ಡಾ. ಬಿ.ಜಿ.ಎಲ್. ಸ್ವಾಮಿಯವರ ನೆನಪಿನಲ್ಲಿ ಗಿಡಮರಗಳ ಪರಿಚಯವನ್ನು “ಸ್ವರ್ಗದ ಮರ”ದಿಂದ ಆರಂಭಿಸಿ, ನಿಜವಾದ ಸ್ವರ್ಗವಾದ ನಮ್ಮ ನೆಲದ ಮೇಲಿನ ಮತ್ತೊಂದು ಸಸ್ಯದ ಕುರಿತು ಹೇಳಬೇಕಿರುವುದನ್ನು ಮನಸ್ಸು ಹುಡುಕುತ್ತಿತ್ತು. ನಿನ್ನೆ ಮಧ್ಯಾಹ್ನ ಸ್ವರ್ಗದ ಮರದ ಕಥನ ಓದಿ ನನ್ನ ಗೆಳತಿಯಬ್ಬಳು ಫೋನು ಮಾಡಿ ಮಾತಾಡುತ್ತಾ, ನಾಳೆಯೂ ಬರೆಯುತ್ತೀಯಾ? ಯಾವುದು? ಎಂದು ಪ್ರಶ್ನಿಸಿದಳು. ನಾಳೆಯೇ ಇಲ್ಲ ಎಂದೆ. ಆಪ್ತ ಗೆಳತಿ ಕೇಳಿದ ಮೇಲೆ! ಬರೆಯಬೇಕು, ಹೌದಲ್ಲವೇ ಅನ್ನಿಸಿದಾಗ ಕೃಷ್ಣನಿಗೆ ಪಾರಿಜಾತ ಬೇಕೆಂದು ಸತ್ಯಭಾಮ ಕೇಳಿದ್ದುನೆನಪಾಯ್ತು.
ಪಾರಿಜಾತ ಗಿಡವೂ ಅಲ್ಲ-ಮರವೂ ಅಲ್ಲ ಅಂತಹದ್ದು! ಒಂದು ಬಗೆಯಲ್ಲಿ ಪೊದರು ಗಿಡ. ದೊಡ್ಡ ಗಿಡ ಅಥವಾ ಸಣ್ಣ ಮರ ಎನ್ನಲು ಅಡ್ಡಿಯಿಲ್ಲ. ಸುಮಾರು 8-10 ಅಡಿ ಎತ್ತರಕ್ಕೆ ಬೆಳೆಯುತ್ತದೆ. ರಾತ್ರಿಯಲ್ಲಿ ಅರಳುವ ಮಲ್ಲಿಗೆ ಎಂದು ಕರೆಯಲಾಗುವ ಪಾರಿಜಾತ ಕೂಡ ಮಲ್ಲಿಗೆಯ ಸಂಬಂಧಿಯೆ. ಎರಡೂ ಒಲಿಯೇಸಿಯೇ ಎಂಬ ಕುಟುಂಬಕ್ಕೆ ಸೇರಿದ ಸಸ್ಯಗಳು. ಪಾರಿಜಾತ ಸಸ್ಯವನ್ನು Nyctanthes arbor-tristis ಎಂಬ ವೈಜ್ಞಾನಿಕ ಹೆಸರಿಂದ ಕರೆಯಲಾಗುತ್ತದೆ. ಇದರಲ್ಲಿ ಪ್ರಭೇದದ ಹೆಸರಿನಲ್ಲಿ ಎರಡು ಪದಗಳಿದ್ದು, ಅನೇಕ ಬಾರಿ ಹಲವರು ಎರಡೂ ಪದಗಳನ್ನೂ ಒಟ್ಟಿಗೆ ತಪ್ಪಾಗಿ ಬರೆಯುದುಂಟು. ಆದರೆ arbor ಮತ್ತು tristis ಅನ್ನು ಬೇರೆ- ಬೇರೆಯಾಗಿಯೇ ಬರೆಯಬೇಕು. ಪಾರಿಜಾತವನ್ನು “ದುಃಖದ ಮರ” ಎಂದು ಕರೆಯಲಾಗುತ್ತದೆ. arbor-tristis ಪದಗಳ ಅರ್ಥವೇ ದುಃಖದ ಮರ! ಏಕೆಂದರೆ ಹೂವುಗಳು ರಾತ್ರಿಯಲ್ಲಿ ಅರಳಿ, ಮುಂಜಾನೆಯ ಹೊತ್ತಿಗೆ ಬಾಡಿಹೋಗುತ್ತವೆ. ಹಾಗಾಗಿ ಹೂಗಳ ಸೌಂದರ್ಯವನ್ನು ಕಾಣಲಾಗದ ದುಃಖಕ್ಕೆ ಗಿಡವನ್ನು ಹಾಗೆಂದು ಕರೆಯಲಾಗುತ್ತದೆ.
ಬಾಲ್ಯದಲ್ಲಿ ನಾನು ಪಾರಿಜಾತವನ್ನು ನೋಡಿರಲಿಲ್ಲ. ಆಗಾಗ್ಗೆ ನನ್ನ ಅಮ್ಮ ಮಲ್ಲಿಗೆಯ ಜೊತೆಗೆ ಕನಕಾಂಬರವನ್ನು ಜೋಡಿಸಿ ಮಾಲೆಯಾಗಿ ಕಟ್ಟುತ್ತಿದ್ದಳು. ಬಿಳಿಯ ಬಣ್ಣದ ಜೊತೆಗೆ ಕೆಂಬಣ್ಣದ ಕನಕಾಂಬರ ಅಂದವಾಗಿ ಕಾಣುತ್ತಿದ್ದರೂ ಜೊತೆಗೆ ಕಟ್ಟಲು ಕಷ್ಟವಾಗುತ್ತದೆ. ಆಗ ನನಗೆ ಅಯ್ಯೋ ಬಿಳಿ-ಕೇಸರಿ/ಕೆಂಪು ಬಣ್ಣಗಳೆರಡೂ ಇರುವಂತಹ ಹೂವುಗಳಿರಬಾರದೇ ಎಂದುಕೊಳ್ಳುತ್ತದ್ದೆ. ಮುಂದೆ ಪಾರಿಜಾತ ಹೂಗಳನ್ನು ನೋಡಿದಾಗ ಅಂದುಕೊಂಡ ಹಾಗೇ ಇದೆ ಹೌದಲ್ಲ! ಅನ್ನಿಸಿತ್ತು. ಬಿಳಿಯ ದಳಗಳ ಮಧ್ಯೆ ಕಿತ್ತಳೆಯ ಬಣ್ಣದಿಂದ ತೊಟ್ಟು ಕಾಣಿಸಿಕೊಂಡು ಬಹು ದೊಡ್ಡ ಆನಂದಕ್ಕೆ ಕಾರಣವಾಗಿತ್ತು. ಪಾರಿಜಾತದ ಸೊಗಸು ಇರುವುದೇ ಬಣ್ಣಗಳ ಅಚ್ಚುಕಟ್ಟಾದ ಮಿಳಿತದಲ್ಲಿ. ಗೆಳತಿಯ ಕಾರಣಕ್ಕೆ ಸತ್ಯಭಾಮೆ ನೆನಪಾದಳಲ್ಲವೇ, ಆಕೆಯ ಕಾರಣದಿಂದ ಪಾರಿಜಾತ ನೆಲಕ್ಕೆ ಬಂದ ಬಗೆಯ ಪುರಾಣದ ಕಥೆಯೂ ಪ್ರಸಿದ್ಧವಾಗಿದೆ. ಶ್ರೀಕೃಷ್ಣ ಪಾರಿಜಾತವು ಉತ್ತರ ಕರ್ನಾಟಕದಲ್ಲಿ ದೊಡ್ಡಾಟವಾಗಿಯೂ ಜೊತೆಗೆ ದಕ್ಷಿಣ ಕನ್ನಡದ ಯಕ್ಷಗಾನದಲ್ಲೂ ದೃಶ್ಯಕಾವ್ಯವಾಗಿ ಪ್ರಸಿದ್ಧ ಕೂಡ.
ಪಾರಿಜಾತ ಗಿಡವು, ದೇವತೆಗಳು-ಹಾಗೂ ಅಸುರರು ಕೂಡಿ ಸಮುದ್ರ ಮಥನ ಮಾಡುವಾಗ ಹುಟ್ಟಿದ್ದೆಂದೂ, ಅದನ್ನು ತರಲು ಕೃಷ್ಣನು ಇಂದ್ರನೊಡನೆ ಯುದ್ಧ ಮಾಡಬೇಕಾಯಿತೆಂದೂ ಪುರಾಣಗಳಲ್ಲಿ ಹೇಳಲಾಗುತ್ತದೆ. ಸತ್ಯಭಾಮೆಯು ಪಾರಿಜಾತವನ್ನು ತಂದುಕೊಡುವಂತೆ ಹಟಮಾಡಿ ಕೇಳಿದ್ದಕ್ಕಾಗಿ ಅವಳಿಗೆಂದು ಕೊಡುಗೆಯಾಗಿ ಇಂದ್ರನಿಂದ ಕೃಷ್ಣ ಕಷ್ಟಪಟ್ಟು ತಂದ ಎಂಬುದು ಅದರ ಸಾರ. ಇಷ್ಟಕ್ಕೆ ಅದರ ಪುರಾಣ ಮುಗಿಯುವುದಿಲ್ಲ.
ಕೃಷ್ಣನೇನೋ ತಂದು ಸತ್ಯಭಾಮಳ ಮನೆಯ ಹಿತ್ತಿಲಲ್ಲಿ ನೆಟ್ಟ ನಿಜ. ಆದರೆ ರಾತ್ರಿ ಅರಳಿದ ಹೂವುಗಳು ಬೆಳಗಾದಾಗ ಪಕ್ಕದ ಮನೆಯಲಿದ್ದ ರುಕ್ಮಿಣಿಯ ಹಿತ್ತಿಲ್ಲಲ್ಲಿ ಬೀಳುತ್ತಿದ್ದವಂತೆ! ನಮಗೂ ಹಾಗೇ ಅಲ್ಲವೇ ಹೂವುಗಳನ್ನು ಗಿಡದಲ್ಲಿ ನೋಡುವುದಕ್ಕಿಂತಾ ಬೆಳಗಾದಾಗ ಕಾಣುವಷ್ಟರಲ್ಲಿ ಬಿದ್ದು ನೆಲದ ಪಾಲಾಗಿ ಹರಡಿಕೊಂಡಿರುವ ಪಾರಿಜಾತವೇ ಹೆಚ್ಚಿನ ನೆನಪು. ಸತ್ಯಭಾಮೆಯು ಚಳುವಳಿ ಹೂಡಿ ತರಿಸಿಕೊಂಡರೆ, ರುಕ್ಮಿಣಿಗೆ ಆಕೆಯು ಪ್ರೀತಿಯಿಂದ ಕೃಷ್ಣನಿಗೆ ಅರ್ಪಿಸಿಕೊಂಡದ್ದಕ್ಕೆ ಬಳುವಳಿಯಾಗಿ ಹೂಗಳು ಸಿಗಬೇಕೇ! ಈ ಚಳುವಳಿ-ಬಳುವಳಿಗಳೇನೇ ಇರಲಿ ಪಾರಿಜಾತದ ಹೂಗಳ ಅಂದ ಹಾಗೂ ಪರಿಮಳ ಎರಡೂ ಬೆರೆತ ಮುಂಜಾನೆಯಲ್ಲಿನ ಆಹ್ಲಾದಕತೆಯಂತೂ ವರ್ಣಿಸಲು ಅಕ್ಷರಗಳು ಸಾಲವು. ಪ್ರೀತಿಯ ರೂಪಕವು ಅಷ್ಟಕ್ಕೇ ಮುಗಿಯುವುದಿಲ್ಲ. ಅದರ ಕಾಯಿಗಳೂ ಹೆಚ್ಚೂ ಕಡಿಮೆ ಹೃದಯದ ಆಕಾರವನ್ನೇ ಹೋಲುತ್ತವೆ. ಹಾಗಾಗಿ ಹೂ-ಕಾಯಿಗಳೆರಡೂ ಪ್ರೀತಿಯ ರೂಪಕಗಳಾಗೇ ಇವೆ.
ಪ್ರೀತಿಯನ್ನು ಕೆಮಿಸ್ಟ್ರಿಗೆ ಹೋಲಿಸುವುದುಂಟು. ಅದನ್ನೀಗ ಮುಂದೆ ನೋಡೋಣ. ಪಾರಿಜಾತವು ತುಂಬು ಪ್ರಸಿದ್ಧಿಯನ್ನು ಪಡೆದಿರುವುದೇ ಅದರ ತುಂಬೆಲ್ಲಾ ತುಂಬಿಕೊಂಡ ರಸಾಯನಿಕಗಳಿಂದ. ಎಲೆ, ಹೂಗಳು ಹಾಗೂ ಬೀಜ ಎಲ್ಲವೂ ಹಲವಾರು ರಸಾಯನಿಕಗಳಿಂದ ತುಂಬಿಕೊಂಡಿವೆ. ಅವುಗಳು ನಮಗೆ ಪ್ರತಿರೋಧವನ್ನು ತಂದುಕೊಡಬಲ್ಲ ಔಷಧಿಗಳಾಗಿವೆ. ಲಿವರ್ ಅನ್ನು ರಕ್ಷಿಸುವ ರಸಾಯನಿಕಗಳಿವೆ. ಜೊತೆಗೆ ಶಿಲೀಂದ್ರಗಳನ್ನೂ ತಡೆಗಟ್ಟಬಲ್ಲ ಸಂಯುಕ್ತಗಳೂ ಇವೆ. ಹಾಗಾಗಿ ಆಯುರ್ವೇದದಲ್ಲಿ ಇದರ ಬಗೆಗೆ ವಿಶೇಷವಾದ ಬಳಕೆಗಳನ್ನು ಹೇಳಲಾಗುತ್ತದೆ. ಮುಖ್ಯವಾಗಿ ಪಾರಿಜಾತದ ಎಲೆಗಳು ಟ್ಯಾನಿಕ್ ಆಮ್ಲ, ಒಲಿಯೊನೋಲಿಕ್ ಆಮ್ಲ, ಗ್ಲೈಕೋಸೈಡ್ ಹಾಗೂ ಫ್ಲೆವಿನಾಲ್ ಗಳಂತಹಾ ರಸಾಯನಿಕಗಳನ್ನು ಹೊಂದಿವೆ. ಇದರ ಜೊತೆಗೆ ಮ್ಯಾನಿಟಾಲ್, ಗ್ಲೂಕೋಸ್ ಫ್ರಕ್ಟೋಸ್ ಬೆಂಜೋಯಿಕ್ ಆಮ್ಲ ಮುಂತಾಗಿ ಎಲೆಗಳಲ್ಲಿ ಇರುವುದನ್ನು ಆಧುನಿಕ ವಿಜ್ಞಾನವು ದಾಖಲಿಸಿದೆ. ಹೂವುಗಳು ಹಲವಾರು ಪರಿಮಳಯುಕ್ತವಾದ ತೈಲಗಳನ್ನು ಹೊಂದಿವೆ. ನಿಕ್ಟ್ಯಾಂತಿನ್, ಟ್ಯಾನಿನ್ಗಳು, ಅಲ್ಲದೆ ಹಲವಾರು ಪರಿಮಳ ದ್ರವ್ಯಗಳ ಸಂಯುಕ್ತಗಳನ್ನೂ ಹೊಂದಿವೆ. ಬೀಜಗಳೂ ಸಹಾ ಇಂತಹವೇ ಸಂಯುಕ್ತಗಳ ಜೊತೆಗೆ ಸ್ಟೆರಿಯಿಕ್ ಆಮ್ಲ, ಪಾಮೆಟಿಕ್ ಆಮ್ಲ ಹಾಗೂ ಮಿರಿಸ್ಟಿಕ್ ಆಮ್ಲಗಳ ಮಿಶ್ರಣವನ್ನು ಹೊಂದಿವೆ. ತೊಗಟೆಯೂ ಹಲವು ಆಲ್ಕೊಲಾಯ್ಡ್ ಗಳನ್ನು ಹೊಂದಿದ್ದು ಒಟ್ಟಾರೆ ಸಸ್ಯವು ಪುರಾಣದ ಬೃಹತ್ತಾದ ಕಥಾನಕಕ್ಕಿಂತಾ ಹರವಾದ ರಸಾಯನಿಕತೆಯನ್ನು ಹೊಂದಿದೆ.
ಹಾಗಾಗಿ ನಮ್ಮ ದೇಶದ ಲಕ್ನೊವಿನಲ್ಲಿರುವ ಕೇಂದ್ರೀಯ ಔಷಧೀಯ ಸಂಶೋಧನಾ ಸಂಸ್ಥೆಯು ಪಾರಿಜಾತ ಸಸ್ಯದ ಬಗ್ಗೆ ವಿಶೇಷ ಒಲವನ್ನು ಹೊಂದಿದ್ದು ಅದರೊಳಗಿನ “ಸ್ವರ್ಗ ಸಮಾನ”ದ ಫಲಗಳ ಹುಡುಕಾಟಗಳನ್ನು ನಡೆಸಿದೆ. ಅದರ ಫಲವಾಗಿ ಪಾರಿಜಾತದಲ್ಲಿ ಪ್ರತಿರೋಧವನ್ನು ತರುವ ಗುಣಗಳ ರಸಾಯನಿಕಗಳನ್ನು ಪತ್ತೆ ಹಚ್ಚಿದೆ. ಹಾಗೇಯೇ ಮುಂಬಯಿಯಲ್ಲಿನ ಅಣುಶಕ್ತಿ ಸಂಶೋಧನಾ ಕೇಂದ್ರದಲ್ಲಿ ಜೀವಿ-ರಸಾಯನಿಕ ವಿಭಾಗವು ಪಾರಿಜಾತದ ಎಲೆಗಳಲ್ಲಿ ಉತ್ಕರ್ಷಣ ವಿರೋಧಿ (ಆಂಟಾಕ್ಸಿಡೆಂಟ್) ಗುಣಗಳ ರಸಾಯನಿಕಗಳನ್ನು ಸಂಶೋಧಿಸಿದೆ.
ಪಾರಿಜಾತ ಗಿಡವು ಪ್ರೀತಿ ಹಾಗೂ ಸಮರ್ಪಣೆಯ ರೂಪಕವಾಗಿ ಅಷ್ಟೇ ಅಲ್ಲ ಪರಿಣಾಮಕಾರಿಯಾದ ಪರಿಹಾರಗಳಾಗಿ ಔಷಧ ಜಗತ್ತಿನಲ್ಲಿ ಗುರುತಿಸಲಾಗಿದೆ. ನಮ್ಮೆಲ್ಲರ ಸಾಮಾನ್ಯ ಪರಿಚಯದಲ್ಲಿ ಅದು ಮುಂಜಾನೆಯಲ್ಲಿ ನೆಲಕ್ಕೆ ಬಿದ್ದ ಬಿಳಿ-ಕಿತ್ತಳೆ ಬಣ್ಣಗಳ ಹದವಾದ ಮಿಶ್ರಣವಾಗಿ ಕಂಡದ್ದೇ ಹೆಚ್ಚು ನಿಜ. ಅದರ ಹಿಂದೆ ಇಷ್ಟೆಲ್ಲಾ ಸಂಗತಿಗಳೂ ಇವೆ.
ನಾಳೆಯೂ ಬರೆಯುತ್ತೀಯಾ ಎಂದು ಫೋನಿಸಿ ಕೇಳಿದ ಗೆಳತಿಯ ಬಗ್ಗೆ ಹಾಗೂ ಫೋನಿಸದೆ ಕೇಳದಿದ್ದ ಗೆಳತಿಯರ ಜೊತೆ ಪಾರಿಜಾತದ ಪರಿಣಾಮವಾಗಿ ಮಾತಿಗೆ-ಮಾತು ಬೆಳವ ಸಂದರ್ಭಕ್ಕೆಂದು ಮುಂದೆ ನಡೆವ ವಾಗ್ಯುದ್ದಕ್ಕೆ ಅಣಿ ಮಾಡಿಕೊಂಡು ಸಶಸ್ತ್ರನಾಗಿದ್ದೇನೆ. ಅದನ್ನೇ ಮುಂದಿಟ್ಟುಕೊಂಡು ಬರವಣೆಗೆಯನ್ನು ಮುಂದೆವರೆಸುವ ಆಲೋಚನೆ ಇದೆ. ಕನ್ನಡದ ಜಾಣ-ಜಾಣೆಯರು ನನ್ನ ಸಹಾಯಕ್ಕೆ ಬರುವ ಆ ಗಿಡ/ಮರ/ಬಳ್ಳಿಯನ್ನು ಹೆಸರಿಸಲು ಒಂದು ದಿನದ ಬಿಡುವು ತೆಗೆದುಕೊಳ್ಳುತ್ತೇನೆ. ನಾಳೆಯೇ ಖಂಡಿತಾ ಮುಂದುವರೆಸುವುದಿಲ್ಲ. ಅಷ್ಟರಲ್ಲಿ ನಾಡಿದ್ದು ತಿಳಿಯಲಿರುವ ಆ ಅಚ್ಚರಿಯ ಸಸ್ಯವನ್ನು ಹೆಸರಿಸಿ.
— ಡಾ.ಟಿ.ಎಸ್.ಚನ್ನೇಶ್