You are currently viewing ಮೈಕೆಲ್‌ ಫ್ಯಾರಡೆಯನ್ನು ಪ್ರಭಾವಿಸಿದ್ದ ಪುಸ್ತಕ : ದ ಇಂಪ್ರೂವ್‌ಮೆಂಟ್‌ ಆಫ್‌ ದ ಮೈಂಡ್‌- ಮನಸ್ಸಿನ ಸುಧಾರಣೆ

ಮೈಕೆಲ್‌ ಫ್ಯಾರಡೆಯನ್ನು ಪ್ರಭಾವಿಸಿದ್ದ ಪುಸ್ತಕ : ದ ಇಂಪ್ರೂವ್‌ಮೆಂಟ್‌ ಆಫ್‌ ದ ಮೈಂಡ್‌- ಮನಸ್ಸಿನ ಸುಧಾರಣೆ

ಮೈಕೆಲ್‌ ಫ್ಯಾರಡೆ ವಿಜ್ಞಾನ ಜಗತ್ತಿನಲ್ಲಿ ಒಬ್ಬ ಅದ್ವಿತೀಯ ಅನ್ವೇಷಕ. ಕೇವಲ ಪ್ರಾಥಮಿಕ ಶಾಲೆಗಷ್ಟೇ ಹೋಗಿ ಕಲಿತ ಹುಡುಗ, ಹದಿನಾಲ್ಕರ ವಯಸ್ಸಿನಲ್ಲಿ ಲಂಡನ್ನಿನ ಬ್ರಾಂಡ್‌ಫೋರ್ಡ್‌ ಸ್ಟ್ರೀಟ್‌ ನಲ್ಲಿ ಪುಸ್ತಕ ಅಂಗಡಿಯಲ್ಲಿ ಕೆಲಸಕ್ಕಿದ್ದರು. ಪುಸ್ತಕಗಳನ್ನು ಬೈಂಡಿಂಗ್‌ ಮಾಡುವ ಕಲಿಕೆ ಮತ್ತು ಸಹಾಯಕ ವೃತ್ತಿಯಲ್ಲಿದ್ದ ಆತನಿಗೆ ಅಲ್ಲಿ ಸಿಕ್ಕ ಒಂದು ಪುಸ್ತಕ “ಐಸ್ಯಾಕ್‌ ವಾಟ್ಸ್‌ ಅವರ ದ ಇಂಪ್ರೂವ್‌ಮೆಂಟ್‌ ಆಫ್‌ ದ ಮೈಂಡ್‌”. ಕೇವಲ ಓದು ಮತ್ತು ಬರೆಯಲಷ್ಟೇ ಕಲಿತಿದ್ದ ಹುಡುಗ ಫ್ಯಾರಡೆಯು ಮನಸ್ಸನ್ನು ಸುಧಾರಿಸುವ ಪುಸ್ತಕವನ್ನು ಓದಿದ್ದಲ್ಲದೆ ಅಕ್ಷರಶಃ ಪಾಲಿಸಿದರು. ತಮ್ಮ ಮನಸ್ಸನ್ನು ಜಗತ್ತೇ ಬೆರಗಾಗುವಂತೆ ಬದಲಾಯಿಸಿ ಆಧುನಿಕ ಭೌತವಿಜ್ಞಾನಕ್ಕೆ “ಇಲೆಕ್ಟ್ರೋಮ್ಯಾಗನಟಿಸಂ” – ವಿದ್ಯುತ್‌ ಕಾಂತಿಯತೆ ಯ ಬಗ್ಗೆ ಊಹಿಸಿ, ಸಾಬೀತು ಪಡಿಸಿ ವಿಜ್ಞಾನವನ್ನು ಶಾಶ್ವತವಾಗಿ ಬದಲಾಯಿಸಿದರು. ಲಂಡನ್ನಿನ ರಾಯಲ್‌ ಇನ್ಸ್‌ಟಿಟ್ಯೂಶನ್‌ ಆಫ್‌ ಸೈನ್ಸ್‌ ನ ಶಾಶ್ವತ ಫಿಲೆರಿಯನ್‌ ಪ್ರೊಫೆಸರ್‌ ಆಗಿ ನೇಮಕವಾದರು. ಕೇವಲ ಪ್ರಾಥಮಿಕ ಶಾಲೆಯ ಓದಿನಿಂದ ವಿಜ್ಞಾನದ ಶಿಖರಕ್ಕೇರಿದ ಫ್ಯಾರಡೆಯನ್ನು ಪ್ರಭಾವಿಸಿದ ಈ ಪುಸ್ತಕವು ಕನ್ನಡದ ವಿಜ್ಞಾನದ ಓದುಗರಿಗೆ ಪರಿಚಯವಾಗಬೇಕು. ಅದರ ಪುಟ್ಟ ಪ್ರಯತ್ನವೇ ಇದು.

          ದ ಇಂಪ್ರೂವ್‌ಮೆಂಟ್‌ ಆಫ್‌ ದ ಮೈಂಡ್‌ (The Improvement of the Mind) ಮೊದಲು ಪ್ರಕಟವಾಗಿದ್ದು 1741ರಲ್ಲಿ! ಐಸ್ಯಾಕ್‌ ವಾಟ್ಸ್‌ (Issac Watts) ಎಂಬ ದಾರ್ಶನಿಕ ಕವಿ ಇದರ ಲೇಖಕರು. ಐಸ್ಯಾಕ್‌ ವ್ಯಾಟ್ಸ್‌ ಒಬ್ಬ ಇಂಗ್ಲಿಷ್ ಭಿನ್ನಮತೀಯ ಪಾದ್ರಿ(A dissenting priest) ಮತ್ತು ಕವಿ, ಬ್ರಿಟನ್ನಿನ ಸೌತ್‌ ಹ್ಯಾಂಪ್ಟನ್‌ನಲ್ಲಿ ಜುಲೈ 17, 1674 ರಂದು ಜನಿಸಿದರು. ವಿದ್ಯಾರ್ಥಿಯಾಗಿದ್ದಾಗ ತುಂಬಾ ಅಧ್ಯಯನಶೀಲರಾಗಿದ್ದಾತ, ಉಡುಗೊರೆಯಾಗಿ ಪಡೆದ ಸ್ವಲ್ಪ ಹಣವನ್ನೂ ಕೂಡ ಕೇವಲ ಪುಸ್ತಕಗಳಿಗಾಗಿ ಖರ್ಚು ಮಾಡುತ್ತಿದ್ದರು. ಇತರ ಸ್ನೇಹಿತರ ಜೊತೆಗೆ ಆಟವಾಡುವ ಬದಲು ತನ್ನ ಬಿಡುವಿನ ವೇಳೆಯನ್ನು ಅಧ್ಯಯನ ಮತ್ತು ಓದಲು ಮೀಸಲಿಡುತ್ತಿದ್ದರು. ನಿದ್ರೆಯನ್ನೂ ಕಡಿಮೆ ಮಾಡಿ ಓದಿಗೆ ಬಳಸುತ್ತಿದ್ದ ವಿದ್ಯಾರ್ಥಿಯಾಗಿದ್ದರು. ತಾನು ಓದಿದ ಪುಸ್ತಕಗಳನ್ನೆಲ್ಲ ಗುರುತು ಹಿಡಿಯುತ್ತಿದ್ದರು.

       ವಾಟ್ಸ್‌ ಅವರು 1702 ರಲ್ಲಿ ಪಾದ್ರಿಯಾದರು ಮತ್ತು ಅವರ ಜೀವಿತದ ಕೊನೆಯವರೆಗೂ ಮದುವೆಯಾಗದೆ ಪಾದ್ರಿಯಾಗಿಯೇ ಇದ್ದು ಆಧ್ಯಾತ್ಮಿಕ ಚಿಂತನೆ ಮತ್ತು ಬರಹದಲ್ಲಿ ಕಳೆದರು. ಅವರು ಸ್ತೋತ್ರಗಳು ಅಥವಾ ಶ್ಲೋಕಗಳನ್ನು ಬರೆದು ಪ್ರಸಿದ್ಧರಾಗಿದ್ದಾರೆ. ಅವರನ್ನು ಸ್ತೋತ್ರಗಳ ಪಿತಾಮಹಾ (Father of Hymn) ಎಂದೇ ಇಂಗ್ಲೀಶ್‌ ಸಾಹಿತ್ಯದಲ್ಲಿ ಗುರುತಿಸಲಾಗುತ್ತದೆ.  ವಾಟ್ಸ್ ಬಹುತೇಕ ಎಲ್ಲಾ ವರ್ಗದ ಓದುಗರಿಗೆ, ಎಲ್ಲಾ ವಯಸ್ಸಿನ ವಿದ್ಯಾರ್ಥಿಗಳಿಗೆ, ವಿಜ್ಞಾನ, ಸಾಹಿತ್ಯ, ಕಾವ್ಯ ಮತ್ತು ದೈವತ್ವದ ಕುರಿತು ಬರೆದಿದ್ದಾರೆ.  ಕಡೆಗೆ ಅವರು ಲಂಡನ್‌ನಲ್ಲಿ ನವೆಂಬರ್ 25, 1748 ರಂದು ನಿಧನರಾದರು.

       ಇವರ ದ ಇಂಪ್ರೂವ್‌ಮೆಂಟ್‌ ಆಫ್‌ ದ ಮೈಂಡ್‌ (The Improvement of the Mind) ಸುಮಾರು 220 ಪುಟಗಳ ಪುಟ್ಟ ಪುಸ್ತಕ. ಇದರಲ್ಲಿ 20 ಅಧ್ಯಾಯಗಳಿದ್ದು ಒಂದೊಂದೂ ಜ್ಞಾನ ಮತ್ತು ಅದನ್ನು ನಮ್ಮದಾಗಿಸುವ ಬಗ್ಗೆ ವಿವರವಾದ ಚಿಂತನೆಯನ್ನು ನೀಡುತ್ತದೆ. ಪುಸ್ತಕವು ಓದಿಗೆ ತೆರೆದುಕೊಳ್ಳುವುದೇ ಮೊದಲ ಭಾಗ ಎಂಬ ಪೀಠಿಕೆಯಿಂದ! ಅದರ ಆರಂಭವೇ ಅತ್ಯಂತ ಆನಂದ ಓದಿಗೆ ತೆರೆಸುತ್ತದೆ. ಅದು ಹೀಗಿದೆ..   

“No man is obliged to learn and know everything; this can neither be sought nor required, for it is utterly impossible: yet all persons are under some obligation to improve their own understanding; otherwise it will be a barren desert, or a forest overgrown with weeds and brambles”.

ಯಾವುದೇ ಮನುಷ್ಯನು ಎಲ್ಲವನ್ನೂ ಕಲಿಯಲಾಗಲಿ ಅಥವಾ ತಿಳಿದುಕೊಳ್ಳಲಾಗಲಿ ನಿರ್ಬಂಧವನ್ನೇನೂ ಹೊಂದಿಲ್ಲ; ಅದನ್ನೇನು ಪಡೆಯಲೇಬೇಕೆಂದಿಲ್ಲ ಅಥವಾ ಅಗತ್ಯವೂ ಇರುವುದಿಲ್ಲ, ಏಕೆಂದರೆ ಇದು ಸಂಪೂರ್ಣವಾಗಿ ಅಸಾಧ್ಯ ಕೂಡ: ಆದರೂ ಎಲ್ಲಾ ವ್ಯಕ್ತಿಗಳು ತಮ್ಮದೇ ಆದ ತಿಳುವಳಿಕೆಯನ್ನು ಸುಧಾರಿಸಲು ಕೆಲವು ಬಾಧ್ಯತೆಗಳನ್ನು ಹೊಂದಿರುತ್ತಾರೆ; ಇಲ್ಲದಿದ್ದರೆ ಜೀವನವು ಬಂಜರು ಮರುಭೂಮಿಯಾಗಿರುತ್ತದೆ ಅಥವಾ ಕಳೆಗಳು ಮತ್ತು ಮುಳ್ಳುಗಿಡಗಳಿಂದ ತುಂಬಿದ ಅರಣ್ಯದಂತಿರುರುತ್ತದೆ.

ಹೀಗೆ ಕಲಿಕೆಯ ಸೌಂದರ್ಯವನ್ನು ಓದಿಗೆ ತೆರೆಯಿಸುತ್ತದೆ. ಅದರ ಒಟ್ಟು 20 ಅಧ್ಯಾಯಗಳು ಅನುಕ್ರಮವಾಗಿ ಹೀಗಿವೆ. 1. ಜ್ಞಾನದ ಸುಧಾರಣೆಗಾಗಿ ಸಾಮಾನ್ಯ ನಿಯಮಗಳು. 2. ಜ್ಞಾನವನ್ನು ಪಡೆಯುವ ಐದು ಶ್ರೇಷ್ಠ ವಿಧಾನಗಳು. 3. ಜ್ಞಾನಕ್ಕಾಗಿ ವೀಕ್ಷಣೆಗೆ ಸಂಬಂಧಿಸಿದ ನಿಯಮಗಳು. 4. ಪುಸ್ತಕಗಳು ಮತ್ತು ಓದುವಿಕೆ. 5. ಓದಿಗೆ ಪುಸ್ತಕಗಳನ್ನು ತೀರ್ಮಾನಿಸುವುದು. 6. ಜೀವನ ಬೋಧಕರು ಮತ್ತು ಉಪನ್ಯಾಸಗಳು, ಶಿಕ್ಷಕರು ಮತ್ತು ಕಲಿಯುವವರು. 7. ಯಾವುದೇ ಬರಹಗಾರ ಅಥವಾ ಸ್ಪೀಕರ್‌ನ ಬರಹ/ಉಪನ್ಯಾಸದ ಉದ್ದೇಶಿತ ಅರ್ಥವನ್ನು ವಿಚಾರಿಸುವುದು 8. ಸಂಭಾಷಣೆಯ ಮೂಲಕ ಮಾನಸಿಕ ಸುಧಾರಣೆಯ ನಿಯಮಗಳು. 9. ವಿವಾದಗಳು ಮತ್ತು ಚರ್ಚೆಗಳು. 10. ಅಧ್ಯಯನ ಅಥವಾ ಧ್ಯಾನ 11. ಓದಿಗೆ ಗಮನವನ್ನು ಸರಿಪಡಿಸುವುದು. 12. ಮನಸ್ಸಿನ ಸಾಮರ್ಥ್ಯವನ್ನು ಹೆಚ್ಚಿಸುವಿಕೆ. 13. ಸ್ಮರಣಶಕ್ತಿಯನ್ನು ಸುಧಾರಿಸುವುದು. 14. ತಿಳಿವಳಿಕೆಗಾಗಿ ಪ್ರಶ್ನಿಸುವುದು 15. ಕಾರಣಗಳು ಮತ್ತು ಪರಿಣಾಮಗಳ ವಿಚಾರಣೆ. 16. ಉಪನ್ಯಾಸಗಳ ಬೋಧನೆ ಮತ್ತು ಓದುವ ವಿಧಾನಗಳು. 17. ಬೋಧನಾ ಶೈಲಿ. 18. ಯಾವುದೇ ಸತ್ಯವನ್ನು ಇತರರಿಗೆ ಮನವರಿಕೆ ಮಾಡುವುದು, ಅಥವಾ ದೋಷ ಮತ್ತು ತಪ್ಪುಗಳಿಂದ ಅವರನ್ನು ಬಿಡುಗಡೆ ಮಾಡುವುದು. 19. ಅಧಿಕಾರ. ಇದರ ದುರ್ಬಳಕೆ: ಮತ್ತು ಅದರ ನೈಜ ಮತ್ತು ಸರಿಯಾದ ಬಳಕೆ ಮತ್ತು ಸೇವೆ. 20. ಮನುಷ್ಯರ ಸಹಜವಾದ ಪೂರ್ವಾಗ್ರಹಗಳು, ಅವುಗಳ ನಿರ್ವಹಣೆ.

ಹೀಗೆ ಒಂದೊಂದನ್ನೂ ವಿವರವಾಗಿ ನಮ್ಮ ಮನಸ್ಸನ್ನು ತಿಳಿವಳಿಕೆಗಾಗಿ ಅಣಿಗೊಳಿಸುತ್ತದೆ. ಒಂದು ಅಧ್ಯಾಯವನ್ನಿಲ್ಲಿ ವಿವರಿಸಲು ಪ್ರಯತ್ನಿಸುತ್ತೇನೆ.

ಅದರ ಮೊದಲ ಅಧ್ಯಾಯ ಈ ಹಿಂದೆಯೇ ತಿಳಿಸಿದಂತೆ “ಜ್ಞಾನದ ಸುಧಾರಣೆಗಾಗಿ ಸಾಮಾನ್ಯ ನಿಯಮಗಳು.” ಇದರಲ್ಲಿ ಮತ್ತೆ ಹಲವು ವಿಭಾಗಗಳಿದ್ದು ಒಂದೊಂದೂ ನಮ್ಮ ತಿಳಿವಳಿಕೆಯನ್ನು ಹೆಚ್ಚಿಸಲು ಮನಸ್ಸನ್ನು ತಯಾರು ಮಾಡುವ ವಿವರಗಳು ಇವೆ. ನಮ್ಮ ಆಯ್ಕೆ ಹೇಗಿರಬೇಕು, ತತ್‌ಕ್ಷಣದ ನಮ್ಮ ನೋಟವು ಹೇಗೆ ತೆರದುಕೊಳ್ಳಬೇಕು. ಅಗಾಧವಾದ ಈ ಜ್ಞಾನಸಾಗರದಲ್ಲಿ ನಮ್ಮ ಆಯ್ಕೆಯು ಹೇಗೆ ಇರಬೇಕು. ನಮ್ಮೊಳಗಿನ ಪ್ರಶ್ನೆಗಳನ್ನು ಸಂಭಾಳಿಸುವುದು ಹೇಗೆ? ಜೀವನದಲ್ಲಿ ಕಲಿಕೆಯೇನೂ ಸುಲಭ ಮಾರ್ಗವಲ್ಲ ಅದನ್ನು ನಂಬಿಕೆ ಮತ್ತು ತಿಳಿವಿನಿಂದ ಅಣಿಗೊಳಿಸುವ ಸಾಧ್ಯತೆಗಳು ಹೇಗೆ? ಸತ್ಯಾಸತ್ಯಗಳ ಪರಾಮರ್ಶೆ, ಆಧ್ಯಾತ್ಮಿಕ ಚಿಂತನೆ ಹೀಗೆ ಎಲ್ಲವನ್ನೂ ಬಿಡಿ ಬಿಡಿಯಾಗಿ ಕಟ್ಟಿಕೊಟ್ಟು ಮನಸ್ಸನ್ನು ತಿಳಿವಳಿಕೆಯ ಅಂಗಳದಲ್ಲಿ ಇಟ್ಟು ಆನಂದವನ್ನು ಕೊಡುತ್ತದೆ.

ಒಂದನ್ನು ಅರ್ಥ ಮಾಡಿಕೊಳ್ಳೋಣ. ಮೈಕೆಲ್‌ ಫ್ಯಾರಡೆ ಬಡತನದಿಂದ ಪ್ರಾಥಮಿಕ ಶಾಲೆಯನ್ನು ಮಾತ್ರವೇ ಹೊಕ್ಕವರು. ಅವರ ಓದಿನ ಪ್ರೀತಿಯನ್ನು ಪುಸ್ತಕಗಳ ರಿಪೇರಿ ಬೈಂಡಿಂಗ್‌ ಗಳ ಮೂಲಕವೇ ಕಲಿಯುತ್ತಾ ಇಂತಹಾ ಪುಸ್ತಕದಿಂದ ಅಪಾರವಾಗಿ ಪ್ರಭಾವಗೊಂಡು ಇಡೀ ವಿಜ್ಞಾನದ ಹೊಸತೊಂದು ಶಕ್ತಿಯಾಗಿ ಹೊಮ್ಮಿದರು. ಮಾತ್ರವಲ್ಲ ಅವರು ಆ ಸಮಯದಲ್ಲೇ ಸರ್‌ ಹಂಪ್ರಿ ಡೇವಿ ಅವರ ಭಾಷಣಗಳನ್ನು ಕೇಳುವ ಅವಕಾಶ ಪಡೆದು, ಅವರ ಭಾಷಣಗಳ ಸಾರಾಂಶವನ್ನು ಅದನ್ನು ಕೈ ಬರಹದಲ್ಲಿ ದಾಖಲಿಸಿ ಒಂದು ಪುಸ್ತಕ ರೂಪವಾಗಿ ಅಚ್ಚು ಕಟ್ಟಾಗಿ ಬೈಂಡ್‌ ಮಾಡಿ ಡೇವಿ ಅವರಿಗೆ ಕೊಟ್ಟು ಅವರ ಬಳಿ ಒಂದು ಕೆಲಸವನ್ನುಕೇಳಿದವರು. ಈಗಲೂ ರಾಯಲ್‌ ಸೊಸೈಟಿಯಲ್ಲಿರುವ ಆ ಪುಸ್ತಕವು ಫ್ಯಾರಡೆ ಅವರ ಸುಂದರವಾದ ಕೈಬರಹವನ್ನು ಒಳಗೊಂಡಿದೆ. ಅದರ ಚಿತ್ರವನ್ನಿಲ್ಲಿ ನೋಡಬಹುದು. ಅಚ್ಚರಿ ಎನ್ನಿಸುವಂತಹಾ ಬರಹ, ಅಚ್ಚುಕಟ್ಟು ನಿರ್ಮಿತಿ ಎಲ್ಲವೂ ಅವರ ಶ್ರದ್ಧೆ ಮತ್ತು ಆಸಕ್ತಿಯನ್ನು ತಿಳಿಸಬಲ್ಲದು. ಹೀಗೆ ಅವರನ್ನು ಪ್ರಭಾವಿಸಿದ ಪುಸ್ತಕ ದ ಇಂಪ್ರೂವ್‌ಮೆಂಟ್‌ ಆಫ್‌ ದ ಮೈಂಡ್‌ (The Improvement of the Mind) ವನ್ನು ಸಂಪೂರ್ಣವಾಗಿ ಅನುವಾದಿಸುವ ಉದ್ದೇಶವೂ CPUSಗೆ ಇದ್ದು ಅದನ್ನು ಸಾಧ್ಯಗೊಳಿಸುವ ಪ್ರಯತ್ನವನ್ನೂ ಮಾಡಲಾಗುತ್ತದೆ.

ಕಡೆಯದಾಗಿ ಹೀಗೆ ಫ್ಯಾರಡೆ ಅವರಿಗೆ ಕಲಿಕೆಯ ಸಾಧ್ಯತೆಯನ್ನು ಕಲಿಸಿಕೊಟ್ಟ ಇದೇ ಪುಸ್ತಕವು ಜ್ಞಾನವನ್ನು ಪಡೆಯುವ ಶ್ರೇಷ್ಠ ವಿಧಾನಗಳೆಂದು ಐದು ಮಾರ್ಗಗಳ ಬಗ್ಗೆ ಒಂದೆರಡು ಮಾತು ! ಅವುಗಳು ಹೀಗಿವೆ! ವೀಕ್ಷಣೆ (Observation), ಓದು (Reading), ಉಪನ್ಯಾಸಗಳು (Lectures), ಚರ್ಚೆ (Conversation) ಮತ್ತು ಧ್ಯಾನ (Meditation). ಇವುಗಳನ್ನು ಒಂದೊಂದಾಗಿ ವಿವರವಾಗಿ ಒದಗಿಸುವ ಈ ಪುಸ್ತಕವು ಮನಸ್ಸನ್ನು ವಿಕಾಸಗೊಳಿಸುವ ಆಧ್ಯಾತ್ಮಿಕ ಸಾಧನವೂ ಹೌದು. ಇಂತಹದನ್ನು 18ನೆಯ ಶತಮಾನದಲ್ಲೇ ಪ್ರಕಟಿಸಿರುವುದು ಗಮನಾರ್ಹವಾದ ವಿಚಾರ. ಅದೂ ವಿಜ್ಞಾನದ ತಿಳಿವಳಿಕೆಯ ಹಿನ್ನೆಲೆಯನ್ನೂ ತೆರೆದು ಕಲಿಸುವ ವಿಶಿಷ್ಠ ಮಾರ್ಗದರ್ಶಕ.

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್.‌

This Post Has 2 Comments

  1. Prabhakar V

    Very nice articles on all subjects. Very informative and thoughtful. Useful information. Thank you.

  2. G. Ramakrishna

    Read the article by Dr. Channesh with interest. Glad I did. I knew something about Faraday but would like to read his works and the book that inspired him. Prof. M. Krishnamurthy Rao passed away yesterday at 91. He used to speak about Faraday during our student days and CNR adores Faraday.

Leave a Reply