You are currently viewing ಮಾನವ ಕುಲದ ಆಧುನಿಕತೆಯ ಎಳೆಗಳನ್ನು ಹೆಣೆದ ಹತ್ತಿ: Gossypium Spp.           (ಭಾಗ-2)

ಮಾನವ ಕುಲದ ಆಧುನಿಕತೆಯ ಎಳೆಗಳನ್ನು ಹೆಣೆದ ಹತ್ತಿ: Gossypium Spp. (ಭಾಗ-2)

ಹತ್ತಿಯ ಸಂಕುಲವಾದ ಗಾಸಿಪಿಯಂನಲ್ಲಿರುವ 50 ಪ್ರಭೇದಗಳಲ್ಲಿ ನಾಲ್ಕು ಮಾನವ ಕುಲಕ್ಕೆ ಮೃದು ಸ್ಪರ್ಶದ ಹಿತದಿಂದ ಮೈಗೆ ಹೊದಿಕೆಯನ್ನು ಕೊಟ್ಟಿವೆ. ಈ ನಾಲ್ಕೂ ಪ್ರಭೇದಗಳ ವಿಕಾಸವನ್ನು ವಿವರಿಸಲು ಲಕ್ಷಾಂತರ ವರ್ಷಗಳ ಹಿಂದಿನ ಖಂಡಾಂತರದ ಚಲನೆಯನ್ನು ಅನುಸರಿಸುವ ಪ್ರಮೇಯವು ಉದ್ಭವಿಸಬಹುದು. ಅದೊಂದು ಅತ್ಯಂತ ಸಂಕೀರ್ಣವಾದ ಹಾಗೂ ಬೃಹತ್‌ ವಿಸ್ತಾರವಾದ ವಿಕಾಸದ ಸಂಕಥನವಾಗಿದೆ. ಹಾಗಾಗಿ ಅಸಂಖ್ಯಾತ ಬೆರಗಿನ ಸಂಗತಿಗಳನ್ನು ಒಳಗೊಂಡಿರುವ, ಈಗ ಕೃಷಿಯಲ್ಲಿರುವ ಹತ್ತಿಯ ಸಸ್ಯವನ್ನು ಅದರ ವಿಶೇಷ ಸಂಗತಿಗಳಿಂದ ತಿಳಿಯೋಣ. ಈಗಿರುವ ವಿವಿಧ ಹತ್ತಿ ಪ್ರಭೇದಗಳ ವನ್ಯ ಸಂಬಂಧಿಗಳೆಲ್ಲಾ ಖಂಡಾಂತರವಾಗಿ ಹಬ್ಬಿ ನಾಲ್ಕಾರು ಪ್ರದೇಶಗಳಲ್ಲಿವೆ. ಅವುಗಳೆಂದರೆ ಆಸ್ಟ್ರೇಲಿಯಾ, ಆಫ್ರಿಕಾದ ವಾಯುವ್ಯ ಭಾಗ ಮತ್ತು ಅರೆಬಿಯಾದ ನೆಲೆಗಳು, ಮೆಕ್ಸಿಕೊದ ದಕ್ಷಿಣ ಭಾಗ ಹಾಗೂ ಪಶ್ಚಿಮ-ಮಧ್ಯ ಮೆಕ್ಸಿಕೊದ ಕೆಲವು ಪ್ರದೇಶಗಳು. ಪ್ರಸ್ತುತ ಕೃಷಿಯಲ್ಲಿರುವ ಹತ್ತಿಯ ತಳಿಗಳು ಆಯ್ದ ಪ್ರಭೇದಗಳ ಸಂಕರಣಗಳಾಗಿವೆ. ಆದ್ದರಿಂದ ಅವುಗಳ ಆಯ್ಕೆಯು ಬದುಕಿನ ಬಯಕೆಗಳನ್ನು ಸಾಕಷ್ಟು ತೀರಿಸುವ ಹೊಣೆಗಾರಿಕೆಯನ್ನು ನಿಭಾಯಿಸಿವೆ.

       ಆರ್ಥಿಕವಾಗಿ ಕೃಷಿಯಲ್ಲಿರುವ ಪ್ರತಿಶತ 90 ಭಾಗ ಹತ್ತಿಯ ಬೆಳೆಯು ಸಾಮಾನ್ಯವಾಗಿ ಗಾಸಿಪಿಯಂ ಹಿರ್ಸುಟಂ (Gossypium hirsutum) ಮತ್ತು ಗಾಸಿಪಿಯಂ ಬಾರ್ಬಡೆನ್ಸ್ ‌ (Gossypium barbadense) ಗಳ ಹೈಬ್ರಿಡ್‌ಗಳು. ಉಳಿದ ಸ್ವಲ್ಪ ಭಾಗ ಇನ್ನೆರಡು ಪ್ರಭೇದಗಳಾದ ಗಾಸಿಪಿಯಂ ಅರ್ಬೊರಿಯಂ (Gossypium arboreaum) ಮತ್ತು ಗಾಸಿಪಿಯಂ ಹರ್ಬೇಸಿಯಂ (Gossypium herbaceum) ಗಳ ದೇಸಿ ಹತ್ತಿ.  ಹಿರ್ಸುಟಂ ಮತ್ತು ಬಾರ್ಬಡೆನ್ಸ್‌ಗಳನ್ನು ಭಾರತಕ್ಕೆ ಸುಮಾರು 17 ಮತ್ತು 18ನೆಯ ಶತಮಾನದಲ್ಲಿ ಪರಿಚಯಿಸಲಾಯಿತು. ಇವೆರಡೂ ಹೊಸ ಪ್ರಪಂಚದ ಅಮೆರಿಕಾ ಖಂಡದವು. ಇವುಗಳ ವಿಶೇಷವೆಂದರೆ ಆಕರ್ಷಕವಾದ ಹಾಗೂ ಹೆಚ್ಚು ಇಳುವರಿ ಕೊಡುವ ಗುಣ. ಉದಾಹರಣೆಗೆ ಹಿರ್ಸುಟಂನ ಕಾಯಿಗಳು 4 ಗ್ರಾಂನಿಂದ 8ಗ್ರಾಂವರೆಗೂ ತೂಗಬಲ್ಲವು. ಆದರೆ ನಮ್ಮ ದೇಸಿ ಹತ್ತಿಯಾದ ಅರ್ಬೊರಿಯಂನ ಕಾಯಿಗಳು 1.5 ಗ್ರಾಂ ನಿಂದ 3 ಗ್ರಾಂ ಮಾತ್ರವೇ ತೂಗುತ್ತವೆ. ಹೀಗಾಗಿ ಹೆಚ್ಚಿನ ಇಳುವರಿಗಾಗಿ ಇವುಗಳ ಬಯಕೆಯು ಅನಿವಾರ್ಯವಾಗಿದೆ. ಅದಲ್ಲದೆ ಅರ್ಬೊರಿಯಂನ ಉದ್ದವಾದ ಎಳೆಗಳ ಗುಣ, ನೇಯಲು ಅನುಕೂಲಕರವಾದ ಸಂಗತಿಯೂ ಹೌದು. ದೇಸಿ ಪ್ರಭೇದಗಳಲ್ಲೂ ಮೃದುವಾದ ಗುಣವಿದ್ದು ಅವುಗಳಿಂದಲೂ ಸ್ಪರ್ಶಕ್ಕೆ ಹಿತವಾದ ಗುಣವನ್ನು ಬಟ್ಟೆಯಲ್ಲಿ ತರುವು ಪ್ರಯತ್ನಗಳೂ ಹಿಂದಿನಿಂದಲೂ ನಡೆದಿವೆ.

       “ಹೊಟ್ಟೆಗೆ ಮತ್ತು ಬಟ್ಟೆಗೆ” ನಮ್ಮ ದುಡಿಮೆ ಎಂಬುದು ಸಹಜವಾದ ಮಾತು ತಾನೇ? ನಿಜಕ್ಕೂ ಒಂದು ಕಾಲಕ್ಕೆ ಹೊಸ ಬಟ್ಟೆಯನ್ನು ಕೊಳ್ಳುವುದೂ ಕೂಡ ಅಪರೂಪಕ್ಕೆ ಹಬ್ಬಗಳಲ್ಲಿ ಮಾತ್ರವೇ ಆಗಿತ್ತಲ್ಲವೇ? ಈಗಲೂ ಹೊಸ ಬಟ್ಟೆಗಳನ್ನು ಕೊಳ್ಳುವುದು ಒಂದು ಸಂಭ್ರಮವೇ! ಆದರೆ ಅದೆಲ್ಲವೂ ಅದಕ್ಕೆ ಮಾಡಬೇಕಾದ ವೆಚ್ಚವನ್ನು ಅವಲಂಬಿಸಿದೆ. ಬಟ್ಟೆ ಕೊಳ್ಳುವುದೆಂದರೆ ಈಗಲೂ ಹೆಚ್ಚು ಖರ್ಚಿನ ಸಂಗತಿಯೇ! ಜೊತೆಗೆ ಇಷ್ಟೆಲ್ಲಾ ಹೆಚ್ಚಿರುವ ಜನಸಂಖ್ಯೆಗೆ ಬಟ್ಟೆಯನ್ನು ಒದಗಿಸುವುದೆಂದರೆ, ಇನ್ನೂ ಕಷ್ಟ. ಈಗಂತೂ ಕೃತಕ ನೂಲಿನ ಬಟ್ಟೆಗಳು ಬಂದಿವೆ ಆದರೆ ಹಿಂದಿನ ಕಾಲಕ್ಕೆ ಮೂಲ ಹತ್ತಿಯೇ ಎಲ್ಲವನ್ನೂ ನಿಭಾಯಿಸಬೇಕಿತ್ತು. ಅದೂ ಅಲ್ಲದೆ ನಾವು ಧರಿಸುವ ಬಟ್ಟೆಯು ನಮ್ಮನ್ನು ಗುರುತಿಸುವುದಲ್ಲದೆ ಅದಕ್ಕೆ ಅನುಗುಣವಾದ ಗೌರವವನ್ನೂ ಹೊಂದಿರುತ್ತದೆ. ಈಗಲೂ ನಮ್ಮ ನೋಟಕ್ಕೆ ಗೌರವವನ್ನು ಕೊಡುವುದೂ ಕೂಡ ನಾವು ಧರಿಸುವ ಬಟ್ಟೆಯನ್ನು ಅನುಸರಿಸಿರುತ್ತದೆ. ಸ್ವಾಮಿಜಿಗಳನ್ನೂ, ಜಡ್ಜ್‌ಗಳನ್ನೂ ಅಥವಾ ಲಾಯರ್‌ಗಳನ್ನೂ, ಡಾಕ್ಟರನ್ನೂ ಹೀಗೆ ಅವರವರ ವೃತ್ತಿಗೆ ಅನುಗುಣವಾದ -“ಡ್ರೆಸ್‌”  ಅಥವಾ ಅವರು ಧರಿಸಿರುವ ಬಟ್ಟೆಗಳಿಂದ ಗುರುತಿಸಿ ಗೌರವಿಸುತ್ತೇವೆ. ಆದ್ದರಿಂದಲೇ ಅನಿವಾರ್ಯವಾದ ಮಾರ್ಪಾಡುಗಳನ್ನು ನಾಗರಿಕ ಸಮಾಜವು ವಿಕಸಿಸಿ ಬಳಸಿಕೊಂಡಿದೆ. ಇದೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು, ಬಟ್ಟೆಯ ಮೂಲಗಳಲ್ಲಿ ಒಂದಾದ ಹತ್ತಿಯ ಸಸ್ಯವನ್ನು ನಮ್ಮ ಸಾಮಾನ್ಯ ಅರಿವಿನಲ್ಲಿರದ ಅದರ ಜೈವಿಕ ವಿಶೇಷವಾದ ಕೆಲವು ಸಂಗತಿಗಳಿಂದ ಪರಿಚಯಿಸಿಕೊಳ್ಳೋಣ.   

     ಹತ್ತಿಯು 140ರಿಂದ 180ದಿನಗಳ ಬೆಳೆ. ಜನಪ್ರಿಯ ತರಕಾರಿ ಬೆಳೆಯಾದ ಮೂಲಂಗಿಯನ್ನು ಒಂದೇ ತಿಂಗಳಲ್ಲಿ ಕಟಾವು ಮಾಡಿ ತಿಂದರೆ, ಹತ್ತಿಯ ಕಾಯಿಯಲ್ಲಿ ಅರಳೆಯು ಅರಳಿ ಹೊರ ಬಂದು ಕಟಾವಾಗಲು ಐದಾರು ತಿಂಗಳೇ ಬೇಕು. ಆದ್ದರಿಂದ ಹತ್ತಿಯ ಜೈವಿಕತೆಯೂ ಭಿನ್ನವಾದದ್ದು. ಸಾಮಾನ್ಯವಾಗಿ ಹೂವರಳಿ-ಕಾಯಾಗಿ ಕಾಯಿಯಲ್ಲಿ ರಸಭರಿತ ತಿರುಳು ತುಂಬಿಕೊಳ್ಳುವುದು ನಮ್ಮ ನಿಮ್ಮೆಲ್ಲರಿಗೆ ಪರಿಚತವಾದ ಹೂವಿಂದ-ಕಾಯಿ-ಹಣ್ಣಾಗುವ ಬಗೆ. ಆದರೆ ಹತ್ತಿಯಲ್ಲಿ ಕಾಯಿಯೊಳಗಿನ ತಿರುಳು ರಸಭರಿತವಾಗದು. ಒಳಗಿನ ಸೆಲ್ಯೂಲೋಸ್‌ ಎಳೆ-ಎಳೆಯಾಗಿ ದಾರವಾಗಲು ಅನುಕೂಲವಾಗುವಂತಹಾ ಅರಳೆಯಾಗುವುದೇ ಬೆರಗಲ್ಲವೇ? ಅದೇ ನಮ್ಮ ಮೆತ್ತನೆಯ ಸ್ಪರ್ಶದಿಂದ ಮೈ-ಮುಚ್ಚಿ ಮಳೆ-ಗಾಳಿಯಿಂದ ರಕ್ಷಿಸುವುದಲ್ಲದೆ “ಮಾನ-ಮರ್ಯಾದೆ”ಯನ್ನೂ ಕೊಟ್ಟು ಕಾಪಾಡಿದೆ. ಇಂತಹ ಹತ್ತಿ ಸಸ್ಯವು ತಾನು ಬೆಳೆವ, ನೆಲೆಯನ್ನು ಅತೀವವಾಗಿ ನಂಬಿದೆ. ಅದೇ ನೂರೆಂಟು ಸಾಮಾಜಿಕ-ರಾಜಕೀಯ ಬದಲಾವಣೆಗಳಿಗೂ ಕಾರಣವಾಗಿಸಿದೆ.

     ಹತ್ತಿಯನ್ನು ಎಲ್ಲಾ ನೆಲಗಳಲ್ಲಿಯೂ ಬೆಳೆಯಲಾಗುವುದಿಲ್ಲ. ಹತ್ತಿಯ ಬೆಳೆಗೆ ಆಳವಾದ ಮಣ್ಣನ್ನು ಹೊಂದಿರುವ ನೆಲವೇ ಆಗಬೇಕು. ಅದಕ್ಕೆ ಹತ್ತಿಯನ್ನು ಬೆಳೆಯುವ ನೆಲವನ್ನು ಡೀಪ್‌ ಬ್ಲಾಕ್‌ ಕಾಟನ್‌ ಸಾಯಿಲ್‌- Deep Black Cotton Soil- ಎಂದೇ ಕರೆದು ವರ್ಗೀಕರಿಸುತ್ತಾರೆ. ಅಪ್ಪಟ ಕಪ್ಪು ನೆಲ, ಬಿರು ಬೇಸಿಗೆಯಲ್ಲಿ ಬಿರಿದ ಮೇಲ್ಮೈಯುಳ್ಳ ಸಾಕಷ್ಟು ಆಳವಾದ ಮಣ್ಣನ್ನೂ ಹೊಂದಿರುವ ಭೂಮಿ! ಮಳೆಯ ನೀರನ್ನು ಆಳಕ್ಕಿಳಿಸಿ ಸಾಕಷ್ಟು ಕಾಲ ತಂಪನ್ನು ತನ್ನ ಒಡಲಲ್ಲಿ ಇಟ್ಟುಕೊಳ್ಳವ ನೆಲವೂ ಹೌದು! ಮೇಲೆ ಸುಡುವ ಬಿಸಿಲು, ಮಣ್ಣಿನ ಆಳದಲ್ಲಿ ಕಾಣದ ತಂಪು! ಇಂತಹಾ ಎರಡೂ ಬಗೆಯ ಸಮೃದ್ಧತೆಯ ಹಿತವನ್ನು ಬಯಸುವ ಹತ್ತಿಯ ಬೆಳೆಯ ವಿಶೇಷವೇ ಅದು. ಅದ್ದರಿಂದಲೇ ಅದರ ಮೊದಲ ಬೆಳವಣಿಗೆಯೆಲ್ಲಾ ಬೇರಿನದೇ! ಸಸಿಯು 50 ದಿನಗಳ ವಯೋಮಾನದಲ್ಲೂ ಕೇವಲ ಒಂದು-ಒಂದೂಕಾಲು ಅಡಿ ಅಷ್ಟು ಮಾತ್ರವೇ ಬೆಳೆದರೆ, ಬೇರು ಮಾತ್ರ 3 ಅಡಿಯಷ್ಟು ಆಳಕ್ಕೆ ಹೋಗಿರುತ್ತದೆ. ಹಾಗೆ ಒಟ್ಟು ಬೆಳವಣಿಗೆಯಲ್ಲಿ ಸುಮಾರು 2 ಮೀಟರ್‌ವರೆಗೂ ಬೇರುಗಳು ಹಬ್ಬಿರುತ್ತವೆ. ಹತ್ತಿ ಗಿಡದ ಬೆಳವಣಿಗೆಯಲ್ಲಿ ಮುಖ್ಯವಾದ 5 ಹಂತಗಳಿರುತ್ತವೆ. ಬೀಜವು ಮೊದಲು ಮೊಳೆತು ಹೊರಬರಲು 5ರಿಂದ 6 ದಿನಗಳನ್ನು ತೆಗೆದುಕೊಳ್ಳುತ್ತದೆ. ಸುಮಾರು ಎಂಟು-ಹತ್ತು ದಿನಗಳಲ್ಲಿ ಮೊದಲ ಎಲೆಗಳು-ಕಾಟಿಲೆಡನ್‌-ಕಾಣಿಸಿಕೊಳ್ಳುತ್ತವೆ. ಈ ಮೊದಲ ಹಂತವು ಕೆಲವೊಮ್ಮೆ ತಡವಾಗಲೂಬಹುದು. ಮುಂದಿನ ಹಂತದಲ್ಲಿ ನಿಜವಾದ ಎಲೆಗಳು ಬರುವವರೆಗೂ ಮೊದಲ-ಮೊಳಕೆಯ ಎಲೆಗಳೇ ಆಹಾರ ತಯಾರಿಗೆ ಅನುಕೂಲವಾಗುವಂತೆ ಹಸಿರು ಬಣ್ಣಕ್ಕೆ ತಿರುಗುತ್ತವೆ. ಮೊದಲ ನಿಜವಾದ ಎಲೆಯು ಕಾಣಿಸಿಕೊಳ್ಳುವವರೆಗೂ ಮೊದಲ ಮೊಳಕೆಯ ಎಲೆಗಳೇ ಗಿಡವನ್ನು ಸಮಸ್ಥಿತಿಗೆ ತರುವ ಜವಾಬ್ದಾರಿಯನ್ನು ಹೊರುತ್ತವೆ. ಬಹುತೇಕ ಬೆಳೆಗಳಲ್ಲಿ ಈ ಮೊಳಕೆ ಎಲೆಗಳು ಮೊದಲ ಹಂತದ ಆಹಾರವನ್ನು ಒದಗಿಸಿ, ಕರಗಿ ಹೋಗುತ್ತದೆ. ಆದರೆ ಹತ್ತಿಯಲ್ಲಿ ಆಹಾರವನ್ನೂ ಒದಗಿಸುತ್ತಾ ರೂಪಾಂತರಗೊಂಡು ಮೊದಲೆ ಎಲೆಯು ಕಾಣಿಸಿಕೊಳ್ಳವವರೆಗೂ ಆಹಾರ ತಯಾರಿಯನ್ನೂ ಮಾಡುತ್ತದೆ. ಇದು ಹತ್ತಿಯಲ್ಲಿ ಇರುವ ವಿಶೇಷವೂ ಹೌದು! ಮುಂದಿನ ಹಂತ ಮೊದಲ ಮೊಗ್ಗಿನ ಹಂತ. ನಂತರದ್ದು ಪಿಂಕ್‌-ಕೆಂದು ಅಥವಾ ಕೆನ್ನೀಲಿ ಹೂವಿನ ಹಂತ. ನಂತರದ್ದು ಹೂವು ಕಾಯಾಗಿ ಮುಂದೆ ಕಾಯಿಯೊಡೆದು ಅರಳೆಯು ಚಿಮ್ಮುವ ಹಂತ.

       ಹೂವು ಮೊದಲು ಬಿಳಿ ಅಥವಾ ಹಳದಿ ಛಾಯೆಯನ್ನು ಹೊಂದಿರುತ್ತದೆ. ತೀರಾ ಚಿಕ್ಕದಾದ ಮೊಗ್ಗು, ಪುಷ್ಪ ಪಾತ್ರೆಯನ್ನು ಸುತ್ತಲೂ ಅರಳಿಸಿಕೊಳ್ಳುತ್ತಲೇ ದಳಗಳಿಗೆ ಬೆಳವಣಿಗೆಯಾಗಲು ಅನುವು ಮಾಡಿಕೊಡುತ್ತದೆ. ಆ ಹಂತವನ್ನು “ಕ್ಯಾಂಡಲ್‌” ಅಥವಾ “ಬತ್ತಿ”ಯ ಹಂತವೆಂದೇ ಕರೆಯುತ್ತಾರೆ. ಸಾಮಾನ್ಯವಾಗಿ ಹತ್ತಿಯ ಹೂಗಳೂ ಸುಂದರವಾದವು. ಬಳಿಯಿಂದ ಕೆನ್ನೀಲಿಯತ್ತ ಬದಲಾಗಿ ಕಾಯಿಯಲ್ಲಿ ಕೊನೆಯಾಗುತ್ತವೆ. ಸ್ವಕೀಯ ಪರಾಗ ಸ್ಪರ್ಶವಾಗುವ ಹೂಗಳಿಂದಲೂ ಕೀಟಗಳ ಬಲಿಗೆ ಆಹ್ವಾನವಾಗುತ್ತದೆ. (ಕೀಟಗಳ ದಾಳಿಯ ಸಂಗತಿಗಳು ನಿಜಕ್ಕೂ ಭೀಕರವಾದವು. ಅದನ್ನು ಕಡೆಯಲ್ಲಿ ಮುಗಿಸುವ ಮುನ್ನ ನೋಡೋಣ ಬಿಡಿ). ಹತ್ತಿಯಲ್ಲಿ ಕಾಯಿಗಳಾಗುವುದೂ ವಿಚಿತ್ರವೇ! ಆಯಾ ತಳಿಗಳು ಇಂತಿಷ್ಟೇ ಕಾಯಿಗಳನ್ನು ಬಿಡುವಂತೆ ಕಾಯಿ-ಇತರೇ ಸಸ್ಯಭಾಗದ ಅನುಪಾತವನ್ನು ಕಾಯ್ದುಕೊಳ್ಳಲು ಕಾಯಿಗಳನ್ನು ಉದುರಿಸುವುದೂ ಉಂಟು! ಹಾಗಾಗಿ ಸಾಮಾನ್ಯವಾಗಿ ಗೊತ್ತಾದ ಸಂಖ್ಯೆ ಮತ್ತು ತೂಕದ ಕಾಯಿಗಳನ್ನೂ ಕಾಯ್ದುಕೊಳ್ಳಲು ಹತ್ತಿವು ವಿಕಾಸವಾಗಿದೆ. ಆದರೆ ಆಗಲೇ ಕೀಟಗಳ ದಾಳಿಯೂ ವಿಪರೀತ ಹಾಗಾಗಿ ಅನುಪಾತದಲ್ಲಿ ತೀವ್ರ ವ್ಯತ್ಯಯವೂ ಉಂಟಾಗಿ ರೈತರಿಗೆ ಈ ಹಂತದಲ್ಲಿ ಬೆಳೆಯನ್ನು ಕಾಪಾಡಿಕೊಳ್ಳುವುದು ಅತ್ಯಂತ ಕಷ್ಟದ ಕೆಲಸ. ಕಾಯಿಕೊರಕಗಳು ಅದೆಷ್ಟು ಬಲಯುತವಾದವು ಎಂದರೆ, ಹಿಂದಿನ ವಾರ ಓದಿದ್ದು ನೆನಪಿದೆಯಲ್ಲವೇ? ಒಂದು ಬಗೆಯ ಕಾಯಿ ಕೊರಕಕ್ಕೆ ಅಮೆರಿಕದ ಅಲಬಾಮ ಸ್ಮಾರಕವನ್ನೇ ಕಟ್ಟಿದ್ದಾರೆ. ಇಂತಹ ಅಪೂರ್ವ ಸಂಗತಿಗಳನ್ನೂ ಹೊಂದಿರುವ ಜೈವಿಕತೆ ಹತ್ತಿಯದು.     

       ಮಾನವ ಕುಲವನ್ನು ಎಷ್ಟೊಂದು ಮೃದುವಾದ ಹೊದಿಕೆಯಾಗಿ ಹಿತವನ್ನು ನೀಡುತ್ತಾ ಆಕರ್ಷಣೆಯನ್ನು ಹೊಂದಿರುವ ಹತ್ತಿಗೆ ಒಂದೆರಡಲ್ಲ ಸುಮಾರು 18ಕ್ಕೂ ಹೆಚ್ಚು ಬಗೆಯ ಕೀಟಗಳು ಕಾಡುತ್ತವೆ. ಜೊತೆಗೆ ಹತ್ತಿಯ ಗಿಡ ಒಟ್ಟಾರೆಯ ಬೆಳವಣಿಗೆಯ ದಿನಗಳೂ ಹೆಚ್ಚು. ಇವೆಲ್ಲವನ್ನೂ ನಿಭಾಯಿಸಲು ಅದರ ಬಯಕೆಗಳೂ ಹೆಚ್ಚು. ಅತಿ ಹೆಚ್ಚು ರಾಸಾಯನಿಕಗಳನ್ನು ಬಳಸುತ್ತಿರುವ ಕೃಷಿಯಲ್ಲಿ ಹತ್ತಿಯದು ಮೊದಲ ಸ್ಥಾನ. ಸಾಧಾರಣ ಮಳೆಯ ವಾತಾವರಣ, ಹೆಚ್ಚು ಬಿಸಿಲಿರುವ ನೆಲ ಹತ್ತಿಗೆ ಬೇಕು. ಹೆಪ್ಪು ಗಟ್ಟುವಂತಹಾ ಚಳಿಯ ಹವಾಮಾನ ಹತ್ತಿಗೆ ಒಗ್ಗದು. ದಟ್ಟ ಬಿಸಿಲಿನ ಹೆಚ್ಚು ದಿನಗಳಲ್ಲಿ ಬಳಲುವ ಹತ್ತಿಯು ಅರಳೆಯಾಗಿ ಹೊರ ಬರಲು ಸಾಕಷ್ಟು ಕೀಟಗಳನ್ನು ಎದುರಿಸಬೇಕಾಗುತ್ತದೆ. ಜಾಗತಿಕವಾಗಿ ಬಟ್ಟೆಯ ಬಯಕೆಯನ್ನು ನಿವಾರಿಸುವ ಒಂದು ಬೆಳೆಯಾಗಿ ಅತೀವ ತೀವ್ರವಾದ ಕೃಷಿಗೆ ಒಳಗಾಗಿ ಬಗೆ ಬಗೆಯ ಹೊಂದಾಣಿಕೆಗಳನ್ನು ಆಯಾ ಪರಿಸರದೊಂದಿಗೆ ಮಾಡಿಕೊಳ್ಳಬೇಕಾದ ಅನಿವಾರ್ಯವು ಹತ್ತಿಗೆ ಇದೆ. ಬಹುಶಃ ಇದೇ ಕಾರಣದಿಂದೇನೋ ಅಂತಹಾ ಹೆಚ್ಚು ಕಾಡುವ ಕಳೆಗಳನ್ನು ಹತ್ತಿಯು ಹೊಂದಿಲ್ಲ. ಹೊಂದಾಣಿಕೆ ಮಾಡಿಕೊಂಡು ಸುಖವಾಗಿ ಬೆಳೆಯಬಲ್ಲ ಗಿಡ! ಆದರೆ ಕೀಟಗಳು ಮಾತ್ರ ಅತಿಹೆಚ್ಚು.

       ಅತೀ ಹೆಚ್ಚು ನಷ್ಟವನ್ನು ಉಂಟುಮಾಡುವ ಕಾಯಿಕೊರಕಗಳೇ ಮೂರು ಬಗೆಯಲ್ಲಿವೆ. ರಸ ಹೀರುವ ಐದು ಬಗೆಯ ಕೀಟಗಳು ಇವೆ. ಎಲೆ ಹಾಗೂ ಕಾಂಡವನ್ನು ದಾಳಿ ಮಾಡುವ ಎಂಟಕ್ಕೂ ಹೆಚ್ಚು ಬಗೆಯ ಕೀಟಗಳಿವೆ. ಬೀಜ ಮತ್ತು ಅರಳೆಯನ್ನು ಹಾಳುಗೆಡಹುವ ಎರಡು ತಿಗಣೆ ಜಾತಿಯ ಕೀಟಗಳಿವೆ. ಇದಲ್ಲದೆ ಹಲವು ಬ್ಯಾಕ್ಟಿರಿಯಾಗಳು, ಶಿಲೀಂದ್ರಗಳೂ ಮತ್ತು ಕೆಲವು ವೈರಸ್ಸುಗಳು ಕೆಲವು ರೋಗಗಳನ್ನೂ ತರುತ್ತವೆ. ಇಷ್ಟೆಲ್ಲವನ್ನೂ ಮೀರುತ್ತಲೇ ಸಾವಿರಾರು ವರ್ಷಗಳ ಹೆಣಗಿರುವ ಗಿಡವು ತನ್ನೊಳಗೂ ಕೆವು ತಳಿಗಳಲ್ಲಿ ಪ್ರತಿರೋಧವನ್ನು ಒಡ್ಡಬಲ್ಲ ರಾಸಾಯನಿಕಗಳನ್ನೂ ಇಟ್ಟುಕೊಂಡಿದೆ. ಹತ್ತಿಯ ಮತ್ತು ಕೀಟಗಳ ಮುಖಾಮುಖಿಯ ಸಂಗತಿಗಳು ಗಿಡವನ್ನೇ ವಿಷವಾಗಿಸಿಯೂ ಮುಗಿಯದ ವಿಚಾರಗಳು. ಆದ್ದರಿಂದಲೇ ಬಿಟಿ-ಹತ್ತಿಯ ನಂತರವೂ ಬಹಳಷ್ಟು ಚರ್ಚೆಗೆ ಒಳಗಾಗಿದೆ. ಖಂಡಿತಾ ಅದರಲ್ಲಿ ಬೇಕು ಅಥವಾ ಬೇಡ ಎಂಬ ತೀರ್ಮಾನದ ಸಮಾಧಾನವಿಲ್ಲ!

       ಹೀಗೆ ನಿರಂತರವಾದ ಚರಿತ್ರೆಯನ್ನು ಮಾನವ ಸಮುದಾಯದೊಂದಿಗೆ ಉಳಿಸಿಕೊಂಡೇ ಬರುತ್ತಿರುವ ಸಮಯದಲ್ಲೂ ಉತ್ಪಾದನೆಯ ಹಿತದಿಂದ ಭಾರತವು ಮುಂದಿದೆ. ಮೊಘಲರ ಕಾಲದಲ್ಲೂ ಬಂಗಾಳದ ಹತ್ತಿ ಉದ್ಯಮವು ಏರುಗತಿಯಿಂದ ವಿಶೇಷಗಳನ್ನು ಬೆಳೆಸಿಕೊಂಡಿತು. 17-18ನೆಯ ಶತಮಾನದಲ್ಲೂ ಬ್ರಿಟೀಷರ ಕಾಲದಲ್ಲಿ ತಮಿಳುನಾಡಿನಲ್ಲಿ ಮಹತ್ತರವಾದ ಬದಲಾವಣೆಗಳಿಂದ ಹತ್ತಿಯ ಕೃಷಿಯು ಅಭಿವೃದ್ಧಿಗೊಂಡಿದೆ. ಉಳಿದಂತೆ ಎಲ್ಲೆಡೆಯಲ್ಲಿಯೂ ಆಯಾ ಪ್ರಾದೇಶಿಕ ಕೃಷಿಕರ ಹಾಗೂ ನೇಕಾರರ ಆಸಕ್ತಿಯಿಂದ ಉದ್ಯಮವು ತನ್ನತನವನ್ನು ಹೆಚ್ಚಿಸಿಕೊಂಡು ಗುರುತು ಮೂಡಿಸಿದೆ. ಅದೆಷ್ಟೇ ಆಧುನಿಕತೆಯನ್ನೂ, ಯಾಂತ್ರೀಕರಣವನ್ನೂ ಅಳವಡಿಸಿಕೊಂಡರೂ ಮಾನವ ಸಾಂಗತ್ಯವನ್ನು ವಿವಿಧ ಹಂತಗಳಲ್ಲಿ ಸಮಾನಾಂತರವಾಗಿ ಉಳಿಸಿಕೊಂಡು, ಬೆಳೆಸಿಕೊಂಡು ಹೋಗುವಲ್ಲಿ ಹತ್ತಿಯದು ವಿಚಿತ್ರವಾದ ಪಾತ್ರ.  ಗಿಡದಿಂದ ಬಿಡಿಸುವುದರಿಂದ ಆರಂಭಿಸಿ, ಬಟ್ಟೆಯಾಗಿ ಹೊರ ಬರುವವರೆಗೂ ಮಾನವ ಕೈಗೆ “ಹತ್ತಿಕೊಂಡೇ” ಇರುವ ಹತ್ತಿಯು ನಮ್ಮ ಮೈಗೆ ಹತ್ತಿಕೊಳ್ಳುತ್ತಿದೆ.  

       ಬಹುಶಃ ಮಾನವ ಸಾಂಗತ್ಯವನ್ನು ವೈವಿಧ್ಯಮಯವಾಗಿ ಆವರಿಸಿಕೊಂಡಿರುವಲ್ಲಿ ಹತ್ತಿಯಷ್ಟು ವಿಶಿಷ್ಟವಾದ ಸಸ್ಯ ಬೇರೊಂದಿಲ್ಲ. ನೂರು ಗಿಡ-ಮರಗಳ ಕಥೆಗಳನ್ನು ಹೇಳಲು ಬಯಸಿ, 90 ದಾಟಿದ ಮೇಲೂ ಅನ್ನಿಸಿದ್ದು ಹತ್ತಿಗೆ ಸಾಟಿಯಾದ ಸಸ್ಯವೊಂದಿಲ್ಲ. ಎಷ್ಟೇ ಹೇಳಿದರೂ ಅದೆಲ್ಲವೂ ಸಾಗರದ ನೀರನ್ನು ವಿವರಿಸಲು ಬೊಗಸೆಯಲ್ಲಿ ಹಿಡಿದ ನೀರನ ಬಗ್ಗೆ ಹೇಳಿದಂತೆ ಆದೀತು. ಅಷ್ಟು ವಿಸ್ತಾರವಾದುದು ಜತೆಗೆ ಅಷ್ಟೇ ಸಂಕೀರ್ಣವೂ ಹೌದು!

ಹತ್ತಿ ಬೀಜಗಳ ಬಗೆಗೆ ಅದರಲ್ಲಿರುವ ಎಣ್ಣೆಯ ಬಗೆಗೆ ಏನೂ ಹೇಳದೆ ಮುಗಿಸಲು ಆಗದು. 19ನೆಯ ಶತಮಾನದ ಕಡೆಯ ಭಾಗದವರೆಗೂ ಹತ್ತಿ ಉದ್ಯಮದ ಉಪ ಉತ್ಪನ್ನವಾದ ಬೀಜಗಳನ್ನು ಹೊಲದಲ್ಲಿ ಬಿತ್ತಲು ಹೊರತು ಪಡಿಸಿ ಬೇರೆಯದಕ್ಕೆ ತಲೆ ಕೆಡಿಸಿಕೊಂಡಿರಲಿಲ್ಲ. 17, 18 ಮತ್ತು 19ನೆಯ ಶತಮಾನದ ಹತ್ತಿ ಉದ್ಯಮಗಳ ಬೆಳವಣಿಗೆಗಳು ಬೀಜಗಳ ಬಳಕೆಯತ್ತ ಗಮನಹರಿಸುವಂತೆ ಮಾಡಿದವು. ಅನಂತರದಲ್ಲಿ ಬೀಜದಿಂದ ಎಣ್ಣೆಯನ್ನು ತೆಗೆಯುವ ಉತ್ಸಾಹ ಬೆಳೆಯಿತು. ಹಿಂದಿನಿಂದಲೂ ಹತ್ತೀ ಬೀಜದೆಣ್ಣೆಯ ಬಳಕೆಯಂತೂ ತಿಳಿದಿದ್ದಿತು. ಕೆಲವು ದೇಶಗಳಲ್ಲಿ ಹತ್ತಿ ಬೀಜದ ಎಣ್ಣೆಯು ಕರಿದ ತಿಂಡಿಗಳಲ್ಲಿ ಬಳಸುತ್ತಾರೆ. ಆದರೆ ಇದರ ಬಳಕೆಯಲ್ಲಿ ಕೆಲವೊಂದು ಮಿತಿಗಳಿವೆ. ಔಷಧೋಪಚಾರ, ಸೌಂದರ್ಯವರ್ಧಕಗಳು ಮುಂತಾದವುಗಳಲ್ಲಿ ಬಳಕೆಯಲ್ಲಿದೆ. ಅದಲ್ಲದೆ ಹತ್ತಿ ಬೀಜ ಎಣ್ಣೆಯನ್ನು ಕೀಟ ನಾಶಕವಾಗಿಯೂ ಬಳಸಬಹುದಾಗಿದೆ. ಒಟ್ಟಾರೆಯಾಗಿ ಪ್ರಖರವಾದ ಹತ್ತಿಯ ಎಳೆಗಳ ಬೆಳಕಿನಲ್ಲಿ ಅದರ ಎಣ್ಣೆಯ ಬೆಳಕು ಮಂದವಾಗಿದೆ.

ಹತ್ತಿಯ ಬೀಜಗಳು ಭೂಮಿಯನ್ನು ಹೊಂದಿಕೊಂಡು ಬೆಳೆದುದಲ್ಲದೆ, ಭೂಮಿಯ ಆಚೆಗೂ ಮೊಳೆತು ಸುದ್ದಿಯನ್ನು ಮಾಡಿವೆ. ಹತ್ತಿಯು ಭೂಮಿಯ ಹೊರಗೆ ಮೊಳೆತ ಮೊಟ್ಟ ಮೊದಲ ಸಸ್ಯವಾಗಿದೆ. ಚೀನಾದ ರೊಬಾಟಿಕ್‌ ಉಪಗ್ರಹ ನೌಕೆಯು (Chang’e 4) 2015ರ ಜನವರಿಯಲ್ಲಿ, ಭೂಮಿಯಿಂದ ಕಾಣದ ಚಂದ್ರನ ಆಚೆ ಬದಿಯ ಹೊರಮೈಯನ್ನು ತಲುಪಿತ್ತು. ಅಲ್ಲಿಗೆ ಕೆಲವು ಬೀಜಗಳನ್ನು ಕೊಂಡೊಯ್ದಿದ್ದ ನೌಕೆಯು ಚಂದ್ರನಲ್ಲಿ ಬೀಜಗಳ ಮೊಳೆಸುವ ಪ್ರಯೋಗ ಮಾಡಿತ್ತು. ಅವುಗಳಲ್ಲಿ ಹತ್ತಿಯ ಬೀಜಗಳು ಅಲ್ಲೂ ಮೊಳೆತ ಬಗ್ಗೆ ಚೀನಾ ವರದಿ ಮಾಡಿದೆ. ಹೀಗೆ ಭೂಮಿಯ ಆಚೆಯಲ್ಲೂ ಮೊಳೆತ ಹತ್ತಿಯು ಸೌರವ್ಯೂಹದಲ್ಲಿ ನೆಲದಾಚೆಗೂ ತನ್ನ ನೆಲೆಯನ್ನು ಕಂಡುಕೊಳ್ಳಬಲ್ಲ ಪ್ರಯತ್ನವನ್ನು ಸಾಬೀತು ಮಾಡಿದೆಯೇನೋ. ಹತ್ತಿಯ ಬೆರಗು ಅಂತೂ ಭೂಮಂಡಲನ್ನೂ ದಾಟಿದೆ.

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್.‌       

This Post Has 2 Comments

 1. ಶ್ರೀಹರಿ ಸಾಗರ, ಕೊಚ್ಚಿ

  ತಿರುಳು ಅರಳೆಯಾಗುವ ಬೆರಗು ನಿಮ್ಮ ಲೇಖನದಲ್ಲಿ ವಿವರವಾಗಿಯೇ ಇದೆ. ಹತ್ತಿ ಅನ್ನುವ ಶಬ್ದದಲ್ಲೇ ಮೃದುತ್ವದ ಒಂದು ಸಂವೇದನೆಯ ಅನುಭವವಾಗುತ್ತದೆ. ಹತ್ತಿಯ ವಿವರಣೆ ಚಂದ್ರಲೋಕದವರೆಗೂ ಕೊಂಡೊಯ್ದಿದ್ದೀರಾ.. 👌

 2. Kusum Salian

  ತುಂಬಾ ಚೆನ್ನಾಗಿದೆ ಹತ್ತಿಯ ಮಾಹಿತಿ. ಇನ್ನಷ್ಟು ಇಂತಹ ಲೇಖನಗಳು ಮೂಡಿ ಬರಲಿ.ಥ್ಯಾಂಕ್ಯು

Leave a Reply