ನು ಹೊರತು ಪಡಿಸಿ ಮತ್ತೆಲ್ಲಾ ವಿಚಾರಗಳಲ್ಲಿ ಪ್ರಭುತ್ವವಿತ್ತು. ಅಷ್ಟೇ ಅಲ್ಲ, ರೊಬಾಟ್ ಇನ್ನೂ ರೂಪುಗೊಳ್ಳದ ಮುಂಚೆಯೆ, ರೊಬಾಟಿಕ್ ವಿಜ್ಞಾನದ ನಿಯಮಗಳನ್ನು ತಮ್ಮ 1950ರ ವಿಜ್ಞಾನದ ಕಾಲ್ಪನಿಕ ಕಾದಂಬರಿ ಐ. ರೊಬಾಟ್(I. Robot)ಯಲ್ಲಿಯೇ ವಿವರಿಸಿದ ಮಹಾನ್ ವಿಜ್ಞಾನದ ಕನಸುಗಾರ- ಅಪ್ಪಟ ಬರಹಗಾರ. ಇವರ ಊಹಿಸುವ ಶಕ್ತಿಯ ಕುರಿತೇ ದಂತ ಕಥೆಗಳಿದ್ದವು. ರೊಬಾಟ್ ಪದವನ್ನು ಜೆಕ್ ಭಾಷೆಯ ನಾಟಕದ ಮಾನವರೂಪದ (Humanoid) ಪಾತ್ರವೊಂದರಿಂದ ರೂಪಿಸಿದವರು. ಹಾಗಾಗಿ 1984ರಲ್ಲಿ ಅದೇ ಹೆಸರಿನ ಕಾಲ್ಪನಿಕ ಕಾದಂಬರಿಯನ್ನು 35 ವರ್ಷಗಳ ಹಿಂದೆಯೇ(1949) ಪ್ರಕಟಿಸಿದ ಬರಹಗಾರ ಜಾರ್ಜ್ ಆರ್ವೆಲ್ ಅವರಂತೆ ಇವರನ್ನೂ ಮುಂದಿನ 35 ವರ್ಷಗಳಲ್ಲಿ ನಡೆಯುವ ವೈಜ್ಞಾನಿಕ ಊಹೆಗಳಿಗೆ ವಿಖ್ಯಾತ ಪತ್ರಿಕೆಯು ಸಂದರ್ಶಿಸಿತ್ತು. ಆಗ 1984ರಲ್ಲಿಯೇ 2019ರ ವರೆಗಿನ ಕಂಪ್ಯೂಟರ್ ವಿಜ್ಞಾನ, ನ್ಯೂಕ್ಲಿಯಾರ್ ಶಕ್ತಿಯ ಕುರಿತು, ಅಲ್ಲದೆ ಅದರಿಂದ ಒಂಟಾಗಬಹುದಾದ ಆಂತರಿಕ ಕಲಹಗಳು, ಅಲ್ಲದೆ ಡಿಜಿಟಲ್ ಕ್ರಾಂತಿಯ ಬಗೆಗೆ ಇವರು ಹೇಳಿದ್ದರು. ಸೂಕ್ಷ್ಮಾತಿ ಸೂಕ್ಷ್ಮ ಕೆಲಸಗಳಿಗೆ ರೊಬಾಟ್‌ಗಳು ನಿರ್ವಹಿಸುವುದನ್ನೂ, ರೊಬಾಟ್‌ಗಳ ಕಾರ್ಯವಿಶೇಷತೆಗಳ ನಿಯಮಾವಳಿಯನ್ನೂ ಊಹಿಸಿದ್ದ ಅಪ್ರತಿಮ ಬರಹಗಾರ ಐಸ್ಯಾಕ್ ಅಸಿಮೊವ್.
ಹೀಗಿದ್ದ ಅಸಿಮೊವ್ ಅಪಾರ ಓದು ಮತ್ತು ನೆನಪುಗಳ ಸಾಗರವನ್ನೇ ತಮ್ಮೊಟ್ಟಿಗೆ ಇಟ್ಟುಕೊಂಡಿದ್ದ ಬಗ್ಗೆ ಒಂದು ನೆನಪಿನ ಟಿಪ್ಪಣಿಯ ಬಗ್ಗೆ ಹೇಳಲೇಬೇಕು. ಲೈಬ್ರರಿ ಅವರ ಪಾಲಿಗೆ ಹೇಗಿತ್ತು, ಓದಿನ ಕುರಿತ ಅವರ ಆಶಯ ಮತ್ತು ಅನುಭವಗಳೇನು ಎಂದು ವಿವರಿಸುವ ಅಧ್ಯಾಯ -ಲೈಬ್ರರಿ ಎಂತಲೂ ಒಂದಿದೆ. ಅವರ ಓದು ಅದೆಷ್ಟು ತೀಕ್ಷ್ಣ ಹಾಗೂ ಸೂಕ್ಷ್ಮಮತಿಯದ್ದೆಂದರೆ ಅದು ವಿವರಣೆಗೆ ದಕ್ಕುವುದೂ ಕಷ್ಟವೇ! ಅವರಿನ್ನೂ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯಾಗಿದ್ದಾಗಲೇ ಓದಲು ಕಲಿತ ದಿನದಲ್ಲೇ, ಆಯಾ ತರಗತಿಯ ಪುಸ್ತಕದ ಪಾಠಗಳನ್ನೆಲ್ಲಾ ಮೊದಲ ವಾರ ಓದಿ ಮುಗಿಸುತ್ತಿದ್ದರಂತೆ! ಮುಂದಿನ ಒಂದೆರಡು ತಿಂಗಳಲ್ಲಿ ಹೆಚ್ಚೂ-ಕಡಿಮೆ ಅರ್ಥೈಸಿಕೊಂಡು ಮೊದಲರ್ಧದ ವರ್ಷದಲ್ಲಿ ಇಡೀ ಪಾಠಗಳನ್ನು ಮುಗಿಸಿ, ತಮ್ಮದಾಗಿಸುತ್ತಿದ್ದರಂತೆ. ಹಾಗಾಗಿ ಮುಂದಿನ ಅರ್ಧ ವರ್ಷ ಆಯಾ ಉಪನ್ಯಾಸಕರಿಂದ ಕೇಳಲಾಗಲಿ, ಕಲಿಯುವುದಾಗಲಿ ಏನೂ ಇರುತ್ತಿರಲಿಲ್ಲವಂತೆ! ಅವರ ತಂದೆ ಅವರಿಗೆ ಲೈಬ್ರರಿಯ ಸದಸ್ಯರಾಗಿಸಿ, ತಾಯಿಯು ಅವರನ್ನು ಲೈಬ್ರಿರಿಗೆ ಕರೆದುಕೊಂಡು ಹೋಗುತ್ತಿದ್ದರಂತೆ. ಗ್ರೀಕ್ ಪುರಾಣಗಳಿಂದ ಅತ್ಯಂತ ಆಕರ್ಷಿತರಾದ ಐಸ್ಯಾಕ್, ಅಲ್ಲಿಂದ ಇಡೀ ಗಣಿತ-ವಿಜ್ಞಾನ-ಸಾಹಿತ್ಯಗಳ ಓದಿಗೆ ಮೊದಲಾದರು. ಅವರ ಅಪಾರ ಓದಿನ ಪ್ರೀತಿಯಲ್ಲಿ ಕೊಡಬಹುದಾದ ಒಂದು ಉದಾಹರಣೆಯೆಂದರೆ ಅವರು ಹೋಮರನ ಇಲಿಯಡ್ (The Iliad of Homer by Homer) ಅನ್ನು ಮತ್ತೆ ಮತ್ತೆ ಓದಿದ್ದರೂ. ಹಾಗಾಗಿ ಅದರ ಪ್ರತೀ ಪದವೂ ಅವರಿಗೆ ಪರಿಚಯವಿದ್ದುದಾಗಿ ದಾಖಲಿಸಿದ್ದಾರೆ.
ವೈಜ್ಞಾನಿಕ-ಕಾಲ್ಪನಿಕ ಬರಹಗಾರರಾಗಿ ಮತ್ತು ಆಧುನಿಕ ವೈಜ್ಞಾನಿಕ ಚಿಂತನೆಯ ಪ್ರಸರಣಕಾರರಾಗಿ ಅವರ ಖ್ಯಾತಿಯು ಎಲ್ಲಾ ರೀತಿಯ ಮಾತುಗಳ ಆಹ್ವಾನಕ್ಕೆ ನಾಂದಿಯಾಯಿತು. ಅಸಿಮೊವ್ ಸಾರ್ವಜನಿಕ ಭಾಷಣದ ಜೀವಿತಾವಧಿಯಿಂದ ಸಂತೋಷಕರವಾದ ವಿಷಯಗಳನ್ನು ಪ್ರಸ್ತುತ ಪುಸ್ತಕದಲ್ಲಿ ತುಂಬಿದ್ದಾರೆ. ಓರ್ವ ಭಾಷಣಕಾರರಾಗಿ ಅವರೆಷ್ಟು ಸೂಕ್ಷ್ಮ ಎಂದರೆ, 43 ನಿಮಿಷದ ಭಾಷಣವನ್ನು ಕರೆಕ್ಟಾಗಿ 43ನೆಯ ನಿಮಿಷದಲ್ಲಿ ಮುಗಿಸುವ ಮೂಲಕ ನೀಡುತ್ತಿದ್ದರು. ಇಡೀ ಅಮೆರಿಕದಲ್ಲಿ ಅನೇಕ ವಿಶ್ವವಿದ್ಯಾಲಯಗಳ ಪದವಿ ಪ್ರಧಾನ ಸಮಾರಂಭಗಳ ವಿಶೇಷ ಭಾಷಣಕಾರರಾಗಿ ಅತ್ಯಂತ ಹೆಚ್ಚು ಪ್ರಸಿದ್ಧರಾದ ಹಾಗೂ ಅತ್ಯಂತ ದುಬಾರಿಯಾದ ಭಾಷಣಕಾರರೂ ಆಗಿದ್ದರು.
ಎಂತಹಾ ವಿಚಾರವನ್ನೂ ಆತ್ಯಂತಿಕ ವಿವರಗಳಿಂದ ಮೆಚ್ಚಿಸುವ ಭಾಷಣದ ಕಲೆಯು ಅಸಿಮೊವ್ ಅವರಿಗಿದ್ದ ವಿಶಿಷ್ಟತೆ. ವಿಜ್ಞಾನವಲ್ಲದ ಧಾರ್ಮಿಕ ಚಿಂತನೆಯನ್ನು ಮಂದಿರ-ಮಸೀದಿ-ಚರ್ಚುಗಳಲ್ಲಿ ಮಾತ್ರವೇ ಬೋಧಿಸಬಹುದೇ ಹೊರತು ದೇಶವನ್ನು ಆಳುವುದಕ್ಕಲ್ಲ ಎಂಬುದರ ವಿವರಣೆಯ ನಿಖರವಾದ ಅವರ World of Ideas ಸಂದರ್ಶನವನ್ನು ಈ ಲಿಂಕ್ ಅಲ್ಲಿ ನೋಡಬಹುದು. https://m.youtube.com/watch?v=CWovZtCQWfE
ನಕ್ಷತ್ರಗಳ ಯಾನವನ್ನೂ, ಬಾಹ್ಯಾಕಾಶದ ತಿರುಗಾಟವನ್ನೂ ಕಥನಗಳಲ್ಲಿ ಕಾಲ್ಪನಿಕವಾಗಿ ಅರ್ಥವತ್ತಾಗಿ ವಿವರಿಸಿದ ಅಸಿಮೊವ್ ಸ್ವತಃ ವಿಮಾನಯಾನದ ಭಯವನ್ನು ಹೊಂದಿದ್ದರು. Acrophobia ಎಂದು ಕರೆದ ಅಧ್ಯಾಯದಲ್ಲಿ ವಿಮಾನಯಾನದ ಭಯದಲ್ಲಿ ತಮ್ಮ ಮಿತಿಯನ್ನೂ ಹೇಳಿಕೊಂಡಿದ್ದಾರೆ. I do not take airplains because of my acrophobia, and that is a legitamate excuse… ಮುಂದುವರೆದು Nevertheless, I did fly once a while..! …. “I can’t.. do that.. I’m an acrophobic, I have a morbid fear of heights”
ಈ ಆತ್ಮಚರಿತ್ರೆಯಲ್ಲಿ ಧರ್ಮ, ಪ್ರೀತಿ, ವಿಚ್ಛೇದನ, ಮಕ್ಕಳು, ಸಾವು ಮತ್ತು ಹೆಚ್ಚಿನವುಗಳ ಕುರಿತಾದ ಅವರ ಅಭಿಪ್ರಾಯಗಳನ್ನು ಒಳಗೊಂಡಂತೆ ಐಸಾಕ್ ಅಸಿಮೊವ್ ಅವರ ವೈಯಕ್ತಿಕ ಜೀವನದ ಒಳಗಿನ ಅಂತರಗಳಿಗೆ ಅಚಲವಾದ ಪ್ರಾಮಾಣಿಕ ನೋಟವನ್ನು ಒದಗಿಸುತ್ತಾರೆ. ಬರಹಗಾರರಿಗೆ ಒಂದು ಮಾದರಿಯ ಲೇಖಕರಾಗಿ ಅದರಲ್ಲೂ ವಿಜ್ಞಾನದ ಬರಹದ ಬದುಕಿಗೆ ಬೇಕಾದ ಓದು, ಅಪಾರ ಪ್ರಜ್ಞೆ, ಸಂಬಂಧಗಳ ನಿರೂಪ, ಜಾಗರೂಕ ಮನಸ್ಥಿತಿ, ಓಡಾಟ-ಪ್ರವಾಸ, ವೃತ್ತಿ ಪರ ಭಾಷಣಗಳು ಮತ್ತು ಅವುಗಳಿಗೆ ತಯಾರಿ ಇವೆಲ್ಲವನ್ನೂ ನಿಭಾಯಿಸುವ ಸೂಕ್ಷ್ಮತೆ ಎಲ್ಲವನ್ನೂ ತಮ್ಮ ಅಪಾರ ಅನುಭವಗಳ ಟಿಪ್ಪಣಿಗಳಂತೆ ಅವರ ಪ್ರಸಿದ್ಧವಾದ “ಅಸಿಮೊವ್ ಸ್ಟೈಲ್” ರಚನೆಯ ಒಂದು ವಿಂಡೋವನ್ನು ನೀಡುತ್ತಾರೆ. ಅದು ನಮ್ಮ ಕಾಲದ ಅತ್ಯಂತ ಸಮೃದ್ಧ ಬರಹಗಾರರಾಗಲು ಅವರಿಗಿದ್ದ ತಾಳ್ಮೆ ಹಾಗೂ ಶ್ರದ್ಧೆಯ ಫಲ.
ಅವರು 1983ರಲ್ಲಿ ನಮ್ಮ ದೇಶದ ಪ್ರಧಾನಿಯಾಗಿದ್ದ ಶ್ರೀಮತಿ ಇಂದಿರಾ ಗಾಂಧಿಯವರನ್ನು ಭೇಟಿಯಾದ ಬಗ್ಗೆ ಹೀಗಂದಿದ್ದಾರೆ. “On September 23, I met Indira Gandhi at a meeting, she requested with a number of authors, and we gave her some books. She was gracious, intelligent woman.
ಬದುಕಿನ ಬಗೆಗೆ ಅಪಾರ ಆಶಯದ ಮಹದಾಸೆಯನ್ನು ಇಟ್ಟಿಕೊಂಡಿದ್ದರೂ ಅನೇಕ ಬಿಡುವಿಲ್ಲದ ತಿರುಗಾಟ, ಓದು, ಬರಹಗಳ ನಡುವೆ ಅನಾರೋಗ್ಯದ ಅದರಲ್ಲೂ ಪ್ರಮುಖವಾದ ಹೃದಯದ ಸಮಸ್ಯೆಯಲ್ಲಿ ಮೂರು ಬಾರಿ ತೊಳಲಾಟಕ್ಕೆ ಒಳಗಾದ ವಿವರವನ್ನು ತಮಾಷೆಯಿಂದಲೇ ದಾಖಲಿಸಿದ್ದಾರೆ. ಮೊದಲ ಬಾರಿ ನನಗೇನೂ ಇಷ್ಟವಿರದ್ದಾಗಿತ್ತು, ಎರಡನೆಯ ಬಾರಿ ತನ್ನ ಅನಾರೋಗ್ಯದ ನಿರಾಕರಣೆಯ ಮಾನವ ಸಹಜ ನಡವಳಿಕೆಯದ್ದಾಗಿದ್ದರೆ, ಮೂರನೆಯ ಬಾರಿ ತಾನೇನೂ ಶಾಶ್ವತವಲ್ಲದ ಜೀವನದ ಸಾಮಾನ್ಯನೆಂದು ಎಲ್ಲವನ್ನೂ ಮುಗಿಸುವ ಅವಸರದಲ್ಲಿ ಸಿಕ್ಕಿಬಿದ್ದ ಕಾರಣಗಳೆಂದು ತಮ್ಮ ಟ್ರಿಪಲ್ ಬೈಪಾಸ್ ಅಧ್ಯಾಯದಲ್ಲಿ ಬರೆದುಕೊಂಡಿದ್ದಾರೆ
ಇದುವರೆಗೆ ಬದುಕಿದ್ದ ಅತ್ಯಂತ ಶ್ರೇಷ್ಠ ವೈಜ್ಞಾನಿಕ ಕಾದಂಬರಿ ಬರಹಗಾರ, ಐಸಾಕ್ ಅಸಿಮೊವ್ ನಮ್ಮ ಕಾಲದ ಅತ್ಯಂತ ಅದ್ಭುತ. ವಿಜ್ಞಾನದಿಂದ, ಹಾಸ್ಯದಿಂದ ಇತಿಹಾಸದವರೆಗಿನ ವಿಷಯಗಳಲ್ಲಿ ಅವರ ಪ್ರವೇಶಿಸಬಹುದಾದ ಶೈಲಿ ಮತ್ತು ದೂರಗಾಮಿ ಆಸಕ್ತಿಗಳು ಅವರಿಗೆ ವಿಶೇಷವಾದ ಹೆಸರನ್ನು ತಂದುಕೊಟ್ಟವು. I. ಅಸಿಮೋವ್ ಅವರ ವೈಯಕ್ತಿಕ ಕಥೆ, ನಿಜ! ಆದರೆ ಇಲ್ಲಿ -ಎದ್ದುಕಾಣುವ, ಮುಕ್ತ ಮತ್ತು ಪ್ರಾಮಾಣಿಕತೆ- ಅನ್ನು ಅಸಿಮೊವ್ ಮಾತ್ರ ಹೇಳಬಲ್ಲರು. ವಿಮಾನದಲ್ಲಿ ಹಾರಲು ನಿರಾಕರಿಸಿದ ನಕ್ಷತ್ರಗಳಿಗೆ ಪ್ರಯಾಣದ ಬಗ್ಗೆ ಬರೆದ ವಿರೋಧಾಭಾಸದ ಪ್ರತಿಭೆಯ ಕಥೆ ಇಲ್ಲಿದೆ; ಬರೆಯಲು ಮನೆಯಲ್ಲಿಯೇ ಇರುವಾಗ ಅನ್ಯಲೋಕದ ಬ್ರಹ್ಮಾಂಡಗಳು ಮತ್ತು ವಿಶಾಲವಾದ ಗ್ಯಾಲಕ್ಸಿಯ ನಾಗರಿಕತೆಗಳನ್ನು ಕಲ್ಪಿಸಿಕೊಂಡವರು. ನಮ್ಮ ಶತಮಾನದ ಕೆಲವು ಮಹಾನ್ ಮನಸ್ಸುಗಳೊಂದಿಗೆ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಸಮಯವನ್ನು ಕಂಡುಕೊಂಡಿದ್ದರು. ಧರ್ಮದಿಂದ ರಾಜಕೀಯ, ಪ್ರೀತಿ ಮತ್ತು ವಿಚ್ಛೇದನ, ಸ್ನೇಹ ಮತ್ತು ಹಾಲಿವುಡ್ ಖ್ಯಾತಿ ಮತ್ತು ಮರಣದವರೆಗೆ ಎಲ್ಲದರ ಬಗ್ಗೆ ಅವರ ವಿಶಾಲ-ವ್ಯಾಪ್ತಿಯ ಆಲೋಚನೆಗಳು ಮತ್ತು ತೀಕ್ಷ್ಣವಾದ ಕಣ್ಣುಗಳ ಅವಲೋಕನಗಳು ಇಲ್ಲಿವೆ. ಅಸಿಮೊವ್ ಸುಮಾರು ಅರ್ಧ ಶತಮಾನದವರೆಗೆ ಓದುಗರನ್ನು ರಂಜಿಸಿದ ಮತ್ತು ಅವರ ಈ ಕೆಲಸವು ಭವಿಷ್ಯದಲ್ಲಿ ಖಂಡಿತವಾಗಿಯೂ ಶಾಶ್ವತವಾಗಿ ಉಳಿಯುವ ಅಪ್ರತಿಮ ಪ್ರತಿಭೆಯ ವಿಜ್ಞಾನ ಬರಹಗಾರನೊಬ್ಬನ ಪ್ರಾಮಾಣಿಕ ಆತ್ಮಚರಿತ್ರೆಯಾಗಿದೆ.
ಕಡೆಯಲ್ಲಿ ಅವರ ಹೆಂಡತಿ ಜಾನೆಟ್ ಅವರು ಬರೆದ ಹಿನ್ನುಡಿಯಲ್ಲಿ, ಅಸಿಮೊವ್ ಮರಣಾನಂತರ ಆಕಸ್ಮಿಕವಾಗಿ ದೊರೆತ ಅವರ ಟಿಪ್ಪಣಿಯೊಂದನ್ನು ಪ್ರಸ್ತಾಪಿಸಿದ್ದಾರೆ. ಅದು ಅವರ ಬರಹದ ಬಗೆಗೆ ಅವರದೇ ಆದ ಸಂತಸದ ಮಾತುಗಳು. ಅದರಿಂದಲೇ ಈ ಪರಿಚಯವನ್ನೂ ಮುಗಿಸುತ್ತೇನೆ. ಶ್ರೀಮತಿ ಜಾನೆಟ್ ಅಸಿಮೊವ್ ಅವರ ಊಹೆಯಂತೆ ಅದನ್ನು ಅಸಿಮೊವ್ ಅವರು ಆನಾರೋಗ್ಯಕ್ಕೆ ಒಳಗಾದಾಗ ಬರೆದಿರಬೇಕು.
Over the space of 40 years, I sold
An item every ten days on the average.
Over the space of the second 20 years, I sold
An item every six days on the average.
Over the space of 40 years,
I published an average of 1000 words a day
Over the space of second 20 years,
I published an average of 1700 words a day
ಐಸ್ಯಾಕ್ ಅಸಿಮೊವ್ ತಮ್ಮ ಸರಿ ಸುಮಾರು 60 ವರ್ಷಗಳ ಸುಧೀರ್ಘ ಅವಧಿಯ ವಿವರಣೆಯ ಸಾಲುಗಳು ಇವು. ದಿನಕ್ಕೆ ಸರಾಸರಿ 1200 ಪದಗಳ ಒಟ್ಟು ಸುಮಾರು 2 ಕೋಟಿ, 70 ಲಕ್ಷದ 10 ಸಾವಿರ ಪದಗಳ (27,010,000) ಪ್ರಕಟಣೆಯ ನಿಖರತೆಯನ್ನೂ ದಾಖಲಿಸಿದ್ದ ವಿಶಿಷ್ಟ ವಿಜ್ಞಾನಿ ಹಾಗೂ ವಿಜ್ಞಾನ ಬರಹಗಾರ ಐಸ್ಯಾಕ್ ಅಸಿಮೊವ್..!
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್.
Coverage on I.Asimov is very interesting
Wow… an exemplary writer biography introduction…. Many interesting aspects of I Asimov and his personality is introduced in the article… Writing on different subjects so vorociously (400 plus books)..must be a gifted soul and personality to be known by all… Thank you Channesh sir ….