ಮಾರ್ಚ್ ತಿಂಗಳ ಬೇಸಿಗೆಯ ಬಿಸಿ ಇನ್ನೂ ಆರಂಭಿಸುತ್ತಿರುವಾಗಲೇ ವಿಜ್ಞಾನ ಜಗತ್ತಿನಲ್ಲಿ ಶತಮಾನಗಳ ಕಾಲದ ಹುಡುಕಾಟದ ಫಲದ ಶೋಧವೊಂದು ಬಿಸಿಯಾದ ಸುದ್ದಿಯನ್ನು ಮಾಡಿದೆ. ಇದೇ ವಾರದ ಆರಂಭದಲ್ಲೇ ಮಂಗಳವಾರದ ಮಧ್ಯಾಹ್ನ ಅಮೆರಿಕದ ಲಾಸ್ ವೇಗಸ್ ನಲ್ಲಿ ಅಮೆರಿಕದ ಭೌತವಿಜ್ಞಾನಿಗಳ ಸೊಸೈಟಿಯಲ್ಲಿ ಕಿಕ್ಕಿರಿದ ಸಭೆಯೊಂದರಲ್ಲಿ ಅಮೆರಿಕದಲ್ಲಿ ನೆಲೆಯಾದ ಶ್ರೀಲಂಕಾದ ಭೌತವಿಜ್ಞಾನಿ ಪ್ರೊ. ರಂಗಾ ಡಿಯಾಸ್ ತಮ್ಮ ತಂಡದ ಸಂಶೋಧನೆಯನ್ನು ವಿವರಿಸಿದರು. ಹೆಚ್ಚೂ-ಕಡಿಮೆ ಸಾಧಾರಣ ವಾತಾವರಣದ ಉಷ್ಣತೆಯಲ್ಲಿಯೇ ಸೂಪರ್ ಕಂಡಕ್ಟಿವಿಟಿಯು ಸಾಧ್ಯವೆಂಬ ಅದರ ವಿವರಗಳು ಮರುದಿನವೇ ವಿಖ್ಯಾತ ವಿಜ್ಞಾನ ಪತ್ರಿಕೆ “ನೇಚರ್” ಅಲ್ಲಿ ಪ್ರಕಟವಾದವು.

ಸಾಮಾನ್ಯ ಬಳಕೆಯ ಇಲಿಕ್ಟ್ರಿಸಿಟಿಯ ಹಂಚಿಕೆಯಲ್ಲಿ ಅದರ ಸುಮಾರು ಭಾಗವು ಕಳೆದು ಹೋಗಿ ನಷ್ಟವಾಗುತ್ತದೆ. ಇಲೆಕ್ಟ್ರಿಸಿಟಿಯ ಟ್ರಾನ್ಸ್‌ಮಿಷನ್ ಹಾಗೂ ಹಂಚಿಕೆಯ ನಷ್ಟದ ನಿವಾರಣೆಯು ಬಹು ದೊಡ್ಡ ಸವಾಲು. ವಿಜ್ಞಾನವು ಈ ಸಂಪರ್ಕದ ನಷ್ಟವನ್ನು ಕಡಿಮೆ ಮಾಡುವಂತಹ ವಾಹಕಗಳ ಹುಡುಕಾಟದಲ್ಲಿ ಶತಮಾನಗಳನ್ನು ಸವೆಸಿದೆ. ಇಂದು ವಾಹಕಗಳ ಹುಡುಕಾಟದಲ್ಲಿ ಮಟೇರಿಯಲ್ ವಿಜ್ಞಾನವು ನಿರಂತರವಾದ ಶೋಧನೆಯನ್ನು ನಡೆಸಿದೆ. ಹಾಗಾಗಿ ವಿದ್ಯುತ್ ಉತ್ಪಾದನೆ, ವಾಹಕಗಳು, ಸಂಗ್ರಾಹಕಗಳು, ಉತ್ಕೃಷ್ಟ ಬಳಕೆ ಇತ್ಯಾದಿಗಳಲ್ಲಿ ವಷ್ತು ವಿಜ್ಞಾನದ ನಿರಂತರವಾದ ಸಂಶೋಧನೆಯು ನಡೆದೇ ಇದೆ. ಇದೇ ಹಿನ್ನೆಲೆಯಲ್ಲಿಯೇ ಅಮೆರಿಕದ ರೊಚೆಸ್ಟರ್ ವಿಶ್ವವಿದ್ಯಾಲಯದ ಭೌತವಿಜ್ಞಾನ ಹಾಗೂ ಮೆಕಾನಿಕಲ್ ಇಂಜನಿಯರಿಂಗ್ ವಿಭಾಗಗಳಲ್ಲಿ ಪ್ರೊ. ರಂಗಾ ಡಿಯಾಸ್ ಕೂಡ ತಮ್ಮ ತಂಡದ ನೇತೃತ್ವವಹಿಸಿ ಸಂಶೋಧನೆಯಲ್ಲಿ ತೊಡಗಿದ್ದರು. ಇದೀಗ ಅದರ ವಿವರಗಳಿಂದ ಹೊಸತೊಂದು ಭರವಸೆಯ ಬೆಳಕನ್ನು ಹೊರಚೆಲ್ಲಿದ್ದಾರೆ. ಈ ಹಿಂದೆಯೂ ಅಂತಹದೊಂದು ಪ್ರಕಟಿಸಿದ್ದರೂ ಅದನ್ನು ಕೆಲವು ಅನುಮಾನಗಳ ಹಿನ್ನೆಲೆಯಲ್ಲಿ ಅದೇ ಪತ್ರಿಕೆಯು ಹಿಂಪಡೆದಿತ್ತು. ಇದೀಗ ಅದೊಂದು ಪ್ರಕಟವಾಗಿ ಅನುಮಾನಗಳ ಮಧ್ಯೆಯೂ ಓಹ್ ಇಂತಹದೊಂದು ಸಾಧ್ಯ ಎಂಬಂತೆ ವಿಜ್ಞಾನದ ಜಗತ್ತು ಬೆರಗಿನಿಂದ ನೋಡುವಂತಾಗಿದೆ. ಮುಂದೊಂದು ದಿನ ಸೂಪರ್ ಕಂಡೆಕ್ಟಿವಿಟಿಯು ಅನೇಕ ಆನ್ವಯಿಕ ಸಾಧ್ಯತೆಗಳಿಂದ ಬೆರಗಿನ ಲೋಕವನ್ನೇ ಸೃಷ್ಟಿಸುವ ಕನಸುಗಳನ್ನು ಗಟ್ಟಿಗೊಳಿಸಿದೆ.

ಅಂತಹದ್ದೇನು ಹಾಗಾದರೆ? ಅವರ ಸಂಶೋಧನೆಯಲ್ಲಿ ವಿಜ್ಞಾನಿಗಳು ಹೊಸತೊಂದು ಸೂಪರ್ ಕಂಡಕ್ಟಿಂಗ್ ವಸ್ತುವನ್ನು ಕಂಡುಹಿಡಿದು ರೂಪಿಸಿದ್ದಾರೆ. ಅದು – ಸಾರಜನಕ ಮತ್ತು ಲೂಟೀಶಿಯಂ ಹೈಡ್ರೈಡ್ (LNH) ಅನ್ನು ಅತ್ಯಂತ ಹೆಚ್ಚಿನ ಒತ್ತಡದ ಅಡಿಯಲ್ಲಿ ರೂಪಿಸಿದ್ದಾಗಿದೆ. ನಂತರ ತಮ್ಮ ಸಂಶೋಧನೆಯಲ್ಲಿ ಅವರು ಒತ್ತಡವನ್ನು ಕಡಿಮೆ ಮಾಡುತ್ತಲೇ ಮತ್ತು ಅದು ತಡೆದುಕೊಳ್ಳುವ ತಾಪಮಾನವನ್ನು ಹೆಚ್ಚಿಸುತ್ತಲೇ, ಅದು ಸಾಮಾನ್ಯ ವಾತಾವರಣದಲ್ಲೂ (ರೂಂ ಟೆಂಪರೇಚರ್ -294 ಕೆಲ್ವಿನ್, ಅಥವಾ 21 ℃) ಸೂಪರ್ ಕಂಡಕ್ಷನ್ ಮಾಡುವುದನ್ನು ದಾಖಲಿಸಿದ್ದಾರೆ. ಅಲ್ಲದೆ ಅದು ಒಂದು ಗಿಗಾಪಾಸ್ಕಲ್ (ಸಮುದ್ರ ಮಟ್ಟದಲ್ಲಿ ವಾತಾವರಣದ ಒತ್ತಡಕ್ಕಿಂತ ಸುಮಾರು 10,000 ಪಟ್ಟು ಹೆಚ್ಚು) ಒತ್ತಡವನ್ನೂ ಸಹಿಸಿಕೊಳ್ಳಬಲ್ಲದ್ದಾಗಿದೆ. ಸುಲಭವಾಗಿ ಸಾಧಿಸಬಹುದಾದ ಪರಿಸ್ಥಿತಿಗಳಲ್ಲಿ ಯಾವುದೇ ಪ್ರತಿರೋಧವಿಲ್ಲದೆ ವಿದ್ಯುಚ್ಛಕ್ತಿಯನ್ನು ನಡೆಸಬಲ್ಲ ಲೆಕ್ಕವಿಲ್ಲದಷ್ಟು ಅನ್ವಯಗಳನ್ನು ಈ ವಸ್ತುವು ಹೊಂದಿರುತ್ತದೆ – ಎಂಬುದು ಸಂಶೋಧನೆಯ ಸಾರ!

ಏನಿದು ಲೂಟೀಶಿಯಂ? ಲೂಟೀಶಿಯಂ ಒಂದು ಮೂಲ ವಸ್ತುವೇ! ಭೂಮಿಯಲ್ಲಿ ಅಪರೂಪದಲ್ಲಿರುವ ಮೂಲವಸ್ತು. ನಮ್ಮ ಪೀರಿಯಾಡಿಕಲ್ ಟೇಬಲ್ (ಮೆಂಡಲೀಫನ ಮೂಲವಸ್ತುಗಳ ಆವರ್ತ ಪಟ್ಟಿ)ಯ ಲೆಂತಿನಾಯ್ಡ್ ಗಳ ಕೊನೆಯಲ್ಲಿರುವ ಒಂದು ಮೂಲವಸ್ತು. ಭೂಮಿಯಲ್ಲಿ ಬೆಳ್ಳಿಗಿಂತಲೂ ತುಸು ಹೆಚ್ಚೇ ಇದ್ದಿರಬಹುದಾದ ಮೂಲವಸ್ತು ಇದಾಗಿದೆ. ಅದರ ಕೆಲವು ವಿವರಗಳ ಚಿತ್ರವೂ ಇಲ್ಲಿದೆ.

ಈ ಸಾರಜನಕ- ಲೂಟೀಶಿಯಂ ಎರಡೂ ಕೂಡಿದ ವಸ್ತು ಅಥವಾ ಯಾವುದೇ ವಸ್ತು ಸೂಪರ್ ಕಂಡಕ್ಟಿವಿಟಿಯನ್ನು ಸಾಧಿಸಬೇಕಾದರೆ ಅದು ಮೈಸ್ನರ್ ಪರಿಣಾಮವನ್ನು ಪ್ರದರ್ಶಿಸಬೇಕು. ಮೈಸ್ನರ್ ಪರಿಣಾಮ ಎಂದರೆ ಒಂದು ವಸ್ತುವಿನ ಅಂತರಾಳದಿಂದ ಕಾಂತ ಕ್ಷೇತ್ರ (Magnetic field) ವನ್ನು ಹೊರದೂಡಿ, ವಸ್ತುವು ಪ್ರತಿರೋಧವನ್ನು ಕಳೆದುಕೊಂಡು ಗಾಳಿಯಲ್ಲಿ ತೇಲಾಡುವಂತೆ ಮಾಡುವ ಇಲೆಕ್ಟ್ರಾನ್ ಕರೆಂಟ್‌ನ ಸಾಗಣೆಯನ್ನು ಸಹಿಸಬೇಕು. ಇದನ್ನು ಒಂದು ಗೊತ್ತಾದ ಉಷ್ಣತೆಯಲ್ಲಿ ಸಾಧಿಸುವುದು ಸೂಪರ್ ಕಂಡಕ್ಟಿವಿಟಿಯಲ್ಲಿ ಅತ್ಯಂತ ಮುಖ್ಯವಾದುದು. ಈ ಪರಿಣಾಮವನ್ನು ಸೂಪರ್ ಕಂಡಕ್ಟಿವಿಟಿಯಲ್ಲಿ ಅವಶ್ಯತೆಯ ಕುರಿತಂತೆ 1933 ರಲ್ಲೇ ಸಂಶೋಧಿಸಿದ್ದು ಜರ್ಮನಿಯ ಭೌತವಿಜ್ಞಾನಿ ಡಬ್ಲೂ. ಮೆಸ್ನರ್ ಮತ್ತು ಆರ್. ಒಶನ್‌ಫೆಲ್ಡ್ (W. Meissner and R. Ochsenfeld). ಇದೀಗ ಪ್ರೊ. ರಂಗಾ ಡಿಯಾಸ್ ಮತ್ತು ತಂಡದವರು ಪರಿಶೋಧಿಸಿದ ವಸ್ತುವೂ ಈ ಮೆಸ್ನರ್ ಪರಿಣಾಮವನ್ನು ಪ್ರದರ್ಶಿಸಿದೆ ಎಂದು ತಮ್ಮ ವಿಜ್ಞಾನದ ಪ್ರಬಂಧದಲ್ಲಿ ದಾಖಲಿಸಿದ್ದಾರೆ. ಅದನ್ನು ವಿಖ್ಯಾತ ವಿಜ್ಞಾನ ಪ್ರತಿಕೆ “ನೇಚರ್” ಇದೇ ವಾರದ ದಿನಾಂಕ 9ರಂದು ಅಂದರೆ ಮೊನ್ನೆಯಷ್ಟೇ ಪ್ರಕಟಿಸಿದೆ.
ಇದೀಗ ಪರ-ವಿರೋಧದ ಚರ್ಚೆಗಳು ಹುಟ್ಟತೊಡಗಿವೆ. ಅಂತೂ ಇಂತಹದ್ದೊಂದು ಸಾಧ್ಯವಾಗಿದ್ದು ನಿಜ ಎನ್ನುವಷ್ಟು ಹಲವು ವಿಜ್ಞಾನಿಗಳು ಹೇಳಿದ್ದರೆ, ಮತ್ತೆ ಹಲವರು ಇದೊಂದು ಹುರುಳಿಲ್ಲದ ವಿವರಗಳು ಎಂದಿವೆ. ಏನೇ ಆಗಲಿ ಹಿಂದೊಮ್ಮೆ ಪ್ರಕಟಣೆಯನ್ನು ಹಿಂದಕ್ಕೆ ತೆಗೆದುಕೊಂಡ ಪತ್ರಿಕೆಯೇ ಮತ್ತೆ ಪ್ರಕಟಿಸಲು ಮುಂದಾದದ್ದೂ ಅದರ ವೈಜ್ಞಾನಿಕ ಸತ್ವಕ್ಕೂ ಸಾಕ್ಷಿ ಇರಬೇಕು. ಅಲ್ಲದೆ ಸಂಶೋಧಕರ ತಂಡದ ಪ್ರೊ. ರಂಗ ಡಿಯಾಸ್ ಕೂಡ ತಮ್ಮ ಹೊಣೆಗಾರಿಕೆಯ ಪ್ರಕಟಣೆಯನ್ನು ಜವಾಬ್ದಾರಿಯಾಗಿಯೇ ನಿರ್ವಹಿಸಿದ್ದು, ಎಲ್ಲಾ ಅನುಮಾನಗಳಿಗೂ ವೈಜ್ಞಾನಿಕವಾದ ಉತ್ತರಗಳನ್ನು, ಸಮಜಾಯಿಸಿಯನ್ನೂ ನೀಡಿಯಾರು.

ಅಂತೂ ಸೂಪರ್ ಕಂಡಕ್ಟಿವಿಟಿಯು ಸಾಮಾನ್ಯ ವಾತಾವರಣದಲ್ಲೂ ಸಾಧ್ಯವಾಗುವ ಕಾಲ ದೂರ ಇಲ್ಲ ಎಂಬ ಮಹತ್ವದ ಬಿಸಿ ಸುದ್ದಿಯನ್ನು CPUS ನ ಓದುಗರು ತಕ್ಷಣವೇ ತಿಳಿಯಲಿ ಒಂಬ ಆಶಯದಿಂದ ತುಸು ಅವಸರದಲ್ಲೇ ಹೆಚ್ಚಿನ ವಿವರಗಳನ್ನು ಮುಂದೊಮ್ಮೆ ತಿಳಿಸುವ ಭರವಸೆಯಿಂದ ಹಂಚಿಕೊಂಡಿದ್ದೇನೆ. ಅಂದ ಹಾಗೆ ಸುದ್ದಿಯ ಮೂಲ ನೆರೆಯ ಸಿಂಹಳ ದೇಶದ ವಿಜ್ಞಾನಿ ಎಂಬುದೂ ವಿಶೇಷ!
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್