You are currently viewing ಸಮಾಜವಾದಕ್ಕೂ ನೆರಳು ಕೊಟ್ಟ ಆಲ – Ficus  benghalensis

ಸಮಾಜವಾದಕ್ಕೂ ನೆರಳು ಕೊಟ್ಟ ಆಲ – Ficus benghalensis

“ಒಂದು ಊರಲ್ಲಿ ಒಂದು ದೊಡ್ಡ ಆಲದ ಮರ ಇತ್ತಂತೆ…. ಆ ಮರದ ತುಂಬಾ ಗಿಳಿಗಳು…..”  – ಹೀಗಂತಲೋ ಅಥವಾ  -“ಒಂದು ಕಾಡು ಇತ್ತಂತೆ.. ಆ ಕಾಡಿನಲ್ಲಿ ಒಂದು ದೊಡ್ಡ ಆಲದ ಮರ ಇತ್ತಂತೆ..! ಆ ಮರದಲ್ಲಿ .. …  ಆ ..ಮರದಲ್ಲಿss ಒಂದು ಬ್ರಹ್ಮ ರಾಕ್ಷಸ ಇತ್ತಂತೆ, ಅದು ತುಂಬಾ ಒಳ್ಳೆಯ ರಾಕ್ಷಸ ಅಂತೆ!”  – ಇಂತಹ ಕತೆಗಳನ್ನು ಬಾಲ್ಯದಲ್ಲಿ ನಿಮ್ಮ ಅಮ್ಮ-ಅಪ್ಪ, ಅಜ್ಜ-ಅಜ್ಜಿಯರಿಂದ ಕೇಳಿರುತ್ತೀರಿ. ನಿಮ್ಮ ಮಕ್ಕಳಿಗಾದರೂ ಹೇಳಿರುತ್ತೀರಿ. ಆಲದ ಮರವೇ ದೊಡ್ಡದು, ಅಂತಹದಕ್ಕೆ ದೊಡ್ಡ … ಎನ್ನುವ ಗುಣವಾಚಕ ಸೇರಿಸಿ ಅನೇಕ ಬಾರಿ ಮಾತಾಡುತ್ತೇವೆ, ಹೆಸರಿಸುತ್ತೇವೆ, ಕತೆಗಳನ್ನು ಹೇಳಿ-ಕೇಳಿದ, ಸಂಗತಿಗಳು ಇದ್ದೇ ಇರುತ್ತವೆ. ಆಲದ ಮರದ ಕುರಿತ ಕಥೆಗಳು ಸಾವಿರಾರು. ಹಾಗೆ ನೋಡಿದರೆ ಮಾನವ ಕುಲವನ್ನು ಅದರಲ್ಲೂ ಭಾರತೀಯ ಸಮುದಾಯದ ಒಡನಾಡಿಯಾಗಿ  ಆಲದ ಮರದ ಹಿರಿಮೆ ಬಹುಷಃ ನಾವು ಊಹಿಸಬಹುದಾದಕ್ಕಿಂತಲೂ ದೊಡ್ಡದು. ದೊಡ್ಡ ಆಲದ ಮರ ಎನ್ನುವ ರೂಢಿಯಂತೂ ತುಂಬಾ ಸಹಜವಾಗಿ ಒಪ್ಪಿಕೊಂಡಿದ್ದೇವೆ. ಇಂಗ್ಲೀಶಿನಲ್ಲೂ ಸಹಾ ಬಿಗ್ ಬನಿಯನ್ ಟ್ರೀ ಅಂತಲೇ ಕರೆಯುವ ಅನೇಕ ಸಂದರ್ಭಗಳನ್ನು ಕಾಣುತ್ತೇವೆ. ಛಾವಣೆಯ ವಿಸ್ತಾರದಿಂದ ಜಗತ್ತಿನಲ್ಲಿ ಅತ್ಯಂತ ದೊಡ್ಡ ಮರವೆಂದರೆ ಅದು ಆಲದ ಮರವೇ! ಎಕರೆಗಟ್ಟಲೆ ತನ್ನ ಛಾವಣೆಯನ್ನು ಹರಡಿಕೊಂಡು ಜಾಗತಿಕವಾಗಿ ಸುದ್ದಿ ಮಾಡಿದ ಹಲವಾರು ಮರಗಳು ನಮ್ಮ ದೇಶದಲ್ಲಿವೆ. ಆಲದ ಮರ ನಮ್ಮ ದೇಶದ್ದೇ ಮಾತ್ರವಲ್ಲ ನಮ್ಮ ರಾಷ್ಟ್ರೀಯ ಮರವೂ ಹೌದು. ಕಥನಗಳ ಹೊತ್ತೇ ತನ್ನ ವಿಸ್ತಾರವನ್ನೂ ಹರಡಿಕೊಂಡಿರುವ ಆಲದ ಮರಗಳ ಕೆಲವು ಕಥನ ವಿಶೇಷಗಳನ್ನು ನೋಡೋಣ. ಈ ಕಥನಗಳಂತೂ ಅತ್ಯಂತ ಕೌತುಕಮಯವಾದ ಆರ್ಥಿಕ, ರಾಜಕೀಯ, ಸಾಂಸ್ಕೃತಿಕ, ಸಂಗತಿಗಳನ್ನೇ ಅಲ್ಲದೆ, ಕ್ರೌರ್ಯ, ಹಿಂಸೆ ನೋವುಗಳನ್ನೂ ಒಳಗೊಂಡೂ ಜೊತೆಗೆ ವಹಿವಾಟು, ಸಾಮುದಾಯಿಕ ಸಾಹಚರ್ಯ ಹಾಗೂ ನಿರ್ಧಾರಗಳ ಮಹತ್ವಗಳಿಂದಲೂ ಕೂಡಿವೆ.

ಯಾವುದೇ ದೊಡ್ಡ ಆಲದ ಮರದ ಹತ್ತಿರ ಹೋದಾಗ, ಮರದ ನಿಜವಾದ ಬುಡ ಯಾವುದು, ಮರ ಆರಂಭವಾದದ್ದಾದರೂ ಎಲ್ಲಿಂದ ಎಂಬ ಬಗೆ ಹರಿಯದ ಸಮಸ್ಯೆ ಬಂದೇ ಬರುತ್ತದೆ. ಈಗ ಆಲದ ಮರದ ಕುರಿತು ಬರೆಯಲೂ ಆಲೋಚಿಸುವಾಗಲೂ ಎಲ್ಲಿಂದ ಆರಂಭಿಸುವುದು ಎಂಬ ಸಮಸ್ಯೆಯೇ ಕಾಡುತ್ತಿದೆ. ಅಷ್ಟೊಂದು ಸಂಗತಿಗಳನ್ನು ತನ್ನೊಡಲಲ್ಲಿಟ್ಟು ಪೋಷಿಸಿದ ನಿಜಕ್ಕೂ ಬೃಹತ್ತಾದ ಮರವೇ! ಅದರ ಬುಡದ ಹುಡುಕಾಟ ಮಾಡಿ ಸೋಲುವುದಕ್ಕಿಂತಾ ಕಣ್ಣು ತುಂಬಿಕೊಂಡು ಕಾಣುವ ಅದರ ತಂಪಾದ ನೆರಳಿನ ಹಿತದಿಂದ ತಣ್ಣಗೆ ಆರಂಭಿಸುವುದು ಒಳ್ಳೆಯದೆನಿಸುತ್ತಿದೆ. ನಿಜಕ್ಕೂ ಆಲವು ತನ್ನ ದಟ್ಟ ಹಸಿರಾದ ಛಾವಣೆಯನ್ನು ವಿಸ್ತರಿಸುತ್ತಲೇ ಇರುವಂತೆ ಕಾಣುತ್ತದೆ. ಮಾತ್ರವಲ್ಲ, ವಿಸ್ತರಿಸುತ್ತಲೇ ಇರುತ್ತದೆ. ಆದ್ದರಿಂದಲೇ ನೂರಾರು ವರ್ಷದ ಮರಗಳು ಸಾಕಷ್ಟಿವೆ. ಸಾವಿರ ದಾಟಿರುವ ಬಗೆಗೂ ಅನುಮಾನಗಳಿವೆ. ಅದರ ದಪ್ಪವಾದ ಎಲೆಗಳು, ಇಡೀ ರೆಂಬೆ-ಕೊಂಬೆಗಳನ್ನೆಲ್ಲಾ ಆವರಿಸಿಕೊಂಡು ಮರವೊಂದು ಪುಟ್ಟ ಕಾಡಿನಂತೆ ಕಾಣುವುದರಲ್ಲಿ ಆಶ್ಚರ್ಯವಿರದು.

                ಆಲದ ಮರದ ಛಾವಣೆಯು ದಟ್ಟವಾಗಿ ಇರುವುದರಿಂದ ಹಕ್ಕಿಗಳಿಗೆ ತಮ್ಮ ಗೂಡು ಕಟ್ಟಿಕೊಳ್ಳಲು ತುಂಬಾ ಅನುಕೂಲವಾಗಿದೆ. ಹಕ್ಕಿಗಳು ತಮ್ಮ ಮೊಟ್ಟೆ ಹಾಗೂ ಮರಿಗಳನ್ನು ದಟ್ಟವಾದ ಮರದಲ್ಲಿ ಮಳೆ/ಬಿಸಿಲು ಅಲ್ಲದೆ ಅವುಗಳ ವೈರಿಗಳಿಂದಲೂ ರಕ್ಷಿಸಲು ಬಯಸುತ್ತವೆ. ಆದ್ದರಿಂದ ಹಲವಾರು ಹಕ್ಕಿಗಳು ಹಳೆಯ ಹಾಗೂ ದೊಡ್ಡದಾದ ಆಲದ ಮರವನ್ನು ತಮ್ಮ ಗೂಡನ್ನು ನಿರ್ಮಿಸಿಕೊಳ್ಳಲು ಬಳಸುತ್ತವೆ ಎಂದು ಪಕ್ಷಿತಜ್ಞರ ಅಭಿಪ್ರಾಯ. ಕಾಗೆಗಳಿಗಂತೂ ಆಲವು ಅತ್ಯಂತ ಪ್ರಿಯವಾದ ನೆಲೆ. ಅದರಂತೆ ಮೈನಾಗಳು ಸೇರಿದಂತೆ ಇತರೆ ಹಲವಕ್ಕೂ ಆಲವು ಒಳ್ಳೆಯ ನೆಲೆಯಾಗಿದೆ. ಆದ್ದರಿಂದ ದೊಡ್ಡ ಆಲದ ಮರವೊಂದು ಒಂದು ರೀತಿಯಲ್ಲಿ ಬೃಹತ್ ಅಪಾರ್ಟ್‍-ಮೆಂಟಿನಂತೆ ಅನೇಕ ಜಾತಿಯ ಪಕ್ಷಿಗಳ ವಿವಿಧ ಗೂಡುಗಳ ತಾಣವಾಗಿರುತ್ತದೆ. ಹಲವು ಹಕ್ಕಿಗಳ ಸಮುದಾಯಗಳೇ ಇರುವ ಅಲ್ಲಿ ಅವುಗಳ ನಡುವೆ ಸಣ್ಣ ಪುಟ್ಟ ಜಗಳಗಳೂ ಹಾಗೂ ಹೊಂದಾಣಿಕೆಗಳೂ ಸಹಜವಾಗಿರುವುದುಂಟು. 

                ಆಲದ ಮರಗಳು ನೂರಾರು ಮೀಟರ್‍-ಗಳ ಅಗಲಕ್ಕೆ ಹಬ್ಬುತ್ತಾ ಸುಮಾರು 20-25 ಮೀಟರ್ -ಗಳ ಎತ್ತರಕ್ಕೆ ಬೆಳೆಯುತ್ತವೆ. ಅವುಗಳು ಸಾಮಾನ್ಯವಾಗಿ ನಯವಾದ ಬೂದು ಬಣ್ಣದ ತೊಗಟೆಯನ್ನು ಹೊಂದಿದ ಭಾರಿ ಕಾಂಡವನ್ನು ಹೊಂದಿರುತ್ತವೆ. ಅವುಗಳ ಬೇರುಗಳು ತುಂಬಾ ಶಕ್ತಿಯುತವಾಗಿರುತ್ತವೆ. ಕೆಲವೊಮ್ಮೆ ಅವುಗಳು ಕಾಂಕ್ರಿಟನ್ನೂ ಅಥವಾ ಕಲ್ಲುಗಳನ್ನೂ ಕೂಡ ಭೇದಿಸಿ ಬೆಳೆಯುತ್ತವೆ. ಹಳೆಯ ಆಲದ ಮರಗಳು ಸಾಮಾನ್ಯವಾಗಿ ಇಳಿಬಿದ್ದ ಗಾಳಿಯಲ್ಲಿ ತೇಲಾಡುವ ಬಿಳಲುಗಳೆಂದು ಕರೆಯಲಾಗುವ ಬೇರುಗಳನ್ನು ಹೊಂದಿರುತ್ತವೆ. ಈ ಬೇರುಗಳು ಎಳೆಯದಾಗಿದ್ದಾಗ ತೆಳ್ಳಗೆ ಹಾಗೂ ತಂತುಗಳಂತೆ ಇದ್ದರೂ ಬೆಳೆದಂತೆ ಅವುಗಳು ಸಹಾ ನೆಲಕ್ಕೆ ಆತುಕೊಂಡು ಬೇರೂರಿ ದಟ್ಟವಾದ ಕಾಂಡದ ಶಾಖೆಯಂತೆ ಕಂಡುಬರುತ್ತವೆ. ಈ ತೂಗಾಡುವ ಬೇರುಗಳು ನೆಲಕ್ಕೆ ತಾಗಿದಾಗ, ಇಡೀ ಮರದ ಛಾವಣೆಗೆ ಬೆಂಬಲ ಕೊಡುವ ಕಾಂಡಗಳಂತಾಗುತ್ತವೆ. ಸಾಮಾನ್ಯವಾಗಿ ಆಲದಮರವು ನೈಸರ್ಗಿಕವಾಗಿ ಯಾವುದಾದರೂ ಬೇರೆಯ ಮರದ ಮೇಲೆ ಅಥವಾ ಜೊತೆಯಲ್ಲಿ ಬೆಳೆಯುತ್ತದೆ. ಹಕ್ಕಿಯೊಂದು ಅಲ್ಲಿಗೆ ಬೀಜವನ್ನು ತಂದು ಬಿಟ್ಟಿರಬಹುದಾದ್ದರಿಂದ, ಅಲ್ಲಿಯೇ ಮೊಳೆತು ಬೇರುಗಳನ್ನು -ಹೊರಗೆ ಮರದ ಗುಂಟ- ಇಳಿಬಿಟ್ಟು ಬೆಳೆಯಲಾರಂಭಿಸುತ್ತದೆ. ಹಾಗೆ ಬೆಳೆದಂತೆ ಆ ಮರವನ್ನೆಲ್ಲಾ ಆವರಿಸಿ ನೆಲಕ್ಕೆ ತಲುಪಿ ನೆಲೆಯಾಗಿಸಿಕೊಳ್ಳುತ್ತದೆ. ಬೇರುಗಳು ತುಂಬಾ ಶಕ್ತವಾದವು ಹಾಗೆಂದೇ ಏನನ್ನಾದರೂ ಭೇದಿಸಿ ಬೆಳೆಯಬಲ್ಲವು.  

                ಆಲದ ಮರದ ಎಲೆಗಳು ದಪ್ಪವಾಗಿದ್ದು ಎಲೆಯ ಮಗ್ಗುಲಲ್ಲಿ ಎರಡು ಪುಟ್ಟ ಮೊಗ್ಗು(Scale)ಗಳು ಇರುತ್ತವೆ. ಎಲೆಯು ಬೆಳೆದಂತೆ ಅವುಗಳು ಉದುರಿಹೋಗುತ್ತವೆ. ಎಲೆಯ ಮೇಲಿನ ಮೇಲ್ಮೈಯು ರೋಮರಹಿತವಾಗಿದ್ದು  ನಯವಾಗಿರುತ್ತದೆ.  ಆದರೆ ಕೆಳಭಾಗವು ಸಣ್ಣ ಸೂಕ್ಷ್ಮವಾದ ರೋಮಗಳಿಂದ ಕೂಡಿರುತ್ತದೆ. ಹೂವುಗಳು -ಸೈಕೊನಿಯಂ-ಫಿಗ್- ಎಂಬ ಹೂವಿನ ಗೊಂಚಲಿನ ವಿಶಿಷ್ಟ ಭಾಗದಲ್ಲಿ ಅಡಗಿರುತ್ತದೆ. ಹೆಣ್ಣು-ಗಂಡು ಹೂವುಗಳೆರಡನ್ನೂ ಹೊಂದಿರುವ ಅದನ್ನೇ ಹಣ್ಣು ಎನ್ನುತ್ತೇವೆ. ಕೆಂಪು ಬಣ್ಣದ ಸುಮಾರು 1.5 – 2.5 ಸೆ. ಮೀ. ದಪ್ಪವಾದ ಈ ಹಣ್ಣುಗಳು ಹಲವಾರು ಹಕ್ಕಿಗಳಿಗೆ ಪ್ರಿಯವಾದ ಆಹಾರ.

                ಫೈಕಸ್ ಅಥವಾ ಫಿಗ್ ಜಾತಿಯ ಮರಗಳಲ್ಲಿ ಆಲದ ಮರಕ್ಕೆ ವಿಶೇಷ ಸ್ಥಾನವಿದೆ. ಅದು ಕೇವಲ ದೊಡ್ಡದು ಎನ್ನುವ ಸಂಗತಿಗಷ್ಟೇ ಅಲ್ಲ. ಅದರ ಸಾಮುದಾಯಿಕ ಸಾಹಚರ್ಯದಿಂದ!  “ಆಲದ ಮರದ ಕೆಳಗೆ ನೆರಳಿನ ಅನುಕೂಲದಿಂದಾಗಿ ಅದನ್ನು ಹಲವಾರು ಚರ್ಚೆ, ಸಮಾರಂಭಗಳಿಗೆ ಬಳಸಿಕೊಳ್ಳುವುದು, ಸಾಮಾನ್ಯವಾಗಿದೆ. ಅದರಲ್ಲೂ ಹಿಂದೆ ಸಮುದಾಯ ಭವನಗಳಿಲ್ಲದ ಕಾಲದಲ್ಲಂತೂ ಆಲದ ಮರದ ನೆರಳು ಸಮುದಾಯಕ್ಕೊಂದು ವರವೇ ಆಗಿತ್ತು.  ಮುಂಬೈ ಷೇರು ಪೇಟೆಯ ಮೊಟ್ಟ ಮೊದಲ ವಹಿವಾಟುಗಳು ಆರಂಭವಾದದ್ದೂ ಆಲದ ಮರದ ಕೆಳಗಿನಿಂದಲೇ! ಈಗಲೂ ಹಲವಾರು ಊರುಗಳಲ್ಲಿ ಸಂತೆಗಳು ನಡೆಯುವುದೇ ಆಲದ ಮರಗಳ ತಾಣಗಳಲ್ಲಿ!  ರಾಜಕೀಯ ಚಿಹ್ನೆಯಾಗಿ ಆಲದ ಮರಕ್ಕೆ ಬಲು ದೊಡ್ಡ ಹೆಸರು. ರಾಮಮನೋಹರ ಲೋಹಿಯಾರವರ ನೇತೃತ್ವದಲ್ಲಿ 1950ರ ದಶಕದಲ್ಲಿ ಆರಂಭವಾದ  ರಾಷ್ಟ್ರೀಯ ಸಮಾಜವಾದಿ ಪಕ್ಷಕ್ಕೆ ಆಲದಮರವು ಪಕ್ಷದ ಚಿಹ್ನೆಯಾಗಿತ್ತು. ಸಮಾಜವಾದಿ ಚಿಂತನೆಗಳ ಪ್ರತಿಮೆಯಾಗಿ ಹಲವಾರು ಪ್ರಕಟಣೆಗಳಲ್ಲಿ ಆಲವು ಬಳಕೆಯಾಗಿದ್ದಿದೆ. ಈಗೂ ಸಹಾ ಅನೇಕ ಸಮಾಜವಾದಿ ಸಂಗತಿಗಳಲ್ಲಿ “ಆಲದ-ಮರ” ಅದರ ಬೇರಿನಂತೆಯೇ, ಭದ್ರವಾಗಿದ್ದು ಪ್ರಾತಿನಿಧಿಕವಾಗಿ ಬಳಕೆಯಾಗುತ್ತಲೇ ಇದೆ. ಇಂಡೋನೆಶಿಯಾದ ರಾಷ್ಟ್ರೀಯ ಚಿಹ್ನೆಯಲ್ಲೂ ಸ್ಥಾನ ಪಡೆದಿರುವ ಆಲದ ಮರವು ಅಲ್ಲಿನ ಅತ್ಯಂತ ಗೌರವದ ಪಾತ್ರವನ್ನು ಪಡೆದಿದೆ.

ಜಗತ್ತಿನ ಹತ್ತಾರು ದೊಡ್ಡ ಮರಗಳೆಲ್ಲಾ ಭಾರತದಲ್ಲೇ ಇವೆ. ಎಕರೆಗಳಷ್ಟು ವಿಶಾಲವಾಗಿ ಹರಡಿಕೊಂಡು ಅಲ್ಲಲ್ಲಿ ಕಾಂಡಗಳನ್ನಿಟ್ಟು ಅವುಗಳ ಮೇಲೆಲ್ಲಾ ಮುಚ್ಚಳಿಕೆ, -ಅವೂ ಒಂದಕ್ಕೊಂದು ಹತ್ತಿಕೊಂಡು ಬೆಳೆದ ವಿವಿಧ ವೃಕ್ಷಗಳ ಗುಂಪು ಎನ್ನಿಸುವಂತೆ ಇರಬಹುದು. ಈ ಸಂಗತಿಗಳಿಂದಲೇ ಜಾಗತಿಕವಾಗಿ ಹೆಸರು ಮಾಡಿದ ಹತ್ತಾರು ಆಲದ ಮರಗಳು ನಮ್ಮಲ್ಲಿವೆ. ಹಾಗೆ ನೋಡಿದರೆ ಪ್ರತೀ ಆಲವು ಅದರದ್ದೇ ಆದ ಸಂಗತಿಗಳಿಂದ ಸಮೃದ್ಧ ಕಥೆಗಳ ಸೃಷ್ಟಿಗೆ ಕಾರಣವಾಗಿರುವುದುಂಟು. ಪ್ರಮುಖವಾದ ನಾಲ್ಕಾರು ಮರಗಳ ಕಥನಗಳನ್ನೀಗ ನೋಡೋಣ.

ಪ್ರಮುಖವಾದ ದೊಡ್ಡ ಆಲದ ಮರಗಳು

ತಿಮ್ಮಮ್ಮ ಮರ್ರಿಮಾನು, ಆಂಧ್ರ ಪ್ರದೇಶ.

ಚಾವಣೆಯ ವಿಸ್ತಾರದಿಂದ ಜಗತ್ತಿನಲ್ಲೇ ಅತ್ಯಂತ ದೊಡ್ಡ ಮರವೆಂದರೆ ಆಂಧ್ರ ಪ್ರದೇಶದಲ್ಲಿರುವ “ತಿಮ್ಮಮ್ಮ ಮರ್ರಿಮಾನು(ಆಲದ ಮರ)”.  ಸುಮಾರು 19,107 ಚದರ ಮೀಟರ್ ವಿಸ್ತಾರವಾದ ಛಾವಣೆಯನ್ನು ಹೊಂದಿರುವ ಈ ಮರದ ಅಡಿಯಲ್ಲಿ ಸುಮಾರು 20,000 ಜನರು ಏಕಕಾಲದಲ್ಲಿ ಇರಬಹುದಾಗಿದೆ. ಐದು ಎಕರೆಗಳ ವಿಸ್ತಾರವಾದ ಪ್ರದೇಶದಲ್ಲಿ ಹರಡಿರುವ ಈ ಮರವನ್ನು ಕರ್ನಾಟಕದ ರಿಗ್ರೆಟ್ ಅಯ್ಯರ್ ಅವರು ಜನಪ್ರಿಯಗೊಳಿಸಿದ್ದೇ ಅಲ್ಲದೆ, ಅದನ್ನು ಗಿನ್ನಿಸ್ ಪುಸ್ತಕದ ದಾಖಲೆಗೆ ಸೇರುವಂತೆ ಮಾಡಿದರು. ಈ ಆಲದಮರವು ಅನಂತಪುರ ಜಿಲ್ಲೆಯ ಕದರಿಯಿಂದ ಕೇವಲ 25 ಕಿ.ಮೀ ದೂರದಲ್ಲಿದೆ.   

ಕಬೀರ್ ವಾಡ್, ಗುಜರಾತ್   

ಆಂಧ್ರದ ಮರದ ನಂತರದ ಎರಡನೆಯ ಸ್ಥಾನವನ್ನು ಗುಜರಾತಿನ ಕಬೀರ್ ವಾಡ್ ಪಡೆದುಕೊಂಡಿದೆ. 17,520 ಚದರ ಮೀಟರ್ ವಿಸ್ತಾರದ ಛಾವಣೆಯನ್ನು ಹೊಂದಿರುವ ಈ ಮರವು ನರ್ಮದಾ ನದಿಯ ದ್ವೀಪದಲ್ಲಿದೆ. ಸಂತ ಕಬೀರ್ ಅವರು ಹಲ್ಲುಜ್ಜಿ ಎಸೆದ  ಆಲದ ಕಡ್ಡಿಯಿಂದ ಹುಟ್ಟಿದ ಮರವೆಂಬ ನಂಬಿಕೆಯಿಂದ ಕಬೀರ್ ವಾಡ್ ಎಂಬ ಹೆಸರು. ಇದರ ಪುರಾತನ ಕಥನವು ತುಂಬಾ ಹಿಂದಕ್ಕೆ ಕೊಂಡೊಯ್ಯುತ್ತದೆ. ಹಿಂದೊಮ್ಮೆ ಫೈಕಸ್-ಫಿಗ್ ಗಳನ್ನು ಯೂರೋಪಿಗೆ ಪರಿಚಯಿಸಿದ ವ್ಯಕ್ತಿ ಅಲೆಕ್ಸಾಂಡರ್ ದೊರೆ ಎಂದು ತಿಳಿದಿದ್ದೆವಲ್ಲವೇ? ಅಲೆಗ್ಸಾಂಡರ್ ಭಾರತಕ್ಕೆ ಬಂದಾಗ ಕಂಡಿರಬಹುದಾದ ಮರವು ಇದೆ ಎಂಬ ಅನುಮಾನಗಳೂ ಇವೆ. ಅಷ್ಟೊಂದು ವಿಶಾಲವಾದ ಮರದ ದಾಖಲೆಯನ್ನು ಆತ ಯೂರೋಪಿಗೆ ಕಳುಹಿಸಿದ್ದು ನರ್ಮದೆಯ ದಂಡೆಯ ಮರವೆಂದಾದ್ದರಿಂದ ಅನುಮಾನಕ್ಕೆ ಪೂರಕ ಸಾಕ್ಷಿಗಳೂ ಇವೆ. ಮೊಟ್ಟ ಮೊದಲ ಬಾರಿಗೆ ಬ್ರಿಟೀಷ್ ಪರಿಶೋಧಕ ಫೋರ್ಬ್ಸ್‍  ಅವರಿಂದ 1772ರಲ್ಲಿ ಬೆಳಕಿಗೆ ಬಂದಿದೆ. ಅಲೆಕ್ಸಾಂಡರ್ ನ ಸೈನ್ಯಾಧಿಕಾರಿ ನಿಯರ್ಚಸ್ ನರ್ಮದೆಯ ತೀರದಲ್ಲಿ ಕಂಡ ಬೃಹತ್ ಮರದ ಆಧಾರದಿಂದ 2300 ವರ್ಷಗಳಿಂದಲೂ ಇರುವ ಮರವೆಂಬ ನಂಬಿಕೆಯಿಂದ ಇದನ್ನೇ ಅತ್ಯಂತ ಪುರಾತನ ಮರವೆಂದೇ ಕರೆಯಲಾಗುತ್ತಿದೆ.

ಉತ್ತರ ಪ್ರದೇಶದ ಮಾಜ್ಹಿಯಲ್ಲಿನ ಆಲದ ಮರ  (Giant Banyan of Majhi)

          ಉತ್ತರ ಪ್ರದೇಶದ ಲಕ್ನೊದ ಹತ್ತಿರ ಗಂಗಾ ನದಿಯ ಹತ್ತಿರದ ಹಳ್ಳಿಯಾದ ಮಾಜ್ಹಿ ಎಂಬಲ್ಲಿರುವ ಆಲದಮರವು ಗುಜರಾತಿನ ಕಬೀರ್‍ ವಾಡ್ ಗಿಂತ ಸ್ವಲ್ಪ ಸಣ್ಣದು. ಅನೇಕ ಮಾವಿನ ಮರಗಳ ತೋಪಿನಲ್ಲಿ ಮುಚ್ಚಿಕೊಂಡಿರುವ ಈ ಮರವು ಛಾವಣೆಯ ವಿಸ್ತಾರದಲ್ಲಿ ಮೂರನೆಯ ಸ್ಥಾನವನ್ನು ಪಡೆಯುತ್ತದೆ.

ಜನಪ್ರಿಯ ಕೊಲ್ಕತ್ತಾದ ದೊಡ್ಡ ಆಲದ ಮರ. (The famous Great Banyan of Calcutta).

                ಕೊಲ್ಕತ್ತಾದ ಆಚಾರ್ಯ ಜಗದೀಶ್ ಚಂದ್ರ ಬೋಸ್ ರಾಷ್ಟ್ರೀಯ ಸಸ್ಯೋದ್ಯಾನದಲ್ಲಿರುವ ಜನಪ್ರಿಯ ದೊಡ್ಡ ಆಲದ ಮರಕ್ಕೆ ವಿಸ್ತಾರದ ದೃಷ್ಟಿಯಲ್ಲಿ ನಾಲ್ಕನೆಯ ಸ್ಥಾನ. ಸಸ್ಯ ಉದ್ಯಾನದಲ್ಲೇ ಇರುವುದರಿಂದ ಈ ಮರವು ಅನೇಕ ವಿಚಾರಗಳಿಂದ ದಾಖಲೆಯಲ್ಲಿ ಮಹತ್ವವಾದ ಸ್ಥಾನವನ್ನು ಪಡೆದಿದೆ. ಈ ಮರವು 1864 ಮತ್ತು 1867ರಲ್ಲಿ ಎರಡು ಬಾರಿ ಚಂಡ ಮಾರುತದ ಹಾವಳಿಗೆ ಒಳಗಾಗಿಯೂ ಉಳಿದುಕೊಂಡಿದೆ. ಅದರ ಮೂಲ ಕಾಂಡವು ನಶಿಸುತ್ತಾ ತೊಂದರೆಯಲ್ಲಿದ್ದುದರಿಂದ ಉಳಿದ ಮರದ ಆರೋಗ್ಯದ ದೃಷ್ಟಿಯಿಂದ ಮೂಲ ಕಾಂಡವನ್ನು 1925ರಲ್ಲಿ ಸಂಪೂರ್ಣವಾಗಿ ತೆರವು ಮಾಡಲಾಗಿದೆ. ಸುಮಾರು 4.67 ಎಕರೆ ವಿಸ್ತಾರದಲ್ಲಿ ಹರಡಿಕೊಂಡಿರುವ ಮರವು ಸುಮಾರು 3772 ಬಿಳಲು ಬೇರುಗಳನ್ನು ಹೊಂದಿದೆ.  ಕೊಲ್ಕತ್ತಾ ಉದ್ಯಾನ ವನಕ್ಕೆ ಭೇಟಿ ಕೊಡುವ ಪ್ರವಾಸಿಗರು, ಇತರೇ ಖಂಡಗಳಿಂದ ಸಂಗ್ರಹಿಸಿದ ಗಿಡ-ಮರಗಳ ಸಂದರ್ಶಿಸುವುದಕ್ಕಿಂತಾ ಹೆಚ್ಚಾಗಿ ಆಲದ ಮರವನ್ನು ನೋಡುವುದೇ ಹೆಚ್ಚು. ಅಷ್ಟರ ಮಟ್ಟಿಗೆ ಇದು ಜನಪ್ರಿಯವಾದ ಮರವಾಗಿದೆ. ಕೊಲ್ಕತ್ತಾದಲ್ಲಿನ ಭಾರತೀಯ ಸಂಖ್ಯಾವಿಜ್ಞಾನ ಸಂಸ್ಥೆಯ ಲಾಂಛನವು ಆಲದ ಮರವನ್ನು ಒಳಗೊಂಡಿದೆ.

ಬೆಂಗಳೂರಿನ ಹೊರ ವಲಯದ ದೊಡ್ಡ ಆಲದ ಮರ

ಬೆಂಗಳೂರು-ಮೈಸೂರು ರಸ್ತೆಯ ಹತ್ತಿರದಲ್ಲಿನ ಹೊರವಲಯದಲ್ಲಿರುವ ದೊಡ್ಡ ಆಲದ ಮರ ಸುಮಾರು ಮೂರು ಎಕರೆಗಳ ವಿಸ್ತಾರವಾಗಿದೆ. ಇದರ ವಯಸ್ಸು ಅಂದಾಜು 400 ವರ್ಷಗಳೆಂದು ನಂಬಲಾಗಿದೆ. ಅಪಾರ ಸಂಖ್ಯೆಯ ಮಂಗಗಳೂ ಅಲ್ಲದೆ ಹಲವಾರು ಹಕ್ಕಿಗಳ ಆಶ್ರಯ ತಾಣವೂ ಆಗಿರುವ ಈ ಮರವನ್ನು ದಿನವೂ ಸಾವಿರಾರು ಜನ ಭೇಟಿಮಾಡುತ್ತಾರೆ. ವಾರಾಂತ್ಯದಲ್ಲಂತೂ ಇದೊಂದು ಜನಪ್ರಿಯ ಪ್ರವಾಸಿ ಪ್ರದೇಶವಾಗಿದೆ.

          ಅಲ್ಲದೆ ಬೆಂಗಳೂರಿನ ಉತ್ತರಕ್ಕೆ ಜಿಕೆವಿಕೆಯ ಒಳಗೆ ವಿದ್ಯಾರಣ್ಯಪುರದ ಗಡಿಯ ಹತ್ತಿರದಲ್ಲಿ ಸುಮಾರು ಒಂದು ಎಕರೆಯಷ್ಟು ವಿಸ್ತಾರವನ್ನು ಹೊಂದಿದ ಮರವಿದೆ. ಅದರಲ್ಲಿ ಒಮ್ಮೆ ಸರಿ ಸುಮಾರು 350ಕ್ಕೂ ಹೆಚ್ಚು ಹೆಜ್ಜೇನಿನ ಗೂಡುಗಳು ಇದ್ದವು. ಆದ ಕಾರಣದಿಂದಲೇ ಅದರ ಅಡಿಯಲ್ಲಿ ಒಂದು ಅಂತರರಾಷ್ಟ್ರೀಯ ಕೀಟವಿಜ್ಞಾನಿಗಳ ಸಮಾವೇಶವೊಂದು 80/90 ರ ದಶಕದಲ್ಲಿ ಜರುಗಿತ್ತು.

ರಾಷ್ಟ್ರೀಯ ವೃಕ್ಷವಾಗಿ ಆಲ

ನಮ್ಮ ದೇಶವು 1950ರಲ್ಲಿ ಆಲದ ಮರವನ್ನು ರಾಷ್ಟ್ರೀಯ ವೃಕ್ಷವನ್ನಾಗಿ ಘೋಷಿಸಿದೆ. ಭಾರತೀಯತೆಯ ಸಂಸ್ಕೃತಿಯ ಸಹಬಾಳ್ವೆ ಹಾಗೂ ಐಕ್ಯತೆಯ ಸಂಕೇತವಾಗಿ ಆಲವನ್ನು ರಾಷ್ಟ್ರದ ಹೆಮ್ಮೆ ಎಂದು ಪರಿಗಣಿಸಲಾಗಿದೆ. ನಮ್ಮ ದೇಶದ ದಾರ್ಶನಿಕ ಹಾಗೂ ಆಧ್ಯಾತ್ಮಿಕ ಮೌಲ್ಯಗಳನ್ನು ಆಲದ ಮರವು ಪ್ರತಿನಿಧಿಸುವ ಬಗೆಗೆ ಅದನ್ನು ಪಾರಂಪರಿಕ ಗೌರವದಿಂದ ಕಾಣಲಾಗಿದೆ. ಬಹಳ ಮುಖ್ಯವಾಗಿ ಅದರ ವಿಶಾಲತೆ, ದೀರ್ಘಕಾಲದ ಜೀವನ ಹಾಗೂ ಗಟ್ಟಿ ಮುಟ್ಟಾದ ಕಾಂಡ-ಬೇರುಗಳ ಸಮೂಹ ಹಾಗೂ ಅದರ ದಟ್ಟ ನೆರಳು ಸಹಸ್ರಾರು ಜನ-ಜೀವಿಗಳಿಗೆ ಕೊಡುವ ನೆಲೆಯನ್ನು ಗಮನದಲ್ಲಿ ಇರಿಸಿಕೊಂಡು ಗೌರವವನ್ನು ಪ್ರಧಾನ ಮಾಡಲಾಗಿದೆ. ಅದರ ದೀರ್ಘಕಾಲದ ಬದುಕು ಅದನ್ನು ಹೆಚ್ಚೂ ಕಡಿಮೆ “ಅಮರ” ವನ್ನಾಗಿಸಿದೆ.  ಈ ಗೌರವದ ಮತ್ತೊಂದು ಪ್ರಮುಖ ಕಾರಣವೆಂದರೆ ಬ್ರಿಟೀಷರು ತಮ್ಮ ವಸಾಹತು ಧೋರಣೆಯ ವಿರೋಧಿಗಳನ್ನು ದಂಡಿಸಲು ಆಲದ ಮರದ ತಾಣಗಳನ್ನು ಬಳಸುತ್ತಿದ್ದುದರ ಸಂತಾಪ ಸೂಚನೆಯೂ ಎಂಬಂತೆ ಆಲದ ಮರಕ್ಕೆ ನಾವು ರಾಷ್ಟ್ರೀಯ ಸ್ಥಾನ-ಮಾನವನ್ನು ಕೊಟ್ಟಿದ್ದೇವೆ.

                ಇಂಡೋನೇಶಿಯಾ ದೇಶವು ಸಹಾ ಆಲಕ್ಕೆ ರಾಷ್ಟ್ರೀಯ ಗೌರವವನ್ನು ಕೊಟ್ಟಿದೆ. ತನ್ನ ರಾಷ್ಟ್ರೀಯ ಲಾಂಛನದಲ್ಲಿ ಆಲಕ್ಕೆ ಸ್ಥಾನ ಕೊಟ್ಟು ಆಲದ ಐಕ್ಯತೆಯ ಗುಣವನ್ನು ಪ್ರತಿಪಾದಿಸುತ್ತಿದೆ.  ಆಲದ ಗಟ್ಟಿತನ, ಹಬ್ಬುವ ಛಲ, ತನ್ನ ನೆರಳಲ್ಲಿ ಆಸರೆ ಕೊಡುವ ಗುಣ ಎಲ್ಲವನ್ನೂ ಮೆಚ್ಚಿ ಅದಕ್ಕೆ ಸ್ಥಾನ ಕೊಟ್ಟಿದೆ ಎಂದು ಅಲ್ಲಿನ ಸಾಂವಿಧಾನಿಕ ದಾಖಲೆಗಳು ತಿಳಿಸುತ್ತವೆ.

ಆಲದ ಔಷಧಿಯ ಗುಣಗಳು 

                ಭಾರತೀಯ ಸಮುದಾಯಗಳಿಗೆ ಮರಗಳ ತಿಳಿವಳಿಕೆಯಲ್ಲಿ ಪುರಾತನವಾದ ಇತಿಹಾಸವನ್ನು ಹೊಂದಿರುವ ಆಲ, ಇಲ್ಲಿನ ಆರೋಗ್ಯದ ಪಾಲನೆಯಲ್ಲೂ ಬಹಳ ಪ್ರಮುಖವಾದ ಪಾತ್ರವನ್ನು ವಹಿಸಿದೆ. ಆಯುರ್ವೇದದ ಗ್ರಂಥಗಳು ಆಲವನ್ನು ಅತ್ಯಂತ ವಿವರವಾದ ಸಂಗತಿಗಳಿಂದ ದಾಖಲಿಸಿವೆ. ಭಾರತೀಯ ಸಂಸ್ಕೃತಿಯ ಶ್ರೇಷ್ಠ ವೈದ್ಯರಲ್ಲೊಬ್ಬನಾದ ಚರಕನು ಆಲದ ಮೂತ್ರ ಸಂಬಂಧಿತ ಚಿಕಿತ್ಸೆಗಳನ್ನು ದಾಖಲಿಸಿದ್ದಾನೆ. ಆಚಾರ್ಯ ವಾಘಭಟ್ಟನೂ ಕೂಡ ಆಲದ ಕಡ್ಡಿಗಳನ್ನು ದಂತ ರಕ್ಷಣೆಯ ಹಿತದಲ್ಲಿ ಬಳಸುವ ಬಗ್ಗೆ ಹಾಗೂ ಆಲದ ತೊಗಟೆ ಕಷಾಯವನ್ನು ಲೈಂಗಿಕ ಆರೋಗ್ಯದ ಬಳಕೆಗೆ ಯೋಗ್ಯವೆಂದೂ ತಿಳಿಸಿದ್ದಾನೆ. ಸುಶ್ರುತನೂ ಸಹಾ ತನ್ನ ಸುಶ್ರುತ ಸಂಹಿತದಲ್ಲಿ ಇದರ ಪ್ರಸ್ತಾಪವನ್ನು ಮಾಡಿದ್ದಾನೆ. ಹೀಗೆ ಅನೇಕ ಪ್ರಾಚೀನ ವೈದ್ಯರು ಆಲದ ಆರೋಗ್ಯದ ಅನುಕೂಲಕರ ಬಳಕೆಗಳನ್ನು ವಿವರಿಸಿದ್ದಾರೆ.

                ಆಲದ ಮರದ ಹಾಲನ್ನು ನೇರವಾಗಿ ಗಾಯಗಳ ಮಾಯಲು ಬಳಸಬಹುದು. ಹಾಗೆಯೇ ಆಲದ ಎಲೆಗಳನ್ನೂ ತೆರೆದ ಗಾಯಗಳನ್ನು ಕಟ್ಟಲೂ ಬಳಸಲಾಗುತ್ತದೆ. ಇದರ ಗಾಯವನ್ನು ಮಾಯಿಸುವ ಗುಣವನ್ನು ಬಹುವಾಗಿ ಕೊಂಡಾಡಲಾಗಿದೆ. ಆಲದ ಎಲೆಗಳನ್ನು ಎಥೆನಾಲ್ ಅಥವಾ ನೀರಿನಲ್ಲಿ ಕಷಾಯ ಮಾಡಿ ಬಳಸುವುದರಿಂದ ಕೀಲು ನೋವುಗಳ ಸಮಸ್ಯೆಯು ಪರಿಹಾರವಾಗುವ ಬಗೆಗೆ ಸಂಶೋಧನೆಗಳು ತಿಳಿಸಿವೆ. ಆಲದಲ್ಲಿ ಕೆಲವು ಸಸ್ಯರಾಸಾಯನಿಕಗಳು ಕೆಲವೊಂದು ಸೂಕ್ಷ್ಮಜೀವಿಗಳಿಗೆ ಪ್ರತಿರೋಧವನ್ನು ಒಟ್ಟುವ ಬಗೆಗೂ ಅಧ್ಯಯನಗಳು ದಾಖಲು ಮಾಡಿವೆ. ಅನೇಕ ಆಯುರ್ವೇದ ಔಷಧಗಳು ಆಲದಿಂದ ತಯಾರಿಸಿದ ಕೆಲವು ಅಂಶಗಳನ್ನು ಹೊಂದಿವೆ. ಅವುಗಳು ತೈಲಗಳಾಗಿವೆ, ಪುಡಿಗಳಾಗಿವೆ. ಕೆಲವೊಂದು ಮಾತ್ರೆಗಳೂ ಆಗಿವೆ. ಮಧುಮೇಹದ ಚಿಕಿತ್ಸೆಗೆ ಬಳಸುವ ಆಯುರ್ವೇದ ಮಾತ್ರೆಗಳಲ್ಲಿ ಆಲದಿಂದ ಪಡೆದ ರಾಸಾಯನಿಕಗಳಿರುತ್ತವೆ. 

ಕೊನೆಯ ಸಂಗತಿಗಳು

ಆಲವು ಪರಾಗಸ್ಪರ್ಶಗೊಂಡು ಬೀಜಗಟ್ಟಲು ಅದಕ್ಕೆ ಪುಟ್ಟ ಹುಳುವಿನ ಸಹಕಾರ ಬೇಕೇ ಬೇಕು. ಎಲ್ಲಾ ಫೈಕಸ್ ಗಳಂತೆ ಆಲವೂ ಸಹಾ ಒಂದು ಕಣಜ(Wasp)ವನ್ನು ಅವಲಂಬಿಸಿದೆ. ಈ ಅವಲಂಬನೆ ಸದಾ ಗೊತ್ತಾದ ಕಣಜದ ಪ್ರಭೇದದೊಂದಿಗೆ ಮಾತ್ರ ಇರುತ್ತದೆ. ಆಲದೊಂದಿಗೆ ಲಕ್ಷಾಂತರ ವರ್ಷಗಳಿಂದ ಇಂತಹಾ ಸಾಹಚರ್ಯದಿಂದ ಇರುವ ಕಣಜದ ಪ್ರಭೇದವು ಯುಪ್ರಿಸ್ಟಿನ ಮಸೊನಿ (Eupristina masoni) ಎಂಬುದಾಗಿದೆ. ಯುಪ್ರಿಸ್ಟಿನ ಸಂಕುಲದ ಕಣಜಗಳು ಇಂಡೋ-ಆಸ್ಟ್ರೇಲಿಯದ ಮೂಲದವು.  ಇವೆರಡೂ ಭೌಗೋಳಿಕ ಸನ್ನಿವೇಶಗಳಲ್ಲಿ ವಿಕಾಸಗೊಂಡಿವೆ. ಎಕರೆಗಟ್ಟಲೆ ವಿಸ್ತಾರವಾಗಿ ಬೆಳೆಯಬಲ್ಲ, ಎಂತಹದೇ ಗಿಡ/ಮರವನ್ನೂ ನುಂಗಿ ಹಾಕಬಲ್ಲ, ಅಷ್ಟೇಕೆ ಎಂತಹಾ ಬೆಟ್ಟವನ್ನೂ ಭೇಧಿಸಿ ಬೇರಿಳಿಸಬಲ್ಲ ಆಲವು ಕೇವಲ ಒಂದುವರೆ ಮಿ.ಮೀ. ಗಾತ್ರದ ಹುಳುವಿನಿಂದ ತನ್ನ ಜೀವನವನ್ನು ಕಾಪಾಡಿಕೊಳ್ಳಬೇಕಿದೆ. ಯುಪ್ರಿಸ್ಟಿನ ಮಸೊನಿಯ ಹೆಣ್ಣು 1.8 ಮಿ.ಮೀ ಉದ್ದ ಇದ್ದರೆ, ಗಂಡು 1.3 ಮಿ.ಮೀ ಮಾತ್ರ ಇರುತ್ತವೆ. ಎರಡೂ ಜೀವಿಗಳೂ ಒಂದಕ್ಕೊಂದು 5-10ಲಕ್ಷಪಟ್ಟು ಗಾತ್ರದ ವ್ಯತ್ಯಾಸವುಳ್ಳವು. ಅಷ್ಟಿದ್ದೂ ಅವಿನಾವ ಸಂಬಂಧ, ಒಂದನ್ನೊಂದು ಬಿಟ್ಟು ಬದುಕೇ ಇಲ್ಲದಂತೆ! ಎಂತಹ ಅಚ್ಚರಿಯಲ್ಲವೇ?

                ಆಲದ ಮರದ ಕೆಳಗೆ ಏನೂ ಬೆಳೆಯೊಲ್ಲ ಅನ್ನುವ ಮಾತೊಂದಿದೆ. ಇದನ್ನು ಬೇರೆ ಬೇರೆ ಸಂದರ್ಭಗಳಲ್ಲಿ ದೊಡ್ಡವರ ಸಹವಾಸದ ಅಡಿಯಲ್ಲಿ ಸಣ್ಣವರು ಸೋತು ಹೋಗುವುದನ್ನು ಹೇಳಲು ಪ್ರತಿಮೆಯಾಗಿ ಬಳಸುವುದು ಉಂಟು. ಆಲದ ವಿಚಾರದಲ್ಲಿ ಇದರ ಕುರಿತೇ ಒಂದು ಸಂಶೋಧನಾ ಲೇಖನವೂ ಇದೆ.  ಒಮ್ಮೆ 60ರ ದಶಕದಲ್ಲಿ ಆಲದ ಜೊತೆ ಇತರೇ 50-60 ಫೈಕಸ್ ಪ್ರಭೇದಗಳನ್ನು ಹವಾಯ್ ದ್ವೀಪಗಳಿಗೆ ಪರಿಚಯಿಸಲಾಯಿತು. ಆಲದ ಬೀಜ ಸಹಜವಾಗಿ ಯಾವುದೇ ಗಿಡ/ಮರದ ಮೇಲೆ ಬಿದ್ದರೂ ಅಲ್ಲಿಯೇ ಮೊಳೆತು, ಬೇರು ಬಿಟ್ಟು, ಬಿಟ್ಟ ಬೇರುಗಳನ್ನೇ ನೆಲಕ್ಕೂ ಚಾಚಿ, ತನಗೆ ಜಾಗ ಕೊಟ್ಟ ಗಿಡ/ಮರವನ್ನೆ ಬಳಸಿ ಬೆಳೆಯುತ್ತದೆ. ಕೊನೆಗೆ ಜಾಗ ಕೊಟ್ಟ ಮೂಲ ಮರವನ್ನೇ ನುಂಗಿ ಹಾಕುತ್ತದೆ. ಇದು ಅರಳಿ ಮತ್ತಿತರ ಫೈಕಸ್-ಗಳಲ್ಲೂ ಸಾಮಾನ್ಯ. ಅಲ್ಲೂ ಹೀಗೆಯೇ ಆಯಿತು! ಸ್ಥಳೀಯಸಸ್ಯ ಸಂಪನ್ಮೂಲವನ್ನು ಆಕ್ರಮಿಸಿ ಬೆಳೆಯುವ ಆಲವನ್ನು ತಡೆಯಬೇಕಾಯಿತು. ಆದ್ದರಿಂದ ಆಲವನ್ನು ಬೀಜಾಂಕರಿಸಲು ಸಹಾಯ ಮಾಡುವ ಕಣಜದ ಪ್ರಭೇದವನ್ನೇ ಪರಿಚಯಿಸದಂತೆ ಸಂಶೋಧನಾ ವರದಿಯು ಎಚ್ಚರಿಕೆಯಾಗಿ ತಿಳಿಸಿತ್ತು. ಆಲವು 80-90ರ ದಶಕದಲ್ಲಿ ಅಲ್ಲಿನ ಬಹುಪಾಲು ಸ್ಥಳೀಯ ಗಿಡ/ಮರಗಳನ್ನು ನುಂಗುತ್ತಿತ್ತಂತೆ! ಇರಲಿ ಅದರ ನೆರಳಿಗೆ ಮನಸೋತ ಮಾನವ ಕುಲ ಇಲ್ಲದ ಕಡೆಗೆ ಪರಿಚಯಿಸುತ್ತಲೇ, ಎಲ್ಲಿ ಬೇಡವೋ ಅಲ್ಲಿ ಬೆಳೆದರೆ ಅದನ್ನು ಕೀಳುತ್ತಾ ಅದರ ಜೊತೆಗಿನ ಸಾಹಚರ್ಯವನ್ನು ಮುಂದುವರೆಸಿದೆ. 

ನಮಸ್ಕಾರ..  ಚನ್ನೇಶ್.

This Post Has 4 Comments

  1. Dr Vijay

    Just simply fentastic articles !.all articles are very informative and readers friendly…unique kind of nerration in kannada..by Dr TS Channesh..hats off..every article is worth to become a chapter in schools.

  2. Dr Vijay Heggeri

    Just simply fentastic articles !.all articles are very informative and readers friendly…unique kind of nerration in kannada..by Dr TS Channesh..hats off..every article is worth to become a chapter in schools.Thank you Dr Channesh for enlightening us with your in-depth knowledge.

  3. Rajegowda

    Really great info,, hats up your entire team

  4. Rudresh.J.C

    Your information abut the plants and trees in kannada is very easily understood by the people. Hates off sir. Keep it up

Leave a Reply to Dr Vijay Cancel reply