To see a World in a Grain of Sand
And a Heaven in a Wild Flower
Hold Infinity in the palm of your hand And Eternity in an hour
– William Blake

ವಿಲಿಯಂ ಬ್ಲೇಕ್ (William Blake – 1757-1827) ತನ್ನ “Auguries of Innocence (ಮುಗ್ಧತೆಯ ಆಗುಹೋಗುಗಳು)” ಎಂಬ ಕಾವ್ಯದಲ್ಲಿ Hold Infinity in the palm of your hand ಎಂದು ಪ್ರಸ್ತಾಪಿಸುತ್ತಾ ಮುಗ್ಧತೆಯಲ್ಲಿ ಅನಂತವನ್ನು ಕೈಯಲ್ಲಿ ಹಿಡಿಯುವ ಕಾವ್ಯಾತ್ಮಕ ಸತ್ಯವನ್ನು ಹೇಳುತ್ತಾರೆ. ಆಗ ಅವರಿಗೆ ಹೂವೇ ಅಲ್ಲದ ಒಂದೇ ಒಂದು ಹೂಕೋಸನ್ನು ಕೈಯಲ್ಲಿ ಹಿಡಿಯುವಲ್ಲಿ ಅನಂತವನ್ನೂ ತುಂಬಿ ಕೊಡುವ ಗಣಿತೀಯ ಸತ್ಯವೂ ಉಂಟು ಎಂದು ಅನ್ನಿಸಿರಲಿಕ್ಕಿಲ್ಲ. ಅದೊಂದು ವೈಜ್ಞಾನಿಕ ಅರಿವಾಗಿ ಸೌಂದರ್ಯದೊಳಗಿನ ಸತ್ಯವಾಗಲು ಶತಮಾನಗಳ ಕಾಲದ ನಾಲಿಗೆಯ ರುಚಿಯನ್ನೂ ದಾಟಿ ಬರಬೇಕಾಯಿತು. ಅದೇನದು ಅನಂತವನ್ನು ಅಂಗೈಯಲ್ಲಿ ಹಿಡಿಯುವಷ್ಟು ತನ್ನ ಹೊಟ್ಟೆಯ ಗಡ್ಡೆಯಲ್ಲಿ ಇಟ್ಟ ವಿವರಗಳನ್ನು ವಿವರವಾಗಿ ನೋಡುವುದಕ್ಕೂ ಮೊದಲು ಕಣ್ಣಿಗೆ ಕಟ್ಟುವಂತೆ ಸೌಂದರ್ಯವನ್ನಿಟ್ಟ ಹೂಕೋಸು ಹೂವೆ ಅಲ್ಲ ಎನ್ನುವುದರ ವಿಚಿತ್ರಗಳಿಂದ ಆರಂಭಿಸೋಣ.
ವೈವಿದ್ಯಮಯವಾದ ಕೋಸಿನ ಕುಟುಂಬದಲ್ಲಿ, ಎಲೆಕೋಸಿನಿಂದ ಮಾರ್ಪಟ್ಟ ಜನಪ್ರಿಯ ತರಕಾರಿ ಹೂಕೋಸು. ಹೆಸರಲ್ಲಷ್ಟೇ ಹೂವಿದೆ, ಆದರೆ ಇದು ಹೂವಲ್ಲ! ಇದನ್ನು ವೈಜ್ಞಾನಿಕವಾಗಿ Brassica oleraceae variety botrytis. ಎಂದು ಹೆಸರಿಸಲಾಗಿದೆ. ಎಲ್ಲಾ ಕೋಸುಗಳಂತೆಯೇ ಬ್ರಾಸಿಕೇಸಿಯೇ ಕುಟುಂಬದ ಸದಸ್ಯ. ಇದೂ ಸಹಾ ಇತರೆ ಕೋಸುಗಳಂತೆಯೇ ಇನ್ನೂ ವಂಶಾಭಿವೃದ್ಧಿ ಹಂತಕ್ಕೆ ಬೆಳೆಯದ ಎಳೆಯ ಸಸ್ಯ. ಇದರ ಇಂಗ್ಲೀಶಿನ ಹೆಸರಾದ ಕಾಲಿಫ್ಲವರ್ (Cauliflower) ಪದವು ಲ್ಯಾಟಿನ್ ಮೂಲದ ಕೋಸು ಎಂಬ ಅರ್ಥದ ಕಾಲಿಸ್ caulis (cabbage) ಮತ್ತು ಹೂವು ಎಂಬರ್ಥದ “ಫ್ಲಾಸ್-flōs (flower). ನಿಂದ ವಿಕಾಸವಾಗಿದೆ.

ಹಸಿರು ಎಲೆಗಳ ಮಧ್ಯೆ ಹೂವಿನಂತೆ ಜೋಡಣೆಗೊಂಡು ಸುಂದರವಾದ ಗಡ್ಡೆಯಂತಾಗಿರುವ ಹೂಕೋಸು ಹೂವು ಅಲ್ಲ. ಇನ್ನೂ ಸಂತಾನಾಭಿವೃದ್ಧಿಯ ಜೀವನಕ್ಕೆ ದಾಟದ ಎಳೆಯ ಸಸ್ಯದಲ್ಲಿ ಏನೇನೂ ಬಲಿಯದ ಹೂಗೊಂಚಲಿನ ಚಿಗುರಿನ ಎಳೆಯ ಸಸ್ಯಭಾಗದ ಅಂಗಾಂಶವು ಮುರುಟಿಕೊಂಡು, ಒಂದಕ್ಕೊಂದು ಸುರುಳಿಯಾಗಿ ಸುಂದರವಾದ ಜೋಡಣೆಯಾಗಿವೆ. ಸೂಕ್ಷ್ಮವಾಗಿ ಗಮನಿಸಿದರೆ ಹೂ ಕೋಸಿನ ಒಂದು ಗಡ್ಡೆಯಲ್ಲಿ ಸುಮಾರು ಚಿಕ್ಕ ಗಡ್ಡೆಗಳು, ಅವುಗಳಲ್ಲಿ ಮತ್ತೂ ಚಿಕ್ಕ ಗಡ್ಡೆಗಳನ್ನು ಕಾಣಬಹುದು. ಇವು ಒಂದಕ್ಕೊಂದು ಸುರಳಿಯಾಗಿ ಜೋಡಣೆಯಾಗಿವೆ.
ಈ ಜೋಡಣೆಯೇ ಗಣಿತಜ್ಞರನ್ನು ಆಕರ್ಷಿಸಿರುವುದು. ನಿಸರ್ಗದ ಎಲ್ಲ ಸೌಂದರ್ಯವೂ ಆಕರ್ಷಕ ಜೋಡಣೆಗಳ ಅನುಸರಣೆ. ಅದನ್ನು “ಫೆಬಿನಾಚಿ ಸೀಕ್ವೆನ್ಸ್ (Fibonacci sequence) ಅಥವಾ ಫೆನಿನಾಚಿ ಅನುಕ್ರಮಣಿಕೆ ಎಂದು ಗಣಿತೀಯ ಅಂಕೆಗಳ ಅನುಪಾತಗಳ ಅಳತೆಗಳಿಂದ ಕರೆಯಲಾಗುತ್ತದೆ. ಫೆಬಿನಾಚಿ ಸರಣಿಯ ಅಂಕೆಗಳಾದ 0, 1, 1, 2, 3, 5, 8, 13, 21, 34, …. ಇತ್ಯಾದಿಗಳ ಅಳತೆಯ ಭಾಗಗಳ ಆಕೃತಿ ಅಥವಾ ಅವಯವಗಳ ಜೋಡಣೆಯಲ್ಲಿ ನಿಸರ್ಗದ ಸೌಂದರ್ಯವು ಅಡಗಿದೆ. ಇದು ಮಾನವರ ಮುಖವನ್ನೂ, ವಿವಿಧ ಗಿಡ-ಮರಗಳ ಹೂಗಳನ್ನೂ ಅಥವಾ ಸುಂದರವಾದ ಯಾವುದೇ ವಸ್ತುವನ್ನೂ ಜೋಡಣೆಯಾದ ಭಾಗಗಳ ಅಳತೆಯನ್ನು ಈ ಸರಣಿ ಅಂಕೆಗಳ ಮಾನದಲ್ಲಿ ಸಮೀಕರಿಸಬಹುದು. ಒಂದಕ್ಕೊಂದು ಭಾಗಗಳ ಅನುಪಾತವನ್ನು ಗೋಲ್ಡನ್ ರೇಶ್ಯೂ (Golden Ratio) ಎಂದೂ ಕರೆಯಲಾಗುತ್ತದೆ.
ಹೂಕೋಸಿನ ಇಡೀ ಜೋಡಣೆಯೂ ಸಹಾ ಇದೇ ಅಂಕೆಗಳ ಸರಣಿಯ ಅಳತೆಯ ಅನುಪಾತದ ಅಂಗಾಂಶಗಳ ಜೋಡಣೆಯಾಗಿ ವಿಭಾಜಿಸಬಹುದು. ಜೊತೆಗೆ ಅವುಗಳ ಜೋಡಣೆಯು ಫೆಬಿನಾಚಿ ಸೀಕ್ವೆನ್ಸ್ ಮಾತ್ರವಷ್ಟೇ ಅಲ್ಲದೆ, ಅದನ್ನು ಅನುಸರಿಸುತ್ತಲೇ ಸುರುಳಿಯಾಗಿ ಸುತ್ತುವರಿದ ವಿಶೇಷಗಳಿಂದ ತುಂಬಿಕೊಂಡಿವೆ ಇದನ್ನೂ ಗಣಿತದಲ್ಲಿ Fractals ಎನ್ನುತ್ತಾರೆ. ಹೂಕೋಸಿನ ಗಡ್ಡೆಯನ್ನು ಸೀಳುತ್ತಾ ಪುಟ್ಟ ಪುಟ್ಟ ಗಡ್ಡೆಗಳನ್ನು ಪಡೆಯಬಹುದು. ಅವೆಲ್ಲವೂ ಮೂಲ ಗಡ್ಡೆಯ ಆಕಾರವನ್ನೇ ಹೋಲುತ್ತಿದ್ದು ಗಾತ್ರದಲ್ಲಿ ಮಾತ್ರ ಸಣ್ಣದಾಗಿರುತ್ತವೆ. ಅಷೇ ಅಲ್ಲ, ಅವೆಲ್ಲವೂ ಇರುವ ಜಾಗವನ್ನು ಸುತ್ತುವರಿದು ತುಂಬಿಕೊಂಡಿರುತ್ತವೆ. ಅಂದರೆ ಇರುವಷ್ಟೇ ಜಾಗದಲ್ಲಿ ಒಂದೇ ಆಕಾರದವಾಗಿದ್ದೂ ಹೇಗೆ ಹೆಚ್ಚು ಸಂಖ್ಯೆಯಲ್ಲಿ ತುಂಬಲು ಅಣಿಗೊಳಿಸುವುದೇ ಫ್ರಾಕ್ಟಲ್ (Fractals) ಜೋಡಣೆ. ಆದರೆ ಈದನ್ನು ಗಣೀತೀಯ ಅಳತೆಯಲ್ಲಿ ಯಾವ ಅಳತೆಯನ್ನು ಬಳಸಿ ಜೋಡಿಸಲಾಗಿದೆ ಅಥವಾ ಆಕಾರವನ್ನು ಪಡೆಯಲಾಗಿದೆ ಎಂಬುದು ಮುಖ್ಯವಾಗುತ್ತದೆ. ಅದೊಂದು ಹೆಚ್ಚು ವಿವರಗಳನ್ನು ಬೇಡುವ ವಿಚಾರ.

ಫ್ರಾಕ್ಟಲ್ (Fractals) ಜೋಡಣೆ ಎಂದರೆ ಇರುವ ಜಾಗದಲ್ಲೇ ಇಡೀಯಾಗಿ ದೇಹವನ್ನು ಒಗ್ಗಿಸಿ, ಸುತ್ತುವರಿಸಿ ಆವರಿಸಿಕೊಳ್ಳುವುದು. ಹೀಗೆ ಆವರಿಸುವಾಗಲೂ ಪುಟ್ಟ ಪುಟ್ಟ ಭಾಗಗಳಾಗಿಯೂ ಮೂಲ ಆಕಾರವನ್ನು ಉಳಿಸಿಕೊಂಡಿರುವ ಗಣಿತೀಯ ಜೋಡಣೆಯಿಂದಲೇ ಸುಂದರವಾದ ಆಕಾರ ಪಡೆದು ಒಳ್ಳೆಯ ಮೊಸರಿನ ಗಿಣ್ಣುವಿನಂತೆ ಗುಡ್ಡೆಯ ಹಾಗೆ ಚಂದದಲ್ಲಿ ಕಾಣುವುದು. ಈ ಸೌಂದರ್ಯದ ಸತ್ಯವನ್ನೇ ಗಣಿತೀಯ ವಿವರಗಳಾಗಿಸಿ ಕಳೆದ 2004 ರಲ್ಲಿ ಕೊರಿಯಾದ ಖೊನಮ್ ರಾಷ್ಟ್ರೀಯ ವಿಶ್ವವಿದ್ಯಾಲಯದ(Chonnam National University, Korea) ಸಂಶೋಧಕರಾದ ಸಾಂಗ್ ಹೂನ್ ಕಿಮ್(Sang-Hoon Kim) ಪ್ರಕಟಿಸಿದ್ದಾರೆ. ಲಿಬರಲ್‌ಆರ್ಟ್ ಹಾಗೂ ಕಂಡೆನ್ಸಡ್ ಮ್ಯಾಟರ್ ಸಿದ್ಧಾಂತದ ಪ್ರೊಫೆಸರ್ ಆದ ಅವರು ಹೂಕೋಸಿನ ಸೌಂದರ್ಯವನ್ನು ಗಣಿತೀಯವಾಗಿ ಒಂದೊಂದೇ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಪುಡಿ ಪುಡಿಯಾದ ಅಸಂಖ್ಯ ಗಡ್ಡೆಗಳನ್ನೇ ಅಂಗೈಯಲ್ಲಿ ಹಿಡಿಯುವ ರೂಪಕವನ್ನು ಮುಗ್ಧತೆಯ ಅನುಕ್ರಮಣಿಕೆಗೆ ವಿಖ್ಯಾತ ಕಲಾವಿದ ಕವಿ ವಿಲಿಯಂ ಬ್ಲೇಕ್ Hold Infinity in the palm of your hand ಎಂದು ಹೇಳಿದ ಕಾವ್ಯದ ಬೆರಗನ್ನು ಸತ್ಯವಾಗಿಸಿದ್ದಾರೆ.

ಇಡೀ ಗಡ್ಡೆಯ ಮೂಲ ಆಕಾರದಲ್ಲೇ ಅದರ ಪ್ರತೀ ತುಣುಕುಗಳೂ, ಚಿಕ್ಕದಾಗುತ್ತಾ ಹೋದಂತೆಯೂ ಉಳಿಯುವ ಹೋಲಿಕೆಯ ವಿಶಿಷ್ಟ ಜೋಡಣೆಯ ಹೂ ಕೋಸಿನಲ್ಲಿ ಅದರ ಸಸ್ಯ ಬೆಳವಣಿಗೆಯಲ್ಲಿ ಹೇಗಾಯಿತು? ಅದು ಗಣಿತೀಯ ಹೌದು, ಆದರೆ ಅದು ಆದದ್ದಾದರೂ ಹೇಗೆ? ಅದನ್ನೆಲ್ಲಾ ನಿರ್ವಹಿಸುವ ಬಗೆಯಾದರೂ ಹೇಗೆ? ಗಿಡವೇ ಜಾಣತನದಿಂದ ಇದನ್ನು ನಿಭಾಯಿಸಿದ್ದಾದರೂ ಹೇಗೆ? ಈ ಪ್ರಶ್ನೆಗಳಿಗೆ ಉತ್ತರಕ್ಕೆ ಹೂಕೋಸಿನ ಆನುವಂಶೀಯ ವಿವರಗಳನ್ನು ಪಡೆಯುವ ಕುತೂಹಲಕ್ಕೆ ತೀರಾ ಇತ್ತೀಚಿನವರೆಗೂ ಕಾಯಬೇಕಾಯಿತು.
ಜಗತ್ತಿನ ವಿಖ್ಯಾತ ಪತ್ರಿಕೆ ಸೈನ್ಸ್ (Science) ಅಲ್ಲಿ ಪ್ರಕಟವಾದ ಅಜ್ಪೆಟಿಯಾ ಮತ್ತಿತರ (Azpeitia et al. 2021) ವಿಜ್ಞಾನಿಗಳ ತಂಡವು ಕಳೆದ 2021 ರಲ್ಲಿ ಪ್ರಕಟಿಸಿದ ಲೇಖನವು ಅಂತಹಾ ಹೊಳಹುಗಳನ್ನು ತೆರೆದಿಟ್ಟಿದೆ. ನಾವು ತಿನ್ನುವ ಹೂಕೋಸಿನ ಗಡ್ಡೆ (ತಲೆ)ಯ ಜೋಡಣೆ ಹಾಗು ನಿರ್ಮಾಣದ ರಹಸ್ಯವನ್ನು ಕಂಪ್ಯೂಟರ್ ಮಾದರಿ ಹಾಗೂ ಪ್ರಯೋಗಗಳ ಮೂಲಕ ತೆರೆದಿಟ್ಟಿದ್ದಾರೆ. ಕೋಸಿನ ಕುಟುಂಬದ್ದೇ ಮತ್ತೊಂದು ಮಾದರಿ ಸಸ್ಯ ಅರಾಬಿಡೊಪ್ಸಿಸ್ (Arabidopsis thaliana) ಅನ್ನು ತಮ್ಮ ಅಧ್ಯಯನದಲ್ಲಿ ನಿರ್ವಹಿಸಿ ವಂಶವಾಹಿಗಳ ಮಾರ್ಪಾಡನ್ನು ವಿವರಿಸಿದ್ದಾರೆ. ಈ ಸಸ್ಯಗಳಲ್ಲಿ ಜೀನುಗಳ ಜಾಲಬಂಧ ನಿಯಂತ್ರಣ (Gene-Regulatory Network) ದ ಮೂಲಕ ಪ್ರಾಯೋಗಿಕ ಪರಿಷ್ಕರಣೆಯನ್ನು ನಡೆಸಿ ಅರಿಯಲಾಗಿದೆ. ಅದರಿಂದ ಮುಖ್ಯವಾಗಿ, APETALLA 1(AP1) ಮತ್ತು CAULIFLOWER (CAL) ಎಂಬ ಎರಡು ವಂಶವಾಹಿಗಳ ರೂಪಾಂತರದಿಂದ ನಾವು ಕಾಣುವ ಹೂಕೋಸಿನ ಖಾದ್ಯ ತಲೆಯು ನಿರ್ಮಾಣವಾಗುತ್ತದೆ ಎಂಬ ನಿರ್ಣಯಕ್ಕೆ ಬರಲಾಗಿದೆ. ಹೇಗೆಂದರೆ, AP1 ಮತ್ತು CAL ವಂಶವಾಹಿಗಳು ಸಾಮಾನ್ಯ ಹೂ ಬಿಡುವ ಗಿಡಗಳಲ್ಲಿ ಚಟುವಟಿಕೆಯಿಂದ ಇದ್ದು, ಹೂಕೋಸಿನಲ್ಲಿ ನಿಷ್ಕ್ರಿಯವಾಗಿರುತ್ತದೆ. ಹಾಗಾಗಿ ಅನುಕ್ರಮದಲ್ಲಿರುವ ಇತರ ವಂಶವಾಹಿಗಳ ಕಾರ್ಯವು ಮಾರ್ಪಟ್ಟು, ಹೂ ಕಾಂಡವು ಬೆಳೆಯದೆ ಅಪೂರ್ಣ ಹೂಗಳಾಗುತ್ತದೆ. ಈ ಪ್ರಕ್ರಿಯೆ ಪುನರಾವರ್ತಿಸಿ, ಗೊತ್ತಾದ ಕೋನಗಳಲ್ಲಿ ಸುತ್ತುವರೆದ ಸುರುಳಿಗಳಂತೆ ಹೂವಿನ-ಗಡ್ಡೆಯ ಆಕಾರ ಪಡೆಯುತ್ತದೆ.

ಇದಿಷ್ಟೂ ಸಸ್ಯವು ತನ್ನ ಸಂತಾನಾಭಿವೃದ್ಧಿ ಪೂರ್ವದ, ನಮ್ಮ ಆಹಾರವಾಗಿರುವ ಗಡ್ಡೆಯ ಬೆಳವಣಿಗೆಯ ಕಥನವಾದರೆ ಇಡೀ ಸಸ್ಯದ್ದೇ ಇನ್ನೂ ಮುಂದಿದೆ. ಗಡ್ಡೆಯನ್ನು ಮುಂದೆಯೂ ಹಾಗೆ ಬೆಳೆಯಲು ಬಿಟ್ಟರೆ ಅದು ಮುಂದೆ ಬೆಳೆದು ಜೀವನ ಚಕ್ರವನ್ನು ಪೂರೈಸುತ್ತದೆ. ಆಗ ಅನುಕೂಲಕರ ವಾತಾವರಣದ ಮೇರೆಗೆ, ತನ್ನ ಜೀವಿತಾವಧಿಯ ಪ್ರಕಾರ ಕುಬ್ಜವಾದ ಹೂ ಗೆಣ್ಣು ನಡುವಣ ಕಾಂಡಗಳು ನೇರವಾಗಿ ಬೆಳೆದು ಸಾಸಿವೆ ಗಿಡದಲ್ಲಿ ಕಾಣುವ ಹಾಗೆ ಹಳದಿ ಬಣ್ಣದ ಹೂ ಗೊಂಚಲುಗಳು ಬಿಟ್ಟು ಕಾಯಿ ಕಟ್ಟುತ್ತದೆ. ಹೂಕೋಸಿನ ಈ ವಿಶಿಷ್ಟ ಬೆಳವಣಿಗೆಯ ಮಾದರಿಯು ನೂರಾರು ವರ್ಷಗಳ ಸತತ ನೈಸರ್ಗಿಕವಾದ ಆಯ್ಕೆ ಹಾಗೂ ಜೈವಿಕ ರೂಪಾಂತರಗಳ ಫಲ. ಇದನ್ನು ನಿಸರ್ಗದಲ್ಲಿ ಗಮನಿಸುತ್ತಾ ಮುಂದೆ ಮಾನವರು ಆಯ್ಕೆ ಮಾಡಿ ಮುಂದುವರೆಸಿಕೊಂಡು ಮತ್ತಷ್ಟು ವಿವಿಧತೆಗಳನ್ನೂ ಪಡೆಯುತ್ತಾ ಸಾಗಿದ್ದಾರೆ.
ಇಂತಹ ಸುಂದರವಾದ ಸಂಗತಿಗಳನ್ನು ತನ್ನೊಡಲಲ್ಲಿ ಇಟ್ಟ ಹೂಕೋಸು ಭಾರತದ ನೆಲಕ್ಕೆ ತಲುಪಿದ್ದು ಕೇವಲ 200 ವರ್ಷಗಳ ಹಿಂದೆ. ಸುಮಾರು 1822 ರಲ್ಲಿ ಇಂಗ್ಲಂಡಿನ ಸಸ್ಯವಿಜ್ಞಾನಿ ಡಾ. ಜೆಮ್ಸನ್ ಎಂಬುವರ ಮೂಲಕ ಪರಿಚಯವಾಗಿದೆ. ಇವರು ಉತ್ತರ ಪ್ರದೇಶ ರಾಜ್ಯದ ಶಹರಾನ್ಪುರ್ ನಗರದಲ್ಲಿದ್ದ ಕಂಪನಿಯ ಸಸ್ಯವೈಜ್ಞಾನಿಕ ಉದ್ಯಾನವನ(Botanical garden) ಉಸ್ತುವಾರಿ ಸಮಯದಲ್ಲಿ ಕೋಸಿನ ಪ್ರಬೇಧಗಳನ್ನು ಭಾರತಕ್ಕೆ ಪರಿಚಯಿಸಿದ್ದಾರೆ. ಮೂಲತಃ ಶೀತವಲಯದ ಹೂಕೋಸು, ಉತ್ತರ ಭಾರತದಲ್ಲಿ ಪರಿಚಯದ ನಂತರ ಹಲವಾರು ವರ್ಷಗಳ ನಿರಂತರ ರೈತರ ಆಯ್ಕೆಯಿಂದಾಗಿ ಇಲ್ಲಿನ ಬಿಸಿಯಾದ ಆರ್ಧ್ರ ವಾತಾವರಣಕ್ಕೆ ಹೊಂದಿಕೊಂಡ ಕೆಲ ತಳಿಗಳ ಅಭಿವೃದ್ಧಿಗೆ ನಾಂದಿಯಾಗಿ ಭಾರತದೆಲ್ಲೆಡೆ ಪರಿಚಯವಾಯಿತು.
ಈಗ ಮಳೆಗಾಲ ಹೊರತು ಪಡಿಸಿ, ಎಲ್ಲ ಕಾಲದಲ್ಲಿಯೂ ಅದರಲ್ಲೂ ಬಿಸಿ ಬೇಸಿಗೆಯ(35-40 ಡಿಗ್ರಿ ಸೆಲ್ಸಿಯಸ್) ಕಾಲದಲ್ಲೂ, ಭಾರತದ ಎಲ್ಲಾ ಪ್ರದೇಶಗಳಲ್ಲೂ ಬೆಳೆಯಲಾಗುವ ತಳಿಗಳ ಲಭ್ಯತೆಯಿಂದ ಉತ್ಪಾದನೆಯೂ ಹೆಚ್ಚಾಗಿದೆ. ಹೀಗೆ 200 ವರ್ಷಗಳ ಹಿಂದೆ ಪರಿಚಯವಾದ ಹೂ ಕೋಸು ಭಾರತದಲ್ಲಿ ಬಹು ಬೇಡಿಕೆಯ ತರಕಾರಿ. 2021-22 ನೆಯ ವರ್ಷದಲ್ಲಿ ಭಾರತದ ಉತ್ಪಾದನೆಯು, 9.2 ಮಿಲಿಯನ್ ಟನ್ನುಗಳಷ್ಟಿದ್ದು, ಪ್ರಪಂಚದಲ್ಲೇ ದ್ವಿತೀಯ ಸ್ಥಾನದಲ್ಲಿದೆ. ಇದರ ಬೀಜೋತ್ಪಾದನೆಯನ್ನು ಚಳಿಗಾಲದಲ್ಲಿ ಉತ್ತರ ಪ್ರದೇಶ ಹಾಗು ಬಿಹಾರದ ಬಯಲು ಪ್ರದೇಶಗಳಲ್ಲಿ, ಉಳಿದಂತೆ ಹೆಚ್ಚಾಗಿ ಶೀತವಲಯ ಹೊಂದಿರುವ ಹಿಮಾಚಲ ಪ್ರದೇಶದ ಕುಲೂ ಕಣಿವೆ, ಕಾಶ್ಮೀರ, ಡಾರ್ಜಿಲಿಂಗ್, ನೀಲಗಿರಿ ಬೆಟ್ಟಗಳಲ್ಲಿ ಮಾಡಲಾಗುತ್ತದೆ. ಹೀಗೆ ಭಾರತಕ್ಕೆ ಒಗ್ಗಿಕೊಂಡು ತನ್ನದೇ ಬಗೆಯಲ್ಲಿ ಪರಿಚಯಿಸಿಕೊಳ್ಳುವ ಈ ತಳಿಯನ್ನು ಭಾರತದ ಹೂಕೋಸು (Indian Cauliflower) ಎಂದೇ ಕರೆಯಲಾಗುತ್ತದೆ. ಇದೇ ಬಗೆಯದು ಚೀನಾದಲ್ಲೂ ಇರುವುದರಿಂದ ಇದೇ ತಳಿಯನ್ನು ಏಶಿಯನ್ ಹೂಕೋಸೂ ಎಂದೂ ಕರೆಯುತ್ತಾರೆ. ಇದಲ್ಲದೆ ಮೂಲ ಯೂರೋಪಿನ ಮೂಲದವೂ ಹಾಗೂ ಹೆಚ್ಚು ಚಳಿಯ ವಾತಾವರಣಕ್ಕೆ ಒಗ್ಗಿದ ಹೂಕೋಸುಗಳನ್ನು ಯೂರೋಪಿನ ಹೂಕೋಸು (Europian Cauliflower) ಎಂದೇ ಕರೆದಿದ್ದಾರೆ. ಯೂರೋಪಿಯನ್ ತಳಿಗಳಲ್ಲಿ ಇಟಾಲಿಯನ್, ಉತ್ತರ ಯೂರೋಪು, ಮುಂತಾಗಿ ಕರೆಯುತ್ತಾರೆ.

ಎಲೆ ಕೋಸಿನಂತೆಯೇ, ಹೂಕೋಸು ಸಾಕಷ್ಟು ಜೀವಸತ್ವ (Vitamins) ಹಾಗು ಖನಿಜಾಂಶಗಳಿಂದ ಕೂಡಿದ್ದು, ಮುಖ್ಯವಾಗಿ ವಿಟಮಿನ್ “ಸಿ” (48.2 ಮಿಲಿ ಗ್ರಾಂ ಪ್ರತಿ 100 ಗ್ರಾಂ ತಾಜ ಕೋಸಿನಲ್ಲಿ) ಹೆಚ್ಚಾಗಿರುವುದು. ವಿಟಮಿನ್ “ಬಿ”ಯಲ್ಲಿರುವ ಒಟ್ಟು ಎಂಟು ಬಗೆಯಲ್ಲಿ ಆರು ಬಗೆಯ ವಿಟಮಿನ್ ಬಿಗಳು (B1, B2,B3,B5,B6 & B9) ಹೂಕೋಸು ಸೇವಿಸುವುದರಿಂದ ದೊರೆಯುತ್ತದೆ. ಕ್ಯಾಲ್ಸಿಯಂ, ಪೊಟ್ಯಾಸಿಯಂ, ಸೋಡಿಯಂ, ರಂಜಕ, ಗಂಧಕ ಮುಂತಾದ ಖನಿಜಾಂಶಗಳೂ ಸಾಕಷ್ಟಿವೆ.
ಮೂಲತಃ ಎಲ್ಲಾ ಕೋಸಿನ ಬೆಳೆಗಳೂ ಶೀತವಲಯದವು. ಕೋಸಿನ ಕೃಷಿಯು ಭಾರತೀಯ ನೆಲ ಮೂಲದಲ್ಲ. ಉಷ್ಣವಲಯಕ್ಕೆ ಇದನ್ನು ಒಗ್ಗಿಸಲು ವಸಾಹತುಕಾರಣದಿಂದಾಗಿ ಬಂದ ಐರೋಪ್ಯರು ಮೊದಲು ಯತ್ನಿಸಿದರು. ಉಷ್ಣವಲಯದ ನೆಲ ಹಾಗೂ ವಾತಾವರಣ ಇಂತಹ ಪ್ರಯತ್ನಗಳಿಗೆ ತುಂಬಾ ಧನಾತ್ಮಕವಾಗಿಯೇ ಬೆಂಬಲಿಸಿದ್ದು ಅನೇಕ ಬೆಳೆಗಳಲ್ಲಿ ಗೊತ್ತಿರುವ ಸಂಗತಿ. ಆದರೆ ಉಷ್ಣವಲಯದಲ್ಲಿ ವಾತಾವರಣದಲ್ಲಿ ಹೆಚ್ಚು ಸಮಯ 28೦ -30೦ ಸೆಲ್ಸಿಯನ್ ಅನ್ನು ದಾಟುವುದರಿಂದ ಇಲ್ಲಿನ ಕೋಸುಗಳಿಗೆ ಕೀಟಗಳ ಹಾವಳಿ ಹೆಚ್ಚು. ಸಾಲದಕ್ಕೆ ಕೋಸುಗಳಲ್ಲಿ ಹೆಚ್ಚು ಕೀಟನಾಶಕಗಳ ಬಳಕೆಯಾಗುತ್ತದೆ ಎಂಬ ಕಾರಣದಿಂದ ತಿನ್ನುವುದಕ್ಕೆ ಯೋಗ್ಯವಲ್ಲ ಎಂದು ಆಪಾದಿಸುತ್ತಲೇ ಇದ್ದೇವೆ. ಆದರೆ ವರ್ಷಪೂರ್ತಿ ಗೋಭಿ ಮಂಚೂರಿಯನ್ನು ಬೇಡುವುದನ್ನು ನಿಲ್ಲಿಸಿಲ್ಲ ಅಥವಾ ಕಡಿಮೆ ಮಾಡುವಲ್ಲಿಯೂ ಸೋತಿದ್ದೇವೆ. ಇದಕ್ಕೆಂದು ವರ್ಷಪೂರ್ತಿ ಬೆಳೆಯನ್ನು ಬೆಳೆಯುವ ಹಂಬಲದಿಂದ, ಕೀಟಗಳ ನಿರ್ವಹಣೆ ಮಾಡುವುದು ಅನಿವಾರ್ಯವೂ ಆಗಿದೆ. ತಂಪಾದ ವಾತಾವರಣದ ಕೇವಲ ಚಳಿಗಾಲದಲ್ಲಿ ಮಾತ್ರವೇ ಬೆಳೆದಾಗ ಇದರಲ್ಲಿ ಕೀಟಗಳ ಹಾವಳಿಯು ಕಡಿಮೆ. ಉಷ್ಣತೆ ಹೆಚ್ಚಿದಂತೆ ಕೀಟಗಳು ಹೆಚ್ಚಾಗಿ ಎಲೆಗಳನ್ನು, ಕೋಸಿನ ಗಡ್ಡೆಗಳನ್ನು ವಿವಿಧ ರೀತಿಯ ಕೀಟಗಳು ದಾಳಿ ಇಡುತ್ತವೆ. ಇವುಗಳ ಹಾನಿಯನ್ನು ನಿಯಂತ್ರಿಸಲು, ರೈತರು ರಾಸಾಯನಿಕ ಕೀಟನಾಶಕಗಳನ್ನು ಸೂಚಿಸಿರುವ ಪ್ರಮಾಣಕ್ಕಿಂತ ಹೆಚ್ಚಾಗಿ ಉಪಯೋಗಿಸುವುದುಂಟು. ಆರೋಗ್ಯದ ದೃಷ್ಟಿಯಿಂದ ಜೈವಿಕ ಕೀಟನಾಶಕಗಳ ಬಳಕೆ, ಅಕಾಲದಲ್ಲಿ (ತಂಪಾದ ವಾತಾವರಣವಲ್ಲದ) ಬೆಳೆಯದಿರುವುದು ಉತ್ತಮ. ಆದರೆ ಕೋಸುಗಳಲ್ಲಿನ ಆಹಾರಾಂಶಗಳ ಹೆಚ್ಚುಗಾರಿಕೆಯಿಂದ ಮುಖ್ಯವಾಗಿ ವಿಟಮಿನ್ನುಗಳ ಹಾಗೂ ಕಡಿಮೆ ಕ್ಯಾಲೊರಿ ಕೊಟ್ಟು ಹೊಟ್ಟೆ ತುಂಬಿಸುವ ಗುಣದಿಂದಾಗಿ ಬಳಸುವುದು ಅನಿವಾರ್ಯ. ಆದ್ದರಿಂದ ತಾರಸಿಗಳಲ್ಲೋ, ಮನೆಯ ಕೈ ತೋಟಗಳಲ್ಲೋ ಬೆಳೆಯುವುದರಿಂದ ಸುಲಭವಾಗಿ ಕೀಟನಾಶಕಗಳಿಂದ ಮುಕ್ತಿ ಕೊಟ್ಟು ಕೊಯಿಲು ಮಾಡಬಹುದು. ಗೋಬಿ ಮಂಚೂರಿಯನ್ ಆಗಲಿ ಕ್ಯಾಬೇಜು ತುರಿಯನ್ನಾಗಲಿ, ಕ್ಯಾಬೇಜು ಪಕೋಡ-ವಡೆ ಇತ್ಯಾದಿಯನ್ನು ಬಿಡುವುದಾದರೂ ಹೇಗೆ?

ವರ್ಷದ ಎಲ್ಲಾ ಕಾಲದಲ್ಲೂ ತಿನ್ನುವ ಆಸೆಯನ್ನು ನಮ್ಮ ನಾಲಿಗೆಯ ಮೇಲಿಟ್ಟಿರುವ ʼಗೋಬಿ ಮಂಚೂರಿಯನ್ʼ 1975 ರಿಂದ ಇತ್ತೀಚೆಗಿನ ವಿಚಾರ. ಈ ಗೋಭಿಯು ಹುಟ್ಟಿದ್ದು ಚೈನೀ ಮೂಲದ ಕೊಲ್ಕತ್ತಾ ನಿವಾಸಿಯಿಂದ. ನೆಲ್ಸನ್ ವಾಂಗ್ (Nelson Wang) ಎಂಬ ಓರ್ವ ಬಾಣಸಿಗರಿಂದ. ಭಾರತೀಯ ವಲಸೆಗಾರ ಚೀನಾ ದಂಪತಿಗಳ ಪುತ್ರ. ಹುಟ್ಟಿದ ಕೆಲವೇ ದಿನಗಳಲ್ಲಿ ತಂದೆಯನ್ನು ಕಳೆದುಕೊಂಡ ವಾಂಗ್ ಮುಂದೆ ಓರ್ವ ಅಡುಗೆ ಕಲೆಯನ್ನು ಬಲ್ಲವರ ಸಾಕು ಮಗನಾಗಿ ಬೆಳೆದರು. ತಮ್ಮ ಜೀವನೋಪಾಯಕ್ಕೆ 1974 ರಲ್ಲಿ ಮುಂಬಯಿಗೆ ಬಂದ ವಾಂಗ್ ಅವರು ಮುಂಬಯಿಯ ಕ್ರಿಕೆಟ್ ಕ್ಲಬ್‌ನಲ್ಲಿ ಅಡುಗೆಯ ಕೆಲಸ ನಿರ್ವಹಿಸುತ್ತಿದ್ದಾಗ ಅಪರಿಚಿತ ಅತಿಥಿಯೊಬ್ಬರು ಏನಾದರೂ ವಿಶಿಷ್ಟವಾದ ಖಾಧ್ಯವನ್ನು ಬೇಡಿದಾಗ ಚೀನಾ – ಮತ್ತು – ಭಾರತೀಯ ಹೈಬ್ರಿಡ್ ಪದ್ಧತಿಯಗಿ ಹುಟ್ಟಿದ್ದು ಈಗಿನ “ಗೋಭಿ ಮಂಚೂರಿಯನ್” ಮೂಲ ಚೀನಾದ ಮಂಚೂರಿಯನ್ನರಂತೆ ಗರಮ್ ಮಸಾಲ ಇತ್ಯಾದಿಗಳನ್ನು ಬಳಸದೆ ಬೆಳ್ಳುಳ್ಳಿ, ಸಾಸ್, ವಿನೆಗರ್ ಬಳಸಿ ಮಾಡಿದವರು ವಾಂಗ್. ಈಗ ವಾಂಗ್ ಮುಂಬಯಿ, ಅಲ್ಲದೆ ಅನೇಕ ನಗರಗಳಲ್ಲಿ ಚೀನಾ-ಗಾರ್ಡನ್ (https://chinagarden.in/) ಎಂಬ ಹೋಟೆಲ್‌ಗಳನ್ನು ನಡೆಸುತ್ತಿದ್ದಾರೆ.

ಹೂಕೋಸು ಕ್ಯಾಬೇಜಿನಂತೆಯೇ ಗಂಧಕವನ್ನು ಹೊಂದಿದ ರಸಾಯನಿಕ ಗ್ಲೂಕೊಸಿನೊಲೇಟ್ (Glucosinolates) ಗಳನ್ನು ಹೊಂದಿರುವ ಹಾಗಾಗಿ ರುಚಿಯಲ್ಲಿ ತುಸು ಭಿನ್ನವಾದ ತರಕಾರಿ. ಆದರೆ ಕ್ಯಾಬೇಜಿನ ಹಾಗೇ ಕಡಿಮೆ ಕ್ಯಾಲೋರಿ ನೀಡುವ ತಿನಿಸುಗಳ ತಯಾರಿಯಲ್ಲಿ ಅದರಲ್ಲೂ ಇತ್ತೀಚೆಗೆ ಜನಪ್ರಿಯವಾಗಿರುವ “ಹೂಕೋಸಿನ ಅನ್ನ-Cauliflower Rice“ ಹೆಚ್ಚು ಪ್ರಚಾರಕ್ಕೆ ಬಂದಿದೆ. ಹೂಕೋಸನ್ನು ಎಳೆಯ, ಮೃದುವಾದ ತರಕಾರಿಯಾಗಿ, ಬಳಸಲು ಹಸಿಯಾಗಿಯೇ, ಅರೆಬೆಂದ ಬಗೆಯಲ್ಲೋ (ತಾಳಿಸುವುದು – Sautéing), ಪೂರ್ಣ ಬೇಯಿಸಿಯೋ, ಹುರಿದು ಪಲ್ಯ ಮಾಡಿಯೋ ಅಥವಾ ಕರಿದು ಒಂದಷ್ಟು ಮಸಾಲೆ ಉದುರಿಸಿಯೋ ಬಳಸುತ್ತಾರೆ. ಇವೆಲ್ಲದರ ಜೊತೆಗೆ ಇದೀಗ ಹೂಕೋಸಿನ ಅನ್ನ ಮಧುಮೇಹಿಗಳಿಗೆ ಸಲಹೆ ಮಾಡಿ ಪ್ರೊತ್ಸಾಹಿಸಲಾಗುತ್ತಿದೆ. ಆದರೆ ಈಗಾಗಲೇ ಪ್ರಸ್ತಾಪಿಸಿದಂತೆ ರಸಯಾನಿಕಗಳಿಂದ ಮುಕ್ತಿಯಾಗಿ ಅಥವಾ ಕಡಿಮೆ ಬಳಕೆಯನ್ನು ನೋಡಿಕೊಳ್ಳುವುದು ಅನಿವಾರ್ಯ.

ಹೂಕೋಸನ್ನು ಹೋಲುವ ಬಣ್ಣದಲ್ಲಿ ಭಿನ್ನವಾದ ತಳಿ ಹಸಿರು ಬಣ್ಣದ ಬ್ರಾಕೊಲಿ (Broccoli). ಈ ಬ್ರಾಕೊಲಿಯು ಇದೇ ಪ್ರಭೇದವಾದರೂ, ತಳಿ ಇಟಾಲಿಕ ಎಂದು ಹೆಸರಿಸಲಾಗಿದೆ. (Broccoli Brassica oleracea var. italica). ಬ್ರಾಕೊಲಿಯು ಹೂಕೋಸಿನಂತೆಯೇ ಹೋಲಿಕೆಯಿದ್ದು ದಟ್ಟ ಹಸಿರಿನ ಬಣ್ಣದ ಗಡ್ಡೆ. ರುಚಿ ಹಾಗೂ ಟೆಕ್‌ಶ್ಚರ್ (Texture) ನಲ್ಲಿ ತುಸು ಭಿನ್ನವಾಗಿದ್ದು ಒಂದೇ ಆಕಾರದ ತರಕಾರಿಗಳು.
ಹೂಕೋಸು ತನ್ನ ವಿಭಿನ್ನ ವಿಕಾಸದಿಂದ ಆಕಾರ ಮತ್ತದರ ಜೋಡಣಾ ರಚನೆ, ಇನ್ನೂ ಮುಂದುವರೆದು ಅದರ ರುಚಿಯಾದ ಖಾಧ್ಯಗಳಿಂದ, ತನ್ನೊಳಗೂ ವಿವಿಧತೆಯ ಬಣ್ಣಗಳಿಂದ ನಾಲಿಗೆಯನ್ನಷ್ಟೇ ಅಲ್ಲದೆ ನಮ್ಮ ಮನಸ್ಸನ್ನೂ ಆವರಿಸಿ, ಹೊಟ್ಟೆ ತುಂಬಿಸುವ ಜೊತೆಗೆ ಆಲೋಚನೆಗೂ ಹಚ್ಚಿದೆ. ಹದವಾಗಿ ಈರುಳ್ಳಿಯ ಎಲೆ, ಬೆಳ್ಳುಳ್ಳಿಯ ಘಮ – ಜೊತೆಗೆ ಶುಂಠಿಯ ಪರಿಮಳ ಹಾಗೂ ವಿವಿಧ ಸಾಸ್‌ಗಳನ್ನು ಸೇರಿಸಿಕೊಂಡು ಅಥವಾ ಮತ್ತಾವುದೋ ಬಗೆಯಲ್ಲಿ ನಮ್ಮೊಡನೆ ಇರುವುದೇ ಸಂತಸದ ಸಂಗತಿ. ಅದನ್ನು ಆರೋಗ್ಯಕ್ಕೆ ಒಗ್ಗುವಂತೆ ಬೆಳೆದು ಕೊಯಿಲಾಗಿಸುವ ಬಗೆಯನ್ನಷ್ಟೇ ನಾವು-ನೀವೆಲ್ಲರೂ ಬಯಸುವುದು.
ನಮಸ್ಕಾರ
ಡಾ. ಟಿ.. ಎಸ್. ಚನ್ನೇಶ್ ಮತ್ತು ಡಾ. ಭುವನೇಶ್ವರಿ, ಎಸ್. (ವಿಜ್ಞಾನಿ, ಇಂಡಿಯನ್ ಇನ್ಸ್‌ಸ್ಟಿಟ್ಯೂಟ್ ಆಫ್ ವೆಜಿಟಬಲ್ ರೀಸರ್ಚ್, ವಾರಣಾಸಿ)
ಹೆಚ್ಚಿನ ಓದಿಗೆ:
Azpeitia et al., 2021. Cauliflower fractal forms arise from perturbations of floral gene networks. science 373 Issue 6551 pp :192-197. https://www.science.org/doi/10.1126/science.abg5999
Grout B. W. W. 1988. Cauliflower (Brassica oleracea var. botrytis L.) In. Biotechnology in Agriculture and Forestry, Vol. Crops II Ed. Y. P. S. Bajaj Springer-Verlag Berlin Heidelberg 1988
Kim, Sang-Hoon (2004). “Fractal Structure of a White Cauliflower” . Journal of the Korean Physical Society. 46 (2): 474–477.