ಅಲೆಕ್ಸಾಂಡರ್ ವಾನ್ ಹುಂಬೊಲ್ಟ್… ಜೀವಿಜಗತ್ತಿನ ವಿವರಗಳನ್ನು ಭೌಗೋಳಿಕ ಹರಹಿನ ಮೂಲ ಸಂಗತಿಗಳಿಂದ ವಿಜ್ಞಾನಲೋಕವನ್ನು ಶ್ರೀಮಂತಗೊಳಿಸಿದವರು. ತಮ್ಮ 30 ರ ಹರೆಯದಲ್ಲಿಯೇ, ಐದು ವರ್ಷಗಳ ಕಾಲ ದಕ್ಷಿಣ ಅಮೆರಿಕಾದ ಕಾಡುಗಳಲ್ಲಿ ಓರ್ವ ಗೆಳೆಯನೊಡನೆ ಅಲೆದಾಡಿ ಜೀವಿಸಂಕುಲಗಳ ವಿವಿಧತೆಯ ಅರಿವಿಗೆ ವೈಧಾನಿಕತೆಯನ್ನು ಕಟ್ಟಿದವರು. ವಯಸ್ಸು 60 ತುಂಬಿದಾಗಲೂ ರಷಿಯಾದ ಉದ್ದಗಲಕ್ಕೂ 15,000 ಕಿ. ಮೀಗೂ ಹೆಚ್ಚು ದೂರ ನೆಲದಲ್ಲಿ ಅಡ್ಡಾಡಿ ಜೀವಿ ಸಮುದಾಯವನ್ನು ಅರಿತ ಮಹಾನ್ ನಿಸರ್ಗ ಪ್ರೇಮಿ. ಬ್ರಿಟೀಶ್ ಆಡಳಿತ ನಿರಾಕರಣದಿಂದಾಗಿ ಭಾರತದ ಹಿಮಾಲಯ, ಪಶ್ಚಿಮಘಟ್ಟಗಳಲ್ಲೂ ಅಡ್ಡಾಡುವ ಆಸೆಯನ್ನು ಬಿಟ್ಟು ವಂಚಿತರಾದವರು. ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಅಲೆದಾಡುತ್ತಾ ಜರ್ಮನಿಯ ಖ್ಯಾತ ಲೇಖಕ ಗೋಥೆ (ಗಾಯಟೆ), ಫ್ರಾನ್ಸಿನ ನೆಪೊಲಿಯನ್, ಅಮೆರಿಕದ ಮೂರನೆಯ ಅಧ್ಯಕ್ಷ ಥಾಮಸ್ ಜಫರ್‌ಸನ್, ಅಲ್ಲದೆ ಆ ಕಾಲದ ಹಲವು ಸಂಶೋಧಕರೊಡನೆಯೂ ನಿರಂತರ ಸಂಪರ್ಕದಲ್ಲಿದ್ದು 50,000ಕ್ಕೂ ಹೆಚ್ಚು ಪತ್ರಗಳನ್ನು ಬರೆದು ಮಾಹಿತಿಗಳನ್ನು ದಾಖಲಿಸಿ ಹಂಚಿಕೊಂಡವರು.
ಅಷ್ಟೇ ಅಲ್ಲ. ಇಂದಿನ ಹಲವಾರು ವೈಜ್ಞಾನಿಕ ಸಾಧ್ಯತೆಗಳಿಗೆ ಮೂಲ ಸರಕನ್ನು ಒದಗಿಸಿದವರು ಹುಂಬೊಲ್ಟ್. ವಿಜ್ಞಾನಿಗಳಾದ ಚಾರ್ಲ್ಸ್ ಡಾರ್ವಿನ್ ಮತ್ತು ಜಾನ್ ಮೈರ್, ಅಲ್ಲದೆ ಬರಹಗಾರರಾದ ಹೆನ್ರಿ ಡೆವಿಡ್ ತೋರೊ ಅವರಿಗೆಲ್ಲಾ ಸ್ಪೂರ್ತಿಯನ್ನು ಕೊಟ್ಟವರು. ಅದೆನು ಬಿಡಿ ನೆಪೊಲಿಯನ್ ಬೊನಾಪಾರ್ಟಿಗೆ ಖ್ಯಾತಿಯಲ್ಲಿ ಪೈಪೊಟಿಕೊಟ್ಟು ಅಸೂಯೆಯನ್ನೂ ತಂದವರು. ಅಮೆರಿಕಾವನ್ನು ಕಂಡುಹಿಡಿದವರೆಂದು ಸಾಮಾನ್ಯವಾಗಿ ಕೊಲಂಬಸ್‌ನನ್ನು ಕರೆದರೂ, ನಿಜವಾಗಿಯೂ ವೈಜ್ಞಾನಿಕ ಹಿನ್ನೆಲೆಯಿಂದ ಅಮೆರಿಕಾವನ್ನು ಕಂಡುಹಿಡಿದವರೆಂದೇ ಖ್ಯಾತರಾದ ಅಲೆಕ್ಸಾಂಡರ್ ವಾನ್ ಹುಂಬೊಲ್ಟ್ ಅವರ ಬಗ್ಗೆ ನೂರಾರು ಪದಗಳಲ್ಲಿ ಬರೆಯುವುದಾದರೂ ಹೇಗೆ? ಇಷ್ಟಾದರೂ ಹುಂಬೊಲ್ಟ್ ಬಗ್ಗೆ ಅವರ ಹೆಸರಿನ ಫೆಲೋಷಿಪ್ ಇರುದನ್ನು ಬಿಟ್ಟರೆ ಬೇರಾವ ಸಂಗತಿಯೂ ಜನಮಾನಸದ ತಿಳಿವಳಿಕೆಯಲ್ಲಿ ಇಲ್ಲ. ಬಹು ದೊಡ್ಡ ಅಚ್ಚರಿ ಎಂದರೆ, ಹುಂಬೊಲ್ಟ್ ಅವರ ಹೆಸರನ್ನು ಹೊತ್ತ ನೆಲ, ಜಲ, ಕಾಡು, ಪಾರ್ಕು, ಸಸ್ಯ, ಪ್ರಾಣಿ-ಪಕ್ಷಿಗಳು ಮತ್ತಾರ ಹೆಸರಲ್ಲೂ ಇಲ್ಲ. ಆದರೂ ವಿಜ್ಞಾನದಲ್ಲಿ ಅವರ ಹೆಸರು ಪ್ರಸ್ತಾಪವಾಗುವುದೇ ಇಲ್ಲ.
ಯಾರಿವರು? ಅಷ್ಟೊಂದು ಖ್ಯಾತವಂತರಾದರೂ ಸಾಮಾನ್ಯ ತಿಳಿವಿನಲ್ಲೇಕೆ ಇಲ್ಲ? ನಿಜ ಹೇಳುವುದಾದರೆ ಇಂದಿನ ಜಿಪಿಎಸ್ ಸಾಧ್ಯತೆಗಳನ್ನು ವೈಯಕ್ತಿಕ ಭೇಟಿ ಮತ್ತು ಆಲೋಚನೆಗಳ ತಿಳಿವಳಿಕೆಯಿಂದ ವಿವರಿಸಿದ್ದ ಅಪ್ರತಿಮ ವಿಜ್ಞಾನಿ. ದಕ್ಷಿಣ ಅಮೆರಿಕದ ಪಶ್ಚಿಮ ತೀರದಲ್ಲಿ ಪೆರುವಿನ ಹತ್ತಿರದ ಸಾಗರದ ಪ್ರವಾಹವು ಹುಂಬೊಲ್ಟ್ ಕರೆಂಟ್, ಆದರೆ ಕೆಲವು ಪೆಂಗ್ವಿನ್‌ಗಳು ಹುಂಬೊಲ್ಟ್ ಪೆಂಗ್ವಿನ್‌ಗಳಾಗಿವೆ. ಕ್ಯಾಲಿಫೋರ್ನಿಯಾದ ಒಂದು ಲಿಲ್ಲಿ ಹುಂಬೊಲ್ಟ್ ಲಿಲ್ಲಿಯಾಗಿದೆ. ಲ್ಯಾಟಿನ್ ಅಮೆರಿಕದಲ್ಲಿ ಅನೇಕ ಪರ್ವತಗಳು, ಪಾರ್ಕುಗಳು ಹುಂಬೊಲ್ಟ್‌ರ ಹೆಸರಿನಿಂದ ಕರೆಯಲಾಗುತ್ತಿದೆ. ಚೀನಾದಲ್ಲೂ, ದಕ್ಷಿಣ ಆಫ್ರಿಕಾದಲ್ಲೂ ಹಾಗೂ ನ್ಯುಜಿಲೆಂಡಿನಲ್ಲೂ ಕೆಲವು ಪರ್ವತ ಶ್ರೇಣಿಗಳು ಹುಂಬೊಲ್ಟರ ಹೆಸರನ್ನು ಹೊತ್ತಿವೆ. ಉತ್ತರ ಅಮೆರಿಕದ 14 ಪಟ್ಟಣಗಳು, ನಾಲ್ಕು ಕೌಂಟಿಗಳು ಹುಂಬೊಲ್ಟ್‌ರ ಹೆಸರಿಂದಲೇ ಗುರುತಿಸಲಾಗುತ್ತಿದೆ. ಅಮೆರಿಕದ ಕ್ಯಾಲಿಫೋರ್ನಿಯಾದ ಒಂದು ವಿಶ್ವವಿದ್ಯಾಲಯ ಹುಂಬೊಲ್ಟ್ ಸ್ಟೇಟ್ ವಿಶ್ವವಿದ್ಯಾಲಯವಾಗಿದೆ. (http://www.humboldt.edu/) ಮತ್ತು ಬರ್ಲಿನ್ ಅಲ್ಲೂ ಶಿಕ್ಷಣ ತಜ್ಞರಾದ ಅವರ ಸಹೋದರ ಸ್ಥಾಪಿಸಿದ ಹುಂಬೊಲ್ಟ್ ವಿಶ್ವವಿದ್ಯಾಲಯ (https://www.hu-berlin.de/en) ಕೂಡ ಇದೆ. ಅಲೆಕ್ಸಾಂಡರ್ ಹುಂಬೊಲ್ಟ್ 1859ರ ಮೇ 6ರಂದು ಮರಣಹೊಂದಿದರೆ ಅದೇ ವರ್ಷದ ನವೆಂಬರ್ 24ರಂದು ಚಾರ್ಲ್ಸ್ ಡಾರ್ವಿನ್ನರ “Origin of Species” ಪ್ರಕಟಗೊಂಡು ಮುಂದಿನ ಜೀವಿವಿಜ್ಞಾನವನ್ನು ಕೂಡಲೇ ಆಕ್ರಮಿಸಿಕೊಂಡಿತ್ತು. ಹುಂಬೊಲ್ಟ್ ಡಾರ್ವಿನ್ನರನ್ನು ಪ್ರಭಾವಿಸಿದ್ದರೂ ಅವರ ಜೀವಿವಿಕಾಸವು ಜನಪ್ರಿಯತೆಯಲ್ಲಿ ಹುಂಬೊಲ್ಟರನ್ನು ಕ್ಷಣ ಮುಸುಕಾಗಿಸಿದ್ದು ನಿಜ.
ಇದು ಕೇವಲ ಹೆಸರಿನ ಪ್ರಶ್ನೆಯಲ್ಲ! ಅಷ್ಟೊಂದು ಖ್ಯಾತರಾಗಲು ಅಂತಹದ್ದೇನಾದರೂ ಸಾಧಿಸಿರಬೇಕಲ್ಲವೇ? ಅದೂ ವಿಜ್ಞಾನಿಯಾಗಿ ಸಾಹಿತ್ಯದಿಂದ ರಾಜಕೀಯದವರೆಗೆ, ಭೂಗೋಳದಿಂದ ತಂತ್ರಜ್ಞಾನದವರೆಗೆ, ಶಿಕ್ಷಣದಿಂದ ದಾರ್ಶನಿಕತೆಯವರೆಗೆ. ನಿಮ್ಮ ಊಹೆ ನಿಜ. ನಿಜಕ್ಕೂ ಹುಂಬೊಲ್ಟ್ ಅಂತಹಾ ಮಹಾನ್ ಸಾಧಕರೇ. ಜರ್ಮನಿಯ ಬರ್ಲಿನ್ ನಗರದಲ್ಲಿ ರಾಜಕೀಯವಾಗಿ ಪ್ರಸಿದ್ಧವಾದ ಶ್ರೀಮಂತ ಕುಟುಂಬದಲ್ಲಿ ಜನಿಸಿದ ಅಲೆಕ್ಸಾಂಡರ್ ವಾನ್ ಹುಂಬೊಲ್ಟ್ ಅವರ ಪೂರ್ಣ ಹೆಸರು ಫ್ರೆಡ್ರಿಕ್ ವಿಲ್‌ಹೆಲ್ಮ್ ಹೆನ್ರಿಕ್ ಅಲೆಕ್ಸಾಂಡರ್ ವಾನ್ ಹುಂಬೊಲ್ಟ್ (Friedrich Wilhelm Heinrich Alexander von Humboldt). ನಾನು ಮಣ್ಣು ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಗಾಗಿ ಕಲಿಯುತ್ತಿರುವಾಗ, ಸಸ್ಯಗಳ ಭೌಗೋಳಿಕ ಹಂಚಿಕೆ-ಹರಹಿನ ಆಸಕ್ತಿಯಿಂದ ಓದಿನಲ್ಲಿ ತೊಡಗಿ, ಅದನ್ನು ಮಣ್ಣು ವಿಜ್ಞಾನದ ಸಮೀಕರಣದಲ್ಲಿ ಒಂದು ಸೆಮಿನಾರ್ ಕೊಡಲು ಬಯಸಿದಾಗ ಅಲೆಕ್ಸಾಂಡರ್ ಹುಂಬೊಲ್ಟ್‌ರ ಕೇವಲ ಹೆಸರನ್ನಷ್ಟೇ ಕೇಳಿದ್ದು. ಮಣ್ಣಿನ ಅಧ್ಯಯನದಲ್ಲಿ ಭೌಗೋಳಿಕ ಪ್ರಾಸ್ತಾವಿಕತೆ (Geographic Approach in Soil Studies) ಎಂಬ ಶೀರ್ಷಿಕೆ ನನ್ನ ಸೆಮಿನಾರಿನದು. ನೀವು ನಂಬುವಿರೆಂದು ಹೇಳುತ್ತಿರುವೆ, ಈಗ ಹುಂಬೊಲ್ಟರ ಬಗ್ಗೆ ಸಸ್ಯಯಾನದ ಸಲುವಾಗ ಓದುತ್ತಿರುವಾಗ ಅಂದು ನನ್ನ ಸೆಮಿನಾರಿನ ಸಮಯದಲ್ಲಿ ಆದದ್ದು ಹಾಲು ಕುಡಿಯುವ ಹಸುಳೆಗೆ ತುಟಿಯಲ್ಲಿ ಸವರಿದ ಜೇನಿನ ಸವಿಯ ಹಿತ ಅನ್ನಿಸಿದೆ. ಅದೂ ಇದೇ ವಾರದಲ್ಲಿ ರಾಯಚೂರಿನಿಂದ ಬೆಂಗಳೂರಿನವರೆಗೂ ರಾಜ್ಯದ ನೂರಾರು ಕಿಲೊಮೀಟರ್ ಹೆದ್ದಾರಿಯ ಡ್ರೈವಿಂಗ್‌ನಲ್ಲಿ ಆಚೀಚೆಯ ವೈವಿಧ್ಯಮಯ ನೆಲವನ್ನು ಗಿಡ-ಮರಗಳ ಹಸಿರಿನ ಹಂದರದಲ್ಲಿ ಆನಂದಿಸಲು ಹೊಸತೊಂದು ಬೆರಗನ್ನು ಸೇರಿಸಿತ್ತು.
ಅಲೆಕ್ಸಾಂಡರ್ ಹುಂಬೊಲ್ಟ್ ಜರ್ಮನಿಯ ಶ್ರೀಮಂತ ಮನೆತನದಲ್ಲಿ ಎರಡನೆಯ ಮಗನಾಗಿ 1769ರ ಸೆಪ್ಟೆಂಬರ್ 14ರಂದು ಜನಿಸಿದರು. ಅವರ ಅಣ್ಣ ವಿಲ್‌ಹೆಲ್ಮ್ ವಾನ್ ಹುಂಬೊಲ್ಟ್ ಖ್ಯಾತ ಶಿಕ್ಷಣತಜ್ಞ ಹಾಗೂ ದಾರ್ಶನಿಕರಾಗಿ ರೂಪುಗೊಡರೆ ಅಲೆಕ್ಸಾಂಡರ್ ವಿಖ್ಯಾತ ವಿಜ್ಞಾನಿಯಾದರು. ಅಲೆಕ್ಸಾಂಡರ್ ಹತ್ತು ವರ್ಷ ತುಂಬುವ ವೇಳೆಗೆ ತಂದೆಯನ್ನು ಕಳೆದುಕೊಂಡು, ತಾಯಿಯ ಮಮತೆಯನ್ನೂ ವಿಶೇಷವಾಗಿ ಪಡೆಯದೆ, ತಂದೆಯ ಸಂಬಂಧಿಯ ಬಳಿ ಬೆಳೆದರು. ತಾಯಿಯ ಮರಣಾನಂತರ ದೊರೆತ ಸಾಕಷ್ಟು ಶ್ರೀಮಂತಿಕೆಯ ಹಣವನ್ನು ಅಲೆಕ್ಸಾಂಡರ್ ತಮ್ಮ ಹವ್ಯಾಸ ಮತ್ತು ಆಸಕ್ತಿಯ ಜಗತ್ತಿನ ಸುತ್ತಾಟ ಮತು ಜೀವ-ಭೂಗೋಳದ ಅಧ್ಯಯನದಲ್ಲಿ ವಿವನಿಯೋಗಿಸಿದರು. ಮೂಲತಃ ಭೂಮಿವಿಜ್ಞಾನದ ವಿದ್ಯಾರ್ಥಿಯಾಗಿ ಕಲಿತ ಅಲೆಕ್ಸಾಂಡರ್ ಗಣಿಯನ್ನು ವೈಜ್ಞಾನಿಕವಾಗಿ ನಿರ್ವಹಿಸುವ ತಂತ್ರಜ್ಞಾನಗಳನ್ನು ಅಭ್ಯಾಸಿಸಿ ಅಳವಡಿಸಿದವರು. ಅಷ್ಟೇ ಅಲ್ಲ ಮುಂದೆ ದಕ್ಷಿಣ ಅಮೆರಿಕಾದ ಕಾಡು-ಮೇಡುಗಳ ಅಲೆದಾಟದ ಅನುಭವ ಮತ್ತು ಬ್ರೆಜಿಲ್‌ನ ಗಣಿ ಗಳ ತಿಳಿವಳಿಕೆಗಳ ಆಧಾರದಿಂದ ಕೇವಲ ಉಷ್ಣವಲಯಗಳಲ್ಲಿ ಮಾತ್ರವೇ ದೊರಕುವ ವಜ್ರಗಳು ರಷಿಯಾದಲ್ಲೂ ಸಿಗುವ ಬಗ್ಗೆ ನಿಖರವಾಗಿ ಊಹಿಸಿದ್ದರು. ರಷಿಯಾದಲ್ಲಿ ಮೊಟ್ಟ ಮೊದಲ ವಜ್ರದ ನಿಕ್ಷೇಪ ಸಿಕ್ಕದ್ದೂ ಉಷ್ಣವಲಯದ ಆಚೆ ಸಿಕ್ಕ ಹಾಗೂ ಹುಂಬೊಲ್ಟ್‌ರ ಊಹೆಯಿಂದಲೇ ಸಾಧ್ಯವಾದದ್ದು. ಭೂಗೋಳವನ್ನು ಅಷ್ಟು ನಿಖರವಾಗಿ ಗ್ರಹಿಸಬಲ್ಲ ಜಾಣತನವನ್ನು ಅಲೆಕ್ಸಾಂಡರ್ ಹೊಂದಿದ್ದಕ್ಕೆ ಇದೂ ಒಂದು ವಿಶೇಷ ದಾಖಲೆಯೇ. ಜರ್ಮನಿಯ ಬೆಳ್ಳಿಯ ಗಣಿಗಳ ಸುಧಾರಣೆಯಲ್ಲೂ ಮಹತ್ವದ ವೈಜ್ಞಾನಿಕ ಬದಲಾವಣೆಗೆ ಕಾರಣರಾದವರು ಅಲೆಕ್ಸಾಂಡರ್ ವಾನ್ ಹುಂಬೊಲ್ಟ್.
ಅಲೆಕ್ಸಾಂಡರ್ ಹುಂಬೊಲ್ಟ್‌ರ ಕೊಡುಗೆಯು ಇರುವುದು, ಅವರ ಅತ್ಯಂತ ಆಸಕ್ತಿಯ ಅಲೆದಾಟದ ಹುಡುಕಾಟಗಳಲ್ಲಿ ಮತ್ತು ಅವುಗಳ ದಾಖಲೆ ಹಾಗೂ ಅದರಿಂದಾದ ವೈವಿದ್ಯಮಯ ವೈಜ್ಞಾನಿಕ ತಿಳಿವಳಿಕೆಯಲ್ಲಿ. ಮೂಲತಃ ಗಣಿ ನಿರ್ವಹಣಾ ವಿಜ್ಞಾನಿಯಾಗಿದ್ದು ಅತ್ಯಂತ ಪ್ರಯೋಗಶೀಲರಾಗಿದ್ದ ಅಲೆಕ್ಸಾಂಡರ್ ನೆಲದ ಬೆರಗಿನ ಬಗೆಗೆ ತೀವ್ರ ಆಸಕ್ತಿಯನ್ನು ಹೊಂದಿದವರಾಗಿದ್ದರು. ವಿವಿಧ ನೆಲೆಗಳ ವೈವಿಧ್ಯಮಯ ಜೀವಿರಾಶಿಯ ಬೆರುಗು ಅವರನ್ನು ವಿಶೇಷವಾಗಿ ಆಕರ್ಷಿಸಿತ್ತು. 1796ರವರೆಗೂ ಗಣಿಗಾರಿಕೆಯ ಆಸಕ್ತಿಯಲ್ಲೇ ಕಳೆದರೂ ಅನಂತರದ ದೇಶ-ವಿದೇಶಗಳ ಸುತ್ತಾಟ ಅವರನ್ನು ಫ್ರಾನ್ಸ್, ಸ್ಪೈಯಿನ್ ಮುಂತಾದ ಸಂಪರ್ಕವನ್ನು ತಂದಿತು. ಅವರು ಹುಟ್ಟಿದ ವರ್ಷವೇ ಹುಟ್ಟಿದ್ದ ನೆಪೊಲಿಯನ್ ಕೂಡ ಇವರ ಗೆಳೆಯನಂತೆ. (ಮುಂದೆ ಅಲೆಕ್ಸಾಂಡರ್ ಅವರ ವೈಜ್ಞಾನಿಕ ಖ್ಯಾತಿಯಿಂದ ನೆಪೊಲಿಯನ್ ಅಸೂಯೆಗೊಂಡನಂತೆ) ಆ ಸಮಯದಲ್ಲಿ ಸ್ಪೈಯಿನಿನ ಪ್ರಧಾನಿಯ ಅನಿರೀಕ್ಷಿತ ಗೆಳತನ ಅವರನ್ನು ಸ್ಪೈಯಿನಿನ ವಸಹತುವಾಗಿದ್ದ ದಕ್ಷಿಣ ಅಮೆರಿಕದತ್ತ ಸೆಳೆಯಿತು. ಆಗ ಪರಿಚಯವಾದ ಎಮಿ ಬೊನ್‌ಪ್ಲಾಂಡ್ (Aime Bonpland) ಎಂಬ ಫ್ರೆಂಚ್ ಸಸ್ಯವಿಜ್ಞಾನಿಯ ಜೊತೆಗೂಡಿ ಕಾಡು-ಮೇಡಿನ ಅಲೆದಾಟದ ಹುರುಪು ಬೆಳೆಯುತ್ತದೆ. ಸ್ಪೈಯಿನಿನ ಆಡಳಿತದ ನೆರವೂ ಸಿಕ್ಕು 1799ರಲ್ಲಿ ಅವರ ಯಾನವು ಆರಂಭವಾಗುತ್ತದೆ.
ನೌಕೆಯಿಂದ ಆರಂಭವಾದ ಹುಂಬೊಲ್ಟ್‌ರ ಯಾನ ಅದೇ ವರ್ಷ ನವೆಂಬರ್ 11-12ರಂದು ಟನ್‌ರಿಫ್ (Tenerife) ಎಂಬ ಸ್ಪೈಯಿನಿನ ದ್ವೀಪದಲ್ಲಿ ತಂಗಿದ್ದಾಗ ಅವರು ಕಂಡು ದಾಖಲಿಸಿದ ಉಲ್ಕಾಪಾತದ ಸಂಗತಿಯು ಕಾಲವನ್ನು ಅವಲಂಬಿಸಿದ ವಾತಾವರಣದ ವಿಚಾರಗಳ ಆಧುನಿಕ ಮಾಹಿತಿಯೆಂದು ಪ್ರಸಿದ್ಧವಾಯಿತು. ಆರಂಭದಲ್ಲಿಯೇ ಮಹತ್ವದ ವಿಷಯವನ್ನು ದಾಖಲಿಸಿದ್ದಲ್ಲದೆ 1800ರ ಆರಂಭವನ್ನು ದಕ್ಷಿಣ ಅಮೆರಿಕದ ಅತ್ಯಂತ ಉದ್ದವಾದ ನದಿಯಾದ ಒರಿನಾಕೊ (Orinoco)ದ ಹರಿವಿನಲ್ಲಿ ಮತ್ತು ಅದರ ತೀರದ ಆಸುಪಾಸಿನ ನೆಲದ ವೈವಿಧ್ಯತೆಯನ್ನು ಅರಿಯುವ ಸಾಹಸವನ್ನು ಮಾಡುತ್ತಾರೆ. ಆಗ ನಾಲ್ಕು ತಿಂಗಳಲ್ಲಿ ಸುಮಾರು 2700 ಕಿಮೀಅಷ್ಟು ಅಗಲದ ಹರಹಿನ ನೆಲದ ಅಲೆದಾಟ ಮಾಡಿ, ಅಲ್ಲಿನ ಜೀವಿಸಂಕುಲದ ಬಗೆಗೆ ಒರಿನಾಕೊ ನದಿಯ ಹರಿವಿನ ಸಂಬಂಧದಲ್ಲಿ ಇರುವ ಮಹತ್ವದ ಸಂಗತಿಯನ್ನು ದಾಖಲಿಸುತ್ತಾರೆ. ಅಮೆಜಾನ್ ಮತ್ತು ಒರಿನಾಕೊ ನದಿಯ ಹರಿವಿನ ವ್ಯವಸ್ಥೆಯು ಆ ನೆಲದ ಮೇಲ್ಮೈಯ ಇಳಿಜಾರಿನ ಜೀವಿಸಮುದಾಯದ ಸಂಬಂಧವನ್ನು ನೇರವಾಗಿ ಹೊಂದಿರುವ ಭೌಗೋಳಿಕ ಸಮೀಕರಣವನ್ನೂ ಪ್ರತಿಪಾದಿಸುತ್ತಾರೆ. ಅಮೆಜಾನ್ ಮಳೆಯ ಕಾಡುಗಳ ಭೌಗೋಳಿಕ ಹರಹಿನ ವಿವಿಧತೆಯ ಸಂಕೀರ್ಣತೆಯ ಭವ್ಯತೆಯನ್ನು ಅರಸುವ ಪ್ರಯತ್ನದಲ್ಲಿ ಯಶಸ್ವಿಗಳಾಗುತ್ತಾರೆ. ಮುಂದೆ 1800ರ ನವೆಂಬರ್‌ನಲ್ಲಿ ಕ್ಯೂಬಾ ದ್ವೀಪಕ್ಕೂ ಭೇಟಿಯಿತ್ತು 1801ರ ವೇಳೆಗೆ ಮತ್ತೆ ದಕ್ಷಿಣ ಅಮೆರಿಕಾಕ್ಕೆ ಹಿಂದಿರುಗುತ್ತಾರೆ. ನಂತರದ ವರ್ಷಗಳ ಕಾಲ ತುಂಬಾ ದುರ್ಗಮವಾದ ಹಾದಿಯನ್ನು ಅರಸಿಕೊಂಡು ಕೊಲಂಬಿಯಾದಿಂದ ಪೆರುವಿಗೆ ಬರುತ್ತಾರೆ. ಇದೊಂದು ಕ್ಲಿಷ್ಟಕರವಾದ ಮಾರ್ಗವಾಗಿದ್ದು ದಕ್ಷಿಣ ಅಮೆರಿಕಾದ ಆವಿಷ್ಕಾರದ ಯಾನಗಳಲ್ಲಿ ಅತ್ಯಂತ ಮಹತ್ವದ್ದಾಗಿದೆ. ಆಗ ಅವರು ಆ ಕಾಲಕ್ಕೆ ಅತ್ಯಂತ ಎತ್ತರವಾದ ಪ್ರದೇಶವನ್ನು ತಲುಪಿದ್ದು ವಿಶೇಷವಾದದ್ದು. ಚಿಂಬೊರಾಜೊ ಪರ್ವತವನ್ನು ಹತ್ತಲು ಅವರು ಏರಿದ ಎತ್ತರ 18,893 ಅಡಿಗಳು.
ಇಷ್ಟೆಲ್ಲಾ ಕಷ್ಟವಾದ ಪರ್ಯಟನೆಗಳಲ್ಲೂ ಹುಂಬೊಲ್ಟ್ ಅನುಸರಿಸಿದ ವಿಧಾನಗಳನ್ನು ಇಲ್ಲಿಯೇ ಪರಿಚಯಿಸುವುದು ಉಚಿತವಾಗಿದೆ. ಹುಂಬೊಲ್ಟ್ ಅದೆಷ್ಟು ಸೂಕ್ಷ್ಮಮತಿಯವರು ಎಂದರೆ ಯಾನದ ಹಾದಿಯ ಪ್ರತೀ ಹಂತದಲ್ಲೂ ಸಾವಧಾನವಾಗಿ ಎಲ್ಲಾ ಮಹತ್ವಗಳನ್ನೂ ಅರಿತೇ ಮುಂದೆ ಸಾಗುತ್ತಿದ್ದರು. ಅವರು ತಮ್ಮ ಜೊತೆಗೆ ಒಟ್ಟು 42 ವಿವಿಧ ವೈಜ್ಞಾನಿಕ ಉಪಕರಣಗಳನ್ನು ಹೊತ್ತೊಯ್ದಿದ್ದರಂತೆ! ವಿವಿಧ ದರ್ಶಕಗಳು, ಮಾಪಕಗಳು, ಅಳೆತಗೋಲುಗಳು, ತಾಪಮಾನದ, ತಂಪಿನ ಅಳತೆಗಳನ್ನು ದಾಖಲಿಸುತ್ತಾ ನಡೆದಾಡಿದರು. ಅಷ್ಟೇ ಅಲ್ಲ! ನಡೆದಾಡಿದಲ್ಲೆಲ್ಲಾ ನದಿಗಳ ನೀರಿನ ರುಚಿಯನ್ನೂ ಕುಡಿದೇ ಅರಿತರು. ನೆಲದ ಹರಿವಿಗೂ ರುಚಿಗೂ, ಸುತ್ತಲಿನ ಜೀವಿ ಸಮುದಾಯಕ್ಕೂ ಸಂಬಂಧಗಳನ್ನೆಲ್ಲಾ ಅರಿಯುತ್ತಾ ಅದನ್ನು ಯೂರೋಪಿನ ಗೆಳೆಯರಿಗೆ ಪತ್ರಗಳ ಮೂಲಕ ಬರೆಯುತ್ತಲೇ ಇದ್ದರು.
ಪೆರುವನ್ನು ತಲುಪಿ ಅಲ್ಲಿನ ಅಟ್ಲಾಂಟಿಕ್ ಮಹಾ ಸಾಗರದ ಪ್ರವಾಹದ ಉಷ್ಣತೆ ಮುಂತಾದ ದಾಖಲೆಗಳನ್ನು ಮಾಡಿದ್ದ ಹುಂಬೊಲ್ಟ್ ಅವರ ಹೆಸರನ್ನೇ ಅಲ್ಲಿನ ಪ್ರವಾಹಕ್ಕೆ ಇಡಲಾಗಿದೆ. ನಂತರ 1804ರಲ್ಲಿ ಅವರು ಯೂರೋಪಿಗೆ ಹಿಂದಿರುಗಿದರು. ತಮ್ಮ ಇಡೀ ೫ ವರ್ಷಗಳ ಅಲೆದಾಟದಲ್ಲಿ ಭೌಗೋಳಿಕ ಅಧ್ಯಯನಗಳ ಮೂಲ ಸರಕನ್ನು ಒದಗಿಸುವ ಮೂಲಕ ಹೊಸತೊಂದು ಮಾರ್ಗವನ್ನೇ ವಿಜ್ಞಾನಕ್ಕೆ ಒದಗಿಸಿದರು. ತಮ್ಮ ಲ್ಯಾಟಿನ್ ಅಮೆರಿಕದ ಅಲೆದಾಟದಲ್ಲಿ ಸುಮಾರು 60,000 ವಿವಿಧ ಜೀವಿ ಪ್ರಭೇದಗಳನ್ನು ಸಂಗ್ರಹಿಸಿದ್ದರು. ಅವುಗಳನ್ನೆಲ್ಲಾ ಕೇವಲ ವರ್ಗೀಕರಣದ ಹಿನ್ನೆಲೆಯಲ್ಲಿ ಮಾತ್ರವೇ ನೋಡದ ಹೊಸತೊಂದು ವಿಜ್ಞಾನ ಮಾದರಿಯನ್ನು ನಿರ್ಮಿಸಿಕಟ್ಟರು. ಅದೇ ಜೀವಿ ಸಮುದಾಯವು ಇಡಿಯಾಗಿ ಬದುಕಬಲ್ಲ ಒಟ್ಟಾರೆಯ ವಾತಾವರಣ-ಪರಿಸರದ ತಿಳಿವು. ಇದೇ ಇಂದಿನ ಇಕಾಲಜಿಯ ಮೂಲ ಪಾಠಗಳ ಸರಕಾಗಿದೆ.
ಅಲೆಕ್ಸಾಂಡರ್ ವಾನ್ ಹುಂಬೊಲ್ಟ್‌ರ ವೈಜ್ಞಾನಿಕ ಕೊಡುಗೆಗಳು
ಬಹು ಮುಖ್ಯವಾಗಿ ಈಗಾಗಲೆ ಹೇಳಿದಂತೆ ಡಾರ್ವಿನ್ ಅವರನ್ನೇ ಪ್ರಭಾವಿಸಿದ ಅರಿವು ಹುಂಬೋಲ್ಟ್‌ರದು. ಚಾರ್ಲ್ಸ್ ಡಾರ್ವಿನ್ ಅವರೇ ದಾಖಲಿಸಿರುವಂತೆ ಅವರು ತಮ್ಮ ಯಾನವನ್ನು ಆರಂಭಿಸಲು ಸ್ಪೂರ್ತಿಯೇ ಅಲೆಕ್ಸಾಂಡರ್. ಜೊತೆಗೆ ತಮ್ಮ ಯಾನದ ಜೊತೆಗೆ ಹುಂಬೊಲ್ಟರ ಪುಸ್ತಕಗಳನ್ನು ಕೊಂಡೊಯ್ದಿದ್ದರು. ಈ ಭೂಮಿಯೊಂದು ಜೈವಿಕ ತಾಣ. ಇಲ್ಲಿ ಎಲ್ಲವೂ ಒಂದನ್ನೊಂದು ಹೊಂದಿಕೊಂಡೇ ಬಾಳುತ್ತಿವೆ. ಅದಕ್ಕೆ ಭೂಮಿಯ ಭೌತಿಕ ನೆಲೆಯ ಸಂಗತಿಗಳನ್ನೂ ಸಮೀಕರಿಸಿ ಅರಿಯಬೇಕಾದ್ದು ಮುಖ್ಯ ಎನ್ನುತ್ತಿದ್ದರು. ಹುಂಬೊಲ್ಟ್. ಹಾಗಾಗಿಯೆ ಅವರನ್ನು ನೆಲದ ಭೌತವಿಜ್ಞಾನಿ- ಟೆರೆಸ್ಟ್ರಿಯಲ್ ಫಿಸಿಸಿಸ್ಟ್ (Terrestrial Physicist) ಎಂದೂ ಕರೆಯಲಾಗುತ್ತಿತ್ತು. ಅದಕ್ಕೂ ಮಹತ್ವದ ಸಂಗತಿ ಎಂದರೆ ವಿಜ್ಞಾನದ ಅದರಲ್ಲೂ ಜೀವಿ ಸಂಕುಲದ ತಿಳಿವಿನ ಹಿನ್ನೆಲೆಯಲ್ಲಿ ಬೇಕಾದ ಹೊಂದಾಣಿಕೆಯು ಸಹಬಾಳ್ವೆಯಲ್ಲಿ ಅನುಸಂಧಾನವಾಗುವ ಬಗೆಯನ್ನು ಅವರು ಅನುಶೋಧಿಸಿದರು. ಅದರಿಂದಾಗಿಯೇ ವಿವಿಧ ನೆಲೆಗಳ ಸೂಕ್ಷ್ಮಾತಿ ಸೂಕ್ಷ್ಮ ಸಂಗತಿಗಳನ್ನೂ ಅವುಗಳ ನಡುವಿನ ಸಾಮರಸ್ಯದ ಬಗೆಗಳನ್ನೂ ಸಮೀಕರಿಸಿ ಅರಿಯುವ ವಿಧಾನಗಳನ್ನು ಅವಿಷ್ಕರಿಸಿದರು ಮತ್ತು ಅವುಗಳನ್ನು ದೀರ್ಘವಾಗಿ ವಿವರಿಸಿದರು. ಇಂದು ನಾವು ಬಳಸುವ ಜಿಪಿಎಸ್ GPS ಬಗೆಯನ್ನು ವಿವಿಧ ಭೂ-ನೆಲೆಗಳ ಸಣ್ಣ-ಪುಟ್ಟ ವಿವರಗಳ ವಿವಿಧತೆ ಮತ್ತು ಹೊಂದಾಣಿಕೆಗಳ ಸಮೀಕರಣದಿಂದ ವಿವರಿಸಿದ್ದು ಮಹತ್ವದ್ದಾಗಿದೆ.
ಹುಂಬೊಲ್ಟ್ 1805ರಿಂದ 1834ರ ನಡುವೆ ತಮ್ಮ ಪ್ರವಾಸದ ಅನುಭವಗಳನ್ನು ಸುಮಾರು 30 ಸಂಪುಟಗಳಲ್ಲಿ ದಾಖಲಿಸುವುದರಲ್ಲಿ ಮಗ್ನರಾದರು. ತುಂಬಾ ಶ್ರೀಮಂತರಾಗಿದ್ದರೂ ಆ ವೇಳೆಗೆ ತಮ್ಮ ಬಹುಪಾಲು ಆಸ್ತಿಯನ್ನು ಕಳೆದುಕೊಂಡದ್ದರಿಂದ 1827ರಲ್ಲಿ ತಮ್ಮ ಸ್ವಸ್ಥಳದಲ್ಲೇ ಸಂಬಳದ ವೃತ್ತಿಯನ್ನು ಒಪ್ಪಿಕೊಳ್ಳಬೇಕಾಯಿತು. ಅದರ ನಡುವೆಯೂ ಮುಂದೆ ತಮ್ಮ 60ರ ವಯಸ್ಸಿನಲ್ಲಿ ಬೃಹತ್ ದೇಶ ರಷಿಯಾದ ಯಾತ್ರೆಯಲ್ಲಿ ಅಲ್ಲಿನ ಉದ್ದಗಲಕ್ಕೂ ಅಲೆದಾಡಿದರು. ಜೊತೆಗೆ ತಮ್ಮ ವಿವಿಧ ಅಧ್ಯಯನಗಳನ್ನು ಒಪ್ಪವಾಗಿ ಪ್ರಕಟಿಸಿದ್ದು ಅವರ ಹೆಗ್ಗಳಿಗೆ ಕೂಡ. ಎಲ್ಲದಕ್ಕಿಂತಾ ಮುಖ್ಯವಾಗಿ ಹುಂಬೊಲ್ಟ್ ಓರ್ವ ಸಮಗ್ರ ಚಿಂತಕರು. ವಿಜ್ಞಾನವನ್ನೂ ಅಂತರಶಿಸ್ತೀಯ ಹಿನ್ನೆಲೆಯಲ್ಲಿ ಚಿಂತಿಸಿ, ಪ್ರಾಯೋಗಿಕವಾಗಿಯೂ ಜಾರಿಯಲ್ಲಿ ತಂದವರು. ಬಹು ಮುಖ್ಯವಾಗಿ ಅವರ ಮುಂದಿನ ದಿನಗಳಲ್ಲಿ ವಿಜ್ಞಾನದ ನಡೆಯುವು ವಿಘಟನೆಗಳ ಮೂಲಕ ಬೆಳೆಯುತ್ತಾ ಹೋಗಿ ಇವರನ್ನು ಪುನರ್ ಬಯಕೆಯಿಂದ ಕಾಣುವುದು ಕಡಿಮೆಯಾಯಿತೇನೋ? ವಿವಿಧ ನೆಲೆಗಳ ಹಿನ್ನೆಲೆಯಲ್ಲಿ ಜೀವಿ ಸಮುದಾಯವನ್ನು ವಿವರಿಸಿದ ಕೀರ್ತಿ ಅವರದ್ದೇ! ಹಾಗಾಗಿ ಇಂದು ವಿಜ್ಞಾನದ ಮಹತ್ತರ ಚಿಂತನೆಗಳಾದ ವಾತಾವರಣದ ಬದಲಾವಣೆ -Climate Change- ಬಗ್ಗೆ 2 ಶತಮಾನಗಳ ಹಿಂದೆಯೇ ಆಲೋಚಿಸಿ ಕೆಲಸವನ್ನು ನಿರ್ವಹಿಸದ ವಿಜ್ಞಾನಿ. ಕಾಡು ಕಡಿಮೆಯಾಗುವುದು, ನೀರಾವರಿಯ ಹೆಚ್ಚಿಸುವುದರ ದೀರ್ಘಕಾಲಿಕ ಪರಿಣಾಮ ಹಾಗೂ ಮಾಲಿನ್ಯತೆ ಈ ಮೂರೂ ಬಹು ಮುಖ್ಯ ತರ್ಕಗಳಾಗಿ ನಾವು ಇಂದು ಆಲೋಚಿಸುವ ಮೂಲ ಸರಕು ಹುಂಬೊಲ್ಟರದು.
Essay on the Geography of Plants : ಹುಂಬೊಲ್ಟ್ ತಮ್ಮ ಸಹವರ್ತಿ ಎಮಿ ಬೊನ್‌ಪ್ಲಾಂಡ್ ಅವರ ಜೊತೆಯಾಗಿ ಪ್ರಕಟಿಸಿದ ಅತ್ಯಂತ ಮಹತ್ವದ ಪುಸ್ತಕ. ಇದು 2 ಶತಮಾನಗಳ ಹಿಂದಿನ ದಾಖಲೆ ಎಂಬುದು ಮಾತ್ರ ಬಲು ದೊಡ್ಡ ಅಚ್ಚರಿ. ಇದನ್ನು ಪರಿಷ್ಕರಿಸಿ ಇತ್ತೀಚೆಗೆ ಮರು ಪ್ರಕಟಿಸಲಾಗಿದೆ. ಮೂಲ ಡೈರಿಯು ಜರ್ಮನಿಯಲ್ಲಿದ್ದರೆ, ಅದರ ಅನುವಾದವನ್ನು ಸಂಪಾದಿಸಿ ಪ್ರಕಟಿಸಲಾಗಿದೆ. ಇದರಲ್ಲಿ ವಿವಿಧ ಸಸ್ಯ ಪ್ರಾಣಿ-ಪಕ್ಷಿಗಳ ಆವಾಸದ ಹಿನ್ನೆಲೆಯ ನಕ್ಷೆಗಳ ಸಮೇತವಾದ ವಿವಿಧ ಪ್ರಬಂಧಗಳು ಒಟ್ಟಾಗಿವೆ. ಅವರು ಬಳಸಿದ ತಾಂತ್ರಿಕ ವಿವರಗಳೂ ಇಲ್ಲಿವೆ. ಪರಿಷ್ಕರಿಸಿದ ಆವೃತ್ತಿಯಲ್ಲಿ ಮೂಲ ಜರ್ಮನ ವಿಜ್ಞಾನ ಮಾದರಿಯ ಕಂಡು-ಅನುಭವಿದ ಅರಿವಿನ ದಾಖಲೆಯ ಶಿಸ್ತಿನ ವಿವರಗಳನ್ನೂ ಕೊಡಲಾಗಿದೆ. ಹಾಗಾಗಿ ಇದೊಂದು ಕೈಪಿಡಿಯಂತೆ ಪರಿಸರದ ಅಧ್ಯಯನಕಾರರಿಗೆ ಸಹಾಯವಾಗಬಲ್ಲುದು.
Humbolt’s Kosmos (Cosmos) – ವಿಜ್ಞಾನ ಮತ್ತು ನಿಸರ್ಗದ ಸಮೀಕರಣ; ಕಾಸ್ಮೊಸ್ ಅಲೆಕ್ಸಾಂಡರ್ ಅವರ ಬಹು ಸಂಪುಟಗಳಲ್ಲಿ ಪ್ರಕಟವಾದ ಮಹತ್ವದ ಪುಸ್ತಕ. ಮೂರು ಸಂಪುಟಗಳಲ್ಲಿ ಪ್ರಕಟವಾದ ಇದು ಹುಂಬೊಲ್ಟ್ ಬಹುಪಾಲು ಯಾನಗಳ ನಂತರ ತಮ್ಮ ಇಡೀ ಅನುಭವವನ್ನು ದಾರ್ಶನಿಕವಾಗಿ ಹಾಗೂ ಸ್ವತಃ ಭೇಟಿಯಿಂದ ಅರಿತ ಸಂಗತಿಗಳ ಆಧಾರದಿಂದ ವಿಶ್ವವನ್ನು ವಿವರಿಸಿದ ಪುಸ್ತಕ. (ಇದೇ ಶೀರ್ಷಿಕೆಯಲ್ಲಿ ಕಾರ್ಲ್ ಸೆಗಾನ್ ಅವರ ಪುಸ್ತಕವೂ ಇದೆ) ಇದು ಹುಂಬೊಲ್ಟ್ ಬರ್ಲಿನ್ ವಿಶ್ವವಿದ್ಯಾಲಯದಲ್ಲಿ ನಿರಂತರವಾಗಿ ಕೊಟ್ಟ ಅನೇಕ ಉಪನ್ಯಾಸಗಳನ್ನೂ ಒಳಗೊಂಡಿದೆ. ಇದು ಅನೇಕ ಊಹಾಧಾರಿತ ಸಂಗತಿಗಳ ವಿವರವೂ ಹೌದು.
ಅನಂತತೆಯ ಸಂಗಮದಲ್ಲಿ ಜೀವಿಸಮುದಾಯ ಮತ್ತು ವಿಶ್ವವನ್ನು ನೋಡುವ ಹುಂಬೊಲ್ಟ್ ಅವರನ್ನು ಅವರ ಜೊತೆ ಕೆಲಕಾಲ ಮಾತಾಡಿದ ಗೋಥೆ ಹೀಗಂದಿದ್ದರು. “ಅಲೆಕ್ಸಾಂಡರ್ ಜೊತೆ ಒಂದೆರಡು ಗಂಟೆ ಕಳೆದರೂ ನೂರಾರು ಪುಸ್ತಕಗಳನ್ನು ಓದಿದ ಅನುಭವ” ವಿವಿಧ ಸಂಗತಿಗಳ ಸಂಗಮದಂತಿದ್ದ ಅವರನ್ನು ವಿಜ್ಞಾನದ ಷೇಕ್ಸ್ ಪಿಯರ್ ಎಂದು ಕರೆದ್ದರಲ್ಲಿ ಆಶ್ಚರ್ಯವಿರದು. ಹೆನ್ರಿ ಡೆವಿಡ್ ತೋರೊ ಅವರನ್ನೂ ಪ್ರಭಾವಿಸಿದ್ದ ಹುಂಬೊಲ್ಟ್ , ತೋರೊ ಅವರ ವಿಖ್ಯಾತ ಬರಹ “ವಾಲ್ಡೆನ್”ಗೂ ಕಾರಣರಾಗಿದ್ದಾರೆ.
ಇಷ್ಟೊಂದು ಮಹತ್ವದ ವೈಜ್ಞಾನಿಕ ಸಂಗತಿಗಳನ್ನು ದಾಖಲು ಮಾಡಿ ಪ್ರಭಾವಿಸಿದ ಅಲೆಕ್ಸಾಂಡರ್ ವಾನ್ ಹುಂಬೊಲ್ಟ್ ಅವರ ಕುರಿತು ವಿಸ್ತೃತವಾಗಿ ಅಧ್ಯಯನ ಮಾಡಿ ಅವರ ಇಡೀ ಜೀವನಗಾಥೆಯನ್ನು ಅಂಡ್ರಿಯಾ ಉಲ್ಫ್ (Andrea Wulf) ಎಂಬ ವಿಜ್ಞಾನಗಳ ಇತಿಹಾಸಗಾರ್ತಿ ಪ್ರಕಟಿಸಿದ್ದಾರೆ. The Invention of Nature : Alexander Von Humboldt’s New World ಎಂದು ಇತ್ತೀಚೆಗೆ 2015ರಲ್ಲಿ ಪ್ರಕಟವಾಗಿರುವ ಪುಸ್ತಕ ಹುಂಬೊಲ್ಟ್ ಅವರ ಬಗ್ಗೆ ವಿಶೇಷವಾದ ಚರ್ಚೆಯನ್ನು ಹುಟ್ಟಿ ಹಾಕಿದೆ. ಜೊತೆಗೆ ಅಂಡ್ರಿಯಾಳಂತಹಾ ವಿಶೇಷ ವಿಜ್ಞಾನ ಇತಿಹಾಸಗಾರ್ತಿಯನ್ನೂ ಪರಿಚಯಿಸಿದೆ. ಹಾಂ.. ಅಂದ ಹಾಗೆ ಬ್ರಿಟೀಶ್ ಹೆಣ್ಣು ಮಗಳಾದ ಅಂಡ್ರಿಯಾ ಹುಟ್ಟಿದ್ದು ಭಾರತದಲ್ಲಿ..ನವದೆಹಲಿಯಲ್ಲಿ.. ಆಕೆಯ ಬರಹಕ್ಕೆ ಒಂದು ದಶಕವನ್ನು ಸಂಶೋಧನೆ ಅಲೆದಾಟದಲ್ಲಿ ವಿನಿಯೋಗಿಸಿ ಅಲೆಕ್ಸಾಂಡರ್ ವಾನ್ ಹಂಬೊಲ್ಟರನ್ನು ಮತ್ತೆ ಚರ್ಚೆಗೆ ತಂದ ಕೀರ್ತಿ ಈ ಹೆಣ್ಣು ಮಗಳದ್ದು. ಆಕೆಯದೇ ಒಂದು ಅದ್ಭುತ ಲೋಕ.
ದೇಶ ನೋಡು-ಕೋಶ ಓದು..! ಎಂಬುದು ನಮಗೆಲ್ಲಾ ಬಹಳ ಮುಖ್ಯವಾದ ಗಾದೆಯ ಮಾತು. ಅಲೆಕ್ಸಾಂಡರದು ಎರಡನ್ನೂ ಒಳಗೊಂಡ ಜ್ಞಾನ ಸಂಪನ್ಮೂಲ. ದೇಶಗಳನ್ನು ನೋಡುತ್ತಲೇ ಅದನ್ನೆಲ್ಲಾ ಕೋಶವನ್ನಾಗಿಸಿದ ಅವರ ಬಗೆಗೆ ಹಾಗೂ ಅವರ ಕೃತಿಗಳನ್ನು ಓದುವ ಅವಕಾಶ ನಮ್ಮೆಲ್ಲರದು. ಓದಿನ ಹಿಂದೆ ಹೋಗುವ ಸಮಯ ಆಸೆ ಬೇಕು ಅಷ್ಟೇ. ಭೂಗೋಳವನ್ನು ಜೈವಿಕ ಪರಂಪರೆಯಲ್ಲಿ ಅನುಭವಿಸಿ ದಾಖಲಿಸಿದ ಹುಂಬೊಲ್ಟ್ ಅವರ ನಡೆಯನ್ನು ಅನುಸರಿಸುವುದು ಹೊಸತೊಂದು ಲೋಕಕ್ಕೆ ತೆರೆದುಕೊಂಡಂತೆ. ಸಸ್ಯಯಾನದ ಆರಂಭದಲ್ಲೇ ಮಳೆ ಮರದ ವಿವರಗಳನ್ನು ಅಮೆಜಾನ್ ಕಾಡುಗಳಲ್ಲಿ ಅವರು ಕಂಡ ವಿವರವನ್ನು ಪ್ರಸ್ತಾಪಿಸಿದ ದಿನದಿಂದಲೂ ಕಾಡುತ್ತಿದ್ದ ಹುಂಬೊಲ್ಟ್ ಇಂದು ಸಣ್ಣ ಪ್ರಬಂಧದಲ್ಲಿ ಅನಾವರಣಗೊಂಡಿದ್ದಾರೆ. ಮಹಾ ಸಾಗರದಲ್ಲಿ ಒಂದು ಹನಿಯಷ್ಟು ವಿವರ ಮಾತ್ರ ಇಲ್ಲಿದೆ.
ನಮಸ್ಕಾರ
ಡಾ.ಟಿ.ಎಸ್. ಚನ್ನೇಶ್