You are currently viewing ಶಿಕ್ಷಣವಿಲ್ಲದೆಯೂ, ಬೆರಗು ಮತ್ತು ಶ್ರದ್ಧೆಯಿಂದ ಸಸ್ಯವಿಜ್ಞಾನ ಕಟ್ಟಿದ “ಹೆಂಡ್ರಿಕ್‌ ವಾನ್‌ ರೀಡ್‌”

ಶಿಕ್ಷಣವಿಲ್ಲದೆಯೂ, ಬೆರಗು ಮತ್ತು ಶ್ರದ್ಧೆಯಿಂದ ಸಸ್ಯವಿಜ್ಞಾನ ಕಟ್ಟಿದ “ಹೆಂಡ್ರಿಕ್‌ ವಾನ್‌ ರೀಡ್‌”

ಭಾರತದ ಸಸ್ಯವಿಜ್ಞಾನದ ಪಿತಾಮಹಾ ಎಂದು ಹೆಸರಾದ “ವಿಲಿಯಂ ರಾಕ್ಸ್‌ಬರ್ರಾ” ಅವರಿಗಿಂತಲೂ ಒಂದು ಶತಮಾನಕ್ಕೂ ಮೊದಲೆ, 17ನೆಯ ಶತಮಾನದಲ್ಲಿಯೇ ಯಾವುದೇ ಶಿಕ್ಷಣವಿಲ್ಲದ ಡಚ್‌ ಸೈನ್ಯಾಧಿಕಾರಿಯೊಬ್ಬರು ಭಾರತದಲ್ಲಿ ನೆಲೆಸಿ ಏಶಿಯಾದಲ್ಲೇ ಮೊಟ್ಟ ಮೊದಲ ಬಾರಿಗೆ ಒಂದು ಪ್ರದೇಶದ ಸಸ್ಯಸಂಪತ್ತಿನ ವಿವರಗಳನ್ನು ದಾಖಲಿಸಿದ್ದರು. ಸಸ್ಯವಿಜ್ಞಾನವಿನ್ನೂ ಅರಳುತ್ತಿದ್ದ ಸಮಯದಲ್ಲೇ ಕೇವಲ ಜನಾಂಗೀಯ ಗ್ರಹಿಕೆಯನ್ನು ಆಧರಿಸಿ “ಮಲಬಾರಿನ ತೋಟ”ಎಂಬರ್ಥದ“ಹಾರ್ಟಸ್‌ ಮಲಬಾರಿಕಸ್‌” ಎಂದೇ ಜಗದ್ವಿಖ್ಯಾತವಾದ ಮಲಬಾರ್ ಅಥವಾ ಕೇರಳವನ್ನೊಳಗೊಂಡ ಪಶ್ಚಿಮ ಘಟ್ಟಗಳ ಗಿಡ-ಮರಗಳ ವಿವರವಾದ ದಾಖಲೆಯನ್ನು ಕೇವಲ ತಮ್ಮ ಬೆರಗು ಮತ್ತು ಶ್ರದ್ಧೆ ರೂಪಿಸಿ ಸಸ್ಯವಿಜ್ಞಾನವನ್ನು ಕಟ್ಟಿದ ಮಹಾನ್‌ ವ್ಯಕ್ತಿ “ಹೆಂಡ್ರಿಕ್ ವಾನ್‌ ರೀಡ್‌‌”. ಹೆಂಡ್ರಿಕ್‌ ವಾನ್‌ ರೀಡ್‌ ನೆದರ್‌ ಲ್ಯಾಂಡಿನವರು. ಡಚ್‌ ಈಸ್ಟ್‌ ಇಂಡಿಯಾ ಕಂಪನಿಯ ಮೂಲಕ, ಒಂದು ರೀತಿಯಲ್ಲಿ ಅನಾಥರಾಗಿ ಭಾರತಕ್ಕೆ ಬಂದು ಇಲ್ಲಿನ ಸಸ್ಯಸಂಗತಿಗಳಿಗೆ ಅದ್ವಿತೀಯವಾದ ಕಾಣಿಕೆಯನ್ನು ಕೊಟ್ಟರು. ಕಡೆಗೆ ಇಲ್ಲಿನ ಮಣ್ಣಲ್ಲಿ ಬೆರೆತು ಒಂದಾದರು. ಮೂರು ದಶಕಗಳಿಗೂ ಹೆಚ್ಚು ಕಾಲ ಇಲ್ಲಿದ್ದು ಮಲಬಾರಿನ ಸಸ್ಯಸಂಪತ್ತಿಗೆ ಬೆರಗಾಗಿ, ಮನಸೋತು, ಯಾವುದೇ ಮೂಲ ಸಸ್ಯವೈಜ್ಞಾನಿಕ ಅಥವಾ ಹೆಚ್ಚಿನ ಶಿಕ್ಷಣವಿಲ್ಲದಿದ್ದರೂ, ಜನಪದದ ಹಿನ್ನೆಲೆಯನ್ನು ಇಟ್ಟುಕೊಂಡು, ಸ್ಥಳೀಯ ಜನರ ಒಡನಾಟದಿಂದ ಅರಿತು 742 ಗಿಡ-ಮರಗಳ ಸಚಿತ್ರ ವಿವರಗಳನ್ನು“ಹಾರ್ಟಸ್‌ ಇಂಡಿಕಸ್‌ ಮಲಬಾರಿಕಸ್‌” ಎಂದು ಲ್ಯಾಟಿನ್‌ ಭಾಷೆಯಲ್ಲಿ ದಾಖಲಿಸಿದವರು. ಅಷ್ಟೇ ಅಲ್ಲ, ಸಸ್ಯವಿಜ್ಞಾನದ ವರ್ಗೀಕರಣ ಮತ್ತು ನಾಮಕರಣ ಪಿತಾಮಹಾ ಕಾರ್ಲ್ಸ್‌ ಲಿನೆಯಾಸ್‌ ಅವರಿಗೂ ಮೊದಲು ಈ ಕೆಲಸ ಮಾಡಿದ್ದಲ್ಲದೆ, ಅವರಿಗೂ ಪ್ರೇರಣೆಯಾಗಿದ್ದ ವ್ಯಕ್ತಿ. ವಾನ್‌ ರೀಡ್‌ ಎಂದೇ ಪರಿಚಿತರಾದ ಅವರ ಪೂರ್ಣ ಡಚ್‌ ಹೆಸರು ಹೆಂಡ್ರಿಕ್‌ ಅಡ್ರಿಯನ್‌ ವಾನ್‌ ರೀಡ್‌ ಟಾಟ್‌ ಡ್ರಾಕಸ್ಟೈನ್‌ (Hendrik Adrian van Rheede tot Draakestein).

ಭಾರತದಲ್ಲಿ ವಸಾಹತುಗಳನ್ನು ನಿರ್ಮಿಸಿದವರಲ್ಲಿ ಬ್ರಿಟೀಷರು, ಫ್ರೆಂಚರೂ, ಪೋರ್ಚುಗೀಸರು ತಮ್ಮ ಪಳೆಯುಳಿಕೆಗಳ ಮೂಲಕ ಅಲ್ಲಲ್ಲಿ ಕುರುಹುಗಳನ್ನು ಬಿಟ್ಟಿದ್ದರೆ, ಡಚ್ಚರ ಕುರುಹುಗಳು ಅಷ್ಟೊಂದು ಕಾಣಿಸುವಂತೆ ಜನಪ್ರಿಯವಾಗಿಲ್ಲ. ಹದಿನಾರು ಹದಿನೇಳನೆಯ ಶತಮಾನದ ಪೋರ್ಚುಗೀಸರ ಹಿಂದೆಯೇ ಡಚ್ಚರೂ ಭಾರತಕ್ಕೆ ಬಂದು ಮಲಬಾರಿನಲ್ಲಿ ಒಂದಷ್ಟು ನೆಲೆಯಾದವರು. ಅವರಲ್ಲಿ ಕೇವಲ ಸೈನಿಕನಾಗಿ 1656-57ರಲ್ಲಿ ಭಾರತಕ್ಕೆ ಬಂದ ವಾನ್‌ ರೀಡ್‌ ಮಲಬಾರಿನ ಹಸಿರಿನ ಭವ್ಯತೆಗೆ ಮನಸೋತು, ಬೆರಗಾಗಿ, ಪ್ರೀತಿಯಿಂದ ಮಲಬಾರಿನ ಜನರ ಜೊತೆಗೆ ಬೆರೆತು ಸಸ್ಯಗಳ ಕುರಿತು ಕಲಿತರು. ಇಲ್ಲಿನ ಗಿಡ-ಮರಗಳ ಬಗ್ಗೆ ಕಲಿಯಲೆಂದೇ, ಪಶ್ಚಿಮ ಕರಾವಳಿಯ ಉದ್ದಕ್ಕೂ ಸಂಚರಿಸಿ, ಶ್ರದ್ಧೆಯಿಂದ ಮಲಬಾರಿನ ತೋಟ (Hortus Malabaricus)” ಎಂಬ ಅತ್ಯಂತ ಮಹತ್ವದ ದಾಖಲೆಯನ್ನು ನಿರ್ಮಿಸಿದವರು. ಹೆಚ್ಚಿನ ತಿಳಿವಿಗಾಗಿ ಪೂರ್ವ ಕರಾವಳಿಯಲ್ಲೂ ಅಡ್ಡಾಡಿ ಕೋರಮಂಡಲ ತೀರದ ಸಸ್ಯರಾಶಿಯನ್ನೂ ಅರಿತುಕೊಂಡರು.

ಹೆಂಡ್ರಿಕ್ ವಾನ್‌ ರೀಡ್‌‌” ನೆದರ್‌ ಲ್ಯಾಂಡ್‌ನ ಅಮಸ್ಟರ್‌ಡಾಂನಲ್ಲಿ 1636ರ ಮಾರ್ಚ್‌ 14ರಂದು ಉತ್ತಮ ಕುಟುಂಬವೊಂದರ ಏಳು ಜನ ಮಕ್ಕಳಲ್ಲಿ ಕೊನೆಯ ಮಗುವಾಗಿ ಜನಿಸಿದರು. ಅವರ ತಾಯಿ ಎಲಿಸಬತ್‌ ಅವರು ಹೆಂಡ್ರಿಕ್‌ ರೀಡ್‌ ಒಂದು ವರ್ಷದ ಮಗುವಾಗಿರುವಾಗಲೇ ತೀರಿಕೊಂಡರು. ತಂದೆ ಅರ್ನೆಸ್ಟ್‌ ರೀಡ್‌ ಅವರೂ ಕೂಡ ಹೆಂಡ್ರಿಕ್‌ ಇನ್ನೂ ನಾಲ್ಕು ವರ್ಷದ ಪುಟ್ಟ ಹುಡುಗನಾಗಿದ್ದಾಗಲೇ ತಮ್ಮ ಜೀವನಯಾತ್ರೆಯನ್ನು ಮುಗಿಸಿದರು. ಬಹುಶಃ ಒಡಹುಟ್ಟಿದವರ ಜೊತೆಗೂ ಅಂತಹಾ ಹೊಂದಾಣಿಕೆಯಾಗದ ಕಾರಣದಿಂದಲೋ ಏನೋ ವಾನ್‌ ರೀಡ್‌ 14 ವರ್ಷದವರಾಗಿದ್ದಾಗಲೇ ಮನೆಯನ್ನು ತೊರೆದು ಅನಾಥರಾದರು. ಮತ್ತೆ ಹಿಂದಿರುಗಿ ನೋಡಲಿಲ್ಲ. ಮುಂದೆ ತಮ್ಮ 20ನೆಯವಯಸ್ಸಿಗೆ ಡಚ್‌ ಈಸ್ಟ್‌ ಇಂಡಿಯಾ ಕಂಪನಿಯ ಸೈನ್ಯಕ್ಕೆ ಸೇರಿದರು. ಅಲ್ಲಿ ಅವರು ಯೊಹನ್‌ ಬಕ್ಸ್‌ ವಾನ್‌ ಹೆರೆಂತಲ್ (Johan Bax van Herenthals) ಎಂಬ ನಿಸರ್ಗ ತಜ್ಞರ ಕೆಳಗೆ ಕೆಲಸ ನಿರ್ವಹಿಸುವುದರ ಮೂಲಕ ಭಾರತೀಯ ಸಸ್ಯವಿಜ್ಞಾನ ಪರಂಪರೆಗೆ ಒಂದು ವರವಾಗಿ ಪರಿಣಮಿಸಿದರು. ಯೊಹನ್‌ ಬಕ್ಸ್‌ ಅವರು ಜನಾಂಗೀಯ ಅಥವಾ ಜನಪದ ಸಸ್ಯವಿಜ್ಞಾನ (Ethnobotany) ದ ಹರಿಕಾರರಲ್ಲಿ ಒಬ್ಬರು. ಅವರ ಮೂಲಕ ಭಾರತದ ಪಶ್ಚಿಮ ತೀರದ ಡಚ್‌ ಮಲಬಾರ್‌ಗೆ ಬಂದ ವಾನ್‌ ರೀಡ್‌, ಅವರ ಜೊತೆ ನಿಸರ್ಗದ ಆಸಕ್ತಿಯನ್ನು ರೂಢಿಸಿಕೊಂಡದ್ದಲ್ಲದೆ, ತಮ್ಮ ಮಾನವ ಪ್ರೀತಿಯ ಗುಣಗಳಿಂದ ಡಚ್‌ ಕಾಲೊನಿಯ ಆಡಳಿತದಲ್ಲೂ ಹೆಸರು ಮಾಡಿದರು. ಕೊಚ್ಚಿನ್‌ನ ರಾಜಮನೆತನಕ್ಕೆ ಪೋರ್ಚುಗೀಸರಿಂದ ರಕ್ಷಣೆಯನ್ನು ಕೊಟ್ಟು, ಸ್ಥಳೀಯ ಮಲಬಾರಿನ ಪ್ರೀತಿಯನ್ನು ಗಳಿಸಿದರು.

ಮುಂದೆ 1669 ರಿಂದ 1676ರ ನಡುವೆ ಡಚ್‌ ಮಲಬಾರಿನ ಗವರ್ನರ್‌ ಆಗಿ ಮುಂದಾಳತ್ವವನ್ನು ವಹಿಸಿದರು. ಅಲ್ಲಿನ ಜನರಿಗೆ ತಮ್ಮ ಸುತ್ತಲಿನ ಗಿಡ-ಮರಗಳ ತಿಳಿವನ್ನು ತಾವೂ ಕಲಿಯುವ ಮೂಲಕ ಅವರಲ್ಲಿ ಒಬ್ಬರಾದರು. ಆಗ ತಮಗಿದ್ದ ಅಧಿಕಾರವನನ್ನು ಬಳಸಿ ಮಲಬಾರಿನ ಗಿಡ-ಮರಗಳ ದಾಖಲೆಯಲ್ಲಿ ತೊಡಗಿದರು. ಡಚ್‌ ಆಡಳಿತ ಸಂಪ್ರದಾಯವೂ ಸಹಾ ನಿಸರ್ಗ ಸ್ನೇಹಿ ತಿಳಿವಳಿಕೆಗಳಲ್ಲಿ ಆಸಕ್ತಿಯಿದ್ದು, ವಾನ್‌ ರೀಡ್‌ ಅವರ ಸಸ್ಯಪ್ರೀತಿಗೆ ಅದರಿಂದಲೂ ಸಹಾಯವಾಯಿತು. ಸುಮಾರು 30 ವರ್ಷಗಳ ಕಾಲ ವಾನ್‌ ರೀಡ್‌ ಅವರು ಸ್ಥಳಿಯರ ನೆರವಿನಿಂದ ಗಿಡ-ಮರಗಳ ಸಚಿತ್ರ ದಾಖಲೆಯನ್ನು ರೂಪಿಸಿದರು. ಅದು ಮುಂದೆ 1678ರಿಂದ 1693ರ ನಡುವೆ 12 ಸಂಪುಟಗಳಲ್ಲಿ ಪ್ರಕಟವಾಯಿತು. 1656-57ರಲ್ಲಿ ಭಾರತಕ್ಕೆ ಬಂದ ವಾನ್‌ ರೀಡ್‌ ಇಲ್ಲಿನ ಆಲದ ಮರ ಮುಂತಾದ ಬೃಹತ್‌ ವೃಕ್ಷಗಳನ್ನೂ, ಮರಗಳಂತೆ ಬೆಳೆದ ಬಳ್ಳಿಗಳನ್ನೂ ಕಂಡು ಬೆರಗಾದವರು. ಇಲ್ಲಿನ ಸಸ್ಯ ಸಮೃದ್ಧತೆಯನ್ನು ದಾಖಲು ಮಾಡುತ್ತಾ ಮುಂದೆ ತಮ್ಮ ಜೀವಿತದ ಕೊನೆಯ ಕ್ಷಣದವರೆಗೂ ಇಲ್ಲಿಯೆ ಬ್ರಹ್ಮಚಾರಿಯಾಗಿಯೇ ಇದ್ದರು. ಓರ್ವ ಅನಾಥ ಹೆಣ್ಣು ಮಗುವನ್ನು ಸಾಕು ಮಗಳಾಗಿ ಸ್ವೀಕರಿಸಿದ್ದರು. ಕಡೆಗೊಮ್ಮೆ ಮಲಬಾರ್‌ ನಿಂದ ಗುಜರಾತ್‌ನ ಸೂರತ್‌ಗೆ ಹಡಗಿನಲ್ಲಿ ಪಯಣಿಸುವಾಗ ಮುಂಬೈಯ ತೀರದ ಬಳಿಯ 1691ರ ಡಿಸೆಂಬರ್‌ 15 ರಂದು ತೀರಿಕೊಂಡಿದ್ದರು. ತಮ್ಮ 14ನೆಯ ವಯಸ್ಸಿನಲ್ಲಿ ಮನೆಯನ್ನು ತೊರೆದು ಸೈನ್ಯಕ್ಕೆ ಸೇರಿ, ಭಾರತಕ್ಕೆ ಬಂದು ಒಂಟಿಯಾಗಿಯೇ ಬೆಳೆದರು. ಕೇವಲ ಜನಪದ-ಸಸ್ಯಪ್ರೀತಿಯಲ್ಲಿ ಜೀವನವನ್ನು ಕಂಡುಕೊಂಡರು. ಗುಜರಾತ್‌ನ ಸೂರತ್‌ನಲ್ಲಿರುವ ಡಚ್‌ ಸ್ಮಶಾನದಲ್ಲಿ ಅವರ ಸಾಕು ಮಗಳು ಫ್ರಾನ್ಸಿನ್‌ ಡಚ್‌ ಪ್ರಮುಖರ ಸಮ್ಮುಖದಲ್ಲಿ 2ನೆಯ ಜನವರಿ 1692ರಂದು ಅವರನ್ನು ಸಮಾಧಿ ಮಾಡಿದಳು. ಮೂರು ಶತಮಾನಗಳನ್ನು ಸವೆಸಿ ಅಲಕ್ಷ್ಯಕ್ಕೆ ಒಳಗಾಗಿರುವ ಈ ಡಚ್‌ ಸ್ಮಶಾನವನ್ನು ಸೂರತ್‌ನಲ್ಲಿ ಈಗಲೂ ನೋಡಬಹುದು.

ಹೆಂಡ್ರಿಕ್‌ ವಾನ್‌ ರೀಡ್‌ ಮಲಬಾರಿನ 742 ಗಿಡ-ಮರಗಳ ಸುದೀರ್ಘ ವಿವರಗಳನ್ನು, ಪ್ರತೀ ಸಸ್ಯದ ಪುಟ್ಟ-ಪುಟ್ಟ ವಿವರಗಳಿಂದ ರಚಿಸಿದ್ದಾರೆ. ಉದಾಹರಣೆಗೆ ಸಸ್ಯದ ಭಾಗಗಳಾದ ಕಾಂಡ, ರೆಂಬೆ-ಕೊಂಬೆಗಳು, ಎಲೆ, ಹೂವಿನ ಭಾಗಗಳು, ಹಣ್ಣಿನ ವಿವರಗಳು, ಬೀಜ ಮತ್ತಿತರ ಯಾವುದೇ ಭಾಗದ ಸೂಕ್ಷ್ಮ ವಿವರಗಳು, ಇಡಿಯಾದ ಸಸ್ಯದ ಆಕಾರವನ್ನೂ ಸೇರಿಸಿದ್ದಾರೆ. ಅದರ ನೆಲೆ ಮತ್ತು ಹಬ್ಬುವ ಅಥವಾ ಬೆಳೆಯುವ ರೀತಿ ರಿವಾಜು, ಹೀಗೆ ಪ್ರತೀ ಸಸ್ಯದ ಸಣ್ನ-ಪುಟ್ಟ ವಿವರಗಳೆಲ್ಲವೂ ವಿವರವಾಗಿ ದಾಖಲಾಗಿವೆ. ವೈಜ್ಞಾನಿಕ ನಾಮಕರಣವನ್ನು ಒಳಗೊಳ್ಳದಿದ್ದರೂ ಕೂಡ “ಹಾರ್ಟಸ್‌ ಮಲಬಾರಿಕಸ್‌” ಆ ಕಾಲದ ಅತ್ಯಂತ ವಿವರವಾದ ಸಸ್ಯಸಂಗತಿಗಳ ಮಾಹಿತಿಯಾಗಿರುತ್ತದೆ. ಸ್ಥಳೀಯ ಹೆಸರು, ಜೊತೆಗೆ ಅರಾಬಿಕ್‌, ಸಂಸ್ಕೃತ, ಕೊಂಕಣಿಯ ಹೆಸರುಗಳನ್ನೂ ಅದು ಒಳಗೊಂಡಿದೆ. ಅದು ಏಶಿಯದ ಸಸ್ಯ ಸಂಪತ್ತಿನ ಮೊಟ್ಟ ಮೊದಲ ಅಧಿಕೃತವಾದ ಹಾಗೂ ನಿಖರವಾದ ದಾಖಲೆ ಎಂದರೆ “ಹಾರ್ಟಸ್‌ ಮಲಬಾರಿಕಸ್‌”. ಅದರಲ್ಲಿ ದೊರಕುತ್ತಿರುವ ವಿವರಗಳು ಈ ಕಾಲಕ್ಕೂ ದಾಖಲೆಗಾಗಿ ಮುಂದೆ ಯಾವುದೇ ಕಾಲಕ್ಕೂ ಮಾದರಿಯಾಗಬಲ್ಲಂತಹವು. ಯಾವುದೇ ಶಿಕ್ಷಣವಿಲ್ಲದೆಯೂ ಕೇವಲ ಬೆರಗಿಗೆ, ಉತ್ಸುಕನಾಗಿ ತೊಡಗಿಕೊಂಡದ್ದರ ಫಲ-“ಹಾರ್ಟಸ್‌ ಮಲಬಾರಿಕಸ್‌” ಎಂದೇ ಖ್ಯಾತವಾದ“ಹಾರ್ಟಸ್‌ ಇಂಡಸ್‌ ಮಲಬಾರಿಕಸ್‌”

ಹಾರ್ಟಸ್‌ ಮಲಬಾರಿಕಸ್‌ನ ರಚನೆ ವಿವರಗಳು

ಹೆಂಡ್ರಿಕ್‌ ವಾನ್‌ ರೀಡ್‌ ರಚಿಸಿದ ಇದರ ಸಸ್ಯವಿವರಗಳು ಆತನ ಒಟ್ಟಾರೆ ಶೃದ್ಧೆಯ ಫಲ. ಇದು ಒಟ್ಟು 742 ಸಸ್ಯಗಳನ್ನು ಒಳಗೊಂಡಿದ್ದು 12 ಸಂಪುಟಗಳಲ್ಲಿದೆ. ಪ್ರತೀ ಸಂಪುಟವು ಸುಮಾರು 500 ಪುಟಗಳನ್ನು ಹೊಂದಿದೆ. ಪ್ರತೀ ಸಸ್ಯವೂ ಅದರ ಎಲ್ಲಾ ಪ್ರಮುಖ ಭಾಗಗಳ ಚಿತ್ರಗಳನ್ನು ಒಳಗೊಂಡಿದೆ, ಜೊತೆಗೆ ಅದನ್ನು ಕುರಿತಂತಹಾ ಜನಪದ ಸಂಗತಿಗಳನ್ನೂ ಸಹಾ. ಇವುಗಳು ಅದರ ಅಹಾರದ ಬಳಕೆ, ಔಷಧೀಯ ವಿವರಗಳೇ ಮುಂತಾದ ವಿಷಯಗಳನ್ನು ಒಳಗೊಂಡಿವೆ. ಎಲ್ಲವೂ ಸಚಿತ್ರವಾಗಿ ವಿವರಿಸಲ್ಪಟ್ಟಿವೆ. ಸ್ವತಃ ವಾನ್‌ ರೀಡ್‌ ಬಹುಪಾಲು ಚಿತ್ರಗಳನ್ನು ಬರೆದಿದ್ದಾರೆ. ಅಲ್ಲದೆ ನಾಲ್ಕು ಜನ ಸ್ಥಳೀಯ ಕಲಾವಿದರನ್ನು ಅದಕ್ಕೆಂದೇ ನೇಮಕ ಮಾಡಿಕೊಂಡಿದ್ದರೆಂದೂ ತಿಳಿದು ಬರುತ್ತದೆ. ಇದರ ಜೊತೆಗೆ ಈ ದಾಖಲೆಯು ಒಟ್ಟು 794 ತಾಮ್ರದ ಅಚ್ಚಿನಿಂದ ಮಾಡಲ್ಪಟ್ಟ ಚಿತ್ರವಿವರಗಳನ್ನೂ ಒಳಗೊಂಡಿವೆ. ಜೊತೆಗೆ ಅನೇಕ ಗಿಡ-ಮರಗಳ ಬಳಕೆಯ ಬಗೆಗೆ ಸ್ಥಳಿಯ ಜ್ಞಾನ ಪರಂಪರೆಯನ್ನು ಕೂಡ ದಾಖಲೆಯಲ್ಲಿ ಬಳಸಿಕೊಳ್ಳಲಾಗಿದೆ. ಸುಮಾರು 30 ವರ್ಷಗಳ ಕಾಲ, 100 ಜನರನ್ನು ಬಳಸಿಕೊಂಡು ನಿರ್ಮಿಸಿದ್ದಾರೆ ಎಂಬುದಾಗಿ ದಾಖಲೆಗಳು ತಿಳಿಸುತ್ತವೆ. ಇವರೆಲ್ಲರೂ ಸಸ್ಯ ಸಂಗ್ರಹವಲ್ಲದೆ, ಸಸ್ಯಗಳ ಮಾಹಿತಿಯ ಸಂಗ್ರಹಣೆ, ಪರಾಮರ್ಶನ ಇತ್ಯಾದಿ ಕೆಲಸಗಳಲ್ಲಿ ಸಹಾಯ ಮಾಡಿದವರು. ಇಡೀ ಕೆಲಸವು ವಾನ್‌ ರೀಡ್‌ ಅವರಿಂದ ಪರಿಕಲ್ಪನೆಗೊಂಡು, ಅವರ ಮಾರ್ಗದರ್ಶನದಲ್ಲಿಯೇ ನಡೆಯಿತು. ವಾನ್‌ ರೀಡ್‌ ಅದನ್ನು ಕಡೆಗೆ ಆ ಕಾಲದ ಶಿಷ್ಟ ಭಾಷೆಯಾಗಿದ್ದ ಲ್ಯಾಟಿನ್‌ ನಲ್ಲಿ ರಚಿಸಿ ರೂಪಿಸಿದರು.

ಈ ಸಂಪುಟಗಳಲ್ಲಿನ ಸಸ್ಯಗಳ ಔಷಧೀಯ ಗುಣಗಳ ವಿವರಗಳಿಗಾಗಿ “ಇಟ್ಟಿ ಅಚ್ಯುತನ್‌” ಎಂಬ ಪಾರಂಪರಿಕ ವೈದ್ಯರು ಪೂರ್ಣ ಪ್ರಮಾಣದಲ್ಲಿ ಸಹಾಯ ಮಾಡಿದ್ದ ಬಗ್ಗೆ ವಿವರಗಳಿವೆ. ಈತ ಆ ಕಾಲದಲ್ಲಿ ಅಲ್ಲಿ “ಅಸ್ಪೃಶ್ಯ”ರಾಗಿದ್ದ ʼಇಳವರ್‌” ಜನಾಂಗದವರು. ಇವರದು ಪಾರಂಪರಿಕ ವೈದ್ಯಕೀಯ ಸೇವೆ ಮಾಡುವ ಮನೆತನವಾಗಿತ್ತು. ಇವರ ಜೊತೆಗೆ ಪರಾಮರ್ಶನಕ್ಕಾಗಿ “ರಂಗಾ ಭಟ್ಟ” ವಿನಾಯಕ ಭಟ್ಟ” ಮತ್ತು“ಅಪ್ಪು ಭಟ್ಟ” ಎಂಬ ಬ್ರಾಹ್ಮಣ ಆಯುರ್ವೇದ ವೈದ್ಯರೂ ಕೂಡ ಸಹಾಯ ಮಾಡಿದ್ದಾರೆ. ಈ ಎಲ್ಲರ ಹೆಸರುಗಳನ್ನೂ ಲ್ಯಾಟಿನ್‌ ಭಾಷೆಯಲ್ಲಿ ಪ್ರಕಟಗೊಂಡ ಮೊದಲ ಸಂಪುಟದ ಮುನ್ನುಡಿಯಲ್ಲಿ ಪ್ರಸ್ತಾಪಿಸಿ ಅವರನ್ನು ನೆನಪಿಸಿಕೊಳ್ಳಲಾಗಿದೆ. “ಹಾರ್ಟಸ್‌ ಮಲಬಾರಿಕಸ್‌” ಸಂಪುಟಗಳು ಆ ಕಾಲಕ್ಕೆ ಸ್ಥಳಿಯ ಜನರಿಂದ ಸಂಗ್ರಹಿಸಿದ ಮಾಹಿತಿಗಳನ್ನು ಒಳಗೊಂಡದ್ದಲ್ಲದೆ, ಬಹುಶಃ ಆಗ ದಾಖಲಿದ್ದ ಸಂಸ್ಕೃತ ಮುಂತಾದ ಮೂಲಗಳನ್ನು ಪರಾಮರ್ಶಿಸಿ, ದಾಖಲಿಸಲಾಗಿದೆ. ಮೊಟ್ಟ ಮೊದಲು ಮಲೆಯಾಳದ ಜನರ ಮಾಹಿತಿಯನ್ನು ಪೋರ್ಚುಗೀಸ್‌ ಭಾಷೆಯಲ್ಲಿ ದಾಖಲಿಸಿ, ನಂತರ ಅದನ್ನು ಲ್ಯಾಟಿನ್‌ನಲ್ಲಿ ಸ್ವತಃ ಹೆಂಡ್ರಿಕ್‌ ವಾನ್‌ ರೀಡ್‌, -ಪ್ರಾಯಶಃ ಕೆಲವು ಸಹಾಯಕರಿಂದ_ ಅನುವಾದಿಸಿ ಬರೆದಿದ್ದಾರೆ. ಅದೆಲ್ಲವೂ ನೆದರ್‌ ಲ್ಯಾಂಡ್‌ನ ಅಮಸ್ಟರ್‌ಡಾಂನಿಂದ 12 ಸಂಪುಟಗಳಲ್ಲಿ ಪ್ರಕಟವಾಗುತ್ತದೆ. ಕೊನೆಯ ಸಂಪುಟ ಮಾತ್ರ ವಾನ್‌ ರೀಡ್‌ ಅವರ ಮರಣಾನಂತರ ಪ್ರಕಟವಾದರೆ ಉಳಿದ ಹನ್ನೊಂದು ಸಂಪುಟಗಳೂ ಆತನ ಜೀವಿತದ ಅವಧಿಯಲ್ಲಿಯೇ ಪ್ರಕಟವಾದವು.

ಅತ್ಯಂತ ವಿಶ್ವಾಸರ್ಹವಾದ ದಾಖಲೆಯಾಗಿ ಹಾರ್ಟಸ್‌ ಮಲಬಾರಿಕಸ್‌

ಜೀವಿ ವಿಜ್ಞಾನದಲ್ಲಿ ಜೀವಿಗಳ ವರ್ಗೀಕರಣ ಮತ್ತು ನಾಮಕರಣವು ಅತಿ ಪ್ರಮುಖವಾದ ಘಟ್ಟ. ಅದನ್ನು ವ್ಯವಸ್ಥಿತವಾಗಿ ನಿರ್ವಹಿಸಿ ಒಂದು ಆಕರ್ಷಕ ಮಾದರಿಯನ್ನು ಕೊಟ್ಟವರು ಜೀವಿವರ್ಗೀಕರಣ ಮತ್ತು ನಾಮಕರಣ ಪಿತಾಮಹರೆಂದೇ ಖ್ಯಾತರಾದ ಸ್ವೀಡಿಶ್‌ ಜೀವಿವಿಜ್ಞಾನಿ ಕಾರ್ಲ್ಸ್‌ ಲಿನೆಯಾಸ್‌. ಅವರು ತಮ್ಮ ಜೀವಿತದ ಅವಧಿಯಲ್ಲಿ ಈ ಅತ್ಯಂತ ಪ್ರಮುಖವಾದ ಕೆಲಸಕ್ಕೆ ನಂಬಿಕೊಂಡದ್ದು ಸ್ವತಃ ಕಂಡ ಜೀವಿ ಮಾದರಿಗಳನ್ನು ಅಥವಾ ಸೂಕ್ಷ್ಮವಾದ ವಿವರಗಳನ್ನೂ ಒಳಗೊಂಡ ಚಿತ್ರಗಳನ್ನು ಮಾತ್ರ! ಸ್ವತಃ ಪರಿಶೀಲಿಸಿ ನೋಡಲು ತಮ್ಮ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ್ದಲ್ಲದೆ, ಆ ಸಮಯಕ್ಕಾಗಲೇ ಪ್ರಕಟವಾಗಿದ್ದ ಕೆಲವು ಸಚಿತ್ರ ಸಂಪುಟಗಳನ್ನು ಪರಾಮರ್ಶಿಸಿ ಅಧ್ಯಯನಕ್ಕೆ ಒಳಪಡಿಸಿದ್ದರು. ಅಂತಹಾ ಸಂಪುಟಗಳಲ್ಲಿ ಲ್ಯಾಟಿನ್‌ ಭಾಷೆಯ “ಹಾರ್ಟಸ್‌ ಮಲಬಾರಿಕಸ್‌” ಕೂಡ ಒಂದು. ಲಿನೆಯಾಸ್‌ ಅವರು ವಾನ್‌ ರೀಡ್‌ ಅವರನ್ನು ಅದೆಷ್ಟು ಮೆಚ್ಚಿಕೊಂಡಿದ್ದರೆಂದರೆ, ಅವರು ತಾವು ಪರಾಮರ್ಶಿಸಿ ಒಪ್ಪಿಕೊಂಡಿದ್ದ ಜರ್ಮನಿಯ ಸಸ್ಯವಿಜ್ಞಾನಿ “ಯೋಹಾನ್‌ ಡಿಲೇನ್‌” ಮತ್ತು ಫ್ರಾನ್ಸಿನ “ಚಾರ್ಲಸ್‌ ಪ್ಲಮೇರ್‌” ಹಾಗೂ ಹೆಂಡ್ರಿಕ್‌ ವಾನ್‌ ರೀಡ್‌ ಅವರ ದಾಖಲೆಗಳಲ್ಲಿ ರೀಡ್‌ ಅವರನ್ನು ಮೊದಲ ಸ್ಥಾನದಲ್ಲಿ ಇಟ್ಟು ಗೌರವಿಸಿದ್ದರಂತೆ. ಸ್ವತಃ ತಮ್ಮ “ಜಿನೆರಾ ಪ್ಲಾಂಟೆರಂ (Genera Plantarum)” ದಾಖಲೆಯಲ್ಲಿ ಇದನ್ನು ಪ್ರಸ್ತಾಪಿಸಿದ್ದಾರೆ. ವಾನ್‌ ರೀಡ್‌ ಅವರ ದಾಖಲೆಯು ಲಿನೆಯಸ್‌ ಅವರಿಗೆ ಭಾರತದ ಒಟ್ಟಾರೆಯ ಸಸ್ಯ ಸಂಪತ್ತಿನ ನಿಖರವಾದ ಮಾಹಿತಿಯು ದೊರೆತದ್ದಲ್ಲದೆ, ಅದರಲ್ಲಿ ಆತ್ಯಂತಿಕ ವಿವರಗಳು ಸಚಿತ್ರವಾಗಿ ಉನ್ನತವಾಗಿದ್ದು ಪ್ರಶಂಸೆಗೆ ಒಳಗಾಗಿವೆ. ಅದರ ಜೊತೆಗೆ ಮತ್ತೊಂದು ಮಹತ್ವದ ಸಂಗತಿ ಎಂದರೆ, ಭಾರತದ ಸಸ್ಯಗಳ ಅದರಲ್ಲೂ ಮಾನವ ಬಳಕೆಯ ವಿವರಗಳು ಮಲೆಯಾಳಂ ಮೂಲದಿಂದ, ಅಥವಾ ತಮಿಳು ಮೂಲದಿಂದ ಹೆಚ್ಚು ಪರಿಚಯವಾಗಿರಲು ವಾನ್‌ ರೀಡ್‌ ಅವರ ದಾಖಲೆಯೇ ಕಾರಣ. ಇಂದಿಗೂ ತೆಂಗು, ಹಲಸು, ಮಾವು ಮುಂತಾದ ಅನೇಕ ಪದಗಳು ಮಲೆಯಾಳಂ ಮೂಲದವು. ತೆಂಗು, ಮಲೆಯಾಳಂನ “ತೆಂಗೈ”ನಿಂದ ಬಂದಿದ್ದರೆ, ಜಾಕ್‌ “ಚಕ್ಕಾ”ದಿಂದಲೂ ಹಾಗೂ ಮಾಂಗೊ “ಮಾಂಗಾ”ದಿಂದ ಬಂದಿದೆ. ಹೀಗೆ ಶಿಕ್ಷಣವೇ ಇಲ್ಲದ 20-21 ವರ್ಷದ ಹುಡುಗನೊಬ್ಬ ಭಾರತಕ್ಕೆ ಬಂದು ಕೇವಲ ಆಸಕ್ತಿ ಹಾಗೂ ಸ್ಥಳೀಯ ಜನರ ಒಡನಾಟದಿಂದ ಕಲಿತ ಕಾರಣದಿಂದ ಬೃಹತ್‌ ದಾಖಲೆಯನ್ನು ಸಸ್ಯವಿಜ್ಞಾನಕ್ಕೆ ಕೊಟ್ಟಿದ್ದು ದೊಡ್ಡ ಪವಾಡ. ವಾನ್‌ ರೀಡ್‌ ಅವರು ಒಂಟಿಯಾಗಿ ಬ್ರಹ್ಮಚಾರಿಯಾಗಿದ್ದು, ಸೇವೆ ಹಾಗೂ ಆಸಕ್ತಿಯನ್ನೇ ಮೂಲವಾಗಿಟ್ಟು ದುಡಿದು ಭಾರತದಲ್ಲೇ ಮಣ್ಣಾದ ಮಹಾನ್‌ ನಿಸರ್ಗ ಪ್ರೇಮಿ.

(ಬ್ರಿಟನ್ನಿನ ರಾಯಲ್‌ ಕಾಲೇಜ್‌ ಆಫ್‌ ಸರ್ಜನ್ಸ್‌ 13ನೆಯ ಶತಮಾನದಿಂದ 19ನೆಯ ಶತಮಾನದವರೆಗೂ ವಿವಿಧ ಮಾದರಿಗಳಲ್ಲಿ ದಾಖಲಾದ ಸಸ್ಯವಿವರಗಳನ್ನು “Medicinae Plantae- Healing Plants Through Time” ಎಂಬುದಾಗಿ ಡಿಜಿಟಲ್‌ ದಾಖಲೆಯೊಂದನ್ನು ರೂಪಿಸಿದೆ. ಇದರಲ್ಲಿರುವ ಸುಮಾರು 40 ಸಸ್ಯಸಂಗ್ರಹಗಳ ದಾಖಲೆಗಳಲ್ಲಿ “ಹಾರ್ಟಸ್‌ ಮಲಬಾರಿಕಸ್‌” ಕೂಡ ಒಂದು. ಇದೊಂದು ಡಿಜಿಟಲ್‌ ಎಕ್ಸಿಬಿಷನ್‌ ಆಗಿದ್ದು, ಅದರ ಪ್ರತಿಯೊಂದೂ ಪುಟ್ಟ ವಿವರಣೆಯೊಂದಿಗೆ ಪ್ರದರ್ಶಿಲ್ಪಟ್ಟಿವೆ. ಅದನ್ನು ಆನ್‌ ಲೈನ್‌ ಮೂಲಕ https://bit.ly/2Wq9F7B ಲಿಂಕ್‌ ನಲ್ಲಿ ನೋಡಿ ತಿಳಿಯಬಹುದು).

ಇದೆಲ್ಲವೂ ಲ್ಯಾಟಿನ್‌ ಭಾಷೆಯ “ಹಾರ್ಟಸ್‌ ಮಲಬಾರಿಕಸ್‌” ಕಥೆಯಾದರೆ, ಸುಮಾರು 300 ವರ್ಷಗಳ ನಂತರ ಅದನ್ನು ಅಷ್ಟೇ ಶ್ರದ್ಧೆಯಿಂದ 35ವರ್ಷಗಳ ಕಾಲ ಪರಾಮರ್ಶಿಸಿ, ವೈಜ್ಞಾನಿಕ ವಿವರಗಳ ಸಹಿತ “ಇಂಗ್ಲೀಷ್‌ ಹಾಗೂ “ಮಲೆಯಾಳಂ” ಭಾಷೆಗೆ ಅನುವಾದಿಸಿದವರು ನಮ್ಮವರೇ ಆದ ಕೇರಳದ ಡಾ. ಮಣಿಲಾಲ್‌ (Professor Kattungal Subramaniam Manilal) ಅವರು. ಪ್ರೊ. ಮಣಿಲಾಲ್‌ ಹಾರ್ಟಸ್ ಮಲಬಾರಿಕಸ್‌ ನ‌ ಎಲ್ಲಾ ಗಿಡ-ಮರಗಳನ್ನೂ ಮತ್ತೊಮ್ಮೆ ಸ್ಥಳಿಯವಾಗಿ ಕಂಡದ್ದಲ್ಲದೆ, ಅವುಗಳ ವಿಶೇಷಗಳನ್ನೂ ಅಧ್ಯಯನ ಮಾಡಿ ಆಧುನಿಕ ವೈಜ್ಞಾನಿಕ ಹೆಸರುಗಳನ್ನೂ ಸೇರಿಸಿದವರು ಅಂತರರಾಷ್ಟ್ರೀಯ ಸಸ್ಯವರ್ಗೀಕರಣ ಸಂಸ್ಥೆಯಿಂದ ಗುರುತಿಸಲ್ಪಟ್ಟ ಅತ್ಯಂತ ಪ್ರಮುಖ ಭಾರತೀಯ ವಿಜ್ಞಾನಿ. ಇವರ ಇಂಗ್ಲೀಷ್‌ ಅನುವಾದದಿಂದ 325 ವರ್ಷಗಳ ನಂತರ ಜಗತ್ತಿಗೆ ತೆರೆದುಕೊಂಡ ಅತ್ಯಂತ ಮಹತ್ವದ ಘಟನೆಯು ಅಂದಿನ ರಾಷ್ಟ್ರಪತಿ ಡಾ. ಅಬ್ದುಲ್‌ ಕಲಾಂ ಅವರಿಂದ ಲೋಕಾರ್ಪಣೆಗೊಂಡರೂ ಪ್ರಕಾಶಕರಾಗಿದ್ದ ಕೇರಳ ವಿಶವ್ವಿದ್ಯಾಲಯವು ಡಾ. ಮಣಿಲಾಲ್‌ ಅವರನ್ನು ಬಿಡುಗಡೆ ಸಮಾರಂಭಕ್ಕೆ ಕರೆತರದೆ ವಂಚಿಸಿತ್ತು. ಇಷ್ಟೇ ಅಲ್ಲ ಪ್ರೊ. ಮಣಿಲಾಲ್‌ ಅವರೂ ಸಹಾ ವಾನ್‌ ರೀಡ್‌ ಅವರಂತೆ ಪಶ್ಚಿಮ ಘಟ್ಟಗಳ ಉದ್ದಗಲಕ್ಕೂ ಅಡ್ಡಾಡಿ ಮೂರು ದಶಕಗಳನ್ನು ಸವೆಸಿ ಸೇವೆ ಮಾಡಿ ಜಗತ್ತಿನ ಸಸ್ಯಪ್ರೇಮಿಗಳನ್ನು ತಲುಪಿದ್ದರೂ, ಅವರ ಹೆಸರನ್ನೇ ಬಿಡುವಂತಹ ಪ್ರಕಾಶನ ಹುನ್ನಾರದ ಜೊತೆಗೆ ಅವರ ಸಸ್ಯಪ್ರೀತಿಯ ಇತರೇ ಮಹತ್ವದ ವಿವರಗಳನ್ನು ಮುಂದೆ ನೋಡೋಣ. ಅದೇ ಒಂದು ದೊಡ್ಡ ಕಥೆ…

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್

This Post Has One Comment

  1. ಭಾಗ್ಯ ತೆಗ್ಗೆಳ್ಳಿ

    ಬಹಳ ಅಮೂಲ್ಯವಾದ ಮಾಹಿತಿ ಇದೆ..ಸಸ್ಯ ಶಾಸ್ತ್ರ ಎಂದಕೂಡಲೇ ನಮಗೆ ತಕ್ಷಣಕ್ಕೆ ನೆನಪಾಗುವವರು ಲಿನ್ನೇಯಸ್ ಮಾತ್ರ..ವ್ಯಾನ್ ರೀಡ್ ಅವರ ಹೆಸರು ಕೇಳಿರಲಿಲ್ಲ..ಶಾಲಾ ಶಿಕ್ಷಣವಿಲ್ಲದ ಮತ್ತು ತನ್ನದಲ್ಲದ ಭಾರತದ ಭೂಮಿಯಲ್ಲಿ ಸಸ್ಯಗಳಧ್ಯಯನಕ್ಕಾಗಿ ತನ್ನ ಜೀವತೇದ ಮಹಾನ್ ಚೇತನವನ್ನು ಪರಿಚಯಿದಿದ ಲೇಖನ ಓದಿ ಧನ್ಯತಾ ಭಾವ ಉತ್ಪತ್ತಿ ಆಯ್ತು ಸರ್.. ಸಂಗ್ರಹಯೋಗ್ಯ ಲೇಖನ..

Leave a Reply