You are currently viewing ಸೊಪ್ಪಿನ ಕುಲದ ಬೇರು ಬೀಟ್‌ ರೂಟ್‌: Beta vulgaris

ಸೊಪ್ಪಿನ ಕುಲದ ಬೇರು ಬೀಟ್‌ ರೂಟ್‌: Beta vulgaris

ಹರಿವೆ ಸೊಪ್ಪು, ದಂಟು, ಪಾಲಕ್‌ ಮುಂತಾದ ಹಸಿರು ಸೊಪ್ಪಿನ ಕುಟುಂಬದ್ದೇ ಆದ ಒಂದು ಸಸ್ಯದ ಬೇರು ಗಡ್ಡೆಯಂತಾಗಿ ಮಾನವ ಕುಲದ ಊಟದ ತಾಟನ್ನು ತಲುಪಿದೆ. ಮೊದಮೊದಲು ಹಸಿರು ಸೊಪ್ಪಿನ ರುಚಿಯ ಜೊತೆಗೆ ಬೇರಿನ ಸವಿಯೂ ದೊರೆತು, ಅದೇ ಹಿತವಾಗಿ ಇದೀಗ ಬೇರಿಗೆ ನಾಲಗೆಯನ್ನು ಒಡ್ಡಿದ್ದೇವೆ. ಈ ಬೀಟ್‌ ರೂಟ್‌ ನಾವು ಬಹುಪಾಲು ಬಳಸುವ ಸೊಪ್ಪಿನ ಕುಟುಂಬವಾದ ಅಮರಾಂತೇಸಿಯೇ (Amaranthaceae)ದ ಸದಸ್ಯ.

ಬೀಟ್‌ ರೂಟ್‌ಗೆ ನಿಜಕ್ಕೂ ಭಾರತೀಯವಾದ ಹೆಸರೊಂದು ಇಲ್ಲ. ಸಂಸ್ಕೃತದಲ್ಲಿಯಾಗಲಿ, ಇತರೆಯ ಯಾವುದೇ ಭಾರತೀಯ ಭಾಷಾ ಸಂಬಂಧವನ್ನು ಬೀಟ್‌ ಹೊಂದಿಲ್ಲ. ಹಾಗಿಲ್ಲದ್ದೇ ಕಾರಣ ಅದು ಖಂಡಿತವಾಗಿಯೂ ಪೂರ್ವದ ನೆಲಕ್ಕೆ ಪಶ್ಚಿಮದಿಂದ ಬಂದದ್ದೆಂಬ ಖಾತ್ರಿಯಾದ ಸಂಗತಿ. ಅದೂ ತುಂಬಾ ಇತ್ತೀಚೆಗೆ ಎನ್ನುವುದೂ ಕೂಡ.

ಬೀಟ್‌ ರೂಟ್‌ಗೆ ಯಾವುದೇ ಪ್ರಾಚ್ಯ ನೆಲೆ ಅಥವಾ ಪುರಾತತತ್ವ ಹಿನ್ನೆಲೆಯ ವಿವರಗಳು ಸಿಗುವುದಿಲ್ಲ. ಹಾಗಾಗಿ ಭಾಷಾ ಸಂಬಂಧಗಳ ಮೂಲಕವೇ ಹೆಚ್ಚಾಗಿ ಅದರ ಇತಿಹಾಸವನ್ನು ಅರಿಯಲಾಗಿದೆ. ಅದರಿಂದಾಗಿ ಇದೊಂದು ತೀರಾ ಹಳೆಯ ಕಾಲದ ಬೆಳೆಯೆಂದು ಗುರುತಿಸಲಾಗಿಲ್ಲ. ಅಷ್ಟಕ್ಕೂ ಇದನ್ನು ಈಗಿರುವಂತೆ ಅದರ ಬೇರಿನ ಕೊಯಿಲಿಗೆಂದೂ ಬೆಳೆಯುತ್ತಿರಲಿಲ್ಲ. ಇದೊಂದು ಹಸಿರೆಲೆಯ ಬಳಕೆಗೇ ಬೆಳೆಯುವ ಆರಂಭವೇ ಇದಕ್ಕಿರುವ ಚರಿತ್ರೆ. ಆಗಲೂ ಎಳೆಯ ಬೇರನ್ನು, ಅದರ ಎಲೆಯ ಜೊತೆಗೇ ಆಹಾರದಲ್ಲಿ ಬಳಸುತ್ತಿದ್ದ ನಿದರ್ಶನಗಳಿವೆ.  ಮೂಲತಃ ನಮ್ಮ ಆಹಾರದಲ್ಲಿ ಒಂದಾಗಿರುವ ಬೀಟ್‌ ರೂಟ್‌, ಸಮುದ್ರ ಬೀಟ್‌ (Beta vulgaris subsp. maritima) ನಿಂದ ವಿಕಾಸವಾಗಿದೆ. ಹಾಗೆಂದೇ ಇದಕ್ಕೆ ನೆಲದಲ್ಲಿ ವನ್ಯ ಸಂಬಂಧಿಕರಿಲ್ಲ, ಇದರ ಸಂಬಂಧವೇನಿದ್ದರೂ ನೀರಿನದ್ದು. ಆದಾಗ್ಯೂ  ಆದಾಗ್ಯೂ ಬ್ಯಾಬಿಲೋನಿಯನ್ನರು ತಮ್ಮ ತೂಗು ತೋಟದಲ್ಲಿ (ಹ್ಯಾಂಗಿಂಗ್‌ ಗಾರ್ಡನ್‌- Hanging Gardens of Babylon) ಬೆಳೆಯುತ್ತಿದ್ದರು ಎಂಬುದಕ್ಕೆ ದಾಖಲೆಗಳು ಸಿಗುತ್ತವೆ.

ಹೀಗೆ ಆರಂಭವಾದ ಬೀಟ್‌ ರೂಟ್‌ ಒಂದೇ ಪ್ರಮುಖ ಪ್ರಭೇದವಾದ ಬೀಟಾ ವಲ್ಗಾರಿಸ್‌ (Beta vulgaris) ಆಗಿದ್ದು, ಅದರಲ್ಲೇ ನಾಲ್ಕು ಬಗೆಯ ಬೀಟ್‌ಗಳಾಗಿ ಬಳಕೆಯಲ್ಲಿವೆ. ಅದರಲ್ಲಿ ಅತ್ಯಂತ ಪ್ರಮುಖವಾದ ಭಾರತೀಯರಿಗೂ ಹೆಚ್ಚು ಪರಿಚಯದ ಟೇಬಲ್‌ ಬೀಟ್‌, ಗಾರ್ಡನ್‌ ಬೀಟ್‌ ಅಥವಾ ರೆಡ್‌-ಕೆಂಪು ಬೀಟ್‌. ಇದು ತರಕಾರಿಯಾಗಿ ಬಳಸುವ ಬೀಟ್‌.  ಇದನ್ನು ಬ್ಲಡ್‌ ಟರ್ನಿಪ್‌ (Blood Turnip) ಎಂದೂ ಕರೆಯುವುದುಂಟು. ಎಲ್ಲಾ ಬೀಟ್‌ ಗಳೂ ದ್ವೈವಾರ್ಷಿಕವಾದವು. ಹೆಚ್ಚಾಗಿ ವಾರ್ಷಿಕವಾಗಿ ಬೆಳೆಯಲಾಗುತ್ತಿದೆ. ಆದ್ದರಿಂದ ಈ ರೆಡ್‌ ಬೀಟ್‌ ಮೊದಲ ಸೀಸನ್‌ ನಲ್ಲೇ ಕಾಟಾವಿಗೆ ಬರುತ್ತದೆ. ಮುಂದೆ ಹಾಗೇ ಬಿಟ್ಟರೆ, ಗಿಡವು ಹೂಬಿಟ್ಟು ಬೀಜಗಟ್ಟುತ್ತದೆ. ಹಾಗಾಗಿ ಬೇರು ಎಳೆಯದ್ದಾಗಿದ್ದಾಗ ಅದರ ರಸವಂತಿಕೆಯು ಹೆಚ್ಚು.

ಇದರಲ್ಲಿನ ಕೆಂಪು ಬಣ್ಣವು ಅದರಲ್ಲಿರುವ ಬಿಟಾನಿನ್‌ (Betanin, or Beetroot Red) ಎಂಬ ರಸಾಯನಿಕದಿಂದ ಬಂದದ್ದು. ಇದೊಂದು ಗ್ಲೈಕೊಸೈಡಿಕ್‌ ಬಣ್ಣ, ಬಗೆ ಬಗೆಯ ತಿನಿಸುಗಳಿಗೆ ಬಣ್ಣವನ್ನು ಕೊಡಲೂ ಬಳಸಬಹುದು. ಅದನ್ನು ಈ ಬಿಟಾನಿನ್‌ ಅಲ್ಲಿನ ಗ್ಲೂಕೋಸ್‌ ಅಣುವನ್ನು ಹೊರತೆಗೆದು ಪಡೆಯುವ ಬಿಟಾನಿಡಿನ್‌ (Betanidin) ಎಂಬ ವಸ್ತುವಿನಿಂದ ಪಡೆಯಲಾಗುತ್ತದೆ. ಬಿಟಾನಿನ್‌ ಹೆಚ್ಚು ಕೆಂಪು ಬಣ್ಣವನ್ನು ಕೊಡಲು ಆ ಮಾಧ್ಯಮದ ರಸಸಾರ (ಪಿ.ಎಚ್‌ – pH) 4 ಮತ್ತು 5 ರ ನಡುವೆ ಇರಬೇಕು. ಅದಕ್ಕಿಂತಾ ಹೆಚ್ಚಾದರೆ. ಅದೊಂದು ಬಗೆಯ ನೀಲಿಯುತವಾದ ನೇರಳೆ ಬಣ್ಣವಾಗುತ್ತದೆ. ಇನ್ನೂ ಹೆಚ್ಚಾಗಿ ಕ್ಷಾರೀಯವಾದಾಗ ಅದು ಹಳದಿ ಮಿಶ್ರಿತ ಕಂದು ಬಣ್ಣಕ್ಕೆ ತಿರುಗುತ್ತದೆ.  

ರಸಾಯನಿಕ ಸೂತ್ರ C24H26N2O13

ರಸಾಯನಿಕವಾಗಿ ಈ ಬಿಟಾನಿನ್‌ (Betanin) ಒಂದು ಇಂಗಾಲದ ಸಂಯುಕ್ತ ವಸ್ತು. ಅದರ ರಸಾಯನಿಕ ಸೂತ್ರವು C24H26N2O13 ಆಗಿರುತ್ತದೆ. ಹಾಗಾಗಿ ಇದೇ ರಸಾಯನಿಕವೇ ಬಗೆ ಬಗೆಯ ಬಣ್ಣದ ಬೀಟ್‌ರೂಟ್‌ಗಳನ್ನು ವಿವಿಧ ತಳಿಗಳಾಗಿ ಅಥವಾ ಬಗೆಗಳಾಗಿ ವಿಕಾಸಗೊಳಿಸಿದೆ.  

ಬೀಟ್‌ ರೂಟ್‌ನ ಕೆಂಪು ಬಣ್ಣದ ಕಾರಣ ಹಾಗೆಯೇ ಮತ್ತೆ ಕೆಲವೊಂದು ಕಾರಣಗಳಿಂದ ಅದನ್ನು ಅತಿಯಾಗಿ ಪ್ರೀತಿಸುವ ಹಾಗೂ ದ್ವೇಷಿಸುವ ಜನರೂ ಇದ್ದಾರೆ. ತರಕಾರಿಗಳ ಜೊತೆ ಬೇಯಿಸಿದಾಗ ಅದು ಬಿಟ್ಟುಕೊಡುವ ಕೆಂಪು ಬಣ್ಣವು ರಕ್ತವನ್ನು ಹೋಲುವುದರಿಂದ ಈ ಬಗೆಯ ದ್ವೇಷ ಹಾಗೂ ಪ್ರೀತಿಗಳು ಒಂದೆಡೆಯಾದರೆ, ಮತ್ತೊಂದೆಡೆ ಅದರೊಳಗಿನ ಒಂದು ಬಗೆಯ ಮಣ್ಣಿನ ವಾಸನಾಯುಕ್ತವಾದ ರುಚಿ! ಇದನ್ನು ಬೀಟ್‌ ರೂಟ್‌ ಬಳಕೆಯಲ್ಲಿ ಸುಲಭವಾಗಿ ಗಮನಿಸಬಹುದಾಗಿದೆ. ಇದಕ್ಕೆ ಪ್ರಮುಖ ಕಾರಣ ಅದರಲ್ಲಿರುವ ಜಿಯೊಸ್ಮಿನ್‌ (Geosmin) ಎಂಬ ರಸಾಯನಿಕ. ಈ ಜಿಯೊಸ್ಮಿನ್‌ ಒಂದು ರೀತಿಯ ಹಸಿ ಮಣ್ಣಿನ ರುಚಿಯನ್ನು ಒಡ್ಡುತ್ತದೆ. ಮಾನವರ ನಾಲಿಗೆಯು ಈ ಜಿಯೊಸ್ಮಿನ್‌ ಅನ್ನು ಅತ್ಯಂತ ಕಡಿಮೆ ಸಾಂದ್ರತೆಯಲ್ಲೂ ಕಂಡುಹಿಡಿಯಬಲ್ಲದು. ಆದರೆ ಇದರ ಅಂತರ ಬಗೆ ಬಗೆಯಲ್ಲಿ ಭಿನ್ನವಾಗಿದ್ದು ಇಂತಹಾ ಪ್ರೀತಿ ಅಥವಾ ದ್ವೇಷವನ್ನು ತೋರುತ್ತದೆ. ಇದನ್ನು ಹೊಂದಿಕೊಂಡ ಸಿಹಿಗೂ ಇದೇ ಬಗೆಯ ಸ್ಪಂದನೆಯನ್ನೂ ಅಧ್ಯಯನಕಾರರು ಗುರುತಿಸಿದ್ದಾರೆ. ಹೀಗೆ ಬೀಟ್‌ ರೂಟ್‌ನ ವಿರೋಧಿ ಬಣದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಒಬಾಮಾ ಮತ್ತು ಅವರ ಹೆಂಡತಿಯೂ ಸೇರಿದ್ದಾರೆ. ಅವರಿದ್ದಾಗ ವೈಟ್‌ ಹೌಸ್‌ನ ತೋಟದಲ್ಲಿ ಬೀಟ್‌ ರೂಟ್‌ ಬೆಳೆಯುತ್ತಿರಲಿಲ್ಲ.    

ಶುಗರ್‌ ಬೀಟ್‌ (Sugar Beet)

ಹೆಚ್ಚೂ ಕಡಿಮೆ ಹಳದಿ ಮಿಶ್ರಿತ ಬಿಳಿಯ ಬಣ್ಣದ ಬೇರು ಗಡ್ಡೆಗಳ ಬೀಟ್‌ ಹೆಚ್ಚಿನ ಸಕ್ಕರೆಯ ಅಂಶವನ್ನು ಹೊಂದಿದ್ದು, ಕಬ್ಬನ್ನು ಬೆಳೆಯಲಾಗದ ಅತಿ ಶೀತ ಪ್ರದೇಶಗಳಲ್ಲಿ ಪ್ರಮುಖವಾಗಿ ಸಕ್ಕರೆಯನ್ನು ಸಂಶ್ಲೇಷಿಸಿ ಪಡೆಯಲು ಬೆಳೆಯಲಾಗುತ್ತದೆ. ಈ ಬಗೆಯ ತಳಿಯಿಂದ ಸಕ್ಕರೆಯನ್ನು ಪಡೆಯುವ ವಿಧಾನವನ್ನು ಮೊಟ್ಟ ಮೊದಲು ಅಭಿವೃದ್ಧಿ ಪಡಿಸದ ರಸಾಯನ ವಿಜ್ಞಾನಿ ಜರ್ಮನಿ ದೇಶದ ಆಂಡ್ರೆಯಾಸ್‌ ಮಾರ್ಗ್ರಾಫ್‌ (Andreas Marggraf). ಆತ 1747 ರಷ್ಟು ಹಿಂದೆಯೇ ಬೀಟ್‌ ರೂಟ್‌ಗಳಿಂದ ಸಕ್ಕರೆಯನ್ನು ಹರಳುಗಳಾಗಿ ಪಡೆದು ಅದನ್ನು ಕಬ್ಬಿನ ಸಕ್ಕರೆಯಂತೆಯೇ ಇರುವುದನ್ನು ಸಾಬೀತು ಪಡಿಸಿದ್ದನು. ಮುಂದೆ ಆತನ ಶಿಷ್ಯಂದಿರು ಇನ್ನು ಹೆಚ್ಚಿನ ಸಂಸ್ಕರಣೆಯ ವಿಧಾನವಾಗಿ ಸಕ್ಕರೆಯನ್ನು ಬೀಟ್‌ರೂಟ್‌ ನಿಂದ ಪಡೆಯುವ ಬಗೆಯನ್ನು ಆವಿಷ್ಕರಿಸಿದರು. ಇಂದು ಜಾಗತಿಕವಾಗಿ ಮೂರನೆಯ ಒಂದರಷ್ಟು ಸಕ್ಕರೆಯ ಉತ್ಪಾದನೆಯು ಬೀಟ್‌ ರೂಟ್‌ ನಿಂದಲೇ ಪಡೆಯಲಾಗುತ್ತಿದೆ.  ಇದರ ಉತ್ಪಾದನೆಯು ಭಾರತದಲ್ಲಿ ಕಡಿಮೆ ಅಥವಾ ಇಲ್ಲವೇ ಇಲ್ಲ ಎನ್ನುವಷ್ಟು. ಆದರೂ ಬೀಟ್‌ ಶುಗರ್‌ ನಿಂದ ಸಕ್ಕರೆಯ ಉತ್ಪಾದನೆಯು ಕಡಿಮೆ ನೀರನ್ನು ಬಳಸಿ ಪಡೆಯಬಹುದೆಂಬ ಕಾರಣಕ್ಕೆ ಪ್ರಚಾರಕ್ಕೆ ಬರುತ್ತಿದ್ದರೂ, ಇಂಡಿಯಾದ ಕಬ್ಬಿನ ಸಕ್ಕರೆಯ ಲಾಭಿಯು ಅಷ್ಟು ಸುಲಭವಾಗಿ ಬಿಡುತ್ತಿಲ್ಲ. ಜಗತ್ತಿನಲ್ಲಿ ಬೀಟ್‌ ರೂಟ್‌ ನಿಂದ ಸಕ್ಕರೆಯನ್ನು ಪಡೆಯುವ ದೇಶಗಳಲ್ಲಿ ರಷಿಯಾ ಪ್ರಥಮ ಹಾಗೂ ಪ್ರಮುಖವಾದ ಸ್ಥಾನದಲ್ಲಿದೆ.  

ಹಸಿರು ಸೊಪ್ಪಿನ ಬೀಟ್‌ ರೂಟ್‌.  

ಇನ್ನು ಮೂರನೆಯ ಬಗೆಯ ಬೀಟ್‌ ರೂಟ್‌ ಹಸಿರು ಸೊಪ್ಪಿಗಾಗಿ  ಬೆಳೆಯುವ ಬೀಟ್‌. ಅದನ್ನು ಚಾಡ್‌ ಅಥವಾ ಸ್ವಿಸ್‌ ಚಾಡ್‌ (Chard or Swiss chard) ಎಂದು ಕರೆಯಲಾಗುತ್ತದೆ. ಇದು ಹೆಚ್ಚು ಕಡಿಮೆ ನಾವೆಲ್ಲಾ ಬಳಸುವ ಹರಿವೆ, ದಂಟು ಅಥವಾ ಪಾಲಕ್‌ ಬಗೆಯದು. ಆದರೆ ತುಸು ಕೆಂಪು ವರ್ಣದ ಎಲೆಗಳ ಹೊಂದಿರುವ ಬೀಟ್‌. ಪಾಶ್ಚಿಮಾತ್ಯರಲ್ಲಿ ಇದು ವಿಶೇಷವಾದ ಹಸಿರು ಸೊಪ್ಪಿನ ತರಕಾರಿ. ಇದು ಉತ್ತಮ ಆಹಾರಾಂಶಗಳನ್ನು ಹೊಂದಿದ್ದು ಜನಪ್ರಿಯತೆಯಲ್ಲೂ ಮುಂದಿದೆ. ಇದಕ್ಕೆ ಬೀಟ್‌ ಸ್ಪಿನಾಚ್‌ (Beet Spinach) ಎಂದೂ ಕರೆಯಲಾಗುತ್ತದೆ.

ಮೇವಿನ ಬಳಕೆಯ ಬೀಟ್‌ ರೂಟ್‌

ಇದು ಐರೋಪ್ಯರಲ್ಲಿ ಹೆಚ್ಚು ಜನಪ್ರಿಯವಾದುದು. ಇದನ್ನು ಮ್ಯಾನ್‌ಗೊಲ್ಡ್‌, ಫೀಲ್ಡ್‌ ಬೀಟ್‌ (MangoldMangel beetField beetFodder beet ) ಫಾಡರ್‌ ಬೀಟ್‌ ಮುಂತಾಗಿ ಕರೆಯುತ್ತಾರೆ. ಇದನ್ನು ಮಾನವರು ತಿನ್ನಬಹುದಾದರೂ ಸಾಮಾನ್ಯವಾಗಿ ಈ ತಳಿಯನ್ನು ದನಕರುಗಳಿಗೆ, ಹಂದಿಗಳಿಗೆಂದೇ ಬೆಳೆಯುತ್ತಾರೆ.

ಬೀಟ್‌ ರೂಟ್‌ ಹಸಿಯಾಗಿಯೂ ತಿನ್ನಬಹುದಾಗಿದೆ. ಜೊತೆಗೆ ಬೇಯಿಸಿಯೂ ಸಹಾ. ಮುಖ್ಯವಾಗಿ ಅದರಲ್ಲಿ ಶ್ರೀಮಂತವಾಗಿರುವ ವಿಟಮಿನ್‌ “ಸಿ” ಹಾಗೂ ಕಬ್ಬಿಣ, ಮ್ಯಾಗ್ನಿಸಿಯಂ ಮತ್ತಿತರ ಖನಿಜಾಂಶಗಳಿಂದಾಗಿ ಅದನ್ನು ಜ್ಯೂಸ್‌ ಅಥವಾ ರಸವನ್ನಾಗಿಸಿ ಬಳಸುವ ಮಾರ್ಗಗಳು ಜನಪ್ರಿಯವಾಗಿವೆ. ಬೀಟ್‌ ರೂಟ್‌ ಜ್ಯೂಸ್‌ ಬಳಕೆಯಿಂದ, ತ್ವಚೆಯ ಅಥವಾ ಚರ್ಮದ ಆರೋಗ್ಯಕ್ಕೆ ಹೆಚ್ಚು ಸಹಕಾರಿ ಎಂಬುದನ್ನು ಅರಿಯಲಾಗಿದೆ.

ಮಾನವರು ಮೂಲತಃ ಬೀಟ್ ಅನ್ನು ಹಸಿರು ಸೊಪ್ಪಾಗಿ ಮಾತ್ರವೇ ತಿನ್ನುತ್ತಿದ್ದರು ಆದರೆ ಅದರ ತೆಳುವಾದ ಮತ್ತು ನಾರಿನ ಇದನ್ನು ಸಾಂದರ್ಭಿಕವಾಗಿ ಔಷಧದಲ್ಲಿ ಮಾತ್ರವೇ ಬಳಸಲಾಗುತ್ತಿತ್ತು. ದೊಡ್ಡ ಬೀಟ್ ಎಲೆಗಳು ಮತ್ತು ಕಾಂಡಗಳನ್ನು   ಸೇವಿಸಲಾಗುತ್ತಿತ್ತು. ವಸಂತಕಾಲ ಮತ್ತು ಶರತ್ಕಾಲದಲ್ಲಿ ಮಾತ್ರ ಚೆನ್ನಾಗಿ ಬೆಳೆಯುತ್ತಿದ್ದರೂ, ಪ್ರಾಚೀನ ರೋಮ್ ಮತ್ತು ಗ್ರೀಸ್‌ನಲ್ಲಿ ಬೀಟ್‌ ಗಡ್ಡೆಗಳು ಬಳಕೆಗೆ ಪರಿಗಣಿಸಲ್ಪಟ್ಟು, ಅವುಗಳನ್ನು ಉತ್ಪಾದಿಸುವ ವಿಧಾನಗಳನ್ನು ಅಭಿವೃದ್ಧಿಪಡಿಸಲಾಯಿತು. ಬೀಟ್‌ ಗಡ್ಡೆಗಳನ್ನು ಮೂಲದಲ್ಲಿ ಜರ್ಮನಿ ಅಥವಾ ಇಟಲಿಯಲ್ಲಿ ಇದನ್ನು ಮೊದಲು ಬಳಸಿದ್ದೆಂದು 1542 ರಲ್ಲಿ ದಾಖಲಿಸಲಾಗಿದೆ. ಇದರ ಆರಂಭಿಕ ರೂಪವು ನಾವು ಈಗ ಪರಿಚಿತವಾಗಿರುವ ಬಲ್ಬಸ್ ಆಕಾರಕ್ಕಿಂತ ಹೆಚ್ಚಾಗಿ ಪಾರ್ಸ್ನಿಪ್ ಅನ್ನು ಹೋಲುತ್ತಿತ್ತು. ಇದು 1500 ರ ದಶಕದ ಅಂತ್ಯದಲ್ಲಿ ಬಳಕೆಯಾಗಿ ಪ್ರಾರಂಭಕ್ಕೆ ಬಂತು. ಈ ವಿಧವು ಇತಿಹಾಸಪೂರ್ವದ ಉತ್ತರ ಆಫ್ರಿಕಾದ ಮೂಲ ತರಕಾರಿಯಿಂದ ವಿಕಸನಗೊಂಡಿದೆ ಎಂದು ಭಾವಿಸಲಾಗಿದೆ. ಮುಂದೆ ಶೀಘ್ರದಲ್ಲೇ ಇದು ಬೀಟ್‌ನ ಅತ್ಯಂತ ಗುರುತಿಸಬಹುದಾದ ರೂಪವಾಯಿತು.

ಎರಡು ಶತಮಾನಗಳ ನಂತರ ಇದು ವಿಶ್ವಾದ್ಯಂತ ಅಡುಗೆ ಮನೆಯಲ್ಲಿ ಯಶಸ್ಸನ್ನು ಪಡೆದಿರಲಿಲ್ಲ. ಮುಂದೆ ಈಶಾನ್ಯ ಯುರೋಪ್ ಬೀಟ್ ರೂಟ್ ಅನ್ನು ಆಹಾರದ ಪ್ರಧಾನ ಆಹಾರವಾಗಿ ಸ್ವೀಕರಿಸಿದ ನಂತರವೇ ಜನಪ್ರಿಯತೆಗೆ ಬಂತು. ಈಗ ಇದು ಚಳಿಗಾಲದ ಉದ್ದಕ್ಕೂ ಚೆನ್ನಾಗಿ ಬೆಳೆಯುವ ಪ್ರಮುಖ ತರಕಾರಿಗಳಲ್ಲಿ ಒಂದಾಗಿದೆ. ಬೀಟ್‌ ರೂಟ್‌ ಎಂಬ ಸೊಪ್ಪಿನ ತರಕಾರಿಯೊಂದು ಬೇರಿನ ಗಡ್ಡೆಯಾಗಿ ನಮ್ಮ ಹೊಟ್ಟೆಯನ್ನು ಸೇರುತ್ತಿದೆ.

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್.‌

Leave a Reply