You are currently viewing ಸಸ್ಯಯಾನದ ಅಮೃತ ಬಿಂದು

ಸಸ್ಯಯಾನದ ಅಮೃತ ಬಿಂದು

ಇಂಡಿಯನ್ ಇನ್ಸ್ಸ್ಟಿಟ್ಯೂಟ್ ಆಫ್ ಸೈನ್ಸ್ ಆವರಣದಲ್ಲಿ ಗೆಳೆಯ ಆಕಾಶ್ ಸಿಗುವವರಿದ್ದರು. ಸಾಮಾನ್ಯವಾಗಿ ಅಲ್ಲಿನ ಕ್ಯಾಂಟೀನಿನ ಕಾಫಿ ಹೀರುತ್ತಾ ನಮ್ಮ ಬಹುತೇಕ ಬೌದ್ಧಿಕ ಚರ್ಚೆಗಳನ್ನು ಒರೆಹಚ್ಚಿ, ಸಾಣೆಹಿಡಿದು ಒಪ್ಪ ಮಾಡಿದ್ದಿದೆ. ಮೇಯಿನ್ ಗೇಟಿನಿಂದ ಹಾಯ್ದು ಹೋಗುವಾಗ ಕಣ್ಣಿಗೆ ಬಿದ್ದ ಬಿಲ್ವಾರ ಮರವೊಂದು ಹಳೆಯ ನೆನಪನ್ನು ಕೆದಕಿತು. ಬಾಗೆ (Albizia lebbeck), ಬಿಲ್ವಾರ (Albizia odoratissima), ಹಾಗೂ ಚಿಗರೆ ಅಥವಾ ಚುಜ್ಜುಲು (Albizia amara) ಮರಗಳು ಅಕ್ಕ ತಂಗಿಯರಿದ್ದಂತೆ! ಎಲೆಗಳ ವಿನ್ಯಾಸ, ಮರದ ನೋಟ, ಇತ್ಯಾದಿಗಳಲ್ಲಿ ಒಂದಕ್ಕೊಂದು ಸಾಮ್ಯತೆ ಇದೆ. ಎಲೆಗಳ ಸೈಜಿನಲ್ಲಿ ಬಾಗೆ ದೊಡ್ಡದು, ಚುಜ್ಜುಲು ಚಿಕ್ಕದು. ಕಾಯಿಗಳೂ ಅಷ್ಟೆ. ಇವನ್ನೆಲ್ಲಾ ಹೇಳಿ ನನ್ನ ಮನಸ್ಸಿನಲ್ಲಿ ಪರ್ಮನೆಂಟಾಗಿಸಿದ್ದ ಕೃಷಿ ಕಾಲೇಜಿನಲ್ಲಿ ಫಾರೆಸ್ಟ್ರಿ ಕಲಿಸಿದ್ದ ಖಾನ್ ಸಾಹೇಬರು, ಪ್ರೊ.ಬಿ.ಜಿ.ಎಲ್. ಸ್ವಾಮಿಯವರ ಶಿಷ್ಯರು. ಇವನ್ನೆಲ್ಲಾ ಜೋಡಿಸಿ ಹಂಚಿಕೊಳ್ಳಬೇಕು, ಈ ಮೂರೂ ಮರಗಳ ಸಂಬಂಧಗಳ ಕಥನವನ್ನು ಹೇಳುವಂತೆ ಇಂಡಿಯನ್ ಇನ್ಸ್ಸ್ಟಿಟ್ಯೂಟ್ ಆಫ್ ಸೈನ್ಸ್ ಆವರಣದ ಬಿಲ್ವಾರ ಒತ್ತಾಯ ಮಾಡಿತು ಎನ್ನಬೇಕು. ಇದನ್ನೆಲ್ಲಾ ಮಾಮೂಲಿಯಂತೆ ಆಕಾಶ್ ಜೊತೆ ಮೊದಲ ಚರ್ಚೆ ನಡೆಸಿದಾಗ ಅವರಿಂದ ನಿರೀಕ್ಷಿಸಿದ್ದ ಬೆಂಬಲವೇನೂ ಸಿಗಲಿಲ್ಲ. ಆದರೇನಂತೆ ಹತ್ತಾರು ವರ್ಷಗಳ ಹಿಂದೆ ಖ್ಯಾತ ವಿಮರ್ಶಕರಾದ ಕೀರ್ತಿನಾಥ ಕುರ್ತಕೋಟಿಯವರ “ನೂರು ಮರ, ನೂರ ಸ್ವರ” ಪುಸ್ತಕದ ಕೆಲವು ಪುಟಗಳನ್ನು ತಿರುವು ಹಾಕಿದಾಗ ಹೆಚ್ಚು ಆಕರ್ಷಕವಾಗಿದ್ದು, ಅದರ ಶೀರ್ಷಿಕೆ. ಅದರ ನೆನಪಲ್ಲಿ ಗಟ್ಟಿಯಾಗಿ ಉಳಿದದ್ದು “ನೂರು ಮರ”! ಈಗ ಕೀರ್ತಿನಾಥರೂ ಇಲ್ಲ, ಖಾನ್ ಸಾಹೇಬರೂ, ಇಲ್ಲ, ನನಗೆ ಸಸ್ಯವಿಜ್ಞಾನದ ಪ್ರೀತಿಗೆ ಕಾರಣವಾಗಿರುವ ಮೂಲ ಪಾಠಗಳನ್ನು ಮಾಡಿದ್ದ ಕೃಷಿಕಾಲೇಜಿನ ಸತ್ಯವತಿಯವರೂ ಇಲ್ಲ. ಸುತ್ತಲೂ ಸದಾ ಕಾಣುವ ಗಿಡ-ಮರಗಳ ಕಾರಣದಿಂದ ನನ್ನ ಮನಸ್ಸಿನಿಂದ ದೂರವಾಗಿರದ “ನೂರು ಮರ” ಸ್ವಾಮಿಯವರ ಜನ್ಮ ಶತಮಾನದ ಗೌರವಕ್ಕಾಗಿ ಆಕಾಶ್ ಅವರ ಅನುಮಾನದ ಜೊತೆಗಿನ ಚರ್ಚೆಯನ್ನೂ ಮೀರಿ, ಫೇಸ್ ಪುಸ್ತಕದಲ್ಲಿ “ಸ್ವರ್ಗದ ಮರ”ದ ಮೂಲಕ ಕಾಣಿಸಿಕೊಂಡಿತು.

ಅದಕ್ಕೆಲ್ಲಾ ಮತ್ತೊಂದು ಮುಖ್ಯ ಕಾರಣ ನನ್ನೂರಿನಲ್ಲಿ ಕಳೆದ ಸರಿ ಸುಮಾರು 35 ವರ್ಷಗಳಿಂದಲೂ ನಿಂತ ಬಾಗೆ (Albizia lebbeck) ಮರದ, ಕಾಯಿಗಳ ಗಿಲ-ಗಿಲ ಸದ್ದು ಬಾಲ್ಯದಲ್ಲೇ ನನೊಳಗಿತ್ತು. ಈ ಬಾಗೆ ಮರಕ್ಕೆ, ನಾಮಕರಣ ಹಾಗೂ ವರ್ಗೀಕರಣ ಪಿತಾಮಹಾರಾದ ಕಾರ್ಲ್‍ ಲಿನೆಯಾಸ್ ಮೊದಲು ನಾಮಕರಣ ಮಾಡಿದ್ದು Mimosa lebbeck ಎಂದು. ಆದರೆ ಮುಂದೆ ಜಾರ್ಜ್‍ ಬೆಂಥಮ್ ಅವರು ಈಗ ಅದರ ಹೆಸರಿನಲ್ಲಿರುವ Albizia ವನ್ನು ಸೇರಿಸಿ ಸಂಕುಲದ ಹೆಸರನ್ನಾಗಿಸಿದರು. ಕಾರಣ Albizia ಪದವು ಇಟಲಿ ದೇಶದ ಅಪಾರ ಸಸ್ಯ ಪ್ರೀತಿಯನ್ನು ಹೊಂದಿದ ದೊಡ್ಡ ಮನೆತನದ ಹೆಸರು. ಇಟಲಿಯವರಾದ ಫಿಲಿಪೊ ಅಲ್ಬಿಜಿ ಎಂಬುವರು 1749ರಲ್ಲಿ ಬಾಗೆ ಮರವನ್ನು ನೆಟ್ಟು ಬೆಳೆಯಲು ಯೂರೋಪ್ ದೇಶಗಳಿಗೆ ಪರಿಚಯಿಸಿದ ಕಾರಣಕ್ಕಾಗಿ ಅದೇ ಮರದ ಹೆಸರನ್ನು Albizia lebbeck ಎಂದು ಕರೆದು ಗೌರವಿಸಿದ್ದರು. ಹಾಗೆಯೇ ಸ್ವರ್ಗದ ಮರದಿಂದ ಅಮೃತಬಳ್ಳಿಯವರೆಗೂ ಹತ್ತು ಸಸ್ಯಗಳ ಪುಟ್ಟ ಪರಿಚಯದ ಯಾನಕ್ಕೆ ಸ್ವೀಡನ್ ದೇಶದವರಾದ ಕಾರ್ಲ್‍ ಲಿನೆಯಾಸ್ ಕಾಲದಿಂದಲೂ ಇಲ್ಲಿಯವರೆಗಿನ ಕಥಾನಕಗಳ ಬಗೆಗೆ ಪ್ರೀತಿಯ ಓದುಗರ ಬೆಂಬಲ ಸಿಕ್ಕಿದೆ. ಮನುಕುಲದ ಇತಿಹಾಸ ಇಂತಹಾ ಸಸ್ಯಪ್ರೇಮದ ಅನಂತ ಪಯಣಗಳನ್ನು ಸವೆಸಿದೆ. ಸಹಸ್ರಾರು ಐತಿಹಾಸಿಕ ವ್ಯಕ್ತಿಗಳ ಸಾಹಸ, ಆಸಕ್ತಿ ಎಲ್ಲವನ್ನೂ ಸಸ್ಯಪ್ರೀತಿಯ ಚರಿತ್ರೆಯು ಹೊಂದಿದೆ. ಅನೇಕರಿಗೆ ನೆನಪಿರಬಹುದು, ನಮ್ಮ ತಾಯಂದಿರು, ಅಜ್ಜಿಯರೂ, ತಮ್ಮ ಸ್ನೇಹಿತರ ಕೈತೋಟಗಳಿಂದ ಆಕರ್ಷಿತರಾದ ಸಸ್ಯಗಳ ಬೀಜ, ಸಸಿ, ಬೇರುಬಿಡಬಲ್ಲ ಕಾಂಡದ ತುಂಡನ್ನು ಊರಿಂದ ಊರಿಗೆ ತುಂಬು ಪ್ರೀತಿಯಿಂದ ತರುತ್ತಿದ್ದರಲ್ಲವೇ? ಹೀಗೆ ಸಸ್ಯಯಾನದ ಹಿಂದೆ ಅನಂತ ಕೈಗಳೂ, ಮನಸ್ಸುಗಳೂ ದುಡಿದಿವೆ.

ಸಸ್ಯಯಾನದಲ್ಲಿ ಈ ಹಿಂದಿನ ಓದಿನಲ್ಲಿ ಕಂಡ ಅಮೃತಬಳ್ಳಿಗೆ ಹೆಸರೆಂದು ಟಿನೊಸ್ಪೊರಾ ಕಾರ್ಡಿಫೊಲಿಯಾ ಎಂಬುದಾಗಿ ಕರೆಯುವಲ್ಲಿ ಕಾರ್ಲ್ಸ್‍ ಲಿನೆಯಸ್ ಅವರ ಶಿಷ್ಯರಲ್ಲೊಬ್ಬರಾದ ಕಾರ್ಲ್‍ ಪಿಟರ್ ಥನಬರ್ಗ್‍ ಕೂಡ ಕಾರಣರಿರಬಹುದೆಂದೂ ಅನುಮಾನಿಸಲಾಗಿತ್ತು. ಇದೀಗ ಅವರ ಜೊತೆ ಮತ್ತೋರ್ವ ಇಂಗ್ಲೀಷ್ ಸಸ್ಯವಿಜ್ಞಾನಿ ಮೆಯರ್ಸ್‍ ಜೊತೆಗೂಡಿ ಅದರ ಹೆಸರಿಟ್ಟರೆಂದು ನಂಬಲಾಗಿದೆ. ಈ ಥನ್ ಬರ್ಗ್‍ ಅವರ ಗುರುಗಳಾದ ಲಿನೆಯಾಸ್ ಜೀವಿಗಳ ನಾಮಕರಣ ಹಾಗೂ ವರ್ಗೀಕರಣದ ಅಪಾರ ಆಸಕ್ತಿಯಿಂದ ಜಗತ್ತಿನ ವಿವಿಧ ಭಾಗಗಳಿಗೆ ತನ್ನ ಶಿಷ್ಯರನ್ನು ಕಳಿಸಿಕೊಟ್ಟು, ಬಗೆ ಬಗೆಯ ಸಸ್ಯವೇ ಮೊದಲಾದ ಜೀವಿಗಳ ಅಧ್ಯಯನಕ್ಕೆ ಹೊಸತೊಂದು ಮಾರ್ಗದರ್ಶನ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸ್ವೀಡನ್ನಿನಿಂದ ಹೊರಟ ಥನಬರ್ಗ್‍ ದಕ್ಷಿಣ ಆಫ್ರಿಕಾದ ಸಸ್ಯವಿಜ್ಞಾನಕ್ಕೆ ಅಪಾರ ಕೊಡುಗೆ ನೀಡಿದರು. ಥನಬರ್ಗ್‍ ಅವರನ್ನು ದಕ್ಷಿಣ ಆಫ್ರಿಕಾದ ಸಸ್ಯವಿಜ್ಞಾನದ ಪಿತಾಮಹಾ ಎಂದೇ ಕರೆಯಲಾಗುತ್ತದೆ. ಈ ಥನಬರ್ಗ್‍ ನಮ್ಮ ದೇಶದ ಅಮೃತಬಳ್ಳಿಯನ್ನು ಅಲ್ಲೆಲ್ಲಿ ಕಂಡರು ಎಂದು ಅನುಮಾನಿಸುತ್ತೀರೇನೋ? ಇವರು ಡಚ್ ಈಸ್ಟ್ ಇಂಡಿಯಾ ಕಂಪನಿಗೆ ಕೆಲಸ ಮಾಡುತ್ತಾ ಶ್ರೀಲಂಕಾದಲ್ಲಿ ಒಂದಷ್ಟು ಕಾಲ ನೆಲೆಯಾಗಿದ್ದರು. ಮುಂದೆ ಬರ್ಮಾಗೆ ಪಯಣಿಸುವ ಮಾರ್ಗದಲ್ಲಿ ಭಾರತದ ಪೂರ್ವಕರಾವಳಿಯನ್ನು ಮೆಟ್ಟಿದ್ದರೆಂಬುದು ತಿಳಿದಿಲ್ಲ. ಅಂತೂ ಮುಂದೆ ಜಪಾನ್ವರೆಗೂ ತಲುಪಿ ಅಲ್ಲೂ ಸಾಕಷ್ಟು ಕಾಲ ಕಳೆದ ಸಾಹಸಿ ಥನಬರ್ಗ್‍ ಇವರು ಲಿನೆಯಾಸ್ ಅವರ ಪಟ್ಟದ ಶಿಷ್ಯರೆ ಎನ್ನಬೇಕು. ಇವರ ಸಾಹಸ ಮೆಚ್ಚುಗೆಗೆ ಇವರು ಸುತ್ತಾಡಿದ ಆಫ್ರಿಕಾದಿಂದ ಶ್ರೀಲಂಕಾ ಮಾರ್ಗವಾಗಿ ಬರ್ಮಾ, ಜಪಾನ್ ದೇಶಗಳನ್ನು ತಲುಪಿ ಅಲ್ಲೆಲ್ಲಾ ಸಸ್ಯಸಂಗ್ರಹ ಮಾಡುತ್ತಲೇ ಸಾಗಿದ್ದು ರೋಚಕವಾದುದು. ಅಷ್ಟೂ ಸಾಲದೆಂಬಂತೆ ಜಪಾನಿನಲ್ಲಿ ದಶಕಗಳಿಗೂ ಹೆಚ್ಚು ಕಾಲ ಕಳೆದು ಅಲ್ಲಿನ ಜೀವಿವಿಜ್ಞಾನಕ್ಕೆ ಮಹತ್ತರ ಕೊಡುಗೆ ನೀಡಿ “ಜಪಾನಿನ ಲಿನೆಯಾಸ್” ಎಂದೂ ಕರೆಯಿಸಿಕೊಂಡಿದ್ದಾರೆ. ಇವರ ಎರಡು ಮಹತ್ವದ ಕೃತಿಗಳೆಂದರೆ “ಜಪಾನಿನ ಸಸ್ಯ ಸಾಮ್ರಾಜ್ಯ” ಮತ್ತು “ಜಪಾನಿನ ಪ್ರಾಣಿ ಸಂಕುಲಗಳು” ಇದನ್ನೇ ಮುಂದುವರೆಸಿ ಇಡೀ ಜಪಾನಿನ ಜೀವಿ ಸಾಮ್ರಾಜ್ಯದ ದಾಖಲೆಗಳನ್ನು ನಿರ್ಮಿಸಲಾಗಿದೆ.

ಇವರಲ್ಲೊಂದು ಅಚ್ಚರಿಯ ಸಂಗತಿಯೂ ಜೊತೆಯಾಯಿತು. ಆಫ್ರಿಕಾದ ಪಯಣದಲ್ಲಿದ್ದಾಗ ಫ್ರಾನ್ಸಿಸ್ ಮಾಸನ್ ಎಂಬ ಸ್ಕಾಟ್ ಲ್ಯಾಂಡಿನ ಸಸ್ಯವಿಜ್ಞಾನಿ ಪರಿಚಯವಾಗುತ್ತಾರೆ. ಆತ ಆಫ್ರಿಕಾಕ್ಕೆ ಬಂದುದ್ದೇ ತನ್ನ ದೇಶದ ರಾಜ ಉದ್ಯಾನಕ್ಕೆ ಸಸ್ಯ ಸಂಗ್ರಹಕ್ಕಾಗಿ. ಫ್ರಾನ್ಸಿಸ್‍ ರನ್ನು ಸ್ಕಾಟ್ ದೊರೆ ದೂರದ ಆಫ್ರಿಕಾದ ದಕ್ಷಿಣ ತುದಿಯವರೆಗೂ ಕೇವಲ ತನ್ನ ಉದ್ಯಾನದ ಪ್ರೀತಿಯಿಂದ ಕಳಿಸಿದ್ದರೆಂದರೆ ಅಚ್ಚರಿಯಲ್ಲದೇ ಮತ್ತೇನಲ್ಲವೆ? ಇದು ಬಿಡಿ ಮುಂದೆ ಇವರಿಬ್ಬರೂ ತಮ್ಮ ಉತ್ಸಾಹ-ಪ್ರೀತಿಯ ಸಮಾನ ಆಸಕ್ತಿಯಿಂದ ಆಫ್ರಿಕಾದ ಕಾಡುಹೊಕ್ಕು ಒಳನೋಟಗಳನ್ನು ಗಳಿಸಿಕೊಂಡು ಸುತ್ತಾಡಿದರು. ಇದರ ಹಿನ್ನೆಲೆಯಲ್ಲಿಯೆ ಥನಬರ್ಗ್‍ ಮುಂದೆ ಡಚ್ ಈಸ್ಟ್ ಇಂಡಿಯಾ ಕಂಪನಿಗೆ ಪರಿಚಯವಾಗುವ ಅವಕಾಶ. ಮುಂದೆ ಜಪಾನಿನನ ಜೀವಿ ಸಾಮ್ರಾಜ್ಯದ ಅನಾವರಣ.

ಮರವೇ ಎನಿಸಿಕೊಳ್ಳದ ಚುಜ್ಜುಲು ನಮಗೆ ಮರದ ಆಸೆಯ ಚರ್ಚೆಗೆ ಹಚ್ಚಿ ಆಕಾಶ್ ಜೊತೆ ಮಾತಿಗೆ ಮೊದಲು ಮಾಡಿದ್ದು ನಿಜ. ಕೀರ್ತಿನಾಥರ ನೂರು ಮರದ ಸ್ವರದ ದನಿಯು ನನ್ನ ಗುರುಗಳಾದ ಸತ್ಯವತಿಯವರ ಮೂಲಕ ಸ್ವಾಮಿಯವರ ದಾಟಿ ಹಾಯ್ದು ಹೋಯಿತು. ಕಾರ್ಲ್‍ ಲಿನೆಯಾಸ್ ಇಡೀ ಜೀವಿಜಗತ್ತಿಗೆ ಜಾಗತಿಕ ಮನ್ನಣೆಯ ಹೆಸರನ್ನು ಕೊಡುವ ವೈಧಾನಿಕತೆಯನ್ನು ಕೊಟ್ಟರಲ್ಲ! ಅದರ ಜೊತೆಗೆ ಥನಬರ್ಗ್‍ ಅರಂತಹಾ ಮಾಹಾನ್ ಮೇಧಾವಿಗಳ ಸಾಹಸ ಹಾಗೂ ಆಸಕ್ತಿಯನ್ನೂ ಜೀವಪರವಾಗಿಸಿ, ಇದನ್ನೆಲ್ಲಾ ಕಾಪಿಟ್ಟುಕೊಳ್ಳಲು ಕಾರಣಮಾಡಿ ಜೀವ ಪ್ರೀತಿಯನ್ನು “ಅಮೃತ”ವಾಗಿಸಿದ್ದಾರೆ. ಪ್ರೊ.ಬಿ.ಜಿ.ಎಲ್. ಸ್ವಾಮಿಯವರಲ್ಲದೆ ನೂರಾರು ಜೀವಿಪ್ರೇಮಿಗಳ ಮೂಲಕ ನಮ್ಮೊಳಗೂ ಅಮೃತದ ಸವಿಯನ್ನು ಹಂಚಿದ್ದಾರೆ. ಬಹುಪಾಲು ಇಂತಹಾ ಜೀವಿಪ್ರೇಮಿಗಳು ಸಸ್ಯಗಳ ಹುಡುಕಾಟದ ಮೂಲಕ ಜಗತ್ತಿನ ಮೂಲೆ ಮೂಲೆಗಳನ್ನು ಕಾಡು-ಮೇಡೆನ್ನದೆ ಸುತ್ತಾಡಿದ್ದಾರೆ. ಭಾರತದ ನೆಲದಲ್ಲೂ ವಿಲಿಯಂ ರಾಕ್ಸ್‍ ಬರ್ಗ್‍, ಫ್ರಾನ್ಸಿಸ್‍ ಬುಕನನ್, ಹೆಂಡ್ರಿಕ್ ವಾನ್ ರೀಡ್ ಮುಂತಾದವರಿಂದ ಸಸ್ಯಯಾನದ ಅಸಂಖ್ಯಾತ ಪ್ರಭಾವಳಿಯು ದಟ್ಟವಾಗಿದೆ. ವಾನ್ ರೀಡ್ ಡಚ್ ಈಸ್ಟ್ ಇಂಡಿಯಾ ಕಂಪನಿಯ ಸೇವೆಯಲ್ಲಿ ಮಲಬಾರಿನ ಗವರ್ನರ್ ಆಗಿದ್ದವರು. ಇವರ ಮಲಬಾರಿನ ಸಸ್ಯಸಾಮ್ರಾಜ್ಯದ ಕಥಾನಕ ಅಪ್ರತಿಮ ದಾಖಲೆ. ಇದನ್ನು ರಚಿಸಲು ಅವರಿಗೆ ಮಲಬಾರಿನ ಬುಡಕಟ್ಟುಗಳು ನೆರವಾಗಿದ್ದರಂತೆ. ಜೊತೆಗೆ ರಾಕ್ಸ್‍ ಬರ್ಗ್‍ ಅವರಂತೂ ಕರ್ನಾಟಕವೂ ಸೇರಿದಂತೆ ಭಾರತದಾಧ್ಯಂತ ಸುತ್ತಾಡಿ ಸಸ್ಯಸಂಕುಲಗಳ ಹುಡುಕಾಟ ನಡೆಸಿದರು. ಇವರು ಕೊಲ್ಕತ್ತಾದ ಸಸ್ಯವಿಜ್ಞಾನ ಪಾರ್ಕಿನ ಮುಖ್ಯಸ್ಥರೂ ಆಗಿದ್ದರು. ಇವರ ನಂತರ ಬುಕನನ್ ಮುಖ್ಯಸ್ಥರಾಗಿದ್ದರು. ಇವರೆಲ್ಲರೂ, ಜೊತೆಗೆ ಇಂತಹಾ ನೂರಾರು-ಸಹಸ್ರಾರು ಹೆಸರುಗಳೇ ದಾಖಲಾಗದವರೂ ಸೇರಿ ಸಸ್ಯಲೋಕವನ್ನು “ಅ-ಮೃತ”ವಾಗಿಸಿದ್ದಾರೆ. ಇವರ ಸಂಬಂಧಗಳನ್ನೆಲ್ಲಾ ಗಿಡ-ಮರಗಳ ಆಸಕ್ತಿಯಲ್ಲಿ ಜೊತೆಗೂಡಿಸಿ ಸಸ್ಯಯಾನವನ್ನು ಮಾಡಬಹುದಾಗಿದೆ.

ಕಾರ್ಲ್‍ ಲಿನೆಯಾಸ್ ಅವರ ಹೆಸರಿನಲ್ಲಿ ಲಿನೆಯನ್ ಬಹುಮಾನವನ್ನು ಪ್ರತಿವರ್ಷ ಕೊಡಲಾಗುತ್ತದೆ. ಕಳೆದ 2018ರಲ್ಲಿ ಮೊಟ್ಟ ಮೊದಲ ಬಾರಿಗೆ ಭಾರತೀಯ ವಿಜ್ಞಾನಿಯಬ್ಬರಿಗೆ “ಲಿನೆಯನ್ ಬಹುಮಾನ”ವನ್ನು ಕೊಡಲಾಯಿತು. ಅಮೆರಿಕೆಯಲ್ಲಿ ನೆಲಸಿರುವ ಪ್ರೊ.ಕಮಲ್ ಜೀತ್ ಬಾವಾ, ಮೂಲತಃ ಪಂಜಾಬಿನವರು, ಅವರು ಮೊಟ್ಟ ಮೊದಲಬಾರಿಗೆ ಈ ಶ್ರೇಷ್ಠ ಮಾನ್ಯತೆಯನ್ನು ಗಳಿಸಿದರು. ಇವರಿಗೂ ಕರ್ನಾಟಕಕ್ಕೂ ಬಹಳ ದೊಡ್ಡ ನಂಟು. ಪಶ್ಚಿಮಘಟ್ಟಗಳ ಜೀವಿವೈವಿಧ್ಯದ ಅನುಶೋಧಗಳ ಹಿತಾಸಕ್ತಿಯಲ್ಲಿ ಇವರ ಹೆಸರೂ ಪ್ರಮುಖವಾದದ್ದು. ಇವರ ಇಂತಹಾ ಹಿತಾಸಕ್ತಿಯ ಫಲ ಬೆಂಗಳೂರಿನಲ್ಲಿರುವ ಅಶೋಕ ಟ್ರಸ್ಟ್ ಫಾರ್ ಇಕಾಲಜಿ ಆಂಡ್ ಎನ್ವಿರಾಂನ್ಮೆಂಟ್ ಸಂಸ್ಥೆ (ATREE).

ಇಂದು ಪ್ರೊ.ಬಿ.ಜಿ.ಎಲ್. ಸ್ವಾಮಿಯವರ ಜನ್ಮ ದಿನ. ಅವರಿಂದು ನಮ್ಮೊಡನಿದ್ದಿದ್ದರೆ ನೂರಾ ಒಂದು ವಸಂತಗಳನ್ನು ಪೂರೈಸಿರುತ್ತಿದ್ದರು. ಅವರ ನೆನಪಿನಲ್ಲಿ ಕೀರ್ತಿನಾಥರ ಪುಸ್ತಕದ ಶೀರ್ಷಿಕೆಯಿಂದ ಮೈದೆಳೆದ “ನೂರು ಮರ”ಗಳ ಸ್ವರಮೇಳದ ಆರಂಭವು ಸಂಗೀತ ಸಸ್ಯಪ್ರಿಯರಾದ ತಮ್ಮೆಲ್ಲರಿಗೂ ಇಂಪಾಗಿ, ಹಿತವಾಗಿದ್ದರೆ ಮುಂದಿನ ತೊಂಬತ್ತು ಗಿಡ-ಮರಗಳ ಕಥನಗಳಲ್ಲಿ ಆಲಾಪನೆಯನ್ನು ಮುಂದುವರೆಸಬಹುದು. ಸಸ್ಯಸಂಕುಲದ ಸಂಗತಿಗಳ ಬಂದಿಶ್ ಎನ್ನಿ, ಪದ್ಯಗಳೆನ್ನಿ, ಕವನಗಳೆನ್ನಿ, ಮಾತುಗಳೆನ್ನಿ, ಗೀತೆಗಳೆನ್ನಿ, ಏನಾದರೂ ಕರೆಯಿರಿ ಇಲ್ಲಿ ಏನೂ ವರ್ಗೀಕರಣದ ತರ್ಕಗಳಿಲ್ಲ. ನಿಮಗೆ ನೀವೆ ನಿಮ್ಮ ಸುತ್ತ-ಮುತ್ತಲಿನ ಗಿಡ-ಮರಗಳ ಕಥೆಗಳ ಅನುರಣಿಸಲು ಸಾಧ್ಯವಾದರೆ ಸಾಕು. ಅನಂತ ಮನಸ್ಸು, ಸಾಹಸಗಳಿಂದ ಮನುಕುಲದ ಸಸ್ಯಯಾನ ಸಾಧ್ಯವಾಗಿದೆ. ನಿಮ್ಮ ಓದಿನ ಪ್ರೀತಿಯಿಂದ ಸಸ್ಯಯಾನದ ಜೊತೆಯಾಗಿ, ನೀವೂ ನಮ್ಮೊಟ್ಟಿಗೆ ನಡೆಯಿರಿ.

ಆಪ್ತ ಗೆಳತಿಯೊಬ್ಬಾಕೆ ಇಲ್ಲಿಯವರೆಗಿನ ಸಸ್ಯಯಾನದ ಬಗೆಗೆ ಪ್ರೀತಿಯಿಂದ ಹೀಗೆ ಬರೆದಿದ್ದಾಳೆ….. .

“ಸ್ವರ್ಗದ ಮರ”ದಿಂದ ಆರಂಭಗೊಂಡ ಸಸ್ಯಯಾನ, ಅಲ್ಲಿಂದ ಧರೆಗಿಳಿಸಿದ “ಪಾರಿಜಾತ”ದಲ್ಲಿ ಪರಿಮಳವನ್ನು ಪಸರಿಸಿ, ಮುಂದೆ ಸಾಹಸದಿಂದ ಮುನ್ನುಗ್ಗಿ ಪಿರಂಗಿಗುಂಡಿನ “ಕ್ಯಾನನ್ ಬಾಲಿನ” ನಾಗಲಿಂಗ ಪುಷ್ಪದಲ್ಲಿ ಅರಳಿಸಿ, ಮನೋಲ್ಲಾಸಕ್ಕೆಂದು ನೇರವಾಗಿ ಆಫ್ರಿಕಾಗೆ ಟಿಕೆಟ್-ರಹಿತ ಪ್ರಯಾಣ (ಸವಣೂರಿನ ಬೊಬಾಬ್ ದರ್ಶನ) ಮಾಡಿಸಿ, ಅಲ್ಲಿನ (ಆಫ್ರಿಕಾ) ಬಿಸಿಲಿಗೆ ದಣಿದ ಮನಸ್ಸಿಗೆ ತಂಪುಕೊಡಲು ಬಾಗೆ, ಮಳೆ ಮರದ ನೆರಳನ್ನು ಪರಿಚಯಿಸುತ್ತಲೇ, ಮುಂದೆ ಪರೀಕ್ಷೆಯ ದಿನಗಳನ್ನು ಕಾಣುತ್ತಿರುವ ಮಕ್ಕಳಿಗೆ ತಾನೇ ಎತ್ತರ ಎನ್ನಲು ಸ್ಪರ್ಧೆಗಿಳಿದು ಬೆಳೆದ “ಟುಲಿಪ್” ಮರಗಳ ತೇರಿನ ಸುಂದರ ನೆನಪಿನಿಂದ ಖುಷಿಯ ಜೊತೆಗೆ ಪರೀಕ್ಷೆಗೆಂದು ಓಡುವ ಭರದಲ್ಲಿ ನೆಲನೋಡಿ ನಡೆವ ಎಚ್ಚರಕ್ಕೆ ಕಾಲಕೆಳಗಿನ “ಗರಿಕೆ”ಯ ನೆನಪಿಸುತ್ತಾ, ಬೇಸಿಗೆಯ ಕಾರಣದಿಂದ “ಬೇಲ”ದ ಪಾನಕದ ರುಚಿಯನ್ನು “ಅಮೃತ”(ಬಳ್ಳಿ)ದ ಸವಿಯಾಗಿಸಿ ಹಂಚಿರುವಿರಿ. “

( ಆಕೆಗೆ ನನ್ನ ವಿಶೇಷ ವಂದನೆಗಳು)

ಸ್ವಾಮಿಯವರ ಜನ್ಮದಿನವಾದ ಈ ದಿನದಂದು ಈ ಗಿಡ-ಮರಗಳು ನಮ್ಮ-ನಿಮ್ಮಲ್ಲಿ ಅವರ ನೂರೊಂದು ವಸಂತಗಳ ನೆನಪನ್ನು ಚಿಗುರಿಸಲಿ. ಅವರಿಗೆ ಪ್ರೀತಿಯ ಅರ್ಪಣೆ ಈ ಸಸ್ಯಯಾನ.

ನಮಸ್ಕಾರ

ಚನ್ನೇಶ್

Leave a Reply